ಮುಮ್ಮುಡಿ ಮಾರಸಿಂಹ ಮಕ್ಕಳಲ್ಲೊಬ್ಬನಾದ ರಕ್ಕಸಂಗನೆ ಕರಿಭಂಟನೆಂದು ಶ್ರೀ ಎಸ್. ವಿ. ಗೌಡೂರರು ಹುಲ್ಲೂರು ಶ್ರೀನಿವಾಸ ಜೋಯಿಸರ ಆಧಾರಗಳಿಂದ ಪ್ರತಿಪಾದಿಸಲು ಯತ್ನಿಸಿದ್ದಾರೆ. ಆದರೆ ಮೇಲಿನ ಕಾಲ, ದೇಶಗಳ ದೃಷ್ಟಿಯಿಂದ ಕರಿಭಂಟ ರಕ್ಕಸ ಗಂಗ ಎಂದು ಒಪ್ಪಲಾಗುವುದಿಲ್ಲ. ಬಲ್ಲಾಳರಾಯ ಹೆಸರಿನವರು ಹೊಯ್ಸಳವಂಶದಲ್ಲಿ ಮುರು ನಾಲ್ಕು ಜನರಿರುವರು. ಅವರಲ್ಲಿ ಬಲ್ಲಾಳರಾಯನಿಗೆ ಸಮಕಾಲೀನನಾದ ಮಾರಭೂಪಾಲ ಎಂಬ ರಾಜನೆಂದರೆ ತಲಕಾಡು ಗಂಗರಸರ ಮುಮ್ಮುಡಿ ಮಾರಸಿಂಹ

[1] ಎಂಬ ವಾದ ಬಿದ್ದು ಹೋಗುತ್ತದೆ. ಈ ಮಾರಸಿಂಹನು ಸಳನಿಗೆ ಸಹ ಸಮಕಾಲೀನನಾಗುವುದಿಲ್ಲವೆಂಬುದನ್ನು ಈ ಹಿಂದೆಯೇ ವಿವರಿಸಲಾಗಿದೆ. ರಕ್ಕಸಂಗನು (ಕ್ರಿ:ಶ. ೯೮೮ – ೧೦೨೪) ತನ್ನಣ್ಣ ರಾಜಮಲ್ಲನ ದಂಡನಾಯಕನಾಗಿ ಅಣ್ಣನ ಭಂಟ ಎಂಬ ಬಿರುದಿನಿಂದ ಪೆದ್ದೊಱೆಯ ಪ್ರಾಂತವೊಂದಕ್ಕೆ ಮಾಂಡಲಿಕನಾಗಿದ್ದನು. ರಾಜಮಲ್ಲನು ಮೃತನಾದೊಡನೆ ರಕ್ಕಸಂಗನು ಪಟ್ಟಕ್ಕೆ ಬಂದನು.[2] ಈ ಕಾಲದಲ್ಲಿ ಹೊಯ್ಸಳರು ಇನ್ನೂ ಸಾಮಂತರಾಗಿದ್ದರು. ಅಲ್ಲದೆ ಗಂಗರಾಜ್ಯದ ಮೇಲೆ ಪ್ರಭಾವ ಬೀರುವಷ್ಟು ಹೆಸರಾಂತವರಾಗಿರಲಿಲ್ಲ. ಸಳನ ಕಾಲವನ್ನು ೧೦೭೩ ಎಂದು ಒಪ್ಪಿಕೊಂಡರೆ ರಕ್ಕಸಂಗನು ಈ ಹೊತ್ತಿಗಾಗಲೆ ಸತ್ತು ಅರ್ಧ ಶತಮಾನಕ್ಕೂ ಹೆಚ್ಚು ಕಾಲವಾಗಿರುತ್ತದೆ. ಚಿನ್ನಬಸವ ಕಾಲಜ್ಞಾನದಲ್ಲಿನ ಕ್ರಿ.ಶ. ೯೪೮ – ೧೦೪೩ ಸಳನ ಕಾಲ ಎಂದೂ ಒಪ್ಪಿದರೂ ಸಳನಿಗಿಂತ ಮುಂಚೆಯೇ ರಕ್ಕಸಗಂಗ ತೀರಿಹೋಗಿರುತ್ತಾನೆ. ಹೀಗಾಗಿ ‘ರಕ್ಕಸಂಗನ ವಿವಾಹ ಕಾಲಕ್ಕೆ ಮಾರಸಿಂಹನು ಮುಕ್ತನಾಗಿದ್ದನು. ಪ್ರಾಪ್ತವಯಸ್ಕರಾದ ಕುಮಾರರಿಗೆ ಆಡಳಿತವನ್ನು ವಹಿಸಿಕೊಟ್ಟು ಕ್ರಿ.ಶ. ೯೭೮ ರಲ್ಲಿ ಮಾರಸಿಂಹನು ಬಂಕಾಪುರಕ್ಕೆ ಹೋಗಿ ಒಂದು ವರ್ಷ ಸನ್ಯಸನ ವಿಧಿಯಿಂದ ತಪಸ್ಸನ್ನಾಚರಿಸಿ ಕ್ರಿ.ಶ. ೯೭೪ರಲ್ಲಿ ಮುಕ್ತನಾದನು. ರಕ್ಕಸಗಂಗನ ವಿವಾಹ ಕ್ರಿ.ಶ. ೯೮೪ರಲ್ಲಿ ನಡೆದಿರಬಹುದು[3] ಎಂಬ ಹೇಳಿಕೆ ತಪ್ಪಾಗುತ್ತದೆ. ಏಕೆಂದರೆ ಕ್ರಿ.ಶ. ೯೮೪ರಲ್ಲಿ ರಾಜನಾದ ಸಳನೆ ಬಲ್ಲಾಳರಾಯ ಎಂದಿಟ್ಟುಕೊಂಡರೂ ಕ್ರಿ.ಶ. ೯೭೮ರಲ್ಲಿ ಅವನಿನ್ನೂ ರಾಜನೇ ಆಗದಿದ್ದಾಗ ಅವನ ಮಗಳನ್ನು ರಕ್ಕಸಗಂಗ ಮದುವೆಯಾಗಲು ಹೇಗೆ ಸಾದ್ಯ?

