ಕರಿಭಂಟನ ಕಾಳಗದ ಈ ಘಟನೆಯಲ್ಲಿ ಗಮನಾರ್ಹವಾದ ಮತ್ತೊಂದು ಅಂಶ ಕಂಡುಬರುತ್ತದೆ. ಇಂದೂ ತೊಣ್ಣೂರಿನ ಸುತ್ತಮುತ್ತಲಿನ ಜನರಲ್ಲಿ ಕರಿಭಂಟ ಕಾಳಗದ ಎಲ್ಲ ಪಾತ್ರಗಳೂ ದೇವತೆಗಳೆಂಬ ನಂಬಿಕೆ ಇರುವುದು. ಮೈಸೂರು, ಮಂಡ್ಯ ಜಿಲ್ಲೆಯ ಹೊರಗೆ ಉದ್ದಂಡಿಯನ್ನಾಗಲಿ, ಬನವಂತಾದೇವಿಯನ್ನಾಗಲಿ ದೇವತೆ ಎಂದು ಪೂಜಿಸುವ ಸಂಪ್ರದಾಯ ಕಂಡುಬರುವುದಿಲ್ಲ. ಇದರ ಸುಳಿವು ಕೆಂಪಣ್ಣಗೌಡನಲ್ಲಿಯೂ ಮತ್ತು ಕೆಲವು ಪ್ರಾಚೀನ ನಾಟಕಕಾರರಲ್ಲಿಯೂ ದೊರೆಯುತ್ತದೆ. ಉದ್ದಂಡಿಯು ಪಾರ್ವತಿಯ ಮಾಲೆಗಾರ್ತಿ. ಶಾಪಗ್ರಸ್ತೆಯಾಗಿ ಆಕೆ ಭೂಲೋಕದಲ್ಲಿ ಜನಿಸಿದಳು. ಅದರ ಕಥೆ ಹೀಗಿದೆ. ಒಂದು ದಿನ ಶಿವಪಾರ್ವತಿಯರು ಏಕಾಂತದಲ್ಲಿದ್ದರು. ಶಿವ ಪಾರ್ವತಿಗೆ ಕಥೆಯೊಂದನ್ನು ಹೇಳುತ್ತಿದ್ದ. ಕಾರಣಾಂತರದಿಂದ ಅಲ್ಲಿಗೆ ಬಂದ ಮಾಲೆಗಾರನ ಮಗಳು ಶಿವಪಾರ್ವತಿಯರ ಸಂವಾದವನ್ನು ಕದ್ದು ಕೇಳಿಸಿಕೊಂಡಳು. ಇದನ್ನು ತಿಳಿದ ಪಾರ್ವತಿ ಭೂಲೋಕದಲ್ಲಿ ರಾಕ್ಷಸಿಯಾಗಿ ಜನಿಸುವಂತೆ ಅವಳಿಗೆ ಶಾಪಕೊಟ್ಟಳು. ಆಗ ಆ ತರುಣಿ ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಶಾಪ ವಿಮೋಚನೆಯನ್ನು ಬೇಡಿದಳು. ಕರಿಭಂಟನ ಎದೆಯ ರಕ್ತ ಕುಡಿದ ದಿನ ನಿನ್ನ ಶಾಪ ವಿಮೋಚನೆ ಎಂದಳು ಪಾರ್ವತಿ. ಅದರಂತೆ ಆಕೆ ತೊಂಡನೂರಿನಲ್ಲಿ ರಾಕ್ಷಸಿಯಾಗಿ ಹುಟ್ಟಿದಳು. ಒಂದು ದಿನ ಶಿವನು ಪಾರ್ವತಿಯನ್ನು ಕುರಿತು –

ಗಿರಿಜೆ ಕೇಳಾ ವನದಿ ಚರಿಸುತ
ಇರಲು ಹರುಷದಿ ಕರಿಯರಾಯನು
ಧರೆಗೆ ಶೋಭಿಸುತ್ತಿತ್ತ ರಂಜಿಪ ತೊಂಡನೊರೊಳಗೆ
ಭರದಿ ನಮ್ಮಯ ಮಾಲೆಗಾರನ
ತರುಣಿ ರಾಕ್ಷಸಿಯಾಗಿ ನಿನ್ನಯ
ವರದೊಳಿಹಳಾ ಬೊಮ್ಮನೆಂದೆಂಬನುಜನೊಡಗೊಡಿ

ಎಂದು ಹೇಳುತ್ತಾನೆ. ಉದ್ದಂಡಿ ಆದಿಶಕ್ತಿಯ ಶಾಪದಿಂದ ಹುಟ್ಟಿದವಳು ದೇವತೆ ಎಂಬ ನಂಬಿಕೆ ಇದು ಆಧಾರವಾಗಿರುವಂತೆ ಕಾಣುತ್ತದೆ.

ಜನಪದ ಸಾಹಿತ್ಯದಲ್ಲಿ ರಾಕ್ಷಸಿಯಾಗಿರುವ ಉದ್ದಂಡಿ ಈ ಸುತ್ತಿನ ಜನರ ಗ್ರಾಮ ದೇವತೆಯಾಗಿದ್ದಾಳೆಂಬುದು ಈಕೆ ಸತಿಯಾದವಳೊಬ್ಬಳಿರಬೇಕೆಂದು ಸೂಚನೆ ಕೊಡುತ್ತದೆ. ಒಕ್ಕಲಿಗರಲ್ಲಿ ಮನೆದೇವತೆಯರೆಂದು ಕರೆಯುವವರು ಆಯಾ ವಂಶದಲ್ಲಿ ಸತಿಯಾದವರಾಗಿರುತ್ತಾರೆ. ಅಲ್ಲದೆ ಈ ಜನಾಂಗದಲ್ಲಿ ದೇವತೆಯರು ಎಲ್ಲಾ ಕಡೆಯೂ ಒಂದೇ ತೆರನಾಗಿರುವ ಉದಾಹರಣೆಗಳೂ ಉಂಟು. ಇಲ್ಲಿನ ಜನ ಈ ದೇವತೆಗೆ ತುಂಬಾ ನಿಷ್ಠೆಯಿಂದ ನಡೆದುಕೊಳ್ಳುತ್ತಾರೆ. ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಈ ದೇವತೆಯ ಹಬ್ಬದಲ್ಲಿ ಮನೆ ಮಂದಿಗೆಲ್ಲ ಹೊಸಬಟ್ಟೆ, ಮನೆಗೆ ಹೊಸ ಮಡಿಕೆ, ಹೀಗೆ ಪ್ರತಿಯೊಂದು ಹೊಸದಾಗಿರಬೇಕು. ಈ ಸಂಪ್ರದಾಯ ಬನವಂತೆಗೂ ಅನ್ವಯವಾಗುತ್ತದೆ. ಹೀಗಾಗಿ ಯಕ್ಷಗಾನ ನಾಟಕಕಾರರಿಗೆ ರಾಕ್ಷಸಿಯಾಗಿರುವ ಈ ಕಥೆಯ ವ್ಯಕ್ತಿಗಳೆಲ್ಲ ಈ ಸುತ್ತಿನ ಜನರಿಗೆ ಪೂಜ್ಯರಾಗಿರುವುದು ಕುತೂಹಲಕಾರಿಯಾದ ಸಂಗತಿಯಾಗಿ ಕಂಡುಬರುತ್ತದೆ

ಕರಿಭಂಟನಕಾಳಗ ಚಾರಿತ್ರಿಕ ಘಟನೆಯೆ? ಎಂಬುದೊಂದು ಸಮಸ್ಯೆ. ಪ್ರತಿಯೊಂದು ಕಥೆಯೂ ನಡೆದ ಒಂದು ಘಟನೆಯ ಹಿನ್ನೆಲೆಯಲ್ಲಿಯೇ ರೂಪಿತವಾಗಿರುತ್ತದೆ ಎಂಬುದೊಂದು ನಂಬಿಕೆ. ಕರಿಭಂಟನ ಕಥೆ ಚಾರಿತ್ರಿಕ ಘಟನೆ ಎಂದು ಪ್ರತಿಪಾದಿಸ ಹೊರಟವರಲ್ಲಿ ದಿವಂಗತ ಹುಲ್ಲೂರು ಶ್ರೀನಿವಾಸ ಜೋಯಿಸರು ಪ್ರಮುಖರು. ಈ ಬಗೆಗೆ ಅವರು ಅಪಾರವಾಗಿ ಕೆಲಸ ಮಾಡಿ ಒಂದು ಗ್ರಂಥವನ್ನೇ ರಚಿಸಿದ್ದಾರೆಂದು ಗೊತ್ತಾಗಿದೆ. ಆದರೆ ಆ ಗ್ರಂಥ ಇನ್ನೂ ಅಪ್ರಕಟಿತ. ಶ್ರೀಜೋಯಿಸರ ಅಪ್ರಕಟಿತ ಗ್ರಂಥಗನ್ನು ಅವಲೋಕಿಸಿ ಇತ್ತೀಚೆಗೆ ಶ್ರೀ ಎಸ್. ವಿ. ಗೌಡರ್ ಎಂಬುವರು ‘ಕರಿಭಂಟನ ಐತಿಹಾಸಿಕತೆ’ ಎಂಬ ತಮ್ಮ ಲೇಖನದಲ್ಲಿ ಇದೊಂದು ಚಾರಿತ್ರಿಕ ಘಟನೆ ಎಂದು ಪ್ರತಿಪಾದಿಸಲು ಯತ್ನಿಸಿದ್ದಾರೆ. ಆದರೆ ಅವರು ಇಲ್ಲಿನ ಪಾತ್ರಗಳೆಲ್ಲ ಚಾರಿತ್ರಿಕ ವ್ಯಕ್ತಿಗಳೆಂದು ಹೇಳುವ ಚಾರಿತ್ರಿಕ ಘಟನೆಗಳು ಕಾಲದ ಮತ್ತು ವ್ಯಕ್ತಿಗಳ ದೃಷ್ಟಿಯಿಂದ ಪರಸ್ಪರ ಹೊಂದಿಕೊಳ್ಳುವುದಿಲ್ಲ. ಈ ಹಿನ್ನಲೆಯಲ್ಲಿ ಕರಿಭಂಟನ ಕಾಳಗ ಚಾರಿತ್ರಿಕ ಘಟನೆಯೆ? ಎಂಬುದನ್ನು ನಾನಿಲ್ಲಿ ಪರಿಶೀಲಿಸಿದ್ದೇನೆ.

ಕರಿಭಂಟನ ಕಥೆ, ಧಾರಾಪುರ, ಗೌತಮಕ್ಷೇತ್ರ, ತೊಣ್ಣೂರು, ಮಲ್ಲಿಗನೂರು ಮತ್ತು ಹಳೇಬೀಡಿನ ಹಿನ್ನೆಲೆಯಲ್ಲಿ ನಡೆಯುತ್ತದೆ. ಬಲ್ಲಾಳರಾಯ, ಮಾರಭೂಪ, ಕರಿರಾಯ, ಭೇತಾಳರಾಜ, ಉದ್ದಂಡಿ ಬನವಂತೆ, ಬೊಮ್ಮ, ಪುಂಡರೀಕಾಕ್ಷಿ ಈ ಕಥೆಯ ಪ್ರಮುಖ ಪಾತ್ರಗಳು, ಈ ಊರುಗಳು ಮತ್ತು ವ್ಯಕ್ತಿಗಳು ಚರಿತ್ರೆಯ ಯಾವ ವ್ಯಕ್ತಿ ಮತ್ತು ಊರುಗಳಿಗೆ ಅನ್ವಯವಾಗುತ್ತವೆಂಬುದನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯವಾಗಿ ಕಾಣುತ್ತದೆ.

ಮೊದಲನೆಯದಾಗಿ ಧಾರಾಪುರ ಯಾವುದು ಎಂಬ ಸಮಸ್ಯೆ ನಮಗೆ ಎದುರಾಗುತ್ತದೆ. ಈ ಕಥೆಯನ್ನು ಮೊಟ್ಟಮೊದಲಿಗೆ ಕಾವ್ಯದ ವಸ್ತುವಾಗಿ ಉಪಯೋಗಿಸಿಕೊಂಡ ಕೆಂಪಣ್ಣಗೌಡ ಧಾರಾಪುರದ ಬಗೆಗೆ ಹೀಗೆ ಹೇಳಿದ್ದಾನೆ.

ಮೇರುವೆಯ ದಕ್ಷಿಣದ ದೆಸೆಗಾ ಕಾ
ಶ್ಮೀರ ದೇಶದ ಮಧ್ಯೆಯೆಸೆವುದು
ಭೂರಿಭೂಪರ ಭೀತಿಗೊಳಿಸುವ ಧಾರಾಪುರವು.

ಮೇರುವೆಗೆ ದಕ್ಷಿಣದಲ್ಲಿ ಧಾರಾಪುರವಿದೆ ಎಂಬುದು ಕವಿಯ ಅಭಿಪ್ರಾಯ. ತಲಕಾಡಿಗೆ ದಕ್ಶಿಣ ಕಾಶ್ಮೀರವೆಂದೂ, ದಕ್ಷಿಣ ಕಾಶಿಯೆಂದೂ ಕರೆಯಲಾಗುತ್ತಿತ್ತೆಂದು ಕೆಲವು ಆಧಾರಗಳು ಸೂಚಿಸುತ್ತವೆ. ಏಕೆಂದರೆ ಈ ಭಾಗ ಗಜಾರಣ್ಯವೆಂಬ ಹೆಸರಿನಿಂದ ಪ್ರಸಿದ್ಧವಾದುದಾಗಿದೆ. ಈ ಧಾರಾಪುರವನ್ನು ಆಳುವ ರಾಜ ಮಾರಭೂಪನನ್ನು ಕುರಿತು ಹೇಳುವಾಗ ಕೆಂಪಣ್ಣಗೌಡ.

ಲಾಳ ರಾಜನ ರಾಜ್ಯ ಪಾಳುಮಾಡಿಹನು
ಚೋಳರಾಜನ ನೆರೆಯೊಳಾಳಿಕೊಂಡಿಹನು

ಎಂದು ಹೇಳಿದ್ದಾನೆ. ಚೋಳರಾಜ್ಯದ ನೆರೆಯರಾಜ್ಯಗಳಲ್ಲಿ ಪ್ರಮುಖವಾದುದು ತಲಕಾಡು. ತಲಕಾಡಿಗೆ ದಲವನಪುರ ಎಂಬ ಹೆಸರಿದ್ದ ಬಗ್ಗೆ ಉಲ್ಲೇಖಗಳಿವೆ. The erliest authentic notice of the city of Tarakad or Tajkad in sanskrit Dalavana pura in Karnataka Desha”.

[1] ಮೇಲೆ ಸೂಚಿಸಿದ ಆಧಾರಗಳಿಂದ ತಲಕಾಡನ್ನೇ ಕೆಂಪಣ್ಣಗೌಡ ಧಾರಾಪುರ ಎಂದು ಬದಲಾಯಿಸಿ ಹೇಳಿರುವ ಸಾಧ್ಯತೆ ಕಂಡುಬರುತ್ತದೆ.

ಧಾರಾಪುರವನ್ನು ತಲಕಾಡು ಎಂದು ಒಪ್ಪಿಕೊಂಡರೆ ಮಾರಭೂಪಾಲ ಯಾರು ಎಂಬ ಸಮಸ್ಯೆ ತಲೆದೋರುತ್ತದೆ. ಆಗ ಸುಪ್ರಸಿದ್ಧ ಗಂಗದೊರೆಯಾದ ಮುಮ್ಮಡಿ ಮಾರಸಿಂಹನೇ ಈ ಮಾರಭೂಪನಿರಬಹುದೆಂದೆನಿಸುತ್ತದೆ. ಆದರೆ “ಬಲ್ಲಾಳರಾಯನಿಗೆ ಸಮಕಾಲೀನನಾದ ಮಾರಭೂಪಾಲ ಎಂಬ ರಾಜನೆಂದರೆ ತಲಕಾಡು ಗಂಗರಸ ಮುಮ್ಮಡಿ ಮಾರಸಿಂಹ” ಎಂಬ ವಾದವನ್ನು ಒಪ್ಪಲಾಗುವುದಿಲ್ಲ. ಏಕೆಂದರೆ “ಸಳನು ಕ್ರಿ.ಶ. ೯೪೮ ರಿಂದ ೧೦೪೩ರವರೆಗೆ ರಾಜ್ಯವಾಳಿದನೆಂದು ಕೆಲವಾರು ಶಾಸನಗಳೂ ಚನ್ನಬಸವ ಕಾಲಜ್ಞಾನವೂ ತಿಳಿಸುತ್ತವೆ. ಜನಶ್ರುತಿಯಾದರೊ ಈ ಹೇಳಿಕೆಗೆ ಸಮರ್ಥನೆ ಕೊಟ್ಟಿಲ್ಲ. ಸಳನು ಕ್ರಿ.ಶ. ೧೦೭೩ರಲ್ಲಿ ಉತ್ತರದಿಂದ ಹಳೆಯಬೀಡಿಗೆ ಬಂದು ಶಕಪುರಿಯಲ್ಲಿ ನೆಲಸಿದನೆಂಬುದೇನೋ ಪ್ರಚಾರದಲ್ಲಿರುವ ಐತಿಹ್ಯ” ಮುಮ್ಮಡಿ ಮಾರಸಿಂಹನು ಕ್ರಿ.ಶ. ೯೬೦ ರಿಂದ ೯೭೩ ರವಗೆಗೆ ಆಳಿದನು. ಹೊಯ್ಸಳ ವಂಶದ ಮೂಲಪುರುಷನಾದ ಸಳನು ಕ್ರಿ.ಶ. ೧೦೭೩ರಲ್ಲಿ ಶಕಪುರಿಯಲ್ಲಿ ನೆಲಸಿದನೆಂಬ ಜಿನಶ್ರುರಿಯನ್ನು ತಿರಸ್ಕರಿಸಿ ೯೪೮ ನ್ನು ಒಪ್ಪಿಕೊಂಡರೂ ಮಾರಸಿಂಹ ಸಳನಿಗೆ ಸಹ ಸಮಕಾಲೀನನಾಗುವುದಿಲ್ಲ.

ಕರಿಭಂಟನ ಕಾಳಗದಲ್ಲಿ ಹಳೇಬೀಡಿನ ರಾಜನನ್ನು ಬಲ್ಲಾಳರಾಯ ಎಂದುಕರೆಯಲಾಗಿದೆ. ಸಳನಿಗಾಗಲಿ ಅವನ ನಂತರ ಬಂದ ಎರೆಯಂಗನವರೆಗಿನ ಹೊಯ್ಸಳ ರಾಜರಿಗಾಗಲಿ ಬಲ್ಲಾಳ ರಾಯನೆಂಬ ಹೆಸರಿದ್ದಂತೆ ಕಂಡುಬರುವುದಿಲ್ಲ. ಹೊಯ್ಸಳ ರಾಜರೆಲ್ಲರನ್ನೂ ಬಲ್ಲಾಳರಾಯರೆಂದು ಕರೆಯುವ ಸಂಪ್ರದಾಯವಿತ್ತೆಂದು ಕೆಲವು ಚರಿತ್ರಕಾರರ ಅಭಿಪ್ರಾಯವಿದೆಯಾದರೂ ಇದಕ್ಕೆ ಸರಿಯಾದ ಶಾಸನಾಧಾರಗಳು ದೊರೆಯುವುದಿಲ್ಲ. ಕ್ರಿ.ಶ. ೧೧೦೦ರಿಂದ ೧೧೦೬ ರ ವರೆಗೆ ಹೊಯ್ಸಳ ರಾಜನಾಗಿದ್ದ ಒಂದನೆಯ ಬಲ್ಲಾಳನಿಂದ ಈ ಹೆಸರು ಪ್ರಸಿದ್ಧಿಗೆ ಬಂದಿರುವಂತೆ ಕಾಣುತ್ತದೆ. ಒಂದನೆಯ ಬಲ್ಲಾಳ ಕ್ರಿ.ಶ. ೧೧೦೩ರಲ್ಲಿ ನಾಗಮಂಗಲ ತಾಲ್ಲೂಕು ಅಳೇಸಂದ್ರದ ಮರಿಯಣ್ಣ ಡಣಾಯಕನ ಮಗಳಂದಿರಾದ ಪದ್ಮಲಾದೇವಿ, ಚಾಮಲಾದೇವಿ, ಮತ್ತು ಬೊಪ್ಪಾದೇವಿಯರನ್ನು ಒಂದೇ ಹಸೆಯಲ್ಲಿ ಮದುವೆಯಾದ ವಿಷಯ ಶಾಸನೋಕ್ತವಾಗಿದೆ. ಅಲ್ಲಿಂದೇಚೆಗೆ ಈ ಸುತ್ತಿನಲ್ಲಿ ಬಲ್ಲಾಳರಾಯ ಎಂಬ ಹೆಸರು ಜನಪ್ರಿಯವಾಗಿರುವಂತೆ ಕಂಡುಬರುತ್ತದೆ. ಆದರೆ ಈ ಒಂದನೆಯ ಬಲ್ಲಾಳರಾಯ ಮುಮ್ಮಡಿ ಮಾರಸಿಂಹನಿಗೆ ಸಮಕಾಲೀನನಾಗುವುದು ಅಸಂಭಾವ್ಯವೇ ಸರಿ.

ಗಂಗದೊರೆ ಮುಮ್ಮುಡಿ ಮಾರಸಿಂಹನು ಕರಿಭಂಟನ ತಂದೆಯಾಗಲಿ, ಬಲ್ಲಾಳರಾಯನ ಸಮಕಾಲೀನನಾಗಲಿ ಆಗುವುದು, ಕಾಲದ ದೃಷ್ಟಿಯಿಂದ ಸಾಧ್ಯವಿಲ್ಲ ಎಂಬುದು ಖಚಿತವಾಗಿದೆ. ಧಾರ್ಮಿಕವಾಗಿ ಕೂಡ ಈ ಇಬ್ಬರು ರಾಜರ ಮಧ್ಯೆ ಕೊಳುಕೊಡುಗೆ ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ. “Marasimha was an ordent Jaina who was not only liberal in tha grant of land and money to jaina temples But was a deciple of notable acharayas of the day”.[2] ಮಾರಭೂಪಾಲ ಮತ್ತು ಕರಿಭಂಟರು ಶೈವಸಂಪ್ರದಾಯದ ರಾಜರು. ಹಾಗಾದರೆ ಈ ಮಾರಸಿಂಹರು ಯಾರು ಎಂಬ ಸಮಸ್ಯೆ ಉದ್ಭವಿಸುತ್ತದೆ. ಈ ಬಗೆಗೆ ಶೈವಕಥೆಯೊಂದು ಉಲ್ಲೇಖಾರ್ಹವೆನಿಸುತ್ತದೆ. “ಮಾರಗೌಡನೆಂಬ ಹಲಾಯುಧ ಭಕ್ತನು ಬೇಸಾಯ ಮಾಡಿ ಹದಿನೆಂಟು ಧಾನ್ಯವ ಬೆಳೆದು ರಾಜನಿಗೆ ತೆಱೆ ಹೊಱೆ ವಟ್ಟವಾಸಿ ಕಾಣಿ ಕಡ್ಡಾಯ ಬಿಟ್ಟಿ ಬಿಡಾರವಂ ಮಾಡಿ ಬೆಳೆದ ದವಸಮಂ ರಾಜಪಾಲೆಂದು ಕೋರನಿಕ್ಕಿ ತನಗೆ ಉಳಿದ ದವಸದಲ್ಲಿ ನಿರ್ವಂಚನೆಯಿಂದ ಜಂಗಮಾರ್ಚನೆಯ ಮಾಡುತ್ತಿರಲು ಕಂಡು ಲೋಕ ಕೀರ್ತಿಸುತ್ತಿರಲೊಂದು ದಿನ ಶಿವನು ಜಂಗಮನಾಗಿ ಬಂದು ಮಾರಗೌಡನು ನೆಲ್ಲ ರಾಶಿಯ ತೂರುವಾಗ ಬಂದು ಕಣದೊಳಗೆ ನಿಂದು “ನಿನ್ನ ಧಾನ್ಯ ಹುಲುಸಾಗುವುದಕ್ಕೆ ಪರುಷವ ಕೊಡುವೆನು ಕಾಣ ಮಾರಗೌಡ! ಈ ಪರುಷದಿಂದ ಕರ್ಬುನವ ಮುಟ್ಟಿಸಿ ಚಿನ್ನವ ಮಡಿಕೊ ಎಂದು ಕೊಡಲು ಅದನೊಲ್ಲದೆ ಮಾರಗೌಡನು ತೂರಿದ ನೆಲ್ಲ ರಾಶಿಯ ಬೂದಿಯಿಂದ ಸುತ್ತುಗಟ್ಟಿ ಮನಹರುಷದಿಂದ ನೆನೆದು ಹೊನ್ನರಾಶಿಯ ಮಾಡಿ ‘ನನ್ನ ಪರುಷದಿಂದಾದ ಹೊನ್ನ ರಾಶಿಯ ನೀನು ಕೊಂಡು ಪೋಗು ವಡೆಯರೆ” ಎಂದು ಕೊಂಗ ಗಾಲಿಮೊಱದಲ್ಲಿ ತುಂಬಿ ಮಡಗಲಾ ಶಿವನು ನಾಚಿ ನನ್ನ ಭಕ್ತರಿಗೆ ಉತ್ತುಬಿತ್ತಿದ ಧನ ಧಾನ್ಯವೆ ಭಕ್ತಪರುಷದಿಂದ ಹೊನ್ನರಾಶಿಯಾಯಿತ್ತೆಂದು ಗಿರಿಜೆಗೆ ಪೇಳಿ ಶಿವನು ಮೆಚ್ಚಿ ಮಾರಗೌಡನ ಕೈಲಾಸಕ್ಕೆ ಕರೆದೊಯ್ದರು”.[3]

