ಜಾನಪದವನ್ನು ಕುರಿತಂತೆ ಕನ್ನಡದಲ್ಲಿ ಆಗಿರುವಷ್ಟು ಕೆಲಸ ಭಾರತದ ಮತ್ತಾವುದೇ ಭಾಷೆಯಲ್ಲಿ ಆಗಿಲ್ಲ ಎಂಬುದು ವಿದ್ವಾಂಸರ ಅಭಿಪ್ರಾಯ ಸಂಗ್ರಹಣೆಯ ದೃಷ್ಟಿಯಿಂದ ಈ ಮಾತು ನಿಜವೆನಿಸಿದರೂ ಸಂಗ್ರಹಿಸಿದ್ದರ ವಿಶ್ಲೇಷಣೆ ಮತ್ತು ಅಧ್ಯಯನದ ದೃಷ್ಟಿಯಿಂದ ಈ ಮಾತನ್ನು ಒಪ್ಪಿಕೊಳ್ಳುವುದು ಕಷ್ಟವೆನಿಸುತ್ತದೆ. ಕನ್ನಡದಲ್ಲಿ ಅಪಾರವಾದ ಜಾನಪದ ಸಾಹಿತ್ಯ ಸಂಗ್ರಹವಾಗಿದೆ. ಸ್ವಾಂತಂತ್ರ್ಯಪೂರ್ವ ಸ್ವಾತಂತ್ರ್ಯೋತ್ತರ ಎರಡೂ ಕಾಲಗಳಲ್ಲಿ ಅನೇಕ ಪಾಶ್ಚಾತ್ಯ ಮತ್ತು ಕರ್ನಾಟಕದ ವಿದ್ವಾಂಸರು ಜನಪದ ಸಾಹಿತ್ಯವನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಮಲೆಯ ಮಹದೇಶ್ವರ ಮಹಾಕಾವ್ಯ, ಪಿರಿಯಾ ಪಟ್ಟಣದ ಕಾಳಗ. ಜನಪದ ಮಹಾಭಾರತ ರಾಮಾಯಣ ಮುಂತಾದ ಮಹಾ ಕಾವ್ಯಗಳು ಸಂಗ್ರಹವಾಗಿವೆ. ಕಥೆ, ಗೀತೆ, ಗಾದೆ, ಒಗಟು, ಒಡಪು ಇವುಗಳಂತೂ ಲೆಕ್ಕವಿಲ್ಲದಷ್ಟು ಸಂಗ್ರಹಗಳು ಬಂದಿವೆ. ಕರ್ನಾಟಕವನ್ನು ಪ್ರಾದೇಶಿಕವಾಗಿ ವಿಂಗಡಣೆ ಮಾಡಿಕೊಂಡು ಸಂಗ್ರಹಗಳು ನಡೆದಿವೆ. ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳು ಜಾನಪದವನ್ನು ಒಂದು ಅಧ್ಯಯನ ವಿಷಯವಾಗಿ ಪರಿಗಣಿಸಿ ಶಿಕ್ಷಣವನ್ನು ನೀಡುತ್ತಿವೆ. ಈ ದೃಷ್ಟಿಯಿಂದ ಕನ್ನಡದಲ್ಲಿ ಆಗಿರುವ ಜಾನಪದದ ಬಗೆಗಿನ ಕೆಲಸ ಭಾರತದ ಬೇರಾವ ಭಾಷೆಯಲ್ಲಿಯೂ ಆಗಿಲ್ಲ ಎಂದು ಧೈರ್ಯವಾಗಿ ಹೇಳಬಹುದು.

