ಆರ್ಯರ ಆಗಮನ ಕಾಲವನ್ನೇ ಮಿತಿಯಾಗಿಟ್ಟುಕೊಂಡು ಯೋಚಿಸಿದ ಭಾರತೀಯ ವಿದ್ವಾಂಸನೇಕರು ಅಲ್ಲಿಂದಾಚೆಗೂ ಈ ದೇಶದಲ್ಲಿ ಜನ, ಭಾಷೆ, ಸಂಸ್ಕೃತಿಗಳದ್ದು ಎಂಬುದನ್ನು ಯೋಚಿಸುವ ಗೋಜಿಗೇ ಹೋಗಲಿಲ್ಲ. ಆರ್ಯರು ಬರುವುದಕ್ಕೂ ಮುಂಚೆ “ಇಂಡಿಯಾ ದೇಶದಲ್ಲಿ ನೂರ ಹದಿನೆಂಟು ಜನಾಂಗಗಳಿವೆ. ದಿಯೋನೀಸಸ್ಸನಿಂದ ಹಿಡಿದು ಸಾಂದ್ರಕೊಟೂಸ್‌ (ಚಂದ್ರಗುಪ್ತ ಮೌರ್ಯ)ನವರೆಗೆ ನೂರೈವತ್ಮೂರು ರೀಜರುಗಳು ಆಗಿ ಹೋಗಿದ್ದಾರೆಂದು ಲೆಕ್ಕಾ ಹಾಕಿದ್ದಾರೆ. ಈ ರಾಜರುಗಳು ಆಳ್ವಿಕೆಯ ಒಟ್ಟು ಕಾಲ ಆರುಸಾವಿರದ ನಲವತ್ತೆರಡು ವರ್ಷಗಳು”ಯೆಂಬ ಹೇಳಿಕೆಯಿಂದ ತಿಳಿಯುತ್ತದೆ. ಮೇಲಿನ ಹೇಳಿಕೆ ಮೂಲ ಭಾರತೀಯ ಸಂಸ್ಕೃತಿಯ ಪ್ರಾಚೀನತೆಯನ್ನು ಸೂಚಿಸುತ್ತದೆ. ಆರ್ಯರ ಆಗಮನವನ್ನು ಮಿತಿಯಾಗಿಟ್ಟುಕೊಂಡುದರಿಂದಲೇ ಸಂಸ್ಕತವೇ ಭಾರತೀಯ ಸಂಸ್ಕೃತಿ ಎಂಬಂತಹ ಬಾಲಿಷವಾದ ಅಭಿಪ್ರಾಯಗಳು ಹುಟ್ಟಿಕೊಳ್ಳಲು ಕಾರಣವಾಯಿತು. ಮೊದಮೊದಲಿಗೆ ಈ ಭಾಷೆ, ಸಂಸ್ಕೃತಿಗಳ ಬಗೆಗೆ ಕೆಲಸ ಮಾಡಿದವರೂ ಆರ್ಯ ಸಂಸ್ಕೃತಿಯವರು ಮತ್ತು ಅದೇ ಪರಮವೆಂದು ನಂಬಿದವರೇ ಆದುದರಿಂದ ಈ ರಾಷ್ಟ್ರದ ಬಹುಸಂಖ್ಯಾತ ಜನಾಂಗಗಳ ಭಾಷೆ ಸಂಸ್ಕೃತಿಗಳ ಬಗ್ಗೆ ಯಾರೂ ಯೋಚಿಸುವ ಗೋಜಿಗೇ ಹೋಗಲಿಲ್ಲ. ಅಲ್ಲಲ್ಲಿ ಅದನ್ನು ಗಮನಿಸಿದವರೂ ಇದೊಂದು ಅಗತ್ಯ ವಿಷಯವೆಂಬಂತೆಯೇ ಉಲ್ಲೇಖಿಸುತ್ತಾ ಬಂದಿರುವುದು ಕಂಡುಬರುತ್ತದೆ. ಇದರಿಂದಾಗಿ ಮಹಾನ್‌ ಸಂಸ್ಕೃತಿಯೊಂದು ಅನಾದರಣೆಗೆ ಗುರಿಯಾಗಿ ಅವಸಾನ ಹೊಂದುವ ಸ್ಥಿತಿ ತಲುಪಿತು. ಆದುದರಿಂದಲೇ ವಿದ್ವಾಂಸರು ನಮ್ಮ ಜನಪದ ಸಾಹಿತ್ಯ ಸಂಸ್ಕೃತಿಗಳ ಪ್ರಾಚೀನತೆಯ ಬಗ್ಗೆ ವಿವೇಚಿಸುವಾಗಲೆಲ್ಲಾ ಹದಿನೇಳನೆಯ ಶತಮಾನಕ್ಕಿಂತ ಹಿಂದೆ ಹೋಗುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಯಕ್ಷಗಾನ ಸಾಹಿತ್ಯವನ್ನು ಕುರಿತು ವಿವೇಚಿಸಿದಾಗ ಮಾತ್ರ ಈ ಪ್ರಾಚೀನ ಕ್ಷೇತ್ರಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ.

ನಮ್ಮ ಜನಪದ ಕಲೆಗಳು – ಯಕ್ಷಗಾನ, ಕೋಲಾಟ, ಸೋಮನ ಕುಣಿತ, ಪಟಾಕುಣಿತ ಇವುಗಳು ಎಷ್ಟು ಪ್ರಾಚೀನ ಎಂಬ ಸಮಸ್ಯೆ ತಲೆಯೆತ್ತಿದಾಗಲೆಲ್ಲ ಶಿಷ್ಟರು ಹದಿನಾರು ಹದಿನೇಳನೆಯ ಶತಮಾನವನ್ನೆ ತೋರುತ್ತಾ ಬಂದಿದ್ದಾರೆ. ಈ ನಾಡಿನ ಅತ್ಯಂತ ಪ್ರಾಚೀನವಾದ ಜನಾಂಗಗಳ ಜೀವನದ ಅವಿಭಾಜ್ಯ ಅಂಗವಾಗಿ ಮೂಡಿಬಂದಿರುವ ಇವುಗಳಿಗೆ ನೂರಿನ್ನೂರು ವರ್ಷಗಳ ಕಾಲಮಿತಿ ಸರಿಯೇ? ಸರಿಯಲ್ಲವಾದರೆ ಇವುಗಳ ಪ್ರಾಚೀನತೆ ಎಷ್ಟು? ಈ ವಿಷಯಗಳ ಬಗೆಗೆ ಮೊದಲನೆ ತೀರ್ಮಾನವಾಗಬೇಕಾಗಿದೆ. ಈ ಬಗೆಗೆ ಆಳವಾಗಿ ಚಿಂತನೆ ಮಾಡದಿದ್ದಲ್ಲಿ ಯಕ್ಷಗಾನದ ಆದ್ಯ ಪ್ರಸಂಗಕಾರರು ಯಾರೆಂದು ತಿಳಿಯುವುದಿಲ್ಲ. ದೊರೆತಿರುವ ಮೊದಲ ಕೃತಿ ವಾರಂಬಳ್ಳಿಯ ವಿಷ್ಣುವು ರಚಿಸಿದ ‘ವಿರಾಟ ಪರ್ವ’ ಎಂಬುದು ಅದರ ಒಂದು ಹಸ್ತಪ್ರತಿಯ ಕಾಲವು ಕ್ರಿ.ಶ. ೧೫೬೪ – ಅದಕ್ಕಿಂತ ಪೂವದಲ್ಲಿ ಯಕ್ಷಗಾನವು ರಚಿತವಾಗಿದ್ದವೆಂಬುದಕ್ಕೆ ಎಡೆಯಿದೆ. ಆದಕಾರಣ ೧೫ನೇ ಶತಮಾನದಿಂದ ಯಕ್ಷಗಾನ ಪ್ರಸಂಗ ರಚನೆಯು ಮೊದಲಾಯಿತೆಂದು ಗ್ರಹಿಸಬಹುದು.” ಎಂಬಂತಹ ಮಾತುಗಳನ್ನೇ ಸಂಶೋಧನೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಅಶೋಕನ ಶಾಸನಗಳ ಪ್ರಕಾರ ಕ್ರಿ. ಪೂ. ೩ನೇ ಶತಮಾನದಲ್ಲೇ ಪ್ರಾಕೃತವು ದೇಶಭಾಷೆಯಾಗಿದ್ದಿತು. ಜೈನ ಮತ್ತು ಬೌದ್ಧ ಧರ್ಮ ಪ್ರಸಾರ ಕಾರ್ಯ ನಡೆದುದು ಮತ್ತು ಆ ಧರ್ಮಗ್ರಂಥಗಳು ರಚಿತವಾದುದು ಪ್ರಾಕೃತ ಭಾಷೆಯಲ್ಲಿ ಅಂದ ಮೇಲೆ ಆರ್ಯರು ಬರುವುದಕ್ಕೂ ಮೊದಲು ಭಾರತದಲ್ಲಿ ಭಾಷೆಗಳಿದ್ದವು ಪ್ರಬುದ್ಧವೂ ಆಗಿದ್ದವು ಎಂಬುದು ಖಚಿತವಾಗುತ್ತದೆ.

