ಭಾರತೀಯ ಇತಿಹಾಸ ಒಂದು ಕಟ್ಟು ಕಥೆ, ಸುಳ್ಳಿನ ಸರಮಾಲೆ, ತಮ್ಮ ಮೂಗಿನ ನೇರಕ್ಕೆ ಹೇಳಿ ಬರೆಯಿಸಿದ್ದು ಎಂಬೆಲ್ಲಾ ಅಭಿಪ್ರಾಯಗಳಿವೆ. ಬಹುತೇಕ ಈ ಅಭಿಪ್ರಾಯಗಳು ಸರಿ ಎಂದು ಹೇಳಬೇಕಾಗುತ್ತದೆ. ನಮ್ಮ ರಾಜಮಹಾರಾಜರ, ಚಕ್ರವರ್ತಿಗಳ ವಂಶಾವಳಿಯ ಕಥೆಗಳನ್ನು ಕೇಳಿದ ಯಾರಿಗಾದರೂ ನಮ್ಮ ಇತಿಹಾಸದೊಳಗಿನ ಆಭಾಸಗಳ ಪರಿಚಯವಾಗುತ್ತವೆ. ಚರಿತ್ರೆಯನ್ನು ಬರೆದವರು ಹೇಳುವ ವಿಷಯಗಳಿಗೆ ವ್ಯತಿರಿಕ್ತವಾದ ವಿಷಯಗಳು ಜನರ ಬಾಯಲ್ಲಿ ಉಳಿದುಬಂದಿವೆ. ಇತಿಹಾಸಕಾರರು ಅತ್ಯಂತ ಒಳ್ಳೆಯ ರಾಜನೊ ಚಕ್ರವರ್ತಿಯೊ ಎಂದು ಹೇಳುವವನು ಅತ್ಯಂತ ಕ್ರೂರಿಯಾಗಿರುವ ಸಂಗತಿಗಳು ದೊರೆಯುತ್ತವೆ ಹೊರಗಿನಿಂದ ಜೀವನ ಯಾಪನೆಗಾಗಿ ಬಂದವರು ಇಲ್ಲಿನ ಮೂಲನಿವಾಸಿಗಳನ್ನು ಹೇಗೆ ಹೆದರಿಸುತ್ತಿದ್ದರೆಂಬ ಸುಳಿವು ದೊರೆಯುತ್ತದೆ. ಹದಿನೈದನೆಯ ಶತಮಾನದಲ್ಲಿ ಭಾರತಕ್ಕೆ ಬಂದು ಹೋದ ಪ್ರವಾಸಿಯೊಬ್ಬ” ಮುಸ್ಲಿಮರಿಗೆ ಹಿಂದುಗಳು ಬಹಳ ಹೆದರಿತ್ತಾರೆ. ಅವರೇನು ಕಷ್ಟ ಕೊಟ್ಟರೂ ಸಹಿಸುತ್ತಾರೆ. ಒಬ್ಬ ಮುಸ್ಲಿಮನಿದ್ದರೆ ಸಾಕು ಸಾವಿರ ಹಿಂದುಗಳು ಬಾಯಿ ಮುಚ್ಚಿಕೊಂಡಿರುತ್ತಾರೆ” ಎಂದು ಹೇಳಿದ್ದಾನೆ. ಇದೆ ಕಾಲದಲ್ಲಿ ಬಂದು ಹೋದ ಇನ್ನೊಬ್ಬ ಪ್ರವಾಸಿ “ಹಿಂದೂ ಮತ ಮತ್ತು ಅದರ ಮೂಲವನ್ನು ಚನ್ನಾಗಿ ಅಭ್ಯಾಸ ಮಾಡಬೇಕೆಂಬುದು ನನ್ನ ಅಭಿಲಾಷೆಯಾಗಿತ್ತು. ಆದರೆ ಅದರಲ್ಲಿ ಕಟ್ಟು ಕಥೆಗಳು ಅಸಂಖ್ಯಾತ ಕಲ್ಪನೆಗಳು, ಅವತಾರಗಳು ಮುಢನಂಬಿಕೆಗಳು-ಇಷ್ಟನ್ನು ಬಿಟ್ಟರೆ ಅದಕ್ಕೆ ಮೂಲವೇ ಇಲ್ಲವೆಂದು ಗೊತ್ತಾಗುತ್ತದೆ ಕೈ ಬಿಟ್ಟೆ, ಎಂದು ಹೇಳಿದ್ದಾನೆ.

ಹೂಣರಿಂದ ಹಿಡಿದು ಇಂಗ್ಲೀಷರವರೆಗೆ ಅನೇಕಾನೇಕ ವಿದೇಶಿಯರು ಈ ದೇಶದ ಮೇಲೆ ದಾಳಿ ನಡೆಸಿದ್ದಾರೆ. ಕೆಲವರು ಬಂದರು ಇಲ್ಲಿನ ಐಶ್ವರ್ಯವನ್ನು ದೋಚಿಕೊಂಡು ಹೋದರು ಕೆಲವರು ಇಲ್ಲಿಯೆ ನೆಲೆಸಿ ಇಲ್ಲಿನ ಜನ ಮತ್ತು ಸಂಸ್ಕ್ರತಿಯ ಮೇಲೆ ದಾಳಿ ಮಾಡಿದ್ದಾರೆ. ಇವರಲ್ಲಿ ಮೊಗಲರು ಮುಖ್ಯರಾದವರು. ಬಾಬರ್‌ನಿಂದ, ಔರಂಗಜೇಬನ ಕಾಲದವರೆಗೆ ಆ ಕಾಲದಲ್ಲಿ ಬಂದು ಹೋದ ಪ್ರವಾಸಿಗರು ಕೊಡುವ ಘಟನೆಗಳು ನೆನೆದರೇ ರಕ್ತ ಬಿಸಿಯಾಗುತ್ತದೆ. ಹಾಗೆಯೇ ಭಾರತದ ಜನರ ಅದರಲ್ಲೂ ಹಿಂದೂಗಳ ಹೇಡಿತನವನ್ನು ಕೇಳಿ ನಾಚಿಕೆಯಾಗುತ್ತದೆ. “ಮತಾಂಧರಾದ ಮುಸ್ಲಿಮರು ವಿಗ್ರಹಗಳಿದ್ದ ಅನೇಕಾನೇಕ ದೇವಸ್ಥಾನಗಳನ್ನು ಹಾಳುಗೆಡುವಿರುವುದನ್ನು ನಾವು ಕಂಡೆವು, ಹಿಂದೂಗಳ ದೇವಸ್ಥಾನಗಳನ್ನು ಕೆಡವಿ ಅವುಗಳ ಸ್ಥಳದಲ್ಲಿ ಕ್ರೂರಿಗಳೂ ಕೆಲಸಕ್ಕೆ ಬಾರದವರೂ ಆದ ಮುಸಲ್ಮಾನರ ಗೋರಿಗಳನ್ನು ನಿರ್ಮಿಸಿದ್ದಾರೆ” ಎಂದು ಪ್ರವಾಸಿಗನೊಬ್ಬ ಮರುಗಿದ್ದಾನೆ. ಇತಿಹಾಸದಲ್ಲಿ ಅತ್ಯಂತ ಒಳ್ಳೆಯವನಾಗಿ ಚಿತ್ರಿತವಾಗಿರುವ ಅಕ್ಬರನ ಕ್ರೂರತೆಯನ್ನು ಕುರಿತು ಪ್ರವಾಸಿಯೊಬ್ಬ ಆಶ್ಚರ್ಯವ್ಯಕ್ತಪಡಿಸಿದ್ದಾನೆ. ಇವೆಲ್ಲಾ ಇತಿಹಾಸದ ಪುಟಗಳಲ್ಲಿ ದೊರೆಯುವುದಿಲ್ಲ.

ಸ್ವಾತಂತ್ರ್ಯಾನಂತರ ಇತಿಹಾಸದ ಬಗ್ಗೆ ಸಂಶೋಧನೆ ಮರಿಪರಿಶೀಲನೆ ನಡೆಸಿದ ಚರಿತ್ರಕಾರರು ರಾಜಮಹಾರಾಜರ ಮತ್ತೊಂದು ರೀತಿಯ ವೈಭವೀಕರಣ ಮಾಡುತ್ತಿದ್ದಾರೆ. ಸಮಾಜಕ್ಕೆ ಜನ ಸಮುದಾಯಕ್ಕೆ ದ್ರೋಹಬಗೆದವರು, ಶೋಷಣೆ ಮಾಡಿದವರೆಲ್ಲಾ ಬೇರೆ ಬೇರೆ ಕಾರಣಗಳಿಗಾಗಿ ಒಮ್ಮೆಯೇ ಉತ್ತಮರೂ ಪ್ರಜಾಪ್ರೇಮಿಗಳೂ ಆಗಿಬಿಟ್ಟಿರುವುದೂ ಉಂಟು. ತಮ್ಮ ತಮ್ಮ ಉಳಿವಿಗೆ ಹೋರಾಡಿದವರೆಲ್ಲಾ ರಾಷ್ಟ್ರಪ್ರೇಮಿಗಳು ಸ್ವಾತಂತ್ರ್ಯ ಹೋರಾಟಗಾರರು, ತ್ಯಾಗ ಬಲಿದಾನ ಮಾಡಿದವರೂ ಹಿಂದಿನ ಇತಿಹಾಸಕಾರರನ್ನು ತಪ್ಪು ಮಾಡಿದವರೆಂದು ದೂಷಿಸುತ್ತಾ ತಾವು ಅದೇ ತಪ್ಪನ್ನು ಧಾರಾಳವಾಗಿಯೇ ಮಾಡಿದ್ದಾರೆ. ಮಾಡುತ್ತಿದ್ದಾರೆ. ಆದರೂ ಈ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳು ನಡೆದಿವೆ. ಕೆಲವಾದರೂ ಹೊಸ ತೀರ್ಮಾನಗಳು ಬೆಳಕಿಗೆ ಬಂದಿವೆ. ಇಷ್ಟಾದರೂ ಸಾಧ್ಯವಾಗಿರುವುದು ತಮ್ಮದೇ ಸ್ವಾರ್ಥಕ್ಕಾಗಿ ಬ್ರಿಟಿಷರು ಈ ರಾಷ್ಟ್ರದಲ್ಲಿ ಜಾರಿಗೆ ತಂದ ಶಿಕ್ಷಣದಿಂದ ಎಂಬುದನ್ನು ಅವರು ನಮ್ಮನ್ನು ಸರಿಸುಮಾರು ಮುನ್ನೂರು ವರ್ಷಗಳ ಕಾಲ ಗುಲಾಮರಾಗಿಟ್ಟುಕೊಂಡು ನಮ್ಮ ರಾಷ್ಟ್ರವನ್ನು ಕೊಳ್ಳೆ ಹೊಡೆದು ಬರಿದುಮಾಡಿದರೆಂಬುದರ ಮಧ್ಯೆಯೂ ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ.

ಒಂದು ದೇಶದ ಚರಿತ್ರೆಯ ರಚನೆ ಅತ್ಯಂತ ಕ್ಲಿಷ್ಟಕರವಾದ ಕೆಲಸ. ಆಳಿಹೋದ ರಾಜ ಅವನ ಕಾಲದ ಆಗು ಹೋಗುಗಳು ಕಾಲಗರ್ಭದಲ್ಲಿ ಮರೆಯಾಗಿ ಹೋಗುತ್ತವೆ. ಮುಂದೆ ಅಧಿಕಾರಕ್ಕೆ ಬಂದವನು ತನ್ನ ಪ್ರತಿಷ್ಠೆಯನ್ನು ಮೆರೆಸಲು ಹಿಂದಿನದನ್ನು ಅಳಿಸುವುದೂ ಉಂಟು. ಆಯಾ ವ್ಯಕ್ತಿಯ ಆಡಳಿತ ಕಾಲದ ಚಾರಿತ್ರಿಕ ದಾಖಲೆಗಳು ಸಾಮಾನ್ಯವಾಗಿ ಆಳುವವನ ಪರವಾಗಿರುತ್ತವೆ. ಅವನನ್ನು ಸುಪ್ರೀತಗೊಳಿಸುವಂಥವಾಗಿರುತ್ತವೆ. ಇವುಗಳನ್ನೇ ಆಧರಿಸಿ ರಚನೆಯಾದ ಇತಿಹಾಸ ಪರಿಪೂರ್ಣವಾದುದಾಗಿರುವುದಿಲ್ಲ. ಅನೇಕ ಐತಿಹಾಸಿಕ ಘಟನೆಗಳು ಜನಮನವನ್ನು ಸೇರಿ ಅಲ್ಲಿ ಕಂಠಸ್ಥವಾಗಿ ಮುಂದೆ ಅವು ಕಥೆ. ಗೀತೆ, ಕಾವ್ಯಗಾಥೆಗಳ ರೂಪತಾಳಿ ಮುಂದುವರಿಯುತ್ತವೆ. ಈ ಜನರು ಅಕ್ಷರಸ್ಥರಲ್ಲದ ಕಾರಣ ಸಾಮಾನ್ಯವಾಗಿ ಅವುಗಳಿಗೆ ತಿದ್ದುಪಡಿಗಳಾಗಲಿ, ಪಾಠಾಂತರಗಳಾಗಲಿ ನೆಲೆನಿಂತಿರುವ ಈ ಕಂಠಸ್ಥ ಇತಿಹಾಸವನ್ನು ಅತ್ಯಂತ ಎಚ್ಚರಿಕೆಯಿಂದ ಸಂಗ್ರಹಿಸಬೇಕು. ಅದನ್ನು ಬೇರೆ ಬೇರೆ ಇತಿಹಾಸವನ್ನು ನೂರಕ್ಕೆ ನೂರಲ್ಲದಿದ್ದೂರ ನೂರಕ್ಕೆ ಎಂಭತ್ತು ನಂಬಬಹುದು. ಮೈಸೂರು ದೇಶದ ಚರಿತ್ರೆಯ ಮೇಲೆ ಹೊಸಬೆಳಕು ನೀಡುವ ಒಂದು ಚಾರಿತ್ರಿಕ ಘಟನೆಯ ಬಗ್ಗೆ ಜನಪದರಲ್ಲಿರುವ ಕಂಠಸ್ಥ ಕತೆಯನ್ನು ನೋಡಬಹುದು.

ಕನ್ನಡ ನಾಡಿನ ಇತಿಹಾಸಕ್ಕೆ ಸಂಬಂಧಿಸಿದಂತೆಯೂ ಇಂತಹ ಅನೇಕ ತಪ್ಪುಗಳು ಆಗಿರುವುದು ಕಂಡುಬರುತ್ತದೆ. ಕೆಲವು ರಾಜಮನೆತನಗಳ ಬಗ್ಗೆ ಉತ್ಪ್ರೇಕ್ಷಿತ ಕೃತಿಗಳು ರಚನೆಯಾಗಿವೆ. ನಾಡಿಗೆ, ಜನತೆಗೆ ನಿಜವಾಗಿಯೂ ಸೇವೆಸಲ್ಲಿಸಿದ ಅನೇಕ ರಾಜವಂಶಗಳ ಬಗ್ಗೆ ಈವರೆಗೂ ಏನೇನೂ ಆಗಿಯೇ ಇಲ್ಲವೆಂದು ಹೇಳಬಹುದು. ಈ ನಾಡಿನ ಅನೇಕ ಸ್ಥಾನೀಕ ಪ್ರಭುಗಳೇ ನಿಜವಾಗಿಯೂ ಜನಪರವಾದ ಆಡಳಿತ ನಡೆಸಿದ್ದರೆಂಬುದಕ್ಕೆ ಕಂಠಸ್ಥ ಇತಿಹಾಸದಲ್ಲಿ ದಾಖಲೆಗಳು ದೊರೆಯುತ್ತವೆ. ಹಾಗೆಯೇ ಸ್ವಾರ್ಥಿಗಳೂ ಪ್ರಜಾಕಂಠಕರಾದವರ ಬಗ್ಗೆಯೂ ಅನೇಕ ಕಥೆಗಳು ದೊರೆಯುತ್ತವೆ. ತಲಕಾಡಿನ ಗಂಗರಿಂದ ಮೈಸೂರು ಅರಸ ನಾಲ್ವಡಿ ಕೃಷ್ಣರಾಜರವರಗೆ ಇವು ಹರಡಿಕೊಂಡಿವೆ. ಕುಮಾರರಾಮ, ಕೆಂಪೇಗೌಡ, ಶಿವಪ್ಪನಾಯಕ, ಕಿತ್ತೂರು ಚೆನ್ನಮ್ಮ, ಹೈದರ್‌ ಮತ್ತು ಟಿಪ್ಪು ಹೀಗೆ ಪಟ್ಟಿ ಬೆಳೆಯುತ್ತದೆ. ಬಿದನೂರು, ಚಿತ್ರದುರ್ಗ, ಹುಲಿಕಲ್ಲು, ಕೆಳದಿ, ನಾಗಮಂಗಲ, ಚನ್ನಪಟ್ಟಣ, ನುಗ್ಗೆಹಳ್ಳಿ, ಉಮ್ಮತ್ತೂರು, ಪಿರಿಯಾಪಟ್ಟಣ, ಕೊಡಗು, ತುಳುನಾಡು ಎಷ್ಟೊಂದು ಊರುಗಳ ಕಥೆ ಈ ಕಂಠಸ್ಥ ಇತಿಹಾಸದಲ್ಲಿ ಅಡಗಿ ಕುಳಿತಿದೆ. ಈ ಒಂದೊಂದು ಕಥೆಯೂ ನಮ್ಮ ಇತಿಹಾಸದ ಬೇರೆ ಬೇರೆ ಮುಖವನ್ನೇ ಸೂಚಿಸುತ್ತವೆ.

ಮೈಸೂರು ಸೇನೆಯಲ್ಲಿ ಸೈನಿಕನಾಗಿ ಸೇರಿದ ಹೈದರಾಲಿ ಸಂದರ್ಭಗಳನ್ನು ಉಪಯೋಗಿಸಿಕೊಂಡು ಮೈಸೂರು ಅರಸರನ್ನೇ ಮೂಲೆಗೆ ಸರಿಸಿದ ವಿಶ್ವಾಸ ಘಾತುಕವೆಂದು ಹೇಳಬಹುದಾದ ಅನೇಕ ಕಥೆಗಳು ದೊರೆಯುತ್ತವೆ. ಹೈದರಾಲಿಯ ನಂತರ ಅಧಿಕಾರಕ್ಕೆ ಬಂದ ಟಿಪ್ಪು ಮೈಸೂರು ಅರಸು ಮನೆತನದ ಮೇಲೆ ನಡೆಸಿದನೆನ್ನಲಾದ ಅತ್ಯಾಚಾರದ ಬಗ್ಗೆ ಕಂಠಸ್ಥ ಕಥೆಗಳಷ್ಟೇ ಅಲ್ಲ ಸಮಕಾಲೀನರು ಬರೆದ ಗ್ರಂಥಗಳೂ ದೊರೆಯುತ್ತವೆ. ಟಿಪ್ಪುವಿನ ಮತಾಂತರದ ಬಗೆಗಿನ ಕಥೆಗಳಂತೂ ಇಂದಿಗೂ ಉದ್ವೇಗಕ್ಕೆ ಕಾರಣವಾಗುತ್ತವೆ. ಆ ಕಾಲವನ್ನು ಕುರಿತ ಐತಿಹಾಸಿಕ ಕೃತಿಗಳು ಮತ್ತು ಕಂಠಸ್ಥ ಕಥೆಗಳಲ್ಲಿ ಈ ವಿವರಗಳು ದೊರೆಯುತ್ತವೆ. ಈ ಹಿನ್ನೆಲೆಯಲ್ಲಿ ಟಿಪ್ಪುವನ್ನು ಸ್ವಾತಂತ್ರ್ಯ ಯೋಧ ಎಂದು ಕರೆಯಬಹುದೆ? ಕಿತ್ತೂರು ಚನ್ನಮ್ಮ ದತ್ತು ತೆಗೆದುಕೊಳ್ಳಲು ಅನುಮತಿ ದೊರೆತಿದ್ದರೆ ಬ್ರಿಟಿಷರ ವಿರುದ್ಧ ದಂಗೆ ಏಳುತ್ತಿದ್ದಳೆ? ಭಾರತೀಯರೇ ಆದ ಹೈದರಾಬಾದು ನಿಜಾಮ ಮರಾಠರೆ ಇಂಗ್ಲಿಷರಿಗೆ ಸಹಾಯಕರಾಗಿ ನಿಂತಿದ್ದೇಕೆ? ಒಂದು ಜಿಲ್ಲೆ ತಾಲ್ಲೂಕಿನ ಗಲದ ದೇಶಗಳು ರಾಷ್ಟ್ರಗಳು ನಮ್ಮಲ್ಲಿರಲಿಲ್ಲವೇ? ಇವರೆಲ್ಲಾ ಪರಸ್ಪರ ಕಿತ್ತಾಡಿ ಒಬ್ಬನೊಬ್ಬರು ದ್ವೇಷಿಸಿಯೇ ಅಲ್ಲವೆ ಪರಕೀಯರು ಈ ನಾಡನ್ನು ತಮ್ಮ ಅಧೀನ ಮಾಡಿಕೊಂಡದ್ದು. ಐತಿಹಾಸಿಕ ವ್ಯಕ್ತಿ ಘಟನೆಗಳು ಸಾರ್ವತ್ರಿಕವಾದಂತಹವು. ಇಂಗ್ಲಿಷರು ಪರಕೀಯರು ಮೊಘಲರೂ ಪರಕೀಯರೆ. ಇವರು ಮಾಡಿದ ಕೆಲಸಗಳನ್ನು ಇತಿಹಾಸ ರಚನಾಕಾರರು ವಿಮರ್ಶಿಸಬೇಕು. ಹೊಗಳಿಕತೆಗಳೆರಡಕ್ಕೂ ಅಲ್ಲಿ ಅವಕಾಶವುಂಟು. ಇವನು ತಮ್ಮ ಧರ್ಮದವನೋ ಜಾತಿಯವನೋ ಎಂದು ಅವನು ಮಾಡಿದ ತಪ್ಪುಗಳನ್ನು ಬೇರೆ ಮತದವೋ ಧರ್ಮದವರೋ ಎತ್ತಬಾರದೆನ್ನುವುದು. ಆ ತಪ್ಪುಗಳನ್ನು ವೈಭವೀಕರಿಸುವುದು ಇತಿಹಾಸಕ್ಕೆ ಮಾಡುವ ಅಪಚಾರವಾಗುತ್ತದೆ. ಈ ಹಿನ್ನೆಲೆಯಲ್ಲಿ ಟಿಪ್ಪುವಿನ ಆಡಳಿತಾವಧಿಗೆ ಸಂಬಂಧಿಸಿದ ಘಟನೆಯೊಂದನ್ನು ಕಂಠಸ್ಥ ಸಂಪ್ರದಾಯದಿಂದ ಸಂಗ್ರಹಿಸಿ ಕೊಡಲಾಗಿದೆ.

ಹಳೆಯ ಮೈಸೂರು ಭಾಗದಲ್ಲಿ ‘ಸೀತೆದಂಡು’ ಮತ್ತು ಅದರ ಸಾಹಸದ ಕಥೆಗಳು ಇಂದಿಗೂ ದೊರೆಯುತ್ತವೆ. ನಮ್ಮ ವಂಶದ ಹಿರಿಯಬ್ಬರು ಈ ಸೇನೆಯ ಸಾಹಸದ ನಾಯಕರಾಗಿದ್ದ ಬಗ್ಗೆಯೂ ನಮ್ಮ ಕಡೆ ಕಥೆಗಳಿವೆ. ಸೀತೆದಂಡು ಸ್ಥಳೀಯರು ರಚಿಸಿಕೊಂಡ ಒಂದು ಸೇನೆಯ ಹೆಸರು. ಇದರ ಕಥೆ ಹೀಗಿದೆ. ಹೈದರಾಲಿ ಅಧಿಕಾರವನ್ನೆಲ್ಲಾ ತನ್ನ ವಶಮಾಡಿಕೊಂಡು ಮೈಸೂರು ರಾಜರನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ತಂದು ಗೃಹಬಂಧನದಲ್ಲಿಟ್ಟ. ಆದರೆ ತನ್ನನ್ನು ಸರ್ವಾಧಿಕಾರಿ, ರಾಜರ ಪ್ರತಿನಿಧಿ ಎಂದು ಕರೆದುಕೊಂಡನೇ ಹೊರತು ತಾನೇ ಬಾದಶಾಹನೆಂದಾಗಲಿ ರಾಜನೆಂದಾಗಲಿ ಕರೆದುಕೊಳ್ಳುತ್ತಿರಲಿಲ್ಲ. ಮತಾಂತರವನ್ನು ತುಂಬಾ ಗುಟ್ಟಾಗಿಯೇ ಮಾಡುತ್ತಿದ್ದನಂತೆ. ಕಾರಣ ಪ್ರಜೆಗಳು ತಿರುಗಿ ಬೀಳುವರೆಂಬ ಸಂಗತಿ ಅವನಿಗೆ ತಿಳಿದಿತ್ತು. ಆದುದರಿಂದ ತಾನು ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳಿಗೆಲ್ಲಾ ರಾಜ ಮುದ್ರೆಯ ನೊತ್ತುತ್ತಿದ್ದನಂತೆ ಇದರ ಮೂಲಕ ಆಡಳಿತ ನಡೆಸುವವರು ಮೈಸೂರು ಅರಸರು ಎಂದು ಜನರು ನಂಬುವಂತೆ ಮಾಡುತ್ತಿದ್ದರು.

ಟಿಪ್ಪು ಅಧಿಕಾರಕ್ಕೆ ಬಂದ ಕೂಡಲೇ ತಾನೇ ಸುಲ್ತಾನನೆಂದು ಘೋಷಿಸಿದ. ಮೈಸೂರು ಅರಸರನ್ನು ಬಹಿರಂಗವಾಗಿಯೇ ತಿರಸ್ಕರಿಸಿ ಅವರ ಅಧಿಕಾರ ಮತ್ತು ಸವಲತ್ತುಗಳನ್ನೆಲ್ಲಾ ಕಿತ್ತುಹಾಕಿದ. ಬಹಿರಂಗವಾಗಿಯೇ ಮತಾಂತರಕ್ಕೆ ಅಧಿಕಾರ ನೀಡಿದ. ಪ್ರತಿ ಊರಿಗೂ ಅದರ ಗಾತ್ರ ಮತ್ತು ಜನಸಂಖ್ಯೆಯ ಆಧಾರ ಮೇಲೆ ಮುಸಲ್ಮಾನ ಸೈನಿಕರನ್ನು ನೇಮಿಸಿದ. ಈ ಸೈನಿಕರು ಹಣ ಧವಸ ಧಾನ್ಯ ವಸೂಲಿಯಿಂದ ಮತಾಂತರದವರೆಗೆ ಜನರನ್ನು ಹಿಂಸಿಸಲಾರಂಭಿಸಿದರು. ಈ ಹಿಂಸೆಯನ್ನು ತಾಳಲಾರದೆ ಹಿಂದೂಗಳು ನೀಲಗಿರಿ ಕೊಯಮತ್ತೂರು, ಮಧುರೆ ಮುಂತಾದ ಕಡೆಗೆ ಪಲಾಯನ ಮಾಡಿದರು. ಇನ್ನು ಕೆಲವರು ಹೆದರಿ ಮುಸ್ಲಿಮರಾದರು. ಆದರೆ ತಮ್ಮ ಹಿರಿಯರು, ಪುರಾತನರು ಹುಟ್ಟಿ ಬದುಕಿ ಬಾಳಿದ ನೆಲವನ್ನು ಬಿಟ್ಟುಹೋಗುವುದು ಅಷ್ಟೊಂದು ಸುಲಭವಲ್ಲ. ಊರಗೌಡ, ನಾಡಗೌಡ, ಶೆಟ್ಟಿಶಾನುಭೋಗ, ತೋಟಿ, ತಳವಾರ ಕುಳವಾಡಿಗಳೆಲ್ಲಾ ಸೇರಿ ಇದಕ್ಕೆ ಪರಿಹಾರ ಕಂಡುಹಿಡಿಯಲು ಚರ್ಚಿಸಿದರು. ಆ ಚರ್ಚೆಯ ಫಲವೆ ಸೀತೆದಂಡು.

