ಶೈವ ಮತ್ತು ವೀರಶೈವ ಒಂದೇ ಮೂಲದಿಂದ ಬಂದವಾದುದರಿಂದ ಅವುಗಳು ಅನುಯಾಯಿಗಳೇ ಮಧ್ಯೆ ಅಧಿಕಾರ ಮತ್ತು ಆಸ್ತಿಪಾಸ್ತಿಗಳಿಗಾಗಿ ಹೋರಾಟ ನಡೆದು ರಕ್ತಪಾತವಾದುದು ಕಂಡುಬರುತ್ತದೆ. ಬಿಜ್ಜಳ ಬಸವರ ಸಮ್ಮುಖದಲ್ಲಿಯೇ ಇಂತಹ ಘರ್ಷಣೆ ನಡೆದಿವೆ. ಮಠಮಾನ್ಯಗಳು ಮತ್ತು ಅವುಗಳ ಅಧಿಕಾರ ಆಸ್ತಿಪಾಸ್ತಿಯ ಬಗೆಗೆ ಶೈವದ ಜೋಗಿಗಳು ಮತ್ತು ವೀರಶೈವದ ಜನಾಂಗದ ಮಧ್ಯೆ ಕದನಗಳೇ ನಡೆದ ಉಲ್ಲೇಖಗಳು ಜೈನ, ವೈಧಿಕ, ವೀರಶೈವ ಮತ್ತು ಜನಪದ ಸಾಹಿತ್ಯಗಳಲ್ಲಿ ವಿಫುಲವಾಗಿ ದೊರೆಯುತ್ತವೆ. ಶೈವರು ಪೂಜಿಸುತ್ತಿದ್ದ ಶಿವನ ರೂಪಗಳನ್ನೇ ವೀರಶೈವರು ಲೇವಡಿ ಮಾಡಿರುವುದಕ್ಕೆ ಅನೇಕ ಉದಾಹರಣೆಗಳು ದೊರೆಯುತ್ತವೆ. ಈ ಘರ್ಷಣೆಗಳು ಹನ್ನೆರಡನೆ ಶತಮಾನದಿಂದಹ ಹದಿನಾರನೆಯ ಶತಮಾನದವರೆಗೂ ನಡೆದಿವೆ. ಮೊದಲಿಗೆ ಶೈವನಾಥ ಪಂಥದ ಕೇಂದ್ರವಾಗಿದ್ದ ಶ್ರೀಶೈಲ ಕ್ಷೇತ್ರದ ಅಧಿಕಾರ ಪಡೆಯುವ ಬಗ್ಗೆ ಜಂಗಮರು ಮತ್ತು ಜೋಗಿಗಳ ನಡುವೆ ನಡೆದ ಕದನವೊಂದರ ಚಿತ್ರವನ್ನಿಲ್ಲಿ ನೋಡಬಹುದು.

ಬಂದು ಸಾರಂಗ ಸಿದ್ದೇಶ್ವರಲಿಂಗವ
ಕಂಡು ದರುಶನವನೆಮಾಡಿ
ಅಂದು ಮಹತ್ತು ಬಿಡಾರವಾಮಾಡಿರೆ
ಬಂದರು ಜೋಗಿಗಳೆಲ್ಲ.
ಇತ್ತ ಶ್ರೀಗಿರಿ ತಮ್ಮದೆಂದು ಜೋಗಿಗಳೆಲ್ಲ
ಸುತ್ತಬಳಿಸಿ ಸಂಭ್ರಮದಿ
ಮುತ್ತಿಗೆ ಗಿಳಿವಂತೆ ಸಾರಂಗಮಂಟಪ
ದೊತ್ತೀಲಿ ಪಾಳೆಯವಿಳಿಯೆ.
ಹನ್ನೆರಡು ಸಾವಿರ ಜೋಗಿಗಳೆಲ್ಲ
ಮನ್ನೆಯವಳಿತದಿ ಬಂದು
ಇನ್ನೆಂದೂ ಸಾರಂಗಮಠ ತಮ್ಮದೆಂದುರೆ
ಸನ್ನದ್ಧರಾಗಿ ನುಡಿದರು.
ಸಾರಂಗ ಮಠ ತಮ್ಮದೆನಲು
ವೀರಕುಮಾರ ಜಂಗಮರೆಲ್ಲ ಕೂಡಿ
ಭಾರಿಗದ್ಧತಿವ ಮಾಡಿ
ಸಾರಿ ವಿಚಾರಿಸಿ ಕೇಳೆ.
ಸಾರಂಗ ಸಿದ್ಧಿ ಶ್ರೀಗಿರಿಯೊಳುತಾನಲ್ಲಿ
ಓರಂತೆ ತಪವಿರೆ ಮೆಚ್ಚಿ
ಮಾರ ಹರಸು ಮೈಲಾರಲಿಂಗವ ಕೊಡಲಾಗಿ
ಸೇರಿತು ಯೆಮಗೆಂದರವರು.
ಮತ್ಪೇಂದ್ರನು ಗೋರಕ್ಷನು ತಾವಿಲ್ಲಿ
ಯಚ್ಚರಿ ಪುಗೆ ತಪವಿರಲು
ನಿಶ್ಚಯದಿಂದಲೆ ಮಲ್ಲಿಕಾರ್ಜುನ ತಾನೆ
ಮೆಚ್ಚಿ ಅವರಿಗಿತ್ತ ಮಠವ.
ಅಂದು ನಾಗಾರ್ಜುನ ತಪವ ಮಾಡಲು ಮೆಚ್ಚಿ
ಇಂದುಧರನು ಅವರ್ಗಿತ್ತ
ಸಂದೇಹವೇಕಿನ್ನು ಸಾರಂಗ ಮಠ ತಮ್ಮ
ದೆಂದು ನುಡಿಯೆ ಜೋಗಿಗಳು.
ಆದಿಭೈರವನಾದಿ ಸಿದ್ಧನುಯೆಂದು
ಓದುತಿಹರು ಶಾಸ್ತ್ರಗಳ
ಮಾಧವ ಹರನಿಗೆ ಹುಟ್ಟಿದ ಭೈರವನ
ನಾದಿ ಭೈರವ ಹೇಗಾದ?
ಟಗರು ಟಗರು ತಾಗಿದಂದದಿ ಹೊಯ್ದಾಡಿ
ಜಗಳವ ಮಾಡಲು ಕೂಡಿ
ದುಗಬಿದ್ದ ಪಗಡೆಯಂದದಿ ತೆಗೆದು ಕ
ಡೆಗೆಸೆದರು ಕೇಳಲೆಗಳನು.
ಅಲ್ಲಮಪ್ರಭು ಗೋರಕ್ಷಗೆ ಕಥೆವೇಳದು
ಅಲ್ಲಿ ಸಿದ್ಧರ ಮಠದೊಂಗೆ
ಎಲ್ಲ ತತ್ವಂಗಳ ಪೇಳಿ ಶಿಷ್ಯನ ಮಾಡಿ
ಅಲ್ಲಿ ಶ್ರೀಗಿರಿಯೊಳೊಪ್ಪಿದರು.

ಗುರುಲಿಂಗ ಜಂಗಮ ಚಾರಿತ್ರದ ಕವಿ ವೀರಶೈವ. ಅವನು ಉಲ್ಲೇಖಿಸಿರುವ ಶ್ರೀಶೈಲದ ಘರ್ಷಣೆಯ ಕಥೆ ಜಾನಪದದಲ್ಲೂ ದೊರೆಯುತ್ತದೆ. ಅಲ್ಲಿ ಜೋಗಿಗಳು ಮಾರಿಗೆ ಕುರಿಯನ್ನು ಕಡಿವಂತೆ ಜಂಗಮರನ್ನು ಕಡಿದರು ಎಂದು ಹೇಳಿದೆ. ಇದರಿಂದ ಶ್ರೀಶೈಲನಾಥಪಂಥದ ಭೈರವ ಕೇಂದ್ರವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ನಾಗಾರ್ಜುನನನ್ನು ಬೌದ್ಧಗುರು ಎಂದು ಕೆಲವರು ಶೈವಗುರು ಎಂದು ಕೆಲವರು ಶೈವನಾಗಿದ್ದು ಬೌದ್ಧನಾಗಿ ಶ್ರೀಶೈಲದಿಂದ ನಾಗಾರ್ಜುನಕೊಂಡಕ್ಕೆ ಹೋದನೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಮತ್ಪೇಂದ್ರನಾಥ ಮತ್ತು ಗೋರಖನಾಥರು ಶ್ರೀಶೈಲದಲ್ಲಿದ್ದ ಬಗೆಗೆ ಆಧಾರ ದೊರೆಯುತ್ತದೆ. ಅಲ್ಲಮಪ್ರಭು ಮತ್ತು ಗೋರಖನಾಥರು ಶ್ರೀಶೈಲದಲ್ಲಿದ್ದ ಬಗೆಗೆ ಆಧಾರ ದೊರೆಯುತ್ತದೆ. ಅಲ್ಲಮಪ್ರಭು ಮತ್ತು ಗೋರಖನಾಥ ಶ್ರೀಶೈಲದಲ್ಲಿ ಭೇಟಿಯಾಗಿದ್ದರು. ಈ ಗೋರಖನಾಥನ ಸಮಾಧಿ ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿಯಲ್ಲಿದೆ. ಆತ ಕೆಲವು ಕಾಲ ಈ ಮಠದ ಧರ್ಮಾಧಿಕಾರಿಯಾಗಿದ್ದನೆಂದೂ ತಿಳಿದುಬರುತ್ತದೆ. ಆದಿ ಭೈರವನಾದಿಸಿದ್ದನು ಎಂದು ಓದುತಿಹರು ಶಾಸ್ತ್ರಗಳ ಎಂಬ ಮಾತು ಗಮನಾರ್ಹ. “But the pre – aryan lord of the ceasts exacted sacrifice because of the ritual connection of sacrifice. Shiva Bhairava, The destroyer, is thus by extension shiva the bringer of fertility”

[1] ಮೊದಲು ಭೈರವ, ರುದ್ರ ಎಂದಿದ್ದ ಅವನ ಹೆಸರು ಆರ್ಯ ಸಂಪರ್ಕದಿಂದಾಗಿ ಶಿವ ಆದುದನ್ನು ಕಾಣಬಹುದು. ಆದುದರಿಂದ ಆದಿಭೈರವ ಎಂದು ಶಾಸ್ತ್ರಗಳು ಓದುತ್ತಿವೆ ಎಂಬುದು ಸರಿಯಾದ ಹೇಳಿಕೆ. ಆದುದರಿಂದ ಶೈವಧರ್ಮದಲ್ಲಿ ಬರುವ ಶಿವನ ವಿವಿಧ ರೂಪಗಳು ಒಂದುಕಾಲಕ್ಕೆ ವಿಷ್ಣುವಿನ ಅವತಾರಗಳಂತೆ ಪ್ರಖ್ಯಾತವಾಗಿದ್ದವು. ನಮ್ಮ ಯಾವುದೇ ಧಾರ್ಮಿಕ ಸಂಪ್ರದಾಯಗಳನ್ನು ಪುನರ್ವಿವೇಚಿಸುವಾಗ ಭಾರತ ಮತ್ತು ಕನ್ನಡನಾಡಿನ ಶೈವ ಮತ್ತಿತರ ಧರ್ಮಗಳ ಸ್ತಿತ್ಯಂತರಗಳನ್ನು ಹಿನ್ನೆಲೆಯಾಗಿಟ್ಟುಕೊಂಡೇ ಅಧ್ಯಯನ ಮಾಡಬೇಕಾಗುತ್ತದೆ. ಎಕೆಂದರೆ ನಮ್ಮ ಧರ್ಮವಾಗಲಿ, ದೇವರುಗಳಾಗಲಿ ಅಥವಾ ಅವುಗಳಿಗೆ ಸಂಬಂಧಿಸಿದ ಸಂಪ್ರದಾಯಗಳಾಗಲಿ ಈಗ ಇರುವುದರಂತಿರದೆ ಅನೇಕ ಬದಲಾವಣೆಗಳನ್ನು ಹೊಂದಿವೆ. ಹೀಗಾಗಿ ಅವುಗಳು ಸಂಪೂರ್ಣ ಅಧ್ಯಯನ ಆ ಹಿನ್ನೆಲೆಯೆಲ್ಲಯೇ ನಡೆಯಬೇಕೆಂಬುದನ್ನು ಯಾರೂ ಮರೆಯಬಾರದು.

ಮೈಲಾರಲಿಂಗ ಸಂಪ್ರದಾಯವನ್ನು ವಿವೇಚಿಸುವ ಯಾರಿಗಾದರೂ ಭಾರತೀಯ ಧಾರ್ಮಿಕ ಪರಂಪರೆಯ ಉಗಮ ಮತ್ತು ವಿಕಾಸದ ಪರಿಚಯ ಬೇಕಾಗುತ್ತದೆ. ಇಲ್ಲವಾದಲ್ಲಿ ಸಾರ್ವತ್ರಿಕವಾಗಬಹುದಾದ ಇವುಗಳ ಅಧ್ಯಯನ ಸಂಕುಚಿತವಾಗಿ ಬಿಡುವುದುಂಟು. ಮೈಲಾರಲಿಂಗ ಮತ್ತು ಅದರ ಸಂಪ್ರದಾಯಗಳು ಶೈವಧರ್ಮದ ಒಂದು ಉಪಶಾಖೆಯೆಂಬುದಂತು ಸ್ಪಷ್ಟ. ಇಂದಿಗು ಭಾರತದಾದ್ಯಂತ ಈ ದೇವತೆಯನ್ನು ಆರಾಧಿಸುವವರು, ಈ ಸಂಪ್ರದಾಯವನ್ನು ಆಚರಿಸುವವರು ಬಹುಸಂಖ್ಯೆಯಲ್ಲಿದ್ದಾರೆ. ಬ್ರಾಹ್ಮಣರ ಮೈಲಾರಿರಾಯನಿಂದ ಹರಿಜನರ ಮೈಲಾರಯ್ಯನವರೆಗೆ ಈ ದೇವತೆಯ ಅಂಕಿತದಲ್ಲಿ ಹೆಸರಿಟ್ಟುಕೊಳ್ಳುವವರಿದ್ದಾರೆ. ದೇಶಾದ್ಯಂತ ಗ್ರಾಮಾಂತರಗಳಲ್ಲಿ ಮೈಲಾರ ದೇವಾಲಯಗಳಿವೆ. ಆದುದರಿಂದ “ಮೈಲಾರ ಕನ್ನಡ ನಾಡಿನ ದೇವತೆ. ಅವನ ಉಗಮ ಕನ್ನಡ ನಾಡು ಇಲ್ಲಿಂದ ಮಹಾರಾಷ್ಟ್ರಕ್ಕೆ ಹೋಗಿ ‘ಖಂಡೋಬ’ ಎಂಬ ಹೆಸರಿನಿಂದ ಜನಪ್ರಿಯ ದೇವತೆಯಾಗಿ ಪರಿಣಮಿಸಿದ್ದಾನೆ”೧೪ ಎಂದು ಹೇಳುವುದು ಸರಿಯಾಗುವುದಿಲ್ಲ. ಏಕೆಂದರೆ ಶಿವನ ಇಪ್ಪತ್ತೈದುರೂಪ ಅಥವಾ ಅವತಾರಗಳಲ್ಲಿ ಮೈಲಾರವೂ ಒಂದು ಎಂದು ಹೇಳಲವಕಾಶವಿದೆ. ಯಾವುದೇ ದೇವತೆಯನ್ನು ಕುರಿತು ಎಲ್ಲಾ ಅವತಾರ ಕಥೆಗಳೂ ಸುಪ್ರಸಿದ್ಧವಾಗಿರುವುದಿಲ್ಲ. ಒಂದು ಕಾಲಕ್ಕೆ ಅತ್ಯಂತ ಜನಪ್ರಿಯವಾಗಿದ್ದದು ಮತ್ತೊಂದು ಕಾಲಕ್ಕೆ ಸರಿಯಬಹುದು. ವಿಷ್ಣುವಿನ ರಾಮ, ಕೃಷ್ಣ ಅವತಾರ ಕಥೆಗಳಷ್ಟು ಬೇರಾವ ಅವತಾರ ಕಥೆಗಳು ಜನಪ್ರಿಯವಾಗಲಿಲ್ಲ. ಇದಕ್ಕೆ ಕಾರಣ ವಾಲ್ಮೀಕಿ ಮತ್ತು ವ್ಯಾಸ ಅವರು ಈ ಅವತಾರಗಳನ್ನು ತಮ್ಮ ಕಾವ್ಯ ನಾಯಕರಾಗಿ ಮಾಡಿಕೊಂಡಿದ್ದರಿಂದ ಅವೆರಡೂ ಅಷ್ಟೊಂದು ಜನಪ್ರಿಯವಾದುವು. ಹಾಗೆಯೇ ಶಿವನ ಇಪ್ಪತ್ತೈದು ಲೀಲೆಗಳಲ್ಲಿ ಕೆಲವು ವೈದಿಕರ ಕೈಗೆ ಸಿಕ್ಕಿ ಜನಪ್ರಿಯವಾದುವು. ಜನಸಾಮಾನ್ಯರ ದೇವತೆಗಳಾದಂಥವು ಪ್ರಚಾರಕ್ಕೆ ಬರಲಿಲ್ಲ. ಮೈಲಾರಲಿಂಗ ಸಹ ಅಂತಹ ಒಂದು ಶೈವಧರ್ಮದ ದೇವತೆಯೆಂಬುದರಲ್ಲಿ ಯಾವ ಅನುಮಾನವೂ ಇಲ್ಲ.

ನಮ್ಮ ದೇಶದ ಎಲ್ಲಾ ದೇವರು, ಸಂಪ್ರದಾಯಗಳ ಹುಟ್ಟು ಅಥವಾ ಅವತಾರಗಳಿಗೂ ಒಂದೊಂದು ಕಥೆ ಇರುವಂತೆ ಮೈಲಾರ ದೇವತೆಗೂ ಒಂದು ಪೌರಾಣಿಕ ಕಥೆಯಿದೆ. ಮಣಿ ಮಲ್ಲಾಸುರನೆಂಬ ರಾಕ್ಷಸ ಬ್ರಹ್ಮನಿಮದ ವರಪಡೆದು ಅದರ ಶಕ್ತಿಯಿಂದ ಮಾನವರಿಗೂ ದೇವತೆಗಳಿಗೂ ತೊಂದರೆ ಕೊಡಿತ್ತಿದ್ದ. ಅವನ ಉಪಠಳ ಮಿತಿ ಮೀರಿತು. ಆಗ ದೇವತೆಗಳು ಮತ್ತು ಋಷಿಗಳು ಶಿವನಲ್ಲಿಗೆಹೋಗಿ ಅವನ ತೊಂದರೆಗಳಿಂದ ನಮ್ಮನ್ನು ಕಾಪಾಡುವಂತೆ ಪ್ರಾರ್ಥಿಸಿದರು. ಶಿವನಿಂದಲೂ ಅವನು ವರಪಡೆದಿದ್ದ. ಶಿವ ಯಾವ ರೂಪಿನಿಂದ ವರ ನೀಡಿದ್ದನೋ ಅದೇ ರೂಪಿನಿಂದ ರಾಕ್ಷಸನನ್ನು ಕೊಲ್ಲುವಂತಿಲ್ಲವಷ್ಟೇ, ಆದುದರಿಂದ ಮಾರ್ತಾಡ ಭೈರವ ರೂಪಿನೊಂದ ಮಲ್ಲಾಸುರನನ್ನು ಕೊಲ್ಲುವುದಾಗಿ ಅವರಿಗೆ ಭರವಸೆ ಕೊಟ್ಟು ಕಳಿಸಿದ. ಅದರಂತೆ ರಾಕ್ಷಸವಧೆ ನಡೆಯಿತು, ಮಲ್ಲಾಸುರನನ್ನು ಕೊಂದು ಅವನ ಉಪಠಳವನ್ನು ಪರಿಹರಿಸಿದ್ದರಿಂದ ಶಿವನ ಆ ರೂಪಿಗೆ ಮಲ್ಲಾಸುರಹರ, ಮಲ್ಲಹರ, ಮೈಲಾರ ಆಯಿತೆಂದುಂಬುದು ಕಥೆ. ಆರ್ಯ ಸಂಸ್ಕೃತಿ ಪ್ರಬಲಗೊಂಡಂತೆಲ್ಲಾ ಭಾರತೀಯ ದೇವಾನು ದೇವಗಳ ಬಗೆಗೆ ಇಂತಹ ಕಥೆಗಳನ್ನು ಕಟ್ಟಿರುವುದು ಕಂಡುಬರುತ್ತದೆ. ಇದರಿಂದ ಭೈರವನಿಂದ ಮೈಲಾರ ಯಾವುದೋ ಹಂತದಲ್ಲಿ ಆವಿರ್ಭವಿಸಿದ್ದಾನೆಂಬುದು ಖಚಿತ, ಬಹುಶಃ ಭೈರವ ಸಂಪ್ರದಾಯದ ಜನಾಂಗಗಳಲ್ಲಿ ಧಾರ್ಮಿಕ ಭಿನ್ನಾಭಿಪ್ರಾಯಗಳು ತಲೆದೋರಿ ಅದರಿಂದ ಹೊರಡಿಸಿದ ಗುಂಪು ಭೈರವನ ಅಂಶವನ್ನೇ ಗಮನದಲ್ಲಿಟ್ಟುಕೊಂಡು ಮೈಲಾರನನ್ನು ಸೃಷ್ಟಿಸಿಕೊಂಡಿರುವ ಸಾಧ್ಯತೆಗಳೇ ಹೆಚ್ಚು ಕಂಡುಬರುತ್ತದೆ. ಆದುದರಿಂದ ಭೈರವನ ಮತ್ತೊಂದು ಹೆಸರು ಮೈಲಾರನೆಂಬುದರಲ್ಲಿ ಅನುಮಾನವಿಲ್ಲ.

ಮೈಲಾರ ಮತ್ತು ಭೈರವನ ಅಂಶಗಳು ಧಾರ್ಮಿಕವಾಗಿ ಒಂದೇ ಎಂಬುದಕ್ಕೆ ಅನೇಕ ಆಧಾರಗಳಿವೆ. ಈ ಎರಡು ದೇವತೆಗಳು ಮತ್ತು ಸಂಪ್ರದಾಯಗಳನ್ನು ಪರಸ್ಪರ ಹೋಲಿಸಿ ನೋಡಿದಾಗ ಕೂಡ ಈ ಅಂಶ ಸತ್ಯವೆಂಬುದು ಹೊರಬೀಳುತ್ತದೆ. ಭೈರವ, ಮೈಲಾರರಿಬ್ಬರ ವಾಹನವೂ ನಾಯಿ. ತ್ರಿಶೂಲ, ಡಮರು ಇತ್ಯಾದಿ. ಆಯುಧ ಮತ್ತು ಶಬ್ದ ಸಂಕೇತಗಳೇ ಈ ಎರಡೂ ದೇವತೆಗಳ ಧಾರ್ಮಿಕ ಸಂಕೇತಗಳಾಗಿವೆ. ಭೈರವನಿಗೆ ಜೋಗಿಗಳಿದ್ದಾರೆ. ಮೈಲಾರನಿಗೆ ಗೊರವರಿದ್ದಾರೆ. ಈ ಹಿಂಬಾಲಕರ ಉಡುಪು ಒಂದೇ ರೀತಿಯದು. ಭೈರವನ ಹೆಂಡತಿ ಮಾಳಿ. ಮೈಲಾರನ ಹೆಂಡತಿ ಸಹ ಮಾಳಿಯೆ. ಈ ಇಬ್ಬರು ಮಾಳಿಯರೂ ಜಾತಿಯಲ್ಲಿ ಕುರುಬರು, ಭೈರವ, ಮೈಲಾರರಿಗೆ ಚುಂಚರು, ಕಂಚರೆಂಬ ಭಕ್ತರುಂಟು. ಇದರಿಂದಾಗಿ ಒಂದೇ ದೇವರು ಮತ್ತು ಸಂಪ್ರದಯ ಯಾವುದೋ ಕಾರಣಕ್ಕೆ ಒಡೆದು ಒಂದೇ ದೈವವನ್ನು ಎರಡು ಗುಂಪುಗಳೂ ಹಂಚಿಕೊಂಡಿರುವುದು ಕಂಡುಬರುತ್ತದೆ. ಈ ಬಗೆಗೆ ಪೌರಾಣಿಕ ಕತೆಯೊಂದಿದೆ. ಈ ಭೂಮಿಯ ಆದಿಯಲ್ಲಿ ಆದಿಗೌಡನೆಂಬುವನಿದ್ದ. ಅವನಿಗೆ ಮೂವರು ಮಕ್ಕಳು. ಇಬ್ಬರು ಗಂಡುಮಕ್ಕಳು, ಒಬ್ಬಳು ಮಗಳು. ಹಿರಿಯ ಮಗ ವ್ಯವಸಾಯ ಮಾಡುತ್ತಿದ್ದ. ಎರಡನೆಯ ಮಗ ಪಶುಪಾಲನೆ ಮಾಡುತ್ತಿದ್ದ. ಮಗಳು ಪಾರ್ವತಿ ಅನುಪಮ ಸುಂದರಿ, ಶಿವ ಅವಳನ್ನು ಮದುವೆಯಾದ ಆದಿಗೌಡನ ಇಬ್ಬರು ಮಕ್ಕಳ ಸಂತಾನ ಬೆಳೆದು ಭೂಮಿಯ ತುಂಬಾ ಹರಡಿತು. ಹಿರಿಯ ಮಗನ ಸಂತಾನ ಒಕ್ಕಲಿಗರೆಂದೂ, ಎರಡನೆಯ ಮಗನ ಸಂತಾನ ಕುರುಬರೆಂದೂ ಶಿವನೇ ಕರೆದು ತನ್ನನ್ನು ಒಕ್ಕಲಿಗರು ಭೈರವ ರೂಪದಲ್ಲಿಯೂ ಕುರುಬರು ಮೈಲಾರ ರೂಪದಲ್ಲಿಯೂ ಪೂಜಿಸಬೇಕೆಂದು ನಿಗದಿ ಮಾಡಿದ. ಈ ಕಥೆ ಕೂಡ ಭೈರವ, ಮೈಲಾರರು ಅಭಿನ್ನರೆಂಬುದನ್ನು ಪ್ರತಿಪಾದಿಸುತ್ತವೆ. ಈ ಕಾರಣದಿಂದಲೇ ಪಾರ್ವತಿಯನ್ನು ಒಕ್ಕಲಿಗರ ಮಗಳು ಎಂದು ಕರೆದುದು ಕಂಡುಬರುತ್ತದೆ. ಈ ಬಗೆಗೆ ಅನೇಕ ವೀರಶೈವ ಕವಿಗಳು ಅದ್ರಿಯ ಪುತ್ರಿಯ ಶೂದ್ರೆಯೆಂದವರುಂಟೆ. ಎಂದು ಆಕ್ಷೇಪಿಸಿದ್ದಾರೆ. ಇಂತಹ ಇನ್ನು ಅನೇಕ ಕಥೆಗಳು ಈ ಇಬ್ಬರು ದೈವಗಳು ಮತ್ತು ಸಂಪ್ರದಾಯ ಒಂದೇ ಮೂಲದವೆಂಬುದನ್ನು ಪ್ರತಿಪಾದಿಸುತ್ತದೆ.

ಮೈಲಾರನ ಪ್ರಾಚೀನತೆಯನ್ನು ಕುರಿತಂತೆ ವಿದ್ವಾಂಸರು ಅನೇಕ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಬಸವಣ್ಣನವರಾದಿಯಾಗಿ ವೀರಶೈವ ವಚನಕಾರರು, ಕವಿಗಳು ಈ ದೈವ ಮತ್ತು ಸಂಪ್ರದಾಯಗಳ ಬಗೆಗೆ ವ್ಯಕ್ತಪಡಿಸಿರುವ ವಿರುದ್ಧಾಭಿಪ್ರಾಯಗಳು ಸ್ವತಃ ಬಸವಣ್ಣನವರ ಒಳ್ಳಿಹ ಮೈಲಾರನ ಒಳಗೆಲ್ಲಾ ಸಣಬು” ಎಂದು ಹೀಯಾಳಿಸಿದ್ದಾರೆ. ತಮ್ಮ ಧರ್ಮದತ್ತ ಜನರನ್ನು ಆಕರ್ಷಿಸಲು ಪರದೈವನಿಂದೆ ಎಲ್ಲಾ ಧರ್ಮದವರು ಮಾಡಿದುದೆ. ಆದರೆ ಹೀಗೆ ಪೂರ್ವಾಗ್ರಹ ಪೀಡಿತರಾದವರ ಅಭಿಪ್ರಾಯಗಳು ಯಾವುದೇ ಸಂಶೋಧನೆಗೆ ಸದಭಿಪ್ರಾಯದ ಉದಾಹರಣೆಗಳಾಗುವಂತಲ್ಲ ಹಾಗೆ ನೋಡಿದರೆ “Shiva Bhairava the destroyairs thus by extension shiva the bringer of fertily” ಎಂಬ ಮಾತಾಗಲಿ “Rudras original character as god of cattle” ಎಂಬ ಮಾತಾಗಲಿ ಆರ್ಯ ಪೂರ್ವದ ವ್ಯವಸಾಯ ಪ್ರಧಾನ ಸಮಾಜದ ಚಿತ್ರವನ್ನು ಕೊಡುತ್ತವೆ. ಮೈಲಾರದೇವರ ಚರಿತ್ರೆ ಸಂಸ್ಕೃತದಲ್ಲಿಯೂ ಇದೆ ಅದನ್ನು ಕನ್ನಡಕ್ಕೆ ಬರೆಯುತ್ತಿದ್ದೇನೆಂದು ಕವಿಯೊಬ್ಬ ಹೇಳಿದ್ದಾನೆ.

“ಚಲುವ ಕನ್ನಡ ನಾಡದೇವತೆ
ಯೋಲವಿನಾ ಮೈಲಾರದೇವನ
ಲಲಿ ಬೊಮ್ಮಾಂಡಾಭಿದಾನದ
ಸಲೆಪುರಾಣದಿ ನೊರೆದ ಭಾಗವ
ಕುಲದ ಸ್ವಾಮಿಯದೆಂದು ಕನ್ನಡಿಸಿದೆನು ಭಕ್ತಿಯಲಿ
ಕಲಿಯುಗದೆ ಭೂಲೋಕ ಜನತೆಗೆ
ಸುಲಭ ಭಕ್ತಿಯ ಸಿದ್ಧಿ ದೊರಕೊಳೆ
ತೆಳೆದಸುಮಾರ್ಕಾಂಡ ಭೈರವ ರೂಪವನುವಿಭುವು
ಅಂದವಾಗಿದ ಷಷ್ಠಿತಿಧಿಯೊಳ
ಗಂದು ಪರತರ ಶಕ್ತಿಯುತನ್ಯೆ
ತಂದು ಲಿಂಗದ ರೂಪವನು ಕೈಕೊಂಡ ಭೈರವನು
ಇರಲೊಡ ಮೂಡಿದವು ಲಿಂಗಗ
ಳೆರಡು ಕಲ್ಪದೃಮದನೆರೊಳು
ಸುರರು ಸುಕುಟುಂಬಕ ಮುಣಿಶರು ಸಿದ್ಧ ಸಿದ್ಧಿಯರು
ವರ ಮ ಯೆನಿಪಕ್ಕರವು – ಹರನದು
ಹರಿ ಅ ಕಾರವು ಕೂಡಿ ಇಳೆಯೊಳು
ಇರದೆ ಯೊಡ ಮೂಡಲಿಕೆಯಾಯಿತು ಮೇಳೆಯೊಂಬ ಪದ
ಧರಣಿಯನು ಸ್ವೀಕರಿಪ ಕತದಿಂ
ದಿರದೆ ಕೂಡಿದರೆಂದು ಮುನಿಗಳು
ಸುರರು ಮೈಲಾರಾಭಿದಾನದಿ ಕರೆದ ರಾತನನು”

ಮೇಲಿನ ಪದ್ಯಗಳು ಮೈಲಾರಲಿಂಗನ ಹುಟ್ಟು ಪ್ರಾಚೀನತೆಯ ಬಗೆಗೆ ಹೇಳಿದವೇ ಆಗಿವೆ. ಬಾದರಾಯನಿಂದ ರಚಿತವಾದ ಸಂಸ್ಕೃತ ಬ್ರಹ್ಮಾಂಡ ಪುರಾಣದಲ್ಲಿ ಬರುವ ಮೈಲಾರನ ಕಥೆಯ ಭಾಗವನ್ನು ಕನ್ನಡಿಸಿದ್ದೇನೆ ಎಂದು ಕವಿ ಹೇಳಿದ್ದಾನೆ. ಇದರಿಂದ ಎರಡು ವಿಚಾರಗಳು ಸ್ಪಷ್ಟವಾಗುತ್ತವೆ. ಒಂದು ಮೈಲಾರಲಿಂಗ ಸಾಹಿತ್ಯ ಕರ್ನಾಟಕಕ್ಕೆ ಮಾತ್ರ ಸೀಮಿತವಾದುದಲ್ಲ. ಮತ್ತೊಂದು ಮಹಾಭಾರತದಷ್ಟು ಹಳೆಯದೆಂಬುದು. ಮೈಲಾರಲಿಂಗ ಹರಿಹರ ಶಕ್ತಿ ಸಂಯೋಗದಿಂದ ಹುಟ್ಟಿದವನು ಎಂಬುದನ್ನೂ ಮೇಲಿನ ಪದ್ಯವೊಂದು ಹೇಳಿದೆ. ಆ ಬಗೆಗೆ ಕಥೆಯೊಂದು ಹೀಗಿದೆ ಶಿವ ಭಸ್ಮಾಸುರನಿಗೆ ಅವನು ಯಾರತಲೆಯ ಮೇಲೆ ಕೈ ಇಡುತಾನೋ ಅವನು ಸುಟ್ಟುಹೋಗುವ ವರ ನೀಡಿದ. ಭಸ್ಮಾಸುರ ಅದನ್ನು ಶಿವನ ತಲೆಯ ಮೇಲೆ ಕೈಯಿಟ್ಟೇ ಪರೀಕ್ಷಿಸಲೆಳಸಿದ. ಆಗ ಶಿವ ಭೂಲೋಕಕ್ಕೆ ಓಡಿಬಂದು ಅವಿತುಕೊಂಡ. ವಿಷ್ಣು ಮೋಹಿನಿರೂಪುತಳೆದು ಭಸ್ಮಾಸುರನನ್ನು ಸಂಹರಿಸಿದ. ಆಗ ಮೋಹಿನಿಯ ರೂಪಿಗೆ ಮನಸೋತ ಶಿವ ಆಕೆಯೊಂದಿಗೆ ಕೂಡಿದ. ಅದರ ಫಲವಾಗಿ ಮೂರು ಲಿಂಗಶಕ್ತಿಗಳ ಉತ್ಪನ್ನವಾಯಿತು. ಭೈರವಲಿಂಗ ಕಲ್ಲೆಲಿಂಗ ಮತ್ತು ಜನ್ನೆಲಿಂಗ ಭೈರವಲಿಂಗವನ್ನು ಒಕ್ಕಲಿಗರಿಗೂ ಕಲ್ಲೇಲಿಂಗವನ್ನು ಕುರುಬರಿಗೂ ಜನ್ನೆಲಿಂಗವನ್ನು ಜೈನರಿಗೆ ಪೂಜಿಸಲು ಕೊಟ್ಟುವೆಂಬುದು ಕಥೆ. ಈ ಕಥಾರೂಪ ಶಿವನ ಒಂದೇ ರೂಪದಿಂದ ಬೇರೆ ಬೇರೆ ರೂಪಗಳು ಹುಟ್ಟಿವೆ ಎಂಬುದನ್ನೂ ಸೂಚಿಸುತ್ತದೆ.

ಕನ್ನಡ ಕವಿಗಳು ಮೈಲಾರಲಿಂಗವನ್ನು ಕುರಿತು ಹೇಳಿರುವ ಅಭಿಪ್ರಾಯಗಳೆಲ್ಲ ಏಕಪಕ್ಷೀಯ ಮತ್ತು ತಮ್ಮ ಧರ್ಮ ದೇವರ ಹೆಚ್ಚುಗಾರಿಕೆಯನ್ನು ಎತ್ತಿಹಿಡಿಯಲು ಹೇಳಿದವಾಗಿವೆ. ಈ ಬಗೆಗೆ ಹೇಳಿದ ಬ್ರಹ್ಮಶಿವನಾಗಲಿ ಹನ್ನೆರಡನೆಯ ಶತಮಾನದ ನಂತರದ ವೀರಶೈವ ಕವಿಗಳಾಗಲಿ *ಮೈಲಾರ ಒಂದು ಕ್ಷುದ್ರದೇವತೆ” ಎಂದು ಹೇಳಿರುವುದು ಧಾರ್ಮಿಕವಾಗಿ ನಡೆಯುವಂಥದೆ. ಅವನದೇ ಆದ” ಎಕ್ಕಲದೇವಿಗೆ ಮಾಲಕ್ಕನಿಗಂ ಬನದ ಬಳರಿಗಂ ಮೈಲಾರಂಗಾರೆಯ ಜಾತ್ರೆ ಮಾಳ್ಪಂ ವೊಕ್ಕಾಲಿಗಂ ನನಲ್ಲಾ ಜೈತಂ ಕಾಳಂ” ಎಂಬ ಮಾತುಗಳನ್ನು ಗಮನಿಸಬೇಕು. ಬ್ರಹ್ಮಶಿವನ ಹೇಳಿಕೆಯಂತೆ ಮೈಲಾರನ ಜಾತ್ರೆ ಮಾಡುವವರು ಒಕ್ಕಲಿಗರು ಅದರಲ್ಲೂ ಕಾಳಮುಖ ಪಂಥದವರು. ಕಾಳಾಮುಖ ಭೈರವನಿಗೆ ಅನ್ವಯವಾಗುವಂಥದು. ಕಾಳಭೈರವ ಎಂದೂ ಕರೆಯುವ ಪದ್ಧತಿಯುಂಟು. ಹನ್ನೆರಡನೆಯ ಶತಮಾನದ ನಂತರವಂತೂ ಪರಧರ್ಮ ಮತ್ತು ಪರದೈವ ನಿಂಧೆಗಾಗಿ ಕಾವ್ಯಗಳನ್ನೇ ಬರೆದವರುಂಟು. ಪರಸ್ಪರ ದೇವ ವಿಗ್ರಹಗಳನ್ನು ಒಡೆದುದುಂಟು. ಈ ನಿಮದೆಯಲ್ಲಿ ಯಾರೂ ಯಾರಿಗಿಂತ ಕಡಿಮೆಯಿಲ್ಲ. ಆದರೆ ವೀರಶೈವರ ಕಣ್ಣು ಬಹುಸಂಖ್ಯಾತರಾದ ರೈತರ ಮೇಲಿತ್ತು. ಅವರಲ್ಲಿ ಉತ್ತರ ಕರ್ನಾಟಕದ ಕುಡಿಯೊಕ್ಕಾಲಿಗರನ್ನು ಅವರು ಮತಾಂತರ ಮಾಡಿಸಿದರು. ಆದುದರಿಂದ ಬ್ರಹ್ಮಶಿವನಾಗಲಿ, ಶಂಕರದಾಸಿಮಯ್ಯನಾಗಲಿ ಮೈಲಾರಲಿಂಗವನ್ನು ಕ್ಷುದ್ರ ದೇವತೆಯೆಂದು ಕರೆದುದರಲ್ಲಿ ಆಶ್ಚರ್ಯವಿಲ್ಲ, ಅದನ್ನು ಸರಿಯೆಂದು ಒಪ್ಪಬೇಕಾಗಿಯೂ ಇಲ್ಲ.

ಕ್ರಿ.ಶ. ೧೧೧೨ರ ನಯಸೇನನ ಧರ್ಮಾಮೃತದಲ್ಲಿ ಮೈಲಾರನನ್ನು ಕುರಿತು ಬರುವ ಉಲ್ಲೇಖವೇ ಅತ್ಯಂತ ಪ್ರಾಚೀನವಾದುದೆಂದು ಡಾ. ಎಂ. ಚಿದಾನಂ ಮೂರ್ತಿಯವರು ಅಭಿಪ್ರಾಯ ಪಡುತ್ತಾರೆ. ಅನೇಕ ಕಾರಣಗಳಿಂದ ಈ ಹೇಳಿಕೆಗಳನ್ನು ಒಪ್ಪುವುದು ಕಷ್ಟವಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿರುವ ಅನೇಕ ಮೈಲಾರೇಶ್ವರ ದೇವಾಲಯಗಳು ಗಂಗಕಾಲದ ಕಲಾಮಾದರಿಗೆ ಸೇರುತ್ತವೆ. ಉದಾಹರಣೆಗೆ ನಾಗಮಂಗಲ ತಾಲ್ಲೂಕಿನ ಮೈಲಾರ ಪಟ್ಟಣದ ಮೈಲಾರದೇವರ ಗುಡಿಯನ್ನು ನೋಡಬಹುದು. ‘‘ಕ್ರಿ.ಶ. ೧೧೩೮ರಲ್ಲಿ ಹಳೇಬೀಡಿನಲ್ಲಿ ಕಾಳಾಮುಖದ ಪ್ರಸಿದಧ ಮಠವಿತ್ತು ಎಂಬ ಹೇಳಿಕೆಯನ್ನು ಗಮನಿಸಬೇಕು. ಹನ್ನೆರಡನೆಯ ಶತಮಾನದ ಹಿರೇಬೇವಿನೂರು ಶಾಸನವೊಂದರಲ್ಲಿ ಭೋಗನಾಥ, ರೇವಣಸಿದ್ಧ, ರಾಮೇಶ್ವರ ಬ್ರಹ್ಮೇಶ್ವರ ದೇವರುಗಳೊಂದಿಗೆ ಮೈಲಾರೇಶ್ವರನ ಉಲ್ಲೇಖವಿದೆ. ಕ್ರಿ.ಶ. ಏಳನೆಯ ಶತಮಾನಗಳಷ್ಟು ಹಿಂದೆಯೇ ಮೈಲಸೂರು ಉಲ್ಲೇಖವಿದೆ. ಇನ್ನು ಮೈಲಾರ, ಮೈತಿಲ, ಮಾಳಿ ಮುಂತಾದವು ಶಾಸನೋಕ್ತವಿರಲಿ ಇಂದಿಗೂ ಕಾಳಾಮುಖ ಶೈವ ಒಕ್ಕಲಿಗರ ಮನೆಯ ಹೆಸರುಗಳಾಗಿ ಜೀವಂತವಾಗಿವೆ.

ಭೈರವ ಮತ್ತು ಮೈಲಾರರಿಬ್ಬ ಪತ್ನಿಯರ ಹೆಸರೂಗಳೂ ಮಾಳಿ ಎಂದಿವೆ. ಮಾಳಿ ಮಹಾಕಾಳಿಯ ಸಂಕ್ಷಿಪ್ತರೂಪ. “Aspects of kali or chandi she is the counter part of Shivas saspects of Bhairava, when he takes pleasure in destruction”[2] ಅತ್ಯಂತ ಪ್ರಾಚೀನಕಾಲದಿಂದಲೂ ಭೈರವನ ಪತ್ನಿ ಭೈರವಿ ಅಥವಾ ಮಹಾಕಾಳಿ. ಕಾಳಾಮುಖ ಎಂಬುದನ್ನು, ಕಾಳಭೈರವ ಎಂಬುದನ್ನು ಗಮನಿಸಬೇಕು.

ಪ್ರಳಯಕಾಲಾಗ್ನಿಯ ಕುಡಿಯೊ
ಲ್ಪೆಳಗುತಿರ್ದಳು ಮೂರು ಲೋಕದಿ
ಹೊಳೆವ ನಾನಾಯುಧ ಕರದೊಳು ಚಲಿಪಜಿಹ್ವೆಯೊಳು
ತೆಳೆದ ದಂಷ್ಟ್ರಕರಾಳ ಮುಖದಿಂ
ದಲಿ ತ್ರಿಶೂಲದ ತಂಗಿಯಂತಿಎ
ಸುಳಿದಳೈ ಘೃತಮಾರಿನಾಮದೆ ಶಿವನ ಸಮ್ಮುಖ

ಮೇಲಿನ ಪದ್ಯ ಶಿವನು ಮಾರ್ತಾಂಡ ಭೈರರೂಪ ಕಳೆದಾಗ ಶಿವೆಘ್ಯತ ಮಾರಿಯರೂಪ ಕಳೆದಳು. ಇವಳನ್ನು ತುಪ್ಪದ ಮಾಳಮ್ಮ ಎಂದು ಕರೆಯುತ್ತಾರೆ. ಇದಕ್ಕೆ ಕತೆಯೊಂದಿದೆ. ಪಾರ್ವತಿಯ ಶಕ್ತಿಯ ಅಂಶ ಮಹಾಕಾಳಿಯಾಗಿ ಅವತರಿಸಿದಾಗ ಋಷಿಗಳು ಅವಳನ್ನು ಶಾಂತಗೊಳಿಸಲು ಅಗ್ನಿಸ್ವರೂಪಿಯಾದ ಆಕೆಯ ಮೇಲೆ ತುಪ್ಪವನ್ನು ಸುರಿದರಂತೆ “She has a different name (Sati Parvati, Durgi, Kali, Mahakali, etc) and they may roughly be divided in to mild characters and fierace. As we have seen, this diety may also be traced back to the pre – aryan godess, who was both bringer of fertility and exactrer of living sacrifice” ನಮ್ಮ ದೇಶದ ಪ್ರತಿಯೊಂದು ದೇವತೆಯೋ ಅವತಾರ ಮಾಡಿದಾಗಲೂ ಅ ದೇವತೆಯ ಪತ್ನಿ ಅಥವಾ ಸ್ತ್ರೀಶಕ್ತಿ ಆ ಅವತಾರಕ್ಕನುಗುಣವಾದ ಅವತಾರದಲ್ಲಿ ಬರುವುದೇ ಸಂಪ್ರದಾಯ. ಅಲ್ಲದೆ ಮಾಳಿ, ಮಾಳಮ್ಮ, ಮಾಳವ್ವ ಈಗಲೂ ಶೈವ ಸಂಪ್ರದಾಯದ ಹೆಂಗಸರಲ್ಲಿ ಪ್ರಚಲಿತವಿರುವ ಹೆಸರುಗಳು. ಮಾಳಿಯ ಹೆಸರಿನಲ್ಲಿ ಊರುಗಳು ಸಹ ಇರುವುದು ಕಂಡುಬರುತ್ತದೆ. ಆದುದರಿಂದ ಪಾರ್ವತಿಯ ಮಹಾಕಾಳಿ ರೂಪ ಮಹಾಕಾಳಿ ಮಾಂಕಾಲಿ ಮಾಳಿ ಆಗಿರುವಂತೆ ಮಾಗಚಿ, ಮಾಳಿಯ ಮಾರವ್ವ ಪ್ರಭಾವದ ರೂಪ ಈ ಬಗೆಗಿನ ಶಬ್ದ ನಿಷ್ಪತ್ತಿಯೇನೇ ಇರಲಿ ಮಹಾಕಾಳಿ ಮಾಳಿಯಾಗಿರುವುದಂತೂ ಸತ್ಯ.

ಮೈಲಾರಲಿಂಗ ಎಂಬ ಪದ ಜನಪದ ಮತ್ತು ಶಿಷ್ಟ ಸಾಹಿತ್ಯಗಳೆರಡರಲ್ಲಿಯೂ ಕಂಡುಬರುತ್ತದೆ. ಇದು ಒಂದು ಸ್ಥಳದ ಹೆಸರಿನಿಂದ ಬಂದುದಿರಬೇಕು. “ನನಗೆ ತಿಳಿದ ಮಟ್ಟಿಗೆ ಮೈಲಾರನನ್ನು ಕುರಿತ ಉಲ್ಲೇಖಗಳಲ್ಲಿ ನಯಸೇನನ ಧರ್ಮಾಮೃತದ (ಕ್ರಿ.ಶ. ೧೧೧೨) ಈ ಮಾತೆ ಅತ್ಯಂತ ಪ್ರಾಚೀನವಾದುದು. ಇಲ್ಲಿ ಮೈಲಾರಗೊರವ ಎಂದಿರುವುದರಿಂದ ಮೈಲಾರ ದೇವತೆಯಿಂದ ಪ್ರಸಿದ್ಧವಾದ ಯಾವುದೋ ಕ್ಷೇತ್ರವನ್ನು ಸೂಚಿಸುತ್ತದೆ” ಎನ್ನುವ ಮಾತು ಸಂಪೂರ್ಣ ಸತ್ಯವಲ್ಲ ಅನ್ನಿಸುತ್ತದೆ.

Ronun ಕನ್ನಡ ಉಪಲಬ್ಧ ಪ್ರಾಚೀನ ಕೃತಿಗಳಲ್ಲಿ ಒಂದಾದ ಶಿವಕೋಟ್ಯಾ ಚಾರ್ಯನ ವಡ್ಡಾರಾಧನೆಯ ಕಥೆಯೊಂದರಲ್ಲಿ “ಮತ್ತೆ ಕೆಲವು ದಿನದಿಂ ಮೇಲೆ ಸುವ್ರತೆಯೆಂಬ ಮಹಾದೇವಿಯೊಡನೆ ಮಂತ್ರಿ ಕಜ್ಜಮಂ ಸಮಕಟ್ಟಿಯೊಂದು ದಿವಸದಿನೊರ್ವ ಬೂತಿಂಗೆ ದ್ರಮ್ಮಮಂ ಕೊಟ್ಟೊಡಂ ಬಿಡಿಸಿ ತಲೆಯಂ ಕೀರಿಸಿ ಕರಿಯ ಕೋವಣವ ನುಡಿಸಿ ದಡಿಯ ಕೋವಣ ಕವಡಿಯಕೆಯಂ ಕಟ್ಟಿಸಿ” ರಾಣಿಯನ್ನು ನಗಿಸಿದ ಪ್ರಸಂಗದ ಉಲ್ಲೇಖವಿದೆ. ಕವಡೆ ಕುರಿತವಾಗಿವೆ. ಕವಿ ಜೈನನಾದುದರಿಂದ ಈ ಗೊರವನನ್ನು ಬೂತ ಎಂದು ಕರೆದಿದ್ದಾನೆ. ಸೂಕ್ತ ಸುಧಾರ್ಣವದ ೭ನೆಯ ಸಂಧಿಯ ೭೬ನೆಯ ಪದ್ಯದಲ್ಲಿ

ಕವಡಿಕೆ ಬಾಳದಂಡದೊಳೊಡಂ ಬಡೆದಾದಿಯರಿಕ್ಕೆಲಂಗಳೊಳ್‌
ಸವಡಿಸಿ ಸಾರ್ಚಿದಟ್ಟಡಿಯೊಳೆತ್ತಿರುತಿರ್ದಡನಾರ ಬೊಪ್ಪನೀ
ಕವಡೆಯ ಬೊಪ್ಪನೆಂದು ನಡೆನೋಡಿದ ರವ್ಕಿಱೊಳೊಪ್ಪು ಕೆಂಬ್ಬಿದಂ
ಕವಡೆಯ ಬೊಪ್ಪನೆಂಬ ಪೆಸರಗ್ಗಳ ಮೊಪ್ಪಿದುದಾ ಕುಮಾರಮೊಳ್‌

ಕವಡಿಕೆಯನ್ನು ಭಾಳದಂಡದೊಳ್‌ ಅಂದರೆ ಕತ್ತಿನಲ್ಲಿ ಧರಿಸಿ ಬರುತ್ತಿದ್ದ ಕುಮಾರ ಕವಡೆಯ ಬೊಪ್ಪನೇ ಬಂದನೆಂಬಷ್ಟು ಸಹಜವಾಗಿದ್ದಿತೆಂದು ದಾದಿಯರು ನಗೆಯಾಡಿದರು. ಇಷ್ಟೇ ಅಲ್ಲ ಪರಿಷ್ಕೃತ ಎಫಿಗ್ರಾಫಿಯಾ ಕರ್ನಾಟಕದ ಸಂಪುಟಗಳ ಪಾಂಡವಪುರ ೪೩ನೆಯ ಶಾಸನದಲ್ಲಿ ಗೊರವರ ಕೆರೆಯ ಉಲ್ಲೇಖ ಬರುತ್ತದೆ. ಈ ಶಾಸನ ಹತ್ತು ಹನ್ನೊಂದನೆಯ ಶತಮಾನಕ್ಕೆ ಸೇರಿದ್ದು. ಕೊಡಗಿನ ಮಡಿಕೇರಿ ೨ ಶಾಸನದಲ್ಲಿ ಗೊರವರ ಹಳ್ಳಿಯ ಉಲ್ಲೇಖವಿದೆ. ನಂಜನಗೂಡು ೨೩೫ನೆಯ ಶಾಸನದಲ್ಲಿ ಮಾಕಳಿಯ ಉಲ್ಲೇಖವಿದೆ. ಗುಂಡ್ಲುಪೇಟೆಯ ೪೮ರಲ್ಲಿ ಮೈಲಾರ ಒಡೆಯ ಉಲ್ಲೇಖವಿದೆ. ಶ್ರೀರಂಗ ಪಟ್ಟಣ ೮೯ರಲ್ಲಿ ಮೈಲಾರ ದೇವರ ಉಲ್ಲೇಖವಿದೆ. ಚಾಮುಂಡಿಯನ್ನು ಭೈರವಿ ಮಹಾಕಾಳಿ ಎಂದು ಕರೆದ ಶಾಸನ ಉಲ್ಲೇಖಗಳಿವೆ. ಕನ್ನಡದ ಸುಪದ್ರಸಿದ್ಧ ಆತಕೂರು ಶಾಸನದಲ್ಲಿಯೇ ಗೊರವ ಮತ್ತು ಕಾಳಿ ಉಲ್ಲೇಖಗಳಿವೆ. ಈ ಶಾಸನಗಳ ಅನೇಕ ೯ – ೧೦ನೆಯ ಶತಮಾನದವು. ಆದುದರಿಂದ ನಯಸೇನನಿಗಿಂತ ಹಿಂದೆಯೂ ಮೈಲಾರ, ಕಾಳಿ, ಗೊರವ ಉಲ್ಲಖಗಳು ಇದ್ದುವೆಂಬುದು ಖಚಿತವಾಗುತ್ತದೆ.

ಮೈಲಾರ ಎನ್ನುವ ಮಾತು ಕ್ಷೇತ್ರವೊಂದನ್ನು ನಿರ್ದೇಶಿಸಿದಂತೆ ಸಾಹಿತ್ಯ ಮತ್ತು ಜಾನಪದ ಸಾಹಿತ್ಯಗಳೆರಡರಲ್ಲಿಯೂ ಕಂಡುಬರುತ್ತದೆ. ಕಾಶಿಮೈಲಾರ ಎಂಬ ಉಲ್ಲೇಖ ಅನೇಕ ಕಡೆ ದೊರೆಯುತ್ತದೆ. ಇದರಿಂದ ಎರಡು ರೀತಿಯ ತೀರ್ಮಾನಕ್ಕೆ ಬರಲು ಸಾಧ್ಯ. ಒಂದು ಕಾಶಿ ಎಂಬ ಮೈಲಾರ ಎನ್ನುವ ಅರ್ಥದಲ್ಲಿ ಕಾಶಿಗೆ ಇರಬಹುದಾದ ಪರ್ಯಾಯ ಹೆಸರು. ಎರಡನೆಯದು ಕಾಶಿ ಮೈಲಾರ ಎಂದರೆ ಕಾಶಿಯಷ್ಟೇ ಪವಿತ್ರವಾದ ಮತ್ತು ಹೆಸರಾದ ಮತ್ತೊಂದು ಶೈವಕ್ಷೇತ್ರ. ಮೈಲಾರಗೊರವರು ಎಂಬುದು ಒಂದು ಕ್ಷೇತ್ರದಿಂದ ದೇವರಿಗೆ ಅನ್ವಯವಾಗುವುದೇ ಹೆಚ್ಚು. ಯಾವುದೇ ಗುಡ್ಡರು ಜೋಗಿಗಳು, ತಮ್ಮಡಿಗಳು, ಗೊರವರು ಇವರೆಲಲಾ ಪ್ರಧಾನವಾಗಿ ದೇವರಿಗೆ ಅನ್ವಯವಾಗುತ್ತದೆ. ಯಾವುದೇ ಧರ್ಮದ ಕ್ಷೇತ್ರ ನಾನಾ ಕಾರಣಗಳಿಗಾಗಿ ಪ್ರಸಿದ್ಧಿ ಪಡೆಯುತ್ತವೆ. ನಯಸೇನ ಧಾರವಾಡ ಜಿಲ್ಲೆಯ ಮುಳಗುಂದದವನು. ಆದುದರಿಂದ ಅವನು ಹೇಳಿರುವ ಮೈಲಾರಕ್ಷೇತ್ರ ಇದೇ ಜಿಲ್ಲೆಯಲ್ಲಿರುವ ಗುಡ್ಡದ ಮೈಲಾರ ಕ್ಷೇತ್ರವನ್ನು ಕುರಿತದಾಗಿದೆಯೆನಿಸುತ್ತದೆ. ಈ ಕಾರಣಗಳಿಂದಾಗಿ ಬ್ರಹ್ಮಶಿವ ಹೇಳುವ ಚಟ್ಟಪನು ಪ್ರಾಯಃ ಮೈಲಾರ ಮಾಳಿಯರ ಯಾವುದೋ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದವನಾಗಿರಬೇಕು. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡ ಬ್ರಹ್ಮಶಿವ” ನಿನ್ನೆ ತಾನಾದ ಎಂದು ಹೇಳಿರಬೇಕು. ಈ ಮಾತನ್ನು ಮೈಲಾರ ಲಿಂಗದ ಪ್ರಾಚೀನತೆಯ ಆಧಾರವನ್ನಾಗಿ ತೆಗೆದುಕೊಳ್ಳುವುದು ಸರಿಯಲ್ಲವೆನಿಸುತ್ತದೆ. ಜೀರ್ಣೋದ್ಧಾರ ಮಾಡಿಸಿದವನನ್ನು ದೇವಾಲಯ ಮಾಡಿಸಿದ ಎಂದೇ ಕರೆದಿರುವ ಅನೇಕ ಉದಾಹರಣೆಗಳು ನಮ್ಮ ಶಾಸನಗಳಲ್ಲಿ ಸಾಹಿತ್ಯದಲ್ಲಿ ದೊರೆಯುತ್ತದೆ.

ಮೈಲಾರನಿಗೆ ಅವನ ಭಕ್ತರು ಕುರುಳು, ಬೆರಳನ್ನು ಕೊಡುವ ಪದ್ಧತಿಯನ್ನು ಅನೇಕ ವೀರಶೈವ ಕವಿಗಳು ಗೇಲಿ ಮಾಡಿದ್ದಾರೆ. ಭೈರವನಿಗೆ ಮಾನವನನ್ನೇ ಬಲಿ ಕೊಡುವ ಪದ್ಧತಿ ಇದ್ದ ಬಗ್ಗೆ ಆಧಾರಗಳು ದೊರೆಯುತ್ತವೆ. ಉದಾಹರಣೆಗೆ ಕೆಳಗಿನ ಹೇಳಿಕೆಯನ್ನು ಗಮನಿಸಬಹುದು. “The mother godess most plainly depicted before whom a human sacrifice is being performed. The Dravidian beliefs were deeply enough enter enched in India to survive the changes brought about the successive waves of aryan Invansion took place from about 1800 BC led to or at least coincided with the decline and disappearance of the Indus valey cities. In a number of particulars the iconography of the Indus valley civilization, and therefore possibly beliefs reappears with the first hindu cult images of gods of the first to fourth centuries ad. Thus Shiva and his consort resemble the Dravidian cult figures in many respects Shiava often being depicted in a cross legged yogi posture with the bull nandi as his symbol, and his consort being associated with human sacrifice” ಶಕ್ತಿ ದೇವತೆಗಳ ಆರಾಧಕರಲ್ಲಿ ಮನುಷ್ಯ ಬಲಿಯ ಪದ್ಧತಿ ಜಾರಿಯಲ್ಲಿದ್ದಿತೆಂಬುದು ಮೇಲಿನ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಕರ್ನಾಟಕದ ಮರುಸು ಒಕ್ಕಲಿಗರಲ್ಲಿ ಭೈರವನಿಗೆ ಬೆರಳು ಕೊಡುವ ಪದ್ಧತಿ ಇತ್ತು. ಇದನ್ನು ಬೆಂಗಳೂರು ನಗರ ನಿರ್ಮಾಪಕ ಒಂದನೆಯ ಕೆಂಪೇಗೌಡ ತಪ್ಪಿಸಿದನೆಂದು ತಿಳಿದುಬರುತ್ತದೆ.

ವೀರಶೈವ ಜಂಗಮರು, ವಚನಕಾರರು, ಕವಿಗಳು ಈ ಮೈಲಾರ, ಭೈರವ, ಕಾಳಿ ಇತ್ಯಾದಿ ದೇವರುಗಳನ್ನು ಮತ್ತು ಆ ಸಂಬಂಧವಾದ ಸಂಪ್ರದಾಯಗಳ ಮೇಲೆ ಅಷ್ಟೊಂದು ಪ್ರಬಲವಾದ ದಾಳಿ ಮಾಡಿರುವುದನ್ನು ನೋಡಿದರೆ ಇವೆಲ್ಲಾ ಆ ಕಾಲಕ್ಕೆ ಅತ್ಯಂತ ಪ್ರಭಾವಶಾಲಿ ದೈವಗಳಾಗಿದ್ದುವೆಂದು ಹೇಳಬಹುದು. ಈಗಲೂ ಈ ದೇವತೆಗಳಿಗೆ ನಡೆದುಕೊಳ್ಳುವವರು ಬಹುಸಂಖ್ಯೆಯ ಜನರೇ ಆಗಿದ್ದಾರೆ. “ಮೈಲಾರ ದೈವವೆಂದಾರಾಧಿಸಿದವನು ಕೊರಳಲ್ಲಿ ಕವಡೆಯ ಕಟ್ಟೆ” ಎಂಬ ಮಾತುಗಳು ಮೈಲಾರ, ಭೈರವರು ಅಭಿನ್ನರೆಂಬುದನ್ನು ಸಾಬೀತು ಮಾಡುತ್ತವೆ. ಹರಿಹರನು ಬರೆದಿರುವ ಶಂಕರ ದಾಸಿಮಯ್ಯ ರಗಳೆಯು ಸಹ ಲೋಕವೇ ಅರ್ಚಿಸುವ ಮೈಲಾರ ಕೊಡೆ ಹಿಡಿದುದನ್ನು ಕಂಡುಜನ ಅಚ್ಚರಿಪಟ್ಟಿದ್ದನು ಹೇಳುವುದರ ಮೂಲಕ ಆ ಕಾಲದಲ್ಲಿ ಮೈಲಾರನಿದ್ದ ಪ್ರಭಾವವನ್ನು ಸೂಚಿಸಿದಂತಾಗುತ್ತದೆ. ಈ ಬಗ್ಗೆ ವಾದವಿವಾದ ಮತ್ತು ಘರ್ಷಣೆಗಳು ನಡೆದಿವೆ. “ಮೈಲಾರ ಶಿವನ ಅವತಾರವೆಂದು ಅವನ ಭಕ್ತರೂ ವಾದಿಸಿದರೆ, ಇತರರು ಅವನಿಗೂ ಶಿವನಿಗೂ ಸಂಬಂಧವೇ ಇಲ್ಲವೆಂದು ವಾದಿಸುತ್ತಿದ್ದಂತೆ ಕಾಣುತ್ತದೆ” ಎಂಬ ಮಾತಿನಲ್ಲಿ ಆಶ್ಚರ್ಯವಾದುದೇನಿಲ್ಲ. ಏಕೆಂದರೆ ನಮ್ಮ ದೇಶದ ಯಾವ ಭಕ್ತರು ದೈವವಲ್ಲದ್ದನ್ನು ಹೊಗಳಿದ್ದಾರೆ? ಕುಮಾರವ್ಯಾಸ “ವೀರರಿಹ ಹೊತ್ತು ರಣ ಮೈಲಾರರಾದರು ಮರಳಿತೆಗೆವುತ ಭೈರವನ ಸಾರೂಷ್ಟ್ಯವಾದರು” ಎಂಬ ಮಾತೂ ಮೈಲಾರ ಭೈರವನ ಮತ್ತೊಂದು ರೂಪ ಎಂಬುದನ್ನು ಹೇಳುತ್ತದೆ.

ಮೈಲಾರನನ್ನು ಕುರಿತು ಇಷ್ಟೆಲ್ಲಾ ಪರಿಶೀಲಿಸಿದ ನಂತರ ಕೆಲವು ಸ್ಪಷ್ಟ ತೀರ್ಮಾನಗಳಿಗೆ ಬರುವುದು ಸಾಧ್ಯ. ಮೊದಲನೆಯದಾಗಿ ಮೈಲಾರ ಅತ್ಯಂತ ಪ್ರಾಚೀನವಾದ ಶೈವ ಸಂಪ್ರದಾಯದ ದೇವತೆ. ಅವನಿಗೆ ಸಂಬಂಧಿಸಿದ ಸಂಪ್ರದಾಯಗಳೂ ಅಷ್ಟೇ ಹಳೆಯವು. ಶಿವನ ಪತ್ನಿ ಪಾರ್ವತಿಯ ಮಹಾಕಾಳಿ ರೂಪವೇ ಕಾಳಿ. ಎರಡನೆಯದಾಗಿ ಮೈಲಾರ ಕರ್ನಾಟಕಕ್ಕೆ ಸೀಮಿತವಾದ ದೇವತೆಯಲ್ಲ ಶೈವಧರ್ಮ ಎಲ್ಲೆಲ್ಲಿ ಪ್ರಬಲವಾಗಿತ್ತೋ ಅಲ್ಲೆಲ್ಲಾ ಇದ್ದವನು. ಜೈನರು ಮತ್ತು ವೀರಶೈವರು ಮೈಲಾರನ ಬಗ್ಗೆ ಮಾಡುವ ಹೇಳಿಕೆಗಳು ಪೂರ್ವಗ್ರಹ ಪೀಡಿತವಾದುದರಿಂದ ಅವುಗಳಲ್ಲಿ ನಿಂದೆಯನ್ನುಳಿದು ಯಾವುದೇ ಸತ್ಯಾಂಶವಿಲ್ಲ. ಶಿವನ ಇಪ್ಪತ್ತೈದು ಲೀಲೆ ಅಥವಾ ಅವತಾರಗಳಲ್ಲಿ ಮೈಲಾರನೂ ಒಂದು ಎಂದು ಹೇಳಬಹುದು.

ದಕ್ಷಿಣ ಕರ್ನಾಕ ರಾಜಕೀಯ ಮತ್ತು ಧಾರ್ಮಿಕವಾಗಿ ಅತ್ಯಂತ ಪ್ರಧಾನವಾದ ನೆಲ. ಸುಮಾರು ಎಂಟುನೂರು ವರ್ಷಗಳ ಕಾಲ ಆಳಿದ ಗಂಗರು ಮತ್ತು ಅವರು ಜೈನಧರ್ಮಕ್ಕೆ ನೀಡಿದ ಪ್ರೋತ್ಸಾಹ. ಕಲೆಯ ಉನ್ನತಿಕೆಯನ್ನೂ ರಾಜಕೀಯ ಉನ್ನತಿಕೆಯನ್ನೂ ಒಟ್ಟಿಗೆ ಮೆರೆದ ಹೊಯ್ಸಳರು ಮತ್ತು ಶ್ರೀವೈಷ್ಣವ ಧರ್ಮಕ್ಕೆ ನೀಡಿದ ಪ್ರೋತ್ಸಾಹ ಅನಾದಿಕಾಲದಿಂದಲೂ ನಡೆದು ಬಂದ ಶೈವಧರ್ಮ. ವಿಜಯನಗರದ ಅರಸರು, ಯಲಹಂಕ ಪ್ರಭುಗಳು, ಮೈಸೂರು ಅವರ ಸರ್ವಧರ್ಮ ಸಹಿಷ್ಣುತೆ ಮತ್ತು ಸಮನ್ವಯ. ಈ ಭಾಗದಲ್ಲಿ ಒಕ್ಕಲಿಗರು ಪ್ರಧಾನ ಜನಾಂಗವಾದುದರಿಂದ ಭೈರವ ಹೆಚ್ಚು ವ್ಯಾಪಕವಾದ ದೈವವಾಗಿದ್ದನು. ಈಗಲೂ ಅದು ಸತ್ಯಸಂಗತಿಯೇ ಆಗಿದೆ. ಮೈಲಾರನ ಭಕ್ತರು ದಕ್ಷಿಣ ಕರ್ನಾಟಕಕ್ಕೆ ಸಂಬಂಧಿಸಿದಂತೆ ಪ್ರಧಾನವಾಗಿ ಒಕ್ಕಲಿಗರು, ಕುರುಬರಲ್ಲಿಯೂ ಸಾಧಾರಣವಾಗಿ ಮಿಕ್ಕ ಜನಾಂಗಗಳಲ್ಲಿಯೂ ಇದ್ದಾರೆ. ಜೋಗಿಗಳು ಒಕ್ಕಲಿಗರಾದರೆ ಗೊರವರು ಕುರುಬರು. ದಕ್ಷಿಣ ಕರ್ನಾಟಕದ ಊರುಗಳಲ್ಲಿ ಊರಿಗೊಂದು ಭೈರವನ ಗುಡಿಯಿದೆ. ಹಾಗೆಯೇ ಮೈಲಾರನ ಗುಡಿಗಳೂ ಅಲ್ಲಲ್ಲಿ ಇವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪರಿಶೀಲಿಸುವಾಗ ದಕ್ಷಿಣ ಕರ್ನಾಟಕದ ರೈತ ಜನಾಂಗದಲ್ಲಿ ಭೈರವ ಮತ್ತು ಮೈಲಾರ ಸಂಪ್ರದಾಯಗಳು ವ್ಯಾಪಕವಾಗಿರುವುದು ಕಂಡುಬರುತ್ತದೆ.

ಮೈಲಾರನ ಗೊರವರು ಸಾಮಾನ್ಯವಾಗಿ ಕುರುಬ ಜನಾಂಗದವರೇ ಆಗಿರುತ್ತಾರೆ. ಗೊರವ, ಗೊರವಯ್ಯ ಎಂದು ದಕ್ಷಿಣ ಕರ್ನಾಟಕ ಭಾಗದಲ್ಲಿ ಇವರನ್ನು ಗುರುತಿಸುತ್ತಾರೆ. ಜೋಗಿಗಳು ಒಕ್ಕಲಿಗರಾಗಿರುತ್ತಾರೆ. ಗೊರವಯ್ಯ ಪಂಚೆ, ಶರಟು ತೊಟ್ಟು ಕವಡೆ ಹೊಲಿದ ಬಣ್ಣದ ಇನ್ನೊಂದು ಮೇಲು ಹೊದಿಕೆ ಧರಿಸುತ್ತಾನೆ. ಹೆಗಲ ಮೇಲೆ ಕರಿಯ ಕಂಬಳಿ ತಲೆಯಲ್ಲಿ ಕರಡಿ ಚರ್ಮದ ಟೋಪಿ. ಕೈಯಲ್ಲಿ ಡಮರು ಮತ್ತು ಕೊಳಲು. ಹಣೆಗೆ ವಿಭೂತಿ ಇದು ಶಿವ ಗೊರವನಾಗಿ ಬಂದುದರ ಸಂಕೇತ, ಗೊರವ ಧಾರ್ಮಿಕ ಪೌರೋಹಿತ್ಯವನ್ನು ಮಾಡುತ್ತಾನೆ. ಭಕ್ತರ ಮನೆಯ ಹಬ್ಬ ಹರಿದಿನಗಳಲ್ಲಿ ಈತನನ್ನು ಕರೆದು ಎಡೆ ಮಾಡಿಸುವ ಪದ್ಧತಿಯಿದೆ. ಈತ ಆಯಾ ಕ್ಷೇತ್ರ, ಮಠ, ಸ್ಥಳಗಳ ಪ್ರಚಾರಕನೂ ಹೌದು. ಹಾಗೆಯೇ ಭಕ್ತರಿಂದ ದೇವರಿಗೆ ಸಲ್ಲಬೇಕಾದ ಹರಕೆಯಗಳನ್ನು ಸ್ವೀಕರಿಸುವ ಅವುಗನ್ನು ದೇವಾಲಯ, ಮಠಗಳಿಗೆ ತಲುಪಿಸುವ ಜವಾಬ್ದಾರಿಯೂ ಇವರದಾಗಿರುತ್ತದೆ. ಗೊರವರ ಕುಣಿತ ಒಂದು ಧಾರ್ಮಿಕ ಕಲೆಯಾಗಿ ವಿಕಾಸಗೊಂಡುದು. ತಮ್ಮ ಧಾರ್ಮಿಕ ಉಡುಪಿನಲ್ಲಿ ಡಮರುಗ ಬಾರಿಸುತ್ತ, ಕೊಳಲೂದುತ್ತಾ ಗುಂಪು ಕೂಡಿ ವರ್ತಿಸುವುದೊಂದು ಅತ್ಯಂತ ಆಕರ್ಷಣೀಯವಾದ ದೃಶ್ಯವಾಗಿರುತ್ತದೆ.

ಗೊರವನಾಗಬೇಕಾದವನು ದೀಕ್ಷೆ ಪಡೆಯಬೇಕಾಗುತ್ತದೆ. ತಂದೆಯ ಹಿರಿಯ ಮಗ ಸಾಮಾನ್ಯವಾಗಿ ಈ ದೀಕಷೆಗೆ ಅರ್ಹನೆಂಬುದು ಪದ್ಧತಿ. ವಯಸ್ಸಿಗೆ ಬಂದ ಭಕ್ತನಿಗೆ ದೀಕ್ಷೆ ಬೇಕೆನಿಸಿದಾಗ ಮೊದಲು ಮಠದ ಅಯ್ಯನಿಗೆ ಪ್ರಾರ್ಥನೆ ಸಲ್ಲಿಸಬೇಕು. ಅವನು ದೀಕ್ಷೆಗಾಗಿ ಪ್ರತ್ಯೇಕವಾದ ಮತ್ತು ಪ್ರಶಸ್ತವಾದ ದಿನವನ್ನು ಗೊತ್ತು ಮಾಡುತ್ತಾನೆ. ಪ್ರಾಚೀನ ಕಾಲದಲ್ಲಿ ಈ ದೀಕ್ಷೆ ಸಂಪ್ರದಾಯ ಹೇಗಿತ್ತೋ ಹೇಳುವುದು ಕಷ್ಟವಾದರೂ ಅದರ ಮೇಲೆ ವೈದಿಕ ಸಂಪ್ರದಾಯದ ಪ್ರಭಾವ ಉಂಟಾಗಿರುವುದು ಕಂಡುಬರುತ್ತದೆ. ದೀಕ್ಷೆಗೆಂದು ಗೊತ್ತಾದ ದಿನ ಮನೆ ಮಠಗಳನ್ನೆಲ್ಲ ಗುಡಿಸಿ ಸಾರಿಸಿ ಸ್ವಚ್ಛಗೊಳಿಸಬೇಕು. ಮನೆ ಮಂದಿಯಲ್ಲ ಮಿಂದು ಮಡಿಯಾಗುತ್ತಾರೆ. ಆ ದಿನದ ಆಹಾರ ಕೂಡ ವೈದಿಕ ಸಂಪ್ರದಾಯದ ಪ್ರಭಾವದಿಂದಾಗಿ ಗೊರವರು ಮಾಂಸಾಹಾರಿಗಳಾದರೂ ಆ ದಿವಸ ಆಹಾರ ಬೇರೆ ರೀತಿಯದಾಗಿರುತ್ತದೆ. ದೀಕ್ಷೆ ಪಡೆಯುವವನು. ಮಿಂದು ಮಡಿಯುಟ್ಟು ಅಂಗಾಂಗಗಳಿಗೆ ವಿಭೂತಿ ಧರಿಸಬೇಕು. ನಿಗದಿಯಾದ ಹೊತ್ತಿಗೆ ಮಠದ ಅಯ್ಯ ಅಥವಾ ಅವನ ಪರವಾಗಿ ಕೆಲಸ ಮಾಡುವ ಪುರೋಹಿತ, (ಇವರೆಲ್ಲರೂ ಕುರುಬ ಜನಾಂಗದವರೆ)ಬರುತ್ತಾನೆ. ಕರಿಯ ಕಂಬಳಿಯ ಗದ್ದುಗೆಯ ಮೇಲೆ ದೀಕ್ಷಾಪೇಕ್ಷಿತನವನ್ನು ಕೂರಿಸುತ್ತಾರೆ. ಅವನು ಕೈಗೆ ಕಂಕಣ, ಕಾಲಿಗೆ ಮಿಂಚು ಧರಿಸಿರುತ್ತಾನೆ. ಪಂಚಕಲಶದ ಮೇಲೆ ಕೈಯಿಟ್ಟು ಮೈಲಾರದೇವರ ಹೆಸರಿನಲ್ಲಿ

೧. ಹೊಲದಲ್ಲಿ ಮೇಯುವ ಹಸುವನ್ನು ಓಡಿಸುವುದಿಲ್ಲ.

೨. ಹಾಲು ಕುಡಿಯುವ ಕರುವನ್ನು ತಡೆಯುವುದಿಲ್ಲ.

೩. ಸರ್ಪವನ್ನು ಕೊಲ್ಲುವುದಿಲ್ಲ.

೪. ತಂದೆ ತಾಯಿಯರನ್ನು ದೂಷಿಸುವುದಿಲ್ಲ.

೫. ಕಾಲಿಗೆ ಎಕ್ಕಡ ಹಾಕುವುದಿಲ್ಲ.

೬. ಗಾಡಿಯ ಮೇಲೆ ಕೂರುವುದಿಲ್ಲ.

ಪ್ರಮಾಣ ವಚನ ಸ್ವೀಕರಿಸುತ್ತಾನೆ. ಇವೆಲ್ಲವೂ ಏನನ್ನು ಸೂಚಿಸುತ್ತವೆಯೆಂಬುದನ್ನು ಖಚಿತವಾಗಿ ಹೇಳುವುದು ಕಷ್ಟ. ಮೇಯುವ ಹಸುವನ್ನು ಓಡಿಸುವುದಿಲ್ಲ. ಹಾಲು ಕುಡಿಯುವ ಕರುವನ್ನು ತಡೆಯುವುದಿಲ್ಲ ಎಂಬುದು ಜ್ಞಾನಕ್ಕೆ ಅಡ್ಡ ಬರುವುದಿಲ್ಲವೆಂಬ ಸಂಕೇತವಂತೆ. ಕಾಲಿಗೆ ಎಕ್ಕಡ ಹಾಕುವುದಿಲ್ಲ ಎಂಬುದು ಪಾವಿತ್ರ್ಯದ ಸಂಕೇತವಂತೆ. ಗಾಡಿಯ ಮೇಲೆ ಕೂರುವುದಿಲ್ಲ ಎಂಬುದು ಗೊರವ ಬರಿಗಾಲಲ್ಲಿ ನಡೆದು ಧರೆಯ ಮೇಲಿನ ಸಕಲರನ್ನು ಸಂಪರ್ಕಿಸಬೇಕು ಎಂಬುಂದಂತೆ. ಇನ್ನು ತಂದೆ ತಾಯಿ ಸರ್ಪ ಹಸು ಇತ್ಯಾದಿ ದೇವರ ಸಂಕೇತವಂತೆ. ಆರ್ಯರು ಬರುವ ಮೊದಲು ಇಲ್ಲಿನ ಜನ ಇವುಗಳನ್ನೆಲ್ಲಾ ದೇವರೆಂದು ಪೂಜಿಸುತ್ತಿದ್ದರು. “Significanly from Aryan times onwards the majority of serpents or nagas were considered demons” ಎಂಬ ಅಭಿಪ್ರಾಯವಿದೆ. ಈ ಕಾರಣದಿಂದಲೇ ಆ ಸಂಸ್ಕೃತಿಯ ಮೂಲ ಸೆಲೆಗಳು ಈ ರೀತಿಯಲ್ಲಿ ಉಳಿದುಕೊಂಡು ಬಂದಿರಬಹುದೇನು?

ದೀಕ್ಷೆಯನ್ನು ಪಡೆದ ಗೊರವರುಗಳು ಆಗಾಗ ದೇವಾಲಯ ಅಥವಾ ಮಠಗಳಲ್ಲಿ ಸೇರುವುದುಂಟು. ದೇವರ ವಾರ್ಷಿಕ ಜಾತ್ರೆಯ ಸಮಯದಲ್ಲಿ ಪ್ರಮುಖವಾದ ಇಲ್ಲಿನ ಮೂಲಪ್ರತಿಯಿಂದ ಸರಿಮಾಡಿ ಹಾಲು, ಹಣ್ಣು, ಸಕ್ಕರೆ ತುಪ್ಪಗಳನ್ನು ತಂದು ದೋಣಿಯಲ್ಲಿ ಹಾಕುತ್ತಿರುತ್ತಾರೆ. ಸ್ವಲ್ಪ ಕಾಲದ ನಂತರ ಗೊರವಯ್ಯಗಳು ದೇವಾಲಯದೊಳಗೆ ಹೋಗಿ ಪೂಜಾರಿಯಿಂದ ತೀರ್ಥ ಮತ್ತು ಭಂಡಾರವನ್ನು ಪಡೆಯುತ್ತಾರೆ. ಭಂಡಾರವನ್ನು ಹಚ್ಚಿಕೊಂಡ ನಂತರ ಅವರಿಗೆ ಆವೇಶ ಉಂಟಾಗುತ್ತದೆ. ಆಗ ಉನ್ಮತರಂತೆ ಕುಣಿಯತೊಡಗುತ್ತಾರೆ. ಆವೇಶ ಏರಿದಂತೆಲ್ಲಾ ಅವರು ನಾಯಿಗಳಂತೆ ವರ್ತಿಸತೊಡಗುತ್ತಾರೆ. ಕೈಗಳನ್ನು ನೆಲಕ್ಕೂರಿ ಚತುಷ್ಪದಿಯಾಗಿ ಬಿಡುತ್ತಾರೆ. ಆಹಾರವನ್ನು ತಿನ್ನುವಾಗಿ ನಾಯಿಗಳು ಮಾಡುವಂತಹ ಎಲ್ಲಾ ಚೇಷ್ಟಗಳನ್ನು ಮಾಡುತ್ತಾರೆ. ಪರಸ್ಪರ ಕಚ್ಚಾಡುವುದು. ಪ್ರೇಕ್ಷಕರ ಮೇಲೆ ಬೀಳುವಂತೆ ಹೋಗುವುದು ಇತ್ಯಾದಿ. ಈ ಹಂತದಲ್ಲಿ ಪ್ರೇಕ್ಷಕರಿಂದ ಕರಿಯ ಕಂಬಳಿಯೊಂದನ್ನು ಕಿತ್ತು ತುದು ಹಾಸುತ್ತಾರೆ. ಈ ಹೊತ್ತಿಗೆ ಅವರ ಬಗುಳಾಟ ತಾರಕಕ್ಕೇರಿರುತ್ತದೆ. ಆಗ ಒಬ್ಬ ಗೊರವ ಮತ್ತೊಬ್ಬನ ಮೇಲೆ ಹರಿಹಾಯುತ್ತಾನೆ. ಅವನು ಸತ್ತಂತೆ ಬೀಳುತ್ತಾನೆ. ಕೂಡಲೇ ಅವನನ್ನು ಗದ್ದುಗೆಯ ಎದುರು ಹಾಸಿದ ಕರಿಯ ಕಂಬಳಿ ಮೇಲೆ ಮಲಗಿಸಿ ಅದರಿಂದ ಅವನ ದೇಹವನ್ನು ಸುತ್ತುತ್ತಾರೆ. ಇಲ್ಲಿಗೆ ಮೊದಲ ಹಂತದ ಸೇವೆ ಮುಗಿಯುತ್ತದೆ.

ಈಗ ಗೊರವಯ್ಯಗಳ ಮುಖಂಡ ಬರುತ್ತಾನೆ. ಸತ್ತವನನ್ನು ಬದುಕಿಸುವ ಪವಾಡ ನಡೆಯುತ್ತದೆ. ಕಂಬಳಿಯಲ್ಲಿ ಸುತ್ತಿದವನನ್ನು ದೇವಾಲಯದೊಳಕ್ಕೆ ಎತ್ತಿಕೊಂಡು ಹೋಗುತ್ತಾರೆ. ಪೂಜಾರಿ ದೇವರಿಗೆ ಪೂಜೆ ಸಲ್ಲಿಸಿ ಸತ್ತವನನ್ನು ಬದುಕಿಸುವಂತೆ ಪ್ರಾರ್ಥಿಸಿ ಅವರಿಗೆಲ್ಲಾ ಮತ್ತೆ ತೀರ್ಥ ಭಂಡಾರ ಕೊಡುತ್ತಾನೆ. ಮುಖಂಡ ಸತ್ತವನನ್ನು ಬದುಕಿಸಲು ಊರ ಮುಖಂಡರ ಅನುಮತಿ ಕೇಳುತ್ತಾನೆ. ಎಲ್ಲರ ಪರವಾಗಿ ಊರಗೌಡ ಅನುಮತಿ ಕೊಡುತ್ತಾನೆ. ದೇವರ ತೀರ್ಥ ಪ್ರಸಾದಗಳನ್ನು ಸತ್ತವನ ಮೇಲೆ ತಳಿದು ಆವೇಶದಿಂದ ಕುಣಿಯಲಾರಂಭಿಸುತ್ತಾರೆ. ಆಗ ಸತ್ತವನು ಎದ್ದು ಕೂರುತ್ತಾನೆ. ಈ ಹೊತ್ತಿಗೆ ಭಕ್ತರ ಹರಕೆಯ ಕಾಣಿಕೆಗಳಿಂದ ದೋಣಿಗಳು ತುಂಬಿ ತುಳುಕುತ್ತವೆ. ಆಗ ಗೊರವರೆಲ್ಲ ನಾಯಿಗಳಂತೆ ದೋಣಿಗೆ ಬಾಯಿ ಹಾಕುತ್ತಾರೆ. ಸ್ವಲ್ಪ ತಿಂದ ನಂತರ ಉಳಿದುದನ್ನು ಭಕ್ತರು ಪ್ರಸಾದವೆಂದು ಮನೆಗಳಿಗೆ ಕೊಂಡೊಯ್ಯುತ್ತಾರೆ. ಇಲ್ಲಿಗೆ ದೋಣಿ ಸೇವೆ ಮುಗಿಯುತ್ತದೆ. ಗೊರವಯ್ಯಗಳ ಮತ್ತು ಭಕ್ತರ ಆವೇಶ ಇಳಿಯುತ್ತದೆ.

ಅತ್ಯಂತ ಪ್ರಾಚೀನವಾದ ಭಾರತೀಯ ಮೂಲ ಜನಾಂಗಗಳ ಆಚರಣೆಗಳು ಪದ್ಧತಿ ಸಂಪ್ರದಾಯಗಳು ವಿದೇಶಿ ಭಾಷೆ ಮತ್ತು ಸಂಸ್ಕೃತಿಗಳ ಅಕ್ರಮಣದಿಂದಾಗಿ ರೂಪಾಂತರಗಳನ್ನು ಹೊಂದಿವೆ. ಜನಾಂಗ ಮುಂದುವರಿದಂತೆ (ಹಬ್ಬ ಹರಿದಿನಗಳಲ್ಲಿ ಗೊರವರೆಲ್ಲಾ ಸೇರುವುದುಂಟು. ಇವರೆಲ್ಲಾ ದೇವರ ಸೇವಕರಾದುದರಿಂದ ಭಕ್ತರು ಅರ್ಪಿಸುವ ಹರಕೆಯನ್ನು ಸ್ವೀಕರಿಸುವುದು ಸಂಪ್ರದಾಯ. ಸಾಮಾನ್ಯವಾಗಿ ಶಕ್ತಿ ದೇವತೆಗಳ ಹಬ್ಬ ಹರಿದಿನಗಳಲ್ಲಿ ಆಯಾ ದೇವತೆಯ ಬಂಟರಿಗೂ ನಾನಾ ರೀತಿಯ ಹರಕೆಗಳು ಸಲ್ಲುವುದುಂಟು. ಇಲ್ಲಿ ಕೂಡ ವೈದಿಕ ಪ್ರಭಾವವನ್ನು ಕಾಣಬಹುದು. ಮೊದಲು ದೇತೆಗೆ ಬಲಿ ಕೊಡುತ್ತಿದ್ದ ಪದ್ಧತಿಯನ್ನು ದೇವರ ಬಂಟರಿಗೆ ಮಾತ್ರ ಪ್ರಾಣಿ ಬಲಿ ದೇವತೆಗಲ್ಲ ಎಂಬಂತೆ ಬದಲಾಯಿಸಲಾಗಿದೆ. ಹೀಗೆ ಭಕ್ತರು ಬಂಟರು ಆಚರಿಸುವ ಸಮಾರಂಭಗಳ ಕಾಲದಲ್ಲಿ ಆಯಾ ದೇವರಿಗೆ ಸಂಬಂಧಿಸಿದ ಅನೇಕ ರೀತಿಯ ಆಚರಣೆಗಳು ನಡೆಯುತ್ತವೆ. ಮೈಲಾರ ಸಂಪ್ರದಾಯದವರು ಇಂತಹ ಸಮಾರಂಭಗಳಲ್ಲಿ ದೋಣಿ ಸೇವೆ ಎಂಬ ವಿಶೇಷ ಆಚರಣೆಯೊಂದು ನಡೆಯುತ್ತದೆ. ಮೈಲಾರನ ವಾಹನ ಮತ್ತು ಮುಖ್ಯಸೇನೆ ನಾಯಿ. ಮಣೆಮಲ್ಲಾಸುರನನ್ನು ಕೊಲ್ಲಲು ಭೈರವನು ಮಾರ್ತಾಂಡ ಭೈರವಾವತಾರಣವೆತ್ತಿದಾಗ ಅವನ ಹಿಂದೆ ಇದ್ದುದು ನಾಯಿಸೇನೆ ಅದರ ಸಂತೃಪ್ತಿಗೆ ಭಕ್ತರು ನಡೆಸಿಕೊಡುವುದೇ ಈ ದೋಣಿಸೇವೆ. ಇದರ ಸಂಕೇತ ಏನು ಎಂದು ಹೇಳುವುದು ಕಷ್ಟ. ಗ್ರಾಮಾಂತರ ದೇವಾಲಯಗಳ ಗರ್ಭಗುಡಿಯ ಅಕ್ಕಪಕ್ಕ ಎರಡು ಭಯಂಕರ ವಿಗ್ರಹಗಳಿರುತ್ತವೆ. ಇವರನ್ನು ದೇವರ ಬಂಟರು, ದ್ವಾರಪಾಲಕರು, ದೊಣ್ಣೆರಾಯ ಎಂದೆಲ್ಲಾ ಕರೆಯುವ ಪದ್ಧತಿಯುಂಟು. ಈ ದೊಣ್ಣೆರಾಯನಿಗೆ ಮೊದಲು ಸೇವೆ ಮಾಡಿ ಅನಂತರ ದೇವರ ಸೇವೆ ಮಾಡುವುದುಂಟು. ಆದುದರಿಂದ ದೊಣ್ಣೆರಾಯನ ಸೇವೆ ದೋಣಿಸೇವೆ ಆಗಿ ದೋಣಿಸೇವೆ ಆಗಿರಬಹುದೆ? ಹೀಗೆಯೇ ಶ್ರೀವೈಷ್ಣವ ಒಕ್ಕಲಿಗರಲ್ಲಿ ಮಣೆಸೇವೆ ಪದ್ಧತಿ ಇದೆ. ಆದರಿಲ್ಲಿ ವಾಸ್ತವ ಸಂಗತಿಯೆಂದರೆ ಈ ಸೇವೆ ಮೈಲಾರನ ವಾಹನ ನಾಯಿ ಆಹಾರ ಸೇವಿಸುವ ದೋಣಿಯಾಕಾರದ ಪಾತ್ರೆಯಾಕಾರದಿಂದ ಇದು ಬಂದಿದೆ ಎಂದು ಹೇಳಲು ಅವಕಾಶವಿದೆ).

ದೋಣಿಯೆಂದರೆ ಚೌಕಾಕಾರವಾಗಿರುವ ಬಟ್ಟಲುಗಳು. ಮಣಸೇವೆಯಲ್ಲಿ ಬವನಾಶಿಯೆಂಬ ಪಾತ್ರೆಯನ್ನು ಉಪಯೋಗಿಸುತ್ತಾರೆ. ಇಂತಹ ಸೇವೆಗಳು ಇರುವದಿನ ಅಥವಾ ಹಬ್ಬ ಹರಿದಿನಗಳಂದು ದೇವರಗುಡಿಯ ಮುಂದೆ ಗುಡಿಸಿ ಸಾರಿಸುತ್ತಾರೆ. ಮಧ್ಯಭಾಗದಲ್ಲಿ ಕರಿಯ ಕಂಬಳಿಯ ಗದ್ದುಗೆ ಹಾಕುತ್ತಾರೆ. ಗದ್ದುಗೆಯ ಸುತ್ತ ಗೊರವರು ತಮ್ಮ ದೋಣಿಗಳನ್ನು ಇಡುತ್ತಾರೆ. ಈ ಸೇವೆಯನ್ನು ನೋಡಲು ಊರಿನ ಜನರೆಲ್ಲ ಸೇರುತ್ತಾರೆ. ಡಮರುಗ ಭಾರಿಸುತ್ತಾ ಗೊರವರು ಗದ್ದುಗೆಯ ಸುತ್ತ ಕುಣಿಯುತ್ತಾರೆ. ಡಮರು ಸದ್ದು ಕೇಳಿದ ಮೇಲೆ ಹರಕೆ ಹೊತ್ತ ಭಕ್ತರುಗಳಲ್ಲೆಲ್ಲಾ ಬದಲಾವಣೆಗಳು ಆಗಿವೆ. ಮೊದಲಿಗೆ ಆರ್ಯರು, ಆಮೇಲೆ ಮುಸ್ಲಿಮರು, ಕೊನೆಯಲ್ಲಿ ಇಂಗ್ಲಿಷರು ಈ ದೇಶದ ಸಂಸ್ಕೃತಿಯ ಮೇಲೆ ದಳಿ ಮಾಡಿದರು. ಇಂಥ ಪ್ರಾಚೀನ ಕಾಲದ ಅನೇಕ ಸಂಪ್ರದಾಯಗಳು ಮೂಢನಂಬಿಕೆಯವು ಎಂದಾಗಿವೆ. ಇನ್ನೆಷ್ಟೋ ಸಂಪ್ರದಾಯಗಳಿಂದ ಸಾಮಾಜಿಕವಾಗಿ ಯಾವ ಪ್ರಯೋಜನವೂ ಇಲ್ಲ. ಆದರೆ ಇವುಗಳಿಂದ ಒಂದು ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸ ರೂಪಿಸುವಲ್ಲಿ ಈ ಸಂಪ್ರದಾಯಗಳು ಸಹಕಾರಿಯಾಗುತ್ತವೆ. ಮೈಲಾರಲಿಂಗ ಸಂಪ್ರದಾಯ ಸಹ ಇಂತಹ ಜಾನಪದ ಸಂಪ್ರದಾಯಗಳಲ್ಲಿ ಒಂದು ಎಂದು ಹೇಳಬಹುದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1] ಎಲ್‌. ಎಲ್ ನಾಗೇಗೌಡ ಪ್ರವಾಸಿ ಕಂಡ ಇಂಡಿಯಾ ಸಂಪುಟ ೧

* ಒಕ್ಕಲಿಗರ ಮೂಲದ ಬಗೆಗಿನ ಒಂದು ಕತೆ

[2] ಎಲ್. ಎಲ್ ನಾಗೇಗೌಡ ಪ್ರವಾಸಿ ಕಂಡ ಸಂಪುಟ ೧