ಕನ್ನಡ ಯಕ್ಷಗಾನ ಸಾಹಿತ್ಯ ಪ್ರಕಾರಲ್ಲಿ ಕರಿಭಂಟನ ಕಾಳಗ ತುಂಬಾ ಪ್ರಸಿದ್ಧವಾದ ನಾಟಕ. ಈ ನಾಟಕ ಯಕ್ಷಗಾನ ಕಾವ್ಯವೊಂದರಿಂದ ರೂಪುಗೊಂಡುದು. ಸಾಮಾನ್ಯವಾಗಿ ಕನ್ನಡ ನಾಡಿನ ಎಲ್ಲಾ ಭಾಗಗಳಲ್ಲಿಯೂ ಈ ನಾಟಕವನ್ನು ಅಭಿನಯಿಸುತ್ತಾರೆ. ಕೆಲವು ಕಡೆಗಳಲ್ಲಿ ಈ ಕಥೆಗೆ ವಿಶೇಷ ಮಹತ್ವ ಕೊಟ್ಟಿರುವಂತೆ ಕಾಣುತ್ತದೆ. ಓಲೆಯ ಪ್ರತಿಗಳೂ ಸೇರಿದಂತೆ ಕರಿಭಂಟನ ಕಾಳಗ ನಾಟಕದ ನೂರಾರು ಪ್ರತಿಗಳು ದೊರೆಯುತ್ತವೆ. ಇತ್ತೀಚೆಗೆ ಚಿತ್ರದುರ್ಗದ ಕೆಲವು ಜನ ಸಾಹಿತ್ಯಾಭ್ಯಾಸಿಗಳು ‘ಚಂದ್ರವಳ್ಳಿ’ ಎಂಬ ಹೆಸರಿನ ಜಿಲ್ಲಾ ಚರಿತ್ರೆಯ ಸಂಪುಟವೊಂದನ್ನು ಪ್ರಕಟಿಸಿದ್ದಾರೆ. ಈ ಹಿಂದೆಯೇ ದಿವಂಗತ ಹುಲ್ಲೂರು ಶ್ರೀನಿವಾಸ ಜೋಯಿಸರು ಮತ್ತು ಡಾ. ಜಿ. ವರದರಾಜರಾಯರು ಕರಿಭಂಟನ ಕಾಳಗದ ಕಥೆಯ ಬಗ್ಗೆ ಬರೆದು ಇದೊಂದು ಚಾರಿತ್ರಿಕ ಘಟನೆಯೆಂದೂ, ಗಂಗದೊರೆ ರಕ್ಕಸಗಂಗನೇ ಕರಿಭಂಟನೆಂದೂ ಹೇಳಿದ್ದಾರೆ. ಚಂದ್ರವಳ್ಳಿಯಲ್ಲಿ ಈ ಬಗೆಗೆ ಬರೆದಿರುವ ಶ್ರೀ ಎಸ್. ವಿ. ಗೌಡೂರ್ ಅವರು ಸಹ ಈ ರಕ್ಕಸಗಂಗನೇ ಕರಿಭಂಟ ಎಂಬ ವಾದವನ್ನು ಒಪ್ಪಿ ಅದನ್ನು ಸಮರ್ಥಿಸಲು ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲ, ಕರಿಭಂಟನ ಕಥೆಯ ಅಂತಿಮ ಘಟನೆ ನಡೆದುದು ಚಿತ್ರದುರ್ಗ ಜಿಲ್ಲೆಯ ಹಾಯಕಲ್ಲಿನಲ್ಲೆಂದೂ ಆಗ ಅದಕ್ಕೆ ಮಲ್ಲಿಗನೂರೆಂಬ ಹೆಸರಿತ್ತೆಂದೂ ಪ್ರತಿಪಾದಿಸಿದ್ದಾರೆ. ಕರಿಭಂಟ ಮತ್ತು ಉದ್ದಂಡಿಯ ನ್ಯಾಯದಲ್ಲಿ ಪಾಲುಗೊಂಡ ಗೌಡರ ಬಗೆಗೂ ಹೇಳಿದ್ದಾರೆ. “ಚಿತ್ರದುರ್ಗ ತಾಲ್ಲೂಕು ಹಾಯಕಲ್ಲು ಗ್ರಾಮದಲ್ಲಿ ಕರಿಭಂಟನಿಗೆ ಸಂಭದಿಸಿದ ಕಥೆಗಳನ್ನು ಅಲ್ಲಿನ ನಿವಾಸಿಗಳಿಂದ ಈಗಲೂ ನಾವು ಕೇಳಬಹುದು. ಐತಿಹ್ಯದ ಪ್ರಕಾರ ತೊಂಡನೂರು ರಾಕ್ಷಸಿಯು ಕರಿಭಂಟನನ್ನು ಕೊಲ್ಲಲು ಇಂದಿನ ನಾಯಕನ ಹಟ್ಟಿ (ಚಳ್ಳಕೆರೆ ತಾಲ್ಲೂಕು) ಬಳಿಯ ಹೊಸಗುಡ್ಡದಿಂದ (ರಾಮದುರ್ಗದ ಕೋಟೆ) ಓಡಿಸಿಕೊಂಡು ಬಂದಳೆಂದೂ, ಅವನ ಹಾಯಕಲ್ಲು (ಅಂದು ಮಲ್ಲಿಗೆಯೂರು) ಗ್ರಾಮದಲ್ಲಿ ಏಳು ಜನ ಗೌಡರಲ್ಲಿ ಆಶ್ರಯಪಡೆದನೆಂದೂ, ಆದರೂ ಮಾಯಾವಿನಿಯಾದ ರಾಕ್ಷಸಿಯ ಕಪಟತಂತ್ರಗಳಿಗೆ ಬಲಿಯಾಗಿ ಇಂದಿಗೂ ಉಳಿದಿರುವ ರಾಮೇಶ್ವರ ದೇವಸ್ಥಾನದಲ್ಲಿ ಆಹುತಿಯಾದನೆಂದೂ ತಿಳಿಯುತ್ತದೆ.”[1] ತೊಂಡನೂರು ರಾಕ್ಷಸಿ ಉದ್ದಂಡಿ ಕರಿಭಂಟನನ್ನು ಚಿತ್ರದುರ್ಗದ ಹಾಯಕಲ್ಲಿನವರೆಗೆ ಅಟ್ಟಿಸಿಕೊಂಡು ಹೋಗಿ ಕೊಂದಳೆಂಬುದು ಮೇಲಿನ ಲೇಖಕರೆಲ್ಲರ ಅಭಿಪ್ರಾಯ. ಇದಕ್ಕೆ ಸರಿಯಾದ ಸಮರ್ಥನೆಗಳನ್ನು ಅವರು ಕೊಟ್ಟಿಲ್ಲ.

ಕರಿಭಂಟನ ಕಥೆಯ ಭೂಮಿಕೆ ಪ್ರಧಾನವಾಗಿ ಗೌತಮ ಕ್ಷೇತ್ರ (ಶ್ರೀರಂಗಪಟ್ಟಣ) ಮತ್ತು ತೊಣ್ಣೂರುಗಳು. ಉದ್ದಂಡಿಯು ತೊಣ್ಣೂರಿನಿಂದ ಚಿತ್ರದುರ್ಗದವರೆಗೆ ಕರಿಭಂಟನನ್ನು ಅಟ್ಟಿಸಿಕೊಂಡು ಹೋದಳೆಂದು ಉತ್ಪ್ರೇಕ್ಷೆ ಎಂದೆನಿಸುತ್ತದೆ. ಸಾಮಾನ್ಯವಾಗಿ ಈ ನಾಟಕ ಆಡುವ ಹಳ್ಳಿಗರು ಈ ಕಥೆ ನಮ್ಮ ಊರಿನಲ್ಲಿಯೇ ನಡೆದುದು ಎಂದು ಕೆಲವು ಗುರುತುಗಳನ್ನು ತೋರಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಈ ಯಾರಿಗೂ ಗೌತಮ ಕ್ಷೇತ್ರ ಮತ್ತು ತೊಣ್ಣೂರನ್ನು ಬದಲಾಯಿಸುವುದು ಸಾಧ್ಯವಾದಂತೆ ಕಾಣುವುದಿಲ್ಲ. ಈ ಎಲ್ಲ ಸಮಸ್ಯೆಗಳ ಹಿನ್ನಲೆಯಲ್ಲಿ ಕರಿಭಂಟನ ಕಾಳಗದ ಕಥೆಯ ಪ್ರಸಂಗವನ್ನು ವಿವೇಚಿಸಿದಾಗ ನನಗೆ ಕೆಲವು ಅನುಮಾನಗಳು ಉಂಟಾದುವು. ಮೊದಲನೆಯದಾಗಿ ಕರಿಭಂಟನಿಗೂ ರಕ್ಕಸಗಂಗನಿಗೂ ಸಂಬಂಧವಿದ್ದರೆ ಎಲ್ಲಿಯಾದರೂ ಶಾಸನಗಳಲ್ಲಿ ಇದರ ಉಲ್ಲೇಖ ದೊರೆಯಬೇಕಿತ್ತು. ಎರಡನೆಯದು, ಈ ಕಥೆ ತೊಣ್ಣೂರು ಮತ್ತು ಅದರ ಸುತ್ತಲಿನ ಜನಪದದಲ್ಲಿ ಎಂದೋ ನಡೆದ ಕಥೆಯಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದುದಾಗಿರಬೇಕು. ಹೀಗೆ ಜನಜನಿತವಾದ ಕಥೆಯನ್ನು ವಸ್ತುವಾಗಿಟ್ಟುಕೊಂಡು ಕೆಲವು ಬದಲಾವಣೆಗಳೊಂದಿಗೆ ಕಾವ್ಯವನ್ನೊ, ನಾಟಕವನ್ನೊ ಬರೆದಿರಬೇಕು. ಮುಂದೆ ಇದು ಜನಪ್ರಿಯವಾಗಿ ನಾಡಿನಾದ್ಯಂತ ಹರಡಿಕೊಂಡಿರಬೇಕು. ಈ ಹಿನ್ನಲೆಯಲ್ಲಿ ನಾನು ಕರಿಭಂಟನ ಕಾಳಗದ ಬಗೆಗಿನ ಸಾಹಿತ್ಯವನ್ನೆಲ್ಲಾ ಗಮನಿಸಿದ್ದೇನೆ. ಉಪಲಬ್ಧ ಕೃತಿಗಳನ್ನೆಲ್ಲಾ ಪರಿಶೀಲಿಸಿದ್ದೇನೆ. ಸಂಬಂಧಪಟ್ಟ ಸ್ಥಳಗಳಿಗೆ ಭೇಟಿ ಕೊಟ್ಟು ವಿವರವಾದ ಕ್ಷೇತ್ರಕಾರ್ಯ ನಡೆಸಿದ್ದೇನೆ. ಈ ಎಲ್ಲ ಅಂಶಗಳು ಈ ಲೇಖನಕ್ಕೆ ಕಾರಣವಾಗಿವೆ.

ಕ್ಷೇತ್ರಕಾರ್ಯದ ಸಮಯದಲ್ಲಿ ನಾನು ಸಂಗ್ರಹಿಸಿದ ಕರಿಭಂಟನ ಕಥೆ ಹೀಗಿದೆ: ಧರೆಯ ದಕ್ಷಿಣ ಭಾಗದಲ್ಲಿ ಕಾಶ್ಮೀರ ದೇಶ ವಿಜೃಂಭಿಸುತ್ತಿದೆ. ಅದರ ರಾಜಧಾನಿ ಧಾರಾಪುರ. ಅದನ್ನಾಳುವವನು ಮಾರಭೂಪಾಲ. ಅವನ ರಾಣಿ ಬನವಂತಾದೇವಿ. ಈ ದಂಪತಿಗಳಿಗೆ ಏಕಮಾತ್ರ ಪುತ್ರ ಕರಿರಾಯ. ಯುದ್ಧವೊಂದರಲ್ಲಿ ಮಾರಭೂಪಾಲ ಅಸು ನೀಗಿದ. ಆಗ ಕರಿರಾಯ ಇನ್ನೂ ಚಿಕ್ಕವನು. ರಾಣಿ ಬನವಂತಾದೇವಿ ರಾಜ್ಯಸೂತ್ರಗಳನ್ನು ತನ್ನ ಕೈಗೆ ತೆಗೆದುಕೊಂಡು ಮಗನನ್ನು ಪೋಷಿಸಿ ಅವನು ಪ್ರಾಪ್ತವಯಸ್ಕನಾದ ಕೂಡಲೆ ಅವನಿಗೆ ಪಟ್ಟ ಕಟ್ಟುತ್ತಾಳೆ. ಕರಿರಾಯ ದಕ್ಷತೆಯಿಂದ ಧಾರಾಪುರವನ್ನಾಳುತ್ತಿರುತ್ತಾನೆ.

ಹಳೆಯಬೀಡಿನ ರಾಜ ಬಲ್ಲಾಳರಾಯ. ಅವನಿಗೆ ಧರಣಿಮೋಹಿನಿ ಎಂಬ ಮಗಳು. ಪ್ರಾಪ್ತವಯಸ್ಕಳಾದ ಮಗಳಿಗೆ ಬಲ್ಲಾಳರಾಯ ವರಾನ್ವೇಷಣೆಯಲ್ಲಿ ನಿರತನಾಗಿರುತ್ತಾನೆ. ಧರಣಿಮೋಹಿನಿಗೆ ಯಾವ ರಾಜಕುಮಾರನೂ ಒಪ್ಪಿಗೆಯಾಗಲಿಲ್ಲ. ಕಡೆಗೆ ಬಲ್ಲಾಳರಾಯ ತನ್ನ ಮಂತ್ರಿಗಳೊಂದಿಗೆ ಸಮಾಲೋಚಿಸಿ ಸಮರ್ಥರಾದ ಚಿತ್ರಗಾರರಿಂದ ಈ ಭೂಮಂಡಲದ ಸಕಲ ರಾಜ್ಯಗಳ ರಾಜಕುಮಾರರ ಭಾವಚಿತ್ರಗಳನ್ನೂ ಬರೆಸಿ ತರಿಸುತ್ತಾನೆ. ಅವುಗಳಲ್ಲಿ ಧಾರಾಪುರದ ಮಾರಭೂಪಾಲನ ಮಗ ಕರಿರಾಯನನ್ನು ಧರಣಿಮೋಹಿನಿ ಒಪ್ಪುತ್ತಾಳೆ. ಧಾರಾಪುರಕ್ಕೂ ಹಳೆಬೀಡಿಗೂ ಪರಮವೈರ, ಬದ್ದ, ದ್ವೇಷ, ಬಲ್ಲಾಳರಾಯ ಧರ್ಮಸಂಕಟದಲ್ಲಿ ಸಿಲುಕುತ್ತಾನೆ. ಕಡೆಗೆ ಮಗಳ ಮೇಲಿನ ಮಮತೆಯೇ ಗೆಲ್ಲುತ್ತದೆ. ಬಲ್ಲಾಳರಾಯ ತನ್ನ ಮಂತ್ರಿಯನ್ನೇ ಈ ಮದುವೆಯನ್ನು ಕುದುರಿಸುವ ರಾಯಭಾರಿಯನ್ನಾಗಿ ಮಾಡಿ ಕಾಶ್ಮೀರ ದೇಶಕ್ಕೆ ಕಳಿಸುತ್ತಾನೆ.

ಶತ್ರುರಾಜನಾದ ಬಲ್ಲಾಳರಾಯನ ಆಹ್ವಾನ ಬನವಂತಾದೇವಿಯಲ್ಲಿ ಅನುಮಾನವನ್ನು ಹುಟ್ಟಿಸುತ್ತದೆ. ಇದಕ್ಕೆ ಪೋಷಕವಾಗಿ ಆಕೆಗೆ ದುಸ್ವಪ್ನಗಳುಂಟಾಗುತ್ತವೆ. ಹಳೇಬೀಡಿನ ರಾಜಕುಮಾರಿಯನ್ನು ವರಿಸಲು ಕರಿರಾಯ ತಾಯಿಯ ಅನುಮತಿ ಕೇಳುತ್ತಾನೆ. ಆಕೆ ಶತ್ರು ರಾಜರ ಪಾಳೆಯಕ್ಕೆ ಹೋಗುವುದು ಸರಿಯಲ್ಲವೆಂದು ಮಗನಿಗೆ ಬುದ್ಧಿ ಹೇಳುತ್ತಾಳೆ. ತನಗುಂಟಾದ ಕೆಟ್ಟ ಕನಸುಗಳನ್ನೂ ವಿವರಿಸುತ್ತಾಳೆ. ಆದರೆ ಕರಿರಾಯ ಇದಾವುದನ್ನೂ ಕೇಳಲು ಸಿದ್ಧನಿಲ್ಲ. ರಾಜನೊಬ್ಬ ತನ್ನ ಮಗಳನ್ನು ಮದುವೆಯಾಗಲು ಆಹ್ವಾನಿಸಿರುವಾಗ ಶೂರನಾದವನು ಅದನ್ನು ನಿರಾಕರಿಸುವುದೆ? ಶತ್ರುರಾಜನೆಂದು ಹೆದರಿದರೆ ನಮ್ಮ ವಂಶಕ್ಕೆ ಅಪಕೀರ್ತಿಯಲ್ಲವೆ? ಕ್ಷತ್ರಿಯನಿಗೆ ಅದು ಹೇಡಿತನದ ಸಂಕೇತ ಎಂಬುದು ಕರಿರಾಯನ ವಾದ. ಕಡೆಗೆ ಅವನ ವಾದವೇ ಗೆದ್ದು ಬನವಂತೆ ಹಳೇಬಿಡಿಗೆ ಹೊರಡಲು ಅನುಮತಿ ನೀಡುತ್ತಾಳೆ.

ಕರಿರಾಯ ಮಿತಪರಿವಾರದೊಂದಿಗೆ ಹಳೇಬೀಡಿಗೆ ಹೊರಡುತ್ತಾನೆ. ಧಾರಾಪುರದಿಂದ ಹೊರಟ ಕರಿರಾಯ ಕರಿಗಿರಿಯನ್ನು ಹತ್ತಿ ಕಾವೇರಿ ಲೋಕಪಾವನಿಯರ ಸಂಗಮದ ಗೌತಮ ಕ್ಷೇತ್ರದಲ್ಲಿ ತನ್ನ ಬಿಡಾರ ಹೂಡುತ್ತಾನೆ. ಅಲ್ಲಿಗೆ ಅವನ ಒಂದು ದಿನದ ಪ್ರಯಾಣ ಮುತಿಯುತ್ತದೆ. ಮಾರನೆಯ ದಿನ ಹಳೇಬೀಡಿಗೆ ಹೊರಡುವುದು ಅವನ ಉದ್ದೇಶ. ಆ ಸ್ಥಳದ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋದ ಕರಿರಾಯ ವನದಲ್ಲಿ ಅಡ್ಡಾಡುತ್ತಿರುವಾಗ ಪರಮಸುಂದರಿಯೊಬ್ಬಳು ಅವನ ದೃಷ್ಟಿಗೆ ಬೀಳುತ್ತಾಳೆ. ಆಕೆಯೂ ಈತನನ್ನು ಕಂಡು ವಿಸ್ಮಿತಳಾಗಿ ಆಕರ್ಷಿತಳಾಗುತ್ತಾಳೆ. ಅವರಿಬ್ಬರಲ್ಲಿ ಪ್ರಣಯಾಂಕುರವುಂಟಾಗುತ್ತದೆ.

ತೊಣ್ಣೂರನ್ನು ಭೇತಾಳರಾಜ ಆಳುತ್ತಿರುತ್ತಾನೆ. ಅವನ ರಾಣಿ ಉದ್ದಂಡಿ. ಈ ದಂಪತಿಗಳಿಗೆ ಪುಂಡರೀಕಾಕ್ಷಿಯೆಂಬ ಮಗಳು. ಭೇತಾಳರಾಜನ ನಗರ ಸಕಲ ಸಂಪತ್ತುಗಳಿಂದ ಕೂಡಿದೆ. ಚಿನ್ನದ ಗೋಪುರಗಳಿಂದ ಕೂಡಿದ ಅರಮನೆ ಮತ್ತು ದೇವಾಲಯಗಳು ಸೂರ್ಯ ಕಿರಣಗಳಿಗೆ ಪ್ರತಿಫಲಿಸಿ ಬೆಳಗುತ್ತಿವೆ. ಇಂತಹ ಸಂಪತ್ತಿನ ಬಗೆಗೆ ಅಸೂಯೆಗೊಂಡ ಸುತ್ತ ಮುತ್ತಲಿನ ರಾಜರೆಲ್ಲ ಸೇರಿ ತೊಣ್ಣೂರಿನ ಮೇಲೆ ದಾಳಿಮಾಡುತ್ತಾರೆ. ಭೇತಾಳರಾಜ ಎಷ್ಟೇ ಕಾದಿದರೂ ಸೋಲನ್ನು ಅನುಭವಿಸಬೇಕಾಯಿತು. ಅಷ್ಟೇ ಅಲ್ಲ ಅವನು ಯುದ್ಧದಲ್ಲಿ ಮಡಿದ. ಅವನಿಗೆ ಬಲಗೈಯಾಗಿದ್ದ ಅವನ ಸಹೋದರನೂ ಮಡಿದ. ತೊಣ್ಣೂರಿನ ಸಂಪತ್ತು ಶತ್ರುಗಳ ಪಾಲಾಯಿತು. ಭೇತಾಳರಾಜನ ಪತ್ನಿ ಮತ್ತು ಮಗಳು ಕಾಡಿಗೆ ಹೋಗಿ ಅಲ್ಲಿ ತಲೆಮರೆಸಿಕೊಂಡರು. ಇವರಿಗೆ ಸಹಾಯಕನಾಗಿ ಉದ್ದಂಡಿಯ ಸಹೋದರ ಬೊಮ್ಮರಕ್ಕಸ ನಿಂತ. ಮುಂದೆ ನಾಶವಾಗಿದ್ದ ರಾಜ್ಯವನ್ನು ನೇರ್ಪಡಿಸಿಕೊಂಡು ಉದ್ದಂಡಿ ರಾಜ್ಯ ಸೂತ್ರ ಹಿಡಿದಳು. ಗಂಡು ಸಂತಾನವಿರದಿದ್ದುದರಿಂದ ಪುಂಡರೀಕಾಕ್ಷಿಯನ್ನು ಬೊಮ್ಮರಕ್ಕಸನಿಗೆ ಕೊಟ್ಟು ಮದುವೆ ಮಾಡಿ ಸಿಂಹಾಸನದ ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂಬುದು ಉದ್ದಂಡಿಯ ಆಸೆ. ಆದರೆ ಪುಂಡರೀಕಾಕ್ಷಿಗೆ ಮೊದಲಿನಿಂದಲೂ ಬೊಮ್ಮರಕ್ಕಸನ ಬಗೆಗೆ ಒಲವಿಲ್ಲ. ಆಕೆ ತಾಯಿಯ ಅಭೀಷ್ಟದ ವಿರುದ್ಧ ದಿಕ್ಕಿನಲ್ಲಿ ಯೋಚಿಸುತ್ತಿರುತ್ತಾಳೆ. ಹೀಗಿರುವಾಗ ಸುಂದರನೂ ಶೂರನೂ ಆದ ಕರಿರಾಯನ ಪರಿಚಯ ಅವಳಿಗಾಗುತ್ತದೆ. ಕರಿರಾಯ ಮತ್ತು ಪುಂಡರೀಕಾಕ್ಷಿಯರ ಪ್ರಣಯ ರಹಸ್ಯವಾಗಿ ನಡೆಯುತ್ತಲೆ ಇರುತ್ತದೆ.

ಉರಿಶಿಂಗನೆಂಬುವನು ತೊಣ್ಣೂರು ರಾಜ್ಯದ ಸೇನಾಧಿಪತಿ. ಅವನ ಸಹಾಯಕ ಮರಿಶಿಂಗ. ಈ ಮರಿಶಿಂಗನು ಸಮರ್ಥನಾದ ಗೂಢಚಾರ. ಕರಿರಾಯ ಸೇನಾ ಸಮೇತನಾಗಿ ಗೌತಮಕ್ಷೇತ್ರದಲ್ಲಿರುವ ವಿಚಾರ ಮರಿಶಿಂಗನಿಗೆ ತಿಳಿದು ಅವನು ಕೂಡಲೇ ಕಾರ್ಯಪ್ರವೃತ್ತನಾಗುತ್ತಾನೆ. ಈ ವಿಚಾರವನ್ನು ದಳಪತಿ ಉರಿಶಿಂಗನಿಗೂ ವರದಿ ಮಾಡುತ್ತಾನೆ. ಕರಿರಾಯ ಏನು ಕಾರಣಕ್ಕಾಗಿ ಅಲ್ಲಿ ಬಂದಿಳಿದಿದ್ದಾನೆಂಬುದನ್ನು ಅವರಿಬ್ಬರೂ ಅನ್ವೇಷಿಸುವಾಗ ಪುಂಡರೀಕಾಕ್ಷಿಯ ಪ್ರಣಯ ಪ್ರಸಂಗ ಅವರ ಹದ್ದಿನ ಕಣ್ಣಿಗೆ ಬೀಳುತ್ತದೆ. ಕೂಡಲೇ ಸುದ್ದಿ ಉದ್ದಂಡಿಗೆ ತಲುಪುತ್ತದೆ. ಆಕೆ ಕೋಪದಿಂದ ಕಿಡಿಕಿಡಿಯಾಗುತ್ತಾಳೆ. ಆದರೆ ಮಗಳ ಮನಸ್ಸಿಗೆ ನೋವಾಗದಂತೆ ಕಾರ್ಯಸಾಧಿಸಬೇಕೆಂದು ತೀರ್ಮಾನಿಸುತ್ತಾಳೆ. ಮೊದಲು ಅವಳಿಗೆ ಅಪರಿಚಿತನೊಂದಿಗೆ ಪ್ರಣಯದಲ್ಲಿ ತೊಡಗುವುದರ ಬಗೆಗೆ ಇರುವ ಅಪಾಯಗಳನ್ನು ಕುರಿತು ಬುದ್ಧಿಮಾತು ಹೇಳುತ್ತಾಳೆ. ಆದರೆ ದಾರಿಯಲ್ಲಿ ಬಹಳ ಮುಂದುವರಿದಿದ್ದ ಪುಂಡರೀಕಾಕ್ಷಿ ತಾಯಯ ಮಾತನ್ನು ನಿರ್ಲಕ್ಷಿಸುತ್ತಾಳೆ.

ಈ ಪ್ರಣಯವನ್ನು ಉಪಾಯದಿಂದ ಒಡೆಯಬೇಕೆಂದು ಉದ್ದಂಡಿಯು ಶತಾಯಗತಾಯ ಪ್ರಯತ್ನಿಸುತಾಳೆ. ಕರಿರಾಯ ಮತ್ತು ಅವನ ಸೇನೆಯ ಮೇಲೆ ದಾಳಿ ಮಾಡುವ ಪ್ರಯತ್ನ ನಡೆಯುತ್ತದೆ. ಈ ದಾಳಿಯಲ್ಲಿ ಉರಿಶಿಂಗ ಮರಿಶಿಂಗರು ಮಡಿಯುತ್ತಾರೆ. ಬೊಮ್ಮನೂ ಯುದ್ಧದಲ್ಲಿ ಸೋತು ಹಿಮ್ಮೆಟ್ಟುತ್ತಾನೆ. ಶಕ್ತಿಯಿಂದ ಕರಿರಾಯನನ್ನು ಗೆಲ್ಲುವುದು ಸಾಧ್ಯವಿಲ್ಲವೆಂದು ಅರಿತ ಉದ್ಧಂಡಿ ಯುಕ್ತಿಯಿಂದ ಅವನನ್ನು ಮುಗಿಸುವ ಸನ್ನಾಹ ಮಾಡುತ್ತಾಳೆ. ಕರಿರಾಯನನ್ನು ಪುಂಡರೀಕಾಕ್ಷಿಯೊಂದಿಗೆ ಮದುವೆ ಮಾಡುವ ಕಾರಣ ಹೇಳಿ ಸೇನೆಯಿಂದ ಬೇರೆ ಮಾಡಿ ತೊಣ್ಣೂರಿಗೆ ಕರೆ ತರುತ್ತಾರೆ. ಆತನ ಬಿಡಾರದಲ್ಲಿ ಮೋಸದಿಂದ ಅವನನ್ನು ಕೊಲ್ಲುವ ಏರ್ಪಾಡಾಗಿರುತ್ತದೆ, ಆದರೆ ಪುಂಡರೀಕಾಕ್ಷಿಯ ಮುನ್ನೆಚ್ಚರಿಕೆಯಿಂದಾಗಿ ಕರಿರಾಯನ ಕೊಲೆ ತಪ್ಪುತ್ತದೆಯಾದರೂ ಬೊಮ್ಮರಕ್ಕಸ ಈ ಸಂಚಿಗೆ ಬಲಿಯಾಗಿ ಅಸುನೀಗುತ್ತಾನೆ. ಈ ವಾರ್ತೆಯಿಂದ ಉದ್ದಂಡಿಯ ಆಸೆ ಕಮರಿ ಅವಳಲ್ಲಿ ಸೇಡು ಕಿಡಿಯಾಡುತ್ತದೆ. ಈ ವಿಚಾರ ತಿಳಿದ ಪುಂಡರೀಕಾಕ್ಷಿ ರಾತ್ರೋರಾತ್ರಿ ಕರಿರಾಯನನ್ನು ಗೌತಮ ಕ್ಷೇತ್ರದಲ್ಲಿದ್ದ ಅವನ ಶಿಬಿರಕ್ಕೆ ಹಿಂತಿರುಗುವಂತೆ ಪ್ರೇರೇಪಿಸುತ್ತಾಳೆ. ಕರಿರಾಯ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ದಾರಿ ತಪ್ಪಿ ಮಲ್ಲಿಗದೇವನೂರಿನತ್ತ ತಿರುಗುತ್ತಾನೆ. ಉದ್ದಂಡಿಯ ಸೇನೆ ಅವನ ಬೆನ್ನು ಬಿಡುವುದೇ ಇಲ್ಲ.

ತೊಣ್ಣೂರಿನಿಂದ ಓಡಿದ ಕರಿರಾಯನ ಗೂಢಚಾರನು ಸೇನೆಗೆ ಸುದ್ದಿ ತಿಳಿಸುತ್ತಾನೆ. ಕೂಡಲೆ ಅದು ಅವನ ಸಹಾಯಕ್ಕೆ ಮಲ್ಲಿಗದೇವನೂರಿನತ್ತ ದಾವಿಸುತ್ತದೆ. ಅಲ್ಲಿ ಉದ್ದಂಡಿ ಮತ್ತು ಕರಿರಾಯನ ಸೇನೆಗಳು ಮುಖಾಮುಖಿಯಾಗಿ ಭೀಕರ ಯುದ್ಧ ಸಂಭವಿಸುತ್ತದೆ. ಇಷ್ಟು ಹೊತ್ತಿಗೆ ಸುತ್ತಮುತ್ತಲಿನ ಗೌಡಪಾಳೆಯಗಾರರಿಗೆ ಸುದ್ದಿ ತಿಳಿದು ಅವರೆಲ್ಲ ಮಲ್ಲಿಗದೇವನೂರಿಗೆ ಧಾವಿಸುತ್ತಾರೆ. ಕಡೆಗೆ ಆದುದಾಗಿ ಹೋಯಿತೆಂದು ಇಬ್ಬಣಗಳಿಗೂ ಸಮಾಧಾನ ಹೇಳಿ ಯುದ್ಧಸ್ತಂಭನವೇರ್ಪಡಿಸುತ್ತಾರೆ. ಮರುದಿನ ಪರಸ್ಪರ ಚರ್ಚಿಸಿ ಒಪ್ಪಂದಕ್ಕೆ ಬರುವ ತೀರ್ಮಾನ ಹೇಳುತ್ತಾರೆ. ತನ್ನ ತಮ್ಮನನ್ನು ಕಳೆದುಕೊಂಡ ಉದ್ದಂಡಿ ನ್ಯಾಯಗುರುಡಳಾಗುತ್ತಾಳೆ. ಯಾವ ಅಪಾಯದ ಮುನ್ಸೂಚನೆಯೂ ಇಲ್ಲದೆ ಮಲಗಿದ್ದ ಕರಿರಾಯನ ಶಿಬಿರದ ಮೇಲೆ ಕತ್ತಲೆಯಲ್ಲಿ ರಕ್ಕಸಿಯಂತೆ ದಾಳಿಮಾಡಿ ಅವನನ್ನು ಇರಿದು ಕೊಲ್ಲುತ್ತಾಳೆ. ಆದರೆ ಏಳು ಜನ ಗೌಡಪಾಳೆಯಗಾರರ ನೆನಪಾಗಿ ಅವಳ ಮೈ ನಡಗುತ್ತದೆ. ಕೂಡಲೆ ತನ್ನ ಪರಿವಾರದೊಂದಿಗೆ ಅವಳು ಮಲ್ಲಿಗದೇವನೂರಿನಿಂದ ಪಲಾಯನ ಮಾಡುತ್ತಾಳೆ.

ಬೆಳಗಾಗೆದ್ದ ಕೂಡಲೇ ನಡೆದಿರುವ ದುರಂತವನ್ನು ಕಂಡು ಸಕಲರೂ ಸ್ತಂಭೀಭೂತರಾಗುತ್ತಾರೆ. ತಮ್ಮ ನ್ಯಾಯಕ್ಕೆ ಒದಗಿದ ಆಘಾತವನ್ನು ಸಹಿಸಲಾರದೆ ಪಂಚಾಯಿತರಾಗಿದ್ದ ಗೌಡಪಾಳೆಯಗಾರರು ಯುದ್ಧ ಪದ್ಧತಿಯಂತೆ ಚಿತೆಯಲ್ಲಿ ಬಿದ್ದು ಕೊಂಡವಾಗುತ್ತಾರೆ. ಅವರ ಹೆಸರುಗಳು (೧) ದಾನದಗೌಡ, (೨) ಧರ್ಮದಗೌಡ, (೩) ಸತ್ಯದಗೌಡ, (೪) ಶಾಂತಿಯಗೌಡ, (೫) ಭಕ್ತಿಯಗೌಡ, (೬) ಮುಕ್ತಿಯಗೌಡ, (೭) ಧಾತಗೌಡ. ಇಷ್ಟು ಹೊತ್ತಿಗೆ ವಿಷಯ ತಿಳಿದ ಬನವಂತಾದೇವಿ ಮತ್ತು ಪುಂಡರೀಕಾಕ್ಷಿಯರೂ ಮಲ್ಲಿಗದೇವನೂರಿಗೆ ಬರುತ್ತಾರೆ. ಅಲ್ಲಿಂದ ಓಡಿಹೋಗಿ ಮೂಗೂರಿನ ಹೂವಾಡಿಗರ ಮನೆಯ ನೆಲಮಾಳಿಗೆಯಲ್ಲಿ ಅವಿತಿದ್ದ ಉದ್ದಂಡಿಯನ್ನು ಸೈನಿಕರು ಬಂಧಿಸಿ ಎಳೆತರುತ್ತಾರೆ. ಏಳು ಜನ ಗೌಡಗಳು ಆತ್ಮಹುತಿ ಮಾಡಿಕೊಂಡ ಸ್ಥಳದಲ್ಲಿ ಆಕೆಯನ್ನು ಬಲಿಕೊಡಲಾಗುತ್ತದೆ. ಮತ್ತೊಂದೆಡೆ ಮಗನನ್ನು ಕಳೆದುಕೊಂಡ ಬನವಂತಾದೇವಿ, ಪ್ರಿಯಕರನನ್ನು ಕಳೆದುಕೊಂಡ ಪುಂಡರೀಕಾಕ್ಷಿಯರು ಅಗ್ನಿಗಾಹುತಿಯಾಗುತ್ತಾರೆ. ಅಷ್ಟು ಹೊತ್ತಿಗೆ ಹಳೇಬೀಡಿನ ಬಲ್ಲಾಳರಾಯ ಅಲ್ಲಿಗೆ ಬರುತ್ತಾನೆ. ಮುಂದೆ ಈ ರಾಜ್ಯವೆಲ್ಲಾ ಬಲ್ಲಾಳರಾಯನಿಗೆ ಸೇರುತ್ತದೆ.

ಕರಿಭಂಟನ ಕಾಳಗ ಯಕ್ಷಗಾನ ನಾಟಕಗಳಲ್ಲಿಯೂ ಈ ಕಥೆಯನ್ನೇ ಆಧರಿಸಿ ಹೊರಟರೂ ಹಲವಾರು ಮಾರ್ಪಾಟುಗಳನ್ನು ಮಾಡಿಕೊಳ್ಳಲಾಗಿದೆ. ಪ್ರಧಾನವಾಗಿ ಉದ್ದಂಡಿಯನ್ನು ರಾಕ್ಷಸಿ ಎಂದು ಕರೆಯಲಾಗಿದೆ. ಆಕೆ ಮೋಸಗಾತಿ, ಮಾಯಾವಿ, ನರಭಕ್ಷಕಿ ಎಂದೆಲ್ಲಾ ವರ್ಣಿಸಲಾಗಿದೆ. ಕಥೆಗೆ ಕೂಡ ಯುದ್ಧದ ಬದಲು ಮಾಯಾ ಮಂತ್ರಗಳ ತಿರುವನ್ನು ಕೊಡಲಾಗಿದೆ. ಕರಿರಾಯ ಗೌತಮಕ್ಷೇತ್ರಕ್ಕೆ ಬರುವವರೆಗೂ ಈ ಎರಡೂ ಪಾಠಗಳಲ್ಲಿ ಯಾವ ವ್ಯತ್ಯಾಸವಿಲ್ಲ. ಅಲ್ಲಿಂದ ಮುಂದೆ ತೊಣ್ಣೂರಿಗೆ ಹೋದ ಕರಿರಾಯನನ್ನು ಕೊಲ್ಲಲು ಉದ್ದಂಡಿ ಮಾಡುವ ಉಪಾಯಗಳಲ್ಲಿ ಬದಲಾವಣೆ ಇದೆ. ಪುಂಡರೀಕಾಕ್ಷಿಯೇ ಕರಿಭಂಟನನ್ನು ತಂದು ಅರಮನೆಯಲ್ಲಿ ಅವಿಸಿಟ್ಟುಕೊಂಡಿರುತ್ತಾಳೆ. ಉದ್ದಂಡಿ ಮತ್ತು ಬೊಮ್ಮರಕ್ಕಸರು ನರವಾಸನೆ ಬರುತ್ತಿದೆ. ಎಂದೇ ಪ್ರವೇಶಿಸುತ್ತಾರೆ. ಕರಿಭಂಟನಿಗೆ ಪೆಂಡಯ ಕಟ್ಟುವನೆಪದಲ್ಲಿ ಉದ್ದಂಡಿ ಕತ್ತಲೆಯಲ್ಲಿ ಅವನನ್ನು ಗುರುತಿಸಿ ಕೊಲ್ಲುವ ಉಪಾಯ ಮಾಡಿಕೊಳ್ಳುತ್ತಾಳೆ. ಆದರೆ ಪುಂಡರೀಕಾಕ್ಷಿ ಅದನ್ನು ಬಿಚ್ಚಿ ಬೊಮ್ಮನ ಕಾಲಿಗೆ ಕಟ್ಟುತ್ತಾಳೆ. ಆತನೆ ಕರಿಭಂಟನೆಂದು ಉದ್ದಂಡಿ ಅವನನ್ನು ಕತ್ತರಿಸಿ ಹೊರಟು ಹೋಗುತ್ತಾಳೆ. ಅಪಾಯವನ್ನರಿತ ಪುಂಡರೀಕಾಕ್ಷಿ ಕರಿಭಂಟನನ್ನು ನೀನು ತಪ್ಪಿಸಿಕೊ ಎಂದು ಕಳಿಸುತ್ತಾಳೆ. ಅವನು ನಡೆದೂ ನಡೆದು ಮಾರನೆಯ ಸಂಜೆ ಮಲ್ಲಿಗನೂರನ್ನು ತಲುಪುತ್ತಾನೆ. ಇತ್ತ ಬೆಳಗಾಗೆದ್ದ ಉದ್ದಂಡಿ ಆಗಿದ್ದ ಅನಾಹುತ ಕಂಡು ರೊಚ್ಚಿಗೆದ್ದು ಕರಿಭಂಟನನ್ನು ಹಿಂಬಾಲಿಸುತ್ತಾಳೆ. ಆಕೆಯೂ ಸಂಜೆಯ ಹೊತ್ತಿಗೆ ಮಲ್ಲಿಗನೂರಿಗೆ ಬಂದು ಸೇರುತ್ತಾಳೆ. ಹೋರಾಡಿ ಕರಿಭಂಟನನ್ನು ಗೆಲ್ಲಲು ಸಾಧ್ಯವಿಲ್ಲವೆಂದು ಅರಿತ ಉದ್ದಂಡಿ ಮೋಸದ ಹಾದಿ ಹಿಡಿಯುತ್ತಾಳೆ. ತನ್ನ ಕತ್ತಿಯನ್ನು ಮಗುವನ್ನಾಗಿ ಮಾಡಿಕೊಂಡು ತಾನು ಬಾಣಂತಿಯಂತೆ ವೇಷಧರಿಸುತ್ತಾಳೆ. ಕರಿಭಂಟ ತನ್ನ ಗಂಡನೆಂದೂ ತನ್ನನ್ನೂ ಮಗುವನ್ನೂ ತೊರೆದು ಬೇರೊಬ್ಬಳ ಮೋಹದಲ್ಲಿ ಹೋಗುತ್ತಿದ್ದಾನೆಂದೂ ಮಲ್ಲಿಗನೂರಿನ ಗೌಡಸಭೆಗೆ ದೂರು ನೀಡುತ್ತಾಳೆ. ಇಷ್ಟು ಹೊತ್ತಿಗೆ ರಾತ್ರಿಯಾಗಿದ್ದುದರಿಂದ ಗೌಡರು ಅವರಿಬ್ಬರಿಗೂ ಊರಿನ ಸೂಮೇಶ್ವರನ ಗುಡಿಯಲ್ಲಿ ತಂಗುವಂತೆಯೂ ಬೆಳಗ್ಗೆ ನ್ಯಾಯ ಬಗೆಹರಿಸುವುದಾಗಿಯೂ ತಿಳಿಸುತ್ತಾರೆ.

ಒಂದು ಕಡೆ ತಂಗಿದರೆ ಈ ರಕ್ಕಸಿ ಏನಾದರೂ ಕೇಡು ಮಾಡುತ್ತಾಳೆಂದು ಕರಿಭಂಟನಿಗೆ ಗೊತ್ತು. ಆದುದರಿಂದ ಅವನು ಒಟ್ಟಿಗಿರಲು ಒಪ್ಪುವುದಿಲ್ಲ. ಆದರೆ ಆ ಗೌಡರುಗಳು ಆತನಿಗೆ ಏನಾದರೂ ಆದರೆ ಬದಲಿಗೆ ತಮ್ಮ ಪ್ರಾಣ ಕೊಡುವುದಾಗಿ ವಾಗ್ಧಾನ ಮಾಡುತ್ತಾರೆ. ವಿಧಿಯಿಲ್ಲದೆ ಅವರ ಮಾತಿಗೆ ಕಟ್ಟು ಬಿದ್ದು ಕರಿಭಂಟ ಉದ್ದಂಡಿಯೊಂದಿಗೆ ಸೂಮೇಶ್ವರನ ಗುಡಿಯಲ್ಲಿ ಉಳಿಯುತ್ತಾನೆ. ನಿರೀಕ್ಷಿಸಿದಂತೆ ರಾತ್ರಿ ಅವಳು ಕರಿಭಂಟನನ್ನು ಕೊಂದು ದೇವಾಲಯದ ಛಾವಣಿಯ ಎರಡು ಚಪ್ಪಡಿಗಳನ್ನೇತ್ತಿ ಪರಾರಿಯಾಗುತ್ತಾಳೆ. ಬೆಳಗ್ಗೆ ಎದ್ದು ನೋಡಿದಾಗ ಕರಿಭಂಟ ಸತ್ತು ಬಿದ್ದಿರುತ್ತಾನೆ. ತಮ್ಮ ಮಾತಿನಂತೆ ಏಳುಜನ ಗೌಡಗಳೂ ಕೊಂಡವಾಗುತ್ತಾರೆ. ಅಲ್ಲಿಗೆ ಬಂದ ಬನವಂತೆ, ಪುಂಡರೀಕಾಕ್ಷಿಯರೂ ಬಲಿಯಾಗುತ್ತಾರೆ. ಇಷ್ಟು ಹೊತ್ತಿಗೆ ತನ್ನ ಮಗಳು ಧರಣೀ ಮೋಹಿನಿಯೊಂದಿಗೆ ಬಲ್ಲಾಳರಾಯ ಅಲ್ಲಿಗೆ ಬರುತ್ತಾನೆ. ಶಿವ ಪಾರ್ವತಿಯರೂ ಅಲ್ಲಿ ಪ್ರತ್ಯಕ್ಷರಾಗುತ್ತಾರೆ. ಸತ್ತವರೆಲ್ಲ ಬದುಕುತ್ತಾರೆ. ಕರಿಭಂಟ, ಪುಂಡರೀಕಾಕ್ಷಿ, ಧರಣೀ ಮೋಹಿನಿಯರನ್ನು ಮದುವೆಯಾಗುತ್ತಾನೆ. ಎಲ್ಲವೂ ಸುಖಾಂತವಾಗಿ ಪರಿಣಮಿಸುತ್ತದೆ. ಈ ಬದಲಾವಣೆಯಲ್ಲಿ ಮೂಗೂರಿನಿಂದ ಉದ್ದಂಡಿಯನ್ನು ಹಿಡಿತರಿಸಿದ ಪ್ರಸಂಗ ಬರುವುದಿಲ್ಲ. ಪ್ರಾಯಃ ನಮ್ಮ ಸಾಹಿತ್ಯದಲ್ಲಿ ದುರಂತವನ್ನು ಒಪ್ಪದ ಕಾರಣ ಶಿವ ಪಾರ್ವತಿಯರನ್ನು ತಂದು ಈ ಘಟನೆಗೆ ತಿರುವು ಕೊಟ್ಟಿರುವುದು ಕಂಡುಬರುತ್ತದೆ.

ಕರಿಭಂಟನ ಕಾಳಗದ ಘಟನೆಗೆ ಸಂಬಂಧಿಸಿದಂತೆ ಬರುವ ಊರುಗಳು ಧಾರಾಪುರ, ಗೌತಮಕ್ಷೇತ್ರ, ತೊಣ್ಣೂರು, ಹಳೇಬೀಡು ಮತ್ತು ಮಲ್ಲಿಗನೂರು. ಧಾರಾಪುರವೊಂದನ್ನುಳಿದು ಮಿಕ್ಕ ಎಲ್ಲಾ ಊರುಗಳೂ ಈಗ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕುಗಳಲ್ಲಿವೆ. ಗೌತಮಕ್ಷೇತ್ರ ಈಗಿನ ಶ್ರೀರಂಗಪಟ್ಟಣ, ತೊಂಡನೂರು, ಮಲ್ಲಿಗನೂರು ಮತ್ತು ಹಳೇಬೀಡುಗಳು ಪಾಂಡವಪುರ ತಾಲ್ಲೂಕಿನಲ್ಲಿವೆ. ಮೂಗೂರು ಟಿ. ನರಸೀಪುರ ತಾಲ್ಲೂಕಿನಲ್ಲಿದೆ. ಈ ಎಲ್ಲ ಸ್ಥಳಗಳಿಗೂ ಭೇಟಿ ನೀಡಿ ಕ್ಷೇತ್ರಕಾರ್ಯ ನಡೆಸಲಾಗಿದೆ. ಆಯಾ ಊರಿನಲ್ಲಿ ಕರಿಭಂಟನ ಕಾಳಗ ಬಗೆಗಿನ ಸ್ಥಳಗತೆ ಮತ್ತು ಕುರುಹುಗಳು ಹೀಗಿವೆ. ತೊಣ್ಣೂರು ಉದ್ದಂಡಿಯ ರಾಜಧಾನಿಯಾಗಿತ್ತೆಂದು ಹೇಳಲಾದ ಸ್ಥಳ, ಈ ಊರಿನ ಮರಿಚೌಡಶೆಟ್ಟಿ ಎಂಬ ಕುಂಬಾರಜಾತಿಯ ನೂರೆರಡು ವರ್ಷ ವಯಸ್ಸಿನ ಹಿರಿಯರು ಕರಿಭಂಟನ ಕಾಳಗ ಕುರಿತು ಹೇಳಿದ ಕಥೆ, ಆತ ಚಿಕ್ಕಂದಿನಲ್ಲಿ ಬಲ್ಲಾಳರಾಯನ ಪಾತ್ರವಹಿಸುತ್ತಿದ್ದರಂತೆ, ಹಿರಿಯರು ತಲೆತಲಾಂತರದಿಂದ ಹೇಳುತ್ತಿದ್ದ ಕಥೆ – ತೊಣ್ಣೂರಿಗೆ ಅನತಿದೂರದಲ್ಲಿಯೆ ಬೆಟ್ಟ ಸಾಲಿದೆ. ಅದರಲ್ಲಿ ಪಶ್ಚಿಮದ ಕಡಿದಾದ ಜಾಗದಲ್ಲಿ ವಾಸಯೋಗ್ಯವಾದ ಎರಡು ಗುಹೆಗಳಿವೆ. ಇವುಗಳಲ್ಲಿ ಒಂದು ಉದ್ದಂಡಿಯ ಗುಹೆ ಮತ್ತೊಂದು ಪುಂಡರೀಕಾಕ್ಷಿಯ ಗುಹೆ. ಭೇತಾಳರಾಜ ಶತ್ರುಗಳಿಗೆ ಸಿಕ್ಕಿ ಸತ್ತಾಗ ಅವರಿಬ್ಬರೂ ಇಲ್ಲಿ ಅವಿತುಕೊಂಡಿದ್ದರಂತೆ. ತೊಣ್ಣೂರಿನಿಂದ ಉತ್ತರಕ್ಕೆ ಬೆಟ್ಟದ ಸಾಲಿನ ಪಕ್ಕದಲ್ಲಿಯೆ ಕುಂಬಳಮ್ಮನ ದೇವಾಲಯವಿದೆ. ಈಕೆ ಉದ್ದಂಡಿಯ ತಂಗಿಯಂತೆ. ಇವಳ ಗಂಡನೂ ಭೇತಾಳರಾಜನೊಂದಿಗೆ ಯುದ್ಧದಲ್ಲಿ ಮಡಿದನೆಂದೂ ಪತಿಯೊಂದಿಗೆ ಚಿತೆಯೇರಿದ ಆಕೆ ಇಲ್ಲಿ ದೇವತೆಯಾಗಿ ಮೂಡಿದ್ದಾಳೆಂದೂ ಪ್ರತೀತಿ. ಈ ದೇವತೆಗೆ ಪ್ರಧಾನವಾಗಿ ಗಂಗಡಿಕಾರ ಒಕ್ಕಲಿಗರು ಭಕ್ತರು. ದೇಶದ ನಾನಾ ಕಡೆಯಿಂದ ಭಕ್ತರು ಬರುತ್ತಾರಂತೆ. ನನ್ನ ಕ್ಷೇತ್ರ ಕಾರ್ಯದ ಸಮಯದಲ್ಲಿ ಹಾಜರಿದ್ದ ತೊಣ್ಣೂರಿನ ಬ್ರಾಹ್ಮಣ ಯುವಕರೊಬ್ಬರು “ನಮಗೂ ಈಕೆ ದೇವರು ಸ್ವಾಮಿ. ನಾವು ಕೂಡ ಪೂಜೆ ಮಾಡುತ್ತೇವೆ” ಎಂದರು. ತೊಣ್ಣೂರಿನಲ್ಲಿ ಕರಿಭಂಟನ ಕಾಳಗದ ಬಗೆಗೆ ದೊರೆಯುವ ಕುರುಹುಗಳು ಇಷ್ಟು ಮಾತ್ರ. ರಾಜಧಾನಿ ಹಾಳಾಗಿ, ಗಂಡ ಮತ್ತು ಸಂಬಂಧಿಕರು ಸತ್ತ ಮೇಲೆ ಬೇಸರಗೊಂಡ ಉದ್ದಂಡಿ ತನ್ನ ಮಗಳೊಂದಿಗೆ ಮಲ್ಲಿಗನೂರಿಗೆ ಹೋಗಿ ನೆಲೆಸಿದಳು ಎಂದು ಹೇಳುತ್ತಾರೆ.

ತೊಣ್ಣೂರಿನಿಂದ ಪೂರ್ವಕ್ಕೆ ಸುಮಾರು ಎಂಟು ಮೈಲಿ ದೂರದಲ್ಲಿ ಮಲ್ಲಿಗದೇವನೂರು ಇದೆ. ಈ ಊರಿಗೆ ಈಗ ಸುಂಕತೊಣ್ಣೂರು ಎಂದು ಹೆಸರು. ತೊಣ್ಣೂರು ರಾಜ್ಯದ ಸುಂಕದ ಕಟ್ಟೆ. ಈ ಊರಿನಲ್ಲಿದ್ದುದರಿಂದ ಕ್ರಮೇಣ ಈ ಹೆಸರು ಬಂದಿದೆ. ಇದನ್ನು ಮಲ್ಲಿಗದೇವನೂರು, ಮಲ್ಲಿಗನೂರು, ಮಲ್ಲಿಗನಹಳ್ಳಿ, ಎಂಬೆಲ್ಲ ಸಂಕ್ಷಿಪ್ತ ರೂಪಗಳಲ್ಲಿ ಕರೆಯುತ್ತಾರಾದರೂ ಮಲ್ಲಿಗದೇವನೂರು ಸರಿಯಾದ ಹೆಸರೆಂದು ಕಾಣುತ್ತದೆ. ಆನಂತರ ಇದು ಮಲ್ಲಿಗನೂರಾಗಿದೆ. ಈ ಊರಿನಲ್ಲಿ ಕರಿಭಂಟನ ಕಾಳಗದ ಪ್ರಧಾನ ಅವಶೇಷಗಳು ಕಂಡುಬರುತ್ತವೆ. ಊರಿನ ಪೂರ್ವಭಾಗದಲ್ಲಿ ಉದ್ದಂಡಮ್ಮನ ದೇವಾಲಯವಿದೆ. ದ್ರಾವಿಡ ವಾಸ್ತುಶಿಲ್ಪದಂತೆ ಕಾಣುವ ಈ ದೇವಾಲಯ ಕರ್ನಾಟಕದ ಅನೇಕ ಕಡೆಗಳಲ್ಲಿರುವ ಗ್ರಾಮ ದೇವತೆಯ ಗುಡಿಗಳಂತಿದೆ. ಗರ್ಭಗುಡಿಯಲ್ಲಿ ಉದ್ದಂಡಿಯ ಮೂಲವಿಗ್ರಹವನ್ನು ಒರಟು ಕಲ್ಲಿನಿಂದ ಕೆತ್ತಲಾಗಿದೆ. ಇದು ಹಾಗೆಯೇ ಒಡೆದು ಮೂಡಿದುದು, ಆಮೇಲೆ ದೇವಾಲಯ ಕಟ್ಟಿದರು ಎಂದು ಪೂಜಾರಿ ಹೇಳುತ್ತಾರೆ. ಈ ವಿಗ್ರಹದ ಮುಂದೆ ಸುಮಾರು ಮೂರು ಅಡಿ ಎತ್ತರದ ಚಚ್ಚೌಕವಾದ ಕಲ್ಲೊಂದನ್ನು ನೆಟ್ಟು ಅದರ ಮೇಲೆ ಉದ್ದಂಡಿ ಮತ್ತು ಕರಿಭಂಟ ಯುದ್ಧ ಮಾಡುತ್ತಿರುವ ಚಿತ್ರವನ್ನು ಕೆತ್ತಲಾಗಿದೆ. ಈ ಎರಡರ ಮಧ್ಯೆ ಕುಳಿತ ಭಂಗಿಯಲ್ಲಿ ಪುಂಡರೀಕಾಕ್ಷಿಯನ್ನು ಬಿಡಿಸಲಾಗಿದೆ. ನೋಡಿದೊಡನೆಯೆ ಇದು ಈಕೆಗಾಗಿ ನಡೆದ ಹೋರಾಟ ಎಂಬುದು ತಿಳಿದುಬರುತ್ತದೆ. ಮೂಲವಿಗ್ರಹದ ಎದುರಿಗೇ ಈ ಚಿತ್ರ ಕೆತ್ತಿಸಿ ನಿಲ್ಲಿಸಿದ ಬಗ್ಗೆ ಕೇಳಲಾಗಿ ಈ ಊರಿಂದ ಹೆಣ್ಣು ತಂದು ಮದುವೆಯಾದ ಹೊಸ ಅಳಿಯಂದಿರು ಪೂಜೆಗೆ ಬಂದಾಗ ಹೆದರಿ ಮೂರ್ಛೆ ಹೋಗುತ್ತಿದ್ದರಂತೆ. ಇದು ಅಮ್ಮನ ನೇರದೃಷ್ಟಿ ಅವರ ಮೇಲೆ ಬೀಳುವುದರಿಂದ ಹಾಗಾಗುತ್ತಿತ್ತು. ಅದಕ್ಕಾಗಿ ಈ ವಿಗ್ರಹ ಮಾಡಿಸಿ ನಿಲ್ಲಿಸಿದರಂತೆ. ಉದ್ದಂಡಮ್ಮನ ಪೂಜಾರಿಯೂ ಗಂಗಡಿಕಾರ ಒಕ್ಕಲಿಗನೆ. ತೊಣ್ಣೂರು ಸೇರಿದಂತೆ ಈ ದೇವತೆಗೆ ಸುತ್ತಮುತ್ತ ಅನೇಕ ಭಕ್ತರಿದ್ದಾರೆ. ಉದ್ದಂಡಿಯೂ ಗಂಗಡಿಕಾರ ಒಕ್ಕಲಿಗರ ಮನೆ ದೇವತೆ, ಇಲ್ಲಿನವರ ಪ್ರಕಾರ.

ಮಲ್ಲಿಗದೇವನೂರು ಕರಿಭಂಟನ ಕಾಳಗ ನಡೆದ ಸ್ಥಳ ಎಂಬುದಕ್ಕೆ ಕುರುಹಾಗಿ ಉದ್ದಂಡಮ್ಮನ ಗುಡಿಯ ಎದುರಿನ ಬಯಲಿನಲ್ಲಿ ಸಾವಿರಾರು ವೀರಗಲ್ಲುಗಳಿವೆ. ಅವುಗಳಲ್ಲಿ ಅನೇಕವುಗಳ ಮೇಲೆ ವೀರರ ಹೆಸರೂಗಳು ಇವೆ. ಹಿಂದೆ ಇನ್ನೂ ಬೇಕಾದಷ್ಟು ವೀರಗಲ್ಲುಗಳಿದ್ದುವಂತೆ. ಆ ಮೈದಾನದಲ್ಲಿ ಹೊಲ ಮಾಡಿದಾಗ ಅವುಗಳನ್ನೆಲ್ಲಾ ಕಿತ್ತು ಕೆರೆಯ ಏರಿಗೆ ಹಾಕಿದರೆಂದು ಹೇಳುತ್ತಾರೆ. ದೇವಾಲಯದ ದಕ್ಷಿಣ ದಿಕ್ಕಿನಲ್ಲಿ ಉದ್ದಂಡಿ ಮತ್ತು ಕರಿಭಂಟನ ನ್ಯಾಯದಲ್ಲಿ ಭಾಗವಹಿಸಿದ ಗೌಡರ ಕಲ್ಲುಗಳೆಂದು ಹೇಳುವ ಆರು ವೀರಗಲ್ಲುಗಳು ಸಾಲಾಗಿ ನಿಂತಿವೆ. ಏಳುಜನ ಗೌಡರಿರಬೇಕೆಂದು ಕೇಳಿದಾಗ “ಬೆಳಿಗ್ಗೆ ಒಬ್ಬ ಗೌಡ ತನ್ನ ಹೊಲದ ಹತ್ತಿರ ಹೋಗಿದ್ದ. ಇತ್ತ ಕಡೆ ಕರಿಭಂಟನನ್ನು ಉದ್ದಂಡಿ ಕೊಂದಿದ್ದ ವಿಚಾರ ತಿಳಿಯಿತು. ಅವರು ಮಾತು ಕೊಟ್ಟಿದ್ದಂತೆ ಕೂಡಲೆ ಲಗ್ನವಿಡಿಸಿ ಕೊಂಡವಾಗಲು ನಿರ್ಧರಿಸಿ ಹೊಲದ ಹತ್ತಿರ ಹೋಗಿದ್ದ ಗೌಡನಿಗೆ ಹೇಳಿ ಕಳಿಸಿದರು. ಹೊಲ ಊರಿಂದ ಕೊಂಚ ದೂರವಿದ್ದುದರಿಂದ ಮುಹೂರ್ತ ತಪ್ಪಬಾರದೆಂದು ಆ ಗೌಡ ತನ್ನ ಹೊಲದಲ್ಲಿದ್ದ ಜೋಳದ ಮೆದೆಗೆ ಬೆಂಕಿ ಹಾಕಿ ಅಲ್ಲಿಯೆ ಕೊಂಡವಾದ. ಆದುದರಿಂದ ಆತನ ವೀರಗಲ್ಲನ್ನು ಹೊಲದಲ್ಲಿಯೇ ನಿಲ್ಲಿಸಲಾಗಿದೆ.

