ವಿಕ್ರಮನು ಕ್ಷತ್ರಿಯ ಕುಲದವನೆಂದು ತಿಳಿದು ವೈಶ್ಯನಿಗೆ ಸಂತೋಷವಾಯಿತು. ಆಗ ಅವನು ತನ್ನ ಮನೆಗೆ ಭೋಜನಕ್ಕೆ ಆಹ್ವಾನಿಸಿದನು. ಕಡುಮಮತೆಯಿಂದ ಕಡುರುಚಿಯ ಪಕ್ವಾನ್ನ ಮಾಡಿಸಿ ಊಟಕ್ಕೆ ಏಳಿಸಿದನು, ಸ್ನಾನವಾದ ನಂತರ ದಿವ್ಯ ಭೋಜನವಾಯಿತು. ತಾಂಬೂಲವನ್ನು ಕೊಟ್ಟು ಮನ್ನಿಸಿ ನಯವಿನಯದೊಡನೆ ಮನೋಹರವಾದ ಚಿತ್ರಶಾಲೆಯಲ್ಲಿ ತಂದು ಕೂರಿಸಿದನು.

ತನ್ನ ಮಗಳು ಆಲೋಲಿಕೆಯನ್ನು ಕರೆದು ಲೋಲ ಪುರುಷನು ಇವನು ನೋಡಮ್ಮ ತಾಯೆ. ನಿನ್ನ ರೂಪಿಗೆ ತಕ್ಕ ವರನಿವನು. ಚೌಷಷ್ಠಿ ವಿದ್ಯಾಸಂಪನ್ನ, ಕಳೆಯುಳ್ಳ ಪುರುಷ, ಸರ್ವಸಿದ್ಧಿಯುಳ್ಳ ದೊರೆ ಇವನು. ಇವನಿಗೆ ನೀನು ಮಾಲೆ ಹಾಕಮ್ಮ, ಮದುವೆಯಾಗಮ್ಮ” ಎಂದು ವೈಶ್ಯ ಹೇಳಿದನು.

ತಂದೆಯ ಮಾತನ್ನು ಕೇಳಿದ ಆಲೋಲಿಕೆಯು ರಾತ್ರಿ ಅವನನ್ನು ತನ್ನ ಗೃಹಕ್ಕೆ ಕಳಿಸಿದರೆ “ಗುಣ ಶೀಲಗಳನ್ನು ಪರೀಕ್ಷೆ ಮಾಡಿ ತಿಳಿಸುತ್ತೇನೆ” ಎಂದಳು, ಆ ದಿನ ಹಗಲು ಕಳೆದು ರಾತ್ರಿಯಾಯಿತು. ವೈಶ್ಯನು “ಕ್ಷತ್ರಿಯರೆ ನಿಮಗೆ ಆಯಾಸವಾಗಿದೆ ಚಿತ್ರಶಾಲೆಯಲ್ಲಿ ಹೋಗಿ ಮಲಗಿ” ಎಂದನು. ಅದರಂತೆ ವಿಕ್ರಮ ಬಂದು ಹಂಸ ತೂಲಿಕಾತಲ್ಪದಲ್ಲಿ ಮಲಗಿದನು. ಅವನಿಗೆ ನಿದ್ರೆ ಬಂದಿತು.

ಪನ್ನೀರಲ್ಲಿ ಮಿಂದು ಪಟ್ಟಮುಡಿಯಿಟ್ಟು ಕಸ್ತೂರಿಬಟ್ಟ ಹಣೆಗಿಟ್ಟು, ಗಂಧ ಪರಿಮಳಗಳ ಲೇಪಿಸಿಕೊಂಡು ಬತ್ತೀಸ ಲಕ್ಷಣದ ಆ ಬಾಲೆ ಆಲೋಲಿಕೆ ಬಂದು ಮಂಚದೊಳು ಪಂಚಶರನಂತೆ ಒರಗಿರುವ ವಿಕ್ರಮರಾಯನನ್ನು ನೋಡಿದಳು. ಇವನು ಅತಿ ಚೆಲುವ ಎಂದುಕೊಂಡಳು. ನನ್ನ ಪೂರ್ವಪುಣ್ಯದಿಂದ ಇವನು ದೊರೆತಿದ್ದಾನೆಂದಳು. ಹೀಗೆ ಆಲೋಲಿಕೆಯು ವಿಕ್ರಮನನ್ನು ಏಳಿಸಲು ನಾನಾ ರೀತಿಯಲ್ಲಿ ಪ್ರಯತ್ನಿಸಿ ವಿಫಲಳಾಗಿ ತನ್ನ ಸಕಲಾಭಾರಣಗಳನ್ನೂ ತೆಗೆದು ಚಿನ್ನದ ಗೂಟಕ್ಕೆ ನೇತುಹಾಕಿ ಪಂಚಬಾಣನ ಮಂಚ ಹತ್ತುವ ರತಿದೇವೆಯಂತೆ ವಿಕ್ರಮರಾಯನ ಪಕ್ಕದಲ್ಲಿ ತಾನೂ ಮಲಗಿದಳು.

ಕೆಲ ಸಮಯದ ನಂತರ ವಿಕ್ರಮನಿಗೆ ಎಚ್ಚರವಾಯಿತು. ತನ್ನ ಪಕ್ಕದಲ್ಲಿ ಸುಂದರಿಯೊಬ್ಬಳು ಮಲಗಿರುವುದನ್ನು ಕಂಡು ಆಶ್ಚರ್ಯವಾಯಿತು. ಸುತ್ತಲೂ ನೋಡಿದನು. ಅವನು ನೋಡುತ್ತಿದ್ದಂತೆಯೆ ಚಿತ್ರದ ಹಂಸವೊಂದು ಹಾರಿ ಬಂದು ಆಲೋಲಿಕೆ ತನ್ನ ಆಭರಣಗಳನ್ನು ನೇತು ಹಾಕಿದ್ದ ಚಿನ್ನದ ಗೂಟದ ಮೇಲೆ ಕುಳಿತು ಮುತ್ತಿನ ಹಾರವನ್ನು ನುಂಗಿತು. ಈ ಆಶ್ಚರ್ಯವನ್ನು ಕಂಡ ವಿಕ್ರಮ ಕದಲದೆ ಕುಳಿತನು. ಕೆಲ ಹೊತ್ತಿನಲ್ಲಿ ಆ ಹಂಸ ಹಾರಿಹೋಗಿ ಮತ್ತೆ ಚಿತ್ರವಾಯಿತು. ಹೀಗೆ ವಿಕ್ರಮರಾಯನು ಆಶ್ಚರ್ಯಭರಿತನಾಗಿ ಇದು ಶನಿರಾಯನ ಮಹಿಮೆಯೆಂದಾಲೋಚಿಸಿ ಬಂದದ್ದೆಲ್ಲ ಬರಲಿ ಎಂದು ಧೈರ್ಯ ಮಾಡಿ ಮಲಗಿದನು.

ಕೊಕ್ಕೋ ಕೋ ಎಂದು ಮುಂಗೋಳಿ ಕೂಗಿದವು. ಕೋಗಿಲೆಗಳು ಹಾಡಿದವು. ಆ ಪಕ್ಷಿ ಧ್ವನಿಯನ್ನು ಕೇಳಿದ ಜನರು ಕೈಗಳಿಂದ ಮುಖವನ್ನು ತೀಡಿ ಶ್ರೀಲೋಲ ನರಹರಿ ಎಂದು ಎದ್ದರು. ಮಲಗಿದ್ದ ಆಲೋಲಿಕೆಯು ಧಿಗ್ಗನೆದ್ದಳು. ವಿಕ್ರಮ ಮಲಗಿಯೇ ಇದ್ದನು. ಆಕೆ ತನ್ನ ಆಭರಣಗಳನ್ನು ಧರಿಸಲು ನೋಡಿದಾಗ ಮುತ್ತಿನಹಾರ ಇಲ್ಲದಿರುವುದನ್ನು ಕಂಡಳು. ಇಲ್ಲಿ ಇದ್ದವರು ನಾವಿಬ್ಬರೆ. ಇನ್ನಾರೂ ಬರಲವಕಾಶವಿಲ್ಲ. ಆದುದರಿಂದ ಈತನೆ ನಾನು ಮಲಗಿದ ಮೇಲೆ ಎದ್ದು ಹಾರವನ್ನು ಕದ್ದು ಮಲಗಿದಂತೆ ನಟಿಸುತ್ತಿದ್ದಾನೆ” ಎಂದುಕೊಂಡು ವಿಕ್ರಮರಾಯನನ್ನು ಎಬ್ಬಿಸಿದಳು.

ವಿಕ್ರಮನು ಥಟ್ಟನೆ ಎದ್ದು ಕುಳಿತನು. ಆಲೋಲಿಕೆಯು “ನನ್ನ ಮುತ್ತಿನ ಹಾರವನ್ನು ಕದ್ದು ಕಳ್ಳನಿದ್ರೆ ಮಾಡುತ್ತಿದ್ದಿಯಾ? ನನ್ನ ಹಾರವನ್ನು ಕೊಡು. ಅದು ನಿನಗೆ ದಕ್ಕುವುದಿಲ್ಲ” ಎಂದಳು. ವಿಕ್ರಮನು ನಾನೂ ಕಾಣೆನೆಂದನು. ಆಲೋಲಿಕೆಯು ತನ್ನ ತಂದೆಯ ಬಳಿಗೆ ಹೋಗಿ “ಅಪ್ಪ ಒಳ್ಳೆ ಕೆಲಸ ಮಾಡಿದೆ. ನೀನು ಕರೆತಂದ ಪುಣ್ಯ ಪುರುಷನ ಕಥೆ ಕೇಳು. ನಾನು ನಿದ್ರೆ ಮಾಡುವ ಸಮಯದಲ್ಲಿ ಎದ್ದು ನನ್ನ ಮುತ್ತಿನ ಹಾರವನ್ನು ಕದ್ದಿದ್ದಾನೆ. ಪರಿಪರಿಯಾಗಿ ಕೇಳಿದರೂ ಕಾಣೆನೆಂದು ಹೇಳುತ್ತಾನೆ” ಎಂದಳು.

ತನ್ನ ಮಗಳು ಆಲೋಲಿಕೆಯ ಮಾತು ಕೇಳಿ ಕೋಪೋದ್ರೇಕದಿಂದ ವೈಶ್ಯನು ವಿಕ್ರಮನ ಬಳಿಗೆ ಬಂದನು. “ನ್ಯಾಯವೆ ಈ ಅನ್ಯಾಯ. ಉಂಡ ಮನೆಗೆ ಎರಡ ಬಗೆದೆ” ಮಾಡಿದ ಉಪಕಾರ ಮರೆತೆ. ನನ್ನ ಮಗಳು ಮದುವೆಯಾಗಲೆಂದು ಪ್ರೀತಿಯಿಂದ ಬಂದರೆ ನೀನು ಆಕೆಯ ಹಾರವನ್ನೇ ಕದಿಯುವುದೆ. ಬಾಯಿ ಮುಚ್ಚಿಸುಮ್ಮನೆ ಏಕೆ ಕುಳಿತಿರುವೆ? ನನ್ನ ಮಾತು ಮೀರಬೇಡ. ಹಾರವನ್ನು ಕೊಡು ಎಂದು ಗದರಿಸಿ ಕೇಳಿದ.

ವಿಕ್ರಮನು “ಎಂದಿಗೂ ಹಾರವನ್ನು ನಾನು ಕದ್ದವನಲ್ಲ ನನ್ನನ್ನೇಕೆ ಹಿಂಸಿಸುವೆ” ಎಂದನು. ಆಗ ವೈಶ್ಯನು ಈತನು ನಯ ವಿನಯಗಳಿಗೆ ಕೇಳುವವನಲ್ಲವೆಂದು ನಿಶ್ಚಯಿಸಿದನು. “ಈಗ ನೀನು ಹಾರವನ್ನು ಕೊಡದಿದ್ದರೆ ಹೆಡೆಮುರಿ ಕಟ್ಟಿಸಿ ಹೊಡೆಸುತ್ತೇನೆ” ಎಂದವನೆ ಆಳುಗಳನ್ನು ಕರೆದು ಇವನನ್ನು ಕಟ್ಟಿ ಹೊಡೆದು ಬಾಯಿಬಿಡಿಸಿ ಎಂದನು. ಆಳುಗಳು ವಿಕ್ರಮನನ್ನು ಕಟ್ಟಿ, ಕೊರಡೆಯಿಂದ ಬಡಿದರು. ರಕ್ತ ತೊಟತೊಟನೆ ಹರಿಯಿತು. ಕದ್ದ ಸರವನ್ನು ಬೇಗ ಕೊಡದಿದ್ದರೆ ಒದ್ದು ಸಾಯಿಸುತ್ತೇವೆ ಎಂದು ಹೆದರಿಸಿದರು. ಸುಳ್ಳು ಹೇಳದೆ ಸರವನ್ನು ಕೊಡು ಎಂದರು. ದೂತರು ನಾನಾ ಬಗೆಯ ಹಿಂಸೆಯನ್ನು ಕೊಟ್ಟರೂ ತಾನು ಸರವನ್ನು ಕದ್ದವನಲ್ಲ ಎಂದು ವಿಕ್ರಮ ಹೇಳಲಾಗಿ ರಾಜನಿಗೆ ದೂರುಕೊಡಲು ವೈಶ್ಯ ತೀರ್ಮಾನಿಸಿದನು.

ಚಂದ್ರಸೇನ ರಾಜನ ಬಳಿಗೆ ವಿಕ್ರಮನನ್ನು ಎಳೆದೊಯ್ದರು. ಅವನು ಮಾಡಿರುವ ಅಪರಾಧವನ್ನು ಚಂದ್ರಸೇನನಿಗೆ ವಿವರಿಸಿದರು. ಆಗ ಅವನು “ಏನಯ್ಯ ಉಪಕಾರ ಮಾಡಿದವರಿಗೆ ಅಪಕಾರ ಮಾಡಬಹುದೆ? ನಿನಗೆ ಸಾರಿ ಹೇಳುತ್ತಿದ್ದೇನೆ, ಹಾರವನ್ನು ಕೊಟ್ಟುಬಿಡು. ಟಕ್ಕುಠೌಲಿಮಾಡಿದರೆ ನನ್ನ ಬಳಿ ನಡೆಯುವುದಿಲ್ಲ. ಛಲವ ಮಾಡದೆ ಉಳಿದುಕೊ. ನೀನು ಹಾರಕೊಡದಿದ್ದರೆ ಶೂಲಕ್ಕೆ ಹಾಕಿಸುತ್ತೇನೆ” ಎಂದು ಗದರಿದನು. ಆಗ ವಿಕ್ರಮ “ನಾನು ಸತ್ತರೂ ಸುಳ್ಳು ಹೇಳಲಾರೆ. ಶಿವನಾಣೆಗೂ ನಾನು ಹಾರವನ್ನು ಕದಿಯಲಿಲ್ಲ. ಸತ್ಯ ನುಡಿದರೆ ಯಾರೂ ನಂಬುವುದಿಲ್ಲ. ಚಿತ್ರದ ಹಂಸೆ ಬಂದು ಹಾರ ನುಂಗಿತು” ಎಂದನು. ವಿಕ್ರಮನ ಮಾತುಗಳನ್ನು ಕೇಳಿದ ಚಂದ್ರಸೇನ ಕೋಪದಿಂದ ಕಿಡಿಕಿಡಿಯಾಗಿ ತನ್ನ ದೂತರನ್ನು ಕರೆದು “ಬಡಿದಿವನ ಕರೆದೊಯ್ದು ಅಡವಿಯಲ್ಲಿ ಕೈಕಾಲು ಕಡಿದು ಹಾಕಿ. ಯಾರೂ ಅನ್ನ ನೀರು ಕೂಡ ಕೊಡದೆಂದು ಸಾರಿ” ಎಂದು ಆಜ್ಞೆ ಮಾಡಿದನು.

ಕ್ರೂರರಾದ ಚಾರರು ಊರಾಚೆ ಅವನನ್ನು ಕರೆದೊಯ್ದರಾಗ. ಕಡಿದರು ಕೈಕಾಲುಗಳನು. ವಿಕ್ರಮನಿಗೆ ಕಣ್ಣೀರು ಸುರಿದವು. ಶರಣ ಜನಗಳ ಸಲಹು ಈ ನರರ ಎಂದು ಹರನನ್ನು ಪ್ರಾರ್ಥಿಸಿದನು. ದೂತರು ಬಂದು ರಾಜನಿಗೆ ಕೈಕಾಲು ಕಡಿದುದಾಗಿ ಹೇಳಿದರು. ಹೀಗೆ ಕೈಕಾಲು ಕಳೆದುಕೊಂಡು ಅನ್ನ ನೀರಿಲ್ಲದೆ ನರಳುತ್ತಿದ್ದ ವಿಕ್ರಮನನ್ನು ಕಂಡು ದಾರಿಗರು “ಅಯ್ಯೋ ಇವನ ಕೈಕಾಲು ಕಡಿದಿದ್ದಾರೆ. ಎಷ್ಟೊಂದು ಕಷ್ಟ ಪಡುತ್ತಿದ್ದಾನೆ. ಹಿಂದಿನ ಜನ್ಮದಲ್ಲಿ ಯಾರಿಗೆ ಹಿಂಸೆ ಕೊಟ್ಟಿದ್ದನೊ” ಎಂದು ಮರುಗಿದರು.

ಕೆಲವು ದಿವಸ ಹೀಗೆ ಕಳೆದವು. ಬಳಲಿ ಕಂಗೆಟ್ಟ ವಿಕ್ರಮನು ಶನಿದೇವನೆ ಕಾಯಬೇಕಲ್ಲದೆ ಮತ್ತಾರಿದಂದಲೂ ಆಗದೆಂದು “ನಿನ್ನ ಮಹಿಮೆಯನರಿಯದೆ ನಾನು ನಿನ್ನ ಜರಿದೆ, ನಾನು ಮಾಡಿದ ತಪ್ಪನ್ನು ಕ್ಷಮಿಸು” ಎಂದು ಶನಿದೇವನನ್ನು ಪ್ರಾರ್ಥಿಸಿದನು. ಆಗ ಶನಿದೇವನು “ಇವನ ಸತ್ಯಕ್ಕೆ ಎಣೆಯಿಲ್ಲ ಇನ್ನು ಇವನ ಪೀಡಿಸಬಾರದು” ಎಂದು ಚಂದ್ರಸೇನನಿಗೆ ಕರುಣೆಯನುಂಟು ಮಾಡಿದ. ಆಗ ರಾಜನು ಕಳ್ಳತನ ಮಾಡಿ ಕೈಕಾಲು ಕಳೆದುಕೊಂಡಿರುವವನಿಗೆ ಯಾರು ಬೇಕಾದರೂ ಅನ್ನ ನೀರು ಕೊಡಬಹುದೆಂದು ಸಾರಿಸಿದನು. ಕೃಪಾಳುವಾದ ಜನರು ಅವನಿಗೆ ಅನ್ನ ನೀರುಗಳನ್ನು ಕೊಡಲಾರಂಭಿಸಿದರು.

ಉಜ್ಜಯಿನಿ ನಗರದ ಒಬ್ಬ ಗಾಣಿಗರವನ ಮಗಳನ್ನು ನಲಂದಪುರಕ್ಕೆ ಕೊಟ್ಟು ಮದುವೆಯಾಗಿತ್ತು. ನಲಂದಪುರದಿಂದ ಅತ್ತೆ ಮಾವರು ಬಂದು ಸೊಸೆಯನ್ನು ಕರೆದುಕೊಂಡು ಹೋದರು. ಪಲ್ಲಕ್ಕಿಯಲ್ಲಿ ಸೊಸೆಯನ್ನು ಕೂರಿಸಿಕೊಂಡು ಬರುತ್ತಿದ್ದರು. ಹೀಗೆ ಇವರು ಬರುವ ದಾರಿಯಲ್ಲೆ ವಿಕ್ರಮನು ಕೈಕಾಲು ಕಳೆದುಕೊಂಡು ಬಿದ್ದಿದ್ದನು. ಅ ಗಾಣಿಗರವನ ಸೊಸೆಯು ವಿಕ್ರಮನನ್ನು ಕಂಡ ಕೂಡಲೆ ಪಲ್ಲಕ್ಕಿಯಿಂದಿಳಿದು ಹತ್ತಿರಕ್ಕೆ ಓಡಿಬಂದು “ರಾಜ ಮಹಾರಾಜ ನತಕಲ್ಪ ಭೋಜ ಇದೇನು ಸೋಜಿಗ. ಸಜ್ಜನ ಶೀಲ ಸಾದು ಪರಿಪಾಲ ಉಜ್ಜಯಿಸಿಪುರದರಸ ನೀನೇಕೆ ಇಲ್ಲಿಗೆ ಬಂದೆ. ನಿನ್ನ ಕೈಕಾಲು ಕಡಿದ ಪಾಪಿಗಳಾರು? ಹರಹರ ನಿನಗಿಂತಹ ವಿಧಿಯೇ, ಏನಾಯಿತು ನನ್ನೊಡನೆ ಹೇಳು” ಎಂದು ಅಳುತ್ತ ಕೇಳಿದಳು.

