ಮಾನವಸಮಾಜ ಎಲ್ಲಾ ಕಾಲ. ದೇಶಗಳಲ್ಲಿ ದೇವರು, ಧರ್ಮದ ಬಗ್ಗೆ ಸತತವಾಗಿ ನಂಬಿಕೆ, ವ್ಯಾಖ್ಯಾನ, ಜಿಜ್ಞಾಸೆಗಳ ನಡುವೆ ಲೆಕ್ಕವಿಲ್ಲದಷ್ಟು ಪ್ರಯೋಗಗಳನ್ನು ಆದಿಯಿಂದಲೂ ನಡೆಸಿಕೊಂಡು ಬಂದಿದೆ ಹಾಗೂ ಮುಂದುವರಿಸುತ್ತಿದೆ. ಬೇರೆ ಇನ್ನಾವ ವಿಷಯದಲ್ಲೂ ಇಷ್ಟೊಂದು ಪ್ರಯೋಗ ಪರೀಕ್ಷೆಗಳು ನಡೆದಿರಲಾರದೆಂದರೆ ಅತಿಶಯೋಕ್ತಿಯಲ್ಲ. ದೇವರು ಧರ್ಮ ವಿಭಿನ್ನ ಜನರನ್ನು ಒಂದುಗೂಡಿಸುವಷ್ಟೇ ಸುಲಭವಾಗಿ ವಿಭಜಕ ಶಕ್ತಿಯಾಗಬಲ್ಲವು. ದೇವರ ಹೆಸರಿನಲ್ಲಿ ಕೆಲವು ಮಹಾತ್ಕಾರ್ಯಗಳು, ಸತ್‌ಸಂಪ್ರದಾಯ ಬೆಳೆದು ಬಂದಿದ್ದರೆ ಹಲವಾರು ಕೆಟ್ಟ ಆಚರಣೆ, ಸಂಪ್ರದಾಯಗಳು ಹಾಸುಹೊಕ್ಕಾಗಿ ಬೆಳೆದು ಬಂದು ಬಿಟ್ಟಿವೆ.

ಪ್ರಕೃತಿಯಲ್ಲಿ ಕಾಲಕಾಲಕ್ಕೆ ಆಗುವ ಬದಲಾವಣೆಗಳು, ಮಳೆ, ಮಿಂಚು, ಸಿಡಿಲು, ಗುಡುಗು ಇವೇ ಮುಂತಾದವುಗಳನ್ನು ಆದಿ ಮಾನವನು, ಯಾವುದೋ ಒಂದು ಅವ್ಯಕ್ತ ಶಕ್ತಿ ಪ್ರೇರೇಪಿಸಿ ಉಂಟುಮಾಡುತ್ತದೆಂದು ನಂಬಿದ್ದ. ಅಂತಹ ಭಯಾನಕ ಘಟನೆಗಳಿಂದ ರಕ್ಷಣೆ ಪಡೆಯಲು ಅವುಗಳನ್ನು ಪೂಜಿಸಿ, ತೃಪ್ತಿ ಪಡಿಸಲು ಮೊದಲು ಮಾಡಿದ. ಹೀಗೆ ಉಗಮವಾದ ಅವನ ಭಯ, ಭೀತಿ ನಂಬಿಕೆಗಳು ಪ್ರಕೃತಿಯ ಎಲ್ಲಾ ವಿದ್ಯಮಾನಗಳಲ್ಲೂ ವಿಶೇಷ ಗುಣಗಳನ್ನು ಕಾಣಲು ಪ್ರಯತ್ನಿಸಿತು. ಪ್ರಪಂಚದ ಸಮಸ್ತ ಜೀವಿಗಳು ಹಾಗೂ ವಸ್ತುಗಳಲ್ಲಿ ಆ ‘ಪರಶಕ್ತಿ’ ಅಡಕವಾಗಿದೆ ಎಂದು ನಂಬಿದ್ದ. ಪೂಜೆ, ನೈವೇದ್ಯಗಳಿಂದ ತೃಪ್ತಿಪಡಿಸಲು ಪ್ರಯತ್ನಿಸಿದ, ಕೆಲವೊಮ್ಮೆ ಈ ದೈವೀ ಶಕ್ತಿಯನ್ನು ಉಪಾಸನೆಗಳಿಂದ ಮೈಗೂಡಿಸಿಕೊಳ್ಳಲು ಹಾತೊರೆದ-ಒಟ್ಟಾರೆಯಾಗಿ. ದೇವರ ಶಕ್ತಿ ದೈವ ಪ್ರೇರಣೆ ಮನುಷ್ಯ ಮಾಡುವ ಎಲ್ಲಾ ಕೆಲಸ ಕಾರ್ಯಗಳಿಗೆ ಅಡಿಗಲ್ಲಾಯಿತು. ಕೆಲವು ದೇವರುಗಳು ತುಂಬಾ ಸೌಮ್ಯವಾಗಿದ್ದು ಎಲ್ಲಾ ತರದ ಶ್ರೇಯಸ್ಸನ್ನೇ ಉಂಟುಮಾಡುವ ಶಕ್ತಿಗಳಾದರೆ ಮತ್ತೆ ಕೆಲವು ಉಗ್ರ ಸ್ವಭಾವದಿಂದ ಕೂಡಿ ಸಮಯ ಸಂದರ್ಭದಲ್ಲಿ ಮನುಷ್ಯನ ಮೇಲೆ ಪ್ರತೀಕಾರ ಮಾಡಬಹುದಾದ ಸಾಮರ್ಥ್ಯವುಳ್ಳವು. ಹಲವಾರು ದೇವರುಗಳು, ವಿಭಿನ್ನ ರೂಪ, ಗುಣಗಳು, ಅವುಗಳು ಮಾಡಬಹುದಾದ ಒಳಿತು ಕೆಡಕುಗಳಿಗಂತೂ ಮಿತಿಯಿಲ್ಲ. ಮನುಷ್ಯ ಈ ಶಕ್ತಿಗಳ ಎದುರಿನಲ್ಲಿ ತೃಣ ಮಾತ್ರ ಎಂಬ ನಂಬಿಕೆ ವಾಡಿಕೆಯಾಗಿ, ಬೆಳೆದು ಬೇರೂರಿದೆ. ಪ್ರಪಂಚದ ಅನೇಕ ಜನಾಂಗಗಳಲ್ಲಿ ದೇವನೊಬ್ಬ , ಅವನು ಸರ್ವ ವ್ಯಾಪಿ, ಸರ್ವ ಶಕ್ತ ಹಾಗೂ ಸರ್ವಜ್ಞ ಎಂಬ ವಾದ ವಿಭಿನ್ನ ಧರ್ಮಗಳ ಘರ್ಷಣೆ, ಮೇಲು ಕೀಳು, ವಾದ ವಿವಾದಗಳ ಮಧ್ಯೆ ದಾರ್ಶನಿಕ ಪ್ರವೃತ್ತಿಯೊಂದಿಗೆ ಹೊರ ಹೊಮ್ಮಿತು. ಜನಸಾಮಾನ್ಯರಿಗೆ ಇಂತಹ ಕಲ್ಪನೆ ಬಹುದೂರ. ವಾಸ್ತವವಾಗಿ, ಅವರು ನೋಡುವುದು ಬಗೆ ಬಗೆಯ ದೇವರುಗಳು ಬೇರೆ ಬೇರೆ ಶಕ್ತಿಯಿಂದ ಕೂಡಿದವು. ಈ ಎಲ್ಲಾ ಬಗೆಯ ದೇವರುಗಳನ್ನು ತೃಪ್ತಿ ಪಡಿಸುವುದು ಸಾಧ್ಯವಿಲ್ಲದಿದ್ದರೂ, ಮಾನವ ತನ್ನ ಶಕ್ತೃನುಸಾರ ಒಂದಕ್ಕಿಂತ ಹೆಚ್ಚು ದೇವರನ್ನು ಪೂಜಿಸುವುದು, ಒಳಿತು-ಕೆಡಕುಗಳಿಗೆ ಮೊರೆ ಹೋಗುವುದು ಲೋಕರೂಢಿಯಾಗಿ ಬೆಳೆದು ಬಂದಿದೆ.

ಮಾನವ ತನ್ನ ಸುತ್ತುವರೆದಿರುವ ಪ್ರಕೃತಿಯೊಂದಿಗೆ ವಿಶಿಷ್ಟ ಸಂಬಂಧವನ್ನು ಕಲ್ಪಿಸಿಕೊಳ್ಳುವುದರಲ್ಲಿ ಧರ್ಮ ದೇವರುಗಳನ್ನು ಸೃಷ್ಟಿಸಿದ್ದಾನೆ ಹಾಗೂ ಪ್ರಕೃತಿಯ ಪ್ರತಿಯೊಂದು ಅಂಗಗಳಲ್ಲಿ ಈ ದೈವದ ಅಂಶವನ್ನು ಕಾಣುತ್ತಾನೆ. ಮನುಷ್ಯ ತನ್ನ ಸುತ್ತಲಿರುವ ಗಿಡ, ಮರ, ಕಾಡು, ಮೇಡು, ಪ್ರಾಣಿ ಹಾಗೂ ಗುಹೆ ಜಲಪಾತಗಳಲ್ಲಿ ಒಂದು ಮಾತಿನಲ್ಲಿ ಹೇಳುವುದಾದರೆ ಸಮಗ್ರ ಪರಿಸರದ ಎದುರಾಳಿಯಾಗಿ ಬದುಕಲು ಕಷ್ಟ ಸಾಧ್ಯ. ಅನೇಕ ಸಲ ಮಾನವ ಪ್ರಕೃತಿ ಸಂಬಂಧ ಅನ್ಯೋನ್ಯವಾಗಿದ್ದರೇನೇ ಹೆಚ್ಚು ಸಮಂಜಸ. ತನ್ನ ಜೀವನಕ್ಕೆ ಮಾನವನ ಅವಲಂಬನೆ ಪ್ರಕೃತಿಯ ಮೇಲೆ ಅಪಾರ. ಹಾಗೆಂದು ಅವನು ಎಲ್ಲಾ ಭಾಗದಲ್ಲೂ ಶರಣಾಗತನಾಗಲಿಲ್ಲ. ಕೆಲವೊಮ್ಮೆ, ವಿಜ್ಞಾನದ ಮುನ್ನಡೆಯಿಂದ ಅನೇಕ ಪ್ರಕೃತಿದತ್ತ ವಿಚಾರದಲ್ಲಿ ಮಾನವ ಸ್ವಾಮ್ಯತ್ವ ಸ್ಥಾಪಿಸಿದ್ದಾನೆ. ಒಂದು ಮರುಭೂಮಿಯಲ್ಲಿ ಬೆಳೆ ತೆಗೆಯುವುದು, ನದಿ ಪಾತ್ರ ಬದಲಾಯಿಸುವುದು, ಆಣೆಕಟ್ಟುಗಳನ್ನು ಹಾಕಿ ನದಿ ನೀರುಗಳನ್ನು ಅಪಾರ ಪ್ರಮಾಣದಲ್ಲಿ ಒಂದೆಡೆ ಶೇಖರಿಸುವುದು ಮುಂತಾದ ಅನೇಕ ವಿಷಯಗಳಲ್ಲಿ ಯಶಸ್ಸು ಸಾಧಿಸಿದ್ದರೂ ಈ ಎಲ್ಲಾ ಸಾಧನೆಗಳ ಹಿಂದೆ ಒಂದು ಅದ್ಭುತ ಶಕ್ತಿಯ ಪ್ರೇರಣೆ ಹಾಗೂ ಆಶೀರ್ವಾದ ಇದೆ, ಅದು ಇದ್ದರೆ ಮಾತ್ರ ಇದು ಸಾಧ್ಯ ಎಂದು ಪದೇ ಪದೇ ದೃಢಪಡಿಸಿದ್ದಾನೆ. ಚಂದ್ರ ಲೋಕಯಾನ ಮಾಡಿದ ಅಮೇರಿಕದ ವಿಜ್ಞಾನಿಗಳು ಇತ್ತೀಚಿನ ವರ್ಷಗಳಲ್ಲಿ ಮಂಗಳ ಗ್ರಹಕ್ಕೆ ಹೋಘುವ ಕಾರ್ಯಾಚರಣೆಯಲ್ಲಿದ್ದಾಗ ಭೂಮಿಗೆ ವಾಪಾಸಾಗುವಾಗ ತಾಂತ್ರಿಕ ಏರುಪೇರಿನಿಂದಾಗಿ ಪೇಚಾಟವಾಗಿ ಬಾಹ್ಯಾಕಾಶ ಯಾತ್ರಿಗಳು ಜೀವಂತ ಹಿಂದಿರುಗುವ ಸಾಧ್ಯತೆ ಬಗ್ಗೆ ಅನುಮಾನವಾದಾಗ ಇಡೀ ದೇಶವೇ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ ವಿಚಾರ ಇನ್ನಲೂ ಹಸಿರಾಗಿದೆ. ಅಂತೆಯೇ ಸಕಾಲದಲ್ಲಿ ಮಳೆ ಬರದಿದ್ದರೆ ಮಳೆರಾಯನಲ್ಲಿ ಮರೆ ಹೋಗುವುದು ಭಾರತವೂ ಸೇರಿದಂಥೆ ಅನೇಕ ದೇಶಗಳಲ್ಲಿ ಇಂದಿಗೂ ಪ್ರತೀತಿಯಲ್ಲಿದೆ.

ಸಮಾಜಶಾಸ್ತ್ರದ ದೃಷ್ಟಿಯಿಂದ ಧರ್ಮ-ದೇವರು ಸಾಮಾಜಿಕ ಜೀವನದ ಒಂದು ಅವಿಭಾಜ್ಯ ಅಂಗ, ಸಮಾಜವನ್ನು ನಿಯಂತ್ರಿಸುವ ಕೆಲವೇ ಅಂಶಗಳಲ್ಲಿ, ಇವು ಪ್ರಮುಖ ಪಾತ್ರ ವಹಿಸುತ್ತವೆ. ಗುಂಪು ಜೀವನ ಸುಸೂತ್ರವಾಗಿ ನಡೆಯಲು ಅನೇಕ ಕಟ್ಟು ಪಾಡುಗಳನ್ನು ಹಾಕುವುದರ ಮೂಲಕ ದೇವರು-ಧರ್ಮ ಅರ್ಥಪೂರ್ಣವಾಗುತ್ತವೆ. ಈ ಕಟ್ಟುಪಾಡುಗಳು ಅವ್ಯಕ್ತ, ಶಕ್ತಿಯ ಸುತ್ತ ಹೆಣೆದಿರುವುದರಿಂದ, ಭಯ, ಭಕ್ತಿ ಒಂದು ಕಡೆಯಾದರೆ ಮಾನವ-ಪ್ರಕೃತಿ ಸಂಬಂಧದಲ್ಲಿ ಒಂದು ಸ್ಥಿರತೆ ಉಂಟುಮಾಡುವ ಸಾಧನವೂ ಹೌದು. ಅಲ್ಲದೆ ಸಾಮಾಜಿಕ ಸಂಬಂಧಗಳನ್ನು ಸ್ಥಿರಪಡಿಸುವುದರಲ್ಲಿ ಜೊತೆಗೆ ಹೊಸ ಹೊಸ ಸಂಬಂಧ ಹೊಂದುವ ಅವಕಾಶ ಕಲ್ಪಿಸುವಲ್ಲಿ ದೇವರು-ಧರ್ಮದ ಸುತ್ತ ಹೆಣೆದಿರುವ ಹಬ್ಬ, ಹುಣ್ಣಿಮೆ, ಜಾತ್ರೆ, ಕಟ್ಟು, ಕಟ್ಟಳೆಗಳು, ಅವುಗಳ ಆಚರಣೆಯಿಂದ ವ್ಯಕ್ತವಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ದೇವರು ಧರ್ಮ ಬರೀ ದಾರ್ಶನಿಕರು ಚರ್ಚಿಸುವ ವಿಷಯವಷ್ಟೇ ಅಲ್ಲ, ಅಂತಹ ಚರ್ಚೆಗಳು ಜನ ಸಾಮಾನ್ಯರಿಗೆ ಅರ್ಥವಾಗುವುದು, ಅನ್ವಯಿಸುವುದು ಸ್ವಲ್ಪ ಕಷ್ಟಸಾಧ್ಯ. ನಿಜ ಜೀವನದಲ್ಲಿ, ಜನ ಸಾಮಾನ್ಯರಿಗೆ ಅವ್ಯಕ್ತ ಶಕ್ತಿಯಲ್ಲಿ ಅಪಾರ ನಂಬುಗೆ. ಕಾಲ ಕಾಲಕ್ಕೆ ಮಳೆ ಬೆಳೆಯಿಂದ ಹಿಡಿದು ಜೀವನದ ಎಲ್ಲಾ ಆಗು ಹೋಗುಗಳು ಆ ಶಕ್ತಿಯಿಂದ ನಿರ್ಧರಿಸಲ್ಪಡುತ್ತವೆ. ಇಹ ಜೀವನದ ಎಲ್ಲಾ ಕಾರ್ಯಕ್ಷೇತ್ರವನ್ನು ಪ್ರವೇಶಿಸಿ, ಪ್ರಭಾವ ಬೀರುವ ಈ ಅಮಾನುಷ ಶಕ್ತಿ ಮಾನವನ ಮರಣಾಂತರದ ಕಾಲಕ್ಕೂ ಕಟ್ಟು ಪಾಡುಗಳನ್ನು, ನಿರ್ಮಿಸಿ ಸ್ವರ್ಗ, ನರಕ ಎಂದು ಸೃಷ್ಟಿಸುವಲ್ಲಿಯೂ ಯಶಸ್ವಿಯಾಗಿದೆ. ಧರ್ಮ-ಕರ್ಮ ಪಾಪ-ಪುಣ್ಯಗಳ ಜೊತೆಗೆ ಸ್ವರ್ಗ ನರಕಗಳ ಕಲ್ಪನೆ ಮನುಷ್ಯನನ್ನು ಬಹಳಷ್ಟು ಸಾರಿ ನಿಯಂತ್ರಿಸಿ, ಸಮಾಜ ಜೀವನದಲ್ಲಿ ಭಾಗಿಯಾಗಲು ಪ್ರೇರೇಪಿಸುತ್ತವೆ.

ಈ ರೀತಿಯಲ್ಲಿ ಬೆಳೇದು ಬಂದಿರುವ ದೇವರು-ಧರ್ಮ ಸಂಪ್ರದಾಯ ಎಲ್ಲಾ ಸಮಾಜಗಳಲ್ಲಿ ಕಟ್ಟುಪಾಡುಗಳನ್ನು ನಿರ್ಮಿಸಿದೆ. ವಿವಿಧ ದೇವರು ಧರ್ಮ ಒಮ್ಮೊಮ್ಮೆ ಒಂದಕ್ಕೊಂದು ಪೂರಕವಾಗಿ ಕೆಲವು ಸಲ ಪೈಪೋಟಿ ನಡೆಸಿ ಜನರನ್ನು ಒಡೆದು ಬೇರೆ ಗುಂಪುಗಳನ್ನಾಗಿ ಮಾಡಿರುವುದು ಸರ್ವೇ ಸಾಮಾನ್ಯ. ಒಂದೇ ದೇವರು ಧರ್ಮದ ಹೆಸರಿನಲ್ಲಿ ನಡೆದಿರುವ ಕಚ್ಚಾಟ, ವಿಭಜನೆಗಳು ಅನೇಕ. ಕ್ರೈಸ್ತ ಧರ್ಮ, ಇಸ್ಲಾಂ ಧರ್ಮಗಳಿಂದ ಇದು ಮನದಟ್ಟಾಗುತ್ತದೆ. ಭಾರತ ದೇಶದ ಇತಿಹಾಸ ಅವಲೋಕಿಸಿದರೆ ಇಲ್ಲಿ ಅನೇಕ ದೇವರು ಧರ್ಮಗಳು ಒಟ್ಟೊಟ್ಟಿಗೆ ಹಾಗೂ ಬೇರೆ ಬೇರೆಯಾಗಿ ತಮ್ಮ ಕಾರ್ಯ ಕ್ಷೇತ್ರವನ್ನು ನಿರ್ವಹಿಸುವುದು ವೇದ್ಯವಾಗುತ್ತದೆ. ಪ್ರಕೃತಿ ಪೂಜೆಯಿಂದ ಆರಂಭವಾಗುವ ಹಿಂದೂ ಧರ್ಮ, ಒಂದು ‘ದೇವಲೋಕ’ವನ್ನೇ ಸೃಷ್ಟಿಸಿದೆ. ಇಲ್ಲಿ ದೇವಾನುದೇವತೆಗಳು ದಾನವರ ಜೀವನವನ್ನು ನಿರ್ಣಯಿಸುವುದು ಎಡೆಬಿಡದೆ ನಡೆದಿದೆ. ಜೊತೆಗೆ ವಿಭಿನ್ನ ಧರ್ಮಗಳಾದ ಕ್ರೈಸ್ತ ಹಾಗೂ ಮಹಮದೀಯ ಧರ್ಮಗಳೂ ಹಾಸು ಹೊಕ್ಕಾಗಿ ಜನ ಜೀವನದಲ್ಲಿ ಸೇರಿಕೊಂಡಿವೆ. ಬೌದ್ಧ ಧರ್ಮ ದೇವರು-ಪುರೋಹಿತಶಾಹಿ ರಹಿತ ಎಂದು ಮೊದಲುಗೊಂಡರೂ ಅದು ವಿಚಿತ್ರ ಪರಿವರ್ತನೆ ಹೊಂದಿ, ಆಯಾ ದೇಶದ ಜನಜೀವನದಲ್ಲಿ ವಿಭಿನ್ನ ಪಾತ್ರ ವಹಿಸಿದೆ.

ಎಲ್ಲಾ ದೇವರು ಧರ್ಮಗಳೂ ಸಾಮಾಜಿಕ ಜೀವನ ನಿಯಂತ್ರಿಸುವ ಸಾಧನಗಳಾಗುವ ಸಂದರ್ಭದಲ್ಲಿ ಅನಿವಾರ್ಯವಾಗಿ ಕೆಲವೊಂದು, ಮಾನವೀಯ ದೃಷ್ಟಿಗೆ ದೂರ ಎನ್ನುವಂತಹ ಮೌಲ್ಯಗಳು ಹುಟ್ಟಲು ಎಡೆಮಾಡಿಕೊಟ್ಟಿವೆ. ವರ್ಗ, ಜಾತಿ ಭೇದಗಳು ಈ ತರದ ಮೌಲ್ಯಗಳಿಂದ ಪೋಷಿಸಲ್ಪಟ್ಟು ಆಳವಾಗಿ ಬೆಳೆದು ಬೇರೂರಲು ಸಾಧ್ಯವಾಗಿದೆ. ಅಷ್ಟಲ್ಲದೆ ದೇವರು ಧರ್ಮದ ಬಗ್ಗೆ ‘ಬಂಡವಾಳ ಶಾಹಿ’ ವರ್ಗ, ಅಂದರೆ ದೇವರು ಧರ್ಮವನ್ನೇ ತಮ್ಮ ಬಂಡವಾಳ ಮಾಡಿಕೊಂಡು, ಪ್ರತಿಷ್ಠೆ ಬೆಳೆಸಿಕೊಂಡು, ಸಮಾಜದಲ್ಲಿ ಅತ್ಯುನ್ನತ ಸ್ಥಾನ ಕಲ್ಪಿಸಿ ಆಕ್ರಮಿಸಿಕೊಂಡಿರುವುದೂ ನಿಜ. ಪುರೋಹಿತ ವರ್ಗ, ಅವರ ಮುನ್ನಡೆಗೆ ಬೇಕಾದ ಪರಿಸರ ಕಲ್ಪಿಸಿಕೊಂಡು ಉಳಿದವರನ್ನೆಲ್ಲಾ ಅವರ ಹಿಂಬಾಲಕರನ್ನಾಗಿ ಮಾಡಿಕೊಂಡಿರುವುದು ಪ್ರಪಂಚದ ಅನೇಕ ದೇಶದ ಇತಿಹಾಸದಿಂದ ವ್ಯಕ್ತವಾಗುತ್ತದೆ. ಈ ಪುರೋಹಿತ ಶಾಹಿಗಳಿಂದ ಬೆಳೆದು ಬಂದ ಕಟ್ಟು ಕಥೆ, ದಂತ ಕಥೆಗಳು, ದೇವರು ಧರ್ಮದ ಬಗ್ಗೆ ಎಲ್ಲಿಲ್ಲದ ಆಚಾರ ವಿಚಾರ ಸಂಹಿತೆ, ಅದನ್ನು ಎಲ್ಲಾ ಪಂಡಿತ, ಪಾಮರರು ಪಾಲಿಸಬೇಕೆಂಬ ನಿಯಮ, ದೇವರಿಗೂ ಜನರಿಗೂ ಮಧ್ಯಸ್ತಿಕೆಗೆ ಪೂಜಾರಿ, ಅವನ ನೆರವಿಲ್ಲದೆ ಏನೂ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದಿರುವ ಸಂಪ್ರದಾಯ ಧರ್ಮಗಳು ಅನೇಕ. ಅಂತಹ ಕ್ರೂರ ಧರ್ಮಾಧಿಕಾರಿಗಳ ಹಿಡಿತದಿಂದ ತಪ್ಪಿಸಿಕೊಳ್ಳಲು ಸಿಡಿದು ಬಿದ್ದವರೂ ಅನೇಕರು, ಬಹಳಷ್ಟು ಸಲ.

ತಾತ್ವಿಕವಾಗಿ ಸಮಾನತೆ ಸಾರುವ ದೇವರು, ಧರ್ಮ ಆಚರಣೆಯಲ್ಲಿ ಅದನ್ನು ಎಂದೂ ಎಲ್ಲಿಯೂ ಪಾಲಿಸಿಲ್ಲವೆಂದರೆ ಹೆಚ್ಚು ಸಮಂಜಸವೆನಿಸೀತು. ದೇವರು ಧರ್ಮಕ್ಕೆ ಪುರೋಹಿತರೇ ಮೂಲ, ಇವರ ಮೂಲಕವೇ ದೇವರ ಸಂದೇಶ. ಆ ಅಪ್ಪಣೆಗಳನ್ನು, ಕಟ್ಟುಪಾಡುಗಳನ್ನು ಜನಸಾಮಾನ್ಯರು ವಿಚಾರ ಮಾಡುವಂತಿಲ್ಲ, ಚರ್ಚಿಸುವಂತಿಲ್ಲ. ಜನರನ್ನು ಹಿಡಿತದಲ್ಲಿಟ್ಟುಕೊಳ್ಳಲು ಪುರೋಹಿತ ವರ್ಗದ ