ಇತಿಹಾಸ, ಮಾನವಶಾಸ್ತ್ರ, ಸಮಾಜಶಾಸ್ತ್ರ, ಸಾಂಸ್ಕೃತಿಕ ಅಧ್ಯಯನ ಮತ್ತು ಜಾನಪದ ಇವುಗಳೆಲ್ಲದರು ತಾಯಿಬೇರು ಮಾನವನ ಬದುಕು ಮತ್ತು ಅದರ ಆಗು ಹೋಗುಗಳಲ್ಲಿ ಇರುವುದು ಕಂಡುಬರುತ್ತದೆ. ಆದುದರಿಂದ ಈ ಎಲ್ಲಾ ಶಾಸ್ತ್ರಗಳೂ ಒಂದೇ ಮೂಲದ ಅನೇಕ ಕವಲುಗಳೆಂದರೂ ತಪ್ಪಾಗುವುದಿಲ್ಲ. ಮಾನವ ವಿಕಾಸವೆ ಮಾನವಶಾಸ್ತ್ರ. ಮಾನವನ ಆಡಳಿತ ರೀತಿ ನೀತಿ ಇತಿಹಾಸ. ಮಾನವ ಸಂಘಜೀವಿ, ಸಮಾಜ ಜೀವಿಯಾದುದೇ ಸಮಾಜಶಾಸ್ತ್ರ. ಮಾನವನ ನಡಾವಳಿಗಳೇ ಸಂಸ್ಕೃತಿ. ಈ ಎಲ್ಲವುಗಳ ಪಳೆಯುಳಿಕೆಯೇ ಜಾನಪದ. ಈ ಯಾವುದೇ ಶಾಸ್ತ್ರ ಒಂದಕ್ಕೆ ಮತ್ತೊಂದು ಪೂರಕ ಮತ್ತು ಪೋಷಕ. ಯಾವುದೊ ಮತ್ತೊಂದನ್ನುಳಿದು ಪರಿಪೂರ್ಣವಲ್ಲ. ಈ ಕಾರಣದಿಂದಾಗಿಯೇ ಈ ಎಲ್ಲಾ ಶಾಸ್ತ್ರಗಳೂ ಪರಸ್ಪರ ಕೊಳು ಕೊಡುಗೆಯನ್ನು ಹೊಂದಿದವುಗಳು. ಹೀಗಾಗಿ ಒಂದನ್ನು ಮತ್ತೊಂದರಿಂದ ಖಚಿತವಾಗಿ ಗೆರೆಯೆಳೆದು ಬೇರೆ ಮಾಡುವುದು ಸಾಧ್ಯವಿಲ್ಲ. ನಮ್ಮ ಹೊಲದ ರಾಗಿ, ಹುರಳಿ, ಅವರೆ ಬೇರು ಪರಸ್ಪರ ಹೆಣೆದುಕೊಂಡಿರುವಂತೆ ಇವು ಹೆಣೆದುಕೊಂಡಿವೆ. ಹೀಗಾಗಿ ಇತಿಹಾಸ ಮತ್ತು ಜಾನಪದ ಅಥವಾ ಮತ್ತಾವುದೋ ಪೂರಕ ಶಾಸ್ತ್ರವನ್ನು ಅಧ್ಯಯನ ಮಾಡುವಾಗ ಈ ಎಲ್ಲವುಗಳ ಅರಿವೂ ಇರಬೇಕಾಗುತ್ತದೆ.

ಮಾನವನ ಬದುಕು ಇತರ ಪ್ರಾಣಿವರ್ಗಗಳಿಂದ ಭಿನ್ನವಾದಂದೇ ಇವುಗಳೆಲ್ಲಾ ಆರಂಭವಾದುದೆಂದು ಹೇಳಬಹುದು. ಈ ಬಗೆಗೆ ಲಕ್ಷ ಲಕ್ಷ ವರ್ಷಗಳು ಸಂದು ಹೋಗಿವೆ ಎಂಬುದು ವಿದ್ವಾಂಸರ ಮತ. ಈ ಮಾನವನ ಜೀವನ ಚಕ್ರ ಉರುಳಿ ಉರುಳಿ ಅದು ಎಷ್ಟು ಸುತ್ತಾಗಿದೆಯೋ ಲೆಕ್ಕವಿಲ್ಲ. ಹಾಗಾದರೆ ಇವೆಲ್ಲವುಗಳ ಬಗ್ಗೆ ತಿಳಿಯುವುದು ಹೇಗೆ? ಲಕ್ಷೋಪಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲೆ ಬೆಳೆದಿದ್ದ ಕಾಡು ಅನಾಮತ್ತಾಗಿ ಭೂಗರ್ಭ ಸೇರಿ ಕಲ್ಲಿದ್ದಲಾಗಿರುವುದನ್ನು ಕಾಣುತ್ತೇವೆ. ಹಾಗೆ ಭೂಗರ್ಭ ಸೇರಿದ ಕಾಡು ಕಲ್ಲಿದ್ದಲಾಗಿ ಹೊರಬಂದು ಇಂದು ನಮ್ಮ ಜೀವನದ ಅನೇಕ ರಂಗಗಳಿಗೆ ಚಾಲಕ ಶಕ್ತಿಯಾಗಿದೆ. ಭೂಗರ್ಭದಿಂದ ರಾಶಿ ರಾಶಿ ಅಗೆದ ಕಲ್ಲುಗಳನ್ನೆಲ್ಲಾ ಕುಟ್ಟಿ ಕುಟ್ಟಿ ಅದರಲ್ಲಿರುವ ಚಿನ್ನದ ರೇಖುಗಳನ್ನು ತೆಗೆಯಬೇಕು. ಇದನ್ನು ಕರಗಿಸಿ ಶೋಧಿಸಬೇಕು. ಆಗ ಥಳಥಳಿಸುವ ಚಿನ್ನವಾಗುತ್ತದೆ. ಇಂತಹ ಒಂದು ಲೋಹ ಆ ಕಲ್ಲಿನಲ್ಲಿದೆಯೆಂದರೆ ಯಾರು ನಂಬುತ್ತಾರೆ, ಹಾಗೆಯೇ ಈ ಮಾನವನ ಬದುಕನ್ನು ಅಗೆದು ಕುಟ್ಟಿ ಕರಗಿಸಿದರೆ ಅವುಗಳ ಪ್ರಾಚೀನತೆಯ ಹೊಳಪಿನ ರೇಖುಗಳು ದೊರೆಯುತ್ತವೆ.

