ಬೆಂಗಳೂರು ನಗರವನ್ನು ಒಂದನೆಯ ಕೆಂಪೇಗೌಡ ಮೊಟ್ಟಮೊದಲಿಗೆ ಸ್ಥಾಪಿಸಿದನೆ ಅಥವಾ ಈ ಹಿಂದೆಯೇ ಅಲ್ಲಿ ಒಂದು ಗ್ರಾವೊ ನಗರವೊ ಇದ್ದಿತೆ, ಎಂಬ ಬಗೆಗೆ ಖಚಿತವಾದ ಚಾರಿತ್ರಿಕ ಆಧಾರಗಳು ದೊರೆಯುವುದಿಲ್ಲ ಎಂದೇ ಹೇಳಬೇಕು. ಈ ನಗರ ನಿರ್ಮಾಣದ ಬಗೆಗೆ ಮೂರು ಕಥೆಗಳು ಹುಟ್ಟಿಕೊಂಡಿವೆ. ಮೊದಲನೆಯದು ಒಮ್ಮೆ ಹೊಯ್ಸಳ ಚಕ್ರವರ್ತಿ ಬಲ್ಲಾಳರಾಯ ಬೇಟೆಗಾಗಿ ಈ ಪ್ರದೇಶದ ಕಾಡಿಗೆ ಬಂದ ಮೃಗವೊಂದನ್ನು ಅಟ್ಟಿಸಿಕೊಂಡು ಹೊರಟ ಭರತದಲ್ಲಿ ಅವನು ತನ್ನ ಹಿಂಬಾಲಕರಿಂದ ದೂರವೂ ಬೇರೆಯೂ ಆದ ಈಗಿನ ಬೆಂಗಳೂರು ನಗರ ಪ್ರದೇಶಕ್ಕೆ ಬಂದಾಗ ಮೃಗ ಕಣ್ಣಿಗೆ ಕಾಣದಾಯಿತು. ಆಗ ಬಲ್ಲಾಳರಾಯ ಅಲ್ಲಿಯ ಮರವೊಂದರ ನೆರಳಲ್ಲಿ ವಿಶ್ರಮಿಸಲಾರಂಭಿಸಿದ. ಊಟದ ಸಮಯ ಮೀರಿ ಗಡ್ಡೆ ಗೆಣಸು ದೊರೆಯುವುದೇ ಎಂದು ಆತ ಸುತ್ತಲೂ ನೋಡಿದ. ಅನತಿದೂರದಲ್ಲಿ ಹೊಗೆ ಏಳುವುದು ಕಂಡಿತು. ಹತ್ತಿರ ಹೋಗಿ ನೋಡಿದಾಗ ಅದೊಂದು ಗುಡಿಸಲು. ಅಲ್ಲಿ ಮುದುಕಿಯೊಬ್ಬಳಿದ್ದಳು. ಬಲ್ಲಾಳರಾಯ ಹಸಿವಿನಿಂದಾಗಿ ತಿನ್ನಲು ಏನಾದರೂ ಹಣ್ಣು ಹಂಪಲು, ಗಡ್ಡೆಗೆಣಸು ದೊರೆಯುವುದೇ ಎಂದು ಆತ ಸುತ್ತಲೂ ನೋಡಿದ. ಅನತಿದೂರದಲ್ಲಿ ಹೊಗೆ ಏಳುವುದು ಕಂಡಿತು. ಹತ್ತಿರ ಹೋಗಿ ನೋಡಿದಾಗ ಅದೊಂದು ಗುಡಿಸಲು. ಅಲ್ಲಿ ಮುದುಕಿಯೊಬ್ಬಳಿದ್ದಳು. ಬಲ್ಲಾಳ ರಾಯ ಹಸಿವಿನಿಂದಾಗಿ ತಿನ್ನಲು ಏನಾದರೂ ದೊರೆಯುವುದೇ ಎಂದು ಆ ಮುದುಕಿಯನ್ನು ಕೇಳಿದ. ಆಕೆ ತನ್ನಲ್ಲಿದ್ದ ಬೆಂದ ಹುರುಳಿಕಾಳನ್ನು ಅವನಿಗೆ ನೀಡಿದಳು. ಇದರಿಂದ ಸಂತೃಪ್ತನಾದ ಅವನು ಇದು ಅನ್ನದೊರೆಯುವ ಪುಣ್ಯಭೂಮಿ ಎಂದು ಒಂದು ನಗರ ನಿರ್ಮಾಣ ಮಾಡಿದ. ಅದಕ್ಕೆ ಬೆಂದ ಕಾಳೂರು ಎಂದು ಹೆಸರಿಟ್ಟ. ಅದು ಮುಂದೆ ಬೆಂಗಾಳೂರಾಗಿ ಬೆಂಗಳೂರಾಯಿತು. ಎರಡನೆಯದು? ಮೇಲಿನ ಕಥೆಯನ್ನೇ ಒಂದನೆಯ ಕೆಂಪೇಗೌಡನಿಗೆ ಅನ್ವಯಿಸಿ ಹೇಳುತ್ತಾರೆ. ಬಹುಶಃ ಇದು ನಂಬಬಹುದಾದಂತಹ ಕಥೆ. ಏಕೆಂದರೆ ದೂರದ ದ್ವಾರಸಮುದ್ರದಿಂದ ಬಲ್ಲಾಳರಾಯ ಇಲ್ಲಿಗೆ ಬೇಟೆಗೆ ಬಂದಿದ್ದ ಎನ್ನುವುದು ಹೆಚ್ಚು ಸತ್ಯವಾಗುತ್ತದೆ. ಮೂರನೆಯದು ರಾಜನೊಬ್ಬ ಇಲ್ಲಿಗೆ ಬೇಟೆಗೆ ಎನ್ನುವುದಕ್ಕಿಂತ ಹತ್ತಿರದ ಯಲಹಂಕದಲ್ಲಿದ್ದ ಒಂದನೆಯ ಕೆಂಪೇಗೌಡ ಬೇಟೆಗೆ ಬಂದಿದ್ದ. ಆಗ ಮೊಲವೊಂದು ನಾಯಿಯನ್ನು ಎದುರಿಸಿ ನಿಂತಿತು. ಇದು ಗಂಡುಭೂಮಿ ಎಂದು ಅರಿತ ಅವನು ಇಲ್ಲಿ ಒಂದು ನಗರ ನಿರ್ಮಿಸಿದ. (ಇಂದು ಬೆಂಗಳೂರಿನಲ್ಲಿರುವ ಹೊರಗಿನವರ ಪ್ರಭಾವ ಮತ್ತು ಹಾವಳಿಗಳನ್ನು ನೋಡಿದರೆ ಇದು ಸತ್ಯ ಅನ್ನಿಸುವುದಿಲ್ಲ.) ಈ ಯಾವ ಕಥೆಯೂ ಬೆಂಗಳೂರು ನಿರ್ಮಾಣದ ಬಗೆಗೆ ಚಾರಿತ್ರಿಕ ಆಧಾರಗಳಾಗುವುದಿಲ್ಲ.

ಬೆಂಗಳೂರು ನಗರದ ಸ್ಥಾಪನೆ ಮತ್ತು ಪ್ರಾಚೀನತೆಯ ಬಗೆಗಿನ ಮತ್ತೊಂದು ಹೇಳಿಕೆ ಹೀಗಿದೆ. ಕ್ರಿ.ಶ. ೯೦೦ರ ಪೂರ್ವದಲ್ಲಿ ಬೆಂಗಳೂರು ದಿವ್ಯನಗರವಾಗಿತ್ತೆಂಬುದು. ಈಗಿನ ಬೆಂಗಳೂರಿನ ದಕ್ಷಿಣಕ್ಕೆ ಸುಮಾರು ಎಂಟು ಮೈಲಿ ದೂರದಲ್ಲಿರುವ ಬೇಗೂರು ಗ್ರಾಮದಲ್ಲಿ ದೊರೆತ ಶಾಸನವೊಂದರಿಂದ (ಬೆಂಗಳೂರು ೮೩) ತಿಳಿದುಬಂದಿದೆ. ಇಲ್ಲಿಯ ನಾಗೇಶ್ವರ ದೇವಸ್ಥಾನದ ಮುಂಗಡೆಯ ಹಜಾರದ ಗೋಡೆಯೊಳಗೆ ಒಂದು ಜೈನ ಶಾಸನವಿದೆ. ಈ ಶಾಸನದಲ್ಲಿ ಬೆಂಗಳೂರು ಎಂಬ ಪದವಿದೆ.[1] ಮೇಲಿನ ಹೇಳಿಕೆ ಬೆಂಗಳೂರು ಗಂಗರ ಕಾಲದಿಂದ ಅಸ್ತಿತ್ವದಲ್ಲಿತು ಎಂಬುದನ್ನು ಶ್ರುತಪಡಿಸುತ್ತದೆ. ೧೯೭೫ರಲ್ಲಿ ಕೆಂಗೇರಿಯ ವಿದ್ಯಾಪೀಠದಲ್ಲಿ ನಡೆದ ಬರಹಗಾರರ ಕೂಟದಲ್ಲಿ ನಾನು ಸುಮಾರು ಎರಡು ತಿಂಗಳುಗಳ ಕಾಲ ಇದ್ದೆ. ಆಗ ಅಲ್ಲಿಯ ಪಕ್ಕದ ಜಮೀನೊಂದರ ಒಡೆಯ ಚನ್ನೇಗೌಡ ಎಂಬ ವೃದ್ಧರ ಪರಿಚಯವಾಯಿತು. ಅವರು ತಮ್ಮ ವಂಶದ ಪೂರ್ವಿಕರ ಬಗೆಗೆ ಕಥೆಯೊಂದನ್ನು ಹೇಳಿದರು. ಅದರಂತೆ ಅವರ ಹಿರಿಯರು ಗಂಗರ ಸೇನೆಯಲ್ಲಿದ್ದರಂತೆ. ಆ ಸೈನ್ಯ ಒಮ್ಮೆ ಯುದ್ಧವೊಂದರಲ್ಲಿ ತೊಡಗಿದ್ದಾಗ ಅವರು ಗಾಯಗೊಂಡರು. ಹೀಗೆ ಗಾಯಗೊಂಡ ಗಂಗರ ಬೆಂಗಾವಲು ಪಡೆಯ ಶೂರರುಗಳಿಗಾಗಿ ಒಂದು ಗ್ರಾಮವನ್ನು ನಿರ್ಮಿಸಿದರು. ಅದೇ ಬೆಂಗಾವಲಾಳೂರು. ಮುಂದೆ ಅದು ಜನರ ಬಾಯಲ್ಲಿ ಬೆಂಗಳೂರಾಯಿತು. ಇದಕ್ಕೆ ಪೋಷಕವಾಗಿ ಇದೇ ಹೋಬಳಿಯ ಆಗರ ಗ್ರಾಮದ ಶಾಸನವೊಂದನ್ನು ಗಮನಿಸಬೇಕು. “Judging from the inscription E. C IX Bangalore 70 at this village, it appears to be an old place, and to have been under the rule of the chief of Nagattaraa, a subordinate of the Ganga kingsatyavakya Permadi in the 9th Centrury. Inscriptions were in existence in the 8th century. The artillery practice ground is on the agaram plain’’[2] ಕೆಂಗೇರಿಯ ಹಿರಿಯರೊಬ್ಬರು ಹೇಳಿದ ತಮ್ಮ ಪೂರ್ವಿಕರ ಕಥೆಗೂ ಇದಕ್ಕೂ ಸಂಬಂಧವಿದ್ದಂತೆ ಕಂಡುಬರುತ್ತದೆ. ಅಷ್ಟೇ ಅಲ್ಲ. ವಿವಾದಕ್ಕೊಳಗಾಗಿರುವ ಬೆಂಗಳೂರು ಹೆಸರಿನ ಬಗ್ಗೆಯೂ ಇದು ಬೆಳಕನ್ನು ಚೆಲ್ಲುತ್ತದೆ. ಆದುದರಿಂದ ಬೆಂಗಳೂರು ಗಂಗರ ಬೆಂಗಾವಲುಗಳಾಗಿ ಕಟ್ಟಿದ ಸ್ಥಳವಾಗಿ ಅನಂತರ ಬೆಂಗಳೂರಾಗಿದೆ. ಎಂದು ಊಹಿಸಲವಕಾಶವಿದೆ. ಬೆಂದ ಕಾಳು ಕಥೆಗಿಂತ ‘ಬೆಂಗಾವಲಾಳ್‌’ ಹೆಚ್ಚು ವಾಸ್ತವವಾಗಿ ಕಾಣುತ್ತದೆ. ಇತ್ತೀಚೆಗೆ ಸುಧಾವಾರ ಪತ್ರಿಕೆಯ “ಕೋಟೆಯ ವೆಂಕಟೇಶ್ವರ ದೇವಾಲಯ” ಕುರಿತ ಲೇಖನವೊಂದರಲ್ಲಿ “ವೆಂಕಟೇಶ್ವರನ ಊರು ವೆಂಕಟೂರು, ವೆಂಗಳೂರು, ಬೆಂಗಳೂರಾಗಿರಬಹುದು.” ಬೆಂಗಳೂರು ಎಂಬ ಹೆಸರಿನ ಬಗ್ಗೆ ಇಂತಹ ಅನೇಕ ಊಹೆಗಳನ್ನು ಮಾಡಬಹುದು. ಉದಾಹರಣೆಗೆ ಕೆಂಪುಕಲ್ಲು ಕೆಂಗಲ್‌ ಆದ ಹಾಗೆ ಬೆಣಕಲ್ಲು ಅಥವಾ ಬಿಳಿಯ ಕಲ್ಲು ಬೆಂಗಿಲ್‌ ಆಗಿ ಅನಂತರ ಬೆಂಗಲ್ಲೂರು ಬೆಂಗಳೂರಾಗಿರಬಹುದು. ಮತ್ತೊಂದು. ಇದು ಬಹಳ ಹಿಂದೆ ಜೈನಕ್ಷೇತ್ರವಾಗಿದ್ದಿತೆಂದೂ ಇಲ್ಲಿ ಅನೇಕ ಮುನಿಗಳು ಇದ್ದರೆಂದೂ ಚರಿತ್ರೆಕಾರರು ಹೇಳಿದ್ದಾರೆ. ಜೈನಮುನಿಗಳು ಬೆಂದಕಲ್ಲಿನ ಮೇಲೆ ತಪಸ್ಸು ಮಾಡಿದ ಕಥೆ ನಮಗೆ ದೊರೆಯುತ್ತದೆ. “ಭಟಾರರ್‌ಚರಿಗೆವೋದರನ್ನೆಗಂ ಪಿಂದೆ ಪಾಪ ಕರ್ಮಂಯೋಗಶಿಲೆಯ ಮೇಗುಮುಂ ಕೆಪಗುಮಂ ಬಳಸಿಯುಂ ಪಲವೂ ಪಿರಿಯವುಮಪ್ಪ ತಱಿಯಪುಳ್ಳಿಗಂ ಕಡಿದೊಟ್ಟಿ ಕಿಚ್ಚನಿಕ್ಕೆ ಸುಟ್ಟ ಕಿಚ್ಚಿನ ಬಣ್ಣದಂತಾಗಿ ಶಿಲೆಯ ಮಾಡಿ[3] ಎಂಬಂತಹ ಹೇಳಿಕೆಗಳಿವೆ. ಆದುದರಿಂದ ಬೆಂದಕಲ್ಲೂರು, ಬೆಂಗಳೂರಾಗಿದೆ ಎಂದು ಊಹಿಸಿದರೂ ಬೆಂಗಳೂರಿನಷ್ಟೆ ಸೊಗಸಾಗಿರುತ್ತದೆ. ಆದರೆ ಇವುಗಳಿಗೆ ಕೊನೆಯಲ್ಲಿ? ಬೆಂಗವಲಾಳೂರು ಬೆಂಗಳೂರಾಗಿದೆ ಎಂಬುದು ಹೆಚ್ಚು ವಾಸ್ತವವಾಗಿಯೂ ತರ್ಕಬದ್ಧಾಗಿಯೂ ಕಂಡುಬರುತ್ತದೆ.

ಬೆಂಗಳೂರು ಎಂಬ ಹೆಸರು ಗಂಗರ ಕಾಲದ ಶಾಸನಗಳಲ್ಲಿಯೇ ದೊರೆಯುವುದರಿಂದ ಆ ಹೆಸರಿನ ಒಂದು ಊರು ಈ ಭಾಗದಲ್ಲಿತ್ತೆಂಬುದರಲ್ಲಿ ಯಾವ ಅನುಮಾನವೂ ಕಂಡುಬರುವುದಿಲ್ಲ. ಇದಕ್ಕೆ ಪೋಷಕವಾಗಿ ಮತ್ತೊಂದು ಕಥೆ ಹೀಗೆ ಪ್ರಚಲಿತವಿದೆ. ಯಲಹಂಕದ ಅರಸು ಮನೆತನಕ್ಕೂ ಬೆಂಗಳೂರಿನ ಕೆಲವು ಹಿರಿಯ ಗೌಡರುಗಳ ಮನೆತನಕ್ಕೂ ನೆಂಟಸತಿಕೆಯಿದ್ದಿತು. ಅವರಲ್ಲಿ ಪರಸ್ಪರ ಕೊಳು ಕೊಡುಗೆಗಳು ನಡೆಯುತ್ತಿದ್ದವು. ಒಂದನೆಯ ಕೆಂಪೇಗೌಡನ ತಾಯಿ ಮತ್ತು ಪತ್ನಿ ಬೆಂಗಳೂರಿನವರು. ಈ ಕಾರಣದಿಂದಾಗಿ ಅವನು ಬೆಂಗಳೂರಿಗೆ ಆಗಾಗ ಭೇಟಿ ಕೊಡುತ್ತಿದ್ದುದುಂಟು. ಒಂದನೆಯ ಕೆಂಕೇಗೌಡ ಪ್ರತಿ ಸಲ ವಿಜಯನಗರಕ್ಕೆ ಹೋಗಿ ಬಂದಾಗಲೂ ಅಂತಹ ಒಂದು ನಗರ ನಿರ್ಮಿಸುವ ಆಸೆ ಹೆಚ್ಚುತ್ತಲೇ ಇತ್ತು. ವಿಜಯನಗರದ ಅರಸರ ಅನುಮತಿಯೂ ದೊರೆತಿದ್ದಿತು. ತನ್ನ ತಾಯಿ ಮತ್ತು ಪತ್ನಿಯ ಊರೆಂಬ ಅಕ್ಕರೆ, ಇಲ್ಲಿನ ಪ್ರಕೃತಿ ಮತ್ತು ವಾಯುಗುಣದ ಆಕರ್ಷಣೆ ಇವುಗಳಲ್ಲಿ ಯಾವುದೋ ಅಥವಾ ಎಲ್ಲವುಗಳೋ ಕೆಂಪೇಗೌಡನಿಗೆ ಇಲ್ಲಿ ಒಂದು ಬೃಹತ್‌ ನಗರ ನಿರ್ಮಾಣ ಮಾಡುವ ಸ್ಫೂರ್ತಿಯನ್ನು ನೀಡಿರಬೇಕು.

ಬೆಂಗಳೂರಿನ ಉಪನಗರವಾದ ಯಶವಂತಪುರವದಲ್ಲಿ ಅಗೆತ ಮಾಡಿದಾಗ ರೋಮನ್‌ ಚಕ್ರಾಧಿಪತ್ಯದ ಚಕ್ರವರ್ತಿ ಕ್ಯಾಲಿಗುಲನ ಅಂಕಿತವಿರುವ ಸುವರ್ಣ ನಾಣ್ಯಗಳು ದೊರೆತವೆಂದೂ ಆದ್ದರಿಂದ ಬೆಂಗಳೂರು ೨೦೦೦ ವರ್ಷಗಳ ಹಿಂದೆಯೇ ಸಂಪದ್ಭರಿತವಾದ ನಗರವಾಗಿದ್ದಿರಬೇಕೆಂದು ಸಂಶೋಧಕರು ಸೂಚಿಸಿದ್ದಾರೆ. ಇದರಿಂದ ಬೆಂಗಳೂರು ಒಂದು ಕಾಲಕ್ಕೆ ಮಹಾನಗರವಾಗಿದ್ದಿತೆಂದೂ, ಅನಂತರ ಅದು ಕಾರಣಾಂತರಗಳಿಂದ ನಾಶವಾಗಿದ್ದಿತೆಂದೂ ಚರಿತ್ರಕಾರರ ಅಭಿಪ್ರಾಯವೆಂದಾಗುತ್ತದೆ. ಈ ವಿಷಯವನ್ನು ತಿಳಿದಿದ್ದ ಒಂದನೆಯ ಕೆಂಪೆಗೌಡ ಆ ನಗರವನ್ನು ಪುನನಿರ್ಮಿಸಲು ಮನಸ್ಸು ಮಾಡಿದ. ರೋಮನ್‌ ನಾಣ್ಯಗಳು ದೊರೆತವೆಂಬ ಒಂದೇ ಕಾರಣದಿಂದ ಈ ನಗರದ ಪ್ರಾಚೀನತೆಯನ್ನು ನಿರ್ಧರಿಸಲು ಆಗುವುದಿಲ್ಲ. ಒಂದು ವೇಳೆ ಇದೊಂದು ಮಹಾನಗರವಾಗಿದ್ದು, ಅದು ನಾಶವಾಗಿದ್ದು, ಈ ವಿಷಯ ಕೆಂಪೆಗೌಡನಿಗೆ ಗೊತ್ತಿದ್ದಿದ್ದರೆ ಅವನು ಖಂಡಿತ ಇಲ್ಲಿ ನಗರ ನಿರ್ಮಿಸುತ್ತಿರಲಿಲ್ಲ. ಹಾಳಾದ ಊರನ್ನು ಮತ್ತೆ ನಿರ್ಮಿಸುವುದು ಹಿಂದೂ ಸಂಪ್ರದಾಯಕ್ಕೆ ವಿರುದ್ಧ. ಒಂದು ವೇಳೆ ಕಾರಣಾಂತರದಿಂದ ಅಲ್ಲಿಯೇ ನಗರ ನಿರ್ಮಾಣ ಮಾಡಬೇಕೆಂದರೂ ಪಾಳು ಸ್ಥಳವನ್ನು ಬಿಟ್ಟು ನಿರ್ಮಿಸುತ್ತಾರೆ. ಅಲ್ಲದೆ ರೋಮನ್‌ ನಾಣ್ಯಗಳಷ್ಟೇ ಇಲ್ಲಿ ಒಂದು ಮಹಾಗರವಿತ್ತೆಂಬುದನ್ನು ಪ್ರತಿಪಾದಿಸಲು ಒಳ್ಳೆಯ ಆಧಾರವಾಗುವುದಿಲ್ಲ. ಭಾರತ ಮತ್ತು ರೋಂ ನಡುವೆ ವ್ಯಾಪಾರ ಸಂಬಂಧವಿದ್ದಿತೆಂಬುದು ಗೊತ್ತಿರುವ ವಿಷಯ. ಅಲ್ಲದೆ ಆಗಿನ ನಾಣ್ಯಗಳು ಚಿನ್ನ ಮತ್ತು ಬೆಳ್ಳಿಯವಾದುದರಿಂದ ಜನರು ಅವುಗಳನ್ನು ಹೂಳಿಡುತ್ತಿದ್ದರು. ರೋಂ ನಾಣ್ಯಗಳು ಗಂಗರ ಬೆಂಗಾವಲಾಳುಗಳಿಗೆ ಯಾವುದೋ ಯುದ್ಧ ಸಮಯದಲ್ಲಿಯೋ ಕಾಣಿಕೆಯಾಗಿಯೋ ದೊರೆತು ಅವರು ಅವುಗಳನ್ನು ಹೂಳಿಟ್ಟಿರಬೇಕು. ಅಂತಹ ನಾಣ್ಯಗಳು ದೊರೆತಿರಲೂ ಸಾಧ್ಯ. ಈ ಜಾಗದಲ್ಲಿ ಮಹಾನಗರವೊಂದಿದ್ದ ಬಗೆಗೆ ಅವಶೇಷಗಳು ದೊರೆಯದೆ ಕೇವಲ ನಾಣ್ಯಗಳಿಂದ ತೀರ್ಮಾಣಕ್ಕೆ ಬರಲು ಆಗುವುದಿಲ್ಲ. ಆದುದರಿಂದ ಗಂಗರ ಬೆಂಗಾವಲು ಪಡೆಯ ವೀರರಿಗಾಗಿ ನಿರ್ಮಾಣಗೊಂಡ ಬೆಂಗಳೂರು ಒಂದನೆಯ ಕೆಂಪೇಗೌಡನಿಂದ ನಗರವಾಗಿ ಪರಿತವರ್ತಿವಾಗಿ ಯಲಹಂಕನಾಡಿನ ಮೂರನೆಯ ರಾಜಧಾನಿಯಾಯಿತೆಂದು ಹೇಳಬಹುದು.

ಒಂದನೆಯ ಕೆಂಪೇಗೌಡನನ್ನು ಆನೆಗೊಂದಿಯಲ್ಲಿ ಸೆರೆಯಲ್ಲಿಟ್ಟ ಪ್ರಸಂಗವೊಂದನ್ನು ಚರಿತ್ರಕಾರರು ಉಲ್ಲೇಖಿಸುತ್ತಾರೆ. “One day, on the advice of all powerful Rama Raya. Emperor Sadashiva raya summoned Kempegowda to the imperial court. And, on his arrival at Vijayanagar Rama Raya had him seized and threw him into a prison at Anegundi.[4]” ಈ ಬಂಧನಕ್ಕೆ ಕಾರಣ ಅವನು ಚಲಾವಣೆಗೆ ತಂದಭೈರವ ನಾಣ್ಯಗಳು. ಬೆಂಗಳೂರು ನಗರ ನಿರ್ಮಾಣದ ತರುಣದಲ್ಲಿಯೇ ಯಲಹಂಕ ನಾಡು ಭೀಕರ ಕ್ಷಾಮವನ್ನೆದುರಿಸಬೇಕಾಯಿತೆಂದೂ ಆ ಕ್ಲಿಷ್ಟ ಪರಿಸ್ಥಿತಿಯನ್ನೆದುರಿಸಲು ಸ್ವತಂತ್ರವಾಗಿ ನಾಣ್ಯ ಚಲಾವಣೆ ತರಬೇಕಾಯಿತೆಂದೂ ಇದರಿಂದ ಕುಪಿತಗೊಂಡ ರಾಮರಾಯ ಕೆಂಪೇಗೌಡನನ್ನು ಬಂಧನದಲ್ಲಿರಿಸುವಂತೆ ಪ್ರೇರೇಪಿಸಿದನೆಂದೂ ತಿಳಿದು ಬರುತ್ತದೆ. ಹೀಗೆ ಒಂದನೆಯ ಕೆಂಪೇಗೌಡ ಬಂಧನದಲ್ಲಿದ್ದಾಗ. “Therefore, Yelahanka nadu, along with the newly built fort Bangalore, beame part of Channapattana Priniciplity by an imperial decree.[5]” ಆದರೆ ಈ ಘಟನೆಗೆ ಸಂಬಂಧಿಸಿದಂತೆ ಯಾವ ಆಧಾರಗಳೂ ದೊರೆಯುವುದಿಲ್ಲ. ಒಂದನೆಯ ಕೆಂಪೇಗೌಡ ಬೆಂಗಳೂರನ್ನು ನಿರ್ಮಿಸುವ ಕಾಲಕ್ಕೆ ಮಗ ಇಮ್ಮಡಿ ಕೆಂಪೇಗೌಡ ಆಗಲೇ ವಯಸ್ಸಿಗೆ ಬಂದಿದ್ದ. ಒಂದು ವೇಳೆ ಯಲಹಂಕ ನಾಡನ್ನು ಚನ್ನಪಟ್ಟಣದ ಅಧೀನವಾಗಿ ಮಾಡಿದ್ದರೆ ಈತ ಸುಮ್ಮನಿರುತ್ತದ್ದನೆ? ಎಂಬುದು ಕುತೂಹಲಕಾರಿಯಾದ ವಿಷಯ. ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ, ಕೆಂಪೇಗೌಡ ಚಲಾವಣೆಗೆ ತಂದನೆಂದು ಹೇಳಲಾಗುವ ಭೈರವ ನಾಣ್ಯ ಈವರೆಗೆ ದೊರೆಯದೇ ಇರುವುದು. ಕ್ಯಾಲಿಗುಲನ ಅಂಕಿತವಿರುವ ರೋಮನ್‌ ನಾಣ್ಯಗಳು ಬೆಂಗಳೂರಿನಲ್ಲಿ ದೊರೆಯಬಹುದಾದರೆ ಇತ್ತೀಚೆಗೆ ಜಾರಿಗೆ ತಂದ ಭೈರವನಾಣ್ಯವೇಕೆ ದೊರೆಯುವುದಿಲ್ಲ? ಹೀಗಾಗಿ ಕೆಂಪೇಗೌಡ ಸ್ವತಂತ್ರ ನಾಣ್ಯ ಚಲಾವಣೆಗೆ ಪ್ರಯತ್ನಿಸಿದನೇ? ಅಥವಾ ಚಲಾವಣೆಗೆ ತಂದನೆ ಎಂಬುದು ಭೈರವನಾಣ್ಯವೊಂದು ದೊರೆಯುವವರೆಗೆ ಸಮಸ್ಯೆಯಾಗಿಯೇ ಉಳಿಯಬೇಕಾಗುತ್ತದೆ.

ಭೈರವ ನಾಣ್ಯವನ್ನು ಟಂಕಿಸಿದ್ದಕ್ಕಿಂತ ಬೆಂಗಳೂರು ನಗರ ಮತ್ತು ಕೋಟೆಯ ನಿರ್ಮಾಣ ಒಂದನೆಯ ಕೆಂಪೇಗೌಡ ಮತ್ತು ವಿಜಯನಗರದ ಮಧ್ಯೆ ವಿರಸವನ್ನುಂಟು ಮಾಡಿರುವ ಸಾಧ್ಯತೆ ಕಂಡುಬರುತ್ತವೆ. ಬೆಂಗಳೂರು ನಿರ್ಮಾಣಕ್ಕೆ ಕೇಂದ್ರದಿಂದ ಅನುಮತಿ ದೊರೆತಿದ್ದಿತಾದರೂ, ಇಂತಹ ಭವ್ಯ ನಗರವನ್ನು ಸಾಮಂತನೊಬ್ಬ ನಿರ್ಮಿಸುವನೆಂದು ಅವರಿಗೆ ಅನ್ನಿಸಿರಲಿಲ್ಲ. ಇದರೊಂದಿಗೆ ಚನ್ನಪಟ್ಟಣದ ಜಗದೇವರಾಯನ ಮುಂದಾಳುತನದಲ್ಲಿ ಅನೇಕ ಪಾಳೆಯಗಾರರು ಕೆಂಪೇಗೌಡನ ವಿರುದ್ಧ ರಾಮಾರಾಯನಲ್ಲಿ ದೂರು ಹೇಳಿ ಅವನ ಈ ಕೋಟೆಯ ನಿರ್ಮಾಣ ಸ್ವತಂತ್ರವಾಗುವ ಹುನ್ನಾರರೆಂದರು. ಇದು ಪ್ರಾಯಃ ವಿಜಯನಗರದ ಅರಸರಲ್ಲಿ ಅಸಮಾದಾನವನ್ನುಂಟು ಮಾಡಿರಬೇಕು. ಆಗಿನ ಕಾಲದಲ್ಲಿ ಭೀಕರವಾದ ಕ್ಷಾಮವುಂಟಾಯಿತೆಂಬ ಬಗ್ಗೆಯೂ ಅನುಮಾನವಿದೆ. “There was a a terrible famine in the Deccan in 1475 A. D. It is said to have lasted for two years. Parts of the Vijayanagar Kingdom should have suffered from it as the telugu country, now forming part of the Krishna and Guntur, appears to have been ravaged by it. Howu far it extended into the interior and whether it affected any part of South India proper is not known.[6]” ಮೇಲಿನ ಹೇಳಿಕೆ ಯಲಹಂಕ ನಾಡು ಭೀಕರ ಕ್ಷಾಮಕ್ಕೆ ತುತ್ತಾಗಿರಲಿಲ್ಲವೆಂಬುದನ್ನು ಪ್ರತಿಪಾದಿಸುತ್ತದೆ. ಆದರೆ ಈ ಬಂಧನದ ಘಟನೆಯ ಹಿನ್ನೆಲೆ ಮುನ್ನಲೆಗಳೇನು ಎಂಬ ವಿಚಾರ ಸಮಸ್ಯೆಯಾಗಿಯೇ ಉಳಿಯುತ್ತದೆಯಾದರೂ ವಿಜಯನಗರದ ಆಡಳಿತದ ಮೇಲೆ ಉಂಟಾದ ವೈಪರಿತ್ಯಗಳಲ್ಲಿ ಅದರ ಸಾಮಂತ ರಾಜ್ಯವಾದ ಯಲಹಂಕ ನಾಡಿಗೂ ಅನ್ವಯವಾಗಿ ಈ ರೀತಿಯ ಅಭಿಪ್ರಾಯಗಳು ಹುಟ್ಟಿಕೊಂಡಿರಬೇಕು.

ಬೆಂಗಳೂರು ನಗರ ನಿರ್ಮಾಣಕ್ಕೆ ವಿಜಯನಗರ ಅನುಮತಿ ನೀಡಿದ ಬಗೆಗೂ ಸ್ಪಷ್ಟವಾದ ಆಧಾರಗಳು ದೊರೆಯುವುದಿಲ್ಲ. ವಿಜಯನಗರದ ಪ್ರಸಿದ್ಧ ದೊರೆ ಕೃಷ್ಣದೇವರಾಯ ೧೫೦೯ರಲ್ಲಿ ಪಟ್ಟಕ್ಕೆ ಬಂದ ಆತನು ಆಡಳಿತವನ್ನು ವಹಿಸಿಕೊಂಡ ಕೂಡಲೇ ಉಮ್ಮತ್ತೂರಿನ ಮೇಲೆ ದಂಡೆತ್ತಿ ಬಂದ. ಏಕೆಂದರೆ ಉಮ್ಮತ್ತೂರಿನ ರಾಜರು ಸ್ವತಂತ್ರರಂತೆ ವರ್ತಿಸುತ್ತಿದ್ದರು. ಈ ಭಾಗದ ಮೇಲೆ ತನ್ನ ಹತೋಟಿಯನ್ನು ಮತ್ತೆ ಗಳಿಸಿಕೊಂಡು ಅದರ ಆಡಳಿತವನ್ನು ಯಲಹಂಕನಾಡಿನ ದೊರೆಗಳಿಗೆ ವಹಿಸಿಕೊಟ್ಟ ಉಲ್ಲೇಖವಿದೆ. “Devanahalli 81 Dated in 1425 A. D. refer to the grant of a village in the Shivanasamudram sime of the yelahanka nad, part of the present Bangalore District was in those times and long after known as Shivanasamudra sime[7]” ಅಂದರೆ ಈ ಹೇಳಿಕೆಯಂತೆ ಕೃಷ್ಣದೇವರಾಯನಿಗಿಂತ ಮುಂಚೆಯೇ ಈ ಭಾಗದ ಒಂದು ಹಳ್ಳಿ ಯಲಹಂಕನಾಡ ಪ್ರಭುಗಳಿಗೆ ದೊರೆಯಿತು. ಆದರೆ “Sivanasamudra sime of Yelahanka nad” ಎಂಬ ಮಾತು ಈಗಾಗಲೇ ಅದು ಯಲಹಂಕ ನಾಡಿನ ಒಂದು ಭಾಗವಾಗಿತ್ತೆಂಬುದನ್ನು ಸೂಚಿಸುತ್ತದೆ. ಉಮ್ಮತ್ತೂರಿನ ರಾಜರ ಆಡಳಿತಕ್ಕೆ ಬರುವುದಕ್ಕಿಂತ ಮೊದಲು “A sub – division caused Chikkagangavadi or the lesser gangavadi occupied the valey of the Shimsha, with Honganur Channapattana as its chief town,” ಹೇಳಿಕೆಯೂ ದೊರೆಯುತ್ತದೆ. ಅಂದರೆ ಗಂಗರ ಕಾಲದಿಂದಲೂ ಈ ಭಾಗ ಅಭಿವೃದ್ಧಿ ಹೊಂದಿದ್ದಾಗಿ ತಿಳಿಯುತ್ತದೆ. “In Bangalore 79 dated about 870 A. D. Sathavakya II is mentioned. During his reign the nagattaru chief is said to have fixed sluices to two tanks at Agara (Near Bangalore east) and constructed a third. Bangalore 83 dated about 890 A. D. Ereyappa is referred to as ruling over the Country.[8]” ಇದರಿಂದ ಹೊಯ್ಸಳರು ಮತ್ತು ವಿಜಯನಗರ ಅರಸರ ಕಾಲದಲ್ಲಿ ಬೆಂಗಳೂರು ದಂಡಕಾರಣ್ಯವಾಗಿತ್ತೆಂಬ ವಾದಬಿದ್ದು ಹೋಗುತ್ತದೆ. ಗಂಗರ ಕಾಲದಿಂದಲೂ ಈ ಭಾಗ ಅಭಿವೃದ್ಧಿಯಲ್ಲಿದ್ದ ವಿಷಯ ಸ್ಪಷ್ಟವಾಗುತ್ತದೆಯಷ್ಟೇ ಅಲ್ಲ, ಬೆಂಗಾವಲಾಳೂರು ಎಂಬ ಹೆಸರಿಗೆ ಒತ್ತಾಸೆಯಾಗುತ್ತದೆ. ಈ ಯಾವ ಹೇಳಿಕೆಗಳಲ್ಲಿಯೂ ವಿಜಯನಗರ ನಿರ್ಮಾಣಕ್ಕಾಗಿ ಯಲಹಂಕನಾಡ ದೊರೆಗೆ ಅನುಮತಿ ನೀಡಿದ ಸ್ಪಷ್ಟ ಉದಾಹರಣೆ ದೊರೆಯುವುದಿಲ್ಲ. ಈ ಕಾರಣಗಳಿಂದಾಗಿ ಒಂದನೆಯ ಕೆಂಪೇಗೌಡ ಒಟ್ಟಾರೆ ಒಂದು ನಗರ ನಿರ್ಮಾಣದ ಅನುಮತಿ ಪಡೆದು ಬೆಂಗಳೂರನ್ನು ನಿರ್ಮಿಸಿರಬೇಕು.

ಬೆಂಗಳೂರು ನಗರವನ್ನು ನಿರ್ಮಿಸಿದ ಒಂದನೆಯ ಕೆಂಪೇಗೌಡ ಮತ್ತು ಅವನ ಅನಂತರ ಬಂದ ಅವನ ವಂಶದವರು ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ಈಗ ಕೋಟೆಯ ವೆಂಕಟೇಶ್ವರ ದೇವಾಲಯವಾಗಿರುವ ಒಂದು ಗುಡಿ ಇತಿಹಾಸದ ದೃಷ್ಟಿಯಿಂದ ಇಲ್ಲಿ ಉದ್ಧರಣಯೋಗ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ಇತಿಹಾಸವೂ ಬದಲಾಗುತ್ತದೆ. ಚರಿತ್ರಕಾರರು, “೧೬೮೭ ರಲ್ಲಿ ಚಿಕ್ಕದೇವರಾಜ ಒಡೆಯರು ಬೆಂಗಳೂರನ್ನು ಮೂರು ಲಕ್ಷ ರೂಪಾಯಿಗಳಿಗೆ ಕೊಂಡುಕೊಂಡರು”[9] ಎಂದು ಹೇಳಿದ್ದಾರೆ. ಅವರೇ ಬೇರೊಂದು ಸಂದರ್ಭದಲ್ಲಿ ಮುಮ್ಮಡಿ ಕೆಂಪೇಗೌಡನ ಮೊಮ್ಮಗನಾದ ಮುಮ್ಮಡಿ ಕೆಂಪವೀರಪ್ಪಗೌಡ ಮೂರನೆಯ ಕೆಂಪೇಗೌಡನೆಂದು ಹೆಸರು ಹೊತ್ತು ೧೭೯೫ರಲ್ಲಿ ಪಟ್ಟಕ್ಕೆ ಬಂದನು. ಇಪ್ಪತ್ತು ಮೂರು ವರ್ಷಗಳ ಕಾಲ ಮಾತ್ರ ರಾಜ್ಯವಾಳಿದರೂ ಮಾಗಡಿಯ ಮನೆತನದ ಕೊನೆಯ ದೊರೆಯಾದರೂ ಇವನು ತನ್ನ ತಂದೆ ಅಜ್ಜರಿಗಿಂತ ಹೆಚ್ಚು ಖ್ಯಾತಿ ಪಡೆದವನ ಕಾಲ ದಕ್ಷಿಣ ಪ್ರಾಂತದ ಪರ್ವಕಾಲವಾಗಿತ್ತು. ಆಗ ವಿಜಯನಗರ ಚಕ್ರಾಧಿಪತ್ಯ ಅಳಿದಿತ್ತು. ಸಾಮಂತರಾಜರು ಪ್ರತಿಯೊಬ್ಬರೂ ತಮ್ಮ ತಮ್ಮ ರಾಜ್ಯಕ್ಕೆ ತಾವೇ ದೊರೆಗಳೆಂದುಕೊಂಡಿದ್ದರು. ನೆರೆರಾಜ್ಯಗಳ ಸುಲಿಗೆಗೆ ತೊಡಗಿದ್ದ ಸ್ವೇಚ್ಛಾರಿಗಳಾಗಿದ್ದರು. ಮೈಸೂರಿನ ಅರಸರಾದ ಒಡೆಯರ ಮನೆತನದವರೂ ಸ್ವತಂತ್ರರಾಗಿ ತಮ್ಮ ರಾಜ್ಯವನ್ನು ವಿಸ್ತರಿಸುವ ಹಂಬಲವನ್ನು ಹೊಂದಿದ್ದರು. ಸೀರ್ಯದ ನವಾಬರು, ಮರಾಠರು ಮೈಸೂರಿನವರು ಇವರು ಮೂವರೂ ಕೆಂಪೇಗೌಡನ ಸುಭಿಕ್ಷರಾಜ್ಯ, ಸುಸಜ್ಜಿತ ಸೈನ್ಯ ಪ್ರವರ್ಧಮಾನವಾಗುತ್ತಿದ್ದ ಬೆಂಗಳೂರು, ಮಾಗಡಿ ಸಾವನದುರ್ಗಗಳನ್ನು ಕಂಡು ಅಸೂಯೆಗೊಂಡಿದ್ದರು.[10]” ಈ ಹೇಳಿಕೆಗಳಲ್ಲಿ ಕಾಣುವ ಪರಸ್ಪರ ವಿರುದ್ಧಾಭಿಪ್ರಾಯಗಳನ್ನು ಕಂಡಾಗ ಇವುಗಳಲ್ಲಿ ಯಾವುದು ಸರಿ ಎಂಬ ಅನುಮಾನ ತಲೆ ದೋರುತ್ತದೆ. ವಾಸ್ತವವಾಗಿ ಚಿಕ್ಕದೇವರಾಜ ಒಡೆಯರು ಮರಸು ನಾಡಿನ ಮೇಲೆ ಯುದ್ಧ ಮಾಡಿದ ಉಲ್ಲೇಖ ದೊರೆಯುತ್ತದೆ,

ಒಂದು ದೆಸೆಯೋಳ್‌ ತುರುಕರೊನ್ದು ಕಡೆಯೋಳ್‌ ಮೊಱ ಸ
ರೊಂದುದೆಸೆಯೊಳಾರೆಯರ ಬಿಂದಮಳಿವಿಂ ಬೇ
ರೊಂದು ಬಱಿಯೊಳ್‌ ತಿಗುಳರೊಂದಿರವಿನೊಳ್‌ ಕೊಡಗ
ರೊಂದು ಕೆಲದೊಳ್‌ ಮಲೆವರೊಂದುವರೆದೆಲ್ಲರ್‌
ಸಂದಣಿಸಿ ಕಾಳಗಕ್ಕೆ ಮುಂದುವರಿವನ್ನಮದ
ಟಿಂದವರ ತಟ್ಟುಗಳ ಪಂದಲೆಗಳಂ ದಿಗ್‌
ಬೃಂದಬಲಿಯಿತ್ತು ನೆಲವಿಂದೆ ಚಿಕದೇವನೃಪನಾ
ನಂದ ಮಿಗೆ ಪೆರ್ಜಸಮನೊಂದು ಸೊಗ ವಾಱುಂ[11]

ಮೇಲಿನ ಪದ್ಯ ಚಿಕ್ಕದೇವರಾಜ ಮರಸುನಾಡು ಅರ್ಥಾತ್‌ ಯಲಹಂಕ ನಾಡಿನೊಂದಿಗೆ ಯುದ್ಧ ಮಾಡಿದ ಪ್ರಸಂಗವನ್ನು ಹೇಳುತ್ತದೆ. ಚಿಕ್ಕದೇವರಾಜ ಚನ್ನಪಟ್ಟಣದ ಬಳಿ ಮರಸುನಾಡಿನ ಬೇಡ ಪಡೆಯನ್ನು ಎದುರಿಸಿದ ಪ್ರಸಂಗವನ್ನು ಈ ಹಿಂದೆ ಉದಾಹರಿಸಲಾಗಿದೆ.

ಮುಮ್ಮಡಿ ಕೆಂಪೇಗೌಡ ಅದುವರೆಗೆ ನಡೆದುಕೊಂಡು ಬಂದಿದ್ದ ಸರ್ವಧರ್ಮ ಸಮನ್ವಯವನ್ನು ತ್ಯಜಿಸಿ ಶೈವದತ್ತ ಹೆಚ್ಚು ಒಲಿದಂತೆ ಕಾಣುತ್ತದೆ. ಮಾಗಡಿ ಮತ್ತು ಬೆಂಗಳೂರುಗಳಲ್ಲಿ ಈತ ಕಟ್ಟಿಸಿದ ಶಿವಾಲಯಗಳು ಇದಕ್ಕೆ ಸಾಕ್ಷಿಯಾಗಿವೆ. ಇದಕ್ಕೆ ಕಾರಣ ಹೀಗಿದೆ. ಅನಾದಿ ಕಾಲದಿಂದಲೂ ಒಕ್ಕಲಿಗರು ವೈಷ್ಣವ ಮತ್ತು ಶೈವಗಳೆರಡನ್ನೂ ಸಮವಾಗಿ ಕಂಡವರು. ಯಲಹಂಕದ ರಾಜರು ಭೈರವಾರಾಧಕರು. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರಿಂದ ವೀರಶೈವಮತ ಸ್ಥಾಪನೆಯಾದ ನಂತರ ಅನೇಕ ಒಕ್ಕಲಿಗರು ಆ ಕಡೆಗೆ ಆಕರ್ಷಿತರಾದರೆಂಬುದು ವಾಸ್ತವಸಂಗತಿ. ವೀರಶೈವ ಪ್ರಬಲವಾದಂತೆಲ್ಲಾ ಭೈರವಸಂಪ್ರದಾಯ ಕುಗ್ಗುತ್ತಾ ಬಂದಿರುವುದನ್ನು ಕಾಣುತ್ತೇವೆ. ನಾಥಪಂಥದಮಠಮಾನ್ಯಗಳು ಕಾಪಾಲಿಗರ ವಶವಾಗಿ ರಜೋಗುಣದ ಕೇಂದ್ರಗಳಾದವು. ಪಶುಬಲಿ, ಬಂಗಿ, ಸುರೆ ಮುಂತಾದವರ ಹಾವಳಿ ಅತಿಯಾಯಿತು. ಗೌರವಸ್ಥರು ಇಂತಹ ಮಠಮಾನ್ಯಗಳಿಂದ ದೂರವಿರಲು ತೊಡಗಿದರು. ಹೀಗಾಗಿ ಮುಮ್ಮಡಿ ಕೆಂಪೇಗೌಡ ಮತ್ತು ಅವನ ನಂತರದ ದೊರೆಗಳು ವೀರಶೈವದತ್ತ ಹೆಚ್ಚು ಬಲವನ್ನು ತೋರುತ್ತ ಬಂದರು. ಇದು ವೈಷ್ಣವರಿಗೆ ಸಹಿಸದಾಯಿತು. ಯಲಹಂಕ ನಾಡಿನ ಮಹಾಮನೆಗೆ ಧಾರ್ಮಿಕ ಆಂದೋಲನದ ಕಿಡಿ ಬಿದ್ದು ನಿಧಾನವಾಗಿ ಕವರಲಾರಂಬಿಸಿತು.

ನಮ್ಮ ಪ್ರಾಚೀನ ಕಾವ್ಯಗಳು ಮತ್ತು ಚರಿತ್ರೆಗಳಲ್ಲಿ ಅನೇಕ ವಿಚಾರಗಳನ್ನು ಮುಚ್ಚಿ ಹಾಕಲಾಗಿದೆ ಅಥವಾ ಬದಲಾಯಿಸಿ ಬರೆಯಲಾಗಿದೆ ಅನ್ನಿಸುತ್ತದೆ. ಮಾಗಡಿ ದೊರೆಗಳಿಗೆ ಸಂಬಂಧಿಸಿದ ಹಾಗೆ ನಮ್ಮಲ್ಲಿ ವಿಪುಲವಾದ ಜನಪದ ಸಾಹಿತ್ಯ ದೊರೆಯುತ್ತದೆ. ಈ ಜನಪದ ಸಾಹಿತ್ಯದಲ್ಲಿ ಮುಮ್ಮಡಿ ಕೆಂಪೇಗೌಡ ಮತ್ತು ಅವನ ನಂತರದ ದೊರೆಗಳ ವಿರುದ್ಧ ನಡೆದ ಧಾರ್ಮಿಕ ಸಂಚಿನ ಎಳೆಗಳು ದಟ್ಟವಾಗಿಯೇ ದೊರೆಯುತ್ತವೆ. ಮೊದಲಿಗೆ ರಂಗನಾಥನ ಭಕ್ತನಾಗಿದ್ದ ಮಾಗಡಿಯ ದೊರೆ ಸೋಮೇಶ್ವರನ ಭಕ್ತನಾಗುವಂತೆ ಮಾಡಲಾದ ಕಥೆಯೊಂದು ಹೀಗಿದೆ. ಒಂದು ದಿನ ಎಂದಿನಂತೆ ದೊರೆ ದೇವಾಲಯಕ್ಕೆ ರಂಗನಾಥನ ಪೂಜೆಗಾಗಿ ಹೋದ. ಪೂಜೆಯನಂತರ ಪೂಜಾರಿ ಪುಟ್ಟಣ್ಣ ತೀರ್ಥವನ್ನು ರಾಜನಿಗೆ ಕೊಟ್ಟ. ಇನ್ನೇನು ಅದನ್ನು ತೆಗೆದುಕೊಳ್ಳಬೇಕು. ಅಷ್ಟರಲ್ಲಿ ರಾಜನ ಕಣ್ಣಿಗೆ ಬಿಳಿಯಕೂದಲೊಂದು ಕಂಡಿತು. ಕೂಡಲೇ ಅವನು ಪೂಜಾರಿಯಲ್ಲು ಇದೇನೆಂದು ಕೇಳಿದ. ಪೂಜಾರಿ ನಮ್ರವಾಗಿ ರಂಗನಾಥನಿಗೆ ವಯಸ್ಸಾಯಿತು. ಅವನ ತಲೆಯ ನರೆಗೂದಲು ಎಂದ. ಸರಿ ಮುದಿಯಾದ ರಂಗನಾಥನಿಂದ ಇನ್ನೇನೂ ಉಪಯೋಗವಿಲ್ಲವೆಂದು ದೊರೆ ಸೋಮೇಶ್ವರನತ್ತ ನಡೆದ. ಆದರೆ ರಂಗನಾಥ ಅವನ ಕನಸಿನಲ್ಲಿ ಬಂದು ತನ್ನನ್ನು ಬಿಡದೆ ಸೇವಿಸಬೇಕೆಂದು ಕೇಳಿದನಂತೆ.

“ನಿನಗೆ ಸಕಲ ಭಾಗ್ಯವನೆಲ್ಲ ಉಂಟುಮಾಡಿ ಕೊಡುತೀನಿ
ಮಗನೆ ನನ್ನದೊಂದು ಸೇವೆಯ ಚಂದದಿಂದ ಮಾಡಿಸಯ್ಯಾ
ನನಗೆ ಏಳು ಪೂಜೆಯ ಮಾಡಿಸಯ್ಯಾ ಏಳುತಳಿಗೆಯ ಮಾಡಿಸಯ್ಯಾ
ಅಯ್ಯಾ ಮಾಗಡಿಯ ರಂಗಧಾಮ ಮನೆಸ್ವಾಮಿ ರಂಗಧಾಮ
ಇಷ್ಟೊಂದು ಮಾತುಹೇಳಿದ ಮಾಯವಾಗಿ ಹೋದುನಲ್ಲೋ[12]

ಆದರೂ ಏನೂ ಪ್ರಯೋಜನವಾಗಲಿಲ್ಲ. ಮಾಗಡಿಯ ದೊರೆ ಶೈವದತ್ತ ತನ್ನ ಹೆಜ್ಜೆಯನ್ನು ಮುಂದುವರಿಸಿದ. ಆಗ ವೈಷ್ಣವರಿಗೆ ಎಂತಹ ಕೋಪ ಉಂಟಾಯಿತು, ಅವರು ಹೇಗೆ ಮಾತನಾಡಿಕೊಂಡರೆಂಬುದನ್ನು ಜನಪದ ಗಾಯಕರಿಂದಲೇ ಕೇಳಬೇಕು. ಅವರು ಅದನ್ನು ನಾನಾ ರೀತಿಯಲ್ಲಿ ವಿಸ್ತರಿಸಿ ಹಾಡುತ್ತಾ ಹೋಗುತ್ತಾರೆ.

ಅಯ್ಯ ಬ್ರಾಹ್ಮಣರು ಏನಂತ ಮಾತನ್ನಾಡುತ್ತಾರೆ
ಇವನ ಸಿರಿತನ ಅಡಗಬೇಕು ಇವನ ದೊರೆತನ ಅಡಗಬೇಕು
ಇವನ ದರಬಾರು ಅಡಗಬೇಕು ದವಲತ್ತು ಅಡಗಬೇಕು[13]”

ಹೀಗೆಯೇ ಈ ಧಾರ್ಮಿಕ ಪಿತೂರಿ ಮುಂದುವರಿದು ಯಲಹಂಕ ರಾಜ್ಯವನ್ನು ಅವನತಿಯತ್ತ ಒಯ್ಯುತ್ತದೆ.

ಬೆಂಗಳೂರಿನಲ್ಲಿರುವ ಕೋಟೆಯ ವೆಂಕಟರಮಣಸ್ವಾಮಿ ದೇವಾಲಯ ಒಂದನೆಯ ಕೆಂಪೇಗೌಡ ಕೋಟೆಯ ರಕ್ಷಣೆಗಾಗಿ ನಿರ್ಮಿಸದ ಕಾಲಭೈರವ ದೇವಾಲಯ. ಭೈರವನಿಗೆ ಬಾಗಿಲ ಭೈರವ ಎಂಬ ಅಂಕಿತವೂ ಇದೆ. ಮೈಸೂರು ಅರಸರು ಬೆಂಗಳೂರು ಅವರ ವಶಕ್ಕೆ ಬಂದ ನಂತರ ಅಂದರೆ ಮುಮ್ಮಡಿ ಕೆಂಪೇವೀರಪ್ಪಗೌಡನ ನಂತರ ಆ ಗುಡಿಯಲ್ಲಿ ವೆಂಕಟೇಶ್ವರ ಪ್ರತಿಷ್ಠೆ ಮಾಡಿಸಿರಬೇಕು. ಏಕೆಂದರೆ ಶಾಸನದಲ್ಲಿ ಗುಡಿಯನ್ನು ಕಟ್ಟಿಸಿದ ಪ್ರಸ್ತಾಪವಿಲ್ಲ; ವೆಂಕಟೇಶ್ವರ ಸ್ವಾಮಿಯ ಮೂರ್ತಿಯ ಪ್ರತಿಷ್ಠಾಪನೆಯಷ್ಟೇ ಚಿಕ್ಕದೇವರಾಜರ ಕೆಲಸವೆಂದು ಅಲ್ಲಿ ಬರುವ ವಿವರ. ಗುಡಿಯೊಂದು ಮೊದಲಿನಿಂದ ಇದ್ದಿತೆಂದು ಸೂಚನೆಯಿದೆ. ಬಹುಶಃ ಕೆಂಪೇಗೌಡ ಕೋಟೆಯನ್ನು ಕಟ್ಟಿದಾಗಲೇ ಇದೂ ಎದ್ದಿರಬಹುದು. ಗುಡಿಯ ವಿಮಾನವನ್ನು ನೋಡಿದರೆ ಶಕ್ತಿಯ ಗುಡಿಯಿದ್ದಂತೆ ತೋರುತ್ತದೆ.”[14] ಬೆಂಗಳೂರಿನ ಬಹುತೇಕ ದೇವಾಲಯಗಳು ಒಂದನೆಯ ಕೆಂಪೇಗೌಡನಿಂದ ನಿರ್ಮಿತವಾದವು. ಅನಂತರದ ಅರಸರು ಅವುಗಳನ್ನು ಉತ್ತಮಪಡಿಸಿದರು. ಯಲಹಂಕ ನಾಡು ಮೈಸೂರಿನಲ್ಲಿ ಲೀನವಾದ ನಂತರ ಕಾಲ ಭೈರವನ ಆಲಯ ವೆಂಕಟರಮಣ ಆಗಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

ಯಲಹಂಕ ನಾಡಿನ ದೊರೆಗಳ ಪೂರ್ವಿಕರು ಕನ್ನಡ ನೆಲದವರೇ ಎಂಬುದಕ್ಕೆ ಅವರ ಮನೆ ದೇವತೆ ಕೆಂಪಮ್ಮ ಮತ್ತು ಆರಾಧ್ಯದೈವ ಭೈರವ ಪ್ರಧಾನ ಸಾಕ್ಷಿಯಾಗಿದ್ದಾರೆ. ಕೆಲವು ‘The yelahanka nadu Prabhus were gowdas or tillers of the land. They belonged to the Marasuvokkalu sect. The ancestors o which were migrants from Conjeevaram. They were not a skin of the gangadikara Gowdas of other parts of Karnataka’ಎಂಬಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಸರಿಯಲ್ಲ. ಏಕೆಂದರೆ ಭೈರವ ಮತ್ತು ಕೆಂಪಮ್ಮನ ಆರಾಧಕರು ಗಂಗಡಿಕಾರರಲ್ಲಿಯೂ ಅಪಾರವಾಗಿದ್ದಾರೆ. ಊರಿಗೊಂದು ಬೋರೆದೇವರ ಗುಡಿ ಎಂಬುದು ಗಾದೆಯ ಮಾತೇ ಆಗಿದೆ. ಬೆಂಗಳೂರು ಕೆಂಪೇಗೌಡನ ವಂಶದ ಮೂಲಪುರುಷನೆಂದು ಕರೆಯಲಾದ ರಣಭೈರೇಗೌಡನ ಮಗಳು ದೊಡ್ಡಮ್ಮ ಅನಂತರ ಆವತಿಯಲ್ಲಿ ಸತಿಯಾದಳೆಂದು ತಿಳಿದು ಬರುತ್ತದೆಯಷ್ಟೆ. ಈಕೆಯೇ ಮುಂದೆ ಕೆಂಪಮ್ಮನೂ ಆಗಿರುವಂತೆ ಕಾಣುತ್ತದೆ. ಏಕೆಂದರೆ ಇಂದಿಗೂ ಕರ್ನಾಟಕದ ಮಂಡ್ಯ, ಮೈಸೂರು, ಹಾಸನ ಮತ್ತು ಬೆಂಗಳೂರು ಜಿಲ್ಲೆಗಳ ಗ್ರಾಮದೇವತೆಗಳನ್ನು ಕುರಿತ ಪದಗಳಲ್ಲಿ ಈಕೆಯನ್ನು ಮಾರಿಯಮ್ಮ, ದೊಡ್ಡಮ್, ಕೆಂಪಮ್ಮ ಅಥವಾ ಆಯಾ ಊರಿನ ಹೆಸರಿನಲ್ಲಿ ಹುಲಿಕೆರೆಯಮ್ಮ. ಹೆತ್ತಗೋನ ಹಳ್ಳಿಯಮ್ಮ ಇತ್ಯಾದಿ ಹಾಡಿ ಹೊಗಳುತ್ತಾರೆ. ಈ ಬಗೆಗೆ ಮತ್ತೂ ಒಂದು ಕಥೆ ಇದೆ. “ಕಲ್ಯಾಣದಲ್ಲಿ ಒಕ್ಕಲು ಮುದ್ದೇಗೌಡನಿದ್ದ. ಅವನಿಗೆ ಏಳು ಜನ ಗಂಡು ಮಕ್ಕಳು. ಒಬ್ಬಳೆ ಹೆಣ್ಣುಮಗಳು ದೊಡ್ಡಮ್ಮ. ಈಕೆಯನ್ನು ಹಜಾಮರವನಿಗೆ ಕೊಟ್ಟು ಮದುವೆ ಮಾಡಿಕೊಡಬೇಕೆಂದು ಪ್ರಧಾನಿಯ ಅಧಿಕಾರಯುತ ನಿರೂಪ. ಕೀಳುಜಾತಿಯವನಿಗೆ ಮಗಳನ್ನು ಕೊಡಲೊಪ್ಪದೆ ಒಕ್ಕಲು ಮುದ್ದೇಗೌಡ ರಾತ್ರೋರಾತ್ರೆ ತನ್ನ ಸಂಸಾರದೊಂದಿಗೆ ಏಳು ಬಂಡಿಗಳಲ್ಲಿ ದಕ್ಷಿಣದತ್ತ ಹೊರಟ. ಇವನು ಪರಾರಿಯಾದುದನ್ನರಿತ ಪ್ರಧಾನಿ ಅವನನ್ನು ಹಿಡಿದು ತರಲು ಸೇನೆಯನ್ನು ಕಳಿಸಿದ. ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು ದೊಡ್ಡಮ್ಮಳ ಪ್ರಾರ್ಥನೆಗೆ ಓಗೊಟ್ಟು ದಾರಿ ಬಿಟ್ಟಿತು. ಸೈನಿಕರು ಬರುವ ಹೊತ್ತಿಗೆ ಮತ್ತೆ ಪ್ರವಾಹ ತುಂಬಿ ಹರಿಯಿತು. ತನ್ನಿಂದಾಗಿ ತನ್ನ ಸಂಸಾರಕ್ಕೆ ಒದಗಿದ ಸಂಕಷ್ಟಗಳಿಗೆ ನೊಂದ ದೊಡ್ಡಮ್ಮ ಸತಿಯಾದಳು. ಮುಂದೆ ಅವಳ ಏಳು ಸಹೋದರರೂ ಒಕ್ಕಲಿಗರ ಏಳು ಪಂಗಡಗಳಾದರು. ಆಕೆ ಅವರ ಮನೆದೇವತೆಯಾದಳು.[15] ಈ ಎರಡರಲ್ಲಿ ಒಂದು ಸುಮಾರು ೧೧೬೦ರಲ್ಲಿದ್ದ ಒಕ್ಕಲು ಮುದ್ದೇಗೌಡನೆಂಬ ವಚನಕಾರನಿಗೂ ಮತ್ತೊಂದು ೧೪ನೆಯ ಶತಮಾನದ ಯಲಹಂಕನಾಡ ರಾಜರ ಮೂಲ ಪುರುಷನಿಗೂ ಅನ್ವಯವಾಗುತ್ತವೆ. ಆದುದರಿಂದ ಒಕ್ಕಲಿಗ ಮೂಲದ ಬಗೆಗೆ ಪ್ರಚಲಿತವಿದ್ದ ಕಥೆಯನ್ನೇ ಯಾರೋ ಕೆಂಪೇಗೌಡನ ವಂಶಸ್ಥರಿಗೆ ಅನ್ವಯಿಸಿ ಹೇಳಿದ್ದಾರೆ. ಏಕೆಂದರೆ ಈ ಕಥೆಯನ್ನು ಕರ್ನಾಟಕದ ಪ್ರತಿಯೊಬ್ಬ ಒಕ್ಕಲಿಗನ ಮನೆಗೆ ಸಂಬಂಧಿಸಿದಂತೆಂಯೂ ಊರಿಗೆ ಸಂಬಂಧಸಿದಂತೆಯೂ ಹೇಳುತ್ತಾರೆ. ಆದುದರಿಂದ ಯಲಹಂಕ ನಾಡ ಪ್ರಭುಗಳ ಮೂಲ ಪುರುಷರು ತಮಿಳುನಾಡಿನ ಕಾಂಜೀವರಂನ ಯಣಮಂಜಿಯಿಂದ ಬಂದವರೆಂಬುದಕ್ಕೆ ಈ ಕಥೆಯು ಸಮರ್ಪಕವಾದ ಚಾರಿತ್ರಿಕವಾದ ಆಧಾರವಾಗಿರುವುದಿಲ್ಲ.

ಯಲಹಂಕ ನಾಡ ಪ್ರಭುಗಳು ಅರ್ಥಾತ್‌ ಮರಸು ಒಕ್ಕಲಿಗರು ತೆಲುಗರೆಂಬ ಅಭಿಪರಾಯ ಹೇಗೋ ಹುಟ್ಟಿಕೊಂಡಿದೆ. ಇದು ಇತ್ತೀಚಿನ ಬೆಳವಣಿಗೆ ಎಂದು ಕಾಣುತ್ತದೆ. ಏಕೆಂದರೆ ವಿಜಯನಗರದ ಕಾಲ ಮತ್ತು ನಾಲ್ಕನೆಯ ಮೈಸೂರು ಯುದ್ಧದ ನಂತರ ಹೈದರಾಬಾದಿನ ಪ್ರಭಾವಕ್ಕೆ ಒಳಗಾದ ಭಾಗಗಳಲ್ಲಿ ತೆಲುಗಿನ ಪ್ರಭಾವ ಅತಿಯಾಗಿ ಆಯಿತು. ಅಲ್ಲದೆ ಹದಿನೈದನೆಯ ಸತಮಾನದಲ್ಲಿ ಆಂಧ್ರದಲ್ಲಿ ಉಂಟಾದ ಭೀಕರ ಕ್ಷಾಮದಲ್ಲಿ ಅನೇಕ ರೆಡ್ಡಿ ಜನಾಂಗದ ರೈತರು ಕರ್ನಾಟಕದ ಈ ಭಾಗಗಳಿಗೆ ವಲಸೆ ಬಂದರು. ಬಂದವರು ಕ್ರಮೇಣವಾಗಿ ಇಲ್ಲಿನ ಮರಸು ಒಕ್ಕಲಿಗರೊಂದಿಗೆ ಬೆರೆತರು. ಹೀಗಾಗಿ ಅವರ ಮಾತೃಭಾಷೆ ತೆಲುಗಾಗಿಯೂ ವ್ಯವಹಾರ ಭಾಷೆ ಕನ್ನಡವಾಗಿಯೂ ಬೆಳೆದು ಬಂದಿದೆ. ಈ ಕಾರಣದಿಂದಲೇ “The marasu speak both Canerase and telugu, the section knowon as Reddi and Palyadasime speaking Telugu and the rest Canarese”[16] ಎಂದು ಅಭಿಪ್ರಾಯಪಡಲಾಗಿದೆ. ಮೇಲಿನ ಹೇಳಿಕೆ ಹೊರಗಿನಿಂದ ಬಂದವರು ಮಾತ್ರ ತೆಲುಗು ಮಾತನಾಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

‘ಗಂಗಾಗೌರಿ ಸಂವಾದಮು’ ಎಂಬ ಒಂದು ತೆಲುಗು ಯಕ್ಷಗಾನ ಕೃತಿಯನ್ನು ಹಿರಿಯ ಕೆಂಪೇಗೌಡ ಬರದ್ದೆಂದು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ. ಯಕ್ಷಗಾನ ಕೃತಿಯ ಪ್ರಾರ್ಥನಾ ಪದ್ಯವೊಂದರಲ್ಲಿ ಬರುವ “ಹಿರಿಯ ಕೆಂಪನೃಪರ್ತಿ ರಕ್ಷಿಂಚು ಸೋಮೇಶ್ವರಾ” ಎಂಬ ಮಾತು ಈ ವಿವಾದಕ್ಕೆ ಎಡೆಮಾಡಿಕೊಟ್ಟಿರುವಂತೆ ಕಾಣುತ್ತದೆ. ಆದರೆ ಇದು ತಪ್ಪು ಗ್ರಹಿಕೆಯಿಂದಾಗಿರುವ ಅಭಿಪ್ರಾಯವೆಂಬುದು ಆ ಮಾತಿನಿಂದಲೇ ಗೊತ್ತಾಗುತ್ತದೆ. ಆದರೆ “ಈ ತೆಲುಗು ಕಾವ್ಯವನ್ನು ನೋಡಿ ಶ್ರೀ ಸುಬ್ಬರಾಮಪ್ಪನವರು ಇವರಿಗಿನ್ನೇನೂ ಗೊತ್ತಿಲ್ಲದಿದ್ದಿರಲಿ, ಇವರೇ ಉದಾಹರಿಸಿರುವ ಮಂಗಳಾಚರಣೆಯ ವೃತ್ತದಲ್ಲಿರುವ ಹಿರಿಯ ಕೆಂಪನೃಪತಿ ಎಂಬುದನ್ನಾದರೂ ನೋಡಲಿಲ್ಲ,”[17] ಅಷ್ಟೇ ಅಲ್ಲ, ಹಿರಿಯ ಕೆಂಪನೃಪರ್ತಿ ರಕ್ಷಿಂಚು ಸೋಮೇಶ್ವರಾ ಎಂಬ ಮಾತಿನ ಅರ್ಥ ಹಿರಿಯ ಕೆಂಪನೃಪತಿಯನ್ನು ರಕ್ಷಿಸು ಸೋಮೇಶ್ವರಾ ಎಂದಾಗುತ್ತದೆ. ಪ್ರಾಯಃ ತೆಲುಗು ಯಕ್ಷಗಾನ ಕವಿಯೊಬ್ಬ ಕೆಂಪೇಗೌಡನ ಸಹಾಯಪಡೆದವನು ಈ ಮಾತನ್ನು ಹೇಳಿರಬೇಕು. ಈ ಒಂದು ವಾಕ್ಯದ ಆಧಾರದಿಂದ ಕೆಂಪೇಗೌಡನ ವಂಶಸ್ಥರು ತೆಲುಗರೆಂದು ಹೇಳುವುದು ಅವೈಜ್ಞಾನಿಕ ಅಭಿಪ್ರಾಯವಾಗುತ್ತದೆ.

ಯಲಹಂಕನಾಡ ಪ್ರಭುಗಳು ಕನ್ನಡ ನೆಲದವರೇ ಎಂಬುದಕ್ಕೆ ಅವರ ಮನೆದೇವತೆ ಕೆಂಪಮ್ಮ ಮತ್ತು ಅವರ ಹೆಸರುಗಳೂ ಕಾರಣ. ಇವರ ಮೂಲ ಪುರುಷನೆಂದು ಕರೆಯಲಾಗುವ ರಣಭೈರೇಗೌಡನಿಂದ ಕೊನೆಯ ಅರಸು ಮುಮ್ಮಡಿ ಕೆಂಪವೀರಪ್ಪಗೌಡನವರೆಗೆ ಎಲ್ಲ ಹೆಸರುಗಳೂ ಕನ್ನಡದವು. ಈ ಬಗೆಗಿನ ಮತ್ತೊಂದು ಪ್ರಬಲ ಉದಾಹರಣೆ ಎಂದರೆ ಸುಮಾರು ೧೨೫೦ ರಿಂದ ೧೭೩೦ರವರೆಗೆ ಈ ವಂಶಸ್ಥರು ಹಾಕಿಸಿರುವ ಶಾಸನಗಳಲ್ಲಿ ಒಂದೂ ತೆಲುಗಿನಲ್ಲಿ ಇಲ್ಲದಿರುವುದು. ಬೇರೆಯವರು ರಾಜರ ಹೆಸರಿಗೆ ಹಾಕಿಸಿದ ಒಂದೆರಡನ್ನು ಬಿಟ್ಟರೆ ಸ್ವತಃ ರಾಜರೇ ಹಾಕಿಸಿದ ಶಾಸನಗಳೆಲ್ಲಾ ಕನ್ನಡದಲ್ಲೇ ಇವೆ. ಕನ್ನಡ ನಾಡಿನ ಹೃದಯವಾದ ಶ್ರೀರಂಗಪಟ್ಟಣದಿಂದ ಆಳಿದ ಹೈದರಾಲಿ ಮತ್ತು ಟಿಪ್ಪುಸುಲ್ತಾನನು ಉರ್ದು ಮತ್ತು ಪರ್ಷಿಯನ್‌ ಭಾಷೆಯಲ್ಲಿ ಶಾಸನ ಹಾಕಿಸಿದರು ಎಂಬುದನ್ನು ಕಂಡಾಗ ಯಲಹಂಕನಾಡ ಪ್ರಭುಗಳು ತೆಲುಗರಾಗಿದ್ದರೆ ಏನಾಗುತ್ತಿತ್ತು ಎಂಬುದು ಸ್ಪಷ್ಟಪಡುತ್ತದೆ. “ಈಗಲೂ ಮರಸುನಾಡಿನಲ್ಲಿರುವ ಮರಸು ಒಕ್ಕಲಿಗರ ಮನೆಮಾತು ಕನ್ನಡ ನುಡಿಯೇ ಆಗಿದೆ. ಕೆಂಪೇಗೌಡನ ಮಾತು ಕನ್ನಡವೇ ಆಗಿತ್ತು. ಈಗಲೂ ಈ ಮನೆತನದವರ ಮನೆಮಾತು ಕನ್ನಡವೇ ಆಗಿದೆ. ಇದುವರೆಗೆ ದೊರೆತಿರುವ ಈ ಹಿಂದೆ ಉದಾಹರಿಸಿರುವ ಯಲಹಂಕ ವಂಶದವರ ಶಾಸನಗಳಲ್ಲಿ ಇಮ್ಮಡಿ ಕೆಂಪೇಗೌಡನ ಕಾಲದಲ್ಲಿ ಬೇರೆಯವರು ದಾನ ಮಾಡಿದ ಎರಡು ಶಾಸನಗಳು ಮಾತ್ರ ತೆಲುಗಿನಲ್ಲಿವೆ. ಆದರೂ ಈ ತೆಲುಗು ಶಾಸನಗಳ ಲಿಪಿಯು ಕನ್ನಡದಲ್ಲಿರುತ್ತದೆ. ಕೆಂಪೇಗೌಡನ ವಂಶದ ಹಿಂದಿನ ಮುಂದಿನವರ ಎಲ್ಲ ಶಾಸನಗಳೂ ಕನ್ನಡದಲ್ಲಿರುತ್ತವೆ. ಈ ಹಲವಾರು ರೀತಿಯಿಂದ ನೋಡಿದರೂ ಇಮ್ಮಡಿ ಕೆಂಪೇಗೌಡನ ಮನೆತನದವರ ಭಾಷೆಯು ಶುದ್ಧ ಕನ್ನಡವೇ ಆಗಿತ್ತೆಂದು ಗೊತ್ತಾಗುವುದು.”[18]

ಇಮ್ಮಡಿ ಕೆಂಪೇಗೌಡನ ಕಾಲದಿಂದಲೇ ಈ ವಂಶದವರು ಶೈವದತ್ತ ಹೆಚ್ಚು ಒಲವನ್ನು ತೋರಿದಂತೆ ಕಂಡುಬರುತ್ತದೆ. ಇದಕ್ಕೆ ಕಾರಣ ಮೊದಲನೆಯದು. ಈ ಹಿಂದೆಯೇ ಹೇಳಿದಂತೆ ನಾಥಪಂಥದ ಮಠಗಳಲ್ಲಿ ಹೆಚ್ಚಿದ ರಜೋಗುಣ ಮತ್ತು ಭೋಗಲಾಲಸೆ. ಎರಡನೆಯದು “ಕಲ್ಯಾಣಪರಂಪರೆಯ ೩೩ನೆಯ ಗುರುಗಳಾದ ಗಗನದಾರ್ಯರೆಂಬ ಗುರುಗಳು ಸಂಚರಿಸುತ್ತಾ ಮಾಗಡಿಗೆ ಬಂದರು. ಗೌಡನು ಆ ಗುರುವಿನಲ್ಲಿ ಭಕ್ತಿಯನ್ನು ಪ್ರಕಟಿಸಿ ಆತನಿಗೆ ಶಿಷ್ಯನಾಗಿ ಲಿಂಗಧಾರಣೆ ಮಾಡಿಸಿಕೊಂಡನೆಂದೂ ಮಾಗಡಿ ಅಕ್ಕಪಕ್ಕಗಳಲ್ಲಿ ೬೬ ವಿರಕ್ತ ಮಠಗಳು ರಚನೆಯಾದುವೆಂದೂ ಈ ಗೌಡನು ಈ ಗುರುವಿಗೆ ಪರಮಭಕ್ತನಾಗಿದ್ದನೆಂದೂ ನಿರಂಜನವಂಶ ರತ್ನಾಕರವೆಂಬ ಗ್ರಂಥದಲ್ಲಿ ಬರೆದಿದೆ.”[19] ಈ ಹೊತ್ತಿಗಾಗಲೇ ಜಾತಿ ಸಂಕರಗಳು ಅತಿಯಾಗಿ, ಯಲಹಂಕನಾಡ ಪ್ರಭುಗಳು ಚತುರ್ಥಗೋತ್ರದವರು, ಅವರು ರಾಜ್ಯವಾಳಬಹುದೆ? ಎಂಬ ಧಾರ್ಮಿಕ ಒಳಗಿಚ್ಚು ಬೇಯಲಾರಂಭಿಸಿತ್ತು. ಪ್ರಾಯಃ ಈ ಕಾರಣದಿಂದಾಗಿ ಮುಮ್ಮಡಿ ಕೆಂಪೇಗೌಡ ಮೇಲೆ ಹೇಳಿದ ಗಗನಾರ್ಯರಿಂದ ಗುರುಬೋಧನೆ ಪಡೆದಿರಬಹುದು. ಏಕೆಂದರೆ ಈತನ ಕೆಲವು ಶಾಸನಗಳಲ್ಲಿ “ಸದಾಶಿವಗೋತ್ರದ ಯಲಹಂಕ ನಾಡ ಪ್ರಭುಗಳಾದ ಕೆಂಪನಂಜೇಗೌಡರ ಪುತ್ರರಾದ ಹಿರಿಯ ಕೆಂಪೇಗೌಡರ ಪುತ್ರರಾದ ಮುಮ್ಮಡಿ ಕೆಂಪೇಗೌಡರು”[20] ಎಂಬ ಉಲ್ಲೇಖ ದೊರೆಯುವುದಿಲ್ಲ. ಅಷ್ಟೇ ಅಲ್ಲ ಮುಂದೆ ಇವನ ಮಗ ಮತ್ತು ಮೊಮ್ಮಗ ಒಕ್ಕಲಿಗರಾಗಿಯೇ ಉಳಿದಿದ್ದರು. ಈಗಲೂ ಈ ವಂಶಸ್ಥರು ಒಕ್ಕಲಿಗರಾಗಿಯೇ ಉಳಿದಿದ್ದಾರೆ. ಆದುದರಿಂದ ಯಲಹಂಕನಾಡ ಪ್ರಭುಗಳು ಯಾವುದೇ ಹಂತದಲ್ಲಿ ಮತಾಂತರ ಹೊಂದಿರುವ ನಿದರ್ಶನಗಳಿಲ್ಲ.

ಇಮ್ಮಡಿ ಕೆಂಪೇಗೌಡನ ನಂತರ ಯಲಹಂಕನಾಡು ಅನೇಕ ಒಳಹೊರಗಿನ ತೊಂದರೆಗಳನ್ನು ಎದುರಿಸಬೇಕಾಯಿತು. ಈ ಹೊತ್ತಿಗೆ ವಿಜಯನಗದ ಅವನತಿ ಹೊಂದಿದುದರಿಂದ ಮೊದಲಿನಿಂದಲೂ ಯಲಹಂಕನಾಡಿನ ಅಭ್ಯುದಯವನ್ನು ಸಹಿಸದ ಪಾಳೆಯಗಾರರು ಸುತ್ತಲಿಂದ ತೊಂದರೆ ಕೊಡಲಾರಂಭಿಸಿದರು. ಮೊಗಲರು ಮರಾಠರು, ಬಿಜಾಪುರದ ಸುಲ್ತಾನರು ಹೀಗೆ ಹೊರಶಕ್ತಿಗಳ ಕಣ್ಣೂ ಈ ಸಮೃದ್ಧ ನಾಡಿನ ಮೇಲೆ ಬಿದ್ದಿತು. ಮೈಸೂರು ಅರಸರಂತೂ ರಣಧೀರ ಕಂಠೀರವನ ಕಾಲದಿಂದಲೂ ಈ ರಾಜ್ಯದ ಮೇಲೆ ಕಣ್ಣು ಹಾಕಿದ್ದರು. ಇದರೊಂದಿಗೆ ನಾಡಿನೊಳಗೆ ಧಾರ್ಮಿಕ ಕಿಚ್ಚು ಹತ್ತಿ ಮತಾಂಧರು ಶತೃಗಳಿಗೆ ಸಹಾಯಕರಾಗಿದ್ದರು. ‘‘ಶೈವರಿಗೆ ಪ್ರಾಧಾನ್ಯ ಕೊಟ್ಟದು ಇತರ ಮತದವರನ್ನು ಅಲ್ಲಗಳೆದಂತಾಯಿತೆಂದೂ ದೊರೆಯ ಮೇಲೆ ಆಪಾದನೆ ಹೊರಿಸಿ ರಾಜ್ಯದ ಮೇಲೆ ಕಣ್ಣಿಟ್ಟು ಹೊಂಚುತ್ತಿದ್ದ ಶತ್ರುಗಳು ದಾಳಿ ಬರುವಂತೆ ಅಣಿಮಾಡಿಕೊಟ್ಟರು. ಮೈಸೂರಿನ ದೊರೆ ದೊಡ್ಡ ರಾಜ ಒಡೆಯರು ಈ ಒಳ ಜಗಳವನ್ನು ಅರಿತು ದಳವಾಯಿ ದೇವರಾಜಯ್ಯನನ್ನು ದೊಡ್ಡ ಸೈನ್ಯದೊಡನೆ ದುರ್ಗಕ್ಕೆ ದಾಳಿಯಿಡಲು ಕಳುಹಿಸಿದರು.[21]” ದೇಶದ್ರೋಹಿಗಳು ಶತ್ರುಗಳಿಗೆ ದುರ್ಗಗಳ ರಹಸ್ಯವನ್ನು ಅರುಹಿದರು. ಮುಮ್ಮಡಿ ಕೆಂಪವೀರಪ್ಪಗೌಡ ಸಾಹಸದಿಂದ ಹೋರಾಡಿದನಾದರು ಶತ್ರುಗಳಿಗೆ ಅವನ ದುರ್ಗದ ಮತ್ತು ಸೇನೆಯ ರಹಸ್ಯಗಳೆಲ್ಲಾ ತಿಳಿದುಹೋಗಿದ್ದುದರಿಂದ ಅವರ ಕೈ ಮೇಲಾಯಿತು. ಕಡೆಗೆ ಭೀಕರ ಯುದ್ಧಾನಂತರ ೧೭೨೮ರಲ್ಲಿ ಯಲಹಂಕನಾಡು ಶತ್ರು ವಶವಾಗಿ ಪತನವಾಯಿತು. ಮುಮ್ಮಡಿ ಕೆಂಪವೀರಪ್ಪಗೌಡ ಮತ್ತು ಅವನ ಅನುಯಾಯಿಗಳು ಧರ್ಮಲಂಡರ ಕುಯುಕ್ತಿಗೆ ಬಲಿಯಾಗಿ ಸೆರೆಯಾಳುಗಳಾಗಿ ಶ್ರೀರಂಗಪಟ್ಟಣದ ಸೆರೆಮನೆಯನ್ನು ಸೇರಿದರು.

ರಾಜನಿಲ್ಲದ ರಾಜ್ಯ ಯಜಮಾನನಿಲ್ಲದ ಮನೆ ಅನಾಯಕತ್ವದ ಆಗರವಾಗುವುದು ಶತಸ್ಸಿದ್ಧ. ಮೊದಮೊದಲಿಗೆ ಕೆಂಪವೀರಪ್ಪಗೌಡ ಸೆರೆಮನೆಯಿಂದ ಹೇಗಾದರು ತಪ್ಪಿಸಿಕೊಂಡು ಬರಬಹುದೆಂಬ ಆಸೆಯಿಂದ ಅವನ ಹಿಂಬಾಲಕರು ಅಲ್ಲಲ್ಲಿ ತಲೆತಪ್ಪಿಸಿಕೊಂಡೋ ಮಾರುವೇಷದಿಂದಲೋ ಕೆಲವು ಕಾಲ ಕಾಯ್ದರು, ಆದರೆ ಅದರಿಂದೇನೂ ಪ್ರಯೋಜನವಾಗಲಿಲ್ಲ ಕೆಂಪವೀರಪ್ಪಗೌಡನಿಗೆ ಯಲಹಂಕನಾಡಿನ ಉತ್ತರಾಧಿಕಾರಿಯಾಗಲು ಸಂತಾನವೇ ಇರಲಿಲ್ಲ. ಹೀಗಾಗಿ ಅಲ್ಪಸ್ವಲ್ಪ ಆಸೆಯನ್ನು ಇಟ್ಟುಕೊಂಡಿದ್ದ ನಾಡಗೌಡರು, ಪಟೇಲರು ಒಟ್ಟಿನಲ್ಲಿ ಯಲಹಂಕನಾಡ ಅಭಿಮಾನಿಗಳು ನಿರಾಶರಾಗುತ್ತ ನಡೆದರು. ಇತ್ತ ಸೆರೆಮನೆಯಲ್ಲಿದ್ದ ಕೆಂಪವೀರಪ್ಪಗೌಡನ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತ ನಡೆದುತ್ತು. ಅವನಿಗೆ ತಾನಿಲ್ಲದಿದ್ದರೂ ತನ್ನ ವಂಶದ ಯಾರಾದರೂ ಮತ್ತೆ ಯಲಹಂಕ ನಾಡನ್ನು ಸ್ವತಂತ್ರಗೊಳಿಸಿ ಆಳಬೇಕೆಂಬ ಪ್ರಬಲವಾದ ಆಸೆ.

ಕೆಂಪವೀರಪ್ಪಗೌಡನ ಸೋದರಿಯನ್ನು ಹುಲಿಕಲ್ಲು ದುರ್ಗದ ಕೃಷ್ಣರಾಜಗೌಡನಿಗೆ ಕೊಟ್ಟಿದ್ದಿತು. ಈಗ ಆಕೆಯಲಹಂಕ ನಾಡಿನ ಉತ್ತರಾಧಿಕಾರಿ. ಕೆಂಪವೀರಪ್ಪಗೌಡನಿಗೆ ಇನ್ನು ತನ್ನ ಅಂತ್ಯಕಾಲ ಸಮೀಪಿಸಿತು ಎನ್ನಿಸಿತು. ಅಂತಹ ವೇಳೆಯಲ್ಲಿಯೂ ತನ್ನ ರಾಜ ಲಾಂಛನಗಳು ಶತ್ರುಗಳ ಕೈಗೆ ಸಿಗಬಾರದೆಂಬ ಛಲವನದು. ಆತ ಸೋಮನಂಬ ತನ್ನ ನೆಚ್ಚಿನ ಭಂಟನ ಕೈಯಲ್ಲಿ ಮುದ್ರೆಯುಂಗುರ, ಪಟ್ಟದಕತ್ತಿ ಮುಂತಾದ ಲಾಂಛನಗಳು ಮತ್ತು ಪತ್ರವೊಂದನ್ನು ತನ್ನ ತಂಗಿಯ ಗಂಡನಿಗೆ ಕಳಿಸಿದ. ಕೆಂಪವೀರಪ್ಪಗೌಡನ ಆ ಅಂತಿಮಪತ್ರ ಅವನ ನಾಡ ಪ್ರೇಮವನ್ನು ಎತ್ತಿ ಹಿಡಿಯುತ್ತದೆ. “ಶ್ರೀಮತು ಕೆಂಪವೀರಪ್ಪ ಗವುಡರು ಹುಲಿಕಲ್ಲು ನಮ್ಮ ಕೃಷ್ಣರಾಜ ಗವುಡರಿಗೆ ಮಾಡುವ ಆಶೀರ್ವಾದ . ಅದಾಗಿ ಪಾಲ್ಗುಣ ಬಹುಳ ೧೦ರವರೆಗೆ ಶ್ರೀರಂಗಪಟ್ಟಣದಲ್ಲಿ ನಾವು ಕ್ಷೇಮದಲ್ಲಿ ಇದ್ದೇವೆ . ಅಲ್ಲಿಇರುವಂತೆ ಸಕಲರು ಸಹ ನಿಮ್ಮ ಕ್ಷೇಮಕ್ಕೆ ಬರೆಯಿಸಿ ಕಳುಹಿಸುವುದು. ತರುವಾಯ ನಮಗೆ ಸೋಮನಾಥನ ವಿಲಾಸದಿಂದ ಈ ದುರ್ದೆಸೆ ಬಂದು ಇರುವುದು ಸರಿಯಷ್ಟೆ. ಈಗ ನಮಗೆ ದೇಹಸ್ಥಿತಿ ಬಹುತರ ಉಪದ್ರವವಾಗಿದೆ. ಸೋಮನಾಥನ ಪಾದಗಳಲ್ಲಿ ಐಕ್ಯವಾಗ್ಯೋ ಹಾಗೆ ತೋರುತ್ತಾ ಇದೆ. ನಿರ್ವಾಹ ತೋರಲಿಲ್ಲ. ನಮ್ಮವಂಶಕ್ಕೆ ಬಾಂಧ್ಯರು ನೀವೇ ಅಲ್ಲದೆ ಮತ್ತೆ ಬೇರೆ ಇಲ್ಲ. ಆದ್ದರಿಂದ ನಿಮ್ಮ ಬಳಿಗೆ ನಮ್ಮ ಸೀಮನ ಕೈಯಲ್ಲಿ ನಮ್ಮ ಮುಖ್ಯ ಪಟ್ಟದ ಆಯುಧ, ಶಿಖಿರಸ ಸಹಕೊಟ್ಟು ಕಳುಹಿಸಿ ಇದ್ದೇವೆ. ನೀವು ಬುದ್ಧಿವಂತರಾಗಿ ಕಾಲಾನುಗಣ್ಯವಾಗಿ ಇದ್ದುಕೊಂಡು ನಮ್ಮ ದೇಹಸ್ಥಿತಿ ವಿಚಾರಿಸಿಕೊಂಡು ಆತರುವಾಯ ಆಗತಕ್ಕ ಕೆಲಸಗಳನ್ನು ಆಗಮಾಡುವುದು. ಕಡಿಮೆ ವಿಚಾರ, ವಾಲೆಯಲ್ಲಿ ಬರೆಯತಕ್ಕದ್ದು ಅಲ್ಲವಲ್ಲ. ಈ ಸೋಮನಬಾಯಿಮಾತಿನಿಂದ ಎಲ್ಲಾ ವಿಚಾರವೂ ತಿಳಿಯುತ್ತದೆ. ಈ ವಿವರ ನಿಮ್ಮ ಮನಸ್ಸಿಗೆ ತರೋಹಾಗೆ ಮಾಡಿಸುವುದು. ನಿಮಗೆ ಆಪ್ತರಾದವರನ್ನು ಇಲ್ಲಿಗೆ ಕಳುಹಿಸುವುದು – ಕೆಂಪಯ್ಯ”[22] ಮುಂದೆ ಕೃಷ್ಣರಾಜಗೌಡ ಏನು ಮಾಡಿದ ಕೆಂಪವೀರಪ್ಪಗೌಡ ಏನಾದ ಎಂಬುದು ತಿಳಿಯವುದಿಲ್ಲ.

ಯಲಹಂಕ ನಾಡು ಮರಳಿ ಸ್ವತಂತ್ರವಾಗಲು ಸಾಧ್ಯವಾಗಲಿಲ್ಲ. ಕೃಷ್ಣರಾಜಗೌಡ ಮರು ಪ್ರಯತ್ನ ಆರಂಭಿಸುವ ಹೊತ್ತಿಗೆ ನಾಡಿನ ಏಕತೆ ಛಿದ್ರಛಿದ್ರವಾಗಿತ್ತು. ಪಾಳೆಯಗಾರರು, ನಾಡಗೌಡರು ದಿಕ್ಕಾಪಾಲಾಗಿದ್ದರು. ಸೇನೆ ದಿಕ್ಕುತಪ್ಪಿತ್ತು. ಈ ಎಲ್ಲಕ್ಕಿಂತ ಮೇಲಾಗಿ ಮೈಸೂರು ಅರಸರು ಕೃಷ್ಣರಾಜಗೌಡನ ಮೇಲೆ ಬಲವಾದ ಕಾವಲಿಟ್ಟಿದ್ದರು. ಹೀಗಾಗಿ ಯಲಹಂಕನಾಡು ಮತ್ತೆ ಸ್ವತಂತ್ರವಾಗುವುದು ಕನಸಿನ ಮಾತಾಯಿತು. ಇಲ್ಲಿಗೆ ೧೨೫೦ರಿಂದ ೧೭೩೦ರವರೆಗೆ ನಾಡಿನ ಮೇಲೆ ಬೆಳಗುತ್ತಿದ್ದ ಯಲಹಂಕ ಪ್ರಭುವಂಶ ಅಸ್ತಂಗವಾಯಿತು.

 

[1] ಕರ್ನಾಟಕ ಇತಿಹಾಸ ದರ್ಶನ, ಪುಟ ೫೦೫

[2] ಪ್ರೊ. ಎಸ್. ಕೆ. ರಾಮಚಂದ್ರರಾವ್, ಸುದಾ ವಾರಪತ್ರಿಕೆ

[3] ವಡ್ಡಾರಾಧನೆ, ಸಂ, ಡಿ. ಎಲ್. ನರಸಿಂಹಚಾರ್, ಪುಟ ೧೧೪

[4] Bangalore throught Centuries: M fazulal Hasan page 15

[5] Bangalore throught centuries: M fazulal Hasan page 15

[6] Mysore Gazetteer, Hayavadana Rao, Vol, II, p, 1608

[7] Mysore Gazetteer, Hayavadana Rao, Vol, V, page 41.

[8] ಅದೇ page 38

[9] ಕರ್ನಾಟಕ ಇತಿಹಾಸ ದರ್ಶನ, ಕೃಷ್ಣರಾವ್, ಪುಟ ೫೩೫

[10] ಅದೇ ಪುಟ ೫೧೪

[11] ಚಿಕ್ಕದೇವರಾಜ ಬಿನ್ನಪ, ಸಂ, ರಾಜರತ್ನಂ, ಪುಟ ೬

[12] ದೊಂಬಿ ದಾಸರು ಹಾಡುವ ಮಾಗಡಿ ಕೆಂಪೇಗೌಡನ ಜನಪದ ಕಾವ್ಯ

[13] ಜನಪದಗೀತೆ

[14] ಕೋಟೆ ವೆಂಕಟೇಶ್ವರ ದೇವಾಲಯ ಸುಧಾ ವಾರಪತ್ರಿಕೆ.

[15] ಡಾ. ಜೀಶಂಪ ಅವರ ಹೆಳವರ ಕಾವ್ಯ ನೋಡಿ.

[16] The mysore tribes and Castes, Vol IV, page 227.

[17] ಕೆಂಪೇಗೌಡ ಜಯಪ್ರಶಸ್ತಿ ಕರ್ಲಮಂಗಲ ಶ್ರೀಕಂಠಯ್ಯ

[18] ಕೆಂಪೇಗೌಡ ಜಯಪ್ರಶಸ್ತಿ ಕರ್ಲಮಂಗಲ ಶ್ರೀಕಂಠಯ್ಯ…. .

[19] ಅದೇ

[20] ಅದೇ

[21] ಕರ್ನಾಟಕ ಇತಿಹಾಸ ದರ್ಶನ ಎಂ. ವಿ. ಕೃಷ್ಣರಾವ್, ಪುಟ ೫೧೫

[22] ಮಾಗಡಿ ಕೆಂಪೇಗೌಡ, ಎಸ್. ಕೆ. ನರಸಿಂಹಯ್ಯ