ಎರಡು ವರ್ಷಗಳ ಹಿಂದೆ ಎಂದು ಕಾಣುತ್ತದೆ. ಆಗ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದ ಮಿತ್ರ ಶ್ರೀ ಜಯಪ್ರಕಾಶ ಗೌಡ ಅವರು ನನ್ನ ಸಂಶೋಧನ ಲೇಖನಗಳಲ್ಲಿ ಕೆಲವರನ್ನು ಕನ್ನಡ ವಿಶ್ವ ವಿದ್ಯಾಲಯದಿಂದ ಪ್ರಕಟಿಸುವಂತೆ ಪ್ರಯತ್ನಿಸುವುದಾಗಿ ತೆಗೆದುಕೊಂಡು ಹೋಗಿದ್ದರು. ನನ್ನ ಬಹುತೇಕ ಕೃತಿಗಳು ಮತ್ತು ಸಂಶೋಧನ ಲೇಖನಗಳು ಮೈಸೂರು ವಿಶ್ವವಿದ್ಯಾಲಯದ ಪ್ರಕಟಣೆಗಳಾಗಿವೆ. ಸಂಶೋಧನೆ ಲೇಖನಗಳು ಪ್ರಬುದ್ಧ ಕರ್ನಾಟಕ ಮತ್ತು ಮಾನವಿಕ ಕರ್ನಾಟಕಗಳಲ್ಲಿ ಪ್ರಕಟವಾದಂಥವು. ನನ್ನ ಲೇಖನಗಳನ್ನಾಗಲಿ, ಕೃಗಳನ್ನಾಗಲೀ ಪ್ರಕಟಿಸುವಂತೆ ಒತ್ತಾಯ ಹೇರುವುದು, ದುಂಬಾಲು ಬೀಳುವುದು ನನ್ನ ಸ್ವಭಾವ ಅಲ್ಲ. ಹಾಗಾಗಿ ಈ ವಿಚಾರವನ್ನು ಸ್ವಲ್ಪ ಹೆಚ್ಚು ಕಡಿಮೆ ಮರೆತೇ ಬಿಟ್ಟಿದ್ದೆ ಎಂದು ಹೇಳಬಹುದು.

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಂಗದ ನಿರ್ದೇಶಕರೂ, ಹೆಸರಾಂತ ಲೇಖಕರೂ ಆದ ಪ್ರೊ. ಮಲ್ಲೇಪುರಂ ವೆಂಕಟೇಶರವರು ನನ್ನ ಆಯ್ದ ಹನ್ನೊಂದು ಜಾನಪದ ಸಂಶೋಧನ ಲೇಖನಗಳನ್ನು ಪ್ರಕಟಿಸಲು ತೀರ್ಮಾನಿಸಿರುವುದಾಗಿಯೂ, ಸುಪ್ರಸಿದ್ಧ ಜಾನಪದ ವಿದ್ವಾಂಸರಾದ ಡಾ. ಹಿ. ಚಿ. ಬೋರಲಿಂಗಯ್ಯ ಅವರು ಇವುಗಳನ್ನು ಆರಿಸಿರುವುದಾಗಿಯೂ ಪ್ರಕಟಣೆಗೆ ಒಪ್ಪಿಗೆ ಸೂಚಿಸಬೇಕೆಂದು ತಿಳಿಸಿದ್ದರು. ನಾನು ಒಪ್ಪಿಗೆ ಸೂಚಿಸಿ ಅವರಿಗೆ ಪತ್ರ ಬರೆದಿದ್ದೆ. ಅದರಂತೆ ಈ ಕೃತಿ ಪ್ರಕಟವಾಗುತ್ತಿದೆ.

ಈ ಸಂಕಲ್ಪದಲ್ಲಿರುವ ಎಲ್ಲ ಲೇಖನಗಳು ಬೇರೆ ಬೇರೆ ವಿಶ್ವವಿದ್ಯಾಲಯಗಳು, ಅಕಾಡೆಮಿಗಳು, ನಡೆಸಿದ ವಿಚಾರ ಸಂಕಿರಣಗಳಲ್ಲಿ ಮಂಡಿತವಾದಂತಹವು. ಅನಂತರ ವಿಶ್ವವಿದ್ಯಾಲಯಗಳ ನಡೆಸಿದ ವಿಚಾರ ಸಂಕಿರಣಗಳಲ್ಲಿ ಪ್ರಕಟವಾದಂತಹವು. ಈ ಎಲ್ಲ ಲೇಖನಗಳನ್ನು ಬರೆದು ಮಂಡಿಸಿ, ಪ್ರಕಟಿಸಿ, ಹತ್ತಿರ ಹತ್ತಿರ ಮೂರು ದಶಕಗಳೇ ಕಳೆದಿವೆ. ಇಲ್ಲಿ ನಾನು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಇದುವರೆಗೆ ಯಾವ ವಿದ್ವಾಂಸರೂ ಆಕ್ಷೇಪ ಎತ್ತಿಲ್ಲವಾಗಿ ನಂಬಿದ್ದೇನೆ. ಸಂಶೋಧನ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗಿವೆ. ಹೊಸ ಹೊಸ ವಿಚಾರಗಳು ಬೆಳಕಿಗೆ ಬಂದಿವೆ. ನಾನು ಇಲ್ಲಿ ಹೇಳಿರುವ ವಿಚಾರಗಳು ಸರಿಯಾಗಿಲ್ಲವೆಂದು ಯಾರಾದರೂ ಸಕಾರಣವಾಗಿ ಪ್ರತಿಪಾದಿಸಿದರೆ ಅಂತಹ ಅಭಿಪ್ರಾಯಗಳನ್ನು ಸಂತೋಷದಿಂದಲೇ ಸ್ವೀಕರಿಸುತ್ತೇನೆ ಮತ್ತು ಒಪ್ಪಿಕೊಳ್ಳುತ್ತೇನೆ. ಈ ಲೇಖನಗಳು ಜಾನಪದ ಸಂಶೋಧನ ಕ್ಷೇತ್ರದ ಮೇಲೆ ಹೊಸ ಬೆಳಕು ಚೆಲ್ಲಿವೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಈ ಕೃತಿಯ ಪ್ರಕಟಣೆಗೆ ಸಂಬಂಧಿಸಿದಂತೆ ಹಲವರನ್ನು ನಾನು ನೆನೆಯಬೇಕು. ಈ ಪ್ರಯತ್ನವನ್ನು ಮೊದಲು ಮಾಡಿದ ಮಿತ್ರರಾದ ಬಿ. ಜಯಪ್ರಕಾಶ ಗೌಡ ಅವರಿಗೆ ನನ್ನ ವಂದನೆಗಳು ಸಲ್ಲಬೇಕು. ಎರಡು ವರ್ಷಗಳ ಹಿಂದೆ ಪ್ರಕಟಣೆಗೆಂದು ಹೋದರೂ ಪ್ರಕಟಿಸಲು ತೀರ್ಮಾನವಾಗಿದ್ದರೂ ಅದು ಕಾರ್ಯಗತವಾಗುವ ಹೊತ್ತಿಗೆ ಅಂತರರಾಷ್ಟ್ರೀಯ ಮಟ್ಟದ ವಿದ್ವಾಂಸರು ನನ್ನ ಮಿತ್ರರೂ ಆದ ಡಾ. ಬಿ. ಎ. ವಿವೇಕ ರೈ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿರುವಾಗ ಈ ಕೃತಿ ಪ್ರಕಟವಾಗುತ್ತಿರುವುದು ನನಗೆ ಸಂತೋಷವನ್ನು ಉಂಟುಮಾಡಿದೆ. ಇಲ್ಲಿನ ಲೇಖನಗಳನ್ನು ಅಧ್ಯಯನ ಮಾಡಿ ಆರಿಸಿದ ಮಿತ್ರರಾದ ಹಿ. ಚಿ. ಬೋರಲಿಂಗಯ್ಯ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲಬೇಕು. ಶ್ರೀ ಮಲ್ಲೇಪುರಂ ವೆಂಕಟೇಶರವರು ಪ್ರಸಾರಂಗದ ನಿರ್ದೇಶಕರಾಗಿ ಇದರ ಪ್ರಕಟಣೆಯ ಜವಾಬ್ದಾರಿ ನಿರ್ವಹಿಸಿದ್ದಾರೆ. ಈ ಕೃತಿಯ ಕರಡು ತಿದ್ದುವಲ್ಲಿ ಡಾ. ಎಂ. ವಿ. ವಿಜಯಲಕ್ಷ್ಮಿ ಮತ್ತು ಶ್ರೀಮತಿ ಲಲಿತ ನನಗೆ ನೆರೆವಾಗಿದ್ದಾರೆ. ಇದನ್ನು ಫಾಂಟ್ ಲೈನ್ ಗ್ರಾಫಿಕ್ಸ್ ಕಮಲಾಪುರ ಇವರು ಅಚ್ಚಿಗೆ ಸಿದ್ಧಪಡಿಸಿದ್ದಾರೆ. ಸ್ನೇಹಾ ಪ್ರಿಂಟರ್ಸ್ ಮುದ್ರಣಾಲಯದವರು ಇದನ್ನು ಸುಂದರವಾಗಿ ಮುದ್ರಿಸಿದ್ದಾರೆ. ಈ ಎಲ್ಲರಿಗು ನನ್ನ ಕೃತಜ್ಞತೆಗಳು ಸಲ್ಲಬೇಕು.

. ಕ. ರಾಜೇಗೌಡ
ಸಂಹನುಮನಹಳ್ಳಿ
ಸಂಕ್ರಾಂತಿ, ೨೦೦೭