ಕಳೆದ ಎರಡು ಶತಮಾನಗಳಿಂದಲೂ ಬೇರೆ ಬೇರೆ ಹೆಸರುಗಳಲ್ಲಿ ಅಧ್ಯಯನಕ್ಕೆ ಒಳಪಡುತ್ತಾ ಬಂದಿರುವ ಜಾನಪದ, ಇಂದು, ಕಲಿಕೆಯ ಒಂದು ಹೊಸ ಕ್ಷೇತ್ರವಾಗಿ ಪರಿಣಮಿಸಿದೆ; ಜ್ಞಾನದ ಒಂದು ಹೊಸ ಸೆಲೆ ಹಾಗೂ ಪರಿಶೀಲನೆಯ ಹೊಸ ವಿಷಯ ಎಂದು ಅದನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ಮೊದಲಿಗೆ, ಜಾನಪದವು ಪುರತನ ಕಾಲದ್ದೆಂದೂ ನಾಗರಿಕತೆಯ ಪ್ರಭಾವದಿಂದ ಅದು ನಶಿಸಿ ಹೋಗುತ್ತದೆಂಬ ಭೀತಿಯೂ ಇತ್ತು. ಅಂತೆಯೇ, ಒಂದೆಡೆ ಹಳೆಯದು ಮಾತ್ರ ಜಾನಪದ ಎಂಬ ಗ್ರಹಿಕೆಯಿಂದ ಅದನ್ನು ಪ್ರಾಚೀನ ಸಂಸ್ಕೃತಿಯ ಅತ್ಯುತ್ತಮ ಭಾಗವೆಂದು ಕೊಂಡಾಡುತ್ತಾ ಅದನ್ನು ಸಂರಕ್ಷಿಸಿಕೊಳ್ಳಬೇಕು ಎಂಬ ಕಳಕಳಿ ತೋರುತ್ತಾ ಬಂದಿದ್ದರೆ ಮತ್ತೊಂದೆಡೆ ಅದು ನಶಿಸಿ ಹೋಗುವಂಥದಲ್ಲ; ತನ್ನನ್ನು ಉಳಿಸಬೇಕೆಂದು ಅದು ಬಯಸುವುದ ಇಲ್ಲ ಎಂಬುದನ್ನು ಮನಗಂಡು ಅದು ಸದಾ ಪರಿವರ್ತನಶೀಲವಾದುದು, ಜೀವಂತವಾದುದು; ಹೊಸ ಹೊಸ ಅಂಶಗಳನ್ನು ಕಾಲ ಕಾಲಕ್ಕೆ ಸ್ವೀಕರಿಸುತ್ತ ಬೆಳೆಯುತ್ತದೆ ಎಂದು ಸ್ಪಷ್ಟಪಡಿಸುತ್ತಾ ಅದು ಕೇವಲ ಹಳೆಯ ವಸ್ತು ವಿಶೇಷಗಳಿಗೆ ಸಂಬಂಧಿಸಿದ್ದಲ್ಲ; ಹಳ್ಳಿಗಾಡಿನದಷ್ಟೇ ಅಲ್ಲ; ನಗರ ಜೀವನದಲ್ಲೂ ಅದರ ಸೆಲೆಯನ್ನು ನೆಲೆಯನ್ನು ಗುರುತಿಸಬಹುದು ಎಂದು ಅಭಿಪ್ರಾಯಕ್ಕೆ ಬರಲಾಗಿದೆ (ಹಿರಿಯಣ್ಣ:೧೯೯೬:೧೦). ಇಷ್ಟಾದರೂ, ಜಾನಪದ ಪರಿಕಲ್ಪನೆ ಮತ್ತೆ ಬದಲಾಗುತ್ತಿದೆ. ಸಂಶೋಧನಾ ಇತಿಹಾಸದ ಪುಟಗಳನ್ನು ತಿರುವಿ ಹಾಕಿ ನೋಡಿದರೆ ಇದು ಒಂದು ಸ್ವಾಭಾವಿಕ ಪ್ರವೃತ್ತಿಯಾಗಿ ಕಾಣುತ್ತದೆ. ಜಾನಪದ ಸಾಮಗ್ರಿಯ ವಿಶ್ಲೇಷಣೆಗೆ ಹೊಸ ಹೊಸ ಪರಿಕರಗಳು, ಕೌಶಲಗಳನ್ನು ಬಳಸುತ್ತ ಬಂದಂತೆ ಅದರ ಪರಿಕಲ್ಪನೆಗಳು, ಅರ್ಥದ ಆಯಾಮಗಳು ಬದಲಾಗುತ್ತ ಬಂದಿವೆ. ಈಗೀಗ ಹಳೆಯ ಪರಿಕಲ್ಪನೆಗಳು ಚಲಾವಣೆಯನ್ನು ಕಳೆದುಕೊಳ್ಳುತ್ತಿದ್ದರೂ ಹೊಸ ಪರಿಕಲ್ಪನೆಗಳು ಹೊಸ ದೃಷ್ಟಿಯಲ್ಲಿ ಪ್ರಾಚುರ್ಯಕ್ಕೆ ಬರಲು ಇನ್ನಷ್ಟು ಕಾಲ ಬೇಕಾದೀತು. ಈ ಕಾರಣಕ್ಕಾಗಿ ಇವತ್ತಿನ ಜಾನಪದ ಅಧ್ಯಯನ ಐವತ್ತು ವರ್ಷಗಳ ಹಿಂದಿನ ಅಧ್ಯಯನಗಳಿಂದ ಹೇಗೆ ಭಿನ್ನ ಎಂಬುದನ್ನು ಸ್ವಲ್ಪ ಯೋಚಿಸಬೇಕಾಗಿದೆ. ವಾಸ್ತವವಾಗಿ ಹಳೆಯ ಪರಿಕಲ್ಪನೆಗಳ ಬೇರುಗಳು ಆಳದಲ್ಲಿ ಹುದುಗಿದ್ದು ಅವು ಸುಮಾರು ಒಂದು ನೂರು ವರ್ಷಗಳ ಹಿಂದಕ್ಕೆ ನಮ್ಮನ್ನು ಕರೆದೊಯ್ಯುತ್ತವೆ. ಎಂದರೆ ಪ್ರತಿಯೊಂದು ಕಾಲಘಟ್ಟವೂ ವಿಭಿನ್ನ ಸ್ತರಗಳನ್ನು ಪ್ರತಿನಿಧಿಸುವ ಸಂಶೋಧನಾ ಪರಿಕರಗಳನ್ನು ಹೊಂದಿರುವುದು ದೃಢವಾಗುತ್ತದೆ. ಬೇರೆ ಬೇರೆ ಕಾಲಘಟ್ಟಗಳ ಸಂಶೋಧನಾ ಪರಿಕರಗಳ ನಡುವಿನ ಗಂಟುನಂಟುಗಳನ್ನು ಕುರಿತು ಜಿಜ್ಞಾಸೆಯೇ ನಡೆಯದಿರುವುದರಿಂದ ಈ ಕಲಿಕೆಯ ಅಂತರ್ ವಿಕಾಸ ಒಂದು ರೀತಿಯ ಪ್ರಯೋಗ ಪ್ರಕ್ರಿಯೆಯಾಗಿ ರೂಪು ತಾಳಿದೆ. ಬೌದ್ಧಿಕ ಸಂಪರ್ಕಗಳ ಕೊರತೆಯೇ ಅದಕ್ಕೆ ಕಾರಣ.

ಈ ಪ್ರಕ್ರಿಯೆ ಕುರಿತು ಈ ಪರಿಮಿತ ಯತ್ನದಲ್ಲಿ ಆಳವೂ ಗಂಭೀರವೂ ಆದ ಸಮಗ್ರ ಚಿಂತನೆ ನಡೆಸುವುದು ಕಷ್ಟಸಾಧ್ಯ. ಆದರೂ ಇಲ್ಲಿ ಈ ಸಂಬಂಧ ಲೌರಿ ಹಾಂಕೊ ಮತ್ತಿತರ ವಿದ್ವಾಂಸರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು, ಅವರ ದೃಷ್ಟಿಧೋರಣೆಗಳಲ್ಲಿ ಕಂಡು ಬಂದಿರುವ ಬದಲಾವಣೆಗಳನ್ನು ಒರೆಗೆ ಹಚ್ಚಿ ನೋಡುವ ಯತ್ನಮಾಡಿರುವೆ.

ಪ್ರಚಲಿತ ಜಾನಪದ ಅಧ್ಯಯನದಲ್ಲಿ ಎದ್ದುಕಾಣುವ ಮೂಲಭೂತವಾದ ಬದಲಾವಣೆಯೆಂದರೆ ‘ರಾಷ್ಟ್ರಕಲ್ಪನೆ’ಯಿಂದ ‘ಸದಸ್ಯಗುಂಪು’(member group) ಕಲ್ಪನೆಗೆ ಪಲ್ಲಟವಾಗಿರುವುದು. ಜಾನಪದ ನಿರೂಪಕ, ಅದರ ಸೃಷ್ಟಿಕಾರ, ಅದನ್ನು ಬಳಶುವವ ಹಾಗೂ ಅದರ ಪ್ರದರ್ಶನಕಾರನನ್ನು ನೋಡುವ ದೃಷ್ಟಿಗೆ ಇದು ಸಂಬಂಧಿಸುತ್ತದೆ. ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣುವ ಬಹು ಪ್ರಮುಖ ಮನೋಧರ್ಮ ಇದು. ಮೊದಲಿಗೆ ಅನಕ್ಷರಸ್ಥ ಕೃಷಿಕರು ಮತ್ತು ಆದಿಮರನ್ನು ಪರಂಪರೆಯ ವಾಹಕರು ಎಂದು ಗುರುತಿಸಲಾಗುತ್ತಿತ್ತು. ಪರಂಪರೆಯ ನಿಗೂಢವೂ ರಮ್ಯ ಆಕರವೂ ಆಗಿದ್ದ ಆ ಜನಕಪದ ಈಗ ಇಲ್ಲ. ಅದರ ಸ್ಥಾನದಲ್ಲಿ ಜನರ ಸಾಮಾಜಿಕ ಅಂತಸ್ತು, ಅವರ ವೃತ್ತಿ, ಅವರ ಸಾಂಸ್ಕೃತಿಕ ಸಂಪತ್ತು, ಅವರು ಅವಲಂಬಿಸಿದ ಧರ್ಮ, ಅವರು ನೆಲೆಸಿರುವ ನೆಲೆ ಇವೇ ಮುಂತಾದವುಗಳ ದೃಷ್ಟಿಯಿಂದ ನಿರ್ಣೀತವಾಗಿರುವ ಸಾಮಾಜಿಕ ಗುಂಪುಗಳಿವೆ. ಹೊಸ ಪರಿಕಲ್ಪನೆಯ ಪ್ರಕಾರ, ಒಂದು ರಾಷ್ಟ್ರ ಕೂಡ ಅಂಥ ಒಂದು ‘ಸದಸ್ಯಗುಂಪು’. ಆದರೆ ರೊಮ್ಯಾಂಟಿಕ್‌ಯುಗದ ಅವಸಾನದೊಡನೆ ಜನತೆ ಮತ್ತು ರಾಷ್ಟ್ರಗಳ ನಡುವಿನ ನಿಗೂಢ ಬಾಂಧವ್ಯ ಕಡಿದು ಹೋಗಿರುವುದರಿಂದ ಸ್ಥೂಲ ಹಿನ್ನೆಲೆಯ ಗುಂಪುಗಳು ಇವತ್ತಿನ ಸಂಶೋಧನೆಯ ಮುಂಚೂಣಿಯಲ್ಲಿ ಇಲ್ಲ.

ಸಾಂಸ್ಕೃತಿಕ ಮಹತ್ವದ ಈ ಪರಿವರ್ತನೆ ಪ್ರತಿಯೊಂದು ಸದಸ್ಯ ಗುಂಪಿನ ಜಾನಪದವೂ ಸ್ವಾಭಾವಿಕ ಹಾಗೂ ಜೀವನದ ಸಜೀವ ಅಂಶವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸದಸ್ಯ ಗುಂಪಿನ ಸದಸ್ಯರು ಪರಸ್ಪರ ಪರಿಚಯವಿಲ್ಲದಿದ್ದರೂ ಪ್ರತಿಯೊಬ್ಬರಿಗೂ ತಮ್ಮ ಪರಂಪರೆಯ ಬಗ್ಗೆ ತಿಳಿವಳಿಕೆ ಇರುತ್ತದೆ. ತಮ್ಮ ಪರಂಪರೆ, ಅದರ ಮೌಲ್ಯಗಳು, ಕಟ್ಟುಕಟ್ಟಳೆಗಳು ಮತ್ತು ಸಂಜ್ಞೆ ಸಂಕೇತಗಳನ್ನು ಅವರು ಬಲ್ಲವರಾಗಿರುತ್ತಾರೆ. ಸಾಮೂಹಿಕ ಪರಂಪರೆಯ ಈ ಪರಿಚಯವೇ ಸದಸ್ಯತ್ವಕ್ಕೆ ಬೇಕಾದ ಕನಿಷ್ಠ ಅರ್ಹತೆ. ಪರಸ್ಪರ ಹಂಚಿಕೊಳ್ಳುವ, ವಿರಳವೂ ವಿಶಿಷ್ಟವೂ ಆದ ಅಂಶಗಳನ್ನು ಹೊಂದಿರುವ ವ್ಯಕ್ತಿಗತ ಪರಂಪರೆಗೂ ಅದು ಉತ್ತಮ ಅಡಿಪಾಯ ಹಾಕುತ್ತದೆ.

ಈ ದೃಷ್ಟಿಯಿಂದ ನೋಡಿದರೆ ಜಾನಪದವು ಗುಂಪನ್ನು ಒಟ್ಟಾಗಿ ಹಿಡಿದುಕೊಂಡಿರುವ ಸಂಗತಿ ನಮ್ಮ ಅರಿವಿಗೆ ಬರುತ್ತದೆ. ಗುಂಪಿನ ವಿಶ್ವಕಲ್ಪನೆಯನ್ನು ನಿರ್ದೇಶಿಸುವ ‘ಲೋಕದೃಷ್ಟಿ’(world view), ತನ್ನದೆಂಬ ಭಾವನೆ ಮೂಡಿಸುವ ‘ಅನನ್ಯತೆ’(Identity) ಯೊಡೆನೆ ಅದು ಬೆಸೆದುಕೊಂಡಿರುತ್ತದೆ. ಪರಿಣಾಮವಾಗಿ ಗುಂಪೊಂದು ಜಾನಪದವನ್ನು ಹೊಂದಿದೆಯೆ ಇಲ್ಲವೆ ಎಂಬುದನ್ನು ನೋಡುವುದು ಅನವಶ್ಯಕ. ಬದಲಿಗೆ ಅದರ ಜಾನಪದ ಸ್ವರೂಪ ಕುರಿತು ಪರಿಶೀಲನೆ ನಡೆಸುವುದು ಯುಕ್ತ. ಜಾನಪದವು ನಶಿಸಿ ಹೋಗುವಂಥದು; ಗತದ ಉಳಿಕೆಯಾಗಿರುವ ಅದನ್ನು ಸಾಧ್ಯವಾದಷ್ಟೂ ಬೇಗ ಸಂರಕ್ಷಿಸಿಕೊಳ್ಳಬೇಕೆಂಬ ಮಾತುಗಳಿಗೆ ಈಗ ಮನ್ನಣೆ ಇಲ್ಲ. ಅಲ್ಲದೆ ಜಾನಪದ, ಈಗ, ಕೆಲವೇ ಕೆಲವು ಪ್ರಕಾರಗಳಿಗಷ್ಟೇ ಸೀಮಿತವಾಗಿಲ್ಲ. ವ್ಯಕ್ತಿಗತ ಪರಂಪರಾಗತ ವೈಲಕ್ಷಣ್ಯಗಳಿಗೆ ಮತ್ತು ಅದರ ಸಂರಕ್ಷಣೆಗಷ್ಟೇ ಅದು ತನ್ನನ್ನು ಸೀಮಿತಗೊಳಿಸಿಕೊಂಡಿಲ್ಲ. ಕ್ರಿಯಾತ್ಮಕ ಎನಿಸಿದ ಎಲ್ಲ ವಸ್ತು ಸಂಗತಿಗಳಿಗೂ ಅದರ ವ್ಯಾಪ್ತಿಯಲ್ಲಿ ಬರುತ್ತವೆ(ಹಾಂಕೊ:೧೯೯೦:೨).

ಈ ಹೊಸದೃಷ್ಟಿ ಜಾನಪದದ ವ್ಯಾಪ್ತಿಯನ್ನು ಗಣನೀಯವಾಗಿ ಹಿಗ್ಗಿಸುವಂತೆ ಕಾಣುತ್ತದೆ. ಪ್ರಕಾರಕೇಂದ್ರಿತ ಹಳೆಯ ದೃಷ್ಟಿ ಮರೆಯಾಗಿ ಹೋಗುವ ಅವಸಾನದ ಅಂಚಿನಲ್ಲಿದೆ. ಈ ಕಾರಣಕ್ಕಾಗಿ, ಹಳೆಯ ತಲೆಮಾರಿನ ವಿದ್ವಾಂಸರು ಮಾಡಿರುವಂತೆ, ಚಾರಿತ್ರಿಕ ಸ್ವರೂಪದ ಭಂಡಾರ ಸಾಮಗ್ರಿ ರೂಪದ ಸಂಶೋಧನೆ ಕೈಗೊಳ್ಳದೆ ಆಧುನಿಕ ಸಂಶೋಧಕರು ತಮ್ಮ ಎಲ್ಲ ಸಾಮರ್ಥ್ಯವನ್ನೂ ಒಗ್ಗೂಡಿಸಿ ಹಳೆಯ ದೃಷ್ಟಿಕೋನವನ್ನು ಕಳಚಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಅಥವಾ ಸಂಸ್ಕೃತಿಯ ವ್ಯಕ್ತರೂಪಗಳಲ್ಲಿ ಹುದುಗಿರುವ ಅನ್ಯೋನ್ಯ ಸಂಬಂಧದ ಕೊಂಡಿಗಳನ್ನು ತಪ್ಪಿಸುವ, ಬಿಡಿ ಬಿಡಿಯಾಗಿ ಕ್ಷೇತ್ರಾಧ್ಯಯನ ನಡೆಸುವ ಒತ್ತಡಕ್ಕೆ ಮಣಿಯುವುದನ್ನು ನಿಲ್ಲಿಸಬೇಕು.

ತುಂಬ ಆತಂಕದ ಸಂಗತಿಯೆಂದರೆ ಈ ಹೊಸದೃಷ್ಟಿಯೂ ಜಾನಪದ ಕ್ಷೇತ್ರವನ್ನು ಪರಿಮಿತಗೊಳಿಸಿಬಿಡಬಹುದೇ? ಸದಸ್ಯಗುಂಪಿನ ಜನರ ಪೈಕಿ ಆಯ್ದ ಕೆಲವರನ್ನಷ್ಟೇ ಸಂದರ್ಶಿಸಿ ಅವರ ಅನ್ನಿಸಿಕೆಗಳನ್ನಷ್ಟೇ ಸಂಚಯಿಸಿಕೊಳ್ಳುವ ನಮ್ಮ ಸಾಮಗ್ರಿಯನ್ನು ‘ಜಾನಪದ’ ಎಂದು ಪರಿಗಣಿಸಬಹುದೆ? ಎಂಬುದು ಇಲ್ಲಿ ನಮ್ಮನ್ನು ಕಾಡುವ ಸಮಸ್ಯೆ. ಅಂತೆಯೇ ಅಸ್ಪಷ್ಟ ಗುಂಪುಕ್ರಿಯೆಗಳನ್ನು ಸದಸ್ಯ ಗುಂಪಿನ ಚಟುವಟಿಕೆಗಳು ಎಂದು ಪರಿಗಣಿಸಬಹುದೆ?- ಎಂಬ ಸಂದೇಹವೂ ಇಲ್ಲಿ ನಮ್ಮನ್ನು ಅಲುಗಾಡಿಸುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಜಾನಪದಕ್ಕೂ ಭೌತಿಕವಾಗಿ ಉತ್ತಮ ಸಂಬಂಧ ಸಾಧಿಸಿರುವ ಗುಂಪುಗಳ ನಡುವಿನ ಸಂಬಂಧಕ್ಕೂ ಇಲ್ಲಿ ಹೆಚ್ಚಿನ ಪ್ರಾಶಸ್ತ್ಯವಿರುತ್ತದೆ.

ಎರಡನೆಯ ಮಹತ್ವದ ಬದಲಾವಣೆಯೆಂದರೆ ಹಳಮೆಯ ಸಂದೇಶಗಳಿಂದ ಮಾನವ ಅರಿವಿಗೆ ಜಿಗಿದದ್ದು. ಜಾನಪದ ಪರಂಪರೆ ಕುರಿತು ಹತ್ತೊಂಬತ್ತನೆಯ ಶತಮಾನದ ಸಂಶೋಧನೆ ಬಹುಕಾಲದವರೆಗೆ ಜಾನಪದ ವಿಜ್ಞಾನದ ಎಲ್ಲೆಕಟ್ಟನ್ನು ಗುರುತಿಸಿತ್ತು. ಅದರ ಆಲೋಚನಾಸರಣಿ, ಚಟುವಟಿಕೆಯ ವಿಧಿ ವಿಧಾನಗಳು ಹಾಗೂ ಯಶಸ್ಸಿನ ರಹಸ್ಯವನ್ನು ಅದು ಸಂಶೋಧನಾ ಕ್ಷೇತ್ರಕ್ಕೆ ನೀಡಿತ್ತು. ವಿಪರ್ಯಾಸದ ಸಂಗತಿಯೆಂದರೆ ಹತ್ತೊಂಬತ್ತನೆಯ ಶತಮಾನದ ಜಾನಪದ ವಿದ್ವಾಂಸರು ಮಾನವ ಮನಸ್ಸಿನ ಭಂಡಾರದಲ್ಲಿರುವ ಪುರಾತನತ್ವದಿಂದ ಸಂದೇಶಗಳನ್ನು ತಡಕಾಡಿದ್ದು, ಇದಕ್ಕೆ ಪ್ರತಿಯಾಗಿ ಇವತ್ತಿನ ಜಾನಪದ ಅಧ್ಯಯನಕಾರರು ಪ್ರಾಯೋಗಿಕ (empirical) ಸಂಶೋಧನಾ ವಿಧಾನಗಳನ್ನು ಅಳವಡಿಸಿಕೊಂಡಿರುವುದನ್ನು ನೋಡುತ್ತೇವೆ. ಆಗಿ ಹೋದ ಬದುಕನ್ನು ಅರಿಯಲು ಹತ್ತೊಂಬತ್ತನೆಯ ಶತಮಾನದ ಅಧ್ಯಯನಕಾರರು ಸಾಕಷ್ಟು ಪೂರ್ವಿಕರ ಪರಂಪರೆಯನ್ನೇ ಹೊಂದಿದ್ದರು: ಇಂಗ್ಲೆಂಡಿನಲ್ಲಿ ೧೬ನೇ ಶತಮಾನದ ಸುಧಾರಕರೆಂದೇ ಹೆಸರಾಗಿದ್ದ ಮೈಕೇಲ್‌ಆಗ್ರಿಕೋಲ ಇದ್ದರು; ೧೭ನೇ ಶತಮಾನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜಾನಪದ ಸಂಗ್ರಹಣೆ ನಡೆಸುವ ಭರಾಟೆ ಇತ್ತು; ೧೮ನೇ ಶತಮಾನದಲ್ಲಿ ರೊಮ್ಯಾಂಟಿಕ್‌ಯುಗ ಮತ್ತು ಅದರಿಂದ ಜ್ಞಾನೋದಯ ಹೊಂದಿದ ವಿದ್ವಾಂಸರ ಪಡೆ-ಈ ಎಲ್ಲವೂ ಇದ್ದವು. ಇಷ್ಟಾದರೂ ಅವರು ಗತವನ್ನು ಸಮರ್ಪಕವಾಗಿ ಅಳೆಯದೆ ಹೋದರು. ಕೇವಲ ಸಾಮಾಜಿಕ ಅಂತಸ್ತನ್ನು ಪರಿಪಾಲಿಸುವ ಕಡೆಗೆ ಹೆಚ್ಚು ಆಸ್ಥೆ ವಹಿಸಿದರು. ಪರಿಣಾಮವಾಗಿ ರಾಷ್ಟ್ರಗಳು ತಮ್ಮ ಇತಿಹಾಸ, ಭಾಷೆ ಮತ್ತು ಸಾಹಿತ್ಯದ ಬಗೆಗೆ ಜಾಗೃತಿ ಹೊಂದುವುದು ಸಾಧ್ಯವಾಯಿತು. ಆದರೆ ಬೂರ್ಜ್ವಾಗಳು ಸಾಮಾಜಿಕ ಸಮ್ಮತಿ ಗಳಿಸಿಯೇ ಸಾಮಾಜಿಕವಾಗಿ ಮೇಲೇರಿದರು.

ಈ ದೃಷ್ಟಿಯ ಪರಿಮಿತಿಗಳು ಅಧ್ಯಯನಕಾರರ ಮೇಲೆ ನಿಧಾನವಾಗಿ ಆವರಿಸಿದವು. ಭೂರಹಿತ ಗ್ರಾಮೀಣ ವರ್ಗಗಳೇ ಇರಲಿ ನಗರ ಕಾರ್ಮಿಕ ವರ್ಗಗಳೇ ಆಗಿರಲಿ ಸಾಮಗ್ರಿಯಲ್ಲಿನ ಅಂತರವನ್ನು ತುಂಬಿಕೊಳ್ಳುವುದು ಕಷ್ಟವೇ ಆಯಿತು. ಅನೇಕ ಗಟಕ ಸಂಸ್ಕೃತಿಗಳನ್ನು ಅವುಗಳ ವಿಶೇಷತೆಯಲ್ಲಿ ದಾಖಲಿಸದೇ ಇಲ್ಲ. ಅವುಗಳ ಲೋಕದೃಷ್ಟಿ ಆಸಕ್ತಿ ಕೆರಳಿಸುವಂಥದಲ್ಲ ಎಂಬ ಗ್ರಹಿಕೆಯೇ ಅದಕ್ಕೆ ಕಾರಣ. ಹೆಚ್ಚೆಂದರೆ ಅವನ್ನು ಒಂದು ತೆರನ ಏಕಪ್ರಕಾರಗಳು  (Stereotypes) ಎಂದು ಪರಿಗಣಿಸಲಾಯಿತು!

ಜನಪದ ಕಾವ್ಯದಲ್ಲಿ ರೊಮ್ಯಾಂಟಿಕ್‌ಆಸಕ್ತಿ ತೋರುವುದು ಬಾಲಿಶ ಎಂದು ಇವತ್ತಿನ ಅಧ್ಯಯನಕಾರರು ಅಲ್ಲಗಳೆಯುವುದು ಸರಿಯಲ್ಲ. ಹಾಗೆ ನೋಡಿದರೆ ಅದು ಸಾಮಾಜಿಕ ಗುರಿಗಳ ತನ್ನ ಪೂರ್ಣಪಾಲನ್ನು ಪಡೆದಿದ್ದು ಉನ್ನತ ಮೌಲ್ಯವನ್ನೇ ಕಾಯ್ದುಕೊಂಡಿದೆ. ಈ ವಿಷಯದಲ್ಲಿ ಅನೌಪಚಾರಿಕ ಭಾಷಣಗಳನ್ನು ಕೂಡ ಗಂಭೀರವಾಗಿ ಪರಿಗಣಿಸುವುದು ಅವಶ್ಯ. ಫಿನ್ಲೆಂಡಿನ ವಿಷಯದಲ್ಲಿ ವಿಲಿಯಂ ಎ. ವಿಲ್ಸನ್‌ಅವರು ಮಾಡಿರುವ ವಿಮರ್ಶಾತ್ಮಕ ವಿಶ್ಲೇಷಣೆ ಅದಕ್ಕೆ ನಿದರ್ಶನ (ಹಾಂಕೊ:೧೯೯೦:೩). ೧೯ನೇ ಶತಮಾನದ ಕೊನೆಯ ದಶಕಗಳು ಹಾಗೂ ೨೦ನೇ ಶತಮಾನದ ಆರಂಭದ ದಶಕಗಳಲ್ಲಿ ಎಷ್ಟು ಮಂದಿ ಜಾನಪದ ವಿದ್ವಾಂಸರು ತಮ್ಮ ಕೆಲಸದ ಸಾಮಾಜಿಕ ಆಯಾಮಗಳನ್ನು ಮನಗಂಡಿದ್ದರು ಎಂಬುದು ಸ್ಪಷ್ಟವೇ ಇದೆ. ಎಲ್ಲ ಕಾಲದಲ್ಲೂ, ಜ್ಞಾನವನ್ನು ಹುಟ್ಟುಹಾಕಲು ತಾವೇ ಸಮರ್ಥರು ಎಂದು ಭ್ರಮಿಸಿರುವ ವಿದ್ವಾಂಸರು ತಮ್ಮದೇ ಕಾರಣಗಳಿಗಾಗಿ ಸಮಾಜದ ಅಗತ್ಯಗಳನ್ನು ಕಡೆಗಣಿಸುವ ಒಂದು ಮನೋಪ್ರವೃತ್ತಿಯನ್ನು ಪ್ರಕಟಿಸುತ್ತಲೇ ಬಂದಿದ್ದಾರೆ. ಇಷ್ಟಾದರೂ ಅವರು ಜವಾಬ್ದಾರಿಯುತರಾಗಿದ್ದರು. ಪರಂಪರೆಯನ್ನು ಕುರಿತ ರೊಮ್ಯಾಂಟಿಕ್‌ಅಧ್ಯಯನಗಳ ಫಲಶ್ರುತಿಗಳಿಂದ ಇದು ಸಾಬೀತಾಗಿದೆ.

ಯಾವುದೇ ರಾಷ್ಟ್ರದ ಆರಂಭಿಕ ಚರಿತ್ರೆ ಜಾನಪದ ಅಧ್ಯಯನಕಾರರನ್ನು ಯಾವ ಪ್ರಮಾಣದಲ್ಲಿ ಪ್ರೇರೇಪಿಸಬೇಕಿತ್ತೋ ಆ ಪ್ರಮಾಣದಲ್ಲಿ ಪ್ರೇರೇಪಿಸಿಲ್ಲದಿರುವುದು ಸೋಜಿಗದ ಸಂಗತಿಯೇ. ಆರಂಭಿಕ ಚರಿತ್ರೆ ಯಾವತ್ತೂ ಜನಪ್ರಿಯ ವಿಜ್ಞಾನದ ಕೆಲವು ಚೇತೋಹಾರಿ ಗುಣಗಳನ್ನು ಮೈಗೂಡಿಸಿಕೊಂಡಿರುತ್ತದೆ; ಅಕೆಡೆಮಿಕ್‌ಭಾವಾವೇಶದ ಮೇಲೋಟಗಳಿಗೆ ಎಡೆ ಮಾಡಿಕೊಡುತ್ತದೆ. ಈ ವಿಷಯದಲ್ಲಿ ಜಾನಪದ ಅಧ್ಯಯನಕಾರರು ಚರಿತ್ರಕಾರರಂತಲ್ಲ. ಆದರೆ ಜಾನಪದವನ್ನೇ ಮುಖ್ಯ ಆಕರವಾಗಿ ಬಳಸುವ ಇತಿಹಾಸಕಾರರಿಗೆ ಹೆಚ್ಚು ಅನುಕೂಲಗಳಿರುವುದಿಲ್ಲ.

ಹಾಗಾದರೆ ಇಲ್ಲಿ ಜಾನಪದ ಅಧ್ಯಯನಕಾರರನ್ನು ಸೆಳೆದುಕೊಳ್ಳುವ ಅಂಶ ಯಾವುದು? ಎಂಬ ಪ್ರಶ್ನೆ ಎದುರಾಗುತ್ತದೆ. ‘ರಾಷ್ಟ್ರ’ವನ್ನು ‘ಸದಸ್ಯ ಗುಂಪಿ’ಗೆ ಪಲ್ಲಟಗೊಳಿಸುವ ಯತ್ನದಲ್ಲಿ ಜಾನಪದ ಅಧ್ಯಯನಕಾರರು ಕ್ರಿಯಾತ್ಮಕ ಸ್ವರೂಪದ ಪರಂಪರಾಗತ ಕ್ರಮಗಳ ಅಧ್ಯಯನಕ್ಕೆ ಹತ್ತಿರವಾಗುವ ಒಂದು ದಿಟ್ಟ ಹೆಜ್ಜೆಯನ್ನೇ ಇಟ್ಟಿರುವುದನ್ನು ನೋಡುತ್ತೇವೆ. ಇದರರ್ಥ ಅವರ ಆಸಕ್ತಿಯ ವಿಷಯಗಳು ಪರಂಪರೆಯ ಉತ್ಪನ್ನಗಳಷ್ಟೇ ಅಲ್ಲ; ಅವನ್ನು ಬಳಸುವ ಹಾಗೂ ನಿಯಂತ್ರಿಸುವ ವ್ಯವಸ್ಥೆ ಕುರಿತು ಕೂಡ ಇವೆ ಎಂದು. ಈ ವ್ಯವಸ್ಥೆ ಕೇವಲ ಜಾನಪದದಲ್ಲಷ್ಟೇ ಗೋಚರವಾಗುವಂಥದಲ್ಲ; ಅದನ್ನು ಹುಟ್ಟುಹಾಕುವ, ಬಳಸುವ ಹಾಗೂ ಪೋಷಿಸಿಕೊಂಡು ಬರುತ್ತಿರುವ ಕ್ರಮದಲ್ಲೂ ಇದೆ. ಇದು ಕ್ಷೇತ್ರ ಸಂಶೋಧನೆಗೆ ಅವಕಾಶ ಕಲ್ಪಿಸಿಕೊಡುತ್ತದೆ; ಅಧ್ಯಯನಕ್ಕೊಳಗಾಗುವ ಸಮುದಾಯಗಳ ಪ್ರಾಯೋಗಿಕ ಸಂಪರ್ಕಗಳಿಗೆ ಎಡೆ ಮಾಡಿಕೊಡುತ್ತದೆ. ಕೆಲವು ಸಮುದಾಯಗಳಂತೂ ಈ ಪ್ರಾಯೋಗಿಕ ಅಧ್ಯಯನಕ್ಕೆ ಗುರಿಯಾಗುವ ಸ್ಥಿತಿಯನ್ನೇ ಮೀರಿ ಬಿಟ್ಟಿವೆ. ಇಲ್ಲಿ ನೆನಪಿನಲ್ಲಿಡಬೇಕಾದ ಒಂದು ಸಂಗತಿ ಎಂದರೆ ಯಾರು ಕ್ಷೇತ್ರಕಾರ್ಯದ ಅನುಭವದಿಂದ ವಂಚಿತರಾಗುತ್ತಾರೊ ಅವರು ತಮ್ಮ ವಿದ್ವದ್‌ವಿಸ್ಮಯದ ಮೇಲೆ ಹತೋಟಿ ಸಾಧಿಸುವುದು ಸಾಧ್ಯವಿಲ್ಲ ಎಂಬುದು. ಎಷ್ಟೋ ವೇಳೆ ಜಾನಪದ ಅಧ್ಯಯನಕಾರನು ಎರಡು ಸಂಸ್ಕೃತಿಗಳ ನಡುವಿನ ಯಾರಿಗೂ ಸೇರಿರದ ನಡುಗಡ್ಡೆಯಲ್ಲಿದ್ದು ಅಪೂರ್ವ ಜ್ಞಾನ ಸಂಪಾದಿಸಿಕೊಳ್ಳುವ ಅವಕಾಶ ಪಡೆಯುತ್ತಾನೆ ಮತ್ತು ಅದನ್ನು ಕ್ಷೇತ್ರಕಾರ್ಯ ನಿರ್ವಹಿಸುವುದರ ಮೂಲಕ ಗಳಿಸಿಕೊಳ್ಳುತ್ತಾನೆ.