ಮೇಲಿನ ಕಥೆಯಲ್ಲಿಯೂ ಶಿವಪಾರ್ವತಿಯರಿದ್ದಾರೆ. ಅವರ ಸಂವಾದದಲ್ಲಿಯೇ ಈ ಮಾರಗೌಡನ ಕಥೆಯ ವಿಷಯ ಬರುತ್ತದೆ. ಅಲ್ಲದೆ ಭೈರವೇಶವರ ಕಾವ್ಯದ ನೆಲೆಯೂ ಮಂಡ್ಯ ಜಿಲ್ಲೆಯೆ ಆಗಿದೆ. ಕಥೆಯಲ್ಲಿ ಬರುವ ‘ತೆಱೆ ಹೊಱೆ ವಟ್ಟ ವಾಸಿ’ ಮುಂತಾದ ಪದಗಳ ಶಾಸನಗಳಲ್ಲಿ ಬರುವಂಥವು. ಆದುದರಿಂದ ಮಾರಗೌಡ ಶೈವ ಸಂಪ್ರದಾಯದ ಸಾಮಂತ ರಾಜನೊ ಪಾಳೆಯಗಾರನೊ ಆಗಿದ್ದಿರಬೇಕೆಂಬ ಅನುಮಾನ ಉಂಟಾಗುತ್ತದೆ. ಇದೇ ಕಥೆಯ ಹಿನ್ನಲೆಯಲ್ಲಿ ಮಲ್ಲಿಗನೂರಿನ ಉದ್ದಂಡಿ ದೇವಾಲಯದ ಮುಂದಿನ ವೀರಗಲ್ಲೊಂದರ ಮೇಲಿನ ಹತ್ತನೆಯ ಶತಮಾನದ್ದೆಂದು ಹೇಳಲಾದ ಬರಹವನ್ನು ಗಮನಿಸಬೇಕಾಗುತ್ತದೆ. ಅದರಲ್ಲಿ “ಸ್ವಸ್ತಿಶ್ರೀಮನ್ಮಹಾಮಂಡಳೇಶ್ವರ ಶ್ರೀ ಹೊಯ್ಸಳದೇವರು ದೊರಸಮುದ್ರದಲು ಸುಖರಾಜ್ಯಂಗೆಯುತ್ತಿರೆ ಶ್ರೀ ಮತುಮಹಾಪ್ರಧಾನ….. ಮಾರಗವು (ಡಂ)…. ಹಿರಿಯದ…. ಹಲಬರ ಕೊಂದು…. ಬಿದ್ದ. ಮದವಳಿಗಿ ಸೋಮೆವ್ವೆದೇವಿಟ್ಟ ಕೊಡಿಗೆ ಕಲ್ಲು.[4] ಈ ಮಾರಗವುಡ ಮತ್ತು ಸೋಮವ್ವೆ ಶೈವರೆಂಬುದರಲ್ಲಿ ಯಾವ ಅನುಮಾನವೂ ಕಂಡುಬರುವುದಿಲ್ಲ. ಮಾರಗೌಡನ ಮದವಳಿಗಿ (ಹೆಂಡತಿ) ಗಂಡ ಸತ್ತ ಕೂಡಲೆ ಸತಿಯಾಗಬೇಕಿತ್ತು. ಆಕೆ ಸತಿಯಾಗದಿರಲು ಪ್ರಾಯಃ ಕಾರಣ ಆ ದಂಪತಿಗಳಿಗೆ ಚಿಕ್ಕ ಮಕ್ಕಳಿದ್ದು ಅವರನ್ನು ಸಾಕುವ ಜವಾಬ್ದಾರಿ ಈಕೆಯ ಮೇಲೆ ಬಿದ್ದಿರಬೇಕು. ಈ ಸೊಮ್ಮವ್ವೆಯೇ ಬನವಂತಾದೇವಿಯಾಗಿರಬಹುದೆ ಎಂಬುದು ಸಾಧ್ಯವಿರುವ ಸಂಗತಿಯಾಗಿ ಕಂಡುಬರುತ್ತದೆ. ಏಕೆಂದರೆ ಬನವಂತಾದೇವಿ ತನ್ನ ಗಂಡ ಮಾರಭೂಪಾಲ ಸತ್ತಮೇಲೆ ಎಳೆಯನಾಗಿದ್ದ ಮಗ ಕರಿರಾಯನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡಿದಳೆಂಬುದನ್ನು ಇಲ್ಲಿ ಸ್ಮರಿಸಬಹುದು. ಈ ಮಾರಗೌಡ ಸ್ವಲ್ಪಮಟ್ಟಿಗೆ ಹೊಯ್ಸಳ ಚಕ್ರವರ್ತಿ ಒಂದನೆಯ ಬಲ್ಲಾಳನಿಗೆ ಸಮಕಾಲೀನನಾಗುತ್ತಾನೆ.

ಮುಮ್ಮುಡಿ ಮಾರಸಿಂಹ ಮಕ್ಕಳಲ್ಲೊಬ್ಬನಾದ ರಕ್ಕಸಂಗನೆ ಕರಿಭಂಟನೆಂದು ಶ್ರೀ ಎಸ್. ವಿ. ಗೌಡೂರರು ಹುಲ್ಲೂರು ಶ್ರೀನಿವಾಸ ಜೋಯಿಸರ ಆಧಾರಗಳಿಂದ ಪ್ರತಿಪಾದಿಸಲು ಯತ್ನಿಸಿದ್ದಾರೆ. ಆದರೆ ಮೇಲಿನ ಕಾಲ, ದೇಶಗಳ ದೃಷ್ಟಿಯಿಂದ “ಕರಿಭಂಟ ರಕ್ಕಸಗಂಗ ಬಲ್ಲಾಳರಾಯ ಹೆಸರಿನವರು ಹೊಯ್ಸಳವಂಶದಲ್ಲಿ ಮೂರು ನಾಲ್ಕು ಜನರಿರುವರು. ಆದರೆ ಬಲ್ಲಾಳರಾಯನಿಗೆ ಸಮಕಾಲೀನನಾದ ಮಾರಭೂಪಾಲ ಎಂಬ ರಾಜನೆಂದರೆ ತಲಕಾಡು ಗಂಗರಸರ ಮುಮ್ಮುಡಿ ಮಾರಸಿಂಹ[5] ಎಂಬ ವಾದ ಬಿದ್ದು ಹೋಗುತ್ತದೆ. ಈ ಮಾರಸಿಂಹನು ಸಳನಿಗೆ ಸಹ ಸಮಕಾಲೀನನಾಗುವುದಿಲ್ಲವೆಂಬುದನ್ನು ಈ ಹಿಂದೆಯೇ ವಿವರಿಸಲಾಗಿದೆ. ರಕ್ಕಸಂಗನು (ಕ್ರಿ:ಶ. ೯೮೮ – ೧೦೨೪) ತನ್ನಣ್ಣ ರಾಜಮಲ್ಲನ ದಂಡನಾಯಕನಾಗಿ ಅಣ್ಣನ ಭಂಟ ಎಂಬ ಬಿರುದಿನಿಂದ ಪೆದ್ದೊಱೆಯ ಪ್ರಾಂತವೊಂದಕ್ಕೆ ಮಾಂಡಲಿಕನಾಗಿದ್ದನು. ರಾಜಮಲ್ಲನು ಮೃತನಾದೊಡನೆ ರಕ್ಕಸಂಗನು ಗಂಗಪಟ್ಟಕ್ಕೆ ಬಂದನು.[6] ಈ ಕಾಲದಲ್ಲಿ ಹೊಯ್ಸಳರು ಇನ್ನೂ ಸಾಮಂತರಾಗಿದ್ದರು. ಅಲ್ಲದೆ ಗಂಗರಾಜ್ಯದ ಮೇಲೆ ಪ್ರಭಾವ ಬೀರುವಷ್ಟು ಹೆಸರಾಂತವರಾಗಿರಲಿಲ್ಲ. ಸಳನ ಕಾಲವನ್ನು ೧೦೭೩ ಎಂದು ಒಪ್ಪಿಕೊಂಡರೆ ರಕ್ಕಸಂಗನು ಈ ಹೊತ್ತಿಗಾಗಲೆ ಸತ್ತು ಅರ್ಧ ಶತಮಾನಕ್ಕೂ ಹೆಚ್ಚು ಕಾಲವಾಗಿರುತ್ತದೆ. ಚಿನ್ನಬಸವ ಕಾಲಜ್ಞಾನದಲ್ಲಿನ ಕ್ರಿ.ಶ. ೯೪೮ – ೧೦೪೩ ಸಳನ ಕಾಲ ಎಂದೂ ಒಪ್ಪಿದರೂ ಸಳನಿಗಿಂತ ಮುಂಚೆಯೇ ರಕ್ಕಸಗಂಗ ತೀರಿಹೋಗಿರುತ್ತಾನೆ. ಹೀಗಾಗಿ “ರಕ್ಕಸಂಗನ ವಿವಾಹ ಕಾಲಕ್ಕೆ ಮಾರಸಿಂಹನು ಮುಕ್ತನಾಗಿದ್ದನು. ಪ್ರಾಪ್ತವಯಸ್ಕರಾದ ಕುಮಾರರಿಗೆ ಆಡಳಿತವನ್ನು ವಹಿಸಿಕೊಟ್ಟು ಕ್ರಿ.ಶ. ೯೭೩ ರಲ್ಲಿ ಮಾರಸಿಂಹನು ಬಂಕಾಪುರಕ್ಕೆ ಹೋಗಿ ಒಂದು ವರ್ಷ ಸನ್ಯಸನ ವಿಧಿಯಿಂದ ತಪಸ್ಸನ್ನಾಚರಿಸಿ ಕ್ರಿ.ಶ. ೯೭೪ರಲ್ಲಿ ಮುಕ್ತನಾದನು. ರಕ್ಕಸಗಂಗನ ವಿವಾಹ ಕ್ರಿ.ಶ. ೯೭೮ರಲ್ಲಿ ನಡಿದಿರಬಹುದು”[7] ಎಂಬ ಹೇಳಿಕೆ ತಪ್ಪಾಗುತ್ತದೆ. ಏಕೆಂದರೆ ಕ್ರಿ.ಶ. ೯೮೪ರಲ್ಲಿ ರಾಜನಾದ ಸಳನೆ ಬಲ್ಲಾಳರಾಯ ಎಂದಿಟ್ಟುಕೊಂಡರೂ ಕ್ರಿ.ಶ. ೯೭೮ರಲ್ಲಿ ಅವನಿನ್ನೂ ರಾಜನೇ ಆಗದಿದ್ದಾಗ ಅವನ ಮಗಳನ್ನು ರಕ್ಕಸಗಂಗ ಮದುವೆಯಾಗಲು ಹೇಗೆ ಸಾದ್ಯ?

