ಮೂಗೂರು ಒಂದು ಪ್ರಸಿದ್ಧವಾದ ಊರಾಗಿತ್ತೆಂಬುದಕ್ಕೆ ಅಲ್ಲಿರುವ ದೇವಾಲಯಗಳೇ ಸಾಕ್ಷಿ. ಇವುಗಳಲ್ಲೆಲ್ಲಾ ಅತ್ಯಂತ ಪ್ರಾಚೀನವಾದುದೆಂದರೆ ದೇಸೇಶ್ವರ ದೇವಾಲಯ. ಇದು ನಾಥಪಂದಕ್ಕೆ ಸೇರಿದ ಶಿವದೇವಾಲಯವಾಗಿರುವಂತೆ ಕಾಣುತ್ತದೆ. ಕ್ರಿ.ಶ. ೧೨೭೯ರ ಶಾಸನವೊಂದರಲ್ಲಿ “ಮೋಗೂರ… ಯ ನಾಡನಾಳುವ ಜಾಮಗವುಡನಮಗ ದಾಸಗುವಡನು ಅಳಗಯ ವದ್ರರಾಯ ರಾಳಚಕೊಂಡಯಮಗ ಪಾದಿಗುವುಡನು ಆಳುವಾಂಡನ ಅಯನ ಮಗ ಮಾರಗವುಂಡ ಕಾಳಿಯ ಕರಗುಡ್ಡನರಕ ಮಾದಗವುಡನು ಆಳುವಾಂಡನ ಅಯನ ಮಗ ಮಾರಗವುಂಡ ಕಾಳಿಯ ಕರಗುಡ್ಡನರಕ ಮಾದಗವುಡನ ಮಗ ತಿಬ್ಬಯ್ಯನೊಳಗಾದ ಸಮಸ್ತ ಪ್ರಜೆಗಳು ತಮ್ಮೊಳು ಒಡಂಬಟ್ಟು “ದೇಸಿನಾಥ ದೇವರಿಗೆ ದತ್ತಿ ಬಿಟ್ಟ ಉಲ್ಲೇಖದೊರೆಯುತ್ತದೆ. ಈ ದೇವಾಲಯದ ಪ್ರಕಾರದ ದಕ್ಷಿಣ ಗೋಡೆಯ ಮೇಲಿರುವ ಚಿತ್ರವೊಂದು ಈ ಗುಡಿಯನ್ನು ಕಟ್ಟಿಸಿದ ಪಾಳೆಯಗಾರನೆಂದು ಹೇಳುತ್ತಾರೆ. ಆದರೆ ಆತ ಇತ್ತೀಚಿನವನಾಗಿದ್ದು ಗುಡಿಯ ಪ್ರಕಾರವನ್ನೊ ಅಥವಾ ಮತ್ತಾವುದೋ ಪುನರುದ್ಧಾರದ ಕಾರ್ಯ ಕೈಗೊಂಡನಾಗಿರಬೇಕು. ದೇವಾಲಯ ಗಂಗರಿಗೂ ಪೂರ್ವದಲ್ಲಿ ನಿರ್ಮಿತವಾಗಿ ಕ್ರಮೇಣ ಬೆಳೆದು ವಿಸ್ತರಿಸಿಕೊಂಡಿದೆ. ಉದಾಹರಣೆಗೆ ಹದಿಮೂರನೆಯ ಶತಮಾನದ ಶಾಸನವೊಂದರಲ್ಲಿ “ರಕ್ತಾಕ್ಷಿ ಸಂವತ್ಸರದ ಕಾರ್ತಿಕು ಶುವಿಲು ಮೇಗೂರ ರೇಚಣ್ಣನವರ ಮಕ್ಕಳು ಹಂಪೆಯಣ್ಣನವರಿಗೆ ಉಡಿಸಿಯ ಮಾಡಿಯಾದಲ್ಲಿ ಅವರಿಗೆ ಆ ವ್ಯಾಧಿ ಸಮಾಧಾನವಾಗಿ ಆತನೂ ಪರಿಣಾಮವಾಗಿ ಸುಖದಲುಯಿರಬೇಕೆಂದು ಶ್ರೀದೇಸಿನಾಥ ದೇವರಿಗೆ ಆತನ ತಮ್ಮ ಶಿವನಪ್ಪನೂ ದೀಪ ಮಾಲೆಯ ಕಂಬವ ನಿಲಿಸಿಹೇನೆಂದು ಪ್ರಾರ್ಥಿಸಿಕೊಂಡ ಕಂಬವೂ ನಿಂದಿತ್ತು. ಈ ಕಂಭವೂ ರೇಚಣ್ಣ ಒಡೆಯರಧರ್ಮ” ಎಂಬ ಉಲ್ಲೇಖವಿದೆ. ಇದರಿಂದಾಗಿ ದೇಸಿನಾಥ ದೇವಾಲಯ ಹಲವಾರು ಕಾರಣಗಳಿಗಾಗಿ ಪ್ರಸಿದ್ಧ ಪಡೆದಂತೆ ಕಾಣುತ್ತದೆ.

ಶ್ರೀ ದೇಸೇಶ್ವರ ದೇವಾಲಯವು ಹೊಯ್ಸಳ ಕಲಾ ಮಾದರಿಯ ಪ್ರಕಾರ ಮತ್ತು ಗೋಪುರಗಳಿಂದಾವೃತವಾಗಿದೆ. ಈ ದೇವಾಲಯದ ಮುಂದಿನ ಗರುಡಗಂಬದ ಮೇಲೆ ನಾಮಂಗಲದ ಚನ್ನಕೇಶವ ದೇವಾಲಯದ ಮುಂದಿರುವಂತೆ ದೀಪಹಚ್ಚುವ ವ್ಯವಸ್ಥೆಯಿದೆ. ಇದನ್ನು ಹದಿನಾರನೆಯ ಶತಮಾನದಲ್ಲಿ ರೇಚಣ್ಣವೊಡೆಯ ಎಂಬುವನು ನಿಲ್ಲಿಸಿದ ಎಂಬುದನ್ನು ಈಗಾಗಲೇ ನೋಡಿದ್ದೇವೆ. ಮುಂದೆ ಹೋದರೆ ದೇವಾಲಯದ ಬೃಹದಾಕಾರದ ಗೋಪುರವಿದೆ. ಇದು ಪ್ರಾಯಃ ಹೊಯ್ಸಳರ ಕಾಲದಲ್ಲಿ ನಿರ್ಮಿತವಾದುದು. ಮಹಾದ್ವಾರವನ್ನು ದಾಟಿ ಒಳಗೆ ಹೋದರೆ ದೇಸೇಶ್ವರ ದೇವಾಲಯ. ಇದು ಮೂರು ಹಂತಗಳಲ್ಲಿ ವಿಸ್ತೃತಗೊಂಡಿದೆ. ಮೂಲದೇವಾಲಯ ದ್ರಾವಿಡಕಲಾ ಮಾದರಿಯದಾಗಿದ್ದು ಗಂಗರಿಗಿಂತ ಹಿಂದಿನದೆಂದು ಊಹಿಸಲಾಗಿದೆ. ಗರ್ಭಗುಡಿಯ ಒಂದು ಪಕ್ಕದಲ್ಲಿ ಮಹಾವಿಷ್ಣು ಮೂರ್ತಿಯಿದೆ. ಮತ್ತೊಂದು ಪಕ್ಕದಲ್ಲಿ ದೇಸೇಶ್ವರ ಮೂಲ ಮೂರ್ತಿ ಎಂದು ಹೇಳುವ ಒರಟು ರೀತಿಯ ಲಿಂಗವಿದೆ. ಅದೇ ಮೊದಲಿನ ಗುಡಿ. ಅನಂತರ ಅದನ್ನು ವಿಸ್ತರಿಸಲಾಗಿದೆ. ಈ ವಿಸ್ತರಣೆ ಗಂಗರ ಕಾಲದಲ್ಲಿ ಆಗಿರುವಂಥದು. ಈಗ ನಿರ್ಮಿತವಾಗಿರುವ ಗರ್ಭಗುಡಿಯಲ್ಲಿ ದೊಡ್ಡ ಆಕಾರದ ಲಿಂಗವಿದೆ. ಲಿಂಗದ ಎಡಪಕ್ಕದಲ್ಲಿ ತಿಬ್ಬಾದೇವಿ ಮತ್ತು ಆಕೆಯ ಸಹೋದರಿಯರೆಂದು ಹೇಳುವ ಏಳು ಜನ ಸ್ತ್ರೀಯರ ವಿಗ್ರಹಗಳಿವೆ. ಈ ದೇವಾಲಯದ ಪ್ರಕಾರದೊಳಗೆ ಹಿಂಭಾಗದಲ್ಲಿದ್ದ ಸುಂದರವಾದ ಭೈರವ ಮೂರ್ತಿಯನ್ನು ಕಳ್ಳರು ಸಾಗಿಸುತ್ತಿದ್ದು ಜನ ಕಂಡುದರಿಂದ ಬಿಟ್ಟು ಓಡಿದುದರಿಂದ ಅದನ್ನು ತಂದು ದೇಸೇಶ್ವರ ದೇವಾಲಯದಲ್ಲಿರಿಸಿದ್ದಾರೆ. ಇಲ್ಲಿನ ವಿಶೇಷವೆಂದರೆ ಕಂಬಗಳ ಮೇಲೆ ಹಸುವೊಂದು ಹಾಲು ಕರೆಯುತ್ತಿರುವ ಚಿತ್ರ ಇದರೊಂದಿಗೆ ಆಂಜನೇಯನ ಚಿತ್ರಗಳನ್ನು ಚಿತ್ರಗಳನ್ನು ಕೆತ್ತಲಾಗಿದೆ. ದೇವಾಲಯದ ಮುಂದೆ ಸಾಧಾರಣ ಎತ್ತರದ ಬಸವಣ್ಣನ ವಿಗ್ರಹವಿದೆ. ಪ್ರಕಾರದ ದಕ್ಷಿಣ ಭಾಗದ ಗೋಡೆಯ ಮೇಲೆ ಕತ್ತಿಯನ್ನು ಸೊಂಟದಲ್ಲಿ ಇಳಿಬಿಟ್ಟ ಕೈಮುಗಿದು ನಿಂತ ವಿಗ್ರಹವೊಂದಿದೆ. ಇದು ದೇವಾಲಯವನ್ನು ನಿರ್ಮಿಸಿದ ಪಾಳೆಗಾರನ ಚಿತ್ರ ಎಂದು ಹೇಳುತ್ತಾರೆ. ಇದು ಶಿವಗಂಗೆಯಲ್ಲಿ ಕೆತ್ತಿರುವ ಯಲಹಂಕನಾಡ ಪ್ರಭು ಕೆಂಪೇಗೌಡನ ವಿಗ್ರಹದಂತಿದೆ. ದೇವಾಲಯದ ಹಿಂದೆ ಇತ್ತೀಚೆಗೆ ಪಂಚಲಿಂಗಗಳನ್ನು ಸ್ಥಾಪಿಸಲಾಗಿದೆ. ಈ ಪಂಚಲಿಂಗಗಳ ಹಿಂದೆ ಒಂದು ಚಿಕ್ಕ ಗುಡಿಯಿದೆ. ಅದರಲ್ಲಿ ಭೈರವಮೂರ್ತಿಯನ್ನು ಇಡಲಾಗಿತ್ತು. ಕಟ್ಟಡ ನೋಡಿದರೆ ಇತ್ತೀಚಿನದಿದ್ದಂತೆ ಕಾಣುತ್ತದೆ. ಊರ ಬೇರೊಂದೆಡೆ ದೊಡ್ಡ ಭೈರವಾಲಯವಿದದಿತೆಂದೂ ಅದು ಯುದ್ಧವೊಂದರಲ್ಲಿ ನಾಸವಾದಾಗ ಅಲ್ಲಿದ್ದ ಮೂರ್ತಿಯನ್ನು ತಂದು ಇಲ್ಲಿರಿಸಲಾಯಿತೆಂದು ಹೇಳುತ್ತಾರೆ. ದೇವಾಲಯದ ಉತ್ತರ ಭಾಗದಲ್ಲಿ ಭದ್ರಕಾಳಿಯ ದೇವಾಲಯವಿದೆ. ಈಚೆಗೆ ಇದನ್ನು ಅಮ್ಮನವರ ದೇವಾಲಯವೆಂದು ಕರೆಯಲಾಗುತ್ತದೆ. ಈ ಎಲ್ಲಾ ಕಾರಣಗಳಿಂದ ದೇಸೇಶ್ವರ ದೇವಾಲಯವು ಅತ್ಯಂತ ಪ್ರಾಚೀನವಾದ ಶೈವದೇವಾಲಯವೆಂದು ಹೇಳಬಹುದು.

ಮೂಗೂರಿನ ದೇವಾಲಯಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದುದು ತಿಬ್ಬಾದೇವಿಯ ದೇವಾಲಯ. ಶಾಸನಗಳಲ್ಲಿ ದತ್ತಿಯ ಉಲೇಖಗಳಿಂದ ಹೇಳಬಹುದಾದರೆ ದೇಸೇಶ್ವರ ದೇವಾಲಯ ಒಂದು ಕಾಲಕ್ಕೆ ಬಾರಿ ಜನಪ್ರಿಯತೆ ಗಳಿಸಿತ್ತು. ಅದು ಕ್ರಮೇಣವಾಗಿ ತಿಬ್ಬಾದೇವಿಯತ್ತ ಒಲಿದಿದೆ. ತಿಬ್ಬಾದೇವಿಯ ದೇವಾಲಯದ ಹೊರಪ್ರಾಕಾರ ವಿಜಯನಗರದ ಮತ್ತು ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದುದೆಂಬುದುದರಲ್ಲಿ ಅನುಮಾನವಿಲ್ಲ. ಈ ದೇವಾಲಯದ ಗರ್ಭಗುಡಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ ಮೊದಲಿಗೆ ಚಿಕ್ಕಗುಡಿಯಾಗಿದ್ದು ಅನಂತರ ವಿಸ್ತಾರಗೊಂಡಂತೆ ಕಾಣುತ್ತದೆ. ಸುಮಾರು ಕ್ರಿ.ಶ. ೧೨೬೧ರಿದಲೂ ಈ ದೇವಾಲಯದ ಬಗ್ಗೆ ಶಾಸನೋಲ್ಲೇಖಗಳು ದೊರೆಯುತ್ತವೆಂಬುದನ್ನು ಹಿಂದೆಯೇ ಹೇಳಿದೆ. ಈ ದೇವಾಲಯ ಕಲಾದೃಷ್ಟಿಯಿಂದ ವಿಜಯನಗರ ಕಾಲದ ಕಲಾ ಮಾದರಿಗೆ ಸೇರುತ್ತದೆ. ಗರ್ಭಗುಡಿ ದಕ್ಷಿಣ ಭಾಗದಲ್ಲಿ ಒಂದು ಬೃಹತ್‌ ಪ್ರಮಾಣದ ಗಣಪತಿಯ ವಿಗ್ರಹವಿದೆ. ಅದರ ಹಿಂದೆ ಗೋಡೆಯ ಗೂಡುಗಳಲ್ಲಿ ತಿಬ್ಬಾದೇವಿಯ ಸಹೋದರಿಯರ ಮೂರ್ತಿಗಳಿವೆ. ದೇವಾಲಯದ ಒಳಾವರಣದಲ್ಲಾಗಲೀ ಹೊರಾವರಣದಲ್ಲಾಗಲೀ ಹೆಚ್ಚು ಕೆತ್ತನೆಯ ಕುಸುರಿ ಕೆಲಸಗಳಿಲ್ಲ. ತಿಬ್ಬಾದೇವಿಗೆ ಒಕ್ಕಲಿಗರೇ ಅತ್ಯಂತ ಹೆಚ್ಚಿನ ಸಂಖ್ಯೆಯ ಭಕ್ತರು. ಅಷ್ಟೇ ಅಲ್ಲ ಈಕೆ ಪ್ರಧಾನವಾಗಿ ಒಕ್ಕಲಿಗರ ದೇವತೆ ಎಂದೇ ಕರೆಯಿಸಿಕೊಳ್ಳುತ್ತಾಳೆ.

ಪ್ರಾಚೀನತೆಯ ದೃಷ್ಟಿಯಿಂದ ಇಲ್ಲಿನ ಜೈನ ಬಸದಿಯೊಂದು ಉಲ್ಲೇಖಾರ್ಹ. ಗಂಗರು ಜೈನಮತಾವಲಂಬಿಗಳು ಎಂಬ ವಾದ ಇತ್ತೀಚಿನವರೆಗೆ ಇದ್ದಿತು. ಆದರೆ ಗಂಗರು ಬರಿಯ ಜೈಮತಾವಲಂಬಿಗಳಲ್ಲ, ಕೆಲವು ಕಾಲ ಜಿನಧರ್ಮವನ್ನು ಪ್ರಧಾನವಾಗಿ ನಂಬಿದ್ದವರು. ಜಾತಿಯಲ್ಲಿ ಒಕ್ಕಲಿಗರು ಎಂಬುದು ಈಗ ತೀರ್ಮಾವಾಗಿರುವ ವಿಷಯ. ಹದಿಮೂರನೆಯ ಶತಮಾನದ ಶಾಸನವೊಂದರಲ್ಲಿ ಮೂಗೂರ ಸಮಸ್ತ ಗಾವುಂಡಗಳು. . ಬಸದಿಯ ಜೀರ್ಣೋದ್ಧಾರವಂ” ಮಾಡಿಸಿದ ವಿಷಯ ಉಕ್ತವಾಗಿದೆ. ಇದರಿಂದ ಈ ಬಸದಿ ಅತ್ಯಂತ ಪ್ರಾಚೀನ ಕಾಲದ್ದೆಂದೂ ಹದಿಮೂರನೆಯ ಶತಮಾನದ ಹೊತ್ತಿಗೆ ಶಿಥಿಲವಾಗಿತ್ತೆಂದು ಕಂಡುಬರುತ್ತದೆ. ಇದನ್ನು ಜೀರ್ಣೋದ್ಧಾರ ಮಾಡಿಸಿದವರೂ ಒಕ್ಕಲಿಗರೆ ಎಂಬುದು ಗಮನಾರ್ಹ. ಈಗ ಇದನ್ನು ಬಸ್ತಿ ಭೈರಪ್ಪ ಎಂದು ಕರೆಯಲಾಗುತ್ತದೆ. ಈ ಬಸ್ತಿ ಭೈರಪ್ಪ ತಿಬ್ಬಾದೇವಿಯ ಅಣ್ಣನಂತೆ ಆದುದರಿಂದ ಪ್ರತಿವರ್ಷ ಜಾತ್ರೆಯ ಸಮಯದಲ್ಲಿ ತಿಬ್ಬಾದೇವಿಯ ಗುಡಿಯಿಂದ ಇಲ್ಲಿಗೆ ಹೊಸಬಟ್ಟೆ ಸಮೇತ ಪೂಜಾಸಾಮಗ್ರಿಗಳು ಬರುತ್ತವೆ. ಬಸ್ತಿಯ ಜೊತೆ ಭೈರಪ್ಪ ಹೇಗೆ ಸೇರಿದನೊ ಹೇಳುವುದು ಕಷ್ಟಸಾಧ್ಯ. ಈ ಬಸದಿಯ ದಕ್ಷಿಣ ಪಕ್ಕದಲ್ಲಿ ದ್ರಾವಿಡಕಲಾ ಮಾದರಿಯ ದೇವಾಲಯವೊಂದಿದೆ. ಈಗ ಜಿನವಿಗ್ರಹಗಳೆಲ್ಲ ಅದರಲ್ಲಿವೆ. ಬಸದಿಯು ನಾಶವಾಗುವ ಸ್ಥಿತಿಯಲ್ಲಿದ್ದು ಅದರಲ್ಲಿ ಯಾವ ವಿಗ್ರಹಗಳೂ ಇಲ್ಲ. ಆದುದರಿಂದ ಈ ದೇವಾಲಯ ಭೈರವಾಲಯವಾಗಿದ್ದು ನಾಶವಾದ ಬಸದಿಯ ಜಿನವಿಗ್ರಹಗಳನ್ನು ಇಲ್ಲಿಟ್ಟಿರುವ ಸಾಧ್ಯತೆ ಕಂಡುಬರುತ್ತದೆ. ಬಸದಿ ಭೈರವಾಲಯ ಅಕ್ಕಪಕ್ಕದಲ್ಲಿದ್ದು ಕಡೆಗೆ ಬಸದಿಯ ವಿಗ್ರಹಗಳೂ ಭೈರವಾಲಯ ಸೇರಿದುದರಿಂದ ಜಿನರ ಬಾಯಲ್ಲಿ ಬಸ್ತಿ ಭೈರಪ್ಪ ಆಗಿರುವಂತೆ ಕಾಣುತ್ತದೆ.

ವಿಷ್ಣು ದೇವಾಲಯ ಈ ಊರಿನ ಮತ್ತೊಂದು ಪ್ರಾಚೀನ ದೇವಾಲಯ. ಇದು ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರಬಹುದಾದರೂ ಹೊಯ್ಸಳ ಕಲಾಮಾದರಿಯದಲ್ಲ. ವಿಜಯನಗರ ಕಾಲದ ದೇವಾಲಯದಂತೆ ಕಂಡರೂ ೧೨೭೯ರಷ್ಟು ಹಿಂದೆಯೇ ಶಾಸನವೊಂದರಲ್ಲಿ ಈ ದೇವಾಲಯಕ್ಕೆ “ಹಿರಿಯನಾಡ ಮಹಾಪ್ರಭು ಮೂಗೂರ ಅಳಗೆಯ ನಾಡನಾಳುವ ಬೊಮ್ಮಚಗವುಂಡನ ಮಗ ದಾಳಿಗವುಂಡ ಅಳಗೆಯ ವೆತ್ತರಾಯ ಕಾಳಚವುಂಡೆಯ ಮಗ ಹಳ್ಳಿಗವುಂಡ ಆಳುವಾಂಡೆ ನಲ್ಲರಾಯನ ಮಗ ಮಾರಗವುಂಡರಾಯ ಕೆಕೇಗುಡ್ಡನ ಕೇಕೇಮಾದಿಗವುಂಡನ ಮಗ ತಿಬಯ್ಯ ಕಾಳಿಗವುಂಡನ ಮಗ ಮಾರದೇವನು ತಿಬ್ಬಗವುಂಡನ ಮಗ ತಿಬಯನೊಳಗಾದ ಸಮಸ್ತ ಪ್ರಜೆಗಳು” ವಿಷ್ಣುದೇವರಿಗೆ ದತ್ತಿ ಬಿಟ್ಟ ಉಲ್ಲೇಖವಿದೆ. ಈ ದೇವಾಲಯದ ಮುಂಭಾಗದಲ್ಲಿ ಉತ್ತರ ಬದಿಗೆ ಆಂಜನೇಯನ ಗುಡಿಯಿದ್ದು ಅದರಲ್ಲಿ ಎತ್ತರವಾದ ಆಂಜನೇಯ ವಿಗ್ರಹವಿದೆ. ಕೆತ್ತನೆಯ ದೃಷ್ಟಿಯಿಂದ ನಾರಾಯಣ ಅಥವಾ ವಿಷ್ಣು ದೇವಾಲಯ ಮಹತ್ವದ್ದೆನಿಸುವುದಿಲ್ಲ. ಗರ್ಭಗುಡಿಯಲ್ಲಿ ಶಂಖ ಚಕ್ರಧಾರಿಯಾದ ವಿಷ್ಣುವಿನ ವಿಗ್ರಹವಿದೆ. ದೇವಾಲಯದ ಅಂಗಳದ ಉತ್ತರ ದಿಸೆಯಲ್ಲಿ ರಾಮಾನುಜ ವಿಗ್ರಹವಿದೆ. ವಿಷ್ಣುವಿನ ಸಹೋದರಿ ತಿಬ್ಬಾದೇವಿ ಎಂಬ ನಂಬಿಕೆಯೂ ಇಲ್ಲಿನ ಜನರಲ್ಲಿದೆ. ಆದರೆ ಬಸ್ತಿ ಭೈರವನಿಗೆ ಹೋಗುವಂತೆ ಹೊಸಬಟ್ಟೆಯ ಉಡುಗೊರೆ ಇಲ್ಲಿಗೆ ಬರುವ ಸಂಪ್ರದಾಯವಿಲ್ಲ.

ಮೂಗೂರಿನ ಸ್ಥಳಪುರಾಣ ಮತ್ತು ಕರಿಭಂಟನ ಕಾಳಗದ ಕೇಂದ್ರ ಶಕ್ತಿಯಾದ ರಾಕಾಸಮ್ಮ ಅಥವಾ ಉದ್ದಂಡಿಯ ಗುಡಿ ಈ ಊರಿನ ಗಾಣಿಗರ ಕೇರಿಯಲ್ಲಿದೆ. ದ್ರಾವಿಡ ಕಲಾ ಮಾದರಿಯ ದೇವಾಲಯವನ್ನು ಈಗ ಮುಂದೆ ವಿಸ್ತರಿಸಿ ಹಂಚು ಹಾಕಲಾಗಿದೆ. ಈ ಹಿಂದೆ ಚರ್ಚಿಸಿದಂತೆ ಮಲ್ಲಿಗನೂರಿನಲ್ಲಿ ಕರಿರಾಯನನ್ನು ಮೋಸದಿಂದ ಕೊಂದ ಉದ್ದಂಡಿಯು ಇಲ್ಲಿಗೆ ಬಂದು ಹೊಸಳ್ಳಿ ನೇರಿಲತೋಪಿನಲ್ಲಿ ಅಡಗಿದಳೆಂದು ಕಂಡಿದ್ದೇವೆ. ಆದರೆ ಮತ್ತೊಂದು ಹೇಳಿಕೆಯ ಪ್ರಕಾರ ಅವಳು ಗಾಣಿಗರ ಕರಿಯ ಮನೆಯೊಂದರಲ್ಲಿ ಅವಿತಳು. ಆಕೆಗೆ ರಕ್ಷಣೆ ಒದಗಿಸಿದುದರಿಂದ ಮುಂದೆ ಆಕೆಯ ಪೂಜೆಯ ಹಕ್ಕು ಗಾಣಿಗರಿಗೇ ದೊರೆಯಿತಂತೆ. ಆದುದರಿಂದ ಈ ದೇವಾಲಯದ ಪೂಜಾರಿಗಳು ಗಾಣಿಗರು. ರಾಕಾಸಮ್ಮನ ಭಕ್ತರು ಸಹ ಒಕ್ಕಲಿಗರೆ. ಗರ್ಭಗುಡಿಯಲ್ಲಿ ರಾಕಾಸಮ್ಮನ ಮೂಲವಿಗ್ರಹವಿದೆ. ಇದು ತಿಬ್ಬಾದೇವಿ ಅಥವಾ ಗ್ರಾಮ – ದೇವತೆಗಳ ವಿಗ್ರಹ ಮಾದರಿಯದು. ಈ ಮೂಲ ವಿಗ್ರಹದ ದಕ್ಷಿಣ ಭಾಗದಲ್ಲಿ ಕರಿಭಂಟನಿಗೂ ಉದ್ದಂಡಿಗೂ ನಡೆಯುತ್ತಿದ್ದ ಯುದ್ಧ ಅಥವಾ ಅವರಿಬ್ಬರ ಮಧ್ಯೆ ಪಂಚಾಯಿತಿ ಮಾಡಿದ ಏಳುಮಂದಿ ಗೌಡರುಗಳ ಸಂಕೇತವಾಗಿ ಏಳು ಗಡಿಗೆಗಳನ್ನಿಟ್ಟಿದ್ದಾರೆ. ಉತ್ತರದಲ್ಲಿ ಈ ಏಳು ಮಂದಿ ಗೌಡರು ತಮ್ಮ ಮಾಹಿತಿಗಾಗಿ ಪ್ರಾಣತೆತ್ತ ಸಂಕೇತವಾಗಿ ಏಳು ಕಲ್ಲುಗಳಿವೆ. ಕರಿಭಂಟನನ್ನು ಮೋಸದಿಂದ ಕೊಲ್ಲಲು ಬಾಣಂತಿಯ ವೇಷಧರಿಸಿದ ಉದ್ದಂಡಿ ತನ್ನ ಕತ್ತಿಯನ್ನೇ ಮಗುವಾಗಿ ಮಾಡಿಕೊಂಡಳು. ಅದರ ಸಂಕೇತವಾಗಿ ರಾಕಾಸಮ್ಮನ ಮೆರೆಯುವ ವಿಗ್ರಹ ಮಗುವನ್ನೆತ್ತಿಕೊಂಡಿರುವ ಭಂಗಿಯಲ್ಲಿದೆ. ಈಕೆ ತಿಬ್ಬಾದೇವಿಯ ತಂಗಿಯಾದುದರಿಂದ ಅಲ್ಲಿಗೆ ಬಂದ ಭಕ್ತರು ಇಲ್ಲಿಗೆ ಸಲ್ಲಿಸಿದ ಪೂಜೆ ಮತ್ತು ಕಾಣಿಕೆಗಳನ್ನು ಇಲ್ಲಿ ಸಲ್ಲಬೇಕು. ಇಲ್ಲವಾದರೆ ದೇವಿ ಮುನಿದು ಕೇಡುಂಟು ಮಾಡುತ್ತಾಳೆಂಬುದು ಇಲ್ಲಿನ ಜನರ ನಂಬಿಕೆ.

ರಾಕಾಸಮ್ಮ ತೊಣ್ಣೂರಿನಿಂದ ಇಲ್ಲಿಗೆ ಏಕೆ ಹೇಗೆ? ಬಂದಳೆಂಬ ಬಗ್ಗೆ ಈ ಹಿಂದೆಯೇ ಚರ್ಚಿಸಿದೆ. ಆದರೆ ಇದಕ್ಕೆಲ್ಲ ಚಾರಿತ್ರಿಕ ಆಧಾರಗಳು ದೊರೆಯುವುದಿಲ್ಲ. ಕ್ರಿ.ಶ. ೧೧೭೭ರ ಶಾಸನವೊಂದರಲ್ಲಿ “ತೊಣ್ಣೂರು” ಹೆಸರಿನ ಉಲ್ಲೇಖವಿದೆ. ಈ ಶಾಸನದ ವಿವರಗಳು ನಾಶವಾಗಿವೆ. ಪ್ರಾಯಃ ಉದ್ದಂಡಿಗೆ ಸಂಬಂಧಿಸಿದಂಥ ವಿಷಯಗಳು ಇದರಲ್ಲಿ ಸೂಕ್ತವಾಗಿದ್ದುವೆಂದು ಊಹಿಸಲವಕಾಶವಿದೆ.

ಮಾಗೂರಿನ ಮತ್ತೊಂದು ದೇವಾಲಯ ದುಬ್ಬಮ್ಮನದು. ಈಕೆಯೂ ತಿಬ್ಬಾದೇವಿಯ ಸೋದರಿ. ಯುದ್ಧದಲ್ಲಿ ಅವಳಿಗೆ ಸಹಾಯಮಾಡಲು ನರಸೀಪುರಕ್ಕೆ ಹೋಗುವ ರಸ್ತೆಯಲ್ಲಿ ದುಬ್ಬಮ್ಮನ ದೇವಾಲಯವಿದ್ದಿತು. ಈಗ ಅದು ಉಳಿದಿಲ್ಲ. ಅದರ ಅವಶೇಷಗಳು ಮಾತ್ರ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಈಗ ಅದು ಉಳಿದಿಲ್ಲ. ಅದರ ಅವಶೇಷಗಳು ಮಾತ್ರ ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಪ್ರಾಯಃ ಗರ್ಭಗುಡಿಯಲ್ಲಿದ್ದ ಉದ್ಭವಮೂರ್ತಿ ಎಂದು ಕರೆಯುವ ಒರಟು ಶಿಲಾವಿಗ್ರಹವನ್ನು ಜನರು ಪೂಜಿಸುತ್ತಾರೆ. ಸುಮಾರು ಹತ್ತನೆಯ ಶತಮಾನದ ಲಕ್ಷಣವುಳ್ಳ ಶಾಸನವೊಂದರಲ್ಲಿ “ಸ್ವಸ್ತಿಶ್ರೀ ಚಿಹ್ಗದ್ಗಂಡ ಮಾಕ್ಕಂ ಮಾಡಿಸಿದಳ್‌” ಎಂದಿವೆ. ಮಿಕ್ಕ ವಿವರಗಳು ನಾಶವಾಗಿವೆ. ಈ ಮಾಳಕ್ಕ ದುಬ್ಬಮ್ಮನ ಗುಡಿಯನ್ನು ಕಟ್ಟಿಸಿದವಳಿರಬೇಕು. ಪ್ರಾಯಃ ಶಾಸನ ಪೂರ್ಣಪಾಠ ದೊರೆತಿದ್ದರೆ ದುಬ್ಬಮ್ಮನ ಬಗೆಗೆ ವಿವರ ದೊರೆಯುತ್ತಿತ್ತೇನೋ. ಈ ದೇವತೆಯ ಭಕ್ತರು ಸಹ ಒಕ್ಕಲಿಗರೆ. ತಿಬ್ಬಾದೇವಿ ದರ್ಶನಕ್ಕೆ ಬಂದವರು ಇಲ್ಲಿಗೂ ಬಂದೇತೀರಬೇಕು.

ಮೂಗೂರಿನ ದೇವಾಲಯಗಳು ಮತ್ತು ದೇವತೆಗಳಿಗೆ ಸಂಬಂಧಿಸಿದಂತೆ ಹೂವಾಡಿಗರ ದೇವರು ಚೌಡಿ ಮತ್ತು ಹೆತ್ತವ್ವೆಯ ಕಲ್ಲು ಮುಖ್ಯವಾದವು. ಹೂವಾಡಿಗರ ಕೇರಿಯ ಪೂರ್ವದ ಹಳ್ಳದಲ್ಲಿ ಚೌಡಿಯ ದೇವಾಲಯವೆಂದು ಕರೆಯುವ ಪ್ರಾಯಃ ಪಾಳುಮನೆಯ ಅವಶೇಷಗಳಿವೆ. ಇದು ಕೋಟೆಯ ಅಗಳಿನಲ್ಲಿದೆ. ಎರಡು ಪಾಳುಗಳಲ್ಲಿ ಒರಟು ಶಿಲೆಯ ಶಿಲಾಮೂರ್ತಿಗಳಿವೆ. ಮತ್ತೊಂದು ಕಡೆ ಸ್ತ್ರೀಯರು ಯುದ್ಧ ಮಾಡುತ್ತಿರುವ ವೀರಗಲ್ಲುಗಳಿವೆ. ಅವುಗಳನ್ನು ಅವರು ಚೌಡಿ ಎಂದೇ ಪೂಜಿಸುತ್ತಾರೆ. ಈಕೆಯೂ ತಿಬ್ಬಾದೇವಿಯ ಸಹೋದರಿಯೆಂದು ಯುದ್ಧದಲ್ಲಿ ಸಹಾಯಕವಾಗಲು ಬಂದು ಇಲ್ಲಿ ನೆಲಸಿದಳೆಂದೂ ಹೇಳುತ್ತಾರೆ. ಮತ್ತೊಂದು ಕಥೆಯಂತೆ ಕರಿಭಂಟನನ್ನು ಕೊಂದ ಉದ್ದಂಡಿ ಮಲ್ಲಿಗನೂರಿನಿಂದ ಓಡಿ ಬಂದು ಹೂವಾಡಿಗರ ಕೇರಿಯ ಈ ಹಳ್ಳದಲ್ಲಿ ಅಡಗಿದ್ದಳೆಂಬುದನ್ನು ಹೇಳುತ್ತದೆ. ಮುಂದೆ ಆಕೆ ಇಲ್ಲಿಯೇ ಚೌಡಿಯಾಗಿ ನೆಲಸಿದಳಂತೆ.

ಹೆತ್ತವ್ವೆಕಲ್ಲು ಎಂಬುದು ಉದ್ದನೆಯ ಕಲ್ಲು. ಇದು ಅಲ್ಲಿ ಉದ್ಭವವಾಗಿ ಬೆಳೆಯುತ್ತಿದೆ. ಎಂಬುದು ಜನರ ನಂಬಿಕೆ. ಸ್ಥಳಗತೆಯಂತೆ ಇದು ಮೂಕಾಸುರನನ್ನು ತಿಬ್ಬಾದೇವಿಯು ಕೊಂದ ಜಾಗ. ಇದಕ್ಕೆ ಹೆತ್ತವ್ವೆ ಕಲ್ಲು ಎಂದು ಏಕೆ ಹೆಸರಿಡಲಾಯಿತೊ ತಿಳಿಯದು. ಜಾತ್ರೆ ಕಾಲದಲ್ಲಿ ಜನರು ಅದಕ್ಕೂ ಪೂಜೆ ಸಲ್ಲಿಸುತ್ತಾರೆ. ಇದು ಊರಿನ ಕರುವಗಲ್ಲಿರಬೇಕೆಂದು ಊಹಿಸಲು ಅವಕಾಶವಿದೆ. ಸಾಮಾನ್ಯವಾಗಿ ಊರಿನ ನಿರ್ಮಾಣವಾಗುವಾಗ ಇಂತಹದೊಂದು ಕಲ್ಲನ್ನು ಹಾಕುವುದು ಸಂಪ್ರದಾಯ. ಅನಂತರ ಕೆಲವು ಹಬ್ಬಗಳಲ್ಲಿ ಈ ಕಲ್ಲಿಗೆ ಎಡೆಹಾಕುತ್ತಾರೆ. ನಮ್ಮ ಊರಿನಲ್ಲಿ ನಾಗಮಂಗಲ ತಾಲೂಕು ಹನುಮನ ಹಳ್ಳಿಯಲ್ಲಿ ಕಾರುಹಬ್ಬದ ದಿನ ಈ ಕರುವಗಲ್ಲಿಗೆ ಕಕ್ಕೆಸೊಪ್ಪು, ಬಾಳೆನಾರಿನ ದಂಡೆಯನ್ನು ಹಾಕಿ ಎಡೆಹಾಕುತ್ತಾರೆ. ಮೂಗೂರಿನ ಹೆತ್ತವ್ವೆಕಲ್ಲು ಇಂಥದಿರಬಹುದು ಅಥವಾ ಮತ್ತಾವುದೋ ಚಾರಿತ್ರಿಕ ಘಟನೆಗೆ ಸಂಬಂಧಿಸಿದ ಕಲ್ಲಾಗಿರಬಹುದು.

ಈ ಮೇಲೆ ಹೇಳಿದ ದೇವಾಲಯಗಳಲ್ಲದೆ ವೀರಭದ್ರ ದೇವಾಲಯ, ಮಂಟೇಸ್ವಾಮಿ ದೇವಾಲಯ, ಹೀಗೆ ಇನ್ನೂ ಕೆಲವು ದೇವಾಲಯಗಳಿವೆಯಾದರೂ ಅವುಗಳಿಗೆ ಈಗ ಅಂತಹ ಮಹತ್ವವುಳಿದಿಲ್ಲ. ತಿಬ್ಬಾದೇವಿಯು ಮೈಸೂರು ಅರಸರ ಮನೆದೇವತೆಯಾದ ಮೇಲೆ ಈ ದೇವಾಲಯ ಮತ್ತು ಊರು ಹೆಸರುವಾಸಿಯಾಗಿದೆ. ಮೂಗೂರು ಹೂವಿಗೆ ಅಷ್ಟೇ ಸುಂದರಿಯರಾದ ಸ್ತ್ರೀಯರಿಗೂ ಹೆಸರುವಾಸಿಯಾದ ಊರು ಮೂಗೂರಿನ ಅನೇಕ ಸ್ತ್ರೀಯರು ಮೈಸೂರು ಅರಮನೆಯಲ್ಲಿ ರಾಣಿಯರು ಇಲ್ಲವೆ ಉಪಪತ್ನಿಯಾಗಿರುತ್ತಿದ್ದರು.

ಸುಮಾರು ೧೯ನೆಯ ಶತಮಾನದ ಶಾಸನವೊಂದರಲ್ಲಿ “ಆಳಿದ ಮಹಾಸ್ವಾಮಿಯವರ ಪಾದ ಚಾರಕಳಾದ ಮೈಸೂರಲ್ಲಿ ಇರುವ ಮೂಗೂರು ಅಮೃಸಾನಿ ತ್ರಿಪುರ ಸುಂದರಿ ಅಮ್ಮನವರ ಸನ್ನಿಧಿಗೆ ಒಪ್ಪಿಸಿದ ಸೇವಾರ್ಥ” ಎಂದು ಉಲ್ಲೇಖವಿದೆ. ತಿಬ್ಬಾದೇವಿಗೆ ತ್ರಿಪುರಸುಂದರಿ ಎಂದು ಹೆಸರು ಬಂದುದೂ ತೀರಾ ಇತ್ತೀಚೆಗೆ. ಶಾಸನಗಳಲ್ಲಿ ತಿಬ್ಬವ್ವೆ ತಿಬ್ಬವ್ವೆದೇವಿ ತಿಬ್ಬಾದೇವಿ ಎಂದು ಮಾತ್ರ ಪ್ರಯೋಗ ಕಂಡುಬರುತ್ತದೆ.

ಪ್ರತಿವರ್ಷ ತಿಬ್ಬಾದೇವಿಯ ಜಾತ್ರೆ ನಡೆಯುತ್ತದೆ. ತಿಬ್ಬಾದೇವಿ ಮೂಕಾಸುರನನ್ನು ಕೊಂದುದರ ನೆನಪಿಗೆ ಇದು ನಡೆಯುವುದೆಂದು ಜನರ ನಂಬಿಕೆ. ಈ ಮೂಕಾಸುರ ವಧೆಯ ಉತ್ಸವದಲ್ಲಿ ತಮ್ಮಡಿಯು ಭಾಗವಹಿಸುತ್ತಾನೆ. ಹಬ್ಬದ ಆರಂಭದ ದಿನ ತಿಬ್ಬಾದೇವಿಯ ಮೂಲಸ್ಥಾನವಾದ ಹೊಸಳ್ಳಿ ನೇರಿಲವನದಿಂದ ದೇವಿಯನ್ನು ಕಳಸರೂಪದಲ್ಲಿ ಮೂಗೂರಿಗೆ ತರುತ್ತಾರೆ. ಆ ದಿನ ಅಲ್ಲಿ ವಿಶೇಷ ಪೂಜೆ ಅಭಿಷೇಕಗಳು ನಡೆಯುತ್ತವೆ. ಆ ದಿನ ತಮ್ಮಡಿಯು ಕಂಕಣಬದ್ಧನಾಗುತ್ತಾನೆ. ಆ ದಿನದಿಂದ ಜಾತ್ರೆಯು ಆರಂಭವಾಗುತ್ತದೆ.

ಹಸ್ತಾನ ಅಥವಾ ಸ್ನಾನ ಒಪ್ಪಿಸುವುದು ಒಂಭತ್ತು ದಿನಗಳ ಕಾಲ ನಡೆಯುವ ಒಂದು ವಿಧಿ. ತಿಬ್ಬಾದೇವಿಯು ಮೂಕಾಸುರನವಧೆ ಮಾಡಲು ಒಂಭತ್ತು ದಿನ ವ್ರತ ಬದ್ಧಳಾಗಿರಬೇಕಾಗಿದ್ದಿತು. ಅದರ ಸಂಕೇತವಾಗಿ ಈಗಲೂ ಈ ವ್ರತ ನಡೆಯುತ್ತದೆ. ಹೊಸಳ್ಳಿಯಿಂದ ಕಂಕಣಬದ್ಧನಾಗಿ ಕಳಸರೂಪದಲ್ಲಿ ಮೂಗೂರಿಗೆ ತಿಬ್ಬಾದೇವಿಯನ್ನು ಹೊತ್ತು ತಂದ ತಮ್ಮಡಿ ಅಂದಿನಿಂದ ವ್ರತ ಬದ್ಧನಾಗುತ್ತಾನೆ. ಪ್ರತಿದಿನ ಮಧ್ಯರಾತ್ರಿಯಲ್ಲಿ ಆತ ಕೆರೆಗೆ ಹೋಗಿ ಸ್ಥಾನ ಮಾಡಿ ಬರುತ್ತಾನೆ. ತಮ್ಮಡಿಯು ಸ್ನಾನಕ್ಕೆ ಹೋಗುವಾಗ ಹಲವರು ಅವನೊಂದಿಗೆ ಹೋಗುತ್ತಾರೆ. ಈ ಒಂಭತ್ತು ದಿನಗಳ ಕಾಲವೂ ತಮ್ಮಡಿಯ ದೇವಾಲಯದಲ್ಲಿ ಉಪವಾಸನಿರತನಾಗಿರುತ್ತಾನೆ. ಈ ಸಮಯದಲ್ಲಿ ಹೆಬ್ಬರೆಯವನು, ಜಾಗಟೆಯವನು, ದೀವಟಿಗೆಯವನು ಹೀಗೆ ಜಾತ್ಯಾತೀವಾಗಿ ದೇವಾಲಯ ಪ್ರವೇಶಿಸುವ ಅವಕಾಶವಿದೆ. ಇವರೆಲ್ಲರೂ ತಮ್ಮಡಿಯಿಂದ ತಮ್ಮ ಮನೆಯ ದೀಪ ಹತ್ತಿಸಿಕೊಳ್ಳುವ ಸಂಪ್ರದಾಯವಿದೆ. ಹೀಗೆ ಹತ್ತಿಸಿಕೊಂಡ ದೀಪ ಆರಬಾರದೆಂಬ ನಂಬಿಕೆಯಿದೆ. ದೀವಟಿಗೆಯವನ ದೀವಟಿಗೆಯಿಂದ ತಮ್ಮಡಿ ಭಕ್ತರು ತಂದ ದೀಪಗಳನ್ನು ಹತ್ತಿಸಿಕೊಡುತ್ತಾನೆ. ಅದು ಮತ್ತು ಮುಂದಿನ ವರ್ಷದವರೆಗೆ ಆರದಂತೆ ಕೆಲವರು ನೋಡಿಕೊಳ್ಳುತ್ತಾರೆ. ಹಸ್ತಾನ ಎಂದರೆ ಹಸ್ತಸ್ನಾನ ಇರಬಹುದೆಂದು ಕಾಣುತ್ತದೆ. ರಾಕ್ಷಸನನ್ನು ಕೊಂದ ತಿಬ್ಬಾದೇವಿಯು ಹೊಸಹಳ್ಳಿ ಕೆರೆಯಲ್ಲಿ ರಕ್ತಸಿಕ್ತ ಕೈತೊಳೆದಳು ಆದುದರಿಂದ ಆ ಕೆರೆಯ ನೀರು ಕೆಂಪಾಗಿದೆ ಎಂದು ಜನರ ನಂಬಿಕೆ. ಈ ನೀರು ಕುಡಿದರೆ ಎಂತಹ ಕಾಯಿಲೆಯಿದ್ದರೂ ಹೋಗುತ್ತದೆ ಎಂದು ಹೇಳುತ್ತಾರೆ. ದೇವಿಯ ಹಸ್ತತೊಳೆದ ಕಾರಣ ಹಸ್ತಸ್ನಾನ ಹಸ್ತಾನ ಆಗಿರಬಹುದು. ಇದರ ಮತ್ತೊಂದು ಪಾಠದಂತೆ ಮಲ್ಲಿಗನೂರಿನಲ್ಲಿ ಕರಿರಾಯನನ್ನು ಕೊಂದ ಉದ್ದಂಡಿಯು ಹೊಸಹಳಳಿ ಕೆರೆಯಲ್ಲಿ ತನ್ನ ರಕ್ತಸಿಕ್ತವಾದ ಹಸ್ತಗಳನ್ನು ತೊಳೆದುದರಿಂದ ಕೆರೆಯ ನೀರು ಕೆಂಪಾಯಿತೆಂದು ಹೇಳುತ್ತಾರೆ. ಒಟ್ಟಿನಲ್ಲಿ ಹಸ್ತಕ್ಕೂ ಸ್ನಾನಕ್ಕೂ ಸಂಬಂಧಿಸಿದಂತೆ ಈ ಹಸ್ತಾನ ಎಂಬ ಕ್ರಿಯೆ ನಡೆಯುತ್ತದೆ ಎಂದು ಹೇಳಬಹುದು.

ಒಂಭತ್ತು ದಿನಗಳ ನಿಷ್ಠೆ ಮತ್ತು ತಪಸ್ಸಿನ ಶಕ್ತಿಯಿಂದ ಹತ್ತನೆಯ ದಿನ ತಿಬ್ಬಾದೇವಿ ಮೂಕಾಸುರನನ್ನು ಕೊಂದಳಷ್ಟೆ. ಒಂಬತ್ತು ದಿನ ನಿಷ್ಟೆಯಿಂದ ವ್ರತ ಧರಿಸಿದ ತಮ್ಮಡಿಯು ಹತ್ತನೆಯ ದಿನ ಬೆಳಗ್ಗೆ ಕೈಯಲ್ಲಿ ದೀವಿಗೆ ಹಿಡಿದು ಹೊರಡುತ್ತಾನೆ. ತಿಬ್ಬಾದೇವಿಯ ಉತ್ಸವವೂ ಹೊರಡುತ್ತದೆ. ಈ ಉತ್ಸವ ದೇವಾಲಯದಿಂದ ಹೆತ್ತವ್ವೆ ಕಲ್ಲಿನ ಬಳಿಗೆ ಬರುತ್ತದೆ. ಇದೇ ಜಾಗದಲ್ಲಿ ತಿಬ್ಬಾದೇವಿ ಮೂಕಾಸುರನನ್ನು ಕೊಂದುದು. ಅಲ್ಲಿ ಕೊಂಡ ಹಾಕಿರುತ್ತಾರೆ. ಬೆಂಕಿ ಧಗಧಗನೆ ಉರಿಯುತ್ತದೆ. ತಮ್ಮಡಿಯ ಹೆತ್ತವ್ವೆ ಕಲ್ಲಿಗೆ ಪೂಜೆ ಸಲ್ಲಿಸುತ್ತಾನೆ. ಮೂಕಾಸುರ ವಧೆಯ ಸಂಕೇತವಾಗಿ ಉರಿಯುವ ಬೆಂಕಿಯನ್ನು ಆರಿಸಲಾಗುವುದು. ಇಲ್ಲಿಂದ ದುಬ್ಬಮ್ಮ, ರಾಕಾಸಮ್ಮ ದೇವಾಲಯಗಳಿಗೂ ಹೋಗಿ ಪೂಜೆ ಸಲ್ಲಿಸುತ್ತಾರೆ. ಕಳೆದ ಒಂಭತ್ತು ದಿನಗಳಿಂದ ಮೂಕನಂತೆ ವ್ರತಧಾರಿಯಾಗಿದ್ದ ತಮ್ಮಡಿಯು ಹತ್ತನೆಯ ದಿನ ಮಾತನಾಡುತ್ತಾನೆ. ಆ ದಿನ ಮೂಕಾಸುರನನ್ನು ಕೊಂದ ಸಂತೋಷಾರ್ಥವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಈ ಪೂಜೆಯ ಮಹಾ ಮಂಗಳಾರತಿಯಾದ ನಂತರ ತಮ್ಮಡಿಯು ತಿಬ್ಬಾದೇವಿ ದೇವಾಲಯದ ದಕ್ಷಿಣದ ಬಾಗಿಲನ್ನು ತೆಗೆಯುತ್ತಾನೆ. ಅದು ತಿಬ್ಬಾದೇವಿಯ ಉತ್ಸವಮೂರ್ತಿ ಇರುವ ಸ್ಥಳ. ಅದನ್ನು ವರ್ಷಕ್ಕೊಮ್ಮೆ ಜಾತ್ರೆಯ ದಿನಗಳಲ್ಲಿ ತೆಗೆದು ಸಮಾರಂಭಗಳೆಲ್ಲ ಮುಗಿದ ಮೇಲೆ ಮತ್ತೆ ಅದನ್ನು ತಮ್ಮಡಿ ಮುಚ್ಚಿ ಬಿಡುತ್ತಾನೆ. ಈ ರಾತ್ರಿ ತಿಬ್ಬಾದೇವಿಯ ಅಲಂಕೃತ ಉತ್ಸವಮೂರ್ತಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಬರುತ್ತದೆ. ಉತ್ಸವ ಬಸ್ತಿ ಭೈರಪ್ಪನ ಗುಡಿಯ ಹತ್ತಿ ಬಂದಾಗ ದೇವಿ ಅಲ್ಲಿ ನಿಂತು ತನ್ನ ಅಣ್ಣನಿಗೆ ಹೂವು ಸಮೇತ ವಸ್ತ್ರವನ್ನು ಕಳಿಸುತ್ತಾಳೆ. ಇಲ್ಲಿನ ಒಂದು ವಿಶೇಷವೆಂದರೆ ದೇವಾಲಯದಿಂದ ಉತ್ಸವಮೂರ್ತಿ ಹೊರಟಾಗಲೆಲ್ಲಾ ಅಪ್ರದಕ್ಷಿಣೆ ಬಂದು ಮತ್ತೆ ಪ್ರದಕ್ಷಿಣೆ ಬರುವುದು. ಇದು ಮುಸಲ್ಮಾನ ಪಾಳೆಗಾರನೊಬ್ಬನ ಭಕ್ತಿಯ ಸಂಕೇತವೆಂದು ಹಿಂದೆಯೇ ವಿವರಿಸಿದೆ.

ತಿಬ್ಬಾದೇವಿಯ ಜಾತ್ರೆಯಲ್ಲಿ ಬಂಡಿಹಬ್ಬ ಅಥವ ಉತ್ಸವ ಒಂದು ವಿಶೇಷ ಆಚರಣೆ ಒಕ್ಕಲಿಗರಲ್ಲಿ ಒಂದು ಗುಂಪು ಮಾತ್ರ ಈಗ ಬಂಡಿಹಬ್ಬವನ್ನು ಆಚರಿಸುತ್ತಾರೆ. ಯಲಹಂಕ ನಾಡ ಪ್ರಭುಗಳನ್ನು ಅನೇಕ ಶಾಸನಗಳು ಬಂಡಿ ಕುಲತಿಲಕರೆಂದು ಕರೆದಿವೆ. ಈ ಕಾರಣದಿಂದಾಗಿ ಇಲ್ಲಿನ ಬಂಡಿ ಉತ್ಸವಕ್ಕೆ ಒಂದು ಮಹತ್ವವಿದೆ. ಮೂಕಾಸುರ ವಧೆಯ ಉತ್ಸವವಾದ ನಾಲ್ಕನೆಯ ದಿನ ಇದು ನಡೆಯುತ್ತದೆ. ಇದು ಪ್ರಾಯಃ ಮೂಕಾಸುರನ ಹೆಣಸಾಗಿಸಿದ ಸಂಕೇತ ವಿರುವಂತೆ ಕಾಣುತ್ತದೆ. ಏಕೆಂದರೆ ತಿಬ್ಬಾದೇವಿಯ ದೇವಾಲಯದ ಉತ್ತರ ಪಾರ್ಶ್ವದಲ್ಲಿರುವ ರಸ್ತಯಲ್ಲಿ ಪಶ್ಚಿಮಕ್ಕೆ ನಡೆದರೆ ನಾರಾಯಣ ದೇವಾಲಯದ ಹತ್ತಿರ ಪೂರ್ವಕ್ಕೆ ಬಾಗಿಲುಳ್ಳ ಮಂಟಪವೊಂದಿದೆ. ಇದೇ ಬಂಡಿ ಅಥವಾ ಗುಡಿಯ ಚಾವಡಿ ಮೂಕಾಸುರನ ಹೆಣವನ್ನು ಈ ಜಾಗದಲ್ಲಿ ಇಡಲಾಗಿತ್ತೆಂದೂ ತಿಬ್ಬಾದೇವಿಯ ನೇತೃತ್ವದಲ್ಲಿ ಅದನ್ನು ಇಲ್ಲಿಂದ ಒಯ್ಯಲಾಯಿತೆಂದೂ ನಂಬಿಕೆ. ಅದರ ಸಂಕೇತವಾಗಿ ಈ ಬಂಡಿ ಉತ್ಸವ ನಡೆಯುತ್ತದೆ.

ನಿಗದಿಯಾದ ದಿನ ಅಲಂಕಾರ ಮಾಡಿದ ಬಂಡಿಯೊಂದು ತಿಬ್ಬಾದೇವಿಯ ದೇವಾಲಯದ ಹತ್ತಿರ ಬರುತ್ತದೆ. ಅದಕ್ಕೆ ಸುಣ್ಣ ಮತ್ತು ಕೆಮ್ಮಣ್ಣು ಪಟ್ಟಿಗಳನ್ನು ಬಳಿದು ಮಾವಿನ ಸೊಪ್ಪು , ತೆಂಗಿನ ಗರಿ ಮತ್ತು ಕಬ್ಬಿನಜಲ್ಲೆಗಳಿಂದ ಅಲಂಕಾರ ಮಾಡಿರುತ್ತಾರೆ. ದೇವಾಲಯದ ಮುಂದೆ ಈ ಬಂಡಿಗೆ ಪೂಜೆ ಸಲ್ಲುತ್ತದೆ. ಮಹಾಮಂಗಳಾರತಿಯ ನಂತರ ತಿಬ್ಬಾದೇವಿ ಸಣ್ಣ ರಥದಲ್ಲಿ ಕುಳಿತು ಬಂಡಿಚಾವಡಿಗೆ ಬರುತ್ತಾಳೆ. ಆಕೆಯ ಹಿಂದೆಯೇ ಅಲಂಕೃತ ಬಂಡಿಯು ಬರುತ್ತದೆ. ಅಲ್ಲಿ ಮತ್ತೆ ಬಂಡಿಗೆ ಪೂಜೆಯಾಗುತ್ತದೆ. ನಗಾರಿ, ತಮಟೆ, ಹೆಬ್ಬರೆ ಕೊಂಬು ಕಹಳೆಗಳು ಭೋರಿಡುತ್ತವೆ. ಪೂಜೆಯ ನಂತರ ತಯಾರಾಗಿ ನಿಂತ ಬಂಡಿಯ ಮೇಲೆ ತೀರ್ಥ ತಳಿಯುತ್ತಾರೆ. ಆನಂತರ ಬಂಡಿಯು ಪೂರ್ವಾಭಿಮುಖವಾಗಿ ರಭಸದಿಂದ ಓಡುತ್ತದೆ. ಕಿಕ್ಕಿರಿದು ನೆರೆದ ಜನ ಉಘೇ ಉಘೇ ಎಂದು ಜಯಕಾರ ಮಾಡುತ್ತಾರೆ. ಈ ಬಂಡಿಯ ಓಡಾಟ ಸಂಜೆಯವರೆಗೆ ನಡೆಯುತ್ತಲೇ ಇರುತ್ತದೆ. ಕುತೂಹಲಿಗಳು, ಸಾಹಸಿಗರು ತಮ್ಮ ತಮ್ಮ ಗಾಡಿಗಳನ್ನು ತಂದು ಇಲ್ಲಿ ಓಡಿಸುತ್ತಾರೆ. ಬಂಡಿ ಉತ್ಸವದ ರಾತ್ರಿ ಕಳಸದ ಸ್ತ್ರೀಯ ಪೂಜೆ ನಡೆಯುತ್ತದೆ. ವಂಶಾಪಾರಂಪರ್ಯವಾಗಿ ಪರಿಶುದ್ಧ ಮನೆತನದ ಹೆಣ್ಣೊಬ್ಬಳು ತಿಬ್ಬಾದೇವಿಯ ಕಳಸವನ್ನು ಈ ಎಲ್ಲಾ ದಿನಗಳಲ್ಲಿಯೂ ಹೋರುತ್ತಾಳೆ. ಜನರ ಮತ್ತು ಭಕ್ತರ ದೃಷ್ಟಿಯಲ್ಲಿ ಅವಳು ಸಾಕ್ಷಾತ್ ತಿಬ್ಬಾದೇವಿಯೆ ಎಂದು ನಂಬಿಗೆ. ಆದುದರಿಂದ ಆಕೆಯನ್ನು ಪೂಜಿಸಿ ಭಕ್ತಿಯನ್ನು ಅರ್ಪಿಸುತ್ತಾರೆ, ಅದೇ ದಿನ ರಾಕಸಮ್ಮನ ದೇವಾಲಯದಲ್ಲಿಯೂ ಪೂಜೆ ನಡೆಯುತ್ತದೆ. ಏಳು ಜನ ಗೌಡರುಗಳ ಸಂಕೇತವಾಗಿರುವ ಏಳು ಗಡಿಗೆಗಳಲ್ಲಿ ಗಾಣಿಗರು ನೂರೊಂದು ಬಾರಿ ನೀರು ತಂದು ದೇವಿಗೆ ಅಭಿಷೇಕ ಮಾಡಿಸುತ್ತಾರೆ. ಇದಕ್ಕೆ ಎರಡು ಸಂಕೇತವಿದ್ದಂತೆ ಕಾಣುತ್ತದೆ. ಒಂದು ಮೂಕಾಸುರನ ರಕ್ತ ನೂರೊಂದು ಗಡಿಗೆ ನೀರಿಗೂ ಹೋಗದು ಎಂದು. ಮತ್ತೊಂದು ಅಣ್ಣಂದಿರಂತಹ ಏಳು ಮಂದಿ ಗೌಡರ ಮಾತು ಮೀರಿದ ಪಾಪವು ನೂರೊಂದು ಗಡಿಗೆ ನೀರಿನಿಂದಲೂ ಹೋಗದು ಎಂದು.

ತಮ್ಮಡಿಯು ಕಂಕಣಬದ್ಧನಾದ ಹದಿನಾಲ್ಕನೆಯ ದಿನ ರಥೋತ್ಸವ ನಡೆಯುತ್ತದೆ. ಬೆಂಗಳೂರು, ಹಾಸನ ತುಮಕೂರು ಮತ್ತು ಮಂಡ್ಯ ಜಿಲ್ಲೆಗಳಿಂದ ತಿಬ್ಬಾದೇವಿಯ ಭಕ್ತರಾದ ಒಕ್ಕಲಿಗರು ಸಾವಿರ ಸಂಖ್ಯೆಯಲ್ಲಿ ಬಂದು ಸೇರುತ್ತಾರೆ. ಬಲಿ ದೀಕ್ಷೆಯನಂತರ ದೇವಿಯನ್ನು ರಥಾರೋಹಣ ಮಾಡಿಸಲಾಗುವುದು. ಅನಂತರ ರಥವು ಮುಖ್ಯಬೀದಿಯಲ್ಲಿ ಹರಿಯುತ್ತದೆ. ಭಕ್ತರು ದೇವಿಗೆ ಹಣ್ಣುಧವನ ಎಸೆದು ತಮ್ಮ ಭಕ್ತಿಯನ್ನು ಸೂಚಿಸುತ್ತಾರೆ.

ಪ್ರಮುಖವಾದ ಈ ಸಮಾರಂಭಗಳಾದ ಮೇಲೆ ಅನೇಕ ಉತ್ಸವಗಳು ನಡೆಯುತ್ತವೆ. ತಿಬ್ಬಾದೇವಿಯು ಮೂಕಾಸುರನನ್ನು ಕೊಂದ ಸಂತೋರ್ಷಾಥವಾಗಿ ತನ್ನ ಸಹೋದರಿಯರೊಂದಿಗೆ ಜಲವಿಹಾರ ಮಾಡಿದುದರ ಸಂಕೇತವಾಗಿ ತಪ್ಪೋತ್ಸವವು ನಡೆಯುತ್ತದೆ. ಆದಿಶಕ್ತಿಯಾದ ಆಕೆ ಏರಿದ ವಿವಿಧ ವಾಹನಗಳ ಸಂಕೇತವಾಗಿ ಆನೆ, ಕುದುರೆ, ಹುಲಿ, ಪಲ್ಲಕ್ಕಿ ಮುಂತಾದ ಉತ್ಸವಗಳು ನಡೆಯುತ್ತವೆ. ಹೂವಿಗೆ ಪ್ರಸಿದ್ದವಾದ ಮೂಗೂರಿನಲ್ಲಿ ಹೂವಿನ ಪಲ್ಲಕ್ಕಿಯದೇ ಒಂದು ವೈಭವ . ಅನೇಕ ಭಕ್ತರು ಈ ದೇವತೆಗೆ ವಿವಿಧ ವಾಹನಗಳನ್ನು ಮಾಡಿಸಿ ಕೊಟ್ಟಿದ್ದಾರೆ. ಅವೆಲ್ಲವುಗಳ ಮೇಲೆ ದೇವಿಯ ಉತ್ಸವ ಮೂರ್ತಿಯನ್ನು ಕೂರಿಸಿಕೊಂಡು ಮೆರೆಸುತ್ತಾರೆ.

ಚಿಗುರು ಕಡಿಯುವುದು ತಿಬ್ಬಾದೇವಿಯ ಶಕ್ತಿ ಪ್ರದರ್ಶನ ಸಂಕೇತ ಎಂದು ಭಕ್ತರ ನಂಬಿಕೆ. ಈ ಹಿಂದೆಯೇ ಹೇಳಿದ ಮುಸಲ್ಮಾನನ ಕುದುರೆಯ ಗೂಟಗಳು ಚಿಗುರಿದ ಪ್ರಸಂಗವನ್ನಿಲ್ಲಿ ನೆನೆಯಬಹುದು. ತಿಬ್ಬಾದೇವಿ ಮೂಕಾಸುರನಿಗೆ ಒಂದು ಏಟು ಹಾಕಿದಾಗ ನೆಲದ ಮೇಲೆ ಬೀಳುವ ತೊಟ್ಟು ರಕ್ತದಿಂದ ಆ ರಾಕ್ಷಸನಷ್ಟು ಶಕ್ತಿಯುಳ್ಳ ಸಾವಿರಾರು ಮಂದಿ ಚಿಗುರೊಡಿಯುತ್ತಿದ್ದರಷ್ಟೆ. ಇದು ಅದರ ಸಂಕೇತವಿರಬಹುದೇ? ಯೋಚಿಸಬೇಕು . ಆದರೆ ಈಗಲಂತೂ ಅದು ದೇವಿಯ ಶಕ್ತಿದ್ಯೋತಕವಾಗಿಯೇ ನಡೆಯುತ್ತದೆ.

ತಿಬ್ಬಾದೇವಿ ಮತ್ತು ಆಕೆಯ ಸಹೋದರಿಯರು ಮೊದಲು ಬಂದು ನೆಲಸಿದ್ದು ಹೊಸ ಹಳ್ಳಿಯ ಕೆರೆಯ ಪಕ್ಕದ ನೇರಿಳೆವನದ ಒಂದು ಬೃಹತ್ ವೃಕ್ಷದಲ್ಲಿ. ಅವರು ಇಂದಿಗೂ ಅಲ್ಲಿ ಶಕ್ತಿರೂಪಿಯಾಗಿದ್ದಾರೆಂದು ಜನ ನಂಬುತ್ತಾರೆ. ಆದುದರಿಂದಲೇ ರಾತ್ರಿ ಸವರಿದ ನೇರಿಳೆಯ ರೆಂಬೆ ಬೆಳಗ್ಗೆ ತಿಬ್ಬಾದೇವಿಯ ಉತ್ಸವ ಅಲ್ಲಿಗೆ ಹೋಗುವ ಹೊತ್ತಿಗೆ ಬೆಸಸಂಖ್ಯೆ ಇಲ್ಲವೆ ಸಮಸಂಖ್ಯೆಯಲ್ಲಿ ಚಿಗುರೊಡೆದಿರುತ್ತದೆ ಎಂಬುದು ಜನರ ನಂಬಿಕೆ. ಬೆಸಸಂಖ್ಯೆಯಲ್ಲಿ ಆಗಾಗ ಏಳು ಎಲೆಗಳು ಆ ಏಳು ಸಹೋದರಿಯರ ಸಂಕೇತವಾಗಿ ಒಡೆಯುವುದೂ ಉಂಟು.

ಮರ ಸವರುವ ಬಸಪ್ಪ ಚಿಗುರು ಕಡಿಯುವ ಹಿಂದಿನ ದಿನ ಉಪವಾಸವಿದ್ದು ಸ್ನಾನಮಾಡಿ ಮಧ್ಯರಾತ್ರಿಯಲ್ಲಿ ಹುಟ್ಟಿನ ನಿರ್ವಾಣ (ದಿಗಂಬರನಾಗಿ) ಹೊಸಹಳ್ಳಿ ನೇರಿಲ ತೋಪಿಗೆ ಅವನು ಹೋಗುತ್ತಾನೆ. ಅಲ್ಲಿ ದೇವಿಯವರಿಗೆ ಪೂಜೆ ಸಲ್ಲಿಸಿ ಮರ ಹತ್ತಿ ಯಾವುದೋ ಒಂದು ರೆಂಬೆಯನ್ನು ಒಂದು ಎಲೆಯೂ ಇಲ್ಲದಂತೆ ಸವರಿ ಗುರುತಿಗಾಗಿ ಅರಿಶಿನ ಬಟ್ಟೆಕಟ್ಟಿ ಬರುತ್ತಾನೆ. ಬಸಪ್ಪ ಹೋಗುವಾಗ ಯಾರಾದರೂ ನೋಡಿದವರಾಗಲಿ. ಕಡೆಗೆ ಹಕ್ಕಿ ಪಕ್ಷಿ ಮತ್ತುಪ್ರಾಣಿಗಳು ಸದ್ದು ಮಾಡಿದವರಾಗಲಿ ಅಂತಹವುಗಳಿಗೆ ಕೇಡು ತಪ್ಪದೆಂದು ಜನ ನಂಬುತ್ತಾರೆ.

ಮೂರನೆಯ ದಿನ ತಿಬ್ಬಾದೇವಿಯ ಉತ್ಸವ ಹೊಸಹಳ್ಳಿ ತೋಪಿಗೆ ಹೊರಡುತ್ತದೆ. ಸಾವಿರಾರು ಜನ ಭಕ್ತರು ದೇವಿಯನ್ನು ಹಿಂಬಾಲಿಸುತ್ತಾರೆ. ಅಲ್ಲಿ ಮತ್ತೆ ಮೂಲ ದೇವತೆಗಳಿಗೆ ಪೂಜೆ ಸಲ್ಲುತ್ತದೆ. ಅನಂತರ ಮರ ಸವರುವ ಬಸಪ್ಪ ಮತ್ತು ತಮ್ಮಡಿ ನೇರಿಳೆಮರ ಹತ್ತುತ್ತಾರೆ. ಅವರು ಹಾಗೆ ಹತ್ತುವ ಮುನ್ನ ಜವಣಿಯ ಸದ್ದು ಮಾಡಬೇಕು. ಆ ಸದ್ದು ಕೇಳಿದ ಕೂಡಲೇ ಬಸಪ್ಪ ರಾತ್ರಿ ಸವರಿದ್ದ ಕಡ್ಡಿಯಲ್ಲಿ ಎಲೆಯೊಡೆಯುತ್ತದೆ. ಆ ಚಿಗುರನ್ನು ತೆಂಗಿನ ಹೊಂಬಾಳೆಯಲ್ಲಿಟ್ಟು ಕೆಳಗಿಳಿಯುತ್ತಾರೆ. ಭಕ್ತರು ಅದರ ದರ್ಶನ ಮಾಡುತ್ತಾರೆ. ಅದನ್ನು ದರ್ಶನ ಮಾಡಿದ ಬಂಜೆಯವರಿಗೆ ಮಕ್ಕಳಾಗುವುದೆಂಬ ನಂಬಿಕೆ ಉಂಟು. ಅನಂತರ ಆ ಚಿಗುರು ರಾಜಸ್ಥಾನಕ್ಕೆ ಹೋಗುತ್ತದೆ. ಅಂದು ರಾತ್ರಿ ಹೊಸಹಳ್ಳಿ ಕೆರೆಯಲ್ಲಿ ಏಳು ಜನ ಸಹೋದರಿಯರ ಜಲಕ್ರೀಡೆ ನಡೆಯುತ್ತದೆ. ಮುಂದೆ ಆಳು ಪಲ್ಲಕ್ಕಿ, ವೈಮಾಳಿಗೆ ಉತ್ಸವಗಳು ನಡೆಯುತ್ತವೆ. ವೈಮಾಳಿಗೆಯ ಉತ್ಸವದ ನಂತರ ದೇವಿಗೆ ದಕ್ಷಿಣದ ಬಾಗಿಲಿನಿಂದ ಒಳಪ್ರವೇಶಿಸುತ್ತಾಳೆ. ತಮ್ಮಡಿ ಆ ಬಾಗಿಲನ್ನು ಮುಚ್ಚುತ್ತಾನೆ. ಅಲ್ಲಿಗೆ ಹದಿನಾರು ದಿನಗಳ ತಿಬ್ಬಾದೇವಿಯ ಉತ್ಸವ ಜಾತ್ರೆಗಳು ಮುಗಿಯುತ್ತವೆ.

ಮುಗೂರು ಮತ್ತು ಅಲ್ಲಿನ ಅಧಿದೇವತೆ ತಿಬ್ಬಾದೇವಿಯ ಅಧ್ಯಯನವು ಕುತುಹಲಕಾರಿಯಾದುದು. ಗಂಗರಾಜಕುಮಾರಿಯೊಬ್ಬಳು ತನ್ನ ಶಕ್ತಿ ಸಾಮರ್ಥ್ಯ ಮತ್ತು ಪ್ರಜಾಪ್ರೇಮಗಳಿಂದ ದೇವತಾರೂಪಿಯಾದಂತೆ ಇಲ್ಲಿನ ವೀರಗಲ್ಲುಗಳು ಸಾರುತ್ತವೆ. ಮುಂದೆ ಭಕ್ತರು ಬೆಳೆದಂತೆ ರಾಜರೂ ಈ ದೇವಿಗೆ ನಡೆದುಕೊಳ್ಳಲಾರಂಭಿಸಿದಂತೆ ಅನೇಕ ಪೌರಾಣಿಕ ಕಥೆಗಳನ್ನು ಈಕೆಯ ಜೀವಿತಕ್ಕೆ ಸಂಬಂಧಿಸಿದಂತೆ ಅಂಟಿಸಲಾಗಿದೆ. ಎಂಬುದು ಸ್ವಷ್ಟವಾಗುತ್ತದೆ. ಗಮಹಾರ್ಹ ವಿಷಯವೆಂದರೆ ಈ ಊರಿನ ದೇವ ದೇವತೆಗಳಲ್ಲಿರುವ ಸಹೋದರ ಭಾವ ಈಶ್ವರ ದೇವಾಲಯದಲ್ಲಿ ವಿಷ್ಣುವೂ ದೇವಾಯದಲ್ಲಿ ಈಶ್ವರ . ಹೀಗೆ ಮೂಗೂರು ಧಾರ್ಮಿಕ ಸಮನ್ವಯದ ಕೇಂದ್ರವಾಗಿದೆ ಎಂದು ಹೇಳಬಹುದು.