ವಿಪುಲವಾಗಿ ಆಗಿರುವ ಜಾನಪದ ಸಂಗ್ರಹದ ವಿಶ್ಲೇಷಣೆ ಮತ್ತು ಅಧ್ಯಯನ ಬಹಳ ಮುಖ್ಯ. ಒಂದು ಕಥೆ, ಒಂದು ಕಾವ್ಯ, ಒಂದು ಗೀತೆ, ಒಂದು ಗಾದೆ ಅದರ ಹಿಂದಿರುವ ವ್ಯಾಪ್ತಿ ಮತ್ತು ಉದ್ದೇಶಗಳು ಹೊರ ಬೀಳದಿದ್ದರೆ ಬರಿಯ ಸಂಗ್ರಹದಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ ಎಂದು ಹೇಳಬಹುದು. ಈ ದಿಸೆಯಲ್ಲಿ ಪಾಶ್ಚಿಮಾತ್ಯ ದೇಶಗಳು ಜಾನಪದವನ್ನು ಕಂಠಸ್ಥ ಇತಿಹಾಸ ಆಯಾ ಕಾಲದ ದಾಖಲೆಗಳನ್ನುವಲಂಬಿಸುತ್ತದೆ. ಆಯಾ ಕಾಲದ ರಾಜಮಹಾರಾಜರು ಹಾಕಿಸಿದ ಶಾಸನಗಳು ಆ ರಾಜರುಗಳ ಅಸ್ಥಾನದಲ್ಲಿದ್ದ ಕವಿಗಳು ಬರೆದ ಕಾವ್ಯಗಳು ಆ ರಾಜನ ಅಸ್ಥಾನಕ್ಕೆ ಹೊರಗಿನಿಂದ ಬಂದ ಪ್ರವಾಸಿಗರು ಬರೆದ ಕಥನಗಳನ್ನು ಇತಿಹಾಸ ಸಾಮಾಗ್ರಿಗಳೆಂದು ಪರಿಗಣಿಸಲಾಗಿದೆ. ಆದರೆ ಇವುಗಳು ಆಯಾ ಕಾಲದ ಆಡಳಿತ ರೀತಿ ನೀತಿಗಳನ್ನಾಗಲೀ, ಜನ ಜೀವನವನ್ನಾಗಲೀ, ಸಾಮಾಜಿಕ ಪರಿಸ್ಥಿತಿಯನ್ನಾಗಲೀ ರೀತಿ ನೀತಿಗಳನ್ನಾಗಲೀ, ಜನ ಜೀವನವನ್ನಾಗಲೀ, ಸಾಮಾಜಿಕ ಪರಿಸ್ಥಿತಿಯನ್ನಾಗಲೀ ನೈಜವಾಗಿ ಹೇಳುತ್ತವೆ ಎಂದು ನಂಬಲಾಗುವುದಿಲ್ಲ. ಏಕೆಂದರೆ ರಾಜನನ್ನು ಆಶ್ರಸಿಯಿದವರು ರಾಜಾಸ್ಥಾನದಲ್ಲಿರುವವರು ಜನ ಸಾಮಾನ್ಯರ ಬದುಕನ್ನು ಚಿತ್ರಿಸುವುದಿರಲಿ ಆ ರಾಜ ಅತ್ಯಂತ ಕ್ರೂರಿಯೂ, ದುಷ್ಟನೂ ಆಗಿದ್ದರೂ ಅವನನ್ನು ಇಂದ್ರ ಚಂದ್ರ ಎಂದು ಹೊಗಳಬಲ್ಲರೇ ಹೊರತು ಟೀಕಿಸುವುದು ಸಾಧ್ಯವಿಲ್ಲ. ಅದೇ ಕಾಲದ ಜನಪದ ಸಾಹಿತ್ಯ ಅತ್ಯಂತ ನೈಜವಾಗಿ ಅಲ್ಲಿನ ಪರಿಸ್ಥಿತಿಯನ್ನು ಚಿತ್ರಿಸಬಲ್ಲದು. ರಾಜ ಒಳ್ಳೆಯವನಾಗಿದ್ದರೆ ಒಳ್ಳೆಯವನು, ಕೆಟ್ಟವ ನಾಗಿದ್ದರೆ ಕೆಟ್ಟವನು ಎಂದು ನಿರ್ದಿಷ್ಟವಾಗಿ ಹೇಳಿಬಿಡುತ್ತದೆ. ಈ ಕಾರಣದಿಂದಲೇ ಜಾನಪದವನ್ನು ಕಂಠಸ್ಥ ಇತಿಹಾಸ ಎಂದು ಕರೆಯಲಾಗಿದೆ. ಇದು ಆಯಾ ಕಾಲದ ಸಮಾಜವನ್ನು ಅರಿಯಲು ಸಹಾಯಕವಾಗುತ್ತದೆ. ಆದುದರಿಂದಲೇ ಜಾನಪದ ಪ್ರಾಚೀನ ಸಮಾಜದ ಪಳೆಯುಳಿಕೆ ಎಂಬ ಮಾತು ಹುಟ್ಟಿಕೊಂಡುದೆ. ಈ ಸಂಕಲನದಲ್ಲಿರುವ ಹತ್ತು ಲೇಖನಗಳು ಮೇಲೆ ಹೇಳಿದ ದೃಷ್ಟಿಯಿಂದ ಅಧ್ಯಯನ ಮಾಡಿ ವಿಶ್ಲೇಷಿಸಿಸುವಂತಹವು.

