ಭಾರತದ ಯಾವುದೇ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಅಧ್ಯಯನಕ್ಕೆ ತೊಡುಗುವವರಿಗೆ ಅನೇಕ ರೀತಿಯ ಅಡ್ಡಿ ಆತಂಕಗಳು, ಎಡರು ತೊಡರುಗಳು ಅಡ್ಡವಾಗುತ್ತವೆ. ಈ ತೊಂದರೆಗೆ ಕಾರಣ ಭಾರತದಲ್ಲಿ ಕಾಲ ಕಾಲಕ್ಕೆ ಉಂಟಾದ ಧಾರ್ಮಿಕ ಮತ್ತು ಸಾಮಾಜಿಕ ವೈಪರೀತ್ಯಗಳು. ಹೀಗಾಗಿ ನಮ್ಮ ರಾಷ್ಟ್ರದ ನಮ್ಮ ದೇಶದ ಯಾವದೆ ವಿಚಾರದಲ್ಲಿ ಅದರಲ್ಲೂ ಕಲೆ, ಭಾಷೆ, ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಒಂದು ಖಚಿತವಾದ ನಿಲುವಿಗೆ ತಲುಪುವುದು ಕಷ್ಟ ಸಾಧ್ಯವಾಗಿ ಪರಿಣಮಿಸಿ ಬಿಡುತ್ತದೆ. ಈ ಬಗೆಗೆ ನಡೆದಿರುವ ಅಧ್ಯಯನ ಬಹುತೇಕ ಏಕಮುಖವಾದುದು ಮತ್ತು ಅದರಿಂದಲೇ ಏಕದೃಷ್ಟಿಯಳ್ಳದ್ದೂ ಆಗಿದೆ. ಆರಂಭದಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರು ತಮ್ಮ ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿಯೇ ಯೋಚಿಸಿ ಕೆಲಸ ಮಾಡಿದವರು ತಮ್ಮ ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿಯೇ ಯೋಚಿಸಿ ತಮ್ಮದನ್ನು ಉತ್ತಮವಾದುದೆಂದು ಉತ್ಪ್ರೇಕ್ಷಿಸಿ ಹೇಳುವ ಹೇಳಿರುವ ಉದಾಹರಣೆಗಳೆ ಹೆಚ್ಚು. ಅತ್ಯಂತ ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಉದ್ದಕ್ಕೂ ಈ ದೇಶದ ಮೂಲಭೂತವಾದ ಧರ್ಮ ಮತ್ತು ಸಾಮಾಜಿಕ ನೆಲೆಗಳ ಮೇಲೆ ಹೊರಗಿನಿಂದಬಂದ ಶಕ್ತಿಗಳೆ ಮೇಲುಗೈಯಾಗಿ ತಮ್ಮ ತಮ್ಮ ಮೇಲ್ಮೆಯನ್ನು ಮೆರೆಯಲು ಧಾಳಿನಡೆಸಿರುವುದು ಮತ್ತು ಆ ಮೂಲಕ ಈ ದೇಶದ ಪ್ರಾಚೀನ ಸಂಸ್ಕೃತಿಯ ಮೇಲೆ ತಮ್ಮ ಅಧಿಕಾರದ ಮುದ್ರೆಯೊತ್ತಿರುವುದು ಕಂಡು ಬರುತ್ತದೆ. ಕಾಲಾನು ಕ್ರಮದಲ್ಲಿ ಈ ದೇಶಕ್ಕೆ ಹೊರಗಿನಿಂದ ಬಂದವರು, ಬೇರೆ ಬೇರೆಯ ಕಾರಣ ಮತ್ತು ಉದ್ದೇಶಗಳಿಗಾಗಿ ತಲೆಯೆತ್ತಿದ ಹೊಸ ಹೊಸ ಧರ್ಮಗಳು ಮತ್ತು ಅವುಗಳ ಪ್ರಚಾರಕರು ಈ ಮೂಲಭೂತ ಸಂಸ್ಕೃತಿಯನ್ನು ಅವಹೇಳನ ಮಾಡಿರುವುದನ್ನು ಕಾಣಬಹುದು. ಈಹಿನ್ನೆಲೆಯಲ್ಲಿ ಭಾರತೀಯ ಅಥವಾ ಈ ರಾಷ್ಟ್ರದ ಯಾವುದೇ ಪ್ರಾದೇಶಿಕ ಸಂಸ್ಕೃತಿಯನ್ನು ಅಧ್ಯಯನ ಮಾಡುವಾಗ ಅಥವಾ ಈ ರಾಷ್ಟ್ರದ ಯಾವುದೇ ಪ್ರಾದೇಶಿಕ ಸಂಸ್ಕೃತಿಯನ್ನು ಅಧ್ಯಯನ ಮಾಡುವಾಗ ಮೇಲಿನ ಏಕಮುಖ ದಾರಿಯಲ್ಲಿ ನಡೆದು ಮತ್ತದೇ ತಪ್ಪು ಮಾಡುವ ಅಪಾಯವಿದೆ, ಅದುದರಿಂದ ಈ ಕ್ಷೇತ್ರಗಳ ಬಗ್ಗೆ ಅಧ್ಯಯನ ನಡೆಯನ ನಡೆಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಜಗತ್ತಿನ ಅತ್ಯಂತ ಪ್ರಾಚೀನವಾದ ಜನಾಂಗ ಮತ್ತು ಸಂಸ್ಕೃತಿಗಳ ಇತಿಹಾಸದ ಆರಂಭವನ್ನು ಕುರಿತಂತೆ ಅನೇಕ ಮುಖವಾದ ಅಭಿಪ್ರಾಯಗಳು, ತೀರ್ಮಾನಗಳು ದೊರೆಯುತ್ತವೆ. ಮಾನವನ ವಿಕಾಸದ ಹಾದಿಯ ಅನೇಕ ಮಜಲುಗಳು ಇಂದಿಗೂ ಕಾಲಗರ್ಭದಿಂದ ಹೊರಗೆ ಸಂಪೂರ್ಣವಾಗಿ ಬಂದಿಲ್ಲವೆಂಬುದು ಈ ದಿಸೆಯಲ್ಲಿ ಕೆಲಸ ಮಾಡಿದ ವಿದ್ವಾಂಸರ ಅಭಿಪ್ರಾಯ. ಆದರೆ ಕುತೂಹಲಿಗಳಾದ ವಿದ್ವಾಂಸರನೇಕರು ಸೋಲೊಪ್ಪದೆ ಈ ದಿಸೆಯಲ್ಲಿ ನಿರಂತರವಾಗಿ ಸಂಶೋಧನೆ ನಡೆಸುತ್ತಲೆ ಬಂದಿದ್ದರೆ. ಇದರಿಂದ ಆಶ್ಚರ್ಯಕರವಾದ ಫಲಿತಾಂಶಗಳು ಹೊರಬಿದ್ದಿವೆ. ನಾವು ಸರಿಯೆಂದು ನಂಬಿದ್ದ ಅನೇಕ ಹಿರಿಯ ತಲೆಮಾರಿನ ಸಂಶೋಧಕರ ತೀರ್ಮಾನಗಳು ತಪ್ಪಾಗಿರುವುದು ಕಂಡುಬಂದಿದೆ. ಜಗತ್ತಿನ ಯಾವ ಜಾಗದಲ್ಲಿ ಮೊಟ್ಟಮೊದಲು ನಾಗರಿಕತೆ ಆರಂಭವಾಯಿತು ಎಂದು ಒಂದು ಕಾಲಕ್ಕೆ ನಂಬಲಾಗಿತ್ತೊ ಆ ಸಂಗತಿಗಳು ಇಂದು ಬದಲಾಗಿವೆ. ಈ ಭೂಮಿಯ ಮೇಲೆಹುಟ್ಟಿಕೊಂಡ ಧರ್ಮ ಮತ್ತು ಸಂಸ್ಕೃತಿಗಳು ಬಗ್ಗೆಯೂ ಈ ರೀತಿಯ ಭಿನ್ನಾಭಿಪ್ರಾಯಗಳಿವೆ. ಭಾರತಕೂಡ ಅತ್ಯಂತ ಪ್ರಾಚೀನ ನಾಗರಿಕತೆಯನ್ನು ಹೊಂದಿದ್ದ ದೇಶ ಎಂಬುದನ್ನು ಸಂಶೋಧನಾಜಗತ್ತು ಈಗ ಒಪ್ಪಿದೆ. ಈ ಬಗ್ಗೆ ಬೆಕಾದಷ್ಟು ಆಧಾರಗಳು ದೊರೆಯುತ್ತವೆ. India’s Recorded civilisation is one of the longest in the course of world history and its mythology spans the whole of that time and more. for some piriods, indeed scince hindu scholarship traditinoaly has little intrest in history as such mytholagy and scared lore constitute the sole record and changes that may be noted in such traditinoal matirials are thus vital clues to our knowldege of social and political changes”[1]

ಮೇಲಿನ ಹೇಳಿಕೆಯ ಹಿನ್ನೆಲೆಯಲ್ಲಿ ಪರಿಶೀಲಿಸುವಾಗ ಭಾರತೀಯ ಜನಜೀವನದ ಅತ್ಯ೦ತ ಪ್ರಾಚೀನ ರೀತಿ ನೀತಿಗಳು, ಧರ್ಮ ಸಂಸ್ಕೃತಿ ಮತ್ತು ಕಲೆಗಳ ಬಗ್ಗೆ ಮರು ಪರಿಶೀಲನೆ, ಮರುಚಿಂತನೆ ಅತ್ಯಗತ್ಯ ಎನ್ನಿಸುತ್ತದೆ.

ನಮ್ಮ ದೇಶದ ಜನಸಂಖ್ಯೆಯ ಶೇಕಡ ತೊಂಭತ್ತೆಂಟು ಜನರು ಮೊನ್ನೆ ಮೊನ್ನೆಯವರೆಗೆ ಅನಕ್ಷರಸ್ಥರಾಗಿದ್ದವರು. ಆದುದರಿಂದ ಅವರ ಜೀವನ, ಧರ್ಮ ಸಂಸ್ಕೃತಿಗಳು ಅಕ್ಷರ ರೂಪ ಪಡೆಯುವಂತಿರಲಿಲ್ಲ. ಆದರೂ ಅವರು ತಮ್ಮ ಈ ಅಮೂಲ್ಯ ಪರಂಪರೆಯನ್ನು ಬಹುತೇಕ ಆಚರಣೆಯಲ್ಲಿ ಮತ್ತು ಕಂಠಸ್ಥವಾಗಿ ಉಳಿಸಿ ಬೆಳೆಸಿಕೊಂಡು ಬಂದಿರುವುದನ್ನು ಕಾನಬಹುದು. ಆದರೆ ಈ ಬಗೆಗೆ ಮೊದಲು ಕೆಲಸ ಮಾಡಿದವರು ರಾಜಾಸ್ಥಾನಗಳ ಅಮಲಿನಲ್ಲಿ ಈ ಬಹುಸಂಖ್ಯಾತ ಸಂಸ್ಕೃತಿಯನ್ನು ಅನಾಗರಿಕ ಎಂದು ತಪ್ಪಾಗಿ ತಿಳಿದವರು. ಇವರು ಈ ದೇಶದ ಮೂಲ ಜನಜೀವನ ಮತ್ತು ಸಂಸ್ಕೃತಿಯತ್ತ ತಿರುಗಿಯೂ ನೋಡಲಿಲ್ಲ, ಅವರೆಲ್ಲ ರಾಜಾಸ್ಥಾನ ಮತ್ತು ನಗರ ಜೀವನವೇ ನಮ್ಮ ನಿಜವಾದ ಸಂಸ್ಕೃತಿಯೆಂದು ಭ್ರಮಿಸಿದವರು. ಆದುದರಿಂದ ಅವರು ಈ ಒಟ್ಟು ಸಂಸ್ಕೃತಿಯತ್ತ ನೋಡದೆ ತಾವು ಕಂಡದ್ದೇ ನಿಜವೆಂದು ಬರೆದುಕೊಂಡು ಬಂದರು. ಹಾಗೆ ಅವರು ನಂಬಿದುದರಿಂದ ತಮ್ಮದೇ ಮೇಲೆಂದು ಪ್ರತಿಪಾದಿಸುತ್ತ ಪ್ರಧಾನವಾದುದನ್ನು ಮೂಲೆಗೊತ್ತುತ್ತಾ ಬಂದರು, ತಮಗೆ ಸರಿಯಾಗಿ ಕಾಣದಿದ್ದುದನ್ನು ತಮಗಿಷ್ಟಬಂದಂತೆ ತಿದ್ದಿಬರೆದು ಇದೆ ಸರಿ ಎಂದ ಉದಾಹರಣೆಗಳೂ ದೊರೆಯುತ್ತವೆ. ಈ ಅಕ್ಷರಸ್ಥರು ಬರೆದುದು ಜನರಿಗೆ ತಲುಪಲೇ ಇಲ್ಲವಾದ ಕಾರಣ ಅವರು ಇದಕ್ಕೆ ಪ್ರತಿಕ್ರಿಯಿಸಿ ಸಂಘರ್ಷಕ್ಕಿಳಿಯುವ ಪ್ರಮೇಯವೇ ಬರಲಿಲ್ಲ. ಹೀಗಾಗಿ ನಮ್ಮ ನಾಡಿನ ಧರ್ಮ ಸಂಸ್ಕೃತಿಗಳ ಬಗೆಗೆ ವಿವೇಚಿಸುವಾಗ ಈ ಜನಪದದ ಹಿನ್ನೆಲೆಯಲ್ಲಿಯೇ ಪರಿಶೀಲಿಸಬೇಕಾಗುತ್ತದೆ. ಅಷ್ಟೆ ಅಲ್ಲ ಆಗಿರುವ ದೋಷಗಳನ್ನು ಅಳಿಸಿ ಸೂಕ್ತ ರೀತಿಯಲ್ಲಿ ನಮ್ಮ ಸಾಂಸ್ಕೃತಿಕ ಚರಿತ್ರೆಯನ್ನು ಪುನರ್ ರಚಿಸಬೇಕಾಗುತ್ತದೆ. ಆಗ ಮಾತ್ರವೇ ಈ ದೇಶದ ನಿಜವಾದ ಸಂಸ್ಕೃತಿಯ, ದರ್ಮದ, ನಾಗರಿಕತೆಯ ಸಮಾಜದ ಮೂಲ ಮತ್ತು ಬೆಳವಣಿಗೆಯ ಬಗೆಗಿನ ಸ್ಪಷ್ಟ ಚಿತ್ರ ದೊರೆಯುಬಹುದು.

ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಆರ್ಯರು ಭಾರತಕ್ಕೆ ವಲಸೆಬಂದನಂತರದ ಕಾಲವನ್ನು ಮಿತಿಯಾಗಿಟ್ಟುಕೊಂಡೇ ಈ ಬಗೆಗಿನ ಅಧ್ಯಯನ ನಡೆದಿರುವುದು ಕಂಡುಬರುತ್ತದೆ. ಇದಕ್ಕೆ ಪ್ರಾಯಃ ಎರಡು ಕಾರಣಗಳು ಪ್ರಭಾವ ಬೀರಿದವೆಂದು ಕಾಣುತ್ತದೆ. ಒಂದು ಈ ಬಗ್ಗೆ ಕೆಲಸ ಮಾಡಿದ ಭಾರತೀಯ ವಿದ್ವಾಂಸರೆಲ್ಲ ಆರ್ಯ ಸಂಸ್ಕೃತಿಯನ್ನೆ ಭಾರತೀಯ ಸಂಸ್ಕೃತಿ ಎಂದು ತಪ್ಪಾಗಿ ಗ್ರಹಿಸಿದುದು. ಮತ್ತೊಂದು ಇವರೆಲ್ಲ ಆರ್ಯ ಸಂಸ್ಕೃತಿಯವರೇ ಆಗಿದ್ದು ಸ್ವಾಭಾವಿಕವಾಗಿಯೇ ಮೂಲ ಭಾರತೀಯ ಜನಪದ ಸಂಸ್ಕೃತಿಯನ್ನು ಅನಾದರದಿಂದ ಕಂಡದ್ದು, ಮುಂದೆ ಈ ದಿಸೆಯಲ್ಲಿ ಅಧ್ಯಯನ ಮತ್ತು ಸಂಶೋಧನೆಗಳನ್ನು ಕೈಗೊಂಡ ಪಾಸ್ಚಾತ್ಯ ವಿದ್ವಾಂಸರು ಮತ್ತೆ ಆ ರೀತಿಯ ಶಿಕ್ಷಣ ಪಡೆದ ಕೆಲವರು ಭಾರತೀಯ ವಿದ್ವಾಂಸರು ಮೊದಲವರಿಗಿಂತ ಭಿನ್ನವಾಗಿ, ವೈಜ್ಞಾನಿಕವಾಗಿ ಯೋಚಿಸಿದರಾದರೂ ಅನೇಕರು ಹಳೆಯ ಜಾಡನ್ನೆ ಹಿಡಿದು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಫಲರಾದರು. ಈ ಜಾಡ್ಯ ನಮ್ಮ ವಿದ್ವಾಂಸರಿಗೆ ಎಷ್ಟರ ಮಟ್ಟಿಗೆ ಅಂಟಿದೆಯೆಂದರೆ ಇಂದಿಗೂ ಸಂಸ್ಕೃತವೆ ಭಾರತೀಯ ಸಂಸ್ಕೃತಿ;ಸಂಸ್ಕೃತವೇ ಭಾರತದ ಎಲ್ಲಾ ಭಾಷೆಗಳಿಗೂ ಮೂಲ ಎನ್ನುವಂಥ ಮೂರ್ಖ ಅಭಿಪ್ರಾಯಗಳನ್ನು ಪತ್ರಿಕೆ, ರೇಡಿಯೋ, ದೂರದರ್ಶನಗಳ ಮೂಲಕ ಬಹಿರಂಗವಾಗಿಯೆ ಪ್ರಚಾರ ಮಾಡುತ್ತಾ ಭಾರತೀಯ ಪ್ರಾದೇಶಿಕ ಭಾಷಾ ಸಂಸ್ಕೃತಿಗಳಿಗೆ ಅಪಚಾರವೆಸಗುತ್ತಿದ್ದಾರೆಂಬುದನ್ನು ಯಾರು ಬೇಕಾದರೂ ಕಾಣಬಹುದಾಗಿದೆ, ವಾಸ್ತವವಾಗಿ ಸಂಸ್ಕೃತ ಮತ್ತು ಅದರ ಸಂಸ್ಕೃತಿ ರಾಜಸ್ತಾನ, ಪಂಡಿತಮಂಡಲಿಗಳನ್ನು ಬಿಟ್ಟು ಯಾವಾಗಲೂ ಹೊರಗೆ ಬರಲೇ ಇಲ್ಲ ಎಂಬುದು ಚಾರಿತ್ರಿಕ ಸತ್ಯಸಂಗತಿಯಾಗಿದೆ.

ಆರ್ಯರು ಭಾರತಕ್ಕೆ ಬರುವುದಕ್ಕಿಂತ ಶತ ಶತಮಾನಗಳಷ್ಟು ಹಿಂದೆಯೆ ಭಾರತದಲ್ಲಿ ತನ್ನದೇ ಆದ ಒಂದು ಮಹಾನ್ ಸಂಸ್ಕೃತಿ ಬೆಳೆದು ತನ್ನ ಉತ್ತುಂಗತೆಯನ್ನು ತಲುಪಿತ್ತೆಂಬುದನ್ನು ಮರೆಯಬಾರದು. ಈ ಸತ್ಯವನ್ನು ಕೆಲವರಾದರು ವಿದ್ವಾಂಸರು ಗುರುತಿಸಿ “the dravidian people’s who sprad in to almost every part of india and srilanka, were a mixture of notive population of india and proto dravidians, who seems to have enterd india in waves from about 4000 to 2500 Bc they introduced a Neolithic Village Culture based on agriculture'[2] ಎಂದು ಹೇಳಿರುವುದನ್ನು ಕಾಣಬಹುದು. ಆರ್ಯರು ಭಾರತಕ್ಕೆ ಬರುವುದಕ್ಕಿಂತ ಅನೇಕ ಸಾವಿರ ವರ್ಷಗಳಷ್ಟು ಹಿಂದೆಯೆ ಈ ದೇಶ ವ್ಯವಸಾಯ ಪ್ರಧಾನ ಸಂಸ್ಕೃತಿಯನ್ನು ಹೊಂದಿತ್ತು. ಇಂದಿಗೂ ಭಾರತದ ಮಟ್ಟಿಗೆ ವ್ಯವಸಾಯ ಮೂಲದ ಆ ಗ್ರಾಮ ಸಂಸ್ಕೃತಿಯೆ ಪ್ರಧಾನವಾದುದಾಗಿದೆ ಎಂಬುದನ್ನು ಮರೆಯಬಾರದು.

ಭಾರತೀಯ ಸಾಮಾಜಿಕ, ರಾಜಕೀಯ ಧಾರ್ಮಿಕ ರಂಗಗಳು ಆರ್ಯರು ಬರುವ ಕಾಲಕ್ಕಾಗಲೆ ವ್ಯವಸ್ಥಿತವಾಗಿ ರೂಪುಗೊಂಡಿದ್ದವು. ಈ ಹೊತ್ತಿಗಾಗಲೇ ಅನೇಕ ರಾಜವಂಶಗಳು ಅನೇಕ ಕಡೆ ರಾಜ್ಯ ಸ್ಥಾಪನೆ ಮಾಡಿ ಆಳುತ್ತಿದ್ದವು, ನಗರ ಸಂಸ್ಕೃತಿಯೂ ಮಹಾನಗರಗಳೂ ರೂಪುಗೊಂಡಿದ್ದವು. ಈ ನಗರಗಳಲ್ಲಿ ರಾಜಸ್ಥಾನಗಳಲ್ಲಿ ಭಾರತೀಯ ಕಲೆ ಸಾಹಿತ್ಯ ಸಂಗೀತಗಳು ಮೆರೆಯುತ್ತಿದ್ದುದನ್ನು ಗುರುತಿಸಲಾಗಿದೆ, Great cities such as Mohenjadaro, Harappa and Kalibangan in India rose during the third millenium B. C. and reached the height of their considerable material culture'[3] ಎಂಬ ಹೇಳಿಕೆಯನ್ನು ಗಮನಿಸಬೇಕು. ಈ ಸಂಸ್ಕೃತಿಯ ಅಂತಿಮ ಘಟ್ಟ ಕ್ರಿ. ಪೂ. ೨೧೫೦ ರಿಂದ ಕ್ರಿ. ಪೂ. ೧೭೫೦ ಎಂದು ವಿದ್ವಾಂಸರು ಇಲ್ಲಿನ ಸಮಾಜದ ಬಗ್ಗೆ ಅನೇಕ ಸಂಗತಿಗಳನ್ನು ದಾಖಲಿಸಿದ್ದಾರೆ. ಭಾರತೀಯ ಭಾಷೆ ಮತ್ತು ಸಂಸ್ಕೃತಿಗಳನ್ನು ಕುರಿತು ವಿವೇಚಿಸುವಾಗ ಇವುಗಳನ್ನು ಪ್ರಧಾನವಾಗಿ ಗಮನಿಸಬೇಕಾಗುತ್ತದೆ.

ಕ್ರಿ. ಪೂ. ೩೦೦ರಲ್ಲಿ ಮೆಗಾಸ್ತನೀಸ್ ಎಂಬ ಪ್ರವಾಸಿ ಭಾರತಕ್ಕೆ ಬಂದು ಇಲ್ಲಿನ ಆಗು ಹೋಗುಗಳ ಬಗ್ಗೆ ಬರೆದ ದಾಖಲೆಗಳು ದೊರೆಯುತ್ತವೆ. ಈ ಪ್ರವಾಸಿ ಭಾರತದ ಸುವರ್ಣ ಯುಗವೆಂದು ಕರೆಸಿಕೊಂಡ ಮೌರ್ಯರ ಆಡಳಿತ ಕಾಲದಲ್ಲಿ ಚಂದ್ರಗುಪ್ತ ಮೌರ್ಯನ ಅಸ್ಥನಕ್ಕೆ ಬಂದಿದ್ದವನು. ಈತನು ಭಾರತದ ಸಮಾಜವ್ಯವಸ್ಥೆಯ ಬಗ್ಗೆ ಹೀಗೆ ಹೇಳಿದ್ದಾನೆ: “ಇಂಡಿಯಾದಲ್ಲಿರುವ ಜನರನ್ನು ಏಳು ಪಂಗಡಗಳಾಗಿ ವಿಂಗಡಿಸಿದ್ದಾರೆ. ತತ್ವಜ್ಞಾನಿಗಳಾದವರೆಲ್ಲ ಸೇರಿ ಒಂದು ಪಂಗಡ. ಎರಡನೆಯ ಪಂಗಡ ಬೇಸಾಯಗಾರರ ಪಂಗಡ. ಇವರ ಸಂಖ್ಯೆ ಉಳಿದೆಲ್ಲರಿಗಿಂತ ಹೆಚ್ಚು. ಮೂರನೆಯ ಪಂಗಡಕ್ಕೆ ಸೇರಿದವರು ಪಶುಪಾಲನೆ ಮತ್ತು ಕುರಿ ಸಾಕುವುದರಲ್ಲಿ ತೊಡಗಿರುವ ಜನ. ನಾಲ್ಕನೆಯ ಪಂಗಡದವರು ಕೈಗಾರಿಕೆಯಲ್ಲಿ ತೊಡಗಿರುವ ಜನ. ಸೈನಿಕ ವೃತ್ತಿಯಲ್ಲಿರುವವರು ಐದನೆಯ ಪಂಗಡಕ್ಕೆ ಸೇರಿದವರು. ಆರನೆಯ ಪಂಗಡಕ್ಕೆ ರಾಜರು ಸೇರುತ್ತಾರೆ. ಏಳನೆಯ ಪಂಗಡಕ್ಕೆ ಅಧಿಕಾರ ವರ್ಗದವರು ಸೇರುತ್ತಾರೆ.[4] ಇದರಿಂದ ಮೆಗಾಸ್ತನೀಸನು ಬಂದ ಕಾಲದಲ್ಲಿ ಆರ್ಯರ ವರ್ಣಧರ್ಮವಾಗಲಿ, ಅವರ ಕರ್ಮ ತತ್ವವಾಗಲಿ ಭಾರತದಲ್ಲಿ ಇರಲಿಲ್ಲ. ಆದುದರಿಂದ ಆ ಕಾಲಕ್ಕೆ ಆರ್ಯರು ಭಾರತದಲ್ಲಿ ಪ್ರಬಲರಾಗಿ ಇರಲಿಲ್ಲ. ಮೆಗಾಸ್ತನೀಸ್ ಎಲ್ಲಿಯೂ ಸಂಸ್ಕೃತ. ಭಾಷೆಯ ಪ್ರಸ್ತಾಪ ಮಾಡುವುದಿಲ್ಲ. ರಾಮಾಯಣ ಭಾರತಗಳ ಉಲ್ಲೇಖವಿಲ್ಲ. ಆದರೆ ಆತ ಭಾರತೀಯ ಸಮಾಜ ಸಮೃದ್ಧವಾಗಿದ್ದ ಬಗ್ಗೆ ಆ ಜನರ ಭಾಷೆ ಕಲೆ ಸಾಹಿತ್ಯಗಳ ಬಗ್ಗೆ ಹೇಳಿದ್ದಾನೆ. ಅಂದರೆ ಸಂಸ್ಕೃತ ಆಗ ರಾಜಾಸ್ಥಾನದ ಭಾಷೆಯೂ ಆಗಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ.

ಆರ್ಯರು ಮುಂದೆ ನಿಧಾನವಾಗಿ ಮತ್ತು ಕ್ರಮೇಣವಾಗಿ ಭಾರತೀಯ ರಾಜರನ್ನು ತಮ್ಮತ್ತ ಒಲಿಸಿಕೊಂಡು ತಮ್ಮ ಹತೋಟಿಗೆ ತೆಗೆದುಕೊಂಡರು. ವರ್ಣಧರ್ಮದಂತೆ ಜಾತಿ ಪದ್ದತಿಯನ್ನು ಜಾರಿಗೆ ತರುವ ಪೂರ್ವ ಸಿದ್ಧತೆಯಾಗಿ ರಾಜರು, ದೇವರುಗಳನ್ನು ಕುರಿತ ಅನೇಕ ಪೌರಾಣಿಕ ಕಥೆಗಳನ್ನು ಹುಟ್ಟು ಹಾಕಿದರು. ಆರನೆಯ ಸ್ಥಾನದಲ್ಲಿದ್ದ ರಾಜರನ್ನು ವೈಭವೀಕರಿಸಿ ಎರಡನೆಯ ಸ್ಥಾನಕ್ಕೆ ಏರಿಸಿದರು. ತತ್ವಜ್ಞಾನಿಗಳು ಎಂದು ಒಂದೇ ವರ್ಗದಲ್ಲಿದ್ದ ಆಧ್ಯಾತ್ಮಿಕ ವಾದಿಗಳನ್ನು ಬ್ರಾಹ್ಮಣರು, ಸವಣರು ಬುದ್ಧರು ಎಂದು ವಿಂಗಡಿಸಿ ತಾವು ಮೊದಲ ಸ್ಥಾನವನ್ನು ಆಕ್ರಮಿಸಿ ಭೂಸುರರು ಎಂದೂ ತಮ್ಮ ಭಾಷೆಯನ್ನು ದೇವ ಭಾಷೆಯೆಂದೂ ಕರೆದುಕೊಂಡರು, “Cast wasfirst evolved in the late epic or brahaminic age about 800 to 500Bc. as aryans expanded over northern India and found it necessary to integrate majority Indigenous population in to their social frame work, and it seems, from evidence in the great epics composed in that period. That at first change of cast was possible. “[5]

ಇದರಿಂದ ಆರ್ಯರು ತಮ್ಮ ಉತ್ತಮಿಕೆಯನ್ನು ಶಾಶ್ವತ ಗೊಳಿಸಲು ರೂಪಿಸಿದ ವರ್ಣಪದ್ಧತಿ ಮತ್ತು ಮಹಾಕಾವ್ಯಗಳು ರಾಮಾಯಣ, ಮಹಾಭಾರತ ಇತ್ಯಾದಿಗಳು ಹುಟ್ಟಿಕೊಂಡವು. ಇದೇ ಕಾರಣದಿಂದಾಗಿ ಮೆಗಾಸ್ತನೀಸ್ ವರ್ಣ ಧರ್ಮದ ಬಗ್ಗೆಯಾಗಲಿ ಮಹಾಕಾವ್ಯಗಳ ಬಗ್ಗೆಯಾಗಲಿ ಏನೂ ಹೇಳಿಲ್ಲ. ವರ್ಣಧರ್ಮವನ್ನು ಜಾರಿಗೆ ತಂದು ಈ ದೇಶದ ಬಹು ಸಂಖ್ಯಾತರನ್ನು ಶೂದ್ರರೆಂದು ವರ್ಗೀಕರಿಸಿ ಅವರ್ನ್ನು ದೂರವಿರಿಸಲಾಯಿತು. ಹಾಗೆಯೇ ಈ ದೇಶದ ರಾಜಾಸ್ಥಾನಗಳಲ್ಲಿದ್ದ ಭಾರತೀಯ ವಿವಿಧ ಭಾಷೆ, ಸಾಹಿತ್ಯ, ಸಂಗೀತ, ಕಲೆಗಳನ್ನು ವ್ಯವಸ್ಥಿತವಾಗಿ ಹೊರದೂಡಿ ಆ ಜಾಗದಲ್ಲಿ ಸಂಸ್ಕೃತ ಮತ್ತು ಆರ್ಯಸಂಸ್ಕೃತಿ ಅರ್ಥಾತ್ ವೈದಿಕಸಂಸ್ಕೃತಿಯನ್ನು ನೆಲೆಗೊಳಿಸಲಾಯಿತು. ಸಂಸ್ಕೃತ ದೇವ ಭಾಷೆಯಾಗಿ ಆರ್ಯರನ್ನುಳಿದು ಬೇರೆಯವರಿಂದ ದೂರು ಉಳಿಯಿತು. ಬ್ರಾಹ್ಮಣೇತರರು ಮತ್ತು ಮಹಿಳೆಯರು ಸಂಸ್ಕೃತ್ ಕಲಿಯದಂತೆ ನಿರ್ಬಂಧ ಹಾಕಲಾಯಿತು. ಮಧ್ಯಏಷ್ಯಾದಿಂದ ಓಡಿಬಂದ ಆರ್ಯತು ತಮ್ಮೊಂದಿಗೆ ತಮ್ಮ ಹೆಂಗಸರನ್ನು ಕರೆತರುವುದು ಆಗಲಿಲ್ಲ. ಸಂತಾನಾಭಿವೃದ್ಧಿಗಾಗಿ ಅವರು ಭಾರತೀಯ ಮೂಲದ ಸ್ತ್ರೀಯರನ್ನು ಮದುವೆಯಾದರು. ಹೀಗಾಗಿ ಅವರಿಗೆ ಶೂದ್ರಸ್ಥಾನ ದೊರೆಯಿತು. ಹಾಗೆಯೇ ಭಾರತೀಯ ಮೂಲದ ದೇವರುಗಳನ್ನು ಸಂಸ್ಕರಿಸಿ ತಮ್ಮವನ್ನಾಗಿಸಿಕೊಂಡಿರುವುದೂ ಕಂಡುಬರುತ್ತದೆ. ಈ ವ್ಯವಸ್ಥೆಯಿಂದ ಮೂಲ ಭಾರತೀಯ ಆಚಾರ ವಿಚಾರಗಳೆಲ್ಲವೂ ಶೂದ್ರತ್ವ ಹೊಂದಿ ಗ್ರಾಮಂತರ ಸೇರಿಕೊಂಡವು.

ಈ ಸತ್ಯವನ್ನು ನಮ್ಮ ಆರ್ಯ ಸಂಸ್ಕೃತಿ ಪರವಾದ ವಿದ್ವಾಂಸರು ಆಡಳಿತ ದೃಷ್ಟಿಯಿಂದ ಮಾಡಿದ ವಿಂಗಡಣೆಯೆಂದೂ ಮೆಗಸ್ತನೀಸ ಹೇಳಿರುವುದು ಅದೇ ಎಂದೂ ವಾದಿಸಿದ್ದಾರೆ. ಆದರೆ ಅದೇ ಮೆಗಾಸ್ತನೀಸನು “ಈ ರೀತಿ ಇಂಡಿಯಾ ದೇಶದ ಸಮಾಜವನ್ನು ಏಳು ಭಾಗವಾಗಿ ವಿಂಗಡಿಸಲಾಗಿದೆ. ಅಂತರ್ಪಂಗಡ ವಿವಾಹವಿಲ್ಲ. ಒಂದು ಪಂಗಡದವನು ತನ್ನ ವೃತ್ತಿಯನ್ನು ಬಿಟ್ಟು ಬೇರೊಂದು ವೃತ್ತಿಯನ್ನು ಅನುಸರಿಸುವಂತಿಲ್ಲ”.[6] ಎಂದು ಹೇಳಿರುವುದನ್ನು ಗಮನಿಸಬೇಕು. ಈ ಮೂಲಕ ಆಗಿನಕಾಲದ ಜಾತಿ ಪದ್ಧತಿಯನ್ನು ಮೆಗಾಸ್ತನೀಸ್ ಸ್ಪಷ್ಟವಾಗಿಯೇ ಹೇಳಿದ್ದಾನೆ. ಈ ವಿಭಾಗವನ್ನು ಜಾತಿ ಎನ್ನುವುದಕ್ಕಿಂತ ವೃತ್ತಿಪರ ರೂಪಿತವಾದ ಜನಾಂಗಗಳು ಎಂದು ಹೇಳಬಹುದು. ಆದುದರಿಂದ ಆರ್ಯತು ಜಾರಿಗೆ ತಂದ ವರ್ಣಧರ್ಮ ಆಗಿನ ಭಾರತೀಯ ಸಮಾಜ ವ್ಯವಸ್ಥೆಯನ್ನು ಭೇದಿಸಿ ತನ್ನ ಸ್ಥಾನಗಳಿಗೆ ಹೊಂದಿಕೊಳ್ಳಲು ಶತಮಾನಗಳೇ ಹಿಡಿದವು.

ರಾಜ ಮಹಾರಾಜರನ್ನು ತನ್ನ ಹತೋಟಿಗೆ ತೆಗೆದುಕೊಂಡಂತೆಲ್ಲ, ಪೌರೋಹಿತ್ಯ ತನ್ನ ಹಿಡಿತವನ್ನು ಜನತೆಯ ಮೇಲೆ ಬಿಗಿಪಡಿಸುತ್ತಾ ಹೋಯಿತು. ಇದರಿಂದ ವರ್ಣಧರ್ಮ ಜಾತಿಪದ್ಧತಿಯಾಗಿ ಪ್ರಬಲವಾಗಿರುವುದು ಕಂಡು ಬರುತ್ತದೆ. ” “The rigidity and complexity of the caste structure is developed later seems almost entirely due to bhahmin influence, and through it bhrahmins maintained by right of birth. a position as the highest caste. Not all brahmins at any time were priests, but nevertheless brahmins imposed doctrine held that each brahmin had to maintain the purity of the caste as a whole and contact with the lower castes”[7] ಮೇಲಿನ ಹೇಳಿಕೆ ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಮೇಲು – ಕೀಳುಗಳ ತಾರತಮ್ಯ ಹೇಗೆ ಬ್ರಾಹ್ಮಣರಿಂದ ಉಂಟಾಯಿತು ಮತ್ತು ಅದು ಹೇಗೆ ಜಾತಿ ವ್ಯವಸ್ಥೆಯಾಗಿ ರೂಪುಗೊಂಡಿತು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸುತ್ತದೆ. ವೃತ್ತಿಯ ಆಧಾರ ವರ್ಣವ್ಯವಸ್ಥೆಗೆ ಮೂಲಾಧಾರವಾದರೂ ಅದು ಮುಂದೆ ಹುಟ್ಟಿನೊಂದಿಗೆ ಬೆಸೆದುಕೊಮಡಿತು. ಇದಕ್ಕೆ ಕಾರಣ ಬ್ರಾಹ್ಮಣರಿಗೆ ಅರಮನೆ ಗುರುಮನೆಗಳಲ್ಲಿ ಹಾಗೆಯೇ ರಾಜರಾದವರಿಗೆ ಜನರಿಂದ ದೊರೆತ ಸಕಲ ಸೌಲಭ್ಯಗಳು ಮತ್ತು ಸ್ಥಾನಮಾನಗಳು ಭಯಮಿಶ್ರಿತ ಭಕ್ತಿ ಗೌರವಗಳು. ಅನಾಯಾಸವಾಗಿ ದೊರೆತ ಇವುಗಳು ತಮ್ಮ ಮಕ್ಕಳಿಗೆ ಇರಲಿ ಎಂದು ಯಾರು ಬಯಸುವುದಿಲ್ಲ. ಆದುದರಿಂದ ವೇದವನೋದಿದವನ ಮಗ ಅದನ್ನು ಕನ್ಣೆತ್ತಿ ನೋಡದಿದ್ದರೂ ಬ್ರಾಹ್ಮಣನಾದ. ಅರಮನೆಯ ಸವಲತ್ತುಗಳಿಗೆ ಸಮಾಜದ ಸ್ಥಾನಮಾನಗಳಿಗೆ ಹಕ್ಕುದಾರನಾದ. ತೋಳಲ್ಲಿ ಬಲ, ತಲೆಯಲ್ಲಿ ಬುದ್ಧಿಯಿಲ್ಲದವನೂ ಹುಟ್ಟಿನಿಂದ ರಾಜನಾಗಿ ಸಿಂಹಾಸನವೇರಿದ. ಇದು ಪಾವಿತ್ರತೆಗಿಂತ ಅನುಕೂಲಕ್ಕಾಗಿ ರೂಪಿತವಾದ ಒಂದು ವ್ಯವಸ್ಥೆ. ಇದರ ರುಚಿ ಹತ್ತಿದಂತೆಲ್ಲ ಜಾತಿಯ ಬೇಲಿ ಬಲವಾಗುತ್ತಲೇ ನಡೆಯಿತು. ಎಂಭತ್ತು ವರ್ಷಗಳ ಕಮ್ಯುನಿಸಂ ಬಿಗಿಯ ನಂತರವೂ ರಷ್ಯ ಜಾತಿಯ ಆಧಾರದ ಮೇಲೆ ಒಡೆದು ಹೋಗಿರುವುದನ್ನು ಗಮನಿಸಿದರೆ ಜಗತ್ತು ಇದರಿಂದ ಇಂದಿಗೂ ಮುಕ್ತವಾಗಲಾಗಿಲ್ಲ ಅನ್ನಿಸುತ್ತದೆ.

ಕ್ರಿ. ಪೂ. ೩೦೦ ರಿಂದ ಕ್ರಿ.ಶ. ೬೦೦ ರವರೆಗೆ ಭಾರತಕ್ಕೆ ಹೋದ ಯಾವ ಪ್ರವಾಸಿಯೂ ವರ್ಣಧರ್ಮವನ್ನಾಗಲೀ, ಸಂಸ್ಕೃತವನ್ನಾಗಲಿ ಉಲ್ಲೇಖಿಸಿಲ್ಲ. ಆದರೆ ರಾಜಾಸ್ಥಾನಗಳಲ್ಲಿದ್ದ ವಿವಿಧ ಕಲೆಗಳ ಬಗ್ಗೆ ಕಡೆಗೆ ಹಕ್ಕಿ ಶಕುನದ ಜ್ಯೋತಿಷಿಗಳಿದ್ದ ಬಗ್ಗೆ ಹೇಳುತ್ತಾರೆ. ಕ್ಷತ್ರಿಯ ಒಂದು ಜನಾಂಗವಾಗಿರದೆ ರಾಜರನ್ನು ಜನತೆಯೆ ಆರಿಸುತ್ತಿದ್ದ ಬಗ್ಗೆ ಹೇಳಿದ್ದಾರೆ. ಮೆಗಾಸ್ತನೀಸನ ನಂತರ ಸರಿ ಸುಮಾರು ಸಾವಿರ ವರ್ಷಗಳ ನಂತರ ಬಂದ ಹೂಯೆನ್ ತ್ಸಾಂಗ್ ಮೊಟ್ಟ ಮೊದಲಿಗೆ ವರ್ಣಧರ್ಮವನ್ನು ಉಲ್ಲೇಖಿಸಿ ತಂದೆಯಿಂದ ಮಗನಿಗೆ ಅಧಿಕಾರ ಬರುವ ಸಂಪ್ರದಾಯವನ್ನು ಹೇಳುತ್ತಾನೆ. ಮೆಗಾಸ್ತನೀಸನಿಗಿಂತ ಸ್ವಲ್ಪ ಕಾಲಾನಂತರ ಭಾರತಕ್ಕೆ ಬಂದಿದ್ದ ಸ್ಟ್ರಾಬೊಯೆಂಬ ಪ್ರವಾಸಿ ‘ರಾಜನನ್ನು ಜನಗಳು ಚುನಾಯಿಸುತ್ತಾರೆ. ರಾಜನಾದ ಮೇಲೆ ಅವನಿಗೆ ಮಕ್ಕಳಾದರೆ ಸಿಂಹಾಸನವನ್ನು ತೊರೆಯಬೇಕಾಗುತ್ತದೆ. ಸಿಂಹಾಸನ ವಂಶಪಾರಂಪರ್ಯವಗಿರಬಾರದೆಂಬುದೇ ಇದರ ಉದ್ದೇಶ’ ಎಂದು ಹೇಳಿದ್ದಾನೆ. ಇದರಿಂದ ರಾಜತ್ವ ಹುಟ್ಟಿನಿಂದ ಬರುತ್ತಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ರಾಜರನ್ನು ಆರಿಸುವ ಕ್ರಮವನ್ನು ಪ್ಲಿನಿಯೆಂಬ ಪ್ರವಾಸಿ ಹೇಳಿದ್ದಾನೆ. “ಅತ್ಯಂತ ಸುಂದರವಾದವನು ಮಾತ್ರ ರಾಜನಾಗಲು ಸಾಧ್ಯ. ಎರಡು ತಿಂಗಳ ಮಗುವಾಗಿರುವಾಗಲೇ ಮಗುವನ್ನು ಪರೀಕ್ಷಿಸಿ ಅದು ಸುಂದರವಾಗುವುದೇ ಇಲ್ಲವೆ ಎಂದು ನಿರ್ಧರಿಸುತ್ತಾರೆ. ಸುಂದರವಾದ ಮಗು ರಾಜನಾಗಲು ಅರ್ಹವೆನಿಸುತ್ತದೆ.” ಆರ್ಯರು ವರ್ಣ ಧರ್ಮ ಆಮೂಲಕ ಜಾತಿ ಪದ್ಧತಿಯನ್ನು ಹುಟ್ಟು ಹಾಕುವವರೆಗೆ ಜನರೆ ರಾಜನಾಗಬೇಕಾದವನನ್ನು ಆರಿಸುತ್ತಿದ್ದರೆಂದು ಗೊತ್ತಾಗುತ್ತದೆ. ಕ್ರಿ.ಶ. ಎರಡನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಬಡ್ಡೆಸನೆಸ್ ಎಂಬ ಪ್ರವಾಸಿ ಮೊಟ್ಟ ಮೊದಲ ಬಾರಿಗೆ “ಇಂಡಿಯಾ ದೇಶದ ಯಾವ ಪಂಥದವರಾದರೂ ಶ್ರಮಣರಾಗಬಹುದು. ಇವರಲ್ಲಿ ಎರಡು ಗುಂಪುಗಳಿವೆ. ಬ್ರಕಮನರು ಮತ್ತು ಶ್ರಮಣರು ಎಂದು ಹೇಳಿದ್ದಾನೆ. ಇದರಿಂದ ಒಂದೇ ಗುಂಪಾಗಿದ್ದ ಮೆಗಾಸ್ತನೀಸ್ ಹೇಳಿರುವ ತತ್ವಜ್ಞಾನಿಗಳು ಗುಂಪು ಗುಂಪಾಗಿ ಒಡೆದು ಕಡೆಗೆ ಜಾತಿಯಾಗಿ ಪರಿಣಮಿಸಿರುವುದು ಕಂಡು ಬರುತ್ತದೆ.

ಕ್ರಿ.ಶ. ಆರನೆಯ ಶತಮಾನದಲ್ಲಿ ಭಾರತಕ್ಕೆ ಬಂದ ಹೂಯೆನ್ ತ್ಸಾಂಗ್ ಎಂಬ ಚೀನಾ ದೇಶದ ಪ್ರವಾಸಿ ಮೊಟ್ಟಮೊದಲ ಬಾರಿಗೆ ‘ಜನರಲ್ಲಿ ನಾಲ್ಕು ಭೇದಗಳಿವೆ. ಮೊದಲನೆಯ ವರ್ಗಕ್ಕೆ ಸೇರಿದವರು ಬ್ರಾಹ್ಮಣರು, ಎರಡನೆಯ ವರ್ಗಕ್ಕೆ ಸೇರಿದವರು ಕ್ಷತ್ರಿಯರು, ಮೂರನೆಯ ವರ್ಗಕ್ಕೆ ಸೇರಿದವರು ವೈಶ್ಯರು ಅಥವಾ ವರ್ತಕರು, ನಾಲ್ಕನೆಯ ವರ್ಗಕ್ಕೆ ಸೇರಿದವರು ಶೂದ್ರರು ಅಥವಾ ಬೇಸಾಯಗಾರರು’ ಎಂದು ಹೇಳಿ ವರ್ಣ ಪದ್ಧತಿಯನ್ನು ಉಲ್ಲೇಖಿಸಿದ್ದಾನೆ. ಮುಕ್ತ ಸಮಾಜವೊಂದರಲ್ಲಿದ್ದ ಭಾರತೀಯರನ್ನು ಜಾತೀಯ ಬೇಲಿಯೊಳಗೆ ಕೂಡಲು ಒಂದು ಸಾವಿರ ವರ್ಷದ ಸಂಘರ್ಷ ನಡೆದಿದೆಯೆಂಬುದನ್ನು ಈ ಪ್ರವಾಸಿಗಳ ಹೇಳಿಕೆಯಿಂದ ಗುರುತಿಸಬಹುದು. ಆರ್ಯರು ರಾಜಸ್ಥಾನಗಳಲ್ಲಿ ಬೇರೂರಿ ರಾಜರನ್ನು ತಮ್ಮ ಹತೋಟಿಗೆ ತೆಗೆದುಕಒಂಡ ನಂತರ ಭಾರತದ ಮೂಲ ನಿವಾಸಿಗಳು ಶೂದ್ರರೆನಿಸಿಕೊಂಡು ಗ್ರಾಮಾಂತರಗಳಿಗೆ ಸರಿಯಬೇಕಾಯಿತು. ಅವರು ದೇವರು ದಿಂಡರುಗಳನ್ನೆಲ್ಲ ಅನಾಗರಿಕವೆಂದು ಕರೆದು, ತಮ್ಮ ಅನುಕೂಲಕ್ಕಾಗಿ ರೂಪಿಸಿದವುಗಳನ್ನು ಅಧಿಕಾರದ ಆಸರೆ ಪಡೆದು ಬಹು  ಸಂಖ್ಯಾತರ ಮೇಲೆ ಹೇರಲಾಯಿತು. ಇದು ಇಂದಿಗೂ ಈ ದೇಶದಲ್ಲಿ ಮುಂದುವರೆದಿರುವುದನ್ನು ಕಾಣಬಹುದಾಗಿದೆ. ವಂಶ ಪರಂಪರೆಯ ಸವಲತ್ತುಗಳನ್ನು ಅನುಭವಿಸಿದವರ ಹಿಡಿತ ಬಿಗಿಯಾಗುತ್ತಾ ನಡೆಯಿತು. ‘Because this happend under guidance of the hereditary class of priests and philosophers, the bramins it reinforced the status of the priests, stressing the value of their prerogative performance of sacrifice in men’s relation with the gods[8] ವಂಶಪಾರಂಪರ್ಯವನ್ನು ಪ್ರತಿಪಾದಿಸುವ ಪುರೋಹಿತ ಶಾಹಿಯ ಕಪಿಮುಷ್ಠಿಯಲ್ಲಿ ಭಾರತೀಯ ಸಮಾಜ ಸಿಕ್ಕಿಹಾಕಿಕೊಂಡಿತೆಂಬುದಕ್ಕೆ ಮೇಲಿನ ಹೇಳಿಕೆ ಸಾಕ್ಷಿಯಾಗಿದೆಯೆಂದು ಹೇಳಬಹುದಾಗಿದೆ. ಇದರಿಂದಾಗಿ ಜಾತಿಯ ಸಮಸ್ಯೆಯೊಂದಿಗೆ ಧಾರ್ಮಿಕ ವಿಚಾರಗಳೂ ಸಂಕುಚಿತಗೊಂಡು ಕಿಲುಬು ಹತ್ತಿದವು. ನಿಸರ್ಗವನ್ನೇ ದೇವರೆಂದು ನಂಬಿದ್ದ ಜನರ ಮೇಲೆ ನೂರಾರು ದೇವದೇವತೆಗಳನ್ನು ಸೃಷ್ಟಿಸಿ ಅವುಗಳನ್ನು ಅವರ ಮೇಲೆ ಛೂ ಬಿಡಲಾಯಿತು.

ಆರ್ಯರು ಬರುವುದಕ್ಕೂ ಸಾವಿರಾರು ವರ್ಷಗಳಷ್ಟು ಹಿಂದೆಯೇ ಭಾರತದಲ್ಲಿ ಒಂದು ಅತ್ಯುನ್ನತವಾದ ಗ್ರಾಮ ಸಂಸ್ಕೃತಿ ರೂಪುಗೊಂಡಿತ್ತೆಂದು ಸಂಶೋಧಕರೆಲ್ಲ ಒಪ್ಪಿದ್ದಾರೆ. ಅಂತಹ ಒಂದು ಸಂಸ್ಕೃತಿಯ ಭಾಷಾ ಸಾಹಿತ್ಯಗಳ ಬಗೆಗೆ ಅನೇಕರು ಹೊಸಬೆಳಕು ಚಲ್ಲಿದ್ದಾರಾದರೂ ಅವುಗಳ ಸ್ಪಷ್ಟ ಚಿತ್ರ ದೊರೆಯುವುದಿಲ್ಲ. ಮೊದಮೊದಲಿಗೆ ಸಂಸ್ಕೃತವೂ ಸೇರಿದಂತೆ ಜಗತ್ತಿನ ಎಲ್ಲಾ ಭಾಷೆಗಳ ಸಾಹಿತ್ಯವೂ ಕಂಠಸ್ಥವಾಗಿತ್ತೆಂಬುದರಲ್ಲಿ ಅನುಮಾನವಿಲ್ಲ. ಆದುದರಿಂದ ಆರ್ಯಪೂರ್ವ ಭಾರತೀಯ ಭಾಷೆಗಳಲ್ಲಿಯೂ ಅವರದೇ ಆದಂಥ ಕಲೆ, ಸಾಹಿತ್ಯಗಳಿದ್ದುವೆಂಬುದು ಖಚಿತ. ಉದಾಹರಣೆಗೆ ಪಾಳಿ, ಪ್ರಾಕೃತ ಭಾಷೆಗಳನ್ನು ನೋಡಬಹುದಾಗಿದೆ. ಈ ಭಾಷೆಗಳು ಕೆಲವರು ಹೇಳುವಂತೆ ಸಂಸ್ಕೃತ ಜನ್ಯವಲ್ಲ. ಭಾರತದ ಮೂಲನಿವಾಸಿಗಳ ಭಾಷೆಗಳಲ್ಲಿ ಇವು ಸೇರುತ್ತವೆ. ಅಂತೆಯೇ ಕನ್ನಡದಲ್ಲಿಯೂ ಬರವಣಿಗೆಯ ಪೂರ್ವದಲ್ಲಿ ಕಂಠಸ್ಥ ಸಾಹಿತ್ಯವಿದ್ದುದರಲ್ಲಿ ಅನುಮಾನವಿಲ್ಲ. ಬರವಣಿಗೆ ರೂಪುಗೊಂಡಾಗ ಈ ಭಾರತೀಯ ಭಾಷೆಗಳ ಕಂಠಸ್ಥ ಸಾಹಿತ್ಯವನ್ನು ಮೊದಲು ಲಿಖಿಸಿದವರು ಸಂಸ್ಕೃತಬಲ್ಲವರು. ಅದರ ಫಲವೇ ಕಥಾ ಸರಿತ್ಸಾಗರ, ಪಂಚತಂತ್ರ, ಬೇತಾಳವಿಂಶತಿ ಮುಂತಾದ ಗ್ರಂಥಗಳು. ಈ ಭಾರತೀಯ ಭಾಷೆಗಳ ಕಂಠಸ್ಥ ಸಾಹಿತ್ಯದಿಂದ ಸಂಸ್ಕೃತ ನಾಟಕಗಳು ಹುಟ್ಟಿಕೊಂಡವು. ಪಂಚತಂತ್ರದ ಪ್ರಾಣಿ ಪಾತ್ರಗಳು ಮತ್ತ ಸಂಸ್ಕೃತ ನಾಟಕಗಳ ಸಾರಥಿ ಇದಕ್ಕೆ ಉದಾಹರಣೆ. ಜನಸಾಮಾನ್ಯರನ್ನು, ಪ್ರಾಣಿಗಳನ್ನು ವೈದಿಕ ಸಂಸ್ಕೃತಿ ಎಂದೂ ಹತ್ತಿರ ಸರಿದ್ದಿಲ್ಲ. ಹೀಗೆಯೇ ದೇಶೀಯ ಭಾಷೆಗಳ ಸಾಹಿತ್ಯ ಸಂಸ್ಕೃತಿಗಳು ಸಂಸ್ಕೃತಕ್ಕೆ ಹೋಗಿರುವುದು ಕಂಡುಬರುತ್ತದೆ.

ಕ್ರಿಸ್ತ ಪೂರ್ವದಿಂದ ಭಾರತಕ್ಕೆ ಬಂದು ರಾಜ ಮಹಾರಾಜರ ಚಕ್ರವರ್ತಿಗಳ ಆಸ್ಥಾನಗಳಿಗೆ ಭೇಟಿ ನೀಡಿ ತಾವು ಕಂಡದ್ದನ್ನು ಬರೆದಿಟ್ಟಿರುವ ಅನೇಕ ದಾಖಲೆಗಳು ದೊರೆತಿವೆ. ಈ ಪ್ರವಾಸ ಕಥನಗಳ ಕಾಲ ಕ್ರಿ. ಪೂ. ೩೦೦ ರಿಂದ ಇತ್ತೀಚಿನವರೆಗೂ ಇದೆ. ಈ ಪ್ರವಾಸಿಗರು ರಾಜಮಹಾರಾಜರ ಆಸ್ಥಾನಗಳಲ್ಲಿದ್ದ ಕಲಾಸಾಹಿತ್ಯಗಳ ವಿವರ ಕೊಡುತ್ತಾರೆ. ಅವೆಲ್ಲವೂ ಜನಪದ ಕಲಾ ಸಾಹಿತ್ಯಗಳ ಕಡೆಗೆ ಹಕ್ಕಿ ಶಕುನದವರು, ಕೋಲೆ ಬಸವನವರು, ದೊಂಬರು ಮುಂತಾದವರು ರಾಜಸ್ಥಾನದ ಮನ್ನಣೆಗೆ ಪಾತ್ರರಾಗಿದ್ದರು. ಮುಂದೆ ಒಂದು ಎರಡನೆಯ ಶತಮಾನಗಳಲ್ಲಿ ದೊಡ್ಡ ದೊಡ್ಡ ರಾಜರ ಆಸ್ಥಾನದಲ್ಲಿ ಜನಪದ ಸಾಹಿತ್ಯ ಕಲೆಗಳನ್ನು ಹೊರಹಾಕಿರುವುದನ್ನು ಸಣ್ಣ ರಾಜರು ಸಾಮಂತರು ಅವುಗಳಿಗೆ ಆಶ್ರಯಕೊಟ್ಟಿರುವುದನ್ನು ಕಾಣಬಹುದು. ಕ್ರಮೇಣ ಇವು ಅಲ್ಲಿಂದಲೂ ಉಚ್ಛಾಟನೆಗೊಂಡು ಗ್ರಾಮಾಂತರದಲ್ಲಿ ಆಶ್ರಯ ಪಡೆದುಕೊಂಡವು. ವೈದಿಕ ಸಂಸ್ಕೃತಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಂತೆಲ್ಲ ಇವು ಹಳ್ಳಿಗರ, ಅಸಂಸ್ಕೃತ ತರಲೆಗಳೆಂದು ಮೂಲೆಗುಂಪಾದವು.

ಭಾರತೀಯ ಭಾಷೆ, ಸಂಸ್ಕೃತಿ ಮತ್ತು ಕಲೆಗಳು ರಾಜಾಶ್ರಯ ತಪ್ಪಿದ ಮೇಲೆ ಜನಪದವನ್ನೇ ಆಶ್ರಯಿಸಬೇಕಾಯಿತು. ಅವೇ ಕಾಲ ದೇಶಾತೀತವಾಗಿ ಜನರ ಹೃದಯದಲ್ಲಿ ಉಳಿದುಕೊಂಡು ಬಂದಿವೆ. ಭಾರತೀಯ ಜನಪದ ಧರ್ಮವಾಗಲಿ, ಸಂಸ್ಕೃತಿಯಾಗಲಿ ಅವರ ಜೀವನ ವಿಕಾಸದೊಂದಿಗೆ ಬೆರೆತುಕೊಂಡು ಬಂದಂಥದು. ಆದುದರಿಂದಲೇ ನಿರಂತರವಾದ ವಿದೇಶಿ ಸಂಸ್ಕೃತಿಗಳ ದಾಳಿಯನ್ನೆದುರಿಸಿಯೂ ಇಂದಿಗೂ ಜೀವಂತವಾಗಿದೆ. ಭಾರತೀಯ ಜನಾಂಗಳ ಮೂಲವನ್ನು ಕೆಲವರು ಹೊರಗೆ ಅರಸಲು ಹೋಗುತ್ತಾರೆ. ಆದರೆ ಹೊರಗಿನಿಂದ ಬಂದವರು ಯಾರು ಮೂಲ ನಿವಾಸಿಗಳು ಯಾರು ಎಂಬ ಬಗ್ಗೆ ಖಚಿತವಾದ ಸಾಂಸ್ಕೃತಿಕ ಆಧಾರಗಳೇ ನಮಗೆ ದೊರೆಯುತ್ತವೆ. ‘‘ಇಂಡಿಯಾ ದೇಶವನ್ನು ಗಮನಿಸಿದರೆ ಇದು ಬಹು ವಿಶಾಲವಾದ ದೇಶ. ಇಲ್ಲಿರುವ ಜನರು ವಿವಿಧ ಬುಡಕಟ್ಟುಗಳಿಗೆ ಸೇರಿದವರು. ಈ ಬುಡಕಟ್ಟುಗಳು ಎಲ್ಲಾ ಸೇರಿ ನೂರ ಹದಿನೆಂಟು ಆಗುತ್ತವೆ. ಈ ಬುಡಕಟ್ಟುಗಳಲ್ಲಿ ಒಂದಾದರೂ ಪರದೇಶೀಯ ಮೂಲಕ್ಕೆ ಸೇರದೆ ಎಲ್ಲವೂ ಸ್ಥಳ ಜನ್ಯವಾದ ಬುಡಕಟ್ಟುಗಳೇ ಆಗಿವೆ.” ಎಂಬ ಅಭಿಪ್ರಾಯ ಕ್ರಿಸ್ತ ಪೂರ್ವದಲ್ಲಿಯೇ ಮೆಸ್ತಾಸ್ತನೀಸನಿಂದ ದೊರೆಯುತ್ತದೆ. ಈ ಬುಡಕಟ್ಟುಗಳಿಗೆ ತಮ್ಮದೇ ಆದ ದೇವರು ದಿಂಡರು ಆಚಾರವಿಚಾರಗಳಿದ್ದವು. ಅವರದೇ ಆದ ಸಂಸ್ಕೃತಿಯಿತ್ತು. ಇವೆಲ್ಲವು ಆರ್ಯ ಸಂಸ್ಕೃತಿಗಿಂತ ಭಿನ್ನವಾಗಿದ್ದವು. The Dravidians an agricultural people, clearly worshipped Deities connected in one way or way other fertility’’ ಈ ಪ್ರಾಕೃತಿಕ ಪೂಜಾ ಪದ್ಧತಿಗಳನ್ನು ಇಂದಿಗೂ ನಮ್ಮ ಗ್ರಾಮಾಂತರಗಳ ಜನರಲ್ಲಿ ಕಾಣಬಹುದಾಗಿದೆ.

[1] Veronica ions Indian Mythology, P. 6.

[2] Veronica ions Indian Mythology, P. 12

[3] ಅದೇ

[4] ಎಚ್‌. ಎಲ್‌. ನಾಗೇಗೌಡ, ಪ್ರವಾಸಿಕಂಡ ಇಂಡಿಯಾ, ಸಂ. ೧ ಪು. ೩೪

[5] Veronica ions Indian Mythology, P. 12.

[6] ಎಚ್‌. ಎಲ್‌. ನಾಗೇಗೌಡ, ಪ್ರವಾಸಿಕಂಡ ಇಂಡಿಯಾ, ಸಂ. ೧ ಪು. ೩೭

[7] Veronica ions Indian Mythology, P. 8.

[8] Veronica ions Indian Mythology, P, 6.