ಪ್ರಸ್ತಾವನೆ

‘ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯ. ಅವನಲ್ಲಿರುವ ಶಕ್ತಿ ಸದ್ಬಳಕೆ ಯಾದರೆ ಅದ್ಭುತವನ್ನು ಸೃಷ್ಟಿಸಬಹುದು. ಪ್ರತಿಭೆಗೆ ಜಾತಿ ಭೇದವಿಲ್ಲ, ವರ್ಗ ಭೇದವಿಲ್ಲ. ಅದೆಲ್ಲವೂ ಮನುಷ್ಯ ಸೃಷ್ಟಿ’ ದಾರ್ಶನಿಕರೊಬ್ಬರು ಹೇಳಿದ ಮಾತಿಗೆ ಸಾವಿರಾರು ಉದಾಹರಣೆಗಳು ದೊರೆಯುತ್ತವೆ. ಪ್ರತಿಭಾವಂತರ ಬದುಕನ್ನು ಅವಲೋಕಿಸಿದಾಗ ಈ ಮಾತಿನ ಸತ್ಯದ ಅರಿವಾಗುತ್ತದೆ. ಸಾಮಾನ್ಯರು ಶ್ರದ್ಧೆಯ ಮೂಲಕ ಅಸಾಮಾನ್ಯ ಸಾಧನೆಗಳನ್ನು ಮಾಡಿ ಮೇಲಿನ ಮಾತನ್ನು ಸಾಧ್ಯ ಗೊಳಿಸಿದ್ದಾರೆ. ಇಂಥ ಪ್ರತಿಭೆ ಬನ್ನಂಜೆ ಬಾಬು ಅಮೀನರದು.

ಸಾಂಸ್ಕೃತಿಕ ಸಂಘಟನೆ, ಸಾಹಿತ್ಯ, ಕಲೆ, ಸಂಶೋಧನೆ – ಹೀಗೆ ಹಲವು ಕ್ಷೇತ್ರಗಳಲ್ಲಿ ಬನ್ನಂಜೆ ಬಾಬು ಅಮೀನರ ಸಾಧನೆ ಗಮನಾರ್ಹವಾದುದು. ಸಂಶೋಧನೆಗೆ ಅಕೆಡಿಮಿಕ್ ಶಿಸ್ತು ಅಗತ್ಯ ಎಂಬುದು ಬಹುಜನರ ನಂಬಿಕೆ. ಜಾನಪದ ಅಧ್ಯಯನದಲ್ಲಿ ವೈಜ್ಞಾನಿಕ ಕ್ಷೇತ್ರಕಾರ್ಯ ಮತ್ತು ಸೈದ್ಧಾಂತಿಕ ವಿಶ್ಲೇಷಣೆ ಅಗತ್ಯ ಎಂಬುದು ಪರಿಣತರ ಅಭಿಪ್ರಾಯ.

ಇದಕ್ಕೆ ಅಕೆಡಿಮಿಕ್ ಶಿಸ್ತನ್ನು ಅವರು ಪ್ರತಿಪಾದಿಸುತ್ತಾರೆ. ಆದರೆ ಬನ್ನಂಜೆ ಬಾಬು ಅಮೀನರು ಪರಿಣತರ ಈ ಅಭಿಪ್ರಾಯವನ್ನು ಸುಳ್ಳು ಮಾಡಿದ್ದಾರೆ. ಯಾವುದೇ ಶೈಕ್ಷಣಿಕ ಹಿನ್ನೆಲೆ ಇಲ್ಲದೆ ಅವರು ನಡೆಸಿದ ಸಂಶೋಧನೆಯ ಆಳ ಮತ್ತು ವಿಸ್ತಾರವನ್ನು ಗಮನಿಸಿದಾಗ ಬೆರಗಾಗುತ್ತೇವೆ. ಮನುಷ್ಯ ಸಹಜ ಕುತೂಹಲ, ಆಸಕ್ತಿ, ಶ್ರದ್ಧೆಗಳು ಉತ್ತಮ ಸಂಶೋಧನೆಗೆ ಮೂಲಭೂತ ಅವಶ್ಯಕತೆಗಳು ಎಂಬುದನ್ನು ಅವರ ಅಧ್ಯಯನ ಸಿದ್ಧಗೊಳಿಸಿದೆ. ಅಕೆಡಿಮಿಕ್ ಶಿಸ್ತು ಮಾತ್ರ ಸಂಶೋಧನೆಗೆ ಪ್ರಾಥಮಿಕ ಅಗತ್ಯವಲ್ಲ ಎಂಬುದನ್ನು ಮನಗಾಣುತ್ತೇವೆ. ಈ ದೃಷ್ಟಿಯಿಂದ ಅವರ ಬದುಕು-ಬರಹಗಳನ್ನು ಅಧ್ಯಯನ ಮಾಡುವುದು ಮುಖ್ಯವಾಗುತ್ತದೆ. ಈ ಕುತೂಹಲದಿಂದ ಅವರ ಬದುಕು-ಬರಹಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ಬನ್ನಂಜೆ ಬಾಬು ಅಮೀನರು ಹಲವು ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿದ್ದವರು. ಈಗಲೂ ಅವರ ಕ್ರಿಯಾಶೀಲತೆ ಮುಂದುವರಿದಿದೆ. ಬೈದ್ಯಶ್ರೀ, ಕೆಮ್ಮಲಜೆಯಂಥ ಸಂಸ್ಥೆಗಳು ಅವರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಗಳಾಗಿವೆ. ’ಉಗುರಿಗೆ ಮುಡಿಯಕ್ಕಿ’, ’ಕೋಟಿ ಚೆನ್ನಯ’, ’ಪೂ ಪೊದ್ದೊಲು’, ’ಮಾನೆಚ್ಚಿ’ ಕೃತಿಗಳು ಅವರ ಸೃಜನಶೀಲ ಸೃಷ್ಟಿಯ ವೈಶಿಷ್ಟಗಳನ್ನು ಹೇಳುತ್ತವೆ. ’ತುಳು ಜಾನಪದ ಆಚರಣೆ’, ’ದೈವದ ಮಡಿಲಲ್ಲಿ’, ’ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ’, ’ತುಳುನಾಡ ದೈವಗಳು’, ’ತುಳು ಜಾನಪದ ಆಚರಣೆಲು’ – ಅವರ ಸಂಶೋಧನೆಯ ಆಳ-ವಿಸ್ತಾರಗಳನ್ನು ತಿಳಿಸುತ್ತವೆ. ’ನುಡಿಕಟ್ಟ್’ ಆನ್ವಯಿಕ ಜಾನಪದಕ್ಕೆ ಒಳ್ಳೆಯ ಉದಾಹರಣೆ. ಅವರು ಬರೆದಿರುವ ನೂರಕ್ಕೂ ಹೆಚ್ಚಿನ ಲೇಖನಗಳು ಅವರ ಅಧ್ಯಯನಶೀಲತೆಯ ಅಭಿವ್ಯಕ್ತಿಗಳಾಗಿವೆ. ಹೀಗೆ ಶೂನ್ಯದಿಂದ ಆರಂಭವಾದ ಅವರು ಶೂನ್ಯವನ್ನೇ ಶಕ್ತಿಯನ್ನಾಗಿಸಿ ಸಾದಿಸಿದ್ದು ಮಹತ್ತರ ವಾದುದಾಗಿದೆ. ಅವರ ಬದುಕಿನ ವಿಶ್ಲೇಷಣೆಯಿಂದ ಇದನ್ನು ಕಂಡುಕೊಳ್ಳಬಹುದು.

ಬಾಲ್ಯ ಬದುಕು

ಬನ್ನಂಜೆ ಬಾಬು ಅಮೀನರ ಜನನ 04-08-1944. ತಂದೆ ಸೋಮ ಪೂಜಾರಿ. ತಾಯಿ ದಾರಮ್ಮ ಪೂಜಾರ್ತಿ. ಏಳು ಗಂಡು ಮತ್ತು ಎರಡು ಹೆಣ್ಣು ಮಕ್ಕಳಲ್ಲಿ ಬನ್ನಂಜೆಯವರು ಕೊನೆಯವರು. ಒಂದು ಕಾಲದಲ್ಲಿ ಉಡುಪಿಯ ಕಡೆಕಾರಿನ ಹೆಸರಾಂತ ಬಿಲ್ಲವ ಕುಟುಂಬ ಅವರದು. ಪಡುತೋಟು ಬೊಗ್ಗು ಪೂಜಾರಿಯ ಮೂಲ ಅವರದು. ಬಹುದೊಡ್ಡ ಅವಿಭಕ್ತ ಕುಟುಂಬ – ಶ್ರೀಮಂತ ಕುಟುಂಬವಾಗಿತ್ತು. ಆದರೆ ಬನ್ನಂಜೆ ಬಾಬು ಅಮೀನರು ಹುಟ್ಟಿದ ಸಂದರ್ಭದಲ್ಲಿ ಅದು ಗತವೈಭವವನ್ನು ಕಳೆದುಕೊಂಡಿತ್ತು. ಅವರ ತಾಯಿಗೆ ಸೋದರ ಸಂಬಂಧದಲ್ಲೆ ಮದುವೆಯಾಗಿತ್ತು. ಕಡೆಕಾರಿನ ಅವಿಭಕ್ತ ಕುಟುಂಬದಲ್ಲಿ ಉಂಟಾದ ಸಣ್ಣ ಬಿನ್ನಾಬಿಪ್ರಾಯದಿಂದಾಗಿ ಕುಟುಂಬದಲ್ಲಿ ಬಿರುಕು ಉಂಟಾಯಿತು. ಛಲಗಾರ್ತಿಯಾದ ದಾರಮ್ಮ ಪೂಜಾರ್ತಿಯವರು ಐದು ಮಕ್ಕಳೊಂದಿಗೆ ಬನ್ನಂಜೆಯ ಮನೆಗೆ ಬಂದು ನೆಲೆಸಿದರು. ಅಲ್ಲಿ ಬಾಬು ಅಮೀನರು ಹುಟ್ಟಿದರು. ಇದರಿಂದ ಕಡೆಕಾರಿನ ಕುಟುಂಬದ ಮೂಲದವರಾದರೂ ’ಬನ್ನಂಜೆ’ಯು ಅವರ ಹೆಸರಿನೊಂದಿಗೆ ಸದಾ ಇರಲು ಕಾರಣವಾಯಿತು.

ಬಡತನದಲ್ಲೂ ಪ್ರೀತಿಯ ವಾತಾವರಣದಲ್ಲೆ ಬೆಳೆದವರು ಬಾಬು ಅಮೀನರು. ತಾಯಿಯ ಛಲ ಮತ್ತು ಸ್ವಾಭಿಮಾನ ಅವರಿಗೆ ದಾರಿದೀಪವಾಯಿತು. ಮನೆಯ ಜವಾಬ್ದಾರಿಯ ಬಗ್ಗೆ ತಂದೆ ತಲೆಕೆಡಿಸಿಕೊಂಡವರಲ್ಲ. ತುಳುನಾಡಿನ ಹೆಣ್ಣುಮಕ್ಕಳಂತೆ ತಾಯಿ ಸ್ವಾಭಿಮಾನದಿಂದ ದುಡಿದು ಮಕ್ಕಳನ್ನು ಸಾಕಿದರು. ಅವರ ಕುಟುಂಬದಲ್ಲೆ ಮೊದಲ ಬಾರಿಗೆ ಮೆಟ್ರಿಕ್ ಪಾಸಾದವರು ಬನ್ನಂಜೆಯವರು. ವಿದ್ಯಾಭ್ಯಾಸದ ಸಂದರ್ಭದಲ್ಲಿ ಬುದ್ಧಿವಂತ ವಿದ್ಯಾರ್ಥಿ ಎಂದೆನಿಸಿದವರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಆದಿಉಡುಪಿಯ ಸರಕಾರಿ ಶಾಲೆಯಲ್ಲಿ ನಡೆಯಿತು. ಮುಖ್ಯೋಪಾಧ್ಯಾಯರಾದ ಶ್ರೀ ಟಿ.ಕೆ. ಶ್ರೀನಿವಾಸ ರಾಯರ ಪ್ರೋತ್ಸಾಹವನ್ನು ಅವರು ನೆನಪಿಸಿಕೊಳ್ಳುತ್ತಾರೆ. ವಿದ್ಯಾವಂತರಲ್ಲದ ತಾಯಿ ಕಷ್ಟದ ದಿನಗಳಲ್ಲಿ ತನ್ನ ಕಿವಿಯ ಬೆಂಡೋಲೆಯನ್ನು ಅಡವಿಟ್ಟು ಓದಿಸಿ, ತನ್ನ ವಿದ್ಯಾಭ್ಯಾಸದ ಬಗ್ಗೆ ವಹಿಸಿದ ಕಾಳಜಿಯನ್ನು ತುಂಬು ಹೃದಯದಿಂದ ಸ್ಮರಿಸಿಕೊಳ್ಳುತ್ತಾರೆ.

1961ರಲ್ಲಿ ಮೆಟ್ರಿಕ್ ಮುಗಿಸಿದ ಬಾಬು ಅಮೀನರು ಸಣ್ಣಪುಟ್ಟ ಉದ್ಯೋಗವನ್ನು ನಿರ್ವಹಿಸಿ 1963ರಲ್ಲಿ ಮಣಿಪಾಲದ ಕಸ್ತೂರಿ ಬಾ ಕಾಲೇಜಿನಲ್ಲಿ ಕಛೇರಿ ಸಹಾಯಕರಾಗಿ ಉದ್ಯೋಗ ಸೇರಿದರು. ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ಅವರು ಆಗಲೇ ಗುರುತಿಸಿಕೊಂಡಿದ್ದರು. 1964ರಲ್ಲಿ ಶಿರಿಬೀಡು ಜಂಗಮರ ಮಠದ ಯಕ್ಷಗಾನ ಕಲಾಕ್ಷೇತ್ರದ ಸದಸ್ಯರಾದರು. ಇದರಿಂದ ಹಿರಿಯರ ಮಾರ್ಗದರ್ಶನದಲ್ಲಿ ಯಕ್ಷಗಾನದ ಆಸಕ್ತಿ ಬೆಳೆದು ಹವ್ಯಾಸಿ ಕಲಾವಿದರಾಗಿ ರೂಪುಗೊಂಡರು. ಇದು ಅವರ ಮೊದಲ ಸಾಂಘಿಕ ಚಟುವಟಿಕೆ. 1966ರಲ್ಲಿ ಬಿಲ್ಲವ ಸೇವಾ ಸಂಘದ ಸದಸ್ಯರಾಗಿ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿದರು. 1969ರಲ್ಲಿ ಅವರ ಬರವಣಿಗೆ ರೂಪುಗೊಂಡಿತು. ಯಕ್ಷಗಾನ ಕಲಾಕ್ಷೇತ್ರದ ಅರ್ಥ ಸಹಿತ ’ಕೋಟಿಚೆನ್ನಯ’ ಪ್ರಸಂಗ ರಚನೆಯಲ್ಲಿ ಸಕ್ರಿಯ ಪಾತ್ರ ವಹಿಸಿದರು. 1970ರಲ್ಲಿ ಭೋಜಪ್ಪ ಸುವರ್ಣರ ಮಗಳು ಇಂದಿರಾರನ್ನು ವಿವಾಹವಾದರು. ಭಾರತಿ ಮತ್ತು ರಾಘವೇಂದ್ರ ಅವರ ಇಬ್ಬರು ಮಕ್ಕಳು.

1970ರಲ್ಲಿ ಮಣಿಪಾಲ ಬಿಟ್ಟು ಉಡುಪಿಯಲ್ಲಿ ಉದ್ಯೋಗಕ್ಕೆ ಸೇರಿದರೂ ಮತ್ತೆ ಮಣಿಪಾಲಕ್ಕೆ ಹಿಂತಿರುಗಿದರು. 1973ರಲ್ಲಿ ಕಸ್ತೂರಿ ಬಾ ಮೆಡಿಕಲ್ ಕಾಲೇಜಿನ ನೌಕರರ ಸಂಘದ ಕಾರ್ಯದರ್ಶಿಯಾದರು. ಅವರ ಸಂಘಟನಾ ಕ್ರಮದಿಂದ ಆಡಳಿತ ವರ್ಗದ ಕೋಪಕ್ಕೆ ತುತ್ತಾದರು. ಆಡಳಿತ ವರ್ಗವು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅವರೊಂದಿಗೆ 23 ಜನ ನೌಕರರನ್ನು ಕೆಲಸದಿಂದ ವಜಾ ಮಾಡಿತು. ಬ್ಯಾಂಕಿನಿಂದ ಸಾಲ ಪಡೆದು ಉಡುಪಿಯ ಕಲ್ಯಾಣಪುರದಲ್ಲಿ ಜವುಳಿ ಅಂಗಡಿ ತೆರೆದರೂ, ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಸಕ್ತಿಯು ವ್ಯಾಪಾರದಲ್ಲಿ ಅವರನ್ನು ಮುಂದುವರಿಯದಂತೆ ಮಾಡಿತು. ಇದರಿಂದ ಅಂಗಡಿಯನ್ನು ಪರಭಾರೆ ಮಾಡಿ ಮುಂಬಯಿ ಬದುಕನ್ನು ಪ್ರವೇಶಿಸಿದರು.

1977ರಲ್ಲಿ ಮುಂಬಯಿಗೆ ಹೋದ ಅಮೀನರು ನ್ಯೂಕಮ್ ಪ್ರೊಡೆಕ್ಟ್ ಸಂಸ್ಥೆಯ ಕಛೇರಿ ಸಹಾಯಕರಾಗಿ ಸೇರಿದರು. ಬಳಿಕ ಮುಂಬಯಿ ದೈಸರಿನ ಗೋಲ್ಡನ್ ಕೆಮಿಕಲ್ಸ್‌ನಲ್ಲಿ ಮೇಲ್ವಿಚಾರಕರಾಗಿ ಸೇರಿದರು. ಬಳಿಕ 1983-91ವರೆಗೆ ಕಂಪೆನಿಗಳ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಈ ರೀತಿ ಉದ್ಯೋಗದಲ್ಲಿರುವ ಸಂದರ್ಭದಲ್ಲೆ ಮುಂಬಯಿಯಲ್ಲಿ ತುಳು ಮತ್ತು ಕನ್ನಡಕ್ಕೆ ಸಂಬಂಧಿಸಿದ ಸಂಘಟನೆ, ಸಾಹಿತ್ಯ ರಚನೆ ಮತ್ತು ಸಂಶೋಧನೆಗಳಿಂದ ಜನಪ್ರಿಯರಾದರು.

1982ರಲ್ಲಿ ಮಿತ್ರರಿಂದ ಹಣ ಸಂಗ್ರಹ ಮಾಡಿ ‘ಕೋಟಿಚೆನ್ನಯ’ ಚೊಚ್ಚಲ ಕೃತಿಯನ್ನು ಪ್ರಕಟಿಸಿದರು. ಆಗಲೇ ತುಳುನಾಡಿನ ಉದ್ದಗಲಕ್ಕೂ ಇರುವ ಗರೋಡಿಗಳ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ತೊಡಗಿದರು. ಮುಂಬಯಿಯಲ್ಲಿದ್ದುಕೊಂಡೆ ತುಳುನಾಡಿ ನಲ್ಲಿರುವ ಮಿತ್ರರನ್ನು ಸಂಪರ್ಕಿಸಿ 214 ಗರೋಡಿಗಳ ಮಾಹಿತಿ ಸಂಗ್ರಹಿಸಿದರು.

1985ರಲ್ಲಿ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನದ ಸ್ಥಾಪನೆ ಯಾಯಿತು. ಸಂಗ್ರಹಿಸಿದ ಮಾಹಿತಿಗಳನ್ನು ಕ್ಷೇತ್ರಕಾರ್ಯದ ಸಿದ್ಧಾಂತಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿ ಪ್ರಕಟನೆಗೆ ಸಿದ್ಧಗೊಳಿಸಿದರು. 1990ರಲ್ಲಿ ಪ್ರೊ. ಮೋಹನ್ ಕೋಟ್ಯಾನ್ ರೊಂದಿಗೆ ಸಹ ಲೇಖಕರಾಗಿ ’ತುಳುನಾಡಿನ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ’ ಬೃಹತ್ ಗ್ರಂಥವನ್ನು ಪ್ರಕಟಿಸಿದರು. ಇದರೊಂದಿಗೆ ಗುರು ಸಂಜೀವ ಆರ್. ಸುವರ್ಣರ ಪರಿಚಯ ಅವರನ್ನು ಶನಿಪೂಜಾ ಪ್ರವಚನ ಮತ್ತು ಯಕ್ಷಗಾನ ಅರ್ಥಗಾರಿಕೆಯ ಕಡೆಗೆ ಸೆಳೆಯಿತು. ಮುಂದೆ ಮುಂಬಯಿ ಮಹಾನಗರದ ಸುತ್ತಮುತ್ತ ಶನಿಪೂಜೆಯ ಅರ್ಥಗಾರಿಕೆಯ ಬಹುದೊಡ್ಡ ಪ್ರವಚನಕಾರರಾಗಿ ಬಾಬು ಅಮೀನರು ಗುರುತಿಸಲ್ಪಟ್ಟರು.

ಮುಂಬಯಿಯಲ್ಲಿ ಹಲವು ಸಂಸ್ಥೆಯಲ್ಲಿ ಬಾಬು ಅಮೀನರು ಗುರುತಿಸಲ್ಪಟ್ಟರು. ಮುಂಬಯಿ ಬಿಲ್ಲವರ ಅಸೋಸಿಯೇಷನ್ನಿನ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ನವೀಕರಣ ಕಾರ್ಯದಲ್ಲೂ ದುಡಿದರು. ಬಿಲ್ಲವರ ಅಸೋಸಿಯೋಶನಿನ ಜನಪ್ರಿಯ ಮಾಸಪತ್ರಿಕೆ ’ಅಕ್ಷಯ’ದ ಸಂಪಾದಕರಾಗಿ ಕೆಲಸಮಾಡಿದರು. ಸಂಪಾದಕ ಮಂಡಳಿಯ ಸಹಯೋಗದಿಂದ ಅಕ್ಷಯ ಪತ್ರಿಕೆಯನ್ನು ಒಂದು ಅರ್ಥಪೂರ್ಣ ಮಾಸಿಕವನ್ನಾಗಿ ಪರಿವರ್ತಿಸುವ ಜೊತೆಗೆ ಪತ್ರಿಕೆಗೆ ನಾವೀನ್ಯತೆಯನ್ನು ಅಳವಡಿಸಿದರು. ತುಳು ಜಾನಪದದ ಕುರಿತಾಗಿ ಅಂಕಣವನ್ನು ಆರಂಬಿಸಿ, ತುಳು ಸಂಸ್ಕೃತಿಯ ಪ್ರಸರಣದಿಂದ ಮುಂಬಯಿಯಲ್ಲಿ ಜನಪ್ರಿಯರಾದರು. ’ಕರ್ನಾಟಕ ಮಲ್ಲ’ ದಿನಪತ್ರಿಕೆಯಲ್ಲಿ ತುಳು ಅಂಕಣಕಾರರಾಗಿ ಪ್ರಸಿದ್ಧರಾದರು. 1982ರಲ್ಲಿ  ಮುಂಬಯಿಯ ಅಯೋಧ್ಯಾ ನಗರದಲ್ಲಿ ಸಮಾನ ಮನಸ್ಕರ ಜೊತೆಗೂಡಿ ಸಾರ್ವಜನಿಕ ಶನಿಪೂಜಾ ಸಮಿತಿಯನ್ನು ಸ್ಥಾಪಿಸಿದರು.

1990ರಲ್ಲಿ ಮುಂಬಯಿಯಲ್ಲೂ ಉದ್ಯೋಗವನ್ನು ಕಳೆದುಕೊಂಡರು. ಬಹುಶಃ ಅವರ ಸಾಂಸ್ಕೃತಿಕ ಅಧ್ಯಯನದ ಆಸಕ್ತಿಯು ಅವರನ್ನು ವೃತ್ತಿ ಕ್ಷೇತ್ರದಲ್ಲಿ ಒಂದು ಕಡೆ ನೆಲೆ ನಿಲ್ಲಲು ಬಿಡಲಿಲ್ಲ. ಅನೇಕ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದರೂ ಅವರ ಸ್ವಾಭಿಮಾನ ಅದಕ್ಕೆ ತಡೆಯುಂಟು ಮಾಡಿತು. ಸಾಂಸ್ಕೃತಿಕ ಹವ್ಯಾಸವು ಪ್ರಧಾನವಾಗಿ ಜೀವನ ನಿರ್ವಹಣೆಗಾಗಿ ಜೀವ ವಿಮಾ ಪ್ರತಿನಿದಿಯಾದರು.

ಅವರ ಜಾನಪದ ಸಂಶೋಧನೆಯ ಆಸಕ್ತಿಯು ಮುಂದುವರಿಯಿತು. ತುಳು ಜನಪದ ಆಚರಣೆಗಳ ಬಗ್ಗೆ ಜನರ ಆಸಕ್ತಿಯನ್ನು ಗುರುತಿಸಿ ಕ್ಷೇತ್ರಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸಿ ’ತುಳು ಜಾನಪದ ಆಚರಣೆಗಳು’ ಕೃತಿಯನ್ನು ಪ್ರಕಟಿಸಿದರು. ಈ ಕೃತಿ ಅತ್ಯಂತ ಜನಪ್ರಿಯವಾಗಿ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯಿತು. ಹೀಗೆ ವೃತ್ತಿ ಕ್ಷೇತ್ರದಲ್ಲಿ ತಳವೂರಲು ವಿಫಲರಾದಷ್ಟು ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಜನಪ್ರಿಯರಾದರು. ಮುಂಬಯಿ ಮತ್ತು ತುಳುನಾಡಿನಲ್ಲಿ ಸಂಘಟಕರಾಗಿ, ಸಾಹಿತಿಯಾಗಿ, ಸಂಶೋಧಕರಾಗಿ ಗುರುತಿಸಲ್ಪಟ್ಟರು.

ತಾಯಿ ಮತ್ತು ಇಬ್ಬರು ಅಣ್ಣಂದಿರ ಮರಣ, ಮಗಳ ಮದುವೆ, ಮಗನ ವಿದ್ಯಾಭ್ಯಾಸ ಪೂರ್ತಿ ಇತ್ಯಾದಿ ಕಾರಣಗಳಿಂದ ಇಪ್ಪತ್ತನಾಲ್ಕು ವರ್ಷಗಳ ಮುಂಬಯಿ ಬದುಕಿಗೆ ವಿದಾಯ ಹೇಳಿ 2001 ಏಪ್ರಿಲ್ 12ರಂದು ಮರಳಿ ಊರಿಗೆ ಬಂದರು. ಮುಂಬಯಿಯನ್ನು ಬಿಟ್ಟು ಮರಳಿ ಬರುವ ಸಂದರ್ಭದಲ್ಲಿ ಅವರ ಅಪಾರ ಅಭಿಮಾನಿ ಬಳಗವು ಗೌರವ – ಸನ್ಮಾನಗಳಿಂದ ಪುರಸ್ಕರಿಸಿ, ಕಣ್ಣೀರಿಟ್ಟು ಭಾವಪೂರ್ಣ ವಿದಾಯ ಹೇಳಿದ ರೀತಿ ಅವರು ಮುಂಬಯಿ ಮಹಾನಗರದ ತುಳು ಜನರ ಮೇಲೆ ಬೀರಿದ ಪ್ರಭಾವಕ್ಕೆ ಸಾಕ್ಷಿಯಾಗಿದೆ.

ಹುಟ್ಟೂರಿಗೆ ಮರಳಿದರೂ ವಿಶ್ರಾಂತಿ ಜೀವನದಲ್ಲಿ ಕ್ರಿಯಾಶೀಲರಾದರು. ಯಕ್ಷಗಾನ ಕಲಾಕ್ಷೇತ್ರದ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ದುಡಿದರು. ಅವರ ಸೇವೆಯನ್ನು ಗುರುತಿಸಿ 2001-04ರ ಸಾಲಿಗೆ ಕರ್ನಾಟಕ ಸರಕಾರವು ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿಯ ಸದಸ್ಯರನ್ನಾಗಿ ನೇಮಿಸಿತು. ಕ್ರಿಯಾಶೀಲ ಸದಸ್ಯರಾಗಿ ಹಲವು ಕಾರ್ಯಕ್ರಮಗಳನ್ನು ಯೋಜಿಸಿದರು. ಮುಂಬಯಿ, ಹೊರನಾಡು, ಕರ್ನಾಟಕದ ಹಲವು ಭಾಗಗಳಲ್ಲಿ ಸಮ್ಮೇಳನ, ವಿಚಾರಗೋಷ್ಠಿಗಳಲ್ಲಿ ಅಧ್ಯಕ್ಷತೆ, ಪ್ರಬಂಧ ಮಂಡನೆ, ಸನ್ಮಾನಗಳ ಗೌರವ ದೊರೆತಿದೆ.

2002ರಲ್ಲಿ ಅವರ ಕೃತಿಗಳನ್ನು ಪ್ರಕಟಿಸುವ ಉದ್ದೇಶದಿಂದ ಕೆಮ್ಮಲಜೆ ಪ್ರಕಾಶನವನ್ನು ಪ್ರಾರಂಬಿಸಿದರು. ಸುಮಾರು 10ರಷ್ಟು ಕೃತಿಗಳನ್ನು ಪ್ರಕಟಿಸಿದರು. ಕೃತಿಗಳ ಪ್ರಕಟನೆಯೊಂದಿಗೆ ಜಾನಪದ ಆಚರಣೆಗಳ ಅನ್ವಯಿಕ ಕಾರ್ಯವನ್ನು ಆರಂಬಿಸಿದರು. ಭೂತಾರಾಧನೆ, ಮದುವೆಗಳಂಥ ಆಚರಣೆಗಳನ್ನು ಸಂಪ್ರದಾಯಬದ್ಧವಾಗಿ ನಡೆಸುವುದಕ್ಕೆ ಮಾರ್ಗದರ್ಶನ ಮಾಡತೊಡಗಿದರು. ಅವರ ನೇತೃತ್ವದಲ್ಲಿ ತರಬೇತಿ – ಪಾತಕ್ಷಿಕೆಗಳು ನಡೆದವು. ಇಂದು ಉಡುಪಿ ಜಿಲ್ಲೆ ಹಲವು ಭಾಗಗಳಲ್ಲಿ ಈ ಆಚರಣೆಗಳು ಸಂಪ್ರದಾಯ ಬದ್ಧವಾಗಿ ನಡೆಯುವಲ್ಲಿ ಅಮೀನರ ಕೊಡುಗೆ ಮಹತ್ವದ್ದಾಗಿದೆ.

ಹೀಗೆ ಸಾಮಾನ್ಯರಾಗಿದ್ದುಕೊಂಡೆ ಅಸಾಮಾನ್ಯ ಸಾಧನೆಗಳನ್ನು ಮಾಡುತ್ತಾ ಶೂನ್ಯದಿಂದ ಸೃಷ್ಟಿಯಾದ ಬಾಬು ಅಮೀನರ ಬದುಕು ನಿಜಕ್ಕೂ ಹೋರಾಟದ ಬದುಕಾಗಿದೆ. ಸ್ವಪ್ರಯತ್ನದಿಂದ ಬದುಕು ಕಟ್ಟುವುದಕ್ಕೆ ಅವರೊಂದು ಒಳ್ಳೆಯ ಉದಾಹರಣೆ.

ವ್ಯಕ್ತಿತ್ವ

ಬನ್ನಂಜೆ ಬಾಬು ಅಮೀನರು ನಡೆದು ಬಂದ ದಾರಿಯನ್ನು ಸಿಂಹಾವಲೋಕನ ಮಾಡಿದಾಗ ಅವರ ವ್ಯಕ್ತಿತ್ವದ ಕೆಲವು ಗುಣಗಳು ಗಮನಸೆಳೆಯುತ್ತವೆ. ಅವರ ಬದುಕಿನ ಬಗ್ಗೆ ಬರೆದಿರುವ ಹಲವು ಲೇಖಕರು ಅದನ್ನು ದಾಖಲಿಸಿದ್ದಾರೆ.

ಅವರೊಬ್ಬ ಮಹಾನ್ ಛಲವಾದಿ. ದೊಡ್ಡ ಕನಸುಗಾರ. ಕಂಡ ಕನಸನ್ನು ಕಾರ್ಯ ರೂಪಕ್ಕೆ ಇಳಿಸುವ ಒಬ್ಬ ವಾಸ್ತವ ಜೀವಿ. ಇದರಿಂದಲೇ ಸಂಘಟನೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ಹಲವನ್ನು ಸಾದಿಸಲು ಸಾಧ್ಯವಾಯಿತು. ಒಂದು ನಿರ್ದಿಷ್ಟ ಉದ್ದೇಶವನ್ನು ಮನಗಂಡು ಯೋಜನಾಬದ್ಧವಾಗಿ ಯೋಜನೆಯನ್ನು ರೂಪಿಸಿ, ಅದನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಿ ಯೋಜಿತ ಫಲವನ್ನು ಅವರು ಖಂಡಿತಾ ಪಡೆಯುತ್ತಾರೆ. ಅವರು ಕಟ್ಟಿದ ಸಂಘಟನೆಗಳು ಬೆಳೆದ ರೀತಿಯಲ್ಲಿ ಇದನ್ನು ಗಮನಿಸಬಹುದಾಗಿದೆ. ಯಕ್ಷಗಾನ ಕಲಾಕ್ಷೇತ್ರ, ಬೈದ್ಯಶ್ರೀ, ಶನಿಪೂಜಾ ಸಮಿತಿ, ಕೆಮ್ಮಲಜೆ ಪ್ರಕಾಶನ ಇತ್ಯಾದಿ ಸಂಸ್ಥೆಗಳ ಸಾಧನೆಗಳನ್ನು ಅವಲೋಕಿಸಿದಾಗ ಈ ವಿಚಾರ ಸ್ಪಷ್ಟವಾಗುತ್ತದೆ. ಅವರ ಪ್ರಕಟನೆಗಳು ಹಲವು ಮುದ್ರಣಗಳನ್ನು ಕಾಣಲು ಅವರ ಯೋಜನೆ ಮತ್ತು ಛಲಗಳೇ ಮುಖ್ಯ ಕಾರಣವಾಗಿದೆ.

ನೇರಮಾತು, ಹರಿತ ನಾಲಗೆ ಅವರ ವ್ಯಕ್ತಿತ್ವದಲ್ಲಿ ಎದ್ದು ಕಾಣುವ ಗುಣಗಳು. ಅಮ್ಮನಿಗೆ ಕೊನೆಯ ಮಗನಾದುದರಿಂದ ಅವರ ನಾಲಗೆಗೆ ಸರಿಯಾಗಿ ಬಜೆ (ಮಕ್ಕಳಿಗೆ ನಾಲಗೆ ಚುರುಕಾಗಲು ಬಾಲ್ಯದಲ್ಲಿ ನಾಲಗೆಗೆ ತಿಕ್ಕುವ ಬೇರು ಮದ್ದು) ತಿಕ್ಕಿದ್ದಾಳೆಂದು ಅವರ ಗೆಳೆಯರು ಅವರ ಹರಿತ ನಾಲಗೆಯನ್ನು ಕಂಡು ಕುಹಕವಾಡುವುದಿದೆ! ಅಸತ್ಯ, ಅನೀತಿ, ಉದಾಸೀನತೆಯನ್ನು ಕಂಡಾಗ ಅವರು ಉರಿದು ಬೀಳುವುದುಂಟು. ಹೇಳಬೇಕಾದುದನ್ನು ನೇರವಾಗಿ ಹೇಳುವುದು ಅವರ ಜಾಯಮಾನ. ಯಾವುದೇ ಕೆಲಸವು ಶಿಸ್ತುಬದ್ಧವಾಗಿ ನಡೆಯದೆ ಕಾಟಾಚಾರಕ್ಕಾಗಿ ನಡೆದಾಗ ಅದನ್ನು ಎದುರಿನಲ್ಲಿಯೇ ಖಂಡಿಸುವ ದಿಟ್ಟತನ ಅವರದು. ಇದರಿಂದ ಮಂತ್ರಿಗಳು, ಶಾಸಕರು ಅವರ ತರಾಟೆಗೆ ಒಳಗಾದುದಿದೆ. ಇದರಿಂದಾಗಿ ಅವರು ಹಲವನ್ನು, ಹಲವರನ್ನು ಕಳೆದುಕೊಂಡಿದ್ದಾರೆ. ಆದರೆ ಅವರ ಈ ಗುಣವನ್ನು ಮುಕ್ತಕಂಠದಿಂದ ಪ್ರಶಂಸಿಸುವ ಹಲವರು ಅವರ ಗೆಳೆತನದಲ್ಲಿದ್ದಾರೆ.

ಹಾಗೆಂದು ಅವರು ಸ್ನೇಹಜೀವಿ. ಕಿರಿಯರನ್ನು ತಮಾಷೆ ಮಾಡುತ್ತಲೇ ಬೆನ್ನ ತಟ್ಟುತ್ತಾ ಅವರಿಗೆ ಮಾರ್ಗದರ್ಶನ ಮಾಡುವ ರೀತಿ ಅಪೂರ್ವವಾದುದು. ಇದರಿಂದಲೇ ಅವರು ಹಲವು ಸಂಘಟಕರನ್ನು ಬೆಳೆಸಿದ್ದಾರೆ. ಇಂದೂ ಅವರ ಅಣತಿಯಂತೆ ದುಡಿಯುವ, ಅವರು ಕರೆದಾಗ ಬರುವ ಕಾರ್ಯಕರ್ತರ ಪಡೆಯು ಇದೆ. ಅವರು ಸಂಘಟನೆಗಳನ್ನು ಮುನ್ನಡೆಸಲು ಅವರ ಈ ಗುಣವೇ ಪ್ರಧಾನ ಕಾರಣವಾಗಿದೆ. ಹಾಸ್ಯದಿಂದಲೇ ವ್ಯಂಗ್ಯ ವಿಡಂಬನೆ ಮಾಡುತ್ತಾ ಕಿರಿಯರನ್ನು ತಿದ್ದುವ ಕ್ರಮ ವಿಶಿಷ್ಟವಾದುದು. ಅಮೀನರು ಹಾಗಲಕಾಯಿಯಂತೆ ಕಹಿ. ಆದರೆ ತಿಂದರೆ ಆರೋಗ್ಯಕ್ಕೆ ಅಮೃತ. ಅವರ ನೇರ ನಡೆನುಡಿ ಕೆಲವೊಮ್ಮೆ ಮುಜುಗರ ವನ್ನು ತರಬಹುದಾದರೂ ಅದರಿಂದ ಸಿಗುವ ಮಾರ್ಗದರ್ಶನದಿಂದ ಕಿರಿಯರು ಬೆಳೆಯುವ ರೀತಿ ಅಪೂರ್ವವಾದುದು.

ಸರಳತೆ ಅವರ ಬದುಕಿನ ಪ್ರಧಾನ ಗುಣ. ಇಂದೂ ತುಳುನಾಡಿನ ಸರಳ ಉಡುಗೆ ಯನ್ನು ಅವರು ತೊಡುತ್ತಾರೆ. ಹೇಳಿದಂತೆ ಬದುಕುವ ಆದರ್ಶವಾದಿ ಅವರು. ಇದರಿಂದಲೇ ಅವರಿಗೆ ಅನುಕರಣೆ-ಕಪಟಗಳನ್ನು ಕಂಡಾಗ ಸಿಟ್ಟು ಬರುತ್ತದೆ. ಆಡಂಬರದ ಜೀವನಕ್ಕೆ ಎಂದೂ ಮಾರುಹೋದವರಲ್ಲ. ಹರಿತ ನಾಲಗೆ, ಸರಳ ನೇರನುಡಿ, ನಿಷ್ಕಲ್ಮಶ ಮನಸ್ಸಿನ, ತೀಕ್ಷ್ಣಬುದ್ಧಿಯ, ಸದಾ ಆತ್ಮೀಯತೆಯನ್ನು ತೋರುವ, ಭಾವನಾತ್ಮಕ ವ್ಯಕ್ತಿತ್ವ ಅವರದು. ಇದರಿಂದಲೇ ತುಳುನಾಡು ಮತ್ತು ಮುಂಬಯಿಗಳಲ್ಲಿ ಸಾವಿರಾರು ಸ್ನೇಹಿತರನ್ನು ಗಳಿಸಿಕೊಂಡಿದ್ದಾರೆ. ಅವರ ವ್ಯಕ್ತಿತ್ವದ ಹಲವು ಮುಖಗಳು ಅವರ ಸಂಘಟನೆ ಮತ್ತು ಬರಹಗಳಲ್ಲಿ ವ್ಯಕ್ತವಾಗಿವೆ.

ಸಂಘಟನೆ

ಬನ್ನಂಜೆ ಬಾಬು ಅಮೀನರು ಅದ್ಭುತ ಸಂಘಟಕರೆಂದು ಹೆಸರು ಗಳಿಸಿದವರು. ಅವರು ಕಟ್ಟಿದ ಹಲವು ಸಂಘಟನೆಗಳು ಇಂದು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿವೆ. ಇದಕ್ಕೆ ಅವರು ಸಂಘಟನೆಯನ್ನು ರೂಪಿಸಿದ ರೀತಿಯೇ ಕಾರಣವಾಗಿದೆ. ಸ್ಪಷ್ಟ ಉದ್ದೇಶ, ಕ್ರಮಬದ್ಧ ಯೋಜನೆ, ನಿರಂತರ ಚಟುವಟಿಕೆಗಳು ಆ ಸಂಘಟನೆಗಳನ್ನು ಕ್ರಿಯಾಶೀಲ ಗೊಳಿಸಿವೆ. ಅವರು ಕಟ್ಟಿದ ಸಂಘಟನೆಗಳ ಸ್ವರೂಪ ಮತ್ತು ಅವರು ಅದನ್ನು ಕಟ್ಟಿದ ರೀತಿಯನ್ನು ಗಮನಿಸಿದಾಗ ಈ ಅಂಶ ಸ್ಪಷ್ಟವಾಗುತ್ತದೆ.

ಕಲಾಕ್ಷೇತ್ರ

ಯಕ್ಷಗಾನ ಕಲಾಕ್ಷೇತ್ರಕ್ಕೆ ಉಡುಪಿಯಲ್ಲಿ ಭಾರಿ ಮನ್ನಣೆಯಿದೆ. ಯಕ್ಷಗಾನ ಕಲೆಗೆ ಕಲಾಕ್ಷೇತ್ರವು ಸಲ್ಲಿಸಿದ ಸೇವೆಯು ಅನುಪಮವಾದುದು. 1964ರಲ್ಲಿ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ಜಂಗಮ ಮಠದ ಹೆಬ್ಬಾಗಿಲಿನ ಮಾಳಿಗೆಯಲ್ಲಿ ಸ್ಥಾಪನೆಗೊಂಡು ಬೆಳೆಯಿತು. ಯಕ್ಷಗಾನ ತಾಳಮದ್ದಳೆಯ ಮೂಲಕ ಯಕ್ಷಗಾನದ ಆಸಕ್ತಿಯನ್ನು ಉಳಿಸಿ ಬೆಳೆಸುವುದು ಕಲಾಕ್ಷೇತ್ರದ ಆರಂಭದ ಉದ್ದೇಶವಾಗಿತ್ತು. ನಂತರ ಯುವಕರಿಗೆ ತರಬೇತು ನೀಡಿ ಹವ್ಯಾಸಿ ಯಕ್ಷಗಾನ ಕೂಟವನ್ನು ಅದು ಬೆಳೆಸಿತು. ಅದೇ ವರ್ಷ ಬನ್ನಂಜೆ ಬಾಬು ಅಮೀನರು ಯಕ್ಷಗಾನ ಕಲಾರಂಗದ ಸದಸ್ಯರಾದರು.

ಯಕ್ಷಗಾನ ಕಲಾರಂಗದ ಬಗ್ಗೆ ಬನ್ನಂಜೆಯವರಿಗೆ ಅಪರಿಮಿತವಾದ ಅಭಿಮಾನ. ಅದಕ್ಕೆ ಅವರು ಕೊಡುವ ಕಾರಣ ’ಯಕ್ಷಗಾನ ಕಲಾರಂಗವು ನನ್ನ ನಾಲಗೆಯನ್ನು ಚುರುಕುಗೊಳಿಸಿದೆ. ಅದನ್ನು ನಾನು ಮರೆಯಲಾರೆ’ ಇದರಿಂದಲೇ ಕಳೆದ ಐದು ದಶಕಗಳಿಂದ ಅದರೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಅದನ್ನು ಬೆಳೆಸಿದ್ದಾರೆ.

1964ರಲ್ಲಿ ಎಳೆಯರ ತಂಡದ ಸ್ತ್ರೀ ಪಾತ್ರಧಾರಿ ಆದಿ ಉಡುಪಿಯ ಬೊಗ್ಗಪ್ಪ ಕುಂದರ್ ಅವರು ಬನ್ನಂಜೆ ಬಾಬು ಅಮೀನರನ್ನು ಕಲಾಕ್ಷೇತ್ರಕ್ಕೆ ಪರಿಚಯಿಸಿದರು. ಸಂಸ್ಥೆಯ ಸದಸ್ಯರಾದ ಅಮೀನರು ಬಹುಬೇಗನೆ ಪ್ರಬುದ್ಧ ಹವ್ಯಾಸಿ ಯಕ್ಷಗಾನ ಅರ್ಥಧಾರಿ ಯಾದರು. ಆಗ ಯಕ್ಷಗಾನ ಕಲಾಕ್ಷೇತ್ರದ ನೇತೃತ್ವದಲ್ಲಿ ’ಬೈದರ್ಕಳ ಪ್ರತಾಪ’ ತುಳು ತಾಳಮದ್ದಳೆ ಕೂಟವು ವಿದಿವತ್ತಾಗಿ ಹರಕೆಯ ರೂಪದಲ್ಲಿ ಭಕ್ತರ ಬೇಡಿಕೆಯಂತೆ ಜರಗುತ್ತಿದ್ದವು. ಸಂಸ್ಥೆಯ ಸ್ಥಾಪಕರಲ್ಲೋರ್ವರಾದ ಎಮ್. ಶೇಷ ಅಮೀನರು ಪೂಜಾ ಕೆಲಸಗಳನ್ನು ನಡೆಸುತ್ತಿದ್ದರು. ಅವರ ಬಳಿಕ ಆ ಜವಾಬ್ದಾರಿಯು ಬನ್ನಂಜೆ ಬಾಬು ಅಮೀನರ ಪಾಲಿಗೆ ಬಂತು. ಮುಂದೆ ಅಮೀನರು ತಾಳಮದ್ದಳೆಯ ಪ್ರಧಾನ ಪಾತ್ರವಾದ ಕೋಟಿಯ ಪಾತ್ರವನ್ನು ವಹಿಸಿ ಜನಮನ್ನಣೆ ಗಳಿಸುವ ಮಟ್ಟಕ್ಕೆ ಬೆಳೆದರು. ಮುಂದೆ ಕಲಾರಂಗದಿಂದ ರಚಿಸಲ್ಪಟ್ಟ ’ಕೋಟಿ-ಚೆನ್ನಯ’ ಯಕ್ಷಗಾನ ಅರ್ಥಸಹಿತ ಕೃತಿ ರಚನೆಯಲ್ಲಿ ಪ್ರಧಾನ ಪಾತ್ರ ವಹಿಸಿದರು. ಕೋಟಿಚೆನ್ನಯರ ಕಥೆ ಮತ್ತು ಪಾಡ್ದನದಲ್ಲಿ ಬರುವ ಸನ್ನಿವೇಶಗಳು ವ್ಯತ್ಯಾಸಗಳನ್ನು ಗುರುತಿಸಿ ’ವೀರ ಕೋಟಿ ಚೆನ್ನಯ’ ಕೃತಿಯನ್ನು ರಚಿಸಿದರು.

ಅರ್ಥಗಾರಿಕೆಯೊಂದಿಗೆ ಕುಣಿತವನ್ನು ಅವರು ಅಭ್ಯಾಸ ಮಾಡಿದರು. ಯಕ್ಷಗಾನದ ಚುರುಕು ನಡೆ ಅವರಿಗೆ ಕಷ್ಟವಾದರೂ ಗತ್ತಿನ ನಡೆಯಿಂದ ವೇಷಗಾರಿಕೆಯಲ್ಲಿ ಮಿಂಚಿದರು. ಸುಲೋಚನ, ಬೀಮ, ಸುರಥ, ಧರ್ಮರಾಯ, ಶತ್ರುಘ್ನ, ವೀರಮಣಿ ಮೊದಲಾದ ಪೌರಾಣಿಕ ಪಾತ್ರಗಳನ್ನು ಅಭಿನಯಿಸಿ ಮೆಚ್ಚುಗೆ ಪಡೆದರು. ಅವರ ಪ್ರಸಿದ್ಧ ಕೋಟಿಯ

ಪಾತ್ರವು ಭಾವುಕ ರಸಿಕರ ಮನಸೆಳೆಯಿತು. ವೇಷಧಾರಿಯಾಗಿ, ಅರ್ಥಧಾರಿಯಾಗಿ, ವಿವಿಧ ಸಂಘಟನೆಗಳ ಪದಾದಿಕಾರಿಯಾಗಿ ಅವರು ಯಕ್ಷಗಾನ ಕಲಾಕ್ಷೇತ್ರದ ಬೆಳವಣಿಗೆಗೆ ಕಾರಣರಾದರು. ಇತರ ಸದಸ್ಯರಿಗೂ ಅದಿಕಾರಕ್ಕೆ ಬರಲು ಪ್ರೋತ್ಸಾಹಿಸುತ್ತಿದ್ದುದು ಅವರ ಮಹತ್ವದ ಗುಣವೆಂದು ಸ್ನೇಹಿತರು ಗುರುತಿಸುತ್ತಾರೆ.

1976ರಲ್ಲಿ ನಡೆದ ಕಲಾಕ್ಷೇತ್ರದ ರಜತ ಮಹೋತ್ಸವ ಕಾರ್ಯಕ್ರಮಗಳಲ್ಲಿ ಅವರ ಶ್ರಮ ಅಪಾರವಾದುದು. ಡಾ. ಶಿವರಾಮ ಕಾರಂತ ಮೊದಲಾದ ದಿಗ್ಗಜರನ್ನು ಕರೆಸಿ ವಿಚಾರಗೋಷ್ಠಿ, ಬಯಲಾಟಗಳನ್ನು ನಡೆಸಿ, ’ರಜತ ಕುಸುಮ’ ಸಂಚಿಕೆಯನ್ನು ಪ್ರಕಟಿಸುವಲ್ಲಿ ಅವರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. 1977ರಲ್ಲಿ ಉದ್ಯೋಗದ ಕಾರಣದಿಂದ ಮುಂಬಯಿ ಸೇರುವವರೆಗೆ ಅವರು ಕಲಾಕ್ಷೇತ್ರದ ಪ್ರಗತಿಗಾಗಿ ದುಡಿದರು. ಆ ಬಳಿಕವೂ ಅದರೊಂದಿಗೆ ಪರೋಕ್ಷ ಸಂಬಂಧವನ್ನು ಇಟ್ಟುಕೊಂಡಿದ್ದಾರೆ.

ಬಾಬು ಅಮೀನರು ಮತ್ತೆ ಕಲಾಕ್ಷೇತ್ರದಲ್ಲಿ ಕ್ರಿಯಾಶೀಲರಾದುದು ಅವರು ಮುಂಬಯಿಯಿಂದ ಮರಳಿದ ಬಳಿಕ, ಅದು ಕಲಾಕ್ಷೇತ್ರದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ. ಬಾಬು ಅಮೀನರು ಹುಟ್ಟೂರಿಗೆ ಮರಳುವ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಬಂದುದರಿಂದ ಅವರನ್ನು ಸಮಿತಿಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.

ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಗುಂಡಿಬೈಲಿನಲ್ಲಿ ಕಲಾಕ್ಷೇತ್ರದ ಅಧ್ಯಕ್ಷರಾದ ದಿ† ಚನಿಲಪ್ಪ ಸನಿಲರು ನಿಧನರಾದರು. ಆದರೂ ಬಾಬು ಅಮೀನರು ಎದೆಗುಂದದೆ ಎಲ್ಲರನ್ನೂ ಹುರಿದುಂಬಿಸಿ ಈ ಕಾರ್ಯವನ್ನು ಮುನ್ನಡೆಸಿದರು. ಇದರಿಂದ ಸುವರ್ಣ ಮಹೋತ್ಸವದ ಸಭಾಭವನದ ಕನಸು 2001 ಮೇ 12ರಂದು ಸಾಕಾರಗೊಂಡಿತು. ಅದ್ದೂರಿಯ ಜೋಡಾಟದೊಂದಿಗೆ ಯಕ್ಷಗಾನ ಕ್ಷೇತ್ರದ ದಿಗ್ಗಜಗಳ ಸಮಾವೇಶ ನಡೆದು ಕಲಾಕ್ಷೇತ್ರದ ಇತಿಹಾಸದಲ್ಲಿ ಮಹತ್ವದ ಘಟನೆಯಾಯಿತು. ಇಂದಿಗೂ ಯಕ್ಷಗಾನ ಕಲಾಕ್ಷೇತ್ರದ ಚಟುವಟಿಕೆಗಳಲ್ಲಿ ನಿರಂತರ ಸಂಬಂಧವನ್ನು ಇಟ್ಟುಕೊಂಡಿದ್ದ್ಜಾರೆ. ಇಂದು ಯಕ್ಷಗಾನ ತರಬೇತಿ ನೀಡುವ ಮೂಲಕ ಕಲಾಕ್ಷೇತ್ರವು ಮುನ್ನಡೆಯುತ್ತಿದೆ. ಕಲಾಕ್ಷೇತ್ರದ ಸಂಘಟನೆಯಲ್ಲಿ ಬಾಬು ಅಮೀನರ ಕೊಡುಗೆ ಸದಾ ಸ್ಮರಣೀಯವಾದುದು ಎಂಬುದನ್ನು ಕಲಾಕ್ಷೇತ್ರದ ಹಿರಿಯ-ಕಿರಿಯರು ಸದಾ ನೆನಪಿಸುತ್ತಾರೆ.

ಬೈದ್ಯಶ್ರೀ

ಆದಿ ಉಡುಪಿಯ ಬೈದ್ಯಶ್ರೀ ಕಟ್ಟಡದಲ್ಲಿ ಇಂದು ಕ್ರಿಯಾಶೀಲವಾಗಿರುವ ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನ ಕಳೆದ ಎರಡು ದಶಕಗಳಲ್ಲಿ ಬೈದರ್ಕಳ ಬಗ್ಗೆ ನಡೆಸಿದ ಚಟುವಟಿಕೆಗಳು ಗಮನಾರ್ಹವಾದುದು. ಇದು ಬನ್ನಂಜೆ ಬಾಬು ಅಮೀನರ ಕನಸಿನ ಕೂಸು. ವಿಶ್ವವಿದ್ಯಾನಿಲಯದ ಶಿಕ್ಷಣ ಪಡೆಯದಿದ್ದರೂ ಸಾಂಸ್ಕೃತಿಕ ಸಂಶೋಧನೆಯ ಅಗತ್ಯವನ್ನು ಅಮೀನರು ಮನಗಂಡಿರುವುದು ಅಪೂರ್ವವಾಗಿದೆ. ಅವರು ಸಾಂಪ್ರದಾಯಿಕ ಸಂಶೋಧಕರಾದರೂ ಸಂಶೋಧನೆಗೊಂದು ಸಂಸ್ಥೆಯ ಅಗತ್ಯವನ್ನು ಮನಗಂಡರು. ಅದರ ಫಲವೇ ಪ್ರತಿಷ್ಠಾನವು ಸ್ಥಾಪನೆಯಾಯಿತು.

1982ರಲ್ಲಿ ಅಮೀನರಿಗೆ ಗರೋಡಿಗಳ ಅಧ್ಯಯನದ ಆಸಕ್ತಿಯುಂಟಾಯಿತು. ತುಳುನಾಡಿನ ಉದ್ದಗಲಕ್ಕೂ ಹರಡಿದ ಸುಮಾರು 214 ಗರೋಡಿಗಳ ವಿವರಗಳನ್ನು ಅವರು ಸಂಗ್ರಹಿಸಲು ನಿರ್ಧರಿಸಿದರು. ಮುಂಬಯಿಯಲ್ಲಿದ್ದರೂ ಊರಿನಲ್ಲಿರುವ ಆಸಕ್ತ ಸ್ನೇಹಿತರ ಸಹಾಯದಿಂದ ಮಾಹಿತಿ ಸಂಗ್ರಹಿಸಲು ನಿರ್ಧರಿಸಿದರು. ಸಮಗ್ರವಾದ ಮಾಹಿತಿಗಳನ್ನು ಸಂಗ್ರಹಿಸಿದರು. ಇದೇ ಸಂದರ್ಭದಲ್ಲಿ ಸಂಶೋಧನೆಗಾಗಿ ಸಂಸ್ಥೆಯೊಂದರ ಅಗತ್ಯವನ್ನು ಮನಗಂಡರು. ಈ ಅಧ್ಯಯನ ಕೇಂದ್ರದ ಆಲೋಚನೆ ಅವರ ಮನಸ್ಸಿನಲ್ಲಿ ಮೂಡಿತು. ಕೇಂದ್ರದ ಸ್ಥಾಪನೆ ಅಮೀನರಿಂದಲೇ ಆಯಿತು ಎಂಬುದು ಇದರ ಅರ್ಥವಲ್ಲ. ನೂರಾರು ಮಹನೀಯರು ಇದರಲ್ಲಿ ಕೈಜೋಡಿಸಿದ್ದಾರೆ. ಆದರೆ ಈ ಯೋಜನೆಯ ಕನಸನ್ನು ಕಂಡು ಸ್ಥಾಪನೆಗೆ ಕಾರಣರಾದವರು ಅಮೀನರು. ಇದರಿಂದಲೇ ವಿದ್ವಾಂಸರಾದ ಪ್ರೊ. ಮೋಹನ್ ಕೋಟ್ಯಾನರು ಬನ್ನಂಜೆ ಬಾಬು ಅಮೀನರು ಶೂನ್ಯದಿಂದ ಸೃಷ್ಟಿಸಿದ ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಪ್ರತಿಷ್ಠಾನವೆಂದು ಅರ್ಥಪೂರ್ಣವಾಗಿ ಹೇಳಿದ್ದಾರೆ.

ಅಮೀನರು ತಮ್ಮ ಕನಸನ್ನು ಸುತ್ತಲಿನವರಲ್ಲಿ ಹೇಳಿದಾಗ ಹಾಸ್ಯ ಮಾಡಿದವರುಂಟು. ಆಶ್ಚರ್ಯ ಪಟ್ಟವರುಂಟು. ಯಾವುದೇ ಪರಿಸರ-ಸಂಪನ್ಮೂಲಗಳಿಲ್ಲದೆ ಇದು ಸಾಧ್ಯವೇ? ಎಂದು ಪ್ರಶ್ನಿಸಿದವರುಂಟು. ಎಲ್ಲರನ್ನೂ ಸೇರಿಸಿ 15 ಜನರ ಟ್ರಸ್ಟ್ ರಚನೆ ಮಾಡಿ, ಕೇಂದ್ರದ ಸ್ಥಾಪನೆಗೆ ಕಾರಣರಾದರು. ಅವರ ಅವಿರತ ಶ್ರಮ ಮತ್ತು ಛಲಕ್ಕೆ ಇದು ಅತ್ಯುತ್ತಮ ಉದಾಹರಣೆ.

ಹಲವು ಮಂದಿ ಮಹನೀಯರು ಕೇಂದ್ರದ ರಚನೆ ಮತ್ತು ಬೆಳವಣಿಗೆಗೆ ಸಹಾಯ ಮಾಡಿದ್ದಾರೆ. ಮುಂಬಯಿಯ ಉದ್ಯಮಿ ಶ್ರೀ ಉಮೇಶ್ ಬಿ. ಸನಿಲ್, ಉದ್ಯಮಿಗಳಾದ ಶ್ರೀ ಯು. ನಾರಾಯಣ, ಲೋಕಸಭಾ ಸದಸ್ಯರಾದ ಶ್ರೀ ವಿನಯಕುಮಾರ್ ಸೊರಕೆ, ವಿಧಾನಸಭಾ ಸದಸ್ಯರಾದ ಶ್ರೀ ಯು.ಆರ್. ಸಭಾಪತಿ ಇನ್ನೂ ಹಲವು ಹಿರಿಯ-ಕಿರಿಯರು ಸಂಸ್ಥೆಯನ್ನು ಕಟ್ಟುವಲ್ಲಿ ಶ್ರಮಿಸಿದ್ದ್ಜಾರೆ. ಇಂದೂ ಶ್ರಮಿಸುತ್ತಿದ್ದಾರೆ. ಈ ಕನಸನ್ನು ಬಿತ್ತಿ ಸಾಕಾರಗೊಳಿಸುವಲ್ಲಿ ಅಮೀನರ ಪಾತ್ರವನ್ನು ಎಲ್ಲರೂ ಸ್ಮರಿಸುತ್ತಾರೆ.

1985ರಲ್ಲಿ ಸಂಸ್ಥೆಯು ಪ್ರಕಟಿಸಿದ ’ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ’ ಬೃಹತ್ ಕೃತಿಯು ಗರೋಡಿಗಳ ಅಧ್ಯಯನದ ದೃಷ್ಟಿಯಿಂದ ಮೊದಲ ಮಹತ್ವದ ಕೃತಿ. ಕೃತಿ ಪ್ರಕಟನೆಗಾಗಿ ಪ್ರತಿಷ್ಠಾನವು ಸಮಿತಿಯನ್ನು ರಚಿಸಿತು. ಬನ್ನಂಜೆ ಬಾಬು ಅಮೀನ್ ಹಾಗೂ ಪ್ರೊ. ಮೋಹನ್ ಕೋಟ್ಯಾನರು ಬರಹಗಾರರಾದರು. ಇವರಿಬ್ಬರ ಶ್ರಮದ ಫಲವಾಗಿ ಈ ಬೃಹತ್ ಆಕರಗ್ರಂಥವು ಪ್ರಕಟವಾಯಿತು. ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿಯಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿಯೂ ದೊರೆಯಿತು. ಬಳಿಕ ’ಕೋಟಿಚೆನ್ನಯ ಪಾರ್ದನ ಸಂಪುಟ’ವೆಂಬ ಅತ್ಯುತ್ತಮ ಗ್ರಂಥವೂ ಪ್ರಕಟವಾಗಿದೆ.

ಬೈದ್ಯಶ್ರೀ ಅಧ್ಯಯನ ಕೇಂದ್ರವು ಇಂದೂ ಕ್ರಿಯಾಶೀಲವಾಗಿದೆ. ತುಳುನಾಡ ಕಣ್ಮಣಿಗಳಾದ ಕೋಟಿ-ಚೆನ್ನಯರ ಕುರಿತಾಗಿ ಇಂದೂ ಅಧ್ಯಯನ-ಸಂಶೋಧನೆಗಳು ನಡೆಯುತ್ತಿವೆ. ವಿಚಾರಗೋಷ್ಠಿ, ಶಿಬಿರಗಳು ನಡೆಯುತ್ತಿವೆ. ಪ್ರತಿಷ್ಠಿತ ಬೈದ್ಯಶ್ರೀ ಪ್ರಶಸ್ತಿಯನ್ನು ನೀಡುತ್ತಿದೆ. ಸಮರ್ಥ ಕಾರ್ಯಕರ್ತರು ಇಂದೂ ಮುನ್ನಡೆಸುತ್ತಿದ್ದಾರೆ. ಕೋಟಿ ಚೆನ್ನಯ ಥಿಂ ಪಾರ್ಕ್ ಬೃಹತ್ ಯೋಜನೆಯ ಬೈದ್ಯಶ್ರೀಯ ಕನಸು ಸಾಕಾರಗೊಳ್ಳುತ್ತಿದೆ. ಇದೆಲ್ಲದರ ಪ್ರೇರಣೆ ಬನ್ನಂಜೆ ಬಾಬು ಅಮೀನರು. ಬೈದ್ಯಶ್ರೀಯ ಬೆಳವಣಿಗೆಯಲ್ಲಿ ಅವರ ಕೊಡುಗೆ ಯನ್ನು ಗಮನಿಸಬೇಕಾಗಿದೆ.

ಕೆಮ್ಮಲಜೆ

ಕೆಮ್ಮಲಜೆ ಜಾನಪದ ಪ್ರಕಾಶನ ಜಾನಪದ ಗ್ರಂಥ ಪ್ರಕಾಶನದ ದೃಷ್ಟಿಯಿಂದ ಗಮನಿಸಬೇಕು. 2002ರಲ್ಲಿ ಬನ್ನಂಜೆ ಬಾಬು ಅಮೀನರು ತಮ್ಮ ಗ್ರಂಥಗಳನ್ನು ಪ್ರಕಟಿಸುವ ದೃಷ್ಟಿಯಿಂದ ಸ್ಥಾಪಿಸಿದ ಸಂಸ್ಥೆ. ಇಂದು ಕೆಮ್ಮಲಜೆ ಪ್ರಕಾಶನವು ಕೇವಲ ಪ್ರಕಾಶನ ಸಂಸ್ಥೆಯಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ. ಜಾನಪದ ವಿಚಾರಗಳ ವೇದಿಕೆಯಾಗಿ ರೂಪುಗೊಳ್ಳುತ್ತಿದೆ. ಅದಕ್ಕೆ ವ್ಯಾಪಕ ರೂಪ ಕೊಡುವ ಪ್ರಯತ್ನವು ಬನ್ನಂಜೆ ಬಾಬು ಅಮೀನರ ಅಪೇಕ್ಷೆಯಂತೆ ನಡೆಯುತ್ತಿದೆ.

ಪ್ರಕಾಶನವು ಇದುವರೆಗೆ ಬನ್ನಂಜೆ ಬಾಬು ಅಮೀನರ ಹತ್ತು ಕೃತಿಗಳನ್ನು ಪ್ರಕಟಿಸಿದೆ. ’ಕೋಟಿಚೆನ್ನಯ’, ’ತುಳು ಜಾನಪದ ಆಚರಣೆಗಳು’, ’ದೈವಗಳ ಮಡಿಲಲ್ಲಿ’, ’ಉಗುರಿಗೆ ಮುಡಿಯಕ್ಕಿ’, ’ಪೂ ಪೊದ್ದೊಲು’, ’ಮಾನೆಚ್ಚಿ’, ’ನುಡಿಕಟ್ಟ್’, ’ತುಳುನಾಡ ದೈವಗಳು’ – ಈ ಕೃತಿಗಳಲ್ಲಿ ಹೆಚ್ಚಿನವು ಹಲವು ಮುದ್ರಣಗಳನ್ನು ಕಂಡಿವೆ. ಭೂತಾರಾಧನೆಯ ಕುರಿತಾದ ಬನ್ನಂಜೆ ಬಾಬು ಅಮೀನರ ಬೃಹತ್ ಕೃತಿಯೊಂದು ಕೆಮ್ಮಲಜೆ ಮೂಲಕ ಪ್ರಕಟನೆಗೆ ಸಿದ್ಧವಾಗಿದೆ.

ತುಳು ಸಾಹಿತ್ಯ – ಸಂಸ್ಕೃತಿಯು ಅಧ್ಯಯನದ ದೃಷ್ಟಿಯಿಂದ ಕೆಮ್ಮಲಜೆ ಪ್ರಕಾಶನದ ಕೃತಿಗಳು ಅಪೂರ್ವವಾಗಿವೆ. ಕೇವಲ ತನ್ನ ಕೃತಿಗಳು ಮಾತ್ರವಲ್ಲ ಇತರರ ಕೃತಿಗಳೂ ಪ್ರಕಟವಾಗ ಬೇಕು ಎಂಬ ಆಶಯ ಬನ್ನಂಜೆ ಬಾಬು ಅಮೀನರದು. ಈ ನಿಟ್ಟಿನಲ್ಲಿ ಯೋಜನೆಗಳು ಸಿದ್ಧವಾಗುತ್ತಿವೆ. ಕೆಮ್ಮಲಜೆ ಪ್ರಕಟನಾ ಕ್ಷೇತ್ರದಲ್ಲಿ ಬಾಬು ಅಮೀನರು ಪಡೆದ ಪರಿಣತಿಗೆ ಸಾಕ್ಷಿಯಾಗಿದೆ.

ಈ ಮೂರು ಸಂಸ್ಥೆಗಳು ಬನ್ನಂಜೆಯವರ ಯೋಜನಾಬದ್ಧ ಸಂಘಟನಾ ಕೌಶಲ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಇವುಗಳಲ್ಲದೆ ತಮ್ಮ ಯೌವನದಿಂದ ಇಂದಿನವರೆಗೂ ಹಲವಾರು ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಮಾರ್ಗದರ್ಶಕರಾಗಿ ದುಡಿದವರು ಅಮೀನರು. ಈಗಾಗಲೇ ಈ ವಿವರಗಳು ಅವರ ಬದುಕಿನ ವಿವೇಚನೆಯಲ್ಲಿ ಉಲ್ಲೇಖಿತವಾಗಿವೆ.

ಕೃತಿಗಳು

ಬನ್ನಂಜೆ ಬಾಬು ಅಮೀನರ ಕೃತಿಗಳನ್ನು ಮುಖ್ಯವಾಗಿ ಎರಡು ವರ್ಗಗಳಾಗಿ ವಿಂಗಡಿಸಬಹುದು. 1. ಸೃಜನಶೀಲ ಕೃತಿಗಳು 2. ಸಂಶೋಧನಾ ಕೃತಿಗಳು. ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲೂ ಅವರು ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿಗಳಲ್ಲಿ ಕಾಣುವ ಮಹತ್ವದ ವಿಚಾರವೆಂದರೆ ಅವರ ಅನ್ವಯಿಕ ದೃಷ್ಟಿಕೋನ. ಜಾನಪದ ಸಂಗ್ರಹ ಮಾತ್ರವಲ್ಲ ಸಂಶೋಧನೆ ಸಮಾಜಮುಖಿಯಾಗಿರಬೇಕು ಎಂಬುದು ಅವರ ಖಚಿತ ನಂಬಿಕೆ. ಈ ದೃಷ್ಟಿಕೋನವೇ ಅವರ ಕೃತಿಗಳ ಜನಪ್ರಿಯತೆಗೆ ಮುಖ್ಯ ಕಾರಣವಾಗಿದೆ. ಅವರ ಬಹುತೇಕ ಕೃತಿಗಳು ಹಲವು ಮುದ್ರಣಗಳನ್ನು ಕಂಡಿವೆ. ಅವರ ಬರವಣಿಗೆ ಮತ್ತು ಸಂಶೋಧನೆಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ಅವರ ಕೃತಿಗಳ ವಿಶ್ಲೇಷಣೆ ಬಹುಮುಖ್ಯವಾಗಿದೆ.

ಸಾಹಿತ್ಯ ಕೃತಿಗಳು

ಬನ್ನಂಜೆ ಬಾಬು ಅಮೀನರು ನಾಲ್ಕು ಸಾಹಿತ್ಯ ಗ್ರಂಥಗಳನ್ನು ರಚಿಸಿದ್ದಾರೆ. ಎರಡು ಕನ್ನಡ ಕೃತಿಗಳಾದರೆ, ಉಳಿದೆರಡು ತುಳು ಕೃತಿಗಳಾಗಿವೆ. ಒಂದು ಕೋಟಿಚೆನ್ನಯರ ಕುರಿತಾಗಿ ಪಾಡ್ದಾನಾಧಾರಿತ ಕಥಾನಕ. ಇನ್ನೊಂದು ’ಉಗುರಿಗೆ ಮುಡಿಯಕ್ಕಿ’ ಕಥಾಸಂಕಲನ. ’ಪೂ ಪೊದ್ದೊಲು’, ’ಮಾನೆಚ್ಚಿ’ ಎರಡು ತುಳು ಕಾದಂಬರಿಗಳು.

ಕೋಟಿಚೆನ್ನಯ

ಬನ್ನಂಜೆ ಬಾಬು ಅಮೀನರು 1982ರಲ್ಲಿ ಕೋಟಿಚೆನ್ನಯ ಕಥಾನಕದ ಕಿರು ಗ್ರಂಥವನ್ನು ಪ್ರಕಟಿಸಿದರು. ಇದು ಸಾಹಿತ್ಯಿಕವಾಗಿ ಅವರ ಚೊಚ್ಚಲ ಕೃತಿ. ಕೋಟಿಚೆನ್ನಯ ಪಾಡ್ದನವನ್ನು ಆಧರಿಸಿ ಕಟ್ಟಿದ ಕೋಟಿಚೆನ್ನಯರ ಸರಳ ನಿರೂಪಣೆಯ ಕೃತಿ ಇದಾಗಿದೆ. ಕೋಟಿಚೆನ್ನಯರ ಕಥೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಈ ಕೃತಿ ಸಹಕಾರಿಯಾಗಿದೆ. ಊರಿನಿಂದ ಮುಂಬಯಿಗೆ ಉದ್ಯೋಗಕ್ಕಾಗಿ ವಲಸೆ ಹೋದಾಗ ಜೊತೆಯಲ್ಲಿ ಪಾಡ್ದನಗಳ ಆಧಾರದಲ್ಲಿ ರಚಿಸಿದ ಕೃತಿಯನ್ನು ತೆಗೆದುಕೊಂಡು ಹೋದರು. ತಜ್ಞರ ಅಭಿಪ್ರಾಯ ಪಡೆದು ಮಿತ್ರರಿಂದ ಹದಿನೈದು ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಈ ಕೃತಿ ತುಳುನಾಡು ಮತ್ತು ಮುಂಬಯಿ ಎರಡೂ ಕಡೆಯೂ ಜನಪ್ರಿಯವಾಯಿತು. ’ಬಂಟರ ಸಂದಿ’ ಎಂದು ಕರೆಯಲ್ಪಡುವ ’ಕೋಟಿಚೆನ್ನಯ’ ಜನಪದ ಮಹಾಕಾವ್ಯದ ಸಂಕ್ಷಿಪ್ತ ಗದ್ಯರೂಪದ ಕಥಾನಕ ಇದಾಗಿದೆ.

ಈ ಕೃತಿಯ ಸರಳ ಸುಂದರ ನಿರೂಪಣೆ ನಮ್ಮ ಗಮನ ಸೆಳೆಯುತ್ತದೆ. ಕೋಟಿಚೆನ್ನಯರ ಹುಟ್ಟು, ಬೆಳವಣಿಗೆ, ಗರಡಿ ಸಾಧನೆ, ಪಡುಮಲೆ ಬಲ್ಲಾಳರ ಕನಸು, ಮೃಗಬೇಟೆ, ದೇಯಿಯ ವೃತ್ತಾಂತ, ಬಲ್ಲಾಳರ ಕಂಟಕ ಭಾದೆ ನಿವಾರಣೆ, ಕಂಬಳ ಪಾಲು ಸುಗ್ಗಿಯ ಕಂಬಳ – ಬುದ್ಧಿವಂತನ ವಧೆ, ಪಡುಮಲೆಯ ಗಡು, ಸಂಚಾರ, ಪಂಜದಲ್ಲಿ ಅಕ್ಕ ಕಿನ್ನಿದಾರು – ಬಾವ ಪಯ್ಯ ಬೈದ್ಯರ ಭೇಟಿ, ದಿಂಡುಮಲೆಯಲ್ಲಿ ಬಂದಿತರಾಗಿ ಬಳಿಕ ಪಾರಾಗುವುದು, ಕೆಮ್ಮಲಜೆಯ ನಾಗಬ್ರಹ್ಮ ಸ್ಥಾನಕ್ಕೆ ಹೋಗಿ ತಾಯಿ ಹೇಳಿದ ಹುಂಡಿ ಕಾಣಿಕೆ ಸಂದಾಯ, ಎಣ್ಮೂರು ದೇವಬಲ್ಲಾಳರ ಆಶ್ರಯ, ಮೃಗಬೇಟೆ, ಎಣ್ಮೂರು ಯುದ್ಧ – ಈ ಘಟನೆಗಳನ್ನು ವಿವಿಧ ಅಧ್ಯಾಯಗಳಲ್ಲಿ ರೋಚಕವಾಗಿ ಚಿತ್ರಿಸಿದ್ದಾರೆ.

ಬನ್ನಂಜೆಯವರ ಕಥನಶೈಲಿ ವಿಶಿಷ್ಟವಾಗಿದೆ. ಮನಮುಟ್ಟುವಂತಿದೆ. ಇದರಿಂದಲೇ ಈ ಪುಟ್ಟ ಕೃತಿ ಜನಪ್ರಿಯವಾಗಿದೆ. ಸರಳ, ಸುಲಭ, ಸುಂದರ ನಿರೂಪಣೆಯ ಗಮನ ಸೆಳೆಯುತ್ತದೆ. ಕಥೆಯಲ್ಲಿ ಸತ್ಯ-ಧರ್ಮದ ಪರಿಪಾಲನೆ – ದುಷ್ಟ ಶಿಕ್ಷೆಯ ಸಂದೇಶವನ್ನು ಕಥೆ ಉದ್ದಕ್ಕೂ ನಿರೂಪಿಸಲಾಗಿದೆ. ಸೂಕ್ತ ಗಾದೆಮಾತುಗಳು ಸಂದರ್ಭೋಚಿತವಾಗಿ ಬಂದಿದೆ. ಪ್ರಕೃತಿ ವರ್ಣನೆ, ವ್ಯಕ್ತಿ ಚಿತ್ರಗಳು ಎಲ್ಲವೂ ಆಕರ್ಷಕವಾಗಿ ಮೂಡಿಬಂದಿದೆ. ಉಪಮೆ-ರೂಪಕಗಳು ಮೋಹಕವಾಗಿ ಒಡಮೂಡಿದೆ. ಇವು ಕಥೆಗೆ ಸ್ವಾರಸ್ಯವನ್ನು ಒದಗಿಸಿದೆ. ಪಾಡ್ದನದ ಘಟನೆಗಳಂತೆ ಇಲ್ಲೂ ಕೋಟಿಚೆನ್ನಯರ ವ್ಯಕ್ತಿತ್ವ-ಸಿದ್ಧಾಂತಗಳನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದೆ. ವಿದ್ವಾಂಸರಾದ ಮುಂಬಯಿಯ ಡಾ. ಸುನೀತಾ ಶೆಟ್ಟಿಯವರು ಸುಂದರವಾದ ಮುನ್ನುಡಿಯನ್ನು ಬರೆದಿದ್ದಾರೆ. 1982ರಲ್ಲಿ ಮೊದಲ ಮುದ್ರಣವನ್ನು ಕಂಡ ಈ ಕೃತಿ 2006ರ ವರೆಗೆ ಒಟ್ಟು ಐದು ಮುದ್ರಣಗಳನ್ನು ಕಂಡಿರುವುದು ಕೃತಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇಂದೂ ಕೋಟಿಚೆನ್ನಯರ ಕಥೆಗಾಗಿ ಈ ಕೃತಿಯನ್ನು ಅನುಸರಿಸುವುದು ಈ ಕೃತಿಯ ಹೆಚ್ಚುಗಾರಿಕೆ. ಪಂಜೆ ಮಂಗೇಶರಾಯರು 1935ರಲ್ಲಿ ಗದ್ಯರೂಪದ ಕೋಟಿಚೆನ್ನಯರ ಕಥೆಯನ್ನು ಮೊದಲ ಬಾರಿಗೆ ಪ್ರಕಟಿಸಿದರು. ಪಂಜೆಯವರು ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕೃತಿಯನ್ನು ಬರೆದಿದ್ದಾರೆ. ಬಾಬು ಅಮೀನರು ಪ್ರೌಢರಿಗಾಗಿ ಈ ಕೃತಿಯನ್ನು ಬರೆದಿದ್ದಾರೆ. ಕಥಾನಕವು ಪಂಜೆಯವರಿಗಿಂತ ಹೆಚ್ಚು ಸ್ಪಷ್ಟವಾಗಿದೆ.

ಉಗುರಿಗೆ ಮುಡಿಯಕ್ಕಿ

ಇದು ಕನ್ನಡ ಸಣ್ಣ ಕಥೆಗಳ ಸಂಕಲನ. 2002 ಮತ್ತು 2003 ಹೀಗೆ ಎರಡು ಮುದ್ರಣಗಳನ್ನು ಕಂಡಿದೆ. ಒಂದು ರೀತಿಯಲ್ಲಿ ಬಾಬು ಅಮೀನರ ಕಥೆಗಳು ವಿಶಿಷ್ಟವಾಗಿವೆ. ಅವು ಜನಪದ ಕಥೆಗಳ ಮಾದರಿಯಲ್ಲಿವೆ. ಆದರೆ ಅವು ಸಂಗ್ರಹಿತ ಜನಪದ ಕಥೆಗಳಲ್ಲ. ಜನಪದ ವಸ್ತುಗಳನ್ನು ಆಯ್ದು ಜನಪದ ಕಥೆಗಳ ಮಾದರಿಯಲ್ಲಿ ರಚಿತ ಕಥೆಗಳು. ಈ ರೀತಿಯ ವಿಶಿಷ್ಟ ಶೈಲಿಯ ಕಥೆಗಳು ಅಪರೂಪ. ’’ತುಳುನಾಡಿನಲ್ಲಿ ಸತ್ಯಧರ್ಮ ಮೆರೆಯುತ್ತಿದ್ದ ಕಾಲ. ಜನರು ಪ್ರಾಮಾಣಿಕರಾಗಿದ್ದರು. ಇನ್ನೊಬ್ಬರ ಏಳಿಗೆಯನ್ನು ಬಯಸುತ್ತಿದ್ದರು. ಅನಿಷ್ಟಗಳಿಂದ ಅನರ್ಥ, ಅಂತಹುದನ್ನು ಮಾಡಬಾರದು ಎಂಬುದರ ಮೇಲೆ ನಂಬಿಕೆಯಿತ್ತು’’ ಎಂದು ನೀತಿಯನ್ನು ಹೇಳಿ ಕಥೆ ಆರಂಭವಾಗುತ್ತದೆ. ತುಳುನಾಡಿನ ಸಂಸ್ಕೃತಿಯ ಮೌಲ್ಯಗಳನ್ನು ಪ್ರತಿಪಾದಿಸುವುದರೊಂದಿಗೆ ಆ ಮೌಲ್ಯಗಳು ಕಳೆದು ಹೋಗುತ್ತಿರುವುದರ ಬಗ್ಗೆ ವ್ಯಂಗ್ಯವಿದೆ. ಒಂದು ರೀತಿಯಲ್ಲಿ ತುಳುನಾಡಿನ ಬದುಕಿನಲ್ಲಿ ಆಗುತ್ತಿರುವ ಸ್ಥಿತ್ಯಂತರವನ್ನು ಕಥೆಗಳು ವಿಶ್ಲೇಷಿಸುತ್ತವೆ. ಇದರಿಂದ ವಿದ್ವಾಂಸರಾದ ದಿ† ರಾಮಚಂದ್ರ ಉಚ್ಚಿಲರು ಹೇಳಿದಂತೆ ಈ ಕಥೆಗಳು ತುಳುವರ ಸಂಸ್ಕೃತಿಯ ಚರಿತ್ರೆಯೂ ಆಗಿದೆ ಎಂಬುದು ಒಪ್ಪತಕ್ಕ ಮಾತಾಗಿದೆ.

‘ಉಗುರಿಗೆ ಮುಡಿಯಕ್ಕಿ’ ಕಥೆಯನ್ನು ಇದಕ್ಕೆ ಉದಾಹರಿಸಬಹುದು. ಶ್ರೀಮಂತನ ಮನೆಗೆ ಕಳ್ಳನೊಬ್ಬ ಕನ್ನ ಹಾಕುತ್ತಾನೆ. ಧಾನ್ಯ ಕದಿಯುವ ಸಂದರ್ಭದಲ್ಲಿ ಧಾನ್ಯಗಳ ಮಧ್ಯೆ ಅವನ ಉಗುರು ಚಿವುಟಿ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ಉಗುರನ್ನು ಹುಡುಕುತ್ತಾ ಬೆಳಗಿನವರೆಗೆ ಮನೆಬಾಗಿಲಲ್ಲಿ ತಡಕಾಡುತ್ತಾ ಇರುವಾಗ ಮನೆಯ ಯಜಮಾನನ ಕಣ್ಣಿಗೆ ಬೀಳುತ್ತಾನೆ. ಮನೆಯ ಯಜಮಾನನು ಗದರಿಸಿದಾಗ ಅವನ ಗದರಿಕೆಗೆ ಅಂಜದೆ ಇದ್ದ ವಿಷಯವನ್ನು ಪ್ರಾಮಾಣಿಕವಾಗಿ ಹೇಳುತ್ತಾನೆ. ಕಳ್ಳನ ಪ್ರಾಮಾಣಿಕತೆಯನ್ನು ಕಂಡು ಸಂತೋಷಗೊಂಡ ಯಜಮಾನನು ’’ವೃತ್ತಿಯಲ್ಲಿ ನೀನು ಕಳ್ಳ. ಆದರೆ ನಿನ್ನ ವಿಚಾರ ಇತರರಿಗೆ ಆದರ್ಶ! ಕಳ್ಳನಾದರೂ ನನ್ನ ಮನೆಯ ಏಳಿಗೆಯನ್ನು ಬಯಸಿದೆ. ಭಲೇ, ನೀನು ಬಹಳ ಒಳ್ಳೆಯವನು’’ ಎಂದು ಕುತ್ತಟ್ಟದಿಂದ ಒಂದು ಮುಡಿ ಅಕ್ಕಿಯನ್ನು ತಂದು ಕಳ್ಳನಿಗೆ ನೀಡುತ್ತಾನೆ. ಈ ಕಥೆಯಂತೆ ಎಲ್ಲಾ ಕಥೆಗಳು ಮೌಲ್ಯವೊಂದನ್ನು ನಿರೂಪಿಸುತ್ತದೆ. ತುಳುನಾಡಿನಲ್ಲಿದ್ದ ಒಳ್ಳೆಯತನವನ್ನು ಪರಿಚಯಿಸುವುದು ಅವರ ಉದ್ದೇಶ. ಇದರಿಂದ ’ಉಗುರಿಗೆ ಮುಡಿಯಕ್ಕಿ’ ಅವರ ಎಲ್ಲಾ ಕಥೆಗಳಿಗೆ ಒಂದು ಸುಂದರ ರೂಪಕವಾಗಿದೆ. ಇಂತಹ ಹಲವು ವಿಶಿಷ್ಟ ಕಥೆಗಳು ಇಲ್ಲಿವೆ. ಕಥೆಗಳಿಗೆ ನೀಡಿದ ಜಾನಪದ ಆವರಣ ಅವರ ಕಥೆಗಳನ್ನು ವಿಶಿಷ್ಟಗೊಳಿಸಿವೆ.

ಪೂ ಪೊದ್ದೊಲು

‘ಪೂ ಪೊದ್ದೊಲು’ ಬನ್ನಂಜೆ ಬಾಬು ಅಮೀನರ ಮೊದಲ ತುಳು ಸಾಹಿತ್ಯ ಕೃತಿ. ಕನ್ನಡದಲ್ಲಿ ಸೃಜನಾತ್ಮಕ ಕೃತಿಗಳನ್ನು ಬರೆಯುತ್ತಿದ್ದ ಅಮೀನರು ಈ ಕೃತಿಯ ಮೂಲಕ ತುಳುವಿನಲ್ಲಿ ಬರೆಯಲು ಆರಂಬಿಸಿದರು. 2003ರಲ್ಲಿ ಈ ಕೃತಿಯನ್ನು ಪ್ರಕಟಿಸಿದರು. ತುಳುನಾಡಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಬಹಳ ಮಹತ್ವ ಪಡೆದಿರುವ ಅಳಿಯ ಸಂತಾನದ ಕೌಟುಂಬಿಕ ಕಥೆಯನ್ನು ಈ ಕೃತಿಯಲ್ಲಿ ಅನಾವರಗೊಳಿಸಿದ್ದಾರೆ. ಅಳಿಯ ಸಂತಾನಕಟ್ಟಿನ ಕೌಟುಂಬಿಕ ಸ್ವರೂಪ ಕಾದಂಬರಿಯಲ್ಲಿ ಅಭಿವ್ಯಕ್ತಗೊಂಡಿದೆ. ಮೈಂದ, ಸುಬ್ಬಯ್ಯ ಮೊದಲಾದ ಪಾತ್ರಗಳು ವಿಶಿಷ್ಟವಾಗಿ ನಿರೂಪಿತವಾಗಿವೆ. ಊರಿಗೆ ಆಧುನಿಕತೆಯ ಪ್ರವೇಶವು ಶಾಲೆ, ಬಸ್ಸು, ಮುಂಬಯಿಗೆ ಹಡಗು ಬರುವುದರ ಮೂಲಕ ಸೂಚಿಸಲಾಗಿದೆ. ಊರಿಗೆ ಸಾಂಕ್ರಮಿಕ ರೋಗ ಬಂದಾಗ ಉಂಟಾಗುವ ತೊಂದರೆಯನ್ನು ಊರಿನವರೆಲ್ಲ ಒಗ್ಗಟ್ಟಾಗಿ ಎದುರಿಸುವ ರೀತಿ ಹೃದ್ಯವಾಗಿದೆ. ತುಳುನಾಡಿನ ಒಂದು ಆದರ್ಶ ಊರಿನ ಚಿತ್ರಣ ಇಲ್ಲಿ ಬರುತ್ತದೆ.

ಬಾಬು ಅಮೀನರು ಇಲ್ಲಿ ಉಡುಪಿಯ ಪ್ರಾದೇಶಿಕ ತುಳುಭಾಷೆಯನ್ನು ಬಳಸಿದ್ದಾರೆ. ಸುಮಾರು ಎಪ್ಪತ್ತು ವರ್ಷಗಳ ತುಳುನಾಡಿನ ಸಾಂಸ್ಕೃತಿಕ ಚರಿತ್ರೆಯು ಕಾದಂಬರಿಯಲ್ಲಿ ನಿರೂಪಿತವಾಗಿದೆ. ಹೊಸತನ ಪ್ರವೇಶ ಬದುಕಿನ ಮೇಲೆ ಬೀರಿರುವ ಪ್ರಭಾವವನ್ನು ಕಾದಂಬರಿಯಲ್ಲಿ ವ್ಯಕ್ತಪಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಕಾದಂಬರಿಯ ನಿರೂಪಣೆಯಲ್ಲಿ ವಿಶೇಷವಿರದೆ ಸಾಂಪ್ರದಾಯಿಕ ರೂಪವನ್ನು ಬಳಸಿದ್ದಾರೆ. ಆದರೆ ಅವರು ವ್ಯವಸ್ಥಿತವಾಗಿ ಘಟನೆಗಳನ್ನು ಹೆಣೆದು ನಿರೂಪಿಸುವ ರೀತಿ ಗಮನ ಸೆಳೆಯುತ್ತದೆ. ತುಳುನಾಡಿನ ಸಂಸ್ಕೃತಿಯನ್ನು ಅಭಿವ್ಯಕ್ತಗೊಳಿಸುವ ಆತುರವನ್ನು ಕಾದಂಬರಿಯಲ್ಲಿ ಗುರುತಿಸಬಹುದಾಗಿದೆ. ಕಾದಂಬರಿಯು ಕೇವಲ ಕಾಲ್ಪನಿಕ ಕಥಾನಕವಾಗಿರದೆ ತುಳುನಾಡಿನ ಸಂಸ್ಕೃತಿ ವಿಶ್ಲೇಷಣೆಯ ದಾಖಲೆಯೂ ಆಗಿರುವುದು ಕಾದಂಬರಿಯ ವೈಶಿಷ್ಟವಾಗಿದೆ.

ಮಾನೆಚ್ಚಿ

‘ಮಾನೆಚ್ಚಿ’ ಬಾಬು ಅಮೀನರ ಎರಡನೇ ತುಳು ಕಾದಂಬರಿ. ತಂತ್ರದ ದೃಷ್ಟಿಯಿಂದ ಇದು ಕೂಡಾ ’ಪೂ ಪೊದ್ದೊಲ್’ ಕೃತಿಯ ಮಾದರಿಯಲ್ಲಿದೆ. ಎಪ್ಪತ್ತು ವರ್ಷಗಳ ತುಳುನಾಡಿನ ಸಾಂಸ್ಕೃತಿಕ ಚರಿತ್ರೆಯು ಇಲ್ಲೂ ಅಭಿವ್ಯಕ್ತಗೊಂಡಿದೆ. ’ಮಾನೆಚ್ಚಿ’ ಅಂದರೆ ಮನುಷ್ಯನಿಗೆ ದೈವದ ಆವೇಶವಾಗುವುದು ಎಂದರ್ಥ. ಕಾದಂಬರಿಯ ಕಥಾಶರೀರ ಮತ್ತು ಅದು ಅಭಿವ್ಯಕ್ತಗೊಳಿಸುವ ಮೌಲ್ಯವನ್ನು ಶೀರ್ಷಿಕೆಯು ವ್ಯಕ್ತಪಡಿಸುತ್ತದೆ. ಆಧುನಿಕ ಪೂರ್ವ ತುಳುನಾಡಿನ ಸಮಗ್ರ ವೃತ್ತಾಂತವನ್ನು ಈ ಕಾದಂಬರಿಯು ಅಭಿವ್ಯಕ್ತಗೊಳಿಸುತ್ತದೆ. ಗುತ್ತಿನ ಮನೆಗಳು ಊರಿನಲ್ಲಿ ಪ್ರಧಾನ ಸಾಂಸ್ಕೃತಿಕ ನೆಲೆಯಾಗಿದ್ದು ಊರಿನ ಎಲ್ಲಾ ಚಟುವಟಿಕೆಗಳು ಅದರ ಸುತ್ತ ಕೇಂದ್ರೀಕೃತವಾಗಿರುತ್ತವೆ. ಊರಿನ ಪದ್ಧತಿ, ಧಾರ್ಮಿಕ ನಡಾವಳಿ, ವೃತ್ತಿಗಳು ಎಲ್ಲವೂ ಕೂಡುಕುಟುಂಬ ಇಲ್ಲವೇ ಗುತ್ತಿನ ಮನೆಯಿಂದ ನಿಯಂತ್ರಿಸಲ್ಪಡುತ್ತದೆ. ಇದು ಈ ಕಾದಂಬರಿಯಲ್ಲಿ ಸುಂದರವಾಗಿ ಅಭಿವ್ಯಕ್ತಗೊಂಡಿದೆ. ಗುತ್ತಿನ ಮನೆಯ ವಿವಿಧ ವ್ಯಕ್ತಿತ್ವಗಳ ಗುಣಸ್ವಭಾವಗಳನ್ನು ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ.

ತುಳುನಾಡಿನ ಬೆಟ್ಟ-ಗುಡ್ಡ, ಏರು-ತಗ್ಗು, ಮನೆ, ಜಾಗ ಇತ್ಯಾದಿಗಳು ಸ್ಥಳನಾಮ ಗಳನ್ನು ಪಡೆಯಲು ವಿಶಿಷ್ಟವಾದ ಪ್ರಾದೇಶಿಕ ಐತಿಹ್ಯಗಳಿರುತ್ತವೆ. ಈ ಐತಿಹ್ಯಗಳನ್ನು ಕಾದಂಬರಿಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಉದಾಹರಣೆಗೆ ಕಾದಂಬರಿ ಯಲ್ಲಿ ಬರುವ ಕೈಕೊಟ್ಟು, ಬೆರಂದೊಟ್ಟು ಎಂಬ ಹೆಸರುಗಳು ಬರಲು ಕಾರಣವಾಗುವ ಕಥೆಯನ್ನು ಮನೋಹರವಾಗಿ ನಿರೂಪಿಸಲಾಗಿದೆ. ಪಿಲ್ಚಂಡಿ ಭೂತದ ಕಾರಣಿಕದ ಕಥೆ, ಪಿಜಿನ ಪಂಡಿತನ ವ್ಯಕ್ತಿತ್ವ, ಊರಿನ ಧಾರ್ಮಿಕ ಸಂಸ್ಕೃತಿಯನ್ನು ರೂಪಿಸುವ ಮಹಾಲಿಂಗೇಶ್ವರ ದೇವಸ್ಥಾನದ ಕುರಿತಾದ ವಿವರಗಳು – ಹೀಗೆ ಸಮಗ್ರವಾಗಿ ಒಂದು ಊರಿನ ಪ್ರಕೃತಿ, ಜನ ಮತ್ತು ಸಂಸ್ಕೃತಿಯ ವಿವರಗಳು ಕಥಾನಕದ ಮೂಲಕ ಬಿಚ್ಚಿಕೊಳ್ಳುತ್ತದೆ.

‘ಪೂ ಪೊದ್ದೊಲು’ ಕಾದಂಬರಿಯಂತೆ ಊರಿಗೆ ಆಧುನಿಕತೆ ಪ್ರವೇಶಿಸುವ ವಿವರಗಳು ಈ ಕಾದಂಬರಿಯಲ್ಲಿ ಇದೆ. ಹೊಸ ಶಾಲೆಗಳು, ಬಸ್ಸುಗಳು, ಸರಕಾರದ ಯೋಜನೆಗಳು ಹೊಸತನದ ಪ್ರವೇಶವನ್ನು ನಿರೂಪಿಸುತ್ತದೆ. ಆದರೆ ಜನರು ಹೊಸತನದತ್ತ ಆಕರ್ಷಿತ ರಾದರೂ ಪಾರಂಪರಿಕ ಮೌಲ್ಯಗಳನ್ನು ಒಪ್ಪಿಕೊಂಡು ಆಧುನಿಕತೆಯನ್ನು ಸ್ವೀಕರಿಸುವ ರೀತಿಯನ್ನು ಕಾದಂಬರಿಯಲ್ಲಿ ವಿವರಿಸಿರುವುದು ವಿಶಿಷ್ಟವಾಗಿದೆ. ಆಧುನಿಕತೆ ಗ್ರಾಮ ಸಂಸ್ಕೃತಿಯನ್ನು ನಾಶಮಾಡುತ್ತದೆಂಬ ನಂಬಿಕೆಗೆ ಬಿನ್ನವಾಗಿ ಆಧುನಿಕತೆ ಮತ್ತು ಸಾಂಪ್ರದಾಯಿಕ ಮೌಲ್ಯ ಎರಡನ್ನೂ ಒಪ್ಪಿಕೊಂಡು ಜನ ಬದುಕುವ ರೀತಿಯನ್ನು ಚಿತ್ರಿಸುವ ವಿವರಗಳು ಅಪರೂಪವೆಂಬಂತೆ ಈ ಕೃತಿಯಲ್ಲಿ ದೊರೆಯುತ್ತದೆ. ಯಂಕಪ್ಪ ಪೂಂಜ, ಸೀಂತ್ರಿ ಸುಬ್ಬಯಣ್ಣ ಮೊದಲಾದ ಪಾತ್ರಗಳು ಸಜೀವ ಪಾತ್ರಗಳಂತೆ ಕ್ರಿಯಾಶೀಲರಾಗಿರುತ್ತಾರೆ.

ಬನ್ನಂಜೆ ಬಾಬು ಅಮೀನರು ಬಳಸುವ ಭಾಷೆಯಲ್ಲಿ ವಿಶಿಷ್ಟತೆಯಿದೆ. ಕಾದಂಬರಿಯ ಯಶಸ್ಸಿಗೆ ಇದೂ ಒಂದು ಕಾರಣವಾಗಿದೆ. ಸಾಮಾನ್ಯ ತುಳು ಭಾಷೆಯೊಂದು ಇಡೀ ತುಳುನಾಡಿನಲ್ಲಿದ್ದರೂ ಅಲ್ಪ ಸ್ವಲ್ಪ ಪ್ರಾದೇಶಿಕ ವೈಶಿಷ್ಟಗಳನ್ನು ಪ್ರದೇಶ ವಾರು ಭಾಷೆ ಪಡೆದಿದೆ. ಅಮೀನರು ಉಡುಪಿ ತುಳುಭಾಷೆಯನ್ನು ಬಳಸುವರಾದರೂ ಅಷ್ಟೇ ಸಮರ್ಥವಾಗಿ ಭಾಷೆಯ ಸಹಜ ಸೌಂದರ್ಯಕ್ಕೆ ಮಹತ್ವ ನೀಡುತ್ತಾರೆ. ಇದರಿಂದ ತುಳುಭಾಷೆಯ ಸೊಬಗನ್ನು ಅವರ ಕಾದಂಬರಿಯ ಓದುವಿಕೆಯಲ್ಲಿ ಆಸ್ವಾದಿಸಲು ಸಾಧ್ಯ. ಈ ದೃಷ್ಟಿಯಿಂದಲೂ ಅವರು ಬರೆದಿರುವ ಕಾದಂಬರಿಗಳಿಗೆ ತುಳು ಭಾಷಾ ಅಧ್ಯಯನದಲ್ಲಿ ಮಹತ್ವವಿದೆ.

ಸಂಶೋಧನಾ ಕೃತಿಗಳು

ತುಳು ಜಾನಪದ ಸಂಶೋಧನೆಯಲ್ಲಿ ಬನ್ನಂಜೆ ಬಾಬು ಅಮೀನರಿಗೆ ವಿಶಿಷ್ಟ ಸ್ಥಾನವಿದೆ. ಕಳೆದ ಎರಡು ದಶಕಗಳಲ್ಲಿ ಅವರು ಪ್ರಕಟಿಸಿರುವ ಸಂಶೋಧನ ಕೃತಿಗಳು ಜನಪ್ರಿಯವಾಗಿವೆ. ಅವರ ಸಂಶೋಧನೆಯು ಕೇವಲ ದಾಖಲಾತಿಯಾಗಿರದೆ ಅದರ ವಿಶ್ಲೇಷಣೆಯು ಹಲವು ಒಳನೋಟಗಳನ್ನು ನೀಡುತ್ತವೆ. ಈ ದೃಷ್ಟಿಯಿಂದ ಅವರ ಸಂಶೋಧನಾ ಕೃತಿಗಳ ಅಧ್ಯಯನವು ಕುತೂಹಲಕಾರಿಯಾಗಿದೆ. ಅವರ ಸಂಶೋಧನೆಗೆ ಮಹತ್ವವಿದೆ. ಒಂದು, ಒಂದು ಅಧ್ಯಯನದ ವಿಚಾರದ ಬಗ್ಗೆ ಸಮಗ್ರ ಮಾಹಿತಿಯನ್ನು ದಟ್ಟ ಕ್ಷೇತ್ರಕಾರ್ಯದ ಮೂಲಕ ಅವರು ಸಂಗ್ರಹಿಸುತ್ತಾರೆ. ಎರಡು, ಸಂಶೋಧನೆಗಾಗಿ ಸಂಶೋಧನೆಯಾಗದೆ ಅದು ಸಾಮಾಜಿಕ ಬದುಕಿನಲ್ಲಿ ಉಪಯೋಗ ಬೇಕು ಎಂಬ ಅನ್ವಯಿಕ ದೃಷ್ಟಿಕೋನವನ್ನು ಅವರ ಸಂಶೋಧನಾ ಕೃತಿಗಳಲ್ಲಿ ಗುರುತಿಸ ಬಹುದಾಗಿದೆ. ಈ ದೃಷ್ಟಿಯಿಂದ ಅವರ ಕೃತಿಗಳು ಜನಪ್ರಿಯವಾಗಿ ಮಾರಾಟವಾಗುತ್ತಿವೆ. ಅವರ ತುಳು ಜಾನಪದ ಆಚರಣೆಗಳು, ದೈವದ ಮಡಿಲಲ್ಲಿ, ನುಡಿಕಟ್ಟ್, ತುಳುನಾಡ ಮದಿಮೆ, ತುಳು ಜಾನಪದ ಆಚರಣೆಲು, ತುಳುನಾಡ ದೈವಗಳು – ಕೃತಿಗಳು ಹಲವು ಮುದ್ರಣಗಳನ್ನು ಕಂಡಿದೆ. ಪ್ರೊ. ಮೋಹನ್ ಕೋಟ್ಯಾನರೊಂದಿಗೆ ಅವರು ರಚಿಸಿದ ’ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ’ ತುಳುನಾಡಿನಲ್ಲಿರುವ ನೂರಾರು ಗರೋಡಿಗಳ ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸುವಲ್ಲಿ ಸಫಲವಾಗಿದೆ. ಈ ದೃಷ್ಟಿಯಿಂದ ಅವರ ಸಂಶೋಧನಾ ಕೃತಿಗಳನ್ನು ಅವಲೋಕಿಸಬಹುದು.

ತುಳು ಜಾನಪದ ಆಚರಣೆಗಳು

ತುಳುನಾಡಿನಲ್ಲಿ ಕೃಷಿ ಸಂಸ್ಕೃತಿಗೆ ಅನುಗುಣವಾಗಿ ಹಲವಾರು ಆಚರಣೆಗಳು ಬೆಳೆದು ಬಂದಿವೆ. ಆದರೆ ಅದರ ಕುರಿತಾದ ದಾಖಲಾತಿ ಇಲ್ಲ. ಅವುಗಳ ವಿವರಗಳು ಒಂದು ಕಡೆ ದೊರೆಯುವುದಿಲ್ಲ. ಇದನ್ನು ಮನಗಂಡ ಬನ್ನಂಜೆ ಬಾಬು ಅಮೀನರು ತುಳುನಾಡಿನ ಆಚರಣೆಗಳ ವಿವರಗಳನ್ನು ಸಮಗ್ರವಾಗಿ ಸಂಗ್ರಹಿಸಿ, ಸಂಕ್ಷಿಪ್ತವಾಗಿ ಪ್ರಕಟಿಸಿದ್ದಾರೆ. ಆಚರಣೆಗಳ ಕುರಿತಾಗಿ ನಂಬಿಕೆಯಿರುವವರಿಗೆ ಈ ಕೃತಿ ಅತ್ಯಂತ ಉಪಯುಕ್ತವಾಗಿದೆ. ಈ ದೃಷ್ಟಿಯಿಂದ ಇದೊಂದು ಮಹತ್ವದ ಕೃತಿಯಾಗಿದೆ.

ಈ ಕೃತಿಯನ್ನು ತುಳು ನೆಲ ಮತ್ತು ತುಳು ಐಸಿರಿ ಎಂದು ವಿಂಗಡಿಸಿ ವಿವರಗಳನ್ನು ನೀಡಲಾಗಿದೆ. ತುಳುನಾಡಿನ ಆಚರಣೆಗಳ ಸಂಗ್ರಹ ಮಾತ್ರವಲ್ಲ ಅವುಗಳ ಸರಳ ವಿಶ್ಲೇಷಣೆಯು ಈ ಕೃತಿಯಲ್ಲಿದೆ. ತುಳುನಾಡಿನಲ್ಲಿ ವ್ಯಾವಹಾರಿಕ ಮತ್ತು ಶಿಕ್ಷಣದ ಭಾಷೆ ಕನ್ನಡವೇ ಆಗಿರುವುದರಿಂದ ಈ ಕೃತಿಯನ್ನು ಕನ್ನಡದಲ್ಲೆ ರಚಿಸಿರಬೇಕು.

ತುಳು ನೆಲ ವಿಭಾಗದಲ್ಲಿ ಕೊಜಂಬು ಮದುವೆಯಿಂದ ಹಿಡಿದು ಕನ್ಯಾಪುವರೆಗಿನ ಹತ್ತು ಆಚರಣೆಗಳ ವಿವರಗಳಿವೆ. ತುಳು ಐಸಿರಿಯಲ್ಲಿ ಕಾರ್ತೆಲು ತಿಂಗಳಿನ ಬೆನ್ನಿಯ ಅಟ್ಟಣೆ (ಕೃಷಿ ಕೆಲಸಗಳ ತಯಾರಿ)ಯಿಂದ ಪ್ರಾರಂಭವಾಗಿ ಪತ್ತನಜೆಯವರೆಗಿನ ಏಳು ಆಚರಣೆಗಳ ವಿವರಗಳಿವೆ. ಆಚರಣೆಗಳಿಗೆ ಸಂಬಂಧಿಸಿದಂತೆ ರೇಖಾಚಿತ್ರಗಳ ಮೂಲಕ ಆಚರಣೆಗಳ ವಿವರಗಳನ್ನು ಮೂರ್ತಗೊಳಿಸುವ ಪ್ರಯತ್ನವನ್ನು ಮಾಡಲಾಗಿದೆ.

ಹುಟ್ಟಿದ ಮಗುವಿನ ಮೊದಲ ಕೊಜಂಬು (ಕ್ಷೌರ)ವನ್ನು ವಿವರಿಸಿದ ಬಳಿಕ ಕರ ಪತ್ತಾವುನು, ಮದ್ಮಲ್ ಆಪಿನಿ, ನೀರ್ ಮೀಪಾವುನಿ, ಕಲಶದ ನೀರ್ ಮೀಪಾವುನಿ, ಪೊಣ್ಣು ನಾಡುನಿ, ಕಾಯಿ ತಿನ್ಪುನಿ, ಕಾಯಿ ಪಗಪುನಿ, ನಂಬುಗೆ ಕೊರ್ಪಿನಿ, ಮಾದ್ರೆಂಗಿ ಮದಿಮೆ, ಪೊಣ್ಣಗ್ ಮೂರ್ತ, ಮದ್ಮಲ್ ಐತ, ಪದ್ದೆಯಿ-ಬಂಗಾರ್, ಆಣಗ್ ಮೂರ್ತ, ಪೊಣ್ಣ ದಿಬ್ಬಣ ಎದ್ಕೊನೊನು, ಮದ್ಮಯೆ ಐತಾಪುನಿ, ದಾರೆ ಮೈಪುನಿ, ಮೊರ ಸೇಸೆ, ಕಂಚಿ ದೀಪಿನಿ, ಪೊಣ್ಣ್‌ಚ್ಚಿದ್ ಕೊರ್ಪಿನಿ, ತೊಡಮನೆ, ಬುಡುದಾರೆ, ಬಯಕೆ, ಪೂ ಮುಡಿಪಾವುನಿ, ಪೂ ಸೀರೆ ಕೊರ್ಪಿನಿ, ಬಯಕೆ ಬಲಸುನಿ, ಸಸಾಯಿ ಮುಂಚಿ, ಪೆದ್ದಿನಿ, ಪುರುಬಾಲೆ, ಪುದರ್ ದೀಪಿನಿ, ಜಟ್ಟಿ ಕಟ್ಟುನಿ, ಪೆದ್‌ಮೆದಿ ತಾಂಕುನಿ, ಸಜ್ಜಯಿ ಕೊನೊಪಿನಿ, ತೊಟ್ಯಾಲೆ – ಹೀಗೆ ಮದುವೆ – ಜನನಗಳ ಆಚರಣೆಗಳನ್ನು ಸರಳವಾಗಿ ತುಳು ಮಣ್ಣಿನ ವಾಸನೆ ಹರಡುವಂತೆ ವಿವರಿಸುತ್ತಾರೆ.

ಸಾವಿನ ಸಂದರ್ಭಗಳಲ್ಲಿನ ಆಚರಣೆಗಳ ವಿವರಗಳನ್ನು ನೀಡುತ್ತಾರೆ. ಪುಣ ಮಣ್ಣ್‌ಡ್ ಪಾಡುನಿ, ಪುಣ ಮೀಪಾವುನಿ, ಚಟ್ಟ ಕಟ್ಟುನಿ, ಮುತ್ತೆಸಿ ದೆಪ್ಪುನಿ, ಪುಣ ಐತಾಪುನಿ, ನೀರ್ ಬುಡ್ಪುನಿ, ಕಾಟ ಗೂರುನಿ, ಪುಣ ದೆರ್ಪುನಿ, ಸುಡುಗಾಡ್‌ಗ್ ಕೊನ್ಪಿನಿ, ದೂಳೊಪ್ಪ, ಬೊಜ್ಜ, ನೀರ್ ನಿರೆಲ್ ಕಟ್ಟುನಿ, ಗೂಡ್ ಕಟ್ಟುನಿ, ನಿಲೆಗೂಡು, ದೆಲಗೂಡು, ಬೊಜ್ಜದ ಅಟ್ಟಣೆ, ಬಾರೆ ಬಂಬೆ ಕಡ್ಪುನಿ, ಸುಡಲೆಗ್ ನುಪ್ಪು, ಮಡೆ ಬೊಜ್ಜ – ಹೀಗೆ ಸಾವಿನ ಆಚರಣೆಗಳ ಕುತೂಹಲಕಾರಿ ವಿವರಗಳು ದೊರೆಯುತ್ತವೆ.

ಎರಡನೆ ಭಾಗ ತುಳು ಐಸಿರಿಯಲ್ಲಿ ವ್ಯವಸಾಯದ ಆಚರಣೆಗಳ ದಟ್ಟ ವಿವರಗಳಿವೆ. ಉಳುವುದು, ಬೀಜದ , ಅವುಗಳ ವಿಶಿಷ್ಟ ಹೆಸರುಗಳು, ಮಳೆಗಾಲದ ಸಿದ್ಧತೆಗಳು, ದೈವಗಳ ಆರಾಧನಾ ಕ್ರಮ, ಆಟಿ ಕರಿಂಡ್ ಸೊಣ ಬತ್ತ್‌ಂಡ್ ವಿಭಾಗದಲ್ಲಿರುವ ಪುರುಸೆ ಬರ್ಸ, ಬೊಲ್ಲದ ಬಿರ್ದ್, ಆಟಿದ ಸಾವು, ಪಾಲೆದ ಕೆತ್ತೆ, ಕೇನೆದ ಪುಂಡಿ, ಕಿಂರ್ಬೆಲು ಕಂಡೆ, ಸೋಣದ ಆಚರಣೆಲು, ಇಲ್‌ಲ್ ದಿಂಜಾವುನು, ದೀಪೊಲಿ ಪರ್ಬ, ಕೆಯಿ ಕೊಯ್ಪಿನಿ, ಕೆಯಿ ಕಟ್ಟುನಿ, ಕೆಯಿದಜೆಪುನಿ, ಕಾವೇರಿ ಸಂಕ್ರಾಂದಿ, ಮಣ್ಣಿ, ಪೊಲಿ-ಸಿರಿತುಪ್ಪೆ, ಸೈತಿನಕ್‌ಲೆ ಪರ್ಬ, ಬಲೀಂದ್ರ ಲೆಪ್ಪುನಿ, ತುಲಸಿ ಪೂಜೆ, ಸಕ್ತಿಗಲ್ಲಾ ಬೊಗೋರಿ, ಕೋರಿ ತಾರಾಯಿ, ಸೋಡಿಯಾಟ, ಸರಿಮುಗಿಲ್, ಕೆಡ್ದಸ, ಪತ್ತನಜೆ, ಮುಡಿಕಟ್ಟು – ಇತ್ಯಾದಿ ಶೀರ್ಷಿಕೆಗಳ ಮೂಲಕ ಕೃಷಿ ಆಚರಣೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಹಬ್ಬಗಳ ವಿವರಣೆಗಳು ದೊರೆಯುತ್ತವೆ.

ಅವರ ಸರಳ ಸುಂದರ ನಿರೂಪಣಾ ಶೈಲಿ ಇಲ್ಲಿಯೂ ಕಂಡು ಬರುತ್ತದೆ. ಇದರಿಂದ ಕೃತಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ. ಕೇವಲ ವಿವರಣೆಗಳು ಮಾತ್ರವಲ್ಲ, ಕೆಲವು ಆಚರಣೆಗಳ ವಿಶ್ಲೇಷಣೆ, ಟೀಕೆಯೂ ನಡೆದಿದೆ. ಉದಾಹರಣೆಗೆ ದುಂದುವೆಚ್ಚ, ಐಶ್ವರ್ಯ ಪ್ರರ್ದಶನದ ಗೀಳು ಇತ್ಯಾದಿಗಳ ಬಗ್ಗೆ ಕಟು ಟೀಕೆಯಿದೆ. ’’ಸರಳ ಸಮಾರಂಭಗಳಲ್ಲಿ ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಜಾನಪದ ಆಚರಣೆಯ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿ ಹಿಡಿಯುವ ಕಾರ್ಯ ನಡೆಯಬೇಕಾಗಿದೆ. ಪ್ರತಿಷ್ಠೆಗೆ ಶರಣಾಗದೆ ದೂರ ಸರಿಯುತ್ತಿರುವ ನಮ್ಮ ಜಾನಪದ ಸಂಪತ್ತನ್ನು ಕಾಯ್ದಿಡುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ…’’ ಎಂದು ವಿವರಿಸುತ್ತಾರೆ. ಈ ಮಾತುಗಳಲ್ಲಿ ಕೃತಿ ರಚನೆಯ ಅವರ ಉದ್ದೇಶಗಳು ಪ್ರತಿಬಿಂಬಿತವಾಗಿವೆ. ಹಲವು ಆಚರಣೆಗಳಿಗೆ ನಂಬಿಕೆ ಮತ್ತು ವೈಜ್ಞಾನಿಕ ತಳಹದಿಯ ಕಾರಣಗಳನ್ನು ಚರ್ಚಿಸಲಾಗಿದೆ. ಒಟ್ಟಿನಲ್ಲಿ ತುಳುನಾಡಿನ ಆಚರಣೆಗಳನ್ನು ಉಳಿಸಿ ಬೆಳಸುವ, ಪ್ರಚಾರ ಮಾಡುವ ಮತ್ತು ಬದುಕಿನ ಚಟುವಟಿಕೆಗಳಿಗೆ ಅನ್ವಯಗೊಳಿಸುವ ಉದ್ದೇಶದ ಈ ಕೃತಿ ತುಳು ಜಾನಪದ ಅಧ್ಯಯನದ ದೃಷ್ಟಿಯಿಂದ ಮಹತ್ವದ್ದಾಗಿದೆ.

ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ

ತುಳುನಾಡ ಗರೋಡಿಗಳು ಒಂದು ಕಾಲದಲ್ಲಿ ಸಾಂಸ್ಕೃತಿಕ ಕೇಂದ್ರಗಳಾದ್ದವು. ಮಲ್ಲ ವಿದ್ಯೆಯ ವಿವಿಧ ಆಯಾಮಗಳನ್ನು ಅಲ್ಲಿ ಕಲಿಸಿ ಕೊಡಲಾಗುತ್ತಿತ್ತು. ಕೋಟಿಚೆನ್ನಯರ ಮರಣಾನಂತರ ಅವು ಆರಾಧನಾ ಕೇಂದ್ರಗಳಾದವು. ತುಳುನಾಡಿನುದ್ದಕ್ಕೂ ವಿಸ್ತರಿಸಿರುವ ಮೂನ್ನೂರಕ್ಕೂ ಹೆಚ್ಚು ಗರೋಡಿಗಳು ತುಳುನಾಡ ಸಂಸ್ಕೃತಿಯ ಹಲವು ವಿಚಾರಗಳನ್ನು ಹೇಳುತ್ತವೆ. ಈ ದೃಷ್ಟಿಯಿಂದ ಗರೋಡಿಗಳ ಕುರಿತಾದ ಸಾಂಸ್ಕೃತಿಕ ಅಧ್ಯಯನ ತುಳುನಾಡಿನ ಚರಿತ್ರೆ, ಜಾನಪದ ಅಧ್ಯಯನಕ್ಕೆ ಮಹತ್ವದ ಕೊಡುಗೆಗಳಾಗಬಹುದು. ಈ ದೃಷ್ಟಿಯಿಂದ ಪ್ರೊ. ಮೋಹನ್ ಕೋಟ್ಯಾನ್ ಮತ್ತು ಶ್ರೀ ಬನ್ನಂಜೆ ಬಾಬು ಅಮೀನರು ಜತೆಯಾಗಿ ರಚಿಸಿದ “ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ” ಮಹತ್ವದ ಕೃತಿಯಾಗಿದೆ. ಲೇಖಕರ ಕುತೂಹಲ, ಆಸಕ್ತಿ, ಅಧ್ಯಯನಶೀಲತೆ, ಶ್ರಮಗಳು ಗ್ರಂಥ ಸ್ವರೂಪದಲ್ಲಿ ವ್ಯಕ್ತವಾಗುತ್ತದೆ.

ಬನ್ನಂಜೆ ಬಾಬು ಅಮೀನರು ಮುಂಬಯಿಯಲ್ಲಿರುವಾಗ ತುಳುನಾಡಿನ ಗರೋಡಿಗಳ ಅಧ್ಯಯನದ ಕುರಿತಾಗಿ ಯೋಚಿಸಿದರು. ಊರಿನಲ್ಲಿರುವ ತನ್ನ ಸ್ನೇಹಿತರ ಸಹಾಯ ದಿಂದ ತುಳುನಾಡಿನಾದ್ಯಂತ ಇರುವ 214 ಗರೋಡಿಗಳ ಮಾಹಿತಿಯನ್ನು ಸಂಗ್ರಹಿಸಿದರು. ಇದೇ ಸಂದರ್ಭದಲ್ಲಿ ಕೋಟಿಚೆನ್ನಯರ ಬಗ್ಗೆ ಸಂಶೋಧನೆಗಾಗಿ ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಪ್ರತಿಷ್ಠಾನವು ಆದಿ ಉಡುಪಿಯಲ್ಲಿ ಸ್ಥಾಪನೆ ಗೊಂಡಿತು. ಈ ಸಂಸ್ಥೆ ಸ್ಥಾಪನೆಯಲ್ಲೂ ಅಮೀನರು ಮಹತ್ವದ ಪಾತ್ರವಹಿಸಿದರು. ಸಂಸ್ಥೆಯು ಗರೋಡಿಗಳ ಕುರಿತಾಗಿ ಸಂಗ್ರಹಿಸಿದ ಮಾಹಿತಿಗಳನ್ನು ವಿಶ್ಲೇಷಿಸಿ ಪ್ರಕಟಿಸಲು ನಿರ್ಧರಿಸಿತು. ಅದಕ್ಕಾಗಿ ಸಮಿತಿಯೊಂದನ್ನು ನಿರ್ಮಿಸಿತು. ಪ್ರೊ. ಮೋಹನ್ ಕೋಟ್ಯಾನ್ ಮತ್ತು ಬಾಬು ಅಮೀನರನ್ನು ಲೇಖಕರಾಗಿ ಆಯ್ಕೆಮಾಡಿತು. 1990ರಲ್ಲಿ 381 ಪುಟಗಳ ಈ ಬೃಹತ್ ಕೃತಿಯು ಪ್ರಕಟವಾಯಿತು. ಈ ಕೃತಿ ಪ್ರಕಟನೆಯ ಬಳಿಕ ಗರೋಡಿಗಳನ್ನು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವ ಕುರಿತಾದ ಚಿಂತನೆಯು ಪ್ರಬಲಗೊಂಡಿರುವುದನ್ನು ಗಮನಿಸ ಬಹುದು.

ಗರೋಡಿಗಳ ಅಧ್ಯಯನದ ಕುರಿತಾದ ಮೊದಲ ಗ್ರಂಥ ಇದಾಗಿದೆ. ವೈಜ್ಞಾನಿಕ ಕ್ಷೇತ್ರಕಾರ್ಯದ ಮೂಲಕ ಮಾಹಿತಿಗಳನ್ನು ಸಂಗ್ರಹಿಸಿ, ಗರೋಡಿಗಳ ಸಮಗ್ರ ಪರಿಚಯದ ಕಡೆ ಕೃತಿಯ ಗಮನವಿದೆ. ಗರೋಡಿಗಳ ಸೃಷ್ಟಿಯ ಐತಿಹಾಸಿಕ ಮೌಲ್ಯಗಳು, ಗರೋಡಿಗಳ ರಚನಾಕ್ರಮ ಮತ್ತು ಕಲಾತ್ಮಕ ವಸ್ತುಗಳ ವಿಶ್ಲೇಷಣೆ; ಗರೋಡಿಗಳ ಆರಾಧನಾ ಪದ್ಧತಿಯ ಅನುಷ್ಠಾನ; ತುಳುನಾಡ ಗರೋಡಿ ಮತ್ತು ಸಾಮಾಜಿಕ ಜಾನಪದ ಸಂಬಂಧ; ಗರೋಡಿಗಳ ಶೋಧನೆಯಲ್ಲಿ – ಐದು ವಿಭಾಗಗಳಲ್ಲಿ ಮಾಹಿತಿ ಮತ್ತು ವಿಶ್ಲೇಷಣೆಗಳನ್ನು ಜೊತೆಯಾಗಿ ನೀಡಲಾಗಿದೆ.

ಈ ಕೃತಿ ಕೇವಲ ಗರೋಡಿಗಳ ಕುರಿತಾಗಿ ಮಾತ್ರ ವಿಶ್ಲೇಷಿಸುವುದಿಲ್ಲ. ಗರೋಡಿಗಳನ್ನು ಕೇಂದ್ರವಾಗಿಟ್ಟುಕೊಂಡು ತುಳುನಾಡ ಸಂಸ್ಕೃತಿಯ ಹಲವು ಮುಖಗಳನ್ನು ಪರಿಚಯಿಸುತ್ತದೆ. ಗರೋಡಿಗಳ ರಚನೆಯ ಆಧರಿಸಿ ಆಯದ ಗರೋಡಿ, ಆಯ ಪ್ರಬೇಧ ಗರೋಡಿ, ಮನೆ ಗರೋಡಿಗಳೆಂದು ವರ್ಗೀಕರಿಸಲಾಗಿದೆ. ತುಳುನಾಡ ಗರೋಡಿಗಳಲ್ಲಿ ಬೆರ್ಮರ ಆರಾಧನೆಯು ಪ್ರಧಾನವಾಗಿದ್ದು ಬೆರ್ಮಕ್ಯರಾದ ಕೋಟಿಚೆನ್ನಯರು ಬೈದ್ಯರಾಗಿ ಆರಾದಿಸಲ್ಪಡುವುದರಿಂದಲೇ ಈ ಗರೋಡಿಗಳು ಬ್ರಹ್ಮಬೈದ್ಯೆರೆ ಗರೋಡಿಗಳೆಂದೂ, ಸೈನಿಕರಾದ ಗರುಡರನ್ನು ತರಬೇತುಗೊಳಿಸುವ ಯುದ್ಧ ವಿದ್ಯೆಯ ತರಬೇತಿ ಕೇಂದ್ರಗಳಾಗಿದ್ದಿರ ಬಹುದೆಂಬ ಊಹೆಯಿದೆ. ’’ತಾಂತ್ರಿಕರಾಗಿದ್ದು ಆಧ್ಯಾತ್ಮ ವಿದ್ಯೆಯಲ್ಲಿ ಮುಂದುವರಿದ ಜನಾಂಗವೊಂದು ಪ್ರಾಚೀನ ಕಾಲದಲ್ಲಿ ತುಳುನಾಡಿನಲ್ಲಿ ಅಸ್ತಿತ್ವದಲ್ಲಿತ್ತು (ಪುಟ 85) ಎಂಬುದನ್ನು ಸಮರ್ಥಿಸಲಾಗಿದೆ. ಬೈದ್ಯರು ದೈವಗಳಲ್ಲ. ಅತಿಮಾನುಷ ಶಕ್ತಿಗಳು ಎಂಬುದನ್ನು ವಿವರವಾಗಿ ಸಮರ್ಥಿಸಲಾಗಿದೆ. ಬೈದ್ಯರ ಆರಾಧನೆ ಒಂದು ವೀರರ ಆರಾಧನೆ ಎಂಬುದನ್ನು ಸಮರ್ಥಿಸಲಾಗಿದೆ.

ಗರೋಡಿಗಳಲ್ಲಿ ಬೈದ್ಯರೊಂದಿಗಿರುವ ಇತರ ಮೂರ್ತಿಗಳ ಅಸ್ತಿತ್ವದ ಕುರಿತಾಗಿ ಚರ್ಚೆಯಿದೆ. ಕುಜುಂಬ ಕಾಂಜವ, ಒಕ್ಕುಬಲ್ಲಾಳ, ಮುಸ್ಲಿಂ ಮಕ್ಕಳ ಮೂರ್ತಿಗಳು ಬ್ರಹ್ಮಗುಂಡದಲ್ಲಿರುವ ಬಗ್ಗೆ ಚರ್ಚೆಯಿದೆ. ಇವುಗಳ ಆಧಾರದ ಮೇಲೆ ಗರೋಡಿಗಳ ಕಾಲ ನಿರ್ಣಯಕ್ಕೆ ಅವಕಾಶವಿದೆ. ಗರೋಡಿಗಳಲ್ಲಿ ನಡೆಯುವ ಆರಾಧನಾ ವಿಧಾನಗಳ ವಿಸ್ತತವಾದ ಚರ್ಚೆಯನ್ನು ಇಲ್ಲಿ ಗುರುತಿಸಲಾಗಿದೆ. ಇದು ತುಳುನಾಡಿನ ಆರಾಧನೆಗಳ ಬಗ್ಗೆ ಹಲವು ಒಳನೋಟಗಳನ್ನು ಹೊರ ಹೊಮ್ಮಿಸುತ್ತದೆ. ಆರಾಧನೆಗಳ ಆಧಾರದ ಮೇಲೆ ಆಲೌಕಿಕ ಪುರುಷರಾಗಿ ಗರೋಡಿಗಳಲ್ಲಿ ದೈವತ್ವಕ್ಕೇರಿದ ಬೈದ್ಯರು ಮಾನವರೂಪಿ ಗ್ರಾಮ ದೈವಗಳು (ಪುಟ 95) ಎಂದು ಸಮರ್ಥಿಸಲಾಗಿದೆ.

ಒಟ್ಟಿನಲ್ಲಿ ಗರೋಡಿಗಳ ಸಾಂಸ್ಕೃತಿಕ ಅಧ್ಯಯನವು ನಿಜವಾದ ಅರ್ಥದಲ್ಲಿ ತುಳುನಾಡ ಸಂಸ್ಕೃತಿಯ ಅಧ್ಯಯನವನ್ನು ನಡೆಸಿದೆ. ತುಳುನಾಡಿನ ಇತಿಹಾಸ, ಜಾನಪದ, ಸಾಮಾಜಿಕ ಜೀವನದ ಬಗ್ಗೆ ಹಲವು ಕುತೂಹಲಕಾರಿ ಮಾಹಿತಿಗಳು ಗ್ರಂಥದಲ್ಲಿ ದೊರೆಯುತ್ತವೆ. ಗರೋಡಿಗಳ ಕುರಿತಾದ ಅಧ್ಯಯನವು ಭೂತಾರಾಧನೆಯ ದೃಷ್ಟಿಕೋನ ವನ್ನು ವಿಸ್ತತಗೊಳಿಸಿದೆ. ಪಾಡ್ದನದ ಆಧಾರದ ಮೇಲೆ ಕೋಟಿಚೆನ್ನಯರು ಮತ್ತು ಕಾಂತಬಾರೆ – ಬೂದಬಾರೆಯರ ಘರ್ಷಣೆಯನ್ನು ವಿಶ್ಲೇಷಿಸಲಾಗಿದೆ. ಇಂಥ ಹಲವು ಸಂದರ್ಭಗಳು ತುಳುನಾಡಿನ ಸಾಂಸ್ಕೃತಿಕ ಚರಿತ್ರೆಯನ್ನು ವ್ಯಾಖ್ಯಾನಿಸಲು ಸಹಕಾರಿಯಾಗುತ್ತದೆ. ತುಳುನಾಡಿನ ಜನರ ಭಾವೈಕ್ಯತಾ ಜೀವನವನ್ನು ಗರೋಡಿಗಳ ಅಧ್ಯಯನವು ಸ್ಪಷ್ಟಪಡಿಸುತ್ತದೆ.

ಗರೋಡಿಗಳ ಸಾಂಸ್ಕೃತಿಕ ಅಧ್ಯಯನವು ಗರೋಡಿಗಳ ಕುರಿತಾದ ಮೊದಲ ಅಧ್ಯಯನವಾಗಿದೆ. ಆದರೆ ಗರೋಡಿಗಳನ್ನು ಕೇಂದ್ರವಾಗಿಟ್ಟುಕೊಂಡು ತುಳುನಾಡ ಸಂಸ್ಕೃತಿಯ ಹಲವು ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಮೊದಲ ಅಧ್ಯಯನ ವಾದುದರಿಂದ ಹಲವು ಆವೇಶಯುತ ಹೇಳಿಕೆಗಳಿವೆ. ಊಹೆಗಳಿವೆ. ಆದರೆ ಗರೋಡಿಗಳ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಿ ಪ್ರತ್ಯೇಕ ಪ್ರತ್ಯೇಕ ಅಧ್ಯಯನಗಳೂ, ವಿಸ್ತತವಾದ ಅಧ್ಯಯನವೂ ನಡೆಯುವ ಅಗತ್ಯವನ್ನು ಈ ಬೃಹತ್ ಗ್ರಂಥದ ಚರ್ಚೆಯು ಶುೃತಪಡಿಸುತ್ತದೆ. ಈ ದೃಷ್ಟಿಯಿಂದ ತುಳುನಾಡಿನ ಸಾಂಸ್ಕೃತಿಕ ಅಧ್ಯಯನದಲ್ಲಿ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಕೃತಿಗೆ ಐತಿಹಾಸಿಕ ಮಹತ್ವವಿದೆ. ಬನ್ನಂಜೆ ಬಾಬು ಅಮೀನರ ಅಧ್ಯಯನಶೀಲತೆ, ಶ್ರಮ, ಸಂಸ್ಕೃತಿ ಪ್ರೀತಿ, ಯೋಜನಾಬದ್ಧ ಕಾರ್ಯ ಚಟುವಟಿಕೆಗಳಿಗೆ ಈ ಗ್ರಂಥವು ಮಹತ್ವದ ಸಾಕ್ಷಿಯಾಗಿದೆ.

ದೈವಗಳ ಮಡಿಲಲ್ಲಿ

2002ರಲ್ಲಿ ಪ್ರಕಟವಾಗಿ 2004ರಲ್ಲಿ ಎರಡನೇ ಮುದ್ರಣವನ್ನು ಕಂಡ ಮೌಲಿಕ ಕೃತಿಯಾಗಿದೆ. ತುಳುನಾಡ ದೈವಗಳ ಕುರಿತಾಗಿ ವ್ಯಾಪಕವಾಗಿ ನಡೆಸಿದ ಸಂಶೋಧನೆಯಲ್ಲಿ ಕೆಲವು ದೈವಗಳ ಕುರಿತಾದ ವಿವರ ಮತ್ತು ಚರ್ಚೆಗಳಿರುವ ಆರು ಲೇಖನಗಳು ಈ ಕೃತಿಯಲ್ಲಿದೆ. ಅಡ್ಕದ ಕಟ್ಟೆಯ ಪಂಚ ಧೂಮಾವತಿ, ಬೆಂಕಿಯಾಟದ ಚತುರ ಬೀರ ಕಲ್ಕುಡ, ಗಂಗೆನಡಿ ಕುಮಾರ, ಕಲ್ಮಾಡಿ ಬಗ್ಗು ಪಂಜುರ್ಲಿ, ಕೊಡಂಗ ಬನ್ನಾರರಿಗೆ ಒಲಿದ ಕೋಡಿಯ ಬಬ್ಬು, ಸ್ವಾಭಿಮಾನದ ಹೆಣ್ಣಿ ಮಾಯಿಂದಾಲ್ – ಇವು ಆರು ಲೇಖನಗಳು. ಬಾಬು ಅಮೀನರ ಸರಳ, ಸಹಜ, ಕಥಾನಾತ್ಮಕ ಶೈಲಿ ಈ ಕೃತಿಯಲ್ಲೂ ಮೆರೆದಿದೆ. ಕೃತಿಯು ಉದ್ದೇಶ ವನ್ನು ಅಮೀನರು ಸ್ಪಷ್ಟವಾಗಿ ಹೇಳಿದ್ದಾರೆ. ಹಲವು ವಿದ್ವಾಂಸರು ಪಾಡ್ದನ ರೂಪದಲ್ಲಿ ದೈವದ ಕಥೆಗಳನ್ನು ಪ್ರಕಟಿಸಿದ್ದಾರೆ. ಆದರೆ ಅದನ್ನು ಸಾಮಾನ್ಯ ಜನರು ಅರ್ಥೈಸುವುದು ಕಷ್ಟ. ಸಾಮಾನ್ಯ ಜನರಿಗೆ ಕಥಾ ಪರಿಚಯವನ್ನು ಸುಂದರವಾಗಿ ಮಾಡಿ ಕೊಡುವ ಪ್ರಾಮಾಣಿಕ ಪ್ರಯತ್ನ ಎಂಬುದನ್ನು ಹೇಳಿಕೊಂಡು ಸಾದಿಸಿ ತೋರಿಸಿದ್ದಾರೆ.

ತುಳುನಾಡಿನ ದೈವಾರಾಧನೆ ಮತ್ತು ದೈವಗಳ ಹುಟ್ಟು ಪ್ರಸರಣಕ್ಕೆ ಅನುಗುಣವಾಗಿ ಅವು ಪಡೆದ ಹೆಸರುಗಳ ಬಗ್ಗೆ ಸಂಕ್ಷಿಪ್ತ ವಿವರಗಳು ಮೊದಲ ಪ್ರಬಂಧದಲ್ಲಿದೆ. ಒಂದು ದೈವವು ಬಂದು ನೆಲೆಸಿದ ನಿರ್ದಿಷ್ಟ ಮನೆತನ ಇಲ್ಲವೇ ಸ್ಥಳದ ಹೆಸರನ್ನು ಪಡೆಯುವ ಪ್ರಕ್ರಿಯೆಯನ್ನು ಅಡ್ಕದ ಕಥೆ ಪಂಚ ಧೂಮಾವತಿಯ ಕುರಿತಾದ ಲೇಖನದಲ್ಲಿ ವಿವರಿಸಿದ್ದಾರೆ. ವಿವಿಧ ದೈವಗಳ ಪಾಡ್ದನದ ಸಂಕ್ಷಿಪ್ತ ಕಥೆ, ಮನೆತನದ ಇತಿಹಾಸ, ವರ್ತಮಾನದಲ್ಲಿ ನಡೆಯುವ ಆಚರಣೆಗಳು, ದೈವದ ಕಾರಣಿಕ ವಿವರಗಳನ್ನು ಸರಳ ಸುಂದರವಾಗಿ ಹೇಳಲಾಗಿದೆ. ದೈವಾರಾಧನೆಯ ಬಗ್ಗೆ ತಿಳಿದುಕೊಳ್ಳುವವರಿಗೆ ಮತ್ತು ಅಧ್ಯಯನ ಮಾಡುವವರಿಗೆ ಪ್ರಾಥಮಿಕ ವಿವರಗಳು ಈ ಕೃತಿಯಲ್ಲಿ ದೊರೆಯುತ್ತಿವೆ.

ನುಡಿಕಟ್ಟ್

ಆನ್ವಯಿಕ ಜಾನಪದದ ಉದ್ದೇಶವನ್ನಿಟ್ಟುಕೊಂಡು ರಚಿಸಿದ ಕೃತಿ ನುಡಿಕಟ್ಟ್. ದಿನನಿತ್ಯದ ಆಚರಣೆಗಳಲ್ಲಿ ಉಪಯೋಗಕ್ಕೆಂದೇ ಸಂಗ್ರಹಿಸಿ ಪ್ರಕಟಿಸಲಾಗಿದೆ. ಬನ್ನಂಜೆ ಬಾಬು ಅಮೀನರ ಸಂಶೋಧನೆಗೆ ಆನ್ವಯಿಕ ದೃಷ್ಟಿಕೋನವಿದೆ ಎಂಬುದನ್ನು ಈ ಕೃತಿಯು ಸಮರ್ಥಿಸುತ್ತದೆ. 2006ರಲ್ಲಿ ಪ್ರಥಮ ಮುದ್ರಣ ಕಂಡ ಕೃತಿಯು 2007ರಲ್ಲಿ ಮರು ಮುದ್ರಣವಾಗಿ ಅದೇ ವರ್ಷ ಮೂರನೇ ಮುದ್ರಣವನ್ನೂ ಕಂಡಿದೆ. ಈಗ ನಾಲ್ಕನೇ ಮುದ್ರಣಕ್ಕೆ ಸಿದ್ಧತೆ ನಡೆಯುತ್ತಿರುವುದು ಕೃತಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ತುಳುನಾಡಿನ ಜಾನಪದೀಯ ಪ್ರಾರ್ಥನೆಗಳ ಸಂಕಲನ ಕೃತಿ ’ನುಡಿಕಟ್ಟ್’ ಒಂದು ವಿಶಿಷ್ಟ ಕೃತಿ. ಈಗಾಗಲೇ ತುಳುನಾಡಿನ ಆಚರಣೆ ಮತ್ತು ಆರಾಧನೆಗಳ ಬಗ್ಗೆ ಹಲವು ಸಂಶೋಧನಾತ್ಮಕ ಮತ್ತು ಮಾಹಿತಿ ಸಂಗ್ರಹ ಕೃತಿಗಳು ಪ್ರಕಟವಾಗಿವೆ. ಆದರೆ ಬನ್ನಂಜೆ ಬಾಬು ಅಮೀನರ ಕೃತಿ ಅವುಗಳೆಲ್ಲಕ್ಕಿಂತಲೂ ಬಿನ್ನವಾಗಿದೆ. ಒಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಉದ್ದೇಶವನ್ನು ಹೊಂದಿದ ಕೃತಿ. ವಿಶ್ಲೇಷಣೆಗಿಂತಲೂ ಸಂಗ್ರಹಕ್ಕೆ ಇಲ್ಲಿ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ತುಳುನಾಡಿನ ಹೆಚ್ಚಿನ ಎಲ್ಲಾ ಆರಾಧನೆಗಳ ಸಂಕ್ಷಿಪ್ತ ವಿವರಗಳೊಂದಿಗೆ ಅವುಗಳ ಮುಖ್ಯ ಭಾಗವಾದ ’ಪಣೂಂಬನಿ’ ಅಥವಾ ’ನುಡಿಕಣ್ಣ್’ ಕಡೆ ಗಮನ ನೀಡಲಾಗಿದೆ.

ಹುಟ್ಟು, ಸಾವು, ಮದುವೆ ಮೊದಲಾದ ಜೀವನಾವರ್ತ ಘಟನೆಗಳಿಗೆ ಸಂಬಂಧಿಸಿದ ಆಚರಣೆಗಳಾದ ಮದರಂಗಿ ಇಡುವುದು, ಹೆಣ್ಣಿಗೆ ಮುಹೂರ್ತ, ದಿಬ್ಬಣ ಹೊರಡುವುದು, ಹೆಣ್ಣೊಪ್ಪಿಸಿ ಕೊಡುವುದು, ಮದುಮಗಳ ಗಂಡನ ಮನೆಯ ಪ್ರವೇಶ, ಗರ್ಬಿಣಿಗೆ ಹೂಸೀರೆ, ಮಗುವನ್ನು ತೊಟ್ಟಿಲಿಗೆ ಹಾಕುವುದು, ಹೆಣ ಸುಡುವುದು, ಧೂಳಪ್ಪ, ನೀರು ನೆರಳು ಕಟ್ಟುವುದು, ಬೊಜ್ಜ ಮಡೆಬೊಜ್ಜಗಳ ಸಂಕ್ಷಿಪ್ತ ವಿವರಗಳೊಂದಿಗೆ ಪ್ರಾರ್ಥಿಸುವ ಪಠ್ಯವಿದೆ. ಚೌತಿ, ಕದಿರು ಕಟ್ಟುವುದು, ಆಪತ್ತಿನ ಪ್ರಾರ್ಥನೆಯ ವಿವರಗಳಿವೆ. ಸತ್ತವರ ಹಬ್ಬ, ತುಳಸಿ ಪೂಜೆ, ಬರ್ಬರ್ಯ ಪೂಜೆ, ಗಡಿಹಾರ ಕೊಡುವುದು, ಕೊಡಿ ಕಟ್ಟುವುದು ಇತ್ಯಾದಿಗಳ ವಿವರ ಮತ್ತು ಪ್ರಾರ್ಥನೆಯ ನುಡಿಗಟ್ಟುಗಳಿವೆ. ಹಲವು ದೃಷ್ಟಿಗಳಿಂದ ಇಂಥ ಕೃತಿಯೊಂದು ಈ ಕಾಲಕ್ಕೆ ಅಪೇಕ್ಷಣೀಯವಾಗಿತ್ತು. ಈ ದೃಷ್ಟಿಯಿಂದ ಇದೊಂದು ಮೌಲಿಕ ಕೃತಿಯಾಗಿದೆ.

ಈ ಕೃತಿ ರಚನೆಯ ಉದ್ದೇಶವನ್ನು ಬಾಬು ಅಮೀನರು ಹೀಗೆ ಗುರುತಿಸುತ್ತಾರೆ. ’…ಶುಭ ಕಾರ್ಯಗಳಲ್ಲಿ ನಾಲ್ಕು ಮಾತುಗಳ ಭಾವಾನಾತ್ಮಕ ಪ್ರಾರ್ಥನೆಯನ್ನು ಮನೆಯ ಯಜಮಾನ ಅಥವಾ ಇತರರು ನಡೆಸಿಕೊಡಬೇಕಾದ ಸಂದರ್ಭಗಳು ಉದ್ಭವಿಸುವುದು. ಅಂತಹ ಸನ್ನಿವೇಶಗಳಲ್ಲಿ ಪ್ರಾರ್ಥನೆಯ ಕುರಿತಾಗಿ ತಲಮಟ್ಟದ ಅರಿವು ಮೂಡಿಸುವುದು ಇಂದಿನ ಅವಶ್ಯಕತೆಗಳಲ್ಲಿ ಒಂದು’ ಎಂಬ ಲೇಖಕನ ಮಾತು ಅವರ ಆನ್ವಯಿಕ ದೃಷ್ಟಿಕೋನ ವನ್ನು ವ್ಯಕ್ತಪಡಿಸುತ್ತದೆ. ’ಅನ್ಯ ಸಂಸ್ಕೃತಿಯ ದಾಳಿಯಿಂದಾಗಿ ಇಂದು ತುಳು ಜಾನಪದ ಆಚರಣೆಯಲ್ಲಿರುವ ಮೂಲ ಸತ್ವವು ನಶಿಸುತ್ತಾ ಬಂದಿರುವುದು ಸರ್ವವಿದಿತ…. ಒಂದು ಜನಾಂಗಕ್ಕೆ ಸಂಬಂಧ ಪಟ್ಟಿರುವ ಜಾನಪದ ಸಂಪತ್ತನ್ನು ನಾಶಗೊಳಿಸುವ ಸಮಯ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವ ನೈತಿಕ ಅವಶ್ಯಕತೆ ಇದೆ’ ಎಂಬ ಲೇಖಕರ ಮಾತು ತುಳುನಾಡಿನ ರಾಜಕೀಯ – ಸಾಂಸ್ಕೃತಿಕ ರಂಗವನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಸತ್ಯವೆನಿಸುತ್ತದೆ.

ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಕೃತಿಯ ಸರಳತೆ ನಮ್ಮ ಗಮನ ಸೆಳೆಯುತ್ತದೆ. ಪರಿಣತ ವಕ್ತಗಳ ಮೂಲಕ ವೈಜ್ಞಾನಿಕ ರೀತಿಯಲ್ಲಿ ಮಾಹಿತಿ ಸಂಗ್ರಹಣೆ ಮಾಡಿದ್ದು, ಕೃತಿಯಲ್ಲಿ ಕಂಡುಬರುತ್ತದೆ. ಕೃತಿಯಲ್ಲಿ ಮಾಹಿತಿ ಮಾತ್ರವಲ್ಲ ಅಗತ್ಯವಿದ್ದಲ್ಲಿ ವ್ಯಾಖ್ಯಾನ ಮತ್ತು ವಿಶ್ಲೇಷಣೆಯೂ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಪಾರಿಭಾಷಿಕ ಪದಗಳಿಗೆ ಅರ್ಥ ವಿವರಣೆ ನೀಡಿದ್ದು ಇನ್ನೊಂದು ಉಲ್ಲೇಖನೀಯ ಅಂಶವಾಗಿದೆ.

ಈ ಮೇಲಿನ ಕಾರಣಗಳಿಂದ ’ನುಡಿಕಟ್ಟ್’ ಕೃತಿಗೆ ತುಳು ಜಾನಪದ ಅಧ್ಯಯನ ದಲ್ಲಿ ಮಹತ್ವದ ಸ್ಥಾನವಿದೆ. ಶ್ರದ್ಧೆ ಮತ್ತು ಸಂಸ್ಕೃತಿ ಪ್ರೀತಿಯಿಂದ ಮಾತ್ರ ಈ ರೀತಿಯ ಶ್ರಮದಾಯಕ ಸಂಗ್ರಹ ಮತ್ತು ಕಳಕಳಿಯ ವಿಶ್ಲೇಷಣೆ ಸಾಧ್ಯ.

ತುಳು ಜಾನಪದ ಆಚರಣೆಲು

ಆಂಧ್ರ ಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾನಿಲಯದ ತುಳು ಅಧ್ಯಯನ ವಿಭಾಗವು 2007ರಲ್ಲಿ ಈ ಕೃತಿಯನ್ನು ಪ್ರಕಟಿಸಿದೆ. ತುಳು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರಸರಣ ಮಾಡುವುದು, ದಾಖಲಾತಿ ಮಾಡುವುದು ಕೃತಿ ಪ್ರಕಟನೆಯ ಉದ್ದೇಶವಾಗಿದೆ. ಬನ್ನಂಜೆ ಬಾಬು ಅಮೀನರು ಈಗಾಗಲೇ ತಮ್ಮ ಕೃತಿಗಳ ಮೂಲಕ ಈ ಉದ್ದೇಶವನ್ನು

ಸಾದಿಸಿರುವುದರಿಂದ ದ್ರಾವಿಡ ವಿಶ್ವವಿದ್ಯಾನಿಲಯವು ಅವರನ್ನು ಗುರುತಿಸಿದೆ. ಈಗಾಗಲೇ ಕನ್ನಡದಲ್ಲಿ ತುಳುನಾಡಿನ ಜಾನಪದ ಆಚರಣೆ ಕೃತಿಯನ್ನು ಪ್ರಕಟಿಸಿ ಅವರು ಯಶಸ್ವಿಯಾಗಿದ್ದಾರೆ. ಈ ಕೃತಿ ತುಳುವಿನಲ್ಲಿದೆ.

ತುಳುನಾಡಿನ ಜನಪದ ಆಚರಣೆಗಳು ಕೃತಿಯ ಮಾದರಿಯಲ್ಲಿಯೇ ಈ ಕೃತಿಯಿದೆ. ಆದರೆ ಆ ಕೃತಿ ಪ್ರಕಟಿಸಿ ಒಂದೂವರೆ ದಶಕದ ಬಳಿಕ ಇದನ್ನು ಪ್ರಕಟಿಸುತ್ತಿರುವುದರಿಂದ ಅವರ ಸಂಶೋಧನೆ ಪಡೆದುಕೊಂಡಿರುವ ಪರಿಪಕ್ವತೆ ಈ ಕೃತಿಯಲ್ಲಿ ವ್ಯಕ್ತವಾಗಿದೆ. ಆಚರಣೆಗಳ ವಿವರಗಳನ್ನು ನೀಡುವುದರೊಂದಿಗೆ ಅಲ್ಲಲ್ಲಿ ವಿಶ್ಲೇಷಣೆಯಿದೆ. ತುಳು ಜಾನಪದ ಆಚರಣೆಗಳ ಪರಿಚಯವನ್ನು ಈ ಕೃತಿಯು ಯಶಸ್ವಿಯಾಗಿ ಮಾಡಿಕೊಡುತ್ತದೆ.

ವಿಶ್ವವಿದ್ಯಾನಿಲಯದ ಕೃತಿ ಪ್ರಕಟನೆಯ ಉದ್ದೇಶವನ್ನು ಅರ್ಥಮಾಡಿಕೊಂಡು ಸಂಕ್ಷಿಪ್ತವಾಗಿ, ಮಾಹಿತಿ ಪೂರ್ಣವಾಗಿ ಬಾಬು ಅಮೀನರು ಕೃತಿಯನ್ನು ರಚಿಸಿದ್ದಾರೆ. ಅವರ ತುಳು ಭಾಷೆಯ ಸತ್ವ ಓದುಗರ ಗಮನಸೆಳೆಯುತ್ತದೆ.

ತುಳುನಾಡ ದೈವಗಳು

2008ರಲ್ಲಿ ಪ್ರಕಟವಾದ ಇನ್ನೊಂದು ಮಹತ್ವದ ಕೃತಿ ತುಳುನಾಡ ದೈವಗಳು. ಕೃತಿಯಲ್ಲಿ ಒಟ್ಟು ಹನ್ನೆರಡು ಅಧ್ಯಯನ – ಲೇಖನಗಳಿವೆ. ಪಂಜುರ್ಲಿ, ಬಬ್ಬರ್ಯ, ಜಾರಾಂದಾಯ, ಪಿಲ್ಚಂಡಿ, ಸತ್ಯದೇವತೆ, ಮರ್ದಾಲ ಧೂಮಾವತಿ, ಮಾಲೂರಿನ ಮುಗೇರ್ಲು, ಸಿರಿಗಳ ಕ್ಷೇತ್ರದಲ್ಲಿ ದೈವಗಳ ಕಂಬಳ, ಕಂಗಣ ಬೆಟ್ಟು ಅಣ್ಣಪ್ಪ ದೈವ, ಕುಪ್ಪೆಟ್ಟು ಪಂಜುರ್ಲಿ ಮೊದಲಾದ ದೈವಗಳ ಕಥಾನಕ, ಪಾಡ್ದನ ಪ್ರಭೇದ, ಪ್ರಸರಣದ ಹಿನ್ನೆಲೆ ಗಳೊಂದಿಗೆ ಆಯಾ ಲೇಖನದಲ್ಲಿ ಬಳಸಿದ ವಿಶಿಷ್ಟ ಶಬ್ದಗಳ ಮತ್ತು ಪಾರಿಭಾಷಿಕ ಪದಗಳ ಅರ್ಥ ವಿವರಣೆಯಿದೆ. ಜೊತೆಗೆ ತುಳುನಾಡ ಆಲಡೆಗಳ ಬಗ್ಗೆ ಹಾಗೂ ದೈವಾರಾಧನೆಯ ಬಗ್ಗೆ ಕೆಲವು ಅನಿಸಿಕೆಗಳು ಎಂಬ ಲೇಖಕರ ಅಭಿಪ್ರಾಯದೊಂದಿಗೆ ಕೃತಿಯನ್ನು ಮುಕ್ತಾಯಗೊಳಿಸಲಾಗಿದೆ.

ಬಬ್ಬರ್ಯ ದೈವದ ಕಥಾ ಹಿನ್ನೆಲೆ ಬಿಚ್ಚಿಡುವ ಕಥಾ ವಿವರಗಳು ಪ್ರಸ್ತುತ ಸಂದರ್ಭದಲ್ಲಿ ಬಹಳ ಮೌಲಿಕವಾಗಿದೆ. ನಾಲ್ಕು ಜನ ಜೈನ ಸಹೋದರರಿಗೆ ಒಬ್ಬಳು ತಂಗಿಯಿರುತ್ತಾಳೆ. ಅವರಿಗೆ ಯಾರನ್ನೂ ಮದುವೆ ಮಾಡಿಕೊಟ್ಟರೂ ಗಂಡಂದಿರು ಸಾವನ್ನಪ್ಪುತ್ತಾರೆ. ಕೊನೆಗೆ ವ್ಯಾಪಾರ ಮಾಡುವ ಮುರವ ಬ್ಯಾರಿ ತನಗೆ ಮದುವೆ ಮಾಡಿಕೊಟ್ಟರೆ ಈ ಸಮಸ್ಯೆ ಪರಿಹಾರ ಮಾಡಿಕೊಡುತ್ತೇನೆ ಎನ್ನುತ್ತಾನೆ. ಹಾಗೆಯೇ ರಾತ್ರಿ ಅವಳು ಮಲಗಿದ ಸಂದರ್ಭದಲ್ಲಿ ಕಾದು ಕುಳಿತು ಅವಳ ಮೂಗಿನಿಂದ ಹೊರಬಂದ ಕಾಳ ಸರ್ಪವನ್ನು ಕೊಂದು ಸಮಸ್ಯೆ ಬಗೆಹರಿಸುತ್ತಾನೆ. ಇಲ್ಲಿ ಜೈನ ಸಹೋದರರು ಬ್ಯಾರಿಗೆ ಕೊಟ್ಟ ವಾಗ್ದಾನವನ್ನು ಮರೆಯುವುದಿಲ್ಲ. ಜಾತಿಗಿಂತ ನೀತಿ ಮುಖ್ಯ ಎಂಬುದನ್ನು ಪರಿಗಣಿಸಿ ತಮ್ಮ ಮುದ್ದಿನ ತಂಗಿಯನ್ನು ಮುರವ ಬ್ಯಾರಿಗೆ ಧರ್ಮಧಾರೆಯೆರೆಯುತ್ತಾರೆ. ಈ ದಂಪತಿಗಳಿಗೆ ಹುಟ್ಟಿದ ಮಗನೆ ಬಬ್ಬರ್ಯ. ಹೀಗೆ ಜಾತಿಗಿಂತ ನೀತಿ ಮುಖ್ಯ ಎಂದು ಸಾರುವ ಬಬ್ಬರ್ಯದಂಥ ದೈವಗಳ ಹುಟ್ಟಿನ ಹಿಂದಿರುವ ತುಳುನಾಡ ಸಂಸ್ಕೃತಿಯ ಕಥೆಗಳು ವರ್ತಮಾನದ ಬದುಕಿಗೆ ಪಾಠದಂತಿದೆ.

ದೈವಗಳ ಕಂಬಳ ಅಧ್ಯಾಯದಲ್ಲಿ ಜಾನಪದ ಅಧ್ಯಯನಕ್ಕೆ ವಿಪುಲ ಸಾಮಗ್ರಿ ಗಳಿರುವುದರ ಮಾಹಿತಿಗಳಿವೆ. ಮುಂದೆ ನಡೆಸಬಹುದಾದ ಹಲವಾರು ಜಾನಪದ ಅಧ್ಯಯನಗಳಿಗೆ ಈ ಕೃತಿ ಮೂಲ ಕಿಂಡಿಯಾಗಿ ಗೋಚರಿಸುತ್ತಿದೆ. ಆಲಡೆಗಳಲ್ಲಿ ಪೂಜೆ, ನಾಗಬನಗಳಲ್ಲಿ ಸಲ್ಲಿಸುವ ಪೂಜೆಗಳ ಸಾಮ್ಯತೆಯ ಬಗ್ಗೆ ವಿವರಣೆಯಿದೆ. ಜೊತೆಗೆ ಪಿಲ್ಚಂಡಿ, ಪಂಜುರ್ಲಿ, ಬಬ್ಬರ್ಯ, ಜಾರಂದಾಯ, ಸತ್ಯದೇವತೆ ಹೀಗೆ ಈ ದೈವಗಳ ಆರಾಧನಾ ವಿದಿ-ವಿಧಾನಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.

ಈ ಮೇಲಿನ ಕಾರಣಗಳಿಂದ ತುಳುನಾಡಿನ ಸಂಸ್ಕೃತಿಯ ಚಲನಶೀಲತೆಯ ಅಧ್ಯಯನದ ದೃಷ್ಟಿಯಿಂದ ಈ ಕೃತಿಗೆ ಮಹತ್ವದ ಸ್ಥಾನವಿದೆ. ಅಪರಿಮಿತ ಶ್ರಮ, ಶ್ರದ್ಧೆ, ಸಂಸ್ಕೃತಿ ಪ್ರೀತಿಯೊಂದಿಗೆ ವಾಸ್ತವತೆಯನ್ನು ನಿರ್ಬೀತಿಯಿಂದ ನಿರೂಪಿಸುವ ಉತ್ತಮ ಕೃತಿಯಾಗಿ ದೈವಗಳ ಮಡಿಲಲ್ಲಿ ರೂಪುಗೊಂಡಿದೆ.

ತುಳುವೆರೆ ಮದಿಮೆ

ಅವರ ‘ತುಳುವೆರೆ ಮದಿಮೆ’ ಪುಟ್ಟ ಕೃತಿ ಹುಟ್ಟಿದ ಹಿನ್ನೆಲೆ ಬಹಳ ವಿಶಿಷ್ಟವಾದುದು. ಉಡುಪಿಯ ಸಾಂಸ್ಕೃತಿಕ ಸಂಘಟನೆ ’ಏಕತಾ’ವು ಬನ್ನಂಜೆ ಬಾಬು ಅಮೀನರ ನೇತೃತ್ವದಲ್ಲಿ ತುಳುನಾಡಿನ ಸಾಂಪ್ರದಾಯಿಕ ಮದುವೆಯ ಕುರಿತಾದ ವಿಚಾರಸಂಕಿರಣ ಮತ್ತು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿತು. ಇದು ಬಾಬು ಅಮೀನರ ಚಿಂತನೆ. ’ಏಕತಾ’ದ ತರುಣ ಮಿತ್ರರನ್ನು ಹುರಿದುಂಬಿಸಿ ಈ ಆನ್ವಯಿಕ ಕಾರ್ಯವನ್ನು ಅವರು ಮಾಡಿಸಿದ್ದರು. ಕೇವಲ ಪ್ರಾತ್ಯಕ್ಷಿಕೆ ಸಾಲದು. ಅದರೊಂದಿಗೆ ದಾಖಲಾತಿಯು ಬೇಕು ಎಂದು ಏಕತಾದ ಸ್ನೇಹಿತರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೇವಲ ಮೂರು ದಿನಗಳಲ್ಲಿ ಬರೆದು ಪ್ರಕಟಿಸಿದ ಕೃತಿ ’ತುಳುವೆರೆ ಮದಿಮೆ’. ತುಳು ಮತ್ತು ಕನ್ನಡ ಎರಡೂ ಭಾಷೆಗಳನ್ನು ಇಲ್ಲಿ ಬಳಸಿದ್ದಾರೆ.

ಹಿಂದೆ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ತುಳುನಾಡಿನ ಮದುವೆಯ ರೀತಿ ನೀತಿಗಳನ್ನು ಅವರು ಪುಟ್ಟ ಕೃತಿಯಲ್ಲಿ ಕ್ರಮಬದ್ಧವಾಗಿ ವಿವರಿಸಿದ್ದಾರೆ. ಹೆಣ್ಣು ನೋಡುವುದು, ಹೆಣ್ಣು ನಿಶ್ಚಯ, ಮದರಂಗಿ, ಮದುವೆಯ ಮೂರ್ತ, ದಿಬ್ಬಣ, ಕೈಧಾರೆ, ತೊಡಮನೆ ಇತ್ಯಾದಿ ಮದುವೆ ಸಂಪ್ರದಾಯಗಳನ್ನು ಕೃತಿಯಲ್ಲಿ ವಿವರಿಸಿದ್ದಾರೆ. ನಿರೂಪಣೆಯು ರಸವತ್ತಾಗಿದೆ. ಹಲವು ರಸಾತ್ಮಕ ಸಂದರ್ಭಗಳನ್ನು ಉಲ್ಲೇಖಿಸಿದ್ದಾರೆ. ಉದಾಹರಣೆಗೆ ಹಿಂದೆ ಹೆಣ್ಣು ನೋಡಲು ಹೋಗುವಾಗ ಹೆಣ್ಣಿನ ಮನೆಯಲ್ಲಿ ನೇರವಾಗಿ ಹೆಣ್ಣು ಕೊಡುತ್ತಿರೋ ಎಂದು ಕೇಳುವುದಿಲ್ಲ. ಯಾವುದೇ ಪೂರ್ವ ಸೂಚನೆ ಇಲ್ಲದೆ ಹೆಣ್ಣಿನ ಮನೆಗೆ ಬರುವುದು. ನಿಮ್ಮ ಮನೆಯಲ್ಲಿ ಮಾರುವ ದನವಿದೆಯೆ? ಎಂದು ಒಗಟು ರೂಪದಲ್ಲಿ ವಿಚಾರಿಸುತ್ತಾರೆ. ಹೆಣ್ಣು ಮಕ್ಕಳಿರುವ ಮನೆಯವರಿಗೆ ಹೆಣ್ಣು ನೋಡಲು ಬಂದಿದ್ದಾರೆ ಎಂಬ ವಿಷಯವು ಇದರಿಂದ ತಿಳಿಯುತ್ತದೆ. ಹೆಣ್ಣು ಕೊಡುವ ಮನಸ್ಸಿದ್ದರೆ ದನ ಇದೆ ಎಂದು ಹೇಳುತ್ತಿದ್ದರು. ಇಲ್ಲವಾದರೆ ’ಮಾರುವ ದನ ಇಲ್ಲ’ ಎಂದಾಗ ಬಂದವರು ಮರಳಿ ಹೋಗುತ್ತಿದ್ದರು. ಹೀಗೆ ಮದುವೆಯ ಸಮಗ್ರ ವಿವರಗಳನ್ನು ಈ ಪುಟ್ಟ ಕೃತಿಯಲ್ಲಿ ರಚನಾತ್ಮಕವಾಗಿ ವಿವರಿಸಲಾಗಿದೆ.

ಇತರ ಲೇಖನಗಳು

ಈ ಮೇಲಿನ ಕೃತಿಗಳಲ್ಲದೆ ಅವರು ಬರೆದ ನೂರಾರು ಲೇಖನಗಳು ಅಕ್ಷಯ, ಉದಯವಾಣಿ, ತರಂಗ, ಕರ್ನಾಟಕ ಮಲ್ಲ, ಬಂಟರವಾಣಿ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕರ್ನಾಟಕ ಮಲ್ಲ ಮತ್ತು ಅಕ್ಷಯ ಪತ್ರಿಕೆಗಳಲ್ಲಿ ಅವರ ಅಂಕಣ ಬರಹಗಳು ಜನಪ್ರಿಯವಾಗಿವೆ. ಹಲವಾರು ವಿಚಾರಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳು ಅಧ್ಯಯನ ಯೋಗ್ಯವಾಗಿವೆ.

ತುಳು ಜಾನಪದ ಮಾತ್ರವಲ್ಲದೆ ಕನ್ನಡದಲ್ಲೂ ಹಲವಾರು ವಿಶಿಷ್ಟ ಲೇಖನಗಳು ಪ್ರಕಟ ವಾಗಿವೆ. ‘ಯಕ್ಷಾಂಬುದಿ’, ’ಶಾಂತಿ ನಿವಾಸದ ಶಾಂತಮೂರ್ತಿ’, ’ಅಚಲ ಶ್ರದ್ಧೆಯ ಅಪ್ಪಟ ಭಾರತೀಯ’, ’ಕಾರ್ತಿ ಬೆಳೆಗೆ ನೇಗಿಲಯೋಗಿಯ ತಯಾರಿ’, ’ಶನಿಪೂಜಾ ಅರ್ಚಕ ಸಂಜೀವ ಆರ್. ಸುವರ್ಣ’, ’ಗದ್ದೆ ನಂಬಿ ಗೆದ್ದೆ ಎನ್ನುವವರುಂಟೆ?’, ’ಶಿಲ್ಪಕಲಾ ನೈಪುಣ್ಯದ ಗಣಪತಿ ಆಚಾರ್ಯ’, ’ಛಾಯಾಗ್ರಾಹಕರ ಬದುಕಿನಲ್ಲಿ ಬೆಳಕಿರಲಿ’, ’ಮಾರ್ನವಿಕಟ್ಟೆ ದೇವಿಗೆ ಸೇವಂತಿಗೆ ಸೇವೆ’, ’ಸಾಮಾಜಿಕ ಅಧಃಪತನದತ್ತ ಬಿಲ್ಲವ ಸಮಾಜ’, ‘ಎತ್ತ ಹೋಯಿತು ಏತ ನೀರಾವರಿ’, ’ಗುರು ಪರಂಪರೆಯಲ್ಲಿ ದಿವ್ಯ ತೇಜಸ್ಸು’ ಇತ್ಯಾದಿ ಎಪ್ಪತ್ತಕ್ಕೂ ಹೆಚ್ಚು ಲೇಖನಗಳನ್ನು ಅವರು ಕನ್ನಡದಲ್ಲಿ ಬರೆದಿದ್ದಾರೆ.

ತುಳುವಿನಲ್ಲಿ ಬರೆದ ಐವತ್ತಕ್ಕೂ ಹೆಚ್ಚು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಮುಂಬೈಯಲ್ಲಿ ತುಳುವರು’, ’ಬದಲಾಗುತ್ತಿರುವ ತುಳುವ ಸಂಸ್ಕೃತಿ ತುಳುವ ಕನ್ನಡಿಗ’, ’ಯಕ್ಷಗಾನದಲ್ಲಿ ಕೋಟಿಚೆನ್ನೆಯೇ’, ’ಬಡಕಾಯಿ ಪರ್ಬೊಗು ಪೋಪಿನಿ’, ’ಬಿರ್ದ್‌ದ ಬೊಂಬೆ’, ’ಮದಪೆರಾವಂದಿ ಸುಗ್ಗಿ ಕಂಬುಲ’, ’ಕಿದೆಕೊಂಜಿ ಐಸಿರಿ ಕಂಜಿ ಕೈಕಂಜಿ’, ’ಕಾಯಕಸ್ಟದ ಕಸುಬು ಮೂರ್ತೆ’ ಇತ್ಯಾದಿ ಕೆಲವು ಮುಖ್ಯ ಲೇಖನಗಳು. ಸರಳ, ಆಕರ್ಷಕ ತುಳು ಭಾಷೆಯೊಂದಿಗೆ ಶೀರ್ಷಿಕೆಯು ಇಡೀ ಲೇಖನದ ಮುಖ್ಯಾಂಶವನ್ನು ಧ್ವನಿಸುವುದು ವೈಶಿಷ್ಟ್ಯವಾಗಿದೆ. ಪತ್ರಿಕೆಗಳ ಮೂಲಕವೂ ತುಳು ಜಾನಪದ ಸಂಸ್ಕೃತಿಯನ್ನು ಪ್ರಚಾರ ಮಾಡುವ, ಬೆಳೆಸುವ, ಅಭಿರುಚಿ ಹುಟ್ಟಿಸುವ ಕಾರ್ಯವನ್ನು ಅವರು ಶ್ರದ್ಧೆಯಿಂದ ಮಾಡಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲೂ ಅವರ ಭಾಷಣ, ಸಂದರ್ಶನಗಳು ಪ್ರಕಟವಾಗಿವೆ.

ಅಧ್ಯಯನಗಳ ಸಾಂಸ್ಕೃತಿಕ ಮಹತ್ವ

ಬನ್ನಂಜೆ ಬಾಬು ಅಮೀನರ ಕೃತಿಗಳ ಮಹತ್ವವನ್ನು ಈಗಾಗಲೇ ಅಲ್ಲಲ್ಲಿ ವಿಶ್ಲೇಷಿಸಲಾಗಿದೆ. ಆದರೆ ಅವರ ಸೃಜನಶೀಲ ಸೃಷ್ಟಿ ಮತ್ತು ಸಂಶೋಧನೆಯ ಒಟ್ಟು ಧೋರಣೆಗಳನ್ನು ವಿವರಿಸಬಹುದಾಗಿದೆ.

ಜಾನಪದ ಆಚರಣೆ ಮತ್ತು ನಂಬಿಕೆಗಳು ಮೂಢನಂಬಿಕೆಗಳಲ್ಲ. ಅವು ಜನರ ಬದುಕಿನೊಂದಿಗೆ ಕ್ರಿಯಾಶೀಲವಾಗಿರಲು ಕಾರಣ ಅವು ಪ್ರತಿಪಾದಿಸುವ ಮೌಲ್ಯಗಳು. ಅವು ಪುರೋಗಾಮಿ ಜೀವನ ಮೌಲ್ಯ, ಸಮುದಾಯ ಜೀವನ, ಪ್ರಕೃತಿ ಪ್ರೀತಿ ಮತ್ತು ಭಾವೈಕ್ಯತೆಗಳನ್ನು ಪ್ರತಿಪಾದಿಸುತ್ತವೆ. ಈ ದೃಷ್ಟಿಯಿಂದ ಅವುಗಳನ್ನು ಅಧ್ಯಯನ ಮಾಡಿ ವರ್ತಮಾನಕ್ಕೆ ಸಮಕಾಲೀನಗೊಳಿಸುವ ಅಗತ್ಯವನ್ನು ಅವರು ಪ್ರತಿಪಾದಿಸುತ್ತಾರೆ. ತುಳುನಾಡಿನ ಜಾನಪದ ಆಚರಣೆಗಳು ಇಂದು ಏಕಸಂಸ್ಕೃತಿಯ ಹೆಸರಿನಲ್ಲಿ ನಾಶವಾಗುತ್ತಿವೆ. ಬಹುಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಸಾರುವ ತುಳುನಾಡಿನ ಆಚರಣೆಗಳು ವೈದಿಕ ಅನುಕರಣೆಯಿಂದ ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುತ್ತಿದೆ. ತುಳುವರ ಸಜ್ಜನಿಕೆ, ಹೊಂದಾಣಿಕೆ ಪ್ರವೃತ್ತಿ, ಮೃದು ಸ್ವಭಾವಗಳಿಗೆ ಈ ಸಾಂಸ್ಕೃತಿಕ ಹಿನ್ನೆಲೆಯೇ ಕಾರಣವೆಂಬುದನ್ನು ಮರೆಯಬಾರದು. ಸಂಸ್ಕೃತಿ ಎಂಬುದು ಪರಿವರ್ತನಾಶೀಲವಾದರೂ ಇಂದು ನಡೆಯುತ್ತಿರುವುದು ರಚನಾತ್ಮಕವಾದ ಪರಿವರ್ತನೆಯಲ್ಲ, ಈ ನಾಡಿನ ಸಜ್ಜನಿಕೆಗೆ ಮಾರಕವಾಗುವ ರೀತಿಯಲ್ಲಿ ಕೋಮು ವೈಷಮ್ಯಗಳನ್ನು ಬೆಳೆಸುವ ಪರಿವರ್ತನೆ ಅಪೇಕ್ಷಣೀಯವಾದುದಲ್ಲ. ಈ ದೃಷ್ಟಿಯಿಂದ ಮೂಲ ಸಂಸ್ಕೃತಿಯ ಜೊತೆಗೆ ಈ ನಾಡಿನ ಸಂಸ್ಕೃತಿಯನ್ನು ಪುನರ್ ರೂಪಿಸುವ ಅಗತ್ಯವಿದೆ ಎಂಬುದು ಅವರ ಕೃತಿ ರಚನೆಯ ಹಿಂದಿರುವ ಮೂಲಧೋರಣೆ. ಇದರಿಂದಲೇ ಸಂಶೋಧನಾ ಕೃತಿಗಳಂತೆ ಅವರ ಸಾಹಿತ್ಯಿಕ ರಚನೆಗಳಲ್ಲೂ ಅವರು ತುಳುನಾಡಿನ ಸಂಸ್ಕೃತಿಯ ದಾಖಲಾತಿಗೆ ಮಹತ್ವ ನೀಡುತ್ತಾರೆ.

ಹಾಗೆಂದು ತುಳುನಾಡಿನ ಆಚರಣೆಗಳೆಲ್ಲವೂ ಪುರೋಗಾಮಿ ದೃಷ್ಟಿಕೋನವನ್ನು ಹೊಂದಿವೆ ಎಂದು ಅರ್ಥವಲ್ಲ. ಈ ಅರಿವು ಬಾಬು ಅಮೀನರಿಗಿದೆ. ಇದರಿಂದಲೇ ಅಲ್ಲಲ್ಲಿ ಕೆಲವು ಎಚ್ಚರಿಕೆಯ ಮಾತನಾಡುತ್ತಾರೆ. ದೈವಸ್ಥಾನದೊಳಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ. ’ಪುರುಷ ಪ್ರಧಾನ ವ್ಯವಸ್ಥೆಯ ಅದಿಕಾರ ವ್ಯಾಪ್ತಿಯನ್ನು ಇದು ತೋರಿಸುತ್ತದೆ. ಎಲ್ಲಾ ಕಡೆ ಮಹಿಳೆಯರಿಗೆ ದೈವಸ್ಥಾನದ ಒಳಪ್ರವೇಶ ಮತ್ತು ಎಲ್ಲಾ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡುವುದು ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಎಲ್ಲಾ ತುಳು ಬಾಂಧವರು ಚಿಂತನೆ ನಡೆಸುವ ಅಗತ್ಯ ಇದೆ’ ಎಂಬುದನ್ನು ಅವರ ಬರವಣಿಗೆಯಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ. ಆರೋಗ್ಯಪೂರ್ಣವಾದ ಈ ದೃಷ್ಟಿಕೋನವು ತುಳುನಾಡಿನ ಆಚರಣೆಗಳಿಗೆ ಹೊಸ ಸ್ವರೂಪವನ್ನು ನೀಡಬಹುದಾಗಿದೆ.

ಅವರ ಕೃತಿಗಳು ಮೌಲಿಕ ದಾಖಲಾತಿ ಮಾತ್ರ ಆಗಿರದೆ ವರ್ತಮಾನದ ಅಗತ್ಯಕ್ಕೆ ತಕ್ಕಂತೆ ಪ್ರಗತಿಪರ ದೃಷ್ಟಿಕೋನವು ಗಮನ ಸೆಳೆಯುತ್ತದೆ. ಉದಾಹರಣೆಗೆ ಪಂಜುರ್ಲಿ ದೈವವನ್ನು ನಂಬುವವರು ಹಂದಿಮಾಂಸ ತಿನ್ನಬಾರದು ಎಂಬ ನಿಷೇಧದ ಬಗ್ಗೆ ಉಲ್ಲೇಖಿಸುತ್ತಾರೆ. ಬೇಟೆಯ ನಿಯಮದಂತೆ ಬೇಟೆಗಾರರು ಬೇಟೆಯಾಡಿದ ಮೃಗಗಳನ್ನು ತಿಂದು, ಕೊಂದ ಪಾಪವನ್ನು ತಿಂದು ಪರಿಹರಿಸುವಂತೆ ಹಂದಿಮಾಂಸವನ್ನು ತಿನ್ನುವುದರಲ್ಲಿ ತಪ್ಪಿಲ್ಲ ಎಂದು ವಾದಿಸುತ್ತಾರೆ. ಸಂಪ್ರದಾಯವಾದಿಯಂತೆ ವಿವರಗಳನ್ನು ದಾಖಲಿಸುತ್ತಾ ಹೋದರೂ ಬಾಬು ಅಮೀನರ ವಿಶಿಷ್ಟತೆ ಇರುವುದು ಇಂಥ ಪ್ರಗತಿಪರ ದೃಷ್ಟಿಕೋನದಲ್ಲಿ ಎನ್ನಬಹುದು. ಹರಕೆಯ ಬಗ್ಗೆ ಮಾತನಾಡುತ್ತಾ ತುಳುನಾಡ ಸಂಸ್ಕೃತಿಯಲ್ಲಿ ’ನಾಲಿಗೆ ಹೋಗಿ ದೇವಸ್ಥಾನ ಸೇರಲಿ’ ಎಂಬ ಮಾತು ಕಡಿಮೆಯಾಗುತ್ತಿದೆ. ಎಂಬುದು ಅವರು ಸಂಶೋಧನೆಯ ಮೂಲಕ ಸಾಬೀತು ಪಡಿಸಿದ ವಿಚಾರವಾಗಿದೆ. ಈ ಬಗ್ಗೆ ಅವರ ಅನಿಸಿಕೆ ಹೀಗಿದೆ. ’ವಾಕ್ ದೋಷ ಪರಿಹಾರದ ದೆಸೆಯಿಂದ ದೇವಸ್ಥಾನಗಳಿಗೆ ಆಗುವ ಆದಾಯ ಕೆಲ ಪ್ರದೇಶಗಳಿಂದಲಾದರೂ ಕಡಿಮೆಯಾಗುತ್ತಿದೆ. ಇದು ತುಂಬಾ ಹಿತಕರ ಬದಲಾವಣೆ’ ಎಂಬ ಅಭಿಪ್ರಾಯಗಳು ಮೇಲಿನ ವಿಚಾರಗಳನ್ನು ಖಚಿತಪಡಿಸುತ್ತವೆ.

’ಕೃತಿಗಾಗಿ ಕೃತಿ’ ’ಸಂಶೋಧನೆಗಾಗಿ ಸಂಶೋಧನೆ’ ಎಂಬ ತತ್ವ ಎಲ್ಲೂ ಅವರ ಕೃತಿಗಳಲ್ಲಿ ಗೋಚರಿಸುವುದಿಲ್ಲ. ಖಚಿತವಾದ ಉದ್ದೇಶದೊಂದಿಗೆ ಸ್ಪಷ್ಟ ನಿರೂಪಣೆ ಅವರ ಶೈಲಿ. ಅಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ. ತಾನು ಬರೆದುದು ಸಮಾಜಕ್ಕೆ ಉಪಯೋಗವಾಗಬೇಕೆಂಬ ನೇರವಾದ ಅನ್ವಯಿಕ ದೃಷ್ಟಿಕೋನ ಅವರದು. ಅವರ ವ್ಯಕ್ತಿತ್ವದಲ್ಲಿರುವ ನೇರ ನಡೆ-ನುಡಿ ಅವರ ಬರಹಗಳಲ್ಲೂ ವ್ಯಕ್ತವಾಗಿದೆ. ಈ ದೃಷ್ಟಿಯಿಂದಲೇ ಸರಳ ಸಹಜ ಭಾಷೆಯೊಂದಿಗೆ ತುಳು ಕಂಪಿನ ಮೂಲಕ ಜನಮಾನಸದೊಂದಿಗೆ ಅವರಿಗೆ ಸಂವಹನ ಸಾಧ್ಯವಾಗಿದೆ.

ಸಂಪಾದಕನಾಗಿ

ಅಕ್ಷಯ ಪತ್ರಿಕೆಯಲ್ಲಿ ಬನ್ನಂಜೆ ಬಾಬು ಅಮೀನರೊಂದಿಗಿನ ಅನುಭವದಿಂದ ಈಶ್ವರ ಅಲೆವೂರು ಹೀಗೆ ಬರೆಯುತ್ತಾರೆ.

’ಬನ್ನಂಜೆ ಬಾಬು ಅಮೀನರು 1991ರ ಡಿಸೆಂಬರ್ ಸಂಚಿಕೆಯಿಂದ ಜನವರಿ 1993ರ ವರೆಗಿನ ’ಅಕ್ಷಯ’ ಸಂಪಾದಕರಾಗಿ ಅರ್ಥಪೂರ್ಣ ಸೇವೆಯನ್ನು ಸಲ್ಲಿಸಿದ್ದಾರೆ. ಇನ್ನೋರ್ವ ಚಿಂತಕ – ರವಿಅಂಚನ್, ಶಿವಬಿಲ್ಲವ, ಎಸ್.ಕೆ. ಸುಂದರ್, ಪಂಜು ಗಂಗೂಲಿ ಯವರ ಜೊತೆಗೂಡಿ ಹಲವು ಹೊಸತುಗಳನ್ನು ’ಅಕ್ಷಯ’ಕ್ಕೆ ಸೇರಿಸಿದ ಕೀರ್ತಿ ಬನ್ನಂಜೆ ಯವರಿಗೆ ಸಲ್ಲುತ್ತದೆ.

ಚಿಕ್ಕ ಗಾತ್ರದಲ್ಲಿದ್ದ ’ಅಕ್ಷಯ’ವನ್ನು ದೊಡ್ಡ ಗಾತ್ರಕ್ಕೆ ವಿಸ್ತರಿಸಿ ನ್ಯೂಸ್‌ಪ್ರಿಂಟ್ ಕಾಗದ ಬಳಸಿ, ಹೂರಣಕ್ಕೆ ಕುಂಚ-ಕಲಾವಿದನ ರೇಖೆಗಳನ್ನು ಉಪಯೋಗಿಸಿ ಪತ್ರಿಕೆಯ ರೂಪು ನೀಡಿದ ಹೆಗ್ಗಳಿಕೆ ಬನ್ನಂಜೆ ಬಳಗಕ್ಕೆ ಸಲ್ಲುತ್ತದೆ. ಪತ್ರಿಕೆಯಲ್ಲಿ ಬನ್ನಂಜೆಯವರು ಸಂಪಾದಕ ರಾಗಿದ್ದರೂ ಸಂಪಾದಕೀಯ ಬರಹಗಳ ಜವಾಬ್ದಾರಿಯನ್ನು ನಿರ್ವಾಹಕ – ಸಂಪಾದಕರಿಗೆ ನೀಡಿದ್ದು ಇವರ ದೊಡ್ಡ ಗುಣವನ್ನು, ಔದಾರ್ಯವನ್ನು ಸೂಚಿಸುತ್ತದೆ. ’ಅಕ್ಷಯ’ಕ್ಕೆ ಹೊಸ ಹೊಸ ಅಂಕಣ, ಸ್ಥಿರ ಶೀರ್ಷಿಕೆಗಳನ್ನು ಪರಿಚಯಿಸಿದ ಅಗ್ಗಳಿಕೆ ಬನ್ನಂಜೆ ಬಳಗಕ್ಕೆ ಸಲ್ಲುತ್ತದೆ.

’ತೂಗುತೊಟ್ಟಿಲ್’, ’ಚಾವಡಿ’, ’ಆರೋಗ್ಯ’, ’ಚೆನ್ನೆಮಣೆ’, ’ಕಂಡದ್ದು ಕೇಳಿದ್ದು’, ’ಕಡಗೋಲು’, ’ಕ್ರೀಡಾಂಗಣ’ ಮುಂತಾದ ನವನವೀನ ಸ್ಥಿರಾಂಕಣಗಳು ಬನ್ನಂಜೆಯವರ ಸಂಪಾದಕತ್ವದ ಕಾಲದಲ್ಲಿ ಮೂಡಿಬಂದವು. ’ಕಡಗೋಲು’ ಸಂಪಾದಕೀಯ ಬರಹ ಗಳಾದರೆ, ’ಚಾವಡಿ’ಯಲ್ಲಿ  ಸಮಾಜದ ವಿವಿಧ ಸಮಸ್ಯೆಗಳ ಬಗ್ಗೆ ವಿವಿಧ ಲೇಖಕರಿಂದ ಮುಕ್ತ ಚರ್ಚೆ ನಡೆಯುತ್ತಿತ್ತು. ’ಚೆನ್ನಮಣೆ’ ಪದಬಂಧಕ್ಕೆ ಮೀಸಲಿಟ್ಟ ಅಂಕಣವಾದರೆ ’ಕಂಡದ್ದು – ಕೇಳಿದ್ದು’ ಅಂಕಣದಲ್ಲಿ ಸಮಾಜದ ವೈರುಧ್ಯಗಳ ಬಗ್ಗೆ ಅನುಭವ ಪ್ರಕಟವಾಗುತ್ತಿತ್ತು.

’ಗುರುವಿದ್ದ ಗುರಿಯಿಡೆಗೆ’ ಅಂಕಣದಲ್ಲಿ ದಿನೇಶ್ ಅಮೀನ್ ಮಟ್ಟು ಅವರು ನಾರಾಯಣ ಗುರುಗಳ ಜೀವನ ಚಿಂತನೆ ಬಗ್ಗೆ ಧಾರಾವಾಹಿ ಆರಂಬಿಸಿದರೆ ’ಅಂದಿನ ದಿನ ಸುದಿನ’ ಅಂಕಣದಲ್ಲಿ ವಿದ್ವಾನ್ ರಾಮಚಂದ್ರ ಉಚ್ಚಿಲರು ಸುದೀರ್ಘ ಮುಂಬಯಿ ಜೀವನದ ಬುತ್ತಿಯನ್ನು ಬಿಚ್ಚಲಾರಂಬಿಸಿದರು.

ಬನ್ನಂಜೆಯವರ ಬರಹಗಳು ಮೊಟ್ಟಮೊದಲು ಕಾಣಿಸಿಕೊಂಡದ್ದು ಇಲ್ಲಿನ ’ನಾವಿರೋದೇ ಹೀಗೆ’ ಹಾಗೂ ’ಆಚಾರ-ವಿಚಾರ’ ಅಂಕಣಗಳಲ್ಲಿ. ಬನ್ನಂಜೆ ಬಾಬು ಅಮೀನರು ಅಕ್ಷಯದಲ್ಲಿ ಬರೆದಿರುವ ’ಅಂಕಣ’ ಬರಹಗಳಲ್ಲಿ ’ಬಾಣಂತಿಗೆ ಬಲುತೆರನ ಆರೈಕೆ’, ’ಮರಣದಲ್ಲಿ ಮಸಣಕ್ರಿಯೆ’, ’ತುಳುನಾಡ ಹೆಣ್ಣಿಗೆ ನಿಶ್ಚಯ ತಾಂಬೂಲ’, ’ದೀಪಾವಳಿ ಬಲೀಂದ್ರ ಪೂಜೆ’, ’ಕನ್ಯತಿಂಗಳು ಕದಿರು ಕಟ್ಟುವ ಹಬ್ಬ’, ’ಆಟಿಯ ಆಪತ್ತಿನಿಂದ ಸೋಣದ ಪವಿತ್ರತೆಯೆಡೆಗೆ’, ’ಕಾರ್ತಿ ಬೆಳೆಗೆ ನೇಗಿಲ ಯೋಗಿಯ ತಯಾರಿ’ ಯಾವತ್ತೂ ಮರೆಯುವ ಹಾಗಿಲ್ಲ. ಅಥೆಂಟಿಕ್ ಮಾಹಿತಿಯೊಂದಿಗೆ ಕಣ್ಣಿಗೆ ಕಟ್ಟುವ ಹಾಗೆ ರೂಪಕದ ಧಾಟಿಯಲ್ಲಿ ವರ್ಣಿಸುವ ಬಗೆ ಆಪ್ಯಾಯಮಾನವಾದದ್ದು. ಬನ್ನಂಜೆಯವರ ಲೇಖನ ಶೈಲಿ ಒಂದು ಕ್ಷಣ ನಮ್ಮನ್ನು ತಾಯ್ನಡಿನತ್ತ ಕೊಂಡೊಯ್ಯುತ್ತದೆ. ತುಳುನಾಡಿನ ಆಚಾರ, ಸಂಪ್ರದಾಯ, ಋತುಮಾನದ ವಿಶೇಷತೆ, ಹಬ್ಬ ಹರಿದಿನಗಳ ಬಗ್ಗೆ ಬನ್ನಂಜೆ ಯವರು ಬರೆಯುವಷ್ಟು ಪರಿಣಾಮಕಾರಿಯಾಗಿ ಬೇರೆಯವರು ಬರೆಯಲಾರರು ಎಂದರೆ ಉತ್ಪ್ರೇಕ್ಷೆ ಆಗಲಾರದು. ಬನ್ನಂಜೆಯವರು ಮುಂಬಯಿಯಲ್ಲಿ ಹಲವು ಕಾಲ ಇದ್ದರೂ ಕೂಡ ಅವರ ಮನಸ್ಸು ತಾಯ್ನಡಿನತ್ತ ತುಡಿಯುತ್ತಿತ್ತು ಎನ್ನುವುದಕ್ಕೆ ಅವರ ಬರಹಗಳೇ ಸಾಕ್ಷಿ.

ಬನ್ನಂಜೆ ಅಮೀನರು ’ಅಕ್ಷಯ’ದ ಸಂಪಾದಕರಾಗಿದ್ದ ಕಾಲದಲ್ಲಿ ಸಮಾಜದ ಹಾಗೂ ಇತರ ಸಮಾಜದ ಯುವ ಲೇಖಕರನ್ನು ಬರೆಯಲು ಹುರಿದುಂಬಿಸಿದವರು. ಪ್ರತಿ ಸಂಚಿಕೆಗೂ ಒಂದು ವಿಶೇಷ ಮುಖಪುಟ ಲೇಖನ ಸಿದ್ಧಮಾಡಿ ಪ್ರಕಟಿಸುತ್ತಿದ್ದದ್ದು ಬನ್ನಂಜೆ ಸಂಪಾದಕತ್ವ ಕಾಲದ ಒಂದು ವೈಶಿಷ್ಟ್ಯ. ಒಟ್ಟಿನಲ್ಲಿ ’ಅಕ್ಷಯ’ವನ್ನು ವೈವಿಧ್ಯಮಯ ಗೊಳಿಸುವಲ್ಲಿ ಬನ್ನಂಜೆಯ ಪಾತ್ರವೂ ಗಮನಾರ್ಹವಾಗಿತ್ತು ಎಂಬುದು ನನ್ನ ಬರವಣಿಗೆಯ ಇಂಗಿತ.’’

ಸಂಸ್ಕೃತಿ ಪ್ರಚಾರಕ

ಸಾಹಿತ್ಯ ಮತ್ತು ಜಾನಪದ ಸಂಶೋಧನೆಯೊಂದಿಗೆ ಬಾಬು ಅಮೀನರು ಮಾಡುತ್ತಿರುವ ಇನ್ನೊಂದು ಮಹತ್ವದ ಕಾರ್ಯವೆಂದರೆ ಸಂಸ್ಕೃತಿ ಪ್ರಚಾರದ ಕೆಲಸ. ತಮ್ಮ ಸೃಜನಶೀಲ ಬರವಣಿಗೆ ಮತ್ತು ಜಾನಪದ ಸಂಶೋಧನೆಯಲ್ಲಿ ಅವರು ಈ ಉದ್ದೇಶವನ್ನು ಇಟ್ಟುಕೊಂಡಿರುವುದು ಅಧ್ಯಯನದಿಂದ ಖಚಿತವಾಗುತ್ತದೆ. ಜಾನಪದವು ಕೇವಲ ದಾಖಲೀಕರಣ ಮಾತ್ರವಾಗಬಾರದು. ಸಮಾಜದ ಪ್ರಯೋಜನಕ್ಕಲ್ಲದ ಯಾವುದೇ ಸಂಶೋಧನೆಗೆ ಅರ್ಥವಿಲ್ಲ ಎಂಬುದು ಅವರ ಖಚಿತ ಅಭಿಪ್ರಾಯ. ಇದರಿಂದಲೇ ಅವರ ಪುಸ್ತಕಗಳಿಗೆ ಇಂದು ಬೇಡಿಕೆಯಿದೆ.

ಜಾನಪದ ಕ್ಷೇತ್ರಕಾರ್ಯದ ಮೂಲಕ ಅವರು ಕಂಡುಕೊಂಡ ವಿಚಾರಗಳನ್ನು ತುಳುನಾಡಿನ ಆಚರಣೆಗಳಲ್ಲಿ ಅವರು ಅನ್ವಯಿಸುತ್ತಿದ್ದಾರೆ. ಈ ಬಗ್ಗೆ ಖಚಿತವಾದ ನಿಲುವು ಅವರಿಗಿದೆ. ಬದುಕಿನಂತೆ ಜಾನಪದವು ನಿಂತ ನೀರಲ್ಲ. ಅದು ಬದಲಾವಣೆಯ ಗಾಳಿಗೆ ಸಿಕ್ಕಿ ಪರಿವರ್ತನೆ ಆಗುವುದು ಸಹಜ. ಆದರೆ ಈ ಪರಿವರ್ತನೆ ಬದುಕಿಗೆ ಪೂರಕವಾಗಿರಬೇಕು. ಹಳತು – ಹೊಸತನ ಸಮ್ಮಿಳನಗೊಂಡು ಹೊಸ ಸಂಸ್ಕೃತಿ ರೂಪುಗೊಳ್ಳುತ್ತದೆ. ಈ ರೂಪುಗೊಳ್ಳುವಿಕೆ ಮೊದಲಿನಿಂದಲೂ ನಡೆದಿದೆ. ಆದರೆ ಇಂದು ಹೊಸತನದ ಹೆಸರಿನಲ್ಲಿ ನಡೆಯುತ್ತಿರುವುದು ನಿಜವಾದ ಪರಿವರ್ತನೆಯಲ್ಲ. ಆಚರಣೆಗಳು ಕೇವಲ ಡಂಬಾಚಾರ, ವ್ಯಕ್ತಿ ಪ್ರತಿಷ್ಠೆಗಾಗಿ ನಡೆಯುತ್ತಿದೆ. ಇದಕ್ಕೆ ಒಂದು ಪರಿಹಾರವೆಂದರೆ ಪ್ರಜ್ಞಾಪೂರ್ವಕವಾಗಿ ನಮ್ಮ ಪರಂಪರಾಗತ ಸಾಂಸ್ಕೃತಿಕ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡುವುದು.

ಈ ಖಚಿತ ನಿಲುವನ್ನು ಅವರು ಹೊಂದಿದ್ದಾರೆ. ಈ ಎಚ್ಚರದಲ್ಲಿ ಸಂಸ್ಕೃತಿ ಪ್ರಚಾರದ ಕಾರ್ಯವನ್ನು ಕೈಗೊಳ್ಳುತ್ತಿದ್ದಾರೆ. ಮದುವೆ, ಸಾವಿನ ಆಚರಣೆಗಳು, ಭೂತಾರಾಧನೆಯ ಆಚರಣೆಗಳಲ್ಲಿ ಅವರು ಈ ನೆಲೆಯಲ್ಲಿ ಭಾಗವಹಿಸುತ್ತಾರೆ. ಇಂದು ಉಡುಪಿ ಜಿಲ್ಲೆಯಲ್ಲಿ ಹಲವು ಮದುವೆಯ ಕಾರ್ಯಕ್ರಮಗಳಲ್ಲಿ ಅವರು ಮಾಗದರ್ಶಕರಾಗಿದ್ದಾರೆ. ಮದುವೆ ಎಂಬುದು ಒಂದು ಅರ್ಥಪೂರ್ಣ ಸಾಂಸ್ಕೃತಿಕ ಆಚರಣೆ. ಗಂಡು-ಹೆಣ್ಣು ಜತೆಯಾಗಿ ಬಾಳುವುದಕ್ಕೆ ಸಾಮಾಜಿಕ ಒಪ್ಪಿಗೆ ಪಡೆಯುವ ಈ ಕ್ರಿಯೆಯನ್ನು ನಮ್ಮ ಹಿರಿಯರು ಸಂಪ್ರದಾಯಬದ್ಧವಾಗಿ ನಿರ್ವಹಿಸುತ್ತಿದ್ದರು. ಈ ಸಂಪ್ರದಾಯಗಳಿಗೆ ಸಾಮಾಜಿಕ ಮತ್ತು ಧಾರ್ಮಿಕ ಅರ್ಥಗಳಿವೆ. ಅದು ವಿದಿವತ್ತಾಗಿ ನಡೆದಾಗ ಮಾತ್ರ ಈ ಅರ್ಥ ಸಿದ್ಧಿಸುತ್ತದೆ.

ಇಂದು ಮದುವೆ ಎಂಬುದು ಆಡಂಬರದ ಉತ್ಸವವಾಗುತ್ತಿದೆ. ಮದುವೆ ಸಮಾರಂಭಗಳು ಪ್ರತಿಷ್ಠೆಯನ್ನು ಮೆರೆಯುವ ವೇದಿಕೆಗಳಾಗುತ್ತಿವೆ. ದುಂದುವೆಚ್ಚ ಹೆಚ್ಚಾಗುತ್ತಿದೆ. ಇದು ಮದುವೆಯ ಪಾವಿತ್ರವನ್ನು ಹಾಳು ಮಾಡುತ್ತಿದೆ. ಇದರೊಂದಿಗೆ ಇನ್ನೊಂದು ಸಮಸ್ಯೆಯನ್ನು ಬಾಬು ಅಮೀನರು ಗುರುತಿಸುತ್ತಾರೆ. ಮದುವೆಯ ಹಿಂದಿನ ರಾತ್ರಿ ಮದರಂಗಿ ಕಾರ್ಯಕ್ರಮ ಬಹಳ ವಿದಿವತ್ತಾಗಿ ನಡೆಯಬೇಕಾದ ಕಾರ್ಯ. ಮದುವೆಯಲ್ಲಿ ಇದಕ್ಕೆ ಸಾಂಕೇತಿಕವಾದ ಅರ್ಥವಿದೆ. ಕೆಲವು ಸಮಾಜಗಳು ಇಂದೂ ಇಂಥ ಕ್ರಿಯೆಗಳನ್ನು ವಿದಿವತ್ತಾಗಿ ನಡೆಸುತ್ತಿವೆ. ಆದರೆ ತುಳುವರ ಮದುವೆಯಲ್ಲಿ ಈ ಮದರೆಂಗಿ ಕಾರ್ಯವು ಭರ್ಜರಿ ಪಾರ್ಟಿಯಾಗಿ ಪರಿವರ್ತಿತವಾಗುತ್ತಿದೆ. ಮದ್ಯದ ಅಮಲಿನಲ್ಲಿ ಕುಣಿದು ಕುಪ್ಪಳಿಸುತ್ತಾ ಬೆಳಗಿನವರೆಗೂ ಪಾರ್ಟಿಯಲ್ಲಿ ನಿರತರಾಗುತ್ತಾರೆ. ಇದರ ಪರಿಣಾಮವು ಮರುದಿನದ ಮದುವೆಯ ಮೇಲಾಗುವುದನ್ನು ಗುರುತಿಸಬಹುದಾಗಿದೆ. ನಿಜವಾದ ಮದುವೆ ಕಾರ್ಯಕ್ರಮ ಕಾಟಾಚಾರಕ್ಕಾಗಿ ನಡೆಯುತ್ತಿದೆ. ಇದು ಸಾಂಸ್ಕೃತಿಕ ಅಧಃಪತನವೆಂದು ಅವರು ಗುರುತಿಸುತ್ತಾರೆ.

ತುಳುವರ ಮದುವೆಯ ಮೇಲಾದ ಇನ್ನೊಂದು ಪರಿಣಾಮವೆಂದರೆ ಅದು ವೈದಿಕ ಆಚರಣೆಗಳ ಪ್ರಭಾವ. ಬಾಬು ಅಮೀನರ ದೃಷ್ಟಿಯಲ್ಲಿ ತುಳುವರದು ಅವೈದಿಕ ಆಚರಣೆ. ಅವೈದಿಕ-ವೈದಿಕ ಎರಡೂ ಹಿಂದೂ ಧರ್ಮದ ಕವಲುಗಳು. ಆದರೆ ತುಳುವರ ಆಚರಣೆಗೆ ಅವರದೇ ಆದ ವೈಶಿಷ್ಟ್ಯಗಳಿವೆ. ಅದು ಅವೈದಿಕ ರೀತಿಯಲ್ಲಿ ರೂಪುಗೊಂಡ ಆಚರಣೆ. ಇಂದು ಮದುವಯೆಂದರೆ ಸಿನಿಮಾದಲ್ಲಿ ಕಾಣುವಂತೆ ಸಪ್ತಪದಿ ತುಳಿದು ಕರಿಮಣಿ ಕಟ್ಟುವ ಕ್ರಿಯೆಯಾಗುತ್ತಿದೆ. ಹೋಮ ಹವನಾದಿಗಳಿಗೆ ಹೆಚ್ಚು ಪ್ರಾಶಸ್ತ್ಯ ದೊರೆಯುತ್ತಿದೆ. ಇದರಿಂದ ತುಳುವರ ಮದುವೆಯೆಂಬುದು ಒಂದು ಯಾಂತ್ರಿಕ ಕ್ರಿಯೆಯಾಗುತ್ತಿದೆ ಎಂದು ಸ್ಪಷ್ಟ ಅಭಿಪ್ರಾಯವನ್ನು ಅವರು ನೀಡುತ್ತಾರೆ. ಇದನ್ನು ಇಂದು ತುಳು ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ.

ಈ ದೃಷ್ಟಿಯಿಂದಲೇ ಅವರು ಹೆಣ್ಣು ನಿಶ್ಚಯದಿಂದ ಆರಂಬಿಸಿ ಮದುವೆಯ ಎಲ್ಲಾ ಕ್ರಿಯೆಗಳಿಗೂ ಪ್ರಾಶಸ್ತ್ಯ ನೀಡುತ್ತಾರೆ. ಅವರ ಆಚರಣಾತ್ಮಕ ರೀತಿಯನ್ನು ಎಷ್ಟೋ ತುಳುವರು ಮೆಚ್ಚಿ ಇಂದು ಅವರನ್ನು ಈ ಸಮಾರಂಭ ನಿರ್ವಹಣೆಗೆ ಆಹ್ವಾನಿಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿರುವ ತುಳುನಾಡಿನ ಮದುಮಗನೊಬ್ಬನ ಹೆಣ್ಣು ನಿಶ್ಚಯದಲ್ಲಿ ನಡೆದ ಒಂದು ವಿಶೇಷ ಘಟನೆಯನ್ನು ಉಲ್ಲೇಖಿಸಬೇಕು. ಆರಂಭದಲ್ಲಿ ಇದು ಏನು ಎಂಬುದು ಆ ವರನಿಗೆ ಅರ್ಥವಾಗದೆ ಅವನು ಗೊಂದಲದಲ್ಲಿದ್ದ. ಕ್ರಮೇಣ ಈ ಆಚರಣೆಗಳು ವಿದಿವತ್ತಾಗಿ ನಡೆದಾಗ ಅವನಿಗೆ ಈ ಆಚರಣೆಗಳ ಮೌಲ್ಯ ಸ್ಪಷ್ಟವಾಗುತ್ತಾ ಹೋಯಿತು. ಕೊನೆಯಲ್ಲಿ ಆತ ಬಾಬು ಅಮೀನರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ’ನಮ್ಮಂತವರಿಗೆ ನೀವು ಇದನ್ನು ಕಲಿಸಿ ಕೊಡುತ್ತಿದ್ದೀರಿ. ಬಹಳ ಸುಂದರವಾಗಿ ಕಾರ್ಯಕ್ರಮವನ್ನು ನಡೆಸಿದ್ದೀರಿ’ ಎಂದು ಭಾವಪೂರ್ಣವಾಗಿ ಕೃತಜ್ಞತೆ ಸಲ್ಲಿಸಿದ್ದು ನೆನಪಿದೆ. ಹೀಗೆ ಯುವಕರ ಮನಸ್ಸಿನಲ್ಲಿ ಸಂಸ್ಕೃತಿಯ ವಿಚಾರಗಳನ್ನು ಬೇರೂರುವಂತೆ ಮಾಡುವ ಕೆಲಸವನ್ನು ಬಾಬು ಅಮೀನರು ಮೌನವಾಗಿಯೆ ಮಾಡುತ್ತಿದ್ದಾರೆ. ಹಾಗೆಂದು ಬದಲಾವಣೆಗೆ ಅವರು ತೆರೆದುಕೊಂಡಿಲ್ಲವೆಂದಲ್ಲ. ಹಿಂದೆ ತುಳುವರ ಮದುವೆ ಹಲವು ದಿನಗಳ ಕಾಲ ನಡೆಯುತ್ತಿತ್ತು. ಆದರೆ ಇಂದಿನ ಗಡಿಬಿಡಿ ಒತ್ತಡದ ಬದುಕಿನಲ್ಲಿ ನಾವು ಅದನ್ನು ನಿರೀಕ್ಷಿಸಬಾರದು. ಆದರೆ ಸೀಮಿತ ಅವದಿಯಲ್ಲಿ ಒಳ್ಳೆಯ ಸಂಪ್ರದಾಯದ ಚೌಕಟ್ಟಿನಲ್ಲಿ ಇದನ್ನು ನಿರ್ವಹಿಸುವುದರಲ್ಲಿ ಏನು ತಪ್ಪಿದೆ? ಎಂದು ಪ್ರಶ್ನಿಸುತ್ತಾರೆ. ಕೆಲವರು ತಮ್ಮ ಪ್ರತಿಷ್ಠೆಗಾಗಿ ಆಡಂಬರದ ಮದುವೆಗಾಗಿ ಮಾಡುವ ಖರ್ಚಿನ ಅರ್ಧಭಾಗವನ್ನು ನಿಜವಾದ ಸಾಮಾಜಿಕ ಚಟುವಟಿಕೆಗಳಿಗೆ ತೊಡಗಿಸಬಹುದೆಂದು ಅವರು ಅಭಿಪ್ರಾಯಪಡುತ್ತಾರೆ.

ಉತ್ತರಕ್ರಿಯೆಯ ಆಚರಣೆಯನ್ನು ಅವರು ಹಲವು ಕಡೆ ವಿದಿವತ್ತಾಗಿ ನಡೆಸಲು ಮಾರ್ಗದರ್ಶನ ಮಾಡಿದ್ದಾರೆ. ಅಂತ್ಯಕ್ರಿಯೆಯು ನಿಜವಾಗಿಯೂ ಸಾರ್ಥಕ ಬದುಕನ್ನು ಬಾಳಿದ ವ್ಯಕ್ತಿಗೆ ನಾವು ನೀಡುವ ಅಂತಿಮ ಗೌರವ. ಇದು ಕಾಟಾಚಾರಕ್ಕಾಗಿ ನಡೆಯ ಬಾರದು. ಸತ್ತ ಬಳಿಕ ಏನಾದರೇನು? ಹೇಗಾದರೇನು? ಎಂಬ ಉದಾತ್ತ ಧೋರಣೆಯೇನೋ ಸರಿ. ಆದರೆ ಸತ್ತವರಿಗೆ ನಾವು ಗೌರವ ಸಲ್ಲಿಸಬೇಕಾದ ಜವಾಬ್ದಾರಿಯೊಂದಿಗೆ ಅದನ್ನು ನಾವು ನಿರ್ವಹಿಸಲೇಬೇಕು. ಈ ದೃಷ್ಟಿಯಿಂದ ತುಳುವರಲ್ಲಿ ಅಂತ್ಯಕ್ರಿಯೆಯ ಆಚರಣೆಯು ವಿದಿವತ್ತಾಗಿ ನಡೆಯಬೇಕೆಂಬುದು ಅವರ ಅಭಿಪ್ರಾಯ. ಈ ದೃಷ್ಟಿಯಿಂದ ಅವರು ಹಲವು ಸಂದರ್ಭಗಳಲ್ಲಿ ಈ ಆಚರಣೆಗಳನ್ನು ನಡೆಸಿ ಅದು ತುಳುವರಲ್ಲಿ ಚಲನಶೀಲವಾಗುವಂತೆ ಮಾಡಿದ್ದಾರೆ.

ಬಾಬು ಅಮೀನರು ತಮ್ಮ ಸಂಶೋಧನೆಯ ಅನುಭವವನ್ನು ಅನ್ವಯಗೊಳಿಸುವ ಇನ್ನೊಂದು ಕ್ಷೇತ್ರ ಭೂತಾರಾಧನೆ. ಚಿಕ್ಕಂದಿನಿಂದಲೂ ಅವರಿಗೆ ಭೂತಾರಾಧನೆಯ ಬಗ್ಗೆ ತೀವ್ರ ಆಸಕ್ತಿ. ಬಾಲ್ಯದಲ್ಲಿಯೇ ಅದರ ಎಲ್ಲಾ ವಿಚಾರಗಳನ್ನು ಸೂಕ್ಷ್ಮವಾಗಿ ನೋಡಿ ವಿವೇಚಿಸುವ ಮನಸ್ಸು ಅವರಲ್ಲಿತ್ತು. ಇದರಿಂದ ಮುಂದೆ ಸಹಜವಾಗಿಯೇ ಅವರ ಕುತೂಹಲ ಹೆಚ್ಚಿ ಈ ಬಗ್ಗೆ ಅಧ್ಯಯನ ನಡೆಸುವಂತೆ ಪ್ರೇರೇಪಿಸಿತು. ಈ ಪ್ರೇರೇಪಣೆಯು ಮುಂದೆ ಅವರು ಈ ಆಚರಣೆಯಲ್ಲಿ ಭಾಗವಹಿಸುವಂತೆ ಮಾಡಿತು.

ಅವರು ಇಂದು ಹಲವೆಡೆ ಭೂತಾರಾಧನೆಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಈ ಬಗ್ಗೆ ತಮ್ಮ ಅನುಭವದಿಂದ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ. ಅವರ ಸಂಶೋಧನೆಯ ಬಹುತೇಕ ವಿಷಯಗಳು ಭೂತಾರಾಧನೆಗೆ ಸಂಬಂಧಿಸಿರುವಂತಹುದು. ಭೂತಾರಾಧನೆಯಲ್ಲಿ ’ಮದು ಹೇಳುವುದು’ ಅಂದರೆ ಭೂತ ಕಟ್ಟಿದವರಿಗೆ ಆವೇಶ ಬರುವ ಮೊದಲು ಹೇಳುವ ನುಡಿಕಟ್ಟನ್ನು ’ಮದು ಪನ್ಪಿನಿ’ ಎಂದು ಕರೆಯುತ್ತಾರೆ. ಇದಕ್ಕೆ ಪರಿಣತರಾದ ಜನರಿರುತ್ತಾರೆ. ಅವರು ಭೂತದರ್ಶನದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಒಂದು ರೀತಿಯಲ್ಲಿ ದರ್ಶನ ಪಾತ್ರಿ ಮತ್ತು ಜನರ ನಡುವೆ ಸಂವಹನಕಾರರಾಗಿಯೂ ಈ ಮದು ಹೇಳುವವರು ಸಹಕರಿಸುತ್ತಾರೆ. ಬಾಬು ಅಮೀನರು ಮದು ಹೇಳುವ ಕಾರ್ಯವನ್ನು ಬಹಳ ಸುಂದರವಾಗಿ ನಿರ್ವಹಿಸುತ್ತಾರೆ. ತುಳುವಿನಲ್ಲಿ ವಿದಿವತ್ತಾಗಿ ಈ ಕ್ರಿಯೆಯನ್ನು ಅವರು ನಿರ್ವಹಿಸುತ್ತಾರೆ. ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿರುವ ಅವರು ತಮ್ಮ ಮಾತುಗಳಿಗೆ ಪುಂಖಾನುಪುಂಖವಾಗಿ ಸಮರ್ಥನೆಯನ್ನು ನೀಡುತ್ತಾರೆ. ಒಂದು ರೀತಿಯಲ್ಲಿ ಕೋರ್ಟಿನಲ್ಲಿ ದಾಖಲೆಗಳೊಂದಿಗೆ ವಾದ ಮಾಡುವ ವಕೀಲನಂತೆ ಅವರು ಈ ಕ್ಷೇತ್ರದಲ್ಲಿ ನೆಲೆಯೂರಿದ್ದಾರೆ. ಇಂದು ಈ ಕ್ಷೇತ್ರದಲ್ಲಿ ಎಲ್ಲಾ ವಿಚಾರಗಳಿಗೂ ಅದಿಕೃತ ವಕ್ತಾರರಾಗಿದ್ದಾರೆ.

ಈಗಾಗಲೇ ’ಗರೋಡಿಗಳ ಸಾಂಸ್ಕೃತಿಕ ಅಧ್ಯಯನ’ದಂತೆ ಭೂತಾರಾಧನೆಗೆ ಸಂಬಂಧಿಸಿದ 400 ಪುಟಗಳ ಬೃಹತ್ ಗ್ರಂಥವೊಂದನ್ನು ತರುವ ಸಿದ್ಧತೆಯನ್ನು ಅವರು ನಡೆಸುತ್ತಿದ್ದಾರೆ. ತುಳುನಾಡಿನ ಹಲವು ಭಾಗಗಳನ್ನು ಸಂದರ್ಶಿಸಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಮಹತ್ವದ ಒಳನೋಟಗಳಿಂದ ಅದನ್ನು ವಿಶ್ಲೇಷಿಸುತ್ತಿದ್ದಾರೆ. ಭೂತಾರಾಧನೆಯ ಬಗೆಗೆ ಸಮಗ್ರ ವಿವರಗಳು ಒಂದು ಕಡೆ ದೊರೆಯಬೇಕೆಂಬುದು ಅವರ ಇಚ್ಛೆ. ಈಗಾಗಲೇ ಈ ಕ್ಷೇತ್ರದಲ್ಲಿ ಸಾಕಷ್ಟು ಅಧ್ಯಯನಗಳು ನಡೆದಿವೆ. ಅಂತಾರಾಷ್ಟ್ರೀಯ ಖ್ಯಾತಿಯ ಜಾನಪದ ವಿದ್ವಾಂಸರಾದ ಡಾ. ಕೆ. ಚಿನ್ನಪ್ಪ ಗೌಡರು ಆಳವಾದ ಸಂಶೋಧನೆಯನ್ನು ನಡೆಸಿ ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ. ಇನ್ನೂ ಹಲವು ಸಂಶೋಧನೆಗಳು ದಾಖಲೀಕರಣಗಳು ನಡೆದಿವೆ. ಆದರೆ ಬಾಬು ಅಮೀನರದು ಇಲ್ಲೂ ಆನ್ವಯಿಕ ದೃಷ್ಟಿ. ಸಂಶೋಧನೆಗಳು ಭೂತಾರಾಧನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಖಂಡಿತಾ ಸಹಾಯ ನೀಡಿವೆ. ಈ ಬಗ್ಗೆ ಕುತೂಹಲವನ್ನು ಕೆರಳಿಸಿವೆ. ಆದರೆ ಸಾಮಾನ್ಯ ಜನರು ತಮ್ಮ ನಿತ್ಯ ಬದುಕಿನ ಆಚರಣೆಗಳಲ್ಲಿ ಅದನ್ನು ಅನ್ವಯಿಸಲು ಬೇಕಾದ ಮಾಹಿತಿಗಳ ಕೊರತೆ ಇದೆ. ಈ ಕೊರತೆಯನ್ನು ತುಂಬುವುದು ಇಂದು ಅನಿವಾರ್ಯವಾಗಿದೆ. ಈ ದೃಷ್ಟಿಯಿಂದ ಅವರು ಈ ಬೃಹತ್ ಗ್ರಂಥವನ್ನು ಪ್ರಕಟಿಸಲು ನಿರ್ಧರಿಸಿದ್ದಾರೆ.

ಹೀಗೆ ಬಾಬು ಅಮೀನರು ಸಾಂಸ್ಕೃತಿಕ ಪ್ರಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಚರಣೆಗಳಲ್ಲಿ ನೇರವಾಗಿ ಪಾಲ್ಗೊಂಡು ಯುವಕರಿಗೆ ಈ ಬಗ್ಗೆ ಖಚಿತ ಮಾಹಿತಿಗಳನ್ನು ನೀಡಿ ಅದು ಮುಂದುವರಿಯುವಂತೆ ಮಾಡುವಲ್ಲಿ ಸಫಲರಾಗುತ್ತಿದ್ದಾರೆ. ಈ ಬಗ್ಗೆ ತುಳುನಾಡಿ ನಾದ್ಯಂತ ವಿಚಾರಸಂಕಿರಣ, ಕಾರ್ಯಗಾರಗಳನ್ನು ನಡೆಸಬೇಕೆಂಬ ಇಚ್ಛೆ ಅವರದು. ಇಂಥ ಒಂದೆರಡು ಪ್ರಯತ್ನಗಳನ್ನು ಅವರು ಮಾಡಿದ್ದಾರೆ.

’ಏಕತಾ’ ಎಂಬ ಸಾಮಾಜಿಕ – ಸಾಂಸ್ಕೃತಿಕ ಸಾಮರಸ್ಯ ಸಂಸ್ಥೆಯೊಂದು ಉಡುಪಿಯಲ್ಲಿ ಅಸ್ತಿತ್ವದಲ್ಲಿದೆ. ಜನರಿಗೆ ವಿವಿಧ ಧರ್ಮಗಳ ಮೂಲಸಿದ್ಧಾಂತ ಮತ್ತು ನಿಜವಾದ ಆಚರಣೆಗಳ ಮೌಲಿಕತೆಯ ಬಗ್ಗೆ ಅರಿವು ಮೂಡಿಸುವುದು ಈ ಸಂಸ್ಥೆಯ ಉದ್ದೇಶ. ಈ ಸಂಸ್ಥೆಯ ಆಶ್ರಯದಲ್ಲಿ ಬಾಬು ಅಮೀನರ ನೇತೃತ್ವದಲ್ಲಿ ನಡೆದ ಎರಡು ಕಾರ್ಯಕ್ರಮಗಳನ್ನು ಉಲ್ಲೇಖಿಸಬೇಕು. ಒಂದು, ಈಗಾಗಲೇ ಉಲ್ಲೇಖಿಸಿದಂತೆ ನಡೆದ ತುಳುವರ ಮದುವೆಯ ಕುರಿತಾದ ಪ್ರಾತ್ಯಕ್ಷಿಕೆ. ಇಲ್ಲಿ ತುಳುನಾಡಿನಲ್ಲಿ ಹಿಂದೆ ನಡೆಯುತ್ತಿದ್ದ ಮದುವೆಯ ಆಚರಣೆಗಳನ್ನು ವಿದಿವತ್ತಾಗಿ ಪ್ರಾಯೋಗಿಕವಾಗಿ ಮನವರಿಕೆ ಮಾಡಿಕೊಡಲಾಯಿತು. ಈ ಬಗ್ಗೆ ಸಬಿಕರಲ್ಲಿದ್ದ ಸಂಶಯಗಳನ್ನು ಬಾಬು ಅಮೀನರು ಸಮರ್ಥವಾಗಿ ದೂರ ಮಾಡಿದರು. ಇವೆಲ್ಲ ಮೂಢನಂಬಿಕೆಗಳಲ್ಲವೇ? ಎಂಬ ಪ್ರಶ್ನೆಗಳಿಗೆ ಅವರು ಸಮರ್ಥವಾಗಿ ಉತ್ತರಿಸಿದ್ದಾರೆ.

ಎರಡನೆಯದು ದೀಪಾವಳಿಯ ಬಗ್ಗೆ ನಡೆದ ಕಾರ್ಯಕ್ರಮ. ಕೃಷಿ ಪ್ರಧಾನವಾಗಿದ್ದ ತುಳುನಾಡಿನಲ್ಲಿ ಇಂದು ಕೈಗಾರಿಕೀಕರಣ ಮತ್ತು ಆಧುನಿಕತೆಯ ಕಾರಣದಿಂದ ಅದು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಸಹಜವಾಗಿಯೇ ಕೃಷಿಗೆ ಸಂಬಂಧಿಸಿದ ಸಂಸ್ಕೃತಿಯು ಮರೆಯಾಗುತ್ತಿದೆ. ’ಚೌತಿ’, ’ದೀಪಾವಳಿ’ಯಂಥ ಹಬ್ಬಗಳು ತುಳುನಾಡಿನಲ್ಲಿ ಕೃಷಿ ಸಂಸ್ಕೃತಿಯೊಂದಿಗೆ ನಿಕಟ ಸಂಪರ್ಕವನ್ನು ಪಡೆದಿದೆ. ಇಂದು ಈ ರೀತಿಯ ಆಚರಣೆಗಳು ಮರೆಯಾಗುತ್ತಿರುವುದರಿಂದ ಅದರ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕಾದ ಅನಿವಾರ್ಯತೆಯಿದೆ ಎಂಬುದು ಬಾಬು ಅಮೀನರ ಅಭಿಪ್ರಾಯ. ಈ ನೆಲೆಯಲ್ಲಿ ದೀಪಾವಳಿ ಹಬ್ಬದ ಸಾಮೂಹಿಕ ಆಚರಣೆಯನ್ನು ಹಮ್ಮಿಕೊಳ್ಳಲಾಯಿತು. ಈ ಬಗ್ಗೆ ಈಗಾಗಲೇ ಸ್ಥಳೀಯ ಟಿ.ವಿ.ಗಳಲ್ಲಿ ಅಮೀನರು ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯ ರಾಗಿದ್ದರು.

ದೀಪಾವಳಿಯ ಕುರಿತಾಗಿ ಅವರು ನೀಡಿದ ಪ್ರಾತ್ಯಕ್ಷಿಕೆ ದೀಪಾವಳಿ ಮತ್ತು ಕೃಷಿ ಸಂಸ್ಕೃತಿಗಿರುವ ಸಂಬಂಧವನ್ನು ಅನಾವರಣಗೊಳಿಸಿತು. ತುಳುವರ ಹಬ್ಬಗಳು ಹೇಗೆ ಸಮುದಾಯ ಸಂಬಂಧವನ್ನು ಹತ್ತಿರಗೊಳಿಸುತ್ತದೆ ಎಂಬುದನ್ನು ಅವರು ಈ ಪ್ರಾತ್ಯಕ್ಷಿಕೆಯಲ್ಲಿ ಸ್ಪಷ್ಟಪಡಿಸಿದರು. ಇಂದು ಈ ರೀತಿಯ ಹಬ್ಬಗಳ ಸಾಮೂಹಿಕ ಆಚರಣೆಯ ಅನಿವಾರ್ಯತೆಯನ್ನು ಅವರು ನೆರೆದವರಿಗೆ ಮನಗಾಣಿಸಿದ ರೀತಿ ಅದ್ಭುತವಾಗಿತ್ತು.

ಹೀಗೆ ನಿಜವಾದ ಅರ್ಥದಲ್ಲಿ ಬಾಬು ಅಮೀನರು ಸಂಸ್ಕೃತಿ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಇಳಿವಯಸ್ಸಿನಲ್ಲೂ ಉತ್ಸಾಹದಿಂದ ಯುವಕರನ್ನು ನಾಚಿಸುವ ರೀತಿಯಲ್ಲಿ ಈ ಕಾರ್ಯವನ್ನು ನಡೆಸುತ್ತಿದ್ದಾರೆ. ಸಂಸ್ಕೃತಿಯ ಕುರಿತಾದ ಕುತೂಹಲ ಮತ್ತು ತಾನು ಪಡೆದ ಅನುಭವ ತಮ್ಮನ್ನು ಈ ದಾರಿಯಲ್ಲಿ ಧೈರ್ಯದಿಂದ ಮುನ್ನುಗ್ಗುವಂತೆ ಮಾಡಿದೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ. ಸಂಸ್ಕೃತಿಯನ್ನು ಉಳಿಸಿ ಎಂದು ಕೆಲವರು ಹೇಳಿಕೆಗಳನ್ನು ನೀಡಿ ಸುಮ್ಮನಾದರೆ ಅಮೀನರು ತಮ್ಮ ಸಂಶೋಧನೆಗಳನ್ನು ಜನ ಬದುಕಿಗೆ ಅನ್ವಯಗೊಳಿಸಿ ನಿಜವಾದ ಅರ್ಥದಲ್ಲಿ ಸಂಸ್ಕೃತಿ ಪ್ರಚಾರಕರಾಗಿದ್ದಾರೆ.

ಮುಕ್ತಾಯ

ಬಾಬು ಅಮೀನರ ಬದುಕು ನಿಜವಾದ ಅರ್ಥದಲ್ಲಿ ಹೋರಾಟದ ಬದುಕು. ಹಲವು ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆ ಬೆರಗು ಹುಟ್ಟಿಸುವಂತಹುದು. ಒಬ್ಬ ಸಾಮಾನ್ಯ ವ್ಯಕ್ತಿ, ಶ್ರದ್ಧೆ, ಕುತೂಹಲ, ಆಸಕ್ತಿ, ನಿರಂತರ ಶ್ರಮ, ಸಂಸ್ಕೃತಿ ಪ್ರೀತಿಯಿಂದ ಹೇಗೆ ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂಬುದಕ್ಕೆ ಬಾಬು ಅಮೀನರ ಜೀವನ ಅತ್ಯುತ್ತಮ ಉದಾಹರಣೆಯಾಗಿದೆ. ಅವರು ಈಗ ನಮ್ಮ ನಡುವೆ ಇರುವ ಅಪರೂಪದ ವಿದ್ವಾಂಸ. ಯಾವುದೇ ಆಧುನಿಕ ತಿಯರಿಗಳ ಪರಿಚಯವಿಲ್ಲದಿದ್ದರೂ ಸಿದ್ಧಾಂತಗಳನ್ನು ಕಂಡುಕೊಳ್ಳುತ್ತಾ ರೂಪಿಸುತ್ತಾ ಅವರು ನಡೆದ ಹಾದಿ ವಿಶಿಷ್ಟವಾದುದು.

ಕಾರ್ಮಿಕ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಂಡು ಅದಕ್ಕಾಗಿ ತನ್ನ ಉದ್ಯೋಗ ವನ್ನು ಕಳೆದುಕೊಂಡರೂ ವಿಚಲಿತರಾಗಿಲ್ಲ. ಬೈದ್ಯಶ್ರೀ, ಕೆಮ್ಮಲಜೆ, ಕಲಾಕ್ಷೇತ್ರದಂತಹ ಸಂಘಟನೆಗಳ ಮೂಲಕ ಅವರು ತುಳು ಸಂಸ್ಕೃತಿ ಪ್ರಚಾರದ ಸಂಘಟನೆಗಳಿಗೆ ನೀಡಿದ ಆಯಾಮವು ಸಂಘಟನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರಿಗೆ ಮಾದರಿಯಾಗಿದೆ. ’ಅಕಡೆಮಿಕ್ ಶಿಸ್ತು’, ಸಿದ್ಧಾಂತಗಳ ಅರಿವಿಲ್ಲದಿದ್ದರೂ ಅವರು ತುಳು ಸಂಸ್ಕೃತಿಯ ಕುರಿತಾಗಿ ಮಾಡಿರುವ ಸಂಶೋಧನೆಗಳು ಸಂಶೋಧನಾ ಕ್ಷೇತ್ರಕ್ಕೆ ಉತ್ತಮ ಕೊಡುಗೆಗಳಾಗಿವೆ.

ಎಲ್ಲಕ್ಕಿಂತಲೂ ಹೆಚ್ಚಾಗಿ ಸಂಸ್ಕೃತಿ ಪ್ರಚಾರಕರಾಗಿ ಅವರು ನಿರ್ವಹಿಸಿದ ಪಾತ್ರವು ಅಧ್ಯಯನ ಯೋಗ್ಯವಾಗಿದೆ. ಒಂದು ಕಡೆಯಿಂದ ಸಾಹಿತ್ಯ ಮತ್ತು ಸಂಶೋಧನೆಯ ಮೂಲಕ ದಾಖಲಾತಿ, ಇನ್ನೊಂದು ಕಡೆಯಿಂದ ಅದನ್ನು ಪರಿಶೀಲಿಸಿ ಜನ ಬದುಕಿಗೆ ಅನ್ವಯಗೊಳಿಸಿದ ರೀತಿ – ಈ ಎರಡನ್ನೂ ಜತೆ ಜತೆಯಾಗಿ ನಿರ್ವಹಿಸಿದ ರೀತಿ ವಿಶಿಷ್ಟವಾದುದು. ಸಂಸ್ಕೃತಿಯ ಚಲನಶೀಲತೆಗೆ ಅವರು ನೀಡಿದ ಕೊಡುಗೆ ಅಪೂರ್ವವಾದುದು.

ಇದು ಕೇವಲ ಪರಿಚಯಾತ್ಮಕವಾಗಿ ಸಂಗ್ರಹಿಸಿದ ಅವರ ಜೀವನ ವಿವರಗಳಾಗಿವೆ. ಈ ಬಗ್ಗೆ ಆಳವಾಗಿ ಮತ್ತು ಸೂಕ್ಷ್ಮವಾಗಿ ಅಧ್ಯಯನಗಳು ನಡೆದರೆ ಅವರ ಬದುಕು, ಸಾಹಿತ್ಯ, ಸಂಶೋಧನೆ, ಸಂಘಟನೆಯ ರೀತಿಯ ಅರಿವಿನಿಂದ ಮುಂದಿನ ಜನಾಂಗಕ್ಕೆ ಹಲವು ಮಾದರಿಗಳು ದೊರೆಯಬಹುದು.