ಮೈಸೂರಿನಲ್ಲಿ ರಾಜಮಾತೆ ಲಕ್ಷ್ಮಮ್ಮಣಿ ಅವರು ಮತ್ತೆ ರಾಜ್ಯವನ್ನು ತಮ್ಮ ವಂಶಸ್ಥರಿಗೆ ಪಡೆಯಲು ಇಂಗ್ಲಿಷ್‌ರೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದರು. ಪೂರ್ಣಯ್ಯ ಮತ್ತು ಅಮೀರ್ ಸಿದ್ಧಿಕ್‌ ಕೂಡ ಟಿಪ್ಪುವಿನ ಆಪ್ತರಂತೆ ನಟಿಸುತ್ತಾ ಅವನ ವಿರುದ್ಧವಾಗಿ ಕೆಲಸ ಮಾಡುತ್ತಿದ್ದರು. ಗ್ರಾಮಾಂತರದ ಜನರಿಗೆ ಸೈನಿಕರು ಕೊಡುತ್ತಿದ್ದ ಹಿಂಸೆ ಮತ್ತು ಮಾಡುತ್ತಿದ್ದ ಅತ್ಯಾಚಾರಗಳ ಬಗೆಗೆ ಊರ ಪಟೇಲ ಕೊಡುತ್ತಿದ್ದ ದೂರುಗಳಿಗೆ ಮೇಲಿಂದ ಯಾವ ಸಮಾಧಾನವೂ ಬರುತ್ತಿರಲಿಲ್ಲ. ಅವು ಟಿಪ್ಪುವನ್ನು ತಲುಪತ್ತಲೇ ಇರಲಿಲ್ಲವಂತೆ. ಈ ಮಧ್ಯೆ ಹೈದರಾಲಿಯ ಕಾಲದವನೂ ಸ್ವಲ್ಪ ಮಟ್ಟಿಗೆ ನಿಷ್ಪಕ್ಷಪಾತಿಯೂ ಆಗಿದ್ದ ಸೇನೆಯ ಮುಖ್ಯಸ್ಥ ಮಹಮದಾಲಿಯನ್ನು ಪದಚ್ಯುತಗೊಳಿಸಲಾಯಿತು. ಇದರಿಂದ ಗ್ರಾಮಗಳಲ್ಲಿದ್ದ ಮುಸಲ್ಮಾನ ಸೈನಿಕರ ಉಪಠಳ ಮತ್ತು ಅತಿಯಾಯಿತು. ಆಗ ಜನರು ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ತೀರ್ಮಾನಕ್ಕೆ ಬಂದರು. ಹಳ್ಳಿಯ ಯುವಕರಿಗೆ ಸೈನಿಕ ತರಬೇತಿ ನೀಡಿ ತಮಗಾಗುತ್ತಿರುವ ಅನ್ಯಾಯದ ವಿರುದ್ಧವಾಗಿ ಯುದ್ಧ ಸಾರಬೇಕೆಂಬುದೇ ಆ ತೀರ್ಮಾನ. ಇದರ ಅನುಷ್ಠಾನಕ್ಕಾಗಿ ಅವರು ಮಾರ್ಗವೊಂದನ್ನು ತಮ್ಮ ಗ್ರಾಮಜೀವನದ ಮಧ್ಯದಿಂದಲೇ ಆರಿಸಿಕೊಂಡು ಅದನ್ನು ತಮ್ಮ ಉಳಿವಿಗಾಗಿ ಉಪಯೋಗಿಸಿಕೊಂಡರು.

ದಕ್ಷಿಣ ಕರ್ನಾಟಕದಲ್ಲಿ ಭಾಗವಂತಿಕೆ ಮೇಳ ಎಂಬ ಜನಪದ ಕಲಾ ಪ್ರಕಾರವೊಂದಿದೆ. ಇದನ್ನು ಜನರು ರಾಮರದಂಡು ಎಂದು ಕರೆಯುತ್ತಾರೆ. ರಾಮಮಹಿಮೆಯನ್ನು ಪ್ರಚಾರ ಮಾಡುವುದೇ ಇದರ ಉದ್ದೇಶ. ಜನರು ಗುಂಪು ಗುಂಪಾಗಿ ಸೇರಿ ರಾಮಮಹಿಮೆಯನ್ನು ಹಾಡುತ್ತಾ ಊರೂರ ಮೇಲೆ ಹೋಗುವುದು. ಒಂದು ತಿಂಗಳನಂತರ ಆಯಾ ಪ್ರದೇಶದ ವೈಷ್ಣವ ಕ್ಷೇತ್ರಗಳಲ್ಲಿ ಹೀಗೆ ಊರೂರಿಂದ ಬಂದವರು ಸಾವಿರಾರು ಸಂಖ್ಯೆಯಲ್ಲಿ ಸೇರುವುದು ಈ ರಾಮರದಂಡು ಧರ್ಮಪ್ರಚಾರದೊಂದಿಗೆ ಊರಿನ ಹಿತರಕ್ಷಣೆಯ ಕೆಲಸವನ್ನೂ ಮಾಡುತ್ತಿತ್ತು. ಮೈಸೂರು ಅರಸ ಚಿಕ್ಕದೇವರಾಜನ ಪ್ರಧಾನಮಂತ್ರಿಯಾಗಿದ್ದ ತಿರುಮಲಾರ್ಯ, ಶ್ರೀವೈಷ್ಣವ ಧರ್ಮ ಪ್ರಚಾರಕ್ಕಾಗಿ ಇದನ್ನು ಬಳಸಿಕೊಂಡು ಅಪಾರ ಪ್ರೋತ್ಸಾಹ ನೀಡಿದ. ಇದೊಂದು ಧಾರ್ಮಿಕ ಕ್ರಿಯೆಯಾದುದರಿಂದ ಇದಕ್ಕೆ ಯಾರ ಅಡ್ಡಿಯಾಗಲಿ ವಿರೋಧವಾಗಲಿ ಇರಲಿಲ್ಲ. ಈ ಗುಟ್ಟನ್ನು ಅರಿತ ಮುಖಂಡರು ಸೀತೆದಂಡನ್ನು ಹುಟ್ಟು ಹಾಕಿದರು.

ಗ್ರಾಮದ ಯುವಕರು ಸೀರೆ, ರವಿಕೆ ತೊಟ್ಟು ಹೆಣ್ಣು ವೇಷಧರಿಸಿ ಒಂದೆಡೆ ಸೇರುವುದು. ಸೀತೆಯನ್ನು ಕೊಂಡಾಡುತ್ತಾ ರಾವಣನನ್ನು ನಿಂದಿಸುತ್ತಾ ಊರೂರ ಮೇಲೆ ಹೋಗುತ್ತವೆಂದು ಹೊರಡುವುದು. ಹೀಗೆ ಹೊರಟಂಥ ಸುತ್ತಮುತ್ತಲ ಗ್ರಾಮದ ಯುವಕರು ನಿಗಧಿತ ರಹಸ್ಯ ಸ್ಥಳವೊಂದರಲ್ಲಿ ಸೇರುವುದು ಅಲ್ಲಿ ತಮ್ಮ ಸ್ತ್ರೀವೇಷ ತೆಗೆದು ಸೈನಿಕ ಶಿಕ್ಷಣ ಪಡೆಯುವುದು. ಮತ್ತೆ ಅದೇ ವೇಷ ತೊಟ್ಟು ರಾತ್ರಿ ಊರಿಗೆ ಹಿಂತಿರುಗುವುದು. ಅಲ್ಲಿ ಮುಖಂಡರು ರಾಜರಿದ್ದು ತಮ್ಮ ಮೇಲೆ ಆಗುತ್ತಿರುವ ಅನ್ಯಾಯಗಳನ್ನು ವಿವರಿಸಿ ಯುವಕರನ್ನು ತ್ಯಾಗ ಬಲಿದಾನಗಳಿಗೆ ಹುರಿದುಂಬಿಸುವುದು. ಹೀಗೆ ತಿಂಗಳಾನುಗಟ್ಟಲೆ ಆ ರಹಸ್ಯ ಸೈನಿಕ ತರಬೇತಿ ನಡೆಯುತ್ತಿತ್ತು. ಇದರಿಂದ ಆಡಳಿತದ ವಿರುದ್ಧ ನಡೆಯುತ್ತಿದ್ದ ಈ ಸಿದ್ಧತೆ ಯಾರಿಗೂ ಅನುಮಾನ ಹುಟ್ಟಿಸುತ್ತಿರಲಿಲ್ಲ.

ಸೇನಾ ತರಬೇತಿ ನೀಡುವುದು ಅಷ್ಟು ಸುಲಭವಾಗಿರಲಿಲ್ಲ. ಸ್ಥಳೀಯವಾಗಿ ಯಾರನ್ನೂ ನಂಬುವಂತಿರಲಿಲ್ಲ. ಸ್ವಲ್ಪ ಸುಳಿವು ದೊರೆತರೂ ಈ ಯುವಕರು ನೇಣಿಗೇರಬೇಕಾಗುತ್ತಿತ್ತು. ಈ ಬಗ್ಗೆ ಅಪಾರವಾದ ಚರ್ಚೆಯ ನಂತರ ಭಾರತೀಯ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಗೌರ ಹೊಂದಿದವರೂ ಯುದ್ಧ ನಿಪುಣರೂ ಉತ್ತರ ಭಾರತದಲ್ಲಿ ಸಮರ್ಥವಾಗಿ ವಿದೇಶಿ ದಾಳಿಯನ್ನು ಎದುರಿಸಿದವರೂ ಆದ ಸಿಖ್ಖರನ್ನು ಸೈನಿಕ ಶಿಕ್ಷಣ ಕೊಡಲು ಕರೆಸಲಾಯಿತು. ಇದರೊಂದಿಗೆ ಯುದ್ಧೋಪಖರಣಗಳನ್ನು ತಯಾರಿಸಬಲ್ಲ ತಾಂತ್ರಿಕರನ್ನು ಕರೆತರಲಾಯಿತು. ಹೀಗೆ ಬಂದವರನ್ನು ಬೇರೆ ಬೇರೆ ಊರುಗಳಲ್ಲಿ ಇರಿಸಲಾಯಿತು. ಹೀಗೆ ಅಕಾಲದಲ್ಲಿ ಬಂದು ನೆಲೆಸಿದ ಸಿಖ್ಖರ ವಂಶದವರು ಈಗಲೂ ಕೆಸುವಿನಕಟ್ಟೆ ನಾಯಸಿಂಗನ ಹಳ್ಳಿ ಹುಬ್ಬನಹಳ್ಳಿ ಮುಂತಾದ ಗ್ರಾಮಗಳಲ್ಲಿ ಸ್ಥಳೀಯರೇ ಆಗಿ ಉಳಿದಿದ್ದಾರೆ. ಅವರು ಸೀತೆದಂಡಿಗಾಗಿ ತಯಾರಿಸಿದ ಬಂದೂಕ, ಕತ್ತಿ, ಗುರಾಣಿ, ಬಲ್ಲೆ ಮುಂತಾದ ಯುದ್ಧೋಪಕರಣಗಳು ದಕ್ಷಿಣ ಕರ್ನಾಟಕದ ಹಳೆಯ ತಲೆಮಾರಿನ ಮೆಯ ಅಟ್ಟಗಳಲ್ಲಿ ಈಗಲೂ ಕಾಣಸಿಗುತ್ತವೆ.

ಮೈಸೂರಿನ ಮೇಲೆ ದಂಡೆತ್ತಿಬರಲು ಇಂಗ್ಲಿಷರು ಹೆದರುತ್ತಿದ್ದರು. ಅದಕ್ಕೆ ಎರಡು ಕಾರಣಗಳಿದ್ದವು. ಶ್ರೀರರಂಗಪಟ್ಟಣದಂತಹ ದುರ್ಗಮವಾದ ಕೋಟೆ ಮತ್ತು ಮೈಸೂರು ಅರಸರ ಬಗ್ಗೆ ಜನರಿಗಿದ್ದ ಒಲವು. ಆ ಕಾರಣದಿಂದಲೇ ಅವರು ಮೊದಲೆರಡು ಯುದ್ಧಗಳಲ್ಲಿ ಯುದ್ಧ ನಿಲುಗಡೆಯ ಒಪ್ಪಂದ ಮಾಡಿಕೊಂಡರು. ಮುಂದೆ ಜನಾಭಿಪ್ರಾಯ ಸಂಗ್ರಹಿಸಿದ ಅವರು ಶ್ರೀರಂಗಪಟ್ಟಣದ ಮೇಲೆಯೇ ನುಗ್ಗಿದರು. ಸೀತೆದಂಡಿನ ಮುಖಂಡರು ಅನೇಕ ಕಡೆ ಅನೇಕ ಸಲ ಬ್ರಿಟಿಷರನ್ನು ಭೇಟಿಯಾದ ಮಾಹಿತಿಗಳು ದೊರೆಯುತ್ತವೆ. ಮೂರು ಮತ್ತು ನಾಲ್ಕನೆಯ ಮೈಸೂರು ಯುದ್ಧಗಳಲ್ಲಿ ಗ್ರಾಮಸ್ಥರಿಂದ ತಮಗೆ ಒದಗಿದ ಉಪಕಾರವನ್ನು ಆ ಯುದ್ಧಗಳಲ್ಲಿ ಪಾಲುಗೊಂಡು ಆ ಬಗ್ಗೆ ಬರೆದವರನೇಕರು ಸ್ಮರಿಸಿಕೊಂಡಿದ್ದಾರೆ. ಒಂದು ವೇಳೆ ಬ್ರಿಟಿಷರು ಮತ್ತೆ ಮೈಸೂರು ಅರಸರಿಗೆ ಆಡಳಿತ ವಹಿಸದಿದ್ದಲ್ಲಿ ಅವರ ವಿರುದ್ಧವೂಯುದ್ಧ ಸಾರುವುದು ಸೀತೆದಂಡಿನ ಉದ್ದೇಶವಾಗಿತ್ತು. ಆದುದರಿಂದಲೇ ೧೭೯೯ರಲ್ಲಿ ಶ್ರೀರಂಗಪಟ್ಟಣ ಪತನವಾದ ಕೂಡಲೇ ಚಿಕ್ಕ ಹುಡುಗ ಮುಮ್ಮಡಿ ಕೃಷ್ಣರಾಜನಿಗೆ ಪಟ್ಟ ಕಟ್ಟಿದರು. ಅಷ್ಟೇ ಅಲ್ಲ” ಈ ಹೊಸ ರಾಜರ ಸಂದರ್ಶನಕ್ಕೆ ತಮ್ಮ ಚಕ್ರವರ್ತಿಯನ್ನು ಕಾಣುವಷ್ಟು ಭಯಭಕ್ತಿಯಿಂದ ಹೋದರೆಂದು ಇತಿಹಾಸಕಾರರು ಹೇಳಿದ್ದಾರೆ.

ತಮ್ಮ ಉದ್ದೇಶ ಮುಗಿದ ಕೂಡಲೇ ಮುಖಂಡರು ಸೀತೆದಂಡನ್ನು ವಿಸರ್ಜಿಸಿದರು. ಮುಂದೆ ಅದನ್ನು ಒಂದು ರೀತಿಯ ವಿಜಯೋತ್ಸವದಂತೆ ಆಚರಿಸುವ ಪದ್ಧತಿ ಜಾರಿಗೆ ಬಂದಿತು. ಮುಂದೆ ಅದು ಜಾನಪದ ಕತೆಯಾಯಿತು. ಹಳೆ ಮೈಸೂರಿನ ಅನೇಕ ಕಡೆ ಇದರ ಬಗೆಗಿನ ಮಾಹಿತಿಗಳು ದೊರೆಯುತ್ತವೆ. ಈ ಘಟನೆಯ ಬಗೆಗ ಅನೇಕ ಕಥೆಗಳು, ಉಪಕಥೆಗಳು, ಸ್ಥಳಗತೆಗಳು ದೊರೆಯುತ್ತವೆ. ಅವುಗಳಲ್ಲಿ ಮೂರನ್ನು ಇಲ್ಲಿ ನೋಡಬಹುದು.

ಶ್ರೀರಂಗಪಟ್ಟಣದ ಮೋಹಿನಿ ದಿಬ್ಬದ ಕಥೆ ಮೊದಲನೆಯದು. ಬ್ರಾಹ್ಮಣ ಯುವತಿಯೊಬ್ಬಳು, ಸೈನಿಕನೊಬ್ಬ ಆಕೆಯ ಮಾನಭಂಗ ಮಾಡಿದ. ಈ ಸೈನಿಕ ಮುಸಲ್ಮಾನ. ಜನರು ಈ ಘಟನೆಯನ್ನು ಟಿಪ್ಪುವಿನ ಬಳಿಗೊಯ್ದರು. ಆತ ಇಂತಹ ಅತ್ಯಾಚಾರದ ವಿರುದ್ಧ ಶಿಕ್ಷೆ ಕೊಡುವ ಬದಲು “ನಾಯಿತಿಂದ ಮಡಿಕೆಯನ್ನು ನಾಯಿಕೊರಳಿಗೆ ಕಟ್ಟಿ” ಎಂದನಂತೆ. ಇದರಿಂದ ಕುಪಿತಗೊಂಡ ಜನರು ದಂಗೆ ಎದ್ದರು. ಆ ಯುವತಿ ಸುಲ್ತಾನನ ರಾಜ್ಯ ಹಗಲು ಹನ್ನೆರಡು ಗಂಟೆಯಲ್ಲಿ ನಾಶವಾಗಲಿ ಎಂದು ಶಾಪ ಕೊಟ್ಟು ಈ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಳಂತೆ. ಆದುದರಿಂದಲೇ ಶ್ರೀರಂಗಪಟ್ಟಣ ಹಗಲು ಹನ್ನೆರಡು ಗಂಟೆಯಲ್ಲಿ ಇಂಗ್ಲಿಷರ ವಶವಾಯಿತಂತೆ. ಈಕೆ ಪೂರ್ಣಯ್ಯನ ಮಗಳೆಂಬ ಪಾಠವೂ ದೊರೆಯುತ್ತದೆ. ಈಗಲೂ ಆಕೆ ಶ್ವೇತವಸ್ತ್ರ ಧಾರಿಯಾಗಿ ಅಲ್ಲಿ ತಿರುಗುತ್ತಾಳೆಂಬ ನಂಬಿಕೆಯಿದೆ. ಇಂದಿಗೂ ಮುಸಲ್ಮಾನರು ಅತ್ತ ತಿರುಗಿಯೂ ನೋಡುವುದಿಲ್ಲ.

ಚಿಕ್ಕದೇವರಾಯನ ಕಾಲದಿಂದ ಶ್ರೀರಂಗಪಟ್ಟಣದಲ್ಲಿ ವೀರವೈಷ್ಣವರು ಅಪಾರ ಸಂಖ್ಯೆಯಲ್ಲಿದ್ದರಷ್ಟೇ. ಅವರು ಧರಿಸುತ್ತಿದ್ದ ಮೂರು ನಾಮದ ಮೇಲೆ ಈ ಮುಸಲ್ಮಾನ ಸೈನಿಕರ ಕಣ್ಣು ಬಿತ್ತು. ಸರಿ ಅವರು ಎದುರಿಗೆ ಸಿಕ್ಕಿದ ವೀರವೈಷ್ಣವದ ನಾಮಗಳನ್ನು ನೆಕ್ಕಿಬಿಡುತ್ತಿದ್ದರು. ಇದರಿಂದ ಅಂತಹವರು ಜಾತಿಕೆಟ್ಟಂತೆ ಭಾವಿಸಲಾಗುತ್ತಿತ್ತು. ಈ ಬಗ್ಗೆ ಸುಲ್ತಾನನಿಗೆ ದೂರು ಕೊಟ್ಟರೂ ಪ್ರಯೋಜನವಾಗಲಿಲ್ಲ. ಶ್ರೀವೈಷ್ಣವರಿರಲಿ ನಾಮಧರಿಸಿದವರು ಬೀದಿಯಲ್ಲಿ ಓಡಾಡುವುದೇ ಕಷ್ಟವಾಯಿತು. ಕಡೆಗೆ ಇವರೆಲ್ಲಾ ಶ್ರೀರಂಗಪಟ್ಟಣದ ಗೌಡನ ಮೊರೆ ಹೋದರು. ಅವನು ಇವರಿಗೆ ಉಪಾಯವೊಂದನ್ನು ಹೇಳಿಕೊಟ್ಟ. ಸರಿ ವೀರವೈಷ್ಣವ ಮುಖಂಡರು ಕೆಲವರು ಪೂರ್ಣಯ್ಯ ಮತ್ತು ಪಟ್ಟಣ ಗೌಡನ ನೆರವಿನಿಂದ ಟಿಪ್ಪುವನ್ನು ಭೇಟಿ ಮಾಡಿ “ನಾವು ನರಸಿಂಹಸ್ವಾಮಿಯ ಮೊರೆಬಿದ್ದಿದ್ದೇವೆ. ಇನ್ನು ಮುಂದೆ ನಿಮ್ಮ ಮುಸಲ್ಮಾನ ಸೈನಿಕರೇನಾದರೂ ನಮ್ಮವರ ನಾಮ ನೆಕ್ಕಿದರೆ ಅಲ್ಲಿಯೇ ಸತ್ತು ಬೀಳುತ್ತಾರೆಂದು ಸ್ವಾಮಿ ಅಪ್ಪಣೆ ಕೊಡಿಸಿದ್ದಾನೆ.” ಎಂದು ಹೇಳಿದರಂತೆ. ಇದರಿಂದ ಕುಪಿತನಾದ ಟಿಪ್ಪು ಸೈನಿಕರನ್ನು ಕರೆದು ಮುಖಂಡರೊಂದಿಗೆ ಅತ್ಯಂತ ಆಳವಾಗಿ ನಾಮ ಧರಿಸಿ ಬಂದಿದ್ದವರ ನಾಮ ನೆಕ್ಕುವಂತೆ ಆಜ್ಞೆ ಮಾಡಿದ. ಕೆಲ ಹೊತ್ತಿನಲ್ಲಿಯೇ ನಾಮ ನೆಕ್ಕಿದ ಸೈನಿಕರು ಸತ್ತು ನೆಲಕ್ಕುರುಳಿದರು. ಇದರಿಂದ ಹೆದರಿದ ಟಿಪ್ಪು ರಂಗನಾಥನಿಗಷ್ಟೇ ಅಲ್ಲ ಪ್ರಸಿದ್ಧ ಹಿಂದೂ ದೇವರುಗಳಿಗೂ ಮಠಗಳಿಗೂ ದತ್ತಿದಾನ ಬಿಟ್ಟನಂತೆ. ಪಟ್ಟಣದ ಗೌಡ ವಿಷ ಬೆರೆಸಿ ನಾಮ ಹಾಕಿಸಿ ಕೆಲವರನ್ನು ಅಲ್ಲಿಗೆ ಕರೆ ತರುವಂತೆ ಹೇಳಿಕೊಟ್ಟಿದ್ದನಂತೆ.

ನಾಲ್ಕನೆಯ ಮೈಸೂರು ಯುದ್ಧ ನಡೆದುದು ಶ್ರೀರಂಗಪಟ್ಟಣದ ಸುತ್ತಮುತ್ತ ಅದು ನಡೆದಲ್ಲೆಲ್ಲಾ ಕಂಡ ಕಂಡಲ್ಲಿ ಹೆಣಗಳ ರಾಸಿ. ವಾತಾವರಣ, ನೀರು, ನೆಲವೆಲ್ಲಾ ಕೆಟ್ಟಿತ್ತು. ಸಾಂಕ್ರಮಿಕ ರೋಗಗಳು ಹರಡದಂತೆ ನೀರಿಗೆ ಪೊಟಾಸಿಯಂ ಪರ ಮಾಂಗನೇಟಿನ್ನು ಬ್ರಿಟಿಷರು ಹಾಕಿಸಿದರು. ಇದು ಸುತ್ತಮುತ್ತಲ ಹಳ್ಳಿಯವರಿಗೆ ಬ್ರಿಟಿಷರು ತಮ್ಮ ಜಾತಿ ಕೆಡಿಸಲು ಮಾಡುತ್ತಿರುವ ತಂತ್ರ ಎಂದು ಪ್ರಚಾರವಾಗತೊಡಗಿತು. ಕ್ಯಾತನಹಳ್ಳಿಯ ಹುಲಿಗೌಡ ಈ ಭಾಗದ ಸೀತೆದಂಡಿನ ಮುಖ್ಯಸ್ಥ. ಅವನು ತನ್ನ ಗುಂಪನ್ನು ಕಟ್ಟಿಕೊಂಡು ಕಂಡ ಕಂಡಲ್ಲಿ ಬ್ರಿಟಿಷರಿಗೆ ಹಿಂಸೆ ಕೊಡಲಾರಂಭಿಸಿದ. ಇದರಿಂದ ಕುಪಿತರಾದ ಬ್ರಿಟಿಷರು ಅವನನ್ನು ಹಿಡಿಯಲು ಸೇನೆ ಕಳಿಸಿದರು. ಸ್ಥಳೀಯರ ಸಹಕಾರವಿಲ್ಲದ್ದರಿಂದ ಅವನನ್ನು ಹಿಡಿಯುವುದು ಸಾಧ್ಯವಾಗಲೇ ಇಲ್ಲ. ನಿರಾಶರಾಗಿ ಕೊನೆಯ ಪ್ರಯತ್ನವಾಗಿ ಶ್ರೀರರಂಗಪಟ್ಟಣ ನ್ಯಾಯಾಲಯದಲ್ಲಿ ಹುಲಿಗೌಡನ ವಿರುದ್ಧ ದಾವೆ ಹೂಡಿದರು. ಈ ಬಗೆಗಿನ ಸೂಚನೆಗಳನ್ನು ಹಳ್ಳಿಗಳಲ್ಲಿ ಅಂಟಿಸಿದರು. ನಿಗಧಿಯಾದ ದಿನ ನ್ಯಾಯಾಲಯದಲ್ಲಿ ತನ್ನ ಹೆಸರು ಕೂಗಿದೊಡನೆಯ ಜನರ ಮಧ್ಯದಿಂದ ಬಂದಗೌಡ ನ್ಯಾಯಧೀಶರೆದುರು ನಿಂತ. ನ್ಯಾಯಾಧೀಶರು “ನೀನು ಏಕೆ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದಿರುವೆ ಎಂದು ಕೇಳಿದರು. ಅವರು ನೀರಿಗೆ ದನದ ಮಾಂಸ ಹಾಕಿ ನಮ್ಮ ಜನರ ಜಾತಿ ಕೆಡಿಸುತ್ತಿದ್ದಾರೆ. ಅದಕ್ಕೆ” ಎಂದ ಗೌಡ ನಿರ್ಭಯದಿಂದ ನ್ಯಾಯಾಧೀಶರು ನೀರಿಗೆ ಹಾಕುತ್ತಿರುವುದು ಔಷಧಿ ಎಂದು ಜನರಿಗೆ ಹೇಳಿದ್ದೀರಾ? ಎಂದು ಸೇನೆಯ ಅಧಿಕಾರಿಗಳನ್ನು ಕೇಳಿದರು. ಅದಕ್ಕವರು ‘ಇಲ್ಲ’ ಎಂದು ಉತ್ತರಿಸಿದರು. ನ್ಯಾಯಾಧೀಶರು ಹುಲಿಗೌಡನನ್ನು ನಿರಪರಾಧಿಯೆಂದು ಸಾರಿ ನೀನಿನ್ನು ಹೋಗಬಹುದು ಎಂದರು. ಹೊರಗಡೆ ಸೈನಿಕರು ನನ್ನನ್ನು ಹಿಡಿಯಲು ಕಾದಿದ್ದಾರೆ. ಹೇಗೆ ಹೋಗಲಿ ಎಂದ ಆಗ ನ್ಯಾಯಾಧೀಶರು ಆತನನ್ನು ಹಿಡಿಯಬಾರದೆಂದು ಆದೇಶಿಸಿ ಸೇನಾಧಿಕಾರಿಗಳು ಹುಲಿ ಗೌಡನನ್ನು ಅವನ ಊರಿಗೆ ಬಿಟ್ಟುಬಂದು ತನಗೆ ವರದಿ ಮಾಡಬೇಕೆಂದು ಸೂಚಿಸಿದರು.

ಈ ರೀತಿಯ ಹಲವಾರು ಕಥೆಗಳು ಐತಿಹ್ಯಗಳು ಹೈದರಾಲಿ, ಟಿಪ್ಪು ಮತ್ತು ಮೈಸೂರು ಅರಸರ ಬಗ್ಗೆ ದೊರೆಯುತ್ತವೆ. ಈ ಎಲ್ಲಾ ಕಥೆಗಳಲ್ಲಿಯೂ ಸೀತೆದಂಡಿನ ಪ್ರಮುಖ ಪಾತ್ರವನ್ನು ಗುರುತಿಸಬಹುದಾಗಿದೆ. ಈ ಚಾರಿತ್ರಿಕ ಘಟನೆಯಲ್ಲಿ ಪಾಲುಗೊಂಡ ಅನೇಕ ಮುಖಂಡರು ಮನೆಗಳು ಇಂದಿಗೂ ಅವರ ಶೌರ್ಯ ಸಾಹಸಗಳ ಸಂಕೇತವಾಗಿ ಉಳಿದಿವೆ.

ಸೀತೆದಂಡು ಕಂಠಸ್ಥ ಇತಿಹಾಸವನ್ನು ಶಿಷ್ಟ ಇತಿಹಾಸವೂ ಒಪ್ಪಿಕೊಂಡಿದೆ ಎಂಬುದಕ್ಕೆ ಬೇಕಾದಷ್ಟು ಆಧಾರಗಳು ದೊರೆಯುತ್ತವೆ. ಹೈದರಾಲಿಯು ಎಷ್ಟೇ ಗುಟ್ಟಾಗಿ ಮೈಸೂರು ಅರಸರನ್ನು ಗೃಹಬಂಧನದಲ್ಲಿಟ್ಟು ತಾನು ಅವರು ಹೇಳಿದಂತೆ ಆಡಳಿತ ನಡೆಸುವವನು ಎಂದು ನಟಿಸಿದರೂ ವಿಷಯ ಜನತೆಗೆ ತಿಳಿದಿತ್ತು. ಜನತೆ ಹೈದರಾಲಿಯ ಬಗ್ಗೆ ಕೋಪೋದ್ರಿಕ್ತರಾಗಿದ್ದರು. ಏನಾದರೂ ಮಾಡಿ ಹೈದರಾಲಿಯನ್ನು ಪದಚ್ಯುತಗೊಳಿಸಿ ಮೈಸೂರು ಅರಸರನ್ನು ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನವೊಂದು ರೂಪುಗೊಳ್ಳುತ್ತಿತ್ತು. “While he was Fighting the English army on the malbar coast a dangerous and well laid conspiracy was organized at srirangapattanm to capture it and Resotre the old hindu Dynasty”

[1] ಈ ರೀತಿಯ ಒಂದು ಆಂತರಿಕ ದಂಗೆಯನ್ನು ನಡೆಸಿದವರು ಸೀತೆದಂಡಿನ ಮುಖಂಡರು. ಆದರೆ ಇದು ಫಲಕಾರಿಯಾಗಲಿಲ್ಲ. ಈ ಸುಳಿವನ್ನು ಅರಿತ ಹೈದರಾಲಿಯು ಇಂಗ್ಲಿಷರೊಂದಿಗೆ ಒಪ್ಪಂದ ಮಾಡಿಕೊಂಡು ಕೂಡಲೇ ಶ್ರೀರಂಗಪಟ್ಟಣಕ್ಕೆ ಹಿಂತಿರುಗಿ ಅಧಿಕಾರ ಸೂತ್ರವನ್ನು ಕೈಗೆತ್ತಿಕೊಂಡ.

ಎರಡನೆಯ ಮೈಸೂರು ಯುದ್ಧದ ಮಧ್ಯದಲ್ಲಿ ಹೈದರಾಲಿಯು ಕೊನೆಯುಸಿರೆಳೆದ. ಮೈಸೂರು ರಾಜ್ಯ ಮುಸಲ್ಮಾನ ರಾಜರಿಗೆ ಉಳಿಯಬೇಕಾದರೆ ಹಿಂದೂ ಜನರ ಪ್ರೋತ್ಸಾಹವನ್ನು ಸಂಪಾದಿಸಬಲ್ಲ ವ್ಯಕ್ತಿಯೊಬ್ಬನ ಅವಶ್ಯತೆಯಿದೆ ಎಂಬುದನ್ನು ಹೈದರಾಲಿ ಅರಿತಿದ್ದ. ಆದುದರಿಂದಲೇ ಪ್ರತಿಭಾವಂತ ಹಿಂದು ಯುವಕನೊಬ್ಬನನ್ನು ಮತಾಂತರಗೊಳಿಸಿ, ಅವನಿಗೆ ಮುಸ್ಲಿಂ ಧರ್ಮ ಶಿಕ್ಷಣವನ್ನು ಕೊಡಿಸಿ ಬಿದನೂರಿನ ನವಾಬನಾಗಿ ನೇಮಿಸಿಕೊಂಡಿದ್ದನಂತೆ. ಟಿಪ್ಪು ತನ್ನ ಅತಿರೇಖಗಳಿಂದಾಗಿ ಪ್ರಜೆಗಳ ವಿರೋಧ ಕಟ್ಟಿಕೊಂಡು ರಾಜ್ಯ ಕಳೆದುಕೊಳ್ಳುವನೆಂದು ಹೈದರಾಲಿ ಊಹಿಸಿದ್ದನಂತೆ. ಆದರೆ ಪೂರ್ಣಯ್ಯನ ಹಿಕಮತ್ತಿನಿಂದಾಗಿ ಅದು ನೆರವೇರಲಿಲ್ಲವೆಂದು ತಿಳಿದು ಬರುತ್ತದೆ. ಪೂರ್ಣಯ್ಯ ಒಂದು ರೀತಿಯ ಇಬ್ಬಂದಿ ಪಾತ್ರವಹಿಸಿರುವುದನ್ನು ಕಾಣಬಹುದು. ಈತ ಮೈಸೂರು ಅರಸರಿಗೆ ನಿಷ್ಠನಾಗಿದ್ದವನು. ಹೈದರಾಲಿ ಪ್ರಬಲನಾದುದರಿಂದ ಅವನ ಹಿತೈಸಿಯಂತೆ ವರ್ತಿಸಿದ ಅಮೀರ್‌ ಸಿದ್ಧಿಕ್‌ ಅಥವಾ ಮೀರ್‌ಸಾದಕನೂ ಒಬ್ಬ ಮತಾಂತರಗೊಂಡ ಪ್ರತಿಭಾವಂತ ಬ್ರಾಹ್ಮಣ ಎಂಬ ಅಭಿಪ್ರಾಯವಿದೆ. ಈ ಇಬ್ಬರೂ ಇಂಗ್ಲಿಷರಿಗೆ ಶ್ರೀರಂಗಪಟ್ಟಣಕ್ಕೆ ಯಾವ ಕಡೆಯಿಂದ ಸುಲಭವಾಗಿ ಪ್ರವೇಶಿಸಬಹುದೆಂದು ಹೇಳಿಕೊಟ್ಟಿರೆಂದು ಕಂಠಸ್ಥ ಇತಿಹಾಸ ಹಾಗೂ ಶಿಷ್ಟ ಇತಿಹಾಸಗಳೆರಡರಲ್ಲಿಯೂ ಆಧಾರಗಳು ದೊರೆಯುತ್ತವೆ. ಇವರನ್ನು ಮಹಾಭಾರತದ ಶಕುನಿಗೆ ಹೋಲಿಸಲಾಗಿದೆ.

ಟಿಪ್ಪುವಿನ ಆಸ್ಥಾನದಲ್ಲಿದ್ದು ಟಿಪ್ಪು ಜೀವನ ಕುರಿತು ಬರೆದ ಪರ್ಷಿಯನ್‌ ಕವಿಯೇ ಆತನ ಹಿಂದೂ ವಿರೋಧಿ ನೀತಿಯನ್ನು ಕಟುವಾಗಿ ಟೀಕಿಸಿದ್ದಾನೆಂದು ಚರಿತ್ರಕಾರರು ಅಭಿಪ್ರಾಯ ಪಟ್ಟಿದ್ದಾರೆ. ಈತ ಅಧಿಕಾರಕ್ಕೆ ಬಂದೊಡನೆಯೇ ಪರ್ಷಿಯನ್‌ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ. ಮತಾಂತರಕ್ಕೆ ಪ್ರಾಧಾನ್ಯತೆಯನ್ನು ಕೊಟ್ಟು, ಹಿಂದುಗಳು ಮತ್ತು ಅವರ ದೇವಾಲಯಗಳ ಮೇಲೆ ತಲೆಗಂದಾಯ ಹಾಕಿದ. ಇದರಿಂದ ಜನರು ಕಂಗೆಟ್ಟರು. ಹಳ್ಳಿಗಳವರು ಟಿಪ್ಪುವಿನ ಮುಸಲ್ಮಾನ ಸೈನಿಕರಿಗೆ ಹೆದರಿ ಹೆಂಗಸರನ್ನು ರಹಸ್ಯ ಸ್ಥಳಗಳಲ್ಲಿ ಬಚ್ಚಿಡುತ್ತಿದ್ದರಂತೆ. ಅಂತಹ ಸ್ಥಳಗಳನ್ನು ಈಗಲೂ ಹಳ್ಳಿಗರು ತೋರಿಸುತ್ತಾರೆ. ಈ ಘಟನೆಗಳು ಜನಮನದಲ್ಲಷ್ಟೇ ಅಲ್ಲ ಅನೇಕ ಸಾಹಿತ್ಯ ಕೃತಿಗಳಲ್ಲಿಯೂ ಕಾಣಿಸಿಕೊಂಡಿರುವುದನ್ನು ಕಾಣಬಹುದು. “ಎಲ್ಲಿ ನೋಡಿದರೂ ಅವರ ಕಾಟವೇ ಕಾಟ. ಎಲ್ಲಿ ಒಂದು ಒಳ್ಳೆಯ ಕುರಿ ಇರಲಿ ಅಲ್ಲಾಗಲೇ ಒಬ್ಬ ಸಾಬನುಗಡ್ಡವನ್ನು ನೀವುತ್ತಿರುವನು. ಎಲ್ಲಿ ಒಂದು ಹರೆಯದ ಹೆಣ್ಣು ಇರಲಿ ಅಲ್ಲಾಗಲೇ ಒಬ್ಬ ಸಾಬನು ಮೀಸೆತಿರುವುತ್ತಿರುವನು. ಹಾರುವರನ್ನು ಕಂಡರೆ ಹ್ಯಾಕ್‌ ಗುಡಿಗೋಪುರ ಕಂಡರೆ ಥೂಕ್‌ ಅವರನ್ನು ಕಂಡರೆ ಇಸ್ಕಿ ಇವರನ್ನು ಕಂಡರೆ ಪಿಸ್ಕಿ ಇದೇನು ಇವರಿಗೆ ಹೇಳುವವರು ಕೇಳುವವರು ಇಲ್ಲವೆ”[2] ಎಂದು ಹದಿನೆಂಟನೆ ಶತಮಾನದ ಲೇಖಕರೊಬ್ಬರು ಇವರ ಹಾವಳಿಯ ಚಿತ್ರ ಕೊಡುತ್ತಾರೆ.

ಜನಪದ ಸಾಹಿತ್ಯದಲ್ಲಿ ಈ ಬಗ್ಗೆ ಹೇರಳವಾಗಿ ಉದಾಹರಣೆಗಳು ದೊರೆಯುತ್ತವೆ. ಕಥೆ, ಗೀತೆ, ಗಾದೆಗಳ ರೂಪದಲ್ಲಿ ಇವು ದೊರೆಯುತ್ತವೆ. ಸೈನಿಕರ ಅತಿರೇಕಗಳನ್ನು ಜನರೆದುರು ಆ ಸಮಂಬಂಧವಾದ ಹಾಡುಗಳೊಂದಿಗೆ ಅಭಿನಯಿಸಿ ತೋರಿಸಲಾಗುತ್ತಿತ್ತು. ಆಗ ಜನರು ಅವುಗಳಿಗೆ ಸ್ಪಂದಿಸಿ “ಇಂತಹ ಅನ್ಯಾಯವು ಉಂಟೆ ಇಂತಹ ಹೇಡಿಗಳು ಎಷ್ಟು ಜನರಿದ್ದರೇನು ಪ್ರಯೋಜನವು” ಎಂದು ಸೈನಿಕರ ವಿರುದ್ಧಾಭಿಪ್ರಾಯ ಮೂಡಿಸುತ್ತಿದ್ದರು. ಇವೆಲ್ಲಾ ಒಂದು ರೀತಿಯ ಬೀದಿನಾಟಕಗಳಾಗಿದ್ದವು. ಅಂತಹ ಒಂದು ಜನಪದ ಗೀತೆಯ ಸಾಲುಗಳು ಆ ಕಾಲದ ಚಿತ್ರವನ್ನು ಕೊಡುತ್ತವೆ.

ಕೇಳು ಕೇಳಯ್ಯ ಎನ್ನಾಳಿದಗುರುವೆ ಕೇಳಯ್ಯ ಭಿನ್ನಾಣವನು
ಕಗ್ಗಲ್ಲಪ್ಪನ ಕಣಿವೆಯ ಒಳಗೆ ಗಿರಿಕಿಯ ಜೋಡುನಡೆದಾಡುತ್ತಾವೋ
ಹರಕೆಯ ಕುರಿಯ ಬಿಟ್ಟಿಹಿಡಿದು ಕುರುಬನ ಮೇಲೆ ಹೊರಿಸ್ಯಾರೋ
ಆ ರ್ಸೇರಕ್ಕಿ ಮೂರ್ಸೇರ್‌ತುಪ್ಪ ಗುರುಮಸಾಲೆಗಮಗಮ
ಪಲಾವು ಬಿರ್ಯಾನಿ ಪಿರಿ ಕಿಚಡಿ ಮುಚ್ಚಳದಲ್ಲಿ ಗಮ್‌ಗಮ್‌
ಸುತ್ತಲು ಕುಳಿತು ಗಡ್ಡವ ನೀವುತ ಕಡಿವರು ಮೂಳೆಯಕಟ್‌ಕಟ್‌
ಹರಕೆ ಕುರಿಯ ತುರುಕಪ್ಪ ತಿಂದ ಕಣ್‌ಕಣ್‌ ಬಿಡೋ ಬರೀಪ್ಪ

ಈ ಗೀತೆ ಗ್ರಾಮಾಂತರದಲ್ಲಿ ಮುಸಲ್ಮಾನ ಸೈನಿಕರ ಹಾವಳಿಯ ಸುಧೀರ್ಘ ಚಿತ್ರವನ್ನೇ ಕೊಡುತ್ತದೆ. ಇಂತಹ ಅನೇಕ ಗೀತೆಗಳು ಜನಪದರಲ್ಲಿ ಇಂದಿಗೂ ಇರುವುದನ್ನು ಕಾಣಬಹುದು. ಕೊನೆಯ ಸಾಲಂತೂ ಗಾದೆಯ ರೂಪದಲ್ಲಿ ಇಂದಿಗೂ ಬಳಕೆಯಲ್ಲಿದೆ.

ಮೈಸೂರು ಯುದ್ಧಗಳು ಎಂದೇ ಚರಿತ್ರೆಯಲ್ಲಿ ಪ್ರಖ್ಯಾತವಾದ ನಾಲ್ಕು ಯುದ್ಧಗಳಲ್ಲಿ ಭಾಗಿಯಾದ ಬ್ರಿಟಿಷ್‌ ಅಧಿಕಾರಿಗಳಲ್ಲಿ ಕೆಲವರು ತಮ್ಮ ಪರವಾಗಿ ಬರೆದುಕೊಂಡಂಥವು ಇವು ಎಂದು ಕೆಲವು ಚರಿತ್ರಕಾರರು ಅಭಿಪ್ರಾಯ ಪಡುತ್ತಾರೆ. ಹಾಗೆ ಹೇಳುವುದಾದರೆ ಹೈದರಾಲಿ ಟಿಪ್ಪು ಕುರಿತು ಬರೆದವರೂ ತಮ್ಮ ಮೂಗಿನ ನೇರಕ್ಕೆ ಬರೆದಿದ್ದಾರೆಂದು ಹೇಳಲವಕಾಶವಿದೆ. ಕಂಠಸ್ಥ ಇತಿಹಾಸದೊಂದಿಗೆ ಹೋಲಿಸಿ ನೋಡಿದಾಗ ಈ ಎರಡೂ ರೀತಿಯ ಇತಿಹಾಸ ಕೃತಿಗಳಲ್ಲಿಯೂ ಪ್ರತ್ಯೇಕವಾಗಿಯೋ ಅಪ್ರತ್ಯಕ್ಷವಾಗಿಯೋ ಆ ಘಟನೆಗಳು ಸೇರಿರುವುದನ್ನು ಗುರುತಿಸಬಹುದು. ನಾಲ್ಕು ಮೈಸೂರು ಯುದ್ಧಗಳಲ್ಲಿ ಪಾಲುಗೊಂಡು ಮೈಸೂರಿನ ಚರಿತ್ರೆ ಎಂಬ ಗ್ರಂಥವನ್ನು ಬರೆದ ಕರ್ನಲ್‌ ವಿಲಿಕ್ಸ್‌ ಟಿಪ್ಪು ಮತ್ತು ಮತಾಂತರವನ್ನು ಕುರಿತಂತೆ ಹೇಳಿರುವ ಮಾತುಗಳಿವು. “The vicissitudes Experienced personally and in his Connections by this brave land and interesting man strongly illustrate the able character at the sultans oppressions. He was Bornasa Bramin, and was at The age of seventeen a writer in the service of a sheickh ayaz at Bednore. When it surrendered to general Mathews. On the Recapture at that placed by Tippo, Every person was sough for who had beer in any respect useful to the teigtive and this youth was forcibly converted to Islam and highly instructed in its Doctrines. He was soom distingui head as soldier and invested with high command. In 1799 he fell desperately wounded in attempting to clear the breach and repel the assult at sriranga pattanam. He recovered and was appointed to the Command at the Raja’s infantry and witnessing the opening of the temples, on the Restoration of the Hindoo Government made advance through the Minister to be Readmitted to his rank and cast as a Bramin. Before I knew him he had married a mahammedon daughted to a mussulman forcibly converted tike himself A Hindoo at the Military cable”[3] ಮೇಲಿನ ಮಾತುಗಳು ಆಗಿನ ಕಾಲದಲ್ಲಿ ಮತಾಂತರ ಎಷ್ಟೊಂದು ಒತ್ತಾಯದಿಂದ ನಡೆಯುತ್ತಿತ್ತೆಂಬುದನ್ನು ತೋರಿಸುತ್ತದೆ. ಇದು ಸೇನೆಯಲ್ಲಿದ್ದವರ ಕಥೆಯಾದರೆ ಈತನೇ ತನ್ನನ್ನು ಭೇಟಿಯಾದ ಮಹಿಳೆಯೊಬ್ಬಳ ಕರುಣಾಜನಕ ಕಥೆಯನ್ನು ಹೇಳಿದ್ದಾನೆ. “She paid me a visit in 1803, Tipoes Aumil, Who polluted the Mansion of mylost husband and son wanted Iron and determined to supply himself from the Rut (A temple of Carved wood fikedon wheels Drawan in procession on public occasions, and requiring many thousand persons to effect its Movement) writch burned it in the square of the great temple for sake of Iron. On hearing of this abomination. I secretly collected my Men. And entered twon by Night, I seized him and tied him to stake and I burned the Monster on the spot Where he had wantonly Insulted and consumed the sacred Emblems of my Religion” ಹೈದರಾಲಿ, ಟಿಪ್ಪುವಿಗೆ ತಿಳಿದೋ ತಿಳಿಯದೆಯೋ ಹಿಂದೂಗಳ ಮೇಲೆ ಅವರ ದೇವಾಲಯ ಮತ್ತು ಮಠಮಾನ್ಯಗಳ ಮೇಲೆ ಅವ್ಯಾಹತವಾಗಿ ಮತೀಯ ದಾಳಿ ನಡೆಯುತ್ತಲೇ ಇತ್ತೆಂಬುದನ್ನು ಈ ಮಾತುಗಳು ಪ್ರತಿಪಾದಿಸುತ್ತವೆ. ಇಂತಹ ಅನೇಕ ಹಿಂದೂಗಳ ಧಾರುಣ ಕಥೆಗಳು ಆ ಕಾಲದ ಗ್ರಂಥಗಳಲ್ಲಿ ಉಲ್ಲೇಖಗೊಂಡಿವೆ.

ಗೃಹಬಂಧನದಲ್ಲಿದ್ದ ರಾಣಿಲಕ್ಷ್ಮಮ್ಮಣ್ಣಿಯವರು ತಮ್ಮ ರಾಯಭಾರಿಗಳ ಮೂಲಕ ತಮ್ಮ ರಾಜ್ಯವನ್ನು ಟಿಪ್ಪುವಿನಿಂದ ವಾಪಸ್ಸು ಪಡೆಯಲು ಸಹಾಯ ಮಾಡಬೇಕೆಂದು ಮನವಿ ಮಾಡುತ್ತಲೇ ಇದ್ದರು. ಆದರೆ ಇಂಗ್ಲಿಷರು ಮೀನ ಮೇಷ ಎಣಿಸುತ್ತಿದ್ದರು. ಅವರಿಗೆ ಪ್ರಜಾಭಿಪ್ರಾಯ ಮುಖ್ಯವಾಗಿತ್ತು. ಅದನ್ನು ಸಂಗ್ರಹಿಸಲು ಅವರು ಗೂಢಾಚಾರರನ್ನು ನೇಮಿಸಿದರು. ಅವರು ಮೈಸೂರು ರಾಜ್ಯದಲ್ಲಿ ವಿಷಯ ಸಂಗ್ರಹಿಸಿ ಬ್ರಿಟಿಷರಿಗೆ ವರಧಿ ಮಾಡಿದರು. ‘‘ಟಿಪ್ಪು ಸುಲ್ತಾನನ್ನು ಸಜ್ಜರನ್ನು ಬಾಧೆಪಡಿಸಿ ವರ್ಣಾಶ್ರಮ ಧರ್ಮಗಳನ್ನು ಕೆಡಿಸುತ್ತಾ ಉತ್ತಮರಾದ ಸಕಲ ಜಾತಿಯ ಜನರುಗಳನ್ನು ತನ್ನ ಜಾತಿಗೆ ಸೇರಿಸಿಕೊಳ್ಳಬೇಕೆಂದು ಕೆಲವು ಜನಗಳನ್ನು ಚೇಲಿಯವರನ್ನಾಗಿ ಮಾಡಿಕೊಂಡು ದೇವಾದಾಯ ಬ್ರಹ್ಮದಾಯ ಸೀಮೆಗಳಲ್ಲಿರುವ ದೇವರುಗಳ ವಸ್ತ್ರಾಭರಣಗಳನ್ನು ತೆಗೆದುಕೊಂಡು ದೇವರುಗಳ ಅಂಗಭಂಗವನ್ನು ಮಾಡಿ ಗುಡಿಗೋಪುರ, ತಟಕಾರಾಮ, ಕಟ್ಟೆ, ಕಾಲುವೆ, ಸೋಪಾನ ಮುಂತಾದ ಅನೇಕ ಧರ್ಮಕಾರ್ಯಗಳನ್ನು ನಾಶಮಾಡಿದನು. ದುಷ್ಟರಾದ ತನ್ನ ಜಾತಿಯ ಜನರಿಗೇ ಪ್ರಾಬಲ್ಯವನ್ನು ಕೊಟ್ಟು ಅರಸುಗಳು ಮುಂತಾದ ಉತ್ತಮ ವರ್ಣಾಶ್ರಮದ ಜನರುಗಳ ಗ್ರಾಮಭೂಮಿ ಸಂಬಳ ಕೊದಲಾದ ಜೀವನಗಳನ್ನು ತಪ್ಪಿಸಿ ದೇಶ ಭ್ರಷ್ಟರನ್ನಾಗಿ ಮಾಡಿದನು” ಗೂಢಚಾರರ ಈ ವರದಿ ಬ್ರಿಟಿಷರ ಪಾಲಿಗೆ ರೋಗಿ ಬಯಸಿದ್ದು ಅದೇ ವೈಧ್ಯ ಹೇಳಿದ್ದು ಅದೇ ಎಂಬಂತಾಯಿತು. ಶ್ರೀರಂಗಪಟ್ಟಣವನ್ನು ವಶಪಡಿಸಿಕೊಳ್ಳುಲು ಅವರು ಸಕಲ ತಯಾರಿ ಮಾಡಿಕೊಳ್ಳತೊಡಗಿದರು.

ಈ ಮಧ್ಯೆ ೧೭೯೬ರಲ್ಲಿ ಗೃಹಬಂಧನದಲ್ಲಿದ್ದ ಮಹಾರಾಜರು ತೀರಿಕೊಂಡರು. ಪದ್ದತಿಯಂತೆ ಆತನಿಗೆ ಮಕ್ಕಳಿಲ್ಲದಿದ್ದುದರಿಂದ ದತ್ತು ಸ್ವೀಕಾರ ಮಾಡಿ ಆತನಿಗೆ ಪಟ್ಟ ಆಗ ಬೇಕಾಯಿತು. ಆದರೆ “ಅನಂತರ ಶ್ರೀರಂಗಪಟ್ಟಣದಲ್ಲಿ ಸುಲ್ತಾನನು ಚಾಮರಾಜ ಒಡೆಯರು ತೀರಿಹೋದುದರಿಂದ ಸಂತೋಷಯುಕ್ತನಾಗಿರುತ್ತಾ, ಇನ್ನು ಮೇಲೆ ನಿಷ್ಕಂಟವಾಗಿಸಕಲ ರಾಷ್ಟ್ರಾಧಿಪತ್ಯವು ತನ್ನ ಕೈವಶವಾವಾಯಿತೆಂದು, ಪೂರ್ವಕ್ಕಿಂತ ಅಧಿಕವಾಗಿ ಸಜ್ಜನರುಗಳ ಬಾಧೆಯನ್ನು ದುರ್ಜನರುಗಳ ಪ್ರಾಬಲ್ಯವನ್ನು ಮಾಡಿ ದೇವ ಬ್ರಾಹ್ಮಣರ ಕಂಠಕನಾಗಿ ಚಾಮರಾಜ ಒಡೆಯರ ಪುತ್ರರಿಗೆ ಪಟ್ಟಾಭಿಷೇಕವನ್ನು ಮಾಡಿಸದೆ ಸ್ವಾಮಿ ದ್ರೋಹದಲ್ಲಿಯೆ ಆಸಕ್ತನಾಗಿದ್ದನು”[4] ಈ ಮದ್ಯೆ ಅರಮನೆ ಹೆಂಗಸರೆಲ್ಲಾ ಟಿಪ್ಪು ತನ್ನ ಸೇನಾಧಿಕಾರಿಗಳಿಗೆ ಹಂಚಿದನೆಂಬ ವದಂತಿ ಕಾಳ್ಗಿಚ್ಚಿಂತೆ ಹಬ್ಬಿತು. ಇದರ ಜೊತೆಗೆ ಮೈಸೂರು ರಾಜರ ಅರಮನೆಯ ಸರಸ್ವತೀ ಭಂಡಾರದಲ್ಲಿದ್ದ ಸಾವಿರಾರು ಓಲೆಗ್ರಂಥಗಳನ್ನು ಕುದುರೆಗಳಿಗೆ ಹುರುಳಿ ಬೇಯಿಸಲು ಹಾಕಿದನೆಂಬ ಸುದ್ದಿಯೂ ಸೇರಿಕೊಂಡಿತು. ಇದರಿಂದ ಜನರು ರೊಚ್ಚಿ ಗೆದ್ದರು. ಗ್ರಾಮ ಮುಖಂಡರ ನಿಯೋಗವೊಂದು ಚನ್ನಪಟ್ಟಣದಲ್ಲಿದ್ದ ಜಾನ್ ಸಲಿವನ್ ಮೂಲಕ ಮದರಾಸಿನಲ್ಲಿದ್ದ ಗೌರ್ನರ್ ಜನರಲ್‌ನನ್ನು ಕಂಡು ಮಾತುಕತೆ ನಡೆಸಿದರು.

ಗ್ರಾಮ ಮುಖಂಡರ ನಿಯೋಗಕ್ಕೆ ಪೋಷಕವಾಗಿ ರಾಣಿ ಲಕ್ಷ್ಮಮ್ಮಣಿಯವರು ಇಂಗ್ರಿಷರಿಗೊಂದು ಪತ್ರ ಬರೆದು “ನಮ್ಮ ಚಾಕರನಾದ ಟಿಪ್ಪುವು ಬಹಳ ದುಷ್ಟತನವನ್ನು ಮಾಡಿತ್ತಿರುವುದರಿಂದ ಇವನ ವಿಷಯದಲ್ಲಿ ಇರತಕ್ಕ ಜನಗಳಿಗೆಲ್ಲಾ ಬಹಳ ದ್ವೇಷವಿರುವುದು. ಆದಕಾರಣ ನೀವು ಇವನನ್ನು ನಿಗ್ರಹಿಸಿ ಈ ರಾಜ್ಯವನ್ನು ಪೂರ್ವದಂತೆ ನಮ್ಮ ವಶಮಾಡಿ ಶಾಶ್ವತವಾದ ಕೀರ್ತಿಯನ್ನು ಸಂಪಾದಿಸಿಕೊಳ್ಳಬೇಕು ಮತ್ತು ನೀವು ಜಯವನ್ನು ಹೊಂದುವುದಕ್ಕೆ ಈ ಸಮಯ ಅನುಕೂಲಕರವಾಗಿರುವುದರಿಂದ ಶ್ರೀಘ್ರದಲ್ಲೆ ಬರುವವರಾಗಬೇಕು” ಎಂದು ಕೇಳಿಕೊಂಡರು. ಇಂತಹ ಅನೂಕೂಲ ಸಮಯಕ್ಕಾಗಿಯೇ ಕಾಯುತ್ತಿದ್ದ ಬ್ರಿಟಿಷರು ೧೭೯೨ ರಲ್ಲಿ ಕಾರ್ನವಾಲೀಸ್ ಮತ್ತು ಮೆಡೋಸ್ ನಾಯಕತ್ವದಲ್ಲಿ ಸೇನೆಯನ್ನು ಕಳಿಸಿದರು. ಇದರಿಂದ ಮೂರನೆಯ ಮೈಸೂರು ಯುದ್ಧ ಆರಂಭವಾಯಿತು.

ಸೀತೆದಂಡಿನ ಮುಖಂಡರಿಗೆ ಜನ ಬೆಂಬಲ ದೊರೆಯುತ್ತಿರುವುದು ಮತ್ತು ಅವರ ಪರವಾಗಿ ಇಂಗ್ಲಿಷರು ಬರುತ್ತಿರುವುದು ಟಿಪ್ಪು ಸ್ವಲ್ಪ ಮಟ್ಟಿಗೆ ಕುಗ್ಗಿಸಿದಂತೆ ತೋರುತ್ತದೆ. ಹಿಂದುಗಳನ್ನು ಸಮಾಧನ ಪಡಿಸುವ ಕೆಲವು ನಿರ್ಣಯಗಳಿಗಳನ್ನು ಆತ ಕೈಗೊಂಡ. ಗ್ರಾಮಗಳಿಗೆ ನೇಮಿಸಿದ್ದ ಮುಸಲ್ಮಾನ ಸೈನಿಕರನ್ನು ಕೂಟಲೇ ಹಿಂತೆಗೆದುಕೊಳ್ಳುವಂತೆ ಆದೇಶ ಮಾಡಿದ. ಪ್ರಮುಖವಾದ ಹಿಂದು ದೇವಾಲಯ ಮತ್ತು ಮಠಗಳಿಗೆ ದತ್ತಿ ದಾನಗಳನ್ನು ಅರ್ಪಿಸಿದ. ಪೂರ್ಣಯ್ಯನನ್ನು ದಿವಾನಗಿರಿಗೆ ಏರಿಸಿದ. ಇಷ್ಟಾದರೂ ಮೂರನೆಯ ಮೈಸೂರು ಯುದ್ಧ ಆರಂಭವಾಗಿಯೇ ಬಿಟ್ಟಿತು. ಗ್ರಾಮಗಳಿಂದ ಆಹಾರ ಪದಾರ್ಥಗಳು ಬರದಂತೆ ಸೀತೆದಂಡಿನ ಯೋಧರು ತಡೆಯಲಾರಂಭಿಸಿದರು. ಗಡಿಠಾಣ್ಯಗಳೆಲ್ಲಾ ಸೀತೆದಂಡಿನವರ ವಶವಾಗತೊಡಗಿದವು. ನೆರವಿಗೆ ಬರುತ್ತೇವೆಂದಿದ್ದ ಹೈದರಾಬಾದು ನಿಜಾನ ಮತ್ತು ಮರಾಠರು ಇಂಗ್ಲಿಷರೊಂದಿಗೆ ಕೈಜೋಡಿಸಿದರು. ಮಹಮದಾಲಿಯ ಪದಚ್ಯುತಿ ಮತ್ತು ಕೊಲೆಯ ಹಿನ್ನೆಲೆಯಲ್ಲಿ ಅನೇಕ ಮುಸಲ್ಮಾನ ಸರದಾರರು ಟಿಪ್ಪುವಿಗೆ ವಿರುದ್ಧವಾಗಿದ್ದು ಬ್ರಿಟಿಷರೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದರು. ಈ ಮರ್ಮವನ್ನು ಅರಿತ ಟಿಪ್ಪು “ಯುದ್ಧ ಮಾಡಿ ಇಂಗ್ಲಿಷರನ್ನು ಜಯಿಸುವುದು ಸಾಧ್ಯವಿಲ್ಲವೆಂದು, ಅವರೊಡನೆ ಸಂಧಿಯನ್ನು ಮಾಡಿಕೊಂಡು ಅವರುಗಳಿಗೆ ಕೊಡತಕ್ಕ ದ್ರವ್ಯಕ್ಕೆ ಬದಲು ಕೆಲವು ಸೀಮೆಯನ್ನು ದ್ರವ್ಯವನ್ನು ಸಹ ಕೊಟ್ಟು ಏಳು ವರ್ಷ ಕರಾರು ಮಾಡಿಕೊಂಡು ನಿಂತ ಹಣವನ್ನು ಕೊಡುವವರೆಗೂ ತನ್ನ ಇಬ್ಬರು ಮಕ್ಕಳನ್ನು ವೋಲು ಕೊಟ್ಟು ಪರಿಬಾವಿ ಸಂವತ್ಸರದಲ್ಲಿ ಕಳುಹಿಸಿಕೊಟ್ಟನು”

ಇಷ್ಟೆಲ್ಲಾ ಆದ ಮೇಲೂ ಟಿಪ್ಪು ಹಿಂದುಗಳ ಬಗೆಗಿನ ದೋರಣೆಯನ್ನು ಬದಲಾಯಿಸಿಕೊಳ್ಳಲಿಲ್ಲ. ಎಂದು ಆ ಕಾಲದ ಅನೇಕ ದಾಖಲೆಗಳು ಹೇಳುತ್ತವೆ. ಬ್ರಿಟಿಷರೊಂದಿಗೆ ಕರಾರು ಮಾಡಿಕೊಂಡ ಟಿಪ್ಪು “ಸೀಮೆಯ ಮೇಲಣ ದೇವರ ಒಡವೆಗಳನ್ನು ಧನಿಕರಾಗಿದ್ದ ಪ್ರಜೆಗಳ ಧನವನ್ನು ಅಧಿಕಾರಿಗಳು ತನ್ನ ಕಡೆಯ ಜನರಿಂದ ನಜರಾಣೆ ಎಂಬ ಸುಂಕವನ್ನು ನಿಗಧಿ ಮಾಡಿಸಿದನು. ಮೈಸೂರು ಕೋಟೆಯಲ್ಲಿದ್ದ ದೇವರುಗಳ ಗುಡಿಗೋಪುರಗಳನ್ನು ಅರಮನೆ ಮೊದಲಾಗಿ ಸಮಸ್ತ ಜನಗಳ ಮನೆಯನ್ನು ಕೆಡಹಿ ದೇವರುಗಳನ್ನು ಕಿತ್ತುಹಾಕಿ ಮೈಸೂರು ಕೋಟೆಗೆ ಪೂರ್ವಪಾಶ್ವದಲ್ಲಿರುವ ಕಾಡು ಬಸವನ ತಿಟ್ಟಿನ ಮೇಲೆ ಚಿಕ್ಕದಾಗಿ ಒಂದು ಕೊಟೆಯನ್ನು ಕಟ್ಟಿಸಿ ಅದಕ್ಕೆ ನಜರಬಾಗಿಲು ಎಂದು ಹೆಸರಿಟ್ಟನು. ಮೈಸೂರು ಪೇಟೆಯಲ್ಲಿದ್ದ ಬ್ರಾಹ್ಮಣರು ಶೆಟ್ಟಿವರ್ತಕರು ಮುಂತಾದ ಹಮಾಮ್ ಕೋಮಿನ ಜನಗಳ ಮನೆಗಳನ್ನು ಕೆಡಹಿ ಮೈಸೂರಿಗೆ ಉತ್ತರ ಪಾಶ್ವಕ್ಕೆ ಒಂದು ಹರಿದಾರಿಯಲ್ಲಿ ಸುಭೇದಾರ್ ವೀರಣ್ಣನ ತೋಟದ ಬಳಿ ನೀರು ಹರಿಯುವ ಹಳ್ಳದ ಸಮೀಪದಲ್ಲಿ ಮನೆಗಳನ್ನು ಕಟ್ಟಿಸಿ ನವಾಷಹರ್ ಎಂದು ಹೆಸರಿಟ್ಟನು.” ಟಿಪ್ಪುವಿನ ಈ ರೀತಿಯ ನಡವಳಿಕೆಗಳು ಜನರಲ್ಲಿ ಅದರಲ್ಲೂ ಹಿಂದೂಗಳಲ್ಲಿ ಅನುಮಾನ ಹುಟ್ಟಿಸುತ್ತಿದ್ದವು.

ಮೂರನೆಯ ಮೈಸೂರು ಯುದ್ಧದ ಕರಾರಿನಮತೆ ಏಳು ವರ್ಷಗಳ ಕಾಲ ಇಂಗ್ಲಿಷರು ಶ್ರೀರಂಗಪಟ್ಟಣದ ಮೇಲೆ ದಂಡೆತ್ತಿ ಬರುವುದಿಲ್ಲ. ಅಷ್ಟರಲ್ಲಿ ತಾನು ಸಾಕಷ್ಟು ಗಟ್ಟಿಮಾಡಿಕೊಳ್ಳುವುದು ಟಿಪ್ಪುವಿನ ಉದ್ದೇಶವಾಗಿತ್ತು. ಆದರೆ ಒಂದು ಕಡೆ ಸೀತೆದಂಡಿನ ಮುಖಂಡರು ಇನ್ನೊಂದು ಕಡೆ ರಾಣಿ ಲಕ್ಷ್ಮಮ್ಮಣಿ ಬ್ರಿಟಿಷರ ಮೇಲೆ ಒತ್ತಡ ತರಲಾರಂಭಿಸಿದರು. ರಾಣಿಯ ಪರವಾಗಿ ವಕೀಲರಾದ ತಿರುಮಲರಾಯ ನಾರಾಯಣರಾಯ, ಸೀತೆದಂಡಿನ ಐವರು ಮುಖಂಡರು ಮದರಾಸಿಗೆ ಹೋಗಿ ಇಂಗ್ಲಿಷರೊಂದಿಗೆ ಚರ್ಚೆ ನಡೆಸಿದರು. ತಾವು ಹೋಗದಿದ್ದರು ಟಿಪ್ಪುವಿನ ಪಥನ ಖಚಿತವೆಂಬುದು ಬ್ರಿಟಿಷರಿಗೆ ಅರಿವಾಯಿತು. ಕೂಡಲೇ ಕಾರ್ಯ ಪ್ರವೃತ್ತರಾದ ಅವರು ಯಾವುದೋ ಕುಂಟುನೆಪ ಮುಂದೆ ಮಾಡಿ ಮೂರನೆಯ ಮೈಸೂರು ಯುದ್ಧದ ಕರಾರನ್ನು ಮುರಿದರು. ಜನರಲ್ ಹ್ಯಾರಿಸ್ ಮತ್ತು ವೆಲ್ಲೆಸ್ಲಿಯ ನಾಯಕತ್ವದಲ್ಲಿ ಬ್ರಿಟಿಷ್ ಸೇನೆ ಶ್ರೀರಂಗಪಟ್ಟಣದತ್ತ ಹೊರಟಿತು. ಹೈದರಾಬಾದು ನಿಜಾಮ ಮತ್ತು ಮರಾಠರ ಸೇನೆಯೂ ಕೂಡಿಕೊಂಡಿತು. ನಾಲ್ಕನೆಯ ಮೈಸೂರು ಯುದ್ಧ ಒಂದುವರೆ ತಿಂಗಳು ನಡೆಯಿತು. ಕಡೆಗೆ ೧೭೯೯ನೆಯ ಮೇ ೪ನೆಯ ತಾರೀಕು ಮಧ್ಯಹ್ನ ಶ್ರೀರಂಗಪಟ್ಟಣ ಕೋಟೆಯ ಬಗ್ಗೆ ಬರೆದ ಒಬ್ಬ ಇಂಗ್ಲಿಷ್ ಯೋಧ “ಬ್ರಿಟಿಷರು ಹನ್ನೆರಡು ಸಾವಿರ ಮೈಲಿದೂರದಿಂದ ಬಂದು ಶ್ರೀರಂಗಪಟ್ಟಣದಣತಹ ದುರ್ಗಮವಾದ ಕೊಟೆಯನ್ನು ಗೆದ್ದರು ಇವರೆಂಥ ಶೂರರೂ ಎಂದು ಮುಂದೊಂದು ದಿನ ಯಾರಾದರೂ ಹೇಳಿಯಾರು ಆದರೆ ಟಿಪ್ಪುವಿನ ಹಿಂದು ವಿರೋಧಿ ನೀತಿಗೆ ತಿರುಗಿ ಬಿದ್ದ ಆ ದೇಶದ ಪ್ರಜೆಗಳು ಬಂಡೆದ್ದು ಶ್ರೀರಂಗಪಟ್ಟಣದ ಪಥನಕ್ಕೆ ಕಾರಣರಾದರು ಆ ಕೀರ್ತಿಯನ್ನು ಬ್ರಿಟಿಷರಿಗೆ ಬಿಟ್ಟು ಕೊಟ್ಟರು” ಎಂದು ತನ್ನ ಗ್ರಂಥವೊಂದರಲ್ಲಿ ಹೇಳಿಕೊಂಡಿದ್ದಾನೆ.

ಟಿಪ್ಪುವಿನ ಪಥನಕ್ಕೆ ಇಂಗ್ಲಿಷರನ್ನು ಮೊರೆಹೋದ ಸೀತೆದಂಡಿನವರು ಸೇನೆಯಲ್ಲಿದ್ದ ಹಿಂದೂ ಸೈನಿಕರೊಂದಿಗೆ ಮಾತು ಕತೆ ನಡೆಸಿ ಇಂಗ್ಲಿಷ ವಿರುದ್ಧವೂ ಬಂಡಾಯವೇಳಲು ಯೋಚಿಸಿದ್ದರು. ಆದರೆ ಈ ವಿಷಯವನ್ನು ಅರಿತ ಇಂಗ್ಲಿಷರು ಕೂಡಲೇ ಹೊಸ ರಾಜನ ಪಟ್ಟಾಭಿಷೇಕಕ್ಕೆ ಏರ್ಪಾಡು ಮಾಡಿದರು. ಪಟ್ಟಣಕ್ಕೆ ಬಂದ ಬಾಲಕ ಮುಮ್ಮಡಿ ಕೃಷ್ಣರಾಜರು ವಯಸ್ಸಿಗೆ ಬರುವವರೆಗೆ ರಾಣಿ ಲಕ್ಷ್ಮಮ್ಮಣಿ ಅವರನ್ನು ರಾಜಪೋಷಕರಾಗಿಯೂ ಸರ್ವಾಧಿಕಾರಿಯೂ ಆಗಿ ನೇಮಿಸಿದರು. ಆದರೆ ಪಟ್ಟಾಭಿಷೇಕ ರಕ್ತಪಾತವಾದ ಶ್ರೀರಂಗ ಪಟ್ಟಣದಲ್ಲಿ ಬೇಡ ಮೈಸೂರಿನಲ್ಲಿ ಆಗಲಿ ಎಂದರು. ಇಂಗ್ಲಿಷರ ಚಾಣಕ್ಯತನ ಅರಿಯದ ರಾಜವಂಶೀಯರು ಅದಕ್ಕೊಪ್ಪಿದರು. ಇಂಗ್ಲಿಷರಿಗೆ ಶ್ರೀರಂಗಪಟ್ಟಣದಂತಹ ಬಲವಾದ ಕೋಟೆಯುಳ್ಳ ನಗರವನ್ನು ರಾಜಧಾನಿಯಾಗಿ ಮುಂದುವರಿಸುವ ಇಷ್ಟ ಇರಲಿಲ್ಲ. ಕಾರಣ ಮತ್ತೆ ಚಿಗುರಿಕೊಂಡ ತಮ್ಮ ವಿರುದ್ಧ ತಿರುಗಿ ಬಿದ್ದಾರೆಂಬ ಹೆದರಿಕೆ. ಆದುದರಿಂದ ಅದನ್ನು ತಮ್ಮ ಸೇನಾಕೇಂದ್ರವಾಗಿ ಮಾಡಿಕೊಂಡರು. “ನಿಮ್ಮ ದೊರೆಗಳವರಿಗೆ ಪರಂಪರಾ ಪ್ರಾಪ್ತವಾಗಿ ಬಂದ ಮೈಸೈರಿನಲ್ಲಿ ಪಟ್ಟಾಭಿಷೇಕವನ್ನು ಮಾಡಿಸಬೇಕಾಗುವುದು” ಎಂದು ಹೇಳಿ ರಾಜಧಾನಿಯನ್ನು ಮೈಸೂರಿಗೆ ಬದಲಾಯಿಸಿದರು. ಅಷ್ಟೇ ಅಲ್ಲ ಅವರು ಪಟ್ಟಾಭಿಷೇಕ ಸಮಾರಂಭಕ್ಕೆ “ತಮ್ಮ ಕಿಂಗ್‌ಪಾದಷಹಾ ಬೇಟಿಗೆ ಬರುವಂತೆ ಬಂದು ಮರ್ಯಾದೆಯನ್ನು ಮಾಡಿಕುಳಿತುಕೊಂಡರು”.

ಟಿಪ್ಪುವಿನ ಬಗ್ಗೆ ಬರೆದ ಅವನ ಸಮಕಾಲೀನ ಚರಿತ್ರಕಾರರಾಗಲಿ. ಲೇಖಕರಾಗಲಿ ಆತನ ಬಗ್ಗೆ ಅಂತಹ ಅದಾಭಿಪ್ರಾಯವನ್ನು ಹೊಂದಿದ್ದಂತೆ ಕಾಣುವುದಿಲ್ಲ. ಬ್ರಿಟಿಷ್ ಮತ್ತು ಹಿಂದೂ ಬರಹಗಾರರಿರಲಿ ಅವನ ತನ್ನ ಆಸ್ಥಾನ ಕವಿಯಾಗಿ ಮಾಡಿಕೊಂಡಿದ್ದ ಪರ್ಷಿಯನ್ ಲೇಖಕ ಕೂಡ ಟಿಪ್ಪುವಿನ ಹಿಂದೂ ವಿರೋಧಿ ನೀತಿಯನ್ನು ಕಟುವಾಗಿಯೇ ಟೀಕಿಸಿದ್ದಾನೆ. ಹೈದರಾಲಿಯು ಧರ್ಮ ಮತ್ತು ಮತೀಯ ವಿಷಯಗಳಿಗೆ ಅಷ್ಟಾಗಿ ತಲೆ ಹಾಕುತ್ತಿರಲಿಲ್ಲವೆಂಬುದನ್ನು ಅದೇ ಬರಹಗಾರರು ಮೆಚ್ಚುತ್ತಾರೆ. ನಾಲ್ಕನೆಯ ಮೈಸೂರು ಯುದ್ಧದಲ್ಲಿ ಶ್ರೀರಂಗಪಟ್ಟಣ ವಿದೇಶಿಯರ ವಶವಾದುದಕ್ಕೆ ಮರುಗುವ ಲೇಖಕನೊಬ್ಬ ಟಿಪ್ಪುವಿನ ಪಥನವನ್ನು ಕುರಿತು “ಆನಂಧಾತಿಶಯವೇಂಬಿ ಸಮುದ್ರಪು ಉಕ್ಕಿ ಸತ್ಕೀತಿ ಚಂದ್ರಿಕೆಯು ಸಮಸ್ತದಿಗ್ದೇಶಗಳಿಗೂ ಪಸರಿಸತೊಡಗಿತು” ಎಂದಿದ್ದಾನೆ.

ಸೀತೆದಂಡು ಈಗ ಒಂದು ಜನಪದ ಕಲೆಯಾಗಿ ಕೇವಲ ಕೆಲವು ಕಡೆ ಆಚರಣೆಯಲ್ಲಿದೆ. ವರ್ಷಕ್ಕೊಮ್ಮೆ ಮೇ ತಿಂಗಳಿನಲ್ಲಿ ಒಂದು ರೀತಿಯ ದುಷ್ಟ ನಿಗ್ರಹ ಶಿಷ್ಟಪರಿಪಾಲನೆಯ ಸಂಕೇತದಂತೆ ದೇವಾಲಯಗಳಲ್ಲಿ ಇದರ ಆಚರಣೆ ಇದೆ. ಇಂದಿಗೂ ಸಾಂಕೇತಿಕವಾಗಿ ಒಂದಿಬ್ಬರು ಯುವಕರು ಸ್ತ್ರೀವೇಷ ಧರಿಸಿ ಬಿಲ್ಲುಬಾಣ ಅಥವಾ ಕತ್ತಿ ಗುರಾಣಿ ಹಿಡಿದು ಸೀತೆಯ ಗುಣಗಾನ ಮಾಡುತ್ತಾರೆ. ಶ್ರೀರಂಗಪಟ್ಟಣ ಪಥನವಾದುದು, ನಾಲ್ಕನೆಯ ಮೈಸೂರು ಯುದ್ಧ ಮುಕ್ತಾಯವಾದುದು, ಟಿಪ್ಪು ಸತ್ತದ್ದು ಮೇ ತಿಂಗಳಲ್ಲಿಯೇ ಎಂಬುದು ಕಾಕತಾಳೀಯವಲ್ಲ. ಇಂದೊಂದು ಧಾರ್ಮಿಕ ಸಂಘರ್ಷದ ಸಂಕೇತ ಸರ್ವಾಧಿಕಾರ, ನಿರಕುಶ ಆಡಳಿತದ ವಿರುದ್ದ ಗೆದ್ದ ಜನತೆಯ ಧ್ವನಿ ಎಂದರೆ ತಪ್ಪಲ್ಲ.

ಲೇಖಕರು ಆಯಾ ರಾಜರು ಆಡಳಿತಗಾರರು ಬಿಟ್ಟು ಹೋದ ದಾಖಲೆಗಳ ಆಧಾರದ ಮೇಲೆ ರಚಿಸುವ ಚರಿತ್ರೆ ಪರಿಪೂರ್ಣವಲ್ಲ, ಒಮ್ಮುಖ ಎಂಬುದು ಇದರಿಂದ ಸ್ವಷ್ಟವಾಗುತ್ತದೆ. ಆದರೆ ಟಿಪ್ಪುವಿನ ಬಗೆಗಿನ ಶಿಷ್ಟ ಲೇಖಕರ ಅಭಿಪ್ರಾಯಗಳಿಗೂ ಕಂಠಸ್ಥ ಚರಿತ್ರೆಗಳಿಗೂ ಒಂದೇ ಅಭಿಪ್ರಾಯವಿರುವುದನ್ನು ಕಾಣಬಹುದು ಆದುದರಿಂದ ಕಂಠಸ್ಥ ಇತಿಹಾಸದ ಸಂಗ್ರಹಣೆ ತ್ವರುತವಾಗಿ ಆಗಬೇಕು. ಅದರಲ್ಲಿ ಸಾಮಾನ್ಯವಾಗಿ ಜನತೆಯ ಧ್ವನಿ, ನಿಜವಾದ ಇತಿಹಾಸದ ಎಳೆಗಳು ದೊರೆಯುತ್ತವೆ. ಸ್ವಾತಂತ್ರ್ಯಾನಂತರ ಚಾರಿತ್ರಿಕ ವ್ಯಕ್ತಿಗಳ ಬಗ್ಗೆ ಬರೆಯುವಾಗ ಕೂಡ ಜಾತಿ ಮತಗಳು ತಲೆಹಾಕುತ್ತವೆ. ಅವರವರ ಜಾತಿಯ ರಾಜ ಮಹಾರಾಜನನ್ನು ಮಂತ್ರಿ, ಸೇನಾಧಿಪತಿಗಳನ್ನು ವೈಭವೀಕರಿಸುವುದು ಕಂಡುಬರುತ್ತದೆ. ಕ್ರೂರಿಯನ್ನು ಒಳ್ಳೆಯವನನ್ನು ಕ್ರೂರಿ ಎನ್ನುವುದು ಎರಡೂ ಸರಿಯಲ್ಲ. ಟಿಪ್ಪುವನ್ನು ಸ್ವಾತಂತ್ರ್ಯಯೋಧ ಎಂದು ಕರಯುವವರು ಈ ದೇಶದ ಐಶ್ವರ್ಯ ಲೂಟಿ ಹೊಡೆದ ಇತರ ಅನೇಕ ಹೊರ ಆಕ್ರಮಣಕಾರರೊಂದಿಗೆ ಹೋರಾಡಿದವರನ್ನು ಸ್ವಾತಂತ್ರ್ಯ ವೀರರೆಂದು ಏಕೆ ಕರೆಯುವುದಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ನಮ್ಮ ಕಂಠಸ್ಥ ಇತಿಹಾಸ ಸೂಕ್ತ ಪರಿಹಾರ ನೀಡುತ್ತದೆ, ಸೀತೆದಂಡು ಈ ವಿಷಯದಲ್ಲಿ ಒಂದು ಉದಾಹರಣೆ ಅಷ್ಟೆ.

 

[1] Hobibbul Hasana History of Tippusultan. P. 74

[2] ಎಂ. ಎಲ್. ಶ್ರೀಕಂಠೇಶ್ವರಗೌಡ, ಭವಾನಿಬಾಳು, ಪು ೪೬೨

[3] LT CoL Mark viliks, History of mysore, p 365

[4] ಅಂಬಿಲ್ ನರಸಿಂಹಯ್ಯ, ಶ್ರೀಮನ್ಮಾಹಾರಾಜರವರ ವಂಶಾವಳಿ, ಪು ೨೩೪