ಇತ್ತ ದೊರೆ ನಳರಾಜನು ತನ್ನ ಮಂತ್ರಿಯನ್ನು ಕರೆಸಿ ಬೇಟೆಗೆ ಹೊರಡಲು ಏರ್ಪಾಡು ಮಾಡಲು ಸೂಚಿಸಿದನು. ಮಂತ್ರಿಯು ಹಾಗೆಯೇ ಆಗಲಿ ಎಂಡನು. ಅಷ್ಟರಲ್ಲಿ ರಾತ್ರಿಯಾಯಿತು. ಸೂರ್ಯೋದಯದಲ್ಲಿ ನಳರಾಜನು ಎದ್ದು ಸ್ನಾನಾದಿ ಕ್ರಿಯೆಗಳನ್ನು ಮುಗಿಸಿ, ಗಂಧಪರಿಮಳಗಳಂ ಪೂಸಿ, ಚಿನ್ನದ ಸರಿಗೆಯ ರುಮಾಲುಸುತ್ತಿ ಮಾಲಿಗೇಯಂ ಮಲ್ಲಿಗೇಯಂ ಮುಡಿದು, ನವರತ್ನಾಭರಣವಂ ತೊಟ್ಟು ಅಪರಂಜಿ ಸರಿಗೆ ದುಪ್ಪಟಿಯಂ ಹೊದ್ದು ಭೇಟೆಗೆ ಹೊರಡಲು ಭೇರಿಯನ್ನು ಹೊಡೆಸಿದನು. ರಾಜಾಧಿರಾಜರೆಲ್ಲ ಜತೆಗೂಡಿದರು. ಬೇಟೆಗಾರರು ದಟ್ಟಿ ಚಲ್ಲಣ ಕಟ್ಟಿ ಬಿಲ್ಲುಬಾಣ ತೊಟ್ಟು ಹೊರಟರು. ಭಲ್ಲೆ, ಈಟಿಗಳನ್ನು ಹಿಡಿದ ಮೊನೆಗಾರರು ನಾಯಿಗಳ ಬೊಗಳುವಿಕೆ ಅಯುಧಗಳ ಸದ್ದು, ಬಗೆ ಬಗೆಯ ವಾದ್ಯಗಳ ಸದ್ದಿನೊಂದಿಗೆ ಮೃಗಗಳು ತಲ್ಲಣಿಸುವಂತೆ ಕಾಡಿಗೆ ನಡೆತಂದರು.

ಆ ಕಾಡಿನಲ್ಲಿ ಹೊನ್ನೆ, ಶ್ರೀಗಂಧ, ಮಾವು, ಆಲ, ಬೇಲ, ಬನ್ನಿ, ಚನ್ನಂಗಿ ಮುಂತಾದ ಮರಗಳು ಸೂರ್ಯಪ್ರಭೆ ನೆಲದ ಮೇಲೆ ಬೀಳದಂತೆ ತಡೆದಿದ್ದವು. ಹಂದಿ, ಹುಲ್ಲೆ, ಕಡವೆ, ಚಮರಿ, ಹುಲಿ, ಸಿಂಹ, ಕರಡಿ ಮುಂತಾದ ಪ್ರಾಣಿಗಳು, ಹಂಸ, ನವಿಲು, ಗಿಳಿ, ಗೊರವಂಕ ಕರಿಯಹಕ್ಕಿ ಮುಂತಾದ ನೂರಾರು ಬಗೆಯ ಪಕ್ಷಿಗಳು ಆ ಕಾಡಿನಲ್ಲಿದ್ದವು. ಹೀಗೆ ಆ ಕಾಡಿನಲ್ಲಿದ್ದ ಮೃಗ ಪಕ್ಷಿಗಳನ್ನು ನಳ ದಮಯಂತಿಗೆ ತೋರಿಸಿದನು. ತನ್ನ ಪರಿವ್ವರ ಸಹಿತ ಒಂದು ಸರಸಿಯ ಹತ್ತಿರ ಬೀಡುಬಿಟ್ಟರು.

ಬೇಟೆಯ ನಂತರ ಅಯಾಸಗೊಂಡ ನಳರಾಜ ದಮಯಂತಿಯ ತೋಳುಗಳ ಮೇಲೊರಗಿ ನಿದ್ರೆ ಹೋದನು. ಅವನಿಗೆ ಘೋರವಾದೊಂದು ಸ್ವಪ್ನಬಿತ್ತು. ಅದರಿಂದ ಬೆದರಿ ಎದ್ದುಕುಳಿತನು. ಪತಿಯ ಸ್ಥಿತಿಯನ್ನು ಕಂಡ ದಮಯಂತಿ ಅವನನ್ನು ನಾನಾ ರೀತಿಯಿಂದ ಉಪಚರಿಸಿ ಅತಿ ಚಿಂತೆಯಿಂದ ಕಾರಣವನ್ನು ಕೇಳಿದಳು. ಆಗ ನಳರಾಜನು ತಾನು ಕಂಡ ಸ್ವಪ್ನದ ವಿವರಗಳನ್ನು ದಮಯಂತಿಗೆ ಹೇಳಿದನು. ಆಳುವ ರಾಜ್ಯದ ಬಿಟ್ಟು ಪೋಗುವಂಥ ಕನಸಕಂಡೆ. ಅಡವಿಯೊಳಗೆ ಸೇರಿ ಅಗಚಾಟ್ಲು ಬೀಳುವಂಥ ಕನಸಕಂಡೆ. ಹೊದ್ದ ಹಚಡಾವನ್ನು ಪಕ್ಷಿ ಬಂದು ಕೊಂಡುಹೋದಂಥ ಕನಸ ಕಂಡೆ, ನೀನುಟ್ಟ ಸೀರೆಯನ್ನು ನಾವಿಬ್ಬರೂ ಉಟ್ಟಂಥ ಕನಸಕಂಡೆ. ಕಾಡಿನೊಳಗೆ ಹಾಳು ಚಾವಡಿಯೊಳಗೆ ನಾವಿಬ್ಬರೂ ಇರುವಂಥ ಕನಸಕಂಡೆ. ಅಲ್ಲಿ ನಿನಗೆ ಮಾಯದ ನಿದ್ರೆ ಬರುವಂಥ ಕನಸಕಂಡೆ. ಅಲ್ಲಿ ನಿನ್ನನ್ನು ಬಿಟ್ಟುನಾನು ಪೋಗುವಂಥ ಕನಸಕಂಡೆ. ದಾರಿಯಲಿ ಘೋರ ಸರ್ಪವೊಂದು ಬೆಂಕಿಯಲಿ ಬೇಯುವದ ಕಂಡು ಅದನ್ನು ಕರುಣೆಯಿಂದ ಎತ್ತಿದರೆ ಅದು ನನ್ನ ಕಚ್ಚಿ ನನಗೆ ವಿರೂಪ ಬಂದಂತೆ ಕನಸಕಂಡೆ. ಮಾರುರೂಪಿನಿಂದ ಒಂದು ಪಟ್ಟಣ ಸೇರಿ ಅಲ್ಲಿ ಬಾಣಸಿಗನಾದಂತೆ ಕನಸಕಂಡೆ. ಋತುಪರ್ಣನ ಬಳಿ ಸಾರಥಿಯಾದಂತೆ ಕನಸಕಂಡೆ. ದೇವೀಕೃಪೆಯಿಂದ ಕಷ್ಟಹರಿದು ಎಂದಿನಂತಿರುವಂಥ ಕನಸಕಂಡೆ. ಎಂದನು ಆಗ ದಮಯಂತಿ ಇಷ್ಟು ಮಾತ್ರಕ್ಕೆ ನೀವು ಹೆದರುವುದೆ? ಸಿರಿತನ ಬಡತನಗಳು ಧರೆಯಮೇಲಿನ ದ್ವಂದ್ವ. ಏನೇ ಕಷ್ಟ ಬಂದರೂ ಧೈರ್ಯದಿಂದದ್ದರೆ ಜಾರಿ ಹೋಗುವುದು ಎಂದು ಧೈರ್ಯ ಹೇಳಿದಳು. ಆಮೇಲೆ ಅವರೆಲ್ಲ ಪಟ್ಟಣಕ್ಕೆ ಹಿಂತಿರುಗಿದರು.

ನಳರಾಜನು ಧರ್ಮದಿಂದ ರಾಜ್ಯವನ್ನಾಳುತ್ತಿರಲು ಶನಿರಾಜನು ಜೂಜನ್ನಾಡಿಸಿ ಅರಣ್ಯ ಸೇರಿಸಬೇಕೆಂದು ಯೋಚಿಸಿ ಪುಷ್ಕರನೆಂಬ ದೊರೆಯ ಬಳಿಗೆ ಕಪಟ ಬ್ರಾಹ್ಮಣ ವೇಷದಿಂದ ಬಂದನು. ಪುಷ್ಕರನು ನಂಬದಿರಲು ತಾನು ಸೂರ್ಯ ಮತ್ತು ಛಾಯದೇವಿಯರ ಮಗ. ಶನಿರಾಜನೆಂದು ನನ್ನ ಹೆಸರು. ಹರಿಹರ ಬ್ರಹ್ಮಾದಿ ಸುರರೆಲ್ಲ ನನ್ನ ಕಂಡರೆ ಹೆದರುತ್ತಾರೆ. ಈಗ ನಿನ್ನಿಂದ ಒಂದು ಕೆಲಸವಾಗಬೇಕಾಗಿದೆ. ಅದುದರಿಂದ ಬಂದಿದ್ದೇನೆ. ದಮಯಂತಿಯನ್ನು ನಾನು ಮದುವೆಯಾಗಬೇಕೆಂದಿದ್ದೆ. ಆದರೆ ನಳರಾಜ ಆಕೆಯನ್ನು ಮದುವೆಯಾದ. ಮಕ್ಕಳೂ ಇವೆ. ನಿನ್ನನ್ನು ಕಂಡರೆ ಅವನಿಗೆ ಅಸಡ್ಡೆ. ನೀನು ಅವನನ್ನು ಜೂಜಿಗೆ ಆಹ್ವಾನಿಸು. ನಾನು ನಿನ್ನ ಹಿಂದೆನಿಂತು ಗೆಲ್ಲಿಸುತ್ತೇನೆ ಎಂದನು. ಆಗ ಪುಷ್ಕರನು ಸಂತೋಷದಿಂದ ಶನಿರಾಜನಿಗೆ ನಮಸ್ಕರಿಸಿ “ನಿಮ್ಮ ಮಾತನ್ನು ನಾನು ಮೀರುವುದಿಲ್ಲ. ಆದರೆ ನಳರಾಜ ಸತ್ಯವ ಬಿಟ್ಟು ಜೂಜನಾಡುವನೆ? ಎಂದನು. ಅದಕ್ಕೆ ಶನಿರಾಜ” ನೀನೇನೂ ಭಯಪಡಬೇಡ. ನಾನು ಅವನ ಮನಸ್ಸಿನಲ್ಲಿ ನಿಂತು ಜೂಜಾಡುವ ಆಸೆ ಹುಟ್ಟಿಸುತ್ತೇನೆ. ಅವನರಾಜ್ಯ ನಿನಗೆಕೊಡಿಸುತ್ತೇನೆ. ನಿನಗೆ ಸಂದೇಹ ಬೇಡ” ಎಂದನು.

ನಳರಾಜನು ರತ್ನ ಸಿಂಹಾಸನದಲ್ಲಿ ಕುಳಿತು ಸಂತೋಷದಿಂದ ಓಲಗದೊಳಿದ್ದನು. ಆಗ ಸೇವಕನೊಬ್ಬನು ಬಂದು ಪುಷ್ಕರನು ಬಂದಿರುವ ವಾರ್ತೆಯನ್ನು ಅರುಹಿದನು. ಅವನನ್ನು ಕರೆದುತನ್ನು ಎಂದು ಚರರಿಗೆ ಅಪ್ಪಣೆಮಾಡಿದನು. ಪುಷ್ಕರನು ಅತಿವಿನಯದಿಂದ ಬಂದು ನಳರಾಜನಿಗೆ ಕೈಗಳಂ ಮುಗಿದು ಕ್ಷೇಮವೆ? ಎಂದನು. ಆಗ ನಳನು ಹರಿಕೃಪೆಯಿಂದ ಎಂದ. ನೀವು ಕ್ಷೇಮವೇ ? ಎಂದು ನಳರಾಜ ಕೇಳಿದಾಗ ನಿಮ್ಮ ದಯೆಯಿಂದ ಕ್ಷೇಮವಲ್ಲದೆ ಭಯವಿಲ್ಲ” ಎಂದ. ಆಗ ನಳರಾಜನು ಎಂದೂ ಬರದ ನೀವು ಬಂದಂಥ ಕಾರಣವೇನು? ಎಂದು ಕೇಳಿದ. ಅದಕ್ಕೆ ಪುಷ್ಕರನು ನಿಮ್ಮ ನೋಡಿ ಹೋಗೋಣವೆಂದು ಬಂದೆ. ನಾವಿಬ್ಬರೂ ಒಂದಾಟ ಪಗಟೆಯಾಡಬೇಕೆಂದು ಆಸೆಯಾಗಿದೆ ಎಂದ. ಪುಷ್ಕರನ ಮಾತು ಕೇಳಿದ ನಳರಾಜ ನರರು ಜೂಜಾಡುವುದರಿಂದ ಸಿರಿ ಸಂಪದವೆಲ್ಲ ಹೋಗಿಬಿಡುವುದೆಂದು ಯೋಚಿಸುತ್ತಿರುವಾಗ ಶನಿರಾಜನು ವನ ಹೃದಯದಲ್ಲಿ ನಿಂತು ಆಸೆ ಹುಟ್ಟಿಸಿದ. ಆಗ ನಳರಾಜ ಸಡಗರದಿಂದ ಪಾಚಿಕೆಯ ಪಗಡೆ ಸಾಲತರಿಸಿ ಆಡಲು ಕುಳಿತ. ಒಂದೆರಡಾಟ ಆದ ಮೇಲೆ ಪಂಥವಿಡದೆ ಆಡಿದರೆ ಸೊಗಸಿಲ್ಲ. ನಾನು ಸೋತರೆ ನನ್ನ ರಾಜ್ಯ ನಿನಗೆ ನೀನು ಸೋತರೆನಿನ್ನ ರಾಜ್ಯ ನನಗೆ ಎಂದ. ಪುಷ್ಕರನನ್ನು ನಳ ಪಂಥಕ್ಕೆ ಒಪ್ಪಿಸಿದ. ಆಗ ಶನಿಯು ದಾಳದಲ್ಲಿ ಕುಳಿತು ನಳರಾಜ ಸೋಲುವಂತೆ ಮಾಡಿದ. ಇದನ್ನು ಕಂಡ ಮಂತ್ರಿ ನಳರಾಜನನ್ನು ಪಗಡೆಯಾಟದಿಂದ ಏಳಿಸಲು ಪ್ರಯತ್ನಿಸಿದ. ದಮಯಂತಿಗೆ ಹೇಳಿದ. ವಶಿಷ್ಟರು ಬಂದು ಹೇಳಿದರು. ಶನಿಯ ಮಾಯೆಗೆ ಒಳಗಾಗಿದ್ದ ನಳರಾಜ ಯಾರ ಮಾತನ್ನೂ ಕೇಳದೆ ಪಗಡೆಯಲ್ಲಿ ಎಲ್ಲವನ್ನೂ ಸೋತ.

ಸಕಲ ರಾಜ್ಯವನ್ನೂ ಕಳೆದುಕೊಂಡ ನಳರಾಜ ಕಾಡಿಗೆ ಹೊರಟ. ತಾನು ಸೋಲುವುದನ್ನು ಅರಿತ ಅವನು ಮೊದಲೆ ತನ್ನ ಮಕ್ಕಳಿಬ್ಬರನ್ನೂ ಮಾವ ಭೀಮರಾಯನಲ್ಲಿಗೆ ತನ್ನ ಆಪ್ತ ಸಾರಥಿಯೊಂದಿಗೆ ಕಳಿಸಿದ್ದ. ದಮಯಂತಿಗೂ “ನೀನು ಅಡವಿಯೊಳಗೆ ನನ್ನ ಹಿಂದೆ ತಿರುಗಲಾರೆ. ನಿನ್ನ ತಾಯಿತಂದೆಯರ ಬಳಿಗೆ ಹೋಗಿ ಸುಖದಿಂದಿರು” ಎಂದು ಹೇಳಲು ದಮಯಂತಿ ದುಃಖದಿಂದ “ನೀವು ಅಡವಿಯಲ್ಲಿ ಕಷ್ಟಪಡುತ್ತಿರುವಾಗ ನಾನು ತಂದೆಯ ಮನೆಯಲ್ಲಿ ಸುಖವಾಗಿರಲೆ? ನಾನು ನಿಮ್ಮ ಅಗಲಿ ಬದುಕಲಾರೆನು ಎಂದಳು. ಆಗ ನಳನು “ನಿನ್ನ ಅಗಲಿದ ನನಗೆ ಪ್ರಾಣ ಉಳಿಯುವುದೆ” ನೀನು ಅಡವಿಯಲ್ಲಿ ತಿರುಗಲಾರೆ ಎಂದು ಹಾಗೆ ಹೇಳಿದೆನಷ್ಟೆ; ನಿನ್ನನ್ನು ಬಿಟ್ಟು ಒಂದು ನಿಮಿಷವೂ ಇರಲಾರೆ ಎಂದು ಹೇಳಿ ಆಕೆಯನ್ನು ಕರೆದುಕೊಂಡು ಅಡವಿಗೆ ಹೊರಟ.

ಅಡವಿಯಲ್ಲಿ ಶನಿಮಾಯೆಯಿಂದ ಮಾರ್ಗ ತಪ್ಪಿ ಗುಡ್ಡ ಬೆಟ್ಟ ಹತ್ತಿ ಅಲೆದರು. ಮೊನೆಗಲ್ಲು ತಾಕಿ ಕಾಲುಗಳಲ್ಲಿ ರಕ್ತ ಪಸರುತ್ತಿತ್ತು. ಶನಿಯು ತನ್ನ ಮಾಯಾ ಶಕ್ತಿಯಿಂದ ನಳದಮಯಂತಿಯರಿಗೆ ಅನೇಕ ಕಷ್ಟಗಳನ್ನು; ಬಿಸಿಲು ಹೆಚ್ಚುಮಾಡಿ ನೆರಳಿಲ್ಲದಂತೆ ಮಾಡಿದನು. ನೀರು ಕುಡಿಯಲು ನದಿಗಿಳಿದರೆ ನೀರಿಲ್ಲದಂತೆ ಮಾಡಿದನು. ಹೀಗೆ ಅವರಿಬ್ಬರೂ ಪರಿತಪಿಸುತ್ತಿರುವಾಗ ಶನಿಯು ಕಪಟ ಪಕ್ಷಿಗಳನ್ನು ನಿರ್ಮಿಸಿ ಕಳಿಸಿದನು. ಚಿನ್ನದ ವರ್ಣದ ಆ ಪಕ್ಷಿಗಳು ನಳದಮಯಂತಿಯವರ್ ಸುತ್ತ ಮುತ್ತ ಸುಳಿದಾಡಿದವು. ಹಸಿದು ಕಂಗಾಲಾಗಿದ್ದ ಅವರು ಒಂದು ಪಕ್ಷಿಯನ್ನಾದರೂ ಹಿಡಿದು ತಿನ್ನಬೇಕೆಂದು ಯೋಚಿಸಿದರು. ಎಷ್ಟೇ ಪ್ರಯತ್ನ ಪಟ್ಟರೂ ಅವು ಸಿಗದಿದ್ದಾಗ ನಳರಾಜ ತನ್ನ ಹಚ್ಚಡವನ್ನು ತೆಗೆದು ಅವುಗಳ ಮೇಲೆ ಬೀಸಿದನು. ಅವು ಹಚ್ಚಡವನ್ನು ತೆಗೆದುಕೊಂಡು ಹಾರಿ ಹೋದವು. ಪ್ರತಿ ಹೆಜ್ಜೆಯೂ ತಾನು ಕಂಡಾ ಸ್ವಪ್ನದಂತೆ ಆಗುತ್ತಿರುವುದನ್ನು ಕಂಡ ನಳರಾಜ ಚಿಂತೆಗೊಳಗಾದನು. ಆಗ ದಮಯಂತಿ ಹೀಗೆ ಧೈರ್ಯಗೆಡಬಹುದೆ; ಇದಕ್ಕಿಂತ ಇನ್ನೇನು ಕಷ್ಟ ಬಂದೀತು. ಹರಿ ಅದನ್ನು ಪರಿಹರಿಸುತ್ತಾನೆ. ಹಚ್ಚಡ ಹೋದರೆ ಹೋಗಲಿ ನನ್ನ ಸೀರೆಯರ್ಧವನ್ನು ನಿಮಗೆ ಕೊಡುತ್ತೇನೆಂದು ನಳರಾಜನಿಗೆ ಹೇಳಿದಳು.

ಒಂದೇ ಸೀರೆಯನ್ನು ಇಬ್ಬರೂ ಉಟ್ಟು ಹೋಗುತ್ತಿರುವಾಗ ಶನಿರಾಜನು ಬ್ರಾಹ್ಮಣ ವೇಷದಲ್ಲಿ ಕಾಣಿಸಿಕೊಂಡು “ಇಬ್ಬರು ಒಂದೇ ಸೀರೆಯನ್ನುಟ್ಟು ಎಲ್ಲಿಗೆ ಹೋಗುತ್ತಿರುವಿರಿ”, ಎಂದು ಕೇಳಿದನು. ಆಗ ನಳನು ತನ್ನ ವೃತಾಂತವನ್ನು ಹೇಳಿದನು. ಆಗ ಶನಿರಾಜನು ” ಈಕೆಯನ್ನು ಕರೆದುಕೊಂಡು ಘೋರಾರಣ್ಯದಲ್ಲಿ ತಿರುಗುವುದು ಸರಿಯಲ್ಲ. ನಿನ್ನ ಜೊತೆಯಲ್ಲಿ ಪಾಪ! ಈ ಹೆಣ್ಣುಮಗಳೇಕೆ ಕಷ್ಟಪಡಬೇಕು. ಅರಣ್ಯದಲ್ಲಿರುವ ಕಾಡು ಮೃಗಗಳು ಈಕೆಯನ್ನು ಕೊಂದಾವು. ಇದು ನಿನಗೆ ಶನಿರಾಯ ಮಾಡಿದಂಥ ಕಷ್ಟ. ಇಷ್ಟಕ್ಕೇ ಮುಗಿಯುವುದಿಲ್ಲ. ನೀನು ಸೂರ್ಯವಂಶದ ರಾಜ. ಈಗ ಆ ಕೀರ್ತಿಯೆಲ್ಲ ಹೋಗಿ ಬರಿ ಅಪಕೀರ್ತಿ ಉಳಿದಿದೆ. ಈಗ ನಾನು ನಿನಗೆ ಒಂದು ಬುದ್ಧಿಮಾತು ಹೇಳುತ್ತೇನೆ ಕೇಳು. ನಿನ್ನ ಎದುರಿಗೆ ನಾಲ್ಕು ದಾರಿಗಳಿವೆಯಷ್ಟೆ, ಅವುಗಳಲ್ಲಿ ಒಂದು ವಿದರ್ಭಾನಗರಿಗೆ, ಒಂದು ಸುಭಾಹುವಿನ ಪಟ್ಟಣಕ್ಕೆ ಹೋಗುತ್ತವೆ. ಇನ್ನೊಂದು ಮಾರ್ಗ ಅಯೋಧ್ಯಾಪುರಿಗೂ ಮತ್ತೊಂದು ದಕ್ಷಿಣದ ಕಡೆಗೂ ಹೋಗುತ್ತೆವೆ. ನೀನು ಅಯೋಧ್ಯಾಪುರಿಯ ಮಾರ್ಗ ಹಿಡಿದು ಹೋಗು. ನಿನ್ನ ಪತ್ನಿಯನ್ನು ವಿದರ್ಭಾಪುರಕ್ಕೆ ಕಳಿಸು” ಎಂದು ಹೇಳಿ ಕಪಟ ಭ್ರಾಹ್ಮಣ ವೇಷದಾರಿಯಾದ ಶನಿಯು ಮಾಯವಾದನು.

ನಳರಾಜನು ದಮಯಂತಿಯನ್ನು ತಂದೆಯ ಮನೆಗೆ ಹೋಗುವಂತೆ ಒತ್ತಾಯಿಸಿದನು. ಈ ಕಾಡಿನಲ್ಲಿ ವ್ಯಾಘ್ರ, ಸಿಂಹ, ಶಾರ್ದೂಲ ನಾನಾ ಬಗೆಯ ಕ್ರೂರ ಮೃಗಗಳಿವೆ. ನೀನು ನೋಡಿ ಹೆದರಿಕೊಳ್ಳುವೆ. ನಮಗೆ ಪರಶಿವನೆ ದಾರಿ ತೋರಿದಂತೆ ಈ ಬ್ರಾಹ್ಮಣನು ಬಂದ. ವಿದರ್ಭಾಪುರ ಇಲ್ಲಿಗೆ ಹತ್ತಿರ. ನೀನು ಅಲ್ಲಿಗೆ ಹೋಗಿ ಮಕ್ಕಳೊಂದಿಗೆ ಸುಖವಾಗಿರು” ಎಂದನು. ಆಗ ದಮಯಂತಿ ” ನೀವೂ ಬಂದರೆ ಮಾತ್ರ ನಾನೂ ಬರುತ್ತೇನೆ” ಎಂದಳು. ಅದಕ್ಕೆ ನಳರಾಜ “ನಾನು ನಿನ್ನ ಮದುವೆಯಾಗುವಾಗ ಚಕ್ರವರ್ತಿಯಾಗಿದ್ದೆ. ದೇವತೆಗಳೂ ಹೊಗಳುವಂತೆ ಅದ್ದೂರಿಯಾಗಿ ಮದುವೆಯಾದೆ. ಈಗ ಮೈಗೆ ಹೊದಿಯಲು ಬಟ್ಟೆ ಇಲ್ಲ. ನಿನ್ನ ಅರ್ಧ ಸೀರೆಯನ್ನೆ ಹೊದ್ದಿದ್ದೇನೆ. ಕೆಟ್ಟುಬಂದರೆ ಜನರು ಹೀನಾಯವಾಗಿ ಮಾತನಾಡುತ್ತಾರೆ. ಆದುದರಿಂದ ನೀನು ಹೋಗು” ಎಂದನು. ನೀವು ಕಷ್ಟ ಪಡುತ್ತಿರುವಾಗ ನಾನು ತಂದೆಯ ಮನೆಯಲ್ಲಿ ಸುಖವಾಗಿರಲಾರೆ. ನಾನು ನಿಮ್ಮನ್ನು ಬಿಟ್ಟು ಅಗಲಲಾರೆ. ನಾನು ನಿಮ್ಮೊಂದಿಗೆ ಬರುತ್ತೇನೆ ಎಂದಳು. ಹೀಗೆಯೇ ಹೋಗುತ್ತಿರುವಾಗ ಕೊಳವೊಂದನ್ನು ಕಂಡು ಅದರಲ್ಲಿಳಿದು ಕೈಕಾಲು ತೊಳೆದು ನೀರು ಕುಡಿದರು. ಅಲ್ಲಿಯೇ ಪಕ್ಕದಲ್ಲಿದ್ದ ಪಾಳು ಚಾವಡಿಯಲ್ಲಿ ವಿಶ್ರಮಿಸಲು ಕುಳಿತರು. ಆಗ ದಮಯಂತಿಗೆ ಮಾಯದ ನಿದ್ರೆ ಬಂದಿತು. ನಳರಾಜನು ಈಕೆಯನ್ನು ಇಲ್ಲಿ ಬಿಟ್ಟು ಹೋದರೆ ಬೇರೆ ದಾರಿಯಿಲ್ಲದೆ ತಂದೆಯ ಮನೆಗೆ ಹೋಗುತ್ತಾಳೆ. ಬೇರೆ ದಾರಿಯಿಲ್ಲ ಎಂದು ಅರ್ಧ ಸೀರೆಯನ್ನು ಹರಿದುಕೊಂಡು ಹೊರಟನು.

ದಮಯಂತಿಯನ್ನು ಬಿಟ್ಟು ಹೊರಟು ನಾಲ್ಕು ಹೆಜ್ಜೆ ಹೋದವನು ಮುಂದೆ ಅಡಿ ಇಡಲಾರದೆ ಮತ್ತೆ ಬಂದು ಕುಳಿತ. ನಂಬಿದ ಹೆಂಡರಿಯನ್ನು ಹೀಗೆ ಬಿಟ್ಟು ಹೋದರೆ ಕುಂಭಿಣಿ ಪಾತಕ ಬರುವುದಿಲ್ಲವೆ? ಆಕೆ ಹಂಬಲಿಸುತ ಎದ್ದು ದುಃಖ ಪಡುವಳೇನೋ? ಅಡವಿಯೊಳಗೆ ನನ್ನ ಹುಡುಕುತ್ತ ಬರುವಾಗ ಕಾಡು ಮೃಗಗಳು ತಿಂದುಬಿಡುವುವೇನೋ? ಹೀಗೆ ವನದಲ್ಲಿ ಚಿಂತಿಸುತ್ತ ಚಂದ್ರನಂತಹ ದಮಯಂತಿಯ ಮುಖ ಕಂದಿರುವುದನ್ನು ಕಂಡು ದುಃಖಿಸಿದ. ಗಟ್ಟಿ ಮನಸು ಮಾಡಿ ಬೇರೆ ದಾರಿಯಿಲ್ಲದೆ ಎಲ್ಲ ಮೋಹವನ್ನು ಬಿಟ್ಟು ನಳರಾಜ ಹೊರಟ. ಬೆಟ್ಟ ಗುಡ್ಡ ಹತ್ತಿ ಬರುತ್ತಿರುವಾಗ ಶನಿ ತನ್ನ ಮಾಯೆಯಿಂದ ಕಡ್ಗಿಚ್ಚನ್ನು ಉಂಟುಮಾಡಿದ. ಉರಿ ಭೂಮ್ಯಾಕಾಶಗಳನ್ನು ಆವರಿಸಿತು. ಆ ಉರಿಯ ಮಧ್ಯದಿಂದ “ದೊರೆಯೆ ನನ್ನ ಶರೀರ ಅಗ್ನಿಯಿಂದ ಉರಿದು ಹೋಗುತ್ತಿದೆ. ನನ್ನನ್ನು ಈ ಉರಿಯಿಂದ ರಕ್ಷಿಸಿ ಕಾಪಾಡು” ಎಂಬ ಮೊರೆ ಕೇಳಿಸಿತು. ನಳರಾಜ ಕರುಣೆಯಿಂದ ನೋಡಿದ. ಕಾರ್ಕೊಟಕನೆಂಬ ಸರ್ಪ ಉರಿಯ ಮಧ್ಯೆ ಸಿಕ್ಕಿಕೊಂಡಿತ್ತು. ವಿಷಸರ್ಪವನ್ನು ನಂಬುವುದೆಂತು? ಎಂದು ನಳರಾಜ ಯೋಚಿಸುತ್ತಿದ್ದ. ಆಗ ಕಾರ್ಕೊಟಕ “ನನ್ನನ್ನು ಕಾಪಾಡಿದವನನ್ನು ಕಚ್ಚುವುದುಂಟೆ. ಶಿರಕಾಯ್ದವನ ಕಚ್ಚಿದರೆ ಇಹಪರಗಳುಂಟೆ” ಎಂದು ಕೇಳಿಕೊಂಡಿತು. ಕಡೆಗೆ ನಳರಾಜ ಆ ಸರ್ಪವನ್ನು ಬೆಂಕಿಯಿಂದ ಹೊರತಂದ. ಆಗ ಕಾರ್ಕೊಟಕ “ಮುಂದೆ ಒಂದು ಕೊಳವಿದೆ. ಅಲ್ಲಿ ನನ್ನನ್ನು ಬಿಡು. ನಿನಗೆ ಬಹಳ ಉಪಕಾರ ಮಾಡುತ್ತೇನೆ” ಎಂದಿತು. ನಳರಾಜ ಅದನ್ನು ಕೊಳದ ಬಳಿ ತೆಗೆದುಕೊಂಡು ಹೋಗಿ ಕೆಳಗಿ ಬಿಡಲು ಬಗ್ಗಿದಾಗ ಕಾರ್ಕೋಟಕ ಅವನನ್ನು ಕಚ್ಚಿಬಿಟ್ಟಿತು, ಕೂಡಲೇ ಅವನ ಶರೀರ ವಿಕಾರವಾಯಿತು. ಇದರಿಂದ ಮನನೊಂದ ನಳರಾಜನಿಗೆ ಕಾರ್ಕೊಟಕವು “ಪೂರ್ವ ಜನ್ಮದಲ್ಲಿ ನಾನೊಬ್ಬ ಋಷಿಗೆ ದ್ರೋಹ ಮಾಡಿದೆ. ಅವನು ಸರ್ಪವಾಗೆಂದು ಶಾಪಕೊಟ್ಟ. ಪರಿಹಾರವನ್ನು ಕೇಳಲಾಗಿ ಕೃತ ಯುಗದಲ್ಲಿ ನಳಚಕ್ರವರ್ತಿಯನ್ನು ಶನಿ ಹಿಡಿದು ಭಾದೆಪಡಿಸುತ್ತಾನೆ. ಆಗ ನೀನವನನ್ನು ಕಚ್ಚು ಶಾಪ ಪರಿಹಾರವಾಗುತ್ತದೆ ಎಂದು ಹೇಳಿದ್ದ. ನಿನಗೆ ಸರ್ಪ ಕಚ್ಚಿತು ಎಂದು ಅನುಮಾನಬೇಡ, ನೀನು ಅಯೋದ್ಯಾನಗರಿಗೆ ಹೋಗು. ಈ ರೂಪು ಇರುವವರೆಗೆ ನಿನಗೆ ಯಾರಿಂದಲೂ ತೊಂದರೆ ಇಲ್ಲ. ಈ ಕನಕ ವಸ್ತ್ರವನ್ನು ತೆಗೆದುಕೊ. ನಿನಗೆ ನಿನ್ನ ಪೂರ್ವರೂಪು ಬೇಕೆನಿಸಿದಾಗ ನನ್ನನ್ನು ಸ್ಮರಿಸಿ ಈ ವಸ್ತ್ರ ಹೊದೆದುಕೊ” ಎಂದು ಹೇಳಿ ಕಾರ್ಕೊಟಕವು ಅದೃಶ್ಯವಾಯಿತು.

ಕಾರ್ಕೋಟಕನು ಸೂಚಿಸಿದಂತೆ ನಳಚಕ್ರವರ್ತಿಯು ಅಯೋದ್ಯಾನಗರಿಗೆ ಬಂದನು. ಅಲ್ಲಿನ ಅರಸು ಋತುಪರ್ಣನನ್ನು ಕಂಡು “ಅವನೀಶ ನನ್ನ ಹೆಸರು ಬಾಹುಕನೆಂದು. ನಾನು ಸಾರಥ್ಯ ಮಾಡಬಲ್ಲೆ. ಹಾಗೆಯೆ ಒಳ್ಳೆಯ ಬಾಣಸಿಗನೂ ಹೌದು. ನಿನಗೆ ಇಷ್ಟವಾದರೆ ನಿನ್ನಲ್ಲಿ ಇರಿಸಿಕೊ” ಎಂದನು. ಆಗ ಋತುಪರ್ಣನು ಇಂಥವನೊಬ್ಬ ನನ್ನ ಬಳಿ ಇದ್ದರೆ ಚಿಂತೆಯಿಲ್ಲ ಎಂದು ತನ್ನ ಅರಮನೆಯಲ್ಲಿ ಇರಿಸಿಕೊಂಡನು. ಮಕ್ಕಳನ್ನು ಭೀಮರಾಯನ ಹತ್ತಿರ ಬಿಟ್ಟು ಬರಲು ಹೋದ ಪ್ರಸ್ನೇಹನೆಂಬ ಸಾರಥಿಯು ಹಿಂತಿರುಗುವ ಹೊತ್ತಿಗೆ ನಳರಾಜ ಇಲ್ಲದಿರಲು ಅವನೂ ಋತುಪರ್ಣನಲ್ಲಿಗೆ ಬಂದು ಸೇರಿದನು. ಅವನು ತನ್ನ ಸಾರಥಿ ಎಂದು ನಳರಾಜ ಗುರುತಿಸಿದನಾದರೂ ಯಾರಿಗೂ ತಾನು ನಳರಾಜನೆಂದು ತಿಳಿಯಬಾರದೆಂದು ಮೌನವಾಗಿ ಇದ್ದನು.

ಇತ್ತ ಅರಣ್ಯದ ಹಾಳು ಮಂಟಪದಲ್ಲಿ ಮಾಯಾನಿದ್ರೆಗೆ ಒಳಗಾಗಿದ್ದ ದಮಯಂತಿಯು ಎಚ್ಚರವಾದಳು. ತನ್ನ ಇನಿಯ ಇಲ್ಲದಿರುವುದನ್ನು ಕಂಡು ಅವನನ್ನು ಪರಿಪರಿಯಾಗಿ ನೆನೆದು ದುಃಖಿಸಿ ಮೂರ್ಛೆಹೋದಳು. ಆಗ ಆ ಕಾಡಿನ ಮೃಗಪಕ್ಷಿಗಳೆಲ್ಲ ಕೂಡಿ ಆಕೆಯನ್ನು ಉಪಚರಿಸಿದವು. ಮೂರ್ಛೆ ತಿಳಿದೆದ್ದ ದಮಯಂತಿ ಇಲ್ಲಿರಬಾರದೆಂದು ತನ್ನ ಪರಿಯನ್ನು ಅರಸುತ್ತಾ ಕಾಡಿಗೆ ಹೋಗುತ್ತಿದ್ದಳು. ಭಯಂಕರವಾದ ಸರ್ಪವೊಂದನ್ನು ಕಂಡು ದಮಯಂತಿ ಹೆದರಿ ಮೂರ್ಛೆ ಹೋದಳು. ಅವಳು ಹೆದರಿ ಕಿರುಚಿದ್ದನ್ನು ಕೇಳಿದ ಶಬರನೊಬ್ಬ ಓಡಿ ಬಂದು ಆ ಸರ್ಪವನ್ನು ಹಿಡಿದು ತುಂಡು ತುಂಡು ಮಾಡಿದ. ಮೂರ್ಛೆತಿಳಿದ ದಮಯಂತಿ ಶಬರನನ್ನು “ನೀನು ನನ್ನ ಜೀವ ಉಳಿಸಿದೆ. ಇಲ್ಲವಾದರೆ ಸರ್ಪ ನನ್ನ ತಿಂದು ಹಾಕುತ್ತಿತ್ತು. ಪ್ರಾಣರಕ್ಷಕನಾದ ನೀನು ನನಗೆ ತಂದೆಯ ಸಮಾನ” ಎಂದಳು. ಆದರೆ ಆ ಶಬರ ದಮಯಂತಿಯನ್ನು ಕಾಮಿಸಿ ನನ್ನ ಜೊತೆಗೆ ಬಂದು ಬಿಡು ಎಂದು ಅಹಸ್ಯವಾಗಿ ನಡೆದುಕೊಂಡ. ಅದರಿಂದ ಆಕೆಯ ಶಾಪಕ್ಕೆ ಗುರಿಯಾಗಿ ಸತ್ತ.

ತನ್ನ ಕೆಟ್ಟ ಅದೃಷ್ಟವನ್ನು ಹಳಿಯುತ್ತಾ ದಮಯಂತಿ ಹೋಗುತ್ತಿರುವಾಗ ಎದುರಿಗೆ ಭಯಂಕರವಾದ ಕಾಡ್ಗಿಚ್ಚನ್ನು ಕಂಡಳು. ತನಿನ್ನು ಬದುಕಿ ಪ್ರಯೋಜನವಿಲ್ಲ. ಅಗ್ನಿ ಪ್ರವೇಶ ಮಾಡಿ ಸಾಯುವುದೆ ಲೇಸೆಂದು ಆಕೆ ಆ ಕಾಡ್ಗಿಚ್ಚಿನೊಳಗೆ ನುಗ್ಗಿದಳು. ಅವಳು ಹೋದೋಡನೆಯೆ ಆ ಬೆಂಕಿ ಮಳೆಬಿದ್ದಂತೆ ಆರಿ ತಣ್ಣಗಾಯಿತು. ದಮಯಂತಿ ತನ್ನ ಹೀನ ಅದೃಷ್ಟವನ್ನು ಹಳಿಯುತ್ತಾ ಮುಂದೆ ಹೋದಳು. ವಿಷದ ಗಿಡಗಳು ಬೆಳೆದಿದ್ದವು. ಆಕೆ ಅವುಗಳ ಎಲೆಗಳನ್ನು ಕಿತ್ತು ಸಾಯಲೆಂದು ತಿಂದಳು. ಆದರೆ ಅದು ಮೃಷ್ಟಾನ್ನ ಉಂಡಂತೆ ಹಸಿವೆಯನ್ನಿಂಗಿಸಿ ತೃಪ್ತಿನೀಡಿತು. ಇದೆಲ್ಲವೂ ಪೂರ್ವಜನ್ಮದ ಕರ್ಮಫಲ ಸಾಯಲೂ ಬಿಡದೆಂದುಕೊಂಡು ದಮಯಂತಿ ಅಲ್ಲಿಂದ ಮುಂದೆ ಹೊರಟಳು. ಸ್ವಲ್ಪ ಮುಂದೆ ಋಷಿಗಳ ಆಶ್ರಮಗಳನ್ನು ಕಂಡು ಅಲ್ಲಿಗೆ ಹೋದಳು. ಅಲ್ಲಿದ್ದ ಮುನಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ “ನನ್ನ ಇನಿಯನು ನನ್ನನ್ನು ಕಾಡಿನಲ್ಲಿ ಬಿಟ್ಟು ಹೋಗಿದ್ದಾನೆ. ಎಲ್ಲಿ ಹೋದನೋ ತಿಳಿಯದು. ನೀವು ಯೋಗ ದೃಷ್ಟಿಯುಳ್ಳವರು. ನನ್ನ ಪತಿಯೂ ನಾನು ಮತ್ತೆ ಒಂದಾಗಿ ಸೇರುವಂತೆ ಅನುಗ್ರಹಿಸಬೇಕು” ಎಂದು ಆ ಮುನಿಗಳನ್ನು ಕೇಳಿಕೊಂಡಳು. ಋಷಿಗಳು ಯೋಗ ದೃಷ್ಟಿಯಿಂದ ಎಲ್ಲವನ್ನು ತಿಳಿದು “ನೀನು ಭಯಪಡಬೇಕಾಗಿಲ್ಲ. ನಿನ್ನ ರಮಣನು ಮಾರುವೇಷದಿಂದ ಋತುಪರ್ಣನಲ್ಲಿದ್ದಾನೆ. ನೀನು ಮಹಾ ಪತಿವ್ರತೆ. ಶನಿಯು ಹಿಡಿದು ನಿಮ್ಮನ್ನು ಕಾಡುತ್ತಿದ್ದಾನೆ. ಅವನು ತನ್ನ ದೃಷ್ಟಿಯನ್ನು ಹಿಂತೆಗೆಯುವವರೆಗೆ ಯಾರೂ ಏನೂ ಮಾಡುವಂತಿಲ್ಲ. ನೀನು ಈ ಕಾಡಿನಲ್ಲಿರಬೇಡ. ಸುಭಾಹುವಿನ ಪುರಕ್ಕೆ ಹೋಗಿ ಅಲ್ಲಿ ಅವನ ಮಗಳಿಗೆ ಸೈರಂದ್ರಿಯಾಗಿರು. ಮುಂದೆ ಎಲ್ಲವೂ ಒಳ್ಳೆಯದಾಗುತ್ತದೆ” ಎಂದು ಹೇಳಿದರು.

“ಮೂರು ವರ್ಷಗಳ ನಂತರ ನೀನು ನಿನ್ನ ಪತಿಯೂ ಕೂಡುವಿರಿ. ಇದು ಸತ್ಯವಾಕ್ಯ” ಎಂದು ಋಷಿಗಳು ಹೇಳಿದ ಮಾತುಗಳನ್ನು ಕೇಳಿ ದಮಯಂತಿ ತನ್ನ ಪ್ರಯಾಣವನ್ನು ಮುಂದುವರಿಸಿದಳು. ಹೀಗೆ ದುಃಖದಿಂದ ಅವಳು ಮುಂದುವರಿಯುತ್ತಿರಲು ಅಕ್ಕಿ ಹೇರುಗಳನ್ನು ಹೇರಿಕೊಂಡು ವ್ಯಾಪಾರಿಗಳು ಆ ಮಾರ್ಗವಾಗಿ ಬಂದರು. ಅವರನ್ನು ಕಂಡು ದಮಯಂತಿ ಸಂತೋಷಪಟ್ಟಳು. ಆದರೆ ಆ ವರ್ತಕರು ಕಾಡಿನಲ್ಲಿ ಈಕೆಯನ್ನು ಕಂಡು ಭೂತವೋ ಪ್ರೇತವೋ ಎಂದು ಹೆದರಿದರು. ಅವರಲ್ಲೊಬ್ಬ ಧೈರ್ಯವಂತ ಮುಂದೆ ಹೋಗಿ ಈಕೆಗೆ ವಂದಿಸಿ “ನೀವಾರಮ್ಮ” ಎಂದು ಕೇಳಿ ಅವಳ ವೃತ್ತಾಂತವನ್ನೆಲ್ಲಾ ತಿಳಿದುಕೊಂಡನು. ದಮಯಂತಿ ತಮಗೊದಗಿದ ಕಷ್ಟಗಳನ್ನೆಲ್ಲಾ ವಿವರಿಸಿದಳು. ಮುನಿಗಳು ಹೇಳಿದ ಬುದ್ಧಿವಾದದಂತೆ ಈ ಅರಣ್ಯದಲ್ಲಿ ನಿಮ್ಮ ಪತಿಯನ್ನು ಅರಸುವುದನ್ನು ಬಿಡು. ನಾವು ನಿನ್ನನ್ನು ಸುಭಾಹುವಿನ ಪುರಿಗೆ ಬಿಡುತ್ತೇವೆ” ಎಂದು ಆ ವರ್ತಕರು ದಮಯಂತಿಗೆ ಧೈರ್ಯ ಹೇಳಿದರು. ಹೀಗೆ ದಮಯಂತಿ ಮತ್ತು ವರ್ತಕರು ಮುಂದೆ ಹೋಗುತ್ತಿರುವಾಗ ಒಂದು ಸರೋವರ ಸಿಕ್ಕಿತು. ರಾತ್ರಿಯಾಗುತ್ತಿದ್ದುದರಿಂದ ಅವರು ಅಲ್ಲಿಯೇ ಬೀಡುಬಿಟ್ಟರು. ರಾತ್ರಿ ಸರೋವರದಲ್ಲಿ ನೀರು ಕುಡಿಯಲು ಬಂದ ಕಾಡಾನೆಯ ಹಿಂಡು ವರ್ತಕರ ಬಿಡಾರಕ್ಕೆ ನುಗ್ಗಿದವು. ವರ್ತಕರನೇಕರು ಆನೆಯ ಕಾಲಿಗೆ ಸಿಕ್ಕಿ ಸತ್ತರು. ಹೇರಿನ ಎತ್ತುಗಳು ಹೆದರಿ ದಿಕ್ಕಾಪಾಲಾದವು. ಈ ಘೋರ ದೃಶ್ಯ ಕಂಡ ದಮಯಂತಿ ತನ್ನನ್ನಾದರೂ ಕೊಲ್ಲಲೆಂದು ಆನೆಯ ಗುಂದಿಗೆದುರಾಗಿ ಬಂದಳು. ಆಕೆಯನ್ನು ಕಂಡೊಡನೆ ಆನೆಯ ಹಿಂಡು ಹೆದರಿ ಓಡಿ ಹೋಯಿತು. ದಮಯಂತಿ ಹಸಗೆಟ್ಟು ಅಳಿದುಳಿದ ವರ್ತಕರಿಗೆ ಸಮಾದಾನ ಹೇಳಿ ನನ್ನಿಂದ ನಿಮಗೆ ತೊಂದರೆಯಾಯಿತು ಎಂದಳು. ಉಳಿದ ವರ್ತಕರು “ಅಮ್ಮ ನೀವಿರಲಾಗಿ ಆನೆಗಳು ನಮ್ಮ ಕೆಲವರನ್ನಾದರೂ ಬಿಟ್ಟವು. ನೀವೇನು ಮಾಡುವಿರಿ. ನೀವು ದುಃಖಿಸಬೇಡಿ” ಎಂದರು. ಅಷ್ಟರಲ್ಲಿ ಬೆಳಗಾಯಿತು. ಅವರೆಲ್ಲ ಹೊರಟು ಪ್ರಯಾಣಮಾಡಿ ಸುಬಾಹುವಿನ ಪಟ್ಟಣ ಬಂದು ಸೇರಿದರು.

ದಮಯಂತಿ ಆ ನಗರದ ಬೀದಿಯಲ್ಲಿ ಬರುವಾಗ ನಗರದ ಜನರು ಕಂಡು ಇವಳಾರು? “ಹರಿಯ ಹೆಂಡತಿಯೊ? ಹರನ ರಾಣಿಯೊ? ಬ್ರಹ್ಮನ ಪತ್ನಿಯೊ, ಇಂದ್ರನ ಶಚಿಯೊ, ಚಂದ್ರಮತಿಯೊ” ಎಂದು ಮಾತನಾಡಿಕೊಳ್ಳುತ್ತಿದ್ದರು. ಅರಮನೆಯ ಉಪ್ಪರಿಕೆಯಲ್ಲಿ ಕುಳಿತಿದ್ದ ರಾಜಮಾತೆ ಈಕೆಯನ್ನು ಕಂಡು ತನ್ನ ದೂತಿಯನ್ನು ಕರೆದು “ಆಕೆ ಯಾರೆಂದು ವಿಚಾರಿಸಿ ಕರೆದು ತನ್ನಿ” ಎಂದು ಕಳಿಸಿದಳು. ಆ ದೂತಿಯರು ಬಂದು ರಾಜಮಾತೆಯ ಹತ್ತಿರಕ್ಕೆ ದಮಯಂತಿಯನ್ನು ಕರೆದು ತಂದರು. ರಾಜ ಮಾತೆಯು “ನೀನು ಯಾರು? ನಿನ್ನ ರಮಣ ಯಾರು? ಏನು ಕಾರಣ ಇಲ್ಲಿಗೆ ಬಂದಿರುವೆ?” ಎಂದು ಕೇಳಿದಳು. ಆಗ ದಮಯಂತಿ, ನಳೆನೆಂಬ ಗಂಧರ್ವನು ನನ್ನ ಪತಿ. ಒಂದು ದಿನ ಮೇಲೋಕದಲ್ಲಿ ನಾನು ಬಳಲಿ ನಿದ್ರೆ ಹೋದೆ. ಆಗ ನನ್ನ ಪತಿ ನನ್ನನ್ನು ಬಿಟ್ಟು ಹೋರಟುಹೋಗಿದ್ದಾನೆ. ಆತನನ್ನು ಅರಸುತ್ತಾ ಬರುವಾಗ ನಿಮ್ಮ ನಗರಕ್ಕೆ ಬಂದೆ. ಅವನು ಸಿಗುವಂತಿಲ್ಲ. ಕೆಲವು ದಿನ ಇಲ್ಲಿಯೇ ಇರಬಲ್ಲೆ. ನಾನು ಮುಡಿ ಕಟ್ಟಬಲ್ಲೆ, ಉಡುಗೆ ಉಡಿಸುವೆ, ಆಭರಣ ತೊಡಿಸುವೆ, ಕೈಯಿಂದ ಕಣ್ಣಿಗೆ ಕಾಡಿಗೆ ಹಚ್ಚಬಲ್ಲೆ, ಯಣ್ಣೆಗಂಟು ಹಾಕಬಲ್ಲೆ, ಕಸ್ತೂರಿ ತಿಲಕ ಇಡಬಲ್ಲೆ. ನನ್ನ ಹೆಸರು ಪ್ರಭುರಾಣೆಯೆಂದು. ನೀವು ಇರು ಎಂದರೆ ಸೈರಂದ್ರಿಯಾಗಿರುತ್ತೇನೆ ಇಲ್ಲವಾದರೆ ಮುಂದೆ ಹೋಗುತ್ತೇನೆ ಎಂದಳು. ಆಗ ರಾಣಿಯು “ನೀನೆಷ್ಟು ದಿನ ಬೇಕೊ ಅಷ್ಟು ದಿನ ಇಲ್ಲೆ ಇರು. ಇಂದಿನಿಂದ ನಿನ್ನನ್ನು ನನ್ನ ಮಗಳಂತೆ ನೋಡಿಕೊಳ್ಳುತ್ತೇನೆ. ನಮ್ಮ ಮನೆಯಲ್ಲಿ ಲಕ್ಷ್ಮಿಯಂತಿರು. ” ಎಂದಳು. ಅದಕ್ಕೆ ದಮಯಂತಿ “ನಾನು ಪರರ ಮನೆಗೆ ಪರಪುರುಷರ ಬಳಿಗೆ ಹೋಗುವುದಿಲ್ಲ. ಈಗ ನಾನುಟ್ಟಿರುವ ಸೀರೆಯಲ್ಲದೆ ಬೇರೆ ಉಡುವುದಿಲ್ಲ ನಿಮಗೆ ಒಪ್ಪಿಗೆಯಾದರೆ ಇರಿಸಿಕೂಳ್ಳಿ” ಎಂದಳು. ಆಗ ರಾಜಮಾತೆಯು ಪ್ರಭುರಾಣಿಯ ಮಾತಿಗೆ ಸಮ್ಮತಿ ಪಟ್ಟು ತನ್ನಲ್ಲಿರಿಸಿಕೊಂಡಳು.

ಭೀಮರಾಯನು ಮಗಳು ಮತ್ತು ಅಳಿಯ ಏನಾದರೊ? ಇಂದು ಬಂದಾರು, ನಾಳೆ ಬಂದಾರು? ಎಂದು ಕಾಯ್ದು ನಿರಾಶನಾದನು. ಕಡೆಗೆ ಮಂತ್ರಿ ಮನ್ನೆಯರೊಂದಿಗೆ ಚಿಂತಿಸಿ ವಸುದೇವನೆಂಬ ಬ್ರಾಹ್ಮಣನಿಗೆ ಅನೇಕ ಆಭರಣ ಮತ್ತು ಹೊನ್ನುಗಳನ್ನು ಕೊಟ್ಟು ತನ್ನ ಅಳಿಯ ಮಗಳನ್ನು ಹುಡುಕಿ ತರುವಂತೆ ಕಳಿಸಿದನು ಅವನು ಅನೇಕ ದೇಶಗಳನ್ನು, ನಗರಗಳನ್ನು ಹುಡುಕಿ ಅಲ್ಲೆಲ್ಲಿಯೂ ನಳದಯಂತಿಯರನ್ನು ಕಾಣದೆ ಸುಭಾಹುವಿನ ನಗರಕ್ಕೆ ಬಂದನು. ಕಾವಿದೋತ್ರವನ್ನುಟ್ಟು ಕೈಯಲ್ಲಿ ಪಂಚಾಂಗ ಹಿಡಿದು ಬಂದ ವಸುದೇವ ಆ ನಗರದ ಬ್ರಾಹ್ಮಣರ ಪ್ರೀತಿ ವಿಶ್ವಾಸಗಳಿಸಿದ. ಜ್ಯೋತಿಸ್ಸಿಂದ್ದಾತ ಶಾಸ್ತ್ರದಲ್ಲಿ ಪ್ರವೀಣನೆನಿಸಿಕೊಂಡ. ಒಂದು ದಿನ ಅರಮನೆಯಿಂದ ಭೂರಿದಾನಕ್ಕಾಗಿ ಬ್ರಾಹ್ಮಣರಿಗೆ ಆಹ್ವಾನ ಬಂದಿತು. ಊರಿನ ಬ್ರಾಹ್ಮಣರು ವಸುದೇವನನ್ನೂ ಅರಮನೆಗೆ ಕರೆದೊಯ್ದರು. ರಾಜಮಾತೆಯೊಂದಿಗಿದ್ದ ದಮಯಂತಿಯು ನನ್ನು ತಂದೆ ಭೀಮರಾಯನ ಅರಮನೆಯ ಬ್ರಾಹ್ಮಣ ಎಂದು ಗುರುತಿಸಿ ತನ್ನ ಮುಖವನ್ನು ಮರೆಮಾಡಿಕೊಂಡು ಓಡಾಡಲಾರಂಭಿಸಿದಳು, ವಸುದೇವನೂ ದಮಯಂತಿಯನ್ನು ಗುರುತಿಸಿ ನಳನಿಗಾಗಿ ಅರಸುತ್ತಿದ್ದನು. ಈ ಬ್ರಾಹ್ಮಣನನ್ನು ಕಂಡು ದಮಯಂತಿಗೆ ಮಕ್ಕಳನ್ನು ನೆನೆದು ದುಃಖವಾಯಿತು. ಅವನನ್ನು ಕಂಡಾಗಲೆಲ್ಲ ಆಕೆ ಅಳುತ್ತಿದ್ದಳು. ರಾಜಕುಮಾರಿ ಇದನ್ನು ಗಮನಿಸಿ ತನ್ನ ತಾಯಿಯ ಬಳಿಗೆ ಹೋಗಿ “ಅಮ್ಮ ನಮ್ಮ ಪ್ರಭುರಾಣಿ ಬ್ರಾಹ್ಮಣನೊಬ್ಬನನ್ನು ನೋಡಿ ಅಳುತ್ತಿದ್ದಳು” ಎಂದು ಹೇಳಿದಳು. ಆಗ ರಾಜಮಾತಿ ವಸುದೇವನನ್ನೂ ಕರೆಸಿ “ನಿನ್ನನ್ನು ಕಂಡು ನಮ್ಮ ಪ್ರಭುರಾಣಿ ದುಃಖಿಸಲು ಕಾರಣೆವೇನು” ಎಂದು ಕೇಳಿದಳು. ವಸುದೇವ “ಆಕೆ ನಳನ ಹೆಂಡತಿ, ಭೀಮರಾಯನ ಮಗಳು” ಎಂದು ನಡೆದ ಸಂಗತಿಯನೆಲ್ಲ ವಿವರಿಸಿದ. ಪ್ರಭುರಾಣಿ ತನ್ನ ಸಹೋದರಿಯ ಮಗಳು ದಮಯಂತಿ ಎಂದು ತಿಳಿದು ರಾಜಮಾತೆ ಸಂತೋಷ ಪಟ್ಟಳು. ಕೂಡಲೆ ಅವಳನ್ನು ಕರಿಸಿ ಆಲಂಗಿಸಿ ಮುದ್ದಿಸಿ ಸಕಲ ವಸ್ತ್ರಾಭರಣಗಳನ್ನು ತರಿಸಿ “ನಿನ್ನ ಪತಿ ಮೂಲೋಕದಲ್ಲೆಲ್ಲಿದ್ದರೂ ಹುಡುಕಿಸಿ ತರುತ್ತೇನೆ. ನೀನು ವಸ್ತ್ರಾಭರಣ ತೊಟ್ಟು ಊರಿಗೆ ಹೋಗು” ಎಂದಳು. ಗಂಡನಿಲ್ಲದಾಗ ವಸ್ತ್ರಾಭರಣ ತೊಟ್ಟು ಮೆರೆಯುತ್ತಾಳೆಂದು ಜನ ಆಡಿಯಾರು ಬೇಡ ಎಂದು ದಮಯಂತಿ ನಿರಾಕರಿಸಿದಳು. ಕಡೆಗೆ ಎಲ್ಲರೂ ಸೇರಿ ಒಪ್ಪಿಸಿ ಸಕಲಮರ್ಯಾದೆಯೊದನೆ ದಮಯಂತಿಯನ್ನು ತಂದೆಯ ಮನೆಗೆ ಕಳಿಸಿದರು. ಆಕೆ ಪಲ್ಲಕ್ಕಿ ಇಳಿದು ತಂದೆ ತಾಯಿಗೆ ವಂದಿಸಿ ತನ್ನ ವಿಷಯವನ್ನೆಲ್ಲಾ ಹೇಳಿಕೊಂಡಳು.

ವಸುದೇವನಿಗೆ ಮತ್ತೆ ಕನಕಾಭರಣಗಳನ್ನು ಕೊಟ್ಟು ನಳನನ್ನು ಹುಡುಕಲು ಕಳಿಸಿದರು. ಅವನು ಋತುಪರ್ಣನ ಅಯೋದ್ಯಾನಗರಿಗೆ ಬಂದು ಮಾರು ರೂಪಿನ ಬಾಣಸಿಗನನ್ನು ಕಂಡನಾದರೂ ಗುರುತಿಸದಾದನು. ಕಡೆಗೆ ದಮಯಂತಿಯ ಅಪೇಕ್ಷೆಯಂತೆ ದಮಯಂತಿಗೆ ಎರಡನೆಯ ಸ್ವಯಂವರವೆಂದು ಋತುಪರ್ಣನಿಗೆ ಆಹ್ವಾನ ಕಳಿಸಲಾಯಿತು. ಸ್ವಯಂವರ ನಿಗದಿಯಾಗಿದ್ದ ಕಾಲದ ಹೊತ್ತಿಗೆ ಅಯೋಧ್ಯೆಯಿಂದ ನಳನಲ್ಲದೆ ಬೇರೆ ಯಾರೂ ವಿದರ್ಭಾನಗರಿಗೆ ರಥ ಹೊಡೆಯಲಾರರೆಂದು ದಮಯಂತಿಗೆ ತಿಳಿದಿತ್ತು. ಇತ್ತ ಭೀಮರಾಯನ ಆಹ್ವಾನದಂತೆ ಋತುಪರ್ಣರಾಯ ವಿದರ್ಭಾನಗರಿಗೆ ಹೊರಡಲನುವಾದನು. ಸಾರಥಿಯನ್ನು ಕರೆದು ನಾನು “ಕೂಡಲೆ ವಿದರ್ಭಾನಗರಿಗೆ ಹೋಗಬೇಕು, ರಥಕ್ಕೆ ಎಲ್ಲಿಯೂ ನಿಲ್ಲದೆ ಪ್ರಯಾಣ ಮಾಡುವಂಥ ಉತ್ತಮ ಕುದುರೆಗಳನ್ನು ಹೂಡಿ ಸಿದ್ಧವಾಗು” ಎಂದನು. ಆದರೆ ಬಾಹುಕನು ಲಾಯಕ್ಕೆ ಬಂದು ಸಾಧಾರಣವಾದ ಕುದುರೆಗಳೆರಡನ್ನು ರಥಕ್ಕೆ ಹೂಡಿ ಸಿದ್ಧಪಡಿಸಿದನು. ಆ ಸಮಯದಲ್ಲಿ ಅಲ್ಲಿಯೇ ಇದ್ದ ಪ್ರಸ್ನೇಹನು ನಳರಾಜನನ್ನು ಬಾಹುಕನೆಂದು ತಿಳಿದು ತನ್ನ ವೃತ್ತಾಂತವನ್ನು ಹೇಳಿದನು. ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ಋತುಪರ್ಣ ಮತ್ತು ಅವನ ಪರಿವಾರದವಾರೆಲ್ಲ ರಥಕ್ಕೆ ಹೂಡಿದ್ದ ಬಡ ಕುದುರೆಗಳನ್ನು ನೋಡಿ ನಗಲಾರಂಭಿಸಿದರು. ಋತುಪರ್ಣನು “ಇದೇನು ಬಾಹುಕ ಅಶ್ವ ಹೃದಯವ ಬಲ್ಲೆ ಎಂದು ಹೇಳಿ ಈ ಬಡಕುದುರೆಗಳನ್ನು ರಥಕ್ಕೆ ಹೂಡಿರುವೆ?” ಶತಯೋಜನದ ವಿದರ್ಭಾಪುರಿಯನ್ನು ಸೂರ್ಯ ಮುಳುಗುವ ಹೊತ್ತಿಗೆ ತಲುಪಲು ಸಾಧ್ಯವೇ ಎಂದ! ಆಗ ಬಾಹುಕನು ದಿಟ್ಟತನದಿಂದ ನೀವು ರಥಹತ್ತಿ” ಎಂದ . ರಥ ಶರವೇಗದಿಂದ ಹೊರಟಿತು.

ಸನ್ನೆ ಮಾಡಿದ ಕೂಡಲೆ ಕುದುರೆಗಳು ವಾಯುವೇಗದಲ್ಲಿ ಹೊರಟವು. ರಥ ಹೋಗುತ್ತಿದ್ದ ವೇಗಕ್ಕೆ ಋತುಪರ್ಣ ಹೊದ್ದಿದ್ದ ವಸ್ತ್ರ ಜಾರಿಬಿದ್ದಿತು. ಆತ ಕೂಡಲೆ ರಥ ನಿಲ್ಲಿಸುವಂತೆ ಹೇಳಿದ. ಬಾಹುಕ “ನಿಮ್ಮ ವಸ್ತ್ರ ಒಂದು ಯೋಜನದ ಹಿಂದಿದೆ” ಎಂದ. ಮಾತಾಡುವಷ್ಟರಲ್ಲಿ ಇಷ್ಟು ದೂರ ರಥಬಂತೆ, ನಿನ್ನಂತೆ ರಥ ನಡೆಸುವವರನ್ನು ನಾನಿದುವರೆಗೆ ಕಂಡಿಲ್ಲ ಎಂದ. ಋತುಪರ್ಣನು “ಮುಂದೆ ಒಂದು ತಾರೆಯ ಮರವಿದೆ. ಅದರ ಒಂದು ಕವಲಿನಲ್ಲಿ ಎರಡು ಸಾವಿರ ಫಲವಿದೆ. ಎಳ್ನೂರು ಬೇರುಗಳಿವೆ” ಎಂದು ಹೇಳಿ ಅಲ್ಲಿ ರಥ ನಿಲ್ಲಿಸಿ ಬಾಹುಕನಿಗೆ ಎಣಿಸಲು ಹೇಳಿದನು. ಲೆಕ್ಕ ಸರಿಯಾಗಿದ್ದಿತು. ಋತುಪರ್ಣ ಈ ವಿದ್ಯೆಯನ್ನು ನಾನು ನಿನಗೆ ಅಶ್ವವಿದ್ಯೆಯನ್ನು ನನಗೆ ಹೇಳಿಕೊಡುತ್ತೇನೆ ಎಂದನು. ಅದಕ್ಕೆ ಬಾಹುಕ ಒಪ್ಪಿದನು. ಅವರು ಸೂರ್ಯಾಸ್ತಕ್ಕೆ ಮೊದಲೇ ವಿದರ್ಭಾನಗರಿಯನ್ನು ಸೇರಿದರು.

ರಥದ ಗಾಲಿಯ ಸದ್ದನ್ನು ಕೇಳಿ ದಮಯಂತಿ ಮೇಲ್ಮನೆಯ ತುದಿಗೆ ಬಂದು ನೋಡಿದಳು. ಈ ರೀತಿ ರಥ ನಡೆಸುವವನು ನನ್ನ ರಮಣನಲ್ಲದೆ ಬೇರೆಯವರಿಗೆ ಈ ಪ್ರತಾಪ ಬರುವುದಿಲ್ಲ. ಋಷಿಗಳು ಹೇಳಿದ್ದ ವಿಷಯ ನೆನಪಾಯಿತು. ತನ್ನ ತಂದೆಯ ಬಳಿಗೆ ಹೋಗಿ ದಮಯಂತಿ ಎಲ್ಲವನ್ನೂ ಹೇಳಿದಳು. ಮಗಳ ಮಾತಿನಂತೆ ಋತುಪರ್ಣನನ್ನು ಇದಿರುಗೊಂಡು ಭೀಮರಾಯ ಒಂದು ಬಿಡದಿಯಲ್ಲಿ ಇರಿಸಿದನು.

ದಮಯಂತಿ ತನ್ನ ಸಖಿಯರನ್ನು ಕರೆದು “ಋತುಪರ್ಣನ ಸಾರಥಿಯ ಬಗ್ಗೆ ವಿವರ ತಿಳಿದುಬನ್ನಿ” ಎಂದು ಕಳಿಸಿದಳು. ಅವರು ಬಾಹುಕನಿದ್ದಲ್ಲಿಗೆ ಬಂದು ಅಡುಗೆಯಲ್ಲಿ ಅವನ ಪರಿಣತಿಯನ್ನು ಕಂಡು ಇವರ ಬಳಿಯಲ್ಲಿ ಎಷ್ಟು ದಿನಗಳಿಂದ ಇದ್ದೀರಿ. ನೀವು ಮಾರುವೇಷದ ನಳರಾಜರಲ್ಲವೆ? ಎಂದು ಕೇಳಿದರು. ಆಗ ಬಾಹುಕ ನನ್ನ ಹೆಸರು ಬಾಹುಕ ನೀವೇಕೆ ನನ್ನನ್ನು ಹಿಂಸಿಸುತ್ತೀರಿ ಹೋಗಿ ಎಂದನು. ಸಖಿಯರು “ನೀನು ನಳನಲ್ಲವೆ? ಮಾರುವೇಷದಿಂದ ಋತುಪರ್ಣನ ಬಳಿ ಇಲ್ಲವೆ? ನೀವು ಕಾಡಿನಲ್ಲಿ ಬಿಟ್ಟು ಹೋದಮೇಲೆ ದಮಯಂತಿ ಪಡಬಾರದ ಪಾಡು ಪಟ್ಟು ಇಲ್ಲಿಗೆ ಬಂದಳು. ಮಕ್ಕಳಿಗೋಸ್ಕರ ಪ್ರಾಣ ಉಳಿಸಿಕೊಂಡಿದ್ದಾಳೆ ನಿಮ್ಮ ಕರೆಸಲೆಂದೇ ಎರಡನೆಯ ಮದುವೆಯ ಸುದ್ದಿ ಹುಟ್ಟಿಸಿದರು ಎಂದು ಮುಂತಾಗಿ ಹೇಳಿದರು. ಇದರಿಂದ ಕೋಪಗೊಂಡ ಬಾಹುಕ “ಹೋಗಿ ಹೋಗಿ ನಿಮಗೆ ಬುದ್ಧಿ ಇಲ್ಲ. ನನ್ನ ಈ ರೂಪು ನೋಡಿ ಯಾರಾದರೂ ಹೆಂಗಸರು ಆಸೆಪಟ್ಟಾರೆನು? ನನಗೂ ನಳನಿಗೂ ಯಾವ ಸಂಬಂಧವೂ ಇಲ್ಲ” ಎಂದು ಸಖಿಯರನ್ನು ಗದರಿಸಿ ಕಳುಹಿಸಿಬಿಟ್ಟನು.

ದಮಯಂತಿ ತನ್ನ ಸಖಿಯರನ್ನು ಕರೆದು ಬಾಹುಕ ಮಾಡುವ ಅಡುಗೆಯನ್ನು ತನ್ನಿ ಎಂದು ಕಳುಹಿಸಿದಳು. ಸಖಿಯರು ಅವನು ಅಡುಗೆ ಮಾಡುವಲ್ಲಿಗೆ ಬಂದರು. ಅವನು ಒಲೆಯೊಳಗೆ ಸೌದೆ ಇರಿಸಿದರೆ ಸಾತು ಅದು ತಾನಾಗಿಯೇ ಉರಿಯುತ್ತದೆ. ಹೀಗೆಯೇ ಪ್ರತಿಯೊಂದು ಭಕ್ಷ್ಯ ಭೋಜ್ಯಗಳನ್ನು ಅವನು ಕಷ್ಟವಿಲ್ಲದೆ ತಯಾರಿಸಿದ. ನಮ್ಮ ಅರಮನೆಯ ವನಿತೆ ನಿಮ್ಮ ಅಡುಗೆಯನ್ನು ಬಯಸಿದ್ದಾಳೆ ಕೊಡಿ ಎಂದು ಕೇಳಿದರು. ಆಗ ಬಾಹುಕ ವೇಷದ ನಳರಾಜನು ತಾನು ಮಾಡಿದ ಅಡುಗೆಯನ್ನು ಅವರಿಗೆ ಕೊಟ್ಟನು. ಅವನ ಅಡುಗೆಯ ಕ್ರಮ ಅದರ ರುಚಿಯನ್ನು ನೋಡಿ ಈತ ನನ್ನ ಪತಿ ನಳ ಚಕ್ರವರ್ತಿಯೇ ಸರಿಯೆಂದು ದಮಯಂತಿ ತೀರ್ಮಾನಿಸಿದಳು. ಆಮೇಲೆ ತನ್ನ ಮಕ್ಕಳಿಬ್ಬರನ್ನೂ ಅವನಲ್ಲಿಗೆ ಕಳಿಸಿದಳು. ಆ ಮಕ್ಕಳನ್ನು ಕಂಡ ಬಾಹುಕನು ಸಂತೋಷದಿಂದ ಮುದ್ದಾಡಿದನು. ಅದನ್ನು ಕಂಡ ಸಖಿಯರು “ನೀನು ನಳನಲ್ಲದಿದ್ದರೆ ಈ ಮಕ್ಕಳನ್ನು ನೋಡಿ ಏಕೆ ದುಃಖಿಸಿದೆ” ಎಂದರು. ಅದಕ್ಕೆ ಬಾಹುಕನು “ಇವರಂಥವರು ನನಗೂ ಇಬ್ಬರೂ ಮಕ್ಕಳಿದ್ದರು. ನಾನು ಅವರನ್ನು ಬಿಟ್ಟುಬಂದು ಇಲ್ಲಿ ಸೇರಿದೆ. ಇವರನ್ನು ಕಂಡು ನನ್ನ ಮಕ್ಕಳ ನೆನಪಾಗಿ ದುಃಖಿಸಿದೆ” ಎಂದನು. ಇದೆಲ್ಲವನ್ನು ದಾದಿಯರು ದಮಯಂತಿಗೆ ಹೇಳಿದರು.

ಕಡೆಗೆ ಭೀಮರಾಯನು ಬಾಹುಕನನ್ನು ತನ್ನಲ್ಲಿಗೆ ಕರೆಸಿಕೊಂಡನು. ಅವನು ಭೀಮರಾಯನಿಗೆ ಕೈ ಮುಗಿದುನಿಂತಿರಲು ಸರಿಸಮಾನ ಪೀಠ ಹಾಕಿಸಿ ಅದರಲ್ಲಿ ಕುಳ್ಳಿರಿಸಿದನು. ದಮಯಂತಿಯೂ ಅಲ್ಲಿಗೆ ಬಂದಳು. “ನಿಮ್ಮ ತಂದೆ ಕರುಣೆಯಿಂದ ಎರಡನೆ ಮದುವೆಗೆ ಏರ್ಪಾಡು ಮಾಡಿದ್ದಾನೆ. ನೀನು ಮದುವೆಯಾಗಿ ಸುಖವಾಗಿರು” ಎಂದು ಬಾಹುಕ ವೇಷದ ನಳ ಹೇಳಿದನು. ದಮಯಂತಿ ತಾನು ಅರಣ್ಯದಲ್ಲಿ ಪಟ್ಟ ಪಾಡನ್ನು ಋಷಿಗಳ ಭವಿಷ್ಯವನ್ನು ವಿವರಿಸಿ ಎರಡನೆಯ ಮದುವೆಯ ಸುದ್ದಿ ನಿಮ್ಮನ್ನು ಕರಸಲು ಹೂಡಿದ ತಂತ್ರವೆಂದು ಪರಿಪರಿಯಾಗಿ ಹೇಳಿದರೂ ತಾನೂ ನಳನೆಂದು ಒಪ್ಪದಿರಲು ತಂದೆಗೆ ಕೊಂಡವನ್ನು ರಚಿಸುವಂತೆಯೂ ತಾನು ಅಗ್ನಿಪ್ರವೇಶ ಮಾಡುವುದಾಗಿಯೂ ದಮಯಂತಿ ಹೇಳಿದಳು. ಅದರಂತೆ ಕೊಂಡ ತಾಯಾರಾಯಿತು. ದಮಯಂತಿ ಸಾಕ್ಷಿ ಕಲ್ಲಿನ ಮೇಲೆ ನಿಂತು ಹರಿಹರನನ್ನು ಪ್ರಾರ್ಥಿಸಿ ಅಗ್ನಿಯಲ್ಲಿ ಧುಮುಕಿದಳು. ಕೂಡಲೆ ಬೆಂಕಿ ಆರಿ ತಣ್ಣಗಾಯಿತು. ಹೂವಿನ ಮಳೆಗರೆಯಿತು. ದೇವದುದುಂಬಿ ಮೊಳಗಿತು. ಹರಿಲಕ್ಷ್ಮಿಯೊಂದಿಗೆ ಪ್ರತ್ಯಕ್ಷನಾದ. ನಳದಮಯಂತಿಯರು ಒಂದಾದರು. ಮುಂದೆ ಪುಷ್ಕರನಿಂದ ರಾಜ್ಯಕೋಶಗಳನ್ನು ಗೆದ್ದು ಸುಖವಾಗಿದ್ದರು.