ಜಾನಪದ ಪ್ರದರ್ಶನ ಕಲೆಗಳ ಹರವು ವಿಸ್ತಾರವಾದದು. ಗೀತ, ವಾದ್ಯ, ನೃತ್ಯ, ಚಿತ್ರ, ಮುಂತಾದ ಮಾಧ್ಯಮಗಳ ಮೂಲಕ ಸಂವಹನಗೊಂಡು ಜನಸಮುದಾಯದ ಮಧ್ಯೆ ಜೀವಂತವಾಗಿರುವ ಪ್ರದರ್ಶನ ಕಲೆಗಳನ್ನು ಧಾರ್ಮಿಕ, ಲೌಕಿಕ ಅಥವಾ ಪ್ರಾದೇಶಿಕ ಹಿನ್ನೆಲೆಯಲ್ಲಿ ವರ್ಗೀಕರಿಸುವ ಪ್ರಯತ್ನ ಇನ್ನೂ ಅಪೂರ್ಣವಾಗಿದೆ. ಶಾಬ್ದಿಕ ಮತ್ತು ಅಶಾಬ್ದಿಕ ಮಾಧ್ಯಮಗಳ ಮೂಲಕ ಅಭಿವ್ಯಕ್ತಗೊಳ್ಳುತ್ತ ಬಂದಿರುವ ಜಾನಪದ ಕಲೆಗಳ ವೈವಿಧ್ಯತೆ ಯಾವ ಸೂತ್ರಕ್ಕೂ ನಿಲುಕದ ಸಂಕೀರ್ಣ ವ್ಯವಸ್ಥೆಯನ್ನು ಹೊಂದಿದೆ. ಪ್ರದರ್ಶನಕಲೆ ಜನಪದ ಕಲೆಗಳ ಜೀವ ಧಾತು. ಜನಪದರ ಮನಸ್ಸಿನ ಭಾವನೆಗಳಿಂದ  ಮೂಡಿ, ಜನಪದ ವೃಂದದ ಮನಸ್ಸಿನ ಭಾವನೆಗಳನ್ನು ಸ್ಪಂದಿಸಿ. ಉದ್ದೀಪನಗೊಳಿಸಿ ಚೈತನ್ಯಪೂರ್ಣವನ್ನಾಗಿ ಮಾಡುವ ಜನಪದ ಕಲೆ ಅತ್ಯಂತ ಪುರಾತನವಾದದು. ಆದ್ದರಿಂದಲೇ ಹಿಂದೆ ಜನಪದರ ಜೀವನ ಮತ್ತು ಕಲೆಗಳ ಸಂಬಂಧ ಬೇರ್ಪಡಿಸಲಾಗದ ಸಾವಯವ ಸಂಬಂಧವಾಗಿತ್ತು. ಆದರೆ ಇಂದಿನ ಯಾಂತ್ರಿಕ ಬದುಕಿನಲ್ಲಿ ಜಾನಪದ ಕಲೆ ಹಾಗೂ ಮಾನವನ ಸಂಬಂಧ ಸಡಿಲಗೊಳ್ಳುತ್ತ ನಡೆದಿದೆ.

ಶ್ರವ್ಯ-ದೃಶ್ಯ ಮಾಧ್ಯಮಗಳ ಮೂಲಕ ಅಭಿವ್ಯಕ್ತಿಗೊಳ್ಳುತ್ತ ಬಂದಿರುವ ಜಾನಪದ ಪ್ರದರ್ಶನಾತ್ಮಕ ಕಲೆಗಳಲ್ಲಿ ಗೀತಪ್ರಧಾನ ಕಲೆಗಳಾದರೆ, ಕೆಲವು ವಾದ್ಯ ಪ್ರಧಾನ ಕಲೆಗಳಾಗಿವೆ. ಗೀಗೀ, ಲಾವಣಿ, ಕರಪಾಲ, ಗೊಂದಲಿಗರು, ಭಜನೆ ಮೇಳಗಳಲ್ಲಿ ವಿವಿಧ ದಾಟಿಯ ಹಾಡುಗಳು ಮುಖ್ಯವಾದರೆ ಚೌಡಿಕ, ಕಂಸಾಳೆ, ಕಿನ್ನರಿಜೋಗಿ, ಡೊಳ್ಳಿನ ಮೇಳಗಳಲ್ಲಿ ವಾದ್ಯ ಪ್ರಕಾರಗಳು ಮುಖ್ಯವಾಗಿವೆ. ಡೊಂಬರ ಕುಣಿತ. ಸುಗ್ಗಿಕುಣಿದಲ್ಲಿ ನೃತ್ಯ ಪ್ರಧಾನವಾಗಿದೆ. ಇವಲ್ಲದೆ ಆರಾಧನೆಗೆ ಸಂಬಂಧಿಸಿದ ಪುರವಂತರ ಕುಣಿತ. ಗೊರವರ ಕುಣಿತ, ಭೂತದ ಕುಣಿತ ಮುಂತಾದವು ಹಾಗೂ ಕರಡೀ ಕುಣಿತ, ಮಂಗನಾಟ. ಕೋತಿ ಬಸವ ಮುಂತಾದ ಪ್ರಾಣಿಗಳ ಕುಣಿತದ ಅನೇಕ ಬಗೆಗೆಳಿವೆ. ಮನೆರಂಜನೆಯನ್ನು ಪ್ರಧಾನವನ್ನಾಗಿರಿಸಿಕೊಂಡ ಹುಲಿವೇಷ, ಕರಡಿ ವೇಷ, ಮರಗಾಲು ಕುಣಿತ, ಕುದುರೆ ಕುಣಿತ ಮುಂತಾದ ಕುಣಿತಗಳೂ ಜಾನಪದ ಪ್ರದರ್ಶನಾತ್ಮಕ ಕಲೆಗಳಲ್ಲಿಯೇ ಬರುತ್ತವೆ.

ದೃಶ್ಯ ಮಾಧ್ಯಮದ ಮೂಲಕ ಅಭಿವ್ಯಕ್ತಗೊಳ್ಳುತ್ತ ಬಂದಿರುವ ಪ್ರದರ್ಶನಾತ್ಮಕ ಚಿತ್ರಕಲೆ ಪುರಾತನವಾದುದು. ಪ್ರಪಂಚದ ಬೇರೆ ಬೇರೆ ಕಡೆ ದೊರೆಯುವ ಅನೇಕ ಗುಹಾಲಯ ಚಿತ್ರಗಳಲ್ಲಿ ಪ್ರಾದಿಯ ಮಾನವ ಸಂಸ್ಖೃತಿಯ ಅನೇಕ ಅಂಶಗಳು ವ್ಯಕ್ತವಾಗಿವೆ. ತೀರ ಸರಳವಾಗಿ ವ್ಯಕ್ತವಾಗಿರುವ ಈ ಚಿತ್ರಗಳಲ್ಲಿ ಮನಸ್ಸನ್ನು ಆಕರ್ಷಿಸುವ ಶಕ್ತಿ ಅಪಾರವಾಗಿದೆ. ಪ್ರಾಣಿಚಿತ್ರಗಳು, ಬೇಟೆಯ ಚಿತ್ರಗಳು, ಕುಲಾಭಿವೃದ್ಧಿಯ ಸಂಕೇತ ಚಿತ್ರಗಳು ಎಷ್ಟೋ ಸಾವಿರ ವರ್ಷಗಳ ಇತಿಹಾಸದ ಅವಶೇಷಗಳಾಗಿವೆ. ಮುಂದೆ ಚಿತ್ರಗಳು ಬಣ್ಣ ಹಾಗೂ ಶಿಲ್ಪ ಮಾಧ್ಯಮದ ಮೂಲಕ ಧಾರ್ಮಿಕ ಸಂದೇಶವನ್ನು ಸಾರುವ ಪ್ರಭಾವಶಾಲಿ ಮಾಧ್ಯಮಗಳಾಗಿ ದೇವಾಲಯಗಳಲ್ಲಿ ಬಳಕೆಯಾದವು. ಪ್ರಪಂಚದಾದ್ಯಂತ ದೊರೆಯುವ ಶಿಲ್ಪಗಳಲ್ಲಿ ಧರ್ಮ ತತ್ವಗಳ ಅಭಿವ್ಯಕ್ತಿಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಸ್ಥಬ್ಧ ಚಿತ್ರಗಳಾಗಿ ಎಷ್ಟೋ ಸಾವಿರ ವರ್ಷಗಳಿಂದ ಬಂದಿರುವ ಶಿಲ್ಪಗಳಲ್ಲಿ ಪ್ರದರ್ಶಿತಗೊಂಡಿರುವ ಸಂದೇಶಗಳ ಸಂವಹನ ಶಕ್ತಿ ಪ್ರಬಲವಾದುದು. ಚಿತ್ರಕಲೆಯ ಮಾದರಿಗಳಾದ ’ಪಟಸುರಳಿ’ ಗಳನ್ನು ಜನಪದ ಸಮುದಾಯ ಧರ್ಮ ಮತ್ತು ನೀತಿ ಪ್ರಸಾರಕ್ಕೆ ಬಳಸಿಕೊಳ್ಳುತ್ತಾ ಬಂದಿದೆ. ಕರ್ನಾಟಕದಲ್ಲಿ ಈಗ ಕಾಣಬಾರದ ಈ ದೃಶ್ಯಕಲೆ ರಾಜಸ್ಥಾನ, ಗುಜರಾತ, ಓರಿಸ್ಸಾ, ಬಿಹಾರ, ಆಂಧ್ರ, ಬಂಗಾಳ, ಮಹಾರಾಷ್ಟ್ರಗಳಲ್ಲಿ ಕಂಡು ಬರುತ್ತಿದೆ. ದೊಡ್ಡ ದೊಡ್ಡ ಚಿತ್ರಪಟಗಳ ಸುರಳಿಗಳನ್ನು ಪ್ರದರ್ಶಿಸುತ್ತಾ. ರಾಮಾಯಣ, ಮಹಾಭಾರತ ಮತ್ತು ಇತರ ಪುರಾಣ ಕಥೆಗಳನ್ನು ಪ್ರದರ್ಶಿಸುವ ಈ ಕಲೆ ಪುರಾತನವಾದುದು ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಚಿತ್ರಸುರುಳಿಗಳನ್ನು ಬಳಸಿಕೊಂಡು ಕತೆ ಹೇಳುವ ಪರಂಪರೆ ಬೆಳೆದು ಕೊಂಡು ಬಂದಿತು. ಕತೆ, ಹಾಡು ಮತ್ತು ವಾದ್ಯಗಳನ್ನು ಬಳಸಿಕೊಂಡು ಪ್ರಭಾವಶಾಲಿಯಾಗಿ ಚಿತ್ರಪಟ ಪ್ರದರ್ಶನ ಮಾಡುವ ಕಲಾವಿದರು ಇಂದಿಗೂ ಬಿಹಾರ, ರಾಜಸ್ತಾನ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ದೊರೆಯುತ್ತಾರೆ. ಗ್ರಾಮ್ಯ ಭಾಷೆ, ನಾಟಕೀಯ ಶೈಲಿಯ ಸಂಭಾಷಣೆ, ಹಾಡುಗಾರಿಕೆ, ನಿರೂಪಣೆ ಹಾಗೂ ವಾದ್ಯಗಳ ನಾದದೊಂದಿಗೆ ಜೀವವಿಲ್ಲದ ಸ್ತಬ್ಧಚಿತ್ರಗಳೂ ಸಮಕಾಲೀನ ಘಟನೆಗಳ ವಿವರಗಳೊಂದಿಗೆ ಚೈತನ್ಯಪಡೆದು ಜೀವಂತವಾಗುತ್ತವೆ. ಹೀಗೆ ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳ ಮೂಲಕ ಸಂವಹನಗೊಳ್ಳುತ್ತ ಬಂದ ಚಿತ್ರಪಟಗಳ ಮುಂದಿನ ಹೆಜ್ಜೆ ಎಂದರೆ ಪ್ರದರ್ಶನಕ್ಕಾಗಿ ಗೊಂಬೆಗಳನ್ನು ಬಿಡಿಬಿಡಿಯಾಗಿ ಬಳಸಿಕೊಳ್ಳಲು ಪ್ರಾರಂಭಿಸಿದ್ದು.

ಪಟಚಿತ್ರಗಳಲ್ಲಿ ಬಳಕೆಯಾಗುತ್ತಿದ್ದ ಸ್ಥಬ್ಧಚಿತ್ರಗಳ ಅಭಿವ್ಯಕ್ತಿ ಸಾಧ್ಯತೆ ಯೊಡನೆ ತೊಗಲು ಗೊಂಬೆಗಳ ಅಭಿವ್ಯಕ್ತಿ ಸಾಧ್ಯತೆಯನ್ನು ಹೋಲಿಸಿ ನೋಡಿದರೆ, ಪಟಚಿತ್ರಗಳಿಗಿಂತ ಹೆಚ್ಚು ಪ್ರಭಾವಶಾಲಿ ಸಂವಹನ ಸಾಧ್ಯತೆಯನ್ನು ಹೊಂದಿರುವ ತೊಗಲುಗೊಂಬೆಗಳು ಜನಪದ ಸಮುದಾಯ ರೂಪಿಸಿಕೊಂಡ ವಿಶಿಷ್ಟ ಪೂರ್ಣ ರಚನೆಗಳಾಗಿವೆ. ನೆರಳು ಬೆಳಕಿನ ಸಂಯೋಜನೆಯನ್ನು ಉಪಯೋಗಿಸಿಕೊಂಡು ತೊಗಲು ಗೊಂಬೆಯಾಟದಂತಹ ಜನಪದ ಪ್ರದರ್ಶನ ಕಲೆಯನ್ನು ನಿರ್ಮಿಸಿಕೊಂಡ ಜನಪದ ಸಮುದಾಯ ತನಗೆ ಬೇಕಾದ ಧರ್ಮ ನೀತಿಯ ವಿಚಾರದ ಸಂವಹನದಲ್ಲಿ ಹೊಸ ಅನ್ವೇಷಣಿಗೆ ತೊಡಗಿದ್ದು ಮಹತ್ವದ ವಿಚಾರ. ಇಂದಿನ ನೆರಳು-ಬೆಳಕಿನ ಚಲನಚಿತ್ರ ಮಾಧ್ಯಮಕ್ಕೆ ಎಷ್ಟೋ ಸಾವಿರ ವರ್ಷಗಳ ಪೂರ್ವದಲ್ಲಿ ಜನಪದ ವೃಂದದಿಂದ ಇಂತಹ ಒಂದು ಪ್ರದರ್ಶನ ಕಲೆಯನ್ನು ರೂಪಿಸುವುದು ಸಾಧ್ಯವಾಯಿತು ಎಂಬುದು ಖುಚಿತರುವ ವಿಚಾರ.

ಗೊಂಬೆಗಳು ಸಾಮಾಜಿಕ ಮತ್ತು ಧಾರ್ಮಿಕ ಪರಂಪರೆಯನ್ನು ಬಿಂಬಿಸುವ ಪ್ರಭಾವಕಾರಿ ಸಾಧನಗಳಾಗುವುದರ ಜೊತೆಗೆ ಜನರನ್ನು ಆಕರ್ಷಿಸುವ ಗುಣವನ್ನು ಪಡೆದಿವೆ. ಇಂತಹ ಗೊಂಬೆಗಳನ್ನು ನಿರ್ಮಿಸುವಲ್ಲಿ ಪೂರ್ವಜರು ತೋರಿದ ಜಾಣ್ಮೆ ಮೆಚ್ಚುವಂತಹುದು. ಬರೇ ಚಿತ್ರಗಳಿಂದ ತೃಪ್ತಿಕಾಣದ ಜನ ಆ ಚಿತ್ರಗಳಿಗೆ ಗಾತ್ರ. ಆಕಾರ, ಬಣ್ಣಗಳನ್ನು ನೀಡಿ ಅದರಿಂದ ಗೊಂಬೆಗಳನ್ನು ನಿರ್ಮಿಸಿದರು. ಹಾಗಾಗಿ ಚಿತ್ರಗಳಿಗಿಂತ ಗೊಂಬೆಗಳಿಗಿರುವ ಪ್ರದರ್ಶನಾತ್ಮಕ ಮತ್ತು ಆಕರ್ಷನಾತ್ಮಕ ಗುಣ ಹೆಚ್ಚು ವಿಶಿಷ್ಟ ವಾದದು.

ಪ್ರಾಣಿಗಳ ಚರ್ಮವನ್ನು ಹದಮಾಡಿ ಪಾರದರ್ಶಕಗೊಳಿಸಿ, ಅದರ ಮೇಲೆ ಮೊನುಚಾದ ಕಬ್ಬಿಣದ ಮೊಳೆಗಳಿಂದ ಚಿತ್ರದ ಗೆರೆಗಳನ್ನು ಬಿಡಿಸಿ, ಸೂಕ್ಷ್ಮವಾದ ಕುಸುರಿಕೆಲಸದ ಮೂಲಕ ಕಿರೀಟ, ರಥದ ಚಕ್ರ, ಸೀರೆ ಕುಬಸದ ಅಂಚು ಮುಂತಾದ ಆಕಾರಕೊಟ್ಟು ಅವಕ್ಕೆಲ್ಲ ಬಣ್ಣತುಂಬಿ ಬಿಳಿಯ ತೆರೆ ಹಾಗೂ ಬೆಳಕಿನ ಮಧ್ಯೆ ಗೊಂಬೆಗಳನ್ನು ಹಿಡಿದಾಗ ತೆರೆಯ ಮುಂದೆ ಕುಳಿತ ಪ್ರೇಕ್ಷಕರಿಗೆ ಆ ಗೊಂಬೆಗಳ ವರ್ಣಮಯ ಛಾಯೆ ಮೂಡಿ ಎಂಥವರನ್ನೂ ಆಕರ್ಷಿಸುತ್ತದೆ. ಆದ್ದರಿಂದಲೇ ಗೊಂಬೆಯಾಟ ಎಂಬುದು ಸಂವಹನ ಮತ್ತು ಮನೋರಂಜನೆಯ ಪ್ರಭಾವಶಾಲಿ ಮಾಧ್ಯಮವಾಗಿದೆ. ಆಂಧ್ರಪ್ರದೇಶದಲ್ಲಿ ಪ್ರಚಲಿತವಿರುವ ತೋಲು ಬೊಮ್ಮಲಾಟ, ಕೇರಳದ ಕೈಗೊಂಬೆಯಾಟ, ಕರ್ನಾಟಕದ ತೊಗಲು ಗೊಂಬೆಯಾಟಕ್ಕಿಂತ ಭಿನ್ನವಾದ ಕಲೆಗಳಾಗಿವೆ. ಆಂಧ್ರದ ಗೊಂಬೆಗಳ ಗಾತ್ರ ದೊಡ್ಡದಿದ್ದು ಅವು ಮನುಷ್ಯರ ಗಾತ್ರದ ನೈಜತೆಯನ್ನು ಬಿಂಬಿಸುತ್ತದೆ. ಕೇರಳದ ಕೈಗೊಂಬೆಯಾಟದಲ್ಲಿ (hand puppet) ಒಬ್ಬನೇ ತನ್ನ ಕೈ ಚಳಕದ ಚಾಕಚಕ್ಯತೆಯ ಮೂಲಕ ಗೊಂಬೆಗಳನ್ನುಕುಣಿಸಿ, ಸಂದರ್ಭಕ್ಕೆ ತಕ್ಕ ಧ್ವನಿಗಳನ್ನು ನೀಡಿ  ಪ್ರದರ್ಶನವನ್ನು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುತ್ತಾನೆ. ಪ್ರಾನ್ಸ್, ಜರ್ಮನಿ, ಝೆಕೆಸ್ಲೋವಾಕಿಯಾ, ಹಂಗೇರಿ, ಚೈನಾ, ರಶ್ಯಾದಲ್ಲಿ ಪ್ರಚಲಿತವಿರುವ ಕೈಗೊಂಬೆಯಾಟದ ಪ್ರದರ್ಶಕ ಸಾಮರ್ಥ್ಯದ ಬಗ್ಗೆ ಹಾಗೂ ಆ ಗೊಂಬೆಗಳನ್ನು ಆಡಿಸುವವನ ಸಾಮರ್ಥ್ಯದ ಬಗ್ಗೆ ಶ್ಯಾಮ್‌ಪಾರ್ಮರ್ ಅವರು ಬರೆಯುತ್ತಾ, ‘The living hand brings a vitality and strength to the puppet’s head and arms, the living gives flexibility and power to the puppet’s body’

[1] ಎಂದಿದ್ದಾರೆ.

ಭಾರತದ ಜಾನಪದ ರಂಗಭೂಮಿ ದೃಷ್ಟಿಯಿಂದ ನೋಡಿದಾಗ ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟ ಮತ್ತು ಬಯಲಾಟಗಳಲ್ಲಿ ಕಂಡು ಬರುವ ಪ್ರದರ್ಶಕ ಗುಣವನ್ನು ಹೋಲಿಸಿ ನೋಡುವುದು ಹೆಚ್ಚು ಸೂಕ್ತವಾಗುತ್ತದೆ. ನಾಟಕಗಳಲ್ಲಿ ಪ್ರೇಕ್ಷಕ ನಿರ್ದಿಷ್ಟ ದೂರದಿಂದ ಪಾತ್ರಗಳನ್ನು ನೋಡುತ್ತಾನೆ. ಆದರೆ ಚಲನಚಿತ್ರಮಾಧ್ಯಮದ ಮೂಲಕ (ನೆರಳು ಬೆಳಕಿನ ಛಾಯೆಯ ಮೂಲಕ) ಬೇರೆ ಬೇರೆ ಕೋನಗಳಿಂದ ಅದೇ ಪ್ರಾತಗಳನ್ನು ನೊಡುವಾಗ ಉಂಟಾಗುವ ಪರಿಣಾಮ ಭಿನ್ನವಾಗಿರುತ್ತದೆ. ಆದರೆ ನೆರಳು ಬೆಳಕಿನ ಮೂಲಕ ಪಾತ್ರಗಳಿಂದ ಹೊಮ್ಮುವ ಪ್ರದರ್ಶನ ಜೀವಂತ ಪಾತ್ರಗಳಿಂದ ಹೊಮ್ಮುವ ಪ್ರದರ್ಶನ ಶಕ್ತಿಗಿಂತ ಭಿನ್ನವಾಗಿರುತ್ತದೆ. ತೊಗಲು ಗೊಂಬೆಗಳನ್ನು ತಾಂತ್ರಿಕ, ಸೂಕ್ಷ್ಮತೆಯಿಂದ ಪ್ರದರ್ಶಿಸುವ ಸಾಧ್ಯತೆ ಇದೆ. ಗೊಂಬೆಗಳನ್ನು ಬೆಳಕಿನಿಂದ ನಿರ್ದಿಷ್ಟ ದೂರ ಹಿಂದೆ ಮುಂದೆ ಚಲಿಸುವಂತೆ ಮಾಡಿದಾಗ ಗೊಂಬೆ ಸ್ಪಷ್ಟ ಮತ್ತು ಅಸ್ಪಷ್ಟವಾಗಿ ತನ್ನದೇ ರೀತಿಯ ಪರಿಣಾಮ ಬೀರುತ್ತದೆ. ಅದೇ ರೀತಿ ಗೊಂಬೆಗಳನ್ನು ಒಂದು ಪಕ್ಕಕ್ಕೆ ಹೊರಳಿಸಿ ಹಿಡಿದಾಗ ತೆಳ್ಳನೆಯ ಕಪ್ಪುಗೆರೆ ಕಾಣದೆ ಮೂಗು, ಕಣ್ಣು, ನಡು ಇತ್ಯಾದಿಗಳಲ್ಲಿ ಕಲಾತ್ಮಕ ಮೆರುಗು ಮೂಡುತ್ತದೆ. ಲಂಕಾದಹನದಲ್ಲಿ ಹನುಮಂತ ಸಮುದ್ರ ಜಿಗಿಯುವ ಪ್ರಸಂಗ ಮತ್ತು ಯುದ್ಧದ ಪ್ರಸಂಗಗಳನ್ನು ಪರಿಣಾಮಕಾರಿಯಾಗಿ ತೋರಿಸಬಹುದಾಗಿದೆ.

ಸೂತ್ರದ ಗೊಂಬೆಯಾಟದಲ್ಲಿ ಮತ್ತು ಬಯಲಾಟದಲ್ಲಿ ಗೊಂಬೆಗಳು ಮತ್ತು ಪಾತ್ರಧಾರಿಗಳು ಪ್ರೇಕ್ಷಕರ ಮುಂದೆ ನಿಂತು ನೇರವಾಗಿ ಅಭಿನಯಿಸಬೇಕಾಗುತ್ತದೆ. ಸೂತ್ರದಾರ ಗೊಂಬೆಗಳನ್ನು ತನ್ನ ಕೈಚಳಕದಿಂದ ಆಡಿಸಬಹುದಾದರೂ, ಗೊಂಬೆಗಳು ಪ್ರೇಕ್ಷಕರ ಎದುರಿಗೆ ಇರುವುದರಿಂದ ಕೆಲವು ದೋಷಗಳಿಂದ ಪರಿಣಾಮ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚು. ಆದರೆ ತೊಗಲುಗೊಂಬೆಯಾಟದ ಕ್ರಿಯೆ ಪೂರ್ಣ ಹಿಂದೆ ನಡೆಯುವುದರಿಂದ ಹೆಚ್ಚು ಪರಿಣಾಮವನ್ನು ಬೀರುವಂತೆ ಮಾಡಲು ಸಾಧ್ಯತೆ ಇದೆ. ಭೂಮಿ-ಸ್ವರ್ಗ, ಭೂಮಿ-ಪಾತಾಳ ಮುಂತಾದ ಎರಡೆರಡು ಲೋಕಗಳಲ್ಲಿ ನಡೆಯುವ ಬೇರೆ ಬೇರೆ ಕ್ರಿಯೆಗಳನ್ನು ಪ್ರತ್ಯೇಕವಾಗಿ ಅಡಿ ತೋರಿಸುವಾಗ ಎರಡೆರಡು ಅಂತಸ್ತಿನ ಕಟ್ಟಲು ಕಟ್ಟಿ ಎರಡೆರಡು ತೆರೆಗಳನ್ನು ಬಳಸಿಕೊಂಡು ಎರಡು ತಂಡಗಳಲ್ಲಿ ತೊಗಲು ಗೊಂಬೆಯಾಡಿಸುವುದನ್ನು ಗೊಂಬೆಯಾಟದ ಕಲಾವಿದರು ನಿರ್ಮಿಸಿಕೊಂಡಿದ್ದನ್ನು ನೋಡಿದರೆ ತೊಗಲು ಗೊಂಬೆಯಾಟ ಕೂಡ ಪ್ರಯೋಗಶೀಲವಾಗಿದೆ ಎನಿಸಿದರೂ ಇದು ಹೆಚ್ಚು ಸಾಧಿಸಲಾಗದೆ ಸೋತದ್ದನ್ನು ಮರೆಯಲಾಗದು.

ಕರ್ನಾಟಕದಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು ೩೦೦ ತೊಗಲು ಗೊಂಬೆಯಾಟದ ಮೇಳಗಳು, ಸುಮಾರು ೨೫ ಸೂತ್ರದ ಗೊಂಬೆಯಾಟದ ಮೇಳಗಳಿವೆ.[2] ಆದರೆ ಸೂತ್ರದ ಗೊಂಬೆಯಾಟವನ್ನು ಆಧುನಿಕ ನಾಟಕಗಳ ಪ್ರಯೋಗಕ್ಕೆ ಬಳಿಸಿಕೊಂಡ ಉದಾಹರಣೆಗಳೇ ಹೆಚ್ಚು. ಬೆಂಗಳೂರಿನ ಪಪೆಟ್‌ಲ್ಯಾಂಡ್ ಮತ್ತು ರಂಗ ಪುತ್ಥಳಿಯವರು ಸೂತ್ರದ ಗೊಂಬೆಗಳನ್ನು ಕನಸು. ಟಿಂಗರಬುಡ್ಡಣ್ಣನಂತಹ ಆಧುನಿಕ ನಾಟಕಗಳಿಗೆ ಬಳಸಿಕೊಂಡ, ಕಲಕತ್ತಾದ ಪುತ್ತಲಿಕಾದವರು ಆಲಿಬಾಬ ಮತ್ತು ನೂರುಮಂದಿ ಕಳ್ಳರು ಎನ್ನುವ ನಾಟಕಕ್ಕೆ ಬಳಸಿಕೊಂಡು ಉದಾಹರಣೆಗಳು ದೊರೆಯುತ್ತವೆ. ಆದರೆ ಜಾನಪದ ರಂಗಭೂಮಿಯಲ್ಲಿರುವ ಸಂವಹನ ಶಕ್ತಿಯ ಸಾಧ್ಯತೆಗಳನ್ನು ಪೂರ್ಣಪ್ರಮಾಣದಲ್ಲಿ ಬಳಿಸಕೊಳ್ಳಲಾಗಿಲ್ಲ. ಹೊಸ ಪರಿಸರಕ್ಕೆ ಸ್ಪಂದಿಸಬಲ್ಲ ಸೂತ್ರದ ಗೊಮಬೆ ಯಾಟವನ್ನಾಗಲಿ ಅಥವಾ ಇತರ ಜಾನಪದ ರಂಗಭೂಮಿಯಲ್ಲಿ ಕಲಾ ಪ್ರಕಾರಗಳ ಉಪಯುಕ್ತತೆಯ ಬಗ್ಗೆ ಶ್ಯಾಮ್ ಪಾರ್ಮರ್ “What make a folk theater effective is the quality of its adaptability to different situations and the ad-lib comedies with satirical contents on-the-spot improvisation in dialogue-sequences makes the rural drama more appealing”[3] ಎನ್ನುತ್ತಾರೆ.

ಬಯಲಾಟದ ಕಥಾವಸ್ತುವನ್ನು ಸಂಕ್ಷೇಪಿಸಿ ಹೆಚ್ಚು ಪ್ರಭಾವಕಾರಿಯಾಗಿ ಸೂತ್ರದ ಬೊಂಬೆಯಾಟ ಮತ್ತು ತೊಗಲುಗೊಂಬೆಯಾಟದಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡಿದರೂ ಈ ಕಲೆ ಕಡಿಮೆಯಾಗಿರುವುದು ಆಶ್ಚರ್ಯ ತರುತ್ತದೆ.

ಹಾಸ್ಯ ಮತ್ತು ಆಶ್ಲೀಲ ಸಂಭಾಷಣೆಗಳು ಉರ್ದು ಮರಾಠಿ ಮಿಶ್ರಿತ ಭಾಷೆಯ ಉಪಯೋಗ ತೊಗಲು ಗೊಂಬೆಯಾಟದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ತೌಲನಿಕವಾಗಿ ನೋಡಿದಾಗ ಹಾಸ್ಯ ಪ್ರವೃತ್ತಿ ಬಯಲಾಟ ಮತ್ತು ತೊಗಲು ಗೊಂಬೆಯಾಟದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಮುಖ್ಯ ಗುಣವಾಗಿದೆ. ಇದಕ್ಕೆ ಕಾರಣ George N. Gorden ಹೇಳುವಂತೆ -‘Humar is potentially integral to all communication. It is a quality which has the power to modify message of many sorts, in every medium and combination of mediums and all instruments of expression known”[4]. ತೊಗಲು ಗೊಂಬೆಯಾಟದ ಕಿಳ್ಳಿಕ್ಯಾತ ಗೊಂಬೆ ತನ್ನ ವಿಲಕ್ಷಣ ರೂಪದಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಇದ್ದಲು ಮಸಿಬಣ್ಣ, ಮೊಂಡ ಮೂರು, ಉಬ್ಬಿದ ತುಟಿ, ಗುಡಾಣಾಕಾರದ ಹೊಟ್ಟೆ, ಸೊಟ್ಟವಾಗಿರುವ ಕೈಕಾಲುಗಳಿಂದ ಅಷ್ಟಾವಕ್ರನಾದ ಕಿಳ್ಳಿಕ್ಯಾತ ಪಾತ್ರದ ಗೊಂಬೆ ತನ್ನ ಪ್ರೇಯಸಿ ಬಜಾರಿ ಬಂಗಾರಕ್ಕನೊಡನೆ ನೆಡೆಸುವ ಸಂಭಾಷಣೆ, ಅಶ್ಲೀಲ ಚೇಷ್ಟೆಗಳಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತಾ ಹೋಗುತ್ತದೆ. ಮುಂಬರುವ ಕಥೆಯ ಸೂಚನೆ ನೀಡುತ್ತಾ ಹೋಗುವ ಈ ಪಾತ್ರಗಳು ಒಟ್ಟು ಆಟಕ್ಕೆ ಮೆರಗನ್ನು ಕೊಡುತ್ತವೆ.

ತೊಗಲುಗೊಂಬೆಯಾಟದಲ್ಲಿ ಕಥೆಯ ನಿರೂಪಕನ ಮೂಲಕ, ಹಿಮ್ಮೇಳದ ವಾದ್ಯ ವೈಶಿಷ್ಟ್ಯಗಳ ಮೂಲಕ ಪ್ರದರ್ಶನ ಆಕರ್ಷಿತವಾಗುತ್ತದೆ. ಹಾಡು, ವಾದ್ಯಗಳ ನುಡಿಸುವಿಕೆ. ಸಂಭಾಷಣೆಗಳು ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಂಡು ಹೆಚ್ಚು ಪರಿಣಾಮ ಬೀರುತ್ತವೆ. ಸೂತ್ರದ ಗೊಂಬೆಯಾಟದಲ್ಲಿಯೂ ಸೂತ್ರ ಹಿಡಿದ ಸೂತ್ರದಾರರ ಮೂಲಕ, ಹಾಡುವಾದ್ಯಗಳ ಸಂಯೋಜನೆಯ ಮೂಲಕ ಹೆಚ್ಚು ಪ್ರಭಾವ ಶಾಲಿಯನ್ನಾಗಿ ಮಾಡುವ ಸಾಧ್ಯತೆ ಇದೆ. ಸೂತ್ರದ ಗೊಂಬೆಗಳನ್ನು ಚಾಕಚಕ್ಯತೆಯಿಂದ ನಿರ್ಮಿಸಿದಾಗ ಅವುಗಳ ಮೂಲಕ ಹೆಚ್ಚು ಕ್ರಿಯೆಯನ್ನು ಮಾಡಿಸಬಹುದೆಂಬುದಕ್ಕೆ ಅನೇಕ ಉದಾಹರಣೆಗಳು ದೊರೆಯುತ್ತವೆ. ಮೂಗಿನ ನತ್ತು ಮತ್ತು ಶೃಂಗಾರದೊಡವೆಗಳನ್ನು ಕಳಚುವ ಸತ್ಯಭಾಮೆಯ ಗೊಂಬೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಸೂತ್ರದ ಮೂಲಕ ಆಡಿಸುತ್ತಿದ್ದ ಬೆಳಗಾವಿಯ ಗೊಂಬಿ ಅನಂತಪ್ಪನಂತವರು ಗೊಂಬೆಗಳಿಗೆ ಹೆಚ್ಚು ಕ್ರಿಯಾಶೀಲತೆಯನ್ನೊದಗಿಸಿ ಆಕರ್ಷಣೆಯನ್ನು ತಂದು ಕೊಟ್ಟಿದ್ದಾರೆ. ಆದರೂ ಈ ಕಲೆ ಹೆಚ್ಚು ಉತ್ಪಾದಕ ಗುಣ ಪಡೆಯದೆ, ಸಮುದಾಯದಿಂದ ನಿರ್ಗಮಿಸತೊಡಗಿದ್ದೇಕೆ ಎಂಬ ಪ್ರಶ್ನೆ ಮೂಡುತ್ತದೆ. ಈ ಹಂತದಲ್ಲಿ ಒಂದು ಕಲೆಯ ಪ್ರದರ್ಶನ ಸಾಧ್ಯತೆಯ ಬಗ್ಗೆ ಚಿಂತಿಸುವುದು ಅಗತ್ಯವಾಗುತ್ತದೆ. ಯಾವುದೇ ಪ್ರದರ್ಶನ ಕಲೆ ಹೆಚ್ಚು ಪರಿಣಾಮಕಾರಿಯಾಗಬೇಕಾದರೆ ಅದಕ್ಕೆ ಹೆಚ್ಚು ಸಾಮರ್ಥ್ಯ ಇರಬೇಕಾಗುತ್ತದೆ. ಒಂದು ಸಮುದಾಯದ ಅಗತ್ಯತೆಯ ಹಿನ್ನೆಲೆಯಲ್ಲಿ ಕಲೆಯ ಪರಿಣಾಮ ಎಷ್ಟರಮಟ್ಟಿಗಿದೆ. ತೊಗಲು ಗೊಂಬೆಯಾಟ ಸಂವಹನಶಕ್ತಿಯ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗಲಿಲ್ಲ. ಸಂವಹನ ವ್ಯವಸ್ಥೆಯ ಶಾಬ್ದಿಕ ಮತ್ತು ಆಶಾಬ್ದಿಕ ಆಯಾದಮ ಹಿನ್ನಲೆಯಲ್ಲಿ ತೊಗಲು ಗೊಂಬೆಯಾಟವನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. ತೊಗಲು ಗೊಂಬೆಯಾಟದ ನಿರೂಪಕ ಕಥೆಯ ವಸ್ತುವನ್ನು ಸಂಕ್ಷೇಪಿಸಿದ ದೃಶ್ಯಪ್ರಧಾನವಾದ ಅಂಶಗಳ ಕಡೆ ಗಮನ ಹರಿಸಿ ಕಥೆಯನ್ನು ಬೆಳೆಸಿ ನಿರೂಪಿಸಿಕೊಂಡ. ಆ ಮೂರ್ತ ವಿಚಾರಗಳಿಗಿಂತ ಮೂರ್ತ ವಿಚಾರಗಳಿಗೆ ಪ್ರಾಧಾನ್ಯತೆ ಕೊಟ್ಟ. ಇದು ಒಂದು ಅರ್ಥದಲ್ಲಿ ಪ್ರಯೋಗಶೀಲತೆ. ಆದರೆ ಗೊಂಬೆಗಳಿಂದ ಆಶಾಬ್ದಿಕ ಸಂವಹನ ಸಾಧ್ಯತೆಯನ್ನು ಉಪಯೋಗಿಸುವಲ್ಲಿ ಹೆಚ್ಚು ಸಮರ್ಥನಾಗಲಿಲ್ಲ. ಮುಖ ಹಾಗೂ ದೇಹದ ಹಾವಭಾವಗಳಿಂದ ಕೂಡಿದ ಅಂಗಿಕ ಭಾಷೆಯನ್ನು ದುಡಿಸಿಕೊಳ್ಳಲಾಗಿಲ್ಲ. ಮುಖದಿಂದ ಹೊಮ್ಮುವ ಸಂವನಶಕ್ತಿಯ ಬಗ್ಗೆ Mark. L. Knapp ಹೇಳುತ್ತಾನೆ. The face is rich in communication potential. It is the Primary site for communication of emotional states; it reflects inter personal attitudes; it provides non verbol feed back on the comments of others, and it is primary source of information next to human speech. ಆದ್ದರಿಂದ ಹಾವಭಾವಗಳನ್ನು ತೋರಿಸಲಾಗದ ಈ ಕಲೆ ನಮ್ಮಲ್ಲಿ ಹಾಗೆಯೇ ಉಳಿಯಿತು. ಆದರೆ Germany, Japan, ದೇಶಗಳಲ್ಲಿ ಅನಿಮೇಶನ್ ಚಿತ್ರವಾಗಿ ಬೆಳವಣಿಗೆ ಪಡೆಯಿತು. ಒಂದುಕಲೆ ಹೆಚ್ಚು ಉತ್ಪಾಕಣ ಗುಣ ಪಡೆದರೆ ಅದು ಉಳಿಯುತ್ತದೆ. ನಾವು ಭಾರತದಲ್ಲಿ ಈ ಕಲೆಯನ್ನುಉಳಿಸಿಕೊಳ್ಳಬೇಕಾದರೆ ಅದರ ಪ್ರದರ್ಶಕ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಜನಪದ ಕಲೆಗಳ ಪ್ರದರ್ಶಕ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನವನ್ನು ಕಲಾವಿದರು ಮಾಡುತ್ತಿರುತ್ತಾರೆ. ಗೀಗಿ ಮೇಳದಲ್ಲಿ ನಿರೂಪಕರು ಕುಣಿಯುತ್ತಾ ಸುತ್ತುವುದಾಗಲಿ, ಬದಿಯಿಂದ ಬದಿಗೆ ನೆಗೆಯುವುದಾಗಲಿ, ಕೊರಳಿನ ಕೊಂಕನ್ನು ವಿವಿಧ ರೀತಿಯಲ್ಲಿ ತೋರಿಸಲು ಪ್ರಾರಂಭಿಸಿದ್ದು ಅದರ ಉತ್ಪಾಕ ಗುಣವನ್ನು ಸೂಚಿಸುತ್ತದೆ. ಒಂದು ವೇಳೆ ಇಂತಹ ಪ್ರದರ್ಶಕಾಂಶಗಳನ್ನು ಕಡಿಮೆ ಮಾಡಿದ್ದಾದರೆ ಅದು ನೀರಸವಾಗಿ ಬಿಡುತ್ತದೆ.

ಜಗತ್ತಿನಾದ್ಯಂತ ಹುಡುಗರಿಂದ ಮುದುಕರವರೆಗೆ ಇರುವ ಗೊಂಬೆಗಳ ಆಕರ್ಷಣೆಯ ಮಧ್ಯೆಯೂ ನಮ್ಮ ತೊಗಲುಗೊಂಬೆಯಾಟ ಮತ್ತು ಸೂತ್ರದ ಬೊಂಬೆಯಾಟಗಳು ಮೂಲೆಗುಂಬಪಾದುದೇಕೆ ಎಂಬ ಪ್ರಶ್ನೆ ಜಾನಪದ ವಿದ್ವಾಂಸರನ್ನು ಕಾಡುತ್ತಿದೆ. ತೊಗಲುಗೊಂಬೆ ಮತ್ತು ಸೂತ್ರದ ಗೊಂಬೆಯಾಟಗಳು ಕ್ರಮವಾಗಿ ವೃತ್ತಿಕಸುಬಾಗಿ ಮತ್ತು ಹವ್ಯಾಸವಾಗಿ ಮಾತ್ರ ಉಳಿದು ಬಂದವೇ ವಿನಃ ಆಧುನಿಕ ಬದುಕಿನ ಅನಿವಾರ್ಯತೆಯಾಗಿ ಉಳಿದು ಬರಲಿಲ್ಲ. ಜೊತೆಗೆ ಅವು ಹೆಚ್ಚು ಉತ್ಪಾದಕ ಗುಣ (Productive quality) ವನ್ನು ಪಡೆಯದೆ ಹೋದವು. ಮೆಕ್ಸಿಕೋ, ರಶ್ಯ, ಅಮೇರಿಕಾ, ಹಂಗೇರಿ ಮುಂತಾದ ದೇಶಗಳಲ್ಲಿ ಅವುಗಳನ್ನು ಹೊಸ ಸಾಮಾಜಿಕ ಬದುಕಿನ ಹಾದಿಯಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಿದಂತೆ ನಾವು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಪ್ರಯತ್ನಿಸಲಿಲ್ಲ. ಹಾಗಾಗಿ ಆ ಕಲೆಗಳು ನಮ್ಮ ದೇಶದಲ್ಲಿ ಹೊಸ ಸಮಾಜದಿಂದ ದೂರ ಉಳಿಯಲು ಪ್ರಯತ್ನಿಸಿದವು. ಆದರೆ ಜಪಾನ್ ದೇಶದಲ್ಲಿ ಗೊಂಬೆ ನೆರಳಿನಾಟದ ಕಲೆಯಿಂದ ಪ್ರಚೋದನೆಗೊಂಡು Silhouette  ಮತ್ತು flat-Animation ಚಿತ್ರಗಳ ಹೊಸ ಮಾದರಿ ಪ್ರಾರಂಭವಾಯಿತು. ಇವುಗಳನ್ನು ವಾಣಿಜ್ಯೋದಮದಲ್ಲಿ ಸಮರ್ಥವಾಗಿ ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ.

