ಹದಿನಾರನೆಯ ಶತಮಾನದ ಕೊನೆಯ ಭಾಗದಲ್ಲಿ ಆಳುತ್ತಿದ್ದ ಈ ವಂಶದ ಕೊನೆಯ ದೊರೆ ಮುಮ್ಮಡಿ ಕೆಂಪವೀರಪ್ಪಗೌಡ ಗಗನದಯ್ಯ ಎಂಬ ವೀರಶಿವ ಗುರುವಿನ ಪ್ರಭಾವದಿಂದಾಗಿ ವೀರಶೈವ ಧರ್ಮಸ್ವೀಕರಿಸಲು ಮನಸ್ಸು ಮಾಡಿದ. ಏಕೆಂದರೆ ಈ ಹೊತ್ತಿಗಾಗಲೇ ಮಧುಗಿರಿಯ ಚಿಕ್ಕಪ್ಪಗೌಡ ಮತ್ತು ಉಮ್ಮತ್ತೂರಿನ ಇಮ್ಮಡಿ ನಂಜರಾಜ ವೀರಶೈವರಾಗಿದ್ದರು. ಆದರೆ ಮೈಸೂರಿನೊಂದಿಗೆ ಸತತವಾಗಿ ನಡೆಯುತ್ತಿದ್ದ ಯುದ್ಧಗಳಿಂದಾಗಿ ಈ ಧರ್ಮಸ್ವೀಕಾರ ಆಗಿರಲಿಲ್ಲ. ಮೈಸೂರು ಸೇನೆ ಸೋತು ಓಡಿ ಹೋದಾಗ ಮತ್ತೆ ಈ ಸಮಸ್ಯೆ ತಲೆದೋರಿತು. ಯಲಹಂಕ ವಂಶದವರು ಈವರೆಗೆ ಸರ್ವಧರ್ಮ ಸಮನ್ವಯಿಗಳು ಭೈರವನ ಆರಾಧಕರು. ರಂಗನಾಥ ಮನೆದೇವರು. ಆದರೆ ಮುಮ್ಮಡಿ ಕೆಂಪವೀರಪ್ಪಗೌಡ ಸೋಮೇಶ್ವರ ದೇವಾಲಯ ಕಟ್ಟಿಸಿ ತನ್ನ ನಿಷ್ಠೆಯನ್ನು ರಂಗನಾಥನಿಂದ ಸೋಮೇಶ್ವರನಿಗೆ ಬದಲಾಯಿಸಿಕೊಂಡ. ಇದರಿಂದ ಕುಪಿತಗೊಂಡ ವೀರವೈಷ್ಣವರು ಮೈಸೂರಿನೊಂದಿಗೆ ಸೇರಿ ಪಿತೂರಿ ನಡೆಸಿದರು. ಈ ಜನರ ಮೋಸದಿಂದಾಗಿ ಮುಮ್ಮಡಿ ಕೆಂಪವೀರಪ್ಪಗೌಡ ಶ್ರೀರಂಗಪಟ್ಟಣದ ಬಿಳಿಯ ಕರಿಘಟ್ಟದ ಬಂಧೀಖಾನೆಯಲ್ಲಿ ತೀರಿಕೊಂಡ. ಮುಂದೆ ಯಲಹಂಕನಾಡು ಮೈಸೂರು ದೇಶದಲ್ಲಿ ವಿಲೀನವಾಯಿತು.

ಇತಿಹಾಸ ಜಾನಪದವಾಗಿರುವ ಈ ಕಥೆಯಲ್ಲಿ ಒಂದನೆಯ ಕೆಂಪೇಗೌಡ, ಜಯಗೌಡ, ಚಿಕ್ಕಭೈರದೇವ ರಣದುಲ್ಲಾಖಾನನ ದಾಳಿ ಇವಾವು ದಾಖಲಾಗಿಲ್ಲ. ಇತ್ತೀಚೆಗೆ ಚರಿತ್ರೆಯ ವಿಷಯ ತಿಳಿದು ಬೆಂಗಳೂರು ಕಟ್ಟಿದ ಕಥೆ ಸೇರಿಸಿ ಹಾಡುತ್ತಾರಾದರೂ ಇದು ಪ್ರಾಚೀನ ಪಾಠಗಳಲ್ಲಿ ಕಂಡು ಬರುವುದಿಲ್ಲ. ಒಂದು ವೇಳೆ ಚರಿತ್ರಕಾರರು ಊಹಿಸುವಂತೆ ಒಂದನೆಯ ಕೆಂಪೇಗೌಡ ಆನೆಗೊಂದಿಯ ಬಂದೀಖಾನೆಯಲ್ಲಿ ಐದು ವರ್ಷ ಇದ್ದಿದ್ದರೆ ಅದು ಖಂಡಿತ ಜಾನಪದದಲ್ಲಿ ದಾಖಲಾಗಿರುತ್ತಿದ್ದಿತೆಂಬುದರಲ್ಲಿ ಅನುಮಾನವಿಲ್ಲ. ಧಾರ್ಮಿಕ ಪಿತೂರಿಯೊಂದು ಜಾನಪದ ಆಗಿರುವುದಕ್ಕೆ ಮಾಗಡಿ ಕೆಂಪೇಗೌಡನ ಕಥೆ ಒಳ್ಳೆಯ ನಿದರ್ಶನ.

ಕುಮಾರರಾಮ ಅಥವಾ ಕುಮ್ಮಟದ ರಾಮ ವಿಜಯನಗರದ ಅವನತಿಯ ಕಾಲದ ಮತ್ತೊಂದು ದುರಂತ ಕಥೆ. ಜಾನಪದ ಕಥೆಯಂತೆ ಕುಮ್ಮಟದ ರಾಜ ತನ್ನ ಮುದಿ ವಯಸ್ಸಿನಲ್ಲಿ ದೊಂಬರ ಹುಡುಗಿಯೊಬ್ಬಳನ್ನು ಮೋಹಿಸಿ ಮದುವೆಯಾದ. ಆತನಿಗೆ ವಯಸ್ಸಿಗೆ ಬಂದ ಮಗ ರಾಮನಿದ್ದ. ರಾಮ ಬಹಳ ಪರಾಕ್ರಮಿ. ಅಧಿಕಾರ ಮತ್ತು ಅಂತಸ್ತಿಗಾಗಿ ಮುದುಕನನ್ನು ಮದುವೆಯಾದ ದೊಂಬರ ಚನ್ನಿ ಅರಮನೆಯಲ್ಲಿ ಕುಮಾರ ರಾಮನ ವರ್ಣನೆ, ಹೊಗಳಿಕೆ ಕೇಳಿ ಹಿಂದು ಮುಂದು ಆಲೋಚಿಸದೆ ರಾಮನನ್ನು ಮೋಹಿಸಿದಳು. ಅವನಿಗಾಗಿ ಪರಿತಪಿಸಿದಳು. ಒಂದು ದಿನ ರಾಜ ಯುದ್ಧವೊಂದರಲ್ಲಿ ಪಾಲುಗೊಂಡಿದ್ದಾಗ ರಾಮನನ್ನು ತನ್ನ ಅಂತಃಪುರಕ್ಕೆ ಕರೆಸಿಕೊಂಡು ತನ್ನ ಆಸೆಯನ್ನು ಹೇಳಿದಳು. ಆದರೆ ರಾಮ ತಂದೆಯ ಕೈ ಹಿಡಿದ ನೀನು ತಾಯಿ ಸಮಾನವೆಂದು ಆಕೆಯ ಅಧರ್ಮದ ಅಸೆಯನ್ನು ನಿರಾಕರಿಸಿದ. ಇದರಿಂದ ಕುಪಿತಗೊಂಡ ಆಕೆ ತಲೆ ಕೆದರಿ ಮೈ ಪರಚಿ ಮಲಗಿದಳು. ದಂಡಿನಿಂದ ಬಂದ ರಾಜ ಮುನಿದು ಮಲಗಿದ್ದ ತನ್ನ ಕಿರಿಯ ರಾಣಿಯನ್ನು ಕಾರಣವೇನೆಂದು ಕೇಳಿದ. ಆಕೆ ನೀವಿಲ್ಲದ ಸಮಯದಲ್ಲಿ ರಾಮ ಬಂದು ಬಲತ್ಕಾರ ಮಾಡಿದನೆಂದು ದೂರು ಹೇಳಿದಳು. ಕೂಡಲೇ ಮಂತ್ರಿಯನ್ನು ಕರೆದು ರಾಮನ ತಲೆ ತೆಗೆಯುವಂತೆಯೂ ಆತನ ಕಣ್ಣು ಕೇಳಿಸಿ ತರಿಸಿ ತನಗೆ ತೋರುವಂತೆಯೂ ಆಜ್ಞೆ ಮಾಡಿದ. ಆದರೆ ಬುದ್ಧಿವಂತನಾದ ಮಂತ್ರಿ ರಾಮನನ್ನು ಬಚ್ಚಿಟ್ಟು ಯರನ್ನೋ ಗಲ್ಲಿಗೇರಿಸಿ ಅವನ ಕಣ್ಣುಗಳನ್ನು ರಾಜನಿಗೆ ತೋರಿಸಿದ.

ರಾಮನಂತಹ ವೀರ ಇಲ್ಲವಾದ ಮೇಲೆ ಆ ಮುದುಕ ರಾಜನನ್ನು ಬಲಿಹಾಕಬಹುದೆಂದು ಶತೃ ರಾಜರು ದಂಡೆತ್ತಿ ಬಂದರು. ಆಗ ದೊರೆಗೆ ತನ್ನ ಮಗನ ಶಕ್ತಿಯ ಅರಿವಾಯಿತು. ಈ ಹೊತ್ತಿಗೆ ಕಿರಿಯ ರಾಣಿಯೇ ರಾಮನನ್ನು ಅಂತಃಪುರಕ್ಕೆ ಕರೆಸಿ ಬಲತ್ಕಾರ ಮಾಡಿದ ವಿಷಯವು ರಾಜನಿಗೆ ತಿಳಿದು ಆಕೆಯನ್ನು ಸೀಳಿಸಿ ಕೋಟೆಬಾಗಿಲಿಗೆ ಕಟ್ಟಿಸಿದ. ಶತೃಗಳು ದಿನೇ ದಿನೇ ಮುಂದೆ ನುಗ್ಗಲಾರಂಭಿಸಿದರು. ಆಗ ರಾಮ ಇದ್ದಕ್ಕಿದ್ದ ಹಾಗೆಯೇ ಕಾಣಿಸಿಕೊಂಡು ಸೈನಿಕರನ್ನು ಹುರಿದುಂಬಿಸಿ ಯುದ್ಧಕ್ಕೆ ಬಂದ ಶತೃ ರಾಜರನ್ನು ಸದೆಬಡಿದು ಓಡಿಸಿದ. ರಾಮ ಮತ್ತೆ ಬದುಕಿ ಬದುಕಿ ಬಂದುದಕ್ಕಾಗಿ ಜನ ಹರ್ಷಗೊಂಡರು.

ವಿಜಯನಗರ ಸಾಮ್ರಾಜ್ಯದ ಪಥನಾನಂತರ ಬಹುಮನಿ ಸುಲ್ತಾನರು ಅಲ್ಲಲ್ಲಿ ಹರಿದು ಹಂಚಿಹೋಗಿದ್ದ ಹಿಂದೂ ರಾಜರನ್ನು ಸದೆಬಡಿಯಲಾರಂಭಿಸಿದರು. ಪರಸ್ಪರ ದ್ವೇಷಾಸೂಯೆಗಳಿಂದ ಕೂಡಿದ ಈ ರಾಜರು ತಮ್ಮ ತಮ್ಮಲ್ಲೇ ಕಚ್ಚಾಡುತ್ತಾ, ಒಬ್ಬನನ್ನು ಬಲಿಹಾಕಲು ಬಹುಮನಿ2 ಸುಲ್ತಾನರ ಮೊರೆ ಹೋಗುತ್ತ ತಮ್ಮ ಅವನತಿಗೆ ತಾವೇ ಕಾರಣರಾಗಿದ್ದರು. ಈ ಒಡಕನ್ನು ಬಹುಮನಿ ಸುಲ್ತಾನರು ತಮಗನುಕೂಲವಾಗಿ ಉಪಯೋಗಿಸಿಕೊಂಡರು. ಈ ಸಮಯದಲ್ಲಿ ಕುಮ್ಮಟದ ಕಂಪಿಲರಾಯನ ಮಗ ಕುಮಾರರಾಮ ಬಹಮನಿ ಸುಲ್ತಾನರನ್ನು ಸದೆಬಡಿಯುವಲ್ಲಿ ಯಶಸ್ವಿಯಾದನು. ಹೀಗೆ ಹಿಂದೂ ಧರ್ಮ ರಕ್ಷಣೆಗೆ ಹೋರಾಡಿದ ಕುಮಾರರಾಮನ ಕಥೆ ಅನೇಕ ಶಾಖೆಗಳಾಗಿ ಕವಲೊಡೆದು ಜಾನಪದದಲ್ಲಿ ಸೇರಿಕೊಂಡಿದೆ.

ಪಾಂಚಾಲಗಂಗ ಎಂಬುವನು ಮೊಟ್ಟಮೊದಲಿಗೆ ಕುಮಾರರಾಮನ ಬಗೆಗಿನ ಜನಪದ ಕಾವ್ಯವನ್ನು ಸಂಗ್ರಹಿಸಿದಂತೆ ಕಾಣುತ್ತದೆ. ಮುಂದೆ ಕುಮಾರರಾಮ ಸಾಂಗತ್ಯ ಬರೆದ ನಂಜುಂಡವಿತನಾಗಿ ಕಾವ್ಯ ಬರೆದುದಾಗಿ ಹೇಳಿಕೊಂಡಿದ್ದಾನೆ. ಕಂಪಿಲರಾಯನ ಕಿರಿಯ ಹೆಂಡತಿ ರತ್ನಾಜಿಯಿಂದ ಈ ದುರಂತ ಸಂಭವಿಸಿರಬಹುದು. ಆದರೆ ಇದಕ್ಕೆ ನಿಖರವಾದ ಚಾರಿತ್ರಿಕ ದಾಖಲೆಗಳು ದೊರೆಯುವುದಿಲ್ಲ. ವಯಸ್ಸಾದ ತಂದೆಯ ಕಿರಿಯ ಹೆಂಡತಿಯರು ತಮ್ಮ ಬಲ ಮಕ್ಕಳನ್ನೆ ಪ್ರೀತಿಸಹೋಗಿ ಅನಾಹುತ ಮಾಡಿದ ಅನೇಕ ಕಥೆಗಳು ಇತಿಹಾಸ ಮತ್ತು ಜಾನಪದಗಳೆರಡರಲ್ಲೂ ದೊರೆಯುತ್ತವೆ. ಅಶೋಕ ಚಕ್ರವರ್ತಿಯ ಮಗ ಕುಣಾಲನನ್ನು ಕುರಿತಂತೆ ಚಾರಿತ್ರಿಕ ದಾಖಲೆಯೊಂದು ದೊರೆಯುತ್ತದೆ. ತನ್ನ ಕಿರಿಯ ಪತ್ನಿಯೊಬ್ಬಳಲ್ಲಿ ಮೋಹಗೊಂಡನೆಂಬ ಕಾರಣದಿಂದ ಅಶೋಕ ತನ್ನ ಮಗ ಕುಣಾಲನ ಕಣ್ಣು ಕೀಳಿಸಿದನಂತೆ. ಕಂಪಿಲರಾಯ ಮತ್ತು ಕುಮಾರರಾಮನ ಮಧ್ಯೆ ಇಂತಹದೊಂದು ಘಟನೆ ನಡೆದಿರಬೇಕು.

ಮೈಸೂರು ರಾಜವಂಶಕ್ಕೆ ಸಂಬಂಧಿಸಿದ ಎರಡು ಘಟನೆಗಳು ಜಾನಪದ ಕಥೆಗಳಾಗಿ ಇಂದಿಗೂ ಹೆಸರುವಾಸಿಯಾಗಿರುವುದು ಕಂಡುಬರುತ್ತದೆ. ಇವುಗಳಲ್ಲಿ ಯದುವಂಶದ ಮೂಲವನ್ನು ಕುರಿತಾದ ಕಾರುಗಹಳ್ಳಿಯ ಕಾಳಗ, ಮತ್ತೊಂದು ಸುಮಾರು ಹದಿನೇಳನೆಯ ಶತಮಾನದ ಕೊನೆಯ ಪಿರಿಯಾಪಟ್ಟಣದ ಕಾಳಗ. ಇವುಗಳಲ್ಲಿ ಮೊದಲನೆಯದು ಕಾಲದ ದೃಷ್ಟಿಯಿಂದ ಹದಿಮೂರನೆಯ ಶತಮಾನಕ್ಕೆ ಸಂಭಂಧಿಸಿದ್ದು, ಮೈಸೂರು ಅರಸರ ವಂಶದ ಮೂಲ ಪುರುಷರ ಕಥೆಯನ್ನು ಹೇಳುತ್ತದೆ. ರಾಜ ಒಡೆಯನ ಕಾಲಕ್ಕೆ ಸಂಬಂಧಿಸಿದ ಇದರ ಮುಂದಿನ ಭಾಗವೂ ಇದೆಯಾದರೂ ಅದು ಜಾನಪದದಲ್ಲಿ ಅಷ್ಟೊಂದು ಮಹತ್ವವನ್ನು ಪಡೆದಿಲ್ಲ. ಪಿರಿಯಾಪಟ್ಟಣದ ಕಾಳಗ ಮೈಸೂರು ಅರಸರಿಗೂ ಪಿರಿಯಾಪಟ್ಟಣದ ಅರಸರಿಗೂ ನಡೆದ ಯುದ್ಧದ ಕಥೆ, ಮೈಸೂರು ರಾಜವಂಶದ ಪ್ರಸಿದ್ಧ ದೊರೆಯಾದ ರಣಧೀರ ಕಂಠೀರವನ ಕಾಲದಲ್ಲಿ ಒಮ್ಮೆ, ಅನಂತರ ಇನ್ನೊಮ್ಮೆ ಈ ಕಥೆ ನಡೆದಿರಬಹುದೆಂದು ಊಹಿಸಲವಕಾಶವಿದೆ ಕೊನೆಯದು ದುರಂತದಲ್ಲಿ ಅಂತ್ಯವಾಗುವುದರಿಂದ ಪ್ರಾಯಃ ಅದೇ ಪ್ರಧಾನವಾಗಿ ಜನಜನಿತವಾಗಿ ಇತಿಹಾಸದಿಂದ ಜಾನಪದಕ್ಕೆ ಇಳಿದಿದೆ.

ಹದಿನಾಡು ಮತ್ತು ಕಾರುಗಹಳ್ಳಿ ಅಕ್ಕಪಕ್ಕದ ಎರಡು ರಾಜ್ಯಗಳು. ಹದಿನಾಡಿನ ರಾಜನಿಗೆ ಒಬ್ಬಳೇ ಮಗಳು. ಹೀಗಿರುವಾಗ ಹದಿನಾಡ ರಾಜ ಇದ್ದಕ್ಕಿದ್ದ ಹಾಗೆಯೇ ತೀರಿಕೊಂಡನು. ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ಕಾರುಗಹಳ್ಳಿಯ ರಾಜ ಮಾರನಾಯಕನು ಹದಿನಾಡ ರಾಜಕುಮಾರಿಯನ್ನು ತನಗೆ ಕೊಟ್ಟು ಮದುವೆ ಮಾಡಿಕೊಡಬೇಕೆಂದು ಹೇಳಿಕಳಿಸಿದನು. ಈ ಮೂಲಕಹದಿನಾಡನ್ನುತನ್ನ ವಶ ಮಾಡಿಕೊಳ್ಳುವುದು ಮಾರನಾಯಕನ ಉದ್ದೇಶವಾಗಿತ್ತು. ಆದರೆ ಹದಿನಾಡವರಿಗೆ ತೊರೆಯ ಜಾತಿಗೆ ಸೇರಿದ ಮಾರನಾಯಕನಿಗೆ ಮಗಳ ಕೊಡಲು ಇಷ್ಟವಿರಲಿಲ್ಲ. ಕೊಡುವುದಿಲ್ಲವೆಂದು ಹೇಳುವಂತೆಯೂ ಇಲ್ಲ. ಹದಿನಾಡ ರಾಣಿ ಮತ್ತು ರಾಜಕುಮಾರಿಯರು ಮಾರನಾಯಕನಿಂದ ಪಾರಾಗುವುದನ್ನು ಕಾಣದೆ ತೊಳಲುತ್ತಿದ್ದರು.

ಹೀಗಿರುವಲ್ಲಿ ಇಬ್ಬರು ಯುವಕರು ದೇಶಯಾತ್ರೆ ಮಾಡುತ್ತಾ ಹದಿನಾಡಿಗೆ ಬಂದರು. ಅವರಿಗೆ ಈ ರಾಜಕುಮಾರಿಯ ವಿಷಯ ತಿಳಿಯಿತು. ಶೂರರಾದ ಅವರು ಕೂಡಲೇ ತಾವು ಸಹಾಯ ಮಾಡುವುದಾಗಿ ಹೇಳಿಕಳಿಸಿದರು. ಕೂಡಲೇ ರಾಣಿಯು ಅವರನ್ನು ಅರಮನೆಗೆ ಕರೆಸಿಕೊಂಡು ಸಮಾಲೋಚಿಸಿದಳು. ಮಾರನಾಯಕನನ್ನು, ರಾಜಕುಮಾರಿಯನ್ನು ಮದುವೆಯಾಗಲು ಬರುವಂತೆ ಅಹ್ವಾನಿಸಲಾಯಿತು. ನಿರಾಯುಧನಾಗಿ ಮದುವೆಗೆ ಬಂದಾಗ ಅವನನ್ನು ಸಂಹರಿಸುವುದೆಂದು ಆ ಯುವಕರು ಯೋಚಿಸಿದರು. ಈ ಯಾವುದನ್ನೂ ತಿಳಿಯದ ಮಾರ ನಾಯಕನು ಮದುವೆಗೆ ಬಂದಾಗ ಈ ಯುವಕರು ಮಾರನಾಯಕನನ್ನು, ಮಾರನಾಯಕನ ಕಡೆಯವರನ್ನು ಸಂಹರಿಸಿದರು. ತಮ್ಮನ್ನು ಈ ಸಂಕಟದಿಂದ ಪಾರು ಮಾಡಿದುದಕ್ಕಾಗಿ ಹದಿನಾಡ ರಾಜಕುಮಾರಿಯನ್ನು ಆ ಯುವಕರಲ್ಲಿ ಹಿರಿಯನಿಗೆ ಕೊಟ್ಟು ಮದುವೆ ಮಾಡಿದರು. ಇವನೇ ಮೈಸೂರು ರಾಜಮನೆತನದ ಮೂಲಪುರುಷ.

ಈ ಕಥೆ ಇತಿಹಾಸದಲ್ಲಿ ಹೀಗಿದೆ. ತೊರೆಯ ಜಾತಿಯ ಮಾರನಾಯಕ ಹದಿನಾಡಿನ ಬೆಟ್ಟದ ಚಾಮರಾಜನ ಮಗಳನ್ನು ತಾನು ಮದುವೆಯಾಗುತ್ತೇನೆಂದು ಕೇಳಿದ. ಆಗ ಚಾಮರಾಜನಿಗೆ ಬುದ್ಧಿ ವಿಕಲ್ಪವಾಗಿತ್ತು. ಅವನಿಗೆ ಗಂಡುಸಂತಾನವಿರಲಿಲ್ಲ. ದ್ವಾರವತಿಯಿಂದ ಬಂದ ವಿಜಯ ಮತ್ತು ಕೃಷ್ಣ ಎಂಬ ಯದುವಂಶದ ಯುವಕರು ಮಾರನಾಯಕನನ್ನು ನಿಗ್ರಹಿಸಿ ಹದಿನಾಡ ರಾಜಕುಮಾರಿಯನ್ನು ಮದುವೆಯಾದರು.

ತಾಳಿಕೋಟೆಯ ಸೋಲಿನ ನಂತರ ವಿಜಯನಗರ ಸಾಮ್ರಾಜ್ಯ ಮತ್ತೆ ತಲೆಯೆತ್ತುವುದು ಆಗಲಿಲ್ಲ. ಆದರೆ ಅನೆಗೊಂದಿಯಿಂದ ಇವರು ಸ್ವಲ್ಪ ಕಾಲ ಆಳಿದರೂ ಸಾವಂತರು, ಮಾಂಡಲೀಕರು, ಪಾಳೇಗಾರರು, ನಾಡಗೌಡರೆಲ್ಲಾ ತಾವೇ ಸ್ವತಂತ್ರರೆಂದು ಘೋಷಿಸಿಕೊಂಡರು. ಹಾಗೆ ಮಾಡಿದವರಲ್ಲಿ ಶ್ರೀರಂಗರಾಯನ ಕಿರಿಯ ಹೆಂಡತಿ ಅಲಮೇಲಮ್ಮ ಎಂಬುವಳನ್ನು ಉಪಾಯದಿಂದ ಒಳಹಾಕಿಕೊಡು ಅವಳಲ್ಲಿದ್ದ ಅಪಾರ ಸಂಪತ್ತನ್ನು ಲಪಟಾಯಿಸಿದನು, ಅಲಮೇಲಮ್ಮ ಕಾವೇರಿ ನದಿಯಲ್ಲಿಬಿದ್ದು ಸತ್ತಳು. ಈ ಬಗ್ಗೆಯೂ ಒಂದು ಜಾನಪದ ಕಥೆಯುಂಟು[1] ಆ ಕಾಲದಲ್ಲಿ ರಾಜಗೌಡನನ್ನು ಮುವ್ವತ್ತುಮೂರು ಹಳ್ಳಿಯ ಒಡೆಯ ಎಂದು ಕರೆಯಲಾಗಿದೆ. ಅಲಮೇಲಮ್ಮನಿಂದ ದೊರೆತ ಸಂಪತ್ತಿನಿಂದ ಈತ ತನ್ನ ಶಕ್ತಿ ಸಾಮರ್ಥ್ಯಗಳನ್ನು ವೃದ್ಧಿಪಡಿಸಿಕೊಂಡನು. ಕಾರುಗಹಳ್ಳಿಯ ವೀರ ರಾಜಯ್ಯನನ್ನು ಸೋಲಿಸಿ ಕಾರುಗಹಳ್ಳಿಯ ಕೋಟೆಯನ್ನು ಕೆಡವಿಸಿ ಹಳ್ಳು ನೆಡಸಿದನು.

ಮೇಲಿನ ಚಾರಿತ್ರಿಕ ಅಧಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮೈಸೂರು ರಾಜವಂಶದ ಮೊದಲನೇ ರಾಜನೇ ರಾಜ ಒಡೆಯ. ಇಲ್ಲಿಂದ ಹಿಂದೆ ಈ ವಂಶದವರು ರಾಜರಾಗಿದ್ದ ಬಗ್ಗೆ ಖಚಿತವಾದ ಚಾರಿತ್ರಿಕ ಆಧಾರಗಳು ದೊರೆಯುವದಿಲ್ಲ. ಹೀಗಾಗಿ ಯದುರಾಯನ ಕಥೆ ಕಲ್ಪಿತವಾದುದಾಗಿರುವ ಸಾಧ್ಯತೆ ಇದೆ. ಪ್ರಾಯಃ ಮೈಸೂರಿನ ಅರಸು ಮನೆತನದ ಪೂರ್ವಿಕರು ಹದಿನಾಡು ಗ್ರಾಮದ ಗೌಡರಾಗಿದ್ದಿರಬೇಕು. ಕಾರುಹಳ್ಳಿಯ ನಾಯಕ ಮಾರನಾಯಕನಿಗೂ ಅವರಿಗೂ ಘರ್ಷಣೆಯಾಗಿರಬೇಕು. ಈ ಕಥೆಯನ್ನು ಅದರ ಅಧಾರದಿಂದ ರೂಪಿಸಿರಬೇಕು. ಮೈಸೂರಿಗೆ ಅನತಿ ದೂರದಲ್ಲಿರುವ ಉತ್ತನ್ಹಳ್ಳಿಯ ಗುಡ್ಡದ ಮೇಲಿರುವ ಸಿದ್ಧೇಶ್ವರ ದೇವಾಲಯ ಕಂಬವೊಂದರ ಮೇಲೆ ಮಾರನಾಯಕನ ಚಿತ್ರ ಕೆತ್ತಲಾಗಿದೆ.

ಪಿರಿಯಾಪಟ್ಟಣದ ವೀರರಾಜನಿಗೆ ಮೈಸೂರು ಅರಮನೆಯ ಹೆಣ್ಣು ಮಗಳನ್ನು ಕೊಟ್ಟು ಮದುವೆಯಾಗಿತ್ತು. ಆಕೆಗೆ ಅತ್ಯಂತ ಸ್ಪುರದ್ರೂಪಿಯಾದ ಮಗಳಿದ್ದಳು. ಅನೇಕ ವರ್ಷಗಳ ಕಾಲ ಯುದ್ಧರಂಗದಲ್ಲಿದ್ದ ರಾಜನಿಗೆ ತನಗೆ ಮಗಳಾದ ಸುದ್ದಿಯೇ ತಿಳಿದಿರಲಿಲ್ಲ. ಅವನು ಹಿಂತಿರುಗಿ ಬಂದಾಗ ಅರಮನೆಯ ಮಹಡಿಯಲ್ಲಿ ತಲೆಯೊಣಗಿಸುತ್ತಿದ್ದ ಸುಂದರಿಯನ್ನು ಕಂಡು ಮೋಹಗೊಂಡ ಕಡೆಗೆ ಆಕೆ ತನ್ನ ಮಗಳೆಂದು ತಿಳಿದರೂ ಕಮಾಂಧನಾದ ಆತ ಆಕೆಯನ್ನು ಮಧುವೆಯಾಗುವುದಾಗಿ ಹಠ ಹಿಡಿದ. ಈ ವಿಚಿತ್ರ ವರ್ತನೆಯನ್ನು ಕಂಡ ರಾಣಿ ಮಗಳನ್ನು ಗುಟ್ಟಾಗಿ ಮೈಸೂರಿಗೆ ಸಾಗಿಸಿದಳು. ಈ ಸಂಗತಿ ಕೇಳಿ ಕೆರಳಿದ ವೀರರಾಜ ಆಕೆಯನ್ನು ಹಿಂದಕ್ಕೆ ಕಳಿಸುವಂತೆ ಮೈಸೂರು ಅರಸನಿಗೆ ಓಲೆ ಬರೆಸಿದ. ಮೈಸೂರಿನವರು ಅದಕ್ಕೆ ಬೆಲೆ ಕೊಡಲಿಲ್ಲ. ಇದರಿಂದ ಕುಪಿತನಾದ ವೀರರಾಜ ಮೈಸೂರಿನ ಮೇಲೆ ಯುದ್ದ ಘೋಷಿಸಿದ.

ಮಾಲಿಂಗಿ ಮಡುವಾಗಲಿ
ತಲಕಾಡು ಮರಳಾಗಲಿ
ಮೈಸೂರು ಅರಸರಿಗೆ ಮಕ್ಕಳಿಲ್ಲದೇ ಹೋಗಲಿ

ಎಂದು ಶಾಪವಿತ್ತು ಆಕೆ ಸತ್ತಳೆಂಬುದು ನಡೆದ ಘಟನೆಯನ್ನು ಮುಚ್ಚಿಹಾಕಲು ಅನಂತರ ಕಟ್ಟಿದ ಕಥೆಯೆಂಬುದನ್ನು ಗಮನಿಸಬಹುದು.

ಮೈಸೂರಿನ ದಳವಾಯಿ ಬಂದು ಪಿರಿಯಾಪಟ್ಟಣಕ್ಕೆ ಮುತ್ತಿಗೆ ಹಾಕಿದ. ಘೊರವಾದ ಯುದ್ಧ ನಡೆಯಿತು. ವೀರರಾಜನಿಗೆ ತಾನು ಸೋಲುವುದು ಖಚಿತವಾಯಿತು. ಅವನು ತನ್ನ ಅರಮನೆಗೆ ಬಂದ. ಎಲ್ಲಾ ಮಡದಿಯರನ್ನೂ ಕರೆದ. ಅವರನ್ನೆಲ್ಲಾ ತಾನೇ ಕೈಯಾರೆ ಕೊಂದು ಹಾಕಿದ. ಮತ್ತೆ ಯುದ್ದ ರಂಗಕ್ಕೆ ನಡೆದು ವೀರಾವೇಶದಿಂದ ಹೋರಾಡಿ ಸತ್ತ. ಇದು ಪಿರಿಯಾಪಟ್ಟಣದ ಕಾಳಗದ ಕಥೆ.

ಪಿರಿಯಾಪಟ್ಟಣದ ಕಾಳಗ ಮೈಸೂರಿನ ಅರಸ ರಣಧೀರ ಕಂಠೀರವನ ಕಾಲದಿಂದ ಅನೇಕ ದಿನ ನಡೆದ ಕಥೆ. ಏಕೆಂದರೆ ಮೈಸೂರಿಗೂ ಪಿರಿಯಾಪಟ್ಟಣ, ನಂಜರಾಜಪಟ್ಟಣ, ಕೊಡಗಿಗೂ ಯುಧ್ದಗಳು ನಡೆದಿರುವ ದಾಖಲೆಗಳಿವೆ. ಹಿರಿಯರಾಜನು ಸಿಂಗಪಟ್ಟಣವನ್ನು ಜೀರ್ಣೊದ್ದಾರ ಮಾಡಿಸಿ ಹಿರಿಯ ರಾಜಪುರವೆಂದು ಹೆಸರಿಟ್ಟಿದ್ದು. ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ೧೫೧೧ನೆಯ ಸರ್ವದಾರಿ ಸಂವತ್ಸರದ ಅಶ್ವಿಜ ಶು ೧೦ ರಲ್ಲು ಅಂದರೆ ಈ ದಿವಸ ಕ್ರಿ.ಶ. ೧೫೯೦ನೆಯ ಜೂನ್ ೨೯ನೆಯತಾರೀಕು ಗುರುವಾರಕ್ಕೆ ಸರಿಹೋಗುತ್ತದೆ. ೧೪೯೦ರಲ್ಲಿದ್ದ ಹಿರಿಯ ರಾಜನ ಅನಂತರ ಬಂದವನು ವಿರುಪರಾಜೇಂದ್ರ. ಈತ ೧೬೧೨ರಲ್ಲಿ ಪಟ್ಟಕ್ಕೆ ಬಂದು ೧೬೪೪ರಲ್ಲಿ ಮೈಸೂರಿನ ದೊರೆ ಕಂಠೀರವ ನರಸರಾಜನ ಪರವಾಗಿ ಯುದ್ಧ ಮಾಡಿದ ಕಳಲೆಯ ದೊಡ್ದಯ್ಯನೊಡನೆ ಹೋರಾಡಿ ಸತ್ತನು. ಚಂಗಾಳ್ವರಿಗೂ ಮೈಸೂರಿನ ಅರಸರಿಗೂ ಅನೇಕ ಯುದ್ಧಗಳಾಗಿ ಇದರೊಂದಿಗೆ ಒಂದು ರೀತಿಯಲ್ಲಿ ಚಂಗಾಳ್ವರ ಆಳ್ವಿಕೆಯೇ ಕೊನೆಗೊಂಡುದರಿಂದ ಈ ಕಥೆ ಹುಟ್ಟಿರಬೇಕು. ವೀರರಾಜ ಮಗಳನ್ನೇ ಮದುವೆಯಾಗಲು ಹವಣಿಸಿದ ಬಗ್ಗೆ ಚಾರಿತ್ರಿಕ ದಾಖಲೆಗಳಲ್ಲಿ. ಈ ವೀರರಾಜನ ಮಗಳನ್ನೇ ಮದುವೆಯಾಗಲು ಹವಣಿಸಿದ ಬಗ್ಗೆ ಚಾರಿತ್ರಿಕ ದಾಖಲೆಗಳಿಲ್ಲ. ಈ ವೀರರಾಜನ ಸಮಕಾಲೀನ ಚಂದ್ರಪ್ರಭ ಚತೆಯ ಕರ್ತೃ. ಪಿರಿಯಾಪಟ್ಟಣದ ದೊಡ್ಡಯ್ಯ ಸಹ ತನ್ನ ಕಾವ್ಯದಲ್ಲಿ ಇಂತಹ ಯಾನ ಘಟನೆಯನ್ನೂ ಉಲ್ಲೇಖಿಸಿಲ್ಲ. ನಮಗೆ ದೊರೆಯುವ ಅನೇಕ ಪಾಠಗಳ ಪಿರಿಯಾಪಟ್ಟಣದ ಕಾಳದ ಜನಪದ ಕಾವ್ಯಗಳಲ್ಲಿಯೂ ಮಗಳ ಪ್ರಸಂಗಬರುವುದಿಲ್ಲ. ಇದು ಪ್ರಧಾನವಾಗಿ ಚಂಗಾಳ್ವ ಮತ್ತು ಮೈಸೂರು ಅರಸರ ಮೇಲ್ಮೆಯ ಯುದ್ಧ. ಯಾವುದೋ ಕಾರಣಕ್ಕಾಗಿ ಈ ಮಗಳ ಪ್ರಸಂಗ ಬಂದು ಸೇರಿ ಕೊಂಡಿದೆ. ಯುದ್ಧಕ್ಕೆ ಹೋದ ತಂದೆಗೆ ಮಕ್ಕಳು ಹುಟ್ಟಿದ ಸುದ್ದಿತೇ ತಿಳಿಯದ ಅನಾಹುತ ಸಂಭವಿಸಿದ ಅನೇಕ ಕಥೆಗಳು ಇವೆ. ಉದಾಹರಣೆಗೆ ಸೊಹರಬ್ – ರುಸ್ತುಂ ಕಥೆ ನೋಡಬಹುದು.

ಮೈಸೂರು ರಾಜ್ಯದ ಇತಿಹಾಸಕ್ಕೆ ಸೀತೆದಂಡು ಮತ್ತು ಟಿಪ್ಪು ಸುಲ್ತಾನ್ ಲಾವಣಿಗಳ ಮತ್ತೆರಡು ಇತಿಹಾಸ ಜಾನಪದವಾಗಿರುವ ಘಟನೆಗಳು. ಈ ಎರಡು ಟಿಪ್ಪುಸುಲ್ತಾನನ ಕಾಲದವು. ಒಂದು ನಾಲ್ಕನೆಯ ಮೈಸೂರು ಯುದ್ಧ ಸಮಯದಲ್ಲಿ ಟಿಪ್ಪು ಚಿಕ್ಕಂದಿನಿಂದ ನಂಬಿದ ಅಮೀರ್ ಸಿದ್ದಿಕ್ ಅವನಿಗೆ ಮೋಸ ಮಾಡಿದುದು. ಮತ್ತೊಂದು ಟಿಪ್ಪು ಅಧಿಕಾರಕ್ಕೆ ನಂಬಿದ ಅಮೀರ್ ಸಿದ್ದಿಕ್ ಅವನಿಗೆ ಮೋಸ ಮಾಡಿದುದು. ಮತ್ತೊಂದು ಟಿಪ್ಪು ಅಧಿಕಾರಕ್ಕೆ ಬಂದ ಹೊಸದರಲ್ಲಿ ಹಿಂದೂ ಧರ್ಮದ ವಿರುದ್ಧ ನಡೆದುಗೊಂಡು ರೀತಿಗೆ ಪ್ರತಿಭಟನೆಯಾಗಿ ಮೂಡಿಬಂದುದು.

