ಕನ್ನಡದಲ್ಲಿ ಉಪಲಬ್ಧವಿರುವ ಯಕ್ಷಗಾನ ಹಸ್ತ ಪ್ರತಿಗಳಿಗೆ ಸಂಬಂಧಿಸಿದಂತೆ ಕರಿರಾಯ ಚರಿತ್ರೆ ಅತ್ಯಂತ ಪ್ರಾಚೀನವಾದುದು. ಇದನ್ನು ತಾಳೆ ಓಲೆಯಲ್ಲಿ ಬರೆಯಲಾಗಿದೆ. ಕರಿರಾಯ ಚರಿತ್ರೆಯನ್ನು ಬರೆದ ಕವಿ ಕೆಂಪಣ್ಣಗೌಡ ಎಂಬುವನು. ಸಾಮಾನ್ಯವಾಗಿ ಹಸ್ತಪ್ರತಿಗಳಲ್ಲಿ ಕಾವ್ಯ ರಚನೆಯಾದ ಕಾಲ ಅಥವಾ ಪ್ರತಿ ಮಾಡಿದ ಕಾಲ ನಮೂದಾಗಿರುತ್ತದೆ. ಈ ಸಂಪ್ರದಾಯದಂತೆ ಕರಿರಾಯ ಚರಿತ್ರೆಯ ಕೊನೆಯಲ್ಲಿ ‘ದುರ್ಮತಿ ನಾಮ ಸಂವತ್ಸರದ ಜೇಷ್ಠ ಬಹುಳ ಬುಧವಾರದ ಮಧ್ಯಾಹ್ನದ ಕಾಲದವೇಳೆಗೆ ಸಂಪೂರ್ಣ ಎಂದಿದೆ. ಇದು ಜೇಷ್ಠ ಬಹುಳ ಬುಧವಾರದ ಮಧ್ಯಾಹ್ನದ ಕಾಲದವೇಳೆಗೆ ಸಂಪೂರ್ಣ ಎಂದಿದೆ. ಇದು ೧೪೮೦ಕ್ಕೆ ಸರಿಹೋಗುತ್ತದೆ ಎಂದು ತಜ್ಞರು ಲೆಕ್ಕ ಹಾಕಿ ತೀರ್ಮಾನಿಸಿದ್ದಾರೆ. ಕಾಲದ ಉಲ್ಲೇಖ ಹಸ್ತಪ್ರತಿಯ ಕೊನೆಯ ಭಾಗದಲ್ಲಿ ಗದ್ಯದಲ್ಲಿ ಇರುವುದರಿಂದ ಇದು ಕರಿರಾಯ ಚರಿತ್ರೆಯನ್ನು ಪ್ರತಿ ಮಾಡಿದ ಕಾಲವಾಗುತ್ತದೆ. ಆದುದರಿಂದ ಕೆಂಪಣ್ಣಗೌಡನ ಕರಿರಾಯ ಚರಿತ್ರೆ ೧೪೮೦ಕ್ಕೂ ಹಿಂದೆಯೇ ರಚಿತವಾಗಿ ಜನಪ್ರಿಯವಾಗಿತ್ತೆಂದು ಹೇಳಬಹುದಾಗಿದೆ. ಇದರಿಂದ ಕೆಂಪಣ್ಣಗೌಡ ಹದಿನಾಲ್ಕನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಕರಿರಾಯ ಚರಿತ್ರೆಯನ್ನು ರಚಿಸಿರಬೇಕೆಂದು ಗೊತ್ತಾಗುತ್ತದೆ.

ಕೆಂಪಣ್ಣಗೌಡ ತನ್ನ ತಂದೆ, ತಾಯಿ, ಊರು, ದೈವ ಮುಂತಾದ ವಿವರಗಳನ್ನೆಲ್ಲಾ ತನ್ನ ಕಾವ್ಯಗಳಲ್ಲಿ ಹೇಳಿಕೊಂಡಿದ್ದಾನೆ. ಇದರೊಂದಿಗೆ ನಳಚರಿತ್ರೆಯ ಕೊನೆಯ ಗದ್ಯದಲ್ಲಿ ‘ಈ ಪ್ರಕಾರದಿಂದ ದ್ವಾಪರಾಯುಗದಲ್ಲಿ ಬೃಹದಶ್ವಮುನೀಶ್ವರನು ಧರ್ಮುರಾಯನಿಗೆ ಹೇಳಿದಂತಹ ನಳಚರಿತ್ರೆಯನ್ನು ಕಲಿಯುಗದಲ್ಲಿ ಅಂದೇನ ಹಳ್ಳಿಯ ಜೀರಿಗೆ ಕೆಂಪಯ್ಯನ ಕುಮಾರ ಓದೋ ಕೆಂಪಯ್ಯನ ಕುಮಾರ ಸಕಲ ವಿದ್ಯಾಪ್ರವೀಣನಾದಂತಹ ಕೆಂಪಣ್ಣ ಗೌಡನು ಸಕಲ ಕವಿಗಳಿಗೆ ಸಾಷ್ಟಾಂಗವೆರಗಿ ಯಕ್ಷಗಾನವ ಮಾಡಿದನು’ ಎಂದಿದೆ. ಕಾವ್ಯದ ಆದಿ ಮಧ್ಯ ಮತ್ತು ಅಂತ್ಯ ಪದ್ಯಗಳಲ್ಲಿ ಅವನ ಈ ವಿವರಗಳೆಲ್ಲ ಇರುವುದರಿಂದ ಮತ್ತೆ ಕವಿಯೇ ಗದ್ಯದಲ್ಲಿ ಇದನ್ನು ಬರೆದನೆ ? ಅಥವಾ ಪ್ರತಿಕಾರ ಬರೆದನೆ ಹೇಳುವುದು ಕಷ್ಟ. ಇವನ ತಂದೆ ಓದೋ ಕೆಂಪಯ್ಯ, ಜೀರಿಗೆ ಕೆಂಪಯ್ಯ. ಇವನ ತಾತ. ಓದೋ ಎಂದರೆ ಕಾವ್ಯಗಳನ್ನು ಗಮಕ, ಯಕ್ಷಗಾನ ಶೈಲಿಯಲ್ಲಿ ಓದುವ, ಅಕ್ಷರ ಬಲ್ಲವ ಎಂದು ಅರ್ಥವಾಗುತ್ತದೆ. ಇದರಿಂದ ಕೆಂಪಣ್ಣಗೌಡನ ತಂದೆ ಓದು ಬರಹ ಬಲ್ಲವನಾಗಿದ್ದು ಕಾವ್ಯಗಳನ್ನು ಓದುವವನಾದುದರಿಂದ ಸ್ವಾಭಾವಿಕವಾಗಿಯೇ ಅದು ಮಗನ ಮೇಲೆ ಪರಿಣಾಮ ಬೀರಿದೆ. ಜೀರಿಗೆಯೆಂಬುದು ಇವರ ಮೂಲ ಊರೆ, ಅಥವಾ ಅವರ ಕುಲನಾಮದಿಂದ ಈ ಹೆಸರು ಬಂತೆ ಹೇಳಲಾಗುವುದಿಲ್ಲ. ಕರಿರಾಯ ಚರಿತ್ರೆಯಲ್ಲಿ ಕವಿ ತನ್ನ ಬಗ್ಗೆ ಹೀಗೆ ಹೇಳಿಕೊಂಡಿದ್ದಾನೆ.

ಸೂಕ್ಷ್ಮದೊಳೀಕೃತಿ ಸುಲಭವಾಗಿರಲು
ಯಕ್ಷಗಾನವನು ಮಾಡಿದವರಾರೆನಲು
ಸವುಭಾಗ್ಯ ಸಕಲ ಗುಣ ಸಂಪನ್ನ
ಸುವಿವೇಕಿ ಕೆಂಪಯ್ಯನಾತನರ್ಧಾಂಗಿ
ಲಲನಾರತುನವೆಂಬ ತಿಮ್ಮಮಾಂಬ
ಸಲೆಗರ್ಭಾಬ್ಧಿ ಚಂದ್ರ ನೆರೆ ಜಾಣ
ಸುವಿವೇಕಿ ಕೆಂಪಣ್ಣಗೌಡನೀಕತೆಯ
ಸವಿವರದೊಳು ಪೇಳಿದನು ತಾನು
ಸಕಲ ಕವಿಗಳಿಗೆ ಸಾಷ್ಟಾಂಗವೆರಗಿ
ಆಕಲಂಕ ಕನ್ನಡದಿ ಪೇಳಿದನು ಬಿನ್ನಾಣದಿಂದ.

ನಳಚರಿತ್ರೆಯಲ್ಲಿ ಸಹಾ ಕವಿ ತನ್ನ ವಿವರಗಳನ್ನು ಕರಿರಾಯ ಚರಿತ್ರೆಯಲ್ಲಿರುವಂತೆಯೇ ಹೇಳಿಕೊಂಡಿದ್ದಾನೆ.

ಸವುಭಾಗ್ಯ ಸಕಲಗುಣ ಸಂಪನ್ನನಾದಂಥ
ಸುವಿವೇಕಿ ಕೆಂಪಯ್ಯ ನಾತನರ್ಧಾಂಗಿ
ಲಲನಾರತುನ ತಿಮ್ಮ ಮಾಂಬಗರ್ಭಾಬ್ಧಿ
ಸಲೆ ಚಂದ್ರನೆನಿಸಿ ಪುಟ್ಟಿದ ನೆರೆಜಾಣ
ಆಕಲಂಕ ಚರಿತ ಕೆಂಪಣ್ಣಗೌಡ ಪೇಳಿದನೀ ಕೃತಿಯ
ಸಕಲ ಕವಿಗಳಿಗೆಲ್ಲ ಸಾಷ್ಟಾಂಗವೆರಗಿ
ಅಧಿಕ ಠೀವಿಯೊಳಿದನು ಯಕ್ಷಗಾನವ ಮಾಡಿ
ಮುದದಿಂದ ಕನ್ನಡದಿ ಪೇಳಿದನು ಬಿನ್ನಾಣದಿಂದ.
ಶನಿಮಹಾತ್ಮೆಯಲ್ಲಿ ಸಹ ಮೇಲಿನ ಪದ್ಯಗಳನ್ನು ಹೇಳಿರುವುದರ ಜೊತೆಗೆ
ಹರನ ಕರುಣೆಯಿಂದ ಕರಿರಾಯ ಚರಿತೆಯನು
ಹರಿಯ ಭಕ್ತಿಗೆ ಸೋತು ನಳರಾಜನ ಕಥೆಯ
ಘನಮಹಿಮ ಶನಿರಾಜನ ಕಥೆಯನು
ಮನುಜರು ತಾವು ಮುಕ್ತಿ ಪಡೆಯಲೆನುತ
ಯಕ್ಷಗಾನದಿ ವೊರೆದಿರುವುದಾಗಿ ಹೇಳಿಕೊಂಡಿದ್ದಾನೆ

ಮೂರು ಕಾವ್ಯಗಳ ಮೇಲಿನ ಪದ್ಯಗಳು ಕವಿಯ ಜೀವನ ವಿವರಗಳನ್ನು ಸ್ಪಷ್ಟವಾಗಿಯೇ ನೀಡುತ್ತವೆ. ಈ ಹಿಂದೆ ಉದಾಹರಿಸಿದ ನಳಚರಿತ್ರೆಯ ಗದ್ಯಭಾಗದಲ್ಲಿ ತಾಯಿಯ ಹೆಸರು ಇಲ್ಲ. ಆದರಿಲ್ಲಿ ಕೆಂಪಣ್ಣಗೌಡನ ತಾಯಿಯ ಹೆಸರು ತಿಮ್ಮಾಂಬ ಎಂಬುದು ತಿಳಿಯುತ್ತದೆ.

ಕವಿಯು ತನ್ನನ್ನು ಅಕಲಂಕನೆಂದೂ ಭಿನ್ನಾಣಗಾರನೆಂದೂ ಅಧಿಕಠೀವಿಯೆವನೆಂದೂ ಸಕಲ ವಿದ್ಯಾಪ್ರವೀಣನೆಂದೂ ಕರೆದುಕೊಂಡಿದ್ದಾನೆ. ಸಕಲ ವಿದ್ಯಾಪ್ರವೀಣನೆಂದರೆ ಅನೇಕ ಭಾಷೆಗಳು ಬರುತ್ತಿದ್ದವೆಂದೇ, ಕನ್ನಡ ಸಂಸ್ಕೃತಗಳೆರಡೂ ಬರುತ್ತಿದ್ದವೆಂದೇ ತಿಳಿಯುವುದಿಲ್ಲ. ಈತ ತಾನು ಅಕಲಂಕನೆಂದು ಕರೆದುಕೊಂಡಿರುವುದರಿಂದ ತುಂಬಾ ಸ್ವಾಭಿಮಾನದ ವ್ಯಕ್ತಿಯಾಗಿದ್ದಂತೆ ಕಾಣುತ್ತದೆ. ಅಧಿಕಠೀವಿ ಈತ ಸ್ವವ್ಯಕ್ತಿತ್ವದ ಬಗೆಗೆ ಅಹಂ ಉಳ್ಳವನಾಗಿರಬೇಕೆಂದು ಧ್ವನಿಸುತ್ತದೆ.

ಕೆಂಪಣ್ಣಗೌಡ ಅಂದೇನಹಳ್ಳಿಯವನು. ಇದು ನಾಗಮಂಡಲ ತಾಲ್ಲೂಕಿನಲ್ಲಿ ಲೋಕ ಪಾವನಿ ನದಿಯ ತೀರದಲ್ಲಿದೆ. ಇಲ್ಲಿ ಕೆಂಪಣ್ಣಗೌಡ ಹೇಳಿರುವ ಸೋಮೇಶ್ವರ, ಭೈರವ, ಹನುಮ ದೇವಾಲಯಗಳಿವೆ. ಈ ಎಲ್ಲಾ ದೇವರುಗಳನ್ನು ಕವಿ ತನ್ನ ಕಾವ್ಯದಲ್ಲಿ ಪ್ರಾರ್ಥಿಸಿದ್ದಾನೆ.

ಧರೆಣಿಗಧಿಕವಾದ ಅಂದೇನ ಪುರದ
ವರಮಹಿಮ ಸೋಮೇಶ್ವರನ ಸತಿಯೆ
ಧರಣಿಗಧಿಕವಾದ ಅಂದೇನಪುರದ
ವರ ಸೋಮೇಶ್ವರನ ಪುತ್ರ ಗಣನಾಯಕ
ಅಸುರರನು ಸಂಹರಿಸಿ ಯೆಸೆವ ಶಿರಮಾಲೆಯನು
ಹಸನಾಗಿ ತಳೆದ ಭೈರವೇಶ್ವರನೇ ಶರಣು ಶರಣಾರ್ಥಿ.

ಕೆಂಪಣ್ಣಗೌಡ ಒಕ್ಕಲಿಗನಾದುದರಿಂದ ಧಾರ್ಮಿಕ ಸಮನ್ವಯತೆಯನ್ನು ಸಾಧಿಸಿದ್ದಾನೆ. ಅವನ ಕಾವ್ಯದಲ್ಲಿ ಎಲ್ಲಾ ದೇವರುಗಳನ್ನೂ ಸ್ಮರಿಸಿದ್ದಾನೆ. ತಾನು ಬರೆದ ಮೂರು ಕಾವ್ಯಗಳಲ್ಲಿ ಒಂದರಲ್ಲಿ, ಹರನ ಮಹಿಮೆಯನ್ನು ಮತ್ತೊಂದರಲ್ಲಿ ಹರಿಯ ಮಹಿಮೆಯನ್ನು ಇನ್ನೊಂದರಲ್ಲಿ ಶನಿಯ ಮಹಿಮೆಯನ್ನು ಹೇಳಿದ್ದಾನಾದರೂ ಸಕಲ ದೇವರಾರಾಧನೆಯನ್ನು ಕುರಿತಂತೆ

ವೀರಭದ್ರನ ಗುಡಿಯ
ನಾರಾಯಣನಾಲಯವು
ಆರಾಧಿಸುವರು ಸಕಲ ಜನರು

ಎಂದು ಹೇಳಿ ಅಂದೇನಹಳ್ಳಿಯ ಜನರು ಎಲ್ಲಾ ದೈವಗಳನ್ನು ಸಮನಾಗಿ ಆರಾದಿಸುತ್ತಿದ್ದರೆಂಬುದನ್ನು ಸೂಚಿಸಿದ್ದಾನೆ.

ಕೆಂಪಣ್ಣಗೌಡನಿಗೆ ಲೋಕಪಾವನಿ ನದಿಯ ಬಗೆಗೆ ಬಹಳ ಗೌರವ ಮತ್ತು ಭಕ್ತಿ. ಈತನು ಲೋಕಪಾವನಿ ತೀರದ ಅಂದೇನಹಳ್ಳಿಯವನು ಎಂಬುದನ್ನು ಇದು ಖಚಿತಪಡಿಸುತ್ತದೆ. ಹಳೆಬೀಡಿನ ರಾಜನ ಕೆರೆಯ ಮೇರೆಗೆ ಧಾರಾಪುರದಿಂದ ಮಿತ ಪರಿವಾರದೊಂದಿಗೆ ಹೊರಟ ಕರಿರಾಯ ಗೌತಮ ಕ್ಷೇತ್ರದಲ್ಲಿ ತಂಗುವ ದೃಷ್ಟಿಯಿಂದ ಕರಿಗಿರಿಯನ್ನಿಳಿದು ಬಂದ. ಕರಿಗಿರಿ ಎಂದರೆ ಈಗಿನ ಕರಿಘಟ್ಟ. ಗೌತಮ ಕ್ಷೇತ್ರ ಕಾವೇರಿ ಲೋಕಪಾವನಿ ನದಿಗಳ ಸಂಗಮ.

ಜೋಕೆಯಿಂ ಸಕಲ ಬಲ ಸಹಿತ ಕರಿಗಿರಿಯನಿಳಿದು
ಲೋಕಪಾವನಿಯನ್ನು ಕಂಡ ಕರಿರಾಯ,

ಕರಿರಾಯ ಕಂಡದ್ದಷ್ಟೇ ಅಲ್ಲ ಲೋಕಪಾವನಿಯ ಗುಣಗಾನವನ್ನು ಮಾಡುತ್ತಾನೆ. ಪಕ್ಕದಲ್ಲೆ ದೊಡ್ಡನದಿ ಕಾವೇರಿ ಇದೆ. ಆದರೆ ಅದರಿಂದ ಕೆಂಪಣ್ಣಗೌಡನ ಅಂದೇನಹಳ್ಳಿಗೆ ಯಾವ ಪ್ರಯೋಜನವೂ ಇಲ್ಲ. ಏನಿದ್ದರೂ ಲೋಕಪಾವನಿಯೇ ಅವನಿಗೆ ಜೀವನದಿ. ಆದುದರಿಂದಲೇ ಕವಿಗೆ ಕಾವೇರಿಯ ಎದುರು ಲೋಕಪಾವನಿ ಮಹತ್ತರವಾಗಿ ಕಾಣುವ ನದಿಯಾಗುತ್ತದೆ.

ಕೆಂಪಣ್ಣಗೌಡ ಒಕ್ಕಲಿಗ ಕವಿಯೆಂದು ಕವಿ ಚರಿತ್ರೆಕಾರರೂ ಹೇಳಿದ್ದಾರೆ. ಹೆಸರು ಕೂಡ ಕವಿ ಒಕ್ಕಲಿಗನೆಂಬುದನ್ನು ಸೂಚಿಸುತ್ತದೆ. ಜೊತೆಗೆ ಕವಿ ಸಹ.

ಧರೆಯೊಳಗರಿದ ಸುಜಾಣರು
ವರ ವೊಕ್ಕಲಿಗ ಪೇಳ್ದಕೃತಿಯೆಂದು
ಭರದೆ ನಿಂಧ್ಯ ಮಾಡಬೇಡಿರಿ

ಎಂದು ವಿನಯದಿಂದ ಹೇಳಿಕೊಂಡಿದ್ದಾನೆ. ಕರಿರಾಯ ಕೂಡ ಒಕ್ಕಲಿಗ ರಾಜಕುಮಾರ ಎಂಬುದು ಕೆಂಪಣ್ಣಗೌಡನ ಅಭಿಮತ. ತಲಕಾಡಿನ ಗಂಗರು ಒಕ್ಕಲಿಗ ಮೂಲದಿಂದ ಬಂದವರು ಎಂದು ಈಗ ತೀರ್ಮಾನವಾಗಿದೆ. ಕರಿರಾಯ ಎಂದರೆ ಆನೆಯ ಲಾಂಛನದ ರಾಜ ಎಂದರ್ಥ. ಗಂಗರಾಜರ ಲಾಂಛನ ಆನೆ. ಆದುದರಿಂದಲೆ ಪುಂಡರೀಕಾಕ್ಷಿ ತನ್ನನ್ನು ಮದುವೆಯಾಗೆಂದು ಕೇಳಿದಾಗ,

ರಕ್ಕಸರ ಮನೆಯೊಳಗೆ ಪೊಕ್ಕುಅನ್ನವ ಕೊಳಲು
ದಕ್ಕುವುದೆ ಹಾಲಂತ ಒಕ್ಕಲಿಗರೆಮಗೆ

ಎಂದು ಹೇಳುತ್ತಾನೆ. ಅಷ್ಟೇ ಅಲ್ಲ ಕವಿಗೆ ತನ್ನ ಜನಾಂಗದ ಬಗೆಗೆ ಅಪಾರವಾದ ಅಭಿಮಾನವೂ ಇದೆ. ಆದುದರಿಂದಲೇ ಕರಿರಾಯನನ್ನು ಉದ್ದಂಡಿ ಬಾಣಂತಿ ವೇಷದಿಂದ ಅಟ್ಟಿಸಿಕೊಂಡು ಬಂದಾಗ ಅವನು ‘ಗೌಡ ಪ್ರಭುಗಳ’ ಮೊರೆ ಹೋಗುತ್ತಾನೆ. ಕರಿರಾಯ ಕೊಲೆಯಾದಾಗ ತಾವು ಭರವಸೆ ಕೊಟ್ಟಿದ್ದಂತೆ ಈ ಗೌಡರುಗಳು ಅಗ್ನಿಪ್ರವೇಶ ಮಾಡುತ್ತಾರೆ. ಕಾವ್ಯದ ಕಡೆಯಲ್ಲಿ ಶಿವ ಪ್ರತ್ಯಕ್ಷನಾದಾಗ ಅವನು ಕೈಲಾಸಕ್ಕೆ ಕರೆದೊಯ್ಯುವುದು.

ಸೋಮಶೇಖರ ನಿತ್ತ ಪ್ರೇಮದಿಂದಲಿ
ಕಾಮಿನೀ ಜನ ಸಪ್ತ ಗೌಡರು ಸಹಿತದಲಿ
ಪ್ರೇಮದಿಂ ಕೈಲಾಸ ಪುರವನು ಸೇರಿ ಸುಖದೆ.

ಹೆಂಗಸರು ಮತ್ತು ಏಳುಮಂದಿ ಗೌಡರುಗಳನ್ನು ಮಾತ್ರ. ಈ ದೃಷ್ಟಿಯಿಂದ ಕೂಡಾ ಕೆಂಪಣ್ಣಗೌಡ ಒಕ್ಕಲಿಗನೆಂಬುದು ಖಚಿತವಾಗುತ್ತದೆ. ಕಾವ್ಯದ ದೃಷ್ಟಿಯಿಂದ ಕೆಂಪಣ್ಣಗೌಡನ ಕರಿರಾಯ ಚರಿತ್ರೆ ನಳಚರಿತ್ರೆ ಮತ್ತು ಶನಿಮಹಾತ್ಮೆ ಮೂರು ಪ್ರಸಿದ್ಧವಾಗಿರುವುದು ಕಂಡುಬರುತ್ತದೆ. ಕಾರಿರಾಯ ಚರಿತ್ರೆಯಂತೂ ಕರಿಭಂಟನ ಕಾಳಗ ಎಂಬ ಹೆಸರಿನಲ್ಲಿ ಯಕ್ಷಗಾನ ಆಟವಾಗಿ ಅಪಾರ ಜನಪ್ರಿಯತೆಗಳಿಸಿರುವುದು ಕಂಡುಬರುತ್ತದೆ. ಸುಮಾರು ಹದಿನೆಂಟು ಮಂದಿ ಲೇಖಕರು ಕರಿರಾಯ ಚರಿತ್ರೆಯನ್ನು ಯಕ್ಷಗಾನ ನಾಟಕವನ್ನಾಗಿ ಪರಿವರ್ತಿಸಿದ್ದಾರೆ. ಇಂದಿಗೂ ಕರಿಭಂಟನ ಕಾಳಗ ಒಂದು ಅತ್ಯಂತ ಜನಪ್ರಯ ಯಕ್ಷಗಾನ ನಾಟಕವಾಗಿ ಪ್ರದರ್ಶನಗೊಳ್ಳುತ್ತಿದೆ. ಇದರ ಅಪಾರ ಹಸ್ತಪ್ರತಿಗಳು ದೊರೆಯುತ್ತವೆ. ಕರಿಭಂಟನ ಕಾಳಗ ತೆಲಗು ಮತ್ತು ತಮಿಳಿನಲ್ಲಿಯೂ ಇರುವುದು ಕಂಡುಬರುತ್ತದೆ. ಕೆಂಪಣ್ಣಗೌಡನಿಗೆ  ತೆಲಗು ಗೊತ್ತಿದ್ದಿತೆಂಬ ಹೇಳಿಕೆಯೂ ಉಂಟು, ನಳರಾಜನ ಚರಿತ್ರೆ ಕರಿರಾಯಚರಿತ್ರದಷ್ಟಲ್ಲದಿದ್ದರೂ ಶ್ರೀಸಾಮಾನ್ಯರಲ್ಲಿ ಜನಪ್ರಿಯವಾಗಿದೆ. ಈ ಕಾವ್ಯವನ್ನು ಈಗಲೂ ಜನರು ಯಕ್ಷಗಾನ ರೂಪದಲ್ಲಿ ಶನಿಮಹಾತ್ಮೆಯಂತೆ ಓದಿಸಿ ಕೇಳುವ ಸಂಪ್ರದಾಯವಿದೆ. ಶನಿಮಹಾತ್ಮೆಯಂತೂ ಒಕ್ಕಲಿಗರಲ್ಲಿ ವಿಶೇಷವಾಗಿ ನಾಗಮಂಗಲದ ಸುತ್ತಿನಲ್ಲಿ ಮನೆ ಮನೆಯಲ್ಲೂ ಓದಿಸುವ ಸಂಪ್ರದಾಯ ಇಂದಿಗೂ ಇದೆ. ಒಟ್ಟಿನಲ್ಲಿ ಕೆಂಪಣ್ಣಗೌಡ ಕನ್ನಡದ ಮೊದಲ ಯಕ್ಷಗಾನ ಕವಿಯಾಗಿ ಅತ್ಯಂತ ಸಮರ್ಥವಾದ ಮೂರು ಕಾವ್ಯಗಳನ್ನು ಕನ್ನಡಕ್ಕೆ ನೀಡಿದ್ದಾನೆ. ಈತನ ಪ್ರೌಢಿಮೆಯ ಆಧಾರದಿಂದ ಹೇಳಬಹುದಾದರೆ ಕನ್ನಡ ಯಕ್ಷಗಾನ ಹದಿನಾಲ್ಕನೆಯ ಶತಮಾನದ ಹೊತ್ತಿಗೇ ಒಂದು ಪ್ರೌಢಾವಸ್ಥೆಗೆ ತಲುಪಿ ಜನಪ್ರಿಯವಾಗಿರುವುದು ಕಂಡು ಬರುತ್ತದೆ. ಆದುದರಿಂದ ನಮ್ಮ ಯಕ್ಷಗಾನ ಸಾಹಿತ್ಯ ಮತ್ತು ಜನಪದ ಕಲೆಗಳು ಜನಜೀವನದೊಂದಿಗೆ ಹಾಸು ಹೊಕ್ಕಾಗಿ ಬೆಳೆದುಬಂದಂಥವು. ಜನಪದರು ತಮ್ಮ ಜೀವನದ ಹಾದಿಯಲ್ಲಿ ಕಂಡಿರುವ ಏರುಪೇರು ಮತ್ತು ಬದಲಾವಣೆಗಳನ್ನು ಇವೆಲ್ಲ ಕಂಡಿವೆ.

ಕೆಂಪಣ್ಣಗೌಡ ಮೂರು ಯಕ್ಷಗಾನ ಕಾವ್ಯಗಳನ್ನು ರಚಿಸಿದ್ದಾನೆ. ಕರಿರಾಯ ಚರಿತ್ರೆ, ನಳಚರಿತ್ರೆ ಮತ್ತು ಶನಿಚರಿತ್ರೆ ಇವುಗಳನ್ನು ಕ್ರಮವಾಗಿ ಹರ, ಹರಿ ಮತ್ತು ಶನಿಯ ಕೃಪೆಯಿಂದ ಬರೆದುದಾಗಿ ಕವಿ ಹೇಳಿಕೊಂಡಿದ್ದಾನೆ. ಈ ಮೂರು ಕಾವ್ಯಗಳನ್ನು ಬಿಟ್ಟರೆ ಕನ್ನಡದಲ್ಲಿ ಮತ್ತಾವ ಯಕ್ಷಗಾನ ಕಾವ್ಯಗಳೂ ದೊರೆತಿಲ್ಲ. ಕೆಂಪಣ್ಣಗೌಡನನ್ನು ಕೂಡ ಕರಿಭಂಟನಕಾಳಗ ಯಕ್ಷಗಾನ ಪ್ರಸಂಗ ಬರೆದವ ಹದಿನೇಳನೆಯ ಶತಮಾನದಲ್ಲಿದ್ದ ಎಂದೇ ಮೊದಲು ಗುರುತಿಸಲಾಗಿತ್ತು. ಆದರೆ ಕರಿರಾಯ ಚರಿತ್ರೆ, ನಳಚರಿತ್ರೆ, ಶನಿಚರಿತ್ರೆಗಳ ಮೂಲ ಒಲೆಯ ಪ್ರತಿಗಳು ಅವು ಕಾವ್ಯಗಳು ನಮ್ಮ ಪ್ರಚೀನ ಶಿಷ್ಟ ಕಾವ್ಯ ಸಂಪ್ರದಾಯ ಚಂಪು ರೀತಿಯ ದೇಶೀಯ ಕಾವ್ಯಗಳು ಎಂಬುದನ್ನು ಹೊರಗೆಡಹಿದವು. ಹಳೆಗನ್ನಡದ ಚಂಪುವಿನಂತೆ ಇಲ್ಲಿಯೂ ಪದ್ಯಗಳ ನಂತರ ಗದ್ಯ ವಿವರಣೆ ಬರುತ್ತದೆ. ಈ ಗದ್ಯ ಭಾಗ ಯಕ್ಷಗಾನ ಪ್ರಸಂಗಗಳಲ್ಲಿ ಬರುವಂತಹ ಪಾತ್ರ ಆಡುವ ಮಾತುಗಳಲ್ಲ. ಇದೊಂದು ಕಾವ್ಯ ಸಂಪ್ರದಾಯವೆ ಆಗಿದೆ.

ಯಕ್ಷಗಾನ ಕಾವ್ಯಗಳಲ್ಲಿ ಪಂಪನ ವಿಕ್ರಮಾರ್ಜುನ ವಿಜಯದಂತೆ, ರನ್ನನ ಗದಾಯುದ್ಧದಂತೆ ಕಾವ್ಯ ಮುನ್ನಡೆಯುತ್ತದೆ. ಪ್ರಸಂಗಗಳಲ್ಲಿ ಬರುವಂತೆ ಸಾರಥಿ, ಭಾಗವತ, ಹನುಮ ನಾಯಕ ಅಥವಾ ಯಾವುದೇ ಪಾತ್ರಗಳು ಇಲ್ಲಿ ಬರುವುದಿಲ್ಲ. ಚಂಪುವಿನಂತೆ ಇಡೀ ಕಾವ್ಯವನ್ನು ಕವಿ ನಿರೂಪಿಸುತ್ತಾನೆ. ಆದಿ, ಮಧ್ಯ, ಅಂತ್ಯ ಮತ್ತು ಕವಿಯ ಸ್ವವಿಚಾರ ಇವೆಲ್ಲವೂ ಈ ಮೂರು ಕಾವ್ಯಗಳಲ್ಲಿ ಕಾವ್ಯ ಸಂಪ್ರದಾಯದಂತೆಯೆ ಇರುವುದನ್ನು ಕಾಣಬಹುದಾಗಿದೆ. ಪ್ರಾಯಃ ಕೆಲವು ಚಂಪೂ ಕಾವ್ಯಗಳಂತೆ ಇವುಗಳೂ ನಾಟಕ ರೂಪುಹೊಂದಿ ಉತ್ತರೋತ್ತರ ರಂಗ ಪ್ರವೇಶ ಮಾಡಿರಬೇಕು. ಇಂದಿಗೂ ನಮ್ಮಲ್ಲಿ ಈ ಸಂಪ್ರದಾಯ ಮುಂದುವರಿದಿದೆ. ಕಾವ್ಯಗಳಿರಲಿ ಕಾದಂಬರಿಗಳು ಕೂಡ ನಾಟಕ ರೂಪದಲ್ಲಿ ರಂಗದ ಮೇಲೆ ಬಂದಿವೆ. ಕೆಂಪಣ್ಣಗೌಡನ ಈ ಮೂರೂ ಕಾವ್ಯಗಳ ವಾಚನ, ತಾಳ ಮದ್ಧಳೆ ಮತ್ತು ರಂಗಸಂಪ್ರದಾಯಗಳು ಇಂದಿಗೂ ಜೀವಂತವಾಗಿವೆ. ಈ ಕಾವ್ಯಗಳನ್ನು ರಾತ್ರಿಯಿಡಿ ಓದಿಸಿ ಕೇಳುವ ಸಂಪ್ರದಾಯ ಹಳೆಯ ಮೈಸೂರು ಭಾಗದಲ್ಲಿ ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿದೆ. ಶನಿಮಹಾತ್ಮೆಯಂತು ಮಿಕ್ಕೆರಡನ್ನೂ ಮೀರಿಸಿ ಶ್ರಾವಣ ಮಾಸದ ಆಚರಣೆಯೇ ಆಗಿದೆ. ಆ ದಿನಗಳಲ್ಲಿ ಮನೆ ಮನೆಯಲ್ಲಿ ಶನಿದೇವರ ಚರಿತ್ರೆ, ಕಥೆ, ಮಹತ್ಮೆ ಓದಿಸಿ ಕೇಳುವ ಸಂಪ್ರದಾಯವಿದೆ. ಪ್ರಸಂಗ ರೂಪದಲ್ಲಿ ಇವು ರಂಗದ ಮೇಲೂ ವಿಜೃಂಭಿಸುತ್ತಿವೆ. ನಳಚರಿತ್ರೆ ಶನಿಚರಿತ್ರೆಗಳು ಸಾಮಗಾನ ನಾಟಕ ರಂಗವನ್ನೂ ಪ್ರವೇಶಿಸಿ ಜನಪ್ರಿಯತೆಗೊಳಿಸಿ ಕೊಂಡಿರುವುದನ್ನು ಕಾಣಬಹುದಾಗಿದೆ.

ಕೆಂಪಣ್ಣಗೌಡ ರಚಿಸಿರುವ ಮೂರು ಕಾವ್ಯಗಳಲ್ಲಿ ಕರಿರಾಯ ಚರಿತ್ರೆ, ನಳಚರಿತ್ರೆಗಳ ಮೂಲವನ್ನು ತಿಳಿಯಲವಕಾಶವಿದೆ. ಕರಿರಾಯ ಚರಿತ್ರೆ ಗಂಗವಂಶದಲ್ಲಿ ನಡೆದ ಒಂದು ದುರಂತ ಪ್ರಣಯ ಪ್ರಸಂಗವನ್ನು ಆಧರಿಸಿದ್ದು. ಶಿವ ಪಾರ್ವತಿಗೆ ಹೇಳಿದ ಪುಣ್ಯ ಕಥೆಯಾಗಿ ರೂಪುಗೊಂಡಿದೆ. ನಳಚರಿತ್ರೆ ಮಹಾಭಾರತದ ಒಂದು ಉಪಖ್ಯಾನ. ಇದು ಜನಪದದಿಂದ ಮಹಾಭಾರತ ಸೇರಿರುವ ಸಾಧ್ಯತೆಗಳೇ ಹೆಚ್ಚು ಎಂಬ ಅಭಿಪ್ರಾಯವಿದೆ. ಕಂಪಣ್ಣಗೌಡನ ನಳಚರಿತ್ರೆ ಶನಿಯ ಶಕ್ತಿ ಮತ್ತು ಮಹಾತ್ಮೆಯನ್ನು ನಿರೂಪಿಸುವ ಕಾವ್ಯವೇ ಆಗಿದೆ. ಶನಿಚರಿತ್ರೆಗೆ ಮೂಲ ಜನಪದವೇ ಇದ್ದಿರಬೇಕು. ಏಕೆಂದರೆ ವಿಕ್ರಮನೆಂಬ ಚಕ್ರವರ್ತಿಯ ಸುತ್ತ ಅಸಂಖ್ಯಾತ ಜನಪದ ಕಥೆಗಳು ಪ್ರಸಂಗಗಳು ಹುಟ್ಟಿಕೊಂಡಿವೆ. ಮೌರ್ಯವಂಶದ ಸಮುದ್ರಗುಪ್ತನೆ ಉಜ್ಜಯಿನಿಯ ಈ ವಿಕ್ರಮನಾಗಿರಬೇಕೆಂದು ಚರಿತ್ರೆಕಾರರು ಊಹಿಸಿದ್ದಾರೆ. ಈ ವಿಕ್ರಮನ ಸಾಹಸದ ಕಥೆಗಳು ಎಲ್ಲಾ ಭಾರತೀಯ ಭಷೆಗಳಲ್ಲಿಯೂ ದೊರೆಯುತ್ತವೆ. ವಿಕ್ರಮ ಮತ್ತು ಭೇತಾಳ, ಬತ್ತೀಸಪುತ್ಥಳಿ ಕಥೆ, ಶನಿಮಹಾತ್ಮೆ ಇವೆಲ್ಲವೂ ವಿಕ್ರಮನ ಸುತ್ತಲಿನ ಕೆಲವು ಕಥೆಗಳು. ಹೀಗಾಗಿ ಕೆಂಪಣ್ಣಗೌಡ ಜನಪದ ಮೂಲದ ಕಥೆಗಳನ್ನು ಆಧರಿಸಿ ದೇಶೀಯವಾದ ಯಕ್ಷಗಾನ ಶೈಲಿಯಲ್ಲಿ ಕಾವ್ಯ ರಚಿಸಿದ್ದಾನೆ.

ಕನ್ನಡ ಯಕ್ಷಗಾನ ಸಾಹಿತ್ಯ ಪ್ರಕಾರದಲ್ಲಿ ಕರಿಭಂಟನ ಕಾಳಗ ತುಂಬ ಪ್ರಸಿದ್ಧವಾದ ನಾಟಕ. ಯಕ್ಷಗಾನ ಕಾವ್ಯವೊಂದರಿಂದ ಈ ನಾಟಕ ರೂಪುಗೊಂಡುದು. ಸಾಮಾನ್ಯವಾಗಿ ಕನ್ನಡ ನಾಡಿನ ಎಲ್ಲ ಭಾಗಗಳಲ್ಲಿಯೂ ಈ ನಾಟಕವನ್ನು ಅಭಿನಯಿಸುತ್ತಾರೆ. ಕೆಲವು ಕಡೆಗಳಲ್ಲಿ ಈ ಕಥೆಗೆ ವಿಶೇಷ ಮಹತ್ವ ಕೊಟ್ಟಿರುವಂತೆ ಕಾಣುತ್ತದೆ. ಓಲೆಯ ಪ್ರತಿಗಳೂ ಸೇರಿದಂತೆ ಕರಿಭಂಟನ ಕಾಳಗ ನಾಟಕದ ನೂರಾರು ಪ್ರತಿಗಳು ದೊರೆಯುತ್ತವೆ. ಇತ್ತೀಚೆಗೆ ಚಿತ್ರದುರ್ಗದ ಕೆಲವು ಜನ ಸಾಹಿತ್ಯಭ್ಯಾಸಿಗಳೂ ‘ಚಂದ್ರವಳ್ಳಿ’ ಎಂಬ ಹೆಸರಿನ ಜಿಲ್ಲಾ ಚರಿತ್ರೆಯ ಸಂಪುಟವೊಂದನ್ನು ಪ್ರಕಟಿಸಿದ್ದಾರೆ. ಈ ಹಿಂದೆಯೇ ದಿವಂಗತ ಹುಲ್ಲೂರು ಶ್ರೀನಿವಾಸ ಜೋಯಿಸರು ಮತ್ತು ಡಾ. ಜಿ. ವರದರಾಜರಾಯರು ಕರಿಭಂಟನ ಕಾಳಗದ ಕಥೆಯ ಬಗ್ಗೆ ಬರೆದು ಇದೊಂದು ಚಾರಿತ್ರಿಕ ಘಟನೆಯೆಂದೂ ಗಂಗದೊರೆ ರಕ್ಕಸಗಂಗನೇ ಕರಿಭಂಟನೆಂದೂ ಹೇಳಿದ್ದಾರೆ. ಚಂದ್ರವಳ್ಳಿಯಲ್ಲಿ ಈ ಬಗೆಗೆ ಬರೆದಿರುವ ಶ್ರೀ ಎಸ್. ವಿ. ಗೌಡರ್ ಅವರು ಸಹ ಈ ರಕ್ಕಸಗಂಗನೆ ಕರಿಭಂಟ ಎಂಬ ವಾದವನ್ನು ಒಪ್ಪಿ ಅದನ್ನು ಸಮರ್ಥಿಸಲು ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲ, ಕರಿಭಂಟನ ಕಥೆಯ ಅಂತಿಮ ಘಟನೆ ನಡೆದುದು ಚಿತ್ರದುರ್ಗ ಜಿಲ್ಲೆಯ ಹಾಯಕಲ್ಲಿನಲ್ಲೆಂದೂ ಆಗ ಅದಕ್ಕೆ ಮಲ್ಲಿಗನೂರೆಂಬ ಹೆಸರಿತ್ತೆಂದೂ ಪ್ರತಿಪಾದಿಸಿದ್ದಾರೆ. ಕರಿಭಂಟ ಮತ್ತು ಉದ್ದಂಡಿಯ ನ್ಯಾಯದಲ್ಲಿ ಪಾಲುಗೊಂಡ ಗೌಡರ ಬಗೆಗೂ ಹೇಳಿದ್ದಾರೆ. “ಚಿತ್ರದುರ್ಗ ತಾಲ್ಲೂಕ ಹಾಯಕಲ್ಲು ಗ್ರಾಮದಲ್ಲಿ ಕರಿಭಂಟನಿಗೆ ಸಂಬಂಧಿಸಿದ ಕಥೆಗಳನ್ನು ಅಲ್ಲಿನ ನಿವಾಸಿಗಳಿಂದ ಈಗಲೂ ನಾವು ಕೇಳಬಹುದು. ಐತಿಹ್ಯದ ಪ್ರಕಾರ ತೊಂಡನೂರು ರಾಕ್ಷಸಿಯು ಕರಿಭಂಟನನ್ನು ಕೊಲ್ಲಲು ಇಂದಿನ ನಾಯಕನ ಹಟ್ಟಿ (ಚಳ್ಳಕೆರೆ ತಾಲೂಕು) ಬಳೀಯ ಹೊಸಗುಡ್ಡದಿಂದ (ರಾಮದುರ್ಗದ ಕೋಟೆ) ಓಡಿಸಿಕೊಂಡು ಬಂದಳೆಂದೂ, ಅವನು ಹಾಯಕಲ್ಲು (ಅಂದು ಮಲ್ಲಿಗೆಯೂರು) ಗ್ರಾಮದಲ್ಲಿನ ಏಳು ಜನ ಗೌಡರಲ್ಲಿ ಆಶ್ರಯಪಡೆದನೆಂದೂ,  ಆದರೂ ಮಾಯಾವಿನಿಯಾದ ರಾಕ್ಷಸಿಯ ಕಪಟತಂತ್ರಗಳಿಗೆ ಬಲಿಯಾಗಿ ಇಂದಿಗೂ ಉಳಿದಿರುವ ರಾಮೇಶ್ವರ ದೇವಸ್ಥಾನದಲ್ಲಿ ಆಹುತಿಯಾದನೆಂದೂ ತಿಳಿಯುತ್ತದೆ.[1] ತೊಂಡನೂರು ರಾಕ್ಷಸಿ ಉದ್ದಂಡಿ ಕರಿಭಂಟನನ್ನು ಚಿತ್ರದುರ್ಗದ ಹಾಯಕಲ್ಲಿನವರೆಗೆ ಅಟ್ಟಿಸಿಕೊಂಡು ಹೋಗಿ ಕೊಂದಳೆಂಬುದು ಮೇಲಿನ ಲೇಖಕರೆಲ್ಲರ ಅಭಿಪ್ರಾಯ. ಆದರೆ ಇದಕ್ಕೆ ಸರಿಯಾದ ಸಮರ್ಥನೆಗಳನ್ನು ಅವರು ಕೊಟ್ಟಿಲ್ಲ.

ಕರಿಭಂಟನ ಕಥೆಯ ಭೂಮಿಕೆ ಪ್ರಧಾನವಾಗಿ ಗೌತಮ ಕ್ಷೇತ್ರ (ಶ್ರೀರಂಗಪಟ್ಟಣ) ಮತ್ತು ತೊಣ್ಣೂರುಗಳು. ಉದ್ದಂಡಿಯು ತೊಣ್ಣೂರಿನಿಂದ ಚಿತ್ರದುರ್ಗದವರೆಗೆ ಕರಿಭಂಟನನ್ನು ಅಟ್ಟಿಸಿಕೊಂಡು ಹೋದಳೆಂಬುದು ಉತ್ಪ್ರೇಕ್ಷೆ ಎಂದೆನಿಸುತ್ತದೆ. ಸಾಮಾನ್ಯವಾಗಿ ಈ ನಾಟಕ ಆಡುವ ಹಳ್ಳಿಗರು ಈ ಕಥೆ ನಮ್ಮ ಊರಿನಲ್ಲಿಯೇ ನಡೆದುದು ಎಂದು ಕೆಲವು ಗುರುತುಗಳನ್ನು ತೋರಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಈ ಯಾರಿಗೂ ಗೌತಮ ಕ್ಷೇತ್ರ ಮತ್ತು ತೊಣ್ಣೂರನ್ನು ಬದಲಾಯಿಸುವುದು ಸಾಧ್ಯವಾದಂತೆ ಕಾಣುವುದಿಲ್ಲ. ಈ ಎಲ್ಲ ಸಮಸ್ಯೆಗಳ ಹಿನ್ನಲೆಯಲ್ಲಿ ಕರಿಭಂಟನ ಕಾಳಗದ ಕಥೆಯ ಪ್ರಸಂಗವನ್ನು ವಿವೇಚಿಸಿದಾಗ ನನಗೆ ಕೆಲವು ಅನುಮಾನಗಳು ಉಂಟಾದವು. ಮೊದಲನೆಯದಾಗಿ ಕರಿಭಂಟನಿಗೂ ರಕ್ಕಸಗಂಗನಿಗೂ ಸಂಬಂಧವಿದ್ದರೆ ಎಲ್ಲಿಯಾದರೂ ಗಂಗರ ಶಾಸನಗಳಲ್ಲಿ ಇದರ ಉಲ್ಲೇಖ ದೊರೆಯಬೇಕಿತ್ತು. ಎರಡನೆಯದು, ಈ ಕಥೆ ತೊಣ್ಣೂರು ಮತ್ತು ಅದರ ಸುತ್ತಲಿನ ಜನಪದದಲ್ಲಿ ಎಂದೋ ನಡೆದ ಕಥೆಯಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದುದಾಗಿರಬೇಕು. ಹೀಗೆ ಜನ ಜನಿತವಾದ ಕಥೆಯನ್ನು ವಸ್ತುವಗಿಟ್ಟುಕೊಂಡು ಕೆಲವು ಬದಲಾವಣೆಗಳೊಂದಿಗೆ ಕಾವ್ಯವನ್ನೊ, ನಾಟಕವನ್ನೊ ಕವಿ ಬರೆದಿರಬೇಕು. ಮುಂದೆ ಇದು ಜನಪ್ರಿಯವಾಗಿ ನಾಡಿನಾದ್ಯಂತ ಹರಡಿಕೊಂಡಿರಬೇಕು. ಈ ಹಿನ್ನಲೆಯಲ್ಲಿ ನಾನು ಕರಿಭಂಟನ ಕಾಳಗದ ಬಗೆಗಿನ ಸಾಹಿತ್ಯವನ್ನೆಲ್ಲಾ ಗಮನಿಸಿದ್ದೇನೆ. ಉಪಲಬ್ಧ ಕೃತಿಗಳನ್ನೆಲ್ಲಾ ಪರಿಶೀಲಿಸಿದ್ದೇನೆ. ಸಂಬಂಧಪಟ್ಟ ಸ್ಥಳಗಳಿಗೆ ಭೇಟಿಕೊಟ್ಟು ವಿವರವಾದ ಕ್ಷೇತ್ರಕಾರ್ಯ ನಡೆಸಿದ್ದೇನೆ.

ಕ್ಷೇತ್ರಕಾರ್ಯದ ಸಮಯದಲ್ಲಿ ನಾನು ಸಂಗ್ರಹಿಸಿದ ಕರಿಭಂಟನ ಕಥೆ ಹೀಗಿದೆ: ಧರೆಯ ಕಕ್ಷಿಣ ಭಾಗದಲ್ಲಿ ಕಾಶ್ಮೀರ ದೇಶ ವಿಜೃಂಭಿಸುತ್ತಿದೆ. ಅದರ ರಾಜಧಾನಿ ಧಾರಾಪುರ. ಅದನ್ನಾಳುವವನು ಮಾರಭೂಪಾಲ. ಅವನ ರಾಣಿ ಬನವಂತಾದೇವಿ. ಈ ದಂಪತಿಗಳಿಗೆ ಏಕಮಾತ್ರ ಪುತ್ರ ಕರಿರಾಯ. ಯುದ್ಧವೊಂದರಲ್ಲಿ ಮಾರಭೂಪಾಲ ಅಸು ನೀಗಿದ. ಆಗ ಕರಿರಾಯ ಇನ್ನೂ ಚಿಕ್ಕವನು. ರಾಣಿ ಬನವಂತಾದೇವಿ ರಾಜ್ಯಸೂತ್ರಗಳನ್ನು ತನ್ನ ಕೈಗೆ ತೆಗೆದುಕೊಂಡು ಮಗನನ್ನು ಪೋಷಿಸಿ ಅವನು ಪ್ರಾಪ್ತ ವಯಸ್ಕನಾದ ಕೂಡಲೆ ಅವನಿಗೆ ಪಟ್ಟ ಕಟ್ಟುತ್ತಾಳೆ. ಕರಿರಾಯ ದಕ್ಷತೆಯಿಂದ ಧಾರಾಪುರವನ್ನಾಳುತ್ತಿರುತ್ತಾನೆ.

ಹಳೆಬೀಡಿನ ರಾಜ ಬಲ್ಲಾಳರಾಯ. ಅವನಿಗೆ ಧರೆಣಿಮೋಹಿನಿ ಎಂಬ ಮಗಳು. ಪ್ರಾಪ್ತವಯಸ್ಕಳಾದ ಮಗಳಿಗೆ ಬಲ್ಲಾಳರಾಯ. ವರಾನ್ವೇಷಣೆಯಲ್ಲಿ ನಿರತನಾಗಿರುತ್ತಾನೆ. ಧರಣಿಮೋಹಿನಿಗೆ ಯಾವ ರಾಜಕುಮಾರನೂ ಒಪ್ಪಿಗೆಯಾಗಲಿಲ್ಲ. ಕಡೆಗೆ ಬಲ್ಲಾಳರಾಯ ತನ್ನ ಮಂತ್ರಿಗಳೊಂದಿಗೆ ಸಮಾಲೋಚಿಸಿ ಸಮರ್ಥರಾದ ಚಿತ್ರಕಾರರಿಂದ ಈ ಭೂಮಂಡಲದ ಸಕಲ ರಾಜ್ಯಗಳ ರಾಜಕುಮಾರರ ಭಾವಚಿತ್ರಗಳನ್ನು ಬರೆಸಿ ತರಿಸುತ್ತಾನೆ. ಅವುಗಳಲ್ಲಿ ಧಾರಾಪುರದ ಮಾರಬೊಪನ ಮಗ ಕರಿರಾಯನನ್ನು ಧರಣಿಮೋಹಿನಿ ಒಪ್ಪುತ್ತಾಳೆ. ಧಾರಾಪುರಕ್ಕೂ ಹಳೇಬೀಡಿಗೂ ಪರಮಪೈರ, ಬದ್ಧದ್ವೇಷ. ಬಲ್ಲಾಳಯಾಯ ಧರ್ಮಸಂಕಟದಲ್ಲಿ ಸಿಲುಕುತ್ತಾನೆ. ಕಡೆಗೆ ಮಗಳ ಮೇಲಿನ ಮಮತೆಯೇ ಗೆಲ್ಲುತ್ತದೆ. ಬಲ್ಲಾಳರಾಯ ತನ್ನ ಮಂತ್ರಿಯನ್ನೇ ಈ ಮದುವೆ ಕುದುರಿಸುವ ರಾಯಭಾರಿಯನ್ನಾಗಿ ಮಾಡಿ ದಕ್ಷಿಣ ಕಾಶ್ಮೀರ ದೇಶಕ್ಕೆ ಕಳಿಸುತ್ತಾನೆ. ಬಲ್ಲಾಳರಾಯನ ಮಂತ್ರಿಬಂದು ಧರಣಿಮೋಹಿನಿಯನ್ನು ಮದುವೆಯಾಗಲು ಆಹ್ವಾನಿಸಿದಾಗ ಕರಿರಾಯ ಅದನ್ನು ಒಪ್ಪಿ ತಾಯಿಯ ಅನುಮತಿ ಕೇಳುತ್ತಾನೆ.

ಶತ್ರುರಾಜನಾದ ಬಲ್ಲಾಳರಾಯನ ಆಹ್ವಾನ ಬನವಂತಾದೇವಿಯಲ್ಲಿ ಅನುಮಾನವನ್ನು ಹುಟ್ಟಿಸುತ್ತದೆ. ಇದಕ್ಕೆ ಪೋಷಕವಾಗಿ ಆಕೆಗೆ ದುಃಸ್ವಪ್ನಗಳುಂಟಾಗುತ್ತವೆ. ಆಕೆ ಶತ್ರುರಾಜರ ಪಾಳಯಕ್ಕೆ ಹೋಗುವುದು ಸರಿಯಲ್ಲವೆಂದು ಮಗನಿಗೆ ಬುದ್ಧಿ ಹೇಳುತ್ತಾಳೆ. ತನಗುಂಟಾದ ಕೆಟ್ಟಕನಸುಗಳನ್ನು ವಿವರಿಸುತ್ತಾಳೆ. ಆದರೆ ಕರಿರಾಯ ಇದಾವುದನ್ನೂ ಕೇಳಲು ಸಿದ್ಧನಿಲ್ಲ. ರಾಜನೊಬ್ಬ ತನ್ನ ಮಗಳನ್ನು ಮದುವೆಯಾಗೆಂದು ಆಹ್ವಾನಿಸಿರುವಾಗ ಶೂರನಾದವನು ಅದನ್ನು ನಿರಾಕರುಸುವುದೆ? ಶತ್ರುರಾಜನೆಂದು ಹೆದರಿದರೆ ನಮ್ಮ ವಂಶಕ್ಕೆ ಅಪಕೀರ್ತಿಯಲ್ಲವೆ? ಕ್ಷತ್ರಿಯನಿಗೆ ಅದು ಹೇಡಿತನದ ಸಂಕೇತ ಎಂಬುದು ಕರಿರಾಯನ ವಾದ. ಕಡೆಗೆ ಅವನ ವಾದವೇ ಗುದ್ದು, ಬನವಂತಾದೇವಿ ಹಳೇಬೀಡಿಗೆ ಹೊರಡಲು ಅನುಮತಿ ನೀಡುತ್ತಾಳೆ.

ಕರಿರಾಯ ಮಿತಪರಿವಾರದೊಂದಿಗೆ ಹಳೇಬೀಡಿಗೆ ಹೊರಡುತ್ತಾನೆ. ಧಾರಾಪುರದಿಂದ ಹೊರಟ ಕರಿರಯ ಕರಿಗಿಯನ್ನು ಹತ್ತಿ, ಕಾವೇರಿ ಲೋಕಪಾವನಿಯರ ಸಂಗಮದ ಗೌತಮ ಕ್ಷೇತ್ರದಲ್ಲಿ ತನ್ನ ಬಿಡಾರ ಹೂಡುತ್ತಾನೆ. ಅಲ್ಲಿಗೆ ಅವನ ಒಂದು ದಿನದ ಪ್ರಯಾಣ ಮುಗಿಯುತ್ತದೆ. ಮಾರನೆಯ ದಿನ ಹಳೇಬೀಡಿಗೆ ಹೊರಡುವುದು ಅವನ ಉದ್ದೇಶ. ಆ ಸ್ಥಳದ ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಕರಿರಾಯ ವನದಲ್ಲಿ ಅಡ್ಡಾಡುತ್ತಿರುವಾಗ ಪರಮಸುಂದರಿಯೊಬ್ಬಳು ಅವನ ದೃಷ್ಟಿಗೆ ಬೀಳುತ್ತಾಳೆ. ಆಕೆಯೂ ಈತನನ್ನು ಕಂಡು ವಿಸ್ಮಿತಳಾಗಿ ಆಕರ್ಷಿತಳಾಗುತ್ತಾಳೆ. ಅವರಿಬ್ಬರಲ್ಲಿ ಪ್ರಣಯಾಂಕುರ ಉಂಟಾಗುತ್ತದೆ.

ತೊಣ್ಣೂರನ್ನು ಭೇತಾಳರಾಜ ಆಳುತ್ತಿರುತ್ತಾನೆ. ಅವನ ರಾಣಿ ಉದ್ದಂಡಿ. ಈ ದಂಪತಿಗಳಿಗೆ ಪುಂಡರೀಕಾಕ್ಷಿಯೆಂಬ ಮಗಳು. ಭೇತಾಳರಾಜನ ನಗರ ಸಕಲ ಸಂಪತ್ತುಗಳಿಂದ ಕೂಡಿದೆ. ಚಿನ್ನದ ಗೋಪುರಗಳಿಂದ ಕೂಡಿದ ಅರಮನೆ ಮತ್ತು ದೇವಾಲಯಗಳು ಸೂರ್ಯ ಕಿರಣಗಳಿಗೆ ಪ್ರತಿಫಲಿಸಿ ಬೆಳಗುತ್ತಿವೆ. ಇಂತಹ ಸಂಪತ್ತಿನ ಬಗೆಗೆ ಅಸೂಯೆಗೊಂಡ ಸುತ್ತ ಮುತ್ತಲಿನ ರಾಜರೆಲ್ಲ ಸೇರಿ ತೊಣ್ಣೂರಿನ ಮೇಲೆ ದಾಳಿ ಮಾಡುತ್ತಾರೆ. ಭೇತಾಳರಾಜ ಎಷ್ಟೇ ಕಾದಾಡಿದರೂ ಸೋಲನ್ನು ಅನುಭವಿಸಬೇಕಾಯಿತು. ಅಷ್ಟೇ ಅಲ್ಲ ಅವನು ಯುದ್ಧದಲ್ಲಿ ಮಡಿದ. ಅವನಿಗೆ ಬಲಗೈಯಾಗಿದ್ದ ಅವನ ಸಹೋದರನೂ ಮಡಿದ. ತೊಣ್ಣೂರಿನ ಸಂಪತ್ತು ಶತ್ರುಗಳ ಪಾಲಾಯಿತು. ಭೇತಾಳರಾಜನ ಪತ್ನಿ ಮತ್ತು ಮಗಳು ಕಾಡಿಗೆ ಓಡಿ ಹೋಗಿ ಅಲ್ಲಿ ತಲೆಮರಿಸಿಕೊಂಡರು. ಇವರಿಗೆ ಸಹಾಯಕನಾಗಿ ಉದ್ದಂಡಿಯ ಸಹೀದರ ಬೊಮ್ಮರಕ್ಕಸ ನಿಂತ. ಮುಂದೆ ನಾಶವಾಗಿದ್ದ ರಾಜ್ಯವನ್ನು ನೇರ್ಪಡಿಸಿಕೊಂಡು ಉದ್ದಂಡಿ ರಾಜ್ಯಸೂತ್ರ ಹಿಡಿದಳು. ಗಂಡು ಸಂತಾನವಿರದಿದ್ದುದರಿಂದ ಪುಂಡರೀಕಾಕ್ಷಿಯನ್ನು ಬೊಮ್ಮರಕ್ಕಸನಿಗೆ ಕೊಟ್ಟು ಮದುವೆ ಮಾಡಿ ಸಿಂಹಾಸನದ ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂದು ಉದ್ದಂಡಿಯ ಆಸೆ. ಆದರೆ ಪುಂಡರೀಕಾಕ್ಷಿಗೆ ಮೊದಲಿನಿಂದಲೂ ಬೊಮ್ಮರಕ್ಕಸನ ಬಗೆಗೆ ಒಲವಿಲ್ಲ. ಆಕೆ ತಾಯಿಯ ಅಭೀಷ್ಟದ ವಿರುದ್ಧ ದಿಕ್ಕಿನಲ್ಲಿ ಯೋಚಿಸುತ್ತಿರುತ್ತಾಳೆ. ಹೀಗಿರುವಾಗ ಸುಂದರನೂ ಶೂರನೂ ಆದ ಕರಿರಾಯ ಪರಿಚಯ ಅವಳಿಗಾಗುತ್ತದೆ. ಕರಿರಾಯ ಮತ್ತು ಪುಂಡರೀಕಾಕ್ಷಿಯರ ಪ್ರಣಯ ರಹಸ್ಯವಾಗಿ ನಡೆಯುತ್ತಲೇ ಇರುತ್ತದೆ.

ಉರಿಶಿಂಗನೆಂಬುವನು ತೊಣ್ಣೂರು ರಾಜ್ಯದ ಸೇನಾಧಿಪತಿ. ಅವನ ಸಹಾಯಕ ಮರಿಶಿಂಗ. ಈ ಮರಿಶಿಂಗನು ಸಮರ್ಥನಾದ ಗೂಢಚಾರ. ಕರಿರಾಯ ಸೇನಾಸಮೇತನಾಗಿ ಗೌತಮಕ್ಷೇತ್ರದಲ್ಲಿರುವ ವಿಚಾರ ಮರಿಶಿಂಗನಿಗೆ ತಿಳಿದು ಅವನು ಕೂಡಲೇ ಕಾರ್ಯಪ್ರವೃತ್ತನಾಗುತ್ತಾನೆ. ಈ ವಿಚಾರವನ್ನು ದಳಪತಿ ಉರಿಶಿಂಗನಿಗೂ ವರದಿ ಕೊಡುತ್ತಾನೆ. ಕರಿರಾಯ ಏನು ಕಾರಣಕ್ಕಾಗಿ ಅಲ್ಲಿ ಬಂದಿಳಿದಿದ್ದಾನೆಂಬುದನ್ನು ಅವರಿಬ್ಬರೂ ಅನ್ವೇಷಿಸುವಾಗ ಪುಂಡರೀಕಾಕ್ಷಿಯ ಪ್ರಣಯ ಪ್ರಸಂಗ ಅವರ ಹದ್ದಿನ ಕಣ್ಣಿಗೆ ಬೀಳುತ್ತದೆ. ಕೂಡಲೇ ಸುದ್ಧಿ ಉದ್ದಂಡಿಗೆ ತಲುಪುತ್ತದೆ. ಆಕೆ ಕೋಪದಿಂದ ಕಿಡಿಕಿಡಿಯಾಗುತ್ತಾಳೆ. ಆದರೆ ಮಗಳ ಮನಸ್ಸಿಗೆ ನೋವಾಗದಂತೆ ಕಾರ್ಯಸಾಧಿಸಬೇಕೆಂದು ತೀರ್ಮಾನಿಸುತ್ತಾಳೆ. ಮೊದಲು ಮಗಳಿಗೆ ಅಪರಿಚಿತನೊಂದಿಗೆ ಪ್ರಣಯದಲ್ಲಿ ತೊಡಗುವುದರ ಬಗೆಗೆ ಇರುವ ಅಪಾಯಗಳನ್ನು ಕುರಿತು ಬುದ್ಧಿ ಮಾತು ಹೇಳುತ್ತಾಳೆ. ಆದರೆ ಆ ದಾರಿಯಲ್ಲಿ ಬಹಳ ಮುಂದುವರಿದಿದ್ದ ಪುಂಡರೀಕಾಕ್ಷಿ ತಾಯಿತ ಮಾತನ್ನು ನಿರ್ಲಕ್ಷಿಸುತ್ತಾಳೆ.

ಈ ಪ್ರಣಯವನ್ನು ಉಪಾಯದಿಂದ ಒಡೆಯಬೇಕೆಂದು ಉದ್ದಂಡಿಯು ಶತಾಯ ಗತಾಯ ಪ್ರಯತ್ನಿಸುತ್ತಾಳೆ. ಕರಿರಾಯ ಮತ್ತು ಅವನ ಸೇನೆಯ ಮೇಲೆ ದಾಳಿ ಮಾಡುವ ಪ್ರಯತ್ನ ನಡೆಯುತ್ತದೆ. ಈ ದಾಳಿಯಲ್ಲಿ ಉರಿಶಿಂಗ ಮರಿಶಿಂಗರು ಮಡಿಯುತ್ತಾರೆ. ಬೊಮ್ಮನೂ ಯುದ್ಧದಲ್ಲಿ ಸೋತು ಹಿಮ್ಮೆಟ್ಟುತ್ತಾನೆ. ಶಕ್ತಿಯಿಂದ ಕರಿರಾಯನನ್ನು ಗೆಲ್ಲುವುದು ಸಾಧ್ಯವಿಲ್ಲವೆಂದು ಅರಿತ ಉದ್ಧಂಡಿ ಯುಕ್ತಿಯಿಂದ ಅವನನ್ನು ಮುಗಿಸುವ ಸನ್ನಾಹ ಮಾಡುತ್ತಾಳೆ. ಕರಿರಾಯನನ್ನು ಪುಂಡರೀಕಾಕ್ಷಿಯೊಂದಿಗೆ ಮದುವೆ ಮಾಡುವ ಕಾರಣ ಹೇಳಿ ಸೇನೆಯಿಂದ ಬೇರೆ ಮಾಡಿ ತೊಣ್ಣೂರಿಗೆ ಕರೆ ತರುತ್ತಾರೆ. ಆತನ ಬಿಡಾರದಲ್ಲಿ ಮೋಸದಿಂದ ಅವನನ್ನು ಕೊಲ್ಲುವ ಏರ್ಪಾಡಾಗಿರುತ್ತದೆ, ಆದರೆ ಪುಂಡರೀಕಾಕ್ಷಿಯ ಮುನ್ನೆಚ್ಚರಿಕೆಯಿಂದಾಗಿ ಕರಿರಾಯನ ಕೊಲೆ ತಪ್ಪುತ್ತದೆಯಾದರೂ ಬೊಮ್ಮರಕ್ಕಸ ಈ ಸಂಚಿಗೆ ಬಲಿಯಾಗಿ ಅಸುನೀಗುತ್ತಾನೆ. ಈ ವಾರ್ತೆಯಿಂದ ಉದ್ದಂಡಿಯ ಆಸೆ ಕಮರಿ ಅವಳಲ್ಲಿ ಸೇಡು ಕಿಡಿಯಾಡುತ್ತದೆ. ಈ ವಿಚಾರ ತಿಳಿದ ಪುಂಡರೀಕಾಕ್ಷಿ ರಾತ್ರೋರಾತ್ರಿ ಕರಿರಾಯನನ್ನು ಗೌತಮ ಕ್ಷೇತ್ರದಲ್ಲಿದ್ದ ಅವನ ಶಿಬಿರಕ್ಕೆ ಹಿಂತಿರುಗುವಂತೆ ಪ್ರೇರೇಪಿಸುತ್ತಾಳೆ. ಕರಿರಾಯ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ದಾತಿ ತಪ್ಪಿ ಮಲ್ಲಿಗದೇವನೂರಿನತ್ತ ತಿರುಗುತ್ತಾನೆ. ಉದ್ದಂಡಿಯ ಸೇನೆ ಅವನ ಬೆನ್ನು ಬಿಡುವುದೇ ಇಲ್ಲ.

 

[1] ಕರಿಭಂಟನೆ ಐತಿಹಾಸಿಕತೆ, ಶ್ರೀ ಎಸ್. ವಿ. ಗೌಡೂರ್.