ಹಳ್ಳಿಗರು ಒಬ್ಬರನೊಬ್ಬರು ಕೆಳುವ ಮೊದಲ ಪ್ರಶ್ನೆ ‘‘ನಿಮ್ಮ ಕಡೆ ಮಳೆ ಬೆಳೆ ಹೇಗೆ?” ಎಂಬುದು. ನಗರದವರು, ನಾಗರಿಕರಾದರೆ ಕ್ಷೇಮಸಮಾಚಾರ, ಕುಶಲಪ್ರಶ್ನೆ, ಆಮೇಲೆ ಮನೆವಾರ್ತೆಗಳು ಹೀಗೆ ಕೇವಲ ತಮ್ಮ ವೈಯಕ್ತಿಕ ಬದುಕಿನ ಸುತ್ತಮುತ್ತ ಮಾತ್ರ ಸುತ್ತುತ್ತಾರೆ. ಆದರೆ ನಮ್ಮ ಜನಪದರು ಲೋಕ ಬದುಕಬೇಕು, ಅದು ಬದುಕಿದರೆ ನಾವು ಬದುಕುತ್ತೇವೆ ಎಂಬ ವಿಶಾಲ ಭಾವನೆಯುಳ್ಳವರು. ಬದುಕು ಮತ್ತು ಜೀವನವೆರಡನ್ನೂ ಏಕೀಭವಿಸಿಕೊಂಡವರು ಈ ಜನ. ತಾವು ಮಾಡುವ ಕೆಲಸ, ತಮ್ಮ ಬದುಕಿನ ಆಗುಹೋಗು ತಮ್ಮ ಜೀವನಮಾರ್ಗ ಎಂದು ನಂಬಿದವರು. ನಂಬಿ ಅದರಲ್ಲಿಯೇ ಬೆರೆತುಕೊಂಡವರು. ಆದುದರಿಂದಲೇ, ಅವರು ಪರಸ್ಪರ ಕಲೆತು ಮಾತನಾಡುವಾಗಲೂ ತಮ್ಮ ಬದುಕು ಮತ್ತು ಜೀವನದ ಸರ್ವ ಸಂಕೇತವಾದ ‘ಮಳೆ – ಬೆಳೆ’ಗಳನ್ನು ಮೊದಲು ವಿಚಾರಿಸುತ್ತಾರೆ. ಈ ಎರಡು ಚೆನ್ನಾಗಿದ್ದರೆ ಮಿಕ್ಕೆಲ್ಲವೂ ಚೆನ್ನಾಗಿರುತ್ತದೆ. ಎಂಬುದು ಅವರ ಮಾತಿನ ಅರ್ಥ ಮತ್ತು ವ್ಯಾಪ್ತಿ. ಮಳೆ ಬೆಳೆಗಳು ನಮ್ಮ ರೈತರ ಜೀವನದ ಪ್ರಮುಖ ಅಂಗಗಳು ಆದುದರಿಂದಲೇ ಅವರು ಇವಿಗಳಿಗೆ ಅಪಾರ ಮಹತ್ವ ನೀಡುತ್ತಾರೆ. ಅವರ ಈ ಎರಡು ಜೀವನಾಡಿಗಳಲ್ಲಿ ಒಂದಾದ ಬೆಳೆಯ ಒಂದು ವರ್ಷದ ಉರುಳನ್ನು ಇಲ್ಲಿ ಚಿತ್ರಿಸಲು ಪ್ರಯತ್ನಿಸಲಾಗಿದೆ.

ಭಾರತದ ಜನಸಂಖ್ಯೆಯ ಶೇಕಡ ಎಂಭತ್ತಕ್ಕೂ ಹೆಚ್ಚು ಜನ ಇಂದಿಗೂ ಹಳ್ಳಿಗಳಲ್ಲಿ ವಾಸಮಾಡುತ್ತಾರೆ. ಇವರಲ್ಲಿ ಬಹುತೇಕ ಜನರು ಜೀವನಕ್ಕಾಗಿ ವ್ಯವಸಾಯವನ್ನು ಅವಲಂಬಿಸಿದ್ದಾರೆ. ಎಷ್ಟರಮಟ್ಟಿಗೆ ಅವಲಂಬಿಸಿದ್ದಾರೆಂದರೆ, ನಮ್ಮ ಮಳೆ – ಬೆಳೆಯ ಆಗು ಹೋಗುಗಳ ಮೇಲೆಯೇ ಈ ಜನರ ಆಗು ಹೋಗುಗಳು ನಿರ್ಧಾರವಾಗುತ್ತವೆ. ಆದುದರಿಂದಲೇ, ವ್ಯವಸಾಯವು ಗ್ರಾಮಾಂತರ ಜನರ ಬದುಕಿನ ಒಂದು ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ತಮ್ಮ ಮನೆಯ ನಡಾವಳಿಗಳಲ್ಲಿ ಹೇಗೆ ಶುಭಾಶುಭ ಸಂದರ್ಭಗಳನ್ನು ಆಚರಿಸುತ್ತಾರೆಯೋ ಬೇಸಾಯದಲ್ಲಿಯೂ ಹಾಗೆಯೇ ನೋಡುತ್ತಾರೆ. ತಮ್ಮ ಕೈಕಾಲುಗಳಂತೆ ಹೃದಯದಂತೆ ನರನಾಡಿಗಳಂತೆಅದೂ ಒಂದು ಅಂಗವೇ ಆಗಿದೆ. ಈ ಯಾವುದು ಊನವಾದರೂ ವ್ಯಕ್ತಿಯ ಜೀವನಕ್ರಿಯೆ ಕುಂಠಿತವಾಗುತ್ತದೆ. ಅಂತೆಯೇ ಬೇಸಾಯ ಕೂಡ . ಶತ ಶತಮಾನಗಳಿಂದ ಪ್ರತಿವರ್ಷ ಇದೇ ಅಚರಣೆಗಳನ್ನು ಮಾಡುತ್ತಾ ಬಂದಿದ್ದರೂ, ಆ ವರ್ಷದ ಚಕ್ರ ಸುತ್ತಿದೊಡನೆಯೇ ಅದನ್ನು ಮತ್ತೆ ಹೊಸದಾಗಿ, ಶುಭದೊಂದಿಗೆ ಆರಂಭಿಸಬೇಕೆಂದು ಆ ಜನರ ನಂಬಿಕೆ. ಆದುದರಿಂದಲೇ, ಅವರ ಬೇಸಾಯದ ವಾರ್ಷಿಕ ಚಕ್ರ ಹಿಂದೂ ಧರ್ಮ ಪದ್ಧತಿಯಂತೆ ಯುಗಾದಿಯಿಂದ ಆರಂಭವಾಗುತ್ತದೆ.

ಹಿಂದೂ ಧರ್ಮಸಂಪ್ರದಾಯದ ಲೆಕ್ಕಾವಾರದಂತೆ ಮಾರ್ಚ್ ಅಥವಾ ಎಪ್ರಿಲ್ ತಿಂಗಳಿನಲ್ಲಿ ಹಿಂದೂ ಹೊಸವರ್ಷ ಅಥವಾ ಯುಗಾದಿ ಆರಂಭವಾಗುತ್ತದೆ. ಇದು ವಸಂತಮಾಸವೂ ಹೌದು. ಎಲ್ಲೆಲ್ಲಿಯೂ ಮೆರಗಿಡಗಳು ತಮ್ಮ ಕಲೆದ ವರ್ಷದ ಹಣ್ಣೆಲೆಗಳನ್ನು ಕಳೆದು ಚಿಗುರಿ ಪಲ್ಲವಿಸುತ್ತವೆ. ಜೀವಜಗತ್ತುಗಳೆಲ್ಲಾ ಮಳೆಯ ತಂಪನ್ನು ಬಯಸುತ್ತವೆ. ಎಲ್ಲೆಲ್ಲಿಯೂ ಗಿಡಮರಗಳಲ್ಲಿ ಹಣ್ಣುಕಾಯಿಗಳು ಚೆಲ್ಲಾಡುತ್ತವೆ. ಇಂತಹ ಸಮಯದಲ್ಲಿ ಯುಗಾದಿಯ ಹಬ್ಬ ಬರುತ್ತದೆ. ರೈತನಿಗೆ ಇದು ತನ್ನ ವರ್ಷದ ಬೇಸಾಯ ಜೀವನದ ಆರಂಭದ ದಿನವೂ ಹೌದು. ಹೊಸ ವರ್ಷದ ಶುಭದಿನದಂದುಅವನು ‘ಹೊನ್ನಾರು’ ಕಟ್ಟಿ ಆ ವರ್ಷದ ಬೇಸಾಯವನ್ನು ಆರಂಭಿಸುತ್ತಾನೆ.

‘ಹೊನ್ನಾರು’ ಎಂದರೆ ಹೊನ್ನಿನ ಆರು ಅರ್ಥತ್ ಶುಭದ ಆರು ಎಂದರ್ಥ. ನಿನ್ನ ಬೆಳೆ ಬಂಗಾರಾಗಲಿ ಎಂದು ಹೊಸವರ್ಷ ಆಶೀರ್ವದಿಸುವಂತೆ ಅದನ್ನು ಸ್ವಾಗತಿಸುವನು. ಊರಿನ ಪಟೇಲ ಅಥವಾ ಬದುಕಿರುವವರಲ್ಲಿ ಅತ್ಯಂತ ಹಿರಿಯ ಅಥವಾ ತನ್ನ ಒಳ್ಳೆಯ ಕಾರ್ಯಚರಣೆಗಳಿಂದ ಊರಿನ ಜನರ ಪ್ರೀತಿವಿಶ್ವಾಸಗಳಿಗೆ ಪಾತ್ರನಾದ ಮುಖಂಡ ಹಣ್ಣುಕಾಯಿ ಮತ್ತು ವಿಳ್ಯದೊಂದಿಗೆ ಗ್ರಾಮದ ಜೋಯಿಸನಲ್ಲಿಗೆ ಹೋಗುತ್ತಾನೆ. ಇದಕ್ಕೆ ಮುನ್ನ ಅವನು ಗ್ರಾಮದೇವತೆಯ ಪೂಜೆಯನ್ನು ಮಾಡಿಸಿರುತ್ತಾನೆ. ಜೋಯಿಸ, ಆಯಾ ವರ್ಷದ ಉತ್ತಮ ರಾಶಿಫಲದ ಇಂಥ ಹೆಸರಿನ ವ್ಯಕ್ತಿ ಮುಂದಲ ಆರು ಹಿಡಿಯಬೇಕು: ಇಂಥ ಬಣ್ಣದ ಎತ್ತುಗಳನ್ನು ಎಡಗೋಲು ಬಲಗೋಲುಗಳಿಗೆ ಕಟ್ಟಬೇಕು: ಮೊದಲ ಆರನ್ನು ಹಿಡಿಯಲು ವ್ಯಕ್ತಿ ಎಂಥ ಬಟ್ಟೆ ಹಾಕಬೇಕು ಈ ಎಲ್ಲವನ್ನು ನಿರ್ಧರಿಸಿ ಹೇಳುತ್ತಾನೆ. ಶುಭ ಕೇಳಲು ಹೋದ ಯಜಮಾನ ಅರಿಸಿನ ಅಕ್ಷೆತೆಯಿಂದ ಕೂಡಿದ ಹೊಂಗನೂಲನ್ನು ತೆಗೆದುಕೊಂಡು ಬರುತ್ತಾನೆ. ಹೊನ್ನೂಲು ಎಂಬುದು ಹೊಂಗನೂಲಾಗಿರುವಂತೆ ಕಾಣುತ್ತದೆ. ಹಳದಿ ಬಣ್ಣದ ಈ ದಾರ ಚಿನ್ನದ ಬಣ್ಣವಿರುವುದರಿಂದ ಈ ಹೆಸರು ಬಂದಿರುವಂತೆ ಕಾಣುತ್ತದೆ. ಜೋಯಿಸರು ಕಾಲ ನಿಗದಿ ಮಾಡಿದ ನಂತರ ಹೋಗಿದ್ದ ಯಜಮಾನ ಊರಿಗೆ ಬರುತ್ತಾನೆ.

ಸಂಜೆ ಐದುವರೆಯ ಮೇಲೆ ಊರಿನ ಅನೇಕ ಯುವಕರು ವಯಸ್ಸಾದವರು ತಮ್ಮ ತಮ್ಮ ಆರುಗಳನ್ನು ಊರ ಪೂರ್ವದಿಕ್ಕಿನ ಹೊಲಕ್ಕೆ ಹೊಡೆದುಕೊಂಡು ಬರುತ್ತಾರೆ. ಮುಂದಲ ಆರು ಅಥವಾ ಮೊದಲ ಆರು ಜೋಯಿಸರು ನಿರ್ಧರಿಸಿದ ಬಣ್ಣದ ಎತ್ತು ಮತ್ತು ಹೆಸರಿನ ವ್ಯಕ್ತಿ ಮೂಡಮೂಖನಾಗಿ ಆರು ಹೂಡಿ ನಿಲ್ಲುತ್ತಾನೆ. ಅವನ ಹಿಂದೆ ಊರಿನ ವೀರರುಗಳ ಮೂಡಮುಖವಾಗಿ ನಿಲ್ಲುತ್ತವೆ. ಹೀಗೆ ನಿಲುವು ಆರುಗಳು ಮೂರು, ಐದು, ಒಂಭತ್ತು ಇರಬೇಕೆಂದು ನಂಬಿಕೆಯೂ ಕೆಲವು ಕಡೆ ಉಂಟು. ನಿಂತ ಆರುಗಳಿಗೆ ಜೋಯಿಸರಿಂದ ತಂದ ಹೊನ್ನೂಲಿನ ಒಂದೊಂದು ಎಳೆಯನ್ನು ನೇಗಿಲ ಮೇಣಿಗೆ ಕಟ್ಟುತ್ತಾರೆ. ನೇಗಿಲು ಹಿಡಿದವರ ಹಣೆಗೆ ಅಕ್ಷತೆ, ಕುಂಕುಮ, ವಿಭೂತಿ ಹಚ್ಚಿರುತ್ತಾರೆ. ಜೋಯಿಸರಲ್ಲಿಗೆ ಹೋಗಿದ್ದ ಯಜಮಾನ ಊರಿನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೊನ್ನೂಲಿಗೆ ತೀರ್ಥ ತಳಿಸಿಕೊಂಡು ಆರುಗಳಿರುವ ಜಾಗಕ್ಕೆ ಬರುತ್ತಾನೆ. ಅವನು ಬರುವಾಗ ಶಕುನಗಳನ್ನು ನೋಡುವ ಪದ್ಧತಿ ಕೆಲವು ಕಡೆ ಉಂಟು. ಬಹಿತೇಕ ಆದಿನ ಯುಗಾದಿಯಾದುದರಿಂದ ಇಡೀ ದಿವಸದ ಇಡೀ ಕಾಲ ಶುಭದ ಸಂಕೇತವೆಂಬುದು ರೈತರ ಪ್ರಬಲವಾದ ನಂಬಿಕೆ. ಶದುದರಿಂದ ಸಾಮಾನ್ಯವಾಗಿ ಅಣದು ಶಕುನಗಳನ್ನು ಗಮನಿಸುವುದಿಲ್ಲ. ಊರ ದೇವರ ಗುಡಿಯಿಂದ ಬಂದ ಹೊನ್ನೂಲನ್ನು ಮೇಣಿಗೆ ಕಟ್ಟಿದ ಮೇಲೆ, ಅದೇ ಯಜಮಾನ ಸಾಲಾಗಿ ನಿಂತ ಆರುಗಳಿಗೆ ಕಾಯಿ ಒಡೆದು, ಎಲೆ ಅಡಿಕೆ ಮತ್ತು ಹಣ್ಣಿಟ್ಟು ಪೂಜೆಸಲ್ಲಿಸಿ ಮಂಗಳಾರತಿ ಎತ್ತುತ್ತಾನೆ. ಆನಂತರ ಆರುಗಳು ನಿಧಾನವಾಗಿ ಪೂರ್ವದಿಕ್ಕಿಗೆ ಸ್ವಲ್ಪದೂರ ಸಾಗುತ್ತವೆ. ಮುಂದೆ ಬಲಕ್ಕೆ ತಿರುಗಿ ಊರ ಸುತ್ತ ಸುತ್ತುಕೊಂಡು ಮೊದಲು ನಿಂತಿದ್ದಲ್ಲಿ ಬರುತ್ತವೆ. ಊರಿನ ಹೆಂಗಸರು ಮಕ್ಕಳೆಲ್ಲ ಈ ಶುಭ ಕಾರ್ಯವನ್ನೀಕ್ಷೀಸಲು ಸೇರುತ್ತಾರೆ. ಇಂತಹ ಊರು ಸುತ್ತುವ ಮೆರವಣಿಗೆಯನ್ನು ಊರಿನ ತಮಟೆ ವಾಲಗದೊಂದಿಗೆ, ವಾದ್ಯದವರನ್ನು ಕರೆಯಿಸಿಯೂ ಒಯ್ಯುವುದುಂಟು. ಇವೆಲ್ಲಾ ಇತ್ತೀಚಿನ ಅದ್ದೂರಿಗಳು ಮಾತ್ರ. ಊರ ಸುತ್ತು ಬಂದ ಆರುಗಳು ಹೊರಟ ಸ್ಥಳ ಸೇರಿ ಅಲ್ಲಿಂದ ತಮ್ಮ ತಮ್ಮ ಹೊಲಗಳಿಗೆ ಹೋಗುತ್ತವೆ. ಹೊನ್ನಾರು ಮೆರವಣಿಗೆಯಲ್ಲಿ ಸೇರದವರೂ ಸಹ ಈ ಸಮಾರಂಭದ ನಂತರ ತಮ್ಮ ಹೊಲದಲ್ಲಿ ಆರು ಹೂಡಿ, ನಾಲ್ಕು ಸುತ್ತು ಸುತ್ತಿ ತಮ್ಮ ಆರಂಭವನ್ನು ಆರಂಭಿಸುವುದುಂಟು. ಹೊನ್ನಾರು ಗ್ರಾಮಾಂತರ ವ್ಯವಸಾಯ ಚಕ್ರದ ಆರಂಭೋತ್ಸವವೆಂದೇ ಹೇಳಬಹುದು.

ಯುಗಾದಿಯ ಹಿಂದೆ ಸಾಮಾನ್ಯವಾಗಿ ಮುಂಗಾರು ಮಳೆ ಬಿದ್ದೇ ಬಿಳುತ್ತದೆಂಬುದು ರೈತರ ನಂಬಿಕೆ. ಆದುದರಿಂದಲೇ, ಮಳೆಯೂ ಬಿದ್ದಿರಲಿ ಇಲ್ಲದಿರಲಿ ಯುಗಾದಿಯ ದಿನ ಹೊನ್ನಾರು ಕಟ್ಟುವುದು ಸಂಪ್ರದಾಯ. ಮುಂದೆ ಮಳೆ ಬಿದ್ದ ಮಾರನೆಯ ದಿನ ರೈತ ಮುಂಗಾರು ಬೆಳೆ ಬಿತ್ತಲು ಆರಂಭಿಸುತ್ತಾನೆ. ಮುಂಗಾರು ಬೆಳೆಗೆ ಸಾಮಾನ್ಯವಾಗಿ ಎಳ್ಳು, ಜೋಳ, ಗಿಡ್ಡರಾಗಿ ಮುಂತಾದವನ್ನು ಹಾಕುತ್ತಾರೆ. ಮೊದಲ ದಿನ ಕಾಳು ಬಿತ್ತಲುಹೋಗುವಾಗ ಕೆಲವು ಸಂಪ್ರದಾಯಗಳನ್ನು ಆಚರಿಸುತ್ತಾರೆ. ಒಂದು ಕುಕ್ಕೆಯನ್ನು ಸಗಣಿಯಿಂದ ಸಾರಿಸಿ ಒಣಗಿಸುತ್ತಾರೆ: ಅನಂತರ ಅದಕ್ಕೆ ವಿಭೂತಿ ಹಚ್ಚುತ್ತಾರೆ. ಇದಾದ ನ೦ತರ ರಾಗಿ, ಜೋಳ, ಎಳ್ಳು ಹೀಗೆ ಅವರು ಬಿತ್ತಲಿರುವ ಧಾನ್ಯ ತುಂಬುತ್ತಾರೆ. ಈ ಧಾನ್ಯದ ಮೇಲೆ ಬೆನಕನನ್ನು ಕೂರಿಸುತ್ತಾರೆ. ಹಸುವಿನ ಸಗಣಿಯ ಸಣ್ಣ ಉಂಡೆಗೆ ನಾಲ್ಕಾರುಹಸಿರು ಗರಿಕೆಯ ದಳಗಳನ್ನು ಸಿಕ್ಕಿಸಿದರೆ ‘ಬೆನಕ; ಆಯಿತು. ಇದಾದನಂತರ ಬಿತ್ತುವ ಮನೆಯ ಯಜಮಾನ ಆ ಕುಕ್ಕೆಯನ್ನು ಬಲಗೈನಲ್ಲಿ ಹಿಡಿದು ಹರ್ಷಚಿತ್ತದಿಂದ ತನ್ನ ಹೊಲಕ್ಕೆ ನಡೆಯುತ್ತಾನೆ. ಈ ಹೊತ್ತಿಗೆ ಅಲ್ಲಿ ಆರುಗಳು. ಸಿದ್ಧವಾಗಿರುತ್ತವೆ. ರೈತ ತಾನು ತಂದ ಬೀಜದ ಕುಕ್ಕೆಯನ್ನು ಎಡಗೈಯಲ್ಲಿಟ್ಟುಕೊಂಡು ಬೆನಕ ಮತ್ತು ಸ್ವಲ್ಪ ಕಾಳುಗಳನ್ನು ಮೂಡಲದಿಕ್ಕಿಗೆ ‘ಹೈಲಿಗೊ’(ಕೆಲವು ಕಡೆ ಹೋಲಿಗ್ಯಾ) ಎಂದು ಅಥವಾ ತಮ್ಮ ದೇವರ ಹೆಸರು ಹೇಳಿ ಚೆಲ್ಲುತ್ತಾನೆ. ಅನಂತರ ಯಜಮಾನ ಬಿತ್ತುತ್ತಾ ಹೋಗುತ್ತಾನೆ. ಒಂದು ಕಡೆಯಿಂದ ಆರುಗಳು ಉತ್ತುಕೊಂಡು ಹೋಗುತ್ತವೆ. ಮಳೆ ಬಿದ್ದಂತೆಲ್ಲ ನೆಲ ಹದವಾದಂತೆಲ್ಲ ಮುಂಗಾರು ಬೆಳೆಯನ್ನು ಬಿತ್ತುತ್ತಾರೆ. ಈಗ ನೀರಾವರಿ ಸೌಲಭ್ಯಗಳು ಅಧಿಕವಾಗಿರುವುದರಿಂದ ಇವುಗಳಲ್ಲಿ ವ್ಯತ್ಯಾಸವಾಗಿರುವುದು ಉಂಟು. ಉದಾಹರಣೆಗೆ ನಾಲಾ ಬಯಲಿನಲ್ಲಿ ಮತ್ತು ದೊಡ್ಡಕೆರೆ ನೀರಾವರಿ ಬಾವಿಗಳಿರುವಲ್ಲಿಯಾಗಲಿ ಈ ಹೊನ್ನಾರು ಕಟ್ಟುವ ಪದ್ಧತಿಯಾಗಲಿ, ಬೆನಕವನ್ನಿಟ್ಟು ಬೀಜ ಬಿತ್ತುವ ಸಂಪ್ರದಾಯವಾಗಲಿ ಇಲ್ಲ. ಏಕೆಂದರೆ ಈ ವ್ಯವಸಾಯ ಕಾಲ ನಿಗದಿಯಾದ ಮಳೆಗಾಲವನ್ನು ಆಧರಿಸಿರುವುದಿಲ್ಲ. ಅಲ್ಲದೆ ಈ ಬೆಳೆಗಳಿಗೆ ಕಾಲ ನಿಗದಿಯೇನಿಲ್ಲ.

ಮುಂಗಾರು ಬೆಳೆಗಳಲ್ಲಿ ಜೋಳ, ಎಳ್ಳು, ರಾಗಿ ಮುಖ್ಯವಾದುವು. ಕೆಲವು ಕಾಳುಗಳನ್ನು ಮುಂಗಾರಾಗಿ ಬಿತ್ತುವ ಪದ್ಧತಿಯೂ ಉಂಟು. ಇವುಗಳು ಪ್ರಾದೇಶಿಕವಾಗಿ ಭಿನ್ನವಾಗಿರುವುದುಂಟು. ಒಂದು ಕಡೆ ಜೋಳ ಪ್ರಧಾನವಾದರೆ ಮತ್ತೊಂದು ಕಡೆ ರಾಗಿ ಪ್ರಧಾನವಾಗಿರುವುದುಂಟು. ಜೋಳವನ್ನು ಸಾಮಾನ್ಯವಾಗಿ ಬಿತ್ತುತ್ತಾರೆ. ಇತ್ತೀಚೆಗೆ ಹೈಬ್ರಿಡ್‌ ಜೋಳವನ್ನು ಗುಣಿ ಹುಯ್ದು ಹಾಕುವುದೂ ಉಂಟು. ಮುಂಗಾರಿನಲ್ಲಿ ಹಾಕುವ ರಾಗಿಯನ್ನು ಗಾಡ್ಡರಾಗಿ, ಕಾರುರಾಗಿ ಎಂದು ಕೆಯುವುದಂಟು. ಈಗ ಅವುಗಳಿಗೆ ಆಧುನಿಕ ತಳಿಯ ವಿವಿಧ ಹೆಸರುಗಳೂ ಬಳಕೆಗೆ ಬಂದಿವೆ. ರಾಗಿಯನ್ನು ಮಾತ್ರ ಹಗೆ, ಒಟ್ಟಲು ಹಾಕಿ, ಸಸಿ ಬಂದ ಮೇಲೆ ಗೆಣೆ ಎಳೆದು ನಾಟಿ ಮಾಡುತ್ತಾರೆ. ಗೆಣೆ ಎಳೆಯುವುದೆಂದರೆ ಇದಕ್ಕಾಗಿಯೇ ಮಾಡಿದ ಗೆಣೆ ಹಲುಬೆಯಿಂದ ಉದ್ದ ಮತ್ತು ಅಗಲಕ್ಕೆ ಸಾಲು ಎಳೆಯುವುದು. ಈ ಸಾಲುಗಳು ಕೂಡುವ ಸ್ಥಳಗಳಲ್ಲಿ ರಾಗಿ ಸಸಿ ನೆಡುವುದು. ಗಿಡ್ಡರಾಗಿ ಎಂದು ಕರೆಯುವ ಈ ಕಾರು ಬೆಳೆಗೆ ಏಕೆ ಈ ಹೆಸರು ಬಂದಿತೋ ತಿಳಿಯದು. ಈ ರಾಗಿ ಹೆಚ್ಚು ಎತ್ತರ ಬೆಳೆಯದೆ ಗಿಡ್ಡವಾಗಿರುವುದರಿಂದ ಮೂರು ತಿಂಗಳಲ್ಲಿ ಕೊಯ್ಲಿಗೆ ಬರುವುದರಿಂದ ಈ ಹೆಸರು ಬಂದಿರಬಹುದು. ಅಲ್ಲಲ್ಲಿ ರಾಗಿಯನ್ನು ಬಿತ್ತುವ ಸಂಪ್ರದಾಯವೂ ಉಂಟು. ಇನ್ನು ಎಳ್ಳು ಮತ್ತು ಕಾಳುಗಳನ್ನು ಕೆಲವರು ನಿರ್ದಿಷ್ಟ ಜಮೀನಿನಲ್ಲಿ ಬಿತ್ತಿದರೆ ಮತ್ತೆ ಕೆಲವರು ಕೇವಲ ಸಾಲು ಹಾಕುವುದೂ ಉಂಟು. ಎಳ್ಳನ್ನು ಮಾತ್ರ ಜೋಳದೊಂದಿಗೆ ಬೆರೆಸಿ ಚೆಲ್ಲುವುದೂ ಉಂಟು. ಈ ಎಲ್ಲಾ ಬೆಳೆಗಳೂ ಅಲ್ಪಾವಧಿಯವಾಗಿದ್ದು ಈ ಜಮೀನಿನಲ್ಲಿ ಮುಂದೆ ರೈತರು ಮಾಡಲಿರುವ ಹೈನು ಬೆಳೆಯ ಹೊತ್ತಿಗೆ ಇವು ಕೊಯ್ಲಿಗೆ ಬರುತ್ತವೆ. ಸಾಮಾನ್ಯವಾಗಿ ಇವುಗಳನ್ನು ಮುಂಗಾರು ಬೆಳೆಗಳೆಂದು ಕರೆಯುತ್ತಾರೆ.

ಹೈನು ಬೆಳೆ ರೈತನ ಜೀವನದ ಪ್ರತೀಕ. ಅವನ ಒಂದು ವರ್ಷದ ಆಗುಹೋಗುಗಳು ಈ ಪ್ರಧಾನ ಬೆಳೆಯನ್ನೇ ಅವಲಂಭಿಸಿರುತ್ತವೆ. ಕನ್ನಡನಾಡಿನ ಬೇರೆ ಬೇರೆ ಭಾಗದಲ್ಲಿ ಒಂದೊಂದು ಬೆಳೆ ಪ್ರಧಾನವಾಗಿರುತ್ತದೆ. ಹಳೆ ಮೈಸೂರು ಭಾಗದಲ್ಲಿ ಚಿತ್ರದುರ್ಗ ಜಿಲ್ಲೆಯ ಕೆಲವು ಭಾಗಗಳನ್ನು ಬಿಟ್ಟರೆ ಮಿಕ್ಕ ಭಾಗಗಳಲ್ಲೆಲ್ಲ ರಾಗಿ ಭತ್ತವೇ ಪ್ರಧಾನವಾದ ಬೆಳೆ. ಹೊಸ ಕರ್ನಾಟಕ ಭಾಗಗಳಲ್ಲಿ ಜೋಳ ಪ್ರಧಾನವಾದ ಬೆಳೆ. ಇವುಗಳಲ್ಲಿ ಹಣ ಸಂಪಾದನೆಯ ಬೆಳೆ ಕಬ್ಬು, ಹತ್ತಿ, ಕಡಲೆಕಾಯಿ, ಕಡೆಗೆ ಈಗಿನ ವಿವಿಧ ತರಕಾರಿಗಳು ಸೇರುವುದಿಲ್ಲ. ಏಕೆಂದರೆ ಇವು ಮಾರುಕಟ್ಟೆ ಅವಶ್ಯಕತೆಯ ಬೇಡಿಕೆಗಳಿಗನುಗುಣವಾಗಿ ಬೆಳೆಯುವಂಥವು. ಇವು ರೈತನ ಬದುಕಿನ ಜೀವನಾಡಿಗಲ್ಲ. ನಮ್ಮ ವ್ಯವಹಸಾಯ ಚಕ್ರದ ಪ್ರಮುಖ ಬೆಳೆಗಳೂ ಅಲ್ಲ. ಆದುದರಿಂದ ಹೈನು ಬೆಳೆಗಳಲ್ಲಿ ಪ್ರಮುಖವಾದವು ಭತ್ತ, ರಾಗಿ ಮತ್ತು ಜೋಳ ಈ ಮೂರೇ. ಹೈನು ರಾಗಿಯನ್ನು ಸಾಮಾನ್ಯವಾಗಿ ಆರಿದ್ರಾ ಮಳೆಯಲ್ಲಿ ಬಿತ್ತಲು ಪ್ರಾರಂಭಿಸುತ್ತಾರೆ. ಇದರಲ್ಲಿ ಎರಡು ವಿಧ ಉಂಟು. ತಳಿತ ಅಥವಾ ಬಿತ್ತನೆ ಮತ್ತು ನಾಟಿ. ಇದಲ್ಲದೆ ಕೂರಿಗೆ ಎಂಬ ಬಿತ್ತನೆಯ ಪದ್ಧತಿಯೂ ಉಂಟು. ಬಿತ್ತನೆ ಎಂದರೆ ಎಕರೆಗೆ ಇಂತಿಷ್ಟೆಂದು ರಾಗಿಯನ್ನು ಹದವಿದ್ದಾಗ ಉತ್ತು ಬಿತ್ತನೆ ಮಾಡುತ್ತಾರೆ. ಆಮೇಲೆ ಹಲುಬೆ ಹೊಡೆದು ಒಂದು ಮಟ್ಟ ಮಾಡುತ್ತಾರೆ. ಈ ಕ್ರಿಯೆಗಿಂತ ಹಿಂದೆ ಅನೇಕ ತಯಾರಿಗಳು ಆಗಿರುತ್ತವೆ. ಅವೆಂದರೆ ನಾಲ್ಕು ಅಥವಾ ಐದು ಉಕ್ಕೆ ಉಳುವುದು, ಗೊಬ್ಬರ ಚೆಲ್ಲುವುದು ಇತ್ಯಾದಿ, ಪ್ರಾಥಮಿಕ ಕೆಲಸ ಕಾರ್ಯಗಳು ಮುಗಿದ ಮೇಲೆಯೇ ಬಿತ್ತುವುದು. ರಾಗಿಯನ್ನು ಬಿತ್ತೆ ಮಾಡಿದ ಮೂರು ನಾಲ್ಕು ದಿನ ಜೋರು ಮಳೆ ಬರಬಾರದು. ಏಕೆಂದರೆ ಇದರಿಂದ ಉತ್ತ ನೆಲ ಗಟ್ಟಿಯಾಗಿ ರಾಗಿಯ ಪೈರು ಮೇಲೇಳುವುದು ಕಷ್ಟವಾಗುತ್ತದೆ. ಇಂತಹ ಸಮಯದಲ್ಲಿನ ಮೇಲಿನ ಚಕ್ಕೆ ಒಡೆಯಲೆಂದು ಮುಳ್ಳು ಎಳೆಯುವ ಪದ್ಧತಿಯುಂಟು. ಬಿತ್ತುವಾಗ ಸರಿಯಾದ ಹದ ಇಲ್ಲದಿದ್ದರೂ ಪೈರು ಬರುವುದು ಕಷ್ಟ. ಏಕೆಂದರೆ ಉತ್ತ ನೆಲ ಹಗುರವಾಗಿದ್ದು ಮಣ್ಣು ಒಣಗುವುದರಿಂದ ಬೀಜ ಮೊಳೆತು ಪೈರಾಗುವುದು ಕಷ್ಟವಾಗುತ್ತದೆ. ಇಂತಹ ಸಮಯದಲ್ಲಿ ಬಿತ್ತಿದ ಹೊಲವನ್ನು ಕುರಿಗಳಿಂದ ತುಳಿಸುವುದುಂಟು. ಹೆಚ್ಚು ಒತ್ತಡ ಬೀಳದಂತೆ ನೆಲವನ್ನು ಗಟ್ಟಿ ಮಾಡುತ್ತದೆ. ಬೀಜ ಮೊಳೆತು ಪೈರಾಗಲು ಅನಕೂಲವಾಗುತ್ತದೆ. ಹೀಗೆ ಬಿತ್ತಿದ ಹೊಲಕ್ಕೆ ಅವರೆ, ಒಗರುಜೋಳ, ಹುಚ್ಚೆಳ್ಳು, ಪುಂಡಿಬೀಜ ಇತ್ಯಾದಿ ರೈತನಿಗೆ ಬೇಕಾದ ಕಾಳುಗಳ ಬೀಜವನ್ನು ಸಾಲು ಎಂದು ಹಾಕುತ್ತಾರೆ. ಈ ಸಾಲುಗಳು ಸಾಮಾನ್ಯವಾಗಿ ಹತ್ತು ಹನ್ನೆರಡು ಅಡಿಗಳಿಗೊಂದರಂತಿರುತ್ತವೆ. ಈ ಎಲ್ಲವೂ ಹುಟ್ಟಿ ಪೈರಾದಾಗ ನೋಡಲು ಕಣ್ಣಿಗೆ ಆನಂದ.

ಬಿತ್ತನೆ ಪೈರಿನ ಆರೈಕೆ ತುಂಬ ಸೂಕ್ಷ್ಮವಾದುದು. ಪೈರು ಹುಟ್ಟಿ ಹಸಿರು ಬಿದ್ದು ಮೇಲೆ ಸುಮಾರು ಹತ್ತು ಹದಿನೈದು ದಿನಗಳಲ್ಲಿ ಕುಂಟೆ ಹೊಡೆಯುತ್ತಾರೆ. ಬಿತ್ತನೆ ರಾಗಿಗೆ ನಾಲ್ಕು ಹಲ್ಲಿನ ಕುಂಟೆ ಹೊಡೆಯುತ್ತಾರೆ. ಇದು ಬಿತ್ತಿದ್ದಾಗ ದಟ್ಟವಾಗಿರುವ ಪೈರು ಹದವಾದ ರೀತಿಯಲ್ಲಿ ಉಳಿಯುವಂತೆ ಮಾಡಿ ಹೆಚ್ಚಿನವು ಕಿತ್ತು ಹೋಗುವಂತೆ ಮಾಡುವ ಏರ್ಪಾಟು. ಇಂತಹ ಕುಂಟೆಯನ್ನು ಉದ್ದ ಅಗಲಕ್ಕೆ ಸ್ವಲ್ಪ ಕಾಲ ಬಿಟ್ಟುಕೊಂಡು ಹೊಡೆಯುತ್ತಾರೆ. ನಾಲ್ಕು ಹಲ್ಲಿನ ಕುಂಟೆ ಹೊಡೆಯುವ ರೈತ ತುಂಬಾ ಅನುಭವಿಯೂ ಸೂಕ್ಷ್ಮಮತಿಯೂ ಆಗಿರುತ್ತಾನೆ. ಈ ಮಧ್ಯೆ ಎರಡು ಬಾರಿ ಸಾಲುವಾರು ಆಳುಗಳನ್ನು ಬಿಟ್ಟು ಕಳೆ ಕೀಳಿಸುತ್ತಾರೆ. ಈ ಹೊತ್ತಿಗೆ ಪೈರು ಸಾಕಷ್ಟು ಎತ್ತರ ಬೆಳೆದಿರುತ್ತದೆ. ಮುಂದೆ ಮಳೆಯ ನೀರಿಗಾಗಿ ಮಾತ್ರ ಈ ಬೆಳೆ ಕಾಯುತ್ತದೆ.

ರಾಗಿ ನಾಟಿ ಒಂದು ಪ್ರಮುಖ ಬೇಸಾಯದ ರೀತಿ. ಬೀಜದ ರಾಗಿಯನ್ನು ಒಂದು ಕಡೆ ಹಾಗೆ ಹಾಕಿ ಇಪ್ಪತ್ತರಿಂದ ಇಪ್ಪತ್ತೈದು ದಿನಗಳಲ್ಲಿ ಅದನ್ನು ಕಿತ್ತು ಗೆಣೆ ಎಳೆದು ನೆಡುತ್ತಾರೆ. ಈಗ ಬಿತ್ತನೆ ರಾಗಿ ಅಪರೂಪವಾಗುತ್ತಿದೆ. ಏಕೆಂದರೆ ನಾಟಿ ಮಾಡುವುದರಿಂದ ಒಳ್ಳೆಯ ಫಸಲು ಬರುತ್ತದೆಂಬ ಕಾರಣದಿಂದ ಈ ಬದಲಾವಣೆ ಜಾರಿಗೆ ಬಂದಿದೆ. ಈ ಹಿಂದೆಯೇ ಹೇಳಿರುವಂತೆ ಚೌಕಾಕಾರವಾಗಿ ಗೆಣೆ ಎಳೆದು ನೆಡುವ ಪದ್ಧತಿಗೆ ನಾಟಿ ಎಂದು ಹೆಸರು. ಹೊಲಕ್ಕೆ ಗೊಬ್ಬರ ಚೆಲ್ಲಿ, ಹಲುಬೆ ಹೊಡೆದು ಮಟ್ಟ ಮಾಡತ್ತಾರೆ. ಮಳೆ ಬಿದ್ದ ಮಾರನೆಯ ದಿನ ಅಥವಾ ಅದೇ ದಿನ ಒಟ್ಟಲು ಕಿತ್ತು ನೆಡುತ್ತಾರೆ. ನಾಟಿಯ ಬೇಸಾಯ ಬಿತ್ತನೆಯನ್ನು ಸೂಕ್ಷ್ಮವಾದುದಲ್ಲ. ಇದಕ್ಕೆ ನಾಲ್ಕು ಕಡೆಯಿಂದಲೂ ತಗರದಾಳು ಕುಂಟೆ ಮತ್ತು ಎರಡು ಹಲ್ಲಿನ ಕುಂಟೆ ಹೊಡೆಯುತ್ತಾರೆ. ಇದರಲ್ಲಿ ಕಳೆ ಕೀಳಿಸುವ ತೊಂದರೆ ಸಾಮಾನ್ಯವಾಗಿ ಇಲ್ಲ. ನಾಟಿ ಹಾಕಿದ ರಾಗಿ ಹೊಲದಲ್ಲಿ ಅದರೊಂದಿಗೆ ಹುರುಳಿಯನ್ನು ಬೆಳೆಯುವ ಪದ್ಧತಿಯುಂಟು. ಹುರುಳಿಯನ್ನು ಮಗೆ ಮಳೆಯಲ್ಲಿ ಹಾಕುತ್ತಾರೆ. ಸಾಮಾನ್ಯವಾಗಿ ರಾಗಿಯ ಕೊಯ್ಲಾದ ಮೇಲೆ ಚಳಿಗಾಲದ ಇಬ್ಬನಿಯಲ್ಲಿ ಇದು ಬೆಳೆಯುತ್ತದೆ.

ಭತ್ತದ ಬೇಸಾಯ ಸಾಮಾನ್ಯವಾಗಿ ಒಂದೇ ರೀತಿಯದು. ಸಾಮಾನ್ಯವಾಗಿ ಜೂನ್‌, ಜುಲೈ ತಿಂಗಳಿನಲ್ಲಿ ಭತ್ತದ ಬೆಳೆಯ ಆರಂಭವಾಗುತ್ತದೆ. ಎಕರಿಗೆ ಇಂತಿಷ್ಟು ಎಂದು ಬೀಜದ ಭತ್ತವನ್ನು ಒಂದು ಗದ್ದೆಯಲ್ಲಿ ಒಟ್ಟಲು ಹಾಕುತ್ತಾರೆ. ರಾಗಿ ಸಸಿಯಂತೆ ಭತ್ತದ ಸಸಿಯನ್ನೂ ಇಪ್ಪತ್ತರಿಂದ ಒಂದು ತಿಂಗಳಿನ ಸಸಿಯನ್ನು ಕಿತ್ತು ನೆಡಬೇಕಾಗುತ್ತದೆ. ಸಸಿಯನ್ನು ನೆಡುವುದಕ್ಕೆ ಕಡೆಯಪಕ್ಷ ಹದಿನೈದು ದಿನಗಳಿಗೆ ಮುಂಚೆ ಗದ್ದೆಯನ್ನು ಕರುಗುಹಾಕಬೇಕು. ಕರಗುಹಾಕುವುದೆಂದರೆ ಗದ್ದೆಯಲ್ಲಿ ಬೆಳೆದ ಗೊಬ್ಬರದ ಗಿಡ ಅಥವಾ ಹಿಂದೆ ಹಾಕಿದ ಮುಂಗಾರು ಪಳೆಯುಳಿಕೆಗಳಿಗೆ ನೀರು ಕಟ್ಟಿ ಮತ್ತು ಮಣ್ಣಿನಲ್ಲಿ ಹುದುಗುವಂತೆ ಮಾಡುವುದು. ನೀರೊಳಗೆ ಸೇರಿದ ಈ ಸೊಪ್ಪು ಸೆದೆಯಲ್ಲಾ ಚೆನ್ನಾಗಿ ಕರಗುತ್ತದೆ. ಅದೇ ಗೊಬ್ಬರವಾಗುತ್ತದೆ. ಇದರೊಂದಿಗೆ ನಾಟಿಗಿಂತ ಮುಂಚೆ ಹಸಿರುಸೊಪ್ಪನ್ನು ಹಾಕುವುದೂ ಉಂಟು. ಈಗ ಇಂತಹ ಸೊಪ್ಪು ಕೊಡುವ ಹೊಂಗೆ ಇತ್ಯಾದಿ ಮರಗಳು ಕಡಿಮೆಯಾಗಿವೆ. ಅಲ್ಲದೆ ಅನೇಕ ರೀತಿಯ ರಾಸಾಯನಿಕ ಗೊಬ್ಬರಗಳೂ ಬಂದಿರುವುದರಿಂದ ಸೊಪ್ಪು ತುಳಿಯುವ ಪದ್ಧತಿ ಮಾಯವಾಗುತ್ತ ನಡೆದಿದೆ. ನಾಟಿ ನೆಡುವ ದಿನ ಚೆನ್ನಾಗಿ ಉತ್ತು ಮೇಲೆ ಕಾಣುವ ತೆವಡೆಗಳನ್ನು ತುಳಿದು ಹೆಚ್ಚು ಏರು ಪೇರುಗಳಿದ್ದರೆ ನೀರು ಹಲುಬೆ ಹೊಡೆದು ಮಟ್ಟ ಮಾಡುತ್ತಾರೆ. ಆನಂತರ ಕಿತ್ತ ಸಸಿಯನ್ನು ತಂದು ನಾಟಿ ಮಾಡುತ್ತಾರೆ. ನಾಟಿಯಾದ ಮೇಲೆ ಎರಡು ಅಥವಾ ಮೂರು ಬಾರಿ ಕಳೆ ತೆಗೆಯಬೇಕು. ಮೇಲು ಗೊಬ್ಬರ ಕೊಡುವ ಪದ್ಧತಿಯುಂಟು. ಇದು ನೀರಾವರಿಯ ಬೇಸಾಯವಾದುದರಿಂದ ನಾಲೆ, ಕೆರೆ ಅಥವಾ ಬಾವಿಯ ನೀರಿನ ಆಸರೆ ಸದಾ ಇರಬೇಕಾಗುತ್ತದೆ. ನೀರಾವರಿಯಲ್ಲದೆ ಹೊಲಗದ್ದೆಗಳಲ್ಲಿ ಭತ್ತ ಬೆಳೆಯುವ ಸಾಧ್ಯತೆಯೂ ಇದೆ. ಹೀಗೆ ಬರನೆಲದಲ್ಲಿ ಬೆಳೆಯುವ ಪದ್ಧತಿಗೆ ಸಾಲುಭತ್ತ ಎಂದು ಹೇಳುತ್ತಾರೆ. ಮಳೆಯ ನೀರಿನ ಆಸರೆಯಿಂದ ಮಾತ್ರ ಇದು ಬೆಳೆಯುತ್ತದೆ. ಸಾಲುಭತ್ತವನ್ನು ಸಾಮಾನ್ಯವಾಗಿ ಭರಣಿ ಮಳೆಯಲ್ಲಿ ನೇಗಿಲಿನಲ್ಲಿ ಸಾಲು ಹೊಡೆದು ಶೆಡ್ಡೆಯಲ್ಲಿ ಸಾಲಾಗಿ ಹಾಕುತ್ತಾರೆ. ಇದು ಕೂರಿಗೆ ರಾಗಿಯಂತೆ. ನಾಟಿ, ಬಿತ್ತನೆಯೊಂದಿಗೆ ಕೂರಿಗೆ ರಾಗಿ ಮತ್ತು ಶಡ್ಡೆ ಭತ್ತಗಳು ಅಲ್ಲಲ್ಲಿ ಮಳೆಯ ನೀರಿನ ಆಶ್ರಯದ ವ್ಯವಸಾಯ ಭಾಗಗಳಲ್ಲಿ ಈಗಲೂ ಜಾರಿಯಲ್ಲಿವೆ. ಕೂರಿಗೆ ಐದು ಕೊಳವೆಗಳು ಮೇಣಿಯ ಹತ್ತಿರ ಒಂದೆಡೆ ಸೇರುವ ಒಂದು ಉಪಕರಣ. ಹಲುಬೆಗಿಂತ ದಪ್ಪವಾದ ಇದರ ಹಲ್ಲುಗಳು ಆಳವಾಗಿ ಗೆರೆ ಎಳೆದುಕೊಂಡು ಹೋದರೆ ಅನುಭವಸ್ಥ ಮಹಿಳೆ ಈ ಐದು ಕೊಳವೆಗಳೂ ಸೇರಿರುವ ಜಾಗದಲ್ಲಿ ಬಿಡುವ ರಾಗಿ ಐದಕ್ಕೂ ಸಮನಾಗಿ ಹಂಚಿಕೊಂಡು ಉರುಳಿ ಆ ಸಾಲುಗಳಲ್ಲಿ ಬೀಳುತ್ತವೆ. ಸಾಮಾನ್ಯ ಬಿತ್ತನೆಗೆ ಮತ್ತು ನಾಟಿಗೆ ಸರಿಯಾದ ಹದವಿಲ್ಲದಿದ್ದಾಗ ಈ ಕೂರಿಗೆ ಬಿಡುವ ಪದ್ಧತಿ ಜಾರಿಯಲ್ಲಿದೆ. ಶಡ್ಡೆ ಭತ್ತ ಎಂದರೆ ನೇಗಿಲ ಹಿಂದೆ ಹುರಿಯಲ್ಲಿ ಶಡ್ಡೆ ಕಟ್ಟಿ ಅದು ಸಾಲು ಹೊಡೆದಂತೆಲ್ಲ ಹದವಾಗಿ ಭತ್ತ ಬಿಡುವ ಪದ್ಧತಿ. ಅದರ ಉದ್ದನೆಯ ಕೊಳವೆಯ ಮೇಲೆ ವೃತ್ತಾಕಾರವಾಗಿ ಹೆಣೆದ, ಕಾಳುಬಿಡುವ ಭಾಗದ ಕೆಳಗೆ ಮರದ ಚಪ್ಪಟೆಯ ಹಲಗೆಗೆ ಒಂದು ಗೂಟ ಸಿಕ್ಕಿಸಿರುತ್ತಾರೆ. ಕೂರಿಗೆ ರಾಗಿ ಮತ್ತು ಶಡ್ಡೆ ಭತ್ತಕ್ಕೆ ತಗರದಾಳು ಮತ್ತು ಎರಡು ಹಲ್ಲಿನ ಕುಂಟೆ ಹೊಡೆಯಲು ಅನುಕೂಲವುಂಟು.

ಜೋಳದ ಬೆಳೆಗೆ ಸಂಬಂಧಿಸಿದಂತೆ ಇಂತಹ ಹೆಚ್ಚು ತೊಡಕುಗಳಿರುವುದಿಲ್ಲ. ಕ್ರಮವಾಗಿ ಉತ್ತು, ಗೊಬ್ಬರ ಚೆಲ್ಲಿ, ಹದ ಮಾಡಿದ ಹೊಲಕ್ಕೆ ಜೋಳ ಚೆಲ್ಲಿದರಾಯಿತು. ಇದು ರಾಗಿಗಿಂತ ಸುಲಭವಾಗಿ ಹುಟ್ಟುತ್ತದೆ. ಪೈರು ಬಂದ ಮೇಲೆ ಒಂದೆರಡು ಬಾರಿ ಕಳೆ ತೆಗೆಯಬೇಕಾಗುತ್ತದೆ. ಈಗ ಹೈಬ್ರಿಡ್‌ ಜೋಳವನ್ನು ಗೆಣೆ ಹೊಡೆದು ಚಚ್ಚೌಕದ ಗುಣಿಗಳಲ್ಲಿ ಹಾಕಿ ಬೆಳೆಯುವ ಪದ್ಧತಿಯು ಜಾರಿಯಲ್ಲಿದೆ. ಜೋಳ ಬಿತ್ತಿದಾಗ ಒಂದು ವೇಳೆ ವಿಪರೀತ ಮಳೆ ಹುಯ್ದರೂ ಪೈರು ಬರುವುದಕ್ಕೆ ಅಂತಹ ತೊಂದರೆಯೇನೂ ಆಗುವುದಿಲ್ಲ. ಅನೇಕ ವೇಳೆ ಮೇಲಿನ ಸಿಪ್ಪೆ ಒಡೆಯುವಂತೆ ಹಲುಬೆ ಹೊಡೆಯುವುದೂ ಉಂಟು. ಜೋಳವನ್ನು ಹಿಂಗಾರು ಮುಂಗಾರು ಎರಡು ಬೆಳೆಯಾಗಿಯೂ ಬೆಳೆಯುತ್ತಾರೆ.

ಹೈನು ಅಥವಾ ಮುಖ್ಯ ಫಸಲು ಮಾಡುವಾಗ ರೈತನಿಗೆ ಅವಶ್ಯವಿರುವ ಎಲ್ಲಾ ಕಾಳುಕಡ್ಡಿಗಳನ್ನು ಹಾಕುತ್ತಾನೆ. ಉದಾಹರಣೆಗೆ ಅವರೆ, ಹುರುಳಿ, ತೊಗರಿ, ಹಲಸಂದೆ, ಒಗರು ಜೋಳ, ಪುಣ್ಡಿ, ಹುಚ್ಚೆಳ್ಳು ಇತ್ಯಾದಿ ಇವುಗಳಲ್ಲಿ ಹುಳ್ಳಿ, ಹುಚ್ಚೆಳ್ಳುಗಳನ್ನು ಕಡೇ ಸಾಲಿನ ಹೊಲಗಳಲ್ಲಿ ಹಾಕಿ ಪ್ರಧಾನ ಬೆಳೆಯಾಗಿಯೂ ಒಮ್ಮೊಮ್ಮೆ ಬೆಳೆಯುವುದುಂಟು. ಕಬ್ಬು ನೀರಾವರಿಯಲ್ಲಿಯೂ, ಕಡಲೆಕಾಯಿ ಕಪ್ಪು ಭೂಮಿಭೂಮಿಯಲ್ಲಿಯೂ ಬೆಳೆಯುವ ಹಣ್ಣು ಕಬ್ಬಿಗೆ ನಿಗದಿಯಾದ ಬೇಸಾಯ ಕಾಲವೇನೂ ಇಲ್ಲ. ವರ್ಷದ ಎಲ್ಲಾ ಕಾಲದಲ್ಲಿಯೂ ಹಾಕುವುದುಂಟು. ಕಡಲೆ ಕಾಯಿಯನ್ನು ಮುಂಗಾರು ಹಿಂಗಾರು ಬೆಳೆಯ ಎರಡೂ ಕಾಲಗಳಲ್ಲಿಯೂ ಬೆಳೆಯುವುದುಂಟು. ಒಂದು ಕಾಲದಲ್ಲಿ ಪ್ರಾಯಃ ಉಪಬೆಳೆಗಳಾಗಿದ್ದ ಇವು ಇಂದು ಪ್ರಮುಖ ಬೆಳೆಗಳೂ ಆಗಿವೆ, ಅನೇಕ ಕಡೆ.

ಮಾರ್ನವಮಿಯ ಹೊತ್ತಿಗೆ ರೈತನ ಹೊದಲ್ಲಿ ಮಾರುದ್ದ ಹೊಡೆ ಎಂಬುದೊಂದು ಗಾದೆಯ ಮಾತು. ಹೊನ್ನಾರಿನೊಂದಿಗೆ ಆರಂಭವಾಗುವ ವ್ಯವಸಾಯ ಚಕ್ರದ ಮೂರನೆಯ ಘಟ್ಟವಿದು. ಸಕಾಲದಲ್ಲಿ ಮಳೆ ಅಥವಾ ಸ್ವ ಏರ್ಪಾಡುಗಳಿಂದ ನೀರೊದಗಿಸುವುದನ್ನು ಬಿಟ್ಟಲ್ಲಿ ಈ ಘಟ್ಟದಲ್ಲಿ ಯಾವುದೇ ಬೇಸಾಯದ ಅಗತ್ಯ ಬೆಳೆಗಿರುವುದಿಲ್ಲ. ಭತ್ತ, ರಾಗಿ, ಜೋಳ ಇವು ಕ್ರಮವಾಗಿ ಸಕಾಲದಲ್ಲಿ ಹೊಡೆ ಕಡೆದವೆಂದರೆ ಒಂದು ರೀತಿಯಲ್ಲಿ ಬೆಳೆ ಬಂದಿತೆಂದೇ ಅರ್ಥ. ಕಾಫಿಗಿಡ ಹೂವು ಒಡೆದೊಡನೆಯೆ ತೋಟದ ಮಾಲೀಕ ಕಾಫಿ ಬಂದಂತೆಯೇ ಎಂದು ನಂಬುತ್ತಾನಂತೆ. ಹಾಗೆಯೇ ತೆನೆಯೊಡೆದರೆ ಈ ಬೆಳೆಗಳು ಕೈಗೆ ಬಂದಂತೆಯೇ ಎಂಬ ನಂಬಿಕೆ ರೈತರಲ್ಲಿ ಬಂದು ಹೋಗಿದೆ. ಮೇಲುಸ್ತುವಾರಿಯನ್ನು ಬಿಟ್ಟರೆ ರೈತನಿಗೆ ಈಗ ಬೇರೇನೂ ಕೆಲಸವಿರುವುದಿಲ್ಲ. ಮಾರ್ನವಮಿಯಿಂದ ಕಾಲಚಕ್ರವು ನಿಧಾನವಾಗಿ ಕಾರ್ತಿಕದತ್ತ ಹೊರಳುತ್ತದೆ. ಕಣ್ಣಿಟ್ಟ ಕಡೆ ಹೊಲಗಳಲ್ಲಿ ಅರಳಿ ನಿಂತ ಹುಚ್ಚೆಳ್ಳು, ಪುಣ್ಡಿ ಹೂವು ಒಗರು ಜೋಳದ ತೆನೆ, ಹಾಲು ತುಂಬಿದ ರಾಗಿ ತೆನೆ ನೋಡಲು ಅಂದ. ಸುಮಾರು ನವೆಂಬರ್‌ ಕೊನೆಯ ವಾರ ಇಲ್ಲವೆ ಡಿಸೆಂಬರ್‌ ಮೊದಲ ವಾರದ ಹೊತ್ತಿಗೆ ತೆನೆಗಳೆಲ್ಲ ಹಣ್ಣಾಗಿ ಚಿನ್ನದ ಬಣ್ಣಕ್ಕೆ ತಿರುಗುತ್ತವೆ. ರೈತನಿಗೆ ತಾನು ಮಾಡಿದ ಶ್ರಮ ಸಾರ್ಥಕವಾಯಿತೆಂಬ ಹೆಮ್ಮೆ ಸಂತೋಷವುಂಟಾಗುತ್ತದೆ.

ದೀಪಾವಳಿ ಕಳೆದು ಚಳಿಗಾಲ ಕಾಲಕ್ಕಿದಂತೆಲ್ಲಾ ಬೆಳೆದ ಬೆಳೆ ಮಾಗಿ ನಿಲ್ಲುತ್ತದೆ. ರೈತರು ಕೊಯ್ಲು ಆರಂಭಿಸಲು ತೀರ್ಮಾನಿಸುತ್ತಾರೆ. ಕೊಯ್ಲು ಆರಂಭಿಸುವ ಮುನ್ನ ‘ಹೆಚ್ಚು’ ಮಾಡುವುದು ಪದ್ಧತಿ. ಹೆಚ್ಚು ಮಾಡುವುದೆಂದರೆ ಹೊದಲ ಮಧ್ಯದಲ್ಲಿ ಸುಮಾರು ನಾಲ್ಕು ಅಡಿ ಅಗಲ ನಾಲ್ಕು ಅಡಿ ಉದ್ದ ಬೆಳೆಯನ್ನು ಕುಯ್ದ ಅರಿ ಹಾಕುತ್ತಾರೆ. ಮಧ್ಯದ ಅರಿಯ ಮೇಲೆ ಮೂರು ಅಥವಾ ಐದು ಕಲ್ಲುಗಳನ್ನು ತಂದು ತೊಳೆದು ನಿಲ್ಲಿಸುತ್ತಾರೆ. ಹೊಲದಲ್ಲಿ ಬೆಳೆದ ಪುಣ್ಡಿ, ಹುಚ್ಚೆಳ್ಳು, ಅವರೆ ಮುಂತಾದ ಹೂವುಗಳೊಂದಿಗೆ ಉತ್ತರಾಣಿ ಹೂವನ್ನು ತಂದು ಈ ದೇವರು ಕಲ್ಲುಗಳಿಗೆ ಮುಡಿಸುತ್ತಾರೆ. ಮನೆಯಿಂದ ಬಿಸಿ ಬಿಸಿ ಅನ್ನ ಹಾಲು ಬೆಣ್ಣೆಗಳನ್ನು ತಂದು ಹರಳು ಎಲೆಯ ಮೇಲಿಟ್ಟು ಎಡೆಮಾಡುತ್ತಾರೆ. ರೈತ ಮತ್ತು ಅವನ ಮಕ್ಕಳು ‘ಬೆಳೆದಿರುವ ಬೆಳೆ ಹೆಚ್ಚಲಿ’ ಎಂದು ಪೂಜಿಸಿ ಹಾಲು, ಅನ್ನ, ಬೆಣ್ಣೆಯೊಂದಿಗೆ ಪ್ರಸಾದವಾಗಿ ಸ್ವೀಕರಿಸಿ ಮನೆಗೆ ಹಿಂತಿರುಗುತ್ತಾರೆ. ಇಲ್ಲಿಂದ ಕೊಯ್ಲು ಆರಂಭವಾಗುತ್ತದೆ.

ಕೊಯ್ಲಿಗೆ ಬಂದ ಬೆಳೆಗಳನ್ನು ಕೊಯ್ದು ಹೊಲದ ಪಕ್ಕದಲ್ಲಿರುವ ಅರೆ ಮುಂತಾದ ಸ್ಥಳಗಳಲ್ಲಿ ಗುಡ್ಡೆ ಹಾಕುತ್ತಾರೆ. ಹೊಲಗುಡ್ಡೆಗಳೆಂದು ಹೊದಲ್ಲಿಯೇ ಅಣ್ಣನಿ ಹಾಕಿ ಗುಡ್ಡೆ ಹಾಕುದುಂಟು. ಇವುಗಳಲ್ಲಿ ಗುಡ್ಡೆ ಮತ್ತು ಬೀಸಿಗೆ ಎಂದು ಎರಡು ವಿಧ ಬೆಳೆಯನ್ನು ಚಿಕ್ಕ ಚಿಕ್ಕ ಕಂತೆಗಳಾಗಿ ಕಟ್ಟಿ ಸಣ್ಣ ಗುಡ್ಡೆಯಾಗಿ ಒಟ್ಟುವುದಕ್ಕೆ ಗುಡ್ಡೆ ಎಂದು ಹೆಸರು. ಉದ್ದನೆಯ ಅಣ್ಣಣಿ ಹಾಕಿ ಸಾಲಾಗಿ ಒಟ್ಟುವುದಕ್ಕೆ ಬೀಸಿಗೆ ಎಂದು ಹೆಸರು. ಇವೆಲ್ಲ ತಾತ್ಕಾಲಿಕವಾದ ಏರ್ಪಾಡುಗಳು. ಈ ಏರ್ಪಾಡುಗಳು ಪ್ರಧಾನವಾಗಿ ರಾಗಿಯ ಕೊಯ್ಲಿಗೆ ಅನ್ವಯಿಸುತ್ತವೆ. ಮುಂದೆ ನಿಗದಿಯಾದ ಸ್ಥಳಗಳಲ್ಲಿ ಕಣ ಮಾಡಿ ಈ ಗುಡ್ಡೆ, ಬೀಸಿಗೆಗಳನ್ನೆಲ್ಲ ತೆಗೆದುಕೊಂಡು ಒಟ್ಟಿರುತ್ತಾರೆ. ಮೆದೆ ಸಾಮಾನ್ಯವಾಗಿ ಎತ್ತರವಾಗಿ ವಿಶಾಲವಾಗಿ ಇರುತ್ತವೆ. ಹತ್ತರಿಂದ ಇಪ್ಪತ್ತು ಪಲ್ಲ ರಾಗಿ ಬೀಳುವಷ್ಟು ಬೆಳೆಯನ್ನು ಒಂದೊಂದು ಮೆದೆಯಲ್ಲಿ ಒಟ್ಟುತ್ತಾರೆ. ಕಣದ ಒಂದು ಕೊನೆಯಲ್ಲಿ ಸಾಮಾನ್ಯವಾಗಿ ಉತ್ತರ ದಿಕ್ಕಿನ ಕೊನೆಯಲ್ಲಿ ಮೆದಗಳಿರುತ್ತವೆ. ಭತ್ತದ ಮೆದೆಗಳು ಇಷ್ಟು ದೊಡ್ಡದಾಗಿರುವುದಿಲ್ಲ. ಭತ್ತ ಬಗ ಉದುರುವ ಸ್ವಭಾವದ ಬೆಳೆಯಾದುದರಿಂದ ಅದನ್ನು ಕಣ ಮಾಡಿಯೇ ಕೊಯಲು ಮಾಡುತ್ತಾರೆ. ಕಾಳು ಚೆನ್ನಾಗಿ ಮಾಗಲಿ ಎಂಬ ದೃಷ್ಟಿಯಿಂದ ಭತ್ತವನ್ನು ಮೆದೆ ಹಾಕುತ್ತಾರೆ. ಕೊಯಲು ಮಾಡಿದೊಡನೆ ಬಡಿಯುವ ಪದ್ಧತಿಯೂ ಉಂಟು. ಆದರೆ ಎಲ್ಲವನ್ನೂ ಬೆಳೆಯುವ ರೈತ ತನ್ನ ಉಪ ಬೆಳೆಗಳ ಒಕ್ಕಣೆಯಾಗುವವರೆಗೆ ಪ್ರಧಾನ ಬೆಳೆಗಳಾದ ರಾಗಿ, ಭತ್ತ, ಜೋಳಗಳನ್ನು ಮೆದೆ ಹಾಕುವ ಪದ್ಧತಿಯುಂಟು.

ರೈತನ ವ್ಯವಸಾಯ ಚಕ್ರದಲ್ಲಿ ಕಣ ಒಂದು ಪ್ರಮುಖವಾದ ಅಂಗ. ಇಡೀ ವರ್ಷದ ಅವನ ಶ್ರಮ ಒಟ್ಟಾಗಿ ಒಂದೆಡೆ ಸೇರಿ ಶುದ್ಧಗೊಂಡು ಮನೆಯ ಕಣಜ ಸೇರುವ ಘಟನೆ. ತನ್ನ ಬೆಳೆ ಕೊಯ್ಲಿಗೆ ಬಂದಿದೆ ಎಂದು ತಿಳಿದಾಗ ರೈತ ಕಣ ಮಾಡಲು ಯೋಚಿಸುತ್ತಾನೆ. ಪ್ರತಿವರ್ಷ ನಿರ್ದಿಷ್ಟವಾದ ತಮ್ಮ ಹೊಲದ ಅಥವಾ ಗದ್ದೆಯ ಸ್ಥಳಗಳಲ್ಲಿ ರೈತರು ಕಣ ಮಾಡುತ್ತಾರೆ. ಇಂತಹವುಗಳಿಗೆ ಕಣದ ಹೊಲ, ಕಣದ ಗದ್ದೆ ಇತ್ಯಾದಿ ಹೆಸರುಗಳೇ ಇರುತ್ತವೆ. ಕಣ ಮಾಡುವ ಸ್ಥಳದ ಹತ್ತಿರ ನೆರಳಿನ ಮರ ಇರಬೇಕು. ಏಕೆಂದರೆ ಹುಲ್ಲು ಬಡಿಯುವವರು ಮಧ್ಯೆ ನಿಲ್ಲಿಸಿದಾಗ ಕೂರಲು ನೆರಳು ಬೇಕಾಗುತ್ತದೆ. ಇಂಥ ನಿಗದಿಯಾದ ಜಾಗದಲ್ಲಿ ಅವರವರ ಅನುಕೂಲತೆಗೆ ತಕ್ಕ ಹಾಗೆ ನೂರು – ನೂರು ಅಡಿ ಅಥವಾ ಇನ್ನೂ ಹೆಚ್ಚು ಜಾಗದಲ್ಲಿ ಮೊದಲು ಕೊಳೆ ಕೆತ್ತಿ ಸೆತ್ತೆ ಸೆದೆ ಆಯ್ದು ತೆಗೆಯುತ್ತಾರೆ. ಸುತ್ತ ಸುಮಾರು ಒಂದು ಅಡಿ ಅಗಲ ದಿಂಡು ಕಟ್ಟುತ್ತಾರೆ. ಒಂದು ದಿನ ಸಂಜೆ ಸೂರ್ಯ ಮುಳುಗಿದ ಮೇಲೆ ಹತ್ತಿರದ ಬಾವಿಯಿಂದ ನೀರು ತಂದು ಇಡೀ ಕಣ ನೆನೆಯುವಂತೆ ಎರಚುತ್ತಾರೆ. ಈ ಕೆಲಸಗಳನ್ನು ರೈತರು ಸಾಮಾನ್ಯವಾಗಿ ಮುಯ್ಯಿ ಆಳು ಪದ್ಧತಿಯಲ್ಲಿ ಇಂದಿಗೂ ಮಾಡುತ್ತಾರೆ. ಅಂದರೆ ಊರಿನ ಒಂದೊಂದು ಏಕಭಿಪ್ರಾಯದ ಇಲ್ಲವೆ ಸಂಬಂಧದ ಗುಂಪು ಒಟ್ಟಿಗೆ ಸೇರಿ ಒಂದೊಂದು ದಿನ ಒಬ್ಬೊಬ್ಬರ ಕಣ ಮಾಡುವುದು. ನೀರು ಹೊಯ್ದ ಮಾರನೆಯ ದಿನ ಎತ್ತುಗಳನ್ನು ಯಣೆಕಟ್ಟಿ ಕಣದ ಜಾಗವನ್ನು ಚೆನ್ನಾಗಿ ತುಳಿಸುತ್ತಾರೆ. ಇದು ನೆಲ ಚೆನ್ನಾಗಿ ಗಟ್ಟಿಯಾಗಲೆಂಬ ಕಾರಣದಿಂದ. ನೆಲ ಗಟ್ಟಿಯಾಗಿ ಮೇಲೆ ಕೆಸರಿನಕೆನೆ ಬಂದ ಮೇಲೆ ಇದಕ್ಕಾಗಿಯೇ ಇರುವ ಮಣಿ ಇತ್ಯಾದಿ ಹೊಡೆದು ನಯಗೊಳಿಸಿ ತುಂಬೆ ಬರಲಿನಿಂದ ಈ ಕೆನೆಯನ್ನು ಸಾರಿಸಿ ಒಣಗಲು ಬಿಡುತ್ತಾರೆ. ಸುಮಾರು ಒಂದು ವಾರದ ಕಾಲ ಒಣಗಿದ ನಂತರ ಕಣವನ್ನು ಸಗಣಿಯಿಂದ ಸಾರಿಸುತ್ತಾರೆ. ಕಣದ ಪಕ್ಕದಲ್ಲಿಯೇ ಸಾಮಾನ್ಯವಾಗಿ ಮೂರು ಅಡಿ ಚದರದ ಅಷ್ಟೇ ಆಳದ ಬದಿಗುಂಡಿ ಇರುತ್ತದೆ. ಅದಕ್ಕೆ ಸಗಣಿಯನ್ನು ತಂದು ಸುರಿದು, ನೀರು ಹಾಕಿ ತುಳಿದು ಬಗ್ಗಡ ಮಾಡುತ್ತಾರೆ. ಆ ಮೇಲೆ ಗಡಿಗೆಗಳಲ್ಲಿ ತಂದು ಕಣದಲ್ಲಿ ಸುರಿಯುತ್ತಾರೆ. ತಮ್ಮ ತಮ್ಮ ಕೈಗಳಲ್ಲಿ ತುಂಬೆ ಬರಲನ್ನು ಹಿಡಿದ ಇಬ್ಬರು ಅದನ್ನು ಸಾರಿಸುತ್ತಾ ಬರುತ್ತಾರೆ. ಮತ್ತೆ ಎರಡು ದಿನ ಒಣಗಲು ಬಿಟ್ಟು ನಂತರ ಒಕ್ಕಣೆ ಅಲ್ಲಿ ಆರಂಭವಾಗುತ್ತದೆ. ಕಾಳು ಬಡಿಯುವ ಕಾರ್ಯ ಮುಗಿಯುವವರೆಗೆ ಕಡೆಯ ಪಕ್ಷವಾರಕ್ಕೊಮ್ಮೆ ಸಗಣಿಯಿಂದ ಕಣವನ್ನು ಸಾರಿಸುತ್ತಲೇ ಇರುತ್ತಾರೆ.

ಕಣದಲ್ಲಿ ಒಕ್ಕಣೆ ಮೊದಲು ಉಪಧಾನ್ಯಗಳಿಂದ ಆರಂಭವಾಗುತ್ತದೆ. ಮೊದಲಿಗೆ ತಮ್ಮ ಮನೆ ಬಳಕೆಗೆ ಸೀಮಿತವಾಗಿ ಬೆಳೆದುಕೊಂಡ ಅವರೆ, ಹುರುಳಿ, ಹುಚ್ಚೆಳ್ಳು ಇತ್ಯಾದಿಗಳನ್ನೆಲ್ಲಾ ಬಡಿದು ಮುಗಿಸಿ ಅನಂತರ ಪ್ರಮುಖ ಧಾನ್ಯಗಳ ಒಕ್ಕಣೆಗೆ ರೈತ ಕೈ ಹಾಕುತ್ತಾನೆ. ಉದಾಹರಣೆಗೆ ರಾಗಿಯನ್ನು ಬಡಿಯಲು ರೈತ ಫೆಬ್ರವರಿ ತಿಂಗಳಿನಲ್ಲಿ ಆರಂಭಿಸುತ್ತಾನೆ. ಈ ಹೊತ್ತಿಗೆ ಹೊಲದ ಎಲ್ಲ ಬೆಳೆಯೂ ಮುಗಿದು ಹಂಕಲಾಗಿರುತ್ತದೆ. ರಾಗಿಯನ್ನು ಬಡಿಯುವ ಸಂಪ್ರದಾಯವೇ ಹೆಚ್ಚು. ಈಗೀಗ (ಹಿಂದೆಯೂ) ಹೆಚ್ಚು ಬೆಳೆಯುವಂಥವರು ಬಡಿಯಲು ಜನರು ಸಾಕಷ್ಟು ಇಲ್ಲದವರು ರೂಲಗಲ್ಲಿನ ಮೂಲಕ ರಾಗಿ ಒಕ್ಕುವ ಕೆಲಸ ಮಾಡುತ್ತಾರೆ. ಸುಮಾರು ಬೆಳಗ್ಗೆ ಎಂಟುವರೆ ಗಂಟೆಯ ಹೊತ್ತಿನಲ್ಲಿ ಮನೆ ಮಂದಿಯೆಲ್ಲ ಸೇರಿ ಮೆದೆಯಿಂದ ತೆಕ್ಕೆ ತೆಕ್ಕೆಯಾಗಿ ರಾಗಿಹುಲ್ಲು ತೆಗೆದು ತೆನೆ ಪೂರ್ವಾಭಿಮುಖವಾಗಿ ಒಂದರ ಮೇಲೊಂದು ಕ್ರಮವಾಗಿ ಬರುವಂತೆ ಇಡೀ ಕಣದಲ್ಲಿ ಹರಡುತ್ತಾರೆ. ಹೀಗೆ ಹರಡಿದ ಹುಲ್ಲು ಸುಮಾರು ೧೨ ಗಂಟೆಯವರೆಗೆ ಒಣಗಬೇಕು. ಆ ಮೇಲೆ ಸುಮಾರು ಹುತ್ತದಿಂದ ಹದಿನೈದು ಮಂದಿ ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೆ ಒಂದುವರೆ ಗಜ ಉದ್ದದ ಕಿರು ಬಿದಿರು ಕೋಲುಗಳಿಂದ ಬಡಿಯುತ್ತಾರೆ. ಇವುಗಳನ್ನು ಹುಲ್ಲು ಬಡಿಯುವ ಕೋಲು ಎಂದೇ ಕರೆಯುತ್ತಾರೆ. ಹನ್ನೆರಡರಿಂದ ಒಂದೂವರೆ ಘಂಟೆಯವರೆಗೆ ಬಡಿಯುವ ಕೆಲಸ ನಡೆಯುತ್ತದೆ. ಒಂದು ಪಕ್ಕ ಬಡಿದು ಆದ ಮೇಲೆ ಅದನ್ನು ಮಾಲು ಹಾಕುತ್ತಾರೆ. ಮಾಲು ಹಾಕುವುದೆಂದರೆ ಅಡಿಯ ಭಾಗ ಮೇಲೆ ಬರುವಂತೆ ಮಗುಚುವುದು. ಹೀಗೆ ಮಗುಚಿದ ಹುಲ್ಲು ಒಂದರಡು ಗಂಟೆ ಒಣಗಿದ ಮೇಲೆ ಮತ್ತೆ ಜನ ಸಾಲಾಗಿ ಕುಳಿತು ಬಡಿಯುತ್ತಾರೆ. ಸುಮಾರು ಐದು ಗಂಟೆಯ ಹೊತ್ತಿಗೆ ಬಡಿಯುವ ಕೆಲಸ ಮುಗಿಯುತ್ತದೆ.

ಹುಲ್ಲನ್ನು ಬಡಿದಾದ ಮೇಲೆ ಅಷ್ಟೊಂದು ಜನರ ಅವಶ್ಯಕತೆ ಇರುವುದಿಲ್ಲ. ಮುಂದೆ ಮೇಲೆ ಇರುವ ಹುಲ್ಲನ್ನೆಲ್ಲಾ ಒದರಿ ತೆಗೆಯುವರು. ಹೀಗೆ ತೆಗೆದ ಹುಲ್ಲನ್ನು ಹೊರೆ ಕಟ್ಟಿ ರೈತನ ನಿರ್ದಿಷ್ಟ ಹುಲ್ಲು ಕೊಪ್ಪಲಿಗೆ ಸಾಗಿಸುವವರು. ಅಲ್ಲಿ ಸಿದ್ಧಪಡಿಸಿರುವ ಅಣ್ಣಣಿಯ ಮೇಲೆ ಆಯಾ ದಿನ ಬಡಿದ ಹುಲ್ಲನ್ನು ಒಟ್ಟುತ್ತಾ ಹೋಗುವರು. ಹುಲ್ಲು ತೆಗೆದ ನಂತರ ಕಣದ ತುಂಬ ಹರಡಿರುವ ಕಾಳನ್ನು ಒಂದೆಡೆಗೆ ಗುಡ್ಡೆ ಮಾಡುವರು. ಗುಡ್ಡೆ ಮಾಡಿದ ಧಾನ್ಯವನ್ನು ಹೆಂಗಸರು ತೂರಿ ಧಾನ್ಯ ಮತ್ತು ಉಬ್ಬಲನ್ನು ಬೇರೆ ಮಾಡುವರು. ಉಬ್ಬಲು ಎಂದರೆ ಹೊಟ್ಟು ಎಂದರ್ಥ. ಬಡಿಯುವಾಗ ನುರಿಯದೆ ಉಳಿದ ತೆನೆಯ ಭಾಗವನ್ನು ಗುನಿ ಎಂದು ಒಂದೆಡೆ ಸುರಿದು ಮತ್ತೆ ಬಡಿಯುವರು. ಇದನ್ನು ಬಡಿಯಲು ಗುನಿದಡಿ ಎಂಬ ದಪ್ಪ ಬಿದಿರು ದೊಣ್ಣೆಗಳಿವೆ. ಇಷ್ಟು ಹೊತ್ತಿಗೆ ಸುಮಾರು ಏಳು ಗಂಟೆಯ ಸಮಯವಾಗಿ ಇರುತ್ತದೆ. ಉಬ್ಬಲನ್ನು ಹುಲ್ಲು ಕೊಪ್ಪಲಿಗೂ, ತೂರಿ ಸಿದ್ಧಪಡಿಸಿದ ಧಾನ್ಯವನ್ನು ಮನೆಗಳಿಗೂ ಸಾಗಿಸುತ್ತಾರೆ. ಇಲ್ಲಿಗೆ ಒಂದು ದಿನದ ಬಡಿಯುವ ಕಾರ್ಯ ಮುಗಿಯುತ್ತದೆ. ತಾವು ಬೆಳೆದ ಬೆಳೆಯ ಗಾತ್ರವನ್ನನುಸರಿಸಿ ಈ ಬಡಿಯುವ ಕಾರ್ಯ ಒಂದು ವಾರದಿಂದ ಒಂದು ತಿಂಗಳಿನವರೆಗೆ ನಡೆಯುತ್ತದೆ.

ಕಣದಲ್ಲಿ ಕಡೆಯದಿನ ಬಹಳ ಮುಖ್ಯವಾದುದು. ಆ ದಿನ ರೈತ ತನ್ನ ದಿನನಿತ್ಯದ ಕೆಲಸಗಳಲ್ಲಿ ಸಹಾಯಕರಾದ ಅನೇಕರಿಗೆ ವಾರ್ಷಿಕ ಧಾನ್ಯ ಅಳೆಯುವ ಪದ್ಧತಿಯುಂಟು. ಉದಾಹರಣೆಗೆ ಮಡಿವಾಳ, ಕ್ಷೌರಿಕ, ಕುಂಬಾರ, ಕುಳವಾಡಿ ಇವರು ರೈತನ ವಿವಿಧ ಅವಶ್ಯಕತೆಗಳನ್ನು ನಡೆಸುವವರು. ಈ ಜನರಿಗೆ ವಾರ್ಷಿಕ ಧಾನ್ಯ ಹಡದೆ ಇಷ್ಟೆಂದು ನಿಗದಿಯಾಗಿರುತ್ತದೆ. ಅದನ್ನು ಇವರು ಕಣಗೆಲಸ ಮುಗಿದ ಮೇಲೆ ಮನೆಗಳಲ್ಲಿ ಹೋಗಿ ಪಡೆಯುತ್ತಾರೆ. ಅದು ಒಂದು ರೀತಿಯ ಹಕ್ಕು ಎಂದು ಈ ಜನ ಭಾವಿಸುತ್ತಾರೆ. ಇದರೊಂದಿಗೆ ಕಡೆಯ ದಿನ ಕಣದಲ್ಲಿ ಈ ಎಲ್ಲರಿಗೂ ಒಂದು ಅಥವಾ ಎರಡು ಹೊರೆ ತೆನೆ ಹುಲ್ಲನ್ನು ಮೆದೆಯಿಂದ ತೆಗೆದು ಅವನಿಗೆ ಹೊರುವ ಶಕ್ತಿ ಇರುವಷ್ಟು ಹುಲ್ಲನ್ನು ಕಟ್ಟಿಕೊಳ್ಳಲು ಅವಕಾಶವುಂಟು. ಹೀಗೆ ಅಗಸರು, ಕೆಲಸಿಗರು, ಕುಳವಾಡಿಗಳು ತೆಗೆದುಕೊಂಡು ಉಳಿದುದನ್ನು ಅಂತಿಮವಾಗಿ ಕಣದಲ್ಲಿ ಹರಡಿ ಬಡಿಯುತ್ತಾರೆ. ಹುಲ್ಲು ಬಡಿಯುವ ಕಾಲದಲ್ಲಿ ಬುಡಬುಡಿಕೆ, ಗೊಂಬೆರಾಮ, ದಾಸಯ್ಯ ಇವರಲ್ಲದೆ ಇನ್ನೂ ಅನೇಕರು ರೈತರ ಕಣಗಳಿಗೆ ಭಿಕ್ಷೆಗೆ ಬರುವುದುಂಟು. ಈಗ ಇದೆಲ್ಲವೂ ಮಾಯವಾಗುತ್ತಿದೆ. ಕಡೆಯ ದಿನವಂತೂ ಇಂತಹ ಭಿಕ್ಷೆ ಬೇಡುವವರ ದೊಡಡ ಗುಪೇ ಇರುತ್ತದೆ. ಆ ದಿನ ಬಡಿದುದನ್ನೆಲ್ಲಾ ಒಂದೆಡೆ ರಾಶಿ ಮಾಡಿ ಬೆಳೆದವರು ರಾಶಿ ಪೂಜೆ ಮಾಡುತ್ತಾರೆ. ಅನಂತರ ಕಣಕ್ಕೆ ಬಂದ ಬೇಡುಗರಿಗೆಲ್ಲ ಅವರ ಶಕ್ತ್ಯಾನುಸಾರ ಧಾನ್ಯ ನೀಡುತ್ತಾರೆ. ಉಳಿದುದನ್ನು ತೆಗೆದುಕೊಂಡು ಮನೆಗೆ ಹೋಗುತ್ತಾರೆ.

ಭತ್ತ ಮತ್ತು ಜೋಳಕ್ಕೆ ಸಂಬಂಧಿಸಿದಂತೆ ಈ ಕಣದ ವ್ಯವಸ್ಥೆ ಕೊಂಚ ವ್ಯತ್ಯಾಸವಿರುತ್ತದೆ. ತೆನೆ ಭತ್ತವನ್ನು ಕಂತೆ ಕಂತೆಯಾಗಿ ಕಟ್ಟಿ ಒಂದು ಮರದ ತುಂಡು ಅಥವಾ ಮಣೆಯನ್ನು ಇಟ್ಟು ಅದರ ಮೇಲೆ ಬಡಿಯುತ್ತಾರೆ. ಆ ಮೇಲೆ ಒಂದು ದಿನ ಹುಲ್ಲನ್ನು ಕಣದ ತುಂಬಾ ಹರಡಿ ದನಗಳ ಎಣೆ ಹೂಡಿ ತುಳಿಸುತ್ತಾರೆ. ಇದಕ್ಕಾಗಿ ಕಣದ ಮಧ್ಯದಲ್ಲಿ ಒಂದು ಬಿದಿರ ಕಂಬ ನೆಡುತ್ತಾರೆ. ಅದನ್ನು ಯಣೆಗಂಬ ಎಂದೇ ಕರೆಯುತ್ತಾರೆ. ಹತ್ತು ಹದಿನೈದು ಎತ್ತುಗಳನ್ನು ಸಾಲಾಗಿ ಒಂದೇ ಹಗ್ಗದಿಂದ ಕಟ್ಟಿ ಮೊದಲ ಎತ್ತಿನ ಕೊನೆಯ ಕಣದ ಮಧ್ಯೆ ಇರುವ ಯಣಿಗಂಬಕ್ಕೆ ಕಟ್ಟಿ ಗಾಣದಂತೆ ಸುತ್ತಲೂ ತಿರುಗಿಸುತ್ತಾರೆ. ದನಗಳು ತುಳಿದು ಕಾಳುದುರಿ ಹುಲ್ಲನ್ನು ಮೆರೆಗೋಲಿನಿಂದ ತೆಗೆದು ಒಂದೆಡೆ ರಾಶಿ ಹಾಕುತ್ತಿರುತ್ತಾರೆ. ಕ್ರಮವಾಗಿ ಹೇಗೆಯೇ ತೆಗೆದ ಮೇಲೆ ಉದುರಿದ ಭತ್ತವನ್ನು ತೂರಿ ಸಿದ್ಧಮಾಡುತ್ತಾರೆ. ಈ ಭತ್ತಕ್ಕೆ ಹುಲ್ಲೊಕ್ಕಲು ಭತ್ತ ಎಂದೇ ಹೆಸರು. ತೆನೆಯನ್ನು ಬಡಿದ ನಂತರ ಹುಲ್ಲನ್ನು ಒಕ್ಕುವುದರಿಂದ ಬಂದುದಾದರಿಂದ ಅದಕ್ಕೆ ಈ ಹೆಸರು ಬಂದಿದೆ. ಜೋಳವನ್ನು ಸಾಮಾನ್ಯವಾಗಿ ಕಿತ್ತು ಇಲ್ಲವೆ ಕೊಯ್ದ ಕಂತೆ ಕಟ್ಟಿ ಮೆದೆ ಹಾಕುತ್ತಾರೆ. ಅದು ಚೆನ್ನಾಗಿ ಒಣಗಿ ಮುಗಿದ ನಂತರ ಮೆದೆ ಕಿತ್ತು ತೆನೆ ಕೊಯ್ದು ತೆಗೆಯುತ್ತಾರೆ. ಕಡ್ಡಿಯೊಂದಿಗೆ ಜೋಳ ಬಡಿಯುವ ಇಲ್ಲ. ಕೊಯ್ದ ತೆನೆಯನ್ನು ಕಣದಲ್ಲಿ ಹರಡಿ ಕೋಲಿನಿಂದ ಬಡಿಯುತ್ತಾರೆ ಇಲ್ಲವೆ ರೂಲುಗಲ್ಲು ಹೊಡೆಯುತ್ತಾರೆ. ಇನ್ನು, ರೈತ ಬೆಳೆಯುವ ಅನೇಕ ಧಾನ್ಯಗಳ ಒಕ್ಕಣೆಯೂ ಇದೇ ಕಣದಲ್ಲಿ ಆಗುತ್ತದೆ. ಈ ಕಾರಣದಿಂದಾಗಿಯೇ ವ್ಯವಸಾಯ ಚಕ್ರದಲ್ಲಿ ಕಣ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ.

ವ್ಯವಸಾಯ ಚಕ್ರ ಹೇಳುವಾಗ ಈ ಚಕ್ರದ ಅವಿಭಾಜ್ಯ ಅಂಗವಾಗಿ ಬರುವ ಒಂದೆರಡು ಹಬ್ಬಗಳನ್ನು ಇಲ್ಲಿ ಹೆಸರಿಸುವುದು ಅವಶ್ಯಕ. ಯುಗಾದಿಯ ನಂತರ ವ್ಯವಸಾಯಕ್ಕೆ ಸಂಬಂಧಿಸಿದಂತೆ ಬರುವ ಮೊದಲನೆಯ ಹಬ್ಬ ‘ಕಾರುಹಬ್ಬ’ ಇದು ರೈತನಿಗೆ ಬಹಳ ಪವಿತ್ರವಾದ ಹಬ್ಬ ಎಂಬ ನಂಬಿಕೆ. ಇದನ್ನು ಪ್ರಾದೇಶಿಕವಾಗಿ ಬೇರೆ ಬೇರೆ ರೀತಿಯಲ್ಲಿಯೂ ಆಚರಿಸುತ್ತಾರೆ. ಇಲ್ಲಿ ನಾನು ನಾಗಮಂಗಲ ತಾಲೂಕಿನ ಕೆಲವು ಭಾಗದ ಹಳ್ಳಿಗಳ ಕಾರುಹಬ್ಬದ ಆಚರಣೆಯ ವಿವರ ಕೊಡುತ್ತಿದ್ದೇನೆ. ಕಾರುಹಬ್ಬ ಸಾಮಾನ್ಯವಾಗಿ ಜೂನ್‌ ತಿಂಗಳಿನಲ್ಲಿ ನಡೆಯುತ್ತದೆ. ಇದನ್ನು ಕೆಲವು ಕಡೆ ಕಾರುಹುಣ್ಣಿಮೆ ಎಂದು ಕರೆಯುತ್ತಾರೆ. ಈ ಹಬ್ಬದ ದಿನ ಬೆಳಿಗ್ಗೆ ಮನೆಯ ದನಕರುಗಳನ್ನೆಲ್ಲಾ ಕೆರೆಗೆ ಹೊಡೆದುಕೊಂಡು ಹೋಗಿ ಮೈ ತೊಳೆಯುತ್ತಾರೆ. ಹಿಂದಿನ ದಿನ ಅಥವಾ ಅದೇ ದಿನ ಊರ ಆಚೆಯ ಗುಡ್ಡಗಳಲ್ಲಿ ಸಿಗುವ ಕಕ್ಕೆಸೊಪ್ಪನ್ನು ಕಡಿದು ತರುತ್ತಾರೆ. ಬಾಳೆಯ ನಾರಿನೊಂದಿಗೆ ಈ ಸೊಪ್ಪನ್ನು ಸೇರಿಸಿ ದಂಡೆ ಹೊಸೆಯುತ್ತಾರೆ. ಮನೆಯಲ್ಲಿರುವ ಎಲ್ಲಾ ದನಗಳಿಗೂ ಒಂದೊಂದು ದಂಡೆ ಸಿದ್ಧವಾಗುತ್ತದೆ. ಎಮ್ಮೆ, ಕುರಿ, ಮೇಕೆ ಅಥವಾ ಆಡುಗಳಿಗೆ ಇದು ಅನ್ವಯಿಸುವುದಿಲ್ಲ. ತಮ್ಮಲ್ಲಿರುವ ದನಕರುಗಳ ಸಂಖ್ಯೆಗಿಂತ ಪ್ರತಿ ಮನೆಯವರೂ ಎರಡೆರಡು ದೊಡ್ಡ ದಂಡೆಗಳನ್ನು ಹೆಚ್ಚಾಗಿ ಕಟ್ಟುತ್ತಾರೆ. ಇದರಲ್ಲಿ ಒಂದನ್ನು ಊರ ಹೆಬ್ಬಾಗಿಲ ಕಲ್ಲಿಗೂ ಮತ್ತೊಂದನ್ನು ಅಲ್ಲೆ ಇರುವ ಕರುವಗಲ್ಲಿಗೂ ಹಾಕುತ್ತಾರೆ. ಅನಂತರ ತಾವು ಹೊಸೆದ ದಂಡೆಗಳನ್ನು ತಮ್ಮ ದನಕರುಗಳಿಗೆ ತೊಡಿಸುತ್ತಾರೆ.

ಅಕ್ಕಿ ಹಿಟ್ಟಿನ ಬಿಳಿಪಟ್ಟೆ ಮತ್ತು ಕೆಮ್ಮಣ್ಣಿನ ಕೆಂಪು ಪಟ್ಟೆ ಬಳಿಯುವುದು ಈ ಹಬ್ಬದ ವೈಶಿಷ್ಟ್ಯವೆಂದು ಹೇಳಬೇಕು. ಮನೆಯ ಬಾಗಿಲು, ಕಂಬಗಳು, ವ್ಯವಸಾಯೋಪಕರಣಗಳು, ದನಗಳ ಕೊಂಬುಗಳು, ಹೆಬ್ಬಾಗಿಲು ಕಲ್ಲು, ಕರುವಗಲ್ಲುಗಳಿಗೆ ಈ ಬಿಳಿ ಮತ್ತು ಕೆಂಪುಪಟ್ಟೆಯನ್ನು ಬಳಿಯುತ್ತಾರೆ. ವ್ಯವಸಾಯಕ್ಕೆ ಸಂಬಂಧಿಸಿದ ನೇಗಿಲು, ನೊಗ, ಕುಂಟೆ, ಕೂರಿಗೆ, ಹಲುಬೆ ಹೀಗೆ ಕಳೆ ಕೀಳುವ ಉಜ್ಜೆರಿಯಿಂದ ಹೆಗ್ಗುಂಟೆಯವರೆಗೆ ಎಲ್ಲವನ್ನೂ ತೊಳೆದು ಮನೆಯ ಒಂದು ಮೂಲೆಯಲ್ಲಿ ರಾಶಿ ಹಾಕುತ್ತಾರೆ. ಇವಕ್ಕೂ ಬಿಳಿ ಕೆಂಪು ಪಟ್ಟೆ ಹಚ್ಚುತ್ತಾರೆ. ಮನೆಯ ಹುಡುಗರು ಸಂದು ಗೊಂದುಗಳನ್ನು ಹುಡುಕಿ ಹಸಿಹುಲ್ಲು ತರುತ್ತಾರೆ. ಈ ದಿನ ದನಕರುಗಳಿಗೆ ಹಸಿಹುಲ್ಲು ತಿನ್ನಿಸಬೇಕೆಂಬುದು ಸಂಪ್ರದಾಯ. ಹೆಂಗಸರು ಮನೆಗುಡಿಸಿ ಸಾರಿಸಿ ಕಾರು ಹಬ್ಬದ ಕಡುಬು ಕಾಯಿಹಾಲು ತಯಾರಿಕೆಯಲ್ಲಿ ತೊಡಗುತ್ತಾರೆ.

ಸಂಜೆ ದೀಪ ಹಚ್ಚಿದ ನಂತರ ಬಸವನ ಪಾದ ಹಿಡಿಯುವುದು ಮತ್ತು ವ್ಯವಸಾಯ ಮುಟ್ಟುಗಳ ಪೂಜೆ. ಇದು ಒಂದು ರೀತಿಯಲ್ಲಿ ರೈತನ ಆಯುಧ ಪೂಜಾಸಮಾರಂಭವೆಂದೇ ಹೇಳಬಹುದು. ಮನೆಯಲ್ಲಿ ಮಾಡಿದ ಕಡುಬು ಕಾಯಿಹಾಲನ್ನು ಇತರ ಭಕ್ಷಗಳೊಂದಿಗೆ ವ್ಯವಸಾಯ ಉಪಕರಣಗಳ ಎದುರಿಗೆ ಮೊನೆಬಾಳೆ ಎಲೆಯಲ್ಲಿ ಎಡೆ ಇಕ್ಕುತ್ತಾರೆ. ಪ್ರತಿ ಮನೆಯಲ್ಲಿ ವ್ಯವಸಾಯಕ್ಕೆ ಹೂಡುವ ಎತ್ತುಗಳನ್ನು ಹಿಡಿದು ತಂದು ಈ ಎಡೆಯ ಎದುರಿಗೆ ನಿಲ್ಲಿಸುತ್ತಾರೆ. ಮನೆಯ ಹಿರಿಯ ಬಸವನ ಪಾದ ತೊಳೆದು ಪೂಜಿಸಿ ‘ಬಸವಣ್ಣ ಈ ವರ್ಷದ ನನ್ನ ಬೇಸಾಯವನ್ನು ತೊಡಕಿಲ್ಲದೆ ನಡೆಸಿಕೊಡು’ ಎಂದು ಪ್ರಾರ್ಥಿಸುತ್ತಾನೆ. ಅನಂತರ ಎಡೆಯನ್ನು ಎತ್ತುಗಳಿಗೆ ತಿನ್ನಲು ಬಿಡುವರು. ಮನೆಮಂದಿ ಮಕ್ಕಳೆಲ್ಲ ಅದರ ಒಂದೊಂದು ಚೂರು ತೆಗೆದು ತಿನ್ನುವರು. ಬಸವನ ಪ್ರಸಾದ ಭವಿಷ್ಯಕ್ಕೆ ಒಳ್ಳೆಯದೆಂಬುದು ಅವರ ನಂಬಿಕೆ. ಈ ಹಬ್ಬವನ್ನು ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸುವ ಪದ್ಧತಿ ಇದ್ದರೂ ಮೂಲ ಉದ್ದೇಶ ಒಂದೇ ಇದ್ದಂತೆ ಕಾಣುತ್ತದೆ. ಉದಾಹರಣೆಗೆ ಕೆಲವು ಕಡೆಗಳಲ್ಲಿ ಈ ಹಬ್ಬದ ದಿನ ಎತ್ತುಗಳ ಓಟದ ಸ್ಪರ್ಧೆ ಇಡುವ ಪದ್ಧತಿಯುಂಟು. ಇಂತಹ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಎತ್ತುಗಳನ್ನು ತಾವರೆ ಇತ್ಯಾದಿ ಅವರ ಹಳ್ಳಿಗಳಲ್ಲಿ ದೊರೆಯುವ ಹೂವಿಂದ ಅಲಂಕರಿಸಿ ತರುತ್ತಾರೆ. ಊರ ದೇವಾಲಯದ ಮುಂದೆ ಒಂದು ತೋರಣ ಕಟ್ಟಿರುತ್ತಾರೆ. ಸ್ಪರ್ಧೆಗೆ ಇಳಿದವರು ತಮ್ಮ ಎತ್ತುಗಳನ್ನು ಊರ ಒಂದು ಸುತ್ತು ಬಳಸಿ ಯಾರೂ ಮೊದಲು ಆ ತೋರಣ ಕೀಳುವರೋ ಅವರು ಗೆದ್ದಂತೆ. ಇನ್ನು ಕೆಲವು ಕಡೆ ನೊಗ ಹೂಡಿದ ಎತ್ತು, ಪಂಟೆಗಾಡಿ ಹೂಡಿದ ಎತ್ತುಗಳ ಓಟದ ಸ್ಪರ್ಧೆ ನಡೆಯುತ್ತದೆ. ಮಲೆನಾಡು ಪ್ರದೇಶದಲ್ಲಿ ಕಾರು ಹುಣ್ಣಿಮೆ ಎಂದು ವಿಶೇಷವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಈ ಸ್ಪರ್ಧೆಗಳೆಲ್ಲ ಕ್ರಮೇಣ ಹುಟ್ಟಿಕೊಂಡವಾಗಿರಬೇಕು. ಈ ಹಬ್ಬದ ಆಚರಣೆಯಲ್ಲಿ ಮೊದಲನೆಯದು ರೈತ ವ್ಯವಸಾಯ ಆರಂಭಿಸುವ ಮೊದಲು ತನ್ನ ವ್ಯವಸಾಯದ ಹತಾರುಗಳನ್ನು ಪರಿಶೀಲಿಸಿಕೊಂಡು ಅವುಗಳಿಗೆ ಪೂಜೆ ಸಲ್ಲಿಸುವುದು. ಎರಡನೆಯದು ಇಡೀ ತನ್ನ ಬದುಕಿನ ಸಂಕೇತವಾದ ಎತ್ತು ಅಥವಾ ಬಸವಣ್ಣನ ಪಾದ ಹಿಡಿಯುವುದು. ಹೀಗೆ ಕಾರು ಹಬ್ಬ ಒಂದು ರೀತಿಯಲ್ಲಿ ನಮ್ಮ ರೈತರ ವ್ಯವಸಾಯ ಚಕ್ರದ ಸಾಂಕೇತಿಕ ಆರಂಭವಾಗಿ ಆಚರಣೆಗೊಳ್ಳುವಂತೆ ಕಾಣುತ್ತದೆ.

ವ್ಯವಸಾಯಕ್ಕೆ ಸಂಬಂಧಿಸಿದಂತೆ ಹೊಸ ರಾಗಿ ಮೀಸಲು ಅಥವಾ ಹಬ್ಬ, ದೀವಳಿಗೆ ಅಥವಾ ದೀಪಾವಳಿ ಮತ್ತು ಸಂಕ್ರಾಂತಿ ಇವು ಮುಖ್ಯವಾದವು. ಹೊಸರಾಗಿ ಮೀಸಲು ನಾನು ತಿಳಿದಮಟ್ಟಿಗೆ ಹಳೆ ಮೈಸೂರಿನ ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿದೆ. ಮಿಕ್ಕಂತೆ ನಾಗರಪಂಚಮಿ ಎಂಬ ಹೆಸರಿನಲ್ಲಿ ರೈತರಲ್ಲಿ ದನದ ಹಬ್ಬವಾಗಿಯೂ ಇದು ಜಾರಿಯಲ್ಲಿದೆ. ಕಾರು ಫಸಲಿನ ಸಂಕೇತವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಆ ದಿನ ಮನೆಯನ್ನು ಗುಡಿಸಿ ಸಾರಿಸಿ ಹೊಸ ಧಾನ್ಯಗಳಿಂದ ಅಡುಗೆ ಮಾಡುವರು. ಸಂಜೆ ದಾಸಯ್ಯನು ದೇವರು ತರುತ್ತಾನೆ. ಭೈರವನ ಒಕ್ಕಲಿನವರಿಗೆ ಜೋಗಪ್ಪ ದೇವರು ತರುತ್ತಾನೆ. ತಾವು ಬೆಳೆದ ಬೆಳೆಯಿಂದ ಮಾಡಿದ ಮೊದಲ ಅಡುಗೆ ದೇವರಿಗೆ ಸಲ್ಲುತ್ತದೆ. ಅನಂತರ ಮನೆ ಮಂದಿಯೆಲ್ಲ ಉಣ್ಣುತ್ತಾರೆ.

ದೀಪಾವಳಿಯನ್ನು ದೀವಳಿಗೆ ಎಂದು ರೈತರು ಆಚರಿಸುತ್ತಾರೆ. ನಗರಗಳಂತೆ ಮದ್ದು ಮತಾಪುಗಳ ಲೂಟಿ, ತಿಂಡಿ ತಿನಿಸುಗಳ ಆರ್ಭಟದ ಹಬ್ಬವಿದಲ್ಲ. ಮನೆ ಮನೆಯ ಮುಂದೆ ಕಾರ್ತಿಕದ ಒಂದು ತಿಂಗಳು ಹುಚ್ಚೆಳ್ಳು ಹೂ ಮುಡಿಸಿದ ದೀಪ ಹಚ್ಚುತ್ತಾರೆ. ಕಡೆಯ ಕಾರ್ತಿಕ ಸೋಮವಾರದಂದು ಸಿಹಿ ಅಡುಗೆಯೊಂದಿಗೆ ಮುಗಿಸುತ್ತಾರೆ. ‘ದೀವಳಿಗೆಯಲ್ಲಿ ದನ ಕೆಣಕಬೇಡ’ ಎಂಬ ಮಾತಿದೆ. ಅಂದರೆ ಆಗ ಯಾವ ಕೆಲಸವೂ ಇರುವುದಿಲ್ಲ. ಮಳೆಯಿಂದಾಗಿ ಒಳ್ಳೆಯ ಹಸಿರುಹುಲ್ಲು ಬಂದಿರುತ್ತದೆ. ಅದನ್ನು ಮೇಯ್ದು ಅವು ದಪ್ಪ ಪುಷ್ಟವಾಗಿರುತ್ತವೆ. ಅಲ್ಲದೆ ಸೋಮವಾರ ರೈತರಿಗೆ ಬಿಡುವಿನ ದಿನ. ಅಂದು ಅರಿಗೆ ಕಟ್ಟುವಂತಿಲ್ಲ ಈ ಬಗ್ಗೆ ಕಥೆಯೊಂದಿದೆ. ಬಹಳ ಹಿಂದಿನ ಗಳಲ್ಲಿ ದನಕರುಗಳೆಲ್ಲ ಮಾತನಾಡುತ್ತಿದ್ದುವಂತೆ. ಹೀಗಿರುವಾಗ ಒಂದು ಮನೆಯ ಅತ್ತೆ ತನ್ನ ಸೊಸೆಗೆ ದನಕರುಗಳಿಗೆ ಸರಿಯಾಗಿ ಹುಲ್ಲು ನೀರು ಕೊಡುವಂತೆ ತಿಳಿಸಿ ಎಲ್ಲೋ ಹೋದಳು. ಅತ್ತೆಯಿಲ್ಲದ ಈ ಸೊಸೆ ರಾಜನಿಲ್ಲದ ಮಂತ್ರಿಯಂತೆ ಎಲ್ಲಾ ಕೆಲಸಗಳನ್ನೂ ಮರೆತು ಆರಾಮವಾಗಿದ್ದು ಬಿಟ್ಟಳು. ಹೊರಗೆ ಹೋಗಿದ್ದ ಅತ್ತೆ ಸಂಜೆ ಬಂದಳು. ಆಗ ಹಸುವೊಂದು ತಮಗೆ ಬೆಳಗಿನಿಂದ ಹುಲ್ಲು ನೀರಿಲ್ಲದಿರುವ ಬಗ್ಗೆ ಅತ್ತೆಯಲ್ಲಿ ದೂರು ಹೇಳಿತು. ಅತ್ತೆ ಸೊಸೆಯನ್ನು ಚೆನ್ನಾಗಿ ಬಯ್ದಳು. ಕುಪಿತಗೊಂಡ ಸೊಸೆ ದನಗಳನ್ನು ಕುರಿತು “ನಿಮ್ಮ ಸೊಲ್ಲು ಸೋಮವಾರ ಅಡಗ” ಎಂದು ಬಯ್ದು ಶಾಪ ನೀಡಿದಳು. ಅಂದಿನಿಂದ ಅವು ಮಾತನಾಡುವುದನ್ನು ನಿಲ್ಲಿಸಿದವು. ಸೊಸೆಯ ದುಡುಕಿನಿಂದಾದ ಅಚಾತುರ್ಯ ರೈತರಿಗೆಲ್ಲ ಹಾನಿಯನ್ನುಂಟು ಮಾಡಿತು. ಹಾಗಾಗಿ ಪ್ರತಿ ಸೋಮವಾರವನ್ನು ಬಸವನ ದಿನವಾಗಿ ಆಚರಿಸುತ್ತಾರೆ. ಈ ಕಾರಣದಿಂದಾಗಿಯೇ ಸೋಮವಾರ ಆರು ಕಟ್ಟುವುದಿಲ್ಲ.

ಸಂಕ್ರಾಂತಿ ಸಹ ವ್ಯವಸಾಯ ಚಕ್ರದ ಹಬ್ಬಗಳಲ್ಲಿ ಪ್ರಮುಖವಾದುದು. ಶಿಷ್ಟರಿಗೆ ಇದು ಎಳ್ಳು ಬೀರುವ ಹಬ್ಬ. ಆದರೆ ರೈತರಿಗೆ ಇದು ತಾವು ಸಾಕಿದ ದನಗಳನ್ನು ಅಲಂಕರಿಸಿ ದೇವಾಲಯಕ್ಕೆ ಒಯ್ದು ಪೂಜೆ ಸಲ್ಲಿಸಿ ಅವುಗಳಿಗೆ ರೋಗ ರುಜಿನಗಳು, ದೃಷ್ಟಿದೋಷಗಳು ತಗುಲದಂತೆ ಕಿಚ್ಚುಹಾಯಿಸುವ ಹಬ್ಬ. ಈ ಹಬ್ಬದಲ್ಲಿ ರೈತರು ತಮ್ಮ ಮನೆಯದನ, ಕುರಿ, ಎಮ್ಮೆ ಎಲ್ಲಾ ಸಾಕು ಪ್ರಾಣಿಗಳನ್ನು ತೊಳೆದು ಅವುಗಳಿಗೆ ಬಣ್ಣ ಹಚ್ಚುತ್ತಾರೆ. ಎತ್ತುಗಳಿಗೆ ವಿಶೇಷವಾದ ಅಲಂಕಾರ ಮಾಡುವುದೂ ಉಂಟು. ಹೀಗೆ ಅಲಂಕರಿಸಿದ ದನಕರುಗಳನ್ನು ದೇವಾಲಯಗಳ ಹತ್ತಿರ ಹೊಡೆದುಕೊಂಡು ಹೋಗುತ್ತಾರೆ. ಸಾಮಾನ್ಯವಾಗಿ ಈ ದನಕರುಗಳ ರಕ್ಷಣಾರ್ಥವಾಗಿಯೇ ಕೆಲವು ದೇವತೆಗಳಿರುತ್ತಾರೆ. ಅಂತಹ ಕಡೆಗಳಲ್ಲಿ ಸಂಕ್ರಾಂತಿ ಹಬ್ಬದ ದಿನ ದನಕರುಗಳನ್ನು ತಂದು ಗುಡಿಗೆ ಪ್ರದಕ್ಷಿಣೆ ಹಾಕಿಸಿ ದೇವರ ತೀರ್ಥ ಹಾಕಿಸುತ್ತಾರೆ. ಆ ದಿನ ಅಂತಹ ಜಾತ್ರೆಗಳಲ್ಲಿ ದನಕರುಗಳ ಮಾರಾಟವಿರುವುದಿಲ್ಲ. ಸಂಜೆ ಊರೊಳಗೆ ಬರುವ ಮುಂಚೆ ಓಣಿಯಲ್ಲಿ ಅಥವಾ ಊರ ಹೆಬ್ಬಾಗಿಲಲ್ಲಿ ಬೆಂಕಿ ಹಾಕಿ ದನಕರುಗಳನ್ನು ಕಿಚ್ಚು ಹಾಯಿಸುತ್ತಾರೆ. ಕಾರ್ತಿಕದಲ್ಲಿ ಚೆನ್ನಾಗಿ ಮೇದು ಸೊಗಸಾದ ದನಕರುಗಳಿಗೆ ‘ಕಣ್ಣೆಸರಾಗದಿರಲೆಂ’ಬುಂದೊದಾರೆ, ಈ ಉರಿಯ ಸೋಂಕಿಗೆ ಸಾಂಕ್ರಾಮಿಕ ರೋಗಗಳು ನಾಶವಾಗಲೆಂಬುದು ಮತ್ತೊಂದು ಆಶಯ. ಸಂಕ್ರಾಂತಿಯ ದಿನ ಅವರೇಬೇಲೆಯ ಕಿಚಡಿ ಅನ್ನದೊಂದಿಗೆ ಮಾಂಸಾಹಾರವೂ ಕೆಲವೆಡೆ ಉಂಟು.

ಕಣದಲ್ಲಿ ಒಟ್ಟಿದ್ದ ದವಸ ಧಾನ್ಯಗಳು ಮನೆ ಸೇರಿದ ಮೇಲೆ ರೈತರು ತಮ್ಮ ಧಾರ್ಮಿಕ ಆಚರಣೆಗಳತ್ತ ಮನಸ್ಸು ಕೊಡುತ್ತಾರೆ. ಅನೇಕ ಸುಗ್ಗಿಯ ಹಬ್ಬಗಳು, ಕುಣಿತಗಳು, ಆರಂಭವಾಗುತ್ತವೆ. ಒಂದು ರೀತಿಯಲ್ಲಿ ಇದು ರೈತನಿಗೆ ರಜೆಯ ಕಾಲ. ಫೆಬ್ರವರಿ ಕಡೆಯ ವಾರದಿಂದ ಮಾರ್ಚ್‌ವರೆಗೆ ಅರ್ಥಾತ್‌ ಯುಗಾದಿಯವರೆಗೆ ಅವರು ಇಂತಹ ಸಂತೋಷದಲ್ಲಿ ಪಾಲುಗೊಂಡಿರುತ್ತಾರೆ. ಮತ್ತೆ ಯುಗಾದಿ ಬಂದೊಡನೆಯೆ ಗ್ರಾಮಾಂತರದ ವ್ಯವಸಾಯ ಚಕ್ರ ತನ್ನ ಹೊಸ ಉರುಳನ್ನು ಆರಂಭಿಸುತ್ತದೆ.