ಕೋಡಗದ ಮಾರಯ್ಯ ಬಸವಣ್ಣನ ಸಮಕಾಲೀನನಾದ ಒಬ್ಬ ಶಿವಶರಣ. ಈತ ಮೊದಲು ಒಕ್ಕಲಿಗನಾಗಿದ್ದು ವೀರಶೈವ ಧರ್ಮವನ್ನು ಸ್ವೀಕರಿಸಿದವನು. ಶಿವಶರಣನಾದ ಮೇಲೆ ಮಾರಯ್ಯ ಬಸವಣ್ಣನ ನಿರ್ದೇಶನದಂತೆ ಕೋಡಗವನಾಡಿಸುವ ಕಾಯಕವನ್ನು ಕೈಗೊಂಡ. ಕೋಡಗದ ಆಟವನ್ನು ನೋಡಿ ಸಂತೃಪ್ತರಾದ ಜನರು ಕೊಡುತ್ತಿದ್ದುರಲ್ಲಿ ಅವನು ಜಂಗಮರಿಗೆ ನೀಡುತ್ತಿದ್ದ. ಶಿವಭಕ್ತನೊಬ್ಬ ಕೋಡಗ ಕುಣಿಸುವ ಕಾಯಕ ಮಾಡುತ್ತಿರುವುದು ಕೇಶಿರಾಜ ಡಣಾಯಕನಿಗೆ ಸರಿಬೀಳಿಲಿಲ್ಲ. ಅವನು ಅದನ್ನು ಆಕ್ಷೇಪಿಸಿ ಕೋಡಗನನ್ನು ಬಿಡಿಸಿ ಓಡಿಸಿದನು. ಮಾರಯ್ಯ ಕಾಯಕ ಮತ್ತು ಜಂಗಮ ದಾಸೋಹಕ್ಕೆ ಬೇರೇನೂ ದಾರಿ ಕಾಣದೆ ತನ್ನ ಲಿಂಗಕ್ಕೆ ದಾರ ಕಟ್ಟಿ ಆಡಿಸತೊಡಗಿದ. ಕಲ್ಯಾಣ ಪಟ್ಟಣದ ಶಿವಭಕ್ತರ ಲಿಂಗಗಳೆಲ್ಲಾ ಕುಣಿಯಲಾರಂಭಿಸಿದವು. ಈ ವಿಚಿತ್ರವನ್ನು ಕಂಡ ಶರಣರು ಬಸವಣ್ಣನಲ್ಲಿಗೆ ಬಂದರು. ಅವರೆಲ್ಲಾ ಕೂಡಿ ಮಾರಯ್ಯ ನಿದ್ದಲ್ಲಿಗೆ ಹೋದರು. ಮಾರಯ್ಯನ ಭಕ್ತಿಗೆ ಒಲಿದು ಶಿವ ಪ್ರತ್ಯಕ್ಷನಾಗಿ ಅವನನ್ನು ಕೈಲಾಸಕ್ಕೆ ಕರೆದೊಯ್ದನು. ಇದು ವೀರಶೈವ ಕಾವ್ಯಗಳಲ್ಲಿ ಬರುವ ಕೋಡಗದ ಮಾರಯ್ಯನ ಕಥೆ. ಇದರೊಂದಿಗೆ ಗೋರಾಂಟ ಎಂಬ ಶಿವನ ಮಾಲೆಗಾರ ಮತ್ತು ಮಹಾಮುನಿ ಎಂಬ ಋಷಿಯ ಕಥೆಯೂ ಸೇರಿಕೊಳ್ಳುತ್ತದೆ. ಬಸವಣ್ಣನ ನಂತರ ಆ ಶತಮಾನದ ಶಿವಶರಣರೆಲ್ಲಾ ಅವತಾರ ಪುರುಷರೆಂದು ಹೇಳಿ ಅವರನ್ನು ಕುರಿತು ಬರೆದವರೆಲ್ಲಾ ಹೇಳುತ್ತಾ ಬಂದರು. ಅಂತೆಯೇ ಗೋರಾಂಟ ಮತ್ತು ಮಹಾಮುನಿಗಳು ಶಾಪಗ್ರಸ್ಥರಾಗಿ ಭೂಮಿಗೆ ಬಂದುದೇ ಕೋಡಗದ ಮಾರಯ್ಯನ ಚರಿತ್ರೆಯ ಕಥೆ. ಅನೇಕ ವೀರಶೈವ ಕೃತಿಗಳಲ್ಲಿ ಈ ಕಥೆ ಒಂದು ಪದ್ಯದಿಂದ ನೂರಾರು ಪದ್ಯಗಳವರೆಗೆ ಬರುತ್ತದೆ. ಪಂಚಯ್ಯನ ಭಕ್ತಿ ರಸದ ಸೇನೆಯಲ್ಲಿ ಎರಡು ಸಂಧಿಗಳಲ್ಲಿ ಈ ಕಥೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೋಡಗದ ಮಾರಯ್ಯ ಸಕಲ ಪುರಾತನರ ಗುಂಪಿಗೆ ಸೇರುತ್ತಾನೆ.

ಬಸವಣ್ಣನವರ ಸಮಕಾಲೀನ ಶಿವಶರಣರ ಜೀವನ ಭೋಧನೆಗಳನ್ನು ಕುರಿತು ಅನಂತರದ ವೀರಶೈವ ಕವಿಗಳು ಸ್ವತಂತ್ರ ಕೃತಿಗಳನ್ನೇ ರಚಿಸಿದ್ದಾರೆ. ಶಿವಶರಣರನ್ನು ಕುರಿತ ಹರಿಹರನ ರಗಳೆಗಳು ಈ ನಿಟ್ಟಿನಲ್ಲಿ ಗಮನಾರ್ಹವಾದುವಾಗಿವೆ. ಮಹಾಕಾವ್ಯಗಳಲ್ಲಿ ಬರುವ ಒಂದೊಂದು ಸಣ್ಣ ಘಟನೆ ಅಥವಾ ಪಾತ್ರ ಮುಂದಿನ ಕವಿಯ ಕೃತಿಗಳಿಗೆ ವಸ್ತುವಾಗುವಂತೆ ಬಸವಣ್ಣನ ಕಾಲದ ಶರಣರ ಚರಿತ್ರೆಗಳೂ ಮುಂದಿನ ವೀರಶೈವ ಕವಿಗಳ ಗ್ರಂಥಗಳಿಗೆ ಕಥಾ ವಸ್ತುವಾದುವು. ಚನ್ನಬಸವಪುರಾಣ, ರಾಘವಾಂಕಚರಿತ್ರ, ನಿಜಲಿಂಗ ಚಿಕ್ಕಯ್ಯನ ಸಾಂಗತ್ಯ, ಭಕ್ತಿರಸದ ಸೋನೆ, ಶಿವಶರಣರ ಚರಿತ್ರೆಗಳು ಹೀಗೆ ಅನೇಕ ಕಾವ್ಯಗಳು ಹುಟ್ಟಿಕೊಂಡವು. ಸಮಕಾಲೀನ ವ್ಯಕ್ತಿಯೊಬ್ಬ ಕಾವ್ಯದ ನಾಯಕನಾಗುವಾಗ ಕಾವ್ಯ ಮತ್ತು ಧರ್ಮಸಂಪ್ರದಾಯದಂತೆ ಅನೇಕ ಬದಲಾವಣೆಗಳನ್ನು ಹೊಂದಬೇಕಾಗುತ್ತದೆ. ಆತ ವೀರಶೈವ ಧರ್ಮ ಸ್ವೀಕರಿಸುವ ಮುನ್ನ ಬೇರಾವುದೋ ಮತ ಧರ್ಮಕ್ಕೆ ಸೇರಿದವನಾಗಿರುತ್ತಾನೆ. ಆತ ವೀರಶೈವ ಧರ್ಮವನ್ನು ಸ್ವೀಕರಿಸಿದ ನಂತರ ತನ್ನ ಪೂರ್ವಾಶ್ರಮವನ್ನು ಮರೆಯಬೇಕಾಗುತ್ತದೆ. ಬೇರೆ ಜಾತಿಯವನೊಬ್ಬ ವೀರಶೈವನಾಗಿ ಪರಿವರ್ತನೆಗೊಂಡ ಎನ್ನುವ ಬದಲು ಕೈಲಾಸದ ಶಿವಗಣನೊಬ್ಬ ಕಾರಣಾಂತರದಿಂದ ಇಂಥ ಜಾತಿಯವನ, ಇಂಥವನ ಮಗನಾಗಿ ಜನಿಸಿದನೆಂದು ಹೇಳುತ್ತದೆ. ಇದು ಅನೇಕ ವೇಳೆ ಅನಿವಾರ್ಯವೂ ಹೌದು. ಕೋಡಗದ ಮಾರಯ್ಯನ ಕಥೆಯೂ ಈ ಬದಲಾವಣೆಯನ್ನು ಕಂಡಿದೆ. ಮಾರಯ್ಯ ಶಿವನ ಮಾಲೆಗಾರ. ಶಾಪದಿಂದಾಗಿ ಕಲ್ಯಾಣ ಪಟ್ಟಣದ ಒಕ್ಕಲಿಗ ಭೈರಗೌಡನ ಮಗನಾಗಿ ಹುಟ್ಟಿದನೆಂದು ಕವಿ ಬದಲಾಯಿಸಿಕೊಂಡಿದ್ದಾನೆ. ಈತ ಒಕ್ಕಲಿಗ ಜಾತಿಯವನಾಗಿದ್ದು ವೀರಶೈವಧರ್ಮ ಸ್ವೀಕರಿಸಿದವನು.

ಕೋಡಗದ ಮಾರಯ್ಯನ ಚರಿತ್ರೆಯನ್ನು ಬರೆದ ಕವಿ ಮತ್ತು ಅವನ ಜೀವನ ವಿವರಗಳು ಸರಿಯಾಗಿ ದೊರೆಯುವುದಿಲ್ಲ. ಕವಿ ಚರಿತೆಕಾರರ ದೃಷ್ಟಿಗೆ ಈ ಗ್ರಂಥ ಬಿದ್ದಿಲ್ಲ. ಕವಿಯದೇ ಆದ.

ಅವರ ಶ್ರೀಕರದೊಳು ಭವಹರಜನಿಸಿರ್ದ
ಶಿವನೋಂಕಾರ ದೇಶಿಕನ
ತವಕದ ಶಿಷ್ಯನು ನವವೀರಬೃತ್ಯನು
ಅವಪೇಳ್ದ ಶರಣರೀ ಕೃತಿಯ (೧ – ೧೩)

ಪದ್ಯದಿಂದ ಕೆಲವು ವಿವರಗಳನ್ನು ಊಹಿಸಲವಕಾಶವಿದೆ. ಮೇಲಿನ ಪದ್ಯದಂತೆ ಓಂಕಾರದೇ ಶಿಕನ ಶಿಷ್ಯ ನವವೀರ ಎಂಬುವನು ಕೋಡಗದ ಮಾರಯ್ಯನ ಚರಿತ್ರೆ ಬರೆದ ಎಂದಾಗುತ್ತದೆ. “ತವಕದ ಶಿಷ್ಯನು ನವವೀರ ಬೃತ್ಯನು” ಎನ್ನುವಾಗ ನವವೀರ ಎಂಬುದು ಹೆಸರೂ ಬಿರುದೊ ತಿಳಿಯುವುದಿಲ್ಲ. “ಅವಪೇಳ್ದ ಶರಣರೀ ಕೃತಿಯ ಎಂಬ ಮಾತಿನ ಆಧಾರದಿಂದ ಕೋಡಗದ ಮಾರಯ್ಯನ ಚರಿತ್ರೆಯನ್ನು ಬರೆದ ಕವಿ ನವವೀರ ಎಂಬುವವನು ಎಂದು ಇಟ್ಟುಕೊಳ್ಳಲಾಗಿದೆ. ಇಲ್ಲಿಯೇ ಇನ್ನೊಂದು ಅನುಮಾನವೂ ಹುಟ್ಟುತ್ತದೆ. ಕಾವ್ಯದ ಮತ್ತೊಂದು ಪದ್ಯ

ಪರಸಮಯದೂರನು ಹರಸಮಯಸಾರನು
ಚರಲಿಂಗ ವರಭಕ್ತರೊಳು
ಎರವಿಲ್ಲದನು ಭವಸ್ಮರಿಸಿದ ಶಿವನೊಳು
ಗುರುಲಿಂಗ ಸದ್ಭಕ್ತಿಯಿಂದ (೩ – ೨೨೩)

ಎಂದಿದೆ. ಇದರಂತೆ ಕೋಡಗದ ಮಾರಯ್ಯನ ಚರಿತ್ರೆಯನ್ನು ರಚಿಸಿದವನು ಗುರುಲಿಂಗ ಎಂದಾಗುತ್ತದೆ. ಆದರೆ ಇದಕ್ಕೆ ಪೋಷಕವಾದ ಸರಿಯಾದ ಆಧಾರಗಳು ದೊರೆಯುವುದಿಲ್ಲ. ಈತನು ಕವಿ ಪರಂಪರೆಯನ್ನು ಸ್ಮರಿಸದೆ ಗುರು ಪರಂಪರೆಯನ್ನು ಮಾತ್ರ ಸ್ಮರಿಸಿರುವುದರಿಂದ ಸನ್ಯಾಸಿಯಾಗಿದ್ದು ಗುರುಲಿಂಗ ಎಂಬ ಹೆಸರಿಟ್ಟಿದ್ದರೂ ಆಶ್ಚರ್ಯವಿಲ್ಲ. ಏಕೆಂದರೆ ನವವೀರ ಸನ್ಯಾಸ ಸ್ವೀಕರಿಸಿದ ನಂತರ ಆದ ಹೆಸರೂ ಗುರುಲಿಂಗ ಪೂರ್ವಾಶ್ರಮದ ಹೆಸರೂ ಆಗಿರಬಹುದು. ಭಿಕ್ಷಾಟನ ಚರಿತೆಯನ್ನು ಬರೆದ ಗುರುಲಿಂಗ ವಿಭು (೧೫೫೦) ವಿಗೂ ಇವನಿಗೂ ಯಾವ ಸಂಬಂಧವೂ ಇದ್ದಂತೆ ಕಂಡುಬರುವುದಿಲ್ಲ.

ನವನವೀರನ ಬಗ್ಗೆ ಪ್ರಸ್ತುತ ಕಾವ್ಯದಿಂದ ಕೆಲವು ವಿವರಗಳು ಮಾತ್ರ ದೊರೆಯುತ್ತವೆ. ಅಸಂಬಂಧವಾದ ಪದ್ಯಗಳು ಹೀಗಿವೆ.

ಅಂಗಗುಣವನಳಿದ ಶೃಂಗಾರ ಪರಬ್ರಹ್ಮ
ಹಿಂಗದೆ ನೆನೆವ ಭಕ್ತರಿಗೆ.
ಮಂಗಳ ಪದವೀವ ಜಂಗಮ ತೋಂಟದ
ಲಿಂಗನಂಫ್ರಿಗೆ ಎರಗುವೆನು (೧ – ೯)
ನಿತ್ಯಪವಾಡವ ಮರ್ತ್ಯದಿ ಜನಿಸಿರ್ದ
ಸತ್ಯನ ಜಾತ ಸುಪ್ರೀತ
ಅತ್ಯಂತ ಮಮಗುರು ಭ್ರತ್ಯನ ಬಿನ್ನಪ
ಸತ್ಯವೆನಿಸಿದ ಮಳೆಯಾರ್ಯ (೧ – ೧೦)
ಹಿರಿಯಬಾಗೂರೊಳು ಪರಮಸಿಂಹಾಸನ
ಚರಪತಿ ಮಮ ಕರ್ತೃವೆನಿಪ
ಗುರು ಜಂಜುಂಡನ ಚರಣ ಕಮಲದೊಳು
ಶಿರಮಣಿವೆನು ಭೃತ್ಯನಾಗಿ (೧ – ೧೨)
ಅವರ ಶ್ರೀಕರದೊಳು ಭವಹರಜನಿಸರ್ದ
ಶಿರನೊಂಕಾರದೇಶಿಕನ
ತವಕದ ಶಿಷ್ಯನು ನವವೀರ ಭೃತ್ಯನು
ಅವ ಪೇಳ್ದ ಶರಣರೀಕೃತಿಯ (೧ – ೧೩)

ಮೇಲಿನ ಪದ್ಯಗಳ ಆಧಾರದಿಂದ ಕವಿಯ ಗುರುಪರಂಪರೆಯನ್ನು ಹೀಗೆ ಕಲ್ಪಿಸಬಹುದು. ಎಡೆಯೂರು ಸಿದ್ಧಲಿಂಗ ಮಳೆಯಾರ್ಯ ನಂಜುಂಡ ಓಂಕಾರದೇಶಿಕ ನವವೀರ ಇವರಲ್ಲಿ ನಂಜುಂಡ ಎಂಬುವನು ಹಿರಿಯಬಾಗೂರಿನ ಪೀಠಾಧಿಪತಿಯಾಗಿದ್ದು ತನ್ನ ಕರಕಮಲ ಸಂಜಾತ ಓಂಕಾರದೇಶಿಕನಿಗೆ ಆ ಪೀಠವನ್ನು ವಹಿಸಿದ್ದಂತೆ ಕಂಡುಬರುತ್ತದೆ. ಆದುದರಿಂದ ನವವೀರ ಸಿದ್ಧಲಿಂಗಯತಿಯಿಂದ ನಾಲ್ಕನೆಯ ತಲೆಮಾರಿನವನಾಗಿದ್ದು ಆ ಪರಂಪರೆಗೆ ಸೇರಿದ ಹಿರಿಯ ಬಾಗೂರು ಅಥವಾ ದೊಡ್ಡ ಬಾಗೂರಿನ ಮಠದ ಪೀಠಾಧಿಕಾರಿ ಓಂಕಾರ ದೇಶಿಕನ ಮುರಿಯಗಿದ್ದಂತೆ ಕಾಣುತ್ತದೆ.

ಕವಿ ಪರಂಪರೆಯಂತೆ ನವವೀರ ಪೂರ್ವಕವಿಗಳನ್ನಾಗಲಿ ತನ್ನ ಸಮಕಾಲೀನ ವೀರಶೈವ ಕವಿಗಳನ್ನಾಗಲಿ ಸ್ಮರಿಸುವುದಿಲ್ಲ. ದೈವಗಳನ್ನು ನೆನೆಯುವಾಗಲೂ ರುದ್ರನನ್ನು ಮಾತ್ರ ನೆನೆಯುತ್ತಾನೆ. ಕವಿಯ ವೈಯಕ್ತಿಕ ಜೀವನ ವಿಚಾರಗಳಾದ ತಂದೆ, ತಾಯಿ, ಊರು, ಆಶ್ರಯ ಈ ಯಾವ ವಿಚಾರಗಳೂ ಕಾವ್ಯದಲ್ಲಿ ದೊರೆಯುವುದಿಲ್ಲ. ಇದರಿಂದ ನವವೀರ ಬಾಗೂರು ಮಠದ ಗುರು ಪರಂಪರೆಗೆ ಸೇರಿದವನೆಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ ಒಮ್ಮೆ ದೀಕ್ಷೆ ತೆಗೆದುಕೊಂಡು ಸನ್ಯಾಸಿಯಾದವನು ತನ್ನ ಪೂರ್ವಾಶ್ರಮದ ತಂದೆ, ತಾಯಿರನ್ನಾಗಲಿ, ಊರು ಕೇರಿಗಳನ್ನಾಗಲಿ ಹೇಳದೆ ತನ್ನ ಮಠ ಪರಂಪರೆ ಮತ್ತು ಗುರು ಪರಂಪರೆಗಳನ್ನು ಮಾತ್ರ ಹೇಳುವುದು ಸಂಪ್ರದಾಯ. ಆದುದರಿಂದಲೇ ಕವಿ ತನ್ನ ವೈಯಕ್ತಿಕ ಜೀವನ ವಿಚಾರಗಳನ್ನು ಹೇಳದೆ ಕೇವಲ ಗುರು ಪರಂಪರೆಯನ್ನು ಮಾತ್ರ ಹೇಳಿದ್ದಾನೆ.

ನವವೀರ ತಾನು ಹಿರಿಯ ಬಾಗೂರಿನ ಗುರು ಪರಂಪರೆಗೆ ಸೇರಿದವನೆಂದು ಹೇಳುತ್ತಾನಷ್ಟೆ. ಆದರೆ ಈ ಹಿರಿಯ ಬಾಗೂರು ಯಾವುದೆಂಬುದು ಸ್ಪಷ್ಟವಾಗುವುದಿಲ್ಲ. ಏಕೆಂದರೆ ಹಳೆಯ ಮೈಸೂರು ಭಾಗದ ಪ್ರತಿ ಜಿಲ್ಲೆಯಲ್ಲೂ ಬಾಗೂರು ಅಥವಾ ಭಾಗೆಯೂರುಗಳು ಕಂಡುಬರುತ್ತವೆ. ಆದರೆ ಈತ ತೋಂಟದ ಸಿದ್ಧಲಿಂಗ ಯತಿಯ ಪರಂಪರೆ ಮತ್ತು ಮಳೆಯಾರ್ಯನ ಪರಂಪರೆಯನ್ನು ಹೇಳುವುದರಿಂದ ಹಿರಿಯ ಬಾಗೂರಿನ ಪರಮ ಸಿಂಹಾಸನದ ಚರಪತಿ ನಂಜುಂಡ ಎಂದು ಹೇಳಿದ್ದಾನೆ. ಇವರಲ್ಲಿ ಮೊದಲನೆಯವನಾದ ಸಿದ್ಧಲಿಂಗಯತಿಯ ಕಥೆ ಹೀಗಿದೆ. ಈತನು ಚಾಮರಾಜನಗರದ ತಾಲ್ಲೂಕು ಹರದನಹಳ್ಳಿಯ ಮಠದ ಗೋಸಲ ಚನ್ನಬಸವನ ಶಿಷ್ಯಾ. ಅಲ್ಲಿಂದ ತುಮಕೂರು ಜಿಲ್ಲೆಯ ಕಗ್ಗೆರೆಗೆ ಬಂದು ಅಲ್ಲಿನ ಗಿರಿಗೌಡರ ತೋಟದಲ್ಲಿ ಬಹಳ ಕಾಲ ತಪಸ್ಸು ಮಾಡಿದ. ಆ ಭಾಗದಲ್ಲೆಲ್ಲಾ ವೀರಶೈವ ಧರ್ಮ ಪ್ರಚಾರ ಮಾಡಿ ಕಡೆಗೆ ಕುಣಿಗಲು ತಾಲ್ಲೂಕಿನ ಎಡೆಯೂರಿನಲ್ಲಿ ಶಿವನಲ್ಲಿ ಐಕ್ಯವಾದನು. ಹಿರಿಯ ಬಾಗೂರಿನ ನಂಜುಂಡನ ಬಗ್ಗೆ ದೊರೆಯುವ ಆಧಾರಗಳು ಹೀಗಿವೆ. “ಗುಮ್ಮಳಾಪುರದ ಗುರುಸಿದ್ಧ ಮಲ್ಲಿಕಾರ್ಜುನನ ಶಿವ ಸಹೋದರ ಉಗ್ರಾಣಿಯತಿವರನ ಕರಕಮಲ ಸಂಜಾತ ಶಂಕಿನ ಸಿದ್ಧೇಶನ ಹಸ್ತ ಕಮಲೋಬ್ದೂತ, ಲಿಂಗ ನಿಷ್ಠ, ಚರಚಕ್ರವರ್ತಿಯಾದ ಈತ ವೀರಶೈವೋದ್ದರಣ”ನೆಂದು ವೀರಶೈವಾಮೃತ ಮಹಾಪುರಾಣ ಹೇಳುತ್ತದೆ. ಈ ಗುಮ್ಮಳಾಪುರದ ಸಿದ್ಧಲಿಂಗಯತಿಯೂ ತೋಂಟದ ಸಿದ್ಧಲಿಂಗಯತಿಯೂ ಸಮಕಾಲೀನರೆಂದು ಹೇಳುತ್ತದೆ. ಇದಲ್ಲದೆ ನವವೀರ ನೆನೆಯುವ ಮಳೆಯಾರ್ಯನು ಕೇರಳದ ಕಡೆಯಿಂದ ಬಂದವನು. ಹೀಗಾಗಿ ನವವೀರ ಹೇಳುವ ಹಿರಿಯ ಭಾಗೂರು ಹರದನಹಳ್ಳಿ ಅಥವಾ ಎಡೆಯೂರಿಗೆ ಸುತ್ತಮುತ್ತಲಲ್ಲಿ ಎಲ್ಲೋ ಇದ್ದಿರಬೇಕೆಂದು ಊಹಿಸಲವಕಾಶವಿದೆ. ಆದರೆ ಚಾಮರಾಜನಗರ ತಾಲೂಕಿನಲ್ಲಿ ಬಾಗೂರು ಯಾವ ಶಾಸನಗಳಲ್ಲಿಯೂ ದೊರೆಯುವುದಿಲ್ಲ. ಗುಂಡಲ ಪೇಟೆ ೧೭ ಮತ್ತು ನಂಜನಗೂಡಿನ ೩೧೨ನೆಯ ಶಾಸನಗಳಲ್ಲಿ ಬಾಗೂರಿನ ಹೆಸರು ಬರುತ್ತದೆ. ಆದರೆ ಇದು ಹಿರಿಯ ಬಾಗೂರೆ? ಎಂಬುದು ಸ್ಪಷ್ಟವಾಗುವುದಿಲ್ಲ. ಇನ್ನು ನಾಗಮಂಗಲ ತಾಲ್ಲೂಕಿನ ೧೫೪೪ರ ಶಾಸನವೊಂದರಲ್ಲಿ ಬಾಗೂರಿನ ಉಲ್ಲೇಖ ಬರುತ್ತದೆ. ಇದು ಎಡೆಯೂರಿಗೆ ಅನತಿ ದೂರದಲ್ಲಿದ್ದ ಒಂದು ಊರಾಗಿತ್ತು ಎಂಬುದು ಗಮನಾರ್ಹ. ಇಲ್ಲಿ ಸಹ ಹಿರಿಯ ಬಾಗೂರು ಎಂದು ಯಾವ ಊರು ದೊರೆಯುವುದಿಲ್ಲ. ತಿಪಟೂರು ತಾಲೂಕಿನ ೮೬ನೆಯ ಶಾಸನದಲ್ಲಿ “ಹಿರೇಬಾಗೂರ ಹೊಟ್ಟೆ ತಿಮ್ಮಶೆಟ್ಟಿ ಬಾಗೂರ ಮಲ್ಲಿಶೆಟ್ಟಿ” ಎಂಬ ಉಲ್ಲೇಖ ದೊರೆಯುತ್ತದೆ. ಇಲ್ಲಿ ಬಾಗೂರು ಮತ್ತು ಹಿರೇಬಾಗೂರು ಎಂಬ ಎರಡೂ ಉಲ್ಲೇಖ ದೊರೆಯುತ್ತವೆ. ಆದರೆ ಈಗ ಈ ಎರಡೂ ಊರುಗಳೂ ಅಸ್ತಿತ್ವದಲ್ಲಿ ಉಳಿದಿಲ್ಲ. ಎಡೆಯೂರು ಮತ್ತು ಕಗ್ಗೆರೆಗೆ ಹತ್ತಿರವಿರುವ ಈ ಹಿರೇಬಾಗೂರೇ ನವವೀರನ ಸ್ಥಳವಾಗಿರಬಹುದೆ? ಆದರೆ ನಂಜನಗೂಡಿನ ಶಾಸನವೊಂದು” ನಂಜುಂಡದೇವರ ಶಿಷ್ಯ ಸಿದ್ಧರಾಮದೇವನನ್ನು ಉಲ್ಲೇಖಿಸುತ್ತದೆ. ನವವೀರ ಹೇಳುವ ನಂಜುಂಡ ಈತ ಆಗಿರಬಹುದೆ ಎಂಬ ಅನುಮಾನ ಹುಟ್ಟುತ್ತದೆ. ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಒಂದು ಕಾಲಕ್ಕೆ ಪ್ರಸಿದ್ಧವಾಗಿದ್ದು ಅಲ್ಲಿ ಶೈವ ಮಠವೊಂದಿತ್ತೆಂದು ತಿಳಿದುಬರುತ್ತದೆ. ಇಲ್ಲಿಗೆ ಹತ್ತಿರದ ಕುಂದೂರಿನಲ್ಲಿ ವೈಷ್ಣವ ಮಠವೂ, ಬಾಗೂರಿನಲ್ಲಿ ಶೈವ ಮಠವೂ ಇದ್ದವೆಂದು ಹೇಳುತ್ತಾರೆ. ಕುಂದೂರು ಮಠ ಈಗಲೂ ಇದೆ. ಈ ಮಠದ ಅಯ್ಯಗಳ ಬಗ್ಗೆ “ಕುಂದೂರಯ್ಯ ಕುದ್ರೆಕೊಡುಕುಂತು ನೋಡಾನ” “ಬಾಗೂರಯ್ಯ ಬಾಗಲು ತಗಿ ಬಗ್ಗಿ ನೋಡಾನ” ಎಂಬ ಹೇಳಿಕೆಗಳು ಜನಸಾಮಾನ್ಯರಲ್ಲಿ ಇಂದಿಗೂ ಬಳಕೆಯಲ್ಲಿವೆ. ಈ ಎಲ್ಲ ಕಾರಣಗಳಿಂದ ನವವೀರನ ಸ್ಥಳ ಯಾವುದೆಂದು ಹೇಳುವುದು ಕಷ್ಟವಾದರೂ ನಂಜನಗೂಡಿನ ಸುತ್ತಲಿನ ಯಾವುದೋ ಹಿರಿಯ ಬಾಗೂರಿನ ಮಠದವರು ಎಂದು ಊಹಿಸಲವಕಾಶವಿದೆ.

ಕವಿ ಮಳೆಯಾರ್ಯನನ್ನು ಅತ್ಯಂತ ಭಕ್ತಿಯಿಂದ ಸ್ಮರಿಸುತ್ತಾನೆ. ಅಷ್ಟೇ ಅಲ್ಲ “ಇಂತಪ್ಪಾ ಗುರುವಿನ ಪಂಥದ ಶಿಷ್ಯ” ತಾನೆಂದು ಹೇಳಿದ್ದಾನೆ. ಈ ಮಳೆಯಾರ್ಯ ಅಥವಾ ಮಳೆಯ ರಾಜನ ಕಥೆ ಹೀಗಿದೆ. “ಮಲೆಯಾಳ ದೇಶದ ಮಲಯವತಿಯಲ್ಲಿದ್ದ ದೇವರಾಜ ಶಚಿಯರಿಗೆ ಶಿವನ ಪ್ರಸಾದದಿಂದ ಜನಿಸಿದವನು ಈತ. ಹನ್ನೆರಡನೆಯ ವರ್ಷದಲ್ಲಿ ರಾಜ ಅವನಿಗೆ ಪಟ್ಟವನ್ನು ಕಟ್ಟಿದನು. ಪರಶಿವನ ಪ್ರಸಾದದಿಂದ ಹುಟ್ಟಿದ ಈತನು ಅಲ್ಪಾಯುಷಿಯಾಗಲು ತನ್ನ ಉದ್ಯಾನದಲ್ಲಿದ್ದ ಲಿಂಗವನ್ನು ಅಷ್ಟ ವಿದಾರ್ಚನೆಯಿಂದ ಪೂಜಿಸಿ ಪೂರ್ಣಾವಯುಷ್ಯವನ್ನು ಪಡೆದ. ಈತನು ತನ್ನ ಸ್ತೋತ್ರದಿಂದ ಶಿವನನ್ನು ಮೆಚ್ಚಿಸಿ ತನ್ನ ನವಲಕ್ಷ ದೇಶವನ್ನು ಕೈಲಾಸಕ್ಕೆ ಒಯ್ದನು[1]” ಈತನ ಬಗ್ಗೆ ಮತ್ತೊಂದು ಕಥೆಯೂ ಪ್ರಚಲಿತವಾಗಿದೆ. ಒಮ್ಮೆ ದೇಶದಲ್ಲೆಲ್ಲಾ ಮಳೆಯಿಲ್ಲದೆ ಕ್ಷಾಮ ಬಂದಿರಲು ಈಶ ತನ್ನ ಶಕ್ತಿಯಿಂದ ಮಳೆ ಬರಿಸಿದನೆಂದೂ, ಚಿನ್ನದ ಮಳೆ ಬರಿಸಿದನೆಂದೂ ಹೇಳುತ್ತಾರೆ. ಈ ಕಾರಣದಿಂದಾಗಿಯೇ ಈತನಿಗೆ ಮಳೆಯ ರಾಜನೆಂದು ಹೆಸರು ಬಂದಿತಂತೆ. ಅನೇಕ ವೀರಶೈವ ಧಾರ್ಮಿಕ ಕಾವ್ಯಗಳು ಈತನನ್ನು ಅತ್ಯಂತ ಭಕ್ತಿ ಗೌರವಗಳಿಂದ ಉಲ್ಲೇಖಿಸುತ್ತವೆ. ಈ ಎಲ್ಲಾ ಕಾವ್ಯಗಳೂ ಮಳೆಯಾರ್ಯ ಕೇರಳದವನು, ಸಿದ್ಧಲಿಂಗಯತಿಯ ಸಮಕಾಲೀನ ಶಿಷ್ಯನೂ ಹೌದು ಎಂದು ಒಪ್ಪುವುದರಿಂದ, ಹರದನಹಳ್ಳಿ ಕೇರಳದ ಗಡಿಗೆ ಹತ್ತಿರದ ಊರಾದುದರಿಂದ ಈತ ಸಿದ್ಧಲಿಂಗಯತಿಯ ಅಥವಾ ಗೋಸಲ ಚನ್ನಬಸವನ ಅಥವಾ ಆ ಮಠದ ಪ್ರಭಾವದಿಂದಾಗಿ ಶಿವಶರಣನಾಗಿರಬೇಕು. ಇದರೊಂದಿಗೆ ನಂಜನಗೂಡು ಸಹ ಸುಪ್ರಸಿದ್ಧ ಶೈವಕ್ಷೇತ್ರವಾಗಿದ್ದು ನಂಜುಂಡ ಈ ಅಂಕಿತದವನಾಗಿರಬೇಕೆಂದು ಊಹಿಸಬಹುದಾಗಿದೆ. ತೋಂಟದ ಸಿದ್ಧಲಿಂಗಯತಿ ಹರದನಹಳ್ಳಿಯಿಂದ ಕಗ್ಗರೆಗೆ ಅಲ್ಲಿಂದ ಎಡೆಯೂರಿಗೆ ಹೋದಂತೆ ಇದೇ ಪರಂಪರೆಯ ನಂಜುಂಡ ತಿಪಟೂರು ತಾಲೂಕಿನ ಹಿರೇಬಾಗೂರು ಮಠದ ಅಧಿಪತಿಯಾಗಿ ಹೋಗಿದ್ದರೂ ಆಶ್ಚರ್ಯವಿಲ್ಲ.

ವೀರಶೈವ ಕಾವ್ಯದಲ್ಲಿ ನನಗೆ ದೊರೆತ ಆಧಾರಗಳಮತೆ ಹದಿನೇಳು ಮಂದಿ ಮಾರಯ್ಯರು ಬರುತ್ತಾರೆ. ಶಿವಶರಣರ ಚರಿತ್ರೆಯಲ್ಲಿ ಇವರೆಲ್ಲರೂ ಬಸವಣ್ಣನ ಸಮಕಾಲೀನರು. ಹನ್ನೆರಡನೆಯ ಶತಮಾನದ ಧಾರ್ಮಿಕ ಕ್ರಾಂತಿಯಲ್ಲಿ ವೀರಶೈವ ಧರ್ಮವನ್ನು ಸ್ವೀಕರಿಸಿ ಅದರ ಉನ್ನತಿಗಾಗಿ ಶ್ರಮಿಸಿದವರು. ಈ ಎಲ್ಲ ಮಾರಯ್ಯರ ಸಂಕ್ಷಿಪ್ತ ವಿವರವನ್ನು ಇಲ್ಲಿ ಕೊಡಲಾಗಿದೆ.

ಅರಿವಾಳಮಾರಯ್ಯ:

ಈತನೂ ಒಬ್ಬಯೋಧ. ಒಮ್ಮೆ ಯುದ್ದವೊಂದರಲ್ಲಿ ಅರಿಯದೆ ಶಿವಶರಣನೊಬ್ಬನನ್ನು ಕೊಂದು ಹಾಕಿದ. ಇದರಿಂದ ಅವನಿಗೆ ಬಹಳ ದಃಖವುಂಟಾಯಿತು. ತಾನು ಮಾಡಿದ ತಪ್ಪಿಗೆ ಪ್ರಾಯಸ್ಚಿತ್ತವಾಗಿ ಆತ ತನ್ನ ಕತ್ತರಿಸಿಕೊಂಡ. ಅವನ ಭಕ್ತಿಗೆ ಮೆಚ್ಚಿದ ಶಿವ ಅವನಿಗೆ ಕೈಲಾಸ ಪದವಿಯನ್ನಿತ್ತ.

ಅರಿವಿನಮಾರಯ್ಯ:

ಈತ ಬಸವಣ್ಣನ ಅರಿವಿಗೆ ಮನೆಯಲ್ಲಿದ್ದುದರಿಂದ ಈ ಹೆಸರು ಬಂದಿತೆಂದು ತಿಳಿದುಬರುತ್ತದೆ.

ಆಯ್ದಕ್ಕಿಮಾರಯ್ಯ:

ಈತನು ರಾಯಚೂರು ಜಿಲ್ಲೆಯ ಅಮರೇಶ್ವರದವನು. ತನ್ನ ಹೆಂಡತಿ ಲಕ್ಕಮ್ಮನೊಂದಿಗೆ ಕಲ್ಯಾಣಕ್ಕೆ ಬಂದನು. ಶಿವ ಭಕ್ತನಾದ ಈತನಿಗೆ ಬೇರೇನೂ ಕಾಯಕ ದೊರೆಯದಿರಲು ಭತ್ತದ ಒರಳುಗಳ ಸುತ್ತಮುತ್ತ ಸಿಡಿದು ಬಿದ್ದ ಅಕ್ಲಿಯನ್ನು ಆಯ್ದು ತಂದು ಜಂಗಮರಿಗೆ ನೀಡಿತಾನೂ ತಿನ್ನುತ್ತದ್ದನು. ಈತನಕಷ್ಟವನ್ನು ಕಂಡ ಬಸವಣ್ಣ ಮಾರಯ್ಯ ಅಕ್ಕಿ ಆಯಲು ಹೋಗುವ ಕಡೆಗಳಲ್ಲಿ ಹೇರಳವಾಗಿ ಅಕ್ಕಿಯನ್ನು ಚೆಲ್ಲಿಸಿದನು. ಇದರಿಂದಾಗಿ ಮಾರಯ್ಯ ಮೂರುದಿನಗಳಿಗೆ ಆಗುವಷ್ಟು ಅಕ್ಕಿಯನ್ನು ಆರಿಸಿ ತಂದನು. ಇದನ್ನು ಕಂಡ ಅವನ ಹೆಂಡತಿ ತಮ್ಮನ್ನು ನಿರ್ಗತಿಕರೆಂದು ಭಾವಿಸಿ ಬಸವಣ್ಣನೀವು ಅಕ್ಕಿ ಆಯಲು ಹೋಗುವ ಕಡೆ ಹೆಚ್ಚು ಅಕ್ಕಿಯನ್ನು ಚೆಲ್ಲಿಸಿದ್ದಾನೆ. ಇದು ಶಿವನಿಗೆ, ನಮ್ಮ ಕಾಯಕಕ್ಕೆ ಅವಮಾನ. ಆದುದರಿಂದ ಈ ಅಕ್ಕಿಯನ್ನೆಲ್ಲಾ ಬಸವಣ್ಣನ ಅಣಗಳದಲ್ಲಿ ಚೆಲ್ಲಿ ಲಕ್ಷ ತೊಂಭತ್ತಾರು ಸಾವಿರ ಜಂಗಮರನ್ನು ದಾಸೋಹಕ್ಕೆ ಕರೆದು ಬನ್ನಿ ಎಂದಳು. ದಿನದಂತೆ ದೊರೆತ ಅಕ್ಕಿಯಲ್ಲಿಯೇ ಲಕ್ಕಮ್ಮ ಅವರೆಲ್ಲರಿಗೂ ಬಗೆಬಗೆಯ ಅಡುಗೆ ಮಾಡಿ ತೃಪ್ತಿ ಪಡಿಸಿದಳು. ಈ ದಂಪತಿಗಳ ಭಕ್ತಿಗೆ ಶಿವ ಪ್ರತ್ಯಕ್ಷನಾಗಲೂ ಅವರು ಅವನಲ್ಲಿ ಐಕ್ಯವಾದರು. ಆಯ್ದಕ್ಕೆ ಮಾರಯ್ಯನ ಪ್ರಸಂಗ ಕಥಾಸಾಗರ, ಭೈರವೇಶ್ವರ ಕಥಾಸೂತ್ರ ರತ್ನಾಕರ, ಶಿವ ತತ್ವ ಚಿಂತಾಮಣಿ, ಚನ್ನಬಸವ ಪುರಾಣ, ಸಿಂಗಿರಾಜ ಪುರಾಣ, ಶರಣಲೀಲಾ ಮೃತ, ಬಸವೇಶ್ವರ ಷಟ್‌ಸ್ಥಲವಚನ ಕಥಾ ಸಾಗರ, ಅಮರಗಣಾಧೀಶ್ವರರ ಚರಿತ್ರೆಗಳು. ಶಿವ ಶರಣರ ಚರಿತ್ರೆಗಳು, ಗುರುರಾಜ ಚಾರಿತ್ರ, ಪ್ರಭುದೇವ ಪುರಾಣ, ಶರಣ ಚರಿತಾಮೃತ ಗ್ರಂಥಗಳಲ್ಲಿ ದೊರೆಯುತ್ತದೆ.

ಇಕ್ಕದ ಮಾರಯ್ಯ:

ಇವನು ಒಬ್ಬ ಶಿವಶರಣ. ಇವನ ಹೆಂಡತಿ ಕೊಡದಮಾರಿ. ಈತನು ದಾನ ಮಾಡುವುದಿಲ್ಲವೆಂದು ವ್ರತ ತೊಟ್ಟನು. ಶಿವ ಮಾರುವೇಷದಿಂದ ಬಂದು ಈತನನ್ನು ಪರೀಕ್ಷಿಸಿದನು. ಈ ಪರೀಕ್ಷೆಯಲ್ಲಿ ಮಾರಯ್ಯನೆ ಗೆದ್ದನು. ಶಿವ ಅವನಿಗೆ ಮೆಚ್ಚಿ ಅವನಿಗೆ ಕೈಲಾಸ ಪದವಿಯನ್ನಿತ್ತನು.

ಇಲೆಯಾಂಡಗಡಿ ಮಾರಯ್ಯ:

ಈತ ಜೋಳ ದೇಶದ ಇಳೆಂಡ ಗುಡಿ ಎಂಬ ಊರಿನವನು. ತನ್ನ ದಾನ ದರ್ಮಗಳಿಂದ ಬಡತನ ಉಂಟಾಗಿದ್ದರೂ ಜಂಗಮ ಭಕ್ತಿಯನ್ನು ಬಿಡದೆ ನಡೆಸುತ್ತಿದ್ದನು. ಇವನ ಭಕ್ತಿಯನ್ನು ಪರೀಕ್ಷಿಸಲು ಶಿವನು ಮುದುಕನ ವೇಷದಲ್ಲಿ ಬಂದು ಆಹಾರವನ್ನು ಬೇಡಿದನು. ಆಗ ಮಳೆ ಸುರಿಯುತ್ತಿದ್ದುದರಿಂದ ಮುದುಕ ನೆನೆದು ಒದ್ದೆ ಮುದ್ದೆಯಾಗಿದ್ದನು. ಅವನಿಗೆ ಮೈ ಕಾಯಿಸಿಕೊಳ್ಳಲು ಬೆಂಕಿ ಹಾಕಿ ಕೊಡಲು ಸಹ ಮಾರಯ್ಯನಲ್ಲಿ ಸೌದೆ ಇರಲಿಲ್ಲ. ಅಡೆಗೆ ಮನೆಯ ಸೂರಿನ ಜಂತೆಯನ್ನೇ ಹಿರಿದು ಆ ಮುದುಕನಿಗೆ ಬೆಂಕಿ ಮಾಡಿಕೊಟ್ಟನು. ಆ ಮುದುಕ ಮೂರು ದಿನದಿಂದ ಉಪವಾಸವಿರುವುದಾಗಿ ಹೇಳಿದ. ಮನೆಯಲ್ಲಿ ಏನೂ ಇಲ್ಲದಿದ್ದುದರಿಂದ ಮಾರಯ್ಯ ಗದ್ದಗೆ ಹೋಗಿ ಬಿತ್ತಿದ್ದ ಭತ್ತವನ್ನೇ ಆಯ್ದು ತಂದು ಅಡುಗೆ ಮಾಡಿ ಬಡಿಸಿದನು. ಇತ್ತ ಸೊಪ್ಪು ತರಲು ಹೋದ ಮಗ ಹಾವುಕಚ್ಚಿ ಸತ್ತನು. ಇದರಿಂದ ದಾಸೋಹನಿಲ್ಲಬಾರದೆಂದು ಮಾರಯ್ಯ ತಾನೇ ಹೋಗಿ ಸೊಪ್ಪು ತಂದನು. ಊಟಕ್ಕೆ ಖುಳಿತಾಗ ಮುದುಕ ನಿನ್ನ ಮಗನನ್ನು ಕರೆ ಎಂದನು. ಬೇರೆ ದಾರಿ ಕಾಣದೆ ಮಾರಯ್ಯ ತನ್ನ ಮಗನ ಹೆಸರು ಹಿಡಿದು ಕರೆದನು. ಅವನು ಎಂದು ಬಂದನು. ಇದರಿಂದ ಸಂತುಷ್ಟನಾದ ಶಿವನು ಮಾರಯ್ಯನನ್ನು ಕೈಲಾಸಕ್ಕೆ ಕರೆದೊಯ್ದು ಗಣಪದವಿಯನ್ನಿತ್ತನು. ಈತನ ಕಥೆ ಕಥಾಸಾಗರ, ಸೋಮನಾಥ ಪುರಾಣ ಭೆರವೇಶ್ವರ ಕತಾಸೂತ್ರ ರತ್ನಾಕರ, ಶಿವ ತತ್ವ ಚಿಂತಾಮಣಿ, ಚನ್ನ ಬಸವ ಪುರಾಣ, ಬಸವೇಶ್ವರ ಷಟ್‌ಸ್ಥಲ ವಚನ ಕಥಾಸಾರ, ಸಾಸಲ ಪುರಾಣ, ವೀರಮಹೇಶ್ವರ ಪುರಾಣ ಮುಂತಾದ ವೀರಶೈವಧರ್ಮ ಗ್ರಂಥಗಳಲ್ಲಿ ಕಂಡುಬರುತ್ತದೆ.

ಕೂಗಿನ ಮಾರಯ್ಯ :

ಈತನು ಬಿಜ್ಜಳನ ಅವಸರದವನಾಗಿದ್ದನು. ದೊರೆ ಹೇಳಿದವರನ್ನು ಕೂಗಿ ಕರೆಯುವುದು ಇವನ ಕೆಲಸ. ಬಸವಣ್ಣನ ಪ್ರಭಾವದಿಂದ ಇವನು ವೀರಶೈವ ಧರ್ಮವನ್ನು ಸ್ವೀಕರಿಸಿದನು. ಆಮೇಲೆ ಬಿಜ್ಜಳನ ಸೇನೆ ಶರಣ ಸೇನೆಯ ಮೇಲೆ ದಂಡೆತ್ತಿ ಬರುವಾಗ ಇವನು ದೂರದಿಂದಲೇ ಕಂಡು ಕೂಗು ಹಾಕಿ ತಿಳಿಸುತ್ತಿದ್ದನು. ಆಗ ಶರಣ ಸೇನೆ ಯುದ್ಧಕ್ಕೆ ಸಿದ್ಧವಾಗುತ್ತಿತ್ತು. ಈತನ ಕಥೆ ಚನ್ನಬಸವ ಪುರಾಣ ಮುಂತಾದ ಗ್ರಂಥಗಳಲ್ಲಿ ಬರುತ್ತದೆ.

ತಂಗಟೂರ ಮಾರಯ್ಯ :

ಈತನು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ತಂಗಟೂರಿನವನು. ಬಸವಣ್ಣನ ಕೀರ್ತಿಯನ್ನು ಕೇಳಿ ಕಲ್ಯಾಣಕ್ಕೆ ಬಂದನು. ಬಸವಣ್ಣನ ಅರಿವಿನ ಮನೆಯಲ್ಲಿ ಸೇರಿದ ಶಿವ ಶರಣರನ್ನು ಕಂಡು ಆನಂದಿತನಾದ ಈತನ ಮನೆಗೇ ಹೋಗದೆ ಶರಣರ ಸೇವೆಯಲ್ಲಿ ತೊಡಗಿದನು. ಒಮ್ಮೆ ಈತ ಮನೆಗೆ ಹೋದಾಗ ಈತನ ಮತ್ತು ಹೆಂಡತಿಯ ಲಿಂಗಗಳು ಅದಲು ಬದಲಾದವು. ಇದರಿಂದ ಅವರ ಆತ್ಮಗಳು ಇಹವನ್ನು ತ್ಯಜಿಸಿದವು. ಆಗ ಭಕ್ತನೊಬ್ಬ ಅವರವರ ಲಿಂಗವನ್ನು ಅವರವರಿಗೆ ಧರಿಸಲು ಅವರು ಮತ್ತೆ ಪ್ರಾಣ ಪಡೆದರು. ಈತನ ಪ್ರಸಂಗ, ಕಥಾಸಾಗರ, ಸೋಮನಾಥಪುರಾಣ, ಬಸವೇಶ್ವರ ಷಟ್‌ಸ್ಥಳ ವಚನ ಕಥಾಸಾರ ಆಗಚ ಶಿವ ಶರಣರ ಚರಿತ್ರೆಗಳ ಮತ್ತು ವೀರ ಮಹೇಶ್ವರ ಪುರಾಣಗಳಲ್ಲಿ ಬರುತ್ತದೆ.

ತಂಡೇಶ ಮಾರಯ್ಯ :

ಈತನು ಕಲ್ಯಾಣವನು. ತಳವಾರ ಕಾಯಕ ಮಾಡುತ್ತಿದ್ದನು. ಕಾಮ ಹರಪ್ರಿಯ ಕಾಮನಾಥ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ಈತನ ವಿಚಾರ ಅಗಚ ಗ್ರಂಥದಲ್ಲಿ ಬರುತ್ತದೆ.

ತುರುಗಾಹಿ ಮಾರಯ್ಯ :

ಇವನು ಕಲ್ಯಾಣದವನು. ದನಗಳನ್ನು ಕಾಯುವ ಕಾಯಕ ಮಾಡುತ್ತಿದ್ದನು. ಇದರಿಂದ ಬರುತ್ತಿದ್ದ ಆದಾಯದಲ್ಲಿ ಗುರುಲಿಂಗ ಜಂಗಮರ ದಾಸೋಹ ಮಾಡುತ್ತಿದ್ದನು. ಈತನ ಭಕ್ತಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ಅವನಿಗೆ ಮುಕ್ತಿ ನೀಡಿದನು. ಈತನ ವಿಚಾರ ಚನ್ನಬಸವ ಪುರಾಣ ಮತ್ತು ಅಮರ ಗಣಾಧೀಶ್ವರರ ಚರಿತೆಗಳಲ್ಲಿ ಬರುತ್ತದೆ.

ತೊಳಲಿ ಮಾರಯ್ಯ:

ಈತನು ತೊಳಲಿ ಎಂಬ ಊರಿನವನು. ಇದು ನಾಗಮಂಗಲ ತಾಲೂಕಿನಲ್ಲಿದೆ. ಬಸವಣ್ಣನವರ ಕೀರ್ತಿಯನ್ನು ಕೇಳಿ ಕಲ್ಯಾಣಕ್ಕೆ ಹೋಗಿ ಶಿವಶರಣನಾದನು. ಈತನ ವಿಚಾರ ಕೆಳದಿ ವೆಂಕಣ್ಣ ಕವಿಯ ಗಣ ಸಹಸ್ರನಾಮದಲ್ಲಿ ಬರುತ್ತದೆ.

ನಗೆಯ ಮಾರಯ್ಯ :

ಇವನು ಕಲ್ಯಾಣದಲ್ಲಿದ್ದ ಶಿವ ಶರಣ ನಗಿಸುವ ಕಾಯಕ ಮಾಡಿ ಸಂಪಾದಿಸಿ ಜಂಗಮ ಸೇವೆ ಮಾಡುತ್ತಿದ್ದನು. ಈತ ಮೊದಲು ಬಿಜ್ಜಳನಲ್ಲಿ ವಿದೂಷಕನಾಗಿದ್ದಂತೆ ಕಂಡುಬರುತ್ತದೆ. ಒಮ್ಮೆ ನಗಿಸಲು ಯಾರೂ ಸಿಗದೆ ಜಂಗಮ ದಾಸೋಹಕ್ಕೆ ಏನು ಮಾಡುವುದೆಂದು ಪೇಚಾಡಹತ್ತಿದನು. ಶಿವನೇ ಜಂಗಮ ವೇಷದಿಂದ ಅವನಲ್ಲಿಗೆ ಬಂದನು. ಮಾರಯ್ಯ, ಅವನನ್ನೇ ನಗಿಸಿ ತನ್ನ ಕಾಯಕಕ್ಕೆ ಸಂಪಾದಿಸಿದನು. ಆತುರವೈರಿ ಮಾರೇಶ್ವರ ಎಂಬ ಅಂಕಿತದಿಂದ ಈತ ವಚನಗಳನ್ನು ರಚಿಸಿದ್ದಾನೆ. ಈತನ ವಿಚಾರ ಕಥಾಸಾಗರ, ಕಥಾಸೂತ್ರ ರತ್ನಾಕರ, ಚನ್ನಬಸವ ಪುರಾಣ, ಅಮರಗಣಾಧೀಶ್ವರರ ಚರಿತ್ರೆ ಮತ್ತು ಶಿವಶರಣರ ಚರಿತ್ರೆಗಳು ಗ್ರಂಥಗಳಲ್ಲಿ ಬರುತ್ತದೆ.

ನಿಡುಗುಡಿಯ ಮಾರಯ್ಯ :

ಈತ ಒಬ್ಬ ಶಿವಶರಣ. ಶಿವನಿಗೆ ಒಮ್ಮೆ ಈತನ ಭಕ್ತಿಯನ್ನು ಪರೀಕ್ಷಿಸುವ ಮನಸಾಯಿತು. ಅವನು ಜಂಗಮ ರೂಪಿನಿಂದ ಬಂದು ಮಾರಯ್ಯನ ಹೆಂಡತಿಯ ಸೀರೆಯನ್ನು ಬೇಡಿದನು. ಅವನು ಕೂಡಲೇ ಅದನ್ನು ಹೆಂಡತಿಯಿಂದ ಕಿತ್ತು ಅವನಿಗೆ ಕೊಟ್ಟನು. ಮಾರಯ್ಯನ ಭಕ್ತಿಗೆ ಮೆಚ್ಚಿದ ಶಿವನು ಅವನನ್ನು ಕೈಲಾಸಕ್ಕೆ ಕರೆದೊಯ್ದನು. ಚನ್ನಬಸವ ಪುರಾಣ, ವೀರ ಮಹೇಶ್ವರ ಪುರಾಣ ಮತ್ತು ಗುರುರಾಜ ಚಾರಿತ್ರ ಗ್ರಂಥಗಳಲ್ಲಿ ಇವನ ವಿಚಾರ ಬರುತ್ತದೆ.

ನಿಡು ಮಾರಯ್ಯ :

ಮೊದಲಿಗೆ ಈತ ಒಬ್ಬ ರಾಜ. ತಿರುಜ್ಞಾನ ಸಂಬಂಧಿಗಳ ಕಥೆಯನ್ನು ಕೇಳಿ, ಭಕ್ತರಿಗೆ ತೊಂದರೆ ಕೊಟ್ಟು ಜೈನರನ್ನು ಶೂಲಕ್ಕಿತ್ತಿಸಿ ವೀರಶೈವ ಧರ್ಮವನ್ನು ಪುರಸ್ಕರಿಸಿದನು. ಈತನ ರಾಜಧಾನಿ ರುದ್ರಾಪುರಿ. ತನ್ನ ಮಂತ್ರಿ ಚೊಕ್ಕರಾಜನ ಅಪೇಕ್ಷೆಯಂತೆ ಜೈನರೊಂದಿಗೆ ವಾದಿಸಿ ಅವರನ್ನು ಸೋಲಿಸಿದನು. ಇವನು ಸ್ವರ್ಗಕ್ಕೆ ಹೋದಾಗ ದೇವೇಂದ್ರನು ತನ್ನ ಆಸನದಲ್ಲಿ ಅರ್ಧ ಕೊಟ್ಟು ಸತ್ಕರಿಸಿದನು. ಆ ಮೇಲೆ ಶಿವನ ನಿರೂಪದಂತೆ ಕೈಲಾಸಕ್ಕೆ ಹೋದನು. ಸೋಮನಾಥಪುರಾಣ, ಬಸವಪುರಾಣ, ಭುವನಕೋಶ ಮುಂತಾದ ಗ್ರಂಥಗಳಲ್ಲಿ ಈತನ ಕಥೆ ಬರುತ್ತದೆ.

ಮೋಳಿಗೆಯ ಮಾರಯ್ಯ :

ಈತನು ಮೊದಲಿಗೆ ಕಾಶ್ಮೀರ ದೇಶದ ಮಾಂಡವ್ಯಪುರದ ರಾಜ. ಈತನ ಪತ್ನಿ ಗಂಗಾದೇವಿ. ಸಹೋದರಿ ನಿಜದೇವಿ. ಈಕೆ ಬಸವಣ್ಣನ ಕೀರ್ತಿಯನ್ನು ಕೇಳಿ ಕಲ್ಯಾಣಕ್ಕೆ ಹೋದಳು. ಮುಂದೆ ವಿರಾಗಿಣಿಯಾಗಿ ಬೊಂತಾದೇವಿಯದಳು. ಒಂದು ದಿನ ರಾಜ ಕಲ್ಯಾಣದಿಂದ ಬಂದ ಜಂಗಮರಿಗೆ ಕಾಣಿಕೆಕೊಡಲು ಹೋದನು. ಅವರು ಸ್ವತಃ ಅರ್ಜಿಸದ ಕಾಣಿಕೆಯನ್ನು ನಾವು ತೆಗೆದುಕೊಳ್ಳುವೆಂದು ನಿರಾಕರಿಸಿದರು. ರಾಜ ಮಾರು ವೇಷದಿಂದ ಕಮ್ಮಾರ ಶಾಲೆಯಲ್ಲಿ ಕೂಲಿ ಕೆಲಸ ಮಾಡಿ ಕಬ್ಬಿಣದ ತುಂಡೊಂದನ್ನು ಸಂಪಾದಿಸಿದ. ಅದನ್ನು ಜಂಗಮರಿಗೆ ಕಾಣಿಕೆಕೊಟ್ಟ. ಜಂಗಮರ ಕೈಸೊಂಕಿದೊಡನೆಯೆ ಅದು ಚಿನ್ನವಾಯಿತು. ಇದರಿಂದ ರಾಜನಿಗೆ ವೈರಾಗ್ಯ ಉಂಟಾಯಿತು. ಅವನು ತನ್ನ ಹೆಂಡತಿಯೊಡನೆ ಕಲ್ಯಾಣಕ್ಕೆ ಬಂದು ಕಟ್ಟಿಗೆಯ ಕಾಯಕ ಹಿಡಿದನು. ಈ ದಂಪತಿಗಳಿಗೆ ಮುಂದೆ ಮೋಳಿಗೆಯ ಮಾರಯ್ಯ, ಮಹಾದೇವಿಯರೆಂದು ಹೆಸರಿಸಲಾಯಿತು. ಒಂದು ದಿನ ಮಾರಯ್ಯ ಮನೆಯಲ್ಲಿಲ್ಲದಾಗ ಬಸವಣ್ಣ ಅವರ ಮನೆಗೆ ಹೋಗಿ ಅವನ ಹೆಂಡತಿಯಿಂದ ಆತಿಥ್ಯ ಸ್ವೀಕರಿಸಿ ಎರಡು ಜೋಳಿಗೆ ಹೊನ್ನನ್ನು ಇಟ್ಟು ಬಂದನು. ಆ ಹೊನ್ನನ್ನು ಕಂಡ ಮಾರಯ್ಯ ಇದು ಬಸವಣ್ಣನ ಕೆಲಸವೆಂದರಿತು ಬಂದ ಜಂಗಮರಿಗೆ ಅದನ್ನೆಲ್ಲಾ ದಾನ ಮಾಡಿ ಅವರ ಪಾದೋಪಕವನ್ನು ತಾನು ತಂದ ಸೌದೆಯ ಮೇಲೆ ಚಲ್ಲಿದನು. ಆಗ ಅದೆಲ್ಲಾ ಹೊನ್ನಾಯಿತು. ಅದನ್ನು ಕಡಿದು ಮಾರಯ್ಯ ಭಕ್ತರಿಗೆ ಹಂಚಲಾರಂಭಿಸಿದನು. ಈ ವಿಚಾರ ಕೇಳಿ ಬಸವಣ್ಣ ನಾಚಿದನು. ಮಾರಯ್ಯನ ಮನೆಗೆ ಬಂದು ಕ್ಷಮೆ ಕೇಳಿದನು. ಮುಂದೆ ಈತ ಕೈಲಾಸದಲ್ಲಿ ಗಣ ಪದವಿ ಪಡೆದನು. ನಿಃಕಳಂಕ ಮಲ್ಲಿಕಾರ್ಜುನ ಎಂಬ ಅಂಕಿತದಲ್ಲಿ ಇತವಚನಗಳನ್ನು ರಚಿಸಿದ್ದಾನೆ. ಬಸವಪುರಾಣ, ಭುವನಕೋಶ, ಶಿವತತ್ವ ಚಿಂತಾಮಣಿ, ಶಿವ ಲೀಲಾಮೃತ, ಬಸವೇಶ್ವರ ಷಟ್‌ಸ್ಥಲ ವಚನ ಕಥಾಸಾರ, ಅಮರ ಗಣಾಧೀಶ್ವರ ಚರಿತ್ರೆ. ಶಿವ ಶರಣರ ಚರಿತ್ರೆಗಳು ಪ್ರಭುದೇವ ಪುರಾಣ, ಭಕ್ತಿ ರಸದ ಸೋನೆ, ಕಥಾಸಾಗರ, ಚನ್ನಬಸವ ಪುರಾಣ, ಶರಣ ಚರಿತ ಮನಸ, ಕವಿ ಚರಿತ್ರೆ ಮತ್ತು ಗಣ ಸಹಸ್ರನಾಮ ಗ್ರಂಥಗಳಲ್ಲಿ ಈತನ ಕಥೆ ಬರುತ್ತದೆ.

ಸತ್ತಿಗೆಯ ಮಾರಯ್ಯ :

ಈತ ಬಸವಣ್ಣನ ಸತ್ತಿಗೆಯವನು. ಒಮ್ಮೆ ಬಿಜ್ಜಳ ಮತ್ತು ಬಸವಣ್ಣ ವೈಯ್ಯಾಳಿಗೆ ಹೋಗುತ್ತಿದ್ದರು. ಈತ ಬಸವಣ್ಣನ ಹಿಂದೆ ಸತ್ತಿಗೆ ಹಿಡಿದು ಹೋಗುತ್ತಿದ್ದ. ಆಗ ಅವನ ಕಾಲಿಗೆ ಮುಳ್ಳು ಹೊಕ್ಕಿತು. ಮಾರಯ್ಯ ಸತ್ತಿಗೆಯನ್ನು ಬಸವಣ್ಣನ ಹಿಂದೆ ಹೋಗಲು ಹೇಳಿದ ಮುಳ್ಳು ಕೀಳಲು ಹಿಂದೆ ನಿಂತ. ಘಂಟೇಶ್ವರ ಲಿಂಗ ಎಂಬ ಅಂಕಿತದಿಂದ ಈತವಚನಗಳನ್ನು ರಚಿಸಿದ್ದಾನೆ. ವೀರ ಮಹೇಶ್ವರರ ಪುರಾಣ, ಗುರುರಾಜ ಚಾರಿತ್ರ ಅಮರ ಗಣಾಧೀಶ್ವರ ಚರಿತ್ರೆ ಗ್ರಂಥಗಳಲ್ಲಿ ಇವನ ಪ್ರಸಂಗದ ಉಲ್ಲೇಖವಿದೆ.

ಹೆಂಡದ ಮಾರಯ್ಯ :

ಈತನು ಕಲ್ಯಾಣದಲ್ಲಿದ್ದ ಒಬ್ಬ ಶಿವ ಶರಣ, ಅರವಟ್ಟಿಗೆಯನ್ನಿಟ್ಟು ಶಿವ ಭಕ್ತರ ಸೇವೆ ಮಾಡುತ್ತಿದ್ದ ಕೆಲವು ಜನ ಹೆಂಡವನ್ನಿಟ್ಟರೆ ಕುಡಿದು ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸುವುದಾಗಿ ಹೇಳಿದರು. ಮಾರಯ್ಯ ಒಪ್ಪಿ ಹಾಗೆಯೇ ಮಾಡಿದ. ಕುಡಿಯಲು ಬಂದವರಿಗೆ ವಿವೇಕ ಹೇಳುತ್ತಿದ್ದ. ಇವನ ಕಾಯಕ ಕೇಳಿ ಬಿಜ್ಜಳ ಆಕ್ಷೇಪಿಸಿದ. ಆಗ ಮಾರಯ್ಯ ಬಿಜ್ಜಳನನ್ನು ಮಹತ್ವತೆ ಕೋರುವುದಾಗಿ ಕರೆತಂದನು. ರಾಜನು ಮಾರಯ್ಯನ ಕೈಗಳನ್ನು ಕತ್ತರಿಸಲು ಅವು ಮೊದಲಿನಂತೆ ಮತ್ತೆ ಮೂಡಿದವು. ಬಿಜ್ಜಳನಿಗೆ ಅವನ ಮಹತ್ವ ಅರ್ಥವಾಯಿತು. ಧರ್ಮೇಶ್ವರಲಿಂಗ ಎಂಬ ಅಂಕಿತದಲ್ಲಿ ಈತ ವಚನಗಳನ್ನು ರಚಿಸಿದ್ದಾನೆ. ಕಥಾಸಾಗರ, ಚನ್ನಬಸವ ಪುರಾಣ, ವೀರ ಮಹೇಶ್ವರ ಪುರಾಣ, ಅಮರ ಗಣಾಧೀಶ್ವರ ಚರಿತ್ರೆ ಮತ್ತು ಶಿವಶರಣರ ಚರಿತ್ರೆಗಳು ಗ್ರಂಥಗಳಲ್ಲಿ ಈತನ ವಿಚಾರ ಕಂಡುಬರುತ್ತದೆ.

ಮಾರಗೌಡ:

ಈತ ಒಕ್ಕಲಿಗರವನು. ತನ್ನ ಬೇಸಾಯದಿಂದ ಬಂದ ಆದಾಯದಲ್ಲಿ ದಾಸೋಹ ಮಾಡುತ್ತಿದ್ದನು. ಒಮ್ಮೆ ಮಾರುವೇಷದಲ್ಲಿ ಬಂದ ಶಿವನು ಕಬ್ಬಿಣವನ್ನು ಚಿನ್ನ ಮಾಡುವ ಪುರುಷನನ್ನು ಮಾರಗೌಡನಿಗೆ ಕೊಡಲು ಹೋದನು. ಅವನು ಅದನ್ನು ಪಡೆಯಲೊಪ್ಪಲಿಲ್ಲ. ಬದಲಿಗೆ ತನ್ನ ಮನಃಪುರುಷದಿಂದ ಭತ್ತದ ರಾಶಿಯನ್ನು ಚಿನ್ನ ಮಾಡಿ ಜಂಗಮರಿಗಿತ್ತನು. ಶಿವ ನಾಚಿ ಹಿಂತಿರುಗಿದನು. ಕಥಾಸಾಗರ, ಸೋಮನಾಥ ಪುರಾಣ, ಭೈರವೇಶ್ವರ ಕಥಾಸೂತ್ರ ರತ್ನಾಕರ, ಅಮರ ಗಣಾಧೀಶ್ವರ ಚರಿತೆ, ಶಿವ ಶರಣರ ಚರಿತ್ರೆಗಳು, ಪ್ರಭುದೇವ ಪುರಾಣ ಮುಂತಾದ ಗ್ರಂಥಗಳಲ್ಲಿ ಇವನ ಪ್ರಸಂಗ ಬರುತ್ತದೆ.

ವೀರಶೈವ ಕಾವ್ಯಗಳು ಹೇಳುವ ಮೇಲಿನ ಮಾರಯ್ಯಗಳಲ್ಲದೆ ಕೋಲುಕಾರ ಮಾರಯ್ಯನೆಂದೊಬ್ಬನ ಉಲ್ಲೇಖವು ದೊರೆಯುತ್ತದೆ. ಆದರೆ ಕೋಡಗದ ಮಾರಯ್ಯನೆ ಶಿವಶರಣನಾಗುವುದಕ್ಕಿಂತ ಮೊದಲು ಕೋಲುಕಾರ ಮಾರಯ್ಯನಾಗಿದ್ದ ಬಗ್ಗೆ ಮಾಹಿತಿ ದೊರೆಯುತ್ತದೆ. ಭಕ್ತಿ ರಸದ ಸೋನೆಯು “ಆರು ಸಾವಿರ ಕೋಲು ಕಾರರ್ಗೆ ಪಿರಿಯನೆಂದಾರಾಯ ಪಟ್ಟ ಗಟ್ಟಿದನು” ಎಂದು ಹೇಳುತ್ತದೆ. ಆದುದರಿಂದ ಕೋಲುಕಾರ ಮಾರಯ್ಯ, ದಂಡಕಾರ ಮಾರಯ್ಯ ಇವೆಲ್ಲಾ ಈತನಿಗಿದ್ದ ಮೊದಲಿನ ಹೆಸರುಗಳೆಂದು ಕಾಣುತ್ತದೆ.

ಕೋಡಗದ ಮಾರಯ್ಯನಿಗೆ ಸಂಬಂಧಿಸಿದಂತೆ ಎರಡು ಮೂರು ವೀರಶೈವ ಕೃತಿಗಳು ಮಾತ್ರ ಉಲ್ಲೇಖಿಸುತ್ತವೆ. ಈತನನ್ನು ಕುರಿತು ಬಸವಣ್ಣನ ವಚನವೊಂದು ಸ್ಮರಿಸುತ್ತದೆ ಎಂದು ಬಸವೇಶ್ವರ ಷಟ್‌ಫಲ ವಚನ ಕಥಾಸಾರ ಹೇಳುತ್ತದೆ. ಗುರುರಾಜ ಚಾರಿತ್ರ ಒಂದೂವರೆ ಪದ್ಯದಲ್ಲಿ ಈತನ ಕಥೆಯನ್ನು ಮುಗಿಸುತ್ತದೆ. ಆದರೆ ಭಕ್ತಿ ರಸದ ಸೋನೆ ಎರಡು ಸಂಧಿಗಳಲ್ಲಿ ಈತನ ಕಥೆಯನ್ನು ಹೇಳುತ್ತದೆ. ಆದರೆ ನವವೀರನ ಕೋಡಗದ ಮಾರಯ್ಯನ ಚರಿತ್ರೆಗೂ, ಭಕ್ತಿ ರಸದ ಸೋನೆಯ ಕಥೆಗೂ ಒಂದು ವ್ಯತ್ಯಾಸ ಕಂಡುಬರುತ್ತದೆ. ನವವೀರ ಕಲ್ಯಾಣದ ಕುಡಿಯೊಕ್ಕಾಲಿಗ ಭೈರಗೌಡನ ಮಗ ಮಾರಯ್ಯ ನೇರವಾಗಿ ಶಿವ ಶರಣನಾದ ಎಂದು ಹೇಳಿದರೆ ಪಂಚಯ್ಯ ಈತ ಮೊದಲು ಬಿಜ್ಜಳನಲ್ಲಿ ಕೋಲುಕಾರನಾಗಿದ್ದು ಆನಂತರ ಬಸವಣ್ಣನನ್ನು ಕರೆಯಲು ಬಂದು ಅವನ ಪ್ರಭಾವಕಕೆ ಒಳಗಾಗಿ ಶರಣನಾದ ಎಂದು ಹೇಳುತ್ತದೆ. ಒಟ್ಟಿನಲ್ಲಿ ಈತ ಬಸವಣ್ಣನ ಸಮಕಾಲೀನನಾದ ಶಿವಶರಣನೆಂದು ಈತನ ಕಥೆಯನ್ನು ಉಲ್ಲೇಖಿಸುವ ಎಲ್ಲಾ ವೀರಶೈವ ಕೃತಿಗಳೂ ಒಪ್ಪುತ್ತವೆ. ಮುಂದೆ ಬಂದ ಅನೇಕ ವೀರಶೈವ ಕವಿಗಳು ಶಿವಶರಣರ ಜೀವನವನ್ನು ಕುರಿತು ಸ್ವತಂತ್ರ ಕೃತಿಗಳನ್ನೇ ರಚಿಸಿದ್ದಾರೆ. ಅನೇಕ ಶೈವ ಪುರಾಣಗಳು ಈ ಶರಣರ ಕಥೆಗಳನ್ನು ಸಂದರ್ಭಾನುಸಾರವಾಗಿ ಉಲ್ಲೇಖಿಸುತ್ತವೆ. ಹೀಗೆ ನವವೀರ ಯಾವುದೋ ವೀರಶೈವ ಪುರಾಣದಲ್ಲಿ ಬರುವ ಈ ಶರಣನ ಕಥಾಸೂತ್ರವನ್ನು ಅವಲಂಬಿಸಿ ಈ ಪುಟ್ಟ ಕೃತಿಯನ್ನು ರಚಿಸಿದ್ದಾನೆ.

ಕವಿ ನವವೀರನ ವೈಯಕ್ತಿಕ ವಿಚಾರಗಳಾಗಲಿ, ಅವನ ಕಾಲವಿಚಾರವಾಗಲಿ ಕೋಡಗದ ಮಾರಯ್ಯನ ಚರಿತ್ರೆಯ ಯಾವ ಪದ್ಯದಲ್ಲಿಯೂ ದೊರೆಯುವುದಿಲ್ಲ. ಇದಕ್ಕೆ ಕಾರಣವನ್ನು ಸಹ ಈ ಹಿಂದೆಯೇ ಹೇಳಿದೆ. ಆದುದರಿಂದ ಈತನ ಕಾಲ ಕಂಡು ಹಿಡಿಯುವುದು ತುಂಬಾ ತೊಡಕಿನ ಕೆಲಸವಾಗಿದೆ. ಆದರೆ ಇವನು ತೋಂಟದ ಸಿದ್ಧಲಿಂಗಯತಿಯನ್ನು ತನ್ನ ಗುರು ಪರಂಪರೆಯಲ್ಲಿ ಸ್ಮರಿಸಿದ್ದಾನೆ. ಅದಕ್ಕಿಂತ ಹಿಂದಿನ ಯಾರನ್ನು ಈತ ಸ್ಮರಿಸುವುದಿಲ್ಲ. ಈ ಕಾರಣದಿಂದಾಗಿ ಈತನು ಎಡೆಯೂರು ಸಿದ್ಧಲಿಂಗ ಯತಿಗಿಂತ ಈಚಿನವನೆಂದು ಹೇಳಬಹುದು. ಸಿದ್ಧಲಿಂಗ ಯತಿಯನ್ನು ಕುರಿತು “ಈತನು ಷಟ್‌ಸ್ಥಲ ಜ್ಞಾನ ಸಾರಾಮೃತವನ್ನು ಬರೆದಿದ್ದಾನೆ. ಇವನು ವೀರಶೈವ ಕವಿ. ಇವನಿಗೆ ತೋಂಟದ ಸಿದ್ಧಲಿಂಗ ಯತಿ ಎಂಬ ಹೆಸರೂ ಉಂಟು. ಇವನು ಹರದನಹಳ್ಳಿಯ ಗೋಸಲ ಚನ್ನ ಬಸವೇಶ್ವರನ ಶಿಷ್ಯನು. ಕಗ್ಗೆರೆಯ ಸಮೀಪದಲ್ಲಿರುವ ನಾಗಿಣೀ ನದಿಯ ತೀರದಲ್ಲಿ ತೋಂಟದೊಳಗೆ ಬಹಳ ಕಾಲ ಶಿವಯೋಗದಲ್ಲಿ ಇದ್ದುದರಿಂದ ಈತನಿಗೆ ‘ತೋಂಟದ’ ಎಂಬ ವಿಶೇಷಣವು ರೂಢಿಯಾಗಿ ಬಂದಿದೆ. ಇವನು ಕುಣಿಗಳಿಗೆ ಸಮೀಪದಲ್ಲಿರುವ ಎಡೆಯೂರಲ್ಲಿ ಸಮಾಧಿಯನ್ನು ಹೊಂದಿದ್ದನು. ಈ ಊರಿನಲ್ಲಿ ಈತನ ಜ್ಞಾಪಕಾರ್ಥವಾಗಿ ಕಟ್ಟಿಸಿದ ಸಿದ್ಧಲಿಂಗೇಶ್ವರವೆಂಬ ಒಂದು ದೇವಸ್ಥಾನವು ಈಗಲೂ ಇದೆ. ಈತನು ವೀರಶೈವರಲ್ಲಿ ಪ್ರಸಿದ್ಧವಾದ ಗುರು. ಈತನ ಚರಿತ್ರೆಯನ್ನು ಕುರಿತು ಹಲವು ಗ್ರಂಥಗಳು ಹುಟ್ಟಿವೆ. ಇವುಗಳಲ್ಲಿ ಈತನು ನಿರಂಜನ ಗಣೇಶ್ವರನ ಅಪರಾವತಾರವೆಂದು ಹೇಳಿದೆ. ಮೇಲೆ ಹೇಳಿದ ಸಿದ್ಧಲಿಂಗೇಶ್ವರ ದೇವಸ್ಥಾನದ ಪ್ರಕಾರದಲ್ಲಿ ಸುಮಾರು ೧೫೦೦ರಲ್ಲಿ ಬರೆದ ಒಂದು ಶಿಲಾಶಾಸನವಿದೆ.” ಎಂದು ಕವಿ ಚರಿತೆಕಾರರು ಅಭಿಪ್ರಾಯ ಪಟ್ಟಿದ್ದಾರೆ. ಅಂದರೆ ಸಿದ್ಧಲಿಂಗಯತಿಯು “ವಿಜಯನಗರದ ರಾಜನಾದ ವಿರೂಪಾಕ್ಷನ (೧೪೬೭ – ೧೪೭೮)ಕಾಲದಲ್ಲಿದ್ದಂತೆ ವಿರೂಪಾಕ್ಷ ಪಂಡಿತನ ೧೫೮೪ ಚನ್ನಬಸವ ಪುರಾಣದಿಂದ ಊಹಿಸಬಹುದಾಗಿದೆ. ಈತನ ಕಾಲವು ಸುಮಾರು ೧೪೭೦ ಆಗಬಹುದು”[2] ಆದುದರಿಂದ ನವವೀರನು ೧೪೭೦ ಕ್ಕಿಂತ ಈಚಿನವನೆಂಬುದು ಸ್ಪಷ್ಟವಾಗುತ್ತದೆ.

ಕೋಡಗದ ಮಾರಯ್ಯನ ಚರಿತ್ರೆಯನ್ನು ಎರಡು ಸಂಧಿಗಳಲ್ಲಿ ಸರಿ ಸುಮಾರು ನವವೀರನ ಅರ್ಧದಷ್ಟು ಸಂಗ್ರಹಿಸಿ ಕೊಟ್ಟವನು ಪಂಚಯ್ಯ. ಈತನ ಭಕ್ತಿರಸದ ಸೋನೆ ಶಿವನು ಪಾರ್ವತಿಗೆ ತನ್ನ ಕಥೆಯನ್ನು ತಾನೆ ಹೇಳಿಕೊಂಡಂತೆ ರಚಿತವಾಗಿರುವ ಕಾವ್ಯ. ಇದು ಅನೇಕ ಶಿವ ಶರಣರ ಕಥೆಗಳ ಸಂಗ್ರಹವಾಗಿರುವಂತೆ ಕಾಣುತ್ತದೆ. ಅಲ್ಲದೆ ಭಕ್ತಿ ರಸದ ಸೋನೆಯ ಕೋಡಗದ ಮಾರಯ್ಯನ ಕಥೆ ನವವೀರನ ಕಥೆಯ ಸಂಗ್ರಹರೂಪ ಎನ್ನಿಸುತ್ತದೆ. ಕವಿ ಚರಿತೆಕಾರರು ಈತನನ್ನು ಪಂಚಯ್ಯ ಎಂದು ಕರೆದಿದ್ದಾರೆ. ಆದರೆ ಭಕ್ತಿರಸದ ಸೋನೆಯಲ್ಲಿ ಕವಿ

ಭಕ್ತಿ ರಸದ ಸೋನೆ ಚಿತ್ತಜರಿಪುತನ್ನ
ಸತಿಹೊರೆದುದವನಿಯಲಿ
ಪುತ್ರನನ್ನಯ ಪಂಚ ವಿಸ್ತರಿನೆನಲಾಗ

ಎಂದು ಹೇಳಿಕೊಂಡಿದ್ದಾನಾದುದರಿಂದ ಈತನ ಹೆಸರು ಪಂಚಯ್ಯ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಇವನ ಕಾಲವನ್ನು ಕವಿ ಚರಿತೆಕಾರರು ೧೬೫೦ ಎಂದು ಹೇಳಿದ್ದಾರೆ. ಕೋಡಗದ ಮಾರಯ್ಯನ ಚರಿತ್ರೆಯ ಕಥೆ ಗುರುರಾಜ ಚಾರಿತ್ರ ಮತ್ತು ಪುರಾತನದ ಚಾರಿತ್ರಗಳಲ್ಲಿ ಒಂದು ಒಂದೂವರೆ ಪದ್ಯಗಳಲ್ಲಿ ಬಂದಿದೆ. ಗುರುರಾಜ ಚಾರಿತ್ರವನ್ನು ಬರೆದ ಸಿದ್ಧ ನಂಜೇಶನ ಕಾಲವನ್ನು ೧೬೫೦ ಎಂದು ನಿರ್ದರಿಸಲಾಗಿದೆ. ಕುಮಾರ ಚನ್ನಬಸವನ ಕಾಲ ಕ್ರಿ.ಶ. ೧೫೬೯ರವರೆಗೂ ಬದುಕಿದ್ದನೆಂದು ಖಚಿತವಾಗಿ ಹೇಳಬಹುದು.”[3] ನವವೀರ ಹೇಳುವ ಮಳೆಯಾರ್ಯ ಸಿದ್ಧಲಿಂಗಯತಿಯ ಸಮಕಾಲೀನವನೆಂದು ಚನ್ನಬಸವ ಪುರಾಣ ಹೇಳುತ್ತದೆ. ಮಳೆಯಾರ್ಯ ನಂಡುಂಡ, ಓಂಕಾರದೇಶಿಕ ಅಂದರೆ ಸಿದ್ಧಲಿಂಗಯತಿಯಿಂದ ಈತ ಮೂರನೆಯ ತಲೆಮಾರಿನವನಾಗುತ್ತಾನೆ. ಆದುದರಿಂದ ಈತ ಸಿದ್ಧಲಿಂಗಯತಿಯ ಕಾಲ ೧೪೭೦ರ ನಂತರ ಪಂಚಯ್ಯನ ಕಾಲ ೧೬೫೦ಕ್ಕಿಂತ ಮುಂಚೆ ಬದುಕಿದ್ದು ಕಾವ್ಯರಚನೆ ಮಾಡಿರಬೇಕೆಂದು ಖಚಿತವಾದ ಆಧಾರಗಳು ದೊರೆಯುವವರೆಗೆ ಊಹಿಸಬಹುದಾಗಿದೆ. ಇವನು ಈ ಹೊತ್ತಿಗಾಗಲೇ ಶಿವಶರಣರನ್ನು ಕುರಿತು ಪ್ರಕಟವಾಗಿದ್ದ ಚರಿತ್ರೆಗಳನ್ನು ಗಮನಿಸಿ ತಾನೂ ಇಂತಹ ಒಂದು ಕಾವ್ಯ ರಚಿಸಲು ಮನಸ್ಸು ಮಾಡಿರಬೇಕು. ಕುಮಾರ ಚೆನ್ನ ಬಸವನ ಪುರಾತನ ಚರಿತ್ರೆಯ ಹಿಂದಿನ ಕೃತಿಗಳಲ್ಲಿ ಅಲ್ಲಲ್ಲಿ ಬಂದಿದ್ದ ಕೋಡಗದ ಮಾರಯ್ಯನ ಕಥೆಯನ್ನು ಆಧಾರವಾಗಿಟ್ಟುಕೊಂಡು ಇಂಥದೊಂದು ಕಾವ್ಯ ರಚಿಸಿರಬಹುದು. ನವವೀರ ಕುಮಾರ ಚೆನ್ನ ಬಸವ ಸಮಕಾಲೀನನಿದ್ದರೂ ಇರಬಹುದು. ಏಕೆಂದರೆ ಸದ್ಯದಲ್ಲಿ ಬಸವಣ್ಣನ ವಚನವೊಂದನ್ನು ಬಿಟ್ಟರೆ ಪುರಾತನರ ಚರಿತ್ರೆಯೇ ಕೋಡಗದ ಮಾರಯ್ಯನ ಕಥೆಯನ್ನು ಮೊಟ್ಟಮೊದಲಿಗೆ ಉದ್ದರಿಸಿರುವ ಕವಿ. ಆದುದರಿಂದ ನವವೀರನ ಕಾಲವನ್ನು ಸುಮಾರು ೧೫೭೦ ಎಂದು ಸದ್ಯಕ್ಕೆ ಇಟ್ಟುಕೊಳ್ಳಬಹುದೆಂದು ಕಾಣುತ್ತದೆ.

 

[1] ತಸು ರಾಮರಾಯ ಶಿವಶರಣರ ಕಥಾರತ್ನ ಕೋಶ ಪು ೩೨೦

[2] ಬಿತ್ತಿದೆನು ಸು ಜನರ ಕಾವ್ಯಕ್ಕೆ (ಭಸೋ ೧ – ೨)

[3] ವೈ. ಸಿ. ಭಾಮಮತಿ ಪುರಾತನ ಚರಿತ್ರೆ (xiv)