ತೊಣ್ಣೂರಿನಿಂದ ಓಡಿದ ಕರಿರಾಯನ ಗೂಢಚಾರನು ಸೇನೆಗೆ ಸುದ್ದಿ ತಿಳಿಸುತ್ತಾನೆ. ಕೂಡಲೆ ಅದು ಅವನ ಸಹಾಯಕ್ಕೆ ಮಲ್ಲಿಗದೇವನೂರಿನತ್ತ ದಾವಿಸುತ್ತದೆ. ಅಲ್ಲಿ ಉದ್ದಂಡಿ ಮತ್ತು ಕರಿರಾಯನ ಸೇನೆಗಳು ಮುಖಾಮುಖಿಯಾಗಿ ಭೀಕರ ಯುದ್ಧ ಸಂಭವಿಸುತ್ತದೆ. ಇಷ್ಟು ಹೊತ್ತಿಗೆ ಸುತ್ತಮುತ್ತಲಿನ ಗೌಡಪ್ರಭುಗಳಿಗೆ ಸುದ್ದಿ ತಿಳಿದು ಅವರೆಲ್ಲ ಮಲ್ಲಿಗದೇವನೂರಿಗೆ ಧಾವಿಸುತ್ತಾರೆ. ಒಂದು ಹೆಣ್ಣಿನ ವಿಚಾರಕ್ಕೆ ಇಷ್ಟೇಲ್ಲಾ ಆದುದು ಸರಿಯಲ್ಲವೆಂದು ತಿಳಿ ಹೇಳುತ್ತಾರೆ. ಕಡೆಗೆ ಆದುದಾಗಿ ಹೋಯಿತೆಂದು ಇಬ್ಬಣಗಳಿಗೂ ಸಮಾಧಾನ ಹೇಳಿ ಯುದ್ಧಸ್ತಂಭನವೇರ್ಪಡಿಸುತ್ತಾರೆ. ಮರುದಿನ ಪರಸ್ಪರ ಚರ್ಚಿಸಿ ಒಪ್ಪಂದಕ್ಕೆ ಬರುವ ತೀರ್ಮಾನ ಹೇಳುತ್ತಾರೆ. ತನ್ನ ತಮ್ಮನನ್ನು ಕಳೆದುಕೊಂಡ ಉದ್ದಂಡಿ ನ್ಯಾಯಗುರುಡಳಾಗುತ್ತಾಳೆ. ಯಾವ ಅಪಾಯದ ಮುನ್ಸೂಚನೆಯೂ ಇಲ್ಲದೆ ಮಲಗಿದ್ದ ಕರಿರಾಯನ ಶಿಬಿರದ ಮೇಲೆ ಕತ್ತಲೆಯಲ್ಲಿ ರಕ್ಕಸಿಯಂತೆ ದಾಳಿಮಾಡಿ ಅವನನ್ನು ಇರಿದು ಕೊಲ್ಲುತ್ತಾಳೆ. ಆದರೆ ಏಳು ಜನ ಗೌಡ ಪ್ರಭುಗಳು ನೆನಪಾಗಿ ಅವಳ ಮೈ ನಡಗುತ್ತದೆ. ಕೂಡಲೆ ತನ್ನ ಪರಿವಾರದೊಂದಿಗೆ ಅವಳು ಮಲ್ಲಿಗದೇವನೂರಿನಿಂದ ಪಲಾಯನ ಮಾಡುತ್ತಾಳೆ.

ಬೆಳಗಾಗೆದ್ದ ಕೂಡಲೇ ನಡೆದಿರುವ ದುರಂತವನ್ನು ಕಂಡು ಸಕಲರೂ ಸ್ತಂಭೀಭೂತರಾಗುತ್ತಾರೆ. ತಮ್ಮ ನ್ಯಾಯಕ್ಕೆ ಒದಗಿದ ಆಘಾತವನ್ನು ಸಹಿಸಲಾರದೆ ಪಂಚಾಯಿತರಾಗಿದ್ದ ಗೌಡ ಪ್ರಭುಗಳು ಯುದ್ಧ ಪದ್ಧತಿಯಂತೆ ಚಿತೆಯಲ್ಲಿ ಬಿದ್ದು ಕೊಂಡವಾಗುತ್ತಾರೆ. ಅವರ ಹೆಸರುಗಳು (೧) ದಾನದಗೌಡ, (೨) ಧರ್ಮಗೌಡ, (೩) ಸತ್ಯಗೌಡ, (೪) ಶಾಂತಿಗೌಡ, (೫) ಭಕ್ತಿಯಗೌಡ, (೬) ಮುಕ್ತಿಯಗೌಡ, (೭) ಧಾತಗೌಡ ಇಷ್ಟು ಹೊತ್ತಿಗೆ ವಿಷಯ ತಿಳಿದ ಬನವಂತಾದೇವಿ ಮತ್ತು ಪುಂಡರೀಕಾಕ್ಷಿಯರೂ ಮಲ್ಲಿಗದೇವನೂರಿಗೆ ಬರುತ್ತಾರೆ. ಅಲ್ಲಿಂದ ಓಡಿಹೋಗಿ ಮೂಗೂರಿನ ಹೂವಾಡಿಗರ ಕೇರಿಯ ನೆಲಮಾಳಿಗೆಯಲ್ಲಿ ಅವಿತಿದ್ದ ಉದ್ದಂಡಿಯನ್ನು ಸೈನಿಕರು ಬಂಧಿಸಿ ಎಳೆತರುತ್ತಾರೆ. ಏಳು ಜನ ಗೌಡಪ್ರಭುಗಳು ಆತ್ಮಹುತಿ ಮಾಡಿಕೊಂಡ ಸ್ಥಳದಲ್ಲಿ ಆಕೆಯನ್ನು ಬಲಿಕೊಡಲಾಗುತ್ತದೆ. ಮತ್ತೊಂದೆಡೆ ಮಗನನ್ನು ಕಳೆದುಕೊಂಡ ಬನವಂತಾದೇವೆ, ಪ್ರಿಯಕರನನ್ನು ಕಳೆದುಕೊಂಡ ಪುಂಡರೀಕಾಕ್ಷಿಯರು ಅಗ್ನಿಗಾಹುತಿಯಾಗುತ್ತಾರೆ. ಅಷ್ಟು ಹೊತ್ತಿಗೆ ಹಳೇಬೀಡಿನ ಬಲ್ಲಾಳರಾಯ ಅಲ್ಲಿಗೆ ಬರುತ್ತಾನೆ. ಮುಂದೆ ಈ ರಾಜ್ಯವೆಲ್ಲಾ ಬಲ್ಲಾಳರಾಯನಿಗೆ ಸೇರುತ್ತದೆ.