ಸಂಸ್ಕೃತ ಭಾಷೆಯಲ್ಲಿ ಉತ್ತರೋತ್ತರ ಲಿಖಿತಗೊಂಡ ವೇದಶಾಸ್ತ್ರ. ರಾಮಾಯಣ ಮಹಾಭಾರತಗಳೆಲ್ಲವೂ ಸಾವಿರಾರು ವರ್ಷಗಳ ಕಾಲ ಕಂಠಸ್ಥವಾಗಿದ್ದುವು, ವೇದಗಳಲ್ಲಿ ಲಕ್ಷ ಶ್ಲೋಕಗಳಿವೆ. ಈ ವೇದಗಳು ಬಾಯಿಂದ ಬಾಯಿಗೆ ಹಬ್ಬಿ ಸ್ಮೃತಿಯಲ್ಲಿ ಸ್ಥಾಯಿಯಾದುವುಗಳೇ ಹೊರತು ಕಾಗದದ ಮೇಲಾಗಲಿ ತಾಳೆ ಗರಿಗಳ ಮೇಲಾಗಲಿ ಬರೆದವುಗಳಲ್ಲ. ಪ್ರತಿಯೊಂದು ತಲೆಮಾರಿನಲ್ಲೂ ಲಕ್ಷ ಶ್ಲೋಕಗಳನ್ನು ಕಂಠಪಾಠ ಮಾಡಿದ ಬ್ರಾಹ್ಮಣರಿರುತ್ತಿದ್ದರು”[1] ಎಂದು ಕ್ರಿ.ಶ. ೬೭೦ರಲ್ಲಿ ಭಾರತಕ್ಕೆ ಬಂದಿದ್ದ ಇತ್ಸಿಂಗ್‌ ಎಂಬ ಪ್ರವಾಸಿ ಹೇಳಿದ್ದಾನೆ. ಅಂದರೆ ಏಳನೆಯ ಶತಮಾನದಲ್ಲಿ ಸಹ ಸಂಸ್ಕೃತ ಬರವಣಿಗೆಯ ರೂಪದಲ್ಲಿರಲಿಲ್ಲವೆಂದಾಗುತ್ತದೆ. ಸಂಸ್ಕೃತವನ್ನು ಬ್ರಾಹ್ಮಣೇತರರು ಕಲಿಯಬಾರದೆಂಬ ಕಾರಣದಿಂದ ಬಹಳ ಕಾಲದವರೆಗೆ ಕಂಠಸ್ಥವಾಗಿರಿಸಿಕೊಳ್ಳಲಾಗಿತ್ತದೆಂದು ಅನೇಕರು ಹೇಳಿರುವುದು ಇತ್ಸಿಂಗ್‌ ಹೇಳಿಕೆಗೆ ಕಾರಣವಿರಬಹುದೇ? ಆದರೆ ಕಾಗದ ಮತ್ತು ತಾಳೆಗರಿಯ ಮೇಲೆ ಬರೆದ ಗ್ರಂಥಗಳು ಆ ಕಾಲಕ್ಕೆ ಇದ್ದವು. ಹಾಗಾದರೆ ಇವು ಯಾವ ಭಾಷೆಯವು? ಭಾರತೀಯ ವಿವಿಧ ಭಾಷೆಗಳ ಗ್ರಂಥಗಳೇ ಇವು ಎಂಬುದರಲ್ಲಿ ಅನುಮಾನವಿಲ್ಲ. ಇವೂ ಸಹ ಒಂದು ಕಾಲದಲ್ಲಿ ಕಂಠಸ್ಥವಾಗಿದ್ದು, ಆ ನಂತರ ಬರವಣಿಗೆಗೆ ಬಂದಂತಹವು. ಆದುದರಿಂದ ನಮ್ಮ ಜನಪದ ಕಲೆ ಮತ್ತು ಸಂಸ್ಕೃತಿಗಳನ್ನು ಮತ್ತು ಅವುಗಳ ಮೂಲವನ್ನು ಆರ್ಯ ಸಂಸ್ಕೃತಿಯಲ್ಲಿ ಹುಡುಕುವುದು ಸರಿಯಲ್ಲ.

ಆರ್ಯರು ಬಂದು ರಾಜಾಸ್ಥಾನಗಳಲ್ಲಿ ತಮ್ಮ ಸ್ಥಾನಮಾನಗಳನ್ನು ಭದ್ರಮಾಡಿಕೊಂಡ ಮೇಲೂ ಭಾರತೀಯ ಮೂಲ ಜನರ ರೀತಿನೀತಿಗಳು. ಕಲೆಗಳು ರಾಜರ ಆಸ್ಥಾನದಲ್ಲಿ ಮಾನ್ಯತೆ ಪಡೆದಿದ್ದವು. ಇಂಡಿಯಾದ ರಾಜರುಗಳ ಆಸ್ಥಾನದಲ್ಲಿ ಕವಿಗಳೂ, ಜ್ಯೋತಿಷ್ಯರೂ, ತತ್ವಜ್ಞಾನಿಗಳು, ಭವಿಷ್ಯಕಾರರು. ಕಾಗೆ ಶಕುನ ಮುಂತಾದ ಶಕುನಗಳನ್ನು ಹೇಳುವವರು ಇದ್ದಾರೆ. ಅದ್ಭುತವಾದ ದೊಂಬರಾಟ, ಕಣ್ಕಟ್ಟು ಮುಂತಾದವುಗಳನ್ನು ಮಾಡುವ ಜನರಿದ್ದಾರೆ ಎಂದು “ಕ್ರಿ.ಶ. ೭ನೆಯ ಶತಮಾನದ ಅಬುಜೈದ್‌ ಹಸನ್‌ ಎಂಬ ಪ್ರವಾಸಿ ಹೇಳಿದ್ದಾನೆ. “ಆಕೆ ತಲೆಗೆ ಚಿನ್ನದ ಕಿರೀಟ ಹಾಕಿದ್ದಳು. ಕೊರಳಿಗೆ ಮುತ್ತು ಮಾಣಿಕ್ಯದ ಸರಗಳನ್ನು ಹಾಕಿದ್ದಳು. ಕೈ ಬೆರಳುಗಳಿಗೆ ವಜ್ರದ ಉಂಗುರಗಳನ್ನು ಧರಿಸಿದ್ದಳು.” ಸಹಗಮನ ಮಾಡಲು ಹೊರಟ ಭಾರತೀಯ ಹೆಣ್ಣೊಬ್ಬಳ ಚಿತ್ರ ನಮ್ಮ ಯಕ್ಷಗಾನ ಪಾತ್ರದಂತಿದೆ. ಕ್ರಿ.ಶ. ಆರನೆಯ ಶತಮಾನದಲ್ಲಿ ಬಂದುಹೋದ ಡಿಯೋಡರಸ್‌ ಸೆಕ್ಯುಲಸ್‌ ಎಂಬ ಪ್ರವಾಸಿ ಹೀಗೆ ವಿವರಿಸಿದ್ದಾನೆ. ಈ ರೀತಿಯ ಜನಗಳೇ ಮುಂದೆ ದೇವ ದೇವತೆಗಳಾದರು, ತಮ್ಮ ಹಿರಿಯರ ಇಂತಹ ನಡಾವಳಿಯನ್ನು ಸಮಕಾಲೀನ ಜನರಿಗೆ ಮನವರಿಗೆ ಮಾಡಲು ಈ ಘಟನೆಗಳನ್ನು ಮೊದಮೊದಲು ಅಭಿನಯಿಸಿ ಕಡೆಕಡೆಗೆ ಅವು ಪ್ರಸಂಗಗಳೇ ಆಗಿರಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಯಕ್ಷಗಾನಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಪಾಳೀ ಭಾಷೆಯ ದಶರಥ ಜಾತಕವೇ ರಾಮಾಯಣದ ಮೂಲ ಎಂಬ ಅಭಿಪ್ರಾಯವೂ ವಿದ್ವಾಂಸರಲ್ಲದೆ. ಕ್ರಿ. ಪೂ. ೩೦೦ರವರೆಗೆ ಸಂಸ್ಕೃತ ಸಾಹಿತ್ಯದ ಪ್ರಾಚೀನ ಕಾಲವೆಂದು ಹೇಳುತ್ತಾರೆ.

ಯಕ್ಷಗಾನ ಮೊದಲು ಕಾವ್ಯರೂಪದಲ್ಲಿದ್ದು ಆ ನಂತರ ಪ್ರಸಂಗಗಳಾಗಿ ಅಭಿನಯವಾಗಿ ಮುಂದೆ ನಾಟಕಗಳ ರೂಪಕ್ಕೆ ತಿರುಗಿರುವ ಸಾಧ್ಯತೆಗಳಿವೆ. ಆದುದರಿಂದ ಯಕ್ಷಗಾನದ ಉಗಮವನ್ನು ಕುರಿತು ಖಚಿತವಾಗಿ ಹೇಳಲಾಗದಿದ್ದರೂ ಸಂಸ್ಕೃತ ನಾಟಕಗಳು ರಾಜಾಸ್ಥಾನವನ್ನು ಆಕ್ರಮಿಸುವವರೆಗೆ ಅಲ್ಲಿ ವಿಜೃಂಭಿಸಿ ಅನಂತರದ ಬೀದಿ ಪಾಲಾದವೆಂದು ಊಹಿಸಲವಕಾಶವಿದೆ. ಆರಂಭದಲ್ಲಿ ಇವೂ ಸಹ ಕಂಠಸ್ಥವಾಗಿದ್ದವು. ಈಗಲೂ ಸಹ ಅನಕ್ಷರಸ್ಥರಾದ ಅನೇಕ ಯಕ್ಷಗಾನ ಭಾಗವತರು ಯಾವುದೇ ಯಕ್ಷಗಾನದ ಹಾಡು, ಸಂಭಾಷಣೆ ಅದೇ ರಾಗ ಮಟ್ಟುಗಳನ್ನು ಕರಾರುವಕ್ಕಾಗಿ ಕಂಠಸ್ಥವಾಗಿ ಕಲಿಸುವುದನ್ನು ಕಾಣಬಹುದು. ಹಸ್ತಪ್ರತಿಗಳಿಗೆ ಸಂಬಂಧಿಸಿದಂತೆಯೂ ಸಹ ೧೫೬೪ ಅಥವಾ ಕೆಲವು ವರ್ಷ ಆಚೀಚೆಯೆಂದರೆ ಆಶ್ಚರ್ಯವೇನಲ್ಲ. ನಮ್ಮ ಶಿಷ್ಟಕಾವ್ಯದ ಅತ್ಯಂತ ಪ್ರಾಚೀನ ಹಸ್ತಪ್ರತಿಯೂ ಪ್ರಾಯಃ ಹದಿಮೂರನೇ ಶತಮಾನದ ನಡುವಿನಿಂದ ಅಪರೂಪವಾಗಿ ಆನಂತರದ ದಿನಗಳಲ್ಲಿ ಹೆಚ್ಚಾಗಿ ದೊರೆಯುತ್ತವೆ. ನೃಪತುಂಗನೊ ಪಂಪನೊ ಬರೆದ ಕಾವ್ಯದ ಮೊದಲ ಪರತಿಯ ಎಷ್ಟೋ ಸಾವಿರದ ನಂತರದ ಪ್ರತಿ ನಮಗೆ ದೊರೆಯುವುದು. ಹಿಂದೆ ಹಸ್ತಪ್ರತಿಗಳು ಸಂರಕ್ಷಣೆಯಾಗುತ್ತಿದ್ದುದು ದೇವಾಲಯಗಳಲ್ಲಿ. ಅಲ್ಲಿ ಇಡುತ್ತಿದ್ದುದು ಧರ್ಮ ಗ್ರಂಥಗಳನ್ನು ಮಾತ್ರ. ಮಿಕ್ಕಂತಹವು ಅಲ್ಲಿ ಇಲ್ಲಿ ಇದ್ದು ಲಯವಾಗುತ್ತಿದ್ದವು. “ಸರಸ್ವತಿ ಭಂಡಾರದಲ್ಲಿ ಬಹುಕಾಲದಿಂದ ಸಂಚಿತ ಮಾಡಿಟ್ಟಿದ್ದ ಪುಸ್ತಕರಾಶಿಯೆಲ್ಲವೂ ಅವನ ಕುದುರೆಗಳಿಗೆ ಹುರುಳಿ ಬೇಯಿಸಲು ಹುರುಳಿ ಒಲೆಯ ಪಾಲಾದವು[2]’ ಹದಿನೆಂಟನೆಯ ಶತಮಾನದ ನಮ್ಮ ಸರಸ್ವತೀ ಭಂಡಾರದ ಹಸ್ತಪ್ರತಿಗಳಿಗೇ ಈ ಗತಿಯಾಗಿರುವಾಗ ಶತಶತಮಾನದಿಂದ ಈ ದೇಶದ ಮೇಲೆ ದಾಳಿ ಮಾಡಿದವರು ಇನ್ನೆಷ್ಟನ್ನು ಸುಟ್ಟಿರಬೇಕೆಂಬುದನ್ನು ಯಾರಾದರೂ ಊಹಿಸಬಹುದು.

ನಮ್ಮ ಜನಪದ ಕಲೆಗಳು ಮತ್ತು ಸಂಸ್ಕೃತಿ ಅವು ಯಕ್ಷಗಾನವಾಗಿರಲಿ, ಮಾರಿ ಕುಣಿತಗವಾಗಿರಲಿ, ಜಾತ್ರೆಯಾಗಿರಲಿ ಕಾಲಕ್ರಮೇಣ ಅವು ಗ್ರಮಾಂತರದವು ನಾಲ್ಕನೆಯ ವರ್ಣದವರವು ಎಂಬ ಭಾವನೆ ಮೂಡಿತು. ಜಾತಿಯ ಅಂತರ ಅತಿಯಾದಂತೆಲ್ಲಾ ಇವುಗಳನ್ನು ರಾಜಾಸ್ಥಾನದಿಂದ, ನಗರಗಳಿಂದ ಆಚೆ ಅಟ್ಟಲಾಯಿತು. ಶಿಷ್ಟರಾದವರು ವಿದ್ಯಾವಂತರು ಅವುಗಳನ್ನು ಪರಿಗಣಿತಸಕ್ಕದ್ದಲ್ಲ ಎಂದೇ ತಿಳಿದರು. ಪ್ರಾಯಃ ಇದರಿಂದಾಗಿ ಎಷ್ಟೋ ಕಾವ್ಯಗಳು, ಪ್ರಸಂಗಗಳು ಕಾಲಗರ್ಭದಲ್ಲಿ ಸೇರಿ ಹೋಗಿರಬೇಕು. ಇತ್ತೀಚಿನವರೆಗೆ ಇಂಗ್ಲಿಷ್‌ ಜರ್ಮನ್‌ ಮುಂತಾದ ಪಾಶ್ಚಿಮಾತ್ಯ ವಿದ್ವಾಂಸರು ಇವುಗಳನ್ನು ಕಂಡು ಅಚ್ಚರಿ ವ್ಯಕ್ತಪಡಿಸಿ ಇವು ಭಾರತೀಯ ಸಂಸ್ಕೃತಿಯ ಮೂಲಸೆಲೆ ಎಂದು ಹೇಳಿದ ಮೇಲೂ ಮೊದಮೊದಲು ಇವುಗಳನ್ನು ಕುರಿತಂತೆ ಕೆಲಸ ಮಾಡಿದ ನಮ್ಮವರು ಒಂದು ರೀತಿಯ ಅಸ್ಪೃಷ್ಯ ಮನೋಭಾವದಿಂದಲೇ ಮಾಡಿದರು. ಈ ಎಲ್ಲಾ ಹಿನ್ನೆಲೆಯಲ್ಲಿ ಕನ್ನಡದಲ್ಲಿಯೂ ಶಿಷ್ಟ ಕಾವ್ಯಗಳಷ್ಟೇ ಪ್ರಾಚೀನ ಯಕ್ಷಗಾನ ಕಾವ್ಯ ಮತ್ತು ಪ್ರಸಂಗಗಳಿದ್ದುವೆಂಬುದರಲ್ಲಿ ಅನುಮಾನವಿಲ್ಲ.

ಭಾರತೀಯ ಸಾಮಾಜಿಕ, ಸಾಂಸ್ಕೃತಿಕ ಇತಿಹಾಸವನ್ನು ಆರ್ಯ ನಾಗರಿಕತೆಯೊಂದಿಗೆ ಬೆರಸಿ ಆ ಕಾಲವನ್ನು ಮಿತಿಯಾಗಿಟ್ಟುಕೊಂಡು ಅಧ್ಯಯನ ಮಾಡುವುದಾಗಲಿ ವಿವೇಚಿಸುವುದಾಗಲಿ ಒಂದು ಅತ್ಯಂತ ಅವೈಜ್ಞಾನಿಕ ಪದ್ಧತಿಯೆನಿಸುತ್ತದೆ. ಮಾನವ ಸಂಸ್ಕೃತಿಯ ವಿಕಾಸದ ಪ್ರಾಚೀನತೆಯೊಂದಿಗೆ ಆರ್ಯ ಆಗಮನದ ಕಾಲವನ್ನು ಹೋಲಿಸಿದರೆ ಅದರ ಅಂತರ ಬಹಳವಾಗಿ ಈ ಮಧ್ಯೆ ಎನೋ ಬಿಟ್ಟುಹೋಗಿದೆ, ಕೊಂಡಿಗಳು ಕಳಚಿ ಹೋಗಿವೆ ಅನ್ನಿಸದಿರದು. ಮಾನವ ವಿಕಾಸದ ಚರಿತ್ರೆಯಂತೂ ಇನ್ನೂ ಹಿಂದೆ ಹೋಗುತ್ತದೆ. ಮಾನವನ ಒಟ್ಟು ಬೆಳವಣಿಗೆಯ ದೃಷ್ಟಿಯಿಂದ ಆರ್ಯರ ಆಗಮನ ಇತ್ತೀಚಿನ ಸಂಗತಿಯೂ ಆಗಿ ಬಿಡುತ್ತದೆ. ಆರ್ಯರು ಭಾರತಕ್ಕೆ ಬಂದು ನಾಲ್ಕರಿಂದ ಐದು ಸಾವಿರ ವರ್ಷಗಳಾಗಿವೆ ಎಂಬುದು ವಿದ್ವಾಂಸರ ಮತ. ಅದಕ್ಕೂ ಹಿಂದೆ ಭಾರತದಲ್ಲಿ ಅತ್ಯಂತ ಉಚ್ಛ್ರಾಯ ಸ್ಥಿತಿಗೇರಿದ್ದ ಗ್ರಾಮ ಸಂಸ್ಕೃತಿಯೊಂದು ಆಗಿಹೋಗಿತ್ತು ಎಂದು ಹರಪ್ಪ ಮತ್ತು ಮಹೆಂಜದಾರೋ ಸಂಶೋಧನೆಗಳು ಹೇಳುತ್ತವೆ. ಆಗಿನ ಸಂಸ್ಕೃತಿಯ ಪ್ರಧಾನ ಕಸುಬು ವ್ಯವಸಾಯ ಮತ್ತು ಪಶುಪಾಲನೆಯಾಗಿತ್ತು. ಗಾರೆ ಮತ್ತು ಇಟ್ಟಿಗೆಗಳಿಂದ ಕಟ್ಟಿದ ಮನೆಗಳು, ಸ್ನಾನಗೃಹಗಳು ಇತ್ಯಾದಿಗಳು ಆ ಸಂಸ್ಕೃತಿಗಳ ಉತ್ತುಂಗತೆಯ ಪ್ರತೀಕವಾಗಿವೆ. ಆದರೆ ಆ ಸಂಸ್ಕೃತಿಯ ಕಲೆ ಮತ್ತು ಸಾಹಿತ್ಯಗಳ ಬಗೆಗೆ ಬೆಳಕು ಚೆಲ್ಲುವಂತಹ ಸಂಶೋಧನೆಗಳು ಆಗಬೇಕಾಗಿದೆ. ಆದರೂ ರೇಖೆರೇಖೆಯಾಗಿ ದೊರೆಯುವ ಸಾಮಗ್ರಿ ಮತ್ತು ದೇವರು ದಿಂಡಿರುಗಳು ಆಧಾರದಿಂದ ಹೇಳಬಹುದಾದರೆ ಅದೊಂದು ಸಾಂಸ್ಕೃತಿಕ ಪರಿಪೂರ್ಣ ಬದುಕು ಎಂದೇ ಹೇಳಬೇಕು.

ಕ್ರಿ. ಪೂ. ೩೦೦೦ದ ಹೊತ್ತಿಗೆ ಭಾರತ ಮತ್ತು ಏಷ್ಯಾದ ಅನೇಕ ದೇಶಗಳಲ್ಲಿ ಶೈವಧರ್ಮ ಪ್ರಬಲವಾಗಿದ್ದಿತು. ನಮ್ಮ ಜನಪದ ಕಲೆಗಳಲ್ಲಿ ಬಳಸುವ ಅನೇಕ ವಾದ್ಯಗಳು, ಆಯುಧಗಳು, ಶಿವ ಮತ್ತು ಅವನ ಗಣಗಳು ಬಳಸುವವಾಗಿರುವುದನ್ನು ಕಾಣಬಹುದು. ಏಕೆಂದರೆ ನಮ್ಮ ಜನಪದ ಕಲೆಗಳು ಧಾರ್ಮಿಕ ಆಚಾರಣೆಗಳಾಗಿಯೇ ಮೂಡಿಬಂದಂಥವು. ಹಬ್ಬ ಹುಣ್ಣಿಮೆಗಳಲ್ಲಿ ಆಯಾ ದೇವರ ಉತ್ಸವ ಸಮಯದಲ್ಲಿ ಆಚರಣೆಗೆ ಬಂದವು. ಯಕ್ಷಗಾನವನ್ನು ಕೂಡ ವರ್ಷಕ್ಕೊಂದಾವರ್ತಿ ಸಂಬಂಧಪಟ್ಟ ದೇವರ ಹಬ್ಬದ ದಿವಸ ಪ್ರದರ್ಶಿಸುವ ಪದ್ಧತಿಯುಂಟು. ಆದುದರಿಂದ ಮೊದಲಿಗೆ ಯಕ್ಷಗಾನಗಳು ದೇವದೇವತೆಯರ ಮಹತ್ವವನ್ನು ಎತ್ತಿಹಿಡಿಯುವ, ಜನರಿಗೆ ನಿತಿ ಬೋಧನೆ ಮಾಡುವ ಮಾಧ್ಯಮವಾಗಿ ರೂಪು ತಳೆದು ಕಾಲಾನಂತರ ಹೊರ ಪ್ರಭಾವದಿಂದಾಗಿ ಅವು ಕಲಾಮಾಧ್ಯಮವೂ ಆದವೆಂಬುದರಲ್ಲಿ ಅನುಮಾನವಿಲ್ಲ.

ಮಹಾಕಾವ್ಯಗಳ ಯುಗದ ನಂತರ ಸಂಸ್ಕೃತದಲ್ಲಿ ಅವುಗಳ ಉಪಾಖ್ಯಾನಗಳನ್ನು ಆಧರಿಸಿದ ನಾಟಕಗಳು ಹುಟ್ಟಿಕೊಂಡವು. ಪ್ರಾಯಃ ಈ ನಾಟಕಗಳಿಗೆ ಭಾರತೀಯ ಮೂಲ ಕಲೆಯಾದ ಯಕ್ಷಗಾನ ಅಥವಾ ಅಂತಹ ಒಂದು ಧಾರ್ಮಿಕ ಪ್ರಸಂಗವೇ ಮೂಲ ಪ್ರೇರಣೆ ಮತ್ತು ಸ್ಫೂರ್ತಿಯಾಗಿರುವಂತೆ ತೋರುತ್ತದೆ. ಹೇಗೆ ಭಾರತೀಯರು ತಮ್ಮ ದೇವದೇವತೆಗಳ ಮಹತ್ತನ್ನು ಅಭಿನಯಿಸಿ ತೋರುತ್ತಿದ್ದರೋ ಹಾಗೆಯೇ ಆರ್ಯರು ತಾವು ಒಪ್ಪಿದ ರಾಮಾಯಣ, ಮಹಾಭಾರತದ ಉಪಾಖ್ಯಾನಗಳು ಮತ್ತು ಮೂಲಕಥೆಯನ್ನು ಆಧರಿಸಿ ನಾಟಕ ರಚಿಸಿದರು. ರಾಜಾಸ್ಥಾನಗಳಲ್ಲಿ ಇದ್ದ ಜ್ಯೋತಿಷಿಗಳು, ವೈದ್ಯರು, ಹಕ್ಕಿಶಕುನದವರು ಮತ್ತು ನಟರುಗಳನ್ನು ಕುರಿತು ಅನೇಕ ಪ್ರವಾಸಿಗರು ಹೇಳಿದ್ದಾರೆ. ಇವೆಲ್ಲವೂ ಭಾರತೀಯ ಮೂಲ ನಿವಾಸಿಗಳವು. ಇವುಗಳ ಪ್ರಭಾವ ಎಷ್ಟಿತ್ತೆಂದರೆ ತಮ್ಮ ವೈದಿಕ ನೀತಿಗೆ ವಿರುದ್ಧವಾಗಿ ಆರ್ಯರು ಇವೆಲ್ಲವನ್ನೂ ಕಲಿತುದಲ್ಲದೆ ನಾಟಕಗಳನ್ನು ರಚಿಸಿಯೇ ರಾಜಾಸ್ಥಾನದಲ್ಲಿ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಬೇಕಾಯಿತು. ಯಾವಾಗ ಸಂಸ್ಕೃತ ಕಾವ್ಯ, ನಾಟಕಗಳು ಮತ್ತು ಸಂಗೀತ ನೃತ್ಯಗಳು ಆಸ್ಥಾನ ಪ್ರವೇಶ ಮಾಡಿದವೋ, ಯಾವಾಗ ಸಂಸ್ಕೃತವು ರಾಜಸ್ಥಾನ ಭಾಷೆಯಾಯಿತೋ ಆಗ ನಮ್ಮ ಮೂಲ ಭಾರತೀಯ ಕಾವ್ಯ, ನಾಟಕ, ಸಂಗೀತ ಆಚರಣೆ, ಭಾಷೆ ಇವೆಲ್ಲವೂ ತನ್ನ ಪ್ರಭು ಮತ್ತು ಆಶ್ರಯದಾತರಾದ ಶ್ರೀ ಸಾಮಾನ್ಯರಲ್ಲಿ ಬಂದು ತಮ್ಮ ಉಳಿವಿನ ಆಶ್ರಯ ಪಡೆಯಬೇಕಾಯಿತು. ಮುಂದೆ ಸಂಸ್ಕೃತ ಮತ್ತು ಆರ್ಯಧರ್ಮ, ಸಂಸ್ಕೃತಿ ಪ್ರಬಲವಾದಂತೆಲ್ಲಾ ಇವು ಹಳ್ಳಿಗಳ ಜನ ಸಾಮಾನ್ಯರ ಕಲೆ ಸಂಸ್ಕೃತಿಯೆನಿಸಿಕೊಂಡವು. ಈ ಕಾರಣದಿಂದಲೇ ನಮ್ಮ ಜನಸಾಮಾನ್ಯರ ಕಲೆಗಳ ಮೂಲವನ್ನು ಆರ್ಯಪೂರ್ವ ಭಾರತೀಯ ಜನಜೀವನದಲ್ಲಿಯೇ ಅರಸಬೇಕು, ಆಗ ಮಾತ್ರ ಅವುಗಳಿಗೆ ನ್ಯಾಯ ದೊರಕಿಸಿದಂತಾಗುತ್ತದೆ.

ಭಾರತದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಒಂದು ಕಾಲದಲ್ಲಿ ಮೂಲದ್ರಾವಿಡವಾಗಿದ್ದು ಭೌಗೋಳಿಕ ಮತ್ತಿರರ ನೈಸರ್ಗಿಕ ಕಾರಣಗಳಿಗಾಗಿ ಮೂಲಭಾಷೆ ಅನೇಕ ಕವಲುಗಳಾಗಿರುವುದು ಕಂಡುಬರುತ್ತದೆ. ಪಾಳಿ, ಪ್ರಾಕೃತಕ್ಕಿಂತ ಹಿಂದೆಯೇ ಮೂಲ ದ್ರಾವಿಡ ಭಾಷೆ ಅತ್ಯಂತ ಉನ್ನತ ಸ್ಥಿತಿಯಲ್ಲಿತ್ತು ಎಂಬ ಅಭಿಪ್ರಾಯವಿದೆ. ಹರಪ್ಪ ಮಹೆಂಜದಾರೋ ಸಂಸ್ಕೃತಿಯ ಭಾಷೆ ದ್ರಾವಿಡ ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಕನ್ನಡಕ್ಕೆ ಸಂಬಂಧಿಸಿದಂತೆ ಕ್ರಿ.ಶ. ನಾಲ್ಕನೆಯ ಶತಮಾನದಿಂದ ಬರವಣಿಗೆಯ ರೂಪ ದೊರೆಯುತ್ತದೆ. ಯಾವುದೇ ಒಂದು ಭಾಷೆ ಬರವಣಿಗೆಯ ಹಂತ ತಲುಪಲು ಸಾವಿರಾರು ವರ್ಷಗಳು ಹಿಡಿಯುತ್ತವೆ. ಜನರ ಆಡು ಮಾತಾಗಿ ರೂಪುಗೊಳ್ಳಲೇ ಅಷ್ಟು ಕಾಲ ಹಿಡಿದರೆ ಅದು ಕಾವ್ಯದ ಭಾಷೆಯಾಗಲು ಮತ್ತೆಷ್ಟೋ ಕಾಲ ಬೇಕಾಗುತ್ತದೆ. ರಾಮಾಯಣ ಮಹಾಭಾರತದಲ್ಲಿಯೇ ಕನ್ನಡನಾಡಿನ ಉಲ್ಲೇಖವನ್ನು ವಿದ್ವಾಂಸರು ಗುರುತಿಸುತ್ತಾರೆ. ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲೊಂದೆನಿಸಿದ ರೋಂನೊಂದಿಗೆ ಕನ್ನಡನಾಡು ವ್ಯಾಪಾರ ನಡೆಸಿದ ಬಗ್ಗೆ ಗ್ರೀಕ್‌ ಭಾಷೆಯಲ್ಲಿ ಕನ್ನಡ ಪದಗಳಿರುವ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಕನ್ನಡ ನಾಡಿನಲ್ಲಿ ಅಶೋಕನ ಶಾಸನಗಳು ದೊರೆತಿವೆ. ಈ ಎಲ್ಲಾ ಕಾರಣಗಳಿಂದ ಜಗತ್ತಿನ ಭಾಷೆಗಳು ಮತ್ತು ಜನಜೀವನ ಕಂಡ ವೈವಿಧ್ಯತೆಯನ್ನು, ಬದಲಾವಣೆಯನ್ನು ಕನ್ನಡ ಜನ ಮತ್ತು ಭಾಷೆಯೂ ಕಂಡಿದೆಯೆಂದು ಹೇಳಲವಕಾಶವಿದೆ.

ಹಲ್ಮಿಡಿಶಾಸನದ ಕಪ್ಪೆ ಅರಭಟ್ಟನ ವರ್ಣನೆಯ ಪದ್ಯದ ಹಿಂದೆ ಅನೇಕಾನೇಕ ಸಾವಿರ ವರ್ಷದ ಬೆಳವಣಿಗೆಯ ಹಂತಿವದೆಯೆಂಬುದನ್ನು ಯಾರಾದರೂ ಒಪ್ಪಲೇಬೇಕು. ಆ ನಂತರ ದೊರೆಯುವ ಕವಿರಾಜಮಾರ್ಗ, ವಡ್ಡಾರಾಧನೆಗಳು ಕನ್ನಡ ಭಾಷೆಯ ಪರಿಪಕವತೆಯನ್ನು ತೋರಿಸುತ್ತವೆ. ಈ ಎರಡೂ ಗ್ರಂಥಗಳು ಎರಡು ಸಾಹಿತ್ಯ ಸಂಪ್ರದಾಯಗಳಿಗೆ ಕವಿರಾಜಮಾರ್ಗ ಶಿಷ್ಟ ಸಾಹಿತ್ಯಕ್ಕೂ, ವಡ್ಡಾರಾಧನೆ ಜನಪದಸಾಹಿತ್ಯಕ್ಕೂ ದೊರೆತಿರುವ ಮೊದಲ ಗ್ರಂಥಗಳೆಂದರೆ ಅತಿಶಯೋಕ್ತಿಯಾಗಲಾರದೆಂದು ಕಾಣುತ್ತದೆ. ಏಕೆಂದರೆ ವಡ್ಡಾರಾಧನೆಯ ಕತೆಗಳು ಜನರ ಬಾಯಲ್ಲಿದ್ದ ಕಥೆಗಳಾಗಿದ್ದು ಅವುಗಳಿಗೆ ಧಾರ್ಮಿಕ ಸ್ವರೂಪ ಕೊಟ್ಟಿರುವಂತೆ ಕಾಣಿಸುತ್ತದೆ. ಆ ಕತೆಗಳನ್ನು ಹೋಲುವ ಅನೇಕಾನೇಕ ಕಥೆಗಳು ಜನಪದ ಕಥಾಲೋಕದಲ್ಲಿ ಇಂದಿಗೂ ದೊರೆಯುತ್ತವೆ. ಮುಂದೆ ಬಂದ ಪಂಚತಂತ್ರ, ಭೇತಾಳವಿಂಶತಿ ಕಥಾಸರಿತ್ಸಾಗರ ಈ ಎಲ್ಲವೂ ಜನಪದ ಮೂಲದಿಂದ ಬಂದವೆಂಬುದಕ್ಕೆ ತಮ್ಮ ಜನಪದ ಸೊಗಡನ್ನೂ ಮಣ್ಣಿನ ವಾಸನೆಯನ್ನೂ ತೋರಿಸುತ್ತವೆ. ಪ್ರಾಣಿಗಳು ಕಥೆಯ ನಾಯಕ ಅಥವಾ ಮುಖ್ಯ ಪಾತ್ರಗಳಾಗಿರುವುದು ಹರಪ್ಪ ಸಂಸ್ಕೃತಿಯ ಪ್ರಭಾವ ಎಂಬ ಅಭಿಪ್ರಾಯವಿದೆ. ಭಾರತೀಯ ಪರಂಪರೆಯಲ್ಲಿ ಬೆಳೆದು ಬಂದಿದ್ದ ಇಂತಹ ಕಥೆ ಮತ್ತು ಘಟನೆಗಳನ್ನು ಆರ್ಯರು ತಮಗನುಕೂಲವಾಗಿ ಬಳಸಿಕೊಂಡರು. ಆದಿಯಿಂದ ಇಲ್ಲಿಯವರೆಗೆ ಯಾವುದೇ ಕನ್ನಡ ಕಾವ್ಯವನ್ನು ನೋಡಿದರೂ ಅವು ಜನಜೀವನದಿಂದ ಅಪಾರವಾಗಿ ಸ್ಫೂರ್ತಿ ಪಡೆದಿರುವುದನ್ನು ಕಾಣುತ್ತೇವೆ.

ಯಕ್ಷಗಾನ ಎಂದರೇನು? ಅದು ನಾಟಕವೆ? ಸಂಗೀತವೇ? ಕಾವ್ಯವೆ ಈ ಹೆಸರು ಯಾಕಾಗಿ ಏತರಿಂದ ಬಂತು? ಈ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು ಸುಲಭವಲ್ಲ. ಹರನ ಮಹಿಮೆಯಧರೆಗೆ ಸಾರಲು ಯಕ್ಷಗಾನದ ಮಾಡಿದ್ದೇನೆ, ಸುಲಭವಾಗಿರಲು ಯಕ್ಷಗಾನದೊಳು ಪೇಳಿದೆ, ಹರಿಯ ವರಭಕ್ತನ ಕತೆಯಿದನು ಯಕ್ಷಗಾನದಿ ಪೇಳುವೆ ಎನ್ನುವ ಮಾತುಗಳು ಸಾಮಾನ್ಯವಾಗಿ ನಮ್ಮಲ್ಲಿ ಉಪಲಬ್ಧವಿರುವ ಎಲ್ಲಾ ಹಸ್ತ ಪ್ರತಿಗಳಲ್ಲಿಯೂ ದೊರೆಯುತ್ತವೆ. ಯಕ್ಷಗಾನ ಪ್ರಸಂಗಗಳು ಸಾಮಾನ್ಯವಾಗಿ ಶಿವಕಥೆ, ರಾಮಾಯಣ, ಮಹಾಭಾರತ ಅಥವಾ ಯಾವುದೋ ಪ್ರಸಂಗವನ್ನು ಕುರಿತಾಗಿರುತ್ತವೆ. ಕಾವ್ಯ ಎಲ್ಲರಿಗೂ ಅರ್ಥವಾಗುವುದಿಲ್ಲ. ಆದುದರಿಂದ ಅದನ್ನು ಯಕ್ಷಗಾನದಲ್ಲಿ ಸುಲಭ ಶೈಲಿಯಲ್ಲಿ ಹೇಳುತ್ತೇನೆ ಎಂದು ಇದರ ಅರ್ಥವೆ? ಬತ್ತೀಸ ರಾಗದಲ್ಲಿ ಯಕ್ಷಗಾನವ ಮಾಡಿದ್ದೇನೆ ಎಂದು ಮತ್ತೊಬ್ಬ ಕವಿ ಹೇಳಿದ್ದಾನೆ. ಅಂದರೆ ಇದು ಸಂಗೀತವೆ? ಯಕ್ಷಗಾನ ಮೊದಲು ಕಾವ್ಯವಾಗಿ ಆ ನಂತರ ಪ್ರಸಂಗವೋ, ನಾಟಕವೋ ಆಗಿರುವ ಸಾಧ್ಯತೆಯಿದೆ. ಏಕೆಂದರೆ ಈಗಲೂ ಯಕ್ಷಗಾನ ನಳಚಿತ್ರೆ, ಶನಿಮಹಾತ್ಮೆ, ದೇವಿಮಹಾತ್ಮೆ ಮುಂತಾದವನ್ನು ರಾತ್ರಿಯಿಡೀ ಕುಳಿತು ಓದುವ ಕೇಳುವ ಸಂಪ್ರದಾಯ ಉಳಿದುಕೊಂಡು ಬಂದಿದೆ. ಇಡೀ ಕಥೆಗಳನ್ನು ಪ್ರಸಂಗವಾಗಿ ಅಭಿನಯಿಸುವುದೂ ಉಂಟು. ಈ ಹಿನ್ನೆಲೆಯಲ್ಲಿ ಸಂಗೀತ ಮತ್ತು ಅಭಿನಯಗಳು ಮೇಳವಿಸಿದ ಒಂದು ಪ್ರದರ್ಶನ ಯಕ್ಷಗಾನವೆಂದು ಹೇಳಬಹುದಾಗಿದೆ. ಯಕ್ಷಗಾನದ ಮೂಲ ಯಾವುದು ಎಂಬುದು ಸಹ ಒಂದು ಸಮಸ್ಯೆಯೇ ಆಗಿದೆ. ಈಗಲೂ ಗ್ರಾಮಾಂತರದ ಯಾವುದೇ ಆಧುನಿಕ ಪ್ರಭಾವಕ್ಕೂ ಒಳಗಾಗದ ಯಕ್ಷಗಾನವೊಂದನ್ನು ನೋಡಿದಾಗ ಇದು ಸೂತ್ರದ ಗೊಂಬೆಯಾಟದಿಂದ ಬಂದಿರಬೇಕು ಅನ್ನಿಸದಿರದು. ಪ್ರಾಯಃ ಮೊದಲು ಓದುವ ರೂಪದಲ್ಲಿದ್ದು, ಅನಂತರ ಗೊಂಬೆಯಾಟವಾಗಿ ಕಡೆಯಲ್ಲಿ ಅಭಿನಯದೊಂದಿಗೆ ಮನುಷ್ಯರನ್ನು ತಲುಪಿರಬೇಕು.

ಸಾಮಾನ್ಯವಾಗಿ ನಮಗೆ ಪ್ರಿಯವಾದುದನ್ನು ಹಲವಾರು ರೂಪದಲ್ಲಿ ಉಳಿಸಿಕೊಳ್ಳಲು ಮತ್ತು ಬೆಳೆಸಲು ಪ್ರಯತ್ನಿಸುತ್ತೇವೆ. ಅದರಲ್ಲೂ ಅದು ಧಾರ್ಮಿಕವಾದುದಾದರೆ ಇಡೀ ಸಮೂಹವೇ ಅದನ್ನು ಉಳಿಸಲು ಪ್ರಯತ್ನಿಸುತ್ತದೆ. ಮನುಷ್ಯನ ಪ್ರವೃತ್ತಿಯೇ ಯಕ್ಷಗಾನಕ್ಕೂ ಮೂಲವಾಗಿದ್ದಿರಬೇಕು. ಅವರವರ ದೇವಾನುದೇವತೆಗಳ ಮಹತ್ವವನ್ನು ಪ್ರಸಾರ ಮಾಡಲು ಇದು ಹುಟ್ಟಿಕೊಂಡಿರಬೇಕು. ನಮ್ಮ ರಾಜಮಹಾರಾಜರ ಆಸ್ಥಾನಗಳಲ್ಲಿ ನಟ, ನಟಿ, ನರ್ತಕಿಯರು ಇರುತ್ತಿದ್ದರು. ದೇವಲೋಕದ ರಾಜ ಅಪೇಕ್ಷಿಸಿದಾಗ ಅವರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದ ಕಲ್ಪನೆಯಲ್ಲಿ ಇವರನ್ನು ಯಕ್ಷ, ಕಿನ್ನರ, ಕಿಂಪುರಷ ಇತ್ಯಾದಿ ಕರೆದರು. ದೇವೇಂದ್ರನ ಆಸ್ಥಾನದಲ್ಲಿ ರಂಬೆ, ಊರ್ವಶಿ, ತಿಲೋತ್ತಮೆಯರೆ ಇದ್ದರು. ನಮ್ಮ ದೇವಾಲಯಗಳ ಪೂಜಾ ವಿಧಾನದಲ್ಲಿ ಅಂಗಭೋಗ ರಂಗಭೋಗಗಳಿದ್ದವು. ಇವುಗಳಿಗೆಲ್ಲ ಬೇರೆ ಬೇರೆ ಜನರೆ ಇರುತ್ತಿದ್ದರು. ಒಟ್ಟಿನಲ್ಲಿ ಅಲೆಗಳನ್ನು ಅದು ಯಾವುದೇ ಆಗಿರಲಿ ಅದೇ ಕಸುಬಾಗಿ ಉಳ್ಳ ಜನರಿದ್ದರೆಂಬುದಂತೂ ಸತ್ಯ. ಈಗಲೂ ದೊಂಬಿದಾಸರು, ಗೊಂಬೆರಾಮರು, ವೇಷಗಾರರು ಇವರೆಲ್ಲಾ ಆಯಾ ಕಲೆಯನ್ನೇ ವೃತ್ತಿಯಾಗಿ ಉಳ್ಳವರು. ಇವರೆಲ್ಲ ಆಯಾ ಕಲೆಗಳನ್ನು ಈಗಲೂ ಕಂಠಸ್ತವಾಗಿಟ್ಟುಕೊಂಡು ಗಂಟೆ ಗಟ್ಟಲೆ ಪ್ರದರ್ಶನ ಕೊಡುವುದನ್ನು ಕಾಣುತ್ತೇವೆ. ಆದುದರಿಂದ ಯಕ್ಷಗಾನವಾಗಲಿ ಅಥವಾ ಮತ್ತಾವುದೇ ಜನಪದ ಕಲೆಯಾಗಲಿ ಜನ ಸಮೂಹದ ಮದ್ಯದಿಂದಲೇ ಹುಟ್ಟಿ ಬಂದದ್ದಾಗಿದ್ದು ಅದನ್ನು ಕಸುಬಾಗಿದ್ದ ಜನಾಂಗವೇ ಇದ್ದಿರಬೇಕು.

ಯಕ್ಷಗಾನ ಇಂದು ಒಂದು ಜನಪದ ಕಲೆ. ಇದೊಂದು ಗ್ರಾಮಾಂತರ ನಾಟಕ ರೂಪವೂ ಹೌದು. ಈ ಹಿಂದೆಯೇ ಚರ್ಚಿಸಿದಂತೆ ಯಕ್ಷಗಾನ ಧಾರ್ಮಿಕ ಆಚರಣೆಯ ಮೂಲದಿಂದಲೂ ಬಂದಿರಬೇಕೆಂಬುದಕ್ಕೆ ಅನೇಕ ಉದಾಹರಣೆಗಳಿವೆ. ಈಗಲೂ ಹಬ್ಬ ಮತ್ತು ಧಾರ್ಮಿಕ ಆಚರಣೆಯ ದಿನಗಳಲ್ಲಿ ಯಕ್ಷಗಾನ ಆಡಿಸುವ ಪದ್ಧತಿಯುಂಟು. ಕನ್ನಡದಲ್ಲಿ ಬೀದಿನಾಟಕ, ಯಕ್ಷಗಾನ ಇತ್ಯಾದಿಯಾಗಿ ಇದನ್ನು ಕರೆಯುತ್ತಾರೆ. ಯಕ್ಷಗಾನ ಪ್ರಸಂಗದ ನೂರಾರು ಹಸ್ತಪ್ರತಿಗಳು ದೊರೆಯುತ್ತವೆ. ಇನ್ನು ಅನಕ್ಷರಸ್ಥ ಭಾಗವತರ ಕಂಠದಲ್ಲಿನ ಪ್ರತಿಗಳು ಎಷ್ಟಿವೆಯೋ? ಇದರ ಚರಿತ್ರೆಯನ್ನು ಗಮನಿಸಿದರೆ ಒಂದು ಕಾಲಕ್ಕೆ ಅತ್ಯಂತ ವೈಭವದ ಸ್ಥಿತಿಯಲ್ಲಿದ್ದಿತೆಂದು ಹೇಳಲವಕಾಶವಿದೆ. ಕೆಲವೇ ವರ್ಷಗಳ ಹಿಂದೆ ಯಕ್ಷಗಾನ ಇರುವುದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಾತ್ರ ಎಂದು ನಂಬಲಾಗಿತ್ತು. ಆದರೀಗ ಅದು ಕರ್ನಾಟಕದ ಎಲ್ಲಾ ಭಾಗಗಳಲ್ಲಿಯೂ ಇದ್ದುದನ್ನು ಇರುವುದನ್ನು ಕಾಣುತ್ತೇವೆ. ಒಂದು ಯಕ್ಷಗಾನ ನೋಡಿದ ಕೂಡಲೇ ಇಂತಹ ಆಟವನ್ನು ನಮ್ಮೂರ ಹಬ್ಬದ ದಿನ ಬಹಳ ಅದ್ದೂರಿಯಾಗಿ ಆಡುತ್ತಿದ್ದರೂ ನಾನು ಚಿಕ್ಕವನಿದ್ದಾಗ ನೋಡಿದ್ದೆ ಎಂದು ಹೇಳುವ ಹಿರಿಯರನ್ನು ಕಾಣಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಯಕ್ಷಗಾನ ವಿದ್ಯಾವಂತರ ಕೈಗೆ ಬಂದು ಒಂದು ರೀತಿಯ ಶಿಷ್ಟಕಲೆಯೇ ಆಗಿಬಿಟ್ಟಿದೆ. ಪದವೀಧರ ಹೆಂಗಸರ ಮತ್ತು ಗಂಡಸರ ಮೇಳಗಳಿವೆ. ’ ಇದು ಡಾ. ಕೆ. ಶಿವರಾಮ ಕಾರಂತರು ಯಕ್ಷಗಾನವನ್ನು ಕೈಗೆತ್ತಿಕೊಂಡು ದೇಶ ವಿದೇಶಗಳಲ್ಲಿ ಮೆರೆಸಿದ ಕೀತಿರ್ಯ ಫಲ. ಐವತ್ತು ವರ್ಷಗಳ ಹಿಂದೆ ಕರಾವಳಿಯಲ್ಲಿ ಸಹ ಯಕಷಗಾನ ಕೇವಲ ಹಿಂದುಳಿದವರ ಮತ್ತು ಅವಿದ್ಯಾವಂತರ ಕಲೆಯೇ ಆಗಿದ್ದಿತೆಂಬುದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ಈ ಕರಾವಳಿಯಲ್ಲಷ್ಟೇ ಏಕೆ ವಿದ್ಯಾವಂತರು ಈ ಕ್ಷೇತ್ರವನ್ನು ಪ್ರವೇಶ ಮಾಡಿರುವುದರಿಂದ ಬಯಲುಸೀಮೆಯಲ್ಲಿ ಸಹ ಈಗ ಯಕ್ಷಗಾನ ತಂಡಗಳು ತಲೆ ಎತ್ತಿವೆ, ಹೊಸದಾಗಿ ಹುಟ್ಟುತ್ತಿವೆ ಮತ್ತು ದೇಶವಿದೇಶದ ಅನೇಕ ಕಡೆ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರವಾಗಿವೆ. ಆದುದರಿಂದ ಯಕ್ಷಗಾನ ಒಂದು ದ್ರಾವಿಡಕಲೆ. ಅದು ದ್ರಾವಿಡ ಜನಾಂಗ ಇರುವಲ್ಲೆಲ್ಲಾ ಇತ್ತು ಮತ್ತು ಈಗ ಪುನರುಜ್ಜೀವನಗೊಳ್ಳುತ್ತಿದೆ.

ಪ್ರಾದೇಶಿಕ ಅಂತರಗಳಿಂದಾಗಿ ಯಕ್ಷಗಾನದಲ್ಲಿ ಕೆಲವು ಪ್ರಬೇಧಗಳಾಗಿವೆ. ಮೂಡಲಪಾಯ, ಪಡವಲಪಾಯ, ಘಟ್ಟದಕೋರೆ, ಕೇಳಿಕೆ, ಪ್ರಸಂಗ, ಬೀದಿನಾಟಕ ಮತ್ತೆ ಮೂಡಲಪಾಯದಲ್ಲಿ ದೊಡ್ಡಾಟ, ಪಡವಲಪಾಯದಲ್ಲಿ ಬಡಗತಿಟ್ಟು ಮತ್ತು ತೆಂಕತಿಟ್ಟು, ಇವೆಲ್ಲಾ ಭೌಗೋಳಿಕ ಮತ್ತು ಪ್ರಾದೇಶಿಕ ಅಂತರದಿಂದ ಆದಂಥವು. ಬೇರೆ ಬೇರೆ ಕಾರಣಗಳಿಂದಾಗಿ ಇವುಗಳ ಸಾಹಿತ್ಯ, ಉಡುಪು ಇತ್ಯಾದಿಯಲ್ಲಿ ಕೆಲವು ಬದಲಾವಣೆಗಳೂ ಇರುತ್ತವೆ. ಉತ್ತರ ಕರ್ನಾಟಕದಲ್ಲಿ ಸಣ್ಣಾಟ ಎಂಬ ಹೊಸದೊಂದು ಪ್ರಕಾರ ಕೂಡ ಬಂದುದರಿಂದ ಅಲ್ಲಿನ ಮೂಡಲಪಾಯ ಯಕ್ಷಗಾನ ದೊಡ್ಡಾಟವಾಯಿತು. ಕೇಳಿಕೆ ರಾತ್ರಿಯೆಲ್ಲಾ ಕುಳಿತು ಓದುತ್ತಿದ್ದ ಯಕ್ಷಗಾನ ಅಭಿನಯವಾಗಿ ರಂಗದ ಮೇಲೆ ಬಂದಾಗಲೂ ಉಳಿಸಿಕೊಂಡ ಹೆಸರು. ಸಾಮಾನ್ಯವಾಗಿ ಹಳ್ಳಿಗಳ ದೇವಾಲಯ ಇಲ್ಲವೇ ಮಾರಿಗುಡಿಯ ಮುಂದೆ ಆಡುವುದರಿಂದ ಬೀದಿನಾಟಕಗಳಾದವು. ಕಂಪೆನಿ ನಾಟಕಗಳು ಜಾರಿಗೆ ಬಂದನಂತರ ಈ ಹೆಸರು ಯಕ್ಷಗಾನಗಳಿಗೆ ಬಂದಿದ್ದಿರಲೂಬೇಕು. ಇನ್ನು ಆ ಕಡೆ ಕರಾವಳಿ, ಈ ಕಡೆ ಬಯಲು ನಾಡನ್ನು ಪ್ರತ್ಯೇಕಿಸುವ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿರುವ ಯಕ್ಷಗಾನ ಎರಡೂ ಕಡೆಯ ಪ್ರಭಾವ ಪಡೆದುಕೊಂಡು ತನ್ನ ವೈಯಕ್ತಿಕತೆ ಮತ್ತು ವೈಶಿಷ್ಟ್ಯವನ್ನು ಉಳಿಸಿಕೊಂಡು ಘಟ್ಟದಕೋರೆಯಾಗಿದೆಯೆಂದು ಹೇಳಬಹುದು. ಒಟ್ಟಿನಲ್ಲಿ ಯಕ್ಷಗಾನ ನಮ್ಮ ನಾಡಿನ ಅತ್ಯಂತ ಪ್ರಾಚೀನವಾದ ಒಂದು ಜನಪದ ಕಲೆ. ಭಾರತೀಯ ಜನರ ಧಾರ್ಮಿಕ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದದು ಎಂದು ನೀಃ ಸಂಶಯವಾಗಿ ಹೇಳಲವಕಾಶವಿದೆ.

ಯಕ್ಷಗಾನದ ಪ್ರಾಚೀನತೆಯನ್ನು ಕುರಿತಂತೆ ವಿದ್ವಾಂಸರು ಸ್ವಲ್ಪಮಟ್ಟಿನ ಸಂಶೋಧನೆ ನಡೆಸಿದ್ದಾರೆ. ಕೆಲವರು ಇದು ಹದಿನಾಲ್ಕು ಹದಿನೈದನೆಯ ಶತಮಾನದ್ದೆಂದೂ ಕೆಲವರು ಇದು ಹದಿನೇಳನೆಯ ಶತಮಾನದಿಂದೀಚಿನದೆಂದೂ ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಅವರೆಲ್ಲಾ ಕೊಡುವ ಕಾರಣಗಳು ಇವುಗಳ ಉಲ್ಲೇಖ ಪ್ರಾಚೀನ ಕಾವ್ಯ ಮತ್ತು ನಾಟಕಗಳಲ್ಲಿ ಬರುವುದಿಲ್ಲ, ಶಾಸನಗಳಲ್ಲಿ ಉಲ್ಲೇಖವಿಲ್ಲ, ಹಸ್ತಪ್ರತಿಗಳು ದೊರೆತಿಲ್ಲ ಇತ್ಯಾದಿ. ಯಕ್ಷಗಾನ ಒಂದು ಜನಪದ ಸಂಸ್ಕೃತಿಯ ಧಾರ್ಮಿಕ ಕ್ರಿಯೆಯ ರೂಪ ಎಂದು ಮೊದಲು ತೀರ್ಮಾನಿಸಿಕೊಳ್ಳಬೇಕು. ಆಗ ಇಂಥ ಯಾವುದನ್ನೂ ಶಿಷ್ಟ ಸಾಹಿತ್ಯವಾಗಲಿ, ಸಂಸ್ಕೃತವಾಗಲಿ ಉಲ್ಲೇಖಿಸುವುದಿಲ್ಲ ಮತ್ತು ಅವು ಈ ಜನಸಾಮಾನ್ಯ ಕಲಾರೂಪ ತನಗಿಂತ ಕೀಳಾದುದು ಎಂದು ತಿಳಿಯುತ್ತವೆ. ಈ ಕಾರಣದಿಂದಲೇ ಆರ್ಯಸಂಸ್ಕೃತಿ ತನ್ನ ಹೆಚ್ಚಳವನ್ನು ಸಾಧಿಸಲು ಭಾರತೀಯ ಮೂಲ ಸಂಸ್ಕೃತಿಯನ್ನೇ ತುಳಿಯಿತು. ಆದರೂ ಬಹುಸಂಖ್ಯಾತ ಜನಾಂಗದ ಈ ಮೂಲ ಸಂಸ್ಕೃತಿ ಅಷ್ಟು ಸುಲಭವಾಗಿ ಸಾಯುವಂಥದಲ್ಲ. ಸಂಸ್ಕೃತ ನಾಟಕಗಳಲ್ಲಿ ಬರುವ ಸೂತ್ರದಾರ, ವಿದೂಷಕ, ಸೇವಕ ಪಾತ್ರಗಳು ಸಂಸ್ಕೃತ ಮಾತನಾಡುವಂತಿಲ್ಲ. ಪ್ರಾಕೃತವನ್ನೂ, ಪಾಲಿಯನ್ನೋ, ಕಂಡವನ್ನೊ ಅಂತೂ ಭಾರತೀಯ ಮೂಲ ಭಾಷೆಯೊಂದನ್ನು ಮಾತನಾಡುತ್ತವೆ. ಕಾವ್ಯ ಬರೆದವರಂತೂ ರಾಜಸ್ಥಾನದ ಆಡಂಬರದವರಾಗಿ ಇದ್ದುದರಿಂದ ಆ ಕವಿಗಳು ಜನಸಾಮಾನ್ಯರತ್ತ ತಿರುಗಿಯೂ ನೋಡುತ್ತಿರಲಿಲ್ಲ. ಆದರೂ ಸಂದರ್ಭಾನುಸಾರ ಕಾವ್ಯ ಸಾಮಾನ್ಯವಾದುದ್ದಲ್ಲ. ಅಸಾಮಾನ್ಯವಾದುದೆಂದು ಪ್ರತಿಪಾದಿಸುವಾಗ ನನ್ನ ಕಾವ್ಯವೇನು ಬೀದಿ ನಾಟಕವಲ್ಲ ಎಂದಿರುವುದುಂಟು. ಅಂದ ಮೇಲೆ ಈ ಬೀದಿನಾಟಕ ಶ್ರೀಸಾಮಾನ್ಯರಲ್ಲಿ ಎಷ್ಟು ಜನಪರಿಯವಾಗಿತ್ತೆಂಬುದನ್ನು ತಿಳಿಯಬಹುದಾಗಿದೆ. ಇನ್ನು ಶಾಸನಗಳೆಲ್ಲ ಬಹುತೇಕ ದಾನ ಶಾಸನಗಳಾದುದರಿಂದ ಅವುಗಳಲ್ಲಿ ಉತ್ಪ್ರೇಕ್ಷೆಯೇ ಹೆಚ್ಚು. ವಂಶಾವಳಿ ಶಾಸನಗಳಲ್ಲಂತೂ ಕೇಳುವಂತಿಲ್ಲ. ಆದರೂ ಹತ್ತು ಹನ್ನೆರಡನೆಯ ಶತಮಾನಗಳಷ್ಟು ಹಿಂದೆಯೇ ಇಂತಹ ವೇಷಗಳ, ನಾಟಕಗಳ ಉಲ್ಲೇಖ ಶಾಸನಗಳಲ್ಲಿಯೂ ದೊರೆಯುತ್ತದೆ.

ಹಸ್ತ ಪ್ರತಿಗಳಿಗೆ ಸಂಬಂಧಿಸಿದಂತೆ ಶಿಷ್ಟಕಾವ್ಯಗಳು ಸಹ ಬಹಳ ಹಿಂದಕ್ಕೆ ಹೋಗುವುದಿಲ್ಲ. ಪ್ರಾಯಃ ಈಗ ಲಭ್ಯವಿರುವ ಹಸ್ತಪ್ರತಿಗಳ ಪ್ರತಿಗಳಲ್ಲಿ ಹದಿನಾಲ್ಕನೆಯ ಶತಮಾನದ್ದೆ ಅತ್ಯಂತ ಪ್ರಾಚೀನ ಪ್ರತಿಯೆಂದು ಹೇಳಲಾಗಿದೆ. ಕವಿರಾಜ ಮಾರ್ಗದ್ದೂ ಪಂಪ ಭಾರತದ್ದೊ ಮೂಲ ಹಸ್ತಪ್ರತಿಯಾರಿಗೂ ದೊರೆತಿಲ್ಲ. ಹಸ್ತಪ್ರತಿಗಳ, ಸಂಗ್ರಹಣೆ ಮತ್ತು ಸಂರಕ್ಷಣೆ ಮೇಲ್ಮಟ್ಟದ ಜನರು ಮತ್ತು ದೇವಾಲಯಗಳದ್ದಾಗಿತ್ತು. ಯಕ್ಷಗಾನ ಗ್ರಾಮಾಂತರ ಭಾಗವತರ ಕಂಠದಲ್ಲಿದ್ದು. ಮುಂದೆ ಓದು ಬರಹ ಕಲಿತು ಇಂತಹವರು ಪ್ರಾಯಃ ತಮ್ಮ ಕಂಠದಲ್ಲಿದ್ದುದನ್ನು ಓಲೆಗೆ ಬರೆದಿಟ್ಟರು. ಆದರೆ ಇವು ಉತ್ತಮರ ಸಂಗ್ರಹವನ್ನಾಗಲಿ ದೇವಾಲಯಗಳನ್ನಾಗಲಿ ಸೇರುವಂತಿರಲಿಲ್ಲ. ಗ್ರಾಮಾಂತರದಲ್ಲಿ ಅವುಗಳ ಸಂರಕ್ಷಣೆಯಂತೂ ಸಾಧ್ಯವಿಲ್ಲದ ಮಾತು. ಹೀಗಾಗಿ ಅನೇಕ ಯಕ್ಷಗಾನ ಹಸ್ತಪ್ರತಿಗಳು ನಾಶವಾಗಿ ಹೋಗಿವೆಯೆಂದು ಹೇಳಬೇಕು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಅದೇ

[2] ಶ್ರೀಂಗ್ರಯ್ಯ – ಚಾಮರಾಜ ಒಡೆಯರವರ ಚರಿತ್ರೆ, ಪುಟ ೪