ರಕ್ಕಸಗಂಗನೆ ಕರಿಭಂಟನೆಂದು ಹೇಳಲು ಅನೇಕ ಕಾರಣಗಳಿಂದ ಆಗುವುದಿಲ್ಲ. ಕರಿಭಂಟನು ಮಾರಗೌಡನಿಗೆ ಏಕಮಾತ್ರ ಪುತ್ರ. ಆದರೆ ಗಂಗರಸ ಮುಮ್ಮಡಿ ಮಾರಸಿಂಹನಿಗೆ ನಾಲ್ಕು ಜನ ಮಕ್ಕಳಿದ್ದರು. ರಕ್ಕಸಗಂಗ ಮೂರನೆಯವನು. ಅವನ ಅಣ್ಣನಾದ ನಾಲ್ಕನೆಯ ರಾಜಮಲ್ಲನು ತೀರಿಕೊಂಡ ನಂತರ ಈತ ಪಟ್ಟಕ್ಕೆ ಬಂದನೆಂಬುದನ್ನು ಈ ಹಿಂದೆಯೇ ಹೇಳಿದೆ. ರಕ್ಕಸಗಂಗನಿಗೆ “ಮಕ್ಕಲಿರಲಿಲ್ಲವಾಗಿ ತನ್ನ ತಮ್ಮನಾದ ಅರುಮುಳಿ ದೇವನ ಮಗನನ್ನೂ ಮಗಳನ್ನೂ ದತ್ತು ಸ್ವೀಕಾರ ಮಾಡಿಕೊಂಡನು. ಮಗನ ಹೆಸರು ರಾಜವಿಧ್ಯಾದರ.[8] ಈ ಕಾರಣದಿಂದಾಗಿ ರಕ್ಕಸಗಂಗನನ್ನು ಕರಿಭಂಟನೆಂದು ಹೇಳಲು ಬರುವುದಿಲ್ಲ. ಅಲ್ಲದೆ ಮಾರಸಿಂಹನು ಯುದ್ಧದಲ್ಲಿ ಮಡಿಯಲಿಲ್ಲ. ರಕ್ಕಸಗಂಗನ ನಂತರ ಅವನ ತಮ್ಮ ಅರುಮುಳಿದೇವ ಮತ್ತು ದತ್ತು ಮಗ ರಾಜವಿಧ್ಯಾಧರರೂ ಕೆಲವು ಕಾಲ ಗಂಗರ ರಾಜ್ಯವಾಳಿದ ಬಗೆಗೆ ಶಾಸನಾಧಾರಗಳು ದೊರೆಯುತ್ತವೆ. ರಕ್ಕಸಗಂಗನಿಗೆ ಗೋವಿಂದಧರದೇವ ಎಂಬ ಹೆಸರಿದ್ದಿತೆಂದು ಶಾಸನವೊಂದರ ಆಧಾರದಿಂದ ಊಹಿಸಿ, “ಈ ಊಹೆ ಸರಿಯಾದಲ್ಲಿ ರಕ್ಕಸಗಂಗನೆಂಬ ಗೋವಿಂದಧರ ದೇವನೆ ಕರಿಭಂಟನೆನ್ನುವುದರಲ್ಲಿ ಸಂದೇಹವಿಲ್ಲ”[9] ಎಂಬ ತಪ್ಪು ತೀರ್ಮಾನಗಳಿಗೆ ಬರಲಾಗಿದೆ. “ಶಾಸನದ ಅಕ್ಷರಗಳು ಅಳಿಸಿಹೊಗಿ ಕನ್ನಡ ಮುದ್ರಣದಲ್ಲಿ ‘ಗೋವರದಳಾವವ’ ಇಂಗ್ಲೀಷ್ ಅಕ್ಷರದಲ್ಲಿ ಗೋಜೇಶ್ವರನ ಎಂದು ಮುದ್ರಿಸಿದೆ”[10] ಎಂದು ಶ್ರೀ ಗೌಡೀರ್ ಹೇಳಿದ್ದಾರೆ. ಆದರೆ ಅವರು ಇದಕ್ಕೆ ಆಕರ ಸೂಚಿಸಿಲ್ಲ. ಏನೇ ಇರಲಿ ಶಾಸನದಲ್ಲಿರುವುದೆಂದು ಹೇಳಲಾದ ‘ಗೋಜೇಶ್ವರ’ ರಾಜವಿದ್ಯಾಧರನೇ ವಿನಃ ‘ಗೋವಿಂದದೇವ’ನಲ್ಲ. ಹೀಗೆಯೇ “ರಕ್ಕಸಗಂಗನಿಗೆ ಅಣ್ಣನಭಂಟ ಎಂಬ ಬಿರುದು ಬಂದಿರುವ ಬಗ್ಗೆ ಎರಡು ಶಾಸನಗಳಲ್ಲಿ ಉಲ್ಲೇಖವಿದೆ. ಶಾಸನಗಳಲ್ಲಿ ಆನೆಯಭಂಟ ಎಂಬುದು ಕೈತಪ್ಪಿನಿಂದ ಅಣ್ಣನಭಂಟ ಎಂದಾಗಲು ಅವಕಾಶವಿದೆ”[11] ಎಂಬ ಹೇಳಿಕೆಯೂ ತಪ್ಪುಗ್ರಹಿಕೆಯಿಂದ ಕೂಡಿದುದಾಗಿದೆ. ಕೆಂಪಣ್ಣಗೌಡ ಈತನನ್ನು ಕರಿರಾಯ ಎಂದು ಕರೆಯುತ್ತಾನೆ. ಗಂಗರ ಲಾಂಛನ ಆನೆ. ಗಂಗಡಿಕಾರ ಒಕ್ಕಲಿಗರಲ್ಲಿ ಇಂದಿಗೂ ಆನೆಕುಲದ ಗೌಡಗಳೆಂದು ಹೇಳಿಕೊಳ್ಳುವ ಪದ್ಧತಿಯಿದೆ. ಹೀಗಾಗಿ “ಆನೆಯ ಭಂಟ ಇಲ್ಲದೆಯೂ ರಕ್ಕಸಗಂಗ ಆನೆಯ ಲಾಂಛನದ ಕಾರಣದಿಂದ ಕರಿರಾಯನಾಗಲು ಒಪ್ಪುವುದಿಲ್ಲ. ಒಂದು ವೇಳೆ ರಕ್ಕಸಗಂಗನ ಜೀವನದಲ್ಲಿ ಇಂಥದೊಂದು ಘಟನೆ ನಡೆದಿದ್ದಲ್ಲಿ, ಅವನು ಹೊಯ್ಸಳ ರಾಜಕುಮಾರಿಯನ್ನು ಮದುವೆಯಾಗಿದ್ದಲ್ಲಿ ಈ ಎರಡು ವಂಶಗಳ ಯಾವುದಾದರೊಂದು ಶಾಸನದಲ್ಲಿ ಅದರ ಉಲ್ಲೇಖ ಇದ್ದೇ ತೀರುತ್ತಿತ್ತು.