ಕರಿಭಂಟನ ಕಾಳಗ ಯಕ್ಷಗಾನ ನಾಟಕಗಳಲ್ಲಿಯೂ ಈ ಕಥೆಯನ್ನೇ ಆಧರಿಸಿ ಹೊರಟರೂ ಹಲವಾರು ಮಾರ್ಪಾಟುಗಳನ್ನು ಮಾಡಿಕೊಳ್ಳಲಾಗಿದೆ. ಪ್ರಧಾನವಾಗಿ ಉದ್ದಂಡಿಯನ್ನು ರಾಕ್ಷಸಿ ಎಂದು ಕರೆಯಲಾಗಿದೆ. ಆಕೆ ಮೋಸಗಾತಿ, ಮಾಯಾವಿ, ನರಭಕ್ಷಕಿ ಎಂದೆಲ್ಲಾ ವರ್ಣಿಸಲಾಗಿದೆ. ಕಥೆಗೆ ಕೂಡ ಯುದ್ಧದ ಬದಲು ಮಾಯಾ ಮಂತ್ರಗಳ ತಿರುವನ್ನು ಕೊಡಲಾಗಿದೆ. ಕರಿರಾಯ ಗೌತಮಕ್ಷೇತ್ರಕ್ಕೆ ಬರುವವರೆಗೂ ಈ ಎರಡೂ ಪಾಠಗಳಲ್ಲಿ ಯಾವ ವ್ಯತ್ಯಾಸವಿಲ್ಲ. ಅಲ್ಲಿಂದ ಮುಂದೆ ತೊಣ್ಣೂರಿಗೆ ಹೋದ ಕರಿರಾಯನನ್ನು ಕೊಲ್ಲಲು ಉದ್ದಂಡಿ ಮಾಡುವ ಉಪಾಯಗಳಲ್ಲಿ ಬದಲಾವಣೆ ಇದೆ. ಪುಂಡರೀಕಾಕ್ಷಿಯೇ ಕರಿಭಂಟನನ್ನು ತಂದು ಅರಮನೆಯಲ್ಲಿ ಅವಿಸಿಟ್ಟುಕೊಂಡಿರುತ್ತಾಳೆ. ಉದ್ದಂಡಿ ಮತ್ತು ಮೊಮ್ಮರಕ್ಕಸರು ನರವಾಸನೆ ಬರುತ್ತಿದೆ ಎಂದೇ ರಂಗ ಪ್ರವೇಶಿಸುತ್ತಾರೆ. ಕರಿಭಂಟನಿಗೆ ಪೆಂಡಯ ಕಟ್ಟುವನೆಪದಲ್ಲಿ ಉದ್ದಂಡಿ ಕತ್ತಲೆಯಲ್ಲಿ ಅವನನ್ನು ಗುರುತಿಸಿ ಕೊಲ್ಲುವ ಉಪಾಯವನ್ನಾಗಿ ಮಾಡಿಕೊಳ್ಳುತ್ತಾಳೆ. ಆದರೆ ಪುಂಡರೀಕಾಕ್ಷಿ ಅದನ್ನು ಬಿಚ್ಚಿ ಮೊಮ್ಮನ ಕಾಲಿಗೆ ಕಟ್ಟುತ್ತಾಳೆ. ಆತನೆ ಕರಿಭಂಟನೆಂದು ಉದ್ದಂಡಿ ಅವನನ್ನು ಕತ್ತರಿಸಿ ಕೊಂದು ಹೊರಟು ಹೋಗುತ್ತಾಳೆ. ಅಪಾಯವನ್ನರಿತ ಪುಂಡರೀಕಾಕ್ಷಿ ಕರಿಭಂಟನನ್ನು ನೀನು ತಪ್ಪಿಸಿಕೊ ಎಂದು ಕಳಿಸುತ್ತಾಳೆ. ಅವನು ನಡೆದೂ ನಡೆದು ಮಾರನೆಯ ಸಂಜೆ ಮಲ್ಲಿಗನೂರನ್ನು ತಲುಪುತ್ತಾನೆ. ಇತ್ತ ಬೆಳಗಾಗೆದ್ದ ಉದ್ದಂಡಿ ಆಗಿದ್ದ ಅನಾಹುತ ಕಂಡು ರೊಚ್ಚಿಗೆದ್ದು ಕರಿಭಂಟನನ್ನು ಹಿಂಬಾಲಿಸುತ್ತಾಳೆ. ಆಕೆಯೂ ಸಂಜೆಯ ಹೊತ್ತಿಗೆ ಮಲ್ಲಿಗನೂರಿಗೆ ಬಂದು ಸೇರುತ್ತಾಳೆ. ಹೋರಾಡಿ ಕರಿಭಂಟನನ್ನು ಗೆಲ್ಲಲು ಸಾಧ್ಯವಿಲ್ಲವೆಂದು ಅರಿತ ಉದ್ದಂಡಿ ಮೋಸದ ಹಾದಿ ಹಿಡಿಯುತ್ತಾಳೆ. ತನ್ನ ಕತ್ತಿಯನ್ನು ಮಗುವನ್ನಾಗಿ ಮಾಡಿಕೊಂಡು ತಾನು ಬಾಣಂತಿಯಂತೆ ವೇಷಧರಿಸುತ್ತಾಳೆ. ಕರಿಭಂಟ ತನ್ನ ಗಂಡನೆಂದೂ ತನ್ನನ್ನೂ ಮಗುವನ್ನೂ ತೊರೆದು ಬೇರೊಬ್ಬಳ ಮೋಹದಲ್ಲಿ ಹೋಗುತ್ತಿದ್ದನೆಂದು ಮಲ್ಲಿಗನೂರಿನ ಗೌಡಸಭೆಗೆ ದೂರು ನೀಡುತ್ತಾಳೆ. ಇಷ್ಟು ಹೊತ್ತಿಗೆ ರಾತ್ರಿ ಬಹಳವಾಗಿದ್ದುದರಿಂದ ಗೌಡರು ಅವರಿಬ್ಬರಿಗೂ ಊರಿನ ರಾಮೇಶ್ವರನ ಗುಡಿಯಲ್ಲಿ ತಂಗುವಂತೆಯೂ ಬೆಳಗ್ಗೆ ನ್ಯಾಯ ಬಗೆಹರಿಸುವುದಾಗಿಯೂ ತಿಳಿಸುತ್ತಾರೆ.

ಒಂದು ಕಡೆ ತಂಗಿದರೆ ಈ ರಕ್ಕಸಿ ಏನಾದರೂ ಕೇಡು ಮಾಡುತ್ತಾಳೆಂದು ಕರಿಭಂಟನಿಗೆ ಗೊತ್ತು. ಆದುದರಿಂದ ಅವನು ಒಟ್ಟಿಗಿರಲು ಒಪ್ಪುವುದಿಲ್ಲ. ಆದರೆ ಆ ಗೌಡರುಗಳು ಆತನಿಗೆ ಏನಾದರೂ ಆದರೆ ಬದಲಿಗೆ ತಮ್ಮ ಪ್ರಾಣ ಕೊಡುವುದಾಗಿ ವಾಗ್ಧಾನ ಮಾಡುತ್ತಾರೆ. ವಿಧಿಯಿಲ್ಲದೆ ಅವರ ಮಾತಿಗೆ ಕಟ್ಟು ಬಿದ್ದು ಕರಿಭಂಟ ಉದ್ದಂಡಿಯೊಂದಿಗೆ ರಾಮೇಶ್ವರನ ಗುಡಿಯಲ್ಲಿ ಉಳಿಯುತ್ತಾನೆ. ನಿರೀಕ್ಷಿಸಿದಂತೆ ರಾತ್ರಿ ಅವಳು ಕರಿಭಂಟನನ್ನು ಕೊಂದು ದೇವಾಲಯದ ಛಾವಣಿಯ ಎರಡು ಚಪ್ಪಡಿಗಳನ್ನೇತ್ತಿ ಪರಾರಿಯಾಗುತ್ತಾಳೆ. ಬೆಳಗ್ಗೆ ಎದ್ದು ನೋಡಿದಾಗ ಕರಿಭಂಟ ಸತ್ತು ಬಿದ್ದಿರುತ್ತಾನೆ. ತಮ್ಮ ಮಾತಿನಂತೆ ಏಳುಜನ ಗೌಡಗಳೂ ಕೊಂಡವಾಗುತ್ತಾರೆ. ಅಲ್ಲಿಗೆ ಬಂದ ಬನವಂತೆ, ಪುಂಡರೀಕಾಕ್ಷಿಯರೂ ಬಲಿಯಾಗುತ್ತಾರೆ. ಇಷ್ಟು ಹೊತ್ತಿಗೆ ತನ್ನ ಮಗಳು ಧರಣೀ ಮೋಹಿನಿಯೊಂದಿಗೆ ಬಲ್ಲಾಳರಾಯ ಅಲ್ಲಿಗೆ ಬರುತ್ತಾನೆ. ಶಿವ ಪಾರ್ವತಿಯರೂ ಅಲ್ಲಿ ಪ್ರತ್ಯಕ್ಷರಾಗುತ್ತಾರೆ. ಸತ್ತವರೆಲ್ಲ ಬದುಕುತ್ತಾರೆ. ಕರಿಭಂಟ, ಪುಂಡರೀಕಾಕ್ಷಿ, ಧರಣೀ ಮೋಹಿನಿಯರನ್ನು ಮದುವೆಯಾಗುತ್ತಾನೆ. ಎಲ್ಲವೂ ಸುಖಾಂತವಾಗಿ ಪರಿಣಮಿಸುತ್ತದೆ. ಈ ಬದಲಾವಣೆಯಲ್ಲಿ ಮೂಗೂರಿನಿಂದ ಉದ್ದಂಡಿಯನ್ನು ಹಿಡಿತರಿಸಿದ ಪ್ರಸಂಗ ಬರುವುದಿಲ್ಲ. ಪ್ರಯಃ ನಮ್ಮ ಸಾಹಿತ್ಯದಲ್ಲಿ ದುರಂತವನ್ನು ಒಪ್ಪದ ಕಾರಣ ಕವಿ ಶಿವ ಪಾರ್ವತಿಯರನ್ನು ತಂದು ಈ ಘಟನೆಗೆ ತಿರುವು ಕೊಟ್ಟಿರುವುದು ಕಂಡುಬರುತ್ತದೆ.

ಕರಿಭಂಟನ ಕಾಳಗದ ಘಟನೆಗೆ ಸಂಬಂಧಿಸಿದಂತೆ ಬರುವ ಊರುಗಳು ಧಾರಾಪುರ, ಗೌತಮಕ್ಷೇತ್ರ, ತೊಣ್ಣೂರು, ಹಳೇಬೀಡು ಮತ್ತು ಮಲ್ಲಿಗನೂರು. ಧಾರಾಪುರವೊಂದನ್ನುಳಿದು ಮಿಕ್ಕ ಎಲ್ಲಾ ಊರುಗಳೂ ಈಗಲೂ ಅದೇ ಹೆಸರಿನಿಂದ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕುಗಳಲ್ಲಿವೆ. ಗೌತಮಕ್ಷೇತ್ರ ಈಗಿನ ಶ್ರೀರಂಗಪಟ್ಟನ, ತೊಂಡನೂರು, ಮಲ್ಲಿಗನೂರು ಮತ್ತು ಹಳೇಬೀಡುಗಳು ಪಾಂಡವಪುರ ತಾಲ್ಲೂಕಿನಲ್ಲಿವೆ. ಮೂಗೂರು ಟಿ. ನರಸೀಪುರ ತಾಲ್ಲೂಕಿನಲ್ಲಿದೆ. ಆಯಾ ಊರಿನಲ್ಲಿ ಕರಿಭಂಟನ ಕಾಳಗದ ಬಗೆಗಿನ ಸ್ಥಳಗತೆ ಮತ್ತು ಕುರುಹುಗಳು ಹೀಗಿವೆ. ತೊಣ್ಣೂರು ಉದ್ದಂಡಿಯ ರಾಜಧಾನಿಯಾಗಿತ್ತೆಂದು ಹೇಳಲಾದ ಸ್ಥಳ, ಈ ಊರಿನ ಮರಿಚೌಡಶೆಟ್ಟಿ ಎಂಬ ಕುಂಬಾರಜಾತಿಯ ನೂರೆರಡು ವರ್ಷ ವಯಸ್ಸಿನ ಹಿರಿಯರು ಕರಿಭಂಟನ ಕಾಳಗ ಕುರಿತು ಹೇಳಿದ ಕಥೆ, ಆತ ಚಿಕ್ಕಂದಿನಲ್ಲಿ ಬಲ್ಲಾಳರಾಯನ ಪಾತ್ರವಹಿಸುತ್ತಿದ್ದರಂತೆ, ಹಿರಿಯರು ತಲೆತಲಾಂತರದಿಂದ ಹೇಳುತ್ತಿದ್ದ ಕಥೆ – ತೊಣ್ಣೂರಿಗೆ ಅನತಿದೂರದಲ್ಲಿಯೆ ಬೆಟ್ಟ ಸಾಲಿದೆ. ಅದರಲ್ಲಿ ಪಶ್ಚಿಮದ ಕಡಿದಾದ ಜಾಗದಲ್ಲಿ ವಾಸಯೋಗ್ಯವಾದ ಎರಡು ಗುಹೆಗಳಿವೆ. ಇವುಗಳಲ್ಲಿ ಒಂದು ಉದ್ದಂಡಿಯ ಗುಹೆ ಮತ್ತೊಂದು  ಪುಂಡರೀಕಾಕ್ಷಿಯ ಗುಹೆ. ಭೇತಾಳರಾಜ ಶತ್ರುಗಳಿಗೆ ಸಿಕ್ಕ ಸತ್ತಾಗೆ ಅವರಿಬ್ಬರೂ ಇಲ್ಲಿ ಅವಿತುಕೊಂಡಿದ್ದರಂತೆ. ತೊಣ್ಣೂರಿನಿಂದ ಉತ್ತರಕ್ಕೆ ಬೆಟ್ಟದ ಸಾಲಿನ ಪಕ್ಕದಲ್ಲಿಯೆ ಕುಂಬಳಮ್ಮನ ದೇವಾಲಯವಿದೆ. ಈಕೆ ಉದ್ದಂಡಿಯ ತಂಗಿಯಂತೆ. ಇವಳ ಗಂಡನೂ ಭೇತಾಳರಾಜನೊಂದಿಗೆ ಯುದ್ಧದಲ್ಲಿ ಮಡಿದನೆಂದೂ ಪತಿಯೊಂದಿಗೆ ಚಿತೆಯೇರಿದ ಆಕೆ ಇಲ್ಲಿ ದೇವತೆಯಾಗಿ ಮೂಡಿದಾಳೆಂದು ಪ್ರತೀತಿ. ಈ ದೇವತೆಗೆ ಪ್ರಧಾನವಾಗಿ ಗಂಗಡಿಕಾರ ಒಕ್ಕಲಿಗರು ಭಕ್ತರು. ದೇಶದ ನಾನಾ ಕಡೆಯಿಂದ ಬರುತ್ತಾರಂತೆ. ನನ್ನ ಕ್ಷೇತ್ರ ಕಾರ್ಯದ ಸಮಯದಲ್ಲಿ ಹಾಜರಿದ್ದ ತೊಣ್ಣೂರಿನ ಬ್ರಾಹ್ಮಣ ಯುವಕರೊಬ್ಬರು “ನಮಗೂ ಈಕೆ ದೇವರು ಸ್ವಾಮಿ. ನಾವು ಕೂಡ ಪೂಜೆ ಮಾಡುತ್ತೇವೆ” ಎಂದರು. ತೊಣ್ಣೂರಿನಲ್ಲಿ ಕರಿಭಂಟನ ಕಾಳಗದ ಬಗೆಗೆ ದೊರೆಯುವ ಕುರುಹುಗಳು ಇಷ್ಟು ಮಾತ್ರ. ರಾಜಧಾನಿ ಹಾಳಾಗಿ, ಗಂಡ ಮತ್ತು ಸಂಬಂಧಿಕರು ಸತ್ತ ಮೇಲೆ ಬೇಸರಗೊಂಡ ಉದ್ದಂಡಿ ತನ್ನ ಮಗಳೊಂದಿಗೆ ಮಲ್ಲಿಗನೂರಿಗೆ ಹೋಗಿ ನೆಲೆಸಿದಳು ಎಂದು ಹೇಳುತ್ತಾರೆ.

ತೊಣ್ಣೂರಿನಿಂದ ಪೂರ್ವಕ್ಕೆ ಸುಮಾರು ಎಂಟು ಮೈಲಿ ದೂರದಲ್ಲಿ ಮಲ್ಲಿಗದೇವನೂರು ಇದೆ. ಈ ಊರಿಗೆ ಈಗ ಸುಂಕತೊಣ್ಣೂರು ಎಂದು ಹೆಸರು. ತೊಣ್ಣೂರು ರಾಜ್ಯದ ಸುಂಕದ ಕಟ್ಟೆ. ಈ ಊರಿನಲ್ಲಿದ್ದುದರಿಂದ ಕ್ರಮೇಣ ಈ ಹೆಸರು ಬಂದಿದೆ. ಇದನ್ನು ಮಲ್ಲಿಗದೇವನೂರು, ಮಲ್ಲಿಗನೂರು, ಮಲ್ಲಿಗಹಳ್ಳಿ, ಮಲ್ಲಿಗಳ್ಳಿ ಎಂಬೆಲ್ಲ ಸಂಕ್ಷಿಪ್ತ ರೂಪಗಳಲ್ಲಿ ಕರೆಯುತ್ತಾರಾದರೂ ಮಲ್ಲಿಗದೇವನೂರು ಸರಿಯಾದ ಹೆಸರೆಂದು ಕಾಣುತ್ತದೆ. ಆನಂತರ ಇದು ಮಲ್ಲಿಗನೂರಾಗಿದೆ. ಈ ಊರಿನಲ್ಲಿ ಕರಿಭಂಟನ ಕಾಳಗದ ಪ್ರಧಾನ ಅವಶೇಷಗಳು ಕಂಡುಬರುತ್ತವೆ. ಊರಿನ ಪೂರ್ವಭಾಗದಲ್ಲಿ ಉದ್ದಂಡಮ್ಮನ ದೇವಾಲಯವಿದೆ. ದ್ರಾವಿಡ ವಾಸ್ತುಶಿಲ್ಪದಂತೆ ಕಾಣುವ ಈ ದೇವಾಲಯ ಕರ್ನಾಟಕದ ಅನೇಕ ಕಡೆಗಳಲ್ಲಿರುವ ಗ್ರಾಮ ದೇವತೆಯ ಗುಡಿಗಳಂತಿದೆ. ಗರ್ಭಗುಡಿಯಲ್ಲಿ ಉದ್ದಂಡಿಯ ಮೂಲವಿಗ್ರಹವನ್ನು ಒರಟು ಕಲ್ಲಿನಿಂದ ಕೆತ್ತಲಾಗಿದೆ. ಇದು ಹಾಗೆಯೇ ಒಡೆದು ಮೂಡಿದುದು, ಆಮೇಲೆ ದೇವಾಲಯ ಕಟ್ಟಿದರು ಎಂದು ಪೂಜಾರಿ ಹೇಳುತ್ತಾನೆ. ಆ ವಿಗ್ರಹದ ಮುಂದೆ ಸುಮಾರು ಮೂರು ಅಡಿ ಎತ್ತರದ ಚಚ್ಚೌಕವಾದ ಕಲ್ಲೊಂದನ್ನು ನೆಟ್ಟು ಅದರ ಮೇಲೆ ಉದ್ದಂಡಿ ಮತ್ತು ಕರಿಭಂಟನ ಯುದ್ಧ ಮಾಡುತ್ತಿರುವ ಚಿತ್ರವನ್ನು ಕೆತ್ತಲಾಗಿದೆ. ಈ ಎರಡರ ಮಧ್ಯೆ ಕುಳಿತ ಭಂಗಿಯಲ್ಲಿ ಪುಂಡರೀಕಾಕ್ಷಿಯನ್ನು ಬಿಡಿಸಲಾಗಿದೆ. ನೋಡಿದೊಡನೆಯೆ ಇದು ಈಕೆಗಾಗಿ ನಡೆದ ಹೋರಾಟ ಎಂಬುದು ತಿಳಿದುಬರುತ್ತದೆ. ಮೂಲವಿಗ್ರಹದ ಎದುರಿಗೇ ಈ ಚಿತ್ರ ಕೆತ್ತಿಸಿ ನಿಲ್ಲಿಸಿದ ಬಗ್ಗೆ ಕೇಳಲಾಗಿ ಈ ಊರಿಂದ ಹೆಣ್ಣು ತಂದು ಮದುವೆಯಾದ ಹೊಸ ಅಳಿಯಂದಿರು ಪೂಜೆಗೆ ಬಂದಾಗ ಹೆದರಿ ಮೂರ್ಛೆ ಹೋಗುತ್ತಿದ್ದರಂತೆ. ಅಮ್ಮನ ನೇರದೃಷ್ಟಿ ಅವರ್ ಮೇಲೆ ಬೀಳುವುದರಿಂದ ಹಾಗಾಗುತ್ತಿತ್ತು. ಅದಕ್ಕಾಗಿ ಈ ವಿಗ್ರಹ ಮಾಡಿಸಿ ನಿಲ್ಲಿಸಿದರಂತೆ. ಉದ್ದಂಡಮ್ಮನ ಪೂಜಾರಿಯೂ ಗಂಗಡಿಕಾರ ಒಕ್ಕಲಿಗನೇ. ತೊಣ್ಣೂರು ಸೇರಿದಂತೆ ಈ ದೇವತೆಗೆ ಸುತ್ತಮುತ್ತ ಅನೇಕ ಭಕ್ತರಿದ್ದಾರೆ. ಉದ್ದಂಡಿಯೂ ಗಂಗಡಿಕಾರ ಒಕ್ಕಲಿಗರ ಮನೆ ದೇವತೆ, ಇಲ್ಲಿನವರ ಪ್ರಕಾರ.