ವಾಲ್ಟ್‌ಡಿಸ್ನಿಯ ಕಾರ್ಟೂನ್‌ಚಿತ್ರ ಮಿಕ್ಕಿಮೌಸ್‌ಮತ್ತು ಡೊನಾಲ್ಡ್‌ಡಕ್ ಅರ್ಧ ಶತಮಾನದಿಂದ ಅನೇಕ ದೇಶಗಳ ಬೆಳ್ಳಿತೆರೆಯಲ್ಲಿ ಪ್ರಮುಖಸ್ಥಾನ ಗಿಟ್ಟಿಸಿಕೊಂಡಿವೆ. ಮಿಕ್ಕಿಮೌಸ್‌ನ್ನು ಪ್ರಚಾರ ತಂತ್ರವಾಗಿ ಬೇರೆ ಬೇರೆ ದೇಶಗಳಿಗೆ ಬಳಸಿಕೊಂಡಿದ್ದರಿಂದ ೬೦ಕ್ಕೂ ಹೆಚ್ಚು ಅಮೇರಿಕೆಯ ಕೈಗಾರಿಕಾ ಕಂಪನಿಗಳು ನಷ್ಟದಿಂದ ಪಾರಾದವು. ಇಂದು ಅನಿಮೇಶಿನ ಚಿತ್ರಗಳು ಹೆಚ್ಚು ಜನಪ್ರಿಯವಾಗಿದೆ. ಕಲೆಯ ಪ್ರದರ್ಶಕ ಸಾಮರ್ಥ್ಯವನ್ನು ಅರಿತು ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯ ನಮಗಿರಬೇಕು. ತೊಗಲುಗೊಂಬೆಯಾಟ ಮತ್ತು ಸೂತ್ರದ ಗೊಂಬೆಯಾಟಗಳು ತಮ್ಮದೇ ಆದ ಪ್ರದರ್ಶಿಕ ಗುಣವನ್ನು ಪಡೆದಿರುವಾಗ ಅವುಗಳನ್ನು ಹೇಗೆ ಮತ್ತು ಎಷ್ಟರಮಟ್ಟಿಗೆ ಬಳಸಬೇಕೆಂಬ ಬಗ್ಗೆ ಕಾರ್ಯಕ್ರಮ ರೂಪಿಸುವ ಅವಶ್ಯಕತೆ ಇದೆ. ತೊಗಲುಗೊಂಬೆಯಾಟಕ್ಕೆ ತನ್ನದೇ ಆದ ಮಿತಿ ಇದೆ. ಚಲನ ಚಿತ್ರ, ಟಿ.ವಿ. ಯಂತಹ ಪ್ರಭಾವಕಾರಿ ಸಂವಹನ ಶಕ್ತಿಯ ಮಿತಿಯೊಳಗೆ ಅದನ್ನು ಹೇಗೆ ಬಳಸಬೇಕೆಂಬ ಬಗ್ಗೆ ಚಿಂತನೆಮಾಡುವ ಕಾಲ ಬಂದಿದೆ. ಒಟ್ಟು ಜನಪದ ಕಲೆಗಳ ಪರದರ್ಶನಾತ್ಮಕ ಗುಣ ಹಾಗೂ ಅದನ್ನು ಇಂದಿನ ಸಮುದಾಯಕ್ಕೆ ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆಯೂ ಆಲೋಚಿಸುವುದು ಅವಶ್ಯ. ಒಂದು ಕಲೆಯನ್ನು ತನ್ನ ಮೂಲ ಸ್ಥಿತಿಯಲ್ಲಿಯೇ ಇರಿಸಿ ಅದನ್ನು ಬದುಕಿನ ಅಗತ್ಯತೆಗೆ ಬಳಸುವ ಬದಲು ಜನಪದ ಕಲೆಯನ್ನು ಜನಪದರು ಜಾಣ್ಮೆಯಿಂದ ಹೇಗೆ ವಿಕಾಸಗೊಳಿಸುತ್ತಾ ಹೋದರೋ ಹಾಗೆಯೇ ಇಂದಿನ ಜನ ಜಾಣ್ಮೆಯಿಂದ ಅವುಗಳನ್ನು ವಿಕಾಸಗೊಳಿಸುವ, ಹೆಚ್ಚು ಆಕರ್ಷಣೆಯಿಂದ ಬದುಕಿಗೆ ಸ್ಪಂದಿಸುವ ಕಲೆಗಳನ್ನಾಗಿ ಮಾರ್ಪಡಿಸುವ ಜವಾಬ್ದಾರಿಯನ್ನು ಹೊರಬೇಕು. ಅದು ಸೂಕ್ತ ಮತ್ತು ಸಮಯೋಚಿಸ.[1]  Traditional Folk Media in India (1975) Shyam parmar New-Delhi

[2]  ಮುದೇನೂರು ಸಂಗಣ್ಣ ಉದಯವಾಣಿ ೧೯೮೮ ವಿಶೇಷಾಂಕ

[3]  Traditional Ffolk Media in India (1975), Shyam parmer New-Delhi.

[4]  The Language of Communication (1963) George N. Gorden, Newyark