ಉದ್ದಂಡಿ ಮತ್ತು ಕರಿಭಂಟರು ರಾತ್ರಿ ಏಳು ಮಂದಿ ಗೌಡರ ಆಜ್ಞೆಯಂತೆ ತಂಗಿದ್ದರೆಂದು ಹೇಳಲಾದ ರಾಮೇಶ್ವರ ದೇವಾಲಯ ಊರಿನ ಉತ್ತರ ಭಾಗದಲ್ಲಿದೆ. ಇದೂ ಕೂಡ ದ್ರಾವಿಡ ಮಾದರಿಯ ದೇವಾಲಯ. ಪೂರ್ವಕ್ಕೆ ಬಾಗಿಲಿದ್ದು ಇದರ ಮುಂದೆ ವೀರಗಲ್ಲೊಂದಿದೆ. ಇದು ಕರಿಭಂಟ ಸತ್ತ ಕಾರಣ ಹಾಕಿದ್ದು ಎಂದು ಹೇಳುತ್ತಾರೆ. ದೇವಾಲಯದ ಮೇಲುಭಾಗದ ಚಪ್ಪಡಿಗಳನ್ನು ತೆಗೆಯಲಾಗಿದೆ. ಉದ್ದಂಡಿ ತೆಗೆದು ಓಡಿಹೋದದ್ದೆಂದು ಹೇಳುತ್ತಾರೆ. ಈಗ ಕೆರೆಯೊಂದು ನಿರ್ಮಾಣವಾಗಿದ್ದು, ಅದರ ನೀರಿನಿಂದ ಆವರಿಸಿಕೊಂಡಿರುವ ಈ ದೇವಾಲಯ ತುಂಬಾ ಶಿಥಿಲವಾಗಿದೆ.

ಕುತೂಹಲದ ಸಂಗತಿಯೆಂದರೆ ಮಲ್ಲಿಗನೂರಿನಲ್ಲಿರುವ ಬನವಂತಮ್ಮನ ದೇವಾಲಯ. ಈವರೆಗೆ ಕರಿಭಂಟನ ಕಾಳಗದ ಸ್ಥಳದ ಬಗ್ಗೆ ಬಂದಿರುವ ಯಾವ ಬರಹದಲ್ಲಿಯೂ ಬನವಂತೆಗೊಂದು ದೇವಾಲವಿದ್ದ ಬಗ್ಗೆ ಸೂಚನೆಗಳಿಲ್ಲ. ಆದರೆ ಈ ಊರಿನಲ್ಲಿ ಉದ್ದಂಡಿ ದೇವಾಲಯದಿಂದ ಪಶ್ಚಿಮಕ್ಕೆ ಹತ್ತಾರು ಮಾರು ದೂರದಲ್ಲಿ ಬನವಂತಮ್ಮನ ದೇವಾಲಯವಿದೆ. ತನ್ನ ಮಗ ಕರಿಭಂಟ ಸತ್ತನೆಂದು ತಿಳಿದ ಬನವಂತಮ್ಮ ಈ ಜಾಗದಲ್ಲಿ ಕೊಂಡವಾದಳಂತೆ. ಬನವಂತಮ್ಮ ಕೂಡ ಈ ಭಾಗದ ಪ್ರಭಾವಶಾಲಿ ಗ್ರಾಮದೇವತೆಗಳಲ್ಲೊಬ್ಬಳು. ಈಕೆಯ ಭಕ್ತರಲ್ಲಿ ಸಹ ಗಂಗಡಿಕಾರ ಒಕ್ಕಲಿಗರೇ ಹೆಚ್ಚು. ಬಹಳ ಹಿಂದಿನಿಂದ ಬನವಂತಮ್ಮನ ಪೂಜೆ ಇದ್ದಂತೆ ಕಂಡುಬರುತ್ತದೆ. ಏಕೆಂದರೆ ಮಂಡ್ಯ ಜಿಲ್ಲೆಯ ಜನಪದ ಕಥೆಯೊಂದರಲ್ಲಿ ‘ಅವನು ನಿತ್ಯ ಬನವಂತಮ್ಮನ ಧ್ಯಾನ ಮಾಡುತ್ತಿದ್ದ. ಧ್ಯಾನ ಮಾಡುವಾಗ ಭೂಮಿಬಿಟ್ಟು ಅಂತರಿಕ್ಷದಲ್ಲಿ ನಿಲ್ಲುತ್ತಿದ್ದ. ಅವನು ಎಲ್ಲಿ ಹೋದರೂ ಬನವಂತಮ್ಮನ ಪೂಜೆ ಬಿಡಲಿಲ್ಲ’[2] ಎಂಬ ಉಲ್ಲೇಖ ಬರುತ್ತದೆ

ಮಲ್ಲಿಗನೂರಿನಲ್ಲಿ ತಿಳಿದು ಬಂದ ಸಂಗತಿಯಂತೆ ತೊಣ್ಣೂರಿನ ಕುಂಬಳಮ್ಮ ಉದ್ದಂಡಿ ಮತ್ತು ನಾಗಮಂಗಲ ತಾಲ್ಲೂಕು ದಂಡಿಗನಹಳ್ಳಿಯ ದೈತ್ಯಮ್ಮ ಅಕ್ಕತಂಗಿಯರು. ಕುಂಬಳಮ್ಮನ ಗಂಡ ಭೇತಾಳರಾಜನ ಸೇನಾನಿಯಾಗಿದ್ದನೆಂದು ಈ ಹಿಂದೆಯೇ ಉಲ್ಲೇಖಿಸಲಾಗಿದೆ. ದೈತ್ಯಮ್ಮನನ್ನು ನಾಗಮಂಗಲ ಪ್ರಾಂತ್ಯಕ್ಕೆ ಕೊಟ್ಟು ಮದುವೆಯಾಗಿತ್ತೆಂದೂ ಆಕೆಯ ಗಂಡನೂ ಯುದ್ಧದಲ್ಲಿ ಸತ್ತುದರಿಂದ ಆಕೆ ಅಲ್ಲಿ ಸತಿಯಾದಳೆಂದು ಹೇಳುತ್ತಾರೆ. ಮತ್ತೊಂದು ಹೇಳಿಕೆಯಂತೆ, ಇವರು ಏಳುಜನ ಸಹೋದರಿಯರು. ಈ ಊರಿನ ದೇವಾಲಯಗಳಲ್ಲಿ ಈ ಸಂಗತಿಯನ್ನು ಕುರಿತು ದಾಖಲ್ಲೆಗಳಿದ್ದುವೆಂದೂ ಬಹಳ ಹಿಂದೆಯೇ ಬೆಂಗಳೂರಿನಿಂದ ಯಾರೋ ಸರ್ಕಾರದವರು ಬಂದು ತೆಗೆದುಕೊಂಡು ಹೋದರೆಂದೂ ಹೇಳುತ್ತಾರೆ. ಇದು ಪ್ರಾಯಃ ತೊಣ್ಣೂರು ರಾಕ್ಷಸಿಯ ಕೈಫಿಯತ್ತಾಗಿರಬೇಕು. ಅಂತು ಮಲ್ಲಿಗನೂರಿನಲ್ಲಿ ನಡೆದ ಒಂದು ಯುದ್ಧದ ಹಿನ್ನಲೆಯಲ್ಲಿ ಈ ಕಥೆ ಮೈದಾಳಿದೆ ಎನ್ನುವುದರ ಬಗೆಗೆ ಇಲ್ಲಿ ಸಾಕಷ್ಟು ಆಧಾರಗಳು ದೊರೆಯುತ್ತವೆ.

ಮಲ್ಲಿಗನೂರಿನಲ್ಲಿ ಕರಿಭಂಟನನ್ನು ಕೊಂದ ಉದ್ದಂಡಿ ಮೂಗೂರಿನತ್ತ ಪಲಾಯನ ಮಾಡಿದಳೆಂದು ಕಥಾಸಂದರ್ಭದಲ್ಲಿ ಹೇಳಿದೆ. ಮೂಗುರು ಹತ್ತಿರದ ಹೊಸಹಳ್ಳಿ ಅಮ್ಮನಕೆರೆಯಲ್ಲಿ ತನ್ನ ರಕ್ತಸಿಕ್ತ ಕೈಕಾಲುಗಳನ್ನು ತೊಳೆದುಕೊಂಡಳಂತೆ. ಆದುದರಿಂದಲೇ ಆ ಕೆರೆಯ ನೀರು ಈಗಲೂ ಕೆಂಪಾಗಿರುವುದು. ಅಲ್ಲಿಂದ ಹೊರಟ ಆಕೆ ಹೂವಾಡಿಗರ ಕೇರೆಯ ನೆಲ ಮಾಳಿಗೆಯೊಂದರಲ್ಲಿ ಅವಿತುಕೊಂಡಳು. ಆದರೆ ಸೈನಿಕರು ಅವಳನ್ನು ಪತ್ತೆ ಹಚ್ಚಿ ಸರಪಳಿಗಳಿಂದ ಬಂಧಿಸಿ ಎಳೆದೊಯ್ದರು. ಈಗ ಆ ಜಾಗದಲ್ಲಿ ಒಂದು ದೇವಾಲಯ ನಿರ್ಮಿಸಲಾಗಿದೆ. ಅಲ್ಲಿರುವ ಉದ್ದಂಡಿಯ ವಿಗ್ರಹವನ್ನು ಸರಪಳಿಗಳಿಂದ ಬಂಧಿಸಲಾಗಿದೆ. ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಸಮಯದಲ್ಲಿ ಈ ವಿಗ್ರಹವನ್ನು ಹೊರತರಲಾಗುವುದಂತೆ. ಇವಿಷ್ಟು ಉದ್ದಂಡಿಯ ಬಗೆಗೆ ದೊರೆಯುವ ಕುರುಹುಗಳು.

