ಕನ್ನಡ ಸಾಹಿತ್ಯದಲ್ಲಿ ಗ್ರಾಮೀಣ ಖಣಿಗಳಿಂದ ಹೆಕ್ಕಿ ತೆಗೆದ ಜಾನಪದ ಸಾಹಿತ್ಯ ಇಂದು  ಸಮೃದ್ಧವಾಗಿ ಸಂಗ್ರಹಗೊಂಡಿದ್ದು ವಿಶೇಷ. ಜಾನಪದ ಸಂಶೋಧನೆಯ ಬಾಲ್ಯಾವಸ್ಥೆಯಲ್ಲಿಯೇ ಆನಂದಕಂದರು ಉತ್ತರ ಕರ್ನಾಟಕದ ಜಾನಪದದ ಬಗೆಗೆ ಗಮನ ಹರಿಸಿದ್ದು ಮಹತ್ವದ ಸಂಗತಿಯಾಗಿದೆ. ೧೯೨೯ ರಲ್ಲಿ ಬೆಳಗಾವಿಯಲ್ಲಿ ಜರುಗಿದ ೧೫ ನೆಯ ಕನ್ನಡ ಸಾಹಿತ್ಯ ಸಮ್ಮೇಲನದಲ್ಲಿ ಜನಪದ ತ್ರಿಪದಿಗಳನ್ನು ಹಾಡಿ ತೋರಿಸಿದ್ದು, ಸಮ್ಮೇಲನಾಧ್ಯಕ್ಷರಾದ ಮಾಸ್ತಿಯವರನ್ನೊಳಗೊಂಡು ಎಲ್ಲಲ ಹಿರಿಯ ಕನ್ನಡ ವಿದ್ವಾಂಸರು , ಉತ್ತರ ಕರ್ನಾಟಕದ ಜಾನಪದ ತ್ರಿಪದಿಗಳ ಸೊಗಡಿನ ರಸದೂಟವನ್ನು ಸವಿದಿದ್ದರು. ಆನಂದಕಂದರು ಅದಾಗಲೇ ಪರಿಷತ್‌ ಪತ್ರಿಕೆಯಲ್ಲಿ ‘ಹಳ್ಳಿಗರ ಹಾಡುಗಳು’ ಎಂದು ಜಾನಪದ ಹಾಡುಗಳ ರುಚಿಯನ್ನು ಉಣಬಡಿಸಿದ್ದರು. ಹಳ್ಳಿಯಲ್ಲಿ ಹುಟ್ಟಿ, ಹಳ್ಳಿಯಲ್ಲಿಯೇ ಬಾಲ್ಯ ಕಳೆದ ಆನಂದಕಂದರಿಗೆ, ತಮ್ಮ ಪರಿಸರದ ಜಾನಪದ ಮೊದಲೇ ಅವರ ಸಾಹಿತ್ಯಾಭಿರುಚಿಯ ಹೃದಯದಲ್ಲಿ ಮುದ್ರೆ ಒತ್ತಿತ್ತು.

ಕನ್ನಡ ಜಾನಪದದ ಮೇರು ಸಂಶೋಧನೆಯಾದ ‘ಕೆರೆಗೆ ಹಾರ’ ಹಾಡನ್ನು ಆನಂದಕಂದರೇ ಸಂಗ್ರಹಿಸಿದ್ದು ವಿಶೇಷ. ೧೯೨೫ ರಿಂದಲೇ ಈ ಹಾಡನ್ನು ಭಾವಪೂರ್ಣವಾಗಿ, ಜನಪದದ ಧಾಟಿಯಲ್ಲಿ ಆನಂದಕಂದರು ವಿವಿಧ ಸಾಹಿತ್ಯಿಕ ಸಮಾರಂಭಗಳಲ್ಲಿ ಹಾಡಿ, ತುಂಬಾ ಜನಪ್ರಿಯಗೊಳಿಸಿದ್ದರು. ಇದು ಹೆಣ್ಣು ಮಕ್ಕಳು ಕೋಲಾಟ ಆಡುವ ಸಂಧರ್ಭದಲ್ಲಿ ಹೇಳುವ ಹಾಡಿದು. ಎಲ್ಲರೂ ಮೆಚ್ಚಿಕೊಂಡ ಈ ಹಾಡನ್ನು ಆನಂದಕಂದರು ಮೊದಲು ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟಿಸಿದರು. ಅನಂತರ ‘ಕನ್ನಡ ಬಾವುಟ’ ಗ್ರಂಥದ ದ್ವಿತೀಯ ಆವೃತ್ತಿಯಲ್ಲಿ ಸೇರಿಕೊಂಡು ಇದು, ಇಡೀ ನಾಡಿಗೆ ಪರಿಚಯಗೊಂಡಿತು. ‘ತೀನಂಶ್ರೀ’ ಅವರು ‘ಕೆರೆಗೆ ಹಾರ’ ಜಾನಪದ ಹಾಡಿನ ಬಗೆಗೆ ಒಂದು ಅಮೂಲ್ಯ ವಿಮರ್ಶಾತ್ಮಕ ಲೇಖನವನ್ನು ಬರೆದು ಇದರ ಮೌಲ್ಯವನ್ನು ತಿಳಿಸಿಕೊಟ್ಟು ಇದು ‘ಕನ್ನಡ ಕಾವ್ಯಶ್ರೀಯ ಕಂಠದ ಹಾರ’ ಎಂದು ಹೇಳಿದ್ದಾರೆ.

‘ಕೆರೆಗೆ ಹಾರ’ ಈ ಹಾಡನ್ನು ಆನಂದಕಂದರು ಬೆಟಗೇರಿಯ ಹೂಗಾರ ಮನೆತನದ ಯಂಕವ್ವ ಕಲ್ಲಯ್ಯ ಹೂಗಾರ ಇವಳಿಂದ ಸಂಗ್ರಹಿಸಿದರು.

[1] ಈ ಯಂಕವ್ವನ ತವರುಮನೆ ಸವದತ್ತಿ ತಾಲೂಕಿನ ಯರಗಟ್ಟಿ ಯಂಕವ್ವಳ ಬಾಯಿಂದ ಅಲ್ಲಲ್ಲಿ ಕೇಳಿ, ಈ ಹಾಡನ್ನು ತುಂಬ ಮೆಚ್ಚಿಕೊಂಡಿದ್ದ ಆನಂದಕಂದರು ಆಕೆಯನ್ನು ತಮ್ಮ ಮನೆಗೆ ಕರೆಯಿಸಿ, ಬರೆದುಕೊಂಡರು.

‘ಬೀಸುವ ಕಲ್ಲಿನ ಹಾಡುಗಳು’ ಈ ಜನಪದ ಸಂಕಲನವನ್ನು ಕನ್ನಡ ಸಾಹಿತ್ಯ ಪರಿಷತ್ತು ೧೯೨೮ ರಲ್ಲಿಯೇ ಪ್ರಕಟಿಸಿತ್ತು. ೧೯೭೨ ರಲ್ಲಿ ನಾಗಮಂಗಲದಲ್ಲಿ ಜರುಗಿದ ಜನಪದಸಾಹಿತ್ಯ ಸಮ್ಮೇಲನದ ಅಧ್ಯಕ್ಷೀಯ ಭಾಷಣವೂ ಜನಪದ ಸಾಹಿತ್ಯಕ್ಕೆ ಒಂದು ಒಳ್ಳೆಯ ಕೊಡುಗೆಯಾಗಿದೆ. ೧೯೭೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಆನಂದಕಂದರ ‘ಕನ್ನಡ ಜಾನಪದ ಸಾಹಿತ್ಯ’ ಎಂಬ ಮೌಲಿಕ ಕೃತಿಯನ್ನು ಪ್ರಕಟಿಸಿತು. ಮೊದಲು ‘ಜಯಕರ್ನಾಟಕ’ ಪತ್ರಿಕೆಗೆ ಪ್ರತಿ ತಿಂಗಳು ಜನಪದ ಹಾಡುಗಳನ್ನು ಸಂಗ್ರಹಿಸಿಕೊಟ್ಟಂತೆ, ಅನಂತರ ತಾವೇ ಸಂಪಾದಿಸುತ್ತಿದ್ದ ‘ಜಯಂತಿ’ಯಲ್ಲಿಯೂ ಜಾನಪದ ಮೂಲಗಳನ್ನು ಕುರಿತು ಅನೇಕ ಲೇಖನಗಳನ್ನು ಬರೆದರು. ‘ಕನ್ನಡ ಜನಪದ ಗೀತೆಗಳ ಛಂದಸ್ಸು’ ‘ಕನ್ನಡ ಹಳ್ಳಿಗರ ಹಟ್ಟಿಯ ಹಬ್ಬ ‘ಜಾನಪದ ಐತಿಹಾಸಿಕ ಕಥೆಗಳು’ ‘ಜಾನಪದ ನಾಟ್ಯಗೀತೆಗಳು’ (ಮೂಡಲಪಾಯದ ಹಾಡುಗಳು) ‘ನಮ್ಮ ಜಾನಪದ ನಾಟ್ಯಭೂಮಿ’ (ಬೇರ ಬೇರೆ ದೊಡ್ಡಾಟಗಳು ಹಾಗೂ ಗೊಂಬೆಯಾಟ, ಮೂಡಲಪಾಯದ ಬಗೆಗೆ) ‘ಹಿಂದಿನ ಕಾಲದ ಹಳ್ಳಿಗಳು’, ‘ಕನ್ನಡ ಒಗಟುಗಳು’, ‘ಕನ್ನಡ ವಿನೋದ ವಿಲಾಸ’ (ಜನಪದ ಸಾಹಿತ್ಯದಲ್ಲಿ ವಿನೋದಗಳು) ಮೊದಲಾದವು ಮೌಲಿಕ ಲೇಖನಗಳಾಗಿವೆ.

ಆನಂದಕಂದರು ಜಾನಪದ ಹಾಡುಗಳನ್ನು, ಉತ್ತರ ಕರ್ನಾಟಕದ ಬಯಲಾಟಗಳ ಮೂಲವನ್ನು ‘ಕೆರೆಗೆ ಹಾರ’ ದಂಥ ಶ್ರೇಷ್ಠ ಜಾನಪದ ಕಥನಗೀತವನ್ನು ಸಂಗ್ರಹಿಸಿ ಜಾನಪದ ವೈಭವವನ್ನು ಅಧಿಕಗೊಳಿಸಿದಂತೆ ಜಾನಪದದ ಜಾಡಿನಲ್ಲಿಯೇ ತಮ್ಮ ಕವಿತೆಗಳನ್ನು ರಚಿಸಿ, ತಮ್ಮದೇ ಆದ ವೈಶಿಷ್ಟ್ಯವನ್ನು ಮೆರೆದಿದ್ದಾರೆ. ಇವರ ‘ನಲ್‌ವಾಡುಗಳು’ ಜಾನಪದದ ಧಾಟಿಯಲ್ಲಿ ರಚನೆಗೊಂಡ ಭಾವಗೀತೆಗಳ ಸಂಕಲನದ ಹಾಡುಗಳನ್ನು ಮೂಲ ಜಾನಪದವೆಂದು ಭ್ರಮಿಸಿ ಹೇಳಿದವರೂ ಇದ್ದಾರೆ. ಜಾನಪದ ಅಚ್ಚಿನಲ್ಲಿ ಎರಕಹೊಯ್ದ ‘ನಲ್‌ವಾಡುಗಳು’ ಇದರಲ್ಲಿಯ ನವಿರಾದ ಪ್ರಣಯ ಪ್ರೀತಿ ಗೀತೆಗಳು ಆಧುನಿಕ ಕನ್ನಡ ಕಾವ್ಯಕ್ಕೆ ಮಹತ್ವದ ಕೊಡುಗೆಗಳಾಗಿವೆ. ಇಲ್ಲಿಯ ‘ನಾಜೂಕದ ನಾರಿ’, ‘ಬೆಣ್ಣಿಯಾಕಿ’, ‘ಬೆಳುವಲದ ಒಕ್ಕಲತಿ’, ‘ನಮ್ಮೂರ ಜಾತ್ರೆ’, ‘ಯಾರೋ ಏನೋ ಬರತಾರಂತ’ ಯಾತಕವ್ವ ಹುಬ್ಬಳ್ಳಿ-ಧಾರವಾಡ..’ ಮೊದಲಾದ ಗೇಯ ಪದಗಳು, ಇಂದಿನ ಕ್ಯಾಸೆಟ್‌ ಯುಗ ಪ್ರಾರಂಭಿಸುವುದಕ್ಕಿಂತ ಮೊದಲೇ ಕರ್ನಾಟಕದ ಭಾವಗೀತೆಗಳ ಗಾಯಕರ ನಾಲಗೆಯಲ್ಲಿ ಕುಣಿದದ್ದು  ಹೇಗೊ ಇರಲಿ, ನಾಡಿನ ತರುಣ-ತರುಣಿಯರು ಹಾಡಿಕೊಳ್ಳುತ್ತಿದ್ದುದು ವಿಶೇಷ.[1]  ‘ಬೆಳವಲ – ಡಾ. ನಿಂಗಣ್ಣ ಸಣ್ಣಕ್ಕಿ-ಪುಟ ೧೬೨