ರಕ್ಕಸಗಂಗನೆ ಕರಿಭಂಟನೆಂದು ಹೇಳಲು ಅನೇಕ ಕಾರಣಗಳಿಂದ ಆಗುವುದಿಲ್ಲ. ಕರಿಭಂಟನು ಮಾರಗೌಡನಿಗೆ ಏಕಮಾತ್ರ ಪುತ್ರ. ಆದರೆ ಗಂಗರಸ ಮುಮ್ಮಡಿ ಮಾರಸಿಂಹನಿಗೆ ನಾಲ್ಕು ಜನ ಮಕ್ಕಳಿದ್ದರು. ರಕ್ಕಸಗಂಗ ಮೂರನೆಯವನು. ಅವನ ಅಣ್ಣನಾದ ನಾಲ್ಕನೆಯ ರಾಜಮಲ್ಲನು ತೀರಿಕೊಂಡ ನಂತರ ಈತ ಪಟ್ಟಕ್ಕೆ ಬಂದನೆಂಬುದನ್ನು ಈ ಹಿಂದೆಯೇ ಹೇಳಿದೆ. ರಕ್ಕಸಗಂಗನಿಗೆ ‘ಮಕ್ಕಲಿರಲಿಲ್ಲವಾಗಿ ತನ್ನ ತಮ್ಮನಾದ ಅರುಮುಳಿ ದೇವನ ಮಗನನ್ನೂ ಮಗಳನ್ನೂ ದತ್ತು ಸ್ವೀಕಾರ ಮಾಡಿಕೊಂಡನು. ಮಗನ ಹೆಸರು ರಾಜವಿಧ್ಯಾದರ.[4] ಈ ಕಾರಣದಿಂದಾಗಿ ರಕ್ಕಸಗಂಗನನ್ನು ಕರಿಭಂಟನೆಂದು ಹೇಳಲು ಬರುವುದಿಲ್ಲ. ಅಲ್ಲದೆ ಮಾರಸಿಂಹನು ಯುದ್ಧದಲ್ಲಿ ಮಡಿಯಲಿಲ್ಲ. ರಕ್ಕಸಗಂಗನ ನಂತರ ಅವನ ತಮ್ಮ ಅರುಮುಳಿದೇವ ಮತ್ತು ದತ್ತು ಮಗ ರಾಜವಿಧ್ಯಾಧರರೂ ಕೆಲವು ಕಾಲ ಗಂಗರ ರಾಜ್ಯವಾಳಿದ ಬಗೆಗೆ ಶಾಸನಾಧಾರಗಳು ದೊರೆಯುತ್ತವೆ. ರಕ್ಕಸಗಂಗನಿಗೆ ಗೋವಿಂದಧರದೇವ ಎಂಬ ಹೆಸರಿದ್ದಿತೆಂದು ಶಾಸನವೊಂದರ ಆಧಾರದಿಂದ ಊಹಿಸಿ, ‘ಈ ಊಹೆ ಸರಿಯಾದಲ್ಲಿ ರಕ್ಕಸಗಂಗನೆಂಬ ಗೋವಿಂದಧರ ದೇವನೆ ಕರಿಭಂಟನೆನ್ನುವುದರಲ್ಲಿ ಸಂದೇಹವಿಲ್ಲ’[5] ಎಂಬ ತಪ್ಪು ತೀರ್ಮಾನಗಳಿಗೆ ಬರಲಾಗಿದೆ. “ಶಾಸನದ ಅಕ್ಷರಗಳು ಅಳಿಸಿಹೊಗಿ ಕನ್ನಡ ಮುದ್ರಣದಲ್ಲಿ ‘ಗೋವರದಳಾವವ’ ಇಂಗ್ಲೀಷ್ ಅಕ್ಷರದಲ್ಲಿ ಗೋಜೇಶ್ವರನ ಎಂದು ಮುದ್ರಿಸಿದೆ”[6] ಎಂದು ಶ್ರೀ ಗೌಡುರ್ ಹೇಳಿದ್ದಾರೆ. ಆದರೆ ಅವರು ಇದಕ್ಕೆ ಆಕರ ಸೂಚಿಸಿಲ್ಲ. ಏನೇ ಇರಲಿ ಶಾಸನದಲ್ಲಿರುವುದೆಂದು ಹೇಳಲಾದ ‘ಗೋಜೇಶ್ವರ’ ರಾಜವಿದ್ಯಾಧರನೇ ವಿನಃ ‘ಗೋವಿಂದದೇವ’ನಲ್ಲ. ಹೀಗೆಯೇ “ರಕ್ಕಸಗಂಗನಿಗೆ ಅಣ್ಣನಭಂಟ ಎಂಬ ಬಿರುದು ಬಂದಿರುವ ಬಗ್ಗೆ ಎರಡು ಶಾಸನಗಳಲ್ಲಿ ಉಲ್ಲೇಖವಿದೆ. ಶಾಸನಗಳಲ್ಲಿ ಆನೆಯಭಂಟ ಎಂಬುದು ಕೈತಪ್ಪಿನಿಂದ ಅಣ್ಣನಭಂಟ ಎಂದಾಗಲು ಅವಕಾಶವಿದೆ” ಎಂಬ ಹೇಳಿಕೆಯೂ ತಪ್ಪುಗ್ರಹಿಕೆಯಿಂದ ಕೂಡಿದುದಾಗಿದೆ. ಕೆಂಪಣ್ಣಗೌಡ ಈತನನ್ನು ಕರಿರಾಯ ಎಂದು ಕರೆಯುತ್ತಾನೆ. ಗಂಗರ ಲಾಂಛನ ಆನೆ. ಗಂಗಡಿಕಾರ ಒಕ್ಕಲಿಗರಲ್ಲಿ ಇಂದಿಗೂ ಆನೆಕುಲದ ಗೌಡಗಳೆಂದು ಹೇಳಿಕೊಳ್ಳುವ ಪದ್ಧತಿಯಿದೆ. ಹೀಗಾಗಿ “ಆನೆಯ ಭಂಟ ಇಲ್ಲದೆಯೂ ರಕ್ಕಸಗಂಗ ಆನೆಯ ಲಾಂಛನದ ಕಾರಣದಿಂದ ಕರಿರಾಯನಾಗಲು ಒಪ್ಪುವುದಿಲ್ಲ. ಒಂದು ವೇಳೆ ರಕ್ಕಸಗಂಗನ ಜೀವನದಲ್ಲಿ ಇಂಥದೊಂದು ಘಟನೆ ನಡೆದಿದ್ದಲ್ಲಿ, ಅವನು ಹೊಯ್ಸಳ ರಾಜಕುಮಾರಿಯನ್ನು ಮದುವೆಯಾಗಿದ್ದಲ್ಲಿ ಈ ಎರಡು ವಂಶಗಳ ಯಾವುದಾದರೊಂದು ಶಾಸನದಲ್ಲಿ ಅದರ ಉಲ್ಲೇಖ ಇದ್ದೇ ತೀರುತ್ತಿತ್ತು.

ತೊಂಡನೂರನ್ನು ಆಳುತ್ತಿದ್ದನೆಂದು ಹೇಳಲಾದ ಭೇತಾಳರಾಜನ ಬಗೆಗೆ ಒಂದೆರಡು ವಿಷಯವನ್ನು ಚರ್ಚಿಸಬೇಕಾದುದು ಅವಶ್ಯಕವೆಂದೆನಿಸುತ್ತದೆ. ಏಕೆಂದರೆ ಗೌತಮ “ಕ್ಷೇತ್ರಕ್ಕೆ ಸಮೀಪವಿರುವ ತೊಂಡನೂರನ್ನು ನೊಳಂಬ ಪಲ್ಲವ ರಾಜನಾದ ಭೇತಾಳರಾಯನು (ಬೂತುಗ) ಆಳುತ್ತಿರುತ್ತಾನೆ”[7] ಎಂಬ ಹೇಳಿಕೆಯೊಂದಿದೆ. ನನಗೆ ತಿಳಿದ ಮಟ್ಟಿಗೆ ಚರಿತ್ರೆಯಲ್ಲಿ ಇಬ್ಬರೂ ಬೂತುಗರು ಬರುತ್ತಾರೆ. ಈ ಇಬ್ಬರೂ ಗಂಗರಸರೇ. ಅವರಲ್ಲಿ ೯೩೫ ರಿಂದ ೯೬೦ರವರೆಗೆ ಆಳಿದ ಇಮ್ಮಡಿ ಬೂತುಗನು ತುಂಬಾ ಪ್ರಸಿದ್ಧನಾದವನು. ಇವನು ಗಂಗಾನಾರಾಯಣ ಗಂಗಗಾಂಗೇಯ ನನ್ನಿಯಗಂಗ” ಎಂಬ ಬಿರುದಾನ್ವಿತನಾಗಿ ಇತಿಹಾಸ ಪ್ರಸಿದ್ಧನಾದ. ಇಮ್ಮಡಿ ಬೂತುಗನು ತನ್ನಣ್ಣ ಮುಮ್ಮಡಿ ರಾಜಮಲ್ಲನ ದಾರುಣ ರಾಜ್ಯಭಾರದ ತರುವಾಯ ಕ್ರಿ.ಶ. ೯೩೭ರಲ್ಲಿ ಪಟ್ಟಕ್ಕೆ ಬಂದನು. ಆದುದರಿಂದ ಈ ಬೂತುಗನನ್ನು ಭೇತಾಳರಾಜ ಎಂದು ಕರೆಯುವುದು ಇತಿಹಾಸಕ್ಕೆ ಅಪಚಾರ ಮಾಡಿದಂತಾಗುತ್ತದೆ.

ಹಾಗಾದರೆ ತೊಂಡನೂರನ್ನು ಆಳುತ್ತಿದ್ದ ಭೇತಾಳರಾಜನು ಯಾರು ಎಂಬ ಸಮಸ್ಯೆ ಬಗೆಹರಿಯುವುದಿಲ್ಲ. ನನ ಕ್ಷೇತ್ರಕಾರ್ಯ ಸಮಯದಲ್ಲಿ ಮತ್ತು ಕೆಂಪಣ್ಣ ಗೌಡನ ಯಕ್ಷಗಾನ ಕಾವ್ಯದಲ್ಲಿ ತೊಂಡನೂರನ್ನು ಬೇಡ ಪಡೆಯನಾಡೆಂದು ಹೇಳಲಾಗಿದೆ. ಕರಿಭಂಟ ಗೌತಮಕ್ಷೇತ್ರದಲ್ಲಿದ್ದಾಗ ತೊಂಡನೂರಿನ ಸೇನಾಪತಿ ಉರಿಶಿಂಗ ಅವನ ಮೇಲೆ ದಂಡೆತ್ತಿ ಬಂದ ವಿಚಾರವಿದೆ. ಅದನ್ನು ಕುರಿತು ಹೇಳುವಾಗ

ಅಟ್ಟ ಮುಟ್ಟುತ ಬಹ ದಿಟ್ಟ ಬೇಡರ ಪಡೆಯ
ಕುಟ್ಟಿದನು ಬೆಟ್ಟದಂತೊಟ್ಟಿದನು ಅವನು.

ಎಂದು ಹೇಳಿದ್ದಾನೆ. ಇದನ್ನು ಒಪ್ಪಿಕೊಂಡರೆ ಉದ್ದಂಡಿ ಮತ್ತು ಕರಿಭಂಟರ ಜಾತಿಗಳು ಬೇರೆಯಾಗಿದ್ದು ಅಂತರ್ಜಾತೀಯ ವಿವಾಹದ ಕಾರಣ ಈ ಯುದ್ಧ ನಡೆದಿರಬೇಕೆಂದು ಹೇಳಬೇಕಾಗುತ್ತದೆ. ಆದರೆ, ಉದ್ದಂಡಿಯ ಭಕ್ತರೆಲ್ಲರೂ ಒಕ್ಕಲಿಗರೇ ಆದುದರಿಂದ ಈ ಊಹೆ ಸಮಂಜಸವಾಗುವುದಿಲ್ಲ. ಅದರ ಬದಲಿಗೆ ಭೇತಾಳರಾಜನು ಬೇಡರ ಸೇನೆಯನ್ನಿಟ್ಟಿದ್ದನೆಂದು ಕಾಣುತ್ತದೆ. ನಮ್ಮ ದೇಶದ ರಾಜರುಗಳು ಇಂತಹ ಬೇಡಪಡೆಯನ್ನು ಇಟ್ಟುಕೊಂಡಿರುತ್ತಿದ್ದ ಉದಾಹರಣೆಗಳು ಚರಿತ್ರೆಯಲ್ಲಿ ಸಾಕಷ್ಟು ಕಂಡುಬರುತ್ತವೆ.

ಕರಿಭಂಟ ಹಳೇಬೀಡಿನ ರಾಜಕುಮಾರಿಯನ್ನು ಮದುವೆಯಾಗಲು ಧಾರಾಪುರದಿಂದ ಹೊರಡುತ್ತಾನೆ. ಇಲ್ಲಿಯವರೆಗೆ ಚರ್ಚಿಸಿದ್ದರಲ್ಲಿ ಹೊಯ್ಸಳರ ಹಳೇಬೀಡು ಆಗ ಈ ಕಡೆಯವರಿಗೆ ಅಷ್ಟು ಚಿರಪರಿಚಿತವಾಗಿತ್ತೇ? ಹೊಯ್ಸಳರು ಪ್ರಸಿದ್ಧರಾಗಿದ್ದರೆ ಎಂಬ ಸಮಸ್ಯೆ ತಲೆದೋರುತ್ತದೆ. ಇದರೊಂದಿಗೆ ಮಲ್ಲಿಗನೂರಿಗೆ ಅನತಿ ದೂರದಲ್ಲಿರುವ ಹಳೇಬೀಡಿನ ಬಗ್ಗೆ ವಿವೇಚಿಸುವುದು ಅಗತ್ಯವೆಂದು ಹೇಳಬಹುದು. ಈ ಹಳೇಬೀಡು ಗಂಗರ ಕಾಲದಿಂದಲೂ ಒಂದು ಸಾಮಂತ ರಾಜ್ಯದ ರಾಜಧಾನಿಯಾಗಿದ್ದಂತೆ ಕಂಡುಬರುತ್ತದೆ. ಅನಂತರ ಅದು ಹೊಯ್ಸಳರ ಆಳ್ವಿಕೆಗೆ ಬಂದಂತೆ ಕಾಣುತ್ತದೆ. “ಸ್ವಸ್ತಿಶ್ರೀಮನ್ಮಹಾ ಮಂಡಲೇಶ್ವರಂ ಪ್ರತಾಪ ಸಾಹಸ ವೀರಬಲ್ಲಾಳ ದೇವರು ಪ್ರುಥ್ವೀರಾಜ್ಯಂತೆ ಯತ್ತಿರೆ ಶ್ರೀಮನ್ಮ ಹಾಹಿರಿಯ ಪ್ರಧಾನಂ ಕೊಟ್ಟಿರವಗ್ಗೆಡೆ – ಣಿಮಯ್ಯಂಗಳು ಹಳೆಯಬೀಡನಾಳುತ್ತಿರಲು”12 ಎಂಬ ಉಲ್ಲೇಖವಿದ್ದು, ಇದು ಗಂಗರ ನಂತರ ಹೊಯ್ಸಳರ ಅಧೀನಕ್ಕೆ ಬಂದಿತೆಂಬುದನ್ನು ಶೃತಪಡಿಸುತ್ತದೆ. ರಕ್ಕಸ ಗಂಗನು ಕರಿಭಂಟನಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಹಿನ್ನಲೆಯಲ್ಲಿ ಯೋಚಿಸಿದಾಗ ಅವನು ಹೊರಟ ಹಳೇಬೀಡು ಇದೇ ಇರಬಹುದೆ? ಎಂಬ ಸಂದೇಹವುಂಟಾಗುತ್ತದೆ. ಈ ಸಂದೇಹಕ್ಕೆ ಪೋಷಕವಾದ ಘಟನೆಯೊಂದು ಉಲ್ಲೇಖಾರ್ಹವಾಗಿದೆ. ಕರಿಭಂಟನು ಗೌತಮ ಕ್ಷೇತ್ರದಲ್ಲಿ ಬೀಡು ಬಿಡುತ್ತಾನಷ್ಟೆ. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಅವನು ಇನ್ನೂ ಒಂದು ದಿವಸ ಅಲ್ಲಿ ನಿಲ್ಲುವ ತೀರ್ಮಾನಕ್ಕೆ ಬರುತ್ತಾನೆ. ಆಗ ಕರಿಭಂಟನನ್ನು ಆಹ್ವಾನಿಸಲು ಬಂದಿದ್ದ ಬಲ್ಲಾಳರಾಯನ ಮಂತ್ರಿಯು ಬೇಗ ಹಳೇಬೀಡನ್ನು ಸೇರಬೇಕೆಂದು ಒತ್ತಾಯಿಸುತ್ತಾನೆ. ಅದಕ್ಕುತ್ತರವಾಗಿ ಕರಿಭಂಟ

ನಾಳೆ ವಂದೇದಿವಸಕೈದುವೆವು ನಿಮ್ಮ ಭೂ
ಪಾಲನೆಡೆಗಿಂದು ನೀವು ಪೋಗಿ
ಪೆಳಿರೆಂದವರಿಗುಡುಗೊರೆಯಿತ್ತುಪಚರಿಸಿ
ಬೀಳುಕೊಟ್ಟನು ಮಂತ್ರಿಗಳನು

ಎಂದು ಹೇಳಿಕಳಿಸಿದ ಉಲ್ಲೇಖ ಬರುತ್ತದೆ. ಗೌತಮ ಕ್ಷೇತ್ರದಿಂದ ಹೊಯ್ಸಳರ ರಾಜಧಾನಿ ಹಳೇಬೀಡಿಗೆ ಒಂದು ದಿನದಲ್ಲಿ ಹೋಗಿ ಸೇರುವುದು ಅಸಂಭವವೇ ಸರಿ. ಆದರೆ ಸುಮಾರು ಎಂಟು, ಹತ್ತು ಮೈಲಿ ದೂರದ ಇಲ್ಲಿನ ಹಳೇಬೀಡು ಒಂದು ದಿನದ ಪಯಣದ ಅಂತರದಲ್ಲಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿರುವ ಈ ಹಳೇಬೀಡು ಅನೇಕ ದೃಷ್ಟಿಯಿಂದ ನನ್ನ ವಾದವನ್ನು ಪುಷ್ಟೀಕರಿಸುತ್ತದೆ. ಇಲ್ಲಿನ ಅಸಂಖ್ಯಾತ ವೀರಗಲ್ಲುಗಳು ಭೀಕರ ಯುದ್ಧ ನಡೆದ ಸೂಚನೆ ಕೊಡುತ್ತವೆ. ಈ ಊರಿನಲ್ಲಿರುವ ಕರಿರಾಯನ ದೇವಾಲಯ ಕರಿಭಂಟ ಬಂದುದು ಈ ಹಳೇಬೀಡಿಗೆ ಎಂಬುದನ್ನು ಶೃತಪಡಿಸುತ್ತದೆ. ಕೆಂಪಣ್ಣಗೌಡ ಕಾವ್ಯರಚನೆ ಮಾಡುವ ಕಾಲದ ಹೊತ್ತಿಗೆ ಇತಿಹಾಸ ಪ್ರಸಿದ್ಧ ಹೊಯ್ಸಳ ರಾಜಧಾನಿ ಹಳೇಬೀಡು ಜನರ ಬಾಯಲ್ಲಿದ್ದ ಕಾರಣ ನಾಟಕಕಾರರು ಇದನ್ನು ತಪ್ಪಾಗಿ ಗ್ರಹಿಸಿರಬೇಕು ಅಥವಾ ಉದ್ದೇಶಪೂರ್ವಕವಾಗಿಯೆ ಬದಲಾವಣೆ ಮಾಡಿಕೊಂಡಿರಬೇಕು. ಹೀಗಾಗಿ ಕರಿಭಂಟ ಹೊರಟದ್ದು ಈ ಹಳೇಬೀಡಿಗೇ ಇರಬೇಕೆಂಬುದು ಹೆಚ್ಚು ವಾಸ್ತವವಾಗಿ ಕಾಣುತ್ತದೆ.

ಚಾರಿತ್ರಿಕ ದಾಖಲೆಗಳು ತಲಕಾಡಿನ ಗಂಗರು ಮತ್ತು ದ್ವಾರಸಮುದ್ರದ ಹೊಯ್ಸಳರ ಮಧ್ಯೆ ಮದುವೆಯೊಂದು ನಡೆದ ಬಗ್ಗೆ ಎಲ್ಲಿಯೂ ಸೂಚಿಸುವುದಿಲ್ಲವಾಗಿ ರಕ್ಕಸ ಗಂಗ ಕರಿಭಂಟನೆಂದಾಗಲಿ ಅವನು ಬಲ್ಲಾಳರಾಜಕುಮಾರಿಯನ್ನು ಮದುವೆಯಾದನೆಂದಾಗಲಿ ಹೇಳಲು ಬರುವುದಿಲ್ಲ. “ಹನ್ನೊಂದನೆಯ ಶತಮಾನದ ಆದಿಭಾಗದಲ್ಲಿ ಗಂಗರು ತಮ್ಮ ಸ್ವಾತಂತ್ರ್ಯ ಸಮಸ್ತವನ್ನೂ ಕಳೆದುಕೊಂಡು, ಚೋಳ ಮತ್ತು ಪಶ್ಚಿಮ ಚಾಲುಕ್ಯ ಪ್ರಭುಗಳ ಸ್ಥಳೀಯ ಪ್ರತಿನಿಧಿಗಳ ಸ್ಥಾನಕ್ಕೆ ಇಳಿದರು”.[8] ಹೀಗಾಗಿ ಸುಮಾರು ೧೦೭೮ರಲ್ಲಿ ರಾಜ್ಯ ಸ್ಥಾಪನೆ ಮಾಡಿದ ಹೊಯ್ಸಳರೊಂದಿಗೆ ಸಂಬಂಧ ಕಲ್ಪಿಸುವುದು ಸಾಧ್ಯವಲ್ಲದ ಮಾತು. ಮುಂದೆ ವಿಷ್ಣುವರ್ಧನನು ತಲಕಾಡನ್ನು ಚೋಳರಿಂದ ಗೆದ್ದು ಹೊಯ್ಸಳ ರಾಜ್ಯಕ್ಕೆ ಸೇರಿಸುವವರೆಗೆ ಗಂಗರಾಜ್ಯ ಅನೇಕ ಚೂರು ಛಿದ್ರಗಳಾಗಿದ್ದುದು ಕಂಡುಬರುತ್ತದೆ. ರಕ್ಕಸಗಂಗನ ಮರಣಾನಂತರ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಅಧಿಕಾರಿಗಳಾಗಿದ್ದ ಗಂಗವಂಶಸ್ಥರು ತಾವೇ ಸ್ವತಂತ್ರ ರಾಜರೆಂಬಂತೆ ನಡೆದುಕೊಂಡರು.

ಗಂಗರಾಜ್ಯವು “ಹೀಗೆ ಪರಾಜಿತವಾದ ಮೇಲೆ ಕೊಂಚ ಕಾಲ ಹಾಗೂ ಹೀಗೂ ಕಾಲ ಯಾಪನೆ ಮಾಡುವಸ್ಥಿತಿಗಿಳಿಯಿತು. ಕಾಲಾಂತರದಲ್ಲಿ ಗಂಗರಾಜಕುಮಾರಿಯೊಬ್ಬಳ ಗರ್ವಾಂಧತೆಯಿಂದ ಅಲ್ಲಿ ಯಾದವೀಕಲಹ ಪ್ರಾರಂಭವಾಯಿತು. ಘೋರಯುದ್ಧದಲ್ಲಿ ಪರಿಣಮಿಸಿತು. ಈ ಬಗೆಯ ಕ್ಷುದ್ರ ಕಲಹಗಳಿಗೆ ರಂಗಭೂಮಿಯಾದ ಗಂಗರಾಜ್ಯವು ಕೊನೆಗೆ ತಲಕಾಡಿನ ಶ್ರೀರಂಗರಾಜ್ಯದಲ್ಲಿ ಪಾಳೆಯಗಾರಿಕೆಯಾಗಿ ಲೀನವಾಯಿತು”.[9] ಈ ಹೇಳಿಕೆಯ ಹಿನ್ನೆಲೆಯಲ್ಲಿ ಗಮನಿಸಿದಾಗ ಚೋಳರು ಮತ್ತು ಹೊಯ್ಸಳರು ನಂತರವೂ ಗಂಗವಂಶದರು ಸಾಮಂತರು, ಪಾಳೆಗಾರರು ಆಗಿದ್ದುದು ತಿಳಿದು ಬರುತ್ತದೆ. ಗಂಗವಂಶದ ಗರ್ವಾಂಧ ರಾಜಕುಮಾರಿ ಉದ್ಧಂಡಿಯಾಗಿರಬಹುದೇ? ದಾಯಾದಿ ಮತ್ಸರ ಹಿರಿದಾಗಿ ಆಕೆ ಮಲ್ಲಿಗನೂರಿನ ಶಾಸನ ಹೇಳುವ ಸೋಮವ್ವೆಯ ಮಗ ಕರಿರಾಯನಿಗೆ ತನ್ನ ಮಗಳನ್ನು ಕೊಡಲು ಒಪ್ಪದೆ ಇಂಥದೊಂದು ಘಟನೆಗೆ ಕಾರಣವಾಗಿದ್ದಿರಬಹುದು. ಕರಿಭಂಟನ ಕಾಳಗ ಚಾರಿತ್ರಿಕ ಘಟನೆಯೇ? ಎಂಬ ಸಮಸ್ಯೆಗೆ ಮೇಲಿನ ಎಲ್ಲ ಆಧಾರಗಳ ಸಹಾಯದಿಂದ ಉತ್ತರ ಹೇಳಬಹುದು. ಗಂಗರ ಅವನತಿಯ ಅನಂತರ ಹೊಯ್ಸಳರ ಅಭ್ಯುದಯದ ಮಧ್ಯಕಾಲದಲ್ಲಿ ಗಂಗವಂಶದ ದಾಯಾದಿ ಮತ್ತು ಸೋದರ ಸಂಬಂಧಿ ಮನೆತನಗಳ ಮಧ್ಯೆ ನಡೆದ ಒಂದು ದುರಂತ ಪ್ರಣಯ ಪ್ರಸಂಗವಿದೆಂದು ಹೇಳಬಹುದು. ಈ ಪ್ರಸಂಗವನ್ನು ಕೆಂಪಣ್ಣಗೌಡ ಒಂದು ಕಾವ್ಯವಾಗಿ ಬರೆಯಲು ಸೋಮರಾಜನ ಕಥಾಸರಿತ್ಸಾಗರ ಮೂಲ ಪ್ರೇರಣೆಗಾಗಿರಬೇಕು, ಏಕೆಂದರೆ ಕಥಾಸರಿತ್ಸಾಗರವು ಹೆಂಗಸರನ್ನು ವಿನೋದ ಪಡಿಸುವುದಕ್ಕಾಗಿ ಹೇಳಿದ್ದು. ಶಿವನು ತನ್ನ ಹೆಂಡತಿಗೆ ಹೇಳಿದ್ದು ಎಂಬ ಅಭಿಪ್ರಾಯವಿದೆ.[10] ಕರಿಭಂಟನ ಕಥೆ ಸಹ ಶಿವ ಪಾರ್ವತಿಗೆ ಹೇಳಿದ್ದು, ಅಲ್ಲದೆ ಕರಿಭಂಟನ ಕಥೆ ಕಥಾಸರಿತ್ಸಾಗರದ ಸುಂದರಸೇನ ಮುಂದಾರ ವತಿಯರ ಕಥೆಯಿಂದ ಪ್ರಭಾವಿತವಾಗಿರುವ ಸಾಧ್ಯತೆ ಕಂಡುಬರುತ್ತದೆ. ಈ ಕಥೆಯಲ್ಲಿ ಬರುವ ಭೇತಾಳ ಪ್ರಸಂಗ, ಉದ್ದಂಡಿ, ಬೊಮ್ಮ, ಉರಿಶಿಂಗ ಮುಂತಾದ ಪಾತ್ರಗಳಿಗೆ ಪ್ರೇರಣೆಯಾಗಿರಬಹುದು. ಗಂಗವಂಶದ ಒಂದು ಘಟನೆಯನ್ನು ಈ ಕಥೆಯ ಹಂದರದ ಮೇಲೆ ಕೆಂಪಣ್ಣಗೌಡ ತನ್ನದೆ ಆದ ಬದಲಾವಣೆಗಳೊಂದಿಗೆ ಹಬ್ಬಿಸಿರುವ ಸಾಧ್ಯತೆ ಕಂಡುಬರುತ್ತದೆ. ಏಕೆಂದರೆ ಅನಂತರ “ಕ್ರಿ.ಶ. ೧೧೬೬ ರಿಂದ ೧೧೧೭ವರೆಗಿನ ಕಾಲಾವಧಿಯು ಮಹತ್ವ ಪೂರ್ಣಸಾಧನೆಯ ಕಾಲ, ಈ ಅವಧಿಯಲ್ಲಿ ಗಂಗನೃಪರೆಲ್ಲರೂ ಒಟ್ಟಾಗಿ ಸೇರಿ ಚೋಳರ ನಿರಂಕುಶ ಪ್ರಭುತ್ವವನ್ನು ಕಿತ್ತೊಗೆಯುವ ಉದ್ದೇಶದಿಂದ ಪರಸ್ಪರ ದ್ವೇಷ, ಮಾತ್ಸರ್ಯಗಳನ್ನು ಬದಿಗಿಕ್ಕಿದರು. ವೈರಿಯನ್ನು ನಿರ್ಮೂಲಿಸಿ ಗತಕಾಲದ ಸ್ವಾತಂತ್ರ್ಯವನ್ನೂ ಹಕ್ಕು ಭಾದ್ಯತೆಗಳನ್ನು ಮತ್ತೊಮ್ಮೆಗಳಿಸಿಕೊಳ್ಳುವ ಮಹೋದ್ದೇಶದಿಂದ ಕನ್ನಡ ರಾಜನಾದ ವಿಷ್ಣುವರ್ಧನನ ಆಜ್ಞಾಧಾರಕರಾಗಲು ಸಿದ್ಧರಾದರು.[11] ಅಲ್ಲಿಂದ ಮುಂದೆ ಗಂಗ ರಾಜ್ಯ ಹೊಯ್ಸಳ ರಾಜ್ಯದಲ್ಲಿ ಲೀನವಾಯಿತು.

ಕರಿರಾಯ ಚಾರಿತ್ರ ಒಂದು ವಿಶಿಷ್ಟ ಕೃತಿ. ಕನ್ನಡ ನಾಡಿನ ಸುಪ್ರಸಿದ್ಧ ಗಂಗವಂಶದ ಕೊನೆಗಾಲದಲ್ಲಿ ನಡೆದ ಒಂದು ದಾಯಾದಿ ಕಲಹ ಮತ್ತು ದುರಂತ ಪ್ರಣಯ ಪ್ರಸಂಗವನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿರುವ ಕೃತಿ. ಸುಮಾರು ಹತ್ತನೆಯ ಶತಮಾನದ ಹೊತ್ತಿಗೆ ಗಂಗವಂಶ ತನ್ನ ಅವನತಿಯ ತುಟ್ಟ ತುದಿಯನ್ನು ಮುಟ್ಟಿದ್ದಿತು. ಗಂಗರ ಕೊನೆಯ ದೊರೆ ಅರುಮುಳಿ ದೇವನಿಗೆ ಅನೇಕ ಜನ ಹೆಣ್ಣು ಮಕ್ಕಳಿದ್ದಂತೆ ತಿಳಿಯುತ್ತದೆ. ಈತನಿಗೆ ಏಳು ಮಂದಿ ಹೆಣ್ಣು ಮಕ್ಕಳಿದ್ದರೆಂದು ಕೆಲವು ಮೂಲಗಳು ತಿಳಿಸುತ್ತವೆ. ಇವರನ್ನು ಅನೇಕ ಮುಖಂಡರಿಗೆ ಮದುವೆ ಮಾಡಿಕೊಟ್ಟು ಅವರನ್ನು ಸಾಮಂತ ದೊರೆಗಳನ್ನಾಗಿ ನೇಮಿಸಲಾಗಿತ್ತು. ಇವರಲ್ಲಿ ಕಾಚಲದೇವಿ ಎಂಬುವಳು ತೊಂಡನೂರಿನಿಂದ ತೊಂಡನಾಡು ೪೮೦೦ ಅನ್ನು ಆಳುತ್ತಿದ್ದಳು. ಈಕೆಗೆ ವೀರ ಮಹಾದೇವಿಯೆಂಬ ಬಿರುದಿದ್ದಿತು. “Kachalavadevi ruler of the tondanda 4800, She received the title Vire Mahadevi. She is lord of Kanchi. Shi received the the title Kdava Mahadevi. ಕರಿರಾಯ ಚಾರಿತ್ರ ಈಕೆಯ ಮಗಳ ದುರಂತ ಪ್ರಣಯಕ್ಕೆ ಸಂಬಂಧಿಸಿದ ಕಥೆ. ತೊಂಡನೂರು, ತಲಕಾಡು, ಗೌತಮಕ್ಷೇತ್ರ, ಹಳೇಬೀಡು, ಮಲ್ಲಿಗದೇವನಹಳ್ಳಿ, ಕರಿರಾಯ ಚಾರಿತ್ರದ ಪ್ರಾದೇಶಿಕ ನೆಲೆ. ತಲಕಾಡೊಂದನ್ನುಳಿದು ಮಿಕ್ಕೆಲ್ಲ ಸ್ಥಳಗಳೂ ತೊಂಡನೂರಿಗೆ ಸುತ್ತ ಮುತ್ತ ಇರುವಂಥವೆ. ಈ ಪ್ರಣಯ ಪ್ರಸಂಗದಿಂದಾಗಿ ಗಂಗವಂಶದಲ್ಲಿ ಒಂದು ದಾಯಾದಿ ಯುದ್ಧವೇ ನಡೆದು ಅನೇಕ ರಾಜವಂಶೀಯರು ಹತರಾಗಿ ಈ ಭಾಗದ ದೇವ ದೇವತೆಗಳಾಗಿ ಮೆರೆಯುತ್ತಿದ್ದಾರೆ. ತನ್ನ ಸೋದರ ಸಂಬಂಧಿಗೆ ಮಗಳನ್ನು ಕೊಡಲು ನಿರಾಕರಿಸಿ ಯುದ್ಧಕ್ಕೆ ಕಾರಣಳಾದ ಕಾಚಲದೇವಿಯನ್ನು ಜನ “ರಾಕ್ಷಸಿ’ ಎಂದು ಕರೆದಿದ್ದಾರೆ. ಆಕೆ ಇಂದಿಗೂ ರಾಕ್ಷಸಮ್ಮ ರಾಕಾಸಮ್ಮ ಆಗಿ ಈ ಭಾಗದ ಜನರಿಂದ ಪೂಜೆಗೊಳ್ಳುತ್ತಿದ್ದಾಳೆ. ಈ ಕಥೆಯನ್ನು ಜನರ ಬಾಯಿಂದ ಕೇಳಿದ ಈ ಭಾಗದವನೇ ಆದ ಕೆಂಪಣ್ಣಗೌಡ ಇದನ್ನಾಧರಿಸಿ ಕರಿರಾಯ ಚಾರಿತ್ರ ಎಂಬ ಯಕ್ಷಗಾನ ಕಾವ್ಯ ರಚಿಸಿದ್ದಾನೆ.

ಕರಿಭಂಟನ ಕಾಳಗದ ಕಥೆ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಉದಾಹರಣೆಗಳಿವೆ. ಕೆಂಪಣ್ಣಗೌಡನ ಕರಿರಾಯ ಚರಿತ್ರೆ ಧರಣಿಮೋಹಿನಿಯ ಸ್ವಯಂವರದ ಆಹ್ವಾನದಿಂದ ಆರಂಭವಾಗುತ್ತದೆ. ಹೆಳವರು ಹೇಳುವ ಕರಿಭಂಟನ ಕಥೆ ಆತನ ತಂದೆಯ ಕಾಲದಿಂದ ಆರಂಭವಾಗುತ್ತದೆ. ಈ ಕಥೆ ಜನಪದ ಗೀತೆ ಮತ್ತು ಕಥೆಗಳಲ್ಲಿಯೂ ದೊರೆಯುತ್ತದೆ. ಕೆಂಪಣ್ಣಗೌಡನ ಕಾವ್ಯದ ಪೂರ್ವ ಕಥೆ ಹೀಗಿದೆ:

ಮೇರುಪರ್ವತದ ದಕ್ಷಿಣ ಭಾಗದಲ್ಲಿ ಕಾಶ್ಮೀರದೇಶ ಶೋಭಿಸುತ್ತಿದೆ. ಆ ದೇಶದಲ್ಲಿ ಮಳೆ ಬೆಳೆಗಳು ಕಾಲಕಾಲಕ್ಕೆ ಆಗುತ್ತವೆ. ಅಲ್ಲಿನ ಬೆಟ್ಟಗುಡ್ಡಗಳು ಕಾಡುಗಳು ಸದಾ ಹಸುರಿನಿಂದ ಕೂಡಿವೆ. ಹೊಳೆಗಳಲ್ಲಿ ಸುಭ್ರವಾದ ತಿಳಿನೀರು ಹರಿಯುತ್ತದೆ. ಯುದ್ಧದ ಭೀತಿಯಿಲ್ಲ. ಕಳ್ಳಕಾಕರ ಭಯವಿಲ್ಲ. ದುಷ್ಟಮೃಗಗಳ ಹಾವಳಿಯಿಲ್ಲ. ಜನರು ಸುಖ ಸಂತೋಷದಿಂದ ಇದ್ದಾರೆ. ಸುಳ್ಳು, ತಟವಟ, ಮೋಸ, ಕುತಂತ್ರಗಳಿಗೆ ಆ ದೇಶದಲ್ಲಿ ಜಾಗವೇ ಇಲ್ಲ. ಸುತ್ತ ಮುತ್ತಲ ರಾಜರು ಈ ದಕ್ಷಿಣ ಕಾಶ್ಮೀರ ರಾಜ್ಯವನ್ನು ಕಂಡು ಭಯದಿಂದ ವಿನೀತರಾಗಿರುತ್ತಾರೆ. ಇಂತಹ ರಾಜ್ಯದ ರಾಜಧಾನಿ ಧಾರಾಪುರ. ಅದು ದೇಶದ ಮಧ್ಯ ಭಾಗದಲ್ಲಿ ಆಕಾಶದ ಮಧ್ಯೆ ಇರುವ ಚಂದ್ರನಂತೆ ಪ್ರಶಾಂತವಾಗಿದೆ. ನಗರದ ಸುತ್ತ ಏಳುಸುತ್ತಿನ ಕೋಟೆ. ಒಂದೊಂದು ಕೋಟೆಯ ಮಧ್ಯ ಭಾಗದಲ್ಲಿಯೂ ಆಳವಾದ ಅಗಳು ತೆಗೆದು ನೀರು ತುಂಬಲಾಗಿದೆ. ಶತೃಗಳಿಗೆ ಧಾರಾಪುರ ಯಮಸದನವಿದ್ದಂತೆ. ಆ ನಗರದ ಕೋಟೆಯ ಬುರುಜುಗಳ ಮೇಲೆ ಹಗಲು ರಾತ್ರಿ ಪಹರೆಯ ಸೈನಿಕರು ಕಾಯುತ್ತಾರೆ.

ಧಾರಾಪುರ ಇಂದ್ರನ ಅಮರಾವತಿಯಂತೆ ಏಳುಸುತ್ತಿನ ಕೋಟೆಯೊಳಗೆ ವಿಜೃಂಭಿಸುತ್ತದೆ. ಅಲ್ಲಿ ಅನೇಕ ಬೀದಿಗಳಿವೆ. ಹಾಲು ಮಾರುವ ಬೀದಿ, ನೂಲು ಮಾರುವ ಬೀದಿ, ಶಾಲು ಸಕಾಲಾತಿ ಮಾರುವ ಬೀದಿ, ಹೀಗೆ ಒಂದೊಂದು ಬಗೆಯ ವಸ್ತುವನ್ನು ಮಾರಲು ಒಂದೊಂದು ಬೀದಿಯೇ ಉಂಟು. ಜನರು ವಾಸ ಮಾಡಲು ಬೇರೆ ಬೇರೆ ಬೀದಿಗಳುಂಟು. ಧಾರಾಪುರದ ಪೇಟೆಯಲ್ಲಿ ದೊರೆಯದ ವಸ್ತುಗಳೇ ಇಲ್ಲ, ಮುತ್ತು ರತ್ನಗಳನ್ನು ಚಾಪೆಯ ಮೇಲೆ ರಾಸಿ ಸುರಿದು ರಾಗಿ, ಭತ್ತ ಮಾರಿದಂತೆ ಮಾರುತ್ತಾರೆ. ಆ ನಗರದ ಜನರಿಗೆ ಭಯವೆಂಬುದೇ ಇಲ್ಲ. ಇಂತಹ ದಕ್ಷಿಣ ಕಾಶ್ಮೀರ ದೇಶವನ್ನು ಆಳುವ ರಾಜ ಮಾರಭೂಪಾಲ.

ಮಾರಭೂಪಾಲ ತನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾನೆ. ಅವರಿಗೆ ಯಾವ ತೊಂದರೆಯೂ ಆಗದಂತೆ ಎಚ್ಚರಿಕೆ ವಹಿಸುತ್ತಾನೆ. ಜನರಿಗೂ ತಮ್ಮ ರಾಜ ಮಾರಭೂಪಾಲನೆಂದರೆ ಪಂಚಪ್ರಾಣ. ಹೀಗೆ ಧರ್ಮದಿಂದ ಪ್ರಜಾಪಾಲನೆ ಮಾಡುತ್ತಿರುವ ಮಾರಭೂಪಾಲನಿಗೆ ಬನವಂತಾದೇವಿ ಎಂಬ ರಾಣಿ ಇದ್ದಾಳೆ. ಆಕೆ ಅನುಪಮ ಸುಂದರಿ. ಮಾರಭೂಪಾಲನ ಶೌರ್ಯ ಪರಾಕ್ರಮಗಳಿಗೆ ತಕ್ಕ ಹೆಂಡತಿ. ಸಕಲ ವಿಧದಲ್ಲಿಯೂ ಭಾಗ್ಯವಂತರಾಗಿದ್ದ ಈ ದಂಪತಿಗಳಿಗೆ ಇದ್ದ ಒಂದೇ ಒಂದು ಕೊರತೆಯೆಂದರೆ ಮಕ್ಕಳಿಲ್ಲದಿರುವುದು.

ತಮ್ಮ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗುವಂತಹ ಒಬ್ಬ ಮಗನಿಲ್ಲವಲ್ಲಾ ಎಂದುಈ ರಾಜದಂಪತಿಗಳು ಬಹಳವಾಗಿ ಮರುಗಿದರು. ತಮ್ಮ ಇಷ್ಟದೈವವಾದ ಶಿವನನ್ನು ಆರಾಧಿಸಿದರು. ತೀರ್ಥಯಾತ್ರೆ ಮಾಡಿದರು. ದೇಸದ ದೇವಾಲಯಗಳಲೆಲ್ಲಾ ವಿಶೇಷ ಪೂಜೆ ಸಲ್ಲಿಸಿದರು. ಬಡಬಗ್ಗರಿಗೆ ಅನ್ನದಾನ ಮಾಡಿದರು. ಮಾರಭೂಪಾಲ ಮತ್ತು ಬನವಂತಾದೇವಿಯರ ಪ್ರಾರ್ಥನೆ ಶಿವನಿಗೆ ಮುಟ್ಟಿತೋ ಎಂಬಂತೆ ರಾಣಿ ಗರ್ಭವತಿಯಾದಳು. ದೇಶದ ಪ್ರಜೆಗಳ ಸಂತೋಷ ಹೇಳತೀರದು. ತನ್ನ ಆಸೆ ಫಲಿಸಿದುದಕ್ಕಾಗಿ ಮಾರಭೂಪಾಲ ಬಹಳ ಸಂತೋಷಪಟ್ಟನು. ಜನಗಳಿಗೆ ಬೇಕು ಬೇಕಾದುದನ್ನು ಕೊಟ್ಟನು. ಆ ರಾಜದಂಪತಿಗಳು ತಮ್ಮ ಮಗನನ್ನು ಎಂದಿಗೆ ಕಂಡೇವೊ, ಎತ್ತಿ ಮುದ್ದಾಡೇವೋ, ಕೈಹಿಡಿದು ಆಡಿಸಿಯೇವೋ ಎಂದು ಕನಸು ಕಾಣತೊಡಗಿದರು. ಹೀಗೆಯೇ ಆರುತಿಂಗಳು ಕಳೆಯಿತು.

ಕಾಶ್ಮೀರ ದೇಶದ ಪಕ್ಕದಲ್ಲಿ ಚಿತ್ರಕಲ್ಲುದುರ್ಗ ಎಂಬುದು ಮತ್ತೊಂದು ರಾಜ್ಯ. ಆ ರಾಜ್ಯದಲ್ಲಿ ಇದ್ದಕ್ಕಿದ್ದ ಹಾಗೆಯೆ ಬಹುದುಷ್ಟವಾದ ಹುಲಿಯೊಂದು ಕಾಣಿಸಿಕೊಂಡಿತು. ಅದು ಆ ದೇಶದ ದನಕರುಗಳನ್ನು ನಾಶಮಾಡಿತು. ಜನರನ್ನು ಹಿಡಿದು ತಿಂದಿತು. ಮಕ್ಕಳನ್ನು ಅಪಹರಿಸಿತು. ಈ ದುಷ್ಟ ಹುಲಿಯ ಕೋಟಲೆ ಚಿತ್ರಕಲ್ಲುದುರ್ಗದ ರಾಜನಿಗೆ ತಿಳಿಯಿತು. ಅವನು ಕೂಡಲೆ ಜನರಿಗೆ ಕಂಟಕವಾದ ಆ ಹುಲಿಯನ್ನು ಕೊಲ್ಲಲು ತನ್ನ ಸೈನ್ಯ ಕಳಿಸಿದನು. ಆದರೆ ಆ ಹುಲಿ ಕಾಡಿನಲ್ಲಿ, ಬೆಟ್ಟದಲ್ಲಿ ಅವಿತಿದ್ದು ಸೈನಿಕರನ್ನೇ ಮುಗಿಸಿತು. ರಾಜ ತನ್ನಲ್ಲಿದ್ದ ಒಳ್ಳೊಳ್ಳೆಯ ಬಿಲ್ಲುಗಾರರನ್ನು, ಶೂರರನ್ನು ಹುಲಿ ಬೇಟೆಗೆ ಕಳಿಸಿದನು. ಅವರೆಲ್ಲರೂ ಹುಲಿ ಬಾಯಿಗೆ ತುತ್ತಾದರು. ಜನರು ಕಂಗೆಟ್ಟರು. ಅವರ ಪರಿಸ್ಥಿತಿ ಮನೆಯಿಂದ ಹೊರಗೆ ಬರದಂತಾಯಿತು. ಕಡೆಗೆ ಆ ದುಷ್ಟ ಹುಲಿ ಊರೂರಿಗೇ ಬರಲಾರಂಭಿಸಿತು. ರಾಜ ದಿಕ್ಕು ಕಾಣದಾದ. ಅವನ ಯಾವ ಉಪಾಯವೂ ಫಲಿಸಲಿಲ್ಲ. ಯಾವ ತಂತ್ರವೂ ಫಲಕಾರಿಯಾಗಿ ಇರಲಿಲ್ಲ.

ಹುಲಿಯ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. ಚಿತ್ರಕಲ್ಲುದುರ್ಗದ ರಾಜ ತನ್ನ ಮಂತ್ರಿಮಾನ್ಯರನ್ನು ಕರೆದು ಸಭೆ ನಡೆಸಿದ. ಯಾವ ಪ್ರಯೋಜನವೂ ಆಗಲಿಲ್ಲ. ಕಡೆಗೆ ಬೇರೆ ದಾರಿ ಕಾಣದೆ “ಈ ದುಷ್ಟ ಹುಲಿಯನ್ನು ಕೊಂದು ಕುರುಹು ತಂದವರಿಗೆ ನನ್ನ ರಾಜ್ಯವನ್ನು ಕೊಡುತ್ತೇನೆ” ಎಂದು ಡಂಗುರ ಹಾಕಿಸಿದ. ಈ ವಿಚಾರ ಅಕ್ಕಪಕ್ಕದ ದೇಶಗಳಿಗೆ ತಲುಪಿತು. ಅನೇಕ ರಾಜಕುಮಾರರು ಈ ಹುಲಿಯನ್ನು ಕೊಲ್ಲಲು ಬಂದು ಅದರ ಬಾಯಿಗೆ ತುತ್ತಾದರು. ಈ ವಿಚಾರ ಕಾಶ್ಮೀರ ದೇಶವನ್ನೂ ತಲುಪಿತು. ಮಾರಭೂಪಾಲ ಇಂತಹ ದುಷ್ಟ ಹುಲಿಯನ್ನು ತಾನು ಕೊಲ್ಲುತ್ತೇನೆ ಎಂದು ನಿರ್ಧರಿಸಿದ. ಅವನಿಗೆ ಅರ್ಧರಾಜ್ಯಕ್ಕಿಂತ ಜನರಿಗೆ ಆಗುತ್ತಿರುವ ಕಷ್ಟ ನಿವಾರಿಸಬೇಕು; ಆ ಹುಲಿಯ ಬಾಯಿಗೆ ತುತ್ತಾಗುತ್ತಿರುವ ಪಶು ಪ್ರಾಣಿಗಳನ್ನು ರಕ್ಷಿಸಬೇಕು ಎಂಬುದು ಮುಖ್ಯವಾಗಿತ್ತು.

ತಾನು ಚಿತ್ರಕಲ್ಲುದುರ್ಗದ ದುಷ್ಟಹುಲಿಯ ಬೇಟೆಗೆ ಹೋಗುವುದಾಗಿ ಮಾರಭೂಪಾಲ ಮಂತ್ರಿಮಾನ್ಯರಿಗೆ ಹೇಳಿ ತಾನು ಹಿಂತಿರುಗುವವರೆಗೆ ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಹೇಳಿದ. ತನ್ನ ಗಂಡ ಹುಲಿಯ ಬೇಟೆಗೆ ಹೋಗುವ ವಿಚಾರ ಕೇಳಿ ಆರು ತಿಂಗಳ ಗರ್ಭಿಣಿಯಾದ ಬನವಂತಾದೇವಿಗೆ ಏನೋ ಆತಂಕ. ಆದರೆ ಶೂರನಾದ ಮಾರಭೂಪಾಲನನ್ನು ತಡೆಯುವುದು ಹೇಗೆ? ‘ನಮಗೆ ಮಗ ಹುಟ್ಟುವ ಈ ಸಂದರ್ಭದಲ್ಲಿ ನೀವು ಹುಲಿ ಬೇಟೆಗೆ ಹೋಗುವುದು ಸರಿಯೆ?’ ಎಂದು ಗಂಡನಲ್ಲಿ ಮಾತನಾಡಿದಳು. ತನ್ನ ಮನದ ಆತಂಕವನ್ನು ಹೇಳಿದಳು. ಮಾರಭೂಪಾಲ ಆ ಹುಲಿ ಪ್ರಜಾಕಂಟಕವಾಗಿದೆ. ಅದನ್ನು ಯಾರೂ ಕೊಲ್ಲಲಾರದೆ ಹೋಗಿದ್ದಾರೆ. ಪ್ರಜೆಗಳ ಕ್ಷೇಮ ನೋಡಬೇಕಾದುದು ರಾಜನ ಕರ್ತವ್ಯ. ಅಲ್ಲದೆ ಅಂತಹ ದುಷ್ಟ ಹುಲಿಯನ್ನು ಕೊಂದ ಕೀರ್ತಿಯೂ ಬರುತ್ತದೆ ಎಂದು ವಿಧವಿಧವಾಗಿ ಹೇಲಿ ಬನವಂತಾದೇವಿಯನ್ನು ಒಪ್ಪಿಸಿದನು. ಅವಳು ನಗುಮುಖದಿಂದ “ಹೋಗಿ ಬನ್ನಿ. ಹುಲಿಯನ್ನು ಕೊಂದು ಜನರ ಕಷ್ಟ ಪರಿಹಾರ ಮಾಡಿ ಬನ್ನಿ” ಎಂದು ಮಾರಭೂಪಾಲನನ್ನು ಕಳಿಸಿಕೊಟ್ಟಳು.

ದೂರ ಪ್ರಯಾಣ, ಅದರಲ್ಲೂ ದುಷ್ಟ ಹುಲಿಯ ಬೇಟೆ, ಸಾಕಷ್ಟು ಮಂದಿ ಮಾರ್ಬಲವನ್ನು ಕರೆದುಕೊಂಡು ಹೋಗುವಂತೆ ಮಂತ್ರಿ ಹೇಳಿದನು. ಮಾರಭೂಪಾಲ ಒಪ್ಪಲಿಲ್ಲ. ಮಂತ್ರಿ, ನಾವೇನು ಪರರಾಜರ ಮೇಲೆ ಯುದ್ಧಕ್ಕೆ ಹೋಗುತ್ತಿಲ್ಲವಲ್ಲ. ವನಯಾತ್ರೆಗೂ ಹೋಗುತ್ತಿಲ್ಲ. ಒಂದು ಹುಲಿ ಕೊಲ್ಲಲು ಈ ಮಂದಿ ಮಾರ್ಬಲವೇಕೆ? ಬೇಡ ಎಂದು ಹೇಳಿದನು. ತನ್ನ ಆಪ್ತ ಸೇವಕನನ್ನು ಮಾತ್ರ ಜೊತೆಗೆ ಕರೆದುಕೊಂಡನು. ಅವರ ಪ್ರಯಾಣಕ್ಕೆ ಬೇಕಾದ ರೊಟ್ಟಿ ಬುತ್ತಿಗಳು ಸಿದ್ದವಾದವು. ಇಬ್ಬರೂ ಕುದುರೆ ಹತ್ತಿ ಚಿತ್ರಕಲ್ಲುದುರ್ಗದತ್ತ ಪ್ರಯಾಣ ಹೊರಟರು.

ಮಾರಭೂಪಾಲ ಮೂರು ಹಗಲು ಮೂರು ರಾತ್ರಿ ಪ್ರಯಾಣಮಾಡಿ ಚಿತ್ರಕಲ್ಲುದುರ್ಗದ ಸಮೀಪ ಬಂದು ತಲುಪಿದನು. ಅಲ್ಲೊಂದು ಅರಳಿಮರ ಮತ್ತು ಕಲ್ಯಾಣಿ ಇದ್ದವು. ಅಲ್ಲಿಯೆ ಬುತ್ತಿ ಉಂಡು ನೀರು ಕುಡಿದರು. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮುಂದೆ ಹೊರಟರು. ಆಗಲೇ ಸಾಯಂಕಾಲವಾಗುತ್ತಿತ್ತು. ಸೂರ್ಯನು ಕೆಂಪಗೆ ಪಶ್ಚಿಮಕ್ಕೆ ಇಳಿಯುತ್ತಿದ್ದನು. ಮಾರಭೂಪಾಲನ ಕುದುರೆ ಇದ್ದಕ್ಕಿದ್ದ ಹಾಗೆಯೇ ನಿಂತಿತು. ಒಳ್ಳೆಯ ಬೇಟೆಗಾರನಾದ ಅವನು ಇಲ್ಲೆಲ್ಲೋ ಹುಲಿಯಿದೆ ಎಂಬುದನ್ನು ಅರಿತನು. ಕೂಡಲೆ ಕುದುರೆಯಿಂದಿಳುದು ಅದನ್ನು ತನ್ನ ಸೇವಕನಿಗೆ ಕೊಟ್ಟು ಅಲ್ಲೇ ನಿಲ್ಲುವಂತೆ ಹೇಳಿದನು. ಬಿಲ್ಲುಬಾಣ ಸಿದ್ಧಮಾಡಿಕೊಂಡು ನಿಧಾನವಾಗಿ ಮುಂದುವರಿದನು.

ಆ ಕಾಡಿನಲ್ಲೊಂದು ಕಾಡಿಸೀಗೆ ಮೆಳೆ. ಅದು ವಿಶಾಲವಾಗಿ ಹಬ್ಬಿದೆ. ಅದರ ಅಡಿಯಲ್ಲಿ ಆ ದುಷ್ಟ ಹುಲಿ ಮಲಗಿ ನಿದ್ರಿಸುತ್ತಿದೆ. ಮಾರಭೂಪಾಲನು ಕೂಡಲೆ ಬಿಲ್ಲನ್ನು ಎಳೆದು ಬಾಣ ಹೂಡಿದನು. ಇನ್ನೇನು ಬಾಣ ಬಿಡಬೇಕು ಅಷ್ಟರಲ್ಲಿ “ಛೇ ಎಂದೂ ಇಲ್ಲ. ಎಂದೇಕೆ ನಾನು ಮಲಗಿದ ಹುಲಿಯನ್ನು ಹೊಡೆಯುತ್ತಿದ್ದೇನೆ. ಇದು ಕ್ಷತ್ರೀಯ ಧರ್ಮವಲ್ಲ, ಶೂರನ ಲಕ್ಷಣವಲ್ಲ. ಆದುದರಿಂದ ಹುಲಿಯನ್ನು ಎಬ್ಬಿಸಿಯೇ ಬಾಣ ಪ್ರಯೋಗ ಮಾಡುತ್ತೇನೆ” ಎಂದು ಒಮ್ಮೆ ಕಾಕುಹೊಡೆದು ಕೂಗಿದನು. ಮಲಗಿದ್ದ ಹುಲಿ ಎದ್ದುನಿಂತು ಸುತ್ತಲೂ ನೋಡಿತು. ಎದುರಿಗೆ ಬಿಲ್ಲು ಬಾಣ ಹಿಡಿದ ಮಾರಭೂಪಾಲ, ಅದು ಒಮ್ಮೆ ಘರ್ಜಿಸಿ ಅವನತ್ತ ನೆಗೆಯಿತು. ಮಾರಭೂಪಾಲ ಬಾಣ ಪ್ರಯೋಗ ಮಾಡಿದ. ಆದರೆ ಅದು ಹುಲಿಗೆ ತಾಕದೆ ಗುರಿ ತಪ್ಪಿತು. ಹುಲಿ ಒಂದೇ ನೆಗೆತಕ್ಕೆ ಹಾರಿ ಮಾರಭೂಪಾಲನನ್ನು ನೆಲದ ಮೇಲೆ ಕೆಡವಿ ಅವನ ದೇಹವನ್ನು ಸಿಗಿದು ಹಾಕಿ ಕಾಡಿನೊಳಗೆ ಹೊರಟು ಹೋಯಿತು.

ಎಷ್ಟು ಹೊತ್ತಾದರೂ ದೊರೆ ಬರದಿದ್ದುದನ್ನು ಕಂಡು ಸೇವಕ ಅಲ್ಲಿಯೆ ಕುದುರೆಗಳನ್ನು ಕಟ್ಟಿ ಮುಂದೆ ಬಂದನು, ಕಾಡುಸೀಗೆ ಮೆಳೆಯ ಹತ್ತಿರ ದೇಹ ಛಿದ್ರಛಿದ್ರವಾಗಿ ಬಿದ್ದಿದ್ದ ಮಾರಭೂಪಾಲನನ್ನು ಕಂಡನು, ಅವನಿಗೆ ದಿಕ್ಕೇ ತೋಚದಂತಾಯಿತು. ಅಲ್ಲೆಲ್ಲಾ ಚಲ್ಲಾಡಿದ್ದ ರಾಜನ ಕಿರೀಟ, ಬಿಲ್ಲು ಬಾಣಗಳನ್ನು ಎತ್ತಿಕೊಂಡು ಕುದುರೆಯಿದ್ದಲ್ಲಿಗೆ ಓಡಿಬಂದನು. ಕುದುರೆ ಹತ್ತಿ ಧಾರಾಪುರದ ಕಡೆಗೆ ಓಡಿದನು.

ಹುಲಿ ಬೇಟೆಗೆ ಹೋದ ಮಾರಭೂಪಾಲ ಅದರ ಬಾಯಿಗೆ ತುತ್ತಾಗಿ ಸತ್ತ ವಿಚಾರ ಕೇಳಿ ಕಾಶ್ಮೀರ ದೇಶದ ಪ್ರಜೆಗಳಿಗೆ ದುಃಖ ಆವರಿಸಿತು. ಧಾರಾಪುರ ಕಳೆಗುಂದಿದ ಚಂದ್ರನಂತಾಯಿತು. ತನ್ನ ಗಂಡನ ಮರಣದ ವಾರ್ತೆಯನ್ನು ಕೇಳಿದ ಬನವಂತಾದೇವಿ ಅಗ್ನಿ ಪ್ರವೇಶಕ್ಕೆ ಸಿದ್ಧ ಮಾಡುವಂತೆ ಪರಿಜನರಿಗೆ ಹೇಳಿದಳು. ಈ ಸುದ್ದಿ ತಿಳಿದ ಮಂತ್ರಿ ಪ್ರಧಾನರು ಮತ್ತು ಸೇನಾಪತಿಗಳು ಅರಮನೆಗೆ ಓಡಿಬಂದರು. ಬನವಂತಾದೇವಿಯನ್ನು ಕುರಿತು “ತಾಯೆ, ದೊರೆಗಳೇನೋ ಮಡಿದರು. ರಾಜ್ಯದ ಉತ್ತರಾಧಿಕಾರ್ ಇನ್ನೂ ನಿಮ್ಮ ಗರ್ಭದಲ್ಲಿರುವವನು, ಇಂತಹ ಸಮಯದಲ್ಲಿ ನೀವು ಅಗ್ನಿ ಪ್ರವೇಶ ಮಾಡಬಹುದೆ? ದೇಶವನ್ನು ಅನಾಯಕ ಮಾಡಬಹುದೆ? ಇದು ಧರ್ಮ ಸಮ್ಮತವಲ್ಲ. ನೀವು ಉಳಿಯಬೇಕು. ಮಾರಭೂಪಾಲರ ವಂಶಜ್ಯೋತಿ ಅಳಿಯದಂತೆ ನೋಡಿಕೊಳ್ಳಬೇಕು” ಎಂಬು ಪರಿಪರಿಯಾಗಿ ಪ್ರಾರ್ಥಿಸಿದರು. ಮಂತ್ರಿಮಾನ್ಯರ ಮತ್ತು ಪ್ರಜೆಗಳ ಮಾತಿಗೆ ಮನ್ನಣೆ ಕೊಟ್ಟು ಬನವಂತಾದೇವಿ ತನ್ನ ಅಗ್ನಿಪ್ರವೇಶವನ್ನು ನಿಲ್ಲಿಸಿದಳು. ತಾನೇ ಕಾಶ್ಮೀರ ದೇಶದ ಆಡಳಿತ ಸೂತ್ರವನ್ನು ಹಿಡಿದಳು.

ಬನವಂತಾದೇವಿ ತನ್ನ ಪತಿ ಮಾರಭೂಪಾಲನ ಹೆಸರಿನೆಲ್ಲಿ ರಾಜ್ಯವಾಳತೊಡಗಿದಳು. ಅವನು ಹುಲಿಬೇಟೆಗೆ ಹೋಗುವಾಗ ಆರು ತಿಂಗಳು ಗರ್ಭಿಣಿಯಾಗಿದ್ದ ಬನವಂತಾದೇವಿಗೆ ಈಗ ಒಂಭತ್ತು ತಿಂಗಳು ತುಂಬಿದೆ. ಅವಳು ಶುಭ ಮುಹೂರ್ತದಲ್ಲಿ ಗಂಡುಮಗುವಿಗೆ ಜನ್ಮವಿತ್ತಳು. ತಮ್ಮ ಮುಂದಿನ ರಾಜನು ಹುಟ್ಟಿದ ಸಮಾಚಾರ ಕೇಳಿ ಜನರು ಆನಂದಪಟ್ಟರು. ಮಂತ್ರಿ ಪ್ರಧಾನಿಗಳು ಆ ಮಗುವಿಗೆ ಗೌರವ ಸಲ್ಲಿಸಿದರು. ಇಡೀ ದೇಶ ಆನಂದದಿಂದ ತುಂಬಿಹೋಯಿತು. ಹಿರಿಯರು ಆ ಮಗುವಿಗೆ ತಮ್ಮ ಕುಲನಾಮದಂತೆ ಕರಿರಾಯ ಎಂದು ಹೆಸರಿಟ್ಟರು. ಅವರು ಆನೆಗುಲದ ಅರಸರು.

 

[1] ಚಂದ್ರವಳ್ಳಿ, ಕರಿಭಂಟನ ಐತಿಹ್ಯ, ಎಸ್. ವಿ. ಗೌಡೂರ್.

[2] ಕರ್ನಾಟಕ ಇತಿಹಾಸ ದರ್ಶನ, ಡಾ. ಎಂ. ವಿ. ಕೃಷ್ಣರಾವ್, ಪುಟ ೬೫.

[3] ಚಂದ್ರವಳ್ಳಿ – ಕರಿಭಂಟನ ಐತಿಹ್ಯ, ಎಸ್. ವಿ. ಗೌಡೂರ್.

[4] ಕರ್ನಾಟಕ ಇತಿಹಾಸ ದರ್ಶನ, ಡಾ. ಎಂ. ವಿ. ಕೃಷ್ಣಮೂರ್ತಿ, ಪುಟ ೬೫.

[5] ಚಂದ್ರವಳ್ಳಿ, ಕರಿಭಂಟನ ಐತಿಹ್ಯ, ಎಸ್. ವಿ. ಗೌಡೂರ್.

[6] ಅದೇ, ಪುಟ ೪.

[7] ಎಫಿಗ್ರಾಫಿಕಾ ಕರ್ನಾಟಕ, ಸಂಪು ೬, ೧೯೭೭, ೩೧೪.

12 ಎಫಿಗ್ರಾಫಿಕಾ ಕರ್ನಾಟಕ, ಸಂಪು ೬, ೧೯೭೭, ೩೧೪.

[8] ಕರ್ನಾಟಕ ಇತಿಹಾಸ ದರ್ಶನ, ಡಾ. ಎಂ. ವಿ. ಕೃಷ್ಣರಾವ್, ಪುಟ ೬೬.

[9] ಅದೇ ಪುಟ ೬೬.

[10] ಕಥಮೃತ, ಡಾ. ಎ. ಆರ್. ಕೃಷ್ಣ ಶಾಸ್ತ್ರಿ, ಪುಟ xiix

[11] ಕರ್ನಾಟಕ ಇತಿಹಾಸ ದರ್ಶನ, ಡಾ. ಎಂ. ವಿ. ಕೃಷ್ಣರಾವ್, ಪುಟ ೬೬.