ಸೀತೆ ದಂಡು ಟಿಪ್ಪು ಮೈಸೂರನ್ನು ಸುಲ್ತಾನೀ ರಾಜ್ಯವಾಗಿ ಪರಿವರ್ತಿಸಲು ಪ್ರಯತ್ನಿಸುವುದಕ್ಕೆ ಜನರಿಂದ ಬಂದ ವಿರೋಧದ ಘಟನೆ. ಮೈಸೂರಿನ ಹಳ್ಳಿ ಹಳ್ಳಿಗಳಲ್ಲಿಯೂ ಯುವಕರು ಸೀತೆದಂಡು ಎಂಬ ಸೇನೆಯೊಂದನ್ನು ಕಟ್ಟಿ ಯುದ್ಧ ಸಿದ್ಧತೆ ನಡೆಸಿದ ಕಥೆ. ಈ ದಂಡಿನ ಮುಖಂಡರು ಟಿಪ್ಪು ವಿರುದ್ಧ ಇಂಗ್ಲೀಷರ ಜೊತೆಯಲ್ಲಿಯೂ ಸಂಧಾನ ನಡೆಸಿದರು. ಈ ಸಂಗತಿಯನ್ನು ಕರ್ನಲ್ ವಿಲಿಕ್ಸ್ ತನ್ನ ಮೈಸೂರಿನ ಚರಿತ್ರೆಯಲ್ಲಿ ಉಲ್ಲೇಖಿಸಿದ್ದಾನೆ. ಇದೇ ಕಥೆಯನ್ನಾಧರಿಸಿ ವೀರಕೇಸರಿ ಸೀತಾರಾಮಶಾಸ್ತ್ರಿಯವರು ದೌಲತ್ ಎಂಬ ಕಾದಂಬರಿಯನ್ನೂ, ಶ್ರೀ ಎಂ. ಆರ್. ಶ್ರೀಯವರು ಧರ್ಮ್ ದುರಂತ ಎಂಬ ನಾಟಕವನ್ನೂ ರಚಿಸಿದ್ದಾರೆ. ಇಂಗ್ಲೀಷರೊಂದಿಗಿನ ಯುದ್ಧಗಳಲ್ಲಿ ಟಿಪ್ಪು ಅನುಭವಿಸಿದ ಸೋಲಿಗೆ ಈ ಜನವಿರೋಧವೇ ಕಾರಣ ಎಂದು ಅನೇಕ ಆಂಗ್ಲ ಚರಿತ್ರಕಾರರು ಹೇಳಿದ್ದಾರೆ[2].

ಟಿಪ್ಪು ಮತ್ತು ಅಮೀರ್ ಸಿದ್ದಿಕ್ ಬಾಲ್ಯ ಸ್ನೇಹಿತರು, ಚಿಕ್ಕಂದಿನಿಂದಲೂ ಆಟ ಪಾಠಗಳಲ್ಲಿ ಮತ್ತಿತರ ವಿಷಯಗಳಲ್ಲಿ ಈ ಇಬ್ಬರೂ ಒಂದು. ಆದರೆ ಅಮೀರ್ ಸಿದ್ದಿಕ್ ಕಾಮುಕ. ಅವನ ಈ ಸ್ವಭಾವವನ್ನು ಅರಿತಿದ್ದ ಹೈದರಾಲಿ ಅವನನ್ನು ಹಿಂದೂ ಹುಡುಗಿಯೊಬ್ಬಳನ್ನು ಕೆಡಸಿದ ಆರೋಪದ ಮೇಲೆ ಬಂಧೀಖಾನೆಯಲ್ಲಿರಿಸಿದ್ದ. ಹಿಂದೂ ಮುಸಲ್ಮಾನರಲ್ಲಿ ಪರಸ್ಪರ ವಿರೋಧ ಹುಟ್ಟಿಸುವುದೂ ಈತನ ಕೆಟ್ಟ ಗುಣವಾಗಿತ್ತು. ಟಿಪ್ಪು ಅಧಿಕಾರಕ್ಕೆ ಬಂದೊಡನೆಯೇ ಈತನನ್ನು ಬಂಧನದಿಂದ ಬಿಡುಗಡೆ ಮಾಡಿ ಅಮೀರ್ ಪದವುಯನ್ನು ಕೊಟ್ತ. ಸಿದ್ದಿಕ್, ಅಮೇರ್ ಸಿದ್ದಿಕ್ ಆದುದು ಚೇಳಿಗೆ ಪಾರುಪತ್ಯ ಕೊಟ್ಟಂತಾಯಿತು. ಅವನು ಹಿಂದುಗಳ ಬಗೆಗೆ ತನಗಿದ್ದ ರೋಷವನ್ನು ಬಹಿರಂಗವಾಗಿಯೇ ಪ್ರಕಟಿಸಿದ. ಅಷ್ಟೇ ಅಲ್ಲ ಮುಸಲ್ಮಾನ ಸೈನಿಕರಿಂದ ಹಿಂದು ಹೆಣ್ಣು ಮಕ್ಕಳ ಮಾನಭಂಗ ಮಾಡಿಸಿದ. ಈ ಎಲ್ಲವನ್ನು ಟಿಪ್ಪುವೇ ಮಾಡಿಸುತ್ತಿದ್ದಾನೆಂದು ಜನರಲ್ಲಿ ಪ್ರಚಾರ ಮಾಡಿದ. ಇಡೀ ಹಿಂದುಗಳಲ್ಲಿ ಅಸಮಾಧಾನ ಭುಗಿಲೆದ್ದಿತು. ಇದನ್ನರಿತೇ ಇಂಗ್ಲಿಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಳ್ಳುವ ನಿರ್ಧಾರ ಮಾಡಿದರು. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಅಮೀರ ಸಿದ್ದಿಕ್ ತಾನೇ ನವಾಭನಾಗಲು ಯತ್ನಿಸಿದ. ಅವನು ಇಂಗ್ಲಿಷರೋಂದಿಗೆ ಸಂಬಂಧವಿರಿಸಿಕೊಂಡಿದ್ದ. ನಾಲ್ಕನೆಯ ಮೈಸೂರು ಯುದ್ಧದಲ್ಲಿ ಕೋಟೆಯನ್ನು ಹಲ್ಲೆ ಮಾಡಲು ಸರಿಯಾದ ಜಾಗ ಯಾವುದೆಂಬುದನ್ನು ನಿಶಾನೆಯ ಮೂಲಕ ತೋರಿ ಟಿಪ್ಪುವಿನ ಪಥನಕ್ಕೆ ಕಾರಣನಾದ. ಇದು ಮೀರ್ ಸಾಧಕನ ಮೋಸ ಎಂದೇ ಜನಪದ ದಲ್ಲಿ ಪ್ರಸಿದ್ಧವಾಗಿದೆ. ‘ಬೇಷಕ್ ತಮಾಷ’ ಲಾವಣಿ ಅಮೀರ್ ಸಿದ್ದಿಕ್ ಟಿಪ್ಪುವಿನ ವಿರುದ್ಧ ಇಂಗ್ಲೀಷರ ಜೊತೆಯಲ್ಲಿ ನಡೆಸಿದ ಕುತಂತ್ರದ ಕಥೆಯೇ ಆಗಿದೆ.

ತರೀಕೆರೆಯ ಪಾಳೆಯಗಾರ ಸರ್ಜಪ್ಪ ನಾಯಕ ಇಂಗ್ಲೀಷರ ವಿರುದ್ಧ ಬಂಡೆದ್ದ ಘಟನೆ ಸರ್ಜಪ್ಪ ನಾಯಕ ಲಾವಣಿಯೆಂದೇ ಪ್ರಸಿದ್ದವಾಗಿದೆ. ಕ್ರಿ.ಶ. ೧೫೬೫ರಲ್ಲಿ ತಾಳಿಕೋಟೆಯ ಯುದ್ಧ ಕಾಲದ ಹನುಮಪ್ಪ ನಾಯಕ ಎಂಬುವನು ವಿಜಯನಗರದ ಪರವಾಗಿ ಪ್ರಕಟಿಸಿದ ಅತಿಶಯವಾದ ಶೌರ್ಯ ಪರಾಕ್ರಮಗಳಿಗೆ ಪುರಸ್ಕಾರ ರೂಪವಾಗಿ ವಿಜಯನಗರದ ಆಗಿನ ದೊರೆ ಸಂತೇ ಬೆನ್ನೂರಿನ ಪಾಳೆಗಾರಿಕೆಯನ್ನೇ ಕೊಟ್ಟನು. ಮುಂದೆ ಇವರು ತಮ್ಮ ರಾಜಧಾನಿಯನ್ನುತರೀಕೆರೆಗೆ ಬದಲಾಯಿಸಿಕೊಂಡರು. ಅವರಿಗೆ ಮುಂದೆ ತರೀಕೆರೆ ಪಾಳೆಯಗಾರರೆಂದೇ ಹೆಸರಾಯಿತು. ವಿಜಯನಗರದ ನಂತರ ಇವರು ಶ್ರೀರಂಗಪಟ್ಟಣಕ್ಕೂ ಅಧೀನರಾಗಿದ್ದರು. ಜನಪದ ಸರ್ಜಪ್ಪನಾಯಕನ ಲಾವಣಿಯ ಕಥೆ ಹೀಗಿದೆ: ಸರ್ಜಪ್ಪ ತರೀಕೆರೆಯ ಪಾಳೆಯಗಾರ. ಇಂಗ್ಲೀಷರು ಈತನಿಗೆ ಅಪಾರ ಕಪ್ಪಕಾಣಿಕೆ ಕೊಡಬೇಕೆಂದು ಪೀಡಿಸಿದರು. ಆತ ಕಪ್ಪ ಕೊಡಲು ಒಪ್ಪಲಿಲ್ಲ. ಸರಿ ಇಬ್ಬರಿಗೂ ಲಡಾಯಿ ಆರಂಭವಾಯಿತು. ಏನು ಮಾಡಿದರು ಸರ್ಜಪ್ಪನಾಯಕನನ್ನು ಹಿಡಿಯಲು ಆಗಲಿಲ್ಲ ಇಡೀ ಇಂಗ್ರೇಜಿ ಸೇನೆ ತಲ್ಲಣಿಸಿಹೋಯಿತು. ಶಕ್ತಿಯಿಂದ ಸಾಧ್ಯವಿಲ್ಲ ಎಂಬುದನ್ನು ಇಂಗ್ರೇಜಿಯವರು ಯುಕ್ತಿಯಿಂದ ಸಾಧಿಸಲು ತೀರ್ಮಾನಿಸಿದರು. ಸರ್ಜಪ್ಪನಾಯಕನಿಗೆ ರಂಗಮ್ಮ ಎಂಬ ಉಪಪತ್ನಿ ಇದ್ದಳು. ಇಂಗ್ಲೀಷರು ಆಕೆಗೆ ಹಣದ ಅಮಿಷವೊಡ್ಡಿ ಅವನು ಮನೆಗೆ ಬಂದಾಗ ಸೂಚನೆ ನೀಡಬೇಕೆಂದು ಒಪ್ಪಂದ ಮಾಡಿಕೊಂಡರು. ಅದರಂತೆ ಸರ್ಜಪ್ಪನಾಯಕ ಬಂದಾಗ ರಂಗಮ್ಮ ಊಟದಲ್ಲಿ ಮತ್ತು ಬರುವ ಔಷಧಿ ಹಾಕಿದಳು. ನಾಯಕ ನಿದ್ದೆ ಮಾಡುವಾಗ ಇಂಗ್ಲೀಷರಿಗೆ ಸೂಚನೆ ನೀಡಿದಳು. ಅವರು ಆತನನ್ನು ಬಂಧಿಸಿ ಗಲ್ಲಿಗೇರಿಸಿದರು.

೧೭೯೯ರಲ್ಲಿ ಶ್ರೀರಂಗಪಟ್ಟಣ ಇಂಗ್ಲೀಷರ ವಶವಾದ ಮೇಲೆ ಅದರ ಅಧೀನರು, ಸಾಮಾಂತರು, ಮಾಂಡಲೀಕರು, ಪಾಳೆಯಗಾರರೆಲ್ಲಾ ಈಸ್ಟ್ ಇಂಡಿಯಾ ಕಂಪೆನಿಯ ಅಧೀನರಾದರು. ಹದಿನೆಂಟನೆಯ ಶತಮಾನದ ಆದಿಯಲ್ಲಿ ಬ್ರಿಟಿಷ್ ‘ಸರ್ಕಾರ ದತ್ತೂ’ ಸ್ವೀಕಾರ ನಿಷೇದ ಆಜ್ಞೆಯನ್ನು ಹೊರಡಿಸಿತು. ಅದರಿಂದ ಅನೇಕರು ತಮ್ಮ ರಾಜ್ಯವನ್ನು ಕಳೆದುಕೊಳ್ಳಬೇಕಾಯಿತು. ತರೀಕೆರೆಯ ಪಾಳೆಯಗಾರ ನಂಜಪ್ಪ ನಾಯಕನ ಸ್ಥಿತಿಯೂ ಹಾಗೆಯೇ ಆಯಿತು. ಈತನಿಗೆ ಮಕ್ಕಳಿರಲಿಲ್ಲ. ಇಂಗ್ಲೀಷರು ದತ್ತು ಸ್ವೀಕಾರಕ್ಕೆ ಅವಕಾಶ ಕೊಡಲಿಲ್ಲ. ಶಿವಮೊಗ್ಗೆಯಲ್ಲಿ ಸೀನಿಯರ್ ಕಮೀಷನರ್ ಆಗಿದ್ದ ಕರ್ನಲ್ ಬ್ರಿಗ್ಸ್ ನೊಂದಿಗೆ ನಡೆದ ಸಂಧಾನವೆಲ್ಲಾ ವಿಫಲವಾಯಿತು. ನಂಜಪ್ಪನಾಯಕ ಇದನ್ನು ವಿರೋಧಿಸಿ ದಂಗೆ ಎದ್ದ. ದಂಗೆಯಲ್ಲಿ ಪ್ರಮುಖ ಪಾತ್ರ ಸರ್ಜಪ್ಪ ನಾಯಕನದೆ. ಈ ಭಂಡಾಯ ಅಡಗಿಸುವುದು ಇಂಗ್ಲೀಷರಿಗೂ ಕಷ್ಟವಾಗಿತ್ತು. ಏಕೆಂದರೆ ಜನಾಭಿಪ್ರಾಯ ಪಾಳೆಯಗಾರರ ಪರವಾಗಿತ್ತು.

ಏನಾದರೊಂದು ತೀರ್ಮಾನಕ್ಕೆ ಬರುವುದೊಳ್ಳೆಯದೆಂದು ಕರ್ನಲ್ ಬ್ರಿಗ್ಸ್ ಬೇಷರತ್ತು ಮಾತುಕತೆಗೆ ಒಪ್ಪಿದ. ಕೊನೆಗೊಂದು ದಿನ ಸರ್ಜಪ್ಪನಾಯಕನು ಸೀನಿಯರ್ ಕಮೀಷನರ್ ಕರ್ನಲ್ ಬ್ರ್ಇಗ್ಸ ಬೇಷರತ್ತು ಮಾತುಕತೆಗೆ ಒಪ್ಪಿದ. ಕೊನೆಗೊಂದು ದಿನ ಸರ್ಜಪ್ಪನಾಯಕನು ಸೀನಿಯರ್ ಕಮೀಷನರ್ ಕರ್ನಲ ಬ್ರಿಗ್ಸ್ ನನ್ನು ಕಾಣಲು ಶಿವಮೊಗ್ಗೆಗೆ ಬಂದನು. ಆದರೆ ಮರುದಿನವೇ ನಂಜಪ್ಪ ನಾಯಕನು ಅನಿರೀಕ್ಷಿತವಾಗಿ ಮರಣ ಹೊಂದಿದನು. ಇದರಿಂದ ಪಾಳೆಗಾರಿಕೆಯ ವಿಷಯ ವಿಳಂಬವಾಯಿತು. ಸರ್ಜಪ್ಪನಾಯಕನು ಒಂದು ವಾರ ಕಳೆದ ಮೇಲೆ ಮತ್ತೆ ಸೀನಿಯರ್ ಕಮೀಷನರ್ ಬಳಿಗೆ ಬಂದನು. ನಾಯಕನನ್ನು ಅವರ ಕುಟುಂಬದವರನ್ನು ದಂಗೆಗೆ ಪೂರ್ವ ಸ್ಥಾನದಲ್ಲಿಯೇ ಇರಿಸುವಂತೆ ವಿನಂತಿಸಿದನು. ಬ್ರಿಗ್ಸ್ ಇದಕ್ಕೆ ಒಪ್ಪಿಕೊಂಡನು. ನಾಯಕನಿಗೆ ೩೦ ವರಹ ಮಾಸಿಕ ವೇತನ ಗೊತ್ತು ಪಡಿಸಿದನು. ನಾಯಕನ ಅನುಯಾಯಿಗಳಿಗೆಲ್ಲಾ ಅದೇ ಬಗೆಯ ರಕ್ಷಣೆ ನೀಡಿದನು. ಅವರಲ್ಲಿ ಕೆಲವರನ್ನು ತನ್ನ ಪೋಲಿಸ್ ಪಡೆಯಲ್ಲೂ ನೇಮಿಸಿಕೊಂಡನು. ಆದರೆ ದತ್ತು ಸ್ವೀಕಾರ ಕುರಿತಂತೆ ಮತ್ತೆ ಪರಿಸ್ಥಿತಿ ಬಿಗಡಾಯಿಸಿತು. ಸರ್ಜಪ್ಪನಾಯಕನು ಪುನಃ ದಂಗೆ ಎದ್ದನು. ತನ್ನ ಕಿರಿಯ ಪತ್ನಿಯ ಮನೆಯಲ್ಲಿದ್ದ ಸರ್ಜಪ್ಪ ನಾಯಕನನ್ನು ಬ್ರಿಟಿಷ್ ಪ್ರಭುತ್ವ ಬಂದಿಸಿ ೧೮೩೪ರಲ್ಲಿ ಅವನನ್ನು ಗಲ್ಲಿಗೇರಿಸಿತು.

ಇತಿಹಾಸದ ರೇಖುಗಳನ್ನು ಜಾನಪದದಲ್ಲಿ ಎಲ್ಲಿ ಇತಿಹಾಸ ಸೋಲುತ್ತದೆಯೋ ಅಲ್ಲಿ ದೊರೆಯುತ್ತವೆ. ಪ್ರಾಯಃ ಈ ಕಾರಣದಿಂದಲೇ ಎಲ್ಲಿ ಇತಿಹಾಸ ಸೋಲುತ್ತದೆಯೋ ಅಲ್ಲಿ ಜಾನಪದ ನೆರವಿಗೆ ಬರುತ್ತದೆ ಎಂಬ ಮಾತು ಹುಟ್ತಿರಬೇಕು ಆದರೆ ಈ ನೆರವನ್ನು ಪಡೆಯುವಾಗ ಇತಿಹಾಸಕಾರ ತುಂಬಾ ಎಚ್ಚರಿಕೆ ವಹಿಸಬೇಕು. ದತ್ತು ಸ್ವೀಕಾರ ನಿಷೇದ ಒಂದು ರೀತಿಯಲ್ಲಿ ಭಾರತದ ಉದ್ದಗಲಕ್ಕೆ ಭಾರತೀಯರನ್ನು ಕೆರಳಿಸಿತು. ಸಿಪಾಯಿದಂಗೆಯಂತಹ ಬಂಡಾಯಗಳಿಗೆ ಕಾರಣವಾಯಿತು. ೧೮೩೧ ರಿಂದ ೧೮೪೦ ರವರೆಗೆ ಬ್ರಿಟಿಷರ ವಿರುದ್ಧ ಭಾರತೀಯರು ನಡೆಸಿದ ಆಂದೋಲನದ ಘಟನೆಗಳು ಜಾನಪದ ಸೇರಿ ಲಾವಣಿ, ಕಥನಗೀತೆ, ನಾಟಕ, ಮತ್ತು ಕಥೆಗಳಾಗಿರುವುದನ್ನು ಕಾಣುತ್ತೇವೆ. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದ ಅನೇಕ ಲಾವಣಿಗಳನ್ನು ಸ್ವಾತಂತ್ರ್ಯ ಸಮರ ಕಾಲದಲ್ಲಿ ಜನರನ್ನು ಇಂಗ್ಲೀಷರ ವಿರುದ್ಧ ಲಾವಣಿಗಳನ್ನು ಸ್ವಾತಂತ್ರ್ಯ ಸಮರ ಕಾಲದಲ್ಲಿ ಜನರನ್ನು ಇಂಗ್ಲೀಷರ ವಿರುದ್ಧ ರೊಚ್ಚಿಗೆಬ್ಬಿಸಲು ಉಪಯೋಗಿಸಿಕೊಳ್ಳಲಾಗಿದೆ. ಹೀಗೆಯೇ ಬ್ರಿಟಿಷರ ಗುಂಡಿಗೆ ಬಲಿಯಾದ ಯುವಕರ ಕಥೆಗಳಿವೆ. ಶಿವಪುರ, ವಿಧುರಾತ್ವತದಂತಹ ಸಾಮೂಹಿಕ ಪ್ರತಿಭಟನೆಯ ಘಟಬೆಗಳಿವೆ. ಇವುಗಳೆಲ್ಲವೂ ಇತಿಹಾಸದಿಂದ ಜಾನಪದಕ್ಕೆ ಬಂದಂತಹವೆ. ಇವುಗಳನೇಕರ ದಾಖಲೆ ನಮಗೆ ಸರ್ಕಾರಿ ಕಡತಗಳಲ್ಲಿ ದೊರೆಯುವುದಿಲ್ಲ. ಕಾಲಾನಂತರ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಬರೆಯುವವರು ಅನಿವಾರ್ಯವಾಗಿ ಜಾನಪದದ ಮೊರೆಹೋಗಲೇ ಬೇಕಾಗುತ್ತದೆ.

ಕನ್ನಡ ಮತ್ತು ಕರ್ನಾಟಕಕ್ಕೆ ಸೀಮಿತವಾದಂತೆ ಇಂತಹ ಅನೇಕ ಸಂದರ್ಭಗಳು, ಘಟನೆಗಳು ಇವೆ. ಇವುಗಳನ್ನು ವ್ಯವಸ್ಥಿತವಾಗಿ ದಾಖಲು ಮಾಡಿಡಬೇಕಾದುದು ವಿಶ್ವವಿದ್ಯಾಲಯಗಳ, ವಿದ್ವಾಂಸರ ಕರ್ತವ್ಯ, ಕರ್ನಲ್ ಮೆಕೆಂಜಿ, ಪ್ಲೀಟ್, ರೈಸ್, ಮೊಗ್ಲಿಂಗ್ ಮುಂತಾದ ಆಂಗ್ಲ ವಿದ್ವಾಂಸರು ಕೆಲವನ್ನು ಸಂಗ್ರಹಿಸಿದ್ದಾರೆ. ದೇವ ಚಂದ್ರನ ರಾಜಾವಳಿ ಕಥೆ ಈ ದಿಸೆಯಲ್ಲಿ ಒಂದು ಮಹತ್ತರ ಕೃತಿ. ಇತಿಹಾಸ ಮತ್ತು ಜಾನಪದ ಮತ್ತಿತರ ಪೂರಕ ವಿಜ್ಞಾನಗಳ ಅಧ್ಯಯನ ಆಗಿಯೇ ಇಲ್ಲ. ಡಾ. ಜೀ. ಶಂ. ಪರಮಶಿವಯ್ಯ ಅವರ ಕೆಲವು ಉತ್ತಮ ಪ್ರಯತ್ನಗಳನ್ನುಳಿದು ಈ ಕ್ಷೇತ್ರದಲ್ಲಿ ಕೆಲಸ ಆಗಿಯೇ ಇಲ್ಲ. ಈ ವಿಷಯದ ವ್ಯಾಪ್ತಿತುಂಬಾ ವಿಸ್ತಾರವಾದುದು. ಈ ಪ್ರಬಂಧ ಅಲ್ಲಿ ಇಲ್ಲಿ ಚುರುಕಿ ಹಾರಿ ಅದರ ಮಹತ್ವ ತೋರಿಸಲು ಯತ್ನಿಸಿದೆ.

 

2 ಕರ್ನಾಟಕ ಇತಿಹಾಸ ದರ್ಶನ, ಡಾ. ಎಂ. ವಿ. ಕೃಷ್ಣರಾವ್, ಪುಟ೪೩

[1] ಕರ್ನಾಟಕ ಇತಿಹಾಸ ದರ್ಶನ – ಡಾ. ಎಂ. ವಿ. ಕೃಷ್ಣರಾವ್, ಪುಟ೬೬

[2] ಸೀತೆದಂಡು – ಒಂದು ಟಿಪ್ಪಣಿ – ಹ. ಕ, ರಾಜೇಗೌಡ, ಜಾನಪದ, ಹೆಚ್ಚಿನ ವಿವರಗಳಿಗೆ ನೋಡಬಹುದು.