ವಿಕ್ರಮನು ಆಕೆಯನ್ನು ನೋಡಿ “ಮುತ್ತೈದೆ ತನ ನಿನಗೆ ಶಾಶ್ವತವಾಗಿ ಇರಲಮ್ಮ. ನಮ್ಮ ನಗರದ ವಿಚಾರ ಹೇಳು. ಜನರು ಸುಖವಾಗಿರುವರೆ?” ಎಂದನು. ಆಗ ಆಕೆಯು “ದೊರೆಯೆ ಜನರು ಸುಖವಾಗಿದ್ದಾರೆ. ನಿನಗೇಕೆ ಈ ಗತಿ ಬಂತು ಹೇಳು” ಎಂದು ಕೇಳಿದಳು. ಅದಕ್ಕೆ ವಿಕ್ರಮ “ಇದು ನನ್ನ ಕರ್ಮವಮ್ಮ. ನನಗೆ ಗ್ರಹಗತಿ ಚೆನ್ನಾಗಿಲ್ಲ. ಕಾಲವಶವನಾರು ಮೀರಬಲ್ಲರು” ಎಂದ. ಆಗ ಆಕೆಯು ನೀವು ಚಿಂತಿಸಬೇಡಿ. ನೀವು ನನ್ನ ಸಂಗಡ ಬರಬೇಕು” ಎಂದಳು.

ತಾನು ಪಾಲಕಿ ಇಳಿದು ವಿಕ್ರಮರಾಯನನ್ನು ಅದರಲ್ಲಿ ಕೂರಿಸಿ ಕರೆದುತಂದಳು. ಇದನ್ನು ಕಂಡು ಆಕೆಯ ಮಾವ ಹೆದರಿ ಇವನನ್ನು ಮನೆಗೇಕೆ ಕರೆತಂದೆ. ರಾಜನೋಡಿದರೆ ಏನು ಆಡುವನೋ ಎಂದು ಅವನು ಗಡಗಡನೆ ನಡುಗಿದ. ಸೊಸೆಯನ್ನು ಕುರಿತು “ಏನಮ್ಮ ನಿನ್ನ ನಡತೆ ವಿಚಿತ್ರವಾಗಿದೆ. ನನ್ನ ಮನಸ್ಸಿಗೆ ಹೆದರಿಕೆಯಾಗುತ್ತಿದೆ. ಈ ಪೀಡೆಯನ್ನು ಮನೆಗೇಕೆ ಕರೆತಂದೆಯಮ್ಮ” ಎಂದ ಮಾವನಿಗೆ ಆಕೆ ” ಈತನು ಉಜ್ಜಯಿನಿ ನಗರದ ದೊರೆ, ಹೆಸರು ವಿಕ್ರಮನೆಂದು. ಧೀರ. ಸತ್ಯದಿಂದ ಪ್ರಜೆಗಳನ್ನು ಆಳುತ್ತಿದ್ದವನು. ವಿಧಿಶಾಪದಿಂದ ಹೀಗಾಗಿದೆ. ಈತನು ನಮ್ಮ ಮನೆಗೆ ಬಂದುದರಿಂದ ನಾವು ಧನ್ಯರಾದೆವು” ಎಂದಳು. ಅದನ್ನು ಕೇಳಿದ ಮಾವನು ರಾಜನಲ್ಲಿಗೆ ಬಂದು ಕೈಮುಗಿದು ನಿಂದು “ರಾಜಪರಕು ಸ್ವಾಮಿಪರಾಕು ತಾವು ಕೈಕಾಲು ತೆಗೆಸಿದ ಕಳ್ಳನನ್ನು ತಮ್ಮಾಜ್ಞೆಯಾದರೆ ಮನೆಯಲ್ಲಿ ತಂದಿಟ್ಟುಕೊಳ್ಳುತ್ತೇನೆ” ಎಂದನು. ಆಗ ರಾಜನು “ನಿನ್ನ ಪರೋಪಕಾರ ಬುದ್ಧಿಯನ್ನು ಮೆಚ್ಚಿದೆ. ನೀನು ಅವನನ್ನು ತಂದು ಕಾಪಾಡಬಹುದು” ಎಂದನು. ಅದರಂತೆ ವಿಕ್ರಮನನ್ನು ಆ ಗಾಣಿಗರವನು ತನ್ನ ಮನೆಯಲ್ಲಿಟ್ಟುಕೊಂಡನು.

“ನಾನು ಇಲ್ಲಿರುವುದು, ಯಾರೆಂಬುದನ್ನು ಬೇರೆ ಯಾರಿಗೂ ಹೇಳಬೇಡಿ. ನಾನು ಸಾಮಾನ್ಯನಂತೆ ನಿಮ್ಮ ಗಾಣ ಹೊಡೆದುಕೊಂಡಿರುತ್ತೇನೆ. ಅದರಿಂದ ಯಾರಿಗೂ ಸಂಶಯಬರುವುದಿಲ್ಲ” ಎಂದು ವಿಕ್ರಮ ಅವರಿಗೆ ಹೇಳಿದನು. ಒಂದು ದಿನ ರಾತ್ರಿ ಗಾಣ ಹೊಡೆಯುವಾಗ ಮನಸ್ಸು ಸಂತೋಷವಾಗಿ ವಿಕ್ರಮ ದೀಪಕಮಾಲ ರಾಗವನ್ನು ಹಾಡಿದನು. ಅದರಿಂದ ಇಡೀ ನಗರದ ದೀಪಗಳು ತಮಗೆ ತಾವೇ ಹತ್ತಿಕೊಂಡವು. ಊರಿನ ಜನರೆಲ್ಲ ಆಶ್ಚರ್ಯಪಟ್ಟರು. ಚಂದ್ರಸೇನನ ಮಗಳು ಪದ್ಮಾವತಿ ಈ ಹಾಡನು ಕೇಳಿ ಆಕರ್ಷಿತಳಾಗಿ ಈ ರಾಗ ಹಾಡಿದವರನ್ನು ಕೂಡಲೇ ನನ್ನ ಅಂತಃಪುರಕ್ಕೆ ಕರೆದು ತನ್ನಿ ಎಂದು ಹೇಳಿ ತನ್ನ ಸಖಿಯರನ್ನು ಕಳಿಸಿದಳು.

ಪದ್ಮಾವತಿಯು ಆಜ್ಞೆ ಮಾಡಿದ ಕೂಡಲೇ ಸಖಿಯರು ಕೇರಿ ಕೇರಿಯ ಬೀದಿ ಬೀದಿಯ ಹುಡುಕುತ್ತಾ ಹೊರಟರು. ಎಲ್ಲೆಡೆ ಸುತ್ತಿ ಕಡೆಗೆ ಮನೆಯ ಹತ್ತಿರ ಬಂದು ನೋಡಿದರೆ ಆ ರಾಗ ಹಾಡುತ್ತಿರುವವನು ರಾಜ ಕೈಕಾಲ ತೆಗೆಸಿದ ಕಳ್ಳ. ತಮ್ಮ ಅರಸಿಯ ಬಳಿಗೆ ಓಡಿಹೋಗಿ ಹೇಳಿದರು. ಪದ್ಮಾವತಿಯು ಕಿಡಿಕಿಡಿಯಾಗಿ ಸಖಿಯರನ್ನು ಬಯ್ದು “ಆತನೇ ನನ್ನ ರಮಣ ಕರೆದುಕೊಂಡು ಬನ್ನಿ” ಎಂದಳು. ಆಗ ಸಖಿಯರು “ನಮ್ಮ ಮೇಲೆ ಅಪವಾದ ಬರುತ್ತದೆ ರಾಜನನ್ನು ಕೇಳಬೇಕು” ಎಂದರು. ನಿಮಗೆ ಭೀತಿಬೇಡ ಕರೆದು ತನ್ನಿ ಎಂದ ಪದ್ಮಾವತಿಯ ಮಾತಿನ ಮೇರೆ ತೈಲಿಯ ಮನೆಯಿಂದ ವಿಕ್ರಮರಾಯನನ್ನು ಪದ್ಮಾವತಿಯ ಮನೆಗೆ ಕರೆದು ತಂದರು.

ಅವನನ್ನು ನೋಡಿ ಪದ್ಮಾವತಿಯು ಸುಂದರಾಂಗ ನಿನ್ನ ರಾಗದಿಂದ ನಾನು ಮೋಹಿತಳಾಗಿದ್ದೇನೆ. ಇನ್ನೊಮ್ಮೆ ಆ ರಾಗವನ್ನು ಹಾಡೆಂದಳು. ಅವಳ ಮಾತಿನಂತೆ ಮತ್ತೊಮ್ಮೆ ವಿಕ್ರಮ ದೀಪಕಮಲರಾಗವನ್ನು ಹಾಡಲಾರಂಭಿಸಿದನು. ಇದನ್ನು ಕೇಳಿ ಚಂದ್ರಸೇನ ಸಖಿಯರನ್ನು ಕರೆದು ಆತ ಯಾರೆಂದು ಕೇಳಿದನು. “ಆಗ ಸಖಿಯರು ಆ ನಾದವನ್ನು ಹಾಡುವವನನ್ನು ನೀವೇ ಬಂದು ನೋಡಬೇಕು” ಎಂದರು. ಅಷ್ಟರಲ್ಲಿ ಅವನಿಗೆ ನಿದ್ರೆ ಬಂದು ಮಲಗಿದನು. ಹೀಗೆ ಚಂದ್ರಸೇನ ಪದ್ಮಾವತಿಯರು ಮಾಯದ ನಿದ್ರೆಯಿಂದ ಮಲಗಿರುವಾಗ ವಿಕ್ರಮ ತನ್ನ ನಗರ, ಹೆಂಡತಿ ಮಕ್ಕಳನ್ನು ನೆನೆದು ಶನಿದೇವನನ್ನು ಭಕ್ತಿಯಿಂದ ಸ್ಮರಿಸುತ್ತಿದ್ದನು.

ಅಷ್ಟು ಹೊತ್ತಿಗೆ ತೊಂಭತ್ತು ದಿನಗಳು ಕಳೆದವು. ವಿಕ್ರಮನನ್ನು ಬಳಲಿಸಿದುದು ಸಾಕೆಂದು ಶನಿದೇವನು ಪ್ರತ್ಯಕ್ಷನಾಗಿ “ಏನು ವಿಕ್ರಮ ಸಂತೋಷವಾಗಿರುವೆಯ. ನಾನು ಮಹಿಮನೊ ಅಲ್ಲವೋ?” ಎಂದು ಕೇಳಿದನು. ಆಗ ವಿಕ್ರಮನು “ನನ್ನಿಂದ ತಪ್ಪಾಯಿತು. ಅದನ್ನು ಮನ್ನಿಸಿ ಕಾಪಾಡು” ಎಂದನು. ಆಗ ಶನಿರಾಜ ” ನಿನ್ನ ಸತ್ಯಕ್ಕೆ ಮೆಚ್ಚಿದೆ. ನೀನು ಬೇಕಾದ ವರವನ್ನು ಕೇಳು ಕೊಡುತ್ತೇನೆ” ಎಂದನು. ಅದಕ್ಕೆ ವಿಕ್ರಮ “ಭೂಮಿಯ ಮೇಲಿನ ಜನರಿಗೆ ತೊಂದರೆಯನ್ನು ಕೊಡಬೇಡ” ಎಂದನು. ಆಗ ಶನಿದೇವನು “ನಿನ್ನಲ್ಲಿ ಭೂತ ದಯೆಯುಂಟು ಹೋದ ಕೈಕಾಲು ಕೇಳದೆ ಲೋಕಕ್ಕೆ ಉಪಕಾರವಾಗುವ ವರವ ಕೇಳಿದ್ದೀಯೆ. ಆಯಿತು. ನನ್ನ ಚರಿತ್ರೆಯನ್ನು ಕೇಳಿದವರಿಗೆ ನಾನು ತೊಂದರೆ ಮಾಡುವುದಿಲ್ಲ ಹೋಗಿರುವ ನಿನ್ನ ಕೈಕಾಲು ಬರಲಿ ಸಕಲ ಭೋಗ ಭಾಗ್ಯದಿಂದ ಬಾಳು” ಎಂದನು. ಅದರಂತೆ ವಿಕ್ರಮನಿಗೆ ಕೈಕಾಲು ಬಂದವು. ಅವನು ಶನಿದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು.

ನೀನು ಬೇಡಿದ ವರಗಳನ್ನು ಕೊಟ್ಟೆನು. ನನ್ನ ಧಿಕ್ಕರಿಸಿದ ದೇವದಾನವರಿಗೆಲ್ಲ ದುಃಖವನ್ನು ಕೊಟ್ಟಿರುವೆನು. ಅದನ್ನು ಹೇಳುತ್ತೇನೆ ಕೇಳು. ಒಂದು ದಿನ ನಾನು ಗುರುವಿನ ಬಳಿಗೆ ಹೋದೆ ಕೈ ಜೋಡಿಸಿ ನಮಸ್ಕಾರ ಮಾಡಿದೆ. ಗುರುವೆ ನನ್ನನ್ನು ಸಲಹು ಎಂದು ಅವನ ಪಾದಗಳಿಗೆ ಬಿದ್ದು ತೊಂಭತ್ತು ದಿವಸ ನಿನ್ನರಾಸಿಗೆ ಬರುತ್ತೇನೆ. ನನಗೆ ಅನುಮತಿ ಕೊಡು ಎಂದು ಕೇಳಿಕೊಂಡೆ. ಆಗ ಗುರುವು ನಾನು ತಾಳಲಾರೆ ಒಂದು ಘಳಿಗೆಯೂ ಬೇಡ ಎಂದನು. ಆಗ ನಾನು ನೀವೇ ಮನ್ನಣೆ ಕೊಡದಿದ್ದರೆ ಲೋಕದೊಳಗೆ ನನ್ನ ಮನ್ನಿಸುವರಾರು? ಆದುದರಿಂದ ಐದು ದಿನ ನಿಮ್ಮ ರಾಸಿಗೆ ಬರಲಪ್ಪನೆಕೊಡಿ ಎಂದೆ. ಆದರೂ ಗುರು ಬೇಡ ಮಹರಾಯ ನಿನ್ನೆ ಬೇಡಿಕೊಳ್ಳುತ್ತೇನೆ. ನನ್ನ ಬಿಡು ಎಂದನು. ಗುರುವನ್ನು ಮತ್ತೆ ಮತ್ತೆ ಕೇಳಿ ಪೀಡಿಸಿದರೆ ಎಲ್ಲಿ ಶಾಪಕೊಡುವನೊ ಎಂದು ಹೆದರಿ ಗುರುವೆ ನಿಮ್ಮಯ ಕರುಣದಿಂದ ಪ್ರಸನ್ನನಾದೆ ವರವ ಬೇಡಿಕೊಳ್ಳಿ ಎಂದೆ. ಆಗ ಗುರುವು ಶನಿರಾಜ ನೀನು ಎಂದೂ ನನ್ನ ರಾಶಿಗೆ ಬರಬಾರದು. ಆ ವರವ ಕೊಡು ಎಂದನು. ಆಗ ಶನಿರಾಜ ನೀನು ಮನ್ನಿಸದಿರ್ದರೆ ಲೋಕದೊಳಗೆ ಇನ್ನಾರು ಮನ್ನಿಸುವರು. ಆದುದರಿಂದ ಒಂದು ಕಾಲು ಜಾವವಾದರೂ ನಿಮ್ಮ ರಾಶಿಗೆ ಬರಲು ಅಪ್ಪಣೆ ಕೊಡಿರೆಂದು ಕೇಳಿಕೊಂಡನು.

ಹೀಗೆ ಶನಿರಾಜನು ನಾನಾ ಪರಿಯಲ್ಲಿ ಕೇಳಿಕೊಳ್ಳಲು ಕಾಲು ಜಾವ ಮಾತ್ರ ನನ್ನ ರಾಶಿಗೆ ಬರಬಹುದೆಂದು ಗುರುವು ನನಗೆ ಅಪ್ಪಣೆ ಕೊಟ್ಟನು. ಮನಸ್ಸಿನಲ್ಲಿಯೇ ನನ್ನ ಸ್ನಾನಾದಿಗಳು ಮುಗಿಯುವ ಹೊತ್ತಿಗೆ ಕಾಲು ಜಾವ ಕಳೆದೇ ಹೋಗುತ್ತದೆ ಎಂದು ಗರ್ವಪಟ್ಟುಕೊಂಡನು. ಅಷ್ಟರಲ್ಲಿ ಶನಿಯು ಗುರುವಿನ ರಾಶಿಗೆ ಬಂದನು

ಗುರುವಿನ ಬುದ್ಧಿ ಚಂಚಲವಾಯಿತು. ಗಂಗೆಯಲ್ಲಿ ಸ್ನಾನ ಮಾಡಲೆಂದು ಅವನು ಭೂಲೋಕದಲ್ಲಿಗೆ ಬಂದನು. ಶನಿಯು ಸನ್ಯಾಸಿಯ ವೇಷಧರಿಸಿ ಅವನೆದುರಿಗೆ ಬಂದನು. ಬಂದವನೆ ಗುರುವಿನ ಕೈಯಲ್ಲೆರಡು ಕೆಕ್ಕರಿಕೆ ಹಣ್ಣು ಕೊಟ್ಟು ಸ್ನಾನವಾದ ಮೇಲೆ ಫಲಹಾರ ಮಾಡಿ ಎಂದನು. ಗುರುವು ಆ ಹಣ್ಣುಗಳ ಬೆಲೆ ಎರಡು ದುಡ್ಡನ್ನು ಕೊಟ್ಟನು. ಆ ಹಣ್ಣುಗಳನ್ನು ತಮ್ಮ ವಸ್ತ್ರದ ಜೋಳಿಗೆಯಲ್ಲಿರಿಸಿ ಗುರುವು ನಗರದ ಕಡೆಗೆ ಬರುತ್ತಿದ್ದನು.

ಮುಂದೊಂದು ಪಟ್ಟಣ, ಅದನ್ನಾಳುವ ದೊರೆ ಬೃಗುರಾಜ. ಅವನು ಮಂತ್ರಿ ಮನ್ನೆಯರೊಡನೆ ಸುಖವಾಗಿ ರಾಜ್ಯವಾಳಿಕೊಂಡಿದ್ದ. ರಾಜನಿಗೆ ಒಬ್ಬ ಮಗ ಮಂತ್ರಿಗೆ ಒಬ್ಬ ಮಗ ಇದ್ದರು. ಅವರಿಬ್ಬರೂ ಕುದುರೆ ಸವಾರಿಗೆಂದು ಹೋಗಿದ್ದರು. ಬರಲು ತಡವಾಗಿತ್ತು. ಅಷ್ಟರಲ್ಲಿ ಊಟದ ಸಮಯವಾಗಿತ್ತು. ಮಗ ಏಕೆ ಬರಲಿಲ್ಲ ಎಂದು ನೋಡಿ ಬರುವಂತೆ ರಾಜ ಚರರಿಗೆ ಹೇಳಿದ. ರಾಜಾಜ್ಞೆಯಂತೆ ಚರರು ರಾಜಕುಮಾರ ಮಂತ್ರಿಕುಮಾರನನ್ನು ಹುಡುಕಿಕೊಂಡು ಬರುತ್ತಿದ್ದರು.

ದಾರಿಯಲ್ಲಿ ಎದುರಿಗೆ ಬರುತ್ತಿದ್ದ ಗುರುವನ್ನು ಅವರು ಕಂಡರು. ಅವನ ಜೋಳಿಗೆಯಿಂದ ರಕ್ತ ಸುರಿಯುತ್ತಿತ್ತು. ಅದನ್ನು ಕಂಡ ಚರರು ಗುರುವನ್ನು ಇದೇನೆಂದು ಕೇಳಿದರು. ಗುರುವು ಅವು ಕೆಕ್ಕೆರಕೆ ಹಣ್ಣು ಎಂದನು. ಅದಕ್ಕೆ ಚರರು ಹಣ್ಣಿನಿಂದ ರಕ್ತ ಸುರಿಯುವುದುಂಟೇ ಯಾರ ಕುತ್ತಿಗೆ ಕುಯ್ದು ಅದರಲ್ಲಿಟ್ಟಿರುವೆ? ಎಂದರು. ಆಗ ಗುರುವು ಶನಿಯ ಮಹಿಮೆಯೆಂದರಿತು ಸುಮ್ಮನೆ ಇದ್ದನು. ಆಗಲಿ ಅದೇನೆಂದು ಜೋಳಿಗೆ ತೆಗೆದು ತೋರಿಸು ಎಂದರು. ಅವನು ಸುಮ್ಮನಿರಲು ಚರರು ತಾವೇ ಜೋಳಿಗೆಯ ಕಿತ್ತು ನೋಡಿದರು.

