ಜಗತ್ತಿನ ಸಾಹಿತ್ಯದಲ್ಲಿ ನಳದಮಂತಿಯರ ಕಥೆ ಪಡೆದುಕೊಂಡಿರುವ ಜನಪ್ರಿಯತೆಯ ಬಗ್ಗೆ ವಿದ್ವಾಂಸರಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ದಿಸೆಯಲ್ಲಿ ಕನಕದಾಸನ ನಳಚರಿತ್ರೆಯ ಸಂಪಾದಕರೂ ಆದ ಕನ್ನಡದ ಮಹಾನ್ ಲೇಖಕರಲ್ಲೊಬ್ಬರೂ ಆದ ಡಾ. ದೇ. ಜವರೇಗೌಡರ ಪೀಠಿಕೆ ಗಮನಾರ್ಹವಾದುದಾಗಿದೆ. ನಳನ ಕಥೆ ಮೂಲತಹ ಜನಪದ ಮೂಲದಿಂದ ಶಿಷ್ಟ ಸಾಹಿತ್ಯ ಪ್ರವೇಶ ಮಾಡಿದೆ ಎಂಬುದನ್ನು ನಿರಾಕರಿಸಲಾಗದಂತೆ ದೇಜಗೌ ಪ್ರತಿಪಾದಿಸಿದ್ದಾರೆ. ಆದರೆ ಕೆಂಪಣ್ಣಗೌಡನ ನಳಚರಿತ್ರೆಯನ್ನವರು ಕನಕದಾಸನ ನಳಚರಿತ್ರೆಯೊಂದಿಗೆ ಹೋಲಿಸಿ ನೋಡಿಲ್ಲ. ಕನ್ನಡದಲ್ಲಿ ನಳನನ್ನು ಕುರಿತ ಮೊದಲ ಶಿಷ್ಟಕೃತಿ ಚೌಂಡರಸನ ನಳಚಂಪು. ಕನಕದಾಸನು ನಳಚರಿತ್ರೆಯನ್ನು ಬಹುವಾಗಿ ಮಹಾಭಾರತ ಮುಂತಾದ ಶಿಷ್ಟ ಮೂಲಾಗಳನ್ನು ಆದರಿಸಿ ಆ ದಿಸೆಯಲ್ಲಿ ಕಾವ್ಯವನ್ನು ನಡೆಸಿಕೊಂಡು ಹೋಗಿದ್ದಾನೆ. ಕೆಂಪಣ್ಣಗೌಡ ಜನಪದ ಮೂಲವನ್ನು ಪ್ರಧಾನವಾಗಿಟ್ಟುಕೊಂಡಿದ್ದಾನೆ. ಆದುದರಿಂದಲೇ ತನ್ನ ಕಾವ್ಯದುದ್ದಕ್ಕೂ ಜನಪದ ಸಂಪ್ರದಾಯವನ್ನೇ ಅನುಸರಿಸಿಕೊಂಡು ಹೋಗಿದ್ದಾನೆ. ಕವಿ ತಾನು ಓದುವ ಕೆಂಪಯ್ಯನ ಮಗ ಎಂದು ಹೇಳಿಕೊಂಡಿದ್ದಾನೆ. ಆದುದರಿಂದ ಈತನ ತಂದೆ ಪ್ರಾಚೀನ ಕಾವ್ಯಗಳನ್ನು ಓದುವ ಗಮಕ ಸಂಪ್ರದಾಯಕ್ಕೆ ಸೇರಿದವನು. ಈ ಪದ್ಧತಿ ಈಗಲೂ ನಮ್ಮ ಗ್ರಾಮಾಂತರಗಳಲ್ಲಿ ಉಳಿದುಕೊಂಡು ಬಂದಿದೆ. ಕನಕದಾಸ ಮತ್ತು ಕೆಂಪಣ್ಣಗೌಡ ಸಮಕಾಲೀನರೆಂಬುದನ್ನು ಈ ಹಿಂದೆ ಕವಿ ಕಾವ್ಯ ವಿಚಾರ ಹೇಳುವಾಗ ಹೇಳಿದೆ. ಕೆಂಪಣ್ಣಗೌದನಿಗೂ ಕನಕದಾಸನಿಗೂ ಕಥೆಯ ಆರಂಭದಿಂದ ಮುಕ್ತಾಯದವರೆಗೆ ಅನೇಕ ವ್ಯತ್ಯಾಸಗಳನ್ನು ಕಾಣಬಹುದು. ಇಬ್ಬರೂ ಗ್ರಾಮಾಂತರದಿಂದ ಬಂದವರಾದರು ಕನಕದಾಸರಲ್ಲಿ ಕಂಡುಬರುವ ಶಿಷ್ಟ ಪರವಾದ ವಿವರ ಕೆಂಪಣ್ಣಗೌಡನಲ್ಲಿ ಕಂಡು ಬರುವುದಿಲ್ಲ. ಹಾಗೆಯೆ ಕೆಂಪಣ್ಣಗೌಡನಲ್ಲಿ ಬರುವ ಜಾನಪದ ವಿವರ ಕನಕದಾಸನಲ್ಲಿ ಕಂಡುಬರುವುದಿಲ್ಲ. ಇದಕ್ಕೆ ಕಾರಣ ಕನಕದಾಸ ರಾಜಸ್ಥಾನ ಮತ್ತು ಪಂಡಿತರನ್ನು ಕಂಡವನು. ಅವರಿಂದ ಮನ್ನಣೆ ಪಡೆಯಲು ಹೋರಾಡಿದವನು. ಕೆಂಪಣ್ಣಗೌಡನಿಗೆ ಯಾರನ್ನೂ ಮೆಚ್ಚಿಸುವ ಅಗತ್ಯವಿರಲಿಲ್ಲ.

ಕನಕದಾಸ ನಳಚರಿತ್ರೆಯಲ್ಲಿ ರೋಮಷಮುನಿ ಅನೇಕ ಮುನಿಗಳೊಂದಿಗೆ ವನವಾಸದಲ್ಲಿದ್ದ ಪಾಂಡವರ್ ಹತ್ತಿರ ಬರುತ್ತಾನೆ.

ಚೈವನ ಗೌತಮ ಕಪಿಲ ಬೃಗು ಭಾ
ರ್ಗವ ಭರದ್ವಾಜಾತ್ರಿ ಕೌಶಿಕ
ಪವನಭಕ್ಷಣ ವಾಮದೇವ ಮರೀಚಿ ಮೈತ್ರೇಯ
ಶ್ರವತಿ ಕಣ್ವಾಂಗಿರಸ ಶುಖ ಗಾ
ಲವ ಪರಾಶರ ದಾಲ್ಕ್ಯ ವರಮುನಿ
ನಿವಹದೊಡನೆಯ್ತಂದನಾ ರೋಮಷ ಮಹಾಮುನಿಪ.

ಕೆಂಪಣ್ಣಗೌಡನ ನಳಚರಿತ್ರೆಯಲ್ಲಿ ಬೃಹದಶ್ವಮುನಿ ತನ್ನ ಶಿಷ್ಯರೊಂದಿಗೆ ಪಾಂಡವರಲ್ಲಿಗೆ ಹೀಗೆ ಬರುತ್ತಾನೆ.

ಕರದೊಳಗೆ ಜಪಮಾಲೆ ಭರವಸದಿಪಿಡಿದು
ಹರುಷದಿಂ ಬೃಹದಶ್ವಮುನಿಯು ದಯದಿ

ಬಂದ ಮುನಿಗಳನ್ನು ಧರ್ಮರಾಯ ಸ್ವಾಗತಿಸಿ ನಮಸ್ಕರಿಸಿದ. ಆಗ ಕೆಂಪಣ್ಣಗೌಡನ ಬೃಹದಶ್ವಮುನಿಯು ಧರ್ಮರಾಯನನ್ನು ನೋಡಿ ಪರಿಣಾಮವೆ? ಎಂದು ಬೆಸಗೊಳ್ಳುತ್ತಾನೆ. ಆಗ ಧರ್ಮರಾಯ

ಕೌರವೇಶ್ವರಯೆನ್ನ ಸಕಲ ಭಾಗ್ಯವನೆಲ್ಲ
ಉರ್ವಿಯೊಳೆಳಕೊಂಡ ಸರ್ವೇಸ ಕೇಳೊ
ಹೋಗಿನ್ನು ಅವನೊಳು ಹೋರಾಟವೇಕೆಂದು
ಭಾಗ್ಯ ಸರ್ವವನೆಲ್ಲ ತೊರೆದಿನ್ನು ಬಂದೊ

ಮುಂದೆ ಅರಣ್ಯವಾಸದ ಅನುಕೂಲ ಅನಾನುಕೂಲಗಳನ್ನು ಕುರಿತು ಮಾತಾಡುವಾಗ ಸಮಾದಾನರೂಪವಾಗಿ ಮುನಿ

ಕೆಲವು ದಿನ ಸಂಪದವು ಕೆಲವು ದಿನ ಕಷ್ಟಗಳು
ಹಲವು ದ್ವಂದ್ವಗಳಾಗಿರುತಿಹವು ಪ್ರಜೆಗೆ

ಎಂದು ಹೇಳುತ್ತಾನೆ. ಆದರೂ ಧರ್ಮರಾಯ ತಮ್ಮ ಅನಾನುಕೂಲಗಳನ್ನು ಮುಂದುವರಿಸಿದಾಗ

ಕೃತ ಯುಗದೊಳಗೆ ಒಬ್ಬ ನಳಚಕ್ರ
ವರ್ತಿಯೆಂಬುವನು
ಅರ್ತಿಯಿಂದಲಿ ರಾಜ್ಯವ
ಸೋತು ಕಷ್ಟಪಡುವ ಕಥೆಯ ಕೇಳಿನ್ನು

ಎಂದು ಮೊದಲು ಧರ್ಮರಾಯನನ್ನು ಸಮಾಧಾನ ಪಡಿಸಲು ನಳನ ಕಥೆಯನ್ನು ಸಂಕ್ಷಿಪ್ತವಾಗಿ ಹೇಳುತ್ತಾನೆ. ಕುತೂಹಲಗೊಂಡ ಧರ್ಮರಾಯ

ಇಂದು ಧರರೂಪ ಮುನಿಪಗೆ
ಮುಂದಣ ಕಥೆಯನ್ನು ಸಕಲ ವಿಸ್ತರದಿಂದಲಿ
ಮುಂದೆ ಬಾಳಿದುದನೆಲ್ಲವ
ಚಂದದಿಂದ ಯನಗೆ ಪೇಳಿ ಮನ್ನಣೆಯಿಂದಲಿ

ಎಂದು ಕೇಳಿಕೊಂಡಾಗ ಬೃಹದಶ್ವಮುನಿ ನಳಚರಿತ್ರೆಯ ಕಥೆಯನ್ನು ವಿಸ್ತರಿಸಿ ಹೇಳಿದನಂತೆ. ಕನಕದಾಸನ ಧರ್ಮರಾಯ.

ಧಾರುಣಿಯ ನೆರೆ ಸೋತು ಅನುಜರು
ವಾರಿಜಾನನೆ ಸಹಿತ ಬಂದೀ
ಘೋರಕಾನನದೊಳಗೆ ಗಿರಿಗಹ್ವರದ ಮಧ್ಯದಲಿ
ಸೇರಿ ಹೃತ ಸುಖರಾಗಿ ಬಳಲಿದ
ರಾರು ಧರೆಯೊಳಗೆನ್ನವೊಲು ಭವ
ದೂರಮುನಿ ಕುಲತಿಲಕ ಹೇಳೆಂದರಸ ಬಿಸುಸುಯ್ದ

ಎಂದು ಕಾಡಿನ ಜೀವನಕ್ಕೆ ಬಿಸುಸುಯ್ಯುತ್ತಾನೆ. ಕೆಂಪಣ್ಣಗೌಡನ ಧರ್ಮರಾಯ ಈ ರಾಜ್ಯಕೋಶ ಐಶ್ವರ್ಯದಿಂದ ಇಷ್ಟೆಲ್ಲ ಕೋಟಲೆ ಹಾಳಾಗಿ ಹೋಗಲಿ ಎಂದು ಕಾಡಿಗೆ ಬಂದೆವೆಂದು ನೆಮ್ಮದಿ ಸೂಚಿಸುತ್ತಾನೆ. ಆದರೆ ನಗರದ ಅರಮನೆಯ ಸವಲತ್ತುಗಳು ಹೋದುವಲ್ಲ ಎಂಬ ಕೊರಗು ಕೆಂಪಣ್ಣಗೌಡನ ಧರ್ಮರಾಯನಿಗೂ ಇದೆ.

ಭೀಮರಾಯನಿಗೆ ಮಕ್ಕಳಾದ ಬಗೆಗೆ ಕೂಡ ಈ ಇಬ್ಬರು ಕವಿಗಳಲ್ಲಿ ಬಹಳ ಅಂತರವಿದೆ. ಕನಕದಾಸನ ಭೀಮರಾಯ “ಸುತರಿಲ್ಲಬೆಂದುಮ್ಮಳಿಸುತಿರೆ ಮನದಲ್ಲಿ ಆ ಕ್ಷಣ ಬಂದನಾ ದಮನಾಖ್ಯ ಮುನಿವರನು”. ಬಂದ ಮುನಿ ಭೀಮರಾಯನನ್ನು ಕುರಿತು “ಪುತ್ರನ ಯಾಗವನು ಮಾಡರಸ ತಪ್ಪದು ಪುತ್ರಲಾಭ” ಎಂದು ಹೇಳಿ “ಶುಭ ದಿನಸುಲಗ್ನದಲ್ಲಿ ಯಾಗವನು ಪೂರೈಸಿದನು ಸುರನರರು ತಣಿವಂತೆ” ಆಗ ತರುಣಿಗಾದುದು ಗರ್ಭ. ಮುಂದೆ “ನೃಪನರಸಿ ಪಡೆದಳು ತನುಜೆಯೊರ್ವಳ ಲೋಕ ಸುಂದರಿಯ” ಕೆಂಪಣ್ಣಗೌಡ ಭೀಮರಾಯ ಸಂತತಿ ಇಲ್ಲದಿರಲು ಜಪತಪ ಸಕಲ ದಾನವ ಅಪರಿಮಿತವ ಮಾಡಿದನು ತಾನಾಗ. ಏನೇನು ಮಾಡಿದರೂ ಸಂತಾನವಾಗದಿರಲು “ತರುಣಿಯು ತಾನು ತಪಸಿಗೆ ಹೊರಟರು. ನಾರು ಮಡಿಯನು ಉಟ್ಟು ಸಾರಜಡೆಯನು ಕಟ್ಟಿ ವಿಭೂತಿಯನು ಶರೀರದೊಳು ಧರಿಸಿ ಅರಣ್ಯ ಸೇರಿದರು. ಅಲ್ಲಿ ಅವರು ತಪೋನಿರತರಾಗಿದ್ದಾಗ ಆಕಸ್ಮಿಕವಾಗಿ ಬಂದ ದಮನಾಖ್ಯಮುನಿ ಚರಣಿಕೆ ನಮಿಸಿದ ಭೀಮರಾಯ ದಂಪತಿಗಳನ್ನು “ಯಾವಸ್ಥಳದಿಂದ ಬಂದಿರಿ ಈ ವನದೊಳು ಕಾಣೆ ನಿಮ್ಮನು, ಋಷಿವೇಷದಲ್ಲಿ ಭಾವೆಯ ನೊಡಗೊಂಡು ಬಂದ ಕಾರಣವೇ” ನೆಂದು ಕೇಳಿದಾಗ ಅವರು ತಮ್ಮ ಪ್ರವರವನು ಹೇಳಿದರು. ಆಗ ದಮನಾಖ್ಯಮುನಿ “ಬ್ರಹ್ಮದೇವನನ್ನು ಕುರಿತು ತಪಮಾಡೀಗಲೆ ಸಮ್ಮತದಿ ನಿನಗೆ ಸುತರ ಕೊಡುವ” ಎಂದು ಹೇಳಿಹೋದ. ಅವರಿಬ್ಬರೂ ಮುನಿಯ ಆದೇಶದಂತೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದುದರ ಫಲವಾಗಿ ಅವಳಿಜವಳಿ ಮಕ್ಕಳಾದರು. ಮೊದಲು ಬೆಳಕು ಕಂಡವ ಮಗ ಅನಂತರ ಮಗಳು ಅವರಿಗೆ ದಮ, ದಮಯಂತಿ ಎಂದು ಹೆಸರಾಯಿತು. ಕೆಂಪಣ್ಣಗೌಡನಲ್ಲಿ ಭೀಮರಾಯ ಮಕ್ಕಳನ್ನು ಪಡೆಯುವ ರೀತಿ ಅತ್ಯಂತ ಸಹಜವಾದುದಾಗಿದೆ. ಕನಕದಾಸನಲ್ಲಿ ಪವಾಡವಾಗಿದೆ.

ನಳದಮಯಂತಿಯರ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಕನಕದಾಸ ಮತ್ತು ಕೆಂಪಣ್ಣಗೌಡರಲ್ಲಿ ಅಪಾರ ವ್ಯತ್ಯಾಸವಿದೆ. ಕನಕದಾಸನ ದಮಯಂತಿ ಭೀಮ ನೃಪಾಲನೋಲಗದಲ್ಲಿ ಧರಣೀಪಾಲಕರ ಚರಿತ್ರ ಸಂಗ್ರಹದೊಳಿದ್ದಾಗ ನಳನೃಪನ.

ಶೀಲವನು ಸೌಂದರ್ಯ ವಿಭವ ವಿ
ಶಾಲಮತಿ ಲಾವಣ್ಯರೂಪುಗು
ಣಾಳಿಗಳ ವಿಸ್ತ್ರರಿಸಿಕೊಂಡಾಡಿದರು ಕವಿ ಜನರು.
ವನಜಮುಖಿಯಾವಾರ್ತೆಯೆಲ್ಲವ
ಮನವೊಲಿದು ಕೇಳಿದಳು ಹಿಗ್ಗುತ
ನೆನೆದುದಂತಃಕರಣ ಹೆಚ್ಚಿದ ಚಿತ್ತವೃತ್ತಿಯಲಿ
ನೆನೆದು ಬರೆದಳು ನಳನ ರೂಪವ
ನನುನಯದಿ ಚಿತ್ರದಲಿ ಮಿಗೆ ಸಂ
ಜನಿಸಿ ತವನಲಿ ಮೋಹವೆಲೆ ಧರಣೀಶ ಕೇಳೆಂದ

ಕೆಂಪಣ್ಣಗೌಡನಲ್ಲಿ ದಮಯಂತಿಗೆ ಹಂಸಬಂದು ಹೇಳುವವರೆಗೆ ನಳನ ಬಗ್ಗೆ ಏನೂ ತಿಳಿಯದು. ಹಾಗೆಯೆ ಹಂಸ ಹೇಳುವವರೆಗೂ ನಳನಿಗೂ ದಮಯಂತಿಯ ಬಗ್ಗೆ ಏನೂ ತಿಳಿಯದು.

ಒಂದು ದಿನ ನಳರಾಜನಿಗೆ ವಸಂತಕಾಲದ ವನವನ್ನು ನೋಡುವ ಆಸೆಯಾಯಿತು. ಅದರಂತೆ ತನ್ನ ಪರಿವಾರ ಸಮಸ್ತ, ಮಂತ್ರಿಮನ್ನೆಯರು, ಪಂಡಿತರೊಂದಿಗೆ ವನಕ್ಕೆ ಹೋದ. ಅಲ್ಲಿ ಆನಂದದಿಂದ ಸುತ್ತಿ ಆ ವನ ಸೌಂದರ್ಯ ನೋಡಿ ಕುಳಿತ ನಳನಿಗೆ ಈ ಸೌಂದರ್ಯಕ್ಕೆ ಕಾರಣವಾದ ವಸಂತನಪೂಜೆ ಮಾಡಬೇಕೆಂಬ ಆಸೆಯಾಯಿತು. ಆಗ ಅವನ ಪರಿವಾರದವರು ಪನ್ನಿರ ಕಲಸಿ ಚಂದನದ ಪ್ರತಿಮೆಯತಿದ್ದಿ ಚನ್ನಿಗನಾದ ವಸಂತ ದೇವನನ್ನು ಮಾಡಿದರು. ಶ್ರೀಪತಿಯ ಭಕ್ತನು ಆ ವಸಂತನ ಪೂಜೆಯ ಮಾಡಿ ಸಾಷ್ಟಾಂಗ ದಂಡ ಪ್ರಮಾಣದಿಂದೆರಗಿದನು” ಅಂತಹ ಸಮಯದಲ್ಲಿ

ಹಂಸ ಪಕ್ಷಿಗಳು ಬಂದವು ಅತಿಹರುಷದಿಂದಲಿ
ಕಂಸಾರಿ ಭಕ್ತನಾದ ನಳಚಕ್ರವರ್ತಿಯ ಬಳಿಗೆ

ಆಗ “ಎಲ್ಲಿಂದ ಬಂದವು ಈ ಹಂಸ ಪಕ್ಷಿಗಳು. ಇಲ್ಲಿಗೊಂದನು ಹಿಡಿದು ತರಬೇಕು” ಎಂದ ನಳರಾಜ. ಹಾಗಂದವನು ತಾನು ರಾಜನಾಗಿ ಕೂರದೆ ಮಂತ್ರಿ ಮನ್ನೆಯರು ಸಹಿತ ಓಡಾದಿ ಒಂದನ್ನು ಹಿಡಿದರು. ಆಗ ಆ ಹಂಸ ಪಕ್ಷಿಯು

ಕೇಳು ಭೂಪಾಲಕ ನಿಮಗೆ
ಪೇಳುವೆ ದಮಯಂತಿಯ ರೂಪವ
ಲಾಲಿಸಿ ಕೇಳಯ್ಯ ನೀನೀಗ ಓ ನಳರಾಜ
ನಾಳೆ ಅರಿವಾಗುವುದು ನಿಮಗಿನ್ನು

ಎಂದು ದಮಯಂತಿಯ ಗುಣಾತಿಶಯ, ಸೌಂದರ್ಯಗಳ ವರ್ಣನೆಯನ್ನು ವಿವರವಾಗಿ ಮಾಡಿ

ಸೂರಿಯ ಚಂದ್ರರ ಆಣೆಯಿನ್ನು
ಧಾರುಣಿ ದೇವಿಯರ ಮೇಲಾಣೆ
ನಾರಾಯಣಸ್ವಾಮಿ ಮೇಲಾಣೆ ಓ ನಳರಾಜ
ನಾರಿಯ ನಿನ್ನೊಶವ ಮಾಡುವೆನು ಎಂದಿತು

ಆಗ ನಳರಾಜ ದಮಯಂತಿ ಯಾರು? ಯಾರ ಮಗಳು ಎಂದು ಕೇಳಿದಾಗ ಹಂಸ ಪಕ್ಷಿಯು ಭೀಮರಾಯ ತಪಸ್ಸು ಮಾಡಿ ಮಕ್ಕಳನ್ನು ಪಡೆದ ಕಥೆಯನ್ನು ದಮಯಂತಿಯ ಗುಣ ಶೀಲಾದಿಗಳನ್ನು ನಳನಿಗೆ ಹೇಳುತ್ತದೆ. ಅವನಿಗೆ ಮಾತುಕೊಟ್ಟಂತೆ ದಮಯಂತಿಯ ಬಳಿಗೆ ಹೋಗಿ ನಳನ ಬಗ್ಗೆಯೂ ಹೇಳಿ ಅವಳಲ್ಲಿ ಅನುರಾಗ್ ಮೂಡಿಸುತ್ತದೆ.

ನಳನ ಕಥೆಯನ್ನು ಬರೆದವರೆಲ್ಲರೂ ಕೆಂಪಣ್ಣಗೌಡನನ್ನುಳಿದು ಕಲಿಪುರುಷನನ್ನು ವಿಕಾರವಾಗಿ ಚಿತ್ರಿಸಿದ್ದಾನೆ. ಅವನ ವ್ಯಕ್ತಿ ಚಿತ್ರ ಅವಹೇಳನಕರವಾಗಿ ವಿಕಾರವಾಗಿದೆ;

ಕರುಳು ಜುಂಜುದಲೆಯ ತಗ್ಗಿದ
ಕುರಳ ಕೆಂಗುರಿಗಣ್ಣ ಮೋರೆಯ
ಹರಕುಗಡ್ಡದ ಕೆಂಚುಮೀಸೆಯ ಮಲಿನವಸನದಲಿ
ನೆರೆದ ವೀರಕರಾಳ ಭಟಂ
ತೆರೆದ ಉಕ್ಕಿನ ತೇರಿನಲಿ ಕಲಿ
ಪುರುಷ ಕಾಣಿಸಿಕೊಂಡನಮರೇಶ್ವರನ ನಸುನಗುತ.

ಭಾರತೀಯ ಸಾಹಿತ್ಯವೆಲ್ಲ ಕಲಿಪುರುಷನೆಂದು ಕರೆದು ಕ್ರೂರಿಯ ವಿಕಾರಿಯೂ ಆಗಿ ಚಿತ್ರಿಸಿದ ಒಂದು ಪಾತ್ರವನ್ನು ಕೆಂಪಣ್ಣಗೌಡ ಶನಿರಾಜನೆಂದೂ ನವಗ್ರಹಗಳಲ್ಲಿ ಒಬ್ಬನೆಂದೂ ಸೂರ್ಯಪುತ್ರನೆಂದೂ ಮೇಲೆತ್ತಿ ಚಿತ್ರಿಸಿದ್ದಾನೆ. ಇಂದ್ರಾದಿ ದೇವತೆಗಳು ದಮಯಂತಿಯನ್ನು ಆಸೆ ಪಟ್ಟಂತೆಯೇ ಶನಿಯೂ ಆಸೆ ಪಟ್ಟಿದ್ದಾನೆ. ಇಂದ್ರಾದಿಗಳು ನಳನನ್ನು ದಮಯಂತಿಯ ಬಳಿಗೆ ರಾಯಭಾರಿಯಾಗಿ ಕಳಿಸಿದರು. ತಮಗೆ ಮಾಲೆ ಹಾಕಲಿಯೆಂದು. ನಳನಂತೆ ವೇಷಧರಿಸಿದರು, ಆದರೆ ಶನಿರಾಜ ಆಕೆಯನ್ನು ಒಲಿಸಿ ತರುವುದಾಗಿಯೂ ಆಮೇಲೆ ದೇವೆಂದ್ರ ನಿಂತು ಕ್ರಮವಾಗಿ ಮದುವೆ ಮಾಡಿಸಬೇಕೆಂದು ಕೇಳುತ್ತಾನೆ. ಬೇರೆ ಕೃತಿಗಳಲ್ಲಿ ಕಲಿ ದೇವತೆಗಳಿಗೆ ದಾರಿಯಲ್ಲಿ ಸಿಗುತ್ತಾನೆ. ಆದರೆ ಕೆಂಪಣ್ಣಗೌಡನಲ್ಲಿ ಅವನೆ ಇಂದ್ರನ ಬಳಿಗೆ ಬಂದು ದಮಯಂತಿಯ ಸ್ವಯಂವರದ ಪ್ರಸ್ತಾಪ ಮಾಡುತ್ತಾನೆ. ಸ್ವಯಂವರ ನಡೆದು ಹೋಗಿರುವುದು ಅವನಿಗೆ ತಿಳಿದಿರುವುದಿಲ್ಲ. ದೇವೇಂದ್ರ ಹೇಳಿದ ಮೇಲೆ ಶೀಘ್ರ ಕೋಪಿಯಾದ ಶನಿಯು ನಳದಮಯಂತಿಯರು ಸುಖವಾಗಿರದಂತೆ ಮಾಡುತ್ತೇನೆಂದು ಶಪಥ ಮಾಡುತ್ತಾನೆಯೆ ಹೊರತು ದಮಯಂತಿಯನ್ನು ಗಂಡನನ್ನು ಬಿಡಿಸಿ ಮತ್ತೆ ಮದುವೆಯಾಗಲು ಬಯಸುವುದಿಲ್ಲ.

ಕೆಂಪಣ್ಣಗೌಡ ಶನಿಯಪಾತ್ರವನ್ನು ಮುಂಗೋಪಿಯಾದ ಮಹಾತ್ಮನ ಮಟ್ಟಕ್ಕೆ ಏರಿಸಿದ್ದಾನೆ. ನಳದಮಯಂತಿಯರನ್ನು ಕಾಡಿಗಟ್ಟಿದ ಅವನು ಉದ್ದಕ್ಕೂ ಅವರಿಗೆ ಬೆಂಬಲವಾಗಿಯೇ ನಿಲ್ಲಬೇಕಾಗುತ್ತದೆ. ಅವರಿಬ್ಬರೂ ಹೋದಲ್ಲೆಲ್ಲಾ ಶನಿಯು ಸುತ್ತಬೇಕಾಗುತ್ತದೆ. ಮಾರುವೇಷದಲ್ಲಿ ಬಂದು ಅವರಿಗೆ ದಾರಿತೋರಿಸುತ್ತಾನೆ. ಅಗ್ನಿ ವರುಣ ವಾಯುಗಳ ಸಹಾಯದಿಂದ ಅವರ ಶಕ್ತಿ ಜಗತ್ತಿಗೆ ತಿಳಿಯುವಂತೆ ಮಾಡುತ್ತಾನೆ. ಕಡೆಗೆ ನಳನಲ್ಲಿದ್ದ ಕಾರ್ಕೋಟಕ ವಿಷವನ್ನು ತಾನು ಸ್ವೀಕರಿಸಿ ಅವನನ್ನು ಹರಸುತ್ತಾನೆ. ಒಂದು ಮಾತಿನಲ್ಲಿ ಹೇಳಬೇಕೆಂದರೆ ಮಿಕ್ಕ ಕವಿಗಳ ಕೈಯಲ್ಲಿ ಕಲಿ ಪುರುಷನೆಂದು ವಿಕಾರಿಯೂ ಸಣ್ಣ ಮನಸ್ಸಿನವನೂ ಆಗಿದ್ದವನು ಕೆಂಪಣ್ಣಗೌಡ ಕವಿ ಸ್ಪರ್ಷದಿಂದ ಶನಿಮಹಾತ್ಮನಾಗಿದ್ದಾನೆ. ಈ ಕಾರಣದಿಂದಲೇ ಕೆಂಪಣ್ಣಗೌಡ ಮುಂದೆ ಶನಿಮಹಾತ್ಮೆಯನ್ನು ಬರೆದ.

ಕಥೆ ಮುಂದುವರಿದಂತೆ ಕನಕದಾಸಾದಿ ಶಿಷ್ಟ ಕವಿಗಳ ನಳ ಪ್ರಸಂಗಕ್ಕೂ ಕೆಂಪಣ್ಣಗೌಡನ ಕಾವ್ಯಕ್ಕೂ ಅನೇಕ ವ್ಯತ್ಯಾಸಗಳು ಕಂಡುಬರುತ್ತವೆ. ಶಿಷ್ಟ ಕಾವ್ಯಗಳಲ್ಲಿ ಕಾಡಾನೆಗಳು ವರ್ತಕರ ಮೇಲೆ ನುಗ್ಗಿದಾಗ ದಮಯಂತಿ ಹೀನ ಅದೃಷ್ಟದವಳೆಂದು ವರ್ತಕರು ಹೀಯಾಳಿಸುತ್ತಾರೆ, ಕೆಂಪಣ್ಣಗೌಡನ ವರ್ತಕರು.

ಅಮ್ಮ ನೀವಿರಲಾಗಿ ನಮ್ಮ ಕೆಲವರ ಬಿಟ್ಟು
ಸುಮ್ಮನೆ ಪೋದವು ಸಾಮಗಜ ವೀಗ
ನೀವೇನು ಮಾಡುವಿರಿ ನಿಮಗೆ ದುಃಖವು ಬೇಡ
ನೀವು ತಾಯಿ ಕೇಳಿ ನಿಮ್ಮಿಂದ ಮನ್ನಿಸಿತು ಕೆಲರ

ಎಂದು ದಮಯಂತಿಗೆ ಸಮಾಧಾನ ಹೇಳಿ ಆಕೆಯನ್ನು ಸುಬಾಹುವಿನ ನಗರಕ್ಕೆ ತಲುಪಿಸುತ್ತಾರೆ.

ಕಾವ್ಯದ ಕೊನೆ ಕೂಡ ಶಿಷ್ಟ ಕಾವ್ಯಗಳಿಗಿಂತ ಬೇರೆಯಾಗಿರುವುದನ್ನು ಕಾಣಬಹುದು. ಋತುಪರ್ಣ ಬಂದ ರಥದ ಶಬ್ಧ ಕೇಳಿ ತನ್ನ ರಮಣನಲ್ಲದೆ ಬೇರೆಯವರು ಹೀಗೆ ರಥ ನಡೆಸಲು ಸಾಧ್ಯವೆ ಎಂದು ಮೇಲುಮನೆಯ ತುದಿಗೆ ಬಂದು ದಮಯಂತಿ ನೋಡಿದಳು. ನಳನ ಅಡುಗೆಯನ್ನು ತರಿಸಿ ರುಚಿ ನೋಡಿದಳು. ಮಕ್ಕಳನ್ನು ಅವನ ಬಳಿಗೆ ಕಳಿಸಿ ಅವನ ಪ್ರತಿಕ್ರಿಯೆಯನ್ನು ಗಮನಿಸಿದಳು ತಂದೆಯ ಕೊಠಡಿಗೆ ಬರುವಂತೆ ಮಾಡಿ ಹೇಳಿಸಿದಳು. ಈ ಯಾವುದಕ್ಕೂ ಬಗ್ಗದಾಗ ಅಗ್ನಿ ಪ್ರವೇಶ ಮಾಡುವುದಾಗಿ ಕೊಂಡ ಹಾಕಿಸಿದಳು.

ಉರಿಯೇಳುತಿರ್ದುದು ಧರಣಿಯಿಂ ನಭಕೆ
ಆಗ ದಮಯಂತಿಯು ವೇಗದಿಂಬಂದು
ರಮಣನ ಪಾದಕ್ಕೆ ಚನ್ನಾಗಿ ಮಣಿದು
ಘನ ಭಕ್ತಿಯಿಂದಲು ಕರಗಳ ಮುಗಿದು
ಸಾಕ್ಷಿ ಕಲ್ಲಿನ ಮೇಲೆ ಜೋಕೆಯಿಂ ನಿಂದು
ಲೋಕ ರಕ್ಷಕನಾದ ಅಗ್ನಿದೇವರಿಗೆ
ಚಂದಿರವದನೆ ಪ್ರದಕ್ಷಿಣೆಯ ಮಾಡಿ
ಭರದಿಂದ ನೆಗೆದಳು ಆ ವುರಿಯೊಳಗೆ ಬೇಗ
ಕರುಣದೊಳಗ್ನಿ ದೇವನು ಕರಗಿದನು ಆಗ

ವಿಷ್ಣು ಪ್ರತ್ಯಕ್ಷನಾದ. ದೇವದುಂದುಬಿ ಮೊಳಗಿದವು. ಹೂಮಳೆ ಕರೆಯಿತು. ಮುತ್ತೈದಿಯರು ನಳದಮಂತಿಯರಿಗೆ ಆರತಿಯೆತ್ತಿ ಮಂಗಳ ಹಾಡಿದರು.

ಕಥೆ ಇಲ್ಲಿಗೆ ಮುಗಿದರೂ ನಳನು ಪುಷ್ಕರನೊಂದಿಗೆ ಪಗಡೆಯಾಡಿ ರಾಜ್ಯವನೆಲ್ಲ ಮತ್ತೆ ಗೆಲ್ಲುವುದನ್ನು ಕವಿ ಯಾಂತ್ರಿಕವಾಗಿ ಹೇಳಿದ್ದಾನೆನಿಸುತ್ತದೆ. ನಳಚರಿತ್ರೆಯ ಶಿಷ್ಟ ಸಂಪ್ರದಾಯಕ್ಕಿಂತ ಇಲ್ಲಿ ಕೆಲವು ವಿಶೇಷಗಳೂ ಇವೆ. ನಳರಾಜನ ರಾಜ್ಯದಲ್ಲಿ ಅಧರ್ಮ ನಡೆಯದು ಎಂಬುದರ ಸಂಕೇತವಾಗಿ ಎತ್ತನ್ನು ತಿನ್ನಬಂದ ಹುಲಿ ನಾರಾಯಣ ಚಕ್ರದಿಂದ ಹತವಾದ ಉಪ ಕಥೆಯಿದೆ. ಸ್ವಯಂವರದಲ್ಲಿ ರಾಜಾಧಿರಾಜರನ್ನು ಪರಿಚಯಿಸುವ ದೇಶ ದೇಶಗಳನ್ನು ಹುಡುಕಿ ನಳದಮಂತಿಯರ ಕಂಡುಹಿಡಿದ ವಸುದೇವನೆಂಬ ಬ್ರಾಹ್ಮಣ. ಬಡಕಲು ಕುದುರೆಗಳನ್ನು ರಥಕ್ಕೆ ಹೂಡಿ ಸೂರ್ಯಸ್ತದೊಳಗೆ ವಿದರ್ಭಾನಗರ ತಲುಪಿದ ಸಾರಥಿ. ವಸಂತ ಪೂಜೆಯ ಆಚರಣೆ, ತೊಟ್ಟಿಲು ತೂಗುವ ಹಾಡು, ಮಂಗಳಾರತಿ ಪದ ಹೀಗೆ ಕೆಂಪಣ್ಣಗೌಡ ತನ್ನ ಸಮಕಾಲೀನ ಗ್ರಾಮ ಜೀವನವನ್ನು ಈ ಕಾವ್ಯದಲ್ಲಿ ಕಂಡಿರಿಸಿದ್ದಾನೆ. ಕನಕದಾಸನ ನಳಚರಿತ್ರೆ ವಿದ್ಯಾವಂತರ ಹೃದಯ ಗೆದ್ದು ಇಂದಿಗೂ ಅವರ ಮನೆಯಲ್ಲಿ ಓದಿಸಿಕೊಳ್ಳುತ್ತಿದೆ.

ಕೆಂಪಣ್ಣಗೌಡನ ಮೂರನೆಯ ಕಾವ್ಯ ಶನಿಮಹಾತ್ಮೆ ಒಂದು ಚಿಕ್ಕ ಕಾವ್ಯ. ಹಳೆಯ ಮೈಸೂರಿನ ಗ್ರಾಮಾಂತರದಲ್ಲಿ ಇದು ಪ್ರಸಿದ್ಧವಾಗಿರುವಷ್ಟು ಮತ್ತಾವಕಾವ್ಯವೂ ಆಗಿಲ್ಲ. ಶ್ರಾವಣಮಾಸದಲ್ಲಿ ಈ ಕಾವ್ಯವನ್ನು ಮನೆ ಮನೆಯಲ್ಲಿ ಓದಿಸಿ ರಾತ್ರಿಯಿಡೀ ಕೇಳುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ಈ ಕಾವ್ಯಕ್ಕೆ ಯಾವುದೇ ಪೂರ್ವ ಉದಾಹರಣೆ ಇದ್ದಂತಿಲ್ಲ. ನಳಚರಿತ್ರೆಯಲ್ಲಿ ಕಲಿಯಿಂದ ಶನಿಮಹಾತ್ಮನಾದ ಈ ಪಾತ್ರದ ಮಹಿಮೆಯನ್ನು ಹೇಳುವುದೇ ಶನಿಮಹಾತ್ಮೆಯ ಉದ್ದೇಶವಿದ್ದಂತೆ ಕಾಣುತ್ತದೆ. ಆದರೆ ಶನಿ ಪೂಜೆಯ ಆಚರಣೆ ಈ ಕಾವ್ಯಕ್ಕಿಂತಲೂ ಪ್ರಾಚೀನವಾಗಿದ್ದು ಭಾರತದಾದ್ಯಂತ ವಿಶೇಷವಾಗಿ ದಕ್ಷಿಣ ಭಾರತದಲ್ಲೆ ಇತ್ತು ಎಂಬುದಕ್ಕೆ ಜಾನಪದ ಸಾಹಿತ್ಯದಲ್ಲಿ, ಆಚಾರಗಳಲ್ಲಿ ಸುಳಿವು ದೊರೆಯುತ್ತದೆ. ಈ ಕಾವ್ಯದ ನಾಯಕ ಉಜ್ಜಯಿನಿಯ ದೊರೆ ವಿಕ್ರಮ. ವಿಕ್ರಮನ ಸುತ್ತ ಹುಟ್ಟಿಕೊಂಡ ಕಥೆಗಳಲ್ಲಿ ಇದೂ ಒಂದಾಗಿದ್ದು ಕೆಂಪಣ್ಣಗೌಡನಿಂದ ಕಾವ್ಯರೂಪ ಪಡೆದಿದೆ. ಶನಿಮಹಾತ್ಮೆಯ ಕಥೆ ಹೀಗಿದೆ.

ಕಲಿಯುಗದಲ್ಲಿ ಬಲವಂತನಾದ ರಾಜ ವಿಕ್ರಮ. ಅವನು ಬಲು ಪರಾಕ್ರಮಿ. ಉಜ್ಜಯಿನಿ ಎಂಬ ಪಟ್ಟಣಕ್ಕೆ ದೊರೆ. ಅವನಲ್ಲಿ ಕರಿತುರಗ ಪಾಯ್ದಳವಿದೆ. ಸಂಭ್ರಮದಿಂದ ಹರಿಯ ಭಜನೆ ಮಾಡುತ್ತ ರಾಜ್ಯವಾಳುತ್ತಿದ್ದಾನೆ.

ಒಂದು ದಿನ ಅವನು ತನ್ನ ಸಭಾ ಸ್ಥಾನದಲ್ಲಿ ಕುಳಿತಿದ್ದಾನೆ. ವೇದಾಪಾಠಕರಾದ ಪಂಡಿತ್ತೋತ್ತಮರೊಂದಿಗೆ ಚರ್ಚೆ ಮಾಡುತ್ತಿದ್ದಾನೆ. ಹೀಗೆ ಚರ್ಚಿಸುವಾಗ ನವಗ್ರಹಗಳ ಪ್ರಸ್ತಾಪ ಬರುತ್ತದೆ. ಆಗ ವಿಕ್ರಮ ಈ ನವಗ್ರಹಗಳಲ್ಲಿ ಯಾರು ಶಕ್ತರು ಎಂಬುದನ್ನು ದಯವಿಟ್ಟು ಹೇಳಿರೆಂದು ಪಂಡಿತರನ್ನು ಕೇಳುತ್ತಾನೆ. ಆಗ ಪಂಡಿತರಲ್ಲಿ ವಾದ ವಿವಾದ ಉಂಟಾಗುತ್ತದೆ.

ಒಂದನೆಯ ಪಂಡಿತನು ಎದ್ದು ಲೋಕದಲ್ಲಿ ಸೂರ್ಯಗ್ರಹವೆ ಶಕ್ತಿವಂತನು. ಅವನು ಶಿವಪದವನೀಯುವನು. ಒಲಿದವರಿಗೆ ಬಲವ ನೀಡುವನು, ಧೈರ್ಯ ಶೌರ್ಯವನು ಕೊಟ್ಟು ಪೂರೆಯುವನು. ಆದುದರಿಂದ ಈ ಮೂಜಗದೊಳಗೆ ಸೂರ್ಯನೆ ಮೇಲಾದಾ ಗ್ರಹವು ಎಂದು ಹೇಳಿದನು.

ಎರಡನೆಯ ಪಂಡಿತನು ಎದ್ದು ಕುಂಭಿನಿಯೊಡೆಯೆನೆ ಕೇಳು ಸೋಮನೆಂಬ ಗ್ರಹವು ಬೇಡಿದುದನಿತ್ತು ಸಲಹುವನು. ಮೂಜಗಕೆ ಅತಿ ಹಿತನು. ಸಸ್ಯಾದಿಗಳಿಗೆ ಜೀವನವೀಯುವನು. ಪುರುಷಾರ್ಥಗಳನು ಕೊಡುವನು. ಪರಮೇಶ್ವರನ ಶಿರದಲ್ಲಿ ಶೋಭಿಸುವನು. ಸಕಲ ಸೌಭಾಗ್ಯವ ಕೊಡುವನು. ಶಾಂತರೂಪನು. ಚಂದ್ರನಿಗಿಂತ ಅಧಿಕರು ಯಾರು ಇಲ್ಲವೆಂದ.

ಮೂರನೆಯ ಪಂಡಿತನು ಎದ್ದು ಹರುಷದಿಂದ “ಲಾಲಿಸುಭೂಪ, ಧರಣಿಯೊಳಗೆ ಮಂಗಳನು ಕ್ರೂರ. ಆದರೆ ಬಗೆ ಬಗೆಯ ಸುಖ ಸಂತೋಷಗಳನೀಯುವನು. ಏಕ ಮನಸ್ಸಿನಿಂದ ನುತಿಸಿದರೆ ಮಂಗಳನು ಅನೇಕ ಐಶ್ವರ್ಯ ಕೊಡುವನು. ವೀರನವನು ಬಲು ಧೀರ ಸೇರಿದವರ ಕಾಯುವನು. ಕ್ರೂರರನು ಸಂಹರಿಸುವನು. ಆದುದರಿಂದ ಮಂಗಳನೆ ಅತಿ ಶ್ರೇಷ್ಠ” ಎಂದನು.

ನಾಲ್ಕನೆಯ ಪಂಡಿತನು ಎದ್ದು “ದೊರೆಯೆ ಕೇಳು ದಿಟವಾಗಿ ಭುವನ ವಿಖ್ಯಾತ ಬುಧವನು, ಬುಧ ನಿಜವಾಗಿ ದೊಡ್ಡವನು ಕೇಳಯ್ಯ, ಅಸಡ್ಡೆ ಮಾಡಬೇಡ. ಅವನು ಸೌಖ್ಯವನೀಯುವನು. ಜನರಿಗೆ ಸುಮತಿಯನ್ನು ಕೊಡುವನು. ಭುಧನು ಗುಣಾಡ್ಯ. ನಂಬಿದವರಿಗೆ ಆರೋಗ್ಯ ಕೊಡುವನು. ಅವನು ಹರಿಣಾಂಕನ ಪ್ರೀತಿಯಸುತನು. ಹುಡುಕಿದರವನ ಹೋಲುವರಿಲ್ಲ. ಬುದ್ಧಿಯೊಳು ಪ್ರಸಿದ್ಧ. ಆದುದರಿಂದ ಬುಧಗ್ರಹವೇ ಶ್ರೇಷ್ಠನು” ಎಂದನು.

ಐದನೆಯ ಪಂಡಿತನು ಎದ್ದು “ಎಲೈರಾಜನೆ ಕೇಳು ಗುರುವಿಗೆ ಸಮಾನರು ಜಗತ್ತಿನಲ್ಲಿ ಬೇರಾರೂ ಇಲ್ಲ. ಅವನನ್ನು ಸುರ, ನರ, ದಾನವರೆಲ್ಲ ಗೌರವಿಸುವರು. ಜ್ಞಾನದ ಅಧಿದೇವನು. ಗುರುವಿಗಣೆ ಇಲ್ಲವೆಂದು ಆಗಮಗಳು ಹೇಳುತ್ತವೆ. ಗುರುವಿನ ಮಹಿಮೆಯನ್ನು ಹೇಳಲಸಾಧ್ಯ. ಆದುದರಿಂದ ಗ್ರಹಗಳಲೆಲ್ಲಾ ಗುರುವೆ ಶ್ರೇಷ್ಠನು” ಎಂದನು.

ಆರನೆಯ ಪಂಡಿತನು ಎದ್ದು “ಅಯ್ಯಾ ರಾಜನೆ ಶುಕ್ರನು ಸುರಪದವಿಯನ್ನು ಕರುಣಿಸುವನು. ಅವನು ದಯಾನಿಧಿಯು, ಧನುಜವಂಶಕೆ ಗುರುವು. ಅವನನ್ನು ನಂಬಿದವರಿಗೆ ಮಿತಿಯಿಲ್ಲದೆ ಭಾಗ್ಯಕೊಡುತ್ತಾನೆ. ಜನಗಿರೆ ಅಷ್ಟ ಭೋಗಗಳನ್ನು ಕೊಟ್ಟು ಪರಿತುಷ್ಠಿ ಪಡಿಸುವನು. ಅವನಲ್ಲಿ ಮಂತ್ರ ಸಂಜೀವಿನಿ ಇದೆ. ತನ್ನನ್ನು ಭಜಿಸಿದವರನ್ನು ಕಾಯುವನು. ಆದುದರಿಂದ ಗ್ರಹಗಳಲ್ಲೆಲ್ಲಾ ಶುಕ್ರನೆ ಶ್ರೇಷ್ಠನು”.

ಏಳನೆಯ ಪಂಡಿತನು ಎದ್ದು “ಅಯ್ಯಾ ರಾಜನೆ ರಾಹುಕೇತುಗಳ ಮಹಿಮೆಯನ್ನು ಹೇಳುತ್ತೇನೆ ಕೇಳು. ಅವರು ಬಹುಮಾನಿತರು. ಬಾಹು ಬಲಾಢ್ಯರು. ಸೂರ್ಯ ಚಂದ್ರಾಧಿಗಳನ್ನೇ ಹಿಡಿದು ಭಾದೆಪಡಿಸುವರು. ಧನುಜವಂಶಜರವರು. ಪಟು ಪರಾಕ್ರಮಿಗಳು. ನಂಬಿದ ಜನರನ್ನು ಕೈಬಿಡದೆ ಕೊನೆಯವರೆಗೂ ಕಾಯುವರು. ರಾಹು ಚಂದ್ರನನ್ನು, ಕೇತು ಸೂರ್ಯನನ್ನು ಹಿಡಿಯುವರು. ಅವರು ಸತ್ಯಾತಿಶಯರು. ಅವರ ಗುಣಗಳನ್ನು ಪ್ರೀತಿಯಿಂದ ಕೇಳಿದವರನ್ನು ಕಾಯುವರು, ಆದುದರಿಂದ ಗ್ರಹದೊಳಗೆಲ್ಲಾ ರಾಹು ಕೇತುಗಳೇ ದೊಡ್ಡವರು”.

ಎಂಟನೆಯ ಪಂಡಿತನು ಎದ್ದು “ವಿಕ್ರಮರಾಜ ಕೇಳು ಶನಿಯ ಮಹಿಮೆಗಳನ್ನು ಹೇಳುತ್ತೇನೆ. ಮನವಿಟ್ಟು ಲಾಲಿಸು. ಕಾಲಬೈರವನೆ ಶನಿಯನ್ನು ಪೂಜೆ ಮಾಡುತ್ತಾನೆ. ನೀಲಕಂಠನು ಅವನ ಕಂಡರೆ ಬೆದರುತ್ತಾನೆ. ಕಪ್ಪುರೂಪವನು ಧರಿಸಿರುವ ಅವನು ಕುಲದಲ್ಲಿ ದ್ರಾವಿಡ. ಕೋಪ ದೃಷ್ಟಿಯಲ್ಲಿ ನೋಡಿದರೆ ಸಾಕು ಅಂಥವರಿಗೆ ಕಷ್ಟ ಬರುವುದು. ಶಾಂತವಾಗಿ ಒಲಿದರೆ ಎಲ್ಲಾ ಭಾಗ್ಯಗಳನ್ನು ಕೊಡುತ್ತಾನೆ. ಶನಿಯು ಜನಿಸಿದಾಗ ಅವನ ಪಿತನಾದ ಸೂರ್ಯನ ಮೇಲೆ ದೃಷ್ಟಿ ಬಿದ್ದಿತು. ಕೂಡಲೇ ಅವನ ರಥದ ಕುದುರೆಯ ಕಣ್ಣುಗಳು ಹೋದವು. ಸಾರಥಿಯು ಹೆಳವನಾದನು. ಅವನ ದೃಷ್ಟಿ ಹಿಂತಿರುಗಿದ ಮೇಲೆ ಸರಿ ಹೋಯಿತು. ಆದುದರಿಂದ ಗ್ರಹಗಳಲ್ಲೆಲ್ಲಾ ಶನಿಯೇ ಪ್ರಬಲನಾದವನು” ಎಂದನು.

ಪಂಡಿತನು ಹೀಗೆ ಶನಿಯ ಮಹಿಮೆಯನ್ನು ಹೇಳುತ್ತಿರುವಾಗ ವಿಕ್ರಮನು ಗಹಗಹಿಸಿ ನಗುತ್ತಾ ಆ ಪಂಡಿತನಿಗೆ ಹೇಳಿದ “ಭೂಮಿಗೆ ಬೆಳಕೀವ ಸೂರ್ಯನಿಗೆ ಇವನು ಮಗನೇನಯ್ಯ, ಇವನನ್ನು ಸತ್ಯವಂತ ಎನ್ನುವರೆನಯ್ಯ? ತಂದೆಯನ್ನೆ ಭಾಧಿಸಿದ ಮಗನು ತಾನೆಂದಿಗೂ ಬಾಳುವುದಿಲ್ಲ. ಅವನನ್ನು ಮಗ ಎಂದಾರೆಯೆ? ಸತ್ಪುತ್ರನಲ್ಲ ಅವನ ಮತಿಹೀನ. ಹುಟ್ಟುತ್ತಲೆ ತಂದೆಗೆ ಕಷ್ಟವನ್ನು ಕೊಟ್ಟವನು ಮುಂದೆಷ್ಟು ಕೊಡುತ್ತಾನೆಯೋ. ಅವನನ್ನು ದೊಡ್ಡವನು ಎನ್ನುತ್ತಿಯಲ್ಲ” ಎಂದು ಚಪ್ಪಾಳೆ ತಟ್ಟಿ ಹೀಯಾಳಿಸಿ ನಕ್ಕನು.

ವಿಕ್ರಮರಾಯನು ತನ್ನ ಸಭಾಸ್ಥಾನದಲ್ಲಿ ಶನಿರಾಜನನ್ನು ಹೀಯಾಳಿಸಿ ನಗುತ್ತಾ ಇರುವ ಸಮಯದಲ್ಲಿಯೆ ಅಂತರಿಕ್ಷದಲ್ಲಿ ವಿಮಾನದಲ್ಲಿ ಹೋಗುತ್ತಿದ್ದ ಶನಿಯು ಕೇಳಿಸಿಕೊಂಡನು. ಕೂಡಲೇ ಆರ್ಭಟುಸಿತ್ತ ವಿಕ್ರಮನ ಆಸ್ಥಾನಕ್ಕೆ ಇಳಿದು ಬಂದನು. “ಏನೆಲ್ಲವೂ ವಿಕ್ರಮ ಜ್ಞಾನ ಬಾಹಿರನಾಗಿ ನನ್ನನ್ನು ಬಾಯಿಗೆ ಬಂದಂತೆ ಹೀಯಾಳಿಸುತ್ತಿರುವೆ. ಹರಿಅಜರು ಹರಸುರಪ ನರನಾನರೆಲ್ಲರು ನನ್ನ ಹೆಸರು ಕೇಳಿದರೆ ಭಯ ಪಡುತ್ತಾರೆ” ಎಂದು ಮೊರೆದನು. ಸಭಾಜನರು ಬೊಂಬೆಗಳಂತೆ ಕುಳಿತರು. ಶನಿದೇವನು ಕೋಪದಿಂದ ನನ್ನ ಚಮತ್ಕಾರವನ್ನು ತೋರುವೆನು ನೋಡು, ನಿನ್ನ ಕನ್ಯಾರಾಶಿಗೆ ಈಗಲೇ ಬಂದಿದ್ದೇನೆ” ಎಂದು ಹೇಳಿ ಹೊರಟು ಹೋದನು.

ಶನಿದೇವರ ಕೋಪವನ್ನು ಕಂಡು ವಿಕ್ರಮನು ಗಡಗಡನೆ ನಡಗುತ್ತಾ ಅಪರಾಧವನ್ನು ಮನ್ನಿಸಬೇಕೆಂದು ಪ್ರಾರ್ಥಿಸಿದನು. “ನನ್ನಲ್ಲಿ ಅವಗುಣವನ್ನರಸದೆ ಪರಿಪಾಲಿಸಯ್ಯ. ತಿಳಿಯದಲೆ ಜರಿದು ಪಾಪಿಯಾದೆನು. ಕೋಪ ಮಾಡಿಕೊಳ್ಳಬೇಡ. ಮರೆಬಿದ್ದವರನ್ನು ಪೊರೆಯುವವನು ನೀನು. ನನಗೆ ನಿನ್ನ ಶಕ್ತಿ ತಿಳಿಯದೆ ಮಾತನಾಡಿದೆನು. ಇಂದು ನಿನಗೆ ಮಾಧವನೆ ಗತಿ, ಹಣೆಯ ಬರಹ ಮೀರಿ ಜಗದಲ್ಲಿ ಬಾಳಲು ಸಾಧ್ಯವೇ?” ಎಂದು ಶನಿಯನ್ನು ಪ್ರಾರ್ಥಿಸಿ ಆ ಪಂಡಿತರಿಗೆ ಹೇಳಿ ಎಲ್ಲರನ್ನು ಕಳಿಸಿ ತಾನು ಬಂದು ಅಂತಃಪುರವನ್ನು ಸೇರಿದನು.

ಒಂದು ತಿಂಗಳು ಕಳೆಯಿತು. ಬ್ರಾಹ್ಮಣರು ವಿಕ್ರಮನಲ್ಲಿಗೆ ಬಂದರು. “ಅನಂತನಿಗೂ ವಿಧಿಯು ತಪ್ಪಲಿಲ್ಲ. ಆದುದರಿಂದ ನೀನು ಚಿಂತೆ ಮಾಡಬೇಡ. ಶನಿ ದೇವನನ್ನು ಪೂಜಿಸು, ಕುದುರೆಯ ಹಲ್ಲೆಗಳಿಂದ ಪ್ರತಿಮೆಯ ಮಾಡಿಸು, ಮಣ್ಣಿನ ಕುಂಭದೊಳಗಿಟ್ಟು ಪೂಜಿಸು, ತೈಲಾಭಿಷೇಕ ಮಾಡಿಸು, ದಾನ ಸನ್ಮಾಧಿಗಳಿಂದ ವಸುಧಾಸುರರನ್ನು ಸಂತುಷ್ಟಗೊಳಿಸು. ಅನೇಕ ತೆರನಾದ ದಾನಗಳನ್ನು ಮಾಡು. ಚಿಂತೆಯ ಬಿಡು. ಶನಿದೇವನು ಸಂತಸ ತಾಳಿ ನಿನ್ನ ಬಿಟ್ಟು ಹೋಗುವನು” ಎಂದು ಪರಿಪರಿಯಾಗಿ ಹೇಳಿದರು.

ಬ್ರಾಹ್ಮಣರ ಮಾತುಗಳನ್ನು ಅವರು ಹೇಳಿದ ಪೂಜಾ ವಿಧಾನವನ್ನು ಕೇಳಿದ ವಿಕ್ರಮನು “ಆಗದಾಗದು ಕೇಳಿರೈ ಬ್ರಾಹ್ಮಣರೆ, ನಾನು ಸಾಂಗವಾಗಿ ಶನಿ ಪೂಜೆ ಮಾಡುವುದಿಲ್ಲ. ಆ ಶನಿರಾಜ ಬಿಡುವವನಲ್ಲ. ಸುಮ್ಮನೆ ಪೂಜೆ ಮಾಡುವುದೇಕೆ. ಅವನ ಮನಸ್ಸಿಗೆ ಪ್ರೀತಿ ಬಂದಂತೆ ಮಾಡಲಿ. ಬ್ರಹ್ಮ ಲಿಖಿತವ ಯಾರೂ ತಪ್ಪಿಸಲಾರರು. ಇದರ ಮೇಲೆ ಏನು ಬಂದರೂ ತಾಳಿ ಕೊಳ್ಳುವೆನು” ಎಂದು ಹೇಳಿ ಬ್ರಾಹ್ಮಣರನ್ನು ಕಳುಹಿಸಿದನು.

ಹೀಗೆಯೆ ದಿನ ಕಳೆಯಿತು. ಒಂದು ದಿನ ಶನಿರಾಜನು ಕುದುರೆ ಮಾರುವವನಂತೆ ದೊಡ್ಡ ಕುದುರೆಯೊಂದನ್ನು ಏರಿ ಬಂದನು. ಕುದುರೆಯನ್ನು ಕೊಳ್ಳಲು ಅನೇಕ ವ್ಯಾಪಾರಿಗಳು ಬಂದು ಸೇರಿದರು. ವಿಷಯವನ್ನು ತಿಳಿದ ವಿಕ್ರಮರಾಯನು ಅಲ್ಲಿಗೆ ಬಂದನು. ಕುದುರೆಯ ಕ್ರಯ ಕೇಳಿದ ವಿಕ್ರಮನಿಗೆ “ಸವಾಗಿ ಮಾಡದೆ ಕ್ರಯ ಕೇಳಿದರೆ ಸರಿ ಬರುವುದುಂಟೆ ದೊರೆಯೆ” ಎಂದ ಶನಿರಾಜ. ಇದು ಉತ್ತಮ ಜಾತಿಯ ಕುದುರೆ.

ಇದರ ವಿಶಿಷ್ಠ ಲಕ್ಷಣ ನೋಡಿ. ಇದನ್ನು ಅರಬ್ಬಿ ದೇಶದಿಂದ ಲಕ್ಷ ವರಹ ಕೊಟ್ಟು ತಂದಿದ್ದೇನೆ. ಕುದುರೆಯ ಮೇಲೆ ಕುಳಿತು ಕೊರಡೆಯಿಂದ ಒಂದು ಪೆಟ್ಟು ಕೊಟ್ಟರೆ ಅದರ ಚಮತ್ಕಾರ ತೋರುವುದು” ಎಂದ ಕಾರವಾನ ವೇಷದ ಶನಿರಾಜ. ವಿಕ್ರಮನು ಕುದುರೆಯನ್ನು ಹತ್ತಿ ಕೊರಡೆಯಿಂದ ಒಂದು ಏಟು ಕೊಟ್ಟನು. ಏಟು ಬಿದ್ದ ಕೂಡಲೆ ಅದು ಗಗನಕ್ಕೆ ಹಾರಿತು. ಕುದುರೆ ಘೋರ ಕಾನನದ ಕಡೆಗೆ ಹೊರಟಿತು. ಅದು ದಾರಿ ತಪ್ಪಿ ಹೋಗುತ್ತಿರುವುದನ್ನು ಕಂಡ ವಿಕ್ರಮ ಕೊರಡೆಯಿಂದ ಇನ್ನೊಂದು ಪೆಟ್ಟು ಹಾಕಿದ. ಹೀಗೆ ಆ ಮಾಯಾ ಅಶ್ವವು ವಿಕ್ರಮನ ಕೊಂಡೊಯ್ದು ಒಂದು ಘೋರಾರಣ್ಯದಲ್ಲಿ ಇಳಿಸಿತು. ಕುದುರೆಯಿಂದಿಳಿದು ಸುತ್ತಮುತ್ತ ನೋಡಿದ. ಕಾಣುತ್ತಿದ್ದ ಕಾಡಿಲ್ಲ. ಹರಿಯುತ್ತಿದ್ದ ನದಿಯಿಲ್ಲ. ಇದೇನೆಂದು ಹಿಂತಿರುಗಿ ನೋಡಿದರೆ ಕುದುರೆಯೂ ಇಲ್ಲ. ಅಷ್ಟರಲ್ಲಿ ರಾತ್ರಿಯಾಯಿತು. ವಿಕ್ರಮನು ರಾತ್ರಿಯನ್ನು ಅಲ್ಲಿಯೇ ಕಳೆದನು. ಬೆಳಗ್ಗೆ ಎದ್ದು ಹರಿ ಭಜಹೆಯ ಮಾಡುತ್ತ ನಲಂದ ಎಂಬ ನಗರದತ್ತ ಹೊರಟನು.

ಈ ಕಡೆ ಉಜ್ಜಯನೀ ನಗರದಲ್ಲಿ ಮಂತ್ರಿ ಮಾನ್ಯರು, ಪುರಜನರು, ಪರಿಜನರೆಲ್ಲ ತಮ್ಮ ದೊರೆಯು ಏನಾದನೊ ಎಂದು ಚಿಂತಿಸುತ್ತಿದ್ದರು. ಆಗ ಮಾಯಾವೇಷದ ಕಾರವಾನನು “ಏನಯ್ಯಾ ಪ್ರಧಾನಿ ನಿಮ್ಮ ದೊರೆಯು ಎಲ್ಲಿ? ಬರಲು ತಡವಾಗಲು ಕಾರಣವೇನು? ಅಪರೂಪದ ಕುದುರೆ ಎಂದು ನಿಮ್ಮ ರಾಜ ಅಪಹರಿಸಿಕೊಂಡು ಹೋದನೊ? ತಡ ಮಾಡದೆ ನನ್ನ ಕುದುರೆಯ ತರಿಸು. ಇಲ್ಲವಾದರೆ ನಾನು ಸುಮ್ಮನೆ ಬಿಡುವವನಲ್ಲ” ಎಂದು ಗಲಾಟೆ ಮಾಡಲಾರಂಭಿಸಿದನು. ಪ್ರಧಾನಿಯು ಒಂದೆರಡು ಹರಿದಾರಿ ಪರ್ಯಂತರ ಚರರನ್ನು ಕಳಿಸಿ ವಿಚಾರಿಸಿದನು. ದೊರೆಯ ಬಗ್ಗೆ ಏನೂ ತಿಳಿಯಲಿಲ್ಲ. ಕಡೆಗೆ ಆ ಕುದುರೆ ಪಾಲಕನನ್ನು ಕರೆಸಿ ಬೆಲೆಯನ್ನು ಕೊಡಿಸಲು ಸಿದ್ದವಾಗಿರುವೆನು ಹೇಳೆಂದನು. ಆತನು ಒಂದು ಲಕ್ಷ ವರಹ ವೆನಲು ಭಂಡಾರವನ್ನು ತೆಗೆಸಿ ಅಶ್ವಪಾಲಕನಿಗೆ ಅದನ್ನು ಕೊಡಿಸಿದನು. ಆದರೇನು ದೇಶ ದೇಶಗಳನ್ನೆಲ್ಲ ಹುಡುಕಿದರೂ ವಿಕ್ರಮರಾಜ ಮತ್ತು ಕುದುರೆ ಸಿಗಲಿಲ್ಲ.

ಪರಶಿವನ ಧ್ಯಾನ ಮಾಡುತ್ತ ರಾಮ ರಾಮ ಎಂದು ವಿಕ್ರಮನು ನಲಂದ ನಗರವನ್ನು ತಲುಪಿದನು. ಸುಂದರನಾದ ವಿಕ್ರಮನು ಆ ನಗರದ ಬೀದಿಯಲ್ಲಿ ಹೋಗುತ್ತಿರುವಾಗ ಜನರು ಇವನಾವ ದೇಶದವನೆಂದು ನೋಡುತ್ತಿದ್ದರು. ಅವನು ಮುಂದೆ ಮುಂದೆ ಹೋದಂತೆಲ್ಲಾ ಜನರು ಹಿಂದೆ ಹಿಂದೆ ಬರುತ್ತಿದ್ದರು. ಅಲ್ಲಿಯ ಭಾರಿವರ್ತಕನೊಬ್ಬ ವಿಕ್ರಮ ಬರುವುದನ್ನು ಕಂಡ. ಅವನು ಬಂದು ಅಂಗಡಿಯ ಮುಂದೆ ಕುಳಿತ, ಒಂದು ಜವದಲ್ಲಿ ವ್ಯಾಪಾರವು ಹೆಚ್ಚಿತು. ಅದನ್ನು ಕಂಡು ಆ ವೈಶ್ಯ ವಿಕ್ರಮನ ಬಳಿಗೆ ಬಂದು “ಅಯ್ಯಾ ನೀನು ಯಾರು? ನಿನ್ನ ಹೆಸರೇನು? ಯಾವ ದೇಶ? ಮುಂದೆ ಎಲ್ಲಿಗೆ ಹೊರಟಿರುವೆ? ಮರೆಮಾಚದೆ ಹೇಳು ಎಂದು ಕೇಳಿದ ವಿಕ್ರಮನು ತನ್ನ ವಿಚಾರವನ್ನು ವೈಶ್ಯನಿಗೆ ಸಂಕ್ಷಿಪ್ತವಾಗಿ ಹೇಳಿದ.