ಮಲ್ಲಿಗದೇವನೂರು ಕರಿಭಂಟನ ಕಾಳಗ ನಡೆದ ಸ್ಥಳ ಎಂಬುದಕ್ಕೆ ಕುರುಹಾಗಿ ಉದ್ದಂಡಮ್ಮನ ಗುಡಿಯ ಎದುರಿನ ಬಯಲಿನಲ್ಲಿ ಸಾವಿರಾರು ವೀರಗಲ್ಲುಗಳಿವೆ. ಅವುಗಳಲ್ಲಿ ಕೆಲವರ ಮೇಲೆ ವೀರರ ಹೆಸರೂಗಳು ಇವೆ. ಹಿಂದೆ ಇನ್ನೂ ಬೇಕಾದಷ್ಟು ವೀರಗಲ್ಲುಗಳಿದ್ದುವಂತೆ. ಆ ಮೈದಾನದಲ್ಲಿ ಹೊಲ ಮಾಡಿದಾಗ ಅವುಗಳನ್ನೆಲ್ಲಾ ಕಿತ್ತು ಕೆರೆಯ ಏರಿಗೆ ಹಾಕಿದರೆಂದು ಹೇಳುತ್ತಾರೆ. ದೇವಾಲಯದ ದಕ್ಷಿಣ ದಿಕ್ಕಿನಲ್ಲಿ ಉದ್ದಂಡಿ ಮತ್ತು ಕರಿಭಂಟನ ನ್ಯಾಯದಲ್ಲಿ ಭಾಗವಹಿಸಿದ ಗೌಡರ ಕಲ್ಲುಗಳೆಂದು ಹೇಳುವ ಆರು ವೀರಗಲ್ಲುಗಳು ಸಾಲಾಗಿ ನಿಂತಿವೆ. ಏಳುಜನ ಗೌಡರಿರಬೇಕೆಂದು ಕೇಳಿದಾಗ “ಬೆಳಿಗ್ಗೆ ಒಬ್ಬ ಗೌಡ ತನ್ನ ಹೊಲದ ಹತ್ತಿರ ಹೋಗಿದ್ದ. ಇತ್ತ ಕಡೆ ಕರಿಭಂಟನನ್ನು ಉದ್ದಂಡಿ ಕೊಂದಿದ್ದ ವಿಚಾರ ತಿಳಿಯಿತು. ಅವರು ಮಾತು ಕೊಟ್ಟಿದ್ದಂತೆ ಕೂಡಲೆ ಲಗ್ನವಿಡಿಸಿ ಕೊಂಡವಾಗಲು ನಿರ್ಧರಿಸಿ ಹೊಲದ ಹತ್ತಿರ ಹೋಗಿದ್ದ ಗೌಡನಿಗೆ ಹೇಳಿ ಕಳಿಸಿದರು. ಹೊಲ ಊರಿಂದ ಬಹಳ ದೂರವಿದ್ದುದರಿಂದ ಮುಹೂರ್ತ ತಪ್ಪಬಾರದೆಂದು ಆ ಗೌಡ ತನ್ನ ಹೊಲದಲ್ಲಿದ್ದ ಜೋಳದ ಮೆದೆಗೆ ಬೆಂಕಿ ಹಾಕಿ ಅಲ್ಲಿಯೆ ಕೊಂಡವಾದ. ಆದುದರಿಂದ ಆತನ ವೀರಗಲ್ಲನ್ನು ಹೊಲದಲ್ಲಿಯೇ ನಿಲ್ಲಿಸಲಾಗಿದೆ” ಎಂದು ತಿಳಿಸಿದರು.

ಉದ್ದಂಡಿ ಮತ್ತು ಕರಿಭಂಟರು ರಾತ್ರಿ ಏಳು ಮಂದಿ ಗೌಡರ ಆಜ್ಞೆಯಂತೆ ತಂಗಿದ್ದರೆಂದು ಹೇಳಲಾದ ರಾಮೇಶ್ವರ ದೇವಾಲಯ ಊರಿನ ಉತ್ತರ ಭಾಗದಲ್ಲಿದೆ. ಇದೂ ಕೂಡ ದ್ರಾವಿಡ ಮಾದರಿಯ ದೇವಾಲಯ. ಪೂರ್ವಕ್ಕೆ ಬಾಗಿಲಿದ್ದು ಇದರ ಮುಂದೆ ವೀರಗಲ್ಲೊಂದಿದೆ. ಇದು ಕರಿಭಂಟ ಸತ್ತ ಕಾರಣ ಹಾಕಿದ್ದು ಎಂದು ಹೇಳುತ್ತಾರೆ. ದೇವಾಲಯದ ಮೇಲುಭಾಗದ ಚಪ್ಪಡಿಗಳನ್ನು ತೆಗೆಯಲಾಗಿದೆ. ಉದ್ದಂಡಿ ತೆಗೆದು ಓಡಿಹೋದದ್ದೆಂದು ಹೇಳುತ್ತಾರೆ. ಈಗ ಕೆರೆಯೊಂದು ನಿರ್ಮಾಣವಾಗಿದ್ದು, ಅದರ ನೀರಿನಿಂದ ಆವರಿಸಿಕೊಂಡಿರುವ ಈ ದೇವಾಲಯ ತುಂಬಾ ಶಿಥಿಲವಾಗಿದೆ.

ಕುತೂಹಲದ ಸಂಗತಿಯೆಂದರೆ ಮಲ್ಲಿಗನೂರಿನಲ್ಲಿರುವ ಬನವಂತಮ್ಮನ ದೇವಾಲಯ. ಈವರೆಗೆ ಕರಿಭಂಟನ ಕಾಳಗದ ಸ್ಥಳದ ಬಗ್ಗೆ ಬಂದಿರುವ ಯಾವ ಬರಹದಲ್ಲಿಯೂ ಬನವಂತೆಗೊಂದು ದೇವಾಲವಿದ್ದ ಬಗ್ಗೆ ಸೂಚನೆಗಳಿಲ್ಲ. ಆದರೆ ಈ ಊರಿನಲ್ಲಿ ಉದ್ದಂಡಿ ದೇವಾಲಯದಿಂದ ಪಶ್ಚಿಮಕ್ಕೆ ಹತ್ತಾರು ಮಾರು ದೂರದಲ್ಲಿ ಬನವಂತಮ್ಮನ ದೇವಾಲಯವಿದೆ. ತನ್ನ ಮಗ ಕರಿಭಂಟ ಸತ್ತನೆಂದು ತಿಳಿದ ಬನವಂತಮ್ಮ ಈ ಜಾಗದಲ್ಲಿ ಕೊಂಡವಾದಳಂತೆ. ಬನವಂತಮ್ಮ ಕೂಡ ಈ ಭಾಗದ ಪ್ರಭಾವಶಾಲಿ ಗ್ರಾಮದೇವತೆಗಳಲ್ಲೊಬ್ಬಳು. ಈಕೆಯ ಭಕ್ತರಲ್ಲಿ ಸಹ ಗಂಗಡಿಕಾರ ಒಕ್ಕಲಿಗರೇ ಹೆಚ್ಚು. ಬಹಳ ಹಿಂದಿನಿಂದ ಬನವಂತಮ್ಮನ ಪೂಜೆ ಇದ್ದಂತೆ ಕಂಡುಬರುತ್ತದೆ. ಏಕೆಂದರೆ ಮಂಡ್ಯ ಜಿಲ್ಲೆಯ ಜನಪದ ಕಥೆಯೊಂದರಲ್ಲಿ ‘ಅವನು ನಿತ್ಯ ಬನವಂತಮ್ಮನ ಧ್ಯಾನ ಮಾಡುತ್ತಿದ್ದ. ಧ್ಯಾನ ಮಾಡುವಾಗ ಭೂಮಿಬಿಟ್ಟು ಅಂತರಿಕ್ಷದಲ್ಲಿ ನಿಲ್ಲುತ್ತಿದ್ದ. ಅವನು ಎಲ್ಲಿ ಹೋದರೂ ಬನವಂತಮ್ಮನ ಪೂಜೆ ತಪ್ಪುತ್ತಿರಲಿಲ್ಲ’[1] ಎಂಬ ಉಲ್ಲೇಖ ಬರುತ್ತದೆ.

ಮಲ್ಲಿಗನೂರಿನಲ್ಲಿ ತಿಳಿದು ಬಂದ ಸಂಗತಿಯಂತೆ ತೊಣ್ಣೂರಿನ ಕುಂಬಳಮ್ಮ ಉದ್ದಂಡಿ ಮತ್ತು ನಾಗಮಂಗಲ ತಾಲ್ಲೂಕು ದಂಡಿಗನಹಳ್ಳಿಯ ದೈತ್ಯಮ್ಮ ಅಕ್ಕತಂಗಿಯರು. ಕುಂಬಳಮ್ಮನ ಗಂಡ ಭೇತಾಳರಾಜನ ಸೇನಾನಿಯಾಗಿದ್ದನೆಂದು ಈ ಹಿಂದೆಯೇ ಉಲ್ಲೇಖಿಸಲಾಗಿದೆ. ದೈತ್ಯಮ್ಮನನ್ನು ನಾಗಮಂಗಲ ಪ್ರಾಂತ್ಯಕ್ಕೆ ಕೊಟ್ಟು ಮದುವೆಯಾಗಿತ್ತೆಂದೂ ಆಕೆಯ ಗಂಡನೂ ಯುದ್ಧದಲ್ಲಿ ಸತ್ತುದರಿಂದ ಆಕೆ ಅಲ್ಲಿ ಸತಿಯಾದಳೆಂದು ಹೇಳುತ್ತಾರೆ. ಮತ್ತೊಂದು ಹೇಳಿಕೆಯಂತೆ, ಇವರು ಏಳುಜನ ಸಹೋದರಿಯರು. ಈ ಊರಿನ ದೇವಾಲಯಗಳಲ್ಲಿ ಈ ಸಂಗತಿಯನ್ನು ಕುರಿತು ದಾಖಲ್ಲೆಗಳಿದ್ದುವೆಂದೂ ಬಹಳ ಹಿಂದೆಯೇ ಬೆಂಗಳೂರಿನಿಂದ ಯಾರೋ ಸರ್ಕಾರದವರು ಬಂದು ತೆಗೆದುಕೊಂಡು ಹೋದರೆಂದೂ ಹೇಳುತ್ತಾರೆ. ಇದು ಪ್ರಾಯಃ ತೊಣ್ಣೂರು ರಾಕ್ಷಸಿಯ ಕೈಫಿಯತ್ತಾಗಿರಬೇಕು. ಅಂತು ಮಲ್ಲಿಗನೂರಿನಲ್ಲಿ ನಡೆದ ಒಂದು ಯುದ್ಧದ ಹಿನ್ನಲೆಯಲ್ಲಿ ಈ ಕಥೆ ಮೈದಾಳಿದೆ ಎನ್ನುವುದರ ಬಗೆಗೆ ಇಲ್ಲಿ ಸಾಕಷ್ಟು ಆಧಾರಗಳು ದೊರೆಯುತ್ತವೆ.

ಮಲ್ಲಿಗನೂರಿನಲ್ಲಿ ಕರಿಭಂಟನನ್ನು ಕೊಂದ ಉದ್ದಂಡಿ ಮೂಗೂರಿನತ್ತ ಪಲಾಯನ ಮಾಡಿದಳೆಂದು ಕಥಾಸಂದರ್ಭದಲ್ಲಿ ಹೇಳಿದೆ. ಮೂಗುರು ಹತ್ತಿರದ ಹೊಸಹಳ್ಳಿ ಅಮ್ಮನಕೆರೆಯಲ್ಲಿ ತನ್ನ ರಕ್ತಸಿಕ್ತ ಕೈಕಾಲುಗಳನ್ನು ತೊಳೆದುಕೊಂಡಳಂತೆ. ಆದುದರಿಂದಲೇ ಆ ಕೆರೆಯ ನೀರು ಈಗಲೂ ಕೆಂಪಾಗಿರುವುದು. ಅಲ್ಲಿಂದ ಹೊರಟ ಆಕೆ ಹೂವಾಡಿಗರ ಕೇರೆಯ ನೆಲ ಮಾಳಿಗೆಯೊಂದರಲ್ಲಿ ಅವಿತುಕೊಂಡಳು. ಆದರೆ ಸೈನಿಕರು ಅವಳನ್ನು ಪತ್ತೆ ಹಚ್ಚಿ ಸರಪಳಿಗಳಿಂದ ಬಂಧಿಸಿ ಎಳೆದೊಯ್ದರು. ಈಗ ಆ ಜಾಗದಲ್ಲಿ ಒಂದು ದೇವಾಲಯ ನಿರ್ಮಿಸಲಾಗಿದೆ. ಅಲ್ಲಿರುವ ಉದ್ದಂಡಿಯ ವಿಗ್ರಹವನ್ನು ಸರಪಳಿಗಳಿಂದ ಬಂಧಿಸಲಾಗಿದೆ. ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಸಮಯದಲ್ಲಿ ಈ ವಿಗ್ರಹವನ್ನು ಹೊರತರಲಾಗುವುದಂತೆ. ಇವಿಷ್ಟು ಉದ್ದಂಡಿಯ ಬಗೆಗೆ ದೊರೆಯುವ ಕುರುಹುಗಳು.

ಕರಿಭಂಟನ ಕಾಳಗದ ಈ ಘಟನೆಯಲ್ಲಿ ಗಮನಾರ್ಹವಾದ ಮತ್ತೊಂದು ಅಂಶ ಕಂಡುಬರುತ್ತದೆ. ಇಂದೂ ತೊಣ್ಣೂರಿನ ಸುತ್ತಮುತ್ತಲಿನ ಜನರಲ್ಲಿ ಕರಿಭಂಟ ಕಾಳಗದ ಎಲ್ಲ ಪಾತ್ರಗಳೂ ದೇವತೆಗಳೆಂಬ ನಂಬಿಕೆ ಇರುವುದು. ಮೈಸೂರು, ಮಂಡ್ಯ ಜಿಲ್ಲೆಯ ಹೊರಗೆ ಉದ್ದಂಡಿಯನ್ನಾಗಲಿ, ಬನವಂತಾದೇವಿಯನ್ನಾಗಲಿ ದೇವತೆ ಎಂದು ಪೂಜಿಸುವ ಸಂಪ್ರದಾಯ ಕಂಡುಬರುವುದಿಲ್ಲ. ಇದರ ಸುಳಿವು ಕೆಂಪಣ್ಣಗೌಡನಲ್ಲಿಯೂ ಮತ್ತು ಕೆಲವು ಪ್ರಾಚೀನ ನಾಟಕಕಾರರಲ್ಲಿ ಮಾತ್ರ ದೊರೆಯುತ್ತದೆ. ಉದ್ದಂಡಿಯು ಪಾರ್ವತಿಯ ಮಾಲೆಗಾರ್ತಿ. ಶಾಪಗ್ರಸ್ತೆಯಾಗಿ ಆಕೆ ಭೂಲೋಕದಲ್ಲಿ ಜನಿಸಿದಳು. ಅದರ ಕಥೆ ಹೀಗಿದೆ. “ಒಂದು ದಿನ ಶಿವಪಾರ್ವತಿಯರು ಏಕಾಂತದಲ್ಲಿದ್ದರು. ಶಿವ ಪಾರ್ವತಿಗೆ ಹೊಸ ಕಥೆಯೊಂದನ್ನು ಹೇಳುತ್ತಿದ್ದ. ಕಾರಣಾಂತರದಿಂದ ಅಲ್ಲಿಗೆ ಬಂದ ಮಾಲೆಗಾರ ಶಿವಪಾರ್ವತಿಯರ ಸಂವಾದವನ್ನು ಕದ್ದು ಕೇಳಿಸಿಕೊಂಡ. ಈ ಕಥೆಯನ್ನು ಆತ ತನ್ನ ಹೆಂಡತಿಗೆ ಹೇಳಿದ. ಆಕೆ ಪಾರ್ವತಿಯ ಊಳಿಗದಲ್ಲಿದ್ದಳು. ಪಾರ್ವತಿ ತನ್ನ ಊಳಿಗದವರಿಗೆ ಶಿವ ಹೇಳಿದ ಕಥೆ ಹೇಳಿದಾಗ ಮಾಲೆಗಾರನ ಹೆಂಡತಿ ಅದು ತನಗೆ ಗೊತ್ತೆಂದಳು. ಪಾರ್ವತಿ ದಿವ್ಯ ದೃಷ್ಟಿಯಿಂದ ಇದನ್ನು ತಿಳಿದು ಭೂಲೋಕದಲ್ಲಿ ರಾಕ್ಷಸಿಯಾಗಿ ಜನಿಸುವಂತೆ ಅವಳಿಗೆ ಶಾಪ ಕೊಟ್ಟಳು. ಆಗ ಅವಳು ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಶಾಪ ವಿಮೋಚನೆಯನ್ನು ಬೇಡಿದಳು. ಕರಿಭಂಟನ ಎದೆಯ ರಕ್ತ ಕುಡಿದ ದಿನ ನಿನ್ನ ಶಾಪ ವಿಮೋಚನೆ ಎಂದಳು ಪಾರ್ವತಿ. ಅದರಂತೆ ಆಕೆ ತೊಂಡನೂರಿನಲ್ಲಿ ರಾಕ್ಷಸಿಯಾಗಿ ಹುಟ್ಟಿದಳು. ಒಂದು ದಿನ ಶಿವನು ಪಾರ್ವತಿಯನ್ನು ಕುರಿತು

ಗಿರಿಜೆ ಕೇಳಾ ವನದಿ ಚರಿಸುತ
ಇರಲು ಹರುಷದಿ ಕರಿಯರಾಯನು
ಧರೆಗೆ ಶೋಭಿಸುತ್ತಿತ್ತ ರಂಜಿಪ ತೊಂಡನೊರೊಳಗೆ
ಭರದಿ ನಮ್ಮಯ ಮಾಲೆಗಾರನ
ತರುಣಿ ರಾಕ್ಷಸಿಯಾಗಿ ನಿನ್ನಯ
ವರದೊಳಿಹಳಾ ಬೊಮ್ಮನೆಂದೆಂಬನುಜನೊಡಗೊಡಿ

ಎಂದು ಹೇಳುತ್ತಾನೆ. ಉದ್ದಂಡಿ ಆದಿಶಕ್ತಿಯ ಶಾಪದಿಂದ ಹುಟ್ಟಿದವಳು ದೇವತೆ ಎಂಬ ನಂಬಿಕೆ ಇದು ಆಧಾರವಾಗಿರುವಂತೆ ಕಾಣುತ್ತದೆ.

ಜನಪದ ಸಾಹಿತ್ಯದಲ್ಲಿ ರಾಕ್ಷಸಿಯಾಗಿರುವ ಉದ್ದಂಡಿ ಈ ಸುತ್ತಿನ ಜನರ ಗ್ರಾಮ ದೇವತೆಯಾಗಿದ್ದಾಳೆಂಬುದು ಈಕೆ ಸತಿಯಾದವಳೊಬ್ಬಳಿರಬೇಕೆಂದು ಸೂಚನೆ ಕೊಡುತ್ತದೆ. ಒಕ್ಕಲಿಗರಲ್ಲಿ ಮನೆದೇವತೆಯರೆಂದು ಕರೆಯುವ ಹಲವರು ಆಯಾ ವಂಶದಲ್ಲಿ ಸತಿಯಾದವರಾಗಿರುತ್ತಾರೆ. ಅಲ್ಲದೆ ಈ ಜನಾಂಗದಲ್ಲಿ ದೇವತೆಯನು ಎಲ್ಲಾ ಕಡೆಯೂ ಒಂದೇ ತೆರನಾಗಿರುವ ಉದಾಹರಣೆಗಳೂ ಉಂಟು. ಇಲ್ಲಿನ ಜನ ಈ ದೇವತೆಗೆ ತುಂಬಾ ನಿಷ್ಠೆಯಿಂದ ನಡೆದುಕೊಳ್ಳುತ್ತಾರೆ. ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಈ ದೇವತೆಯ ಹಬ್ಬದಲ್ಲಿ ಮನೆ ಮಂದಿಗೆಲ್ಲ ಹೊಸಬಟ್ಟೆ, ಮನೆಗೆ ಹೊಸ ಮಡಿಕೆ, ಹೀಗೆ ಪ್ರತಿಯೊಂದು ಹೊಸದಾಗಿರಬೇಕು. ಈ ಸಂಪ್ರದಾಯ ಬನವಂತೆಗೂ ಅನ್ವಯವಾಗುತ್ತದೆ. ಹೀಗಾಗಿ ಯಕ್ಷಗಾನ ನಾಟಕಕಾರರಿಗೆ ರಾಕ್ಷಸಿಯಾಗಿರುವ ಈ ಕಥೆಯ ಉದ್ದಂಡಿ ಈ ಸುತ್ತಿನ ಜನರಿಗೆ ಪೂಜ್ಯಳಾಗಿರುವುದು ಕುತೂಹಲಕಾರಿಯಾದ ಸಂಗತಿಯಾಗಿ ಕಂಡುಬರುತ್ತದೆ.

ಕರಿಭಂಟನಕಾಳಗ ಚಾರಿತ್ರಿಕ ಘಟನೆಯೆ? ಎಂಬುದೊಂದು ಸಮಸ್ಯೆ. ಪ್ರತಿಯೊಂದು ಕಥೆಯೂ ನಡೆದ ಒಂದು ಘಟನೆಯ ಹಿನ್ನೆಲೆಯಲ್ಲಿಯೇ ರೂಪಿತವಾಗಿರುತ್ತದೆ ಎಂಬುದೊಂದು ನಂಬಿಕೆ. ಕರಿಭಂಟನ ಕಥೆ ಚಾರಿತ್ರಿಕ ಘಟನೆ ಎಂದು ಪ್ರತಿಪಾದಿಸ ಹೊರಟವರಲ್ಲಿ ದಿವಂಗತ ಹುಲ್ಲೂರು ಶ್ರೀನಿವಾಸ ಜೋಯಿಸರು ಪ್ರಮುಖರು. ಈ ಬಗೆಗೆ ಅವರು ಅಪಾರವಾಗಿ ಕೆಲಸ ಮಾಡಿ ಒಂದು ಗ್ರಂಥವನ್ನೇ ರಚಿಸಿದ್ದಾರೆಂದು ಗೊತ್ತಾಗಿದೆ. ಆದರೆ ಆ ಗ್ರಂಥ ಇನ್ನೂ ಅಪ್ರಕಟಿತ. ಶ್ರೀಜೋಯಿಸರ ಅಪ್ರಕಟಿತ ಗ್ರಂಥಗನ್ನು ಅವಲೋಕಿಸಿ ಇತ್ತೀಚೆಗೆ ಶ್ರೀ ಎಸ್. ವಿ. ಗೌಡರ್ ಎಂಬುವರು ‘ಕರಿಭಂಟನ ಐತಿಹಾಸಿಕತೆ’ ಎಂಬ ತಮ್ಮ ಲೇಖನದಲ್ಲಿ ಇದೊಂದು ಚಾರಿತ್ರಿಕ ಘಟನೆ ಎಂದು ಪ್ರತಿಪಾದಿಸಲು ಯತ್ನಿಸಿದ್ದಾರೆ. ಆದರೆ ಅವರು ಇಲ್ಲಿನ ಪಾತ್ರಗಳೆಲ್ಲ ಚಾರಿತ್ರಿಕ ವ್ಯಕ್ತಿಗಳೆಂದು ಹೇಳುವ ಚಾರಿತ್ರಿಕ ಘಟನೆಗಳು ಕಾಲದ ಮತ್ತು ವ್ಯಕ್ತಿಗಳ ದೃಷ್ಟಿಯಿಂದ ಪರಸ್ಪರ ಹೊಂದಿಕೊಳ್ಳುವುದಿಲ್ಲ. ಈ ಹಿನ್ನಲೆಯಲ್ಲಿ ಕರಿಭಂಟನ ಕಾಳಗ ಚಾರಿತ್ರಿಕ ಘಟನೆಯೆ? ಎಂಬುದನ್ನು ನಾನಿಲ್ಲಿ ಪರಿಶೀಲಿಸಿದ್ದೇನೆ.

ಕರಿಭಂಟನ ಕಥೆ, ಧಾರಾಪುರ, ಗೌತಮಕ್ಷೇತ್ರ, ತೊಣ್ಣೂರು, ಮಲ್ಲಿಗನೂರು ಮತ್ತು ಹಳೇಬೀಡಿನ ಹಿನ್ನೆಲೆಯಲ್ಲಿ ನಡೆಯುತ್ತದೆ. ಬಲ್ಲಾಳರಾಯ, ಮಾರಭೂಪ, ಕರಿರಾಯ, ಭೇತಾಳರಾಜ, ಉದ್ದಂಡಿ ಬನವಂತೆ, ಬೊಮ್ಮ, ಪುಂಡರೀಕಾಕ್ಷಿ ಈ ಕಥೆಯ ಪ್ರಮುಖ ಪಾತ್ರಗಳು, ಈ ಊರುಗಳು ಮತ್ತು ವ್ಯಕ್ತಿಗಳು ಚರಿತ್ರೆಯ ಯಾವ ವ್ಯಕ್ತಿ ಮತ್ತು ಊರುಗಳಿಗೆ ಅನ್ವಯವಾಗುತ್ತವೆಂಬುದನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯವಾಗಿ ಕಾಣುತ್ತದೆ.

ಮೊದಲನೆಯದಾಗಿ ಧಾರಾಪುರ ಯಾವುದು ಎಂಬ ಸಮಸ್ಯೆ ನಮಗೆ ಎದುರಾಗುತ್ತದೆ. ಈ ಕಥೆಯನ್ನು ಮೊಟ್ಟಮೊದಲಿಗೆ ಕಾವ್ಯದ ವಸ್ತುವಾಗಿ ಉಪಯೋಗಿಸಿಕೊಂಡ ಕೆಂಪಣ್ಣಗೌಡ ಧಾರಾಪುರದ ಬಗೆಗೆ ಹೀಗೆ ಹೇಳಿದ್ದಾರೆ.

ಮೇರುವೆಯ ದಕ್ಷಿಣದ ದೆಸೆಗೆ ಕಾ
ಶ್ಮೀರ ದೇಶದ ಮಧ್ಯೆಯೆಸೆವುದು
ಭೂರಿಭೂಪರ ಭೀತಿಗೊಳಿಸುವ ಧಾರಾಪುರವು.

ಮೇರುವೆಗೆ ದಕ್ಷಿಣದಲ್ಲಿ ಧಾರಾಪುರವಿದೆ ಎಂಬುದು ಕವಿಯ ಅಭಿಪ್ರಾಯ. ತಲಕಾಡಿಗೆ  ದಕ್ಷಿಣ ಕಾಶ್ಮೀರವೆಂದೂ, ದಕ್ಷಿಣ ಕಾಶಿಯೆಂದೂ ಕರೆಯಲಾಗುತ್ತಿತ್ತೆಂದು ಕೆಲವು ಆಧಾರಗಳು ಸೂಚಿಸುತ್ತವೆ. ಏಕೆಂದರೆ ಈ ಭಾಗ ಗಜಾರಣ್ಯವೆಂಬ ಹೆಸರಿನಿಂದ ಪ್ರಸಿದ್ಧವಾದುದಾಗಿದೆ. ಈ ಧಾರಾಪುರವನ್ನು ಆಳುವ ರಾಜ ಮಾರಭೂಪನನ್ನು ಕುರಿತು ಹೇಳುವಾಗ ಕೆಂಪಣ್ಣಗೌಡ.

