ಬನ್ನಂಜೆ ಬಾಬು ಅಮೀನರು ಎಂದೂ ಪ್ರಶಸ್ತಿಯನ್ನು ಅರಸಿ ಹೋದವರಲ್ಲ. ಪ್ರಶಸ್ತಿ ಬಂದಿಲ್ಲವೆಂದು ನೊಂದವರೂ ಅಲ್ಲ. ಆದರೆ ಅವರ ಪ್ರಾಮಾಣಿಕ ಸೇವೆ, ಸಾಹಿತ್ಯ ರಚನೆ ಮತ್ತು ಸಂಶೋಧನಾ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ ಸನ್ಮಾನಗಳು ಅವರನ್ನು ಅರಸಿಕೊಂಡು ಬಂದಿವೆ.

1992ರಲ್ಲಿ ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಕೃತಿಗೆ ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿಯ ಅತ್ಯುತ್ತಮ ಗ್ರಂಥ ಪುರಸ್ಕಾರ ಲಭಿಸಿದೆ. 1996ರಲ್ಲಿ ಅವರ ತುಳು ಜಾನಪದ ಆಚರಣೆಗಳು ಕೃತಿಗೆ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇದರ ಪ್ರತಿಷ್ಠಿತ ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಲಬಿಸಿದೆ. ತುಳು ಜಾನಪದ ಆಚರಣೆಗಳು ಕೃತಿಗೆ 1997ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ ದೊರೆತಿದೆ. ಅವರ ತುಳು ಕಾದಂಬರಿ ’ಪೂ ಪೊದ್ದೊಲು’ ಕೃತಿಗೆ 2003ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗ್ರಂಥ ಪ್ರಶಸ್ತಿ ಲಬಿಸಿದೆ. 2003ರಲ್ಲಿ ಉಡುಪಿ ನಾಗರಿಕರು ಬನ್ನಂಜೆ ಷಷ್ಟ್ಯಬ್ದ ಸಮಿತಿಯನ್ನು ರಚಿಸಿ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ 150 ಪುಟಗಳ ’ಐಸಿರಿ’ ಎಂಬ ಅಭಿನಂದನಾ ಗ್ರಂಥ ವನ್ನು ಅವರಿಗೆ ಅರ್ಪಿಸಲಾಯಿತು. ಈ ಗ್ರಂಥದಲ್ಲಿ ಬನ್ನಂಜೆಯವರ ವ್ಯಕ್ತಿತ್ವ, ಸಾಹಿತ್ಯ, ಸಂಘಟನೆ ಸಂಶೋಧನೆಯ ಕುರಿತಾಗಿ ಹಿರಿಯ-ಕಿರಿಯ ವಿದ್ವಾಂಸರು ಬರೆದ ಅರುವತ್ತರಷ್ಟು ಲೇಖನಗಳಿವೆ. ಬನ್ನಂಜೆಯವರ ಬಗ್ಗೆ ಉಡುಪಿಯ ಜನರಿಗಿರುವ ಪ್ರೀತಿ ಮತ್ತು ಗೌರವಗಳು ಈ ಸಮಾರಂಭ ಮತ್ತು ಐಸಿರಿಯಲ್ಲಿ ವ್ಯಕ್ತವಾಗಿದೆ. ಮುಂಬಯಿಯಿಂದ ದಕ್ಷಿಣ ಕನ್ನಡದವರೆಗೆ ಇರುವ ಅವರ ಅಭಿಮಾನಿ ಬಳಗದ ಭಾವನೆಗಳ ಮಹಾಪೂರವು ’ಐಸಿರಿ’ಯಲ್ಲಿ ಮಡುಗಟ್ಟಿದೆ.

2006ರಲ್ಲಿ ಬಿಲ್ಲವಾಸ್ ದುಬೈ ಮತ್ತು ನಾರ್ದನ್ ಎಮಿರೆಟ್ಸ್ ವತಿಯಿಂದ ದುಬೈಯಲ್ಲಿ ಅಭೂತಪೂರ್ವ ಸನ್ಮಾನ ಸಮಾರಂಭ ನಡೆಯಿತು. 2006ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತುಳು ಮಹನೀಯರಿಗೆ ಅಭಿನಂದನೆ ಕಾರ್ಯಕ್ರಮದಡಿ ಅವರನ್ನು ಅಭಿನಂದಿಸಿತು. 2007ರಲ್ಲಿ ಮುಂಬಯಿಯ ದಿ. ನಾರಾಯಣ ಸಾಲ್ಯಾನ್ ಸ್ಮಾರಕ ಪ್ರಶಸ್ತಿಯನ್ನು ಅವರು ಪಡೆದರು. 2007ರಲ್ಲಿ ಸಂದೇಶ ಸಾಹಿತ್ಯ ಪ್ರತಿಷ್ಠಾನ ಮಂಗಳೂರು ಇವರು ನೀಡುವ ಸಂದೇಶ ತುಳು ಸಾಹಿತ್ಯ ರಾಜ್ಯ ಪ್ರಶಸ್ತಿಯನ್ನು ಅವರು ಪಡೆದರು. 2008ರಲ್ಲಿ ಉಡುಪಿ ಜಿಲ್ಲಾಡಳಿತವು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2009ರಲ್ಲಿ ತುಳು ಸಾಹಿತ್ಯ ಮತ್ತು ಸಂಸ್ಕೃತಿಗೆ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಅವರಿಗೆ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಒಡಿಯೂರು ಕ್ಷೇತ್ರದಲ್ಲಿ ’ತುಳು ಐಸಿರಿ’ ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಸೇವೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಡುಪಿಯಲ್ಲಿ ವಿದ್ವಾಂಸರರಾದ ಎಲ್.ಎಸ್. ಶೇಷಗಿರಿರಾಯರ ಅಧ್ಯಕ್ಷತೆಯಲ್ಲಿ ನಡೆದ 74ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಹೀಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿ – ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. ನೂರಾರು ಸಂಘಸಂಸ್ಥೆಗಳು ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ.

1992ರಲ್ಲಿ ಮಹಾರಾಷ್ಟ್ರದ ಪೂನಾ ಬೋರ್ಡಿನಿಂದ ಪ್ರಕಟವಾದ ಏಳನೇಯ ತರಗತಿಯ ಪಠ್ಯ ಪುಸ್ತಕದಲ್ಲಿ ಅವರ ’ಕೋಟಿ – ಚೆನ್ನಯ’  ಕಥೆಯನ್ನು ಪಠ್ಯವಾಗಿ ಸೇರಿಸಲಾಯಿತು. 2007ರಲ್ಲಿ ಪೂನಾ ಬೋರ್ಡು ಪ್ರಕಟಿಸಿದ ಹತ್ತನೆ ತರಗತಿಯ ’ಕನ್ನಡ ಕುಮಾರ ಭಾರತಿ’ ಪಠ್ಯ ಪುಸ್ತಕದಲ್ಲಿ ಅವರ ಕೋಟಿ ಚೆನ್ನಯವು ಎರಡನೇ ಬಾರಿ ಸೇರ್ಪಡೆಯಾಯಿತು. ಮುಂಬಯಿಯ ಬಿಲ್ಲವ ಎಸೋಸಿಯೇಶನ್‌ನ ಮಾಸಪತ್ರಿಕೆ ’ಅಕ್ಷಯ’ದ ಸಂಪಾದಕರಾಗುವ ಗೌರವವನ್ನು ನೀಡಲಾಯಿತು. ಮುಂಬಯಿಯಲ್ಲಿ ಆರಂಭವಾದ ಕನ್ನಡ ದಿನಪತ್ರಿಕೆ ’ಕರ್ನಾಟಕ ಮಲ್ಲ’ದಲ್ಲಿ ಆರಂಭ ದಿನಗಳಲ್ಲಿ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದಾರೆ.