ಕನ್ನಡ ನಾಡಿನ ರಾಜಧಾನಿಯಾದ ಬೆಂಗಳೂರಿನ ನಿರ್ಮಾಪಕನಾದ ಒಂದನೆಯ ಕೆಂಪೇಗೌಡ ಮತ್ತು ಅವನ ವಂಶದ ಮೂಲಪುರುಷರು ಹೊರಗಿನಿಂದ ಬಂದವರೆಂದೂ ಮೂಲತಃ ತೆಲುಗರೆಂದೂ ಈವರೆಗೆ ಅವರನ್ನು ಕುರಿತು ಬರೆದ ಚರಿತ್ರಕಾರರೆಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಈ ವಂಶದ ಕೆಲವರನ್ನು, ಅದರಲ್ಲಿಯೂ ವಿಶೇಷವಾಗಿ ಬೆಂಗಳೂರು ನಿರ್ಮಾಪಕ ಕೆಂಪೇಗೌಡನನ್ನು, ಕುರಿತು ನಾಟಕ, ಕಾದಂಬರಿ ಮತ್ತಿತರ ಸಾಹಿತ್ಯ ಕೃತಿಗಳನ್ನು ರಚಿಸಿದ ಕನ್ನಡದ ಹಿರಿಯ ಲೇಖಕರೂ ಬಹುಮಟ್ಟಿಗೆ ಚರಿತ್ರಕಾರರ ಅಭಿಪ್ರಾಯವನ್ನೇ ಒಪ್ಪಿದಂತೆ ಕಂಡುಬರುತ್ತದೆ. ಏಕೆಂದರೆ ಈ ವಂಶದವರು ಮೂಲತಃ ಕನ್ನಡಿಗರೆಂಬುದನ್ನು ಪ್ರತಿಪಾದಿಸಲು ಸರಿಯಾದ ಆಧಾರಗಳನ್ನು ಒದಗಿಸಿಲ್ಲ. ಯಲಹಂತ ನಾಡಿನ ದೊರೆಗಳ ವಂಶದ ಮೂಲಪುರುಷರು ಹೊರಗಿನಿಂದ ಬಂದವರೆಂದು ಹೇಳುವ ಕಥೆ ಹೀಗಿದೆ; “ಸುಮಾರು ಹದಿನಾಲ್ಕನೆಯ ಶತಮಾನದಲ್ಲಿ ಮದ್ರಾಸು ಪ್ರಾಂತದ ಕಂಚಿಯ ಸಮೀಪದ ಯಣಮಂಜಿ ಪುತ್ತೂರು ಎಂಬ ಊರಿನಿಂದ ಏಳು ಜನ ರೈತರು ಕುಟುಂಬಸಮೇತವಾಗಿ ನಂದಿದುರ್ಗದ ಬಳಿಯ ರಾಮಸ್ವಾಮಿ ಬೆಟ್ಟದ ಬಳಿ ಬಂದು ತಂಗಿದರು. ಅವರು ಮೂಲತಃ ತೆಲುಗರು ಅವರಿದ್ದ ಯಣಮಂಜಿಗೆ ಮೊರಸು ನಾಡಂದು ಹೆಸರು. ಮೊರಸು ನಾಡಿನಿಂದ ಬಂದವರಾದ ಕಾರಣ ಮೈಸೂರು ಪ್ರಾಂತದ ಪೂರ್ವಭಾಗಕ್ಕೆ ಬಂದ ಈ ನೆಲಸಿಗರಿಗೆ ಮೊರಸು ಒಕ್ಕಲಿಗರೆಂದು ಹೆಸರು. ಇವರು ಭೈರದೇವನ ಆರಾಧಕರು. ಇವರು ತಮ್ಮ ಮಗಳಂದಿರ ವಿವಾಹಕ್ಕೆ ಪೂರ್ವದಲ್ಲಿ ಅವರ ಕಿರುಬೆರಳನ್ನೂ ಉಂಗುರದ ಬೆರಳನ್ನೂ ಕತ್ತರಿಸುತ್ತಿದ್ದರಂತೆ.”

[1] ಈ ಕಥೆಯಿಂದ ಯಾವ ಚಾರಿತ್ರಿಕ ಆಧಾರಗಳೂ ದೊರೆಯುವುದಿಲ್ಲ. ಬಹುಶಃ ಇದೊಂದು ವಂಶದ ಮೂಲದ ಬಗೆಗೆ ತಲೆತಲಾಂತರಗಳಿಂದ ಹರಿದುಬಂದ ಕಟ್ಟುಕಥೆಯಾಗಿ ಇರಬೇಕು. ಏಕೆಂದರೆ ಕನ್ನಡನಾಡಿನ ಒಕ್ಕಲಿಗ ಜನಾಂಗದ ಮತ್ತು ಇತರ ಬ್ರಾಹ್ಮಣೇತರ ಜನಾಂಗಗಳ ಮೂಲದ ಬಗೆಗೂ ಇಂಥವ ಕಥೆಗಳು ಕಂಡುಬರುತ್ತವೆ. ಆದರೆ ಒಂದು ವ್ಯತ್ಯಾಸ. ಈ ಕಥೆಗಳೆಲ್ಲ ನಮ್ಮ ಪೂರ್ವಿಜರು ಬಡಗ ದೇಶದಿಂದ ಬಂದು ಇಲ್ಲಿ ತರಗುಗುಡಿಸಿ ನೆಲೆ ನಿಂತರೆಂದು ಹೇಳುತ್ತವೆ. ಈ ಹೇಳಿಕೆಯಲ್ಲಿ ಉತ್ತರದಿಂದ ದ್ರಾವಿಡ ದಕ್ಷಿಣದತ್ತ ವಲಸೆ ಬಂದ ಸೂಚನೆ ಕಂಡುಬರುತ್ತದೆ. ಆದರೆ, ಕೆಂಪೇಗೌಡ ವಂಶದ ಕಥೆಯಲ್ಲಿ ದಕ್ಷಿಣದಿಂದ ವಲಸೆ ಬಂದಂತೆ ಸೂಚಿತವಾಗಿದೆ.

ಆವತಿ, ಯಲಹಂಕ, ಬೆಂಗಳೂರು ಮತ್ತು ಮಾಗಡಿಗಳನ್ನು ಅನುಕ್ರಮವಾಗಿ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ಈ ರಾಜರುಗಳು ಮೂಲತಃ ಕನ್ನಡ ನಾಡಿನವರೇ, ಕನ್ನಡಿಗರೇ ಎಂಬುದಕ್ಕೆ ವಿಫುಲವಾದ ಆಧಾರಗಳು ದೊರೆಯುತ್ತವೆ. ಆದರೂ ಈ ವಂಶದವರು ಹೊರಗಿನಿಂದ ಬಂದವರೆಂದು ಯಾವ ಕಾರಣದಿಂದ ಈ ವಿದ್ವಾಂಸರು ತೀರ್ಮಾನಿಸಿದರೊ ತಿಳಿಯದಾಗಿದೆ. ಸುಮಾರು ಹನ್ನೆರಡು ಹದಿಮೂರನೆಯ ಶತಮಾನಗಳಿಂದಲೂ ಯಲಹಂಕ ನಾಡ ಪ್ರಭುಗಳು ಹಾಕಿಸಿದ ಶಾಸನಗಳು ದೊರೆಯುತ್ತವೆ. ಸುಮಾರು ಹದಿನಾಲ್ಕನೆಯ ಶತಮಾನದಲ್ಲಿ ಈ ವಂಶದ ಮೂಲ ಪುರುಷನೆಂದು ಚರಿತ್ರಕಾರರು ಊಹಿಸಿರುವ ರಣಭೈರೇಗೌಡನು ಯಣಮಂಜಿ ಪುತ್ತೂರಿನಿಂದ ಬಂದನೆಂಬುದನ್ನು ಒಪ್ಪಿದರೆ ಆಗ ಆಭಾಗ ಅಪ್ಪಟ ತಮಿಳು ನೆಲೆಯಾಗಿದ್ದಿತು. ಹೀಗಾಗಿ ಅವರನ್ನು ತೆಲುಗರು ಎಂದು ಹೇಳಲಾಗುವುದಿಲ್ಲ. ಈ ವಂಶದವರು ಮೂಲತಃ ಕನ್ನಡ ನಾಡಿನವರೇ ಎಂಬುದಕ್ಕೆ ಇವರ ಮನೆದೇವತೆಯಾದ ಕೆಂಪಮ್ಮನೂ ಒಂದು ಪ್ರಬಲವಾದ ಕಾರಣ. ಏಕೆಂದರೆ ಕನ್ನಡ ನಾಡಿನ ಒಕ್ಕಲಿಗರೆಲ್ಲರ ಮನೆದೇವತೆಯಾದ ಈ ಕೆಂಪಮ್ಮನೇ ಯಲಹಂಕ ನಾಡ ಪ್ರಭುಗಳಿಗೂ ಮನೆದೇವತೆಯಾಗಿರುವುದು ಇವರು ಕನ್ನಡಿಗರೆಂಬುದನ್ನು ಶ್ರುತಪಡಿಸುತ್ತದೆ. ಅಲ್ಲದೆ ರಣಭೈರೇಗೌಡ ಈ ವಂಶದ ಮೂಲಪುರುಷ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಈ ವಂಶದವರು ತಮ್ಮ ಹಿರಿಯರ ಹೆಸರಿನಲ್ಲಿ ನೂರಾರು ದಾನದತ್ತಿಗಳನ್ನು ಬಿಟ್ಟು ಹಾಕಿಸಿರುವ ಯಾವ ಶಾಸನದಲ್ಲಿಯೂ ರಣಭೈರೇಗೌಡ ಎಂಬ ಹೆಸರು ಬರುವುದಿಲ್ಲ. ಈ ಕಾರಣದಿಂದ ಯಲಹಂಕ ನಾಡ ಪ್ರಭುಗಳ ವಂಶದ ಮೂಲಪುರುಷ ರಣಭೈರೇಗೌಡ ಎಂಬುದನ್ನು ಒಪ್ಪಲು ಆಗುವುದಿಲ್ಲ.

ಚರಿತ್ರಕಾರರು ಹೇಳುವ ರಣಭೈರೇಗೌಡ ಈ ಭಾಗದ ಒಬ್ಬ ಪಾಳೆಯಗಾರನ ಹೆಸರೂ ಆಗಿದೆ. ಆತ ಇತ್ತೀಚಿನವನು ಯಲಂಹ ವಂಶದ ರಾಜರ ಮೂರನೆಯ ತಲೆಮಾರಿನ ಬಂಡಿ ಕುಲತಿಲಕ ಭೈರದೇವನಿಗೆ ರಣಭೈರೇಗೌಡ ಎಂಬ ಹೆಸರಿದ್ದಂತೆ ಕಂಡುಬರುವುದಿಲ್ಲ. ಮೇಲೆ ಸೂಚಿಸಿದ ಪಾಳೆಯಗಾರ ಹೊಳವನಹಳ್ಳಿಯಲ್ಲಿ ಆಳುತ್ತಿದ್ದ ರಣಭೈರೇಗೌಡ. ಇವನು ಯಲಹಂಕ ರಾಜವಂಶದ ಮೂಲ ಪುರುಷನೆಂದು ಹೇಳಲು ಬರುವುದಿಲ್ಲ. ಈ ಭಾಗದ ದೊಡ್ಡ ಬಳ್ಳಾಪುರ, ಚಿಕ್ಕ ಬಳ್ಳಾಪುರ, ಹೊಸಕೋಟೆ, ಸುಗಟೂರು ಮತ್ತು ಹೊಳವನಹಳ್ಳಿಯ ಪಾಳೆಯಗಾರರೆಲ್ಲ ಒಕ್ಕಲಿಗರೆ ಆದುದರಿಂದ ಹೆಸರಿನ ಸಾಮ್ಯ ಇವರೆಲ್ಲ ಸಹೋದರರೆಂಬ ಊಹೆಗೆ ಕಾರಣವಾಗಿರಬೇಕೆಂದು ತೋರುತ್ತದೆ. ನಮ್ಮ ನಾಡಿನ ಪಾಳೆಯಗಾರರ ಚರಿತ್ರೆಗಳನ್ನು ಗಮನಿಸಿದಾಗ ಒಂದು ಅಂಶ ಗೋಚರವಾಗುತ್ತದೆ. ಅದೆಂದರೆ ಇವರೆಲ್ಲರೂ ಮೊದಮೊದಲಿಗೆ ಸೇನೆಯಲ್ಲಿ ಸೈನಿಕರಾಗಿದ್ದವರು. ಕ್ರಮೇಣ ಇಂಥವರು ತಮ್ಮ ದಣಿಗಳ ಪ್ರೀತಿಗೆ ಪಾತ್ರರಾಗಿ ದಾನದತ್ತಿಗಳನ್ನು ಪಡೆದು ಪಾಳೆಯಗಾರರಾಗಿರುವುದು ಕಂಡುಬರುತ್ತದೆ. ಇಂಥವರಲ್ಲಿ ಶಕ್ತರಾದವರು ಅಕ್ಕಪಕ್ಕದವರನ್ನು ಹತ್ತಿಕ್ಕಿ ಸಾಮಂತರಾಜರಾಗಿರುವುದೂ ಅಪರೂಪವೇನಲ್ಲ. ಯಲಹಂಕ ರಾಜರ ವಂಶದವರೂ ಆವತಿಯ ಪಾಳೆಯಗಾರರಾಗಿದ್ದು ಕ್ರಮೇಣ ಮೇಲೆ ಬಂದು ರಾಜರಾದರೆಂಬುದರಲ್ಲಿ ಅನುಮಾನವಿಲ್ಲ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಯಣಮಂಜಿಪುತ್ತೂರಿನಿಂದ ವಲಸೆ ಬಂದ ರಣಭೈರೇಗೌಡ ಇಲ್ಲಿ ನೆಲೆಸಿದಾಗ ಈ ಪ್ರದೇಶ ಕಾಡಾಗಿತ್ತೆಂದು ಚರಿತ್ರೆಕಾರರ ಅಭಿಮತ. ಆದರೆ ಆವತಿ, ಯಲಹಂತ ಹೊಸಕೋಟೆ ಮುಂತಾದುವೆಲ್ಲ ಗಂಗರ ಕಾಲದಿಂದಲೂ ಊರಾಗಿದ್ದ ಬಗೆಗೆ ಆಧಾರಗಳಿವೆ. ಈ ಎಲ್ಲಾ ಕಾರಣಗಳಿಂದಾಗಿ ಯಲಹಂತ ನಾಡಿನ ರಾಜರು ಮತ್ತು ಅವರ ಮೂಲಪುರುಷರು ಕನ್ನಡನಾಡಿನವರೇ, ಕನ್ನಡಿಗರೇ ಎಂದು ಖಚಿತವಾಗಿ ಹೇಳಬಹುದು.

ಕ್ರಿ.ಶ. ೩೫೦ರ ಸುಮಾರಿಗೆ ಕನ್ನಡ ನಾಡಿನಲ್ಲಿ ಗಂಗರು ಪ್ರಬುದ್ಧಮಾನಕ್ಕೆ ಬಂದರೆಂದು ಹೇಳಬಹುದು. ಕ್ರಿ.ಶ. ೩೫೦ ರಿಂದ ೪೦೦ರ ವರೆಗೆ ಆಳಿದ ದೀಡಿಗ ಅಥವಾ ದಡಿಗ ಈ ವಂಶದ ಸ್ಥಾಪಕನೆಂಬುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ. ಗಂಗರ ಬಗೆಗೂ ಅನೇಕ ರೀತಿಯ ಕಥೆಗಳಿವೆ. ಇವರು ಹೊರಗಿನಿಂದ ಬಂದವರೆಂದು ಕೆಲವರು, ಇವರು ಕನ್ನಡ ನಾಡಿನವರೇ ಎಂದು ಮತ್ತೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಗಂಗರ ಬಗೆಗೂ ಅನೇಕ ರೀತಿಯ ಕಥೆಗಳಿವೆ. ಇವರು ಹೊರಗಿನಿಂದ ಬಂದವರೆಂದು ಕೆಲವರು, ಇವರು ಕನ್ನಡ ನಾಡಿನವರೆ ಎಂದು ಮತ್ತೆ ಕೆಲವರು ಅಭಿಪ್ರಾಯಪಟ್ಟಿದಾರೆ. ಗಂಗರ ವಂಶದ ಮೂಲದಂತೆಯೇ ಅವರ ಮತ ಧರ್ಮಗಳ ವಿಚಾರವಾಗಿ ಕೂಡ ತೀವ್ರವಾದ ವಿರುದ್ಧ ಅಭಿಪ್ರಾಯಗಳು ಕಂಡುಬರುತ್ತವೆ. “ಸುಮಾರು ನಾಲ್ಕನೆಯ ಶತಮಾನದಲ್ಲಿ ಇಕ್ಷ್ವಾಕುವಂಶಕ್ಕೆ ಸೇರಿದ ಸೋದರರಿಬ್ಬರು ಆ ಬಗೆಯ ಮಹತ್ವಾಕಾಂಕ್ಷೆಯಿಂದ ಪ್ರೇರಿತರಾಗಿ ಪೆರೂರಿಗೆ ಬಂದು ಗಂಗವಂಶ ಸ್ಥಾಪನೆಗೆ ಆಸ್ತಿಭಾರ ಹಾಕಿದರು. ದಿಡೀಗ (ದಡಿಗ)ಮತ್ತು ಮಾಧವ ಎಂಬ ಹೆಸರಿನ ಈ ರಾಜಕುಮಾರರು ಇಕ್ಷ್ವಾಕುವಂಶದ ವಿಘಟನಾನಂತರ ದಕ್ಷಿಣಾಭಿಮುಖವಾಗಿ ಹೊರಟು ಗಂಗ ಪೆರೂರಿಗೆ ಬಂದಾಗ, ಅಲ್ಲಿ ಅವರಿಗೆ ಜೈನಾಚಾರ್ಯನಾದ ಸಿಂಹನಂದಿಯ ದರ್ಶನವಾಯಿತು. ಜೈನಾಚಾರ್ಯ ಈ ವರ್ಚಸ್ವೀ ಸೋದರರನ್ನು ಕಂಡು ಅವರಲ್ಲಿ ಆಸಕ್ತನಾಗಿ ಅವರ ಪೂರ್ವೋತ್ತರಗಳನ್ನು ತಿಳಿದುಕೊಂಡು ಅವರಿಗೆ ರಾಜೋಚಿತ ವಿದ್ಯಾಸಂಸ್ಕಾರವನ್ನು ನೀಡುದುದಲ್ಲದೆ ಸ್ಥಳದೇವತೆಯಾದ ಪದ್ಮಾವತಿ ದೇವಿಯಿಂದ ವರಪ್ರಸಾದವನ್ನು ಕೊಡಿಸಿದನಂತೆ. ತತ್‌ಫಲವಾಗಿ ಅವರಿಗೆ ಖಡ್ಗಾಯುಧವೂ ರಾಜ್ಯಲಾಭ ಭರವಸೆಯೂ ದೊರೆಯಿತಂತೆ.”[2] ಮೇಲಿನ ಹೇಳಿಕೆ ಯಾವುದೇ ಖಚಿತವಾದ ಚಾರಿತ್ರಿಕ ಅಂಶವನ್ನು ಪ್ರತಿಪಾದಿಸುವುದಿಲ್ಲ. ಈ ಹಿಂದೆಯೇ ಹೇಳಿರುವಂತೆ ಇವೆಲ್ಲಾ ಪ್ರತಿ ರಾಜವಂಶದ ಬಗೆಗೂ ಹುಟ್ಟಿಕೊಂಡಿರುವ ಕಥೆಗಳು. ಯಲಹಂಕ ನಾಡ ಪ್ರಭುಗಳ ಮೂಲಪುರುಷರ ಬಗೆಗಿನ ವಲಸೆಯ ಕಥೆಯೂ ಇಂಥದೆ ಆಗಿದೆ. ಇಂತಹ ಕಟ್ಟುಕಥೆಗಳನ್ನು ಅಧಿಕೃತ ಚಾರಿತ್ರಿಕ ದಾಖಲೆಯಾಗಿ ಈಗಲೂ ಪರಿಗಣಿಸಬೇಕೆ ಎಂಬುದನ್ನು ವಿದ್ವಾಂಸರು ತೀವ್ರವಾಗಿ ಯೋಚಿಸಬೇಕಾಗಿದೆ. ಏಕೆಂದರೆ ಒಂದು ಸಾಮಾನ್ಯ ಘಟನೆ ಕಾಲಕಳೆದಂತೆ ಅದರಲ್ಲಿ ಪಾಲ್ಗೊಂಡು ವ್ಯಕ್ತಿ ದೊಡ್ಡವನಾಗಿದ್ದರೆ ನಾನಾ ರೀತಿಯ ಅವೈಜ್ಞಾನಿಕ ಕಲ್ಪನೆಗಳಿಗೆ ಎಡೆಮಾಡಿಕೊಡುತ್ತದೆ. ದಡಿಗ ಮತ್ತು ಮಾಧವ ಜೈನಾಚಾರ್ಯ ಸಿಂಹಾನಂದಿಯ ಸಹಾಯ ಪಡೆದಿರಬಹುದು. ಏಕೆಂದರೆ ಆಗ ಜೈನ ಧರ್ಮ ಪ್ರಬಲವಾಗಿದ್ದಿತು. ಆದರೆ ಪದ್ಮಾವತಿಯ ವರ ಮತ್ತು ಇಕ್ಷ್ವಾಕುವಂಶದ ಕಥೆಗಳು ಇವರು ರಾಜರಾದನಂತರ ಜನಸಾಮಾನ್ಯರಿಂದ ತಮ್ಮನ್ನು ಬೇರ್ಪಡಿಸಿ ಉನ್ನತವಾದ ಸ್ಥಾನದಲ್ಲಿಡಲು. ಕಲ್ಪಿಸಿದುವೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಆದುದರಿಂದ ಕನ್ನಡ ನೆಲದಲ್ಲಿಯೇ ಜನಿಸಿದ ಇಬ್ಬರು ಯುವಕರು ದಡಿಗ ಮತ್ತು ಮಾಧವ ಜೈನಾಚಾರ್ಯ ಸಿಂಹನಂದಿಯ ಸಹಾಯದಿಂದ ರಾಜ್ಯಸ್ಥಾಪನೆ ಮಾಡಿರಬೇಕು.

ಭಾರತೀಯ ಮಾನವಶಾಸ್ತ್ರವನ್ನು ಗಮನಿಸಿದವರಿಗೆ ಈ ದೇಶದ ಬಹುಪಾಲು ಜನರು ಚತುರ್ವರ್ಣದವರಾಗಿ ವ್ಯವಸಾಯನಿರತರಾಗಿದ್ದುದು ಕಮಡುಬರುತ್ತದೆ. ಸಿಂಧು ಕಣಿವೆಯ ನಾಗರಿಕತೆಯ ಆಧಾರದಿಂದ ಹೇಳಬಹುದಾದರೆ ಆರ್ಯರು ಭಾರತಕ್ಕೆ ಬರುವುದಕ್ಕೆ ಮುಂಚೆಯೂ ಈ ಜನರು ವ್ಯವಸಾಯನಿರತರೇ ಆಗಿದ್ದರು. ಮುಂದೆ ರಾಜಸಂತತಿಗಳು ತಲೆ ಎತ್ತಿಕೊಂಡು ಆಳಲು ಆರಂಭಿಸಿದಾಗ ಇವರಲ್ಲಿ ಬಹುಪಾಲು ಯುದ್ಧದಲ್ಲಿ ರಾಜರಿಗೆ ಸಹಾಯ ಮಾಡುತ್ತ ಶಾಂತಿಕಾಲದಲ್ಲಿ ವ್ಯವಸಾಯ ನಿರತರಾಗಿ ಬದುಕುತ್ತಿದ್ದರೆಂದು ಕಂಡುಬರುತ್ತದೆ. ಇವರಲ್ಲಿ ಅನೇಕರು ನಾಡು ಊರು ಮತ್ತು ದೇಶದ ಗೌಡರುಗಳಾಗಿ ಇರುತ್ತಿದ್ದರು. ಅಂತಹವರಲ್ಲಿ ರಾಜರಿಗೆ ನಿಷ್ಠರಾಗಿದ್ದವರಿಗೆ ರಾಜರು ಆಯಾ ಪ್ರಾಂತವನ್ನೇ ದತ್ತಿಯಾಗಿ ಕೊಡುತ್ತಿದ್ದರು. ಶಕ್ತಿಯಿದ್ದವನು ಸಾಮಂತ ರಾಜನಾಗುತ್ತಿದ್ದ. ಕೇಂದ್ರ ದುರ್ಬಲವಾದಾಗ ಇಂತಹ ಸಾಮಂತರು ಸ್ವತಂತ್ರವಾಗಿ ಮುಂದೆ ಅವರೇ ರಾಜರೂ ಚಕ್ರವರ್ತಿಗಳೂ ಆಗುತ್ತಿದ್ದರು. ಹೀಗೆ ಮೇಲೇರಿದವರು ಕೂಡಲೇ ತಮ್ಮ ವಂಶದ ಬಗೆಗೆ ಉತ್ಪ್ರೇಕ್ಷೆಯ ಕಟ್ಟು ಕಥೆಗಳನ್ನು ಬರೆಯಿಸುವುದು ಅಥವಾ ಆ ಕಾಲಕ್ಕೆ ಪ್ರಬಲವಾಗಿದ್ದ ಧರ್ಮದ ಗುರುಗಳಿಗೆ ಶಿಷ್ಯರಾಗುವುದು ಹೀಗೆ ಮಾಡಿ ತಮ್ಮ ಭದ್ರತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಗಂಗರಾಜ್ಯ ಸ್ಥಾಪಕರಾಗಲಿ, ಯಲಹಂಕ ನಾಡಪ್ರಭುಗಳ ಮೂಲಪುರುಷರಾಗಲಿ ಹೀಗೆ ಜನಮಧ್ಯದಿಂದ ಬಂದವರೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಇಂತಹ ಕಥೆಗಳ ಆಧಾರಗಳಿಷ್ಟರಿಂದಲೇ ಯಾವುದೇ ಒಂದು ರಾಜವಂಶದ ಮತ ವಿಚಾರವನ್ನು ನಿರ್ಧರಿಸುವುದು ಸಾಧ್ಯವಲ್ಲದ ಮಾತು. ಅಲ್ಲದೆ ಮತ ಮತ್ತು ಧರ್ಮಗಳಿಗೆ ಅಸಾಧ್ಯವಾದ ಅಂತರವಿದೆ. ಜೈನರಲ್ಲದವರು ಜಿನನಿಗೆ, ಬ್ರಾಹ್ಮಣರಲ್ಲದವರು ಶಿವ ವಿಷ್ಣುಗಳಿಗೆ ನಡೆದುಕೊಂಡಿರುವ ಉದಾಹರಣೆಗಳಿಗೆ ನಮ್ಮಲ್ಲಿ ಕೊರತೆಯೇನಿಲ್ಲ. ಕನ್ನಡ ಜನಪದ ಸಾಹಿತ್ಯದಲ್ಲಿ ದಂಡಿಗೆ ಹೋಗಿ ಸತ್ತು ಅಮರರಾದ, ಜಯಿಸಿ ರಾಜರಾದ, ಕೆಲವು ದುರಂತಗಳಿಗೆ ಒಳಗಾದ ಕಥೆಗಳು ಹೇರಳವಾಗಿವೆ. ಈ ಕಾರಣದಿಂದಾಗಿ ರಾಜವಂಶಗಳ ಬಗೆಗಿನ ಕಥೆಗಳನ್ನು ಚಾರಿತ್ರಿಕ ಆಧಾರಗಳಾಗಿ ತೆಗೆದುಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಕರ್ನಾಟಕದಲ್ಲಿ ಒಂದು ಪ್ರಮುಖ ಜನಾಂಗವಾಗಿರುವ ಒಕ್ಕಲಿಗರ ಮೂಲದಿಂದ ಗಂಗರು ಬಂದರೆಂಬ ವಾದವಿದೆ. ಗಂಗಡಿಕಾರ ಎಂಬುದು ದೇಶಸೂಚಕ ಗಂಗವಾಡಿಕಾರ ಎಂಬುದರಿಂದ ಬಂದಿದೆ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಅದೇನೇ ಇರಲಿ, ಗಂಗರು ಮೂಲತಃ ಜೈನರಲ್ಲ ಎಂಬುದಕ್ಕೆ ಸಾಕಷ್ಟು ಆಧಾರಳು ದೊರೆಯುತ್ತವೆ. ಗಂಗರಸ ದುರ್ವಿನೀತನ ಶಾಸನವೊಂದರ ಬಗೆಗೆ ಇತಿಹಾಸ ತಜ್ಞರು All thes c recores are very late in date and in the face or the early evidence of the genuine grants it is not possible to assert that the early Gangas were Jains, though as tolerant monarchs they made donations to Jaina gurus and Temples. There is no evidence that the early Gangas were personally Jains. On the contrary they were followers of the Vedic religion, celebrating sacrifices Which involved the immolation of animals and worshiping of shiva, Vishnu, and other deities’’[3] ಎಂದು ಅಭಿಪ್ರಾಯಪಟ್ಟಿದ್ದಾರೆ. ಗಂಗರು ಧರ್ಮಸಮನ್ವಯದವರೆಂದೂ, ಪ್ರಾಣಿಬಲಿಯಲ್ಲಿ ನಿರತರಾಗಿದ್ದುದರಿಂದ ಇವರು ಚತುರ್ಥ ವರ್ಣಕ್ಕೆ ಸೇರಿದವರೆಂದೂ ಆಗುತ್ತದೆ. ಗಂಗಡಿಕಾರ ಒಕ್ಕಲಿಗರು ಸಹ ಶಿವ ಮತ್ತು ವಿಷ್ಣುವನ್ನು ಪೂಜಿಸುತ್ತಾರೆ. Gangadikaras worship both shiva and Vishnu have also family gods to whom they show special reverence. They worship minor gods and goddesses, such as Munisvara, Maramma and Duragamma. Bhaire devaru of Chunchana giri near Nagamanagala is the god family tro of many of them.[4] ಮೇಲಿನ ಹೇಳಿಕೆಯಲ್ಲಿ ಧಾರ್ಮಿಕ ನಡವಳಿಕೆಯಲ್ಲಿ ಗಂಗರಿಗೂ ಗಂಗಡಿಕಾರ ಒಕ್ಕಲಿಗರಿಗೂ ಇರುವ ಸಾಮ್ಯವನ್ನು ಕಾಣಬಹುದು. ಗಂಗಡಿಕಾರ ಒಕ್ಕಲಿಗರು ಆನೆಕುಲದವರೆಂದು ಇಂದಿಗೂ ಹೇಳಿಕೊಳ್ಳುತ್ತಾರೆ. ಗಂಗರ ಲಾಂಛನ ಆನೆ ಎಂಬುದನ್ನು ಗಮನಿಸಿದಾಗ ಗಂರು ಗಂಡಿಕಾರ ಕುಲದವರಾಗಿದ್ದು, ಈ ಹಿಂದೆ ಸೂಚಿಸಿರುವಂತೆ ರಾಜಗದ್ದುಗೆ ಏರಿರಬೇಕೆಂದು ಊಹಿಸಲು ಅವಕಾಶವಿದೆ.*

ಬೆಂಗಳೂರು, ಕೋಲಾರ, ಚಿತ್ರದುರ್ಗ ಜಿಲ್ಲೆಯ ಒಕ್ಕಲಿಗರನ್ನು ಮರಸೊಕ್ಕಲಿಗರೆಂದು ಕರೆಯುತ್ತಾರೆ. ಇದರ ಬಗೆಗೂ ದೇಶಸೂಚಕ ಮೊರಸುನಾಡ ಒಕ್ಕಲು ಮೊರಸೊಕ್ಕಲಾಗಿದೆ ಎಂದು ಅಭಿಪ್ರಾಯವಿದೆ. ಅದೇನೇ ಇರಲಿ, ಗಂಗರು ಜೈನರೆಂಬ ಬಗೆಗೆ ಈ ಹಿಂದೆ ಹೇಳಿದ ಉದಾಹರಣೆಗೆ ಪೋಷಕವಾಗಿ ಈ ಭಾಗದ ಉದಾಹರಣೆಗೊಂದು ಸ್ವಾರಸ್ಯಪೂರ್ಣವಾಗಿದೆ. ಈ ಭಾಗದ ಒಕ್ಕಲಿಗರ ಒಂದು ಪಂಗಡ ಜೈನರಾದ ಬಗೆಗೆ ಒಂದು ಕಥೆ ಹೀಗಿದೆ ಶಿವ ಭಸ್ಮಾಸುರನಿಗೆ ಕೇಳಿದವರ ಕೊಟ್ಟ. ಅವನು ಅದನ್ನು ಶಿವನ ಮೇಲೆಯೇ ಪ್ರಯೋಗಿಸಲು ಆಶಿಸಿದ. ಅಪಾಯವರಿತ ಶಿವ ಭೂಲೋಕದತ್ತ ಓಡಿದ. ಆದರೆ ಭಸ್ಮಾಸುರ ಅವನನ್ನು ಹಿಂಬಾಲಿಸಿದ. ಶಿವ ಹೊಲವೊಂದರ ರಾಗಿ ತೆಂಡೆಯಲ್ಲಿ ಅವಿತ. ಅಲ್ಲಿಗೆ ಬಂದ ಭಸ್ಮಾಸುರ ಶಿವನ ಬಗೆಗೆ ಅಲ್ಲಿಯೆ ಇದ್ದ ಒಕ್ಕಲಿಗನನ್ನು ಕೇಳಿದ. ಅವನಿಗೆ ಧರ್ಮಸಂಕಟಕ್ಕಿಟ್ಟುಕೊಂಡಿತು. ನಿಜ ಹೇಳುವಂತಿಲ್ಲ, ಸುಳ್ಳು ಹೇಳುವಂತಿಲ್ಲ. ಕಡೆಗೆ ತನ್ನ ಉಂಗುರ ಬೆರಳನ್ನು ರಾಗಿ ತೆಂಡೆಯತ್ತ ತೋರಿ ನಿಂತ. ಅದರಿಂದ ಶಿವನ ಸುಳಿವರಿತ ರಾಕ್ಷಸ ಅತ್ತ ನುಗ್ಗಿದ, ಅಷ್ಟರಲ್ಲಿ ಅಪಾಯವರಿತ ವಿಷ್ಣು ಮೋಹಿನಿ ರೂಪಾಂತು ಬಂದು ಶಿವನನ್ನು ಪಾರು ಮಾಡಿದ. ಅಪಾಯದಿಂದ ಪಾರಾದ ಶಿವ ಮೋಹಿನಿ ರೂಪಿಗೆ ಮಾರುಹೋದ. ಅವರಿಬ್ಬರೂ ಕೂಡಿದರು. “and the Result was immediate production of three lingas, repectively called Jinnelinga Kallelinga. And Bhairavalinga Which was the very embodiment of Shiva’s essence. He thereupon assigned the first to the Jains, the second to the Kurabas third to the Marasu Vakkaligaru for worship’’[5] ಈ ಎಲ್ಲಾ ಹೇಳಿಕೆಗಳೂ ಗಂಗರು, ಗಂಗಡಿಕಾರರು ಮತ್ತು ಮರಸು ಒಕ್ಕಲಿಗರ ದೇವರು ಮತ್ತು ಸಂಪ್ರದಾಯಗಳಲ್ಲಿ ಸಾಮ್ಯವಿರುವುದನ್ನು ಶ್ರುತಪಡಿಸುತ್ತವೆ. ಕೋಲಾರವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳುತ್ತಿದ್ದ ಗಂಗರಿಗೆ ಜೈನಧರ್ಮದ ಪ್ರಭಾವ ಉಂಟಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅಲ್ಲದೆ ರಾಜನಾದವನು ಎಲ್ಲ ಮತಧರ್ಮಗಳನ್ನು ಸಮಾನವಾಗಿ ಕಾಣುವುದು ಈ ನಾಡಿನ ಪದ್ಧತಿ. ಒಕ್ಕಲಿಗರಂತೂ ಇಂದಿಗೂ ಎಲ್ಲಾ ಧರ್ಮ ಮತ್ತು ದೇವರುಗಳಿಗೂ ನಡೆದುಕೊಳ್ಳುತ್ತಾರೆ. ಇದೇ ಪರಂಪರೆಗೆ ಸೇರಿದ ಆ ಸುತ್ತಿನ ಪಾಳೆಯಗಾರರು, ಗಂಗರು ಕೋಲಾರದಿಂದ ತಲಕಾಡಿಗೆ ಬಂದ ಅನಂತರ ಆ ಭಾಗದ ಆಡಳಿತ ನೋಡಿಕೊಳ್ಳುತ್ತಿದ್ದು, ಗಂಗರ ಅವನತಿಯ ಅನಂತರ ಸ್ವತಂತ್ರರಾಗಿರಬಹುದು. ಅಂತಹ ವಂಶಗಳಲ್ಲಿ ಯಲಹಂತ ನಾಡ ಪ್ರಭುಗಳ ವಂಶವೂ ಒಂದಾಗಿರುವುದು ಅಸಾಧ್ಯವೇನಲ್ಲ.

ಸುಮಾರು ಹನ್ನೆರಡನೆಯ ಶತಮಾನದಿಂದಲೂ ಆವತಿನಾಡು ಅಸ್ತಿತ್ವದಲ್ಲಿದ್ದಂತೆ ಕಂಡುಬರುತ್ತದೆ. ಅದಕ್ಕಿಂತ ಹಿಂದೆ ಆವತಿ ಇರಲಿಲ್ಲವೆಂದಲ್ಲ. ಏಕೆಂದರೆ, ಗಂಗರ ಕಾಲದಲ್ಲಿಯೇ ಈ ಊರುಗಳೆಲ್ಲ ನಿರ್ಮಾಣಗೊಂಡಿದ್ದವು. ಆದರೆ, ಇದು ಒಂದು ಪಾಳೆಯಪಟ್ಟಿನ ಮುಖ್ಯ ಊರಾದುದು ಸರಿಸುಮಾರಿಗೆ ಈ ಕಾಲದಲ್ಲಿ ಎಂದು ಹೇಳಬಹುದು. ಮುಂದೆ ಹದಿಮೂರನೆಯ ಶತಮಾನದ ಆದಿಯಿಂದ ಇದು ಯಲಹಂಕ ನಾಡಾಗಿ ಪರಿವರ್ತಿತವಾಗಿರುವ ಸೂಚನೆಗಳಿವೆ. ಶಕ ೧೨೬೭ರ ಶಾಸನವೊಂದರಲ್ಲಿ “ಶ್ರೀಮನ್ಮಹಾಮಂಡಳೇಶ್ವರಂ ತ್ರಿಭುವನಮಲ್ಲ ನಂದಗಿರಿನಾಥ ಬಂಡಿಕುಲ ಕಮಲವಿಕಸಿತ ದಿವಾಕರ ಅಣ್ಣ ನಂಕಕಾಅ ದೇವರಸರು ಯಲಹಂಕ ನೆಲೆವೀಡಿನೊಳು ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯು”[6]ತ್ತಲಿದ್ದ ವಿಷಯದ ಉಲ್ಲೇಖವಿದೆ. ಇದು ಎರಡು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಒಂದು ಗಂಗರ ಅನಂತರ ಈ ವಂಶದವರು ಸ್ವತಂತ್ರ ರಾಜರೆಂದು ಹೇಳಿಕೊಂಡು ಆವತಿಯಿಂದ ತಮ್ಮ ರಾಜಧಾನಿಯನ್ನು ಯಲಹಂಕಕ್ಕೆ ಬದಲಾಯಿಸಿದರೆಂಬುದು ಮತ್ತೊಂದು ಯಲಹಂಕದ ದೊರೆಗಳು ಇನ್ನೂ ಹೊಯ್ಸಳರ ಸಾಮಂತರಾಗಿರಲಿಲ್ಲವೆಂಬುದು. ಮುಂದೆ ಇವರು ಹೊಯ್ಸಳರಿಗೆ ಸಾಮಂತರಾದ ಬಗೆಗೆ ಆಧಾರಗಳು ದೊರೆಯುತ್ತವೆ. ಶಕ ೧೨೫೧ರ ಶಾಸನವೊಂದರಲ್ಲಿ “ಯಲಹಂಕನಾಡ ಯಚಣಗವುಡಂಗೆ ಕುಱುಗೆರೆಯ ಚತುಸ್ಸೀಮೆಯನು” ಕೊಟ್ಟ ಉಲ್ಲೇಖವಿದೆ. ಇವನು ದೇವರಸಗೌಡನ ತಂದೆಯಾಗಿದ್ದಿರಬೇಕು. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಯಚಣಗವುಡ ಇನ್ನೂ ಅರಸನಾಗಿರಲಿಲ್ಲವೆಂಬುದು. ಇಷ್ಟಾದರೂ ದೇವರಸಗೌಡ ಹೊಯ್ಸಳರಿಗೆ ಅಧೀನನಲ್ಲದಂತೆ ನಡೆದುಕೊಂಡಿರುವುದು ಆಶ್ಚರ್ಯದ ಸಂಗತಿಯಾಗಿದೆ. ಮುಂದೆ ಶಕ ೧೨೬೫ರ ಶಾಸನವೊಂದರಲ್ಲಿ “ಸ್ವಸ್ತಶ್ರೀ ಶಕಾಬ್ದ ೧೨೬೫ನೆಯ ಚೈತ್ರಭಾನು ಸಂ ೧ ಆಶ್ವೀಚ ಶು ೫ ಬ್ರೀ ಶ್ರೀಮತು ಪ್ರತಾಪ ಚಕ್ರವರ್ತಿ ಶ್ರೀ ಹೊಯ್ಸಳ ಶ್ರೀ ವೀರಬಲ್ಲಾಳದೇವರಸರು ಉಣ್ಣಾಮಲೆ ಉಟ್ಟಣದಲು ಪೃಥ್ವಿ ರಾಜ್ಯಂಗೆಯ್ಯುತ್ತಿರಲು ಶ್ರೀಮತು ಮಹಾಲಹಂಕನಾಡ ಸಮಸ್ತ ಪ್ರಜೆಗವುಂಡುಗಳೂ ಮನು ಮಹಾಸಾಮಂತಾಧಿಪತಿ ಮೀಸೆಯರ ಗಂಡ[7] ಭೈರದೇವನ ಮಗ ಚಿಕ್ಕಭೈರದೇವನು ನಾಡಸೇನ ಬೋವ ಆಲಾಳನಿಗೆ “ಶಿಲಾಶಾಸನವ ಮಾಡಿ” ದತ್ತಿಬಿಟ್ಟ ಪ್ರಸಂಗ ಉಲ್ಲೇಖಗೊಂಡಿದೆ. ಇದು ಯಲಹಂಕ ನಾಡು ಹೊಯ್ಸಳರ ಸಾಮಂತ ರಾಜ್ಯವಾಗಿತ್ತೆಂಬುದನ್ನು ಖಚಿತಪಡಿಸುತ್ತದೆ.

ದೇವರಸಗೌಡ ಬಹುಮಟ್ಟಿಗೆ ಯಲಹಂಕನಾಡು ವಿಸ್ತರಿಸಿದನು. ಈತ ಯುದ್ಧ ಚತುರನು ಮಹಾ ಬುದ್ಧಿಶಾಲಿಯೂ ಆಗಿದ್ದಂತೆ ಕಂಡುಬರುತ್ತದೆ. ಶಾಸನದಲ್ಲಿ ಉಕ್ತವಾಗಿರುವ ತ್ರಿಭುವನಮಲ್ಲ, ಅಣ್ಣ ನಂಕಕಾಱ ಈತನು ಶೌರ್ಯಸೂಚಕ ಬಿರುದುಗಳಾದರೆ, ‘‘ಬಂಡಿಕುಕಲ ವಿಕಸಿತ ಕಮಲ ದಿವಾಕರ” ಎಂಬ ಬಿರುದು ಈತ ಯಲಹಂಕನಾಡ ಪ್ರಭು ವಂಶಕ್ಕೆ ಅಪಾರಕೀರ್ತಿ ತಂದವನು ಅರ್ಥಾತ್ ರಾಜ್ಯ ವಿಸ್ತಾರಮಾಡಿದನೆಂಬುದನ್ನು ಸೂಚಿಸುತ್ತದೆ. ದೇವರಸನಿಂದ ಸಾಮಂತ ರಾಜ್ಯದ ಮಟ್ಟಕ್ಕೇರಿದ ಯಲಹಂಕ ನಾಡು ಮುಂದೆ ಅದರ ಅಂತ್ಯದವರೆವಿಗೂ ಅದನ್ನು ಉಳಿಸಿಕೊಂಡೇ ಬಂದಿತು. ಹೀಗೆ ಆವತಿಯ ಪಾಳೆಗಾರರ ವಂಶವೊಂದು ತನ್ನ ಸ್ವಶಕ್ತಿ ಮತ್ತು ಸಾಮರ್ಥಗಳಿಂದ ಮೇಲೇರಿ, ರಾಜಗದ್ದುಗೆಯನ್ನು ಹತ್ತಿತು. ಆದುದರಿಂದ ಈ ವಂಶದವರು ಯಣಮಂಜಿಪುತ್ತೂರಿನಿಂದ ವಲಸೆ ಬಂದು, “ದೇವನಹಳ್ಳಿ ತಾಲೂಕಿನ ಈಗಿನ ಆವತಿ ಗ್ರಾಮದ ಪ್ರದೇಶವನ್ನು ಸೇರಿ, ಉಚಿತವಾದ ಕುಟೀರಗಳನ್ನು ನಿರ್ಮಿಸಿಕೊಂಡು ವ್ಯವಸಾಯವನ್ನು ಕೈಗೊಂಡು ಸುತ್ತಲೆಲ್ಲಾ ಕಾಡಾಗಿದ್ದ ಪ್ರದೇಶವನ್ನು ಹಂತಹಂತವಾಗಿ ನಾಡನ್ನಾಗಿ ಮಾಡುತ್ತಾ ಜೀವನ ಸಾಗಿಸತೊಡಗಿದರು”[8] ಎಂಬುದಾಗಲಿ, ಈ ವಂಶದ ಮೂಲಪುರುಷನೆಂದು ಕರೆಯಲಾಗಿರುವ ರಣಭೈರೇಗೌಡ ಎಂಬುವವನಿಗೆ “ಮಲ್ಲಭೈರೇಗೌಡ, ಸಣ್ಣಭೈರೇಗೌಡ, ವೀರೇಗೌಡ, ಮರಿಗೌಡ, ಗಿಡ್ಡೇಗೌಡ, ತಮ್ಮೇಗೌಡ, ಗಿಡ್ಡಪ್ಪಗೌಡ”[9] ಎಂಬ ಹೆಸರಿನ ಏಳು ಮಂದಿ ಸಹೋದರರಿದ್ದರೆಂಬುದಾಗಲಿ ಸರಿಯಲ್ಲ. ಇಲ್ಲಿ ಸೇರಿಸಿರುವ ಅನೇಕ ಹೆಸರುಗಳು ಯಲಹಂಕ ನಾಡಿನ ಅಧೀನ ಪಾಳೆಯಗಾರರ ಹೆಸರುಗಳಾಗಿವೆ. ಸುಗಟೂರು ತಮ್ಮಣ್ಣಗೌಡನ ಹೆಸರನ್ನು ಈ ಪಟ್ಟಯಲ್ಲಿ ಸೇರಿಸಲಾಗಿದೆ. ಆದರೆ ಈತ ಕೆಂಪನಂಜೇಗೌಡನ ಕಾಲದವನು. ಹೊಳವನಹಳ್ಳಿಯ ರಣಭೈರೇಗೌಡನನ್ನು ಈ ವಂಶದ ಮೂಲ ಪುರುಷನೆಂಬತೆ ಕಾಣಿಸಲಾಗಿದೆ. ಸುಮಾರು ೧೨೪೦ರ ಶಾಸನವೊಂದರಲ್ಲಿ ಬೀರದೇವ ಎಂಬುವನು ಶ್ರೀಮನ್ಮಹಾ ಯಲಹಂಕ ನಾಡ ಪ್ರಭುಗಳು ಬಯಿರದೇವ, ಮಾರಗವುಡ, ತಾಯಿಯಪ್ಪ, ಮಾಯಿದೇವ, ಕನ್ನಗೌಡ ಮುಂತಾದ ತನ್ನ ಹಿರಿಯರಿಗೆ ದತ್ತಿ ಬಿಟ್ಟ ಶಾಸನವಿದೆ. ಇಂತಹ ಅನೇಕ ದತ್ತಿಯ ಶಾಸನಗಳು ಯಲಹಂಕ ನಾಡಿನಲ್ಲಿ ದೊರೆಯುತ್ತವೆ. ಆದರೆ ಯಾವ ಶಾಸನದಲ್ಲಿಯೂ ರಣಭೈರೇಗೌಡ ಈ ವಂಶದವರ ಪಟ್ಟಿಯಲ್ಲಿ ಉಕ್ತವಾಗಿಲ್ಲ. ಯಲಹಂಕದ ಸುತ್ತಮುತ್ತಲಿನ ಪಾಳೆಗಾರರೆಲ್ಲಾ ಗೌಡಪ್ರಭುಗಳೇ ಆಗಿದ್ದು, ಹೆಸರಿನ ಸಾಮ್ಯವಿರುವುದರಿಂದ ಚರಿತ್ರಕಾರರಲ್ಲಿ ಈ ಗೊಂದಲ ಉಂಟಾಗಿರುವಂತೆ ಕಾಣುತ್ತದೆ.

ದೇವರಸಗೌಡನ ಅನಂತರ ಯಲಹಂಕನಾಡಿನ ಸಿಂಹಾಸನಕ್ಕೆ ಬಂದವನು ಭೈರದೇವ ಈತನನ್ನು ಅನೇಕ ಶಾಸನಗಳು “ಬಂಡಿಕುಲತಿಲಕ, ಮೀಸೆಯರಗಂಡ” ಎಂದು ಹೊಗಳಿವೆ. ಈತ ಅದ್ವೀತೀಯ ಶೂರನೂ ಪ್ರಜಾಪಾಲಕನೂ ಆಗಿದ್ದ. ಭೈರದೇವನಿಗೆ ಅಲಾಳನೆಂಬ ನಾಡಸೇನಬೋವನ ಸಹಾಯವಿತ್ತು. ಈತನ ಹೆಸರು ಬರುವಲ್ಲೆಲ್ಲಾ ಅಲಾಳನ ಹೆಸರು ತಪ್ಪದೆ ಬರುತ್ತದೆ. ಈತ ತನ್ನ ನಾಡಿನ ಎಲ್ಲಾ ಕಡೆಗಳಲ್ಲಿಯೂ ಕೆರೆಗಳು ಮತ್ತು ದೇವಾಲಯಗಳನ್ನು ನಿರ್ಮಿಸಿದ. ಈತನು ಸುಂಕದ ಅಧಿಕಾರಿಯೊಬ್ಬ ನುಗ್ಗೇಹಳ್ಳಿಯಲ್ಲಿದ್ದ ಬಗೆಗೆ ಶಾಸನೋಲ್ಲೇಖವಿದೆ. ಈತನ ಮಗ ಚಿಕ್ಕಭೈರದೇವ ಸು. ೧೩೪೦ರಲ್ಲಿ ಹಾಕಿಸಿದ ಶಾಸನವೊಂದರಲ್ಲಿ “ಶ್ರೀಮನ್ಮ ಹಾಪಸಾಯಿತರುಮಪ್ಪ ಮೀಸೆಯರಗಂಡ, ಚಿಕ್ಕ ಬರಿರೆನಾತಕರು ಶ್ರೀಮನ್ಮ, ಹಾ ಯಲಹಂಕ ನಾಡ ಪ್ರಭುಗಳು ಬಯಿರದೇವ, ಮಾರಗವುಂಡ”[10] ಮುಂತಾದ ಹಿರಿಯರು ಮತ್ತು “ನಾಡ ಸೇನ ಬೋವ ಅಲಾಳರಿಗೆ” ಜಕ್ಕೂರು ಗದ್ದೆಯನ್ನು ಶಿಲಾ ಶಾಸನ ಹಾಕಿ ದತ್ತಿಬಿಟ್ಟ ಪ್ರಸಂಗದ ಉಲ್ಲೇಖವಿದೆ. ನಾಡಸೇನ ಬೋವ ಅಲಾಳ ಇಲ್ಲಿ ಗಮನಾರ್ಹ ವ್ಯಕ್ತಿಯಾಗುತ್ತಾನೆ. ಏಕೆಂದರೆ, ಯಲಹಂಕ ನಾಡಿನ ದೊರೆಗಳು ಚರಿತ್ರೆಯಲ್ಲಿ ಶಾನುಭೋಗ ಪ್ರಸಂಗವೊಂದರ ಉಲ್ಲೇಖ ಬರುತ್ತದೆ. ಅದರ ಕಥೆ ಹೀಗಿದೆ; ಒಂದಾನೊಂದು ರಾಜ್ಯ. ಅದರ ರಾಜ ಬಂಡಿ ಬೋರೇಗೌಡ. ಅವನಿಗೆ ಅಧಿಕಾರ, ಅಂತಸ್ತು, ಐಶ್ವರ್ಯ ಹೀಗೆ ಸಕಲವೂ ಇದೆ. ಆದರೆ, ತನ್ನ ವಂಶದ ಕುಡಿಯನ್ನು ಮುಂದುವರಿಸಬಲ್ಲ ಸಂತಾನವಿಲ್ಲ. ಬಂಡಿಬೋರೇಗೌಡ ತನ್ನ ಆರಾಧ್ಯ ದೈವ ರಂಗಧಾಮನಿಗೆ ಮೊರೆಹೊಕ್ಕ. ಕಡೆಗೆ ಅವನಿಗೆ ಒಬ್ಬ ಮಗ ಹಿಟ್ಟಿದ. ಆಮಗು ಮೂಲಾ ನಕ್ಷತ್ರದಲ್ಲಿ ಹುಟ್ಟಿದುದರಿಂದ ತಂದೆ ತಾಯಿಯರಿಗೆ ಮರಣವುಂಟಾಯಿತು. ಆಸ್ತಿಪಾಸ್ತಿಗಳೆಲ್ಲ ಸಾಲಗಾರರ ಪಾಲಾಯಿತು. ಈ ಹಿಂದೆಯೇ ಬಂಡಿಬೋರೇಗೌಡನ ಹಿರಿಯ ಮಗನೊಬ್ಬ ಸತ್ತಿದ್ದ. ಅವನ ವಿಧವೆ ಹೆಂಡತಿ ಹರಿಯಾಲಮ್ಮ ತಬ್ಬಲಿಯಾದ ಮೈದುನನ್ನು ಸಾಕುವ ಹೊಣೆ ಹೊತ್ತಳು. ನಿರ್ಗತಿಕರಾದ ಇವರು ತಮ್ಮ ರಾಜ್ಯದಿಂದ ಮಾಗಡಿ ಪಟ್ಟಣಕ್ಕೆ ಬಂದರು. ಹುಡುಗ ಕೆಂಪೇಗೌಡ ಅಲ್ಲಿನ ಶಾನುಭೋಗರ ಮನೆಯಲ್ಲಿ ಕೆಲಸಕ್ಕೆ ಸೇರಿದ. ಒಂದು ದಿನ ಅವನು ತೋಟದ ಬಾಳೆನೆರಳಿನಲ್ಲಿ ಮಲಗಿದ್ದ. ಅವನ ಮುಖದಮೇಲೆ ಬಿಸಿಲು ಬೀಳುತ್ತಿತ್ತು. ಆಗ ಏಳು ಹೆಡೆಯ ಸರ್ಪವೊಂದು ಅವನ ಮುಖಕ್ಕೆ ಬಿಸಿಲು ಬಿಳದಂತೆ ಹೆಡೆ ಬಿಚ್ಚಿ ನೆರಳು ಮಾಡಿತು. ತೋಟಕ್ಕೆ ಬಂದ ಶಾನುಭೋಗ ಈ ದೃಶ್ಯ ಕಂಡು , ಆ ಹುಡುಗನಿಗೆ ರಾಜಯೋಗವಿದೆ ಎಂದುಕೊಂಡ. ಅಂದಿನಿಂದ ಕೆಂಪೇಗೌಡನಿಗೆ ಅವನು ಎಲ್ಲಿಲ್ಲದ ಆತಿಥ್ಯ ನಡೆಸಲಾರಂಭಿಸಿದ. ನೀನೂ ರಾಜನಾದರೆ ಮಂತ್ರಿಪದವಿ ಕೊಡುತ್ತಿಯಾ? ಎಂದು ಅವನಿಗೆ, ಕೆಂಪೇಗೌಡ ಆಗಲಿ ಎಂದು ಮಾತುಕೊಟ್ಟ. ಆ ಊರ ರಾಜನಿಗೆ ಮಕ್ಕಳಿರಲಿಲ್ಲ. ರಾಜ್ಯದ ಉತ್ತರಾಧಿಕಾರಿಯನ್ನು ಆರಿಸಲು ಆನೆಯ ಸೊಂಡಿಲಿಗೆ ಹಾರ ಕೊಟ್ಟರು. ಅದು ಶಾನುಭೋಗರ ಮನೆಯ ಆಳಾದ ಕೆಂಪೇಗೌಡನಿಗೆ ಹಾರ ಹಾಕಿತು. ಅವನು ರಾಜನಾದ” ಹೀಗೆ ಕೆಂಪೇಗೌಡ ಕೆಲಸಕ್ಕಿದ್ದ ಶಾನುಭೋಗನ ಹೆಸರು ಅಣ್ಣೋಜಿ ಎಂದು ಜನಪದ ಗಾಯಕರು ಹೇಳುತ್ತಾರೆ. ಶಾಸನೋಕ್ತ ಅಲಾಳಜೀಯೇ ಈ ಅಣ್ಣೀಜಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಅಲಾಳ ಯಲಹಂಕದ ನಾಡ ದೊರೆಗಳಿಗೆ ಆಪ್ತನಾಗಿ ಇದ್ದು, ಅವರ ಆಡಳಿತದಲ್ಲಿ ಸಹಾಯಕನಾಗಿದ್ದನು. ಚಾರಿತ್ರಿಕ ನಿಖರತೆಯಿಲ್ಲದೆ ಜನಪದ ಗಾಯಕರು ಮಾಗಡಿ ಕೆಂಪೇಗೌಡ ಅಥವಾ ಎರಡನೆಯ ಕೆಂಪೇಗೌಡನ ಕಾಲದಲ್ಲಿ ಉಂಟಾದ ಘರ್ಷಣೆ ಅಲಾಳನಿಗೂ ಗಂಟುಹಾಕಿದಂತೆ. ಕಾಣುತ್ತದೆ.

ಒಂದನೆಯ ಭೈರದೇವನ ನಂತರ ಸುಮಾರು ೧೩೪೨ರಿಂದ ಬೆಂಗಳೂರು ನಿರ್ಮಾಪಕ ಒಂದನೆಯ ಕೆಂಪೇಗೌಡನ ವರೆಗೆ ಮಾರಗೌಡ, ಜಯಗೌಡ, ನಂಜಪ್ಪಗೌಡ, ಮತ್ತು ಕೆಂಪನಂಜೇಗೌಡ, ಹೀಗೆ ಅನೇಕರು ಯಲಹಂಕ ನಾಡಿನ ಅಧಿಪತಿಗಳಾಗಿ ಆಳಿದ ದಾಖಲೆಗಳು ದೊರೆಯುತ್ತವೆ. ಈ ಮದ್ಯೆ ಒಬ್ಬಿಬ್ಬರು ಅಲ್ಪಸ್ವಲ್ಪ ಕಾಲ ಆಳಿರುವವರ ಹೆಸರುಗಳು ದೊರೆಯುತ್ತವೆ. ಇವರಲ್ಲಿ ಜಯಗೌಡ ಮತ್ತು ಕೆಂಪನಂಜೇಗೌಡ ಹೆಸರುವಾಸಿಯಾದವರಾಗಿ ಇದ್ದರು. ಜಯಗೌಡ ಒಂದನೆಯ ಭೈರದೇವನನ್ನು ಬಹುಶಃ ಮಾದರಿಯಾಗಿಟ್ಟುಕೊಂಡು ಅನೇಕ ಕೆರೆಗಳನ್ನು ಕಟ್ಟಿಸಿ ಜನರು ವ್ಯವಸಾಯನಿರತರಾಗುವಂತೆ ಮಾಡಿದ ದೇವಾಲಯಗಳನ್ನು ಕಟ್ಟಿಸಿದ್ದರೊಂದಿಗೆ ಹಳೆಯವನ್ನು ದುರಸ್ತಿ ಮಾಡಿಸಿದ. ಕೆಂಪೆನಂಜೇಗೌಡನ ಕಾಲದ ಹೊತ್ತಿಗಾಗಲೆ ಯಲಹಂಕ ನಾಡು ವಿಜಯನಗರದ ಸಾಮಂತ ರಾಜ್ಯವಾಗಿದ್ದಿತು. ಕೆಂಪನಂಜೇಗೌಡ ವಿಜಯನಗರದ ಅರಸರ ಪ್ರೀತಿವಿಶ್ವಾಸಗಳಿಗೆ ಪಾತ್ರನಾಗಿದ್ದ. ದಕ್ಷಿಣದ ಕಡೆಯಿಂದ ವಿಜಯನಗರದ ಮೇಲೆ ಶತ್ರುಗಳು ದಾಳಿ ಮಾಡದಂತೆ ತಡೆಯಬಲ್ಲ ಶಕ್ತಿ ಕೆಂಪನಂಜೇಗೌಡನದಾಗಿತ್ತು. ಈತನ ಮಗನೇ ಒಂದನೆಯ ಕೆಂಪೇಗೌಡ, ಬೆಂಗಳೂರು ನಗರ ನಿರ್ಮಾಪಕನೆಂದು ಹೆಸರಾದವನು. ಕ್ರಿ.ಶ. ೧೫೩೧ರಿಂದ, ಅಂದರೆ ಒಂದನೆಯ ಕೆಂಪೇಗೌಡನಿಂದ ಈ ವಂಶದ ಕಡೆಯ ಅರಸನಾದ ಕ್ರಿ.ಶ. ೧೭೧೬ರ ಮುಮ್ಮಡಿ ಕೆಂಪವೀರಪ್ಪಗೌಡನವರೆಗೆ ಚರಿತ್ರಕಾರರು ಸಾಕಷ್ಟು ವಿವರವಾಗಿ ಬರೆದಿದ್ದಾರೆ. ಆದುದರಿಂದ ಈ ಲೇಖನದಲ್ಲಿ ಅವುಗಳ ವಿವರಗಳಿಗೆ ಹೋಗುವ ಅವಶ್ಯಕತೆ ಕಂಡುಬರುವುದಿಲ್ಲ. ಬೆಂಗಳೂರು ಕೆಂಪೇಗೌಡನಿಗಿಂತ ಹಿಂದೆ ಸುಮಾರು ಮುನ್ನೂರು ವರ್ಷಗಳ ಕಾಲ ಯಲಹಂಕನಾಡನ್ನು ಈ ವಂಶದವರು ಆಳಿದ್ದಾರೆ. ಅದರ ರೇಖೆಗಳನ್ನು ಮಾತ್ರ ಈ ಲೇಖನದಲ್ಲಿ ಸೂಚಿಸಲಾಗಿದೆ. ಈ ಎಲ್ಲ ರಾಜರ ಬಗೆಗಿನ ದಾಖಲೆಗಳ ಆಧಾರವಿಲ್ಲದ ಅವರ ವಿಸ್ತೃತ ಚರಿತ್ರೆಯನ್ನು ರೂಪಿಸುವ ಅವಶ್ಯಕತೆಯಿದೆ. ಒಟ್ಟಿನಲ್ಲಿ ಕನ್ನಡನಾಡಿನ ಚರಿತ್ರೆ ಈ ದೃಷ್ಟಿಯಿಂದ ಪುನರ್ನಿರ್ಮಾಣವಾಗಬೇಕಾಗಿದೆ.

ಯಲಹಂಕನಾಡ ಮೂಲಪುರುಷರು ಹೊರಗಿನಿಂದ ಬಂದವರೆಂಬ ವಾದವನ್ನು ಈ ಹಿಂದೆಯೇ ಸೂಚಿಸಲಾಗಿದೆ. ಈ ಬಗೆಗೆ ಮತ್ತೊಂದು ವಾದವಿದೆ. ಕೆಲವರು ವಿದ್ವಾಂಸರು ಆಗಿನ ಕಾಲದಲ್ಲಿ ಕನ್ನಡ ನಾಡು ಕಾಂಜೀವರಂವರೆಗೆ ಇದ್ದಿತೆಂದು ಅಭಿಪ್ರಾಯಪಡುತ್ತಾರೆ. ಆದರೆ ಇದು ವಾಸ್ತವ ಸಂಗತಿ ಅನ್ನಿಸುವುದಿಲ್ಲ. ಏಕೆಂದರೆ ಹದಿನಾಲ್ಕನೆಯ ಶತಮಾನದ ಹೊತ್ತಿಗೆ ಕಾಂಜೀವರಂ ಮದರಾಸು ಪ್ರಾಂತ್ಯ ಎಂಬುದು ನಿಸ್ಸಂದೇಹವಾದ ಮಾತು ಈ ವಂಶದ ಮೂಲಪುರುಷ ಬಗೆಗೆ ಚರಿತ್ರಕಾರರ ಅಭಿಪ್ರಾಯ ಹೀಗಿದೆ; ಈಗ ಮದ್ರಾಸು ಪ್ರಾಂತ ತಮಿಳು ಸೇರಿರುವ ಕಾಂಜೀವರಂ ಜಿಲ್ಲೆಯ ಪೂರ್ವಪ್ರದೇಶಕ್ಕೆ ವೊರಸುನಾಡೆಂದೂ ಅಲ್ಲಿ ವಾಸಿಸುತ್ತಿದ್ದ ಒಕ್ಕಲು ಮಕ್ಕಳಿಗೆ ಮೊರಸು ಒಕ್ಕಲಿಗರೆಂದೂ ಹೆಸರು. ಕಾಂಜೀವರಂ ಸಮೀಪದಲ್ಲಿ ಯಣಮಂಜಿಪುತ್ತೂರೆಂಬ ಗ್ರಾಮದಿಂದ ಮೈಸೂರು ಸೀಮೆಯ ಪೂರ್ವಭಾಗಕ್ಕೆ ಬಂದು ನೆಲೆಸಿದ ಈ ಮೊರಸು ಒಕ್ಕಲಿಗರ ಕೆಂಪೇಗೌಡನ ಪೂರ್ವಜರು.[11]” ಈ ಹೇಳಿಕೆಗೆ ಯಾವ ಆಧಾರವೂ ದೊರೆಯುವುದಿಲ್ಲ. ಈ ಬಗೆಗೆ ಸಾಕಷ್ಟು ವಾದ ವಿವಾದಗಳೂ ಆಗಿ, the meaning of the morasu is not clear. Some say that it is the language which they speak, that is ; but this name is not traceable in usage for the Canarese language. Others say that it means weavers of mat and baskets. This meaning cannot be a correct one as morasus are no where known as having been basket or mat makers . the third and most probable meaning is they are so called because they formerly inhabited a country known by the name of Morasunad’’[12]

ಎಂಬಂತಹ ತೀರ್ಮಾನಗಳಿಗೆ ಬರಲಾಗಿದೆ. ಬೆಂಗಳೂರು ಕೆಂಪೇಗೌಡನ ಪೂರ್ವಿಕರು ಮೊರಸು ನಾಡಿನವರೆಂಬುದು ಸರಿ ಆದರೆ ಅದು ಮದ್ರಾಸು ಪ್ರಾಂತ್ಯದಲ್ಲಿತ್ತೆಂಬುದು ಮಾತ್ರ ಸರಿಯಲ್ಲ. ಏಕೆಂದರೆ ಗಂಗರ ಕಾಲದಿಂದಲೂ ಬೆಂಗಳೂರು, ತುಮಕೂರು, ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳ ಕೆಲವು ಭಾಗಗಳು ಸೇರಿ ಸುಮಾರು ಶಿವಗಂಗೆಯಿಂದ ಮುಳಬಾಗಿಲು ಚನ್ನಪಟ್ಟಣದಿಂದ ಹಿಂದುಪುರದವರೆಗಿನ ಭಾಗಕ್ಕೆ ಮರಸುನಾಡೆಂದು ಹೆಸರಿದ್ದ ಬಗೆಗೆ ಶಾಸನಾಧಾರಗಳು ದೊರೆಯುತ್ತವೆ. ಮೊರಸು ಎಂಬುದಕ್ಕಿಂತ ‘ಮರಸು’ ಎಂಬುದು ಸರಿಯಾದ ರೂಪವೆಂದು ಕಾಣುತ್ತದೆ. ಏಕೆಂದರೆ ಮೊರಸು ಎಂಬ ಶಬ್ದಕ್ಕೆ ಕಿಟ್ಟೆಲ್ರವರು the hide, To keep oneself out of view ಎಂದು ಅರ್ಥೈಸಿದ್ದಾರೆ. ಇದರಿಂದ ಮರಸು ನಾಡೆಂದರೆ ಬೆಟ್ಟಗುಡ್ಡಗಳ ಪ್ರದೇಶವೆಂದು ಹೆಸರಿಸುವಂತೆ ಅಲ್ಲದೆ ಮೊರಸು ನಾಡಿನ ಬೇಡ ಪಡೆ ಗೆರಿಲ್ಲಾ ಯುದ್ಧದಲ್ಲಿ ಎತ್ತಿದ ಕೈ ಎಂಬ ವಿವರ ಕನ್ನಡ ಸಾಹಿತ್ಯ ಕೃತಿಗಳಲ್ಲಿ ನಮಗೆ ದೊರೆಯುತ್ತದೆ. ಆದುದರಿಂದ ಈ ಭಾಗದ ಜನರಿಗೆ ಅದರಲ್ಲೂ ವಿಶೇಷವಾಗಿ ಒಕ್ಕಲಿಗ ಮೊರಸು ಒಕ್ಕಲಿಗರೆಂದು ಹೆಸರಾಗಿರುವಂತೆ ಕಾಣುತ್ತದೆ.

ಗಂಗರ ಕಾಲದಿಂದಲೂ ಈ ಭಾಗಕ್ಕೆ ಮೊರಸು ನಾಡೆಂದು ಹೆಸರಿದ್ದಿತು. ಗಂಗರಾಜ ಪೆರ್ಮಾನಡಿಯ ಕಾಲದ ಶಾಸನವೊಂದರಲ್ಲಿ “ಸ್ವಸ್ತಿಶ್ರೀ ಪೆರ್ಮಾನಡಿ ಪ್ರಿಥಿವೀ ರಾಜ್ಯಗೆಯೆ ನೊಳಂಬ ಶಿವಮಾರಂ ಮೊರಸು ನಾಡುನಾಳುತ್ತಿರೆ[13]” ಎಂಬ ಉಲ್ಲೇಖವಿದೆ. ಮಾಧವ ವರ್ಮನ ಕಾಲದ ಶಾಸನವೊಂದರಲ್ಲಿ ಮಾಧವಮಹಾಧಿರಾಜರ್ ಕೊರದು ತಮ್ಮ ಕುಲ ಬ್ರಾಹ್ಮಣರ್ ಕಂಗಮಂಗಲವರಕ್ಕೆ ಕೊಣ್ಣಿಂದನಾಮ ಗೋತ್ರಸ್ಯ ಗತಿವರ್ಮ ಪಸೆತಾದು ಮೊರಸ ನಾಡ ಪೆಂರ್ಪ್ರಸುರ್ ನಾಮಗ್ರಾಮ ಅದರ ತಟಕದ ವಟಿಗೈ ಕಡೆಕೊಟ್ಟ ಮೂಡೈದಿಸೆಯದು”[14] ಎಂಬ ಉಲ್ಲೇಖವಿದೆ. ವಿಜಯನಗರದ ಕೃಷ್ಣದೇವರಾಯನ ಕಾಲದ ಶಾಸನವೊಂದರಲ್ಲಿ “ಮೊರಸೇನಾಡಕ್ಕೆ ಸಂಸ್ಥೆ ಹೊರಕೋಟ್ಯಾಖಸೀಮಗಂ ಸಂಸ್ಥಿತಂ ಪೂರ್ವದಿಗ್ಬಾಗೇ ಗೋಪುರ ಪಲ್ಲಿತ[15]” ಎಂಬ ಉಲ್ಲೇಖವಿದೆ. ಇದರಿಂದ ಗಂಗರಾಜ್ಯ ಸಂಸ್ಥಾಪಕರಲ್ಲೊಬ್ಬನಾದ ಮಾಧವನ ಕಾಲದಿಂದ ವಿಜಯನಗರದ ಹೆಸರಾಂತ ಚಕ್ರವರ್ತಿ ಕೃಷ್ಣದೇವಾರಾಯನ ಕಾಲದವರೆಗೆ ಈ ಪ್ರದೇಶಕ್ಕೆ ಮರಸುನಾಡೆಂದು ಹೆಸರಿದ್ದಿತೆಂಬುದು ಸ್ಪಷ್ಟವಾಗುತ್ತದೆ. ಶಾಸನಗಳಷ್ಟೇ ಅಲ್ಲದೆ ಕನ್ನಡ ಮತ್ತು ಸಂಸ್ಕೃತದ ಕೆಲವು ಕಾವ್ಯಗಳಲ್ಲಿಯೂ ಮರಸು ನಾಡಿನ ಉಲ್ಲೇಖ ದೊರೆಯುತ್ತದೆ. ಇವೆಲ್ಲಾ ಇತ್ತೀಚಿನವು. ಮೈಸೂರಿನ ಅರಸ ಚಿಕ್ಕದೇವರಾಜನ ವಿಜಯೋತ್ಸವ ಕುರಿತು ತಿರುಮಲಾರ್ಯ ಬರೆದಿರುವ ‘ಚಿಕ್ಕದೇವರಾಜ ವಿಜಯ’ ಕಾವ್ಯದಲ್ಲಿ ಮರಸು ನಾಡು ಮತ್ತು ಅದರ ಪಡೆಯ ಪ್ರಸ್ತಾಪ ಬರುತ್ತದೆ,

ಪಲರುವಮೊಳನಾಡದೊರೆಗಳ್
ಮಲೆನಾಡುಗರೊಡನೆ ಬೇಡ ಮೊರಸರುಮೆನ್ನಿ
ಬಲದೊಡಘರದಿರೆ ಧರೆಯೊಳ್
ಮಲೆಪರದಾರೆಂದು ನಿಂದನಂದಟಿಂದ [16] ಮೊರಸು ರಾಜ್ಯವ ಹೊಕ್ಕು ತುರುವನುಸೆರೆವಿಡಿ
ದಿರದೆಜನರ ಕಂಗೆಡಿಸಿ
ಶರಣು ಹೊಕ್ಕರಿಗೆ ನಂಬುಗೆಯ ಕೊಟ್ಟು ಮುಂದಕ್ಕೆ
ತೆರಳಿದನಾ ಖಾನನಾಗ [17]…..

ಮೇಲಿನ ಉದಾಹರಣೆಗಳು ವಿಜಯನಗರದ ಪಥನಾನಂತರವೂ ಯಲಹಂಕ ನಾಡಿನ ಮರಸು ನಾಡೆಂದು ಹೆಸರಿದ್ದ ಬಗೆಗೆ ಸೂಚನೆ ನೀಡುತ್ತವೆ. ಕಂಠೀರವ ನರಸರಾಜ ವಿಜಯದಲ್ಲಿ ತುಮಕೂರು ಮತ್ತು ಶಿವಗಂಗೆಯ ಮಾರ್ಗವಾಗಿ ರಣದುಲ್ಲಾಖಾನ ಮರಸು ನಾಡನ್ನು ಪ್ರವೇಶಿಸಿದನೆಂದು ವಿವರಣೆಯಿದೆ. ಈ ಎಲ್ಲ ಆಧಾರಗಳಿಂದ ಯಲಹಂಕ ನಾಡಿಗೆ ಅತ್ಯಂತ ಪ್ರಾಚೀನ ಕಾಲದಿಂದಲೂ ಮರಸು ನಾಡೆಂದು ಹೆಸರಿದ್ದಿತೆಂಬುದು ಖಚಿತವಾಗುತ್ತದೆ.

ಆವತಿ ನಾಡು ಮತ್ತು ಆ ಊರಿನ ಹೆಸರು ಬಂದ ಕಾರಣವನ್ನು ಕೊಡುವಲ್ಲಿ ಸಹ ಚರಿತ್ರೆಕಾರರು ಎಡವಿದ್ದಾರೆ. ಈ ವಂಶದ ಮೂಲಪುರುಷ ನೆಂದು ಕರೆಯಲಾದ ರಣಭೈರೇಗೌಡ ಮತ್ತು ಅವನ ಏಳು ಮಂದಿ ಸಹೋದರರು ಈಗಿನ ಆವತಿಯ ಪ್ರದೇಶದಲ್ಲಿ ನಿಂತರೆಂದೂ ಅಲ್ಲಿಯೇ ಕುಟೀರಗಳನ್ನು ನಿರ್ಮಿಸಿ ವಾಸಿಸಲಾರಂಭಿಸಿದರೆಂದೂ ಕೆಲಸಮಾಡುವಾಗ ರಣ ಭೈರೇಗೌಡನ ಮಗುವೊಂದನ್ನು ಕುಟೀರದ ಮುಂದಿದ್ದ ಹತ್ತಿಯ ಮರದ ರೆಂಬೆಗೆ ಜೋಲಿಯಲ್ಲಿ ಮಲಗಿಸಿ ನೇತುಹಾಕಿದ್ದರೆಂದೂ, “ಒಂದು ದಿನ ಮಧ್ಯಾಹ್ನ ತೊಟ್ಟಿಲಲ್ಲಿ ಮಗು ನಿದ್ರಿಸುತ್ತಿತ್ತು. ಸನಿಹದಲ್ಲಿ ಯಾರು ಇರಲಿಲ್ಲಬಿಸಿಲು ಮಗುವಿನ ಮುಖಕ್ಕೆ ಸರಿಯಾಗಿ ಬಿದ್ದಿತು, ಆ ಸಮಯಕ್ಕೆ ಹತ್ತಿ ಗಿಡದ ಪೊಟರೆಯಲ್ಲಿದ್ದ ಮಹಾಸರ್ಪವೊಂದು ಹೊರಬಂದು ಮಗುವಿನ ಮುಖಕ್ಕೆ ತನ್ನ ಬಿಚ್ಚಿದ ಹೆಡೆಯಿಂದ ನೆರಳುಹಾಯಿಸುತ್ತಿತ್ತು. ಈ ಗ್ರಾಮ ಹಾವು ಮರಕ್ಕೆ ಸ್ಥಳ. ಹಾವು – ಹತ್ತಿ ಆವತಿಯಾಗಿ ಖ್ಯಾತಿ ಹೊಂದುತ್ತದೆ. ಕಾಲ ಮುಂದುವರಿಯಿತು. ಒಂದು ಸಣ್ಣ ನಗರವೇ ಆಗಿ ಬೆಳೆಯುತ್ತಾ ಹೋಯಿತು.”[18] ಮೇಲಿನ ಹೇಳಿಕೆ ಅವೈಜ್ಞಾನಿಕವೂ ಚಾರಿತ್ರಿಕ ಅಂಶಗಳಿಗೆ ವಿರುದ್ಧವೂ ಆಗಿದೆ. ಇದು ರಾಜರಾದವರ ಜನ ಸಾಮಾನ್ಯರಿಗಿಂತ ಬೇರೆಯವರೂ ಉನ್ನತಮಟ್ಟದವರೂ ಎಂದು ತೋರಿಸಲು ಕಲ್ಪಿಸಿದ ಕಟ್ಟು ಕಥೆ. ಮಲಗಿದ ವ್ಯಕ್ತಿಯ ಮುಖಕ್ಕೆ ನೆರಳು ಮಾಡಿದ ಸರ್ಪ, ನಿರ್ಗತಿಕ ಹುಡುಗನಿಗೆ ಹಾರ ಹಾಕಿದ ಆನೆ, ದೇವರು ಕನಸಿನಲ್ಲಿ ಬಂದು ಇಂತಹವನು ರಾಜನಾಗುತ್ತಾನೆಂದು ಹೇಳುವುದು, ಇವೆಲ್ಲಾ ಸಾಮಾನ್ಯವಾಗಿ ಎಲ್ಲ ರಾಜವಂಶಗಳ ಬಗೆಗೂ ಜನಪದದಲ್ಲಿ ಇರುವ ನಂಬಿಕೆಗಳಾಗಿವೆ. ಆದುದರಿಂದ ಹಾವು – ಹತ್ತಿ ಎನ್ನುವುದು ಆವುತಿಯಾಯಿತೆಂಬುದು ಸರಿಯಲ್ಲ. ಆ ನಾಡಿಗೆ ಆ ಹೆಸರು ಬಂದುದು ಆಹುತಿಯಿಂದ. ಒಂದು ಕಾಲಕ್ಕೆ ನರಬಲಿಗೆ ಹೆಸರಾಗಿದ್ದ ಆಭಾಗಕ್ಕೆ ಆಹೆಸರು ಬಂದಿದೆ.

ವಿರಶೈವಧರ್ಮ ಹಬ್ಬುವುದಕ್ಕೂ ಮೊದಲು ಶೈವ ಸಂಪ್ರದಾಯದಲ್ಲಿ ಕಾಪಾಲಿ ಪಂಥ ಉಗ್ರವಾದಿಗಳದ್ದು. ಹೆಸರೇ ಸೂಚಿಸುವಂತೆ ನರಕಪಾಲ ಹಿಡಿದ ಉದಾಹರಣೆ. ಕಾಳಿಯ ಕಲ್ಪನೆಯೂ ಹೀಗಯೇ ಬಂದದು. ಈ ಪಂಥದ ಜನರಲ್ಲಿ ನರಬಲಿ ಜಾರಿಯಲ್ಲಿದ್ದುದಕ್ಕೆ ಅನೇಕುದಾಹರಣೆಗಳು ದೊರೆಯುತ್ತವೆ ಮರಸು ಒಕ್ಕಲಿಗರಲ್ಲಿ ಇಂತಹ ನರಬಲಿ ಜಾರಿಯಲ್ಲಿದ್ದ ಬಗೆಗೆ ಈ ಹಿಂದೆ ಸೂಚಿಸಿದ ಶಿವ ಮತ್ತು ಮೋಹಿನಿಯರ ಸಂಗಮದ ಕಥೆಯನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ರೈತ ರಾಗಿಯ ತೆಂಡೆಯತ್ತ ತೋರಿದ ಬೆರಳನ್ನು ಕತ್ತರಿಸಿ ಹಾಕಲು ಶಿವ ಯೋಚಿಸಿದ. ಅಷ್ಟುಹೊತ್ತಿಗೆ ಅಲ್ಲಿಗೆ ಬಂದ ಅವನ ಹೆಂಡತಿ ತನ್ನ ಗಂಡನ ಬೆರಳನ್ನು ಕತ್ತರಿಸಬಾರದೆಂದೂ ಅವನೊಂದು ಬೆರಳಿಗೆ ಪ್ರತಿಯಾಗಿ ತನ್ನ ಎರಡು ಬೆರಳುಗಳನ್ನು ಕೊಡುವುದಾಗಿಯೂ ಪ್ರಾರ್ಥಿಸಿಕೊಂಡಳು. ಅದರಂತೆ, There is a peculiar religious rite performed among these people. Their women offer as sacrifice to Bhairava linga or Bandideraru (the shiva Phallaus so called) the first joints of their. Right hand ring and little fingrs. Which are cut off by the village carpenter……. ಎಂಬ ಪದ್ಧತಿ ನಡೆದುಕೊಂಡು ಬಂದಿದೆ. ಈಗಲೂ ಈ ಭಾಗದಲ್ಲಿ ಹಿರಿಯರು ಬಹಳ ಕಾಲದ ಹಿಂದೆ ಮನೆಯ ಹಿರಿಯ ಮಗಳನ್ನು ಬಲಿಕೊಡುತ್ತಿದ್ದರಂತೆ, ಆಮೇಲೆ ಭೈರಾಜ ಎಂಬುವನು ಇದನ್ನು ತಪ್ಪಿಸಿದನಂತೆ ಎಂದು ಹೇಳುತ್ತಾರೆ. ಹೀಗೆ ಮೊದಲಿಗೆ ಮಗಳನ್ನು ಬಲಿಕೊಡುವುದರಿಂದ ಬೆರಳಿಗಿಳಿದಿರಬೇಕು. ಈಗಲೂ ಆ ಭಾಗದವರನ್ನು ಬೆರಳೊಕ್ಕಲಿಗರೆಂದು ಕರೆಯುತ್ತಾರೆ. ಮೇಲೆಹೇಳಿದ ಭೈರರಾಜ ಒಂದನೆಯ ಭೈರದೇವನೆಂದು ಊಹಿಸಲವಕಾಶವಿದೆ. ಏಕೆಂದರೆ ಅವನಿಗೆ ಸಹಾಯಕನಾಗಿದ್ದ ನಾಡ ಸೇನ ಬೋವ ಅಲಾಳ ಇಂತಹ ದುಷ್ಟ ಪದ್ದತಿಯನ್ನು ತಪ್ಪಿಸುವಲ್ಲಿ ನೆರವಾಗಿರಬೇಕೆಂದು ಕಾಣುತ್ತದೆ.

ಕಾಲ ಬದಲಾದಂತೆ ಜನಗಳಲ್ಲಿ ಮನೆ ಮಾಡಿಕೊಂಡಿರುವ ನಂಬಿಕೆಗಳೂ ಬದಲಾಗುತ್ತಾ ನಡೆಯುತ್ತವೆ. ಅಂತೆಯೆ ಮರಸು ನಾಡಿನವರಲ್ಲಿ ನರಬಲಿಯ ಪದ್ದತಿಯೂ ಮಾರ್ಪಾಡಾಯಿತು. ಹಿರಿಯ ಮಗಳನ್ನೇ ಬಲಿಕೊಡುತ್ತಿದ್ದವರು ಎರಡು ಬೆರಳುಗಳನ್ನು ಕೊಡಲಾರಂಭಿಸಿದರು. ಒಂದನೆಯ ಕೆಂಪೇಗೌಡ ಈ ಪದ್ದತಿಯನ್ನು ಸಂಪೂರ್ಣವಾಗಿ ನಿಷೇಧಿಸಿದಂತೆ ಕಾಣುತ್ತದೆ. ಜನರ ಮನದಾಳದಲ್ಲಿ ತಲೆತಲಾಂತರಗಳಿಂದ ಬೇರೂರಿದ್ದ ಒಂದು ಪದ್ಧತಿಯನ್ನು ಒಮ್ಮೆಲೇ ತೆಗಿಯುವುದು ನಿರಂಕುಶಾಧಿಕಾರಿಯಾದ ರಾಜನಿಗೂ ಕೆಲವೊಮ್ಮೆ ಕಷ್ಟ ಸಾಧ್ಯ. ಆದುದರಿಂದಲೇ ಹಿಟ್ಟಿನ ಅಥವಾ ಲೋಹದ ಪ್ರತಿಮೆ ಮಾಡಿಸಿ ಬಲಿ ಹಾಕುವುದು ಮುಂದುವರಿಯಿತು. ರಾಜನ ವ್ಯಾಪ್ತಿಯಿಂದದೂರವಾದ ಗ್ರಾಮಾಂತರ ಪ್ರದೇಶಗಳಲ್ಲಿ ಬೆರಳು ಕೊಡುವ ಪದ್ಧತಿ ಮುಂದುವರಿದುದಕ್ಕೆ ಉದಾಹರಣೆಗಳಿವೆ. “The people may roughly be classed under three heads: 1) Those whose women offer the above said sacrifice, 2)Those who do not perfofm the rite, 3) Those who offer a golden substitute. These section however freely intermarry with one another and it is only in performance of the sacrifice that difference between them exists.[19] ಮೇಲಿನ ಹೇಳಿಕೆ ಇತ್ತೀಚಿನವರೆಗೂ ಈ ಜನರಲ್ಲಿ ಬೆರಳನ್ನು ಬಲಿಕೊಡುವ ಪದ್ಧತಿಯಿತ್ತೆಂಬುದನ್ನು ಶ್ರುತಪಡಿಸುತ್ತದೆ. ಇಂದಿಗೂ ಜನಪದ ಬೈಗುಳದಲ್ಲಿ ‘ನಿನ್ನ ಆವುತಿ’ ಕೊಡ ಎಂಬ ಮಾತು ಗ್ರಾಮೀಣ ಜನರಲ್ಲಿ ವಿಶೇಷವಾಗಿ ಒಕ್ಕಲಿಗರಲ್ಲಿ ಉಳಿದುಕೊಂಡಿದೆ. ಒಂದು ಕಾಲಕ್ಕೆ ನರಬಲಿಯಾಗಿದ್ದದು ಕ್ರಮೇಣವಾಗಿ ಬೆರಳು, ಪ್ರತಿಮೆ ಮುಡಿ ಕೊಡುವುದು ಹೀಗೆ ಲಯವಾಗುತ್ತಾ ಬಂದಿತು. ಹೀಗೆ ಆಹುತಿ ಕೊಡುತ್ತಿದ್ದ ಆ ಜಾಗಕ್ಕೆ ಆಹುತಿ ಎಂದೇ ಹೆಸರಾಯಿತು. ಅನಂತರ ಆಹುತಿಯಾಯಿತೇ ವಿನಾ ಹಾವು – ಹತ್ತಿ ಎಂಬುದು ಸರಿಯಲ್ಲ.

ಬೆಂಗಳೂರು ನಗರ ನಿರ್ಮಾಣದ ಬಗೆಗೆ ಖಚಿತವಾದ ಚಾರಿತ್ರಿಕ ಆಧಾರಗಳು ದೊರೆಯುವುದಿಲ್ಲ. ಒಂದನೆಯ ಕೆಂಪೇಗೌಡನ ಕಾಲದಲ್ಲಿ ಈ ಭಾಗ ಕಾಡಾಗಿತ್ತು. ಎಂದೂ ಅಲ್ಲಿ ಈ ಹಿಂದೆಯೇ ಒಂದು ನಗರವಿತ್ತು ಎಂದೂ ವಾದವಿವಾದಗಳೆದ್ದಿವೆ. ಅದೇನೇ ಇರಲಿ, ಬೆಂಗಳೂರು ನಗರದ ನಿರ್ಮಾಣದ ಬಗೆಗೆ ಒಂದು ಸ್ಪಷ್ಟ ತೀರ್ಮಾನಕ್ಕೆ ಬರುವುದು ಸಾಧ್ಯ. ಏಕೆಂದರೆ ಒಂದನೆಯ ಕೆಂಪೇಗೌಡ ವಿಜಯನಗರದ ಅರಸನಾದ ಕೃಷ್ಣದೇವರಾಯ ಮತ್ತು ಅಚ್ಚುತರಾಯ ಇವರಿಗೆ ಬಹಳ ಆಪ್ತನಾಗಿದ್ದನು. ಇವನ ಕಾಲದಲ್ಲಿ ಯಲಹಂಕ ನಾಡು ಸಂಪತ್ತು ಮತ್ತು ಸಮೃದ್ಧಿಯ ನಾಡಾಗಿದ್ದಿತು. ದಕ್ಷಿಣದಿಂದ ವಿಜಯನಗರದ ಪ್ರಬಲ ರಕ್ಷಣೆಯಾಗಿದ್ದುದು ಯಲಹಂಕ ನಾಡು. ಈ ಕಾರಣದಿಂದಾಗಿ ಒಂದನೆಯ ಕೆಂಪೇಗೌಡ ಹಲವಾರು ಬಾರಿಯಾದರೂ ರಾಜಧಾನಿಗೆ ಭೇಟಿಕೊಟ್ಟಿರಬೇಕು. ಇದೇ ಕಾಲದಲ್ಲಿಯೇ ವಿಜಯನಗರ ಲೋಕವಿಖ್ಯಾತ ಮಹಾನಗರವಾಗಿತ್ತು. ಪ್ರಾಯಃ ಈ ಅದ್ದೂರಿಯ ರಾಜಧಾನಿ ಕೆಂಪೇಗೌಡನ ಮೇಲೆ ಬಹಳ ಪರಿಣಾಮ ಮಾಡಿದ್ದಿರಬೇಕು. ಸ್ವಭಾವತಃ ಮಹಾತ್ವಾಕಾಂಕ್ಷಿಯೂ, ಸಮರ್ಥನೂ ಆದ ಕೆಂಪೇಗೌಡನಿಗೆ ತಾನೇಕೆ ಇಂತಹ ಒಂದು ನಗರವನ್ನು ನಿರ್ಮಾಣ ಮಾಡಬಾರದು ಎಂದು ಅನ್ನಿಸಿರಬೇಕು. ಈ ಕಾರ್ಯಕ್ಕೆ ಬೇಕಾದ ಚಕ್ರವರ್ತಿಯ ಅನುಮೋದನೆ ದೊರೆಯುವುದರಲ್ಲಿಯೂ ಅವನಿಗೇನೂ ಅನುಮಾನವಿರಲಿಲ್ಲ. ಏಕೆಂದರೆ ಒಂದನೆಯ ಕೆಂಪೇಗೌಡ ವಿಜಯನಗರದ ಅತ್ಯಂತ ಸಮರ್ಥನೂ ಆಪ್ತನೂ ಆದ ಸಾಮಂತ ರಾಜನಾಗಿದ್ದ. ಈ ಎಲ್ಲ ಪೂರ್ವ ತಯಾರಿಗಳನ್ನು ಮಾಡಿಕೊಂಡು ಒಂದು ಸೂಕ್ತ ಸ್ಥಳ ಮತ್ತು ಒಳ್ಳೆಯ ಮುಹೂರ್ತವನ್ನು ಕಾಯುತ್ತಿದ್ದ. ಆಗ ಯಲಹಂಕದಿಂದ ಅನತಿ ದೂರದಲ್ಲಿಯೇ ಇದ್ದ ಈಗಿನ ಬೆಂಗಳೂರು ಭಾಗ ಅವನ ಮನಸ್ಸಿಗೆ ಬಂದಿರಬೇಕು. ಈ ಭಾಗಕ್ಕೆ ಶಿವನಸಮುದ್ರ ಎಂಬ ಹೆಸರಿದ್ದಿತೆಂದೂ ಅದನ್ನು ವಿಜಯನಗರದ ಅರಸರು ನಗರ ನಿರ್ಮಾಣಕ್ಕಾಗಿ ಕೆಂಪೇಗೌಡನಿಗೆ ಕೊಟ್ಟರೆಂದೂ ಕೆಲವುರ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಈ ಬಗೆಗೆ ಖಚಿತವಾಗಿ ಹೇಳಲು ಬರುವುದಿಲ್ಲ. ವಿಜಯನಗರದ ಅರಸರು ಶಿವನಸಮುದ್ರ ಪ್ರಾಂತವನ್ನು ಯಲಹಂಕ ನಾಡಿಗೆ ವಹಿಸಿದ ಉಲ್ಲೇಖವೇನೋ ಶಾಸನಗಳಲ್ಲಿ ದೊರೆಯುತ್ತದೆ. ಆದರೆ ಅದು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶ ಎಂದು ಹೇಳಲಾಗುವುದಿಲ್ಲ. ಏಕೆಂದರೆ ರಾಜಧಾನಿ ಯಲಹಂಕಕ್ಕೆ ಅಷ್ಟು ಹತ್ತಿರದಲ್ಲಿದ್ದ ಭಾಗ ಕೆಂಪೇಗೌಡನ ವಂಶಸ್ಥರಿಗೆ ಸೇರಿರಲಿಲ್ಲವೆ? ಇದು ನಂಬಲುಸಾಧ್ಯ ವಾದ ವಿಷಯ. ಬಹಳ ಹಿಂದಿನಿಂದಲೂ ಈ ಭಾಗಗಳೆಲ್ಲ ಯಲಹಂಕ ನಾಡಿಗೆ ಸೇರಿದ್ದು ಎಂಬುವುದಕ್ಕೆ ಆಧಾರಗಳಿವೆ. ಈ ಕಾರಣದಿಂದಾಗಿ ಶಿವನಸಮುದ್ರ ಎಂಬುದು ಕಾವೇರಿಯ ಪ್ರದೇಶವಾಗಿದ್ದು ಅದನ್ನು ವಿಜಯನಗರದ ಅರಸರು ಯಲಹಂಕ ರಾಜರಿಗೆ ವಹಿಸಿಕೊಟ್ಟಿರಬೇಕು ಎಂದು ಊಹಿಸಲು ಅವಕಾಶವಿದೆ.

 

[1] ಕರ್ನಾಟಕ ಇತಿಹಾಸ ದರ್ಶನ, ಸಂ. ಎಂ. ವಿ. ಕೃಷ್ಣರಾವ್ ಮತ್ತು ಟಿ. ಕೇಶವಭಟ್ಟ, ಪುಟ ೩೬

[2] ಕರ್ನಾಟಕ ಇತಿಹಾಸ ದರ್ಶನ , ಸಂ. ಎಂ. ವಿ. ಕೃಷ್ಣರಾವ್ ಮತ್ತು ಟಿ. ಕೇಶವಭಟ್ಟ ಪುಟ ೨೭

[3] Early gangas of talked S. Srikanta, p 45

[4] Mysor tribes and castes vol. 3 page 183

* ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ Histry of westen gangas ಗ್ರಂಥದಲ್ಲಿ ಗಂಗರು, ಗಂಗಡಿಕಾರ ಒಕ್ಕಲಿಗರೆಂದು ಒಪ್ಪಲಾಗಿದೆ.

[5] The Indian antiquary, page 50

[6] Epigraphia carnatica, vol 4. 9

[7] E. C. vol 9

[8] ಬೆಂಗಳೂರು ಕೆಂಪೇಗೌಡ, ಡಾ. ಎಂ. ವಿ. ಕೃಷ್ಣರಾವ್, ಪುಟ ೧೩

[9] ಬೆಂಗಳೂರು ಕೆಂಪೇಗೌಡ. ಡಾ. ಎಂ. ವಿ. ಕೃಷ್ಣರಾವ್, ಪುಟ ೬

[10] Epigraphia Carnatika, vol. 6, ಬೆಂ. 21

[11] ಬೆಂಗಳೂರು ಕೆಂಪೇಗೌಡ ಡಾ. ಎಂ. ವಿ. ಕೃಷ್ಣರಾವ್, ಪುಟ ೬

[12] The mysore Tribes and clasts, IV page 226

[13] E. C. Vol 6, ಬೆಂಗಳೂರು 40

[14] M. A. R. 1941. p. 27

[15] E. C. Vol. 9 ಬೆಂಗಳೂರು. 30

[16] ಚಿಕ್ಕದೇವರಾಜ ವಿಜಯ, ತಿರುಮಲಾರ್ಯ ಆ ೨ – ೪೦

[17] ಕಂಠೀರವ ನರಸರಾಜ ವಿಜಯ, ಭಾರತಿನಂಜ ೧೧ – ೫೬

[18] ಬೆಂಗಳೂರು ಕೆಂಪೇಗೌಡ ಡಾ. ಎಂ ವಿ. ಕೃಷ್ಣರಾವ್, ಪುಟ ೧೫

[19] The Indian Antiquary page 51