ತೊಂಡನೂರನ್ನು ಆಳುತ್ತಿದ್ದನೆಂದು ಹೇಳಲಾದ ಭೇತಾಳರಾಜನ ಬಗೆಗೆ ಒಂದೆರಡು ವಿಷಯವನ್ನು ಚರ್ಚಿಸಬೇಕಾದುದು ಅವಶ್ಯಕವೆಂದೆನಿಸುತ್ತದೆ. ಏಕೆಂದರೆ ಗೌತಮ “ಕ್ಷೇತ್ರಕ್ಕೆ ಸಮೀಪವಿರುವ ತೊಂಡನೂರನ್ನು ನೊಳಂಬ ಪಲ್ಲವ ರಾಜನಾದ ಭೇತಾಳರಾಯನು (ಬೂತುಗ) ಆಳುತ್ತಿರುತ್ತಾನೆ”[12] ಎಂಬ ಹೇಳಿಕೆಯೊಂದಿದೆ. ನನಗೆ ತಿಳಿದ ಮಟ್ಟಿಗೆ ಚರಿತ್ರೆಯಲ್ಲಿ ಇಬ್ಬರೂ ಬೂತುಗರು ಬರುತ್ತಾರೆ. ಈ ಇಬ್ಬರೂ ಗಂಗರಸರೇ. ಅವರಲ್ಲಿ ೯೩೫ ರಿಂದ ೯೬೦ರವರೆಗೆ ಆಳಿದ ಇಮ್ಮಡಿ ಬೂತುಗನು ತುಂಬಾ ಪ್ರಸಿದ್ಧನಾದವನು. ಇವನು “ಗಂಗಾನಾರಾಯಣ ಗಂಗಗಾಂಗೇಯ ನನ್ನಿಯಗಂಗ” ಎಂಬ ಬಿರುದಾನ್ವಿತನಾಗಿ ಇತಿಹಾಸ ಪ್ರಸಿದ್ಧನಾದ. ಇಮ್ಮಡಿ ಬೂತುಗನು ತನ್ನಣ್ಣ ಮುಮ್ಮಡಿ ರಾಜಮಲ್ಲನ ದಾರುಣ ರಾಜ್ಯಭಾರದ ತರುವಾಯ ಕ್ರಿ.ಶ. ೯೩೭ರಲ್ಲಿ ಪಟ್ಟಕ್ಕೆ ಬಂದನು. ಆದುದರಿಂದ ಈ ಬೂತುಗನನ್ನು ಭೇತಾಳರಾಜ ಎಂದು ಕರೆಯುವುದು ಇತಿಹಾಸಕ್ಕೆ ಅಪಚಾರ ಮಾಡಿದಂತಾಗುತ್ತದೆ.

ಹಾಗಾದರೆ ತೊಂಡನೂರನ್ನು ಆಳುತ್ತಿದ್ದ ಭೇತಾಳರಾಜನು ಯಾರು ಎಂಬ ಸಮಸ್ಯೆ ಬಗೆಹರಿಯುವುದಿಲ್ಲ. ನನ ಕ್ಷೇತ್ರಕಾರ್ಯ ಸಮಯದಲ್ಲಿ ಮತ್ತು ಕೆಂಪಣ್ಣ ಗೌಡನ ಯಕ್ಷಗಾನ ಕಾವ್ಯದಲ್ಲಿ ತೊಂಡನೂರನ್ನು ಬೇಡ ಪಡೆಯನಾಡೆಂದು ಹೇಳಲಾಗಿದೆ. ಕರಿಭಂಟ ಗೌತಮಕ್ಷೇತ್ರದಲ್ಲಿದ್ದಾಗ ತೊಂಡನೂರಿನ ಸೇನಾಪತಿ ಉರಿಶಿಂಗ ಅವನ ಮೇಲೆ ದಂಡೆತ್ತಿ ಬಂದ ವಿಚಾರವಿದೆ. ಅದನ್ನು ಕುರಿತು ಹೇಳುವಾಗ

ಅಟ್ಟ ಮುಟ್ಟುತ ಬಹ ದಿಟ್ಟ ಬೇಡರ ಪಡೆಯ
ಕುಟ್ಟಿದನು ಬೆಟ್ಟದಂತೊಟ್ಟಿದನು ಅವನು.

ಎಂದು ಹೇಳಿದ್ದಾನೆ. ಇದನ್ನು ಒಪ್ಪಿಕೊಂಡರೆ ಉದ್ದಂಡಿ ಮತ್ತು ಕರಿಭಂಟರ ಜಾತಿಗಳು ಬೇರೆಯಾಗಿದ್ದು ಅಂತರ್ಜಾತೀಯ ವಿವಾಹದ ಕಾರಣ ಈ ಯುದ್ಧ ನಡೆದಿರಬೇಕೆಂದು ಹೇಳಬೇಕಾಗುತ್ತದೆ. ಆದರೆ, ಉದ್ದಂಡಿಯ ಭಕ್ತರೆಲ್ಲರೂ ಒಕ್ಕಲಿಗರೇ ಆದುದರಿಂದ ಈ ಊಹೆ ಸಮಂಜಸವಾಗುವುದಿಲ್ಲ. ಅದರ ಬದಲಿಗೆ ಭೇತಾಳರಾಜನು ಬೇಡರ ಸೇನೆಯನ್ನಿಟ್ಟಿದ್ದನೆಂದು ಕಾಣುತ್ತದೆ. ನಮ್ಮ ದೇಶದ ರಾಜರುಗಳು ಇಂತಹ ಬೇಡಪಡೆಯನ್ನು ಇಟ್ಟುಕೊಂಡಿರುತ್ತಿದ್ದ ಉದಾಹರಣೆಗಳು ಚರಿತ್ರೆಯಲ್ಲಿ ಸಾಕಷ್ಟು ಕಂಡುಬರುತ್ತವೆ.

ಕರಿಭಂಟ ಹಳೇಬೀಡಿನ ರಾಜಕುಮಾರಿಯನ್ನು ಮದುವೆಯಾಗಲು ಧಾರಾಪುರದಿಂದ ಹೊರಡುತ್ತಾನೆ. ಇಲ್ಲಿಯವರೆಗೆ ಚರ್ಚಿಸಿದ್ದರಲ್ಲಿ ಹೊಯ್ಸಳರ ಹಳೇಬೀಡು ಆಗ ಈ ಕಡೆಯವರಿಗೆ ಅಷ್ಟು ಚಿರಪರಿಚಿತವಾಗಿತ್ತೇ? ಹೊಯ್ಸಳರು ಪ್ರಸಿದ್ಧರಾಗಿದ್ದರೆ ಎಂಬ ಸಮಸ್ಯೆ ತಲೆದೋರುತ್ತದೆ. ಇದರೊಂದಿಗೆ ಮಲ್ಲಿಗನೂರಿಗೆ ಅನತಿ ದೂರದಲ್ಲಿರುವ ಹಳೇಬೀಡಿನ ಬಗ್ಗೆ ವಿವೇಚಿಸುವುದು ಅಗತ್ಯವೆಂದು ಹೇಳಬಹುದು. ಈ ಹಳೇಬೀಡು ಗಂಗರ ಕಾಲದಿಂದಲೂ ಒಂದು ಸಾಮಂತ ರಾಜ್ಯದ ರಾಜಧಾನಿಯಾಗಿದ್ದಂತೆ ಕಂಡುಬರುತ್ತದೆ. ಅನಂತರ ಅದು ಹೊಯ್ಸಳರ ಆಳ್ವಿಕೆಗೆ ಬಂದಂತೆ ಕಾಣುತ್ತದೆ. “ಸ್ವಸ್ತಿಶ್ರೀಮನ್ಮಹಾ ಮಂಡಲೇಶ್ವರಂ ಪ್ರತಾಪ ಸಾಹಸ ವೀರಬಲ್ಲಾಳ ದೇವರು ಪ್ರುಥ್ವೀರಾಜ್ಯಂತೆ ಯತ್ತಿರೆ ಶ್ರೀಮನ್ಮ ಹಾಹಿರಿಯ ಪ್ರಧಾನಂ ಕೊಟ್ಟಿರವಗ್ಗೆಡೆ – ಣಿಮಯ್ಯಂಗಳು ಹಳೆಯಬೀಡನಾಳುತ್ತಿರಲು”[13] ಎಂಬ ಉಲ್ಲೇಖವಿದ್ದು, ಇದು ಗಂಗರ ನಂತರ ಹೊಯ್ಸಳರ ಅಧೀನಕ್ಕೆ ಬಂದಿತೆಂಬುದನ್ನು ಶೃತಪಡಿಸುತ್ತದೆ. ರಕ್ಕಸ ಗಂಗನು ಕರಿಭಂಟನಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಹಿನ್ನಲೆಯಲ್ಲಿ ಯೋಚಿಸಿದಾಗ ಅವನು ಹೊರಟ ಹಳೇಬೀಡು ಇದೇ ಇರಬಹುದೆ? ಎಂಬ ಸಂದೇಹವುಂಟಾಗುತ್ತದೆ. ಈ ಸಂದೇಹಕ್ಕೆ ಪೋಷಕವಾದ ಘಟನೆಯೊಂದು ಉಲ್ಲೇಖಾರ್ಹವಾಗಿದೆ. ಕರಿಭಂಟನು ಗೌತಮ ಕ್ಷೇತ್ರದಲ್ಲಿ ಬೀಡು ಬಿಡುತ್ತಾನಷ್ಟೆ. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಅವನು ಇನ್ನೂ ಒಂದು ದಿವಸ ಅಲ್ಲಿ ನಿಲ್ಲುವ ತೀರ್ಮಾನಕ್ಕೆ ಬರುತ್ತಾನೆ. ಆಗ ಕರಿಭಂಟನನ್ನು ಆಹ್ವಾನಿಸಲು ಬಂದಿದ್ದ ಬಲ್ಲಾಳರಾಯನ ಮಂತ್ರಿಯು ಬೇಗ ಹಳೇಬೀಡನ್ನು ಸೇರಬೇಕೆಂದು ಒತ್ತಾಯಿಸುತ್ತಾನೆ. ಅದಕ್ಕುತ್ತರವಾಗಿ ಕರಿಭಂಟ