ಈ ಘಟನೆಯನ್ನಾಧರಿಸಿ ಮೊಟ್ಟಮೊದಲ ಕಾವ್ಯವೊಂದನ್ನು ಬರೆದವನು ಕೆಂಪಣ್ಣಗೌಡ ಎಂಬುವನು. ಈತ ಮಲ್ಲಿಗನೂರಿನ ಸುತ್ತಮುತ್ತಲಿನ ಯಾವುದೋ ಊರಿಗೆ ಸೇರಿದವನಿರಬೇಕು. ಅದರಲ್ಲೂ ವಿಶೇಷವಾಗಿ ಲೋಕಪಾವನಿ ನದಿ ಮುಖಭೂಮಿಯವನಿರಬೇಕೆಂದು ತೋರುತ್ತದೆ. ಈತನ ಕಾವ್ಯದಿಂದ ತಂದೆ, ತಾಯಿ ತಿಳಿಯುತ್ತಾದಾರದರೂ ಇತನ ಸ್ಥಳದ ಸುಳಿವು ದೊರೆಯುವುದಿಲ್ಲ. ಕವಿ ಸ್ವವಿಷಯವಾಗಿ, ಕಾವ್ಯಾರಂಭದಲ್ಲಿ

ಸೂಕ್ಷ್ಮದೊಳೀಕೃತಿ ಸುಲಭವಾಗಿರಲು
ಯಕ್ಷಗಾನವ ಮಾಡಿದವರಾರೆನಲು
ಸವುಭಾಗ್ಯ ಸಕಲಗುಣಸಂಪನ್ನ
ಸುವಿವೇಕೆ ಕೆಂಪಣ್ಣಗೌಡನದೆನ್ನಿ – ಎಂದು

ತನ್ನ ಬಗ್ಗೆ ಹೇಳಿಕೊಂಡಿದ್ದಾನೆ. ಈತನ ತಂದೆ ಕೆಂಪೇಗೌಡ, ತಾಯಿ ತಿಮ್ಮಮ್ಮ. ಈತನು ಒಕ್ಕಲಿಗ ಅದರಲ್ಲೂ ಗಂಗಡಿಕಾರ ಒಕ್ಕಲಿಗ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಕೆಲವು ವರ್ಣನೆಗಳಿಂದ ಈತನು ಕರಿಭಂಟನ ಕಾಳಗ ನಡೆದ ಪ್ರಾಂತ್ಯದವನಿರಬೇಕೆಂದು ಊಹಿಸಲವಕಾಶವಿದೆ. ಏಕೆಂದರೆ ಧಾರಾಪುರದಿಂದ ಹಳೇಬೀಡಿಗೆ ಹೊರಟ ಕರಿರಾಯ

ಭೀಕರದಿ ಸಕಲಬಲ ಸಹಿತ
ಜೋಕೆಯಿಂಕರಿಗಿರಿಯಿಳಿದು
ಲೋಕಪಾವನಿಯನ್ನು ಕಂಡ ಕರಿರಾಯ

ಲೋಕಪಾವನಿ ನಾಗಮಂಗಲ ತಾಲೂಕಿನಲ್ಲಿ ಹುಟ್ಟಿ ಕರಿಘಟ್ಟದ ಹತ್ತಿರ ಕಾವೇರಿ ಸೇರುವ ಒಂದು ನದಿ. ಕೆಂಪಣ್ಣಗೌಡ ಕಾವೇರಿಗಿಂತ ಮೊದಲು ಕಾಣುವುದು ಲೋಕಪಾವನಿಯನ್ನು. ಆದುದರಿಂದ ಈತನು ಲೋಕಪಾವನಿಯ ಮುಖಜಭೂಮಿಗೆ ಸೇರಿದ ಯಾವುದೋ ಹಳ್ಳಿಯವನಿರಬೇಕು ಎಂದು ಊಹಿಸಬಹುದು. ತನ್ನ ಸುತ್ತಮುತ್ತ ನಡೆದ ಈ ಕಥೆಯನ್ನು ಹಿರಿಯರಿಂದ ಕೇಳಿ ಕಾವ್ಯರೂಪಕ್ಕೆ ಇಳಿಸಿರಬೇಕು. ಕೆಂಪಣ್ಣಗೌಡ ಯಕ್ಷಗಾನ ನಳ ಚರಿತ್ರೆಯನ್ನೂ ಬರೆದಿದ್ದಾನೆ.

ಕೆಂಪಣ್ಣಗೌಡನ ಕಾಲವನ್ನು ಕುರಿತು ಕವಿಚರಿತೆಕಾರರು ಸುಮಾರು ೧೭೫೦ ಎಂದು ಹೇಳಿದ್ದಾರೆ. ಆದರೆ ೧೫೮೦ರಲ್ಲಿ ಚೋರಕಥೆಯನ್ನು ಬರೆದ ಕಸ್ತೂರಿ ಸಿದ್ಧ

ಕರಿಯಭಂತನ ತೊಂಡನೂರು ರಕ್ಕಸಿ ಕೊಂದ
ತೆರನಂತೆ ಕೊಂದಳೇ ತರುಣಿ ನಿಷ್ಕರುಣಿ.

ಎಂದು ಹೇಳಿದ್ದಾನೆ. ಆದುದರಿಂದ ಕ್ರಿ.ಶ. ೧೫೮೦ಕ್ಕಿಂತ ಮುಂಚೆಯೇ ಕೆಂಪಣ್ಣಗೌಡನ ಕಾವ್ಯವು ರಚಿತವಾಗಿ ಪ್ರಸಿದ್ಧವಾಗಿರುವ ಸಾಧ್ಯತೆಗಳಿವೆ. ಈ ಕಾರಣದಿಂದಾಗಿ ಕೆಂಪಣ್ಣಗೌಡ ೧೫೮೦ಕ್ಕೂ ಹಿಂದೆಯೇ ಕಾವ್ಯರಚನೆ ಮಾಡಿದ್ದಾನೆಂದು ಹೇಳಬಹುದು.

ಕೆಂಪಣ್ಣಗೌಡನ ಕರಿಭಂಟ ಕಾಳಗ ಯಕ್ಷಗಾನ ಕಾವ್ಯವನ್ನು ಮೊಟ್ಟಮೊದಲುಗೆ ನಾಟಕವಾಗಿ ಪರಿವರ್ತಿಸಿದವನು ಸು. ೧೭೫೦ರಲ್ಲಿದ್ದ ಹಲಗಮ್ಮನ ಮಗ ಭಾಳಾಕ್ಷ. ಅಲ್ಲಿಂದ ಮುಂದೆ ಅನೇಕರು ಈ ಕಥೆಯನ್ನು ನಾಟಕವಾಗಿ ಅಳವಡಿಸಿಕೊಂಡಿದ್ದಾರೆ. ಕನ್ನಡನಾಡಿನ ಅನೇಕ ಕಡೆಗಳಲ್ಲಿ ಕರಿಭಂಟನ ಕಾಳಗ ನಾಟಕದ ಹಸ್ತಪ್ರತಿಗಳು ದೊರೆಯುತ್ತವೆ. ಆದರೆ ಈ ನಾಟಕ ಮಾಡಿದ ಅನೇಕರು ಮೂಲಕೃತಿಯನ್ನಾಗಲಿ, ಕವಿಯನ್ನಾಗಲಿ ನೆನೆಯುವುದಿಲ್ಲ. ಹೀಗೆ ಕರಿಭಂಟನ ಕಾಳಗ ಯಕ್ಷಗಾನ ಸಾಹಿತ್ಯ ವಿಪುಲವಾಗಿ ಬೆಳೆದುಕೊಂಡಿದೆ.

ಕೆಂಪಣ್ಣಗೌಡನ ಪ್ರಕಾರ ಕರಿಭಂಟ ಒಕ್ಕಲಿಗನೆಂದು ತಿಳಿದುಬರುತ್ತದೆ. ಕವಿ ಈ ವಿಚಾರವನ್ನು ಸಂದರ್ಭಾನುಸಾರವಾಗಿ ಸೂಚಿಸಿದ್ದಾನೆ. ಪುಂಡರೀಕಾಕ್ಷಿಯು ತನ್ನನ್ನು ಮದುವೆಯಾಗುವಂತೆ ಕೇಳಿದಾಗ ಕರಿಭಂಟ

ರಕ್ಕಸರ ಮನೆಯೊಳಗೆ ಹೊಕ್ಕು ಅನ್ನವ ಕೊಳಲು
ದಕ್ಕುವುದೆ ಹಾಲಂತ ವಕ್ಕಲಿಗರೆಮಗೆ
ರಕ್ಕಸರ ಸತಿಪೋಗಿ ವಕ್ಕಲಿಗನನೊಡಗೂಡಿ
ದಿಕ್ಕಿನೊಳಗಪಕೀರ್ತಿಯಿಕ್ಕಿದಳು ನಿನಗೆ.

ಎಂದು ಹೇಳುತ್ತಾನೆ. ಇದರಿಂದ ಕರಿಭಂಟನು ಗಂಗವಂಶಕ್ಕೆ ಸೇರಿದವನಾಗಿರಬೇಕೆಂದು ಊಹಿಸಲು ಅವಕಾಶವಿದೆ. ಆನಂತರ ಈ ಕಥೆಯನ್ನು ನಾಟಕವಾಗಿ ಪರಿವರ್ತಿಸಿಕೊಂಡವರು ಕರಿಭಂಟನನ್ನು ಶೈವ, ಕ್ಷತ್ರೀಯ ಹೀಗೂ ಬದಲಾಯಿಸಿಕೊಂಡಿದ್ದಾರೆ. ಆದರೆ ಈ ಬದಲಾವಣೆಗಳೆಲ್ಲವೂ ತೀರಾ ಇತ್ತೀಚಿನವು.

 

[1] ಕರಿಭಂಟನ ಐತಿಹಾಸಿಕತೆ ಚಂದ್ರವಳ್ಳಿ ಶ್ರಿ. ಎಸ್. ವಿ. ಗೌಡೂರ್.

[2] ನಮ್ಮೂರಿನ ಜನಪದ ಕಥೆಗಳು, ದೊ. ನ. ರಾಮೇಗೌಡ, ಪುಟ ೩೫.