ಕರಿಭಂಟ ಕನ್ನಡ ಜನಪದ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಹೆಸರಾದ ವ್ಯಕ್ತಿ. ಈತನನ್ನು ಕುರಿತು ಅನೇಕ ರೀತಿಯ ಕಥೆಗಳು ಹುಟ್ಟಿಕೊಂಡಿವೆ. ಪ್ರಮುಖವಾಗಿ ಈತನ ಜೀವನ ಸಾಧನೆಗಳನ್ನು ಕುರಿತಂತಹ ಯಕ್ಷಗಾನ ಪ್ರಸಂಗಗಳು ಹುಟ್ಟಿಕೊಂಡಿವೆ ಮತ್ತು ಜನಮನವನ್ನು ಆಕರ್ಷಿಸಿವೆ. ಧಾರಪುರದ ಕರಿರಾಯ ತೊಂಡನೂರಿನ ಪುಂಡರೀಕಾಕ್ಷಿಯನ್ನು ಪ್ರೀತಿಸಿ ಅದರಿಂದುಂಟಾದ ದುರಂತವೇ ಈ ಪ್ರಸಂಗಗಳ ಪ್ರಧಾನ ವಸ್ತು. ಈ ಪ್ರಸಂಗಗಳಿಗೆ ಮೂಲ ಕೆಂಪಣ್ಣಗೌಡನೆಂಬ ಯಕ್ಷಗಾನ ಕವಿಯ ಕರಿರಾಯಚರಿತ್ರೆ ಎಂಬ ಯಕ್ಷಗಾನ ಕಾವ್ಯ. ಹಳಗನ್ನಡದಲ್ಲಿ ಚಂಪೂ ಸಾಹಿತ್ಯವಿದ್ದಂತೆ. ಜಾನಪದದಲ್ಲಿಯೂ ಗದ್ಯ ಪದ್ಯ ಮಿಶ್ರಿತ ಚಂಪೂ ರೀತಿಯ ಕಾವ್ಯ ರಚನೆ ಜಾರಿಯಲ್ಲಿದ್ದಿತು. ರಾಮಾಯಣ ಭಾರತಗಳನ್ನು ಓದಿ ಕೇಳುವಂತೆ ಅಥವಾ ಪಾರಾಯಣ ಮಾಡುವಂತೆ ಈ ಯಕ್ಷಗಾನ ಕಾವ್ಯಗಳನ್ನು ಜನ ಓದುತ್ತಿದ್ದರು. ಇದರ ಅಧಾರದ ಮೇಲೆಯೇ ಪ್ರದರ್ಷನಾತ್ಮಕವಾದ ಯಕ್ಷಗಾನ ಪ್ರಸಂಗಗಳು ಹುಟ್ಟಿಕೊಂಡಿವೆ. ಈ ಕಥೆಯನ್ನು ವಿಶ್ಲೇಷಿಸುತ್ತ ಹೊರಟರೆ ಅದು ತಲಕಾಡು ಗಂಗ ವಂಶದ ಕೊನೆಯ ದಿನಗಳಲ್ಲಿ ನಡೆದ ದುರಂತ ಪ್ರಣಯವೊಂದರ ಆಧಾರದಿಂದ ಈ ಕಾವ್ಯ ಹುಟ್ಟಿಕೊಂಡಿದೆ ಎಂಬುದು ಗೋಚರವಾಗುತ್ತದೆ. ಮುಮ್ಮಡಿ ಮಾರಸಿಂಹನಿಗೆ ಮಕ್ಕಳಿಲ್ಲದೆ ಇದ್ದುದರಿಂದ ತನ್ನ ಸಹೋದರನ ಮಗ ಅರುಮುಳಿ ದೇವನನ್ನು ದತ್ತು ತೆಗೆದುಕೊಂಡ ವಿಚಾರ ಗಂಗ ವಂಶದ ಇತಿಹಾಸದಲ್ಲಿ ದಾಖಲಾಗಿದೆ. ಈ ಅರುಮುಳಿ ದೇವನಿಗೆ ಅನೇಕ ಜನ ಸಹೋದರಿಯರಿದ್ದರೆಂದು ಅವರೆಲ್ಲ ಬೇರೆ ಬೇರೆ ಪ್ರಾಂತ್ಯದ ಮುಖಂಡರ ಪತ್ನಿಯರಾಗಿದ್ದ ಸಹೋದರಿಯರಿದ್ದರೆಂದು ಅವರೆಲ್ಲ ಬೇರೆ ಬೇರೆ ಪ್ರಾಂತ್ಯದ ಮುಖಂಡರ ಪತ್ನಿಯರಾಗಿದ್ದರೆಂದು ತಿಳಿದು ಬರುತ್ತದೆ. ಈ ಅರುಮುಳಿ ದೇವನಿಗೆ ರಾಜ ವಿದ್ಯಾಧರ ಒಬ್ಬನೇ ಮಗ. ಈತ ತೊಣ್ಣೂರಿನಿಂದ ಆಳುತ್ತಿದ್ದ ತನ್ನ ಸೋದರತ್ತೆಯ ಮಗಳನ್ನು ಪ್ರೀತಿಸುತ್ತಿದ್ದ. ಆಕೆಯ ಹೆಸರು ರಕ್ಕಸಮ್ಮ. ಗಂಗ ವಂಶದಲ್ಲಿ ರಕ್ಕಸ ಗಂಗ ಎಂದು ಗಂಡಸರು ಹೆಸರಿಟ್ಟುಕೊಳ್ಳುವುದು, ರಕ್ಕಸಮ್ಮ ಎಂದು ಹೆಂಗಸರಿಗೆ ಹೆಸರಿಡುವುದು ಪದ್ಧತಿ. ಈಕೆಗೆ ಮಹಾದೇವಿ ಎಂಬ ಇನ್ನೊಂದು ಹೆಸರೂ ಇತ್ತೆಂದು ತಿಳಿಯುತ್ತದೆ. ತನ್ನ ಸಹೋದರ ಅರುಮುಳಿ ದೇವನೊಂದಿಗಿದ್ದ ವೈಯಕ್ತಿಕ ದ್ವೇಷದಿಂದಾಗಿ ಈಕೆ ತನ್ನ ಮಗಳನ್ನು ರಾಜ ವಿದ್ಯಾಧರನಿಗೆ ಕೊಡಲು ಒಪ್ಪುವುದಿಲ್ಲ ಆದರೆ ರಾಜ ವಿದ್ಯಾಧರ ಆಕೆಯನ್ನು ಅಪಹರಿಸಲು ಪ್ರಯತ್ನಿಸಿದ. ಇದರಿಂದಾಗಿ ಯುದ್ಧ ನಡೆದು ಅದರಲ್ಲಿ ರಾಜ ವಿದ್ಯಾಧರ ಹತನಾದನೆಂದು ಇತಿಹಾಸ ಹೇಳುತ್ತದೆ. ಈ ದುರಂತ ಪ್ರಣಯ ಪ್ರಸಂಗದ ಕಥೆ ಕರಿರಾಯ ಚರಿತ್ರೆಯಾಗಿ ರೂಪುಗೊಂಡಿದೆ. ಇದಕ್ಕೆ ಕಾವ್ಯ ಸಂಪ್ರದಾಯದಂತೆ ಪೌರಾಣಿಕ ಪರಿಕಲ್ಪನೆಯನ್ನು ನೀಡಲಾಗಿದೆ. ಈ ವಸ್ತುವನ್ನು ಇಟ್ಟುಕೊಂಡು ಕಾವ್ಯ ರಚಿಸಿದವನು ಕೆಂಪಣ್ಣಗೌಡ ಎಂಬ ಹದಿನಾಲ್ಕನೆಯ ಶತಮಾನದ ಕವಿ.

ಯಕ್ಷಗಾನ ಸಾಹಿತ್ಯದ ಪ್ರಾಚೀನತೆಯನ್ನು ಕುರಿತಂತೆ ನಾನಾ ವಿಧವಾದ ಅಭಿಪ್ರಾಯಗಳು ವಿದ್ವಾಂಸರಲ್ಲಿವೆ. ಬಹಳಷ್ಟು ಮಂದಿ ಈ ಪರಂಪರೆಯನ್ನು ಹದಿನೇಳನೇ ಶತಮಾನದಿಂದೀಚೆ ಎಂದು ಗುರ್ತಿಸುತ್ತಾರೆ. ಆದರೆ ಈ ಜನಪದ ಸಾಹಿತ್ಯ ಪರಂಪರೆ ಅತ್ಯಂತ ಪ್ರಾಚೀನವಾದದ್ದು ಎಂಬುದಕ್ಕೆ ಬೇಕಾದಷ್ಟು ಅಧಾರಗಳು ದೊರೆಯುತ್ತವೆ. ಕನ್ನಡ ಕಾವ್ಯಗಳ ಹಸ್ತಪ್ರತಿಯನ್ನು ಕುರಿತಂತೆ ಹದಿಮೂರನೆಯ ಶತಮಾನದಲ್ಲಿ ಸಿಕ್ಕಿರುವ ಓಲೆಯ ಹಸ್ತಪ್ರತಿಯೇ ಅತ್ಯಂತ ಪ್ರಾಚೀನವಾದುದು ಎಂಬ ಹೇಳಿಕೆ ಇದೆ. ಅದೇ ಕಾಲದಲ್ಲಿ ಯಕ್ಷಗಾನ ಓಲೆಯ ಹಸ್ತಪ್ರತಿಗಳು ದೊರೆಯುವುದರಿಂದ ಇದು ಬಹಳ ಪ್ರಾಚೀನವಾದುದೆಂಬುದಕ್ಕೆ ಸಾಕ್ಷಿ ದೊರೆಯುತ್ತದೆ. ಒಂದು ಕಾಲದಲ್ಲಿ ರಾಜ ಮಹಾರಾಜರುಗಳ ಅಸ್ಥಾನದಲ್ಲಿ ಈ ಯಕ್ಷಗಾನ ಪ್ರಸಂಗಗಳು ಜರುಗುತ್ತಿದ್ದವು ಎಂಬುದಕ್ಕೆ ಅಧಾರಗಳಿವೆ. ಹೀಗಾಗಿ ಯಕ್ಷಗಾನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯ ಜನ ಜೀವನದಷ್ಟೇ ಪ್ರಾಚೀನವಾದುವು ಎಂಬುದರಲ್ಲಿ ಅನುಮಾನವಿಲ್ಲ. ಈ ವಿಷಯವನ್ನು ಕುರಿತು ವಿವರವಾದ ಅಧ್ಯಯನ ಇಲ್ಲಿನ ನಾಲ್ಕು ಲೇಖನಗಳಲ್ಲಿ ದೊರೆಯುತ್ತದೆ.

ಜಾನಪದ, ಇತಿಹಾಸ, ಮಾನವಶಾಸ್ತ್ರ ಮತ್ತು ಸಂಸ್ಕೃತಿಯ ಅಧ್ಯಯನಗಳು ಪರಸ್ಪರ ಪ್ರೇರಕ ಮತ್ತು ಪೂರಕ. ಇತಿಹಾಸವನ್ನು ಜನ ಜೀವನ ಕಂಠಸ್ಥವಾಗಿ ಹಿಡಿದಿಡುವ ಪದ್ಧತಿ ಇದೆ. ಅನಕ್ಷರಸ್ಥ ಸಮಾಜದಲ್ಲಿ ತಾನು ಕಂಡುಂಡದ್ದನ್ನು, ತಾನು ಕೇಳಿ ತಿಳಿದಿದ್ದನ್ನು ಮತ್ತೊಬ್ಬರಿಗೆ ಅಥವಾ ಮುಂದಿನ ತಲೆಮಾರಿಗೆ ಹೇಳುತ್ತಾ ಬರುವ ಈ ಸಂಪ್ರದಾಯವೇ ಕಂಠಸ್ಥ ಇತಿಹಾಸ. ಇತಿಹಾಸವನ್ನು ನಿರ್ಮಿಸುವಾಗ, ಪುನರ್ ಪರಿಶೀಲಿಸುವಾಗ ಈ ಕಂಠಸ್ಥ ಇತಿಹಾಸ ತನ್ನದೆ ಆದನೆರವು ನೀಡುತ್ತದೆ. ಇದಕ್ಕೆ ಉದಾಹರಣೆಯಾಗಿ ಕೆಲವು ಕಾಲ ಮೈಸೂರು – ರಾಜ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆಳಿದ ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಸಮಕಾಲೀನ ಇತಿಹಾಸ ಮತ್ತು ಸಾಹಿತ್ಯ ಈ ಇಬ್ಬರೂ ಅತ್ಯಂತ ಕ್ರೂರಿಗಳು ಮತ್ತು ಹಿಂದೂ ಧರ್ಮ ವಿರೋಧಿಗಳೆಂದು ಚಿತ್ರಿಸುತ್ತವೆ. ಟಿಪ್ಪು ಸುಲ್ತಾನನೇ ತನ್ನ ಜೀವನ ಚರಿತ್ರೆಯನ್ನು ಬರೆಸಲು ಪರ್ಷಿಯಾ ದೇಶದಿಂದ ಕರೆಸಿಕೊಂಡ ವ್ಯಕ್ತಿ ಕೂಡ ಆತನ ಒಳ್ಳೆಯ ಗುಣಗಳನ್ನು ಹೇಳುವುದರ ಜೊತೆಗೆ ಕ್ರೂರಿ ಮತ್ತು ಹಿಂದೂ ವಿರೋಧಿ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಸ್ವಾತಂತ್ರ್ಯೋತ್ತರ ದಿನಗಳಲ್ಲಿ ನಾನಾ ಕಾರಣಗಳಿಗಾಗಿ ಹುಟ್ಟಿಕೊಂಡ ಸಾಹಿತ್ಯ ಹೈದರಾಲಿ ಹಾಗೂ ಟಿಪ್ಪು ಸುಲ್ತಾನರನ್ನು ಭಾರತೀಯ ಸ್ವಾತಂತ್ರ್ಯ ಯೋಧರು ಎಂದು ಉತ್ಪ್ರೇಕ್ಷಿಸಿರುವುದು ಕಂಡು ಬರುತ್ತದೆ. ಇಂಗ್ಲಿಷರೊಡನೆ ಯುದ್ಧ ಮಾಡಿದರು ಎಂಬ ಒಂದೇ ಕಾರಣಕ್ಕೆ ಹೀಗೆ ಉತ್ಪ್ರೇಕ್ಷಿಸಿರುವುದು ಇತಿಹಾಸಕ್ಕೆ ಮಾಡಿದ ಅಪಚಾರವಾಗುತ್ತದೆ. ಟಿಪ್ಪು ಸುಲ್ತಾನ್ ಇಂಗ್ಲಿಷರ ವಿರುದ್ಧ ಯುದ್ಧ ಮಾಡಿದ್ದಾಗಲಿ, ಅವನ ಮಕ್ಕಳನ್ನು ಬ್ರಿಟಿಷರಲ್ಲಿ ಅಡವಿಟ್ಟಿದ್ದಾಗಲಿ, ಭಾರತಕ್ಕೆ ಪ್ರಜಾಪ್ರಭುತ್ವ ಮತ್ತು ಸ್ವಾಂತಂತ್ರ್ಯವನ್ನು ತಂದುಕೊಡುವ ಉದ್ದೇಶದಿಂದಲ್ಲ. ಹಾಗೆ ನೋಡಿದರೆ ಯಾವ ನಿರಂಕುಶ ಅಧಿಕಾರಸ್ಥನೂ ಪ್ರಜಾಪ್ರಭುತ್ವವಾದಿಯಾಗಿರುವುದಿಲ್ಲ ೧೮೫೭ರ ಸಿಪಾಯಿ ದಂಗೆ ಭಾರತೀಯ ಸ್ವಾತಂತ್ರ್ಯದ ಮೊದಲ ಹೆಜ್ಜೆ ಎಂದು ಗುರುತಿಸಲಾಗಿದೆ. ಹೀಗಾಗಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರನ್ನು ಯಾವುದೇ ಕಾರಣದಿಂದಲೂ ಭಾರತೀಯ ಸ್ವಾತಂತ್ರ್ಯ ವೀರೆಂದು ಕರೆಯುವುದು ತಮಾಷೆಯ ಪ್ರಸಂಗ ಎಂದು ಗೇಲಿ ಮಾಡುತ್ತದೆ. ಇಂತಹ ಅನೇಕ ಜಾನಪದ ಸಾಹಿತ್ಯ ಘಟನೆಗಳ ಅಧಾರದಿಂದ ನಮ್ಮ ಇತಿಹಾಸವನ್ನು ಮರು ಪರಿಶೀಲಿಸುವ ಅವಶ್ಯಕತೆ ಇದೆ. ಇತಿಹಾಸ ಮತ್ತು ಜಾನಪದ, ಸೀತೆದಂಡೆ ಈ ಲೇಖನಗಳು ಈ ದೃಷ್ಟಿಯಲ್ಲಿ ಮಾಡಿದ ವಿಶ್ಲೇಷಣೆಗಳಾಗಿವೆ.

ಜಾನಪದ ಜನಪದರ ಆಚರಣೆಗಳು ಮತ್ತು ನಡಾವಳಿಗಳ ಆಕರ ಎಂದು ಹೇಳಬಹುದು. ಆದಿಯಿಂದ ಇಲ್ಲಿಯವರೆಗೆ ರೂಪುಗೊಂಡ ಸಾಮಾಜಿಕ ಮತ್ತು ಧಾರ್ಮಿಕ ನಡಾವಳಿಗಳು ಇಂತಹ ಜಾನಪದ ಸಾಹಿತ್ಯದಲ್ಲಿ ಅಂತರ್ಗತಗೊಂಡಿರುತ್ತವೆ. ಇವುಗಳಿಗೆ ದೈವಿಕ ಮತ್ತು ಪೌರಾಣಿಕ ರೂಪಗಳನ್ನು ಕೊಡಲಾಗುತ್ತದೆ. ಜನಪದ ಜೀವನದಲ್ಲಿ ನಡೆಯುವ ಹಬ್ಬ ಹರಿದಿನ ಜಾತ್ರೆ ಉತ್ಸವಗಳ ಹಿನ್ನೆಲೆಯ ಈ ಸಾಹಿತ್ಯದಲ್ಲಿ ಅವರ ಬದುಕಿನ ನಾನಾ ರೂಪಗಳನ್ನು ನಾನಾ ಮಜಲುಗಳನ್ನು ಗುರುತಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದೇವತೆಗಳಿಗೆ ಸಂಬಂಧಿಸಿದ ಅಧ್ಯಯನ ಮತ್ತು ವಿಶ್ಲೇಷಣೆ ನಮ್ಮ ಪ್ರಾಚೀನ ಸಮಾಜ ಮತ್ತು ಧಾರ್ಮಿಕ ವಿಚಾರಗಳನ್ನು ಅರಿಯಲು ಸಹಕಾರಿಯಾಗುತ್ತದೆ. ಕಾಲ ಕಾಲಕ್ಕೆ ಜನ ಜೀವನದಲ್ಲಿ ಆದ ಮಾರ್ಪಾಡುಗಳು ಧಾರ್ಮಿಕ ಕ್ಷೇತ್ರದಲ್ಲಿ ಆದ ಬದಲಾವಣೆಗಳು ಈ ಸಾಹಿತ್ಯದಲ್ಲಿ ಹುದುಗಿವೆ. ನಮ್ಮ ಪ್ರಾಚೀನ ಸಮಾಜವನ್ನು ಸಂಸ್ಕೃತಿಯನ್ನು ಪುನರ್ ರೂಪಿಸುವಾಗ, ವಿಶ್ಲೇಷಿಸುವಾಗ, ಪುನರ್ ನಿರ್ಮಿಸುವಾಗ ಇವುಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಪ್ರತಿಯೊಂದು ಗ್ರಾಮದೇವತೆಯ ಕಥೆಯ ಹಿಂದೆ, ಪ್ರತಿಯೊಂದು ಮಾಸ್ತಿ ಗುಡಿಯ ಕಥೆಯ ಹಿಂದೆ ಒಬ್ಬಳು ಹೆಣ್ಣು ಮಗಳ ಆತ್ಮಾರ್ಪಣೆಯ ಘಟನೆ ಇರುತ್ತದೆ. ಕೋಟೆ ಕೊತ್ತಲುಗಳಿಗೆ ಕೆರೆ ಕಟ್ಟೆ ಬಾವಿಗಳಿಗೆ ಮಾನ ರಕ್ಷಣೆಗೆ ಆತ್ಮಾರ್ಪಣೆ ಸೃಷ್ಟಿಯನ್ನೇ ಭೈರವ, ಮೈಲಾರಲಿಂಗ, ವೀಭದ್ರ ಹೀಗೆ ನಾನಾ ರೂಪಗಳಲ್ಲಿ ಕಾಣಬಹುದು. ಈ ಪ್ರತಿಯೊಂದು ದೇವ ದೇವತೆಗಳಿಗೂ ಒಂದೊಂದು ಇತಿಹಾಸವಿದೆ. ಅವು ನಡೆದ ಕಾಲದಿಂದ ಇಲ್ಲಿಯವರೆಗೆ ಅನೇಕ ಉತ್ಪ್ರೇಕ್ಷೆಯ ಹೂಳು ತುಂಬಿ ಮೂಲದ ಪರಿಕಲ್ಪನೆ ಇಲ್ಲದಿರುವುದು ಉಂಟು. ಇವುಗಳ ಅಧ್ಯಯನದಿಂದ ಅಂದಿನಿಂದ ಇಂದಿನವರೆಗಿನ ಧಾರ್ಮಿಕ ಬದಲಾವಣೆಗಳ, ಧಾರ್ಮಿಕ ಏಳು ಬೀಳುಗಳ ವಿಚಾರಗಳನ್ನು ಅರಿಯಬಹುದು. ದಕ್ಷಿಣ ಕರ್ನಾಟಕದಲ್ಲಿ ಮೈಲಾರಲಿಂಗ ಸಂಪ್ರದಾಯ, ಮೂಗೂರು ತಿಬ್ಬಾದೇವಿ ಒಂದು ಅಧ್ಯಯನ ಈ ದಿಸೆಯಲ್ಲಿ ಮಾಡಿದ ಪ್ರಯತ್ನಗಳು ಎಂದು ಹೇಳಬಹುದು.

ಜಾನಪದ ಸಾಹಿತ್ಯ ಮತ್ತು ಕಲೆಗಳನ್ನು ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ ಪರಿಶೀಲಿಸುವುದು ನಡೆದು ಬಂದಿದೆ. ಇದರ ಜೊತೆಗೆ ಅವುಗಳ ಮೂಲ ಮತ್ತು ವಿಕಾಸದ ಇತಿಹಾಸವನ್ನು ಅಧ್ಯಯನ ಮಾಡುವುದು ಆ ಮೂಲಕ ನಮ್ಮ ಪ್ರಾಚೀನ ಜನಪದ ಜೀವನ ಮತ್ತು ಸಂಸ್ಕೃತಿಯನ್ನು ಅರಿಯುವುದು ಅತ್ಯಾವಶ್ಯಕವಾಗಿದೆ. ಈ ಹಿನ್ನೆಲ್ಲೆಯಲ್ಲಿ ಈ ದೃಷ್ಟಿಯಿಂದ ಜಾನಪದ ಸಾಹಿತ್ಯದ ಅಧ್ಯಯನ ನಡೆದರೆ ಒಂದು ಪ್ರಾಚೀನ ಸಂಸ್ಕೃತಿಯ ರೂಪವನ್ನು ಕಾಣಲು ಮತ್ತು ಅದನ್ನು ಕಟ್ಟಲು ಸಹಾಯಕವಾಗುತ್ತದೆ. ಸಂಗ್ರಹದಷ್ಟೇ ಸಂಶೋಧನೆ ಮತ್ತು ವಿಶ್ಲೇಷಣೆಗಳು ಈ ಕ್ಷೇತ್ರದಲ್ಲಿ ಬಹಳ ಮುಖ್ಯ ಎಂದು ಹೇಳಬಹುದು. ಈ ದಿಸೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆಯಾದರೂ ಸಂಗ್ರಹದಷ್ಟು ವ್ಯಾಪಕವಾಗಿ ನಡೆಯುತ್ತಿಲ್ಲ. ಅಂತಹ ಸ್ಥಿತಿಯಲ್ಲಿ ಕೆಲವು ವಿಚಾರಗಳನ್ನು ಇಲ್ಲಿನ ಲೇಖನಗಳಲ್ಲಿ ವಿಶ್ಲೇಷಿಸಲಾಗಿದೆ.