ನಾಳೆ ವಂದೇದಿವಸಕೈದುವೆವು ನಿಮ್ಮ ಭೂ
ಪಾಲನೆಡೆಗಿಂದು ನೀವು ಪೋಗಿ
ಪೆಳಿರೆಂದವರಿಗುಡುಗೊರೆಯಿತ್ತುಪಚರಿಸಿ
ಬೀಳುಕೊಟ್ಟನು ಮಂತ್ರಿಗಳನು*

ಎಂದು ಹೇಳಿ ಕಳಿಸಿದ ಉಲ್ಲೇಖ ಬರುತ್ತದೆ. ಗೌತಮ ಕ್ಷೇತ್ರದಿಂದ ಹೊಯ್ಸಳರ ರಾಜಧಾನಿ ಹಳೇಬೀಡಿಗೆ ಒಂದು ದಿನದಲ್ಲಿ ಹೋಗಿ ಸೇರುವುದು ಅಸಂಭವವೇ ಸರಿ. ಆದರೆ ಸುಮಾರು ಎಂಟು, ಹತ್ತು ಮೈಲಿ ದೂರದ ಇಲ್ಲಿನ ಹಳೇಬೀಡು ಒಂದು ದಿನದ ಪಯಣದ ಅಂತರದಲ್ಲಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿರುವ ಈ ಹಳೇಬೀಡು ಅನೇಕ ದೃಷ್ಟಿಯಿಂದ ನನ್ನ ವಾದವನ್ನು ಪುಷ್ಟೀಕರಿಸುತ್ತದೆ. ಇಲ್ಲಿನ ಅಸಂಖ್ಯಾತ ವೀರಗಲ್ಲುಗಳು ಭೀಕರ ಯುದ್ಧ ನಡೆದ ಸೂಚನೆ ಕೊಡುತ್ತವೆ. ಈ ಊರಿನಲ್ಲಿರುವ ಕರಿರಾಯನ ದೇವಾಲಯ ಕರಿಭಂಟ ಬಂದುದು ಈ ಹಳೇಬೀಡಿಗೆ ಎಂಬುದನ್ನು ಶೃತಪಡಿಸುತ್ತದೆ. ಕೆಂಪಣ್ಣಗೌಡ ಕಾವ್ಯರಚನೆ ಮಾಡುವ ಕಾಲದ ಹೊತ್ತಿಗೆ ಇತಿಹಾಸ ಪ್ರಸಿದ್ಧ ಹೊಯ್ಸಳ ರಾಜಧಾನಿ ಹಳೇಬೀಡು ಜನರ ಬಾಯಲ್ಲಿದ್ದ ಕಾರಣ ನಾಟಕಕಾರರು ಇದನ್ನು ತಪ್ಪಾಗಿ ಗ್ರಹಿಸಿರಬೇಕು ಅಥವಾ ಉದ್ದೇಶಪೂರ್ವಕವಾಗಿಯೆ ಬದಲಾವಣೆ ಮಾಡಿಕೊಂಡಿರಬೇಕು. ಹೀಗಾಗಿ ಕರಿಭಂಟ ಹೊರಟದ್ದು ಈ ಹಳೇಬೀಡಿಗೇ ಇರಬೇಕೆಂಬುದು ಹೆಚ್ಚು ವಾಸ್ತವವಾಗಿ ಕಾಣುತ್ತದೆ.

ಚಾರಿತ್ರಿಕ ದಾಖಲೆಗಳು ತಲಕಾಡಿನ ಗಂಗರು ಮತ್ತು ದ್ವಾರಸಮುದ್ರದ ಹೊಯ್ಸಳರ ಮಧ್ಯೆ ಮದುವೆಯೊಂದು ನಡೆದ ಬಗ್ಗೆ ಎಲ್ಲಿಯೂ ಸೂಚಿಸುವುದಿಲ್ಲವಾಗಿ ರಕ್ಕಸ ಗಂಗ ಕರಿಭಂಟನೆಂದಾಗಲಿ ಅವನು ಬಲ್ಲಾಳರಾಜಕುಮಾರಿಯನ್ನು ಮದುವೆಯಾದನೆಂದಾಗಲಿ ಹೇಳಲು ಬರುವುದಿಲ್ಲ. “ಹನ್ನೊಂದನೆಯ ಶತಮಾನದ ಆದಿಭಾಗದಲ್ಲಿ ಗಂಗರು ತಮ್ಮ ಸ್ವಾತಂತ್ರ್ಯ ಸಮಸ್ತವನ್ನೂ ಕಳೆದುಕೊಂಡು, ಚೋಳ ಮತ್ತು ಪಶ್ಚಿಮ ಚಾಲುಕ್ಯ ಪ್ರಭುಗಳ ಸ್ಥಳೀಯ ಪ್ರತಿನಿಧಿಗಳ ಸ್ಥಾನಕ್ಕೆ ಇಳಿದರು”[14] ಹೀಗಾಗಿ ಸುಮಾರು ೧೦೭೮ರಲ್ಲಿ ರಾಜ್ಯ ಸ್ಥಾಪನೆ ಮಾಡಿದ ಹೊಯ್ಸಳರೊಂದಿಗೆ ಸಂಬಂಧ ಕಲ್ಪಿಸುವುದು ಸಾಧ್ಯವಲ್ಲದ ಮಾತು. ಮುಂದೆ ವಿಷ್ಣುವರ್ಧನನು ತಲಕಾಡನ್ನು ಚೋಳರಿಂದ ಗೆದ್ದು ಹೊಯ್ಸಳ ರಾಜ್ಯಕ್ಕೆ ಸೇರಿಸುವವರೆಗೆ ಗಂಗರಾಜ್ಯ ಅನೇಕ ಚೂರು ಛಿದ್ರಗಳಾಗಿದ್ದುದು ಕಂಡುಬರುತ್ತದೆ. ರಕ್ಕಸಗಂಗನ ಮರಣಾನಂತರ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಅಧಿಕಾರಿಗಳಾಗಿದ್ದ ಗಂಗವಂಶಸ್ಥರು ತಾವೇ ಸ್ವತಂತ್ರ ರಾಜರೆಂಬಂತೆ ನಡೆದುಕೊಂಡರು.

ಗಂಗರಾಜ್ಯವು “ಹೀಗೆ ಪರಾಜಿತವಾದ ಮೇಲೆ ಕೊಂಚ ಕಾಲ ಹಾಗೂ ಹೀಗೂ ಕಾಲ ಯಾಪನೆ ಮಾಡುವಸ್ಥಿತಿಗಿಳಿಯಿತು. ಕಾಲಾಂತರದಲ್ಲಿ ಗಂಗರಾಜಕುಮಾರಿಯೊಬ್ಬಳ ಗರ್ವಾಂಧತೆಯಿಂದ ಅಲ್ಲಿ ಯಾದವೀಕಲಹ ಪ್ರಾರಂಭವಾಯಿತು. ಘೋರಯುದ್ಧದಲ್ಲಿ ಪರಿಣಮಿಸಿತು. ಈ ಬಗೆಯ ಕ್ಷುದ್ರ ಕಲಹಗಳಿಗೆ ರಂಗಭೂಮಿಯಾದ ಗಂಗರಾಜ್ಯವು ಕೊನೆಗೆ ತಲಕಾಡಿನ ಶ್ರೀರಂಗರಾಜ್ಯದಲ್ಲಿ ಪಾಳೆಯಗಾರಿಕೆಯಾಗಿ ಲೀನವಾಯಿತು”.[15] ಈ ಹೇಳಿಕೆಯ ಹಿನ್ನೆಲೆಯಲ್ಲಿ ಗಮನಿಸಿದಾಗ ಚೋಳರು ಮತ್ತು ಹೊಯ್ಸಳರು ನಂತರವೂ ಗಂಗವಂಶದರು ಸಾಮಂತರು, ಪಾಳೆಗಾರರು ಆಗಿದ್ದುದು ತಿಳಿದು ಬರುತ್ತದೆ. ಗಂಗವಂಶದ ಗರ್ವಾಂಧ ರಾಜಕುಮಾರಿ ಉದ್ಧಂಡಿಯಾಗಿರಬಹುದೇ? ದಾಯಾದಿ ಮತ್ಸರ ಹಿರಿದಾಗಿ ಆಕೆ ಮಲ್ಲಿಗನೂರಿನ ಶಾಸನ ಹೇಳುವ ಸೋಮವ್ವೆಯ ಮಗ ಕರಿರಾಯನಿಗೆ ತನ್ನ ಮಗಳನ್ನು ಕೊಡಲು ಒಪ್ಪದೆ ಇಂಥದೊಂದು ಘಟನೆಗೆ ಕಾರಣವಾಗಿದ್ದಿರಬಹುದು. ಕರಿಭಂಟನ ಕಾಳಗ ಚಾರಿತ್ರಿಕ ಘಟನೆಯೇ? ಎಂಬ ಸಮಸ್ಯೆಗೆ ಮೇಲಿನ ಎಲ್ಲ ಆಧಾರಗಳ ಸಹಾಯದಿಂದ ಉತ್ತರ ಹೇಳಬಹುದು. ಗಂಗರ ಅವನತಿಯ ಅನಂತರ ಹೊಯ್ಸಳರ ಅಭ್ಯುದಯದ ಮಧ್ಯಕಾಲದಲ್ಲಿ ಗಂಗವಂಶದ ದಾಯಾದಿ ಮತ್ತು ಸೋದರ ಸಂಬಂಧಿ ಮನೆತನಗಳ ಮಧ್ಯೆ ನಡೆದ ಒಂದು ದುರಂತ ಪ್ರಣಯ ಪ್ರಸಂಗವಿದೆಂದು ಹೇಳಬಹುದು. ಈ ಪ್ರಸಂಗವನ್ನು ಕೆಂಪಣ್ಣಗೌಡ ಒಂದು ಕಾವ್ಯವಾಗಿ ಬರೆಯಲು ಸೋಮರಾಜನ ಕಥಾಸರಿತ್ಸಾಗರ ಮೂಲ ಪ್ರೇರಣೆಗಾಗಿರಬೇಕು, ಏಕೆಂದರೆ ಕಥಾಸರಿತ್ಸಾಗರವು ಹೆಂಗಸರನ್ನು ವಿನೋದ ಪಡಿಸುವುದಕ್ಕಾಗಿ ಹೇಳಿದ್ದು. ಶಿವನು ತನ್ನ ಹೆಂಡತಿಗೆ ಹೇಳಿದ್ದು ಎಂಬ ಅಭಿಪ್ರಾಯವಿದೆ.[16] ಕರಿಭಂಟನ ಕಥೆ ಸಹ ಶಿವ ಪಾರ್ವತಿಗೆ ಹೇಳಿದ್ದು, ಅಲ್ಲದೆ ಕರಿಭಂಟನ ಕಥೆ ಕಥಾಸರಿತ್ಸಾಗರದ ಸುಂದರಸೇನ ಮುಂದಾರ ವತಿಯರ ಕಥೆಯಿಂದ ಪ್ರಭಾವಿತವಾಗಿರುವ ಸಾಧ್ಯತೆ ಕಂಡುಬರುತ್ತದೆ. ಈ ಕಥೆಯಲ್ಲಿ ಬರುವ ಭೇತಾಳ ಪ್ರಸಂಗ, ಉದ್ದಂಡಿ, ಬೊಮ್ಮ, ಉರಿಶಿಂಗ ಮುಂತಾದ ಪಾತ್ರಗಳಿಗೆ ಪ್ರೇರಣೆಯಾಗಿರಬಹುದು. ಗಂಗವಂಶದ ಒಂದು ಘಟನೆಯನ್ನು ಈ ಕಥೆಯ ಹಂದರದ ಮೇಲೆ ಕೆಂಪಣ್ಣಗೌಡ ತನ್ನದೆ ಆದ ಬದಲಾವಣೆಗಳೊಂದಿಗೆ ಹಬ್ಬಿಸಿರುವ ಸಾಧ್ಯತೆ ಕಂಡುಬರುತ್ತದೆ.[17] ಏಕೆಂದರೆ ಅನಂತರ “ಕ್ರಿ.ಶ. ೧೧೦೬ ರಿಂದ ೧೧೧೭ ವರೆಗಿನ ಕಾಲಾವಧಿಯು ಮಹತ್ವ ಪೂರ್ಣಸಾಧನೆಯ ಕಾಲ, ಈ ಅವಧಿಯಲ್ಲಿ ಗಂಗನೃಪರೆಲ್ಲರೂ ಒಟ್ಟಾಗಿ ಸೇರಿ ಚೋಳರ ನಿರಂಕುಶ ಪ್ರಭುತ್ವವನ್ನು ಕಿತ್ತೊಗೆಯುವ ಉದ್ದೇಶದಿಂದ ಪರಸ್ಪರ ದ್ವೇಷ, ಮಾತ್ಸರ್ಯಗಳನ್ನು ಬದಿಗಿಕ್ಕಿದರು. ವೈರಿಯನ್ನು ನಿರ್ಮೂಲಿಸಿ ಗತಕಾಲದ ಸ್ವಾತಂತ್ರ್ಯವನ್ನೂ ಹಕ್ಕು ಭಾದ್ಯತೆಗಳನ್ನು ಮತ್ತೊಮ್ಮೆಗಳಿಸಿಕೊಳ್ಳುವ ಮಹೋದ್ದೇಶದಿಂದ ಕನ್ನಡ ರಾಜನಾದ ವಿಷ್ಣುವರ್ಧನನ ಆಜ್ಞಾಧಾರಕರಾಗಲು ಸಿದ್ಧರಾದರು.[18] ಇಲ್ಲಿಂದ ಮುಂದೆ ಗಂಗ ರಾಜ್ಯ ಹೊಯ್ಸಳ ರಾಜ್ಯದಲ್ಲಿ ಲೀನವಾಯಿತು.

 

 

[1] Mysore Gazetteer : vol. V, 843.

[2] History of the Western Ganges Dr. B. Shaikali page 145.

[3] ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ. ಸಂ. ಡಾ. ಆರ್. ಸಿ. ಹಿರೇಮಠ, ಡಾ. ಸುಂಕಾಪುರ, ಪುಟ ೩೫೮.

[4] ಎಫಿಗ್ರಾಫಿಯಾ ಕರ್ನಾಟಕ ಸಂಪುಟ ೬, (ಪರಿಕ್ಷೃತ ೧೯೭೭) ಪುಟ ೧೮೫.

[5] ಚಂದ್ರವಳ್ಳಿ, ಕರಿಭಂಟನ ಐತಿಹ್ಯ, ಎಸ್. ವಿ. ಗೌಡೂರ್.

[6] ಕರ್ನಾಟಕ ಇತಿಹಾಸ ದರ್ಶನ, ಡಾ. ಎಂ. ವಿ. ಕೃಷ್ಣರಾವ್, ಪುಟ ೬೫.

[7] ಚಂದ್ರವಳ್ಳಿ – ಕರಿಭಂಟನ ಐತಿಹ್ಯ, ಎಸ್. ವಿ. ಗೌಡೂರ್.

[8] ಕರ್ನಾಟಕ ಇತಿಹಾಸ ದರ್ಶನ, ಡಾ. ಎಂ. ವಿ. ಕೃಷ್ಣಮೂರ್ತಿ, ಪುಟ ೬೫.

[9] ಚಂದ್ರವಳ್ಳಿ, ಕರಿಭಂಟನ ಐತಿಹ್ಯ, ಎಸ್. ವಿ. ಗೌಡೂರ್.

[10] ಅದೇ.

[11] ಅದೇ.

[12] ಅದೇ.

[13] ಇ. ಸಿ. ಸಂಪುಟ ೬೦, ೧೯೭೭ ಪುಟ. ೩೧೪.

* ಇಲ್ಲಿ ಉದೃತವಾಗಿರುವ ಪದ್ಯಗಳೆಲ್ಲ ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದ ಕೆ. ೪೦೮ ಕರಿಭಂಟನ ಕಾಳಗ ಹಸ್ತಪ್ರತಿಯವು.

[14] ಕರ್ನಾಟಕ ಇತಿಹಾಸ ದರ್ಶನ: ಡಾ. ಎಂ. ವಿ. ಕೃಷ್ಣರಾವ್, ಪುಟ ೬೬.

[15] ಕರ್ನಾಟಕ ಇತಿಹಾಸ ದರ್ಶನ: ಡಾ. ಎಂ. ವಿ. ಕೃಷ್ಣರಾವ್, ಪುಟ ೬೬.

[16] ಕಥಮೃತ, ಡಾ. ಎ. ಆರ್. ಕೃಷ್ಣ ಶಾಸ್ತ್ರಿ, ಪುಟ xiix.

[17] ವಿವರಗಳಿಗೆ ಇದೇ ಲೇಖಕರ ಮೂಗುರು ತಿಬ್ಬಾದೇವಿ ಒಂದು ಅಧ್ಯಯನ: ಜಾನಪದ ೧೯೭೨ ನೋಡಬಹುದು.

[18] ಅದೇ ಪು. ೨೨೯.