ಈ ಕಾರಣಕ್ಕಾಗಿ ಕಥೋಪಕಥಾನಕ ಮಾನವಶಾಸ್ತ್ರ(Dialogical Anthropology) ಪರಿಭಾಷೆ ಜಾನಪದ ಅಧ್ಯಯನಕಾರನ ಮೂಲ ಮನೋಧರ್ಮಕ್ಕೆ ಹತ್ತಿರ ಬರುತ್ತದೆ. ವೈಜ್ಞಾನಿಕ ಹಾಗೂ ಜಾನಪದ ಸಮುದಾಯಗಳು- ಹೀಗೆ ಎರಡು ಲೋಕಗಳ ನಡುವೆ ಅವನು ವ್ಯವಹರಿಸುತ್ತಾನೆ. ಎರಡರಲ್ಲೂ ಅವನು ಕಾರ್ಯ ನಿರ್ವಾಹಕನ ಪಾತ್ರವನ್ನು ನಿರ್ವಹಿಸುತ್ತಾನೆ. ಒಂದೆಡೆ ಅವನು ತನ್ನ ನಿರೂಪಕರೊಡನೆ ವ್ಯಕ್ತಿಗತ ಸಂಬಂಧವನ್ನು ಸಾಧಿಸಿದರೆ ಮತ್ತೊಂದೆಡೆ ಜ್ಞಾನವನ್ನು ರೂಪಿಸುವ ಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಮೂರನೆಯದಾಗಿ ವೈಜ್ಞಾನಿಕ ಸಮುದಾಯದ ವಿಷಯದಲ್ಲಿ ಅವನಿಗೆ ಕೊಂಚ ದಾಕ್ಷಿಣ್ಯದ ಪಾತ್ರವೂ ಇರುತ್ತದೆ. ಸಂಶೋಧಕ-ನಿರೂಪಕ ಸಂಬಂಧದ ಮೇಲೆ ಒಮ್ಮೊಮ್ಮೆ ಕವಿಯುವ ಅಸಮಮಿತಿ ಕೆಲವಾದರೂ ಸಂಶೋಧಕನಾ ಗುರಿಗಳನ್ನು ಈಡೇರಿಸಿಕೊರ್ಳಳಲು ಅಡ್ಡಿಮಾಡಬಹುದು; ಕೆಟ್ಟ ರೀತಿಯಲ್ಲಿ ನಿರೂಪಕನ ಮೇಲೆ ಹತೋಟಿ ಸಾಧಿಸಲು ಪ್ರೇರೇಪಿಸಬಹುದು. ಈ ಕಾರಣಕ್ಕಾಗಿಯೇ ಕಥೋಪಕಥಾನಕ ಮಾನವಶಾಸ್ತ್ರವು ನಿರೂಪಕನು ಸ್ವಯಂ ಸ್ಫೂರ್ತಿಯಿಂದ ತನ್ನ ಕಥನ ಮತ್ತು ಅನುಭವಗಳನ್ನು ನಿರೂಪಿಸಲು ಹುರಿದುಂಬಿಸುತ್ತದೆ. ಅವನದೇ ಸಂಸ್ಕೃತಿಯ ವ್ಯಾಖ್ಯಾನಕಾರನಾಗಿ, ನಿರೂಪಕನ ಹಕ್ಕನ್ನು ಬಲಪಡಿಸುವುದಕ್ಕಾಗಿ ಅಡ್ಡ ಪ್ರಶ್ನೆಗಳನ್ನು ಕೈಬಿಟ್ಟು ಸಮತೂಕದ ಸಮಚಿತ್ತದ ಸಂವಾದಕ್ಕೆ ಅನುಕೂಲವಾಗುವಂಥ ಸನ್ನಿವೇಶವನ್ನು ನಿರ್ಮಾಣ ಮಾಡುತ್ತದೆ. ಇದರಿಂದ ಪರಂಪರಾ ವ್ಯವಸ್ಥೆಯನ್ನು ನಿರೂಪಕನ ನೆಲೆಯಿಂದ ಅವನು ಅದಕ್ಕೆ ಆರೋಪಿಸುವ ಅರ್ಥದ ಬೆಳಕಿನಲ್ಲಿ ಅರಿತುಕೊಳ್ಳಲು ಅವಕಾಶವಾಗುತ್ತದೆ.

ಸಮಕಾಲೀನ ಜಾನಪದ ಸಂಶೋಧನೆ ಸಂಸ್ಕೃತಿಯ ಪ್ರಜ್ಞಾಪೂರ್ವಕ ಅಭಿವ್ಯಕ್ತಿಗಳ ವಿಶ್ಲೇಷಣೆ ನಡೆಸುತ್ತಿದ್ದು ಸಂಸ್ಕೃತಿಯ ಅಧ್ಯಯನದಲ್ಲಿ ಮಹತ್ತರ ಸಾಧನೆ ತೋರಿದೆ. ಐವತ್ತು ವರ್ಷಗಳ ಹಿಂದೆ ಸಂಶೋಧನೆಯಲ್ಲಿ ನಿರೂಪಕನ ವಿವರಣೆಯನ್ನು ಅವನೇ ಒದಗಿಸಿದ ಜಾನಪದಕ್ಕಿಂತ ಕೀಳಾದುದು ಎಂದು ತಿರಸ್ಕರಿಸಲಾಗುತ್ತಿತ್ತು. ಅದಕ್ಕೆ ಸರ್ಮರ್ಥನೆ ಎನ್ನುವಂತೆ ಅಶಾಬ್ದಿಕ ಜಾನಪದದಲ್ಲಿ ತೋರಿಕೆಯ ಕಾರಣಗಳಿದ್ದವು. ಅಲ್ಲದೆ ಅಂಥ ಸನ್ನಿವೇಶಗಳಲ್ಲಿ ಸಂಶೋಧಕನು ತನ್ನ ಪಾತ್ರವನ್ನು ನಿರೂಪಕನ ಪಾತ್ರದೊಡನೆ ಬೆಸೆದು ಕೊಳ್ಳುವ ಯತ್ನ ಮಾಡುತ್ತಿರಲಿಲ್ಲ. ಪರಿಣಾಮವಾಗಿ ನಿರೂಪಕ ಕೂಡ ಅಶಾಬ್ದಿಕ ಸಾಂಸ್ಕೃತಿಕ ಅಂಶಗಳ ವಿವರಣೆಗೆ ಮುಂದಾಗುತ್ತಿರಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಸಮಕಾಲೀನ ಜಾನಪದ ಅಧ್ಯಯನಕಾರರು ನಿರೂಪಕನನ್ನು ಸಹ-ಸಂಶೋಧಕನನ್ನಾಗಿ ಪರಿಗಣಿಸುವ, ಸಂಶೋಧನಾ ಸಾಮಗ್ರಿಯನ್ನು ಹುಟ್ಟುಹಾಕುವ ನಿರ್ಮಾತೃ ಎಂದು ಆದರಿಸುವ, ತತ್ವಶಃ ಸಮಾನ ಸ್ಥಾನಮಾನವನ್ನು ಹೊಂದಿದವನನ್ನಾಗಿ ಕಾಣುವ ಸಮಾನತೆಯ ದೃಷ್ಟಿ-ಒಂದು ಮಹತ್ವದ ಹೊಸ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ.

ಇಲ್ಲಿ ನಾವು ಮಾನವ ಹಾಗೂ ಕ್ರಿಯಾಶೀಲ ಸಮುದಾಯವನ್ನು ಅರಿಯುವ ನಿಟ್ಟಿನಲ್ಲಿ ಜಾನಪದದ ಒಂದು ಪಲ್ಲಟವನ್ನು ಕಾಣುತ್ತೇವೆ. ಇದು ಜಾನಪದವನ್ನು ಒಳಗೊಳ್ಳುವ ಎಲ್ಲ ಕೆಲಸಗಳಲ್ಲೂ ಎಂದರೆ ಜನರನ್ನು ನಿಕಟವಾಗಿ ನೋಡಿ ಘಟನೆಯ ಹಿನ್ನೆಲೆ, ಸಂದರ್ಭ ಮತ್ತು ಅರ್ಥವನ್ನು ವಿವರಿಸುವುದರ ಔಚಿತ್ಯವನ್ನು ಒತ್ತಿ ಹೇಳುತ್ತದೆ. ಅಂತೆಯೇ ಜಾನಪದ ವಿಜ್ಞಾನವು ಮಾನವಶಾಸ್ತ್ರ ಮತ್ತು ಮಾನವಕುಲ ವಿವರಣಶಾಸ್ತ್ರಗಳ ಒಂದು ಪ್ರಕಾರವೇ ಆಗಿದೆ. ಇಷ್ಟಾದರೂ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಯಾವುದೇ ಅಪಾಯವನ್ನು ಎದುರಿಸುತ್ತಿಲ್ಲ. ಏಕೆಂದರೆ ಅದು ಪರಂಪರೆಯ ಏಕಪ್ರಕಾರದ ಮೂಲಾಂಶಗಳ ವಿಶ್ಲೇಷಣಾಕಾರ್ಯಕ್ಕೆ ಅಪೂರ್ವ ರೀತಿಯಲ್ಲಿ ಸಜ್ಜಾಗಿದೆ. ಸಾಂಸ್ಕೃತಿಕ ಸಂರಚನೆಗಳನ್ನು ಹಾಗೂ ವ್ಯತ್ಯಯಗಳನ್ನು ಪರಿಶೀಲನೆಗೈಯುವ ಮಹತ್ವದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡಿದೆ. ಇನ್ನೊಂದೆಡೆ ಮಾನವಶಾಸ್ತ್ರಜ್ಞರು ಹಾಗೂ ಮಾನವಕುಲ ವಿವರಣ ಶಾಸ್ತ್ರಜ್ಞರು ಈಗೀಗ ಸಾಮಾಜಿಕ ಮತ್ತು ಆರ್ಥಿಕ ರಚನೆಗಳ ವಿಷಯದಲ್ಲಿ ಅತಿಯಾದ ಕಾಳಜಿ ತೋರಿಸುತ್ತಿದ್ದಾರೆ. ಹೀಗಾಗಿ ಜಾನಪದ ಅಧ್ಯಯನಕಾರರಿಗೆ, ಅವರ ಸಾಮರ್ಥ್ಯಕ್ಕೆ ಸವಾಲಾಗಿ, ಮೌಖಿಕ ಪರಂಪರೆಯ ವಿಶ್ಲೇಷಣೆ ಒಂದು ವಿಲಕ್ಷಣ ಕ್ಷೇತ್ರವಾಗಿ ಪರಿಣಮಿಸಿದೆ. ಅದು ಸಂಶೋಧಕರ ಒಂದು ದೊಡ್ಡ ಪಡೆಯನ್ನೇ ಆಕರ್ಷಿಸುವಂಥ ಕ್ಷೇತ್ರವೇನಲ್ಲ. ಆದರೆ ನಿರೂಪಕನನ್ನು ಸಂಪಾದಿಸುವ ಸಂಶೋಧನೆಗೆ ನಿಕಟವಾದುದು. ಕಥೋಪಕಥಾನಕ ಮಾನವಶಾಸ್ತ್ರಜ್ಞನಂತೂ ತನ್ನ ಸಹಸಂಶೋಧಕ-ನಿರೂಪಕನ ವಿಶ್ಲೇಷಣೆಯ ಫಲಿತಗಳನ್ನನು ಸರಿಸಿಯೇ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತಾನೆ. ನಿರೂಪಕನ ಸಮ್ಮತಿ ಅಥವಾ ಅಸಮ್ಮತಿ ಅವನನ್ನು ಉದ್ದಕ್ಕೂ ಪ್ರಭಾವಿಸುತ್ತವೆ. ಈ ಕಾರಣಕ್ಕಾಗಿಯೇ ಇಬ್ಬರ ಹೆಸರುಗಳನ್ನೂ ಜಂಟಿಯಾಗಿ ಕರ್ತೃಗಳೆಂದು ಉಲ್ಲೇಖಿಸುವುದು ಅರ್ಥಪೂರ್ಣ. ಅದರರ್ಥ ಶಾಸ್ತ್ರಸಮ್ಮತವಾದ ಒಂದು ಶಿಸ್ತನ್ನು ಕಸಬುದಾರನಲ್ಲದವನಿಗೆ ಒಪ್ಪಿಸುವುದು ಎಂದಲ್ಲ. ಹೊರಗಿನವನಾದ ಸಂಶೋಧಕನಿಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು, ಅವು ಗಣನೀಯವಾಗಿ ಭಿನ್ನವಾಗಿದ್ದರೂ, ಒಳಗಿನ ಸಂಶೋಧಕನ ಹೆಸರಿನಲ್ಲಿ ಅವನಿಗೆ ಹಾಗೆ ಮಾಡಲು ಆಗದೆ ಇರುವ ಸ್ಥಿತಿ ಇರುವವರೆಗೆ ಎಲ್ಲ ಬಗೆಯ ಸ್ವಾತಂತ್ರ್ಯವಿರುತ್ತದೆ. ಮಾತುಕತೆ ಮತ್ತು ಸಂದರ್ಶನದಲ್ಲಿ ಮುದ್ರಿತ ಸಂಭಾಷಣೆಗಳು, ಮುಕ್ತ ಉದ್ಧರಣೆಗಳು ಇದ್ದರೆ ಆಕ್ಷೇಪವೇನೂ ಇಲ್ಲ. ಸಂಸ್ಕೃತಿಯ ಒಳಗಿನ ಸಂಶೋಧಕನಿಗೆ ಪರಂಪರಾ ವ್ಯವಸ್ಥೆಯನ್ನು ಇದ್ದದ್ದನ್ನು ಇದ್ದಂತೆಯೇ ವಿಶ್ಲೇಷಿಸಲು ಅವಕಾಶವಿರುತ್ತದೆ. ಹೆಚ್ಚೂ ಕಡಿಮೆ ಅವನೊಬ್ಬ ವಿಶ್ಲೇಷಣಾತ್ಮಕ ಸಾಧನವೇ ಆಗಿರುತ್ತಾನೆ. ಅವನ ಕೆಲಸದ ಮೂಲಭೂತ ಗುರಿ ಪ್ರಪಂಚವನ್ನು ವರ್ಣಿಸುವುದಷ್ಟೇ ಅಲ್ಲ. ಅದನ್ನು ಸಮರ್ಪಕ ರೀತಿಯಲ್ಲಿ ಗ್ರಹಿಸುವುದು ಕೂಡ. ಆದರೆ ಅವನ ಸಹಸಂಶೋಧಕ-ನಿರೂಪಕನ ಪಾಲಿಗೆ ಸಂಶೋಧಕ ಮತ್ತು ಸಂಸ್ಕೃತಿ ಕೇವಲ ಪರಿಕರಗಳು ಹಾಗೂ ವಿಕಾಸದ ಪ್ರಾಥಮಿಕ ಅಂಶಗಳು ಅಷ್ಟೆ.

ಹಾಂಕೊ ಪ್ರಕಾರ, ಸಂಶೋಧಕ ಮತ್ತು ನಿರೂಪಕನ ಪಾತ್ರಗಳು ಒಂದರೊಡನೊಂದು ಐಕ್ಯವಾಗಿರುತ್ತಾವಾದ್ದರಿಂದ ಸಂಶೋಧಕನಿಲ್ಲದೆ ಜಾನಪದ ವ್ಯವಸ್ಥೆ ಉದ್ಭವಿಸುವುದು ಸಾಧ್ಯವಿಲ್ಲ(೧೯೯೦:೫). ಸಂಶೋಧನಾ ಮಾರ್ಗದಲ್ಲಿ ಕ್ರಮಿಸುವಾಗ ಎಲ್ಲ ಸಂಗತಿಗಳನ್ನೂ ಸರಿಯಾದ ರೀತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಲಕ್ಷಿಸುವುದು ಕಷ್ಟಸಾಧ್ಯ. ಇಷ್ಟಾದರೂ, ಹಿಂದಿನ ಸಂಶೋಧನೆಯೊಡನೆ ಹೋಲಿಸಿ ನೋಡಿದರೆ, ಈ ಮೂಲಭೂತ ಧೋರಣೆ ಹೊಂದಿರುವ ವಿದ್ವಾಂಸರು ಅತ್ಯುತ್ಸಾಹದಿಂದ ಮಾಡಿರುವ ಊಹನೆಗಳಿಂದ ತೃಪ್ತರಾಗಬೇಕಿದೆ.

ಒಂದು ಪ್ರತ್ಯೇಕ ಅಧ್ಯಯನ ಶಿಸ್ತಾಗಿ ರೂಪುಗೊಂಡಂದಿನಿಂದ ಹಲವಾರು ಮಂದಿ ವಿದ್ವಾಂಸರು ಜಾನಪದ ಎಂದರೇನೆಂದು ಸೂತ್ರೀಕರಿಸಿ ವಿವರಿಸುವ ಪ್ರಯತ್ನ ಮಾಡಿರುವುದುಂಟು. ಮತ್ತೆ ಮತ್ತೆ ಅಂಥ ಪ್ರಯತ್ನಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಬೆಳಕಿಗೆ ಬಂದಿರುವ ಎರಡು ನೂತನ ನಿರ್ವಚನಗಳ ಬೆಳಕಿನಲ್ಲಿ ಜಾನಪದ ಕ್ಷೇತ್ರವನ್ನು ಮರುವಿವೇಚನೆಗೆ ಗುರಿಪಡಿಸುವುದು ಅಗತ್ಯ ಎನಿಸಿದೆ.