ಜೋಳಿಗೆಯಲ್ಲಿ ನೋಡಲು ರಾಜಕುಮಾರ ಮತ್ತು ಮಂತ್ರಿಕುಮಾರರ ಶಿರಸ್ಸುಗಳನ್ನು ಕಂಡರು. “ಏನೋ ಭ್ರಾಹ್ಮಣ ನೀನು ಇಂತಹ ಕೆಲಸ ಮಾಡಿರುವೆ. ನೀನೂಬ್ಬ ಮಾಯಾಕಾರ. ದಯಾದಾಕ್ಷಣ್ಯ ನಿನ್ನಲ್ಲಿ ಇಲ್ಲ. ನೀನೊಬ್ಬ ಚಂಡಾಲ” ಎಂದು ಎಳೆದು ತಂದರು. “ಸ್ವಾಮಿ ಇವನು ರಾಜಕುಮಾರ ಮಂತ್ರಿ ಕುಮಾರರನ್ನು ಕೊಂದಿದ್ದಾನೆ ಎಂದರು. ರಾಜನಿಗೆ ಬಹಳ ದುಃಖವಾಯಿತು. ಅವನು ತನ್ನ ಮಗನನ್ನು ಕೊಂಡಾಡಿ ನಾನಾ ವಿಧವಾಗಿ ದುಃಖಿಸಿದನು. ರಾಣಿಯೂ ಮಗನನ್ನು ನೆನೆದು ಅತ್ತಳು. ರಾಜಕುಮಾರನ ಹೆಂಡತಿ ದುಃಖದಿಂದ ಸಹಗಮನ ಮಾಡಲು ಸಿದ್ಧಳಾದಳು.

ದೂರೆಯು ಚರರನ್ನು ಕರೆದು ಇವನನ್ನು ಊರಾಚೆ ಎಳೆದೊಯ್ದು ಶೂಲಕ್ಕೆ ಹಾಕಿಬಿಡಿ ಎಂದು ಆಜ್ಞೆ ಮಾಡಿದನು. ತಕ್ಷಣವೆ ಶೂಲವನ್ನು ಮಾಡಿಸಿ ಬ್ರಾಹ್ಮಣರೂಪದ ಗುರುವನೆಳೆದೊಯ್ದು ಶೂಲದ ಮುಂದೆ ನಿಲ್ಲಿಸಿದರು. ಆಗ ಗುರುವು ಇದು ಶನಿ ಮಾಯೆ ಎಂದು “ನಿಮಗೆ ಹತ್ತು ಸಾವಿರ ಹೊನ್ನುಗಳನ್ನು ಕೊಡುತ್ತೇನೆ. ಎರಡು ಘಳಿಗೆ ಬಿಟ್ಟು ಶೂಲಕ್ಕೆ ಹಾಕಿ” ಎಂದು ಚರರಿಗೆ ಹೇಳಿದ. ಚರರು ಆಗಲಿ ಎಂದು ಎರಡು ಘಳಿಗೆ ಪುರುಸೊತ್ತು ಕೊಟ್ಟರು.

ಈ ಕಡೆ ಸವಾರಿ ಹೋಗಿದ್ದ ರಾಜಕುಮಾರ ಮಂತ್ರಿ ಕುಮಾರ ಅರಮನೆಗೆ ಹಿಂತಿರುಗಿದರು. ರಾಜನು ಬೆರನಾಗಿ ಬ್ರಾಹ್ಮಣನನ್ನು ಶೂಲಕ್ಕೆ ಹಾಕಬಾರದೆಂದು ಚರರನ್ನು ಕಳಿಸಿದನು. ಬ್ರಾಹ್ಮಣನನ್ನು ತಂದು ರಾಜನ ಮುಂದೆ ನಿಲ್ಲಿಸಿದರು. ರಾಜ ತನ್ನಿಂದ ಅಪಚಾರವಾಯಿತು. ಕ್ಷಮಿಸಬೇಕು ಎಂದ. ಆಗ ಗುರುವು ದೊರೆ ನಿನಗೆ ದೀರ್ಘಾಯುಷ್ಯ ಬರಲಯ್ಯ ಎಂದು ಹರಸಿ ಕಾಲು ಘಳಿಗೆ ರಾಶಿಗೆ ಬಂದ ಶನಿ ಪಡಿಸಿದ ಭಾದೆಯನ್ನು ವಿವರಿಸಿದ. ರಾಜನು ಶನಿಯ ಮಹಿಮೆಗೆ ಬೆರಗಾಗಿ ಹೋದ. ಜೋಳಿಗೆಯನ್ನು ತರಿಸಿ ನೋಡಲಾಗಿ ಅದರಲ್ಲಿ ಎರಡು ಕೆಕ್ಕರಿಕೆ ಹಣ್ಣುಗಳಿದ್ದವು.

ಒಂದು ದಿನ ಶನಿಯು ಈಶ್ವರನ ಬಳಿಗೆ ಬಂದನು. ಶಿವನೆ ಗಂಗಾಧರನೆ ಭವರೋಗ ವೈಧ್ಯನೆ ಶಂಭುಲಿಂಗನೆ ನಾನು ನಿನ್ನ ರಾಶಿಗೆ ಬರುತ್ತೇನೆ ಎಂದು ಕೇಳಿದನು. ಆಗ ಶಂಕರನು ನೀನು ಬರುವಾಗ ಹೇಳಿ ಬಾ ಎಂದನು. ಹಾಗೆಯೆ ಆಗಲಿ ಶಿವನೆ ನಾಳೆ ಬರುತ್ತೇನೆ ಎಂದು ಹೇಳಿ ಶನಿರಾಜ ಹೊರಟು ಹೋದನು.

ಶಿವನು ಮಾರನೆಯ ದಿನ ಕೈಲಾಸ ಪರ್ವತದಲ್ಲಿ ಅಡಗಿಕೊಂಡನು. ಶನಿಬಂತು ಹುಡುಕಿದರೂ ಸಿಗಲಿಲ್ಲ. ಆಮೇಲೆ ಶನಿಯನ್ನು ಕುರಿತು “ಏನೋ ಶನಿರಾಜ ನನ್ನ ಹಿಡಿಯುತ್ತೇನೆಂದು ಹೇಳಿದೆ ಏನಾಯಿತು” ಎಂದ. ಅದಕ್ಕೆ ಶನಿರಾಜ “ಶಿವ ಶಿವ ನಿನ್ನನ್ನು ಕಂಡರೆ ಮೂರು ಲೋಕವು ಭಯಪಡುತ್ತದೆ. ಅಂತಹ ಮೂರ್ತಿ ನನಗೆ ಹೆದರಿ ಅವಿತುಕೊಂಡಿದ್ದಿರೆಂದರೆ ಹೇಳುವುದೇನಿದೆ ದೇವ” ಎಂದ. ಆಗ ಶಂಕರನು ಮೆಚ್ಚಿ ನೀನು ಮಹಾ ಬಲಶಾಲಿ ಎಂದು ಶನಿಯನ್ನು ಹರಸಿ ಕಳಿಸಿದನು.

ಶನಿಯು ರಾಮನ ರಾಶಿಗೆ ಬಂದನು, ಅವನಿಗೆ ವನವಾಸ ಪ್ರಾಪ್ತವಾಯಿತು. ಅವನ ಹೆಂಡತಿಯನ್ನು ರಾವಣ ಅಪಹರಿಸಿಕೊಂಡು ಹೋದನು. ರಾವಣನು ಗ್ರಹಗಳನ್ನೆಲ್ಲಾ ಸೆರೆಹಾಕಿದ್ದನು. ಅವರನ್ನೆಲ್ಲಾ ತನ್ನ ಮಂಚದ ಕೆಳಗೆ ಬೋರಲು ಹಾಕಿ ತಾನು ಮೇಲೆ ಮಲಗುತ್ತಿದ್ದನು. ಒಂದು ದಿನ ನಾರದನು ರಾವಣನಲ್ಲಿಗೆ ಬಂದ. ಅಲ್ಲಿ ಬೋರಲಾಗಿ ಬಿದ್ದಿದ್ದ ಶನಿಯನ್ನು ನೋಡಿ “ಏನು ಶನಿರಾಜ ನೀನು ಅತ್ಯಂತ ಬಲವಂತವಾದಂತಹ ಗ್ರಹ. ಈಗ ನೋಡಿದರೆ ರಾವಣನ ಮಂಚದ ಅಡಿಯಲ್ಲಿ ಸಿಕ್ಕಿ ನರಳುತ್ತೀದ್ದಿಯಲ್ಲ” ಎಂದ, ಆಗ ಶನಿಯು “ನಾರದ ಮುನಿಯೆ ಕೇಳು ಅವನು ನನ್ನನ್ನು ಬೋರಲಾಗಿ ಹಾಕಿಬಿಟ್ಟಿದ್ದಾನೆ ಅವನನ್ನು ಹಿಡಿಯಲು ಆಗುತ್ತಿಲ್ಲ. ನೀನು ಏನಾದರೂ ಉಪಾಯ ಮಾಡಿ ನನ್ನನ್ನು ಅಂಗಾತವಾಗಿ ಹಾಕಿಸು ಆಮೇಲೆ ನೋಡು ರಾವಣನ ಗತಿ ಏನು ಮಾಡುತ್ತೇನೆ” ಎಂದನು.

ನಾರದನು ಶನಿರಾಜನ ಕೂಡ ಮಾತನಾಡಿ ರಾವಣನ ಹತ್ತಿರಕ್ಕೆ ಬಂದನು, “ಏನಯ್ಯ ದೈತ್ಯರಾಜ ವೈರಿಗಳ ಎದೆಮೆಟ್ಟಿ ನಡೆಯಬೇಕು, ಛಲವಂತನಾದವನು, ಆದರೆ ನೀನು ನಿನ್ನ ವೈರಿಗಳಾದ ನವಗ್ರಹಗಳಿಗೆ ಕರುಣೆತೋರಿ ಬೋರಲು ಹಾಕಿದ್ದೀಯಲ್ಲ, ಅವರನ್ನೆಲ್ಲ ಅಂಗಾತ ಹಾಕಿ ಅವರ ಎದೆಯ ಮೇಲೆ ಓಡಾಡು ಎಂದನು. ಅದರಂತೆ ರಾವಣನು ಗ್ರಹಗಳನ್ನು ಅಂಗಾತ ಹಾಕಿದನು. ಆಗ ಶನಿಯ ದೃಷ್ಟಿ ಅವನ ಮೇಲೆ ಬಿದ್ದು ಆರು ತಿಂಗಳಲ್ಲಿ ಅವನ ವಂಶವೆ ನಾಶವಾಯಿತು.

ಹರಿಶ್ಚಂದ್ರನನ್ನು ಹಿಡಿದು ಭಾರಿ ದುಃಖಕೊಟ್ಟೆ, ಅವನು ಹೆಂಡತಿ ಮಕ್ಕಳನ್ನು ಮಾರಿದುದಲ್ಲದೆ ಮಾದಿಗನ ಆಳಾಗಿ ಸ್ಮಶಾನ ಕಾಯಬೇಕಾಯಿತು. ನಳ ಚಕ್ರವರ್ತಿಗೆ ಹಿಡಿಯಲು ಅವನು ರಾಜ್ಯ ಕೋಶಗಳನ್ನೆಲ್ಲ ಕಳೆದುಕೊಂಡು ಕಾಡಿನಲ್ಲಿ ಅಲೆಯಬೇಕಾಯಿತು. ಅವನು ಕುರೂಪಿಯಾದ, ಇಂದ್ರನನ್ನು ಹಿಡಿಯಲು ಅವನ ಸುಂದರ ಶರೀರ ಕಂದಿಕುಂದಿತು. ವಶಿಷ್ಟರಿಗೆ ಹಿಡಿಯಲು ಅವರ ಸಾವಿರ ಪುತ್ರರು ನಾಶವಾದರು. ಚಂದ್ರನಿಗೆ ಹಿಡಿಯಲು ಅವನಿಗೆ ಕಳಂಕ ಉಂಟಾಯಿತು, ಪಾಂಡವರನ್ನು ಹಿಡಿಯಲು ಅವರು ರಾಜ್ಯವನ್ನೆಲ್ಲಾ ಕಳೆದುಕೊಂಡರು. ಕೌರವರಿಗೆ ಹಿಡಿಯಲು ಅವರೆಲ್ಲ ನಾಶವಾಗಿ ಹೋದರು” ಎಂದು ತನ್ನ ಮಹಿಮೆಯನ್ನು ತಾನೆ ವಿಕ್ರಮನಿಗೆ ವಿವರಿಸಿ ಹೇಳಿದನು.

ರಾತ್ರಿ ಕಳೆದು ನಲಂದಪುರದ ಜನರೆಲ್ಲ ಎದ್ದರು. ಚಂದ್ರಸೇನ ರಾಜ ಎದ್ದು ಪದ್ಮಾವತಿಯ ಅಂತಃಪುರಕ್ಕೆ ಬಂದನು. ಅಲ್ಲಿ ಚಂದ್ರನಂತೆ ಹೊಳೆಯುತ್ತಿದ್ದ ವಿಕ್ರಮನನ್ನು ಕಂಡು ನೀವು ಯಾರು? ಯಾವ್ ರಾಜ್ಯ ನಿಮ್ಮದು. ಇಲ್ಲಿಗೆ ಬಂದ ಬಗೆ ಹೇಗೆ? ಎಂದು ಕೇಳಿದನು. ಆಗ ವಿಕ್ರಮನು “ನಾನು ಆ ವೈಶ್ಯನ ಮುತ್ತಿನ ಹಾರ ಕದ್ದಕಳ್ಳ. ಆತನನ್ನು ಕರೆಯಿಸಿ” ಎಂದನು. ಅದರಂತೆ ಚರರನ್ನು ಕಳಿಸಿ ಚಂದ್ರಸೇನ ವೈಶ್ಯೆನನ್ನು ಕರಿಯಿಸಿದನು. ವಿಕ್ರಮನು ಆ ಚಿತ್ರಶಾಲೆಗೆ ನಡೆಯಿರಿ ಎಂದನು. ಚಂದ್ರಸೇನ ವೈಶ್ಯ ಮಂತ್ರಿ ಮಾನ್ಯರು ಪರಿಜನ ಪುರಜನರು ಎಲ್ಲರೂ ಚಿತ್ರ ಶಾಲೆಗೆ ಬಂದರು, ಅವರೆಲ್ಲ ನೋಡುತ್ತಿದ್ದಂತೆಯೇ ಚಿತ್ರದ ಹಂಸ ಹಾರಿ ಬಂದು ಚಿನ್ನದ ಗೂಟದ ಮೇಲೆ ಕುಳಿತು ಮುತ್ತಿನಹಾರವನ್ನು ಉಗುಳಿತು. ಇದನ್ನು ನೋಡಿದ ವೈಶ್ಯ ಶಿವಶಿವಾ ಎಂದ. ತನ್ನ ಮಗಳು, ಆಲೋಲಿಕೆಯನ್ನು ಆ ಕ್ಷಣ ಕರೆದು ಇವಳು ತಮರ್ಗಪಿತ ಎಂದ. ಉಜ್ಜಯಿಸಿಯ ದೊರೆ ವಿಕ್ರಮ ಎಂಬುದನ್ನು ಕೇಳಿ ಚಂದ್ರಸೇನ ಅವನಿಗೆ ನಮಸ್ಕರಿಸಿದ. ನಮಗೆ ತಿಳಿಯದೆ ಅನ್ಯಾಯ ಮಾಡಿದ್ದೇವೆ ಕ್ಷಮಿಸಬೇಕು” ಎಂದ. ಆಗ ವಿಕ್ರಮನು “ನೀವೇನು ಮಾಡುವಿರಿ ಇದೆಲ್ಲಾ ಶನಿಯ ಮಹಿಮೆ” ಎಂದನು.

ಚಂದ್ರಸೇನನು ಮಿಕ್ರಮನಿಗೆ ತನ್ನ ಮಗಳು ಪದ್ಮಾವತಿಯನ್ನು ಕೊಟ್ಟು ಮದುವೆ ಮಾಡಿದನು. ತನ್ನ ಭಂಡಾರವನ್ನು ತೆಗೆಸಿ ಯಾಚಕರಿಗೆ ದಾನ ಮಾಡಿದನು. ವಿಕ್ರಮನು ತೈಲಿಯನ್ನು ಕರೆಯಿಸಿ ಅವನಿಗೆ ಒಂದು ರಾಜ್ಯವನ್ನೆ ಕೊಡಿಸಿದನು. ಕೆಲವು ದಿನಗಳ ನಂತರ ಉಜ್ಜಯಿನಿಗೆ ಹಿಂತಿರುಗಿ ಧರ್ಮದಿಂದ ರಾಜ್ಯವಾಳಿಕೊಂಡಿದ್ದನು.

ಶನಿಮಹಾತ್ಮೆ ಅದರ ಹೆಸರೇ ಹೇಳುವಂತೆ ಶನಿಯ ಶಕ್ತಿಯನ್ನು ಕುರಿತ ಒಂದು ಚಿಕ್ಕ ಕಾವ್ಯ. ಸಾಮಾನ್ಯವಾಗಿ ಇಂತಹ ಕಾವ್ಯಗಳಲ್ಲಿ ಕಾವ್ಯಕ್ಕೆ ಕಲಾತ್ಮಕಥೆ ಅಥವಾ ಅಂದಿನ ಸಮಾಜದ ಸ್ಥಿತಿಗಳನ್ನು ಅರಿಯುವ ಅವಕಾಶಗಳಿರುವುದಿಲ್ಲ. ಅವು ಒಂದು ರೀತಿಯ ಪವಾಡಗಳ ಸಂತೆಯಾಗಿರುತ್ತದೆ. ಆದರೆ ಕೆಂಪಣ್ಣಗೌಡ ಇಲ್ಲಿ ತನ್ನ ವಿಚಾರ ಸತ್ವವನ್ನು ಮೆರೆದಿದ್ದಾನೆ. ತನ್ನ ಅಭಿಪ್ರಯಗಳೊಂದಿಗೆ ತನ್ನ ಸಮಕಾಲೀನ ಸಮಾಜದ ಚಿತ್ರಗಳನ್ನು ಈ ಕಾವ್ಯದಲ್ಲಿಯೂ ಬಳಸಿಕೊಂಡಿದ್ದಾನೆ. ಈ ರೀತಿಯ ಸನ್ನಿವೇಶ ಮತ್ತು ಘಟನೆಗಳಿಂದಾಗಿ ಈ ಚಿಕ್ಕ ಕಾವ್ಯ ಸರಳವಾಗಿ ಓದಿಸಿಕೊಳ್ಳುತ್ತದೆ.

ವಿಕ್ರಮ ತನ್ನ ಆಸ್ಥಾನದಲ್ಲಿ ಎಂಟುಜನ ಪಂಡಿತರೊಂದಿಗೆ ಕುಳಿತು ಚರ್ಚಿಸುತ್ತಿರುತ್ತಾನೆ. ಅಂತಹ ಚರ್ಚೆ ಸಾಮಾನ್ಯವಾಗಿ ಶಿಷ್ಟಮೇಲುವರ್ಗವನ್ನು ಕುರಿತೂ, ಧರ್ಮ ಕರ್ಮಗಳನ್ನು ಕುರಿತೊ, ದೇವರನ್ನು ಕುರಿತೊ ನಡೆಯುತ್ತದೆ. ಅದರಿಲ್ಲಿ ಈ ಭೂಮಿಯ ಮೇಲೆ, ಅಲ್ಲಿನ ಜನರ ಮೇಲೆ ವಿವಿಧ ಪರಿಣಾಮ ಬೀರುವ ಗ್ರಹಗಳನ್ನು ಕುರಿತ ಚರ್ಚೆ ನಡೆಯುತ್ತದೆ. ಆ ಸಮಯದಲ್ಲಿ ಕೆಂಪಣ್ಣಗೌಡನ ವಿಕ್ರಮ.

ಕರುಣಿಸುತ ಫಲಗಳನು ದೀನರ
ಪೂರೆಯುತಿಹ ನವಗ್ರಹಂಗಳೊಳು
ಹಿರಿದೆನಿಸುವರಾರು ಜಗದೊಳಗೊರೆಯಿರಯ್ಯ

ಎಂದು ಕೇಳುತ್ತಾನೆ. ಸಾಮಾನ್ಯವಾಗಿ ಬ್ರಾಹ್ಮಣರನ್ನು, ಕವಿಯನ್ನು ಪೊರೆಯುತಿಹರಾರು ಎಂದು ಕೇಳಬೇಕಾದ ಕಡೆ ದೀನರು ಬಂದಿರುವುದು ಕವಿಯ ಹೊಸ ದೃಷ್ಟಿಯ ಸಂಕೇತ ಅನ್ನಿಸುತ್ತದೆ. ಅವನು ಮತ್ತೂ ಮುಂದುವರಿದು “ನರರಿಗುರುತರ ಫಲಗಳನು ಕರುಣಿಸುತ, ಧರಣಿಯ ಜನರಿಗೆ ಸ್ಥಿರ ಪದವಿಯನೀಯುವ” ಮುಂತಾಗಿ ಜನಪರ ನಿಲುವನ್ನು ತಾಳಿರುವುದು ಕಂಡುಬರುತ್ತದೆ. ಒಂದು ರೀತಿಯಲ್ಲು ಕವಿ ಮಹಾತ್ಮೆಗಳ ಸಂಪ್ರದಾಯದ ದಾರಿಯಿಂದ ಕವಲೊಡೆದಿರುವುದು ಕಂಡು ಬರುತ್ತದೆ.

ಒಂದು ದಿನ ಬ್ರಾಹ್ಮಣರು ವಿಕ್ರಮನಲ್ಲಿಗೆ ಬಂದು ” ಕುದುರೆ ಹಲ್ಲೆಗಳಿಂದ ಶನಿಯ ಪ್ರತಿಮೆ ಮಾಡಿಸು. ಅದನ್ನು ಕುಂಭದಲ್ಲಿಟ್ಟು ತೈಲಾಭಿಷೇಕೆ ಮಾಡಿಸು. ಪಾವನರಾದ ವಸುಧಾಸುರರನ್ನು ಅಂದರೆ ಬ್ರಾಹ್ಮಣರನ್ನು ದಾನ ಸನ್ಮಾನಗಳಿಂದ ಸಂತುಷ್ಟಿಗೊಳಿಸು. ಶನಿದೇವನು ನಿನ್ನನ್ನು ಪೊರೆಯುವನು” ಎಂದರು, ಬೇರೆಯ ರಾಜರಾಗಿದ್ದರೆ ಆ ಕೂಡಲೇ ಬ್ರಾಹ್ಮಣರನ್ನು ಕರಿಯಿಸಿ ಕೆಲಸ ಆರಂಭಿಸುತ್ತಿದ್ದರು. ಆದರೆ ಕೆಂಪಣ್ಣಗೌಡನ ವಿಕ್ರಮ

ಆಗದಾಗದು ಈಗ ಕೇಳಿರೈ ಬ್ರಾಹ್ಮಣರಿರ
ಸಾಂಗಧಿಂ ಶನಿ ಪೂಜೆಯ ಮಾಡುವುದೆ ಇಲ್ಲ

ಎಂದು ಬ್ರಾಹ್ಮಣರ ಸೂಚನೆಯನ್ನು ತಿರಸ್ಕರಿಸುತ್ತಾನೆ. ಜನರ ಪ್ರೀತಿ ಇರುವ ತನಕ, ನಾನು ಧರ್ಮದಿಂದ ಆಡಳಿತ ನಡೆಸುವ ತನಕ ಯಾರೂ ನನ್ನನ್ನು ಏನೂ ಮಾಡಲಾರರು ಎಂಬುದು ವಿಕ್ರಮನ ಆ ಮೂಲ ಕವಿಯ ನಿಲುವು.

ವಿಕ್ರಮನು ಕೈಕಾಲು ಕಳೆದುಕೊಂಡು ಬಿದ್ದಿರುವಾಗ ಉಜ್ಜಯಿನಿಯ ಗಾಣಿಗರವನ ಮಗಳು ತನ್ನ ರಾಜನ ಸ್ಥಿತಿಯನ್ನು ಕಂಡು ಕಳವಳ ಪಡುವ ರೀತಿ ರಾಜನಿಗೂ ಪ್ರಜೆಗಳಿಗೂ ಇದ್ದ ನಿಕಟ ಸಂಬಂಧವನ್ನು ಸೂಚಿಸುತ್ತದೆ. ವಿಕ್ರಮನನ್ನು ಕಂಡ ಕೂಡಲೆ

ಅಂದಣವ ಬಿಟ್ಟಿಳಿದು ಸುಂದರಾಂಗಿಯಳು
ಬಂದು ವಿಕ್ರಮನೆಡೆಗೆ ವಂದಿಸುತಲವಳು
ಸಜ್ಜನಾವನಶೀಲ ಸಾಧು ಪರಿಪಾಲ
ವುಜ್ಜನೀಪುರದರಸ ನಿಖಿಲಗುಣಮಾಲ
ಕರ ಚರಣಗಳನಾರು ತರಿದ ಪಾಪಿಗಳು
ಹರ ಹರ ನಿನಗಿಂತ ವಿಧಿಯೇಕೆ ಪೇಳು

ಎಂದು ಕೇಳಿ ದುಃಖ ಪಡುತ್ತಾಳೆ. ವಿಕ್ರಮನಿಗೆ ಆಕೆಯನ್ನು ಕಂಡು ತನ್ನ ಮಗಳನ್ನು ಕಂಡಷ್ಟು ಸಂತೋಷವಾಯಿತು

ಮುತ್ತೈದೆತನ ನಿನಗೆ ಶಾಶ್ವತವಾಗಿರಲಿ ತಾಯಿ
ಮತ್ತೆ ನಮ್ಮ ಪುರದ ವೃತ್ತಾಂತವನೆಲ್ಲ ಪೇಳಮ್ಮ
ಕೇಳು ಪತಿವೃತೆ ಯೆನಗೆ ಬಂದುದ
ಪೇಳುವೆನು ಕೇಳು ನೀ ಬಾಲೆ

ರಾಜ ಮತ್ತು ಒಬ್ಬ ಸಾಮಾನ್ಯ ಹೆಣ್ಣು ಮಗಳ ಈ ರೀತಿಯ ಸಂಬಂಧ ಶಿಷ್ಟ ಸಾಹಿತ್ಯದಲ್ಲಿ ಅಪರೂಪ. ಮುಂದೆ ಈಕೆ ವಿಕ್ರಮನನ್ನು ಮನೆಗೆ ಕರೆದೊಯ್ದು ಪ್ರೀತಿಯಿಂದ ಉಪಚರಿಸುತ್ತಾಳೆ. ವಿಕ್ರಮನೂ ಆಕೆಯ ಮನೆಯಲ್ಲಿ ಗಾಣಹೊಡೆಯುವ ಕೆಲಸ ಮಾಡುತ್ತಾನೆ. ಇಲ್ಲಿ ರಾಜನಾದವನು ಒಬ್ಬ ಗಾಣಿಗರವನ ಮನೆಯಲ್ಲಿರಬೇಕಾಯಿತಲ್ಲ ಎಂಬ ಮುಜುಗರವಿಲ್ಲ. ಅರಮನೆಯಲ್ಲಿದ್ದಂತೆ, ತನ್ನ ಕುಟುಂಬದವರೊಂದಿಗಿದ್ದಂತೆ ವಿಕ್ರಮ ಇರುವುದು ವಿಶಿಷ್ಟ. ಕಡೆಯೆಲ್ಲಿ ಎಲ್ಲ ಸುಖ್ಯಾಂತ್ಯವಾದಾಗಲೂ ಈ ಹೆಣ್ಣು ಮಗಳನ್ನು ವಿಕ್ರಮ ಮರೆಯುವುದಿಲ್ಲ. ಆಕೆಯನ್ನು ಕರೆಯಿಸಿ ಒಂದು ರಾಜ್ಯದ ಅಧಿಕಾರವನ್ನೆ ಕೊಡಿಸುತ್ತಾನೆ.

ಈ ಕಾವ್ಯದ ಕೊನೆಯಲ್ಲಿ ವಿಕ್ರಮನ ಅತ್ಯಂತ ವಿರಳವಾದ ಜನಪರ ನಿಲುವನ್ನು ಕಾಣಬಹುದಾಗಿದೆ, ವಿಕ್ರಮನ ಸತ್ಯಸಂಧತೆಗೆ, ಕಷ್ಟ ಸಹಿಷ್ಣತೆಗೆ ಮಾರುಹೋದ ಶನಿದೇವ ನಿನಗೆ ಯಾವ ವರ ಬೇಕು ಕೇಳಿಕೊ ಕೊಡುತ್ತೇನೆ ಎಂದು ಅಭಯ ನೀಡುತ್ತಾನೆ. ವಿಕ್ರಮ ಕೇಳಿದ ವರ

ಬೇಡಿಕೊಂಬೆನು ವರವ ಪಾಲಿಸೊ
ಬೇಡಿದಂಥ ವರ ಕೊಡುವ ದೇವನೆ
ಕಾಡಿಸಬೇಡ ನರನನ್ನು ತಡೆಯುವವರುಂಟೆ.
ಪರರ ಹಿಂಸೆಯ ಮಾಡೋದಿಲ್ಲವೆಂಬ
ವರವ ಪಾಲಿಸು ಯನಗೆ ದೇವನೆ
ವರವ ನಿಮಗೆ ನಾನು ಬೇಡುವೆ ಇದಕೇಳು

ಶನಿಗೆ ಅಧಿಕಾರವಿದೆ, ಶಕ್ತಿಯಿದೆ ಅವನು ಕಾಡಿದರೆ ಯಾರು ತಡೆಯಬಲ್ಲರು? ನಿಜವಾದ ಜನಪರವಾದ ಜನ ಪ್ರತಿನಿಧಿಯಾಗಿ ವಿಕ್ರಮ ಇಲ್ಲಿ ನಡೆದುಕೊಂಡಿದ್ದಾನೆ. ಶನಿಗೆ ಬಹಳ ಸಂತೋಷವಾಗಿ

ಸಚ್ಚರಿತ್ರನೆ ವಿಕ್ರಮೇಶನೆ
ಮೆಚ್ಚಿದೆನು ನೀ ಸತ್ಯವಂತನು
ಕೈಕಾಲು ರಾಜ್ಯವ ಕೇಳದೆ ನೀಯಿನ್ನು
ಲೋಕಕೆ ಉಪಕಾರವಾದಂಥ ವರವನ್ನು

ಬೇಡಿದೆ ಕೊಡುವೆನು ಕೇಳಿನ್ನು ಜನರನ್ನು ಭಾದೆಪಡಿಸುವುದಿಲ್ಲ ಬಂಧನ ಕೊಡುವುದಿಲ್ಲ ಎಂದು ವಿಕ್ರಮನಿಗೆ ಮಾತು ಕೊಡುತ್ತಾನೆ.

ಕೆಂಪಣ್ಣಗೌಡ ತನ್ನ ಮೂರೂ ಕಾವ್ಯಗಳಲ್ಲಿಯೂ ಈ ರೀತಿಯ ಜನ ಪರನಿಲುವನ್ನು ತಾಳಿರುವುದು ಕಂಡುಬರುತ್ತದೆ. ತಪ್ಪು ಮಾಡಿದರೆ ದೇವರುಗಳು ಸಹ ನಿಂದನಾರ್ಹರು ಎಂಬ ವಿಚಾರಪರ ನಿಲುವು ಕವಿಯದು. ಮೂರು ಕಾವ್ಯಗಳಲ್ಲಿಯೂ ಜನಪದ ಜೀವನ ಅದರ ರೀತಿ ನೀತಿಗಳನ್ನು ಸಂದರ್ಭವರಿತು ಸೂಕ್ತವಾಗಿ ಕಾವ್ಯದಲ್ಲಿ ಅಳವಡಿಸಲಾಗಿದೆ. ಕವಿ ಕಾಡು ಮೇಡುಗಳನ್ನು ಎಷ್ಟು ಪ್ರೀತಿಸುತ್ತಾನೆಂದರೆ, ನಳನ ಬಳಿಗೆ ಬಂದ ಶಬರ

ನಾನುಯಿರುವ ಮನೆಯೊಳಗಿನ್ನು
ಸ್ವಾಮಿ ಘನ ಮೃಗವಿರುತವಿನ್ನು

ಎಂದು ಹೇಳುತ್ತಾನೆ. ಕಾಡನ್ನು ಮನೆ ಎಂದು ಕರೆದ ಕವಿಗಳು ಅಪರೂಪವೆಂದೇ ಹೇಳಬೇಕು. ಕೆಂಪಣ್ಣಗೌಡನ ಈ ಮೂರೂ ಕಾವ್ಯಗಳು ಒಂದು ರೀತಿಯಲ್ಲಿ ಪೌರಾಣಿಕವಾದಂತಹವು. ಆದರೆ ಬೇರೆ ಬೇರೆಯ ಕವಿಗಳಂತೆ ದೇವಲೋಕ ನರಲೋಕಗಳು ಅಲ್ಲಿನ ಜನರು ದೂರ ನಿಲ್ಲುವುದಿಲ್ಲ. ಅವರ ಸಂಬಂಧಗಳು, ನಡಾವಳಿಗಳನ್ನು ನೋಡುತ್ತ ಹೋದಂತೆ ಅವರ ಮಧ್ಯದ ಅಂತರ ಕರಗುತ್ತಾ ಬರುತ್ತದೆ. ಇದು ಜನಪದ ರೀತಿ. ಆ ಮೂಲದ ಕವಿ ಕೆಂಪಣ್ಣಗೌಡ ಈ ಕಾವ್ಯಗಳ ಮೂಲಕ ಪವಾಡಗಳನ್ನು ಮೆರೆಯದೆ ಲೋಕ ಕಲ್ಯಾಣವನ್ನು ಅಹಿಂಸೆಯನ್ನು ದೀನರ ಉದ್ಧಾರವನ್ನು ಬಯಸಿರುವುದು ಅವನೊಬ್ಬ ಸರ್ವಧರ್ಮ ಸಮನ್ವಯದ ಶಕ್ತ ಕವಿ ಎಂಬುದನ್ನು ತೋರಿಸಿಕೊಟ್ಟಿದೆ.

ಕೆಂಪಣ್ಣಗೌಡ ತನ್ನ ಮೂರು ಕಾವ್ಯಗಳಲ್ಲಿ ಗ್ರಾಮ್ಯ ಭಾಷೆ, ನುಡಿಗಟ್ಟು ಮತ್ತು ಜನಪದ ಪರಿಸರವನ್ನು ಅತ್ಯಂತ ಮನೋಜ್ಞವಾಗಿ ಬಳಸಿಕೊಂಡಿದ್ದಾನೆ. ಈ ಕಾವ್ಯಗಳ ಜಾನಪದೀಯ ಭಾಷೀಯ ಅಧ್ಯಯನವೂ ಆಗಬೇಕಾಗಿದೆ. ಉದಾಹರಣೆಗೆ ಕೆಲವು ಪದಗಳನ್ನು ಉಕ್ತಿಗಳನ್ನು ನೋಡಬಹುದು. ಮಾಜು, ಇಕ್ಕಡೆ, ತೊಂಡೆಗರುಳು, ಇಕ್ಕು, ಉಣ್ಣು, ಚೆಲುವ, ಹಾದಿಮಾತು, ಹರವಿ, ಖಂಡುಗ, ಹೆಡಗೆ, ಕಳ್ಳುಗುಡುಹಿ ಹೆಂಡಗುಡುಹಿ ಹೀಗೆ ಗ್ರಾಮ್ಯ ಪದಗಳನ್ನು ಕವಿ ಸಹಜವಾಗಿ ಕಾವ್ಯದಲ್ಲಿ ಬಳಸಿಕೊಂಡಿದ್ದಾನೆ.

೧. ಹುಲಿಯ ಮೀಸೆಯಲ್ಲಿ ಉಯ್ಯಾಲೆಯಾಡುವ ಮೊಲನೆಂತೆ.
೨. ಕೆಂಡಕ್ಕೆ ಇರುವೆ ಮುತ್ತಿದಂತೆ.
೩. ತೆರೆಮರೆಯ ಬೊಂಬೆ ಹೊರಗೆ ಕಾಣಿಸುವಂತೆ.
೪. ಆನೆಯನು ಕಂಕುಳಲಿರುಕುವರೆ.

ಕೆಲವು ಪದ್ಯಗಳ ಸೊಗಸನ್ನು ನೋಡಬಹುದು.

೧. ಗುಮ್ಮ ಬರುವುದಳದಿರೊ ಕಂದಯ್ಯ
ನಿಮ್ಮಪ್ಪನ ಕಣ್ಣಲ್ಲಿ ನೋಡೊ ಕಂದಯ್ಯ.

೨. ರೆಕ್ಕೆಯನೊದರುತ ಕೊರಳುಗಳೆತ್ತುತ
ದಿಕ್ಕು ದಿಕ್ಕಿಗೆ ಬೆಳಗಾಗುವ ಪರಿಯೆನು
ಕೊಕ್ಕೋ ಕೋ ಯೆಂದು ಕೂಗುವಾಗ,
ಉದ್ದಂಡಿಯ ರೂಪ.
ಹಳೆಯ ಕೊಡೆಯಂತೆ ತಲೆಯ ಕೆದರಿದಳು
ಕಾಸಿದ ಗುಂಡಿನಂತೆ ಕೆಂಡಗಣ್ಣುಗಳು
ಹರಿಗೋಲಿನಂದದಿ ತೆರೆದ ಬಾಯಿ
ಸಿಡಿಮರದ ಸರಿಪಡಿಯಂತೆ ತೋಳು
ಗವಿಯ ಬಾಗಿಲಿನಂತೆ ಪರಿ ಹೊಟ್ಟೆ
ಕೊಣವೆ ನೇಗಿಲಿನಂತೆ ಯೆಣೆಯಾದ ಬೆರಳು

ಹೀಗೆ ಗ್ರಾಮ್ಯ ಸೊಗಸಿಗೆ ಕಾವ್ಯಗಳನ್ನೆ, ಓದಬೇಕು. ಕವಿ ತನ್ನ ಸಮಕಾಲೀನ ಗ್ರಾಮ್ಯ ಜೀವನದ ಚಿತ್ರಗಳನ್ನು ಸಮಯ ದೊರೆತಲ್ಲೆಲ್ಲಾ ಕೊಟ್ಟಿದ್ದಾನೆ.

ಈ ಮೂರೂ ಕಾವ್ಯಗಳು ಮತ್ತು ಕವಿಯ ಬಗ್ಗೆ ಸುಮಾರು ಹದಿನೈದು ವರ್ಷಗಳ ಕಾಲ ಆಗಾಗ ಕ್ಷೇತ್ರಕಾರ್ಯ ನಡೆಸಲಾಗಿದೆ. ಹಸ್ತಪ್ರತಿಗಳು ಮತ್ತು ಮುದ್ರಿತ ಪ್ರತಿಗಳನ್ನು ಸಂಗ್ರಹಿಸಲಾಗಿದೆ. ಈ ಕ್ಷೇತ್ರಕಾರ್ಯ ಕೆಂಪಣ್ಣಗೌಡ ಮತ್ತು ಅವನ ಕಾವ್ಯಗಳು ಇಡೀ ದಕ್ಷಿಣ ಕರ್ನಾಟಕದಲ್ಲಿ ಅಪಾರ ಜನಪ್ರಿಯವಾಗಿದ್ದುವೆಂಬುದನ್ನು ಸಾಬೀತು ಪಡಿಸಿದೆ. ಈ ಮೂರು ಕಾವ್ಯಗಳು ಯಕ್ಷಗಾನ ಪ್ರಸಂಗಗಳಾಗಿ ಕರ್ನಾಟಕ ಮತ್ತು ಹೊರರಾಜ್ಯಗಳಿಗೂ ಹೋಗಿವೆ. ಕೆಂಪಣ್ಣಗೌಡನ ಈ ಕಾವ್ಯಗಳನ್ನು ಯಕ್ಷಗಾನ ಪ್ರಸಂಗ, ತಾಳ ಮದ್ದಳೆ, ಹರಿಕಥಾ ರೂಪಗಳಲ್ಲಿ ಧಾರ್ಮಿಕ ಸಮಾರಂಭ ಮತ್ತು ಆಚರಣೆಗಳಲ್ಲಿ ಏರ್ಪಡಿಸುವ ಸಂಪ್ರದಾಯ ಇಂದಿಗೂ ಕಂಡುಬರುತ್ತದೆ. ಶನಿಮಹಾತ್ಮೆಯಂತೂ ಇಂದಿಗೂ ಕೆಲವು ಕಡೆ ಮನೆಮನೆಯ ಪಾರಾಯಣ ಗ್ರಂಥವೇ ಆಗಿದೆ. ಒಟ್ಟಿನಲ್ಲಿ ಕೆಂಪಣ್ಣಗೌಡ ಒಬ್ಬ ಅತ್ಯಂತ ಜನಪ್ರಿಯ ಕವಿಯಾಗಿದ್ದನು ಎಂಬುದು ಸತ್ಯ.

* ಆಸಕ್ತರು ಡಾ. ದೇ. ಜವರೇಗೌಡರು ಸಂಪಾದಿಸಿ ಕರ್ನಾಟಕ ಸರ್ಕಾರ ಪ್ರಕಟಿಸಿರುವ ಕನಕದಾಸರ ನಳಚರಿತ್ರೆಯ ಪೀಠಿಕೆಯನ್ನು ನೋಡಬಹುದು.