ಲಾಳ ರಾಜನ ರಾಜ್ಯ ಪಾಳುಮಾಡಿಹನು
ಚೋಳರಾಜನ ನೆರೆಯೊಳಾಳಿಕೊಂಡಿಹನು

ಎಂದು ಹೇಳಿದ್ದಾನೆ. ಚೋಳರಾಜ್ಯದ ನೆರೆಯರಾಜ್ಯಗಳಲ್ಲಿ ಪ್ರಮುಖವಾದುದು ತಲಕಾಡು. ತಲಕಾಡಿಗೆ ದಲವನಪುರ ಎಂಬ ಹೆಸರಿದ್ದ ಬಗ್ಗೆ ಉಲ್ಲೇಖಗಳಿವೆ. The erliest authentic notice of the city of Tarakad or Tajkad in sanskrit Dalavana pura in Karnataka Desha[2] ತಲಕಾಡಿನ ಶಾಸನಗಳಲ್ಲಿ ಕೂಡ ಇದಕ್ಕೆ ಆಧಾರಗಳಿವೆ. ತಲಕಾಡು ಇಪ್ಪತ್ತೈದು ವಿಭಾಗಗಳಾಗಿ ವಿಂಗಡಣೆಯಾಗಿತ್ತು. ಅದರ ಒಂದು ವಿಭಾಗದ ಹೆಸರು ಧಾರಾಪುರ. ತಡಿಮಾಲಿಂಗಿಯ ವಿಶ್ವೇಶ್ವರ ದೇವರಿಗೆ ಧಾರಾಪುರದ ವಿರುಪಣ್ಣ ಎಂಬುವನು ದಾನ ಕೊಟ್ಟ ಉಲ್ಲೇಖವಿದೆ. * ತಲಕಾಡು ಗಂಗರ ರಾಜಧಾನಿಯಾಗಿ ಪ್ರಸಿದ್ಧವಾದ ನಗರ ಕೂಡ. ಈ ಹಿನ್ನಲೆಯಲ್ಲಿ ಕವಿ ತಲಕಾಡನ್ನು ತನ್ನ ಕಾವ್ಯದಲ್ಲಿ ಧಾರಾಪುರ ಎಂದು ಕರೆದಿದ್ದಾನೆಂಬುದರಲ್ಲಿ ಅನುಮಾನವಿಲ್ಲ.

ಧಾರಾಪುರವನ್ನು ತಲಕಾಡು ಎಂದು ಒಪ್ಪಿಕೊಂಡ ಮೇಲೆ ಮಾರಭೂಪಾಲ ಯಾರು ಎಂಬ ಸಮಸ್ಯೆ ತಲೆದೋರುತ್ತದೆ. ಆಗ ಸುಪ್ರಸಿದ್ಧ ಗಂಗದೊರೆಯಾದ ಮುಮ್ಮಡಿ ಮಾರಸಿಂಹನೇ ಈ ಮಾರಭೂಪನಿರಬಹುದೆಂದೆನಿಸುತ್ತದೆ. ಆದರೆ “ಬಲ್ಲಾಳರಾಯನಿಗೆ ಸಮಕಾಲೀನನಾದ ಮಾರಭೂಪಾಲ ಎಂಬ ರಾಜನೆಂದರೆ ತಲಕಾಡು ಗಂಗರಸ ಮುಮ್ಮಡಿ ಮಾರ ಸಿಂಹ” ಎಂಬ ವಾದವನ್ನು ಒಪ್ಪಲಾಗುವುದಿಲ್ಲ. ಏಕೆಂದರೆ ‘ಸಳನು ಕ್ರಿ.ಶ. ೯೪೮ ರಿಂದ ೧೦೪೨ರವರೆಗೆ ರಾಜ್ಯವಾಳಿದನೆಂದು ಕೆಲವಾರು ಶಾಸನಗಳೂ ಚನ್ನಬಸವ ಕಾಲಜ್ಞಾನವೂ ತಿಳಿಸುತ್ತವೆ. ಜನಶ್ರುತಿಯಾದರೊ ಈ ಹೇಳಿಕೆಗೆ ಸಮರ್ಥನೆ ಕೊಟ್ಟಿಲ್ಲ’. ‘ಸಳನು ಕ್ರಿ.ಶ. ೧೦೩೭ರಲ್ಲಿ ಉತ್ತರದಿಂದ ಬಂದು ಶಶಕಪುರಿಯಲ್ಲಿ ನೆಲಸಿದನೆಂಬುದೇನೋ ಪ್ರಚಾರದಲ್ಲಿರುವ ಐತಿಹ್ಯ’. ಮುಮ್ಮಡಿ ಮಾರಸಿಂಹನು ಕ್ರಿ.ಶ. ೯೬೦ ರಿಂದ ೯೭೩ ರವರೆಗೆ ಆಳಿದನು. ಹೊಯ್ಸಳ ವಂಶದ ಮೂಲಪುರುಷನಾದ ಸಳನು ಕ್ರಿ.ಶ. ೧೦೭೩ರಲ್ಲಿ ಶಶಕಪುರಿಯಲ್ಲಿ ನೆಲಸಿದನೆಂಬ ಜನಶ್ರುತಿಯನ್ನು  ತಿರಸ್ಕರಿಸಿ ೯೪೮ನ್ನು ಒಪ್ಪಿಕೊಂಡರೂ ಮಾರಸಿಂಹ ಸಳನಿಗೆ ಸಹ ಸಮಕಾಲೀನನಾಗುವುದಿಲ್ಲ.

ಕರಿಭಂಟನ ಕಾಳಗದಲ್ಲಿ ಹಳೇಬೀಡಿನ ರಾಜನನ್ನು ಬಲ್ಲಾಳರಾಯ ಎಂದುಕರೆಯಲಾಗಿದೆ. ಸಳನಿಗಾಗಲಿ ಅವನ ನಂತರ ಬಂದ ಎರೆಯಂಗನವರೆಗಿನ ಹೊಯ್ಸಳ ರಾಜರಿಗಾಗಲಿ ಬಲ್ಲಾಳ ರಾಯನೆಂಬ ಹೆಸರಿದ್ದಂತೆ ಕಂಡುಬರುವುದಿಲ್ಲ. ಹೊಯ್ಸಳ ರಾಜರೆಲ್ಲರನ್ನೂ ಬಲ್ಲಾಳರಾಯರೆಂದು ಕರೆಯುವ ಸಂಪ್ರದಾಯವಿತ್ತೆಂದು ಕೆಲವು ಚರಿತ್ರಕಾರರ ಅಭಿಪ್ರಾಯವಿದೆಯಾದರೂ ಇದಕ್ಕೆ ಸರಿಯಾದ ಶಾಸನಾಧಾರಗಳು ದೊರೆಯುವುದಿಲ್ಲ. ಕ್ರಿ.ಶ. ೧೧೦೦ರಿಂದ ೧೧೦೯ ರ ವರೆಗೆ ಹೊಯ್ಸಳ ರಾಜನಾಗಿದ್ದ ಒಂದನೆಯ ಬಲ್ಲಾಳನಿಂದ ಈ ಹೆಸರು ಪ್ರಸಿದ್ಧಿಗೆ ಬಂದಿರುವಂತೆ ಕಾಣುತ್ತದೆ. ಒಂದನೆಯ ಬಲ್ಲಾಳ ಕ್ರಿ.ಶ. ೧೧೦೩ರಲ್ಲಿ ನಾಗಮಂಗಲ ತಾಲ್ಲೂಕು ಅಳೇಸಂದ್ರದ ಮರಿಯಣ್ಣ ಡಣಾಯಕನ ಮಗಳಂದಿರಾದ ಪದ್ಮಲಾದೇವಿ, ಚಾಮಲಾದೇವಿ, ಮತ್ತು ಬೊಪ್ಪಲಾದೇವಿಯರನ್ನು ಒಂದೇ ಹಸೆಯಲ್ಲಿ ಮದುವೆಯಾದ ವಿಷಯ ಶಾಸನೋಕ್ತವಾಗಿದೆ. ಅಲ್ಲಿಂದೇಚೆಗೆ ಈ ಸುತ್ತಿನಲ್ಲಿ ಬಲ್ಲಾಳರಾಯ ಎಂಬ ಹೆಸರು ಜನಪ್ರಿಯವಾಗಿರುವಂತೆ ಕಂಡುಬರುತ್ತದೆ. ಆದರೆ ಈ ಒಂದನೆಯ ಬಲ್ಲಾಳರಾಯ ಮುಮ್ಮಡಿ ಮಾರಸಿಂಹನಿಗೆ ಸಮಕಾಲೀನನಾಗುವುದು ಅಸಂಭಾವ್ಯವೇ ಸರಿ.

