ಒಕ್ಕಲುಮುದ್ದೇಗೌಡನ ಸಂಸಾರ ದಕ್ಷಿಣದ ಕಾಡಿನಲ್ಲಿ ತರಗು ಗುಡಿಸಿ ನೆಲೆನಿಂತರು. ತನ್ನಿಂದಾಗಿ ತನ್ನ ತಂದೆ ಮತ್ತು ಅಣ್ಣಂದಿರಿಗೆ ಈ ಸ್ಥಿತಿ ಉಂಟಾಯಿತಲ್ಲಾ ಎಂದು ಕೊರಗುತ್ತಿದ್ದ ಮುದ್ದೇಗೌಡನ ಮಗಳು ಒಂದು ಮಧ್ಯಾಹ್ನ ತನ್ನ ಸಹೋದರರು ಕಡಿದು ಪೇರಿಸಿದ ಸೌದೆಯ ರಾಶಿಗೆ ಬೆಂಕಿ ಹಚ್ಚಿ ಅದರಲ್ಲಿ ಪ್ರವೇಶಮಾಡಿ ಆತ್ಮಾರ್ಪಣೆ ಮಾಡಿಕೊಂಡಳು. ಮುಂದೆ ಈಕೆ ಒಕ್ಕಲಿಗರ ಕುಲದೇವತೆಯಾದಳು.

ಈ ಕಥೆಯಲ್ಲಿ ಬಿಜ್ಜಳನ ಹೆಸರು ಬರುತ್ತದೆ. ಆದರೆ ಬಸವಣ್ಣನ ಹೆಸರು ಬರುವುದಿಲ್ಲ. ಪ್ರಧಾನಿಯೆಂದಷ್ಟೇ ಉಲ್ಲೇಖವಿದೆ. ಇನ್ನೂ ಒಂದು ಕುತೂಹಲದ ಸಂಗತಿಯೆಂದರೆ ಈ ಕಥೆಯಲ್ಲಿ ಬರುವ ಒಕ್ಕಲು ಮುದ್ದೇಗೌಡ ಬಸವಣ್ಣನ ಅನುಭವ ಮಂಟಪದಲ್ಲಿ ಪಾಲುಗೊಂಡವನು ಮತ್ತು ವಚನಗಳನ್ನು ರಚಿಸಿದ್ದಾನೆ. ಹರಳಯ್ಯ ಮದುವಯ್ಯಗಳ ಮಕ್ಕಳ ಅಂತರ್ಜಾತಿಯ ಮದುವೆಯ ಹಿನ್ನೆಲೆಯಲ್ಲಿ ಈ ಕಥೆ ಹುಟ್ಟಿರಬೇಕು. ಈಗಲೂ ತುಂಗಭದ್ರಾ ನದಿಯಿಂದ ಉತ್ತರಕ್ಕೆ ಒಕ್ಕಲಿಗರಿಲ್ಲದಿರುವುದು ಗಮನಾರ್ಹ. ಇಂತಹದೇ ಕಥೆ ಯಲಹಂಕ ಪ್ರಭು ಕೆಂಪೇಗೌಡನ ವಂಶದ ಮೂಲದ ಬಗ್ಗೆಯೂ ಇರುವುದನ್ನು ಕಾಣಬಹುದು. ಒಕ್ಕಲು ಮುದ್ದೇಗೌಡನ ಈ ಕಥೆಯನ್ನು ಹೆಳವರು ಹೇಳುತ್ತಾ ದಕ್ಷಿಣ ಕರ್ನಾಟಕದ ಒಕ್ಕಲಿಗರ ಮನೆಯಲ್ಲಿ ಭಿಕ್ಷೆ ಎತ್ತುವ ಪದ್ಧತಿ ಇಂದಿಗೂ ಇದೆ.

ಹೊಯ್ಸಳ ವಂಶದ ಪ್ರಸಿದ್ಧ ರಾಜ ರಾಣಿಯರಾದ ವಿಷ್ಣವರ್ಧನ ಮತ್ತು ಶಾಂತಲದೇವಿಯರ ಜೀವನದ ಬಗೆಗಿನ ಎರಡು ಪ್ರಸಂಗಗಳು ಜನಪದ ಪ್ರವೇಶಿಸಿರುವುದನ್ನು ಕಾಣಬಹುದು. ಇವುಗಳಲ್ಲಿ ಒಂದು ಲಕ್ಕಣ್ಣ. ಇನ್ನೊಂದು ರಾಣಿ ಶಾಂತವ್ವೆ. ಈ ಎರಡರ ಮೂಲವೂ ಪ್ರಾಯಃ ಒಂದೆ ಆಗಿರುವಂತೆ ಕಾಣುತ್ತದೆ. ಲಕ್ಕಣ – ಈರಣ್ಣರ ಕಥೆ ಹೀಗಿದೆ: ಲಕ್ಕಣ್ಣ ಈರಣ್ಣ ಇಬ್ಬರು ಶೂರರು. ರಾಜನ ಆಪ್ತದಳದವರು. ಸಮಯ ಬಂದಲ್ಲಿ ರಾಜನಿಗೆ ತಲೆಯೊಪ್ಪಿಸುವಂತವರು. ರಾಜ ರಾಣಿಯರಿಬ್ಬರಿಗೂ ನಂಬಿಕೆಯ ಭಂಟರು. ಆ ರಾಜ ದಂಪತಿಗಳೂ ಅಷ್ಟೇ ಅಷ್ಟೊಂದು ಅನ್ಯೋನ್ಯವಾಗಿದ್ದರು. ಅವರಿಗೆ ಒಬ್ಬನೇ ಮಗ. ಅವನೋ ಪೂರ್ಣ ಚಂದ್ರನಂತೆ ಬೆಳೆಯುತ್ತಿದ್ದ. ರಾಜ ಇದ್ದಕ್ಕಿದ್ದ ಹಾಗೆಯೇ ಬೇರೊಬ್ಬಳಲ್ಲಿ ಅನುರಕ್ತನಾದ. ಹಿರಿಯರಾಣಿಗೆ ತಿಳಿಸದೆ ಅವಳನ್ನು ಮದುವೆಯೂ ಆದ. ಅಕೆಯ ಹೊಟ್ಟೆಯಲ್ಲಿ ಹುಟ್ಟುವ ಮಗುವಿಗೆ ಪಟ್ಟಕಟ್ಟುವುದಾಗಿ ಭಾಷೆಕೊಟ್ಟು, ಆಕೆ ಅರಮನೆಗೆ ಬಂದವಳೇ ದೊಡ್ಡ ರಾಣಿಗೆ ತೊಂದರೆಕೊಡಲು ಆರಂಭಿಸಿದಳು. ಅವಳ ಮೇಲೆ ರಾಜನಲ್ಲಿ ಇಲ್ಲ ಸಲ್ಲದ ದೂರು ಹೇಳಿದಳು. ರಾಜ ಅವಳಿಂದ ದೂರವಿರುವಂತೆ ಮಾಡಿದಳು. ಕಡೆಗೆ ಈ ಹೊಸರಾಣಿಗೊಂದು ಗಂಡು ಮಗುವಾಯಿತು. ಆ ಹಸುಮಗುವಿಗೇ ಪಟ್ತವಾಗಬೇಕೆಂದು ಕಿರಿಯ ರಾಣಿ ಪಟ್ತುಹಿಡಿದಳು.

ಲಕ್ಕಣ್ಣ – ಈರಣ್ಣ ಮೊದಲನೆಯ ರಾಣಿಯ ಮಗನಿಗೆ ನ್ಯಾಯವಾಗಿ ಪಟ್ಟವಾಗಬೇಕು, ಕಿರಿಯರಾಣಿ ಮೋಸದಿಂದ ಅದನ್ನು ತಪ್ಪಿಸುತ್ತಿದ್ದಳೆಂದು ಮಂತ್ರಿ ಮಾನ್ಯರು, ಮಂಡಲಾಧಿಕಾರಿಗಳು ಗಾವುಂಡಗಳಿಗೆ ಹೇಳಿದರು. ಈ ಅನ್ಯಾಯವನ್ನು ಪ್ರತಿಭಟಿಸಿ ಅನೇಕರು ದಂಗೆ ಎದ್ದರು. ಹಿರಿಯರಾಣಿಯ ಮಗನಿಂದಲ್ಲವೆ ಇಷ್ಟೆಲ್ಲ ಆದುದು ಎಂದ ಸಿಟ್ತುಗೊಂಡ ಕಿರಿಯ ರಾಣಿ ಅವನಿಗೆ ವಿಷದ ಕಜ್ಜಾಯ ತಿನ್ನಿಸಿ ಕೊಂದುಬಿಟ್ಟಳು. ರಾಜಕುಮಾರನೇ ಸತ್ತುದರಿಂದ ಎದ್ದ ದಂಗೆ ಶಾಂತವಾಯಿತು. ಲಕ್ಕಣ್ಣ, ಈರಣ್ಣರು ತಲೆಮರೆಸಿಕೊಂಡರು. ಕಿರಿಯರಾಣಿ ಅವರನ್ನು ಹುಡಿಕಿಕೊಂಡು ಹೋದಳು. ಅವರ ಶೌರ್ಯವನ್ನು ಮೆಚ್ಚಿರುವುದಾಗಿಯೂ ಅವರಿಬ್ಬರಲ್ಲೂ ತಾನು ಮೋಹಗೊಂಡಿರುವುದಾಗಿಯೂ ತಿಳಿಸಿದಳು. ಆದರೆ ಲಕ್ಕಣ್ಣ ಈರಣ್ಣ ಅದನ್ನು ತಿರಸ್ಕರಿದರು. ಕಡೆಗೆ ರಾಜನಿಗೆ ಆಕೆ ಆ ಇಬ್ಬರೂ ತನ್ನ ಶೀಲ ಕೆಡಿಸಲು ಪ್ರಯತ್ನಿಸಿದರೆಂದು ದೂರು ಹೇಳಿ ಶೂಲಕ್ಕೆ ಹಕಿಸಿದಳು.

ಇದೇ ಕಾಲಕ್ಕೆ ಮತ್ತು ಘಟನೆಗೆ ಸಂಬಂಧಿಸಿದ್ದು ರಾಣಿ ಶಾಂತವ್ವೆಯ ಕಥೆ. ರಾಣಿ ಶಾಂತವ್ವೆಗೆ ಮುತ್ತಿನಂತಹ ಇಬ್ಬರು ಮಕ್ಕಳು. ಒಂದು ಗಂಡು ಒಂದು ಹೆಣ್ಣು, ಜೋಡಿ ಪಾರಿವಾಳ ಗೂಡುಕಟ್ಟಿ ಎರಡು ಮರಿ ಮಾಡಿ ಸಂತೋಷದಿಂದ ಇರುವಂತೆ ಆ ರಾಜ ರಾಣಿ ಮತ್ತು ಮಕ್ಕಳು ಇದ್ದರು. ಹೀಗಿರುವಲ್ಲಿ ರಾಜ ಶತೃಗಳ ಮೇಲೆ ಯುದ್ಧಕ್ಕೆ ಹೋದ. ಅಲ್ಲಿ ಅವನು ಕಿರು ಜಾತಿಯ ಸುಂದರಿಯೊಬ್ಬಳಲ್ಲಿ ಮೋಹಗೊಂಡು ತನ್ನ ಪತ್ನಿಯಾಗುವಂತೆ ಹೇಳಿಕಳಿಸಿದ. ಅದಕ್ಕೆ ಅವಳು ತನ್ನ ಹೊಟ್ಟೆಯಲ್ಲಿ ಹುಟ್ಟುವ ಮಗುವಿಗೆ ಪಟ್ಟ ಕಟ್ಟುತ್ತೇನೆಂದು ಭಾಷೆ ಕೊಟ್ಟರೆ ರಾಜನನ್ನು ಮದುವೆಯಾಗುವುದಾಗಿ ಹೇಳಿದಳು. ಕಾಮಾಂಧನಾದ ರಾಜ ಅದಕ್ಕೆ ಒಪ್ಪಿ ಅವಳನ್ನು ಮದುವೆಯಾಗಿ ತನ್ನ ಅರಮನೆಗೆ ಕರೆದುಕೊಂಡು ಬಂದ.

ಸವತಿ ಅರಮನೆಗೆ ಬಂದ ಮೇಲೆ ಹಿರಿಯ ರಾಣಿಗೆ ತೊಂದರೆಗಳು ಆರಂಭವಾದವು. ಅವಳಿಗೆ ಮಲಗಲು ಮುರುಕು ಮಂಚ, ತಿನ್ನಲು ಸೀಕು ಪಾಕು ಕೊಡುವಳು. ಉಡಲು ಹುರುಕು ಸೀರೆ. ಕುಂತರೆ ಬಯ್ಗುಳು, ನಿಂತರೆ ಬಹ್ಗುಳ. ಹಿರಿಯ ರಾಣಿಯ ಮಕ್ಕಳಲ್ಲಿ ಮಗಳು ಮದುವೆಯಾಗಿ ಗಂಡನ ಮನೆಯಲ್ಲಿದ್ದಳು. ಮಗ ಅಪ್ಪನ ಜೊತೆಯಲ್ಲಿ ಯಾವಗಲೂ ಯುದ್ಧ ಎಂದು ದೂರು ದೇಶದಲ್ಲಿರುತ್ತಿದ್ದ. ಪಾಪ ಹಿರಿಯ ರಾಣಿಯ ಗೋಳನ್ನು ಕೇಳುವವರೇ ಅರಮನೆಯಲ್ಲಿ ಇಲ್ಲವಾದರು.

ಹೀಗಿರುವಾಗ ಕಿರಿಯರಾಣಿಗೆ ಗಂಡು ಮಗುವೊಂದು ಹುಟ್ಟಿತು. ವಳು ರಣರಂಗದಲ್ಲಿರುವ ರಾಜನಿಗೆ ಸುದ್ದಿ ಕಳಿಸಿ ಕರೆಸಿಕೊಂಡಳು. ಅರಮನೆಯಲ್ಲಿ ಸಂಭ್ರಮ ಸಡಗರ. ಹಿರಿಯ ರಾಣಿಯ ಕಡೆ ಯಾರೂ ಕಣ್ಣೆತ್ತಿಯೂ ನೋಡಲಿಲ್ಲ. ಹಿರಿಯ ರಾಣಿಯ ಅಶ್ರಯದಿಂದ ಮೇಲೆ ಬಂದ ಕೆಲವು ಸರದಾರರಿದ್ದರು. ಅವರೂ ಅವಳ ಮಗನೊಂದಿಗೆ ರಣರಂಗದಲ್ಲಿದ್ದರು. ಇತ್ತ ಕಿರಿಯ ರಾಣಿಯ ರಾಣಿ ತನ್ನ ಮಗನಿಗೆ ಈಗಲೇ ಪಟ್ಟ ಕಟ್ಟಬೇಕೆಂದು ಹಠ ಹಿಡಿದಳು. ರಾಜ ಮಾತಿಗೆ ತಪ್ಪಲಾರದೆ ಒಪ್ಪಬೇಕಾಯಿತು ಈ ವಿಷಯ ತಿಳಿದ ಸರದಾರರು ಹಿರಿಯ ಹೆಂಡತಿಯ ಮಗನಿಗೆ ಪಟ್ಟವಾಗಬೇಕೆಂದು ದಂಗೆ ಎದ್ದರು. ರಾಜ್ಯ ಅಲ್ಲೋಲ ಕಲ್ಲೋಲವಾಯಿತು. ಇತ್ತ ಕಿರಿಯ ರಾಣಿ ಸಂಚು ಮಾಡಿ ಹಿರಿಯ ರಾಣಿಯ ಮಗನನ್ನು ಕೊಲ್ಲಿಸಿದಳು. ಅವನೇ ಹೋದ ಮೇಲೆ ಯಾರಿಗಾಗಿ ದಂಗೆ ಏಳಬೇಕೆಂದು ಸರದಾರರೆಲ್ಲಾ ಸುಮ್ಮನಾದರು. ಕಿರಿಯ ರಾಣಿಯ ಹಸುಮಗುವಿಗೆ ಪಟ್ಟ ಕಟ್ಟಿದರು.

ಇದ್ದ ಒಬ್ಬನೇ ಮಗನೂ ತೀರಿಕೊಂಡ ಮೇಲೆ ಅರಮನೆಯ ಸಂಬಂಧ ಮುಗಿದಂತೆಯೇ ಎಂದು ರಾಣಿ ಶಾಂತವ್ವೆ ಮಗಳ ಮನೆಗೆ ಹೊರಟಳು. ಮುಳ್ಳು ಕಲ್ಲುಗಳನ್ನು ತುಳಿದು ಕಾಲಲ್ಲಿ ರಕ್ತ ಸುರಿಯುವವರೆಗೆ ಕಾಡು ಮೇಡುಗಳಲ್ಲಿ ನಡೆದಳು. ದಾರಿಯಲ್ಲಿ ಶಿವಗಂಗೆ ಕ್ಷೇತ್ರ ಸಿಕ್ಕಿತು. ಶಾಂತವ್ವೆ ಗಂಗಾಧರೇಶ್ವರನ ದರ್ಷನ ಮಾಡಿದಳು. ಅಲ್ಲಿ ದೇವರ ಸೇವೆಗೆ ಬಂದಿದ್ದ ಮಗಳೂರಿನವರು ಶಾಂತವ್ವೆಯ ಅಳಿಯ ಸತ್ತ ಸುದ್ದಿಯನ್ನು ತಿಳಿಸಿದರು. ಶಾಂತವ್ವೆಗೆ ಅಪಾರ ನಿರಾಶೆಯಾಯಿತು. ವಿದವೆಯಾದ ಮಗಳ ಮುಖ ನೋಡಲು ಹೆದರಿಕೆಯಾಯಿತು. ಬೆಟ್ಟದ ಕಲ್ಲು ಕಲ್ಲಿನ ಮೇಲೆ ಕುಳಿತು ತನಗೊದಗಿದ ಕಷ್ಟಗಳಿಗೆ ದುಃಖಿಸಿದಳು. ಕಡೆಗೆ ಕೋಡುಗಲ್ಲಿಗೆ ಹತ್ತಿ ಗಂಗಾಧರೇಶ್ವರಾ ನನ್ನನ್ನು ನಿನ್ನ ಪಾದಕ್ಕೆ ಸೇರಿಸಿಕೋ ಎಂದು ಕೆಳಗೆ ಹಾರಿ ಶಿವನ ಪಾದ ಸೇರಿಕೊಂಡಳು.

ಈ ಎರಡೂ ಕಥೆಗಳು ಹೊಯ್ಸಳ ವಿಷ್ಣುವರ್ಧನ ಮತ್ತು ಪಟ್ಟ ಮಹಾದೇವಿ ಶಾಂತಲೆಯರ ಜೀವನಕ್ಕೆ ಸಂಬಂಧಿಸಿದವು, ಚರಿತ್ರಕಾರರು ಏನೇ ಹೇಳಿದರೂ ಲಕ್ಷ್ಮಿಯನ್ನು ಮದುವೆಯಾದ ನಂತರ ವಿಷ್ಣುವರ್ಧನನ ಸಾಂಸಾರಿಕ ಜೀವನ ಹದಗೆಟ್ಟಿತೆಂಬುದು ಸತ್ಯ. ಅವನು ಏಕಕಾಲದಲ್ಲಿ ಎರಡು ತಪ್ಪು ಮಾಡಿದ. ಒಂದು ಲಕ್ಷ್ಮಿಯಲ್ಲಿ ಜನಿಸುವ ಮಗುವಿಗೆ ಪಟ್ಟ ಕಟ್ಟುತ್ತೇನೆಂದು ಭಾಷೆ ಕೊಟ್ಟದ್ದು. ಮತ್ತೊಂದುಶ್ರೀ ವೈಷ್ಣವ ಧರ್ಮವನ್ನು ಸ್ವೀಕರಿಸಿದ್ದು. ಮೊದಲನೆಯ ತಪ್ಪಿನಿಂದ ಅವನು ಆವರೆಗೆ ನಡೆದು ಬಂದ ಪದ್ಧತಿಯನ್ನು ಧರ್ಮದ ಕಾರಣಕಾಗಿ ಮಿರಿದು ಸಾಮಂತರ, ಮಾಂಡಲೀಕರ ವಿರೋಧ ಕಟ್ಟಿಕೊಂಡ. ಎರಡನೆಯ ತಪ್ಪಿನಿಂದ ನಾಡಿನ ಪ್ರಬಲ ಜನರಾದ ಶೈವರನ್ನೂ ಉನ್ನತ ಸ್ಥಾನದಲ್ಲಿದ್ದ ಜೈನರನ್ನೂ ವಿರೋಧ ಕಟ್ಟಿಕೊಂಡ.

ವಿಷ್ಣುವರ್ಧನ ಮತ್ತು ಪಟ್ಟ ಮಹಾದೇವಿ ಶಾಂತಲೆಯರಿಗೆ ಮಕ್ಕಳಿದ್ದರೆಂಬುದು ಅನೇಕ ಅಧಾರಗಳಿಂದ ಖಚಿತವಾಗಾತ್ತದೆ. ಆದರೆ ಶಾಸನಗಳಲ್ಲಿ ಬರುವ ಈ ದಂಪತಿಗಳ ವರ್ಣನೆ ಕಂಡ ಚರಿತ್ರಕಾರರು ಅವರ ಮಕ್ಕಳ ವಿಚಾರ ಕೈ ಬಿಟ್ಟಂತೆ ಕಾಣುತ್ತದೆ. ” ವಿಷ್ಣುವರ್ಧನನ ರಾಣಿಯರಲ್ಲಿ ಶಾಂತಲದೇವಿ, ದೇವಕಿದೇವಿ, ಬಮ್ಮಲದೇವಿ ಎಂಬ ಮೂವರು ಪ್ರಸಿದ್ಧರಾಗಿದ್ದರು”.[1] ಇವರಲ್ಲಿ ಹಿರಿತನದ ಅಧಾರವಿತ್ತು. ಅದುದರಿಂದ ಮೊದಲನೆಯ ಪಟ್ಟ ಮಹಿಷಿಯ ಮಕ್ಕಳಿಗೆ ಅಧಿಕಾರ ಬರಬೇಕು. ಪ್ರಮುಖ ರಾಣಿಯರ ಪಟ್ಟಿಯಲ್ಲಿ ಲಕ್ಷ್ಮಿಯ ಹೆಸರೇ ಇಲ್ಲದಿರುವುದು ಗಮನಾರ್ಹ. “ಕ್ರಿ.ಶ. ೧೧೨೯ರ ಶಾಸನವೊಂದರಲ್ಲಿ ಕುಮಾರ ಬಲಾಳ ದೇವನು ವಿಷ್ಣುವರ್ಧನನ ಜ್ಯೇಷ್ಠ ಪುತ್ರನೆಂಬ ಹೇಳಿಕೆಯಿದೆ. ಇದರಿಂದ ವಿಷ್ಣುವರ್ಧನನಿಗೆ ಬೇರೆ ಮಕ್ಕಳಿದ್ದರೇ ಎಂಬ ಸಮಸ್ಯೆ ತಲೆದೋರುವುದು. ಕುಮಾರ ಬಲ್ಲಾಳನು ಶಾಂತಲೆಯಲ್ಲಿ ಜನಿಸಿದವನಾಗಿರಬೇಕು. ಈತನಿಗೆ ಹರಿಯಬ್ಬರಸಿ ಅಥವಾ ಹರಿಯಲೆ ಎಂಬ ತಂಗಿಯೊಬ್ಬಳಿದ್ದಳು[2]”.

ತಲಕಾಡಿನ ಮೇಲೆ ಚೋಳರನ್ನು ಓಡಿಸಲು ವಿಷ್ಣುವರ್ಧನ ರಾಜಧಾನಿಯಿಂದ ಬಹಳ ಕಾಲ ದೂರವಿರಬೇಕಾಯಿತು. ಪ್ರತಿ ಬಾರಿಯೂ ಅವನೊಂದಿಗೆ ತಪ್ಪದೆ ಇರುತ್ತಿದ್ದ ಪಟ್ಟ ಮಹಾದೇವಿ ತಲಕಾಡ ಯುದ್ಧದಲ್ಲಿ ವಿಷ್ಣು ವರ್ಧನನ ಜೊತೆಗಿರಲಿಲ್ಲ. ಆ ದಿನಗಳಲ್ಲಿ ಆಕೆ ಗರ್ಭಿಣಿ. ಆದುದರಿಂದ ಯುದ್ಧಭೂಮಿಗೆ ಪತಿಯೊಂದಿಗೆ ಹೋಗಲಿಲ್ಲ. ಎಂಬುದು ಕೆಲವರ ಅಭಿಪ್ರಾಯ. ಚೋಳರನ್ನು ಬಡಿದೋಡಿಸಿ ಅಲ್ಲಿನ ಆಡಳಿತ ವ್ಯವಸ್ಥೆ ಸರಿಮಾಡಲು ತೊಂಡನೂರಿನಲ್ಲಿ ಬಹಳ ಕಾಲ ನಿಲ್ಲಬೇಕಾಯಿತು. ಪ್ರಿಯಪತ್ನಿಯಿಂದ ದೂರವಿದ್ದ ವಿಷ್ಣುವರ್ಧನ ಸ್ವಾಭಾವಿಕವಾಗಿಯೇ ಶ್ರೀ ವೈಷ್ಣವಕನ್ಯೆ ಲಕ್ಷ್ಮಿಯಲ್ಲಿ ಅನುರಕ್ತನಾದ. ಒಂದು ವೇಳೆ ಶಾಂತಲೆಗೆ ಮಕ್ಕಳಿರಲೇ ಇಲ್ಲ ಎಂಬುದನ್ನು ನಂಬುವುದಾದರೆ ಲಕ್ಷ್ಮಿಯ ಮದುವೆಗೆ ಆಕೆಯಲ್ಲಿ ಹುಟ್ಟಿದ ಮಗುವಿಗೆ ಪಟ್ಟವಾಗಬೇಕೆಂದು ಷರತ್ತು ಹಾಕುವ ಪ್ರಸಂಗವಿರಲಿಲ್ಲ.

ವಾಸ್ತವವಾಗಿ ಲಕ್ಷ್ಮಿಯ ರಾಜಧಾನಿಯ ಪ್ರವೇಶ ಅನೇಕ ರೀತಿಯಲ್ಲಿ ಹೊಯ್ಸಳ ರಾಜ್ಯವನ್ನು ಕಲುಕಿತು. ಪಟ್ಟ ಮಹಾದೇವಿ ಶಾಂತಲೆಯ ಅನಭಿಷಕ್ತ ಸ್ಥಾನಮಾನಗಳಿಗೆ ತಡೆಬಿದ್ದಿತು. ಇದರಿಂದ ಅನೇಕ ಜೈನ ಮತ್ತು ಶೈವ ಸಂಪ್ರದಾಯದ ಮಂತ್ರಿ ಪ್ರಧಾನಿಗಳು ಸಾಮಂತರು ದಂಡನಾಯಕರು ಕುಪಿತಗೊಂಡರು. ಆ ಕಾಲದ ಅತ್ಯಂತ ಪ್ರಭಾವಶಾಲಿಗಳಾದ ಗಂಗರಾಜ, ಮರಿಯಣ್ಣ ದಂಡಾನಾಯಕರೇ ಅಸಮಾಧಾನಗೊಂಡ ಕುರುಹುಗಳಿವೆ. ಎಲ್ಲರೂ ಸಂದರ್ಭಕ್ಕಾಗಿ ಕಾಯುತ್ತಿದ್ದರು.

ಲಕ್ಷ್ಮಿಯಲ್ಲಿ ಒಂದು ಗಂಡುಮಗು ಜನಿಸಿದಾಗ ಈ ಎಲ್ಲವೂ ಒಟ್ಟಿಗೇ ಭುಗಿಲೆದ್ದುವು. ಮೂರು ವರ್ಷದ ಕೂಸು ವಿಜಯನಾರಸಿಂಹನಿಗೆ ಪಟ್ಟ ಕಟ್ಟುವ ಏರ್ಪಾಡನ್ನು ಅನೇಕ ಮುಖಂಡರು ಪ್ರಧಾನವಾಗಿ ಶೈವರು ವಿರೋಧಿಸಿದರು. ಅವರಲ್ಲಿ ಲಕ್ಕಣ್ಣ ದಂಡೇಶನೂ ಒಬ್ಬ. ಸ್ವತಃ ವಿಷ್ಣುವರ್ಧನನೇ ಬದುಕಿದ್ದನಾದುದರಿಂದ ಹಿರಿಯರನೇಕರು ತಟಸ್ಥರಾಗಿರಬೇಕಾಗಿತ್ತು. ಶಾಂತಲೆಯಮಗ ಮತ್ತು ಅಳಿಯ ಈ ದಂಗೆಯ ಸಮಯದಲ್ಲಿ ಹತರಾದರೆಂದೂ, ಆ ಸಮಯದಲ್ಲಿ ವಿಷ್ಣುವರ್ಧನ ದೂರದಲ್ಲಿ ಯುದ್ಧನಿರತನಾಗಿದ್ದನೆಂದೂ ಅಭಿಪ್ರಾಯವಿದೆ. “ವಿಜಯನಾರಸಿಂಹನಿಗೆ ಉತ್ತರಾಧಿಕಾರ ಪ್ರಾಪ್ತಿಯು ನಿಷ್ಕಂಟಕವಾಗಿರಲಿಲ್ಲ. ವಿಜಯನಾರಸಿಂಹನು ದಾಯಾದದಾವಾನಳನೆಂದು ಶಾಸನೋಕ್ತನಾಗಿರುವುದರಿಂದ, ಅವನಿಗೆ ಪಟ್ತವನ್ನು ತಪ್ಪಿಸುವ ದುರಾಲೋಚನೆಯಿಂದ ಷಡ್ಯಂತ್ರ ರಚನೆಗೆ ಕೈಯಿಕ್ಕಿದವರು ಕೆಲವರಾದರೂ ಇರಬೇಕು. ಶಾಂತಲಾದೇವಿಯ ಮಗನೆಂದು ಊಹಿಸಲ್ಪಟ್ಟ ಕುಮಾರ ಬಲ್ಲಾಳದೇವನು ಪ್ರಾಯಃ ಪಟ್ಟವನ್ನು ಕಿತ್ತಕೊಳ್ಳಲು ಹವಣಿಸಿರಬೇಕೆಂದು ತೋರುತ್ತದೆ”

ಈ ಎಲ್ಲಾ ಘಟನೆಗಳಿಂದ ವಿಷ್ಣು ವರ್ಧನ ಮತ್ತು ಶಾಂತಲೆಯರಿಬ್ಬರೂ ದೂರಾಗಿ ನೋವನ್ನನುಭವಿಸಿದರು. ಬೇಲೂರಿನ ಅರಮನೆ ನರಕವಾಗಿ ಶಾಂತಲೆ ಮಗಳ ಮನೆಗೆಂದು ಶಿವಗಂಗೆ ಪ್ರಾಂತದ ಕುರುವಗೆರೆಯುತ್ತ ಹೊರಟುಬಿಟ್ಟಳು. ಆದರೆ ಶಿವಗಂಗೆಗೆ ತಲುಪುವಷ್ಟರಲ್ಲಿ ಅಳಿಯ ಹತನಾಗಿ ಮಗಳು ವಿಧವೆಯಾದ ಸುದ್ದಿ ತಲುಪಿತು. ಇದ್ದ ಒಂದು ಅಶಾಕಿರಣವೂ ನಂದಿಹೋಗಿ ಜೀವನದಲ್ಲಿ ಬೇಸತ್ತ ಆಕೆ ಶಿವಗಂಗೆಯಲ್ಲಿ ಅತ್ಮ ಹತ್ಯೆ ಮಾಡಿಕೊಂಡಳು ಎನ್ನುವುದಕ್ಕಿಂತ ಪ್ರಾಣಾರ್ಪಣೆ ಮಾಡಿಕೊಂಡಳು. ವಿಷ್ಣು ವರ್ಧನ ಕೂಡ “ತನ್ನ ಜೀವಿತದ ಕೊನೆಗಾಲದಲ್ಲಿ ದ್ವಾರ ಸಮುದ್ರದಲ್ಲಿ ನೆಲಸುವ ಅಭಿಲಾಷೆಯಿಂದ ದ್ವಾರಸಮುದ್ರವನ್ನು ನಾನಾ ಸುಂದರ ಪ್ರಸಾದಗಳಿಂದಲೂ ದೇವಾಲಯ ನಿರ್ಮಾಣದಿಂದಲೂ ಸುಂದರ ನಗರವಾಗಿ ರೂಪಿಸಲು ಉದ್ದೇಶಿಸಿದನು” ಶಿವಗಂಗೆಯಿಂದ ಶಾಂತಲೆಯ ಕಳೇಬರವನ್ನು ತಂದು ಹಳೇಬೀಡಿನಲ್ಲಿ ಮಣ್ಣು ಮಾಡಿ ಆಸ್ಥಳದಲ್ಲಿ ಶಾಂತಲೇಶ್ಚರ ಲಿಂಗ ಸ್ಥಾಪಿಸಲಾಯಿತು. ಅನಂತರ ವಿಷ್ಣುವರ್ಧನನನ್ನು ಅಲ್ಲಿಯೇ ಸಮಾಧಿ ಮಾಡಿ ಹೊಯ್ಸಳೇಶ್ವರ ಲಿಂಗ ಸ್ಥಾಪಿಸಲಾಯಿತು. ಇದೇ ಇಂದಿಗೆ ಹಳೆಯಬೀಡಿನಲ್ಲಿರುವ ಹೊಯ್ಸಳೇಶ್ವರ ಶಾತಲೇಶ್ವರ ದೇವಾಲಯ. ಇಂದಿಗೂ ಆ ಭಾಗದಲ್ಲಿ ಸತ್ತವರ ಸಮಾಧಿಯ ಶಿರಭಾಗದಲ್ಲಿ ಲಿಂಗವನ್ನೂ ಕಾಲುಗಳ ಭಾಗದಲ್ಲಿ ಬಸವನನ್ನೂ ಪ್ರತಿಷ್ಟಾಪಿಸುವ ಪದ್ಧತಿ ಜೀವಂತವಾಗಿದೆ. ಹೊಯ್ಸಳ ಚರಿತ್ರೆಯ ದುರಂತ ಸಂದರ್ಭ ಲಕ್ಕಣ್ಣ – ಈರಣ್ಣ ಮತ್ತು ರಾಣಿ ಶಾಂತವ್ವೆ ಈ ಎರಡೂ ಜನಪದ ಕಥೆಗಳಲ್ಲಿ ಬೆರೆತುಕೊಂಡಿದೆ.

ಮಾಗಡಿ ಕೆಂಪೇಗೌಡ ಮತ್ತು ಕುಮ್ಮಟದ ರಾಮ ವಿಜಯನಗರದ ಕಾಲದ ಎರಡು ದುರಂತ ಘಟನೆಗಳು ಇತಿಹಾಸದಿಂದ ಜಾನಪದಕ್ಕೆ ಬಂದಂಥವು. ಮಾಗಡಿ ಕೆಂಪೇಗೌಡ ಧಾರ್ಮಿಕ ಘರ್ಷಣೆಯಿಂದ ಆದ ಘಟನೆಯಾದರೆ ಕುಮ್ಮಟದ ರಾಮ ಕಾಮದ ಅತಿರೇಕದಿಂದ ಆದ ಘಟನೆ. ಈ ಎರಡೂ ಆಯಾ ವಂಶದ ಕೊನೆಯ ರಾಜರುಗಳ ಕಾಲದಲ್ಲಿ ನಡೆದಂತಹವು. ಮಾಗಡಿ ಕೆಂಪೇಗೌಡ ಕಥೆಯಲ್ಲಿ ಆ ವಂಶದ ಹಿಂದಿನವರು ಒಬ್ಬಿಬ್ಬರ ಬಗ್ಗೆಯೂ ಸೂತರ ರೂಪವಾಗಿ ಅರಿಯಲವಕಾಶವಿದೆ. ಕುಮ್ಮಟರಾಮನ ಕಥೆಯಲ್ಲಿ ಮುದಿತಂದೆಯ ಯುವತಿ ಹೆಂಡತಿ ತನ್ನ ಬಲಮಗನನ್ನೇ ಮೋಹಿಸಿದ ದುರಂತದ ಕಥೆಯಿದೆ.

ಒಂದಾನೊಂದು ಕಾಲದಲ್ಲಿ ಬಂಡಿ ಭೈರೇಗೌಡನಿದ್ದ. ಅವನದು ಅಷ್ಟೈಶ್ವರಿಯ ಜೀವನ. ನಾಡಿನ ಸಕಲರಿಗೂ ಅವನು ಅನ್ನದಾತ. ಊರೂರಲ್ಲೆಲ್ಲಾ ಗದ್ದೆ, ತೋಟ, ದನ, ಕುರಿ. ಭೈರೇಗೌಡ ಕೊಡುಗೈ ದೊರೆ. ಅವನಿಗೆ ಇಬ್ಬರು ಮಕ್ಕಳು. ಹಿರಿಯ ಮಗ ದೊಡ್ಡವನಾಗಿ ರಾಜನ ಸೇನೆಯಲ್ಲಿ ಅಧಿಪತಿಯಾಗಿದ್ದಾನೆ. ಕಿರಿಯ ಮಗ ಇನ್ನೂ ಚಿಕ್ಕವನು. ಹೀಗಿರುವಲ್ಲಿ ರಾಜರ ಪರವಾಗಿ ಯುದ್ಧರಂಗಕ್ಕೆ ಹೋದ ಹಿರಿಯ ಮಗ ಯುದ್ದದಲ್ಲಿ ಹೋರಾಡಿ ಮಡಿದ. ಸುದ್ದಿ ತಿಳಿದ ಬಂಡಿ ಭೈರೇಗೌಡ ಮತ್ತು ಅವನ ಪತ್ನಿ ಯೋಚಿಸಿ ಯೋಚಿಸಿ ಪ್ರಾಣತ್ಯಾಗ ಮಾಡಿದರು. ಚಿಕ್ಕಮಗ ಕೆಂಪೇಗೌಡ ಅನಾಥನಾದ. ಮಾವ ಸತ್ತ ಸುದ್ದಿ ತಿಳಿದ ಹಿರಿಯ ಮಗನ ಹೆಂಡತಿ ಹರಿಯಾಲದೇವಿ ಬಂದು ಮೈದುನನ್ನು ಸಾಕಿ ಸಲಹಿ ರಾಜ್ಯ ಕೊಡಿಸಿದಳು.

ಈ ಕಥೆಯ ಮತ್ತೊಂದು ಪಾಠವನ್ನು ಇಲ್ಲಿಯೇ ಹೇಳಬೇಕು. ಬಂಡಿ ಭೈರೇಗೌಡನಿಗೆ ಇದ್ದ ಒಬ್ಬನೇ ಮಗ ತೀರಿಕೊಂಡ. ಸೊಸೆ ಹರಿಯಾದೇವಿ ತವರಿಗೆ ಹೋದಳು. ಬಂಡಿ ಭೈರೇಗೌಡನಿಗೆ ಸಕಲವೂ ಇದೆ ಆದರೆ ವಂಶ ಬೆಳೆಯದಂತಾಯಿತು. ಆಗ ಆತ ಮನೆದೇವತೆ ಕೆಂಪಮ್ಮನನ್ನು ಪ್ರಾರ್ಥಿಸಿದ. ಒಂದು ಗಂಡು ಮಗುವಾಯಿತು. ಆದರೆ ಭೈರೆಗೌಡ ಮತ್ತೆ ಅವನ ಪತ್ನಿ ತೀರಿಕೊಂಡಳು. ಆಗ ಸುದ್ದಿ ತಿಳಿದ ಹರಿಯಾಲದೇವಿ ಬಂದು ಮಗುವನ್ನು ಸಾಕಿದಳು.

ಇನ್ನೊ೦ದು ಪಾಠದಂತೆ ಬಂಡಿ ಭೈರೇಗೌಡನಿಗೆ ಸಕಲವೂ ಇದೆ. ಆದರೆ ಮಕ್ಕಳಿಲ್ಲ. ಅದಕ್ಕಾಗಿ ಆತ ರಂಗನಾಥನನ್ನು ಆರಾಧಿಸಿದ. ಕಡೆಗೆ ಅವನಿಗೆ ಗಂಡು ಮಗುವೊಂದು ಆಯಿತು. ಆದರೇನು ಅದು ಮೂಲಾ ನಕ್ಷತ್ರದಲ್ಲಿ ಹುಟ್ಟಿತು. ಇದರಿಂದ ತಂದೆ ತಾಯಿಯರಿಗೆ ಮರಣ ಎಂಉ ಜೋಯಿಸರು ಹೇಳಿದರು. ಭೈರೇಗೌಡಾ ಅದಕ್ಕೆ ಶಾಂತಿ ಮಾಡಲು ತನ್ನ ಸಕಲೈಸಿರಿಯನ್ನು ಭ್ರಾಹ್ಮಣರಿಗೆ ದಾನ ಮಾಡಿದ. ಸಾಲವನ್ನು ಮಾಡಿ ದಾನ ಮಾಡಿದ. ಆದರೂ ಪ್ರಯೋಜನವಾಗಲಿಲ್ಲ. ಭೈರೇಗೌಡ ಮತ್ತು ಅವನ ಹೆಂಡತಿ ಸತ್ತರು. ಭೈರೇಗೌಡನ ಹೆಂಡತಿಯ ಸಹಾಯಕಿ ಕುಪ್ಪಮ್ಮ ಎಂಬುವಳು ಆ ಮಗುವನ್ನು ಸಾಕುತ್ತಿದ್ದಳು. ಈ ಸುದ್ದಿ ತಿಳಿದ ಹರಿಯಾಲದೇವಿ ಬಂದು ಭೈರೇಗೌಡ ಮಾಡಿದ್ದ ಸಾಲವನ್ನೆಲ್ಲಾ ತೀರಿಸಿದಳು. ಈ ಕಥೆಯ ಒಂದೇ ರೀತಿಯಲ್ಲಿ ಮುಂದುವರಿಯುತ್ತದೆ.

ತಬ್ಬಲಿಯಾದ ಕೆಂಪಯ್ಯನನ್ನು ಕಟ್ಟಿಕೊಂಡು ಹರಿಯಾಲದೇವಿ ಕೆಲವು ಕಾಲ ಹಾಗೂ ಹೀಗೂ ಕಾಲ ತಳ್ಳುತ್ತಾಳೆ. ಬಂಡಿ ಭೈರೇಗೌಡನ ಐಶ್ವರ್ಯವೆಲ್ಲಾ ಹೋಗಿ ಅವರಿಗೆ ವಿಪರೀತ ಬಡತನ ಬರುತ್ತದೆ. ಜೀವನ ಕಷ್ಟವಾಗುತ್ತದೆ. ಕಡೆಗೆ ಹರಿಯಾಲದೇವಿ ಅವನನ್ನು ಕರೆದುಕೊಂಡು ಮಾಗಡಿ ಪಟ್ಟಣಕ್ಕೆ ಬರುತ್ತಾಳೆ. ಅವರಿವರ ಮನೆಯಲ್ಲಿ ಕೂಲಿನಾಲಿ ಮಾಡಿ ಕೆಂಪಯ್ಯನನ್ನು ಸಾಕುತ್ತಿರುತ್ತಾಳೆ.

ಕೆಂಪಯ್ಯ ಹತ್ತು ಹದಿನೈದು ವರ್ಷದ ಯುವಕನಾಗಿ ಬೆಳೆಯುತ್ತಾನೆ. ಅತ್ತಿಗೆಯ ಕಷ್ಟ ತಪ್ಪಿಸಬೇಕೆಂದು ಅವನು ಕೆಲಸ ಹುಡುಕುತ್ತಾ ಪೇಟೆಯಲ್ಲಿ ಹೋಗುತ್ತಾನೆ. ಆಗ ಅಣ್ಣೋಜಿ, ತಮ್ಮೋಜಿ ಎಂಬ ಬ್ರಾಹ್ಮಣರು ಈ ಹುಡುಗನನ್ನು ನೋಡಿ ತಮ್ಮ ತೋಟದ ಕೆಲಸಕ್ಕೆ ಆಗುತ್ತಾನೆಂದು ಉಪಾಯದಿಂದ ಕರೆದು ಮಾತನಾಡಿಸುತ್ತಾರೆ. ಕೆಂಪಾಯ್ಯನಿಗೆ ಇಲ್ಲದ ಆಸೆ ತೋರಿಸಿ ಜೀತಕ್ಕೆ ಒಪ್ಪಿಸಿಕೊಳ್ಳುತ್ತಾರೆ. ಈ ವಿಷಯವನ್ನು ತಿಳಿದ ಹರಿಯಾಲದೇವಿ ರಾಜನಾದವನು ಜೀತ ಮಾಡುವುದೇ ಬೇಡ ಎಂದು ಎಷ್ಟೋ ಹೇಳುತ್ತಾಳೆ. ಆದರೆ ಕೆಂಪೇಗೌಡ ಮಾತು ಕೊಟ್ಟ ಮೇಲೆ ಅದರಿಂದ ಬೇರೆಯಾಗುವುದು ಸಾಧ್ಯವಿಲ್ಲವೆಂದು ಅತ್ತಿಗೆಯನ್ನು ಸಮಾಧಾನ ಪಡಿಸುತ್ತಾನೆ.

ಮೊದಲು ಸುಖವಾಗಿ ನೊಡಿಕೊಳ್ಳುತ್ತೇವೆಂದು ಮಾತುಕೊಟ್ಟ ಬ್ರಾಹ್ಮಣರು ಕೆಂಪಯ್ಯನಿಂದ ಹಗಲು ರಾತಿಕೆಲಸ ತೆಗೆಯಲಾರಂಭಿಸುತ್ತಾರೆ. ಹೊತ್ತುಹೊತ್ತಿಗೆ ಊಟವಿಲ್ಲ. ಮಲಗಲು ಒಳ್ಳೆಯ ಹಾಸಿಲ್ಲ. ತಾವುಂಡು ಉಳಿದ ಸೀಕು ಪಾಕು ಹಾಕಿದರೆ ಹಾಕಿದರು ಇಲ್ಲವಾದರೆ ಇಲ್ಲ. ತಮ್ಮ ಬಾಳೇತೋಟ ಅಗೆಯುವ ಕೆಲಸ ಕೊಡುತ್ತಾರೆ. ಕೆಂಪಯ್ಯ ಹಗಲು ರಾತ್ರಿ ಅಗೆಯುತ್ತಿರುತ್ತಾನೆ. ಒಂದು ದಿನ ಬೆಳಗಿನಿಂದ ಹೊತ್ತೇರುವವರೆಗೆ ಅಗೆದಿದ್ದಾನೆ. ತಿನ್ನಲು ಏನೂ ತಂದುಕೊಟ್ಟಿಲ್ಲ. ಉರಿಬಿಸಿಲು. ಹಸಿವು ಸುಸ್ತಾಗಿ ಬಾಳೆಯ ನೆರಳಿನಲ್ಲಿ ಹಾಗೇ ಮೈಚೆಲ್ಲುತ್ತಾನೆ. ದಣಿದ ಅವನಿಗೆ ವಿಪರೀತ ನಿದ್ರೆ ಬಂದುಬಿಟ್ಟಿದೆ. ಸೂರ್ಯ ಮುಂದೆ ಹೋದಂತೆಲ್ಲಾ ಬಾಳೆಯ ನೆರಳೂ ಮುಂದೆ ಹೋಗುತ್ತದೆ. ಕೆಂಪಯ್ಯನ ಮುಖದ ಮೇಲೆ ಬಿಸಿಲು ಬೀಳಬೇಕು. ಅಷ್ಟರಲ್ಲಿ ಸರ್ಪವೊಂದು ಬಂದು ತನ್ನ ಹಡೆ ಬಿಚ್ಚಿ ಕೆಂಪಯ್ಯನ ಮುಖಕ್ಕೆ ನೆರಳು ಮಾಡುತ್ತದೆ.

ಹೊತ್ತು ಇಳಿಯಲಾರಂಭಿಸಿದ ಮೇಲೆ ಉಂಡು ಮಲಗಿದ್ದು ಕೆಂಪಯ್ಯನಿಗೆ ಸೀಕುಪಾಕು ತಿನ್ನಲು ತಂದ ಅಣ್ಣೋಜಿ ಕೆಲಸ ಮಾಡುತ್ತಿದ್ದಾನೆಯೋ ಇಲ್ಲವೋ ಪರೀಕ್ಷಿಸಲು ಕಳ್ಳ ಹೆಜ್ಜೆ ಇಡುತ್ತಾ ಬಂದ. ನೋಡುತ್ತನೆ ಕೆಂಪಯ್ಯ ಮಲಗಿದ್ದಾನೆ. ಹಾವು ಹೆಡೆ ಬಿಚ್ಚಿ ನೆರಳು ಮಾಡಿದೆ. ಅಣ್ಣೋಜಿಗೆ ಕೂದಲೇ ಇವನು ಮುಂದೆ ದೊಡ್ದ ಮನುಷ್ಯನಾಗುತ್ತಾನೆಂದು ತಿಳಿದು ಹೋಯಿತು. ಕೂಡಲೇ ಊರಿಗೆ ಹೋಗಿ ತಮ್ಮೋಜಿಗೆ ಈ ವಿಚಾರ ತಿಳಿಸಿದ. ಇಬ್ಬರೂ ಪಲ್ಲಕ್ಕಿ ತೆಗೆದುಕೊಂಡು ತೋಟಕ್ಕೆ ಹೋಗಿ ಮಲಗಿದ್ದ ಕೆಂಪಯ್ಯನನ್ನು ಎಬ್ಬಿಸಿದರು. ಅವನನ್ನು ಬಲವಂತವಾಗಿ ಪಲ್ಲಕ್ಕಿಯಲ್ಲಿ ಕೂರಿಸಿ ಮನೆಗೆ ಕರೆತಂದು ಸ್ನಾನ ಮಾಡಿಸಿ ಮಡಿ ಬಟ್ಟೆ ಹಾಕಿಸಿದರು. ಬಿಸಿ ಬಿಸಿ ಪಾಯಸ ಪರಮನ್ನಗಳ ಊಟ. ಕೆಂಪಯ್ಯನಿಗೆ ಗಾಬರಿ. ಊಟವಾದ ಮೇಲೆ ಅಣ್ಣೋಜಿ, ತಮ್ಮೋಜಿ ತಾಂಬೂಲ ಅವನ ಎದುರಿಗಿಟ್ಟು “ಕೆಂಪಯ್ಯ ನೀನು ರಾಜನಾದಾಗ ನಮಗೆ ಮಂತ್ರಿ ಪ್ರಧಾನಿ ಕೆಲಸ ಕೊಡಬೇಕು. ಹಾಗಂತ ಭಾಷೆ ಕೊಡು” ಎಂದರು. ಏನನ್ನೂ ಅರಿಯದ ಕೆಂಪಯ್ಯ ಹಾಗೆಯೇ ಭಾಷೆ ಕೊಟ್ಟ. ಬ್ರಾಹ್ಮಣರಿಬ್ಬರೂ ಆ ಮಾತಿನಿಂದ ಬೀಗಿಹೋದರು.

ಆ ರಾಜ್ಯದ ರಾಜನಿಗೆ ಮಕ್ಕಳೇ ಇರಲಿಲ್ಲ. ರಾಜನಿಗೆ ವಯಸ್ಸಾಯಿತು. ಮಂತ್ರಿ ಪ್ರಧಾನಿಗಳೊಂದಿಗೆ ಮುಂದಿನ ವಿಷಯ ಚರ್ಚಿಸಿದ. ಅವರು ನಾಡಿನ ಪದ್ಧತಿಯಂತೆ ಪಟ್ಟದ ಆನೆಗೆ ಹಾರಕೊಟ್ಟು ಅದು ಯಾರಿಗೆ ಹಾಕುತ್ತದೆಯೋ ಅವನನ್ನು ರಾಜನನ್ನಾಗಿ ಸ್ವೀಕರಿಸುವುದು ಎಂದರು. ಈ ವಿಚಾರವನ್ನು ಡಂಗುರ ಹೊಡೆಸಿದರು. ಅಣ್ಣೋಜಿ, ತಮ್ಮೋಜಿ ಕೆಂಪಯ್ಯನನ್ನು ಕರೆದುಕೊಂಡು ಹೋದರು. ಬೀದಿಯಲ್ಲಿ ಉದ್ದಕ್ಕೂ ಬಂದ ಪಟ್ಟದ ಆನೆ ಕೆಂಪಯ್ಯನ ಕೊರಳಿಗೆ ಮಾಲೆ ಹಾಕಿತು. ಕೂಡಲೇ ರಾಜಭಟರು ಅವನನ್ನು ಗೌರವದಿಂದ ಪಟ್ಟದಾನೆಯ ಮೇಲೆ ಕೂರಿಸಿ ಅರಮನೆಗೆ ಕರೆದೊಯ್ದರು. ಅಲ್ಲಿ ಅವನಿಗೆ ಮುಂದಿನ ರಾಜನಾಗಿ ಪಟ್ಟವಾಯಿತು.

ಅಧಿಕಾರ ಕೈಗೆ ಬಂದ ಕೂಡಲೇ ಕೆಂಪಯ್ಯ ಕೆಂಪೇಗೌಡ ಆದ. ಅತ್ತಿಗೆ ಹರಿಯಾಲದೇವಿಯನ್ನು ಅರಮನೆಗೆ ಕರೆಸಿಕೊಂಡ. ತಾನು ಮಾತು ಕೊಟ್ಟಂತೆ ಅಣ್ಣೋಜಿ, ತಮ್ಮೋಜಿಯನ್ನು ಪ್ರಧಾನಿ, ಮಂತ್ರಿ ಮಾಡಿಕೊಂಡ. ಕೆಂಪೇಗೌಡನ ಅಧಿಕಾರ ತಾನೇ ತಾನಾಗಿ ಬೆಳೆಯಿತು. ಇತ್ತ ಅಣ್ಣೋಜಿ ತಮ್ಮೋಜಿ ತಮ್ಮ ಜಾತಿಯವರಿಗೆ, ತಮಗೆ ಬೇಕು ಬೇಕಾದ್ದು ಮಾಡಿಕೊಳ್ಳಲಾರಂಭಿಸಿದರು. ಕೆಂಪೇಗೌಡನಿಗೆ ಹೇಳಿ ತಮ್ಮವರಿಗೆ, ಸಾವಿರಾರು ದೇವಸ್ಥಾನಗಳನ್ನು ಕಟ್ಟಿಸಿ ಕೊಟ್ಟರು. ಇದರಿಂದ ಬೇರೆ ದರ್ಮದವರಿಗೆ ಅಸಮಧಾನವಾಯಿತು ಅಧಿಕಾರ ಹೆಚ್ಚಿದಂತೆಲ್ಲಾ ಕೆಂಪೇಗೌಡ ದೇವರು ದಿಂಡರನ್ನೆಲ್ಲಾ ಮರೆತ. ಒಂದು ದಿನ ರಂಗನಾಥನ ತೀರ್ಥದಲ್ಲಿ ಬಿಳಿಯಕೂದಲು ಸಿಕ್ಕಿತು. ಕೆಂಪೇಗೌಡ ರಂಗನಾಥ ಮುದುಕನಾದನೆಂದು ಬಗೆದು ತನ್ನ ನಿಷ್ಟೆಯನ್ನು ಸೋಮೇಶ್ವರನಿಗೆ ಬದಲಾಯಿಸಿಕೊಂಡ. ರಂಗನಾಥ ಕನಸಿನಲ್ಲಿ ಬಂದು ಕೆಂಪೇಗೌಡನನ್ನು ಪರಿಪರಿಯಾಗಿ ಕೇಳಿಕೊಂಡ. ಆದರೂ ಕೆಂಪೇಗೌಡ ಸೋಮೇಶ್ವರನನ್ನು ಬಿಡಲು ಒಪ್ಪಲಿಲ್ಲ. ಇದರಿಂದ ಕುಪಿತಗೊಂಡ ರಂಗನಾಥನ ಕೃಪೆ ತಪ್ಪಿದ ಕೂಡಲೇ ಕೆಂಪೇಗೌಡ ಮೈಸೂರು ದಳವಾಯಿಗೆ ಸೋತು ಅತ್ಮಹತ್ಯೆ ಮಾಡಿಕೊಂಡ.

ಮಾಗಡಿ ಕೆಂಪೇಗೌಡನೆಂಬ ಈ ಜನಪದ ಕಥೆ ಯಲಹಂಕ ವಂಶದ ಮುಮ್ಮಡಿ ಕೆಂಪ ವೀರಪ್ಪಗೌಡನ ಕಾಲಕ್ಕೆ ಸಂಬಂಧಿಸಿದುದು. ಈ ರಾಜವಂಶ ಸುಮಾರು ೧೨ನೆಯ ಶತಮಾನದ ಕೊನೆಯ ಭಾಗದಲ್ಲಿ ಹೊಯ್ಸಳ ವಂಶದ ಪ್ರಸಿದ್ಧ ರಾಜ ವಿಷ್ಣುವರ್ಧನ ಮತ್ತು ಪಟ್ಟ ಮಹಾದೇವಿ ಶಾಂತಲೆಯ ಮಗಳು ಹರಿಯಾಲದೇವಿಯಿಂದ ಆರಂಭವಾಯಿತು. ತನ್ನ ಗಂಡನ ಮೈದುನ ದೇವರಸಗೌಡನನ್ನು ದತ್ತು ತೆಗೆದುಕೊಂಡ ಹರಿಯಾಲದೇವಿ ಈ ರಾಜವಂಶದ ಆರಂಭಕ್ಕೆ ಕಾರಣಳಾದಳು. ಆದುದರಿಂದಲೇ

ಅಯ್ಯ ಬಲತಾಯಿ ಶಿಕ್ಷೇಲಿ ಬೆಳೆದ ಹರಿಯಾಲದೇವಿ
ಅಯ್ಯತಬ್ಬಲಿ ದೇವಿಯಲ್ಲೊ ತಾಯಿ ಹರಿಯಮ್ಮ
ಇಂತಹ ಹರಿಯಾಲದೇವಿ ಮದುವೆಯಾದ ಕೆಲ ದಿನಗಳಲ್ಲಿಯೇ ವಿಧವೆಯಾದಳು.
ಅಯ್ಯ ಗಂಡನ ಮುಖವನ್ನು ಹರಿಯಮ್ಮ ನೋಡಲಿಲ್ಲ
ಅಯ್ಯ ದಂಡಿಗೆ ಹೋದವನು ಹಿಂದುಕೆ ಬರಲಿಲ್ಲ.

ಚರಿತ್ರೆಯ ಘಟನೆಯನ್ನು ಜನಪದ ಕವಿ ತನ್ನ ಸಮಕಾಲೀನ ಗೌಡ ಮನೆತನದಲ್ಲಿ ನಡೆದ ಘಟನೆಯೋ ಎಂಬಂತೆ ಪರಿವರ್ತಿಸಿಕೊಂಡಿದ್ದಾನೆ.

ಯಲಹಂಕ ವಂಶದಲ್ಲಿ ಅತ್ಯಂತ ಕೀರ್ತಿವಂತನಾದ ದೊರೆಯೆಂದರೆ ಭೈರದೇವ. ಈತನನ್ನು ಶಾಸನಗಳು “ಬಂಡಿಕುಲ ತಿಲಕ, ಬಂಡಿಕುಲ ಕಮಲ ದಿವಾಕರ” ಎಂದೆಲ್ಲಾ ಹೊಗಳುತ್ತವೆ. ಯಲಹಂಕ ವಂಶದಲ್ಲಿ ಈ ಭೈರದೇವ ಕುಲೋದ್ಧರಕನೆಂದು ಕೀರ್ತಿತನಾಗಿದ್ದಾನೆ. ಆ ನಂತರ ಅಧಿಕಾರಕ್ಕೆ ಬಂದ ಈ ವಂಶದ ದೊರೆಗಳು ಈತನನ್ನು ತಮ್ಮ ಶಾಸನಗಳಲ್ಲಿ ಸ್ಮರಿಸಿ ಗೌರವ ಸೂಚಿಸುತ್ತಾರೆ. ಶಿವಗಂಗೆಯ ಕುರುವಗೆರೆಯಲ್ಲಿ ಆರಂಭವಾಗಿ ಆವತಿಗೆ. ಬದಲಾಗಿದ್ದ ರಾಜದಾನಿಯನ್ನು ಯಲಹಂಕಕ್ಕೆ ತಂದು ಅದನ್ನು ಶಾಶ್ವತಗೊಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಮುಂದೆ ರಾಜಧಾನಿ ಒಂದನೆಯ ಕೆಂಪಗೌಡನ ಕಾಲದಲ್ಲಿ ಯಲಹಂಕದಿಂದ ಬೆಂಗಳೂರಿಗೆ ಬದಲಾದರೂ ಈ ವಂಶವನ್ನು ಯಲಹಂಕ ವಂಶವೆಂದೇ ಕರೆಯುವುದೇ ಸ್ಥಾಯಿಯಾಗಿ ನಿಂತಿದೆ. ಈತನನ್ನು ಜಾನಪದ ಸಾಹಿತ್ಯ

ಅಯ್ಯ ಒಂದಾನೋದು ಕಾಲದಲ್ಲಿ ಬಂಡಿಭೈರೇಗೌಡನಿದ್ದ
ಅಯ್ಯ ಅವರ ಪಟ್ಟಣವಾದ್ರೆ ಸಾರ್ತುವಳ್ಳಿ ಎಂಬುದಯ್ಯ
ಅಯ್ಯಬೋರೇಗೌಡ್ನ ಮನೆವಾರ್ತೆ ಗೃಹವಾರ್ತೆ ಕೇಳಿರಣ್ಣ
ಅಯ್ಯ ಅವ್ರು ರಾಜ್ಯಗೆದ್ದು ಯಲುವಂಕ ನಾಡಿಗೋದ್ರು
ಅಯ್ಯ ಬೋರೆಗೌಡನಾದರೆ ಧರ್ಮದಿಂದ ರಾಜ್ಯಭಾರ ಮಾಡುತ್ತಾನೆ
ಅಯ್ಯ ಹನ್ನೆರಡು ದೇಶಕೆ ರಾಜನಾಗಿ ನಿಂತವನೆ

ಬಂಡಿಕುಲ ತಿಲಕ ಭೈರದೇವನಿಂದಲೇ ಈ ಕಥೆ ಆರಂಭವಾಗುವ ರೀತಿಯಲ್ಲಿ ಜಾನಪದ ಸಾಹಿತ್ಯ ಸೃಷ್ಟಿಯಾಗಿರುವುದು ಕಂಡುಬರುತ್ತದೆ.

ಈ ಕಥೆಯಲ್ಲಿ ಪ್ರಮುಖವಾಗಿ ಗಮನಿಸಬೇಕಾದಂಥ ಮತ್ತೊಂದು ಅಂಶವಿದೆ. ಯಲಹಂಕ ರಾಜವಂಶದವರು ತಮ್ಮ ಹಿರಿಯರ ಹೆಸರಿನಲ್ಲಿ ದಾನ ದತ್ತಿ ಬಿಟ್ಟಿರುವ ಶಾಸನಗಳೆಲ್ಲೆಲ್ಲಾ “ನಾಡಸೇನ ಬೋವ” ಅಲಾಳನನ್ನು ಸ್ಮರಿಸುತ್ತಾರೆ. ಈ ಅಲಾಳ ಎಂಬ ನಾಡ ಸೇನಬೋವ ಬಂಡಿಕುಲ ತಿಲಕನೆಂದು ಪ್ರಸಿದ್ಧನಾದ ಭೈರದೇವನ ಕಾಲದಲ್ಲಿ ಅಧಿಕಾರದಲ್ಲಿದ್ದ. ಯಲಹಂಕ ನಾಡಿನ ಜಮೀನು ಅಳತೆ ಮಾಡಿಸಿ ಎಲ್ಲೆಲ್ಲಿ ಕರೆಗಳ ನಿರ್ಮಾಣ ಆಗಬೇಕೆಂದು ಭೈರದೇವನಿಗೆ ಒಂದು ವರದಿಯನ್ನು ಕೊಟ್ಟವನು. ಆ ನಂತರ ಅವನ ನೇತೃತ್ವದಲ್ಲಿಯೇ ಆ ಕೆಲಸಗಳು ನಡೆದವು. ಪ್ರಾಯಃ ಈ ಕಾರಣದಿಂದಾಗಿಯೇ ತಮ್ಮ ವಂಶದ ಕೀರ್ತಿಗೆ ಕಾರಣನಾದ ಈತನನ್ನು ಮುಂದೆ ಬಂದವರೆಲ್ಲ ಗೌರವದಿಂದ ನೆನೆಸಿದ್ದಾರೆ, ಆದರೆ ಈ ವಂಶದ ಯಾವನೋ ಅಲಾಳ ಬಹುಶಃ ಮುಮ್ಮಡಿ ಕೆಂಪವೀರಪ್ಪಗೌಡನ ಮಂತ್ರಿಯಾಗಿದ್ದವನು ರಾಜನಿಗೆ ಮೋಸಮಾಡಿರಬೇಕು. ಏಕೆಂದರೆ ಅಲಾಳ ವೃಷ್ಣವ. ಮುಮ್ಮಡಿ ಕೆಂಪವೀರಪ್ಪ ಗೌಡ ಶೈವದತ್ತ ಒಲಿದಾಗ ಈತ ರಾಜನಿಗೆ ವಿರುದ್ಧ ಕೆಲಸ ಮಾಡಿರಬೇಕು.

 

[1] B. Sheik Ali, History of the Western Gangas – 1976

[2] ಕರ್ನಾಟಕ ಇತಿಹಾಸ ದರ್ಶನ, ಡಾ. ಎಂ. ವಿ. ಕೃಷ್ಣರಾವ್, ಪುಟ೪೩