ಕನ್ನಡ ಯಕ್ಷಗಾನ ಸಾಹಿತ್ಯದಲ್ಲಿ ಬರುವ ಕರಿಭಂಟನ ಕಾಳಗದ ಕಥೆ ಚಾರಿತ್ರಿಕ ಘಟನೆಯೇ? ಎಂಬ ನನ್ನ ಸಂಶೋಧನ ಪ್ರಬಂಧದ ಕ್ಷೇತ್ರಕಾರ್ಯ ಸಮಯದಲ್ಲಿ ಮಲ್ಲಿಗನೂರಿನಲ್ಲಿ ಪಂಚಾಯತರ ಮಾತು ಮೀರಿ ಕರಿಭಂಟನನ್ನು ಕೊಂದ ಉದ್ದಂಡಿ ಮೂಗೂರಿಗೆ ಓಡಿಹೋಗಿ ಅವಿತಿದ್ದಳೆಂದು ಅನಂತರ ಅವಳನ್ನು ಹಿಡಿದುತಂದು ಮಲ್ಲಿಗನೂರಿನಲ್ಲಿ ಕೊಲ್ಲಲಾಯಿತೆಂದೂ ತಿಳಿದು ಬಂದಿತು. ಈ ಕಥೆಯು ಗಂಗವಂಶದಲ್ಲಿ ನಡೆದ ದುರಂತ ಪ್ರಣಯ ಪ್ರಸಂಗವೊಂದರಿಂದ ಪ್ರೇರಿತವಾಗಿರಬಹುದೆಂದೂ ರಕ್ಕಸಗಂಗನನಂತರ ವಿಷ್ಣುವರ್ಧನ ಚೋಳರಿಂದ ಗಂಗ ರಾಜ್ಯವನ್ನು ಮುಕ್ತಗೊಳಿಸುವ ಮಧ್ಯಕಾಲದಲ್ಲಿ ನಡೆದಿರಬಹುದೆಂದು ಅಭಿಪ್ರಾಯ ಪಟ್ಟಿದ್ದೇನೆ. ಆದರೆ ಇತ್ತೀಚೆಗೆ ಈ ಬಗೆಗೆ ಹೊಸಬೆಳಕು ಚೆಲ್ಲುವಂತಹ ಇನ್ನು ಕೆಲವು ಪ್ರಸಂಗಗಳು ನನಗೆ ದೊರಕಿದುವು. ಅವುಗಳಲ್ಲಿ ಮುಗೂರು ತಿಬ್ಬಾದೇವಿಯ ಪ್ರಸಂಗ ಪ್ರಮುಖವಾದುದು. ಈ ಕಥೆ ಗಂಗವಂಶದಲ್ಲಿ ನಡೆದ ದಾಯಾದಿ ಮತ್ಸರ ಮತ್ತು ಕರಿಭಂಟ ಪುಂಡರೀಕಾಕ್ಷಿಯರ ದುರಂತ ಪ್ರಣಯದ ಬಗೆಗೆ ಹೆಚ್ಚಿನ ಒತ್ತು ನೀಡುತ್ತದೆ. ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರದಿಂದ ಆರುಮೈಲಿ ದೂರದಲ್ಲಿರುವ ಮೂಗೂರಿಗೆ ಹೋದಾಗ ಅಲ್ಲಿ ಈ ಕಥೆಯ ಬಗ್ಗೆ ಅನೇಕ ಕವಲುಗಳು ಕಂಡುಬಂದವು. ಅವುಗಳ ವಿಶ್ಲೇಷಣೆ ಮತ್ತು ಕರಿಭಂಟನ ಕಾಳಗದ ಮೇಲೆ ಇವುಗಳ ಪ್ರಭಾವ ಏನು ಎಂಬುದನ್ನು ಇಲ್ಲಿ ವಿವೇಚಿಸಲಾಗಿದೆ. ಇದರೊಂದಿಗೆ ಮೂಗೂರು ಹಳೇಮೈಸೂರು ಅಥವಾ ದಕ್ಷಿಣ ಕರ್ನಾಟಕದ ಗ್ರಾಮದೇವತೆಗಳ ಮೂಲವಾಗಿರುವಂತೆಯೂ ಕಾಣುತ್ತದೆ.

ತಿರುಮಕೂಡಲು ನರಸೀಪುರ ಕೊಳ್ಳೆಗಾಲ ರಸ್ತೆಯಲ್ಲಿರುವ ಮೂಗೂರು ಅತ್ಯಂತ ಪ್ರಾಚೀನ ಕಾಲದಿಂದ ಅಸ್ತಿತ್ವದಲ್ಲಿದ್ದ ಊರೆಂದು ತಿಳಿದು ಬರುತ್ತದೆ. ಹೊಯ್ಸಳ ದೊರೆ ಮೂರನೆಯ ವೀರನರಸಿಂಹನ ಕಾಲದ ಶಾಸನವೊಂದು “ಪರನಾರೀ ಸಹೋದರಂಗಳೆಂಬ ಈ ಬಿರುದುರು ಆ ಮೂಗೂರ ಮಹಾಪ್ರಭುಗಳು ತಳಗೆಯ ನಾಡನಾಳುವ ನಾಡ ಮುಖಗಳು ರಣಪಟನವ ಗವುಡನ ಮಗ ದಾಳಿಗವುಡ ಸಳಗವುಡನ ಮಗ ಮಾರಗವುಡ ಕಾಳಿಗವುಡನ ಮಗ ಮಾಸ ಪೊರವತರಾಯನ ನಾಗಯ ಕೇತಗವುಡನ ಮಗ ಮರಿ ಚಟ್ಟಯ ನಳಿಯನಮಗ ಮಾರಗವುಡ ಮಾದಿಗವುಡನ ಮಗ ತಿಬ್ಬಯ್ಯ” ಮುಂತಾದವರು ಮೂಗೂರನ್ನು ನಗರವಾಗಿ ಪರಿವರ್ತಿಸಲು ಮತ್ತು ಸಂತೆ ಕಟ್ಟುವಂತೆ ಮಾಡಲು ಹಲವರೊಂದಿಗೆ ಮಾಡಿಕೊಂಡ ಒಪ್ಪಂದ ಮತ್ತು ದತ್ತಿಯ ವಿಚಾರಗಳ ಕಥೆಯನ್ನು ಹೇಳುತ್ತದೆ. ಜಯಾಭ್ಯುದಯ ಶಕವರ್ಷ ೧೧೯೯ನೆಯ ಯಶ್ವರ ಸಂವತ್ಸರದ ಜೇಷ್ಠ ಬಹ್ನ ಮಂದದಿನ ಹಾಕಿದ ಈ ಶಾಸನದ ಕಾಲ ಜೂನ್‌೧೩, ೧೨೨೭ ಆಗುತ್ತದೆ. ಇನ್ನೂ ಹಿಂದಿನ ಶಾಸನಗಳಲ್ಲಿಯೂ ಈ ಊರು ಕಂಡುಬರುತ್ತದೆ. ಆದರೆ ಮೇಲಿನ ಶಾಸನ ಮೂಗೂರು ನಗರವಾದ ವಿಷಯವನ್ನು ಮತ್ತು ಅಲ್ಲಿ ಸಂತೆಯೊಂದು ಆರಂಭವಾದ ವಿಷಯವನ್ನು ಉಲ್ಲೇಖಿಸುತ್ತದೆ. ಈ ಊರಿನ ದೇವಾಲಯಗಳ ದೃಷ್ಟಿಯಿಂದ ಹೇಳುವುದಾದರೆ ೧೨೭೭ರ ಈ ಶಾಸನಕ್ಕಿಂತ ಹಿಂದೆಯೂ ಗಂಗರ ಕಾಲದಲ್ಲಿ ಇದೊಂದು ಪ್ರಮುಖ ಊರಾಗಿದ್ದು ಗಂಗರ ಪ್ರಾಂತ್ಯಾಧಿಕಾರಿಯೊಬ್ಬ ಇಲ್ಲಿದ್ದಂತೆ ತಿಳಿದುಬರುತ್ತದೆ. ಇಲ್ಲಿನ ದೇಸೇಶ್ವರ, ಭೈರವ ಮತ್ತು ಜೈನದೇವಾಲಯಗಳು ಗಂಗರ ಕಾಲದಲ್ಲಿ ನಿರ್ಮಿತವಾಗಿ ಕ್ರಮೇಣ ಅವು ಬೆಳೆಯುತ್ತಾ ಬಂದಂತೆ ಕಾಣುತ್ತದೆ. ಹದಿಮೂರನೆಯ ಶತಮಾನದ ಶಾಸನವೊಂದು “ಮೂಗೂರು ಸಮಸ್ತ ಗಾವುಂಡುಗಳು ಬಸದಿಯ ಜೀರ್ಣೋದ್ಧಾರವ ಮಾಡಿಸಿದ ವಿಷಯ ಉಕ್ತವಾಗಿದೆ. ಇದರಿಂದ ಗಂಗರ ಕಾಲದಲ್ಲಿ ನಿರ್ಮಾಣಗೊಂಡ ಈ ಬಸದಿ ಪ್ರಾಯಃ ಅದರ ಅವನತಿಯ ನಂತರ ಬಸದಿ ಶಿಥಿಲವಾಗಿದ್ದು ತಮ್ಮ ವಂಶಿಕರು ಕಟ್ಟಿಸಿದ ಬಸದಿ ಬಿದ್ದು ಹೋಗುವುದಲ್ಲಾ ಎಂದು ಮೂಗೂರು ಗೌಡಗಳು ಜೀರ್ಣೋದ್ಧಾರ ಮಾಡಿರಬೇಕು.

ದೇಸೇಶ್ವರ ದೇವಾಲಯವು ಸರ್ವಧರ್ಮ ಸಂಕೇತದಂತೆ ಕಂಡುಬರುತ್ತದೆ. ಏಕೆಂದರೆ ಗರ್ಭಗುಡಿಯ ಬಲಭಾಗದಲ್ಲಿ ವಿಷ್ಣುವಿನ ಮೂರ್ತಿಯನ್ನು ಕೆತ್ತಲಾಗಿದೆ. ಅಲ್ಲಲ್ಲಿ ಕಂಬಗಳ ಮೇಲೆ ಆಂಜನೇಯನನ್ನು ಕೆತ್ತಲಾಗಿದೆ. ಈ ದೇವಾಲಯಕ್ಕೆ ಅಂಟಿದಂತೆಯೇ ಭೈರವ ಮತ್ತು ಕಾಳಿಯರ ದೇವಾಲಯಗಳಿವೆ. ಗಂಗರು ಜೈನಧರ್ಮಾನುಯಾಯಿಗಳೆಂದು ಚರಿತ್ರಕಾರರು ಅಭಿಪ್ರಾಯ ಪಡುವದಾದರೂ. “It is not possible to assert the early Gangas were Jains, though as tolerant monarchs they made donations to Jaina gurus and temples… There is no evidence that the early Gangas went personally Jains. On the Country they were followers of the Vedic religion, celebrating scricices which involved the immolation of animals and worshiping of Shiva, Vishnu, Kathayani and other dities”

[1] ಎಂಬ ಅಭಿಪ್ರಾಯಗಳೂ ಗಂಗರ ಬಗ್ಗೆ ದೊರೆಯುತ್ತವೆ. ಅಲ್ಲದೆ ಗಂಗರ ಕಾಲದ ಶಾಸನಗಳು ಸಹ ಅವರು ಎಲ್ಲಾ ಧರ್ಮಗಳು ಮತ್ತು ದೇವತೆಗಳಿಗೂ ದಾನ ದತ್ತಿ ನೀಡಿದ ಬಗ್ಗೆ ಹೇಳುತ್ತವೆ. ಈ ಕಾರಣದಿಂದಲೂ ಮೂಗೂರು ಗಂಗರ ಕಾಲದ ಒಂದು ಪ್ರಮುಖ ನಗರವಾಗಿರಬೇಕೆಂದು ಊಹಿಸಲು ಅವಕಾಶವಿದೆ. ಸುಮಾರು ೧೧೧೭ರ ಶಾಸನವೊಂದರಲ್ಲಿ ‘ತೊಣ್ಣೂರಿನ’ ಉಲ್ಲೇಖ ದೊರೆಯುತ್ತದೆ. ತೊಣ್ಣೂರು ಗಂಗರ ಪ್ರಮುಖ ಪ್ರಾಂತ ಮುಖ್ಯ ನಗರಗಳಲ್ಲೊಂದಾಗಿದ್ದಿತು. ಅಂತೆಯೇ ಮೂಗೂರು ಸಹ ಗಂಗರ ಪ್ರಾಂತ ರಾಜಧಾನಿಯಾಗಿದ್ದಿತೆಂದು ಹೇಳಲು ಅವಕಾಶವಿದೆ. ದೊರೆಯುವ ಶಾಸನಧಾರಗಳಿಂದ ಹೇಳುವುದಾದರೆ ಮೂಗೂರು ಸುಮಾರು ಒಂದು ಸಾವಿರ ವರ್ಷಗಳ ಚಾರಿತ್ರಿಕ ಹಿನ್ನೆಲೆಯನ್ನೊಳಗೊಂಡ ಊರಾಗಿದೆ ಎಂಬುದರಲ್ಲಿ ಅನುಮಾನವಿಲ್ಲ.

ಸ್ಥಳ ಪುರಾಣಗಳ ಪ್ರಕಾರ ಮೂಗೂರಿನ ಕಥೆ ವೈವಿಧ್ಯಮಯವಾಗಿದೆ. ಈ ಬಗ್ಗೆ ಅನೇಕ ಬೇರೆ ಬೇರೆ ರೀತಿಯ ಕಥೆ ಮತ್ತು ಹೇಳಿಕೆಗಳು ದೊರೆಯುತ್ತವಾದರೂ ಎರಡು ಮೂರನ್ನು ಮಾತ್ರ ಇಲ್ಲಿ ಉಲ್ಲೇಖಿಸಬಹುದಾಗಿದೆ. ಇವುಗಳಲ್ಲಿ ಮೊದಲನೆಯದು ಹೀಗಿದೆ. ಈ ಊರಿನ ಅನತಿ ದೂರದ ಕಾಡಿನಲ್ಲಿ ಮೂಕಾಸುರನೆಂಬ ರಾಕ್ಷಸ ಸೇರಿಕೊಂಡು ಜನರಿಗೆ ಅತೀವ ಹಿಂಸೆ ಕೊಡುತ್ತಿದ್ದ. ಈ ರಾಕ್ಷಸನ ಹಾವಳಿಯನ್ನು ತಾಳಲಾರದ ಜನರು ಶಿವನ ಮೊರೆಯ ಹೊಕ್ಕರು. ಶಿವ ಆದಿಶಕ್ತಿ ಪಾರ್ವತಿಯನ್ನು ಪ್ರಾರ್ಥಿಸುವಂತೆ ಅವರಿಗೆ ಹೇಳಿದ. ಅದರಂತೆ ಜನರು ಪಾರ್ವತಿಯಲ್ಲಿಗೆ ಹೋಗಿ ತಮ್ಮ ಅಳಲನ್ನು ಹೇಳಿದರು. ಆಗ ಆಕೆ ಭೂಲೋಕದಲ್ಲಿ, ಮೂಗೂರಲ್ಲಿ ತಿಬ್ಬಾದೇವಿಯಾಗಿ ಜನಿಸಿ ಮೂಕಾಸುರನನ್ನು ಕೊಲ್ಲುವುದಾಗಿ ಜನರಿಗೆ ಭರವಸೆ ನೀಡಿದಳು. ಅದರಂತೆ ಆಕೆ ಮೂಗೂರಿನ ರಾಜನ ಮಗಳು ತಿಬ್ಬಾದೇವಿಯಾಗಿ ಜನಿಸಿದಳು. ಸಕಲಯುದ್ಧಶಾಸ್ತ್ರ ಪಾರಂಗತಳಾದ ತಿಬ್ಬಾದೇವಿ ಮೂಕಾಸುರನ ಮೇಲೆ ಯುದ್ಧ ಘೋಷಿಸಿದಳು. ಅವಳು ತನ್ನ ಬಾಣದಿಂದ ಮೂಕಾಸುರನಿಗೆ ಹೊಡೆದಳು. ಅವನ ಮೈಯಿಂದ ಭೂಮಿಯ ಮೇಲೆ ಬಿದ್ದ ಒಂದೊಂದು ತೊಟ್ಟು ರಕ್ತದಿಂದಲೂ ಒಂದೊಂದು ಕೋಟಿ ಅವನಷ್ಟೇ ಸಮರ್ಥರು ಹುಟ್ಟಲಾರಂಭಿಸಿದರು. ಹೀಗೆ ಜನಿಸಿದ ರಾಕ್ಷಸರನ್ನು ತಿಬ್ಬಾದೇವಿ ಕತ್ತರಿಸುತ್ತಾ ನಡೆದಳು. ಆದರೆ ಅದು ಅಕ್ಷಯ. ಅಸುರರು ರಕ್ತದಿಂದ ಸೃಷ್ಟಿಯಾಗುತ್ತಲೇ ನಡೆದರು. ಕಡೆಗೆ ಸುಸ್ತಾಗಿ ಒಂದೆಡೆ ಕುಳಿತು ತನ್ನ ಹಣೆಯ ಬೆವರನ್ನು ತೆಗೆದು ಭೂಮಿಗೆ ಹಾಕಿದಳು. ಕೂಡಲೇ ಶಕ್ತಿಯೊಬ್ಬಳು ಉದ್ಭವಿಸಿದಳು. ಆಕೆಯೆ ರಾಕಾಸಮ್ಮ. ಅವಳು ಮೂಕಾಸುರನ ರಕ್ತಭೂಮಿಯ ಮೇಲೆ ಬೀಳದಂತೆ ಇಡೀ ರಣರಂಗಕ್ಕೆ ತನ್ನ ನಾಲಿಗೆಯನ್ನು ಹಾಸಿದಳು. ಮುಂದೆ ರಾಕ್ಷಸ ಸತ್ತುಬಿದ್ದ. ಮೂಕಾಸುರನನ್ನು ಕೊಂದ ಸ್ಥಳವಾದುದರಿಂದ ಈ ಊರಿಗೆ ಮೂಗೂರೆಂದು ಹೆಸರಾಯಿತು. ಮುಂದೆ ತಿಬ್ಬಾದೇವಿಯು ಇಲ್ಲಿಯೇ ನೆಲೆನಿಂತು ಈ ಊರಿನ ದೇವತೆಯಾದಳು. ರಾಕಾಸಮ್ಮನೂ ಇಲ್ಲಿಯೇ ನೆಲೆ ನಿಂತಳು. ಈ ಕಥೆ ಇತ್ತೀಚಿನದಾಗಿದ್ದು ಮೈಸೂರಿನ ಚಾಮುಂಡಿಯ ಕಥೆಯಂತಿರುವುದು ಗಮನೀಯ. ಶಾಸನಗಳಲ್ಲಿ ಸುಮಾರು ೧೯ನೆಯ ಶತಮಾನದವರೆಗೆ ‘ಮೇಗೂರು’ ಎಂದೇ ಈ ಹೆಸರಿನ ಉಲ್ಲೇಖವಿದೆ. ಅನಂತರ ಈ ದೇವಾಲಯದ ಬಾಗಿಲವಾಡ ಇತ್ಯಾದಿ ಮಾಡಿಸಿದ ಆಧುನಿಕ ಬರಹಗಳಲ್ಲಿ ಮೂಗೂರು ಎಂಬ ಉಲ್ಲೇಖ ಕಂಡುಬರುತ್ತದೆ. ಹೀಗಾಗಿ ಮೂಕಾಸುರನ ಕೊಂದ ಕಥೆ ತಿಬ್ಬಾದೇವಿಯ ದೇವಾಲಯ ಮೈಸೂರು ಅರಮನೆಗೆ ಹತ್ತಿರವಾದ ನಂತರ ಹುಟ್ಟಿಕೊಂಡ ಕಥೆಯಂತೆ ಕಂಡುಬರುತ್ತದೆ. ಏಕೆಂದರೆ ಮೂಗೂರು ಎಂಬುದು ತಿಬ್ಬಾದೇವಿಯಿಂದಲೇ ಬಂದಿರಬೇಕು. ಏಕೆಂದರೆ ಈ ಊರಿಗೆ ಅನತಿ ದೂರದಲ್ಲಿರುವ ನೇರಿಳೆ ಬನವೇ ತಿಬ್ಬಾದೇವಿ ರಾಕ್ಷಸನನ್ನು ಕೊಂದ ಸ್ಥಳವೆಂದು ಹೇಳುತ್ತಾರೆ. ಅಲ್ಲಿಯೇ ಹತ್ತಿರ ಹೊಸಹಳ್ಳಿ ಎಂಬ ಹೆಸರಿನ ಹಳ್ಳಿಯೊಂದಿದೆ. ಈ ಊರಿನಲ್ಲಿ ಮೂಗುಮಾರಿ ಎಂಬ ದೇವತೆಯ ಗುಡಿಯೊಂದಿದೆ. ಈ ಮೂಗುಮಾರು ಅಥವಾ ದುರ್ಗೆಯಿಂದ ಮೂಗೂರು ಎಂಬ ಹೆಸರು ಈ ಊರಿಗೆ ಬಂದಿರುವ ಸಾಧ್ಯತೆ ಕಂಡುಬರುತ್ತದೆ.

ಜನಪದ ಕಥೆಯೊಂದು ಮೂಗೂರು ತಿಬ್ಬಾದೇವಿ ಬಗೆಗೆ ಬೇರೊಂದು ರೀತಿಯಲ್ಲಿ ಹೇಳುತ್ತದೆ. ತಿಬ್ಬಮ್ಮ, ದುಬ್ಬಮ್ಮ, ಕೆಂಪಮ್ಮ, ಸುಬ್ಬಮ್ಮ, ಲಕ್ಷ್ಮಮ್ಮ, ಕುಂಬಳಮ್ಮ, ರಾಕಾಸಮ್ಮ ಹೀಗೆ ಏಳು ಮಂದಿ ಸಹೋದರಿಯರು. ಈ ಪಟ್ಟಿಯಲ್ಲಿ ಅನೇಕ ಬದಲಾವಣೆಗಳೂ ಆಗುತ್ತವೆ. ಚಾಮುಂಡಿ, ದೈತ್ಯಮ್ಮ, ಹೊನ್ನಮ್ಮ, ಹೇಮಮ್ಮ, ಮಂಚಮ್ಮ, ಕೊಟಗಲಮ್ಮ, ಹಿರಿಯಮ್ಮ ಎಂಬ ಹೆಸರುಗಳೂ ತಿಬ್ಬಾದೇವಿಯ ಸಹೋದರಿಯರ ಪಟ್ಟಿಯಲ್ಲಿ ಸೇರುತ್ತವೆ. ತಿಬ್ಬಮ್ಮನ ತಂಗಿಯಾದ ರಾಕಾಸಮ್ಮ ತೊಣ್ಣೂರನ್ನು ಆಳುತ್ತಿದ್ದಳು. ಆಕೆಗೆ ಪುಂಡರೀಕಾಕ್ಷಿಯೆಂಬ ಸುಂದರಿಯಾದ ಮಗಳಿದ್ದಳು. ಈ ಎಲ್ಲಾ ಏಳು ಜನ ಸಹೋದರಿಯರೂ ತಲಕಾಡು ಅಥವಾ ಧಾರಾಪುರದ ಅರಸನ ಸಂಬಂಧಿಕರಾಗಿದ್ದರು. ಧಾರಾಪುರದ ಅರಸ ಮಾರಭೂಪಾಲ. ಅವನು ತನ್ನ ಎಳೆಯ ವಯಸ್ಸಿನ ಮಗ ಕರಿರಾಯನನ್ನು ಬಿಟ್ಟು ಯುದ್ಧವೊಂದರಲ್ಲಿ ಅಸುನೀಗಿದ. ಮಾರಭೂಪಾನ ರಾಣಿ ಬನವಂತಾದೇವಿ ಅಧಿಕಾರ ಸೂತ್ರವನ್ನು ಹಿಡಿದುದಲ್ಲದೆ ಮಗನನ್ನು ಬೆಳೆಯಿಸಿ ದೊಡ್ಡವನನ್ನಾಗಿ ಮಾಡಿದಳು. ಕರಿರಾಯನು ವಯಸ್ಸಿಗೆ ಬಂದು ಆಡಳಿತ ವಹಿಸಿಕೊಂಡ. ಮಾರಭೂಪಾಲನ ಸಂಬಂಧಿಕರಾದ ತಿಬ್ಬಮ್ಮ ಮತ್ತು ಸಹೋದರಿಯರು ಹಬ್ಬಹರಿದಿನಗಳಲ್ಲಿ ಧಾರಾಪುರಕ್ಕೆ ಹೋಗುತ್ತಿದ್ದರು. ಕರಿರಾಯ ಮತ್ತು ಪುಂಡರೀಕಾಕ್ಷಿಯರು ಹೀಗೆ ಹಬ್ಬಹರಿದಿನಗಳಲ್ಲಿ ಸರಿದಾಗ ಒಟ್ಟಿಗೆ ಆಡುತ್ತಿದ್ದರು. ಈ ಆಟ ಅವರು ಬೆಳೆದಂತೆ ಪ್ರಣಯದತ್ತ ತಿರುಗಿತು. ತಾಯಿತಂದೆಯರು ಈ ಬಗೆಗೆ ಅರಿಯುವ ಹೊತ್ತಿಗೆ ಕರಿರಾಯ ಪುಂಡರೀಕಾಕ್ಷಿಯರ ಪ್ರಣಯ ಅಭೈದ್ಯ ಕೋಟೆಯಾಗಿತ್ತು.

ರಾಕಾಸಮ್ಮನಿಗೆ ಬೊಮ್ಮರಾಯನೆಂಬ ತಮ್ಮನಿದ್ದ. ಗಂಡುಮಕ್ಕಳಿಲ್ಲದ ಆಕೆ ತನ್ನ ಮಗನನ್ನು ಅವನಿಗೆ ಕೊಟ್ಟ ಮದುವೆ ಮಾಡಲು ತೀರ್ಮಾನಿಸಿದ್ದಳು. ಪುಂಡರೀಕಾಕ್ಷಿ ಕರಿರಾಯನೊಂದಿಗೆ ಸಲುಗೆಯಿಂದಿರುವುದನ್ನು ಕಂಡ ಅವಳು ಆದಷ್ಟು ಬೇಗ ಬೊಮ್ಮನಿಗೂ ಪುಂಡರೀಕಾಕ್ಷಿಗೂ ಮದುವೆ ಮಾಡಿಬಿಡಲು ತೀರ್ಮಾನಿಸಿದಳು. ಏರ್ಪಾಡುಗಳೆಲ್ಲ ಗುಟ್ಟಾಗಿ ನಡೆಯಲಾರಂಭಿಸಿದವು. ಪುಂಡರೀಕಾಕ್ಷಿಗೆ ವಿಷಯ ತಿಳಿದಾಗ ಅವಳು ತಾಯಿಯೊಂದಿಗೆ ತಾನು ಕರಿರಾಯನನ್ನು ಪ್ರೇಮಿಸಿರುವುದಾಗಿಯೂ ಆತನನ್ನಲ್ಲದೆ ಬೇರೆಯವರನ್ನು ಮದುವೆಯಾಗುವುದಿಲ್ಲವೆಂದು ಹಠಹಿಡಿದಳು. ಆದರೆ ಕುಪಿತಳಾದ ರಾಕಸಮ್ಮ ಅವಳನ್ನು ಬಂಧನದಲ್ಲಿಟ್ಟು ಮದುವೆಯ ಏರ್ಪಾಡನ್ನು ಮುಂದುವರಿಸಿದಳು. ಇತ್ತ ಪುಂಡರೀಕಾಕ್ಷಿ ತನ್ನ ಆಪ್ತ ಸಖಿಯ ಸಹಾಯದಿಂದ ಕರಿರಾಯನಿಗೆ ವಿಷಯ ತಿಳಿಸಿದಳು. ಅವನು ವಿಷಯವನ್ನು ತನ್ನ ತಾಯಿ ಬನವಂತೆಗೆ ಹೇಳಿದ. ಆಕೆ ಪುಂಡರೀಕಾಕ್ಷಿಯನ್ನು ಕರಿರಾಯನಿಗೆ ಕೊಟ್ಟು ಮದುವೆ ಮಾಡುವಂತೆ ಕೇಳಿಸಿದಳು. ಆದರೆ ರಾಕಾಸಮ್ಮನಿಂದ ಅಹಂಕಾರದ ಉತ್ತರ ಬಂದಿತು. ಕಡೆಗೆ ಬನವಂತೆ ತಿಬ್ಬಮ್ಮ ಸಹೋದರಿಯರನ್ನು ಈ ಬಗ್ಗೆ ಕೇಳಿದಳು. ಅವರಲ್ಲಿ ಕೆಲವರು ಬನವಂತೆಗೂ ಕಲವರು ರಾಕಾಸಿಗೂ ಪರವಾಗಿ ಉತ್ತರ ಹೇಳಿದರು. ಯಾರು ಹೇಳಿದರೂ ರಾಕಾಸಮ್ಮ ತನ್ನ ಹಠ ಬಿಡಲಿಲ್ಲ. ಕಡೆಗೆ ಬೇರೆ ದಾರಿ ಕಾಣದ ಕರಿರಾಯ ಪುಂಡರೀಕಾಕ್ಷಿಯನ್ನು ಧಾರಾಪುರಕ್ಕೆ ಕದ್ದೊಯ್ಯಲು ನಿರ್ಧರಿಸಿದ.

ಹಳೇಬೀಡಿನ ರಾಜತನ್ನ ಮಗಳು ಧರಣಿಮೋಹಿಣಿಯ ಸ್ವಯಂವರ ಏರ್ಪಡಿಸಿ ತನ್ನನ್ನು ಆಹ್ವಾನಿಸಿರುವುದಾಗಿಯೂ ತಾನು ಹೋಗಿಬರುವುದಾಗಿಯೂ ಕರಿರಾಯ ತಾಯಿಗೆ ಹೇಳಿದ. ತಮಗೆ ವಿರೋಧಿಯಾದ ಹಳೆಯಬೀಡಿನ ರಾಜ ಸ್ವಯಂವರಕ್ಕೆ ಕರೆದನೆಂಬುದು ಬನವಂತೆಗೆ ಆಶ್ಚರ್ಯವಾಗಿ ಕಂಡಿತು. ನಂಬಿಕೆ ಹುಟ್ಟಲಿಲ್ಲ. ಆಕೆಗೆ ಮಗ ಏನೋ ಹುನ್ನಾರ ಮಾಡುತ್ತಿದ್ದಾನೆ. ಅನ್ನಿಸಿತು. ಶತ್ರುರಾಜನ ಸ್ವಯಂವರದ ತಂಟೆ ನಿನಗೆ ಬೇಡವೆಂದು ಎಷ್ಟೋ ತಡೆದಳು. ಆದರೆ ಕರಿರಾಯ ಕೇಳಲಿಲ್ಲ. ಅವನು ಸೇನಾಸಮೇತನಾಗಿ ಕಾವೇರಿ ತೀರದಲ್ಲಿಯೇ ಸಡೆದು ಲೋಕಪಾವನಿ ಕಾವೇರಿಯರ ಸಂಗಮದಲ್ಲಿ ಬೀಡುಬಿಟ್ಟ. ಅಂದು ರಾತ್ರಿ ತೊಣ್ಣೂರಿನಿಂದ ಪುಂಡರೀಕಾಕ್ಷಿಯನ್ನು ಕದ್ದೊಯ್ಯುವುದು ಅವನ ಉದ್ದೇಶವಾಗಿದ್ದಿತು. ಪುಂಡರೀಕಾಕ್ಷಿಯು ವನವಿಹಾರದ ಸೋಗಿನಲ್ಲಿ ಅಲ್ಲಿಗೆ ಹೋಗಿ ಕರಿರಾಯನನ್ನು ಕಂಡು ಬಂದಳು.

ರಾಕಸಮ್ಮ ಸಹ ತನ್ನ ಮಗಳ ಚಲನವಲನಗಳನ್ನು ಪರೀಕ್ಷಿಸುವಂತೆ ಬೊಮ್ಮನಿಗೆ ಹೇಳಿದ್ದಳು. ಅದರಂತೆ ಅವನು ಉರಿಶಿಂಗನೆಂಬ ಪ್ರಧಾನ ಗೂಢಚಾರ ಅಧಿಕಾರಿಗೆ ಈ ವಿಷಯ ತಿಳಿಸಿದನು. ಅವನು ಮರಿಶಿಂಗನೆಂಬ ತನ್ನ ಸಹಾಯಕನಿಗೆ ಹೇಳಿದ. ಕೊನೆಗೆ ಒಂದು ರಾತ್ರಿ ನಿಗದಿಯಾದಂತೆ ಮಿತಪರಿವಾರದೊಂದಿಗೆ ಕರಿರಾಯ ತೊಂಡನೂರಿನತ್ತ ಹೊರಟ. ಪುಂಡರೀಕಾಕ್ಷಿ ಊರಿನ ಅನತಿ ದೂರದ ದೇವಾಲಯವೊಂದರ ಹತ್ತಿರ ಇರುವುದಾಗಿ ಈ ಮೊದಲೇ ಹೇಳಿದ್ದಳು. ಕರಿರಾಯನ ಕುದುರೆ ನೇರವಾಗಿ ಅಲ್ಲಿಗೆ ಹೋಗಿ ಪುಂಡರೀಕಾಕ್ಷಿಯನ್ನು ಕುದುರೆಯೇರಿಸಿಕೊಂಡು ಪೂರ್ವಾಭಿಮುಖವಾಗಿ ದೌಡಾಯಿಸಿದ. ಕರಿರಾಯ ಪುಂಡರೀಕಾಕ್ಷಿಯನ್ನು ಅಪಹರಿಸಿಕೊಂಡು ಹೋದುದು ಮರಿಶಿಂಗನ ಹದ್ದಿನ ಕಣ್ಣಿಗೆ ಬಿದ್ದಿತು. ಅವನು ಕೂಡಲೇ ಉರಿಶಿಂಗ ಮತ್ತು ಬೊಮ್ಮರಿಗೆ ವರದಿ ಮಾಡಿದ. ಈ ವಿಚಾರ ತಿಳಿದಿ ರಾಕಾಸಿ ಉಗ್ರರೂಪ ತಾಳಿದಳು. ಕೂಡಲೇ ತೊಂಡನೂರಿನ ಸೇನೆ ಕರಿರಾಯನನ್ನು ಬೆನ್ನಟ್ಟಿತು.

ಪುಂಡರೀಕಾಕ್ಷಿಯನ್ನು ಕುದುರೆಯೇರಿಸಿಕೊಂಡು ಹೊರಟ ಕರಿರಾಯ ನೇರವಾಗಿ ಮಲ್ಲಿಗನೂರಿನತ್ತ ಹೊರಟ. ಮಲ್ಲಿಗನೂರಿನ ಪಾಳೆಯಗಾರ ಅವನಿಗೆ ಬೇಕಾದವನು. ಅಲ್ಲದೆ ಅವನು ಕೂಡಲೇ ಧಾರಾಪುರದತ್ತ ಹೊರಡುವಂತಿರಲಿಲ್ಲ. ಕಾರಣ ತೊಂಡನೂರಿನವರು ಸುಮ್ಮನಿರುವುದಿಲ್ಲ ಎಂಬುದು ಕರಿರಾಯನಿಗೆ ತಿಳಿದಿದ್ದಿತು. ನಿರೀಕ್ಷಿಸಿದಂತೆಯೇ ಬೊಮ್ಮನ ಮುಂದಾಳುತನದಲ್ಲಿ ತೊಂಡನೂರ ಸೇನೆ ಮಲ್ಲಿಗನೂರನ್ನು ಮುತ್ತಿತು. ಘೋರವಾದ ಯುದ್ಧ ಆರಂಭವಾಯಿತು. ವಿಷಯ ಸುತ್ತಲಿನ ಪಾಳೆಯಗಾರರಿಗೆ ತಿಳಿದು ಅವರೆಲ್ಲ ಮಲ್ಲಿಗನೂರಿಗೆ ಧಾವಿಸಿದರು. ಅಷ್ಟರಲ್ಲಿ ಬೊಮಮ ಯುದ್ಧದಲ್ಲಿ ಅಸುನೀಗಿದ್ದ. ಸೇನೆಯ ಮುಂದಾಳುತನವನ್ನು ಉದ್ದಂಡಿಯೇ ವಹಿಸಿದ್ದಳು. ಏಳು ಜನ ಪಾಳೆಯಗಾರರು ಸೇರಿ ಎರಡೂ ಪಂಗಡದೊಂದಿಗೆ ಮಾತುಕತೆ ನಡೆಸಿದಳು. ಕರಿರಾಯನ ಪರವಾಗಿ ಶಕ್ತಿ ಹೆಚ್ಚುತ್ತಿರುವುದು ಉದ್ದಂಡಿಗೂ ಅರಿವಾಯಿತು. ಕಡೆಗೆ ಒಂದು ಹೆಣ್ಣಿಗಾಗಿ ಇಂಥದೊಂದು ಯುದ್ಧವಾಗಿ ರಕ್ತದ ಕೋಡಿ ಹರಿಯಬೇಕೆ ಎಂಬ ಏಳು ಮಂದಿ ಮಧ್ಯಸ್ಥಗಾರ ಪಾಳೆಯಗಾರರ ಮಾತಿಗೆ ಎರಡೂ ಕಡೆಯವರೂ ಬೆಲೆ ಕೊಟ್ಟುದ್ದರಿಂದ ಯುದ್ಧ ನಿಂತಿತು. ಪುಂಡರೀಕಾಕ್ಷಿಯನ್ನು ಕರಿರಾಯನಿಗೆ ಕೊಟ್ಟು ಮದುವೆ ಮಾಡಿ ಸುಖವಾಗಿರಬೇಕೆಂದು ಆ ಮಧ್ಯಸ್ಥರು ಉದ್ದಂಡಿಗೆ ಬುದ್ಧಿವಾದ ಹೇಳಿದರು. ತನ್ನ ಶಕ್ತಿ ಸರ್ವಸ್ವವಾಗಿದ್ದ ಬೊಮ್ಮ ಅಸುನೀಗಿದ್ದನಾಗಿ ಉದ್ದಂಡಿ ನಿರಾಶೆಯಿಂದ ಬೇರೆ ದಾರಿ ಕಾಣದೆ ಅವರ ತೀರ್ಮಾನವನ್ನು ಒಪ್ಪಿದಳಾದರೂ ಅವಳ ಹೃದಯ ಧ್ವೇಷದ ಆಗರವಾಗಿದ್ದಿತು.

ಯುದ್ಧ ನಿಂತು ರಕ್ತಪಾತ ತಪ್ಪಿದುದು ಉದ್ದಂಡಿಯನ್ನುಳಿದು ಮಿಕ್ಕೆಲ್ಲರಿಗೂ ಸಂತೋಷವಾಗಿದ್ದಿತು. ಆದುದರಿಂದ ಅವರೆಲ್ಲರೂ ನಿರ್ಯೋಚನೆಯಿಂದ ನಿದ್ರೆ ಹೋದರು. ಕರಿರಾಯನೂ ಸೋಮೇಶ್ವರನ ದೇವಾಲಯದ ಹತ್ತಿರವಿದ್ದ ತನ್ನ ಬಿಡಾರದಲ್ಲಿ ನಿದ್ದೆ ಹೋಗಿದ್ದನು. ಇತ್ತ ಉದ್ದಂಡಿಯು ತನ್ನ ಸೇನೆಯ ಆಪ್ತ ಮುಖ್ಯರೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದಳು. ಎಲ್ಲರೂ ಅಪಾಯದ ಅರಿವಿಲ್ಲದೆ ನಿದ್ರಿಸುತ್ತಿದ್ದಾಗ ಈಕೆ ಕರಿರಾಯನ ಬಿಡಾರಕ್ಕೆ ನುಗ್ಗಿ ನಿರಾಯುಧನಾಗಿ ಮಲಗಿದ್ದ ಅವನನ್ನು ಕೊಂದಳು. ತಮ್ಮನ ಸಾವಿಗೆ ಪ್ರತೀಕಾರವೆಸಗಿದಳು. ಆದರೆ ಮಧ್ಯಸ್ಥರಿಗೆ ಬೆಳಿಗ್ಗೆ ವಿಷಯ ತಿಳಿದಾಗ ನನ್ನ ಗತಿ ಏನು ಎಂಬ ಯೋಚನೆ ಆಕೆಗೆ ಸುತ್ತಿಕೊಂಡಿತು. ಅವರೆನ್ನಲ್ಲಾ ಎದುರಿಸಿ ನಿಲ್ಲುವ ಶಕ್ತಿ ಉದ್ದಂಡಿಗಿರಲಿಲ್ಲ. ಆಕೆ ಕೂಡಲೇ ತನ್ನ ಆಪ್ತರೊಂದಿಗೆ ತನ್ನ ಅಕ್ಕ ತಿಬ್ಬಾದೇವಿಯ ರಾಜಧಾನಿಯಾದ ಮೂಗೂರಿನತ್ತ ದೌಡಾಯಿಸಿದಳು. ಅಲ್ಲಿಗೆ ಅನತಿ ದೂರದ ನೇರಿಳೆವನದಲ್ಲಿ ತಂಗಿ ಅಕ್ಕನಿಗೆ ಸುದ್ಧಿ ಕಳಿಸಿದಳು. ಕೂಡಲೇ ಅಲ್ಲಿಗೆ ಧಾವಿಸಿದ ತಿಬ್ಬಾದೇವಿ ಎಲ್ಲಾ ವಿಷಯಗಳ ಕೇಳಿ ತಿಳಿದಳು. ತಂಗಿಗೆ ಸಹಾಯ ಮಾಡುವುದೊಂದೇ ಆಕೆಗೆ ಉಳಿದಿದ್ದ ದಾರಿ. ಏಕೆಂದರೆ ಆಕೆ ನಿಯಮ ಮೀರಿ ಕರಿರಾಯನನ್ನು ಅಧರ್ಮ ಯುದ್ಧದಲ್ಲಿ ಮೋಸದಿಂದ ಕೊಂದಿದ್ದಳು. ಆದರೆ ಈಗ ಅದನ್ನೆಲ್ಲಾ ಯೋಚಿಸಿ ಫಲವಿಲ್ಲ. ಸರಿ ಆಕೆ ತಂಗಿ ಉದ್ದಂಡಿಯನ್ನು ನೇರಿಲೆವನದ ಬೃಹತ್‌ ವೃಕ್ಷವೊಂದರಲ್ಲಿ ಬಚ್ಚಿಟ್ಟು ಮೂಗೂರಿಗೆ ಬಂದಳು.

ಮಲ್ಲಿಗನೂರಿನಲ್ಲಿ ಬೆಳಗಾದಾಗ ಕಂಡ ದೃಶ್ಯ ಅಲ್ಲಿದ್ದವರನ್ನೆಲ್ಲಾ ಮೂಕರನ್ನಾಗಿಸಿತು. ಮಧ್ಯಸ್ಥಗಾರರು ಹಲ್ಲು ಕಡಿದು ಎಲಾ ರಾಕ್ಷಸಿ ಎಂದರು. ಕರಿರಾಯನ ಸೇನೆ ಕೋಪದಿಂದ ಕುದಿಯಿತು. ಯುದ್ಧ ನಿಲ್ಲಿಸಲು ಮಧ್ಯಸ್ಥರಾಗಿದ್ದವರೂ ಕರಿರಾಯನ ಸೇನೆಯೊಂದಿಗೆ ಸೇರಿದರು. ಗೂಢಚಾರರು ದಿಕ್ಕು ದಿಕ್ಕಿಗೂ ಧಾವಿಸಿದರು. ಕಡೆಗೆ ಉದ್ದಂಡಿ ಮೂಗೂರಿನಲ್ಲಿ ಅಕ್ಕನ ಆಶ್ರಯದಲ್ಲಿರುವುದಾಗಿ ತಿಳಿಯಿತು. ಆಕೆಯನ್ನು ಒಪ್ಪಿಸುವಂತೆ ಹೇಳಿದ ಕಳಿಸಿದರು. ಆದರೆ ತಿಬ್ಬಾದೇವಿ ಒಪ್ಪಲಿಲ್ಲ. ಕಡೆಗೆ ಅನಿವಾರ್ಯವಾಗಿ ಮೂಗೂರು ಮೇಲೆ ಅವರು ಯುದ್ಧ ಸಾರಿದರು. ತಿಬ್ಬಾದೇವಿಯ ಸಹಾಯಕ್ಕೆ ಆಕೆಯ ಎಲ್ಲಾ ಸಹೋದರಿಯರೂ ಸೇನೆಯೊಂದಿಗೆ ಧಾವಿಸಿದರು. ಘೋರಯುದ್ಧ ಆರಂಭವಾಯಿತು. ಮೂಗೂರು ರಕ್ತದ ಮಡುವಾಯಿತು. ಉತ್ತರದಿಂದ ಶತೃಗಳನ್ನೆದುರಿಸುತ್ತಿದ್ದ ದುಬ್ಬವ್ವೆ ರಣರಂಗದಲ್ಲಿ ಮಡಿದು ಬಿದ್ದಳು. ನಿಧಾನವಾಗಿ ತಿಬ್ಬವ್ವೆಯ ಶಕ್ತಿಗುಂದುತ್ತಾ ನಡೆಯಿತು. ಇದು ಅಧರ್ಮ ತಂಗಿ ಉದ್ದಂಡಿ ಹಾಗೆ ಮಧ್ಯಸ್ಥರ ಮಾತನ್ನು ಮೀರಿ ಕರಿರಾಯನನ್ನು ಕೊಲ್ಲಬಾರದಿತ್ತು ಎಂದು ತಿಬ್ಬಾದೇವಿ ಯೋಚಿಸಿದಳು. ಯುದ್ಧ ಸಾಗಿದಂತೆ ಆಕೆಯ ಸಹೋದರಿಯರು ಒಬ್ಬೊಬ್ಬರಾಗಿ ಮಡಿದರು. ಮೂಗೂರು ಶತ್ರುಗಳ ವಶವಾಯಿತು. ಅಷ್ಟರಲ್ಲಿ ಉದ್ದಂಡಿ ನೇರಿಳೆ ವನದಲ್ಲಿ ಅವಿತಿರುವ ಸುದ್ದಿ ಗೂಢಚಾರದಿಂದ ಬಂದಿತು. ಸೇನೆ ಅತ್ತ ನುಗ್ಗಿತ್ತು. ನೇರಿಳೆಮರದ ಚಿಗುರು ಮಧ್ಯೆ ಅವಿತಿದ್ದ ಉದ್ದಂಡಿ ಇಳಿದು ಯುದ್ಧದಲ್ಲಿ ತೊಡಗಿದಳು. ಇತ್ತ ತಿಬ್ಬಾದೇವಿ ನೆಲಕ್ಕೊರಗಿದಳು. ಕಡೆಗೆ ಉದ್ದಂಡಿಯನ್ನು ಸೆರೆಹಿಡಿದು ಮಲ್ಲಿಗನೂರಿಗೆ ಒಯ್ಯಲಾಯಿತು.

ಮಲ್ಲಿಗನೂರಿನಲ್ಲಿ ತನ್ನ ಮಗನಿಗೂ ಉದ್ದಂಡಿಗೂ ಯುದ್ಧ ನಡೆಯುತ್ತಿರುವ ವಿಷಯ ಧಾರಾಪುರದಲ್ಲಿದ್ದ ಬನವಂತಾದೇವಿಗೆ ತಲುಪಿತು. ಆಕೆ ಕೂಡಲೇ ತನ್ನ ಸೇನೆಯೊಂದಿಗೆ ಮಲ್ಲಿಗನೂರಿಗೆ ಬಂದಳು. ಆದರೆ ಕಾರ್ಯ ಮಿಂಚಿ ಹೋಗಿತ್ತು. ಮಗ ಸತ್ತು ತನ್ನ ವಂಶದ ಬಳ್ಳಿ ಬತ್ತಿಹೋಗಿತ್ತು. ಈ ದುರ್ಬರ ದುಃಖವನ್ನು ತಡೆಯಲಾರದೆ ಬನವಂತೆ ಅಗ್ನಿಪ್ರವೇಶ ಮಾಡಿದಳು. ತನ್ನ ಪ್ರಿಯತಮ ಅಳಿದ ಸುದ್ದಿಯನ್ನು ಕೇಳದ ಪುಂಡರೀಕಾಕಷಿಯೂ ಅಗ್ನಿಪ್ರವೇಶ ಮಾಡಿದಳು. ಯಾವ ಸ್ಥಳದಲ್ಲಿ ಯುದ್ಧ ನಿಲುಗಡೆಯ ಮಾತುಕತೆ ನಡೆದಿದ್ದಿತೊ ಅಲ್ಲಿಗೆ ಉದ್ದಂಡಿಯನ್ನು ತಂದು ಕಂಬವೊಂದಕ್ಕೆ ಕಟ್ಟಿ ಅಗ್ನಿಗೆ ಆಹುತಿ ಕೊಡಲಾಯಿತು. ತಮ್ಮಿಂದಾಗಿ ಕರಿರಾಯನ ಜೀವಕ್ಕೆ ಹಾನಿಯಾಯಿತೆಂದು ಏಳುಮಂದಿ ಮಧ್ಯಸ್ಥಗಾರ ಪಾಳೆಯಗಾರರೂ ಅಗ್ನಿಪ್ರವೇಶಿಸಿದರು. ಇಷ್ಟು ಹೊತ್ತಿಗೆ ದ್ವಾರಾವತಿಯ ಬಲ್ಲಾಳರಾಯ ಅಲ್ಲಿಗೆ ಬಂದ. ಆಗಿದ್ದ ಅನಾಹುತ ಕಂಡು ಕನಿಕರಿಸಿ ಅದು ಮುಂದುವರಿಯದಂತೆ ಏರ್ಪಾಡು ಮಾಡಿದ. ಮುಂದೆ ಈ ದೇಶವೆಲ್ಲಾ ಅವನಿಗೆ ಸೇರಿ ಹೋಯಿತು.

ಕರಿಭಂಟನ ಗಾಳಗದ ಕಥೆಯ ಬಗೆಗೆ ಮೂಗೂರಲ್ಲಿ ದೊರೆತ ಮತ್ತೊಂದು ಪಾಠ ವಿಚಿತ್ರವಾಗಿದೆಯಷ್ಟೇ ಅಲ್ಲ ಕುತೂಹಲಕಾರಿಯಾಗಿದೆ. ಕರಿಭಂಟ ಕೊಯಮತ್ತೂರು ಜಿಲ್ಲೆಯಲ್ಲಿರುವ ಧಾರಾಪುರದ ಅರಸ ಮಾರಭೂಪಾಲನ ಮಗನೆಂದು ಈ ಕಥೆ ಹೇಳುತ್ತದೆ. ಕೊಯಮತ್ತೂರು, ಈರೋಡು, ಸೆಲಂ ಈ ಭಾಗಗಳೆಲ್ಲ ಅಪ್ಪಟ ಕನ್ನಡ ಪ್ರದೇಶಗಳಾಗಿದ್ದುವೆಂಬುದು ಚರಿತ್ರೆಯಲ್ಲಿ ಉಲ್ಲೇಖವಾಗಿದೆ. ಮೈಸೂರು ಅರಸನಾದ ಚಿಕ್ಕದೇವರಾಯ ಗೆದ್ದ ಸ್ಥಳಗಳಲ್ಲಿ ಈ ಧಾರಾಪುರವೂ ಒಂದು. ಈ ಹಿಂದೆ ಕರಿಭಂಟನ ಕಾಳಗ ಚಾರಿತ್ರಿಕ ಘಟನೆಯೇ? ಎಂಬ ನನ್ನ ಲೇಖನದಲ್ಲಿ ದುರವನಪುರವೆಂದು ಹೆಸರಿಸುವ ತಲಕಾಡೇ ಧಾರಾಪುರವೆಂದು ಹೇಳಿದ್ದೇನೆ. ಆದರೆ ಈಗ ಕೊಯಮತ್ತೂರು ಜಿಲ್ಲೆಯ ಧಾರಾಪುರ ಎಂಬ ಕಥಾಪಾಠವೊಂದು ದೊರೆತಿದೆ. ಆದರೆ ಈ ಬಗೆಗೆ ಚಾರಿತ್ರಿಕ ಆಧಾರಗಳು ದೊರೆಯಬೇಕಾಗಿದೆ. ಗಂಗರ ಅಧೀನಕ್ಕೆ ಮೇಲೆ ಹೇಳಿದ ಸ್ಥಳಗಳು ಸೇರಿದ್ದುವಾದ್ದರಿಂದ ಕರಿರಾರು ಆ ಧಾರಾಪುರದವನಿರಬಹುದೆ? ಎಂಬ ವಾದವನ್ನು ತಳ್ಳಿ ಹಾಕುವಂತಿಲ್ಲ.

ಮೂಗೂರು ಮತ್ತು ಅದರ ಸುತ್ತಮುತ್ತ ದೊರೆತಿರುವ ವೀರಗಲ್ಲುಗಳು ಇಂಥದೊಂದು ಕಾಳಗ ನಡೆದಿರುವ ಬಗ್ಗೆ ಸ್ಪಷ್ಟನೆಯನ್ನು ನೀಡುತ್ತವೆ. ನನ್ನ ಕ್ಷೇತ್ರ ಕಾರ್ಯದಲ್ಲಿ ಗುರುತಿಸಿದ ವೀರಗಲ್ಲುಗಳನೇಕರಲ್ಲಿ ಸ್ತ್ರೀಯರು ಯುದ್ಧ ಮಾಡುತ್ತಿರುವ ದೃಶ್ಯ ಕೆತ್ತಲಾಗಿದೆ. ಕುದುರೆಯ ಮೇಲೆ ಸ್ತ್ರೀಯೊಬ್ಬಳು ಕುರಿತು ಕತ್ತಿ ಹಿರಿದು ಶತ್ರುಗಳ ಮೇಲೆ ನುಗ್ಗುತ್ತಿರುವ ದೃಶ್ಯ ಅನೇಕ ವೀರಗಲ್ಲುಗಳಲ್ಲಿ ಕಂಡುಬರುತ್ತದೆ. ಈಕೆಯೊ ತಿಬ್ಬಾದೇವಿ. ಈ ವೀರಗಲ್ಲುಗಳಲ್ಲಿ ಕಂಡುಬರುವ ಮತ್ತೊಂದು ವಿಶೇಷವೆಂದರೆ ಈಗಲೂ ಯಕ್ಷಗಾನ ಕರಿಭಂಟನ ಕಾಳಗದಲ್ಲಿ ಉದ್ದಂಡಿಗೆ ಹಾಕುವ ಕಿರೀಟ ಮತ್ತು ಆಕೆ ಹಿಡಿಯುವ ಆಯುಧ ಹೋಲುವ ಆಯುಧ ಹಿಡಿದ ಸ್ತ್ರೀಯರ ಚಿತ್ರ ಕೆತ್ತಿರುವುದು. ಇವುಗಳಲ್ಲಿ ಪ್ರಮುಖವಾದುದೊಂದನ್ನು ರಾಕಾಸಮ್ಮ (ಉದ್ದಂಡಿ) ಎಂದು ಕರೆದು ಪೂಜಿಸಲಾಗುತ್ತಿದೆ. ಇಂತಹ ನೂರಾರು ವೀರಗಲ್ಲುಗಳು ಮೂಗೂರಿನಲ್ಲಿ ದೊರೆಯುತ್ತವೆ. ಸುಂದರವಾದ ಅನೇಕ ವೀರಗಲ್ಲುಗಳನ್ನು ಯಾರೋ ಲಾರಿಜೀಪುಗಳನ್ನು ತಂದು ಸಾಗಿಸಿಕೊಂಡು ಹೋದರೆಂದೂ ಇಲ್ಲಿನ ಜನ ಹೇಳುತ್ತಾರೆ. ಮೂಗೂರಿನ ಸುತ್ತಮುತ್ತ ಅನೇಕ ಹಳ್ಳಿಗಳಲ್ಲಿ ಇಂತಹ ಸ್ತ್ರೀಯರು ಯುದ್ಧ ಮಾಡುತ್ತಿರುವ ಚಿತ್ರಗಳುಳ್ಳ ವೀರಗಲ್ಲುಗಳು ದೊರೆಯುತ್ತವೆ. ಈ ಕಾರಣದಿಂದ ಕರಿಭಂಟನ ಕಾಳಗದ ಕಥೆ ಒಂದು ಚಾರಿತ್ರಿಕ ದುರಂತ ಪ್ರಣಯ ಪ್ರಸಂಗ ಎಂಬುದಕ್ಕೆ ಹೆಚ್ಚು ಒತ್ತು ದೊರೆಯುತ್ತದೆ.

ಕರಿಭಂಟನ ಕಾಳಗ ಗಂಗದೊರೆ ರಕ್ಕಸಗಂಗನ ನಂತರ ಮತ್ತು ಹೊಯ್ಸಳ ವಿಷ್ಣುವರ್ಧನ ಚೋಳರಿಂದ ಗಂಗರಾಜ್ಯವನ್ನು ಗೆದ್ದುಕೊಂಡ ಮಧ್ಯಕಾಲದಲ್ಲಿ ಗಂಗವಂಶದ ದಾಯಾದಿಗಳ ಮಧ್ಯೆ ಉಂಟಾದ ಒಂದು ವಿರಸ ಘಟನೆ ಇರಬೇಕೆಂದು ಹೇಳಿದ್ದೇನೆ. ಈ ಹಿನ್ನೆಲೆಯಲ್ಲಿ ತಿಬ್ಬಾದೇವಿಯ ಪ್ರಾಚೀನತೆಯನ್ನು ಪರಿಶೀಲಿಸಬೇಕಾಗುತ್ತದೆ. ಮೂಗೂರಿನಲ್ಲಿ ಹತ್ತನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗೆ ಹರಡಿಕೊಳ್ಳುವ ೨೬ ಶಾಸನಗಳನ್ನು ಗುರುತಿಸಿ ಪ್ರಕಟಿಸಲಾಗಿದೆ.* ಇವುಗಳಲ್ಲಿ ಮೊಟ್ಟಮೊದಲಿಗೆ ೧೨೬೧ರ ಶಾಸನವೊಂದರಲ್ಲಿ “ಮೂಗೂರ ಶ್ರೀ ತಿಬ್ಬಾದೇವಿಗೆ ಹೆಗ್ಗಡೆ ನಾಚಣ್ಣನ ಮಗ ಸಂಕಣನು ಕೊಟ್ಟ” ದಾನದ ವಿವರವಿದೆ. ಇದಕ್ಕಿಂತ ಹಿಂದಿನ ಅಥವಾ ಗಂಗರ ಕಾಲದ ಯಾವ ಶಾಸನಗಳಲ್ಲಿಯೂ ತಿಬ್ಬಾದೇವಿಯ ಉಲ್ಲೇಖ ಬರುವುದಿಲ್ಲ. ಈ ಕಾರಣದಿಂದಾಗಿ ಗಂಗವಂಶದ ರಾಜಕುಮಾರಿಯರಾಗಿದ್ದ ಇವರು ಯುದ್ಧವೊಂದರಲ್ಲಿ ಹೋರಾಡಿ ಸತ್ತು ಮುಂದೆ ಹದಿಮೂರನೆಯ ಶತಮಾನದ ಹೊತ್ತಿಗೆ ದೇವತೆಗಳಾಗಿ ಪೂಜ್ಯರಾಗಿರುವ ಸಾಧ್ಯತೆ ಕಂಡುಬರುತ್ತದೆ. ಇದೇ ಕಾಲದ ಶಾಸನಗಳಲ್ಲಿ ದುಬ್ಬಮ್ಮನ ಹೆಸರಿನ ಉಲ್ಲೇಖವೂ ಬರುತ್ತದೆ.

ಸುಮಾರು ೧೨೭೭ರ ಶಾಸನವೊಂದರಲ್ಲಿ “ಮಾದಿಗವುಡನ ಮಗ ತಿಬ್ಬಯ್ಯ” ಎಂಬ ಉಲ್ಲೇಖ ದೊರೆಯುತ್ತದೆ. ಮುಂದೆ ಅನೇಕರು ಈ ದೇವತೆಗೆ ದತ್ತಿಬಿಟ್ಟ ಉಲ್ಲೇಖಗಳು ದೊರೆಯುತ್ತವೆ. ಇಂದಿಗೂ ತಿಬ್ಬಾದೇವಿಯ ಭಕ್ತರು ಗಂಗಡಿಕಾರ ಒಕ್ಕಲಿಗರು. ಈ ಕಾರಣದಿಂದಾಗಿ ತಿಬ್ಬಾದೇವಿ ಗಂಗರಾಜಕುಮಾರಿಯರಲ್ಲೊಬ್ಬಳಾಗಿದ್ದು ಕರಿಭಂಟನ ಕಾಳಗಕ್ಕೆ ಸಂಬಂಧಿಸಿದ ಯುದ್ಧದಲ್ಲಿ ಸತ್ತು ಅನಂತರ ಜನರಿಗೆ ದೇವತೆಯಾಗಿರುವಂತೆ ಕಾಣುತ್ತದೆ.

ತಿಬ್ಬಾದೇವಿಯ ಪ್ರಸಂಗ ಕರ್ನಾಟಕದ ಗ್ರಾಮದೇವತೆಗಳ ಉಗಮದ ಬಗೆಗೆ ಬೆಳಕು ಚೆಲ್ಲುತ್ತದೆ. ಕರ್ನಾಟಕದ ಒಕ್ಕಲಿಗರು ಪೂಜಿಸುವ ದೇವತೆಗಳ ಹೆಸರುಗಳೆಲ್ಲಾ ಇಲ್ಲಿ ಬರುತ್ತವೆ. ಉದಾಹರಣೆಗೆ ಕೆಂಪಮ್ಮ, ಲಕ್ಷ್ಮೀದೇವಿಯರು. ಕೆಂಪಮ್ಮ ಯಲಹಂಕನಾಡು ಪ್ರಭುಗಳ ಮನೆದೇವತೆ. ಲಕ್ಷ್ಮಿದೇವಿ ಒಂದನೆಯ ಕೆಂಪೇಗೌಡನ ಸೊಸೆಯೆಂದೂ ಬೆಂಗಳೂರು ಕೋಟೆಯ ಹೆಬ್ಬಾಗಿಲೊಂದು ಬಿದ್ದು ಹೋಗುತ್ತಿದ್ದು ಬಸುರಿ ಹೆಂಗಸನ್ನು ಬಲಿಕೊಟ್ಟರೆ ನಿಲ್ಲುತ್ತದೆಂದು ತಿಳಿಯಿತೆಂದೂ ಆಗ ಹಿರಿಯ ಕೆಂಪೇಗೌಡನ ಸೊಸೆ ಲಕ್ಷ್ಮಮ್ಮ ತಾನು ಹೋಗಿ ಬಲಿಯಾದಳೆಂದು ಕಥೆ. ಆದರೆ ಈ ಪ್ರಸಂಗ ಯಲಹಂಕನಾಡಿನ ಚರಿತ್ರೆಯಲ್ಲಿ ದಾಖಲೆಯಾಗಿ ದೊರೆಯುವುದಿಲ್ಲ. ಶಾಸನೊಕ್ತವೂ ಆಗಿಲ್ಲ. ಕೆಂಪೇಗೌಡನ ಹಿರಿಯ ಮಗಳೆಂದು ಹೇಳಲಾದ ದೊಡ್ಡಮ್ಮ ಅಥವಾ ಕೆಂಪಮ್ಮನ ಕಥೆ ಸಹ ಗಂಗರ ಕಾಲಕ್ಕೆ ಹಿಂದೆ ಹೋಗುತ್ತದೆ. ಅಷ್ಟೇ ಅಲ್ಲ ದೊಡ್ಡಮ್ಮನ ಕಥೆಯಂತಹ ಒಂದು ಕಥೆಯೂ ಕರಿಭಂಟನ ಕಾಳಗದ ಬಗೆಗೆ ಇದೆ. ಚೋಳ ನಾಡಿನ ಕೀಳುಜಾತಿಯ ಪಾಳೆಯಗಾರನ ಮಗನೊಬ್ಬ ತೊಣ್ಣೂರು ರಾಜಕುಮಾರಿಯನ್ನು ಮದುವೆಯಾಗಲು ಬಯಸಿದ. ಅದರಿಂದಾಗಿ ದೊಡ್ಡ ಯುದ್ಧ ನಡೆಯಿತು. ಆದರೆ ಇದು ಕರಿಭಂಟನ ಕಾಳಗದ ಬಗೆಗೆ ನಂಬಲರ್ಹವಾದ ಕಥೆಯಲ್ಲ. ಏಕೆಂದರೆ ಒಂದು ವೇಳೆ ಕರಿರಾಯ ಹೊರಗಿನವನಾಗಿದ್ದಲ್ಲಿ ನಾಟಕಕಾರರು ಅವನನ್ನು ನಾಯಕ ಪಾತ್ರದಲ್ಲಿ ಇಟ್ಟು ಚಿತ್ರಿಸುತ್ತಿರಲಿಲ್ಲ. ಆದುದರಿಂದ ಕರಿಭಂಟನ ಕಾಳಗದ ಘಟನೆಗೆ ಸಂಬಂಧಿಸಿದಂತೆ ಬರುವ ಎಲ್ಲಾ ಪಾತ್ರಗಳು, ಸ್ಥಳಗಳು ಕನ್ನಡನಾಡಿನವೆಂಬುದನ್ನು ಮರೆಯಬಾರದು. ಗಂಗರ ಕಾಲದ ಕೆಂಪಮ್ಮ ಲಕ್ಷ್ಮಮ್ಮರೇ ಕೆಂಪೇಗೌಡನ ವಂಶಸ್ಥರಿಗೂ ದೇವತೆಗಳಾಗಿರಲು ಸಾಧ್ಯ. ಇನ್ನು ರಾಕಾಸಮ್ಮ, ಉದ್ದಂಡಮ್ಮ ದೈತ್ಯಮ್ಮ, ಮಾಯಮ್ಮ, ಲಕ್ಕಾದೇವಿ, ಲಕ್ಕವ್ವನಾಗಿದ್ದಾಳೆ. ಕೆಂಪಮ್ಮ ಅನೇಕ ಕಡೆ ದೊಡ್ಡಮ್ಮನಾಗಿದ್ದಾಳೆ. ಹಿರಿಯಮ್ಮ, ಹೊನ್ನಮ್ಮ, ಚಾಮುಂಡಿ – ಹೀಗೆ ಯಾವುದೇ ಗ್ರಾಮದೇವತೆಯ ಮೂಲ ತೆಗೆದುಕೊಂಡರೂ ಈ ಏಳು ಜನ ಸಹೋದರಿಯರ ಸುತ್ತಲೂ ಬಂದು ಸೇರುತ್ತದೆ. ಗಂಗರ ವಂಶದಲ್ಲಿ ನಡೆದ ದುರ್ಘಟನೆಯಲ್ಲಿ ಆತ್ಮರ್ಪಣೆ ಮಾಡಿದ ಈ ಸ್ತ್ರೀಯರು ಮುಂದೆ ಈ ಭಾಗದ ಜನರಿಗೆ ವಿಶೇಷವಾಗಿ ಒಕ್ಕಲಿಗರಿಗೆ ದೇವತೆಗಳಾಗಿರುವ ಸಾಧ್ಯತೆ ಕಂಡುಬರುತ್ತದೆ.

ತಿಬ್ಬಾದೇವಿಯ ದೇವಾಲಯದ ಬಗ್ಗೆ ಸ್ಥಳಪುರಾಣ ಹೀಗದೆ. “ಮೂಗೂರಿಗೆ ಬಡ್ನ ಬಾಬಾಖಾನ್‌ ಎಂಬುವನು ಪಾಳೆಯಗಾರನಾಗಿದ್ದ. ಅದೇ ಕಾಲದಲ್ಲಿ ತಿಬ್ಬಾದೇವಿ ತನ್ನ ಏಳು ಜನ ಸಹೋದರಿಯರೊಂದಿಗೆ ಹೊಸಹಳ್ಳಿಯ ನೇರಿಳೆಬನದಲ್ಲಿ ನೆಲೆಸಿದ್ದಳು. ಪಾಳೇಗಾರನು ಹೊಸಹಳ್ಳಿಯ ಮೇಲೆ ದಂಡೆತ್ತಿ ಹೋದನು. ಆಗ ಅವನು ನೇರಿಳೆವನದಲ್ಲಿ ಬೀಡುಬಿಟ್ಟನು. ಸೈನಿಕರಿಗೆ ಅಡುಗೆ ಮಾಡಲು ಒಲೆ ಹೂಡಬೇಕಾಗಿತ್ತು. ಅದಕ್ಕಾಗಿ ಸೈನಿಕರು ಕಲ್ಲುಗಳಿಗಾಗಿ ಹುಡುಕಾಡಿದರು. ಆದರೆ ಅಲ್ಲೆಲ್ಲಿಯೂ ಒಂದು ಕಲ್ಲೂ ಸಿಗಲಿಲ್ಲ. ಕಡೆಗೆ ಅವರು ನೇರಿಳೆಮರದ ಅಡಿಯಲ್ಲಿ ಶಿಲಾರೂಪದಲ್ಲಿ ನೆಲಸಿದ್ದ ಈ ಏಳು ಮಂದಿ ಸಹೋದರಿಯರನ್ನು ಕಲ್ಲೆಂದು ತಿಳಿದು ಕೀಳಲು ಕೈಹಾಕಿದವರು ಹಾಗೆಯೇ ಮೂಕರಾಗಿ ನಿಶ್ಚಲರಾಗಿ ನಿಂತುಬಿಟ್ಟರು. ಕುದುರೆಗಳಿಗೆ ನೀರು ಕುಡಿಸಲು ಪಕ್ಕದ ಕೆರೆಗೆ ಇಳಿದವರು ಉಸುಬಿನಲ್ಲಿ ಹೂಲಿ ನಿಂತರು. ಪಾಳೆಯಗಾರನಿಗೆ ಏನೊ ಅಚಾತುರ್ಯ, ಅನಾಚಾರವಾಗಿದೆ. ಯಾವುದೊ ದೇವತೆ ಕುಪಿತಳಾಗಿದ್ದಾಳೆ ಅನ್ನಿಸಿತು. ಅವನು ಆ ದೇವತೆಯನ್ನು ಕುರಿತು ಭಕ್ತಿಯಿಂದ ಪ್ರಾರ್ಥಿಸಿದ. ಈ ರಾತ್ರಿ ತಿಬ್ಬಾದೇವಿ ಆತನ ಕನಸಿನಲ್ಲಿ ಕಾಣಸಿಕೊಂಡು ಅವನ ಸೈನಿಕರು ಮಾಡಿದ ಅಪರಾಚರದ ಬಗ್ಗೆ ಹೇಳಿದಳು. ಆಗ ಅವನು ಒಣಗಿದ ಜೋಳದ ಕಡ್ಡಿ ಚಿಗುರಿದರೆ, ತನ್ನ ಸೇವೆಯ ಕುದುರೆಗಳನ್ನು ಕಟ್ಟಲು ಹುಯ್ದಿರುವ ಗೂಟಗಳೆಲ್ಲ ಚುಗುರಿದರೆ ತಾನು ಆಕೆ ಶಕ್ತಿವಂತೆಯೆಂದು ನಂಬುವುದಾಗಿ ಹೇಳಿದನು. ಬೆಳಿಗ್ಗೆ ಎದ್ದು ನೋಡಿದಾಗ ಒಣಗಿದ ಜೋಳದ ಕಡ್ಡಿ ಮತ್ತು ಕುದುರೆ ಕಟ್ಟಲು ಹೂಯ್ದಿದ್ದ ಗೂಟಗಳು ಚಿಗುರಿದ್ದವು. ಆಗ ಬಾಬಾಖಾನನು ತಿಬ್ಬಾದೇವಿಯ ಭಕ್ತನಾಗಿ ಮೂಗೂರಿನಲ್ಲಿ ತಿಬ್ಬಾದೇವಿಯ ದೇವಾಲಯವನ್ನು ಕಟ್ಟಿಸಿದನಂತೆ. ಅವನ ಭಕ್ತಿ ಸೂಚಕವಾಗಿ ತಿಬ್ಬಾದೇವಿಯ ಜಾತ್ರೆಯ ಕಾಲದ ಉತ್ಸವಗಳಲ್ಲಿ ಮೊದಲನೆಯದು ಅಪ್ರದಕ್ಷಿಣವಾಗಿ ಅಂದರೆ ಎಡಮುಖವಾಗಿ ದೇವಾಲಯದ ಸುತ್ತ ಪ್ರದಕ್ಷಿಣೆ ಬರುವ ಸಂಪ್ರದಾಯ ಇಂದಿಗೂ ಜಾರಿಯಲ್ಲಿದೆ.

ತಿಬ್ಬಾದೇವಿಯ ದೇವಾಲಯ ಗಂಗರ ಕಾಲದಲ್ಲಿ ನಿರ್ಮಾಣಗೊಂಡುದು. ಈ ಹಿಂದೆಯೇ ಹೇಳಿದಂತೆ ರಕ್ಕಸಗಂಗನ ನಂತರ ಉಂಟಾದ ಅಂತರ್ಯುದ್ಧದಲ್ಲಿ ಮಡಿದ ರಾಜಕುಮಾರಿ ತಿಬ್ಬವ್ವೆಯ ಸಮಾಧಿಯ ಮೇಲೆ ಕಟ್ಟಿದ ಪುಟ್ಟ ಗುಡಿಯೊಂದು ಮುಂದೆ ಭಕ್ತರು ಹೆಚ್ಚಿದಂತೆ ವಿಸ್ತಾರಗೊಂಡಿದೆ. ಸ್ಥಳಗತೆ ಹೇಳುವ ಬಾಬಾಖಾನ್‌ ಈ ದೇವಾಲಯ ಕಟ್ಟಿಸಿದನೆಂಬ ಹೇಳಿಕೆ ಸರಿಯಲ್ಲ. ಕ್ರಿ.ಶ. ೧೨೬೧ರ ಶಾಸನದಲ್ಲಿ “ಸ್ವಸ್ತಿಶ್ರೀ ವೀರನರಸಿಂಹದೇವರು ಪ್ರಿಥಿವಿ ರಾಜ್ಯಂಗೆಯುತಮಿರಲು ಮೇಗೂರು ಶ್ರೀ ತಿಬ್ಬವ್ವೆದೇವಿಗೆ ನಂದಾದೀವಿಗೆ ಯಂಣಿಗೆ ಪರಿಷಂಪ್ರತಿಯಾಗಿಪ್ಪ ೨”ನ್ನು ಸುಂಕದ ಅಧಿಕಾರಿ ಹೆಗ್ಗಡೆ ನಾಚಣ್ಣನ ಮಗ ಸಂಕಣ್ಣನು ಧಾರಾಪುರ್ಬಕಂ ಮಾಡಿದ” ಪ್ರಸಂಗ ಉಕ್ತವಾಗಿದೆ. ಆದುದರಿಂದ ತಿಬ್ಬಾದೇವಿಯ ದೇವಾಲಯ ಹದಿಮೂರನೆಯ ಶತಮಾನಕ್ಕೂ ಹಿಂದೆ ಇದ್ದಿತೆಂಬುದು ಸ್ಪಷ್ಟವಾಗುತ್ತದೆ. ಆ ಕಾಲದಲ್ಲಿ ಮೂಗೂರನ್ನು ಬಾಬಾಖಾನನೆಂಬ ಮುಸಲ್ಮಾನ ಆಳಿದನೆಂಬುದು ಸರಿಯಲ್ಲ. ಅಂತಹ ಯಾವ ಚಾರಿತ್ರಿಕ ದಾಖಲೆಗಳೂ ದೊರೆಯುವುದಿಲ್ಲ.

ಹೈದರಾಲಿಯ ನಂತರ ಟಿಪ್ಪು ಸುಲ್ತಾನ ಅಧಿಕಾರಕ್ಕೆ ಬಂದಿನಷ್ಟೆ. ಅವನು ಅಧಿಕಾರಕ್ಕೆ ಬಂದ ಆರಂಭದಲ್ಲಿ ಮೈಸೂರು ದೇಶದ ಹಿಂದುಗಳನ್ನಲ್ಲಾ ಮುಸಲ್ಮಾನರನ್ನಾಗಿ ಪರಿವರ್ತಿಸಲು ಯೋಚಿಸಿದ್ದನಂತೆ. ಈ ವಿಷಯ ತಿಳಿದ ಹಿಂದೂಗಳು ಟಿಪ್ಪುವಿನ ವಿರುದ್ಧ ದಂಗೆ ಏಳಲು ಸಕಲ ಏರ್ಪಾಡುಗಳನ್ನು ಮಾಡಿಕೊಂಡಿದ್ದರಂತೆ. ಈ ಬಗ್ಗೆ ಕಥೆಯೊಂದು ಹಳೇ ಮೈಸೂರು ಭಾಗದಲ್ಲಿ ಪ್ರಚಲಿತವಿದೆ. ಅಂತಿಮವಾಗಿ ಜನಶಕ್ತಿಗೆ ಮಣಿದ ಟಿಪ್ಪು ಒಂದು ದೇವಾಲಯಗಳಿಗೆ ದತ್ತಿ, ಧರ್ಮ ಬಿಡಲು ಆರಂಭಿಸಿದ. ಈ ಹಿನ್ನೆಲೆಯ ಘಟನೆಯೊಂದನ್ನು ನನ್ನ “ಸೀತೆ ದಂಡು” ಲೇಖನದಲ್ಲಿ ವಿವೇಚಿಸಿದ್ದೇನೆ. ಟಿಪ್ಪುವಿನ ಆಡಳಿತ ಕಾಲದಲ್ಲಿ ಪ್ರಮುಖವಾದ ಊರುಗಳಿಗೆಲ್ಲ ಸಾಮಾನ್ಯವಾಗಿ ಮುಸಲ್ಮಾನ ಅಧಿಕಾರಿಗಳನ್ನೇ ನೇಮಕ ಮಾಡುತ್ತಿದ್ದ. ಮೂಗೂರಿನಲ್ಲಿ ಸಹ ಅಂತಹ ಪಾಳೆಯಗಾರನೊಬ್ಬನಿದ್ದ. ಪ್ರಾಯಶಃ ಸ್ಥಳಪುರಾಣ ಹೇಳುವ ಬಾಬಾಖಾನ್‌ ಈತ ಆಗಿರಬೇಕು. ಈತನನ್ನು ಬಿಟ್ಟರೆ ಮೂಗೂರಲ್ಲಿ ಯಾವ ಮುಸಲ್ಮಾನನೂ ಆಳಿದ ಉಲ್ಲೇಖವಿಲ್ಲ. ಟಿಪ್ಪುವಿನ ದತ್ತಿಗಾಗಿ ದೇವಿಯ ಎಡಮುಖ ಪ್ರದಕ್ಷಿಣೆ ಆರಂಭವಾಗಿರಬೇಕು. ಅಷ್ಟೇ ಅಲ್ಲ ದೇವಾಲಯ ವಿಸ್ತರಿಸಲೂ ಸಹ ಟಿಪ್ಪು ಹಣ ನೀಡಿರಬೇಕು.

ತಿಬ್ಬಾದೇವಿ ಮೊದಲು ನೆಲೆಸಿದ್ದಳೆಂದು ಹೇಳುವ ನೇರಿಲತೋಪಿನ ಬಳಿ ಹೊಸಳ್ಳಿ ಎಂಬ ಊರಿದೆ. ಈ ಊರಿನ ಗ್ರಾಮದೇವತೆಯ ಹೆಸರು “ಮೂಗೂರಮ್ಮ” ಎಂದು. ಈಕೆ ಇಲ್ಲಿಂದ ಹೋಗಿ ಮೂಗೂರಿನಲ್ಲಿ ನೆಲೆಸಿದಳೆಂದು ಜನ ಹೇಳುತ್ತಾರೆ. ಈ ಊರಿನ ನೇರಿಳೆ ತೋಪಿನಲ್ಲಿ ಯುದ್ಧ ನಡೆದಿರುವ ಸಾಧ್ಯತೆ ಕಂಡುಬರುತ್ತದೆ. ಏಕೆಂದರೆ ಅಲ್ಲಿರುವ ವೀರಗಲ್ಲುಗಳು ಈ ಹಳ್ಳಿಯ ಹೆಸರು ಹೊಸಳ್ಳಿ ಅರ್ಥಾತ್‌ ಹೊಸಹಳ್ಳಿ ಇತ್ತೀಚೆಗೆ ನಿರ್ಮಾಣಗೊಂಡುದು. ಹೊಸಹಳ್ಳಿಯ ಉಲ್ಲೇಖ ಶಾಸನಗಳಲ್ಲಿ ಬರುವುದಿಲ್ಲ. ಮೂಗೂರು ಸಹ ಮೊದಲಿಗೆ ಈ ಭಾಗದ ರಾಜಧಾನಿಯಾಗಿದ್ದು ಅನಂತರ ಯುದ್ಧದಲ್ಲಿ ನಾಶವಾಗಿ ಮತ್ತೆ ಪುನರುತ್ಥಾನಗೊಂಡಂತೆ ಕಾಣುತ್ತದೆ. ಕ್ರಿ.ಶ. ೧೨೭೭ರ ಶಾಸನವೊಂದು “ಪರನಾರೀ ಸಹೋದರರಂಗಳೆಂಬ ಬಿರುದರು ಆ ಮೂಗೂರು ಮಹಾ ಪ್ರಭುಗಳು ತಳಗೆಯನಾಡನಾಳುವ ನಾಡಮುಖಿಗಳು ರಣಪಟುವಗೌಡನ ಮಗ ದಾಳಿಗವುಡ ಸಳವಗವುಡನ ಮಗ ಮಾರಗವುಡ ಕಾಳಿಗವುಡನ ಮಗ ಮಾರಗೌಡ ಪರವತರಾಯನ ನಾಗಯ ಕೇತಗವುಡನ ಮಗ ಮರಿಚಟ್ಟಯ ನಳಿಯನ ಮಮಗ ಮಾರಗುವಡ ಮಾದಿಗವುಡನಮಗ ತಿಬ್ಬಯ” ಮುಂತಾದವರು. “ತಂಮೂರ ಸಂತೆಯ ಮಾಡ್ಸಿಪಟ್ಟಣ ಮಾಡಿಸುವಲ್ಲಿ ಶ್ರೀಪಟ್ಟಣಕ್ಕೆ ಕೊಟ್ಟ ಶಾಸನ ಕ್ರಮ”ದ ಉಲ್ಲೇಖವಿದೆ. ಈಗ ಮೋಗೂರು ಹೋಬಳಿ ಕೇಂದ್ರವಾಗಿದೆಯಾದರೂ ಅಲ್ಲಿ ಯಾವ ಸಂತೆಯೂ ನಡೆಯುವುದಿಲ್ಲ.

 

[1] Early gangas of Talkad Dr. S. Srikantasastri p. 45

* ಇಲ್ಲಿ ಉದ್ಧರಿಸಿರುವ ಎಲ್ಲಾ ಶಾಸನ ಭಾಗಗಳನ್ನು ಎಫಿಗ್ರಾಫಿಕಾ ಕರ್ನಾಟಕ ಸಂಪುಟ ೫ ೧೯೭೧ರಿಂದ ಪಡೆಯಲಾಗಿದೆ.