ಗಂಗದೊರೆ ಮುಮ್ಮುಡಿ ಮಾರಸಿಂಹನು ಕರಿಭಂಟನ ತಂದೆಯಾಗಲಿ, ಬಲ್ಲಾಳರಾಯನ ಸಮಕಾಲೀನನಾಗಲಿ ಆಗುವುದು, ಕಾಲದ ದೃಷ್ಟಿಯಿಂದ ಸಾಧ್ಯವಿಲ್ಲ ಎಂಬುದು ಖಚಿತವಾಗಿದೆ. ಮಾರಭೂಪಾಲ ಮತ್ತು ಕರಿಭಂಟರು ಶೈವಸಂಪ್ರದಾಯದ ರಾಜರು. ಹಾಗಾದರೆ ಈ ಮಾರಸಿಂಹರು ಯಾರು ಎಂಬ ಸಮಸ್ಯೆ ಉದ್ಭವಿಸುತ್ತದೆ. ಈ ಬಗೆಗೆ ಶೈವಕಥೆಯೊಂದು ಉಲ್ಲೇಖಾರ್ಹವೆನಿಸುತ್ತದೆ. ‘ಮಾರಗೌಡನೆಂಬ ಹಲಾಯುಧ ಭಕ್ತನು ಬೇಸಾಯ ಮಾಡಿ ಹದಿನೆಂಟು ಧಾನ್ಯವ ಬೆಳೆದು ರಾಜನಿಗೆ  ತೞಿ  ಹೊೞಿ ವಟ್ಟ ವಾಸಿ ಕಾಣಿ ಕಡ್ಡಾಯ ಬಿಟ್ಟಿ ಬಿಡಾರವಂ ಮಾಡಿ ಬೆಳೆದ ದವಸಮಂ ರಾಜಪಾಲೆಂದು ಕೋರನಿಕ್ಕಿ ತನಗೆ ಉಳಿದ ದವಸದಲ್ಲಿ ನಿರ್ವಂಚನೆಯಿಂದ ಜಂಗಮಾರ್ಚನೆಯ ಮಾಡುತ್ತಿರಲು ಕಂಡು ಲೋಕ ಕೀರ್ತಿಸುತ್ತಿರಲೊಂದು ದಿನ ಶಿವನು ಜಂಗಮನಾಗಿ ಬಂದು ಮಾರಗೌಡನು ನೆಲ್ಲ ರಾಶಿಯ ತೂರುವಾಗ ಬಂದು ಕಣದೊಳಗೆ ನಿಂದು ನಿನ್ನ ಧಾನ್ಯ ಹುಲುಸಾಗುವುದಕ್ಕೆ ಪರುಷವ ಕೊಡುವೆನು ಕಾಣ ಮಾರಗೌಡ! ಈ ಪರುಷದಿಂದ ಕರ್ಬುನವ ಮುಟ್ಟಿಸಿ ಚಿನ್ನವ ಮಡಿಕೊ ಎಂದು ಕೊಡಲು ಅದನೊಲ್ಲದೆ ಮಾರಗೌಡನು ತೂರಿದ ನೆಲ್ಲ ರಾಶಿಯ ಬೂದಿಯಿಂದ ಸುತ್ತುಗಟ್ಟಿ ಮನಹರುಷದಿಂದ ನೆನೆದು ಹೊನ್ನರಾಶಿಯ ಮಾಡಿ ‘ನನ್ನ ಪರುಷದಿಂದಾದ ಹೊನ್ನ ರಾಶಿಯ ನೀನು ಕೊಂಡು ಪೋಗು ವಡೆಯರೆ’ ಎಂದು ಕೊಂಗ ಗಾಲಿಮೊಱದಲ್ಲಿ ತುಂಬಿ ಮಡಗಲಾ ಶಿವನು ನಾಚಿ ನನ್ನ ಭಕ್ತರಿಗೆ ಉತ್ತುಬಿತ್ತಿದ ಧನ ಧಾನ್ಯವೆ ಭಕ್ತಪರುಷದಿಂದ ಹೊನ್ನರಾಶಿಯಾಯಿತ್ತೆಂದು ಗಿರಿಜೆಗೆ ಪೇಳಿ ಶಿವನು ಮೆಚ್ಚಿ ಮಾರಗೌಡನ ಕೈಲಾಸಕ್ಕೆ ಕರೆದೊಯ್ದರು.[3] ಹೀಗೆ ಮಾರಗೌಡನನ್ನು ಕುರಿತ ಅನೇಕ ಕಥೆಗಳು ದೊರೆಯುತ್ತವೆ. ಇವುಗಳೆಲ್ಲ ಇತಿಹಾಸ ಪ್ರಸಿದ್ಧ ಗಂಗದೊರೆ ಮುಮ್ಮುಡಿ ಮಾರಸಿಂಹನ ಸುತ್ತ ಹುಟ್ಟಿಕೊಂಡ ಕಥೆಗಳು ಎಂದು ಊಹಿಸಲವಕಾಶವಿದೆ.

ಮೇಲಿನ ಕಥೆಯಲ್ಲಿಯೂ ಶಿವಪಾರ್ವತಿಯರಿದ್ದಾರೆ. ಅವರ ಸಂವಾದದಲ್ಲಿಯೇ ಈ ಮಾರಗೌಡನ ಕಥೆಯ ವಿಷಯ ಬರುತ್ತದೆ. ಅಲ್ಲದೆ ಭೈರವೇಶವರ ಕಾವ್ಯದ ನೆಲೆಯೂ ಮಂಡ್ಯ ಜಿಲ್ಲೆಯೆ ಆಗಿದೆ. ಕಥೆಯಲ್ಲಿ ಬರುವ ‘ತೆಱ ಹೊಱಿ ವಟ್ಟ ವಾಸಿ’ ಮುಂತಾದ ಪದಗಳ ಶಾಸನಗಳಲ್ಲಿ ಬರುವಂಥವು. ಆದುದರಿಂದ ಮಾರಗೌಡ ಶೈವ ಸಂಪ್ರದಾಯದ ಸಾಮಂತ ರಾಜನೊ ಪಾಳೆಯಗಾರನೊ ಆಗಿದ್ದಿರಬೇಕೆಂಬ ಅನುಮಾನ ಉಂಟಾಗುತ್ತದೆ. ಇದೇ ಕಥೆಯ ಹಿನ್ನಲೆಯಲ್ಲಿ ಮಲ್ಲಿಗನೂರಿನ ಉದ್ದಂಡಿ ದೇವಾಲಯದ ಮುಂದಿನ ವೀರಗಲ್ಲೊಂದರ ಮೇಲಿನ ಹತ್ತನೆಯ ಶತಮಾನದ್ದೆಂದು ಹೇಳಲಾದ ಬರಹವನ್ನು ಗಮನಿಸಬೇಕಾಗುತ್ತದೆ. ಅದರಲ್ಲಿ ‘ಸ್ವಸ್ತಿಶ್ರೀಮನ್ಮಹಾಮಂಡಳೇಶ್ವರ ಶ್ರೀ ಹೊಯ್ಸಳದೇವರು ದೊರಸಮುದ್ರದಲು ಸುಖರಾಜ್ಯಂಗೆಯುತ್ತಿರೆ ಶ್ರೀ ಮತುಮಹಾಪ್ರಧಾನ – ಮಾರಗವು (ಡಂ) – ಹಿರಿಯದ – ಹಲಬರ ಕೊಂದು ಬಿದ್ದ. ಮದವಳಿಗಿ ಸೋಮೆವ್ವೆದೇವಿನೆಟ್ಟ ಕೊಡಿಗೆ ಕಲ್ಲು.[4] ಈ ಮಾರಗವುಡ ಮತ್ತು ಸೋಮವ್ವೆ ಶೈವರೆಂಬುದರಲ್ಲಿ ಯಾವ ಅನುಮಾನವೂ ಕಂಡುಬರುವುದಿಲ್ಲ. ಮಾರಗೌಡನ ಮದವಳಿಗಿ (ಹೆಂಡತಿ) ಗಂಡ ಸತ್ತ ಕೂಡಲೆ ಸತಿಯಾಗಬೇಕಿತ್ತು. ಆಕೆ ಸತಿಯಾಗದಿರಲು ಪ್ರಾಯಃ ಕಾರಣ ಆ ದಂಪತಿಗಳಿಗೆ ಚಿಕ್ಕ ಮಕ್ಕಳಿದ್ದು ಅವರನ್ನು ಸಾಕುವ ಜವಾಬ್ದಾರಿ ಈಕೆಯ ಮೇಲೆ ಬಿದ್ದಿರಬೇಕು. ಈ ಸೊಮ್ಮವ್ವೆಯೇ ಬನವಂತಾದೇವಿಯಾಗಿರಬಹುದೆ? ಎಂಬುದು ಸಾಧ್ಯವಿರುವ ಸಂಗತಿಯಾಗಿ ಕಂಡುಬರುತ್ತದೆ. ಏಕೆಂದರೆ ಬನವಂತಾದೇವಿ ತನ್ನ ಗಂಡ ಮಾರಭೂಪಾಲ ಸತ್ತಮೇಲೆ ಎಳೆಯನಾಗಿದ್ದ ಮಗ ಕರಿರಾಯನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡಿದಳೆಂಬುದನ್ನು ಇಲ್ಲಿ ಸ್ಮರಿಸಬಹುದು. ಈ ಮಾರಗೌಡ ಸ್ವಲ್ಪಮಟ್ಟಿಗೆ ಹೊಯ್ಸಳ ಚಕ್ರವರ್ತಿ ಒಂದನೆಯ ಬಲ್ಲಾಳನಿಗೆ ಸಮಕಾಲೀನನಾಗುತ್ತಾನೆ.

 

[1] ನಮ್ಮೂರಿನ ಜನಪದ ಕಥೆಗಳು, ದೊ.ನ. ರಾಮೇಗೌಡ, ಪುಟ ೩೫.

[2] Mysore Gagetter: Vol. V, P. 843.

* ಎಫಿಗ್ರಫಿಕಾ ಕರ್ನಾಟಕ ಸಂ. ೫, ೧೯೧೬, ಪುಟ ೬೨೭.

[3] ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ. ಸಂ. ಡಾ. ಆರ್. ಸಿ. ಹಿರೇಮಠ, ಡಾ. ಸುಂಕಾಪುರ, ಪುಟ ೩೫೮.

[4] ಎಫಿಗ್ರಾಫಿಯಾ ಕರ್ನಾಟಕ ಸಂಪುಟ ೬, ೧೯೭೭ ಪುಟ ೧೮೫.