ಪರಂಪರಾಗತ ಸಂಸ್ಕೃತಿ ಮತ್ತು ಜಾನಪದವನ್ನು ಸಂರಕ್ಷಿಸುವ ವಿಷಯದ ಮೇಲೆ ಕೈಗೊಂಡ ಅಂತಾರಾಷ್ಟ್ರೀಯ ಶಿಫಾರಸುಗಳನ್ನು ೧೯೮೯ರ ನವೆಂಬರ್ ನಲ್ಲಿ ಪ್ಯಾರಿಸ್‌ನಲ್ಲಿ ಜರುಗಿದ ಯುನೆಸ್ಕೊ(Unesco) ಸಾಮಾನ್ಯ ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು. ಇದು ಜಾನಪದದ ಸ್ಥಾನವನ್ನು ಅತ್ಯುನ್ನತ ಸ್ತರಕ್ಕೇರಿಸುವ ಪ್ರಕ್ರಿಯೆಗೆ ಚಾಲನೆ ದೊರಕಿಸಿಕೊಟ್ಟ ಒಂದು ದಿಟ್ಟ ಹೆಜ್ಜೆ. ಜಾಗತಿಕ ಸಂಸ್ಕೃತಿಯಲ್ಲಿ ಅದರ ಸ್ಥಾನವನ್ನು ಶಿಖರಕ್ಕೇರಿಸುವ ಪ್ರಯತ್ನವೂ ಹೌದು. ಜಾನಪದ ಕೆಲಸಕ್ಕೆ ಅಗತ್ಯವೆನಿಸಿದ ಮೂಲಭೂತ ಸೌಕರ್ಯಗಳ ಕೊರತೆ ಇರುವ ದೇಶಗಳಲ್ಲಿ ಜಾನಪದ ಸಂಗ್ರಹಣೆ, ಜಾನಪದ ಭಂಡಾರ ನಿರ್ಮಾಣ, ಸಂಶೋಧನೆ ಮತ್ತು ಪ್ರಕಟಣಕಾರ್ಯವು ಅಂತಾರಾಷ್ಟ್ರೀಯ ಸಂಶೋಧನಾ ತರಬೇತಿ ಹಾಗೂ ಸಹಕಾರದೊಡನೆ ನಡೆಯಬೇಕೆಂಬ ಆಶಯದಿಂದ ಪರಂಪರಾಗತ ಸಂಸ್ಕೃತಿಯ ಮೌಲ್ಯಗಳನ್ನು ಮಾನ್ಯ ಮಾಡುವಂತೆ ಆಗ್ರಹಪೂರ್ವಕವಾಗಿ ಒತ್ತಾಯಿಸಲಾಯಿತು. ಅಲ್ಲದೆ ಮಾನವ ಸಮುದಾಯಗಳು ತಂತಮ್ಮ ಪರಂಪರಾಗತ ಸಂಸ್ಕೃತಿಗಳನ್ನಷ್ಟೇ ಅನುಷ್ಠಾನಗೈಯಲು ಅಗತ್ಯವಾದ ಮಾರ್ಗದರ್ಶೀ ಸೂತ್ರಗಳನ್ನು ರೂಪಿಸಲಾಯಿತು.

ಜಾನಪದ ಸ್ವಾಮ್ಯದ ಪ್ರಶ್ನೆ ಕುರಿತ ಜಿಜ್ಞಾಸೆ ಜಾನಕಪದದ ದುರ್ಬಳಕೆಯನ್ನು ನಿರ್ಬಂಧಿಸುವ ಬಗೆಗೆ ಎಚ್ಚರಿಕೆ ವಹಿಸಿತು. ಸಮುದಾಯದ ಬದುಕಿಗೆ ಅಪಚಾರವೆಸಗುವ ಪ್ರದರ್ಶನಗಳನ್ನು ನಿಷೇಧಿಸುವ ಹಾಗೂ ಸಮುದಾಯದ ಹೊರಗಿನ ಲೋಕದಲ್ಲಿ ವ್ಯಾವಹಾರಿಕ ಲಾಭಗಳಿಸುವ ಯತ್ನವನ್ನು ತಡೆಯುವ ಬಗೆಗೆ ಕೂಡ ಮಾರ್ಗದರ್ಶೀ ಸಲಹೆಗಳನ್ನು ರೂಪಿಸಲಾಯಿತು. ಸದ್ಯ ಅಂಗೀಕೃತವಾಗಿರುವ ಶಿಫಾರಸುಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದರೆ ಜಾನಪದ ದಾಖಲೀಕರಣ, ಜಾನಪದ ಭಂಡಾರ ಹಾಗೂ ವಸ್ತು ಸಂಗ್ರಹಾಲಯಗಳ ನಿರ್ಮಾಣ, ಸಂಶೋಧನ ಸಂಸ್ಥೆಗಳ ಸ್ಥಾಪನೆ-ಇಂಥ ರಚನಾತ್ಮಕ ಕಾರ್ಯಶೀಲ ಯೋಜನೆಗಳನ್ನು ಹಮ್ಮಿಕೊಳ್ಳಬಹುದು. ಆ ಮೂಲಕ ಏನೂ ಗುರುತುಳಿಯದಂತೆ ನಶಿಸಿ ಹೋಗಬಹುದಾದ ಸಾಂಸ್ಕೃತಿಕ ಸಂಪತ್ತನ್ನು ಸಂರಕ್ಷಿಸಿಕೊಳ್ಳಬಹುದು. ಪರಂಪರಾಗತ ಜೀವನ ವಿಧಾನದ ನಂಬಲರ್ಹ ಚಿತ್ರವನ್ನು ದೊರಕಿಸಿಕೊಳ್ಳುವ ಅವಕಾಶವನ್ನು ಮುಂದಿನ ಪೀಳಿಗೆಗೆ ಕಲ್ಪಿಸಕೊಡುತ್ತಾ ಇಂದಿನ ಸಮುದಾಯಗಳು ತಮ್ಮ ಜಾನಪದದೊಡನೆ ನಿಕಟ ಬಾಂಧವ್ಯ ಹೊಂದಲು ಪ್ರೇರಣೆ ಒದಗಿಸಬಹುದು.

ಶಿಫಾರಸಿನ ಆರಂಭದಲ್ಲಿ ಜಾನಪದವನ್ನು ಹೀಗೆ ನಿರ್ವಚಿಸಲಾಗಿದೆ: ‘ಜಾನಪದ ಒಂದು ಸಂಸ್ಕೃತಿ ಸಮೂಹದ ಪರಂಪರೆಯಾಧಾರಿತ ಸೃಷ್ಟಿಗಳ ಒಟ್ಟು ಮೊತ್ತ. ವ್ಯಕ್ತಿಗಳ ಸಮೂಹದಿಂದ ಅಭಿವ್ಯಕ್ತಿಗೊಳ್ಳುವಂಥದು ಹಾಗೂ ಸಮುದಾಐವೊಂದರ ನಿರೀಕ್ಷೆಗಳನ್ನು ಪ್ರತಿಫಲಿಸುವಂಥದು. ಅನುಕರಣೆ ಅಥವಾ ಇತರ ಸಾಧನಗಳ ಮೂಲಕ ಸಮುದಾಯವೊಂದರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಅನನ್ಯತೆಯನ್ನು ಬಿಂಬಿಸುವಂಥದು. ಅದರ ಗುಣಮಟ್ಟ ಮತ್ತು ಮೌಲ್ಯಗಳು ಮೌಖಿಕವಾಗಿ ವಹನಗೊಳ್ಳುತ್ತವೆ. ಅದು ಭಾಷೆ, ಸಾಹಿತ್ಯ, ಸಂಗೀತ, ನೃತ್ಯ, ಆಟ, ಪುರಾಣ, ಆಚರಣೆ, ಸಂಪ್ರದಾಯ, ಕರಕುಶಲ ಕಲೆಗಳು, ವಾಸ್ತು ಮತ್ತು ಇತರ ಕಲೆಗಳು ಮುಂತಾದ ಪ್ರಕಾರಗಳನ್ನು ಒಳಗೊಳ್ಳುತ್ತದೆ(ಎನ್‌.ಐ.ಎಫ್:೧೯೮೯:೮).

ಈ ದೃಷ್ಟಿಕೋನದ ನಿರ್ಣಾಯಕ ಶೋಧವೆಂದರೆ ಜಾನಪದವು ಸಮುದಾಯದ ನಿರೀಕ್ಷೆಗಳ ಮೇಲೆ ನೇರ ದೃಷ್ಟಿ ಇಟ್ಟಿದೆ ಎಂಬುದು. ಆದರೆ ಈ ನಿರ್ಣಾಯಕ ಅಂಶಗಳು ಗತದಿಂದ ಸಂದೇಶಗಳನ್ನು ಪ್ರಸರಣಗೊಳಿಸುವ ಜಾನಪದದ ಸಾಮರ್ಥ್ಯವನ್ನು ಒಳಗೊಳ್ಳುವುದಿಲ್ಲ. ಯಾವ ಸಾಧ್ಯತೆಯನ್ನೂ ತಳ್ಳಿ ಹಾಕಲಾಗದಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಗತದ ಮೌಲ್ಯಗಳಿಗೇ ಅದು ಅಧೀನವಾಗಿರುವುದು ನಿಜ. ಸಮುದಾಯವು, ಜಾನಪದದಲ್ಲಿ ಫಲಿತವಾಗುವ ಗತವನ್ನಷ್ಟೇ ಜಾನಪದದ ಮೂಲ ಭಾಗದ ಮಹತ್ವದ ಘಟಕಗಳಲ್ಲೊಂದು ಎಂದು ತಿಳಿಯುತ್ತದೆ. ಸಮುದಾಯದಲ್ಲಿ ಅಂತರ್ಗತವಾಗಿರುವ ಮೌಲ್ಯಗಳ ನಿಷ್ಕರ್ಷೆ ಹೊರಗಿನ ಮೌಲ್ಯಮಾಪಕರಿಂದ ನಡೆದರೆ ಅದಕ್ಕೆ ಕನಿಷ್ಠ ಪ್ರಾಶಸ್ತ್ಯವಿದೆ. ಅಕ್ಷರ ಸಂಸ್ಕೃತಿಯಿಂದ ಸ್ವೀಕರಿಸಿದ ವಿಂಗಡಣ ಕ್ರಮ, ಪ್ರಕಾರಗಳ ಹಾಗೂ ಪರಿಭಾಷೆಗಳ ಯಾದಿ ಇದ್ದರೂ ಅದಕ್ಕೆ ಕಡಿಮೆ ಮಹತ್ವ ನೀಡಲಾಗುತ್ತಿದೆ. ಒಟ್ಟಿನಲ್ಲಿ ಜ್ಞಾನಪದವು ಅತ್ಯಂತ ಆರ್ಷೇಯವಾದುದೇನಲ್ಲ; ವಿಕಸಿತವಾದುದೂ ಅಲ್ಲ; ವ್ಯಾಪಕವಾದ ಜ್ಞಾನ ಎನ್ನುವುದೂ ಕಷ್ಟ(ಹಾಂಕೊ:೧೯೯೦:೬). ಆದರೆ ಸಮುದಾಯದ ಸಾಮಾಜಿಕ ಹೊಂದಾಣಿಕೆ ಹಾಗೂ ಸಾಂಸ್ಕೃತಿಕ ಅನನ್ಯತೆಯೊಡನೆ ನೇರ ಸಂಬಂಧ ಸ್ಥಾಪಿಸಿರುವ ಜ್ಞಾನ ಪರಂಪರೆ ಅದು.

ಇದರರ್ಥ ಜಾನಪದವನ್ನು ಪ್ರಾಥಮಿಕವಾಗಿ ಜೀವಂತ ಸಮುದಾಯದ ಹಿನ್ನೆಲೆಯಲ್ಲಿ ಪರಿಶೀಲಿಸಬೇಕು ಎಂಬುದೇ ಆಗಿದೆ. ಅದರಲ್ಲೂ ಅದನ್ನು ಕ್ರಿಯಾತ್ಮಕ ರೂಪದಲ್ಲೇ ನೋಡಬೇಕು. ಸಮುದಾಯದ ಅನನ್ಯತೆ ಹಾಗೂ ಅದರ ಪರಿಕಲ್ಪನೆಗಳು ತಮ್ಮಷ್ಟಕ್ಕೆ ತಾವು ವ್ಯತ್ಯಯಗೊಳ್ಳುವಂಥವು; ಜಾನಪದದ ಮೂಲದ್ರವ್ಯೆ ಸ್ಥಿರವಾಗಿರುತ್ತದೆ ಎಂದೊ ಸಾಮಗ್ರಿ ಸ್ಥಿರ ರೂಪವನ್ನು ಹೊಂದಿರುತ್ತದೆ ಎಂದೊ ತಿಳಿಯಬೇಕಾಗಿಲ್ಲ. ಸ್ಥಿರತೆ ಏನಾದರೂ ಇದ್ದರೆ ಅದು ಸಮುದಾಯ ಅದನ್ನು ಬಳಸಿಕೊಳ್ಳುವ, ವ್ಯಾಖ್ಯಾನಿಸುವ, ಅದಕ್ಕೆ ಆರೋಪ ಮಾಡುವ ಮೌಲ್ಯಕ್ರಮದಲ್ಲಿರುವುದು ಸಾಧ್ಯ.

ಇದು ಮೇಲಿನ ನೂತನ ನಿರ್ವಚನದ ಸಾರ. ಈ ನಿರ್ವಚನವು ಪರಂಪರೆಯ ಮೊತ್ತವನ್ನು ಕುರಿತು ಹೇಳುವಾಗ ಹೆಚ್ಚು ಸಾಂಪ್ರದಾಯಿಕತೆಯನ್ನು ಮೆರೆಯುತ್ತದೆ. ಪರಂಪರೆಯ ಮೊತ್ತವು ಸಂಸ್ಕೃತಿ ಸಮೂಹದ ದೃಷ್ಟಿ-ಸೃಷ್ಟಿಗಳನ್ನು ಅವಲಂಬಿಸಿರುತ್ತದೆ.

ಸಮುದಾಯವು, ಹೊರಗಿನ ಅನ್ವೇಷಕ ಅದನ್ನು ಪರಂಪರೆ ಎಂದು ಗುರುತಿಸದಿದ್ದರೂ ಯಾವುದನ್ನಾದರೂ ಪರಂಪರೆ ಎಂದು ಸ್ಥಾಪಿಸುವ ಅಧಿಕಾರ ಹೊಂದಿರುತ್ತದೆ. ಸಂಸ್ಕೃತಿಯ ಒಳಗಿನಿಂದ ನೋಡಿದಾಗ ಅದು ಒಂದು ರೀತಿಯ ಪರಂಪರೆಯ ಜಾಗೃತಿಯಾಗಿರುವುದರಿಂದ ಸಮುದಾಯದ ಕ್ರಮವನ್ನು ಬೆಂಬಲಿಸಲೇ ಬೇಕಾಗುತ್ತದೆ. ಅದರ ಆಧಾರದ ಮೇಲೆ ವಿಜ್ಞಾನ ಅದನ್ನು ಅಭ್ಯಸಿಸಲು ಹೆಣಗಾಟ ನಡೆಸುತ್ತದೆ. ಅಂತೆಯೇ ಜಾನಪದದ ದಾಖಲೀಕರಣ ಮತ್ತು ವಿಶ್ಲೇಷಣೆಯಲ್ಲಿ ತೊಡಗಲು ಸಂಶೋಧಕ ತನ್ನದೇ ಆದ ನಿರ್ವಚನಗಳನ್ನು ಅನ್ವಯಿಸುವ ಹಕ್ಕನ್ನು ಸ್ಥಾಪಿಸುತ್ತಾನೆ. ಆದರೆ ಸಮುದಾಯವು, ಎಷ್ಟೋವೇಳೆ, ಅವನ್ನು ಮನ್ನಿಸುವುದಿಲ್ಲ. ಸಾಂಸ್ಕೃತಿಕವಾಗಿ ಜಾಗೃತವಾಗಿರುವ ಮತೀಯ ಸಮುದಾಯಗಳಲ್ಲಿ ಇಂಥ ಸಂಘರ್ಷ ಸನ್ನಿವೇಶಗಳು ಉದ್ಭವಿಸುವುದು ಸರ್ವೇ ಸಾಮಾನ್ಯ. ಅಂಥ ಸಂದರ್ಭಗಳಲ್ಲಿ ಕಾಯ್ದು ನೋಡುವ ಪ್ರವೃತ್ತಿ ಅಪೇಕ್ಷಣೀಯ. ಸಂಶೋಧನೆ, ಯಾವತ್ತೂ ಸಮುದಾಯವು ತಪ್ಪು ದಾರಿ ತುಳಿಯುವುದನ್ನು ಸಹಿಸುವುದಿಲ್ಲ. ಉದಾಹರಣೆಗೆ ಸಮುದಾಯವು ಅಲಕ್ಷಿಸಬೇಕೆಂದುಕೊಂಡದ್ದನ್ನು ಸಂಶೋಧಕ ಪ್ರಚುರಗೊಳಿಸಿದರೆ, ಅದರ ಕರಾರುಗಳನ್ನು ಮೀರಿದರೆ ವಿವಾದಕ್ಕೆ ಆಸ್ಪದವಾಗುತ್ತದೆ. ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳದಿದ್ದರೆ ಸಮುದಾಯವು ತಾನು ನೀಡಿದ ಸಂಶೋಧನಾ ಅನುಮತಿಯನ್ನು ಹಿಂತೆಗೆದುಕೊಳ್ಳಬಹುದು.

ಜಾನಪದ ಕುರಿತ ಯುನೆಸ್ಕೊ ನಿರ್ವಚನ ಜಾನಪದ ಅವತರಿಸುವ ಕ್ಷೇತ್ರಗಳ ಪಟ್ಟಿಯೊಡನೆ ಮುಗಿಯುತ್ತದೆ. ಪಟ್ಟಿರ ಈತಿಯ ನಿರ್ವಚನಕ್ಕೆ ಪರಿಮಿತಿಗಳಿದ್ದರೂ ಜಾನಪದ ಬಗೆಗಳ ಒಂದು ವಿಸ್ತೃತ ಪಟ್ಟಿ ಅದರಿಂದ ಲಭಿಸುವುದರಿಂದ ಸ್ವಾಗತಾರ್ಹ ಎನಿಸಿದೆ. ಹಾಂಕೊ ದೃಷ್ಟಿಯಲ್ಲಿ ಈ ನಿರ್ವಚನ ಎರಡು ಮಹತ್ವದ ಸಂದೇಶಗಳನ್ನು ಒಳಗೊಂಡಿದೆ: ೧. ಜಾನಪದವು ಜನಪ್ರಿಯ ಕಲಾ ಸಂಸ್ಕೃತಿಯಾಗಿದೆ. ಮತ್ತು ೨. ಜಾನಪದವು ಭೌತಿಕ ಸಂಸ್ಕೃತಿಯನ್ನು ಕೂಡ ಒಳಗೊಳ್ಳುತ್ತದೆ. ಅಮೆರಿಕೆಯಲ್ಲಿ ಪ್ರಚಲಿತವಿರುವ ಜಾನಪದ ಪ್ರಕಾರಗಳನ್ನು ಗಮನದಲ್ಲಿರಿಸಿಕೊಂಡು ಈ ನಿರ್ವಚನವನ್ನು ರೂಪಿಸಿದ್ದರೂ ಜಾನಪದ ಅಧ್ಯಯನಕಾರರು ತಮ್ಮ ಜಾನಪದೀಯ ಧೋರಣೆಯನ್ನು ಕೈಬಿಡದೆ ಕ್ರಮೇಣವಾಗಿ ಭೌತಿಕ ಸಂಸ್ಕೃತಿಯ ಅಧ್ಯಯನವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಆಶಾದಾಯಕ ಸೂಚನೆ.