1. ಜಾನಪದ ಸಾಹಿತ್ಯದ ಮೂಲಕೃತಿ ಪಾರ್ದನಗಳು ಕೃತಿರೂಪದಲ್ಲಿವೆ. ಮೌಖಿಕವಾಗಿರುವುದರಿಂದ ಅವುಗಳ ಸಂರಕ್ಷಣೆ ಹೇಗೆ ಸಾಧ್ಯ?

ಈಗಾಗಲೇ ಈ ಕುರಿತು ಜಾನಪದ ವಿದ್ವಾಂಸರು ಸಾಕಷ್ಟು ಕೆಲಸ ಮಾಡಿದ್ದಾರೆ. ಅಳಿದು ಹೋಗುತ್ತಿರುವ ಅಮೂಲ್ಯ ಮೌಖಿಕ ಸಾಹಿತ್ಯವನ್ನು ಆಧುನಿಕ ತಂತ್ರಜ್ಞಾನ ಮುಖೇನ ’ಸಿ.ಡಿ.’ಗಳಲ್ಲಿ ದಾಖಲಿಸುವುದು ಮಾತ್ರವಲ್ಲ ಅವುಗಳನ್ನು ಕಂಪ್ಯೂಟರ್ ಮೂಲಕ ಶೇಖರಿಸುವ ಪ್ರಯತ್ನದಲ್ಲಿ ಉಡುಪಿ ಪ್ರಾದೇಶಿಕ ರಂಗಕಲೆಗಳ ಸಂಶೋಧನಾ ಕೇಂದ್ರ ಮುಂಚೂಣಿ ಯಲ್ಲಿದೆ. ಇತ್ತೀಚೆಗೆ ಆದಿ ಉಡುಪಿಯ ಬೈದಶ್ರೀ ಆಶ್ರಯದಲ್ಲಿ ಪ್ರಕಟ ವಾಗಿರುವ ಕೋಟಿ ಚೆನ್ನಯ ಪಾರ್ದನ ಸಂಪುಟವು ಇದಕ್ಕೊಂದು ಯೋಗ್ಯ ಉದಾಹರಣೆ. ಸಂರಕ್ಷಣೆಗೆ ಪ್ರಸಕ್ತ ಈ ಕ್ರಮವೇ ಸೂಕ್ತ.

2. ತುಳುನಾಡ ಗರೋಡಿಗಳ ಅಧ್ಯಯನ ಹಾಗೂ ಕ್ಷೇತ್ರಕಾರ್ಯ ಹೇಗೆ ಸಾಧ್ಯವಾಯಿತು?

1982ರಲ್ಲಿ ನನ್ನ ಕೋಟಿ ಚೆನ್ನಯ ಕೃತಿ ಪ್ರಕಟವಾಗುವ ಕಾಲದಲ್ಲಿ ಗರೋಡಿಗಳ ಅಧ್ಯಯನದ ವಾಂಛೆ ನನ್ನಲ್ಲಿತ್ತು. ಮುಂದೆ ಕಾರ್ಯಕಾರಣ ಗಳಿಂದ ನಾನು ಮುಂಬೈ ಸೇರಿದರೂ ಉಡುಪಿಯ ಮಿತ್ರರ ಸಹಾಯದಿಂದ ಗರೋಡಿಗಳ ಕುರಿತಾದ ಸಂಪೂರ್ಣ ಮಾಹಿತಿ ಸಂಗ್ರಹಿಸುವಲ್ಲಿ ಸಫಲನಾದೆ. ಒಂದು ಸಂಸ್ಥೆ ಉತ್ತಮ ಉದ್ದೇಶ ಹೊಂದಿದ್ದರೆ ತ್ಯಾಗ ಮನೋಭಾವದ ಕಾರ್ಯಕರ್ತರ ಸಮೂಹವೇ ಮುಂದೆ ಬರುವುದು ಎನ್ನುವುದಕ್ಕೆ ಬೈದಶ್ರೀ ಸಂಸ್ಥೆಯೇ ಉದಾಹರಣೆ. ತುಳುನಾಡಿನಲ್ಲಿ ಬಹುತೇಕ ಹಳ್ಳಿಗರಿಂದ ಆರಾದಿಸಲ್ಪಡುವ ಗರೋಡಿಗಳಲ್ಲಿ ಸಂಶೋಧನೆಗೆ ಏನಿದೆ ಎಂಬ ತಿರಸ್ಕಾರ ಒಂದು ಕಾಲದಲ್ಲಿ ಶಿಷ್ಟ ವರ್ಗದ ವಿದ್ವಾಂಸ ರಲ್ಲಿದ್ದುದಂತೂ ಸಹಜವೇ. ಮುಂದೆ ಅಸಾಧ್ಯವೂ ಸಾಧ್ಯವಾದಾಗ ಪಂಡಿತರೆಲ್ಲರೂ ಬೆನ್ನು ತಟ್ಟಿದರೆನ್ನಿ.

3. ಪಂಜೆ ಮಂಗೇಶರಾಯ ಕೃತಿ (1935) ಕೋಟಿ ಚೆನ್ನಯಕ್ಕಿಂತ ನಿಮ್ಮ ಕೃತಿ ಎಲ್ಲಿ ಮತ್ತು ಹೇಗೆ ಬಿನ್ನ?

ಪಂಜೆಯವರ ಕೃತಿ ಕೋಟಿ ಚೆನ್ನಯದ ಗದ್ಯರೂಪದ ಸಂಪಾದನೆಯಲ್ಲಿ ಮೊದಲಿನದ್ದು ಮತ್ತು ಶ್ರೇಷ್ಠವಾದುದು, ಎರಡು ಮಾತಿಲ್ಲ. ಆದರೆ ಆ ಬಳಿಕ ಕೋಟಿ ಚೆನ್ನಯರ ಕುರಿತಾಗಿ ಬಹಳಷ್ಟು ಸಂಶೋಧನಾತ್ಮಕ ಅಧ್ಯಯನ ನಡೆದಿದೆ. ಅನೇಕ ಕೃತಿಗಳು ಹೊರಬಂದಿವೆ. ಪಂಜೆಯವರ ಕೃತಿ ಮಕ್ಕಳ ಸಾಹಿತ್ಯಕ್ಕೆ ಮೀಸಲು ಎಂದರೆ ತಪ್ಪಾಗಲಾರದು. ನನ್ನ ಕೋಟಿ ಚೆನ್ನಯವು ಪ್ರೌಢ ಸಾಹಿತ್ಯಕ್ಕೆ ಹತ್ತಿರವಿದ್ದು ಇತ್ತೀಚೆಗಿನ ಸಂಶೋಧನೆಯಲ್ಲಿ ಕಂಡುಕೊಂಡ ಎಲ್ಲಾ ನೈಜ ಘಟನೆಗಳ ಜೊತೆಗೆ ಕಥಾನಕದ ಒಳ ತಿರುಳನ್ನು ಅಳವಡಿಸಿಕೊಳ್ಳಲಾಗಿದೆ.

4. ತುಳು ಸಾಹಿತ್ಯದ ಮೂಲ ಸೊಗಡನ್ನು ಕನ್ನಡಕ್ಕೆ ಅನುವಾದಿಸುವಾಗ ನೀವು ಅನುಭವಿಸಿದ ತೊಂದರೆಗಳೇನು?

ಯಾವುದೇ ಒಂದು ಸಾಹಿತ್ಯವನ್ನು ಮತ್ತೊಂದು ಭಾಷೆಯಲ್ಲಿ ಅಭಿವ್ಯಕ್ತಗೊಳಿಸುವಾಗ ಆಗುವ ಅವಾಂತರವೇ ನನ್ನನ್ನೂ ಕಾಡಿದೆ. ಯಾಕೆಂದರೆ ಮೂಲದಲ್ಲಿ ತುಳು ಜನಪದರು ಅವಿದ್ಯಾವಂತರಾದರೂ ಸಂಸ್ಕಾರವಂತರೆನ್ನುವುದರಲ್ಲಿ ಸಂದೇಹವೇ ಇಲ್ಲ. ಹಾಗಾಗಿ ಆ ಉತ್ತಮ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವಾಗ ಸಹಜವಾಗಿಯೇ ಮೂಲ ಭಾಷೆಯ ನೈಜತೆಯನ್ನು ಕಾಯ್ದುಕೊಳ್ಳಲಾಗದ ಅಸಹಾಯಕತೆ ನನ್ನದು.

5. ಸಂಶೋಧನಾ ಕೃತಿಗಳ ರಚನೆ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಪ್ರೋತ್ಸಾಹ ನೀಡಿದೆಯೇ?

ಅವರು ನೀಡಿಲ್ಲ ಎನ್ನುವುದಕ್ಕಿಂತ ನಾನು ಅವರಿಂದ ನಿರೀಕ್ಷಿಸಲಿಲ್ಲ ಎನ್ನುವುದು ಹೆಚ್ಚು ಅರ್ಥಪೂರ್ಣ. ಎಲ್ಲರಿಗೂ ಅವರದ್ದೇ ಆದ ಇತಿ ಮಿತಿಗಳಿವೆ. ಇತ್ತೀಚೆಗಿನ ದಿನಗಳಲ್ಲಿ ಅಕಾಡೆಮಿ ಉತ್ತಮ ಕೆಲಸದಲ್ಲಿ ತೊಡಗಿರುವುದು ಅಪೇಕ್ಷಿತ ಬೆಳವಣಿಗೆ.

6. ತುಳು ಜಾನಪದ ಆಚರಣೆಗಳು ಸಂಗ್ರಹಯೋಗ್ಯ ಕೃತಿ. ಆದರೆ ಆ ಆಚರಣೆಗಳು ಕ್ರಮೇಣ ನಶಿಸುತ್ತಿವೆಯಲ್ಲ. ಅವುಗಳನ್ನು ಉಳಿಸುವುದು ಹೇಗೆ?

ಇದು ಸಾಂಸ್ಕೃತಿಕ ಸಂಘರ್ಷಕ್ಕೆ ಸಂಬಂಧಪಟ್ಟ ವಿಚಾರ. ಆಗಸ ಕೌಚಿ ಬೀಳುವಾಗ ಅಂಗೈ ಹಿಡಿದರೆ ನಿಲ್ಲಲಾರದಲ್ಲ! ಕನಿಷ್ಠ ಸಾಹಿತ್ಯದ ಮೂಲಕ ವಾದರೂ ಉಳಿಸಲು ಪ್ರಯತ್ನ ಪಡೋಣ. ಹಿಂತಿರುಗಿ ನೋಡಲಾಗದಷ್ಟು ನಾವು ಪರಕೀಯರನ್ನು ಅನುಕರಿಸಿದ್ದೇವೆ. ಈಗಿನ ಆಚರಣೆಗಳು ಪ್ರದರ್ಶನಕ್ಕೆ ಮಾತ್ರ ಮೀಸಲು. ಹಿಂದಿನ ನೈಜತೆ, ಸೊಗಡು ಕಡಿಮೆ ಯಾಗುತ್ತಿವೆ.

7. ತುಳುನಾಡ ದೈವಗಳ ಬಗ್ಗೆ ರೋಚಕವಾಗಿ ಮೂಡಿಬಂದ ಪ್ರಮುಖ 6 ದೈವಗಳ ದೈವಗಳ ಮಡಿಲಲ್ಲಿ ಮುಂದುವರಿದ ಭಾಗ ವನ್ನು ನಿರೀಕ್ಷಿಸಬಹುದೇ?

ಖಂಡಿತವಾಗಿ. ಸದ್ಯೋಭವಿಷ್ಯದಲ್ಲಿ ಸಾಧ್ಯವಲ್ಲದಿದ್ದರೂ ಆ ಪ್ರಯತ್ನವಿದೆ. ಆ ಬಗ್ಗೆ ಕ್ಷೇತ್ರಕಾರ್ಯ ನಡೆಯುತ್ತಿದೆ. ಹಳೇ ತಲೆಮಾರಿನ ವ್ಯಕ್ತಿಗಳನ್ನು ಸಂದರ್ಶಿಸಲಾಗುತ್ತಿದೆ.

ಸಂದರ್ಶನ ಶ್ರೀ ಯಶೋಧರ ಕೋಟ್ಯಾನ್