ಇತಿಹಾಸ ಮಾನವನ ಆಡಳಿತದ ರೀತಿ ನೀತಿಗಳ ದಾಖಲೆ ಎಂದು ಹೇಳಬಹುದು. ಇದು ಆಯಾ ಕಾಲದ ಆಡಳಿತ ಕ್ರಮ, ತೆರಿಗೆಯ ರೀತಿ, ನ್ಯಾಯ ನಿಷ್ಠುರತೆ, ರಾಜರವಂಶಾವಳಿಗಳು ಹೀಗೆ ಹರಡಿಕೊಂಡಿರುತ್ತದೆ. ಇದು ಯಾವಾಗ ಎಲ್ಲಿ ಆರಂಭವಾಯಿತೆಂದು ಹೇಳಲು ಬರುವುದಿಲ್ಲ. ಆದರೆ ಆಯಾಕಾಲದ ಉಳಿದ ಪಳೆಯುಳಿಕೆಗಳಿಂದ ವಿದ್ವಾಂಸರು ಇದನ್ನು ರೂಪಿಸುತ್ತಾ ಬಂದಿದ್ದಾರೆ. “ದಿಯೋನಿಸನಿಂದ ಹಿಡಿದು ಸಾಂದ್ರಕೂಟುಸ್ (ಚಂದ್ರಗುಪ್ತಮೌರ್ಯ)ನವರೆಗೆ ನೂರೈವತ್ಮೂರು ರಾಜರು ಆಳಿ ಹೋಗಿದ್ದಾರೆಂದು ಲೆಕ್ಕ ಹಾಕಿದ್ದಾರೆ. ಈ ರಾಜರುಗಳ ಆಳ್ವಿಕೆಯ ಒಟ್ಟು ಕಾಲ ಆರು ಸಾವಿರದ ನಲವತ್ತೆರಡು ವರ್ಷಗಳು.” ಕ್ರಿ. ಪೂ. ೩೦೦ ರಲ್ಲಿ ಭಾರತಕ್ಕೆ ಪ್ರವಾಸಿಯಾಗಿ ಬಂದ ಮೆಗಸ್ತನೀಸನ ಮೇಲಿನ ಹೇಳಿಕೆ ನಮ್ಮ ಇತಿಹಾಸ ಎಷ್ಟು ಪ್ರಾಚೀನವೆಂಬುದನ್ನು ತಿಳಿಸುತ್ತದೆ. ಇದರೊಂದಿಗೆ ಆಯಾ ರಾಜರು ಹಾಕಿಸಿದ ಶಾಸನಗಳು, ಕಟ್ಟಿಸಿದ ದೇವಾಲಯಗಳು, ಗಿರಿದುರ್ಗಗಳು ಕೋಟೆಕೊತ್ತಲಗಳು, ಕೆರೆಕಟ್ಟೆಗಳು ಆಯಾ ಕಾಲದ ಇತಿಹಾಸ ಪುನರ್ ರಚನೆಯ ಸಾಮಗ್ರಿಯಾಗುತ್ತವೆ. ಹಾಗೆಯೇ ಇವುಗಳು ಮತ್ತು ಇವುಗಳ ಕಥೆಗಳು ಆಯಾಕಾಲದ, ಆಯಾ ದೇಶದ ಜನಪದ ಬದುಕಿನ ಅಂಗವೂ ಆದುದರಿಂದ ಜಾನಪದವೂ ಆಗುತ್ತದೆ. ಚಕ್ರವರ್ತಿಗಳು, ರಾಜಮಹಾರಾಜರು ತಮ್ಮ ನಾಡನ್ನು ಪ್ರಾಂತಗಳಾಗಿ ವಿಂಗಡಿಸಿ ಅವುಗಳಿಗೆ ಸಾಮಂತ, ಮಾಂಡಲೀಕ, ಪಾಳೆಯಗಾರರನ್ನು ನೇಮಿಸುವುದು ಇತಿಹಾಸ. ಇಂತಹವರು ತೊಡುವ ಉಡುಪು, ಒಡವೆ, ಆಚರಿಸುವ ಹಬ್ಬ ಹರಿದಿನ, ವಿಧಿ ನಿಷೇದಗಳು ಜಾನಪದ. ಈ ದೃಷ್ಟಿಯಿಂದ ಇತಿಹಾಸ ಮತ್ತು ಜಾನಪದ ಪರಸ್ಪರ ಪೂರಕವಾದ ಒಂದು ಅಧ್ಯಯನವಾಗುತ್ತದೆ.

ಭಾರತಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕ್ರಿ. ಪೂ. ೩೦೦೦ ವರ್ಷಗಳಷ್ಟು ಹಿಂದೆಯೇ ಸಮಾಜ ಅತ್ಯಂತ ವ್ಯವಸ್ಥಿತವಾಗಿದ್ದಿತೆಂದೂ ಜನರು ಧಾರ್ಮಿಕವಾಗಿ ಸಹ ಮೇಲ್ಮಟ್ಟದವರಾಗಿದ್ದರೆಂದು ತಿಳಿದು ಬರುತ್ತದೆ. ಈ ಹೊತ್ತಿಗಾಗಲೇ ಭಾರತವಷ್ಟೇ ಅಲ್ಲ ಇಡೀ ಏಷ್ಯಾದಲ್ಲಿಯೇ ಶೈವ ಧರ್ಮ ತನ್ನ ಉನ್ನತ ಸ್ಥಿತಿಯಲ್ಲದ್ದಿತೆಂದು ಆ ಬಗೆಗೆ ಕೆಲಸ್ ಮಾಡಿರುವ ವಿದ್ವಾಂಸರು ಅಭಿಪ್ರಾಯ ಪಟ್ಟಿರುತ್ತಾರೆ. ಹರಪ್ಪ ಮೊಹಂಜೊದಾರೊ ಮತ್ತು ಸಿಂಧು ನದಿತೀರದ ನಾಗರಿಕತೆಗಳು ಆರ್ಯರು ಭಾರತಕ್ಕೆ ಬರುವುದಕ್ಕಿಂತ ಎಷ್ಟೋ ಮುಂಚೆಯೇ ಆಗಿ ಹೋದುವೆಂಬ ಅಭಿಪ್ರಾಯವಿದೆ. ಕ್ರಿ.ಶ. ೪೦೦ರಲ್ಲಿ ಭಾರತಕ್ಕೆ ಬಂದ ಪ್ರವಾಸಿ ಪಾಹಿಯಾನ್ “ಅಶೋಕನ ರಾಜಧಾನಿ ಪಾಟಲಿಪುತ್ರ ನಗರಕ್ಕೆ ಬಂದೆವು. ಈ ನಗರದ ಮಧ್ಯದಲ್ಲಿರುವ ರಾಜನ ಅರಮನೆಯೂ ಭವ್ಯ ಸೌಧಗಳೂ ಈಗ ನಿರ್ಮಿಸಿದಂತಿವೆ. ಇವುಗಳನ್ನು ಭೂತಭೇತಾಳಗಳೇ ನಿರ್ಮಿಸಿವೆ ಎಂದು ಹೇಳಬೇಕು. ಏಕೆಂದರೆ ಭಾರಿ ಭಾರಿ ಕಲ್ಲುಗಳಿಂದ ಕಟ್ಟಿರುವ ಗೋಡೆ, ದಿಡ್ಡೀ ಬಾಗಿಲು, ಕೆತ್ತನೆಯ ಕೆಲಸ, ಕಡತದ ಕೆಲಸ ಇವೆಲ್ಲಾ ಅಮಾನುಷ ರೀತಿಯಲ್ಲಿ ರಚಿತವಾಗಿವೆ. ಇವುಗಳನ್ನು ಈಗಲೂ ನೋಡಬಹುದು”. ಅಶೋಕನು ಆಳಿದ ಕಾಲ ಕ್ರಿ. ಪೂ. ೨೭೩ ರಿಂದ ೨೩೬ ಅಂದರೆ ಪಾಹಿಯಾನನು ಬರುವುದಕ್ಕೆ ಸುಮಾರು ೭೦೦ ವರ್ಷಗಳಷ್ಟು ಹಿಂದೆ. ಆದರೆ ಈಗ ಈ ಯಾವುದರ ಕುರುಹೂ ನಮಗೆ ಸಿಗದು. ಆದರೆ ಅಶೋಕನ ಶಾಸನಗಳು ಮತ್ತು ಸ್ತಂಭಗಳು ಇಂದಿಗೂ ದೊರೆಯುತ್ತವೆ. ಈ ಪ್ರಾಚೀನ ಅವಶೇಷಗಳು ನಾನಾ ಕಾರಣಗಳಿಂದ ನಾಶವಾಗುತ್ತವೆ. ಒಬ್ಬ ರಾಜ ಹಾಕಿಸಿದ ಶಾಸನವನ್ನು ಮತ್ತೊಬ್ಬ ಅಳಿಸಿ ಹಾಕಿದ ಉದಾಹರಣೆಗಳು ದೊರೆಯುತ್ತವೆ. ಆದುದರಿಂದಲೇ ಅಂತಹ ಸಂದರ್ಭಗಳಲ್ಲಿ ಇತಿಹಾಸಕ್ಕೆ ಜಾನಪದ ಸಹಾಯಕ್ಕೆ ಬರುತ್ತದೆ. ಏಕೆಂದರೆ ಇತಿಹಾಸದ ಘಟನೆಗಳೋ, ಸಂಗತಿಗಳೋ ಜನಮನವನ್ನು ಸೇರಿ ಕ್ರಮೇಣ ಕಥೆಯಾಗಿಯೋ, ಗೀತೆಯಾಗಿಯೋ ರೂಪುಗೊಂಡು ಉಳಿಯುತ್ತವೆ, ಇವುಗಳ ಆಧಾರದಿಂದ ಮತ್ತೆ ಇತಿಹಾಸವನ್ನು ರೂಪಿಸುವುದು ಸಾಧ್ಯವಾಗುತ್ತದೆ.

ಚರಿತ್ರೆಯ ಘಟನೆಗಳೆಲ್ಲಾ ಜಾನಪದವಾಗುತ್ತದೆಂದು ಹೇಳಲಾಗುವುದಿಲ್ಲ. ಅನೇಕ ವೇಳೆ ಸಮರ್ಥರಾದ ರಾಜರುಗಳೇ ಜನಪದದಲ್ಲಿ ಉಳಿಯುವುದಿಲ್ಲ. ಆದರೆ ಜನಜೀವನ ಕಲಕಿದ ವಿಶೇಷ ಸಂದರ್ಭಗಳು, ದುರಂತ ಘಟನೆಗಳು, ಸಮಾಜವನ್ನು ಗೊಂದಲಗೊಳಿಸಿದ ಪ್ರಣಯ ಪ್ರಸಂಗಗಳು, ಧಾರ್ಮಿಕ ಘರ್ಷಣೆಗಳು, ಜನವಿರೋಧಿ ನಿರಂಕುಶ ರಾಜರ ಕಥೆಗಳು ಹೀಗೆ ಕೆಲವು ಮಾತ್ರ ಜನಮನದಲ್ಲಿ ಉಳಿಯುತ್ತವೆ. ಇವುಗಳು ಸಹ ಸೂತ್ರ ರೂಪವಾಗಿ ಇರುತ್ತವೆ. ಅನೇಕ ವೇಳೆ ಮಾರ್ಪಾಡಾಗಿರುತ್ತವೆ ಇಲ್ಲವೆ ವಿರೂಪಗೊಂಡಿರುತ್ತವೆ. ಇವೆಲ್ಲಾ ಕಂಠಸ್ಥವಾಗಿ ಹರಿಯುವುದರಿಂದ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಸಮಕಾಲೀನ ಬದುಕಿನ ಅಂತಹ ಘಟನೆಗಳನ್ನು ಸಮೀಕರಿಸಿಕೊಳ್ಳುತ್ತಾ ಮುಂದುವರಿಯುತ್ತವೆ. ಈ ಹಿನ್ನಲೆಯಲ್ಲಿ ಇತಿಹಾಸ ಮತ್ತು ಜಾನಪದದ ಪರಸ್ಪರ ಕೊಳುಕೊಡುಗೆಗಳು ಅತ್ಯಂತ ಮಹತ್ವಪೂರ್ಣವಾದುವು ಆಗಿರುತ್ತದೆಂಬುದರಲ್ಲಿ ಅನುಮಾನವಿಲ್ಲ.

ಕನ್ನಡನಾಡಿನ ಇತಿಹಾಸದಲ್ಲಿ ಕೇವಲ ಕೆಲವು ಘಟನೆಗಳು ಮಾತ್ರ ಜಾನಪದದಲ್ಲಿ ಸೇರಿಕೊಂಡಿವೆ ಅಥವಾ ಜನಪದ ಗೀತೆ, ಕಾವ್ಯ, ಕಥೆಯಾಗಿ ರೂಪುಗೊಂಡಿವೆ. ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಮತ್ತು ವಿದ್ಯಾಮಂಜರಿಯ ಕಥೆಗಳು ಇಂತಹ ಘಟನೆಗಳಿಂದ ಕೂಡಿವೆಯೆಂಬ ಅಭಿಪ್ರಾಯವಿದೆ. ಆದರೆ ಇವುಗಳನ್ನು ಸ್ಪಷ್ಟವಾಗಿ ಚಾರಿತ್ರಿಕ ಘಟನೆಗಳೆಂದು ಗುರುತಿಸಲು ನಿಚ್ಛಳ ಆಧಾರಗಳಿದ್ದಂತಿಲ್ಲ. ಈ ದಿಸೆಯಲ್ಲಿ ನಮಗೆ ಸಿಗುವ ಮೊದಲನೆಯ ಕಥೆಕರಿರಾಯ ಚರಿತ್ರೆ. ಇದು ಗಂಗವಂಶದ ಕೊನೆಯ ದಿನಗಳಲ್ಲಿ ನಡೆದ ದುರಂತ ಪ್ರಣಯ ಪ್ರಸಂಗ.[1] ಇದಾದ ನಂತರ ಕಳಚುರ್ಯ ಬಿಜ್ಜಳನ ಕಾಲದಲ್ಲಿ ಉಂಟಾದ ಧಾರ್ಮಿಕ ಕ್ರಾಂತಿಯ ಹಿನ್ನೆಲೆಯಲ್ಲಿ ರೂಪುಗೊಂಡ ಒಕ್ಕಲಿಗರ ಮೂಲ ಎಂಬ ಜನಪದ ಪ್ರಸಂಗ. ಹೊಯ್ಸಳ ರಾಜವಂಶದ ವಿಷ್ಣುವರ್ಧನನ ಕಾಲದಲ್ಲಿ ಧಾರ್ಮಿಕ ಹಿನ್ನೆಲೆಯಿಂದಾಗಿ ಉಂಟಾದ ಲಕ್ಕಣ್ಣ, ಈರಣ್ಣ ಮತ್ತು ಶಾಂತವ್ವೆ ಜನಪದ ಕಾವ್ಯಗಳು. ವಿಜಯನಗರ ಸಾಮ್ರಾಜ್ಯದ ಅತ್ಯಂತ ಆಪ್ತ ಸಾಮಂತರಾದ ಯಲಹಂಕ ನಾಡ ಪ್ರಭುಗಳಲ್ಲಿ ಮುಮ್ಮಡಿ ಕೆಂಪೇಗೌಡನ ಕಾಲಕ್ಕೆ ಉಂಟಾದ ಧಾರ್ಮಿಕ ಆಂದೋಲನದ ಹಿನ್ನೆಲೆಯ “ಮಾಗಡಿಯ ಕೆಂಪೇಗೌಡ. ಇದೇ ಕಾಲದ ಕುಮ್ಮಟದ ರಾಮನ ಕಥೆ.[2] ಮೈಸೂರಿಗೆ ಸಂಬಂಧಿಸಿದ ಕಾರುಗಹಳ್ಳಿಯ ಮಾರನಾಯಕ, ಪಿರಿಯಾಪಟ್ಟಣದ ಕಾಳಗ. ಮುಂದೆ ಬ್ರಿಟಿಷರ ಕಾಲದ ಕಿತ್ತೂರು ಚೆನ್ನಮ್ಮ, ಟಿಪ್ಪು ಸುಲ್ತಾನ, ತರಿಕೆಯ ಸರ್ಜಪ್ಪ ನಾಯಕ, ಸಂಗೊಳ್ಳಿ ರಾಯಣ್ಣ, ಮುಂತಾದವು ಎಂದು ಏಕೆ ಹೇಳಿದೆನೆಂದರೆ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳನೇಕ ಜನಪದ ಕಥನ ಗೀತೆಗಳಾಗಿವೆ. ಜನಪದದಲ್ಲಿ ದೊರೆಯುವ ಅಣ್ಣ ತಂಗಿ, ಲಕ್ಷಾಪತಿ ರಾಜ, ಸತ್ಯಭೋಜ, ಬಾಲನಾಗಮ್ಮ, ಇವೆಲ್ಲ ಚಾರಿತ್ರಿಕ ಘಟನೆಗಳೆಂದು ಊಹಿಸಲವಕಾಶವಿದೆ. ಇನ್ನು ಕೆರೆಗೆ ಹಾರ, ಕೊಣವೇಗೌಡ, ಈರೋಬಿ ಮುಂತಾಗಿ ಅನೇಕರ ಕೊಲೆ, ಆತ್ಮರ್ಪಣೆ, ಸೆರೆ ಮುಂತಾದ ಘಟನೆಗಳ ಹಿನ್ನೆಲೆಯವೆಂದು ಹೇಳಲವಕಾಶವಿದೆ. ಒಟ್ಟಿನಲ್ಲಿ ಜನಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದಂತಹ ಸಂದರ್ಭಗಳು ಜನಪದ ಕಥೆ, ಗೀತೆಯಾಗಿ ಉಳಿದು ಬಂದಿವೆ. ಇಂತಹವುಗಳ ಎಳೆಯನ್ನು ಬಿಡಿಸುತ್ತಾ ಹೋದರೆ ಅದು ಯಾವುದೋ ಒಂದು ಚಾರಿತ್ರಿಕ ಘಟನೆಗೆ ನಮ್ಮನ್ನು ಒಯ್ಯುತ್ತದೆ. ಆದುದರಿಂದ ಜನಪದ ಕಾವ್ಯ, ಕಥೆ, ಗೀತೆಗಳು ಕಂಡುಂಡ ಘಟನೆಗಳ ರೂಪವೇ ವಿನಃ ಕಾಲ್ಪನಿಕವಾದುವಲ್ಲ.

ತಲಕಾಡಿನ ಗಂಗರು ಕ್ರಿ.ಶ. ೩೫೦ ರಿಂದ ಕ್ರಿ.ಶ. ೧೦೫೦ರವರೆಗೆ ಅವಿಚ್ಚಿನ್ನವಾಗಿ ಕನ್ನಡನಾಡನ್ನು ೭೦೦ ವರ್ಷಗಳ ಕಾಲ ಆಳಿದವರು. ದಡಿಗ ಮತ್ತು ಮಾಧವರೆಂಬ ರೈತ ಯುವಕರು ತಮ್ಮ ಅಸಾಧಾರಣ ಸಂಘಟನಾ ಶಕ್ತಿಯಿಂದ ಕಟ್ಟಿದ ಗಂಗವಾಡಿ ತೊಂಭತ್ತಾರು ಸಾವಿರ ಕನ್ನಡನಾಡಿನ ಇತಿಹಾಸದಲ್ಲೊಂದು ಅವಿಸ್ಮರಣೀಯ ಅಂಶ. ಈ ವಂಶದವರು ಜೈನರೆಂದು ಹೇಳುತ್ತಾ ಬಂದಿದ್ದಾರೆ. ಆದರೆ, These Gangadikarsa are purely kannadigasa anda as the Home of the Gangas happens to be the main region of Kannada speaking people. It is quite likely that a prominent adventure of this part might have been responsible for the origin. There is no doubt that Dadiga and Madhava were the founders of the Dynasty. Because of their agricultural background it might not have been very difficult for them to draw men for their Militia from their stock. Normally agriculturist have been the mainstay of the army in every perid and the found brothers being Sons of the soil might not have experienced difficulty in finding supporters for their cause. ಎಂಬ ಹೇಳಿಕೆ ಮತ್ತು ಈ ವಂಶದ ಮಾಧವ, ಮಾರ, ಶಿವಕುಮಾರ, ರಾಚಮಲ್ಲ ಮುಂತಾದವು, ಇವರು ಶೈವ ಮತ್ತು ವೈಷ್ಣವವೂ ಸೇರಿದಂತೆ ಸರ್ವಧರ್ಮ ಸಮನ್ವಯದ ರೈತವಂಶೀಯರೆಂಬುದನ್ನು ಖಚಿತಪಡಿಸುತ್ತೇವೆ. ಈ ವಂಶದ ಸುಪ್ರಸಿದ್ಧ ರಾಜನಾದ ದುರ್ವಿನೀತನು ಸ್ವತಃ ವೈಷ್ಣವನಾದರೂ ಅನ್ಯಧರ್ಮಿಯರಿಗೆ ಧರ್ಮಸ್ವಾತಂತ್ರ್ಯ ನೀಡಿದವನಾಗಿದ್ದನು. ಈ ಹೇಳಿಕೆ ಕೂಡ ಸರಿಯಲ್ಲವೆಂದು ಹೇಳಬಹುದು. ದುರ್ವಿನೀತನ ಮತ್ತೊಂದು ಶಾಸನ ಅವನು ದೈವಗಳಿಗೆ ಪ್ರಾಣಿ ಬಲಿ ಕೊಡುತ್ತಿದ್ದನ್ನು ಉಲ್ಲೇಖಿಸುತ್ತದೆ. ಆದರೆ ಈ ವಂಶದ ಮುಮ್ಮಡಿ ಮಾರಸಿಂಹ ಚಾವುಂಡಯ್ಯ ಸಿಂಹನಂದಿ ಎಂಬ ಜೈನಗುರುವಿನಲ್ಲಿ ಶಿಕ್ಷಣ ಪಡೆದ ಬಗ್ಗೆ ತಿ. ನರಸೀಪುರ ಶಾಸನವೊಂದು ತಿಳಿಸುತ್ತದೆ. ಈ ಕಾರಣದಿಂದಾಗಿ ಮುಮ್ಮಡಿ ಮಾರಸಿಂಹ ತಾನು ಅಧಿಕಾರಕ್ಕೆ ಬಂದಮೇಲೆ ಚಾವುಂಡಯ್ಯನನ್ನು ಪ್ರಧಾನಿಯನ್ನಾಗಿ ಮಾಡಿಕೊಂಡನು. ಈ ಇಬ್ಬರೂ ತಮ್ಮ ಗುರುವಿಗಾಗಿ ಜೈನಧರ್ಮದ ಬಗೆಗೆ ಹೆಚ್ಚು ಒಲವಿದ್ದವರಾಗಿದ್ದರು. ಚಾವುಂಡಯ್ಯ ಗೊಮ್ಮಟೇಶ್ವರನನ್ನು ಕೆತ್ತಿಸಿದ ಮೇಲಂತೂ ಅವರಿಬ್ಬರೂ ಜಾತಿಯಲ್ಲಿ ಜೈನರೆಂದೇ ಚರಿತ್ರಕಾರರು ನಂಬಿದಂತಿದೆ. ಮುಮ್ಮಡಿ ಮಾರಸಿಂಹನ ನಂತರ ಮತ್ತು ಹೊಯ್ಸಳ ವಿಷ್ಣುವರ್ಧನ ತಲಕಾಡನ್ನು ಚೋಳರಿಂದ ಗೆದ್ದು ಮತ್ತೆ ಕನ್ನಡ ನಾಡಿನಲ್ಲಿ ವಿಲೀನಗೊಳಿಸಿದ ಕಾಲದೊಳಗೆ ಗಂಗವಂಶದಲ್ಲಿ ನಡೆದ ದುರಂತ ಪ್ರಣಯ ಪ್ರಸಂಗವೇ ಕರಿರಾಯ ಚಾರಿತ್ರವೆಂಬ ಯಕ್ಷಗಾನ ಕಾವ್ಯವಾಗಿ ರೂಪುಗೊಂಡಿದೆ.

ಕರಿರಾಯ ಚಾರಿತ್ರದ ಕಥೆ ಹೀಗಿದೆ: ಧರೆಗೆ ದಕ್ಷಿಣದಲ್ಲಿ ಕಾಶ್ಮೀರ ದೇಶ, ಅದರ ರಾಜಧಾನಿ ಧಾರಾಪುರ. ಅದನ್ನು ಆಳುವವನು ಮಾರಭೂಪಾಲ. ಅವನ ರಾಣಿ ಬನವಂತಾದೇವಿ. ಯುದ್ಧವೊಂದರಲ್ಲಿ ಮಾರಭೂಪ ಮಡಿದ. ಈ ದಂಪತಿಗಳಿಗೆ ಕರಿರಾಯನೆಂಬ ಮಗ. ಅವನನ್ನೂ ಮಗುವಾದುದರಿಂದ ಬನವಂತಾದೇವಿಯೇ ರಾಜ್ಯ ಸೂತ್ರ ಹಿಡಿದಳು. ಕರಿರಾಯ ಬೆಳೆದು ದೊಡ್ದವನಾಗಿ ಆಡಳಿತವಹಿಸಿಕೊಂಡ.

ಹಳೆಬೀಡಿನ ರಾಜ ಬಲ್ಲಾಳರಾಯ. ಇವನಿಗೆ ಮದುವೆಗೆ ಬಂದ ಮಗಳು. ಧರಣೀಮೋಹಿನಿ, ಬಲ್ಲಾಳರಾಯ ದೇಶವಿದೇಶದ ರಾಜಕುಮಾರರ ಭಾವಚಿತ್ರಗಳನ್ನು ತರಿಸಿ ಮಗಳಿಗೆ ತೋರಿಸಿದ. ಅವುಗಳಲ್ಲಿ ಧರಣಿಮೋಹಿನಿ ಧಾರಾಪುರ ಮಾರಭೂಪನ ಮಗ ಕರರಾಯನನ್ನುವರಿಸುವುದಾಗಿ ಆರಿಸಿದಳು. ಆದರೆ ಬಲ್ಲಾಳರಾಯನಿಗೂ ಮಾರಭೂಪಾಲನಿಗೂ ಬದ್ದವೈರಿ. ಆದರೂ ಮಗಳ ಭವಿಷ್ಯದ ಹಿತದೃಷ್ಟಿಯಿಂದ ಬಲ್ಲಾಳರಾಯ ಕರಿರಾಯನನ್ನು ಸ್ವಯಂವರಕ್ಕೆ ಆಹ್ವಾನಿಸಲು ತನ್ನ ಮಂತ್ರಿಯನ್ನೆ ಧಾರಪುರಕ್ಕೆ ಕಳುಹಿಸಿದ.

ಬಲ್ಲಾಳರಾಯನ ಆಹ್ವಾನವನ್ನು ಕರಿರಾಯ ಹಿಂದುಮುಂದು ನೋಡದೆ ಒಪ್ಪಿದ. ಆದರೆ ತಾಯಿಯ ಅಪ್ಪಣೆಗಾಗಿ ಹೋದಾಗ ಆಕೆ ಶತ್ರುವಿನ ರಾಜಧಾನಿಗೆ ಹೋಗುವುದು ಅಪಾಯವೆಂದು ಮಗನಿಗೆ ಪರಿಪರಿಯಾಗಿ ಹೇಳಿದಳು. ಇದರಿಂದ ನಿನ್ನ ಜೀವಕ್ಕೆ ಅಪಾಯವೆಂದಳು. ರಾತ್ರಿ ತಾನು ಕೆಟ್ಟ ಕನಸು ಕಂಡುದಾಗಿ ಹೇಳಿದಳು. ಆದರೆ ಕರಿರಾಯ ತಾನು ಅಹ್ವಾನವನ್ನು ಒಪ್ಪಿರುವುದಾಗಿಯೂ ಈಗ ಹಿಂತೆಗೆಯುವುದು ಕ್ಷತ್ರೀಯ ಕುಲಕ್ಕೆ ಅವಮಾನವೆಂದೂ ವಾದಿಸಿದ. ಬನವಂತಾದೇವಿ ವಿಧಿಯಿಲ್ಲದೆ ಅನುಮತಿ ನೀಡಬೇಕಾಯಿತು. ಕರಿರಾಯ ಮಿತಪರಿವಾರದೊಂದಿಗೆ ಬಲ್ಲಾಳರಾಯನ ರಾಜಧಾನಿ ಹಳೇಬೀಡಿಗೆ ಹೊರಟ.

ಒಂದು ಪಯಣದ ನಂತರ ಕರಿರಾಯ ಲೋಕಪಾವನಿ, ಕಾವೇರಿ ನದಿಗಳ ಸಂಗಮ ಗೌತಮ ಕ್ಷೇತ್ರದಲ್ಲಿ ಬೀಡುಬಿಟ್ಟ. ಮಾರನೆಯ ದಿನ ವನದಲ್ಲಿ ಅಡ್ಡಾಡುವಾಗ ಅವನು ಸುಂದರ ತರುಣಿಯೋರ್ವಳನ್ನು ಕಂಡ. ವಿಚಾರಿಸಲಾಗಿ ಆಕೆ ಸಮೀಪದ ತೊಂಡನೂರಿನ ರಾಜಕುಮಾರಿಯೆಂದು ಸಖಿಯರೊಂದಿಗೆ ವನವಿಹಾರಕ್ಕೆ ಬಂದಿರುವುದಾಗಿಯೂ ತಿಳಿಯಿತು. ಪರಿಚಯ ಪ್ರಣಯಕ್ಕೆ ತಿರುಗಿತು. ಕರಿರಾಯ ಗೌತಮ ಕ್ಷೇತ್ರದ ತನ್ನ ಬಿಡಾರವನ್ನು ಮುಂದುವರೆಸಿ ನಾಳೆಯ ವಿಶ್ರಾಂತಿಯನಂತರ ಹಳೇಬೀಡಿಗೆ ಬರುವುದಾಗಿಯೂ ಆ ವಿಚಾರವನ್ನು ಬಲ್ಲಾಳ ರಾಜನಿಗೆ ತಿಳಿಸಬೇಕೆಂದು ಬಲ್ಲಾಳರಾಯನ ಮಂತ್ರಿಯನ್ನು ಕಳಿಸಿಕೊಟ್ಟನು.

ತೊಂಡನೂರಿನ ರಾಜ ಭೇತಾಳ. ಅವನ ಪತ್ನಿ ಉದ್ದಂಡಿ. ಈ ದಂಪತಿಗಳಿಗೆ ಪುಂಡರೀಕಾಕ್ಷಿ ಒಬ್ಬಳೇ ಮಗಳು. ಬೇತಾಳ ರಾಜನು ಯುದ್ಧವೊಂದರಲ್ಲಿ ಹತನಾದ. ಆದುದರಿಂದ ಆಡಳಿತವನ್ನು ತನ್ನ ತಮ್ಮ ಬೊಮ್ಮರಕ್ಕಸನ ಸಹಾಯದಿಂದ ಉದ್ದಂಡಿಯೇ ನಡೆಸುತ್ತಿದ್ದಳು. ಪುಂಡರೀಕಾಕ್ಷಿಯನ್ನು ತಮ್ಮನಿಗೇ ಕೊಟ್ಟು ಮದುವೆ ಮಾಡಬೇಕೆಂಬುದು ಉದ್ದಂಡಿಯ ಆಶೆ. ಆದರೆ ಪುಂಡರೀಕಾಕ್ಷಿ ಕರಿರಾಯನಲ್ಲಿ ಅನುರಕ್ತಳಾಗಿರುವ ವಿಷಯವನ್ನು ತನ್ನ ಗೂಢಚಾರರಾದ ಉರಿಶಿಂಗ, ಮರಿಶಿಂಗರಿಂದ ತಿಳಿದ ಉದ್ದಂಡಿ ಕಾದು ಕೆಂಡವಾದಳು. ಮಗಳನ್ನು ಕರೆಸಿ ಹೆದರಿಸಿ ನೋಡಿದಳು. ಪ್ರಯೋಜನವಿಲ್ಲವೆಂದು ಕಂಡಿತು. ಕರಿರಾಯನ ಶಕ್ತಿ ಸಾಮರ್ಥ್ಯಗಳನ್ನು ಅರಿತಳು. ದುಡುಕುವುದು ತರವಲ್ಲವೆನಿಸಿತು. ಕಡೆಗೆ ಉಪಾಯದಿಂದ ಬಂದ ಅಪಾಯವನ್ನು ಪರಿಹರಿಸಿಕೊಳ್ಳುವ ತೀರ್ಮಾನಕ್ಕೆ ಬಂದಳು.

ಮಗಳನ್ನು ಪ್ರೀತಿಯಿಂದ ಕ್ಷಮಿಸಿ ಆದುದಾಯಿತು ನೀನು ಶೂರರನ್ನೇ ವರಿಸಿದ್ದೀಯೆ, ಅರಮನೆಗೆ ಕರೆದು ತಾ ಎಂದಳು. ಪುಂಡರೀಕಾಕ್ಷಿಗೆ ತಾಯಿಯ ಬಗ್ಗೆ ಅನುಮಾನವಿದ್ದರೂ ಬೇರೆ ದಾರಿ ಕಾಣದೆ ಕರಿರಾಯನನ್ನು ತೊಂಡನೂರಿಗೆ ಕರೆದು ತಂದಳು. ಅವನಿಗಾಗಿ ಕೊಠಡಿಯೊಂದು ಶೃಂಗಾರಗೊಂಡಿತ್ತು. ರಾತ್ರಿ ಮಲಗಿದ್ದಾಗ ಕರಿರಾಯನನ್ನು ಮುಗಿಸುವುದು ಉದ್ದಂಡಿಯ ಹಂಚಿಕೆಯಾಗಿತ್ತು. ತಾಯಿಯ ಬಗ್ಗೆ ಅನುಮಾನವಿದ್ದ ಪುಂಡರೀಕಾಕ್ಷಿ ಕಡೆಗಳಿಗೆಯಲ್ಲಿ ಕರಿರಾಯ ಮಲಗಬೇಕಾದ ಕಡೆ ತನ್ನ ಸೋದರಮಾವ ಬೊಮ್ಮರಕ್ಕಸನನ್ನು ಕರಿರಾಯನೆಂದುಕೊಂಡು ಕೊಲ್ಲಿಸಿದಳು. ಇದನ್ನೆಲ್ಲಾ ಗಮನಿಸುತ್ತಿದ್ದ ಪುಂಡರೀಕಾಕ್ಷಿ ಅಪಾಯವನ್ನರಿತು ಕರಿರಾಯನನ್ನು ತನ್ನ ಶಿಬಿರಕ್ಕೆ ಹಿಂತಿರುಗುವಂತೆ ಮನವೊಲಿಸಿದಳು.

ತೊಂಡನೂರಿನಿಂದ ಹೊರಟ ಕರಿರಾಯ ದಾರಿತಪ್ಪಿ ಮಲ್ಲಿಗದೇವನ ಹಳ್ಳಿಯತ್ತ ಹೊರಟ. ಕರಿರಾಯ ತಪ್ಪಿಸಿಕೊಂಡುದು, ತಮ್ಮ ತನ್ನ ಸಂಚಿಗೆ ಬಲಿಯಾದುದು ಉದ್ದಂಡಿಯನ್ನು ಕೋಪೋದ್ರೇಕಳನ್ನಾಗಿಸಿತು. ಆಕೆ ಕರಿರಾಯನನ್ನು ಅಟ್ಟಿಸಿ ಹಿಂಬಾಲಿಸಿದಳು. ಕರಿರಾಯ ಮಲ್ಲಿಗದೇವನಹಳ್ಳಿಗೆ ತಲುಪುವಷ್ಟರಲ್ಲಿ ಉದ್ದಂಡಿಯೂ ಅಲ್ಲಿಗೆ ಬಂದಳು. ಆ ಊರಿನ ಗೌಡರುಗಳ ಸಭೆ ನಡೆಯುತ್ತಿತ್ತು. ಉದ್ದಂಡಿ ವೇಷ ಮರೆಯಿಸಿ ಕರಿರಾಯ ತನ್ನ ಗಂಡನೆಂದೂ ಇನ್ನೊಬ್ಬಳ ಪ್ರೇಮ ಪಾಶದಲ್ಲಿ ಸಿಕ್ಕಿ ತನ್ನನ್ನು ಮಗುವನ್ನು ತೊರೆದು ಹೋಗುತ್ತಿದ್ದಾನೆಂದೂ ಗೌಡ ಸಭೆಗೆ ಅರಿಕೆ ಮಾಡಿಕೊಂಡಳು. ಸರಿರಾತ್ರಿಯಾದುದರಿಂದ ಅವರಿಬ್ಬರೂ ರಾಮೇಶ್ವರ ದೇವಾಲಯದಲ್ಲಿರಬೇಕೆಂದೂ ಬೆಳಗ್ಗೆ ಅವರ ಅಹವಾಲನ್ನು ಪರಿಶೀಲಿಸುವುದಾಗಿಯೂ ಹೇಳಿದರು. ಕರಿರಾಯ ಆಕೆ ತನ್ನ ಪತ್ನಿಯಲ್ಲವೆಂದೂ ತನ್ನನ್ನು ಕೊಲ್ಲಲು ಸಂಚು ಹೂಡಿದ್ದಾಳೆಂದೂ ವಾದಿಸುತ್ತಾನೆ. ಆದರೆ ಗೌಡರು ಅವನಿಗೇನಾದರೂ ಅಪಾಯವಾದರೆ ತಮ್ಮ ಪ್ರಾಣ ಕೊಡುವುದಾಗಿ ಅವನನ್ನು ಒಪ್ಪಿಸುತ್ತಾರೆ.

ಸರಿರಾತ್ರಿಯಲ್ಲಿ ಕರಿರಾಯ ನಿದ್ರೆಯಲ್ಲಿದ್ದಾಗ ಉದ್ದಂಡಿ ಅವನನ್ನು ಕೊಂದು ಅಲ್ಲಿಂದ ಹೊರಟು ಹೋಗುತ್ತಾಳೆ. ಬೆಳಗ್ಗೆ ನೋಡಿದಾಗ ಕರಿರಾಯ ಸತ್ತುಬಿದ್ದಿರುತ್ತಾನೆ. ತಮ್ಮ ವಚನದಂತೆ ಗೌಡರು ಅಗ್ನಿಪ್ರವೇಶ ಮಾಡಲು ನಿರ್ಧರಿಸುತ್ತಾರೆ. ಬನವಂತಾದೇವಿ ಮಗನನ್ನರಸಿ ಅಲ್ಲಿಗೆ ಬರುತ್ತಾಳೆ. ಪುಂಡರೀಕಾಕ್ಷಿ ಪ್ರಿಯನನ್ನರಸಿ ಅಲ್ಲಿಗೆ ಬರುತ್ತಾಳೆ. ಕರಿರಾಯನನ್ನರಸಿ ಬಲ್ಲಾಳರಾಯನು ಅಲ್ಲಿಗೆ ಬರುತ್ತಾನೆ. ಸೇನೆಯನ್ನು ಕಳಿಸಿ ಮೂಗೂರಿನ ಅಕ್ಕನ ಆಶ್ರಯದಲ್ಲಿದ್ದ ಉದ್ದಂಡಿಯನ್ನು ಹಿಡಿತರಿಸಿ ಆಕೆಯನ್ನು ಜೀವಸಹಿತ ಸುಡಿಸುತ್ತಾನೆ. ಬನವಂತೆ, ಪುಂಡರೀಕಾಕ್ಷಿ, ಧರಣಿಮೋಹಿನಿ ಮತ್ತು ಗೌಡರುಗಳು ಅಗ್ನಿಪ್ರವೇಶ ಮಾಡಲು ತಯಾರಾಗುತ್ತಾರೆ. ಆಗ ಶಿವ ಪ್ರತ್ಯಕ್ಷನಾಗಿ ಎಲ್ಲರನ್ನು ಬದುಕಿಸುತ್ತಾನೆ. ಕರಿರಾಯ ಪುಂಡರೀಕಾಕ್ಷಿ, ಧರಣಿಮೋಹಿನಿಯರನ್ನು ವರಿಸುತ್ತಾನೆ.

ಈ ಕಥೆಯು ಗಂಗವಂಶದ ಅವನತಿಯ ಕಾಲದಲ್ಲಿ ನಡೆದ ಒಂದು ದುರಂತ ಪ್ರಣಯ ಪ್ರಸಂಗ ಎಂಬುದಕ್ಕೆ ಅನೇಕ ಆಧಾರಗಳಿವೆ.[3] ರಕ್ಕಸಗಂಗನ ನಂತರ ಅವನ ಮಗ ಅರುಮುಳೀದೇವ ಕೆಲವು ಕಾಲ ಆಳಿದ. ಅವನಿಗೆ ಸಂತಾನವಿಲ್ಲದ್ದರಿಂದ ರಾಜವಿಧ್ಯಾದರ ಎಂಬುವವನನ್ನು ದತ್ತು ತೆಗೆದುಕೊಂಡ. ಆದರೆ ಈ ಹೊತ್ತಿಗಾಗಲೇ ಸ್ವತಂತ್ರರಂತೆ ವರ್ತಿಸುತ್ತಿದ್ದ ಗಂಗ ಮಾಂಡಲೀಕರು ಸಾಮಂತರು ಇವನನ್ನು ಚಕ್ರವರ್ತಿಯೆಂದು ಪರಿಗಣಿಸಲಿಲ್ಲ. ಆದುದರಿಂದ ಗಂಗವಾಡಿ ತೊಂಭತ್ತಾರು ಸಾವಿರ ಒಡೆದು ಅನೇಕ ಚೂರುಗಳಾಗಿದ್ದುವು. ತೊಂಡನೂರು ಹಳೆಬೀಡು, ಮೂಗೂರು, ಮನ್ನೆ, ಕೊಳಾಲ ಇಲ್ಲೆಲ್ಲ ಗಂಗರಾಜಕುಮಾರಿಯರನ್ನು ಮದುವೆಯಾದ ಮಂಡಲಾಧಿಪರಿದ್ದರು. ಅವರಲ್ಲಿ ತೊಣ್ಣೂರಿನ ಉದ್ದಂಡಿರಕ್ಕಸಿಯ ಗಂಡನೂ ಒಬ್ಬ. ಈತ ಯುದ್ಧವೊಂದರಲ್ಲಿ ಮಡಿದಿದ್ದನಾಗಿ ಉದ್ದಂಡಿರಕ್ಕಸಿಯೇ ಅಧಿಕಾರ ಸೂತ್ರ ಹಿಡಿದಿದ್ದಳು. ಅರುಮುಳೀದೇವನ ನಂತರ ಬೊಮ್ಮರಕ್ಕಸನೆಂಬುವನಿಗೆ ತಲಕಾಡು ಅಧಿಕಾರ ಕೊಡಿಸಿ ತನ್ನ ಮಗಳನ್ನು ಕೊಡಬೇಕೆಂಬುದು ಉದ್ದಂಡಿರಕ್ಕಸಿಯ ಅಪೇಕ್ಷೆಯಾಗಿತ್ತು. ಆದರೆ ಅರುಮುಳೀದೇವ ರಾಜ ವಿಧ್ಯಾದರನನ್ನು ಆರಿಸಿಕೊಂಡದ್ದು ಈಕೆಗಿ ಹಿಡಿಸಲಿಲ್ಲ. ಚಿನಕುರುಳಿಯ ಶಾಸನವೊಂದು ಈ ಬೊಮ್ಮರಕ್ಕಸನನ್ನು ಉಲ್ಲೇಖಿಸುತ್ತದೆ. ಈ ಎಲ್ಲರೂ ಸಂಬಂಧಿಕರೇ ಆದುದರಿಂದ ಮತ್ತು ತಲಕಾಡಿನಲ್ಲಿ ಸೇರುತ್ತಿದ್ದುದರಿಂದ ರಾಜ ವಿಧ್ಯಾಧರನಿಗೂ ಉದ್ದಂಡಿರಕ್ಕಸಿಯ ಮಗಳಿಗೂ ಪ್ರೇಮವಾಗಿತ್ತು. ಆದರೆ ಉದ್ದಂಡಿರಕ್ಕಸಿ ತನ್ನ ಮಗಳನ್ನು ರಾಜ ವಿಧ್ಯಾದರನಿಗೆ ಕೊಡಲು ಒಪ್ಪಲಿಲ್ಲ. ಕಡೆಗೆ ಆ ಹೆಣ್ಣು ಮಗಳನ್ನು ತೊಂಡನೂರಿನಿಂದ ಅಪಹರಿಸಲಾಯಿತು. ಈ ಕಾರಣದಿಂದಾಗಿ ಮಲ್ಲಿಗದೇವಹಳ್ಳಿಯ ಹತ್ತಿರ ಯುದ್ಧ ನಡೆದು ಗಂಗ ವಂಶದವರ ಮಧ್ಯೆ ರಕ್ತದ ಕೋಡಿ ಹರಿಯಿತು. ಈ ಪ್ರಸಂಗವನ್ನು ಚರಿತ್ರಕಾರರು “ಗಂಗ ರಾಜಕುಮಾರಿಯೊಬ್ಬಳ ಗರ್ವಾಂಧತೆಯಿಂದ ಅಲ್ಲಿ ಯಾದವೀ ಕಲಹ ಪ್ರಾರಂಭವಾಯಿತು. ಘೋರ ಯುದ್ಧದಲ್ಲಿ ಪರಿಣಮಿಸಿತು” ಎಂದು ಉಲ್ಲೇಖಿಸಿದ್ದಾರೆ.

ಈ ಕಥೆಯಲ್ಲಿ ಬರುವ ಊರುಗಳು ಮತ್ತು ಸ್ಥಳಗಳೆಲ್ಲವೂ ಮಂಡ್ಯ ಜಿಲ್ಲೆಯ ಪಾಂಡವಪುತ ತಾಲ್ಲೂಕಿನಲ್ಲಿವೆ. ಧಾರಾಪುರ – ತಲಕಾಡು ಗೌತಮಕ್ಷೇತ್ರ ಲೋಕ ಪಾವನಿ ಮತ್ತು ಕಾವೇರಿಯ ಸಂಗಮ ಕರಿಘಟ್ಟದ ಹತ್ತಿರ. ತೊಣ್ಣೂರು ಮೇಲು ಕೋಟೆಯ ಹತ್ತಿರ. ಮಲ್ಲಿಗದೇವನ ಹಳ್ಳಿ ತೊಣ್ಣೂರಿನಿಂದ ಪೂರ್ವಕ್ಕೆ ಆರೇಳು ಮೈಲಿ. ಹಳೆಯಬೀಡು ಅಲ್ಲಿಯೇ ನಾಲ್ಕು ಮೈಲಿಯಲ್ಲಿರುವ ಪ್ರಾಚೀನವಾದ ಊರು. ಇದರಲ್ಲಿ ಮೂಗುರು ಮತ್ತು ತಲಕಾಡುಗಳು ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲ್ಲೂಕಿನಲ್ಲಿವೆ. ತೊಣ್ಣೂರಿನಲ್ಲಿ ಉದ್ದಂಡಿಯ ಅರಮನೆ ಇದ್ದ ಸ್ಥಳ ತೋರಿಸುತ್ತಾರೆ. ಮಲ್ಲಿಗದೇವನ ಹಳ್ಳಿಯಲ್ಲಿ ಉದ್ದಂಡಮ್ಮನ ದೇವಾಲಯ, ಬನವಂತಾದೇವಿ ದೇವಾಯಲ, ಮಾತು ಕೊಟ್ಟಂತೆಯೇ ನಡೆದುಕೊಂಡ ಏಳು ಮಂದಿ ಗೌಡರುಗಳ ವೀರಗಲ್ಲುಗಳಿವೆ. ಹಳೇಬೀಡಿನಲ್ಲಿ ಕರಿರಾಯ ದೇವಾಲಯವಿದೆ. ಮೂಗೂರಿನಲ್ಲಿ ಉದ್ದಂಡಿ ಅಥವಾ ರಕ್ಕಸಮ್ಮ ಅವಿತಿದ್ದ ಜಾಗ ಮತ್ತು ದೇವಾಲಯಗಳಿವೆ. ಈ ಎಲ್ಲವು ಯುದ್ಧ ನಡೆಸ ಸ್ಥಳಗಳೆಂದು ಗುರುತಿಸಲು ಅಲ್ಲೆಲ್ಲಾ ಈಗಲೂ ಸಾವಿರಾರು ವೀರಗಲ್ಲುಗಳಿವೆ, ಶಾಸನಗಳಿವೆ.

ಜನಮದಲ್ಲಿದ್ದು ಬಾಯಿಂದ ಬಾಯಿಗೆ ಹರಿದ ಈ ಚಾರಿತ್ರಿಕ ಘಟನೆ ಕಾಲನುಕಾಲಕ್ಕೆ ಕಥಾರೂಪ ತಾಳಿದೆ. ಸುಮಾರು ಹದಿನಾಲ್ಕನೆಯ ಶತಮಾನದಲ್ಲಿದ್ದ ಈ ಪ್ರದೇಶದ ಕೆಂಪಣ್ಣಗೌಡ ಎಂಬ ಕವಿ ಈ ಕಥೆಯನ್ನಾಧರಿಸಿ ‘ಕರಿರಾಯ ಚರಿತೆ’ ಎಂಬ ಒಂದು ಯಕ್ಷಗಾನ ಕಾವ್ಯವನ್ನು ರಚಿಸಿದ. ಈತ ಯಕ್ಷಗಾನ ನಳ ಚರಿತ್ರೆಯನ್ನೂ ರಚಿಸಿದ್ದಾನೆ. ಮುಂದೆ ಈ ಕಾವ್ಯಗಳ ನಾಟಕೀಯತೆಗೆ ಮಾರುಹೋದ ಅನೇಕರು ಇವುಗಳನ್ನು ಯಕ್ಷಗಾನ ಪ್ರಸಂಗಗಳಾಗಿ ಪರಿವರ್ತಿಸಿ ರಂಗದ ಮೇಲೆ ತಂದರು. ಕರಿಭಂಟನ ಕಾಳಗ ಕನ್ನಡನಾಡಿನ ಉದ್ದಗಲಕ್ಕೂ ಪ್ರಸಿದ್ಧವಾಗಿದೆ. ಗಂಗ ಮನೆತನದ ‘ರಕ್ಕಸ’, ‘ರಕ್ಕಸಿ’ ಎಂಬ ಹೆಸರುಗಳು ಈ ಭಾಗದಲ್ಲಿ ದೊರೆಯುತ್ತವೆ. ಗಂಗ ವಂಶದ ಅವನತಿಯ ಕಾಲದಲ್ಲಿ ನಡೆದ ದುರಂತ ಪ್ರಣಯ ಪ್ರಸಂಗ ಕಾಲ ಕಳೆದಂತೆಲ್ಲಾ ಇತಿಹಾಸದಿಂದ ಜಾನಪದದತ್ತ ಹರಿದಿದೆ.

ಒಕ್ಕಲಿಗರ ಮೂಲ ಅಥವಾ ಒಕ್ಕಲು ಮುದ್ದೆಗೌಡನ ಕಥೆ ಕಳಚರ್ಯ ಬಿಜ್ಜಳನ ಕಾಲದ ಧಾರ್ಮಿಕ ಘರ್ಷಣೆಯ ಹಿನ್ನೆಲೆಯದಿರಬಹುದು. ಅದರ ಕಥೆ ಹೀಗಿದೆ. ಕಲ್ಯಾಣಪಟ್ಟಣದಲ್ಲಿ ಒಕ್ಕಲು ಮುದ್ದೇಗೌಡ ಕುಲ ಮುಖಂಡ. ಅವನ ಹೊಲಗದ್ದೆ, ಅವನ ದನ ಕರುಗಳಿಗೆ ಲೆಕ್ಕವಿಲ್ಲ. ಹಸಿವು ಅಂದವರಿಗೆ ಅನ್ನ ನೀಡುವ ಧಣಿ ಅವನು. ಮುದ್ದೇಗೌಡನಿಗೆ ಏಳು ಜನ ಗಂಡು ಮಕ್ಕಳು, ಒಬ್ಬಳೇ ಮಗಳು. ಅವನ ಅಷ್ಟೈಶ್ವರಿಯನ್ನು ರಾಜ ಬಿಜ್ಜಳನು ಗೌರವಿಸಿ ಕುಲ ಮುಖಂಡನನ್ನಾಗಿ ನೇಮಿಸಿದ.

ಒಂದು ದಿನ ಪ್ರಧಾನಿಯ ಆಪ್ತ ಸೇವಕ ಬಂದು ಮುದ್ದೇಗೌಡನ ಮಗಳನ್ನು ಹಜಾಮರ ಹುಡುಗನಿಗೆ ಕೊಟ್ಟು ಮದುವೆ ಮಾಡುವಂತೆ ಪ್ರಧಾನಿಯವರ ಅಪ್ಪಣೆಯಾಗಿದೆ ಎಂದ. ಗೌಡನ ಮಕ್ಕಳು ಪ್ರಧಾನಿಯ ವಿರುದ್ಧ ಬಂಡೇಳಬೇಕೆಂದರು. ಮುದ್ದೇಗೌಡ ರಾಜನಲ್ಲಿಗೆ ದೂರು ಹೇಳಲು ಹೋದ. ಆದರೆ ಅವನ ಕೊಲೆಯಾಗಿ ಅಧಿಕಾರವೆಲ್ಲ ಪ್ರಧಾನಿಯ ಕೈಯಲ್ಲಿತ್ತು. ಮುದ್ದೇಗೌಡ ಹಿಂತಿರುಗಿ ಬಂದು ಮಕ್ಕಳು ಮತ್ತು ಆಪ್ತರೊಂದಿಗೆ ಸಮಾಲೋಚಿಸಿದ. ಕುಲದ ಹಿರಿಯರೆಲ್ಲರೂ ಉಪಾಯದಿಂದ ಈ ಕೆಲಸವನ್ನು ಸಾಧಿಸುವುದು ಒಳ್ಳೆಯದು, ಪ್ರಧಾನಿಗೆ ಅಧಿಕಾರವಿದೆ. ಸೇನಿಯಿದೆ ಎಂದು ಸೂಚಿಸಿದರು. ಕಡೆಗೆ ಮುದ್ದೇಗೌಡ ತನ್ನ ಸಂಸಾರದೊಂದಿಗೆ ದೂರ ದೇಶಾಂತರ ಹೋಗಿ ಬಿಡುವುದೆಂದು ತೀರ್ಮಾನಿಸಿ, ತನ್ನ ಮಕ್ಕಳನ್ನು ಇದಕ್ಕೆ ಒಪ್ಪಿಸಿದ.

ತಮ್ಮ ಕುಲ ಮತ್ತು ಬಾಂದವರು ಅಪಾರ ಸಂಖ್ಯೆಯಲ್ಲಿರುವುದರಿಂದ ಮದುವೆಯ ಸಿದ್ಧತೆಗಳಿಗೆ ಸಾಕಷ್ಟು ಕಾಲಾವಕಾಶ ಬೇಕೆಂದೂ ಪ್ರಧಾನಿಯ ಆಜ್ಞೆಗೆ ತನ್ನ ಒಪ್ಪಿಗೆ ಇದೆ ಎಂದೂ ಮುದ್ದೇಗೌಡ ತಿಳಿಸಿದ. ಏರ್ಪಾಡುಗಳನ್ನು ಮಾಡುವವನಂತೆ ನಟಿಸುತ್ತಾ ಕಲ್ಯಾಣದಿಂದ ಹೊರಡುವ ಏರ್ಪಾಡು ಮಾಡಿಕೊಂಡ. ಕಡೆಗೆ ಒಂದು ಅಮವಾಸ್ಯೆಯ ರಾತ್ರಿ ಮುದ್ದೇಗೌಡ ತನ್ನ ಸಂಸಾರದೊಂದಿಗೆ ದಕ್ಷಿಣ ದೇಶದತ್ತ ಹೊರಟು ಬಿಟ್ಟ. ಮುದ್ದೆಗೌಡ ಕಲ್ಯಾಣವನ್ನು ಬಿಟ್ಟ ವಿಷ್ಯ ಪ್ರಧಾನಿಗೆ ತಿಳಿಯಿತು. ಅವನು ಕೂಡಲೇ ಒಕ್ಕಲು ಮುದ್ದೇಗೌಡ ಮತ್ತು ಅವನ ಮಕ್ಕಳನ್ನು ಹಿಡಿದು ತರುವಂತೆ ಸೇನೆಯನ್ನು ಕಳುಹಿಸಿದ. ಮುದ್ದೇಗೌಡನ ಸಂಸಾರ ತುಂಗಭದ್ರಾ ನದಿಯ ತೀರಕ್ಕೆ ಬಂದಿತು. ನದಿ ಪ್ರವಾಹದಿಂದ ತುಂತಿ ಹರಿಯುತ್ತಿತ್ತು. ಹಿಂದಿನಿಂದ ಪ್ರಧಾನಿಯ ಸೇನೆ ಬರುತ್ತಿರುವ ಸುದ್ದಿ ಗೌಡನಿಗೆ ತಲುಪಿತು. ಅವನು ದಾರಿಕಾಣದಾದ. ಆಗ ಮುದ್ದೇಗೌಡನ ಮಗಳು ಪೂಜಾ ಸಾಮಗ್ರಿಯೊಂದಿಗೆ ನದಿಗಿಳಿದು ಗಂಗೆಯನ್ನು ಪೂಜಿಸಿ ಪ್ರವಾಹಕ್ಕಿಳಿದಳು. ತುಂಬಿ ಹರಿಯುತ್ತಿದ್ದ ನದಿ ಎರಡು ಪಾಲಾಗಿ ಬಿಟ್ಟಿತು. ಮುದ್ದೇಗೌಡನ ಪರಿವಾರ ಈಚೆ ದಡ ಸೇರಿತು. ಆಚೆ ಪ್ರಧಾನಿಯ ದಂಡು ಬಂದಿತು. ನದಿ ಮತ್ತೇ ತುಂಬಿ ಹರಿಯಲಾರಂಭಿಸಿತು.

 

[1] ಕರಿಭಂಟನ ಕಾಳಗ ಚಾರಿತ್ರಿಕ ಘಟನೆಯೆ ಹ. ಕ. ರಾಜೇಗೌಡ ಪ್ರಬುದ್ಧ ಕರ್ನಾಟಕ ಸಂಪುಟ ೫೮ ಸಂಚಿಕೆ ೪, ೧೯೭೭

[2] ನೋಡಿ ಕರಿಭಂಟನ ಕಾಳಗ ಚಾರಿತ್ರಿಕ ಘಟನೆಯೆ ?

[3] ನೋಡಿ ಕರಿಭಂಟನ ಕಾಳಗ ಚಾರಿತ್ರಿಕ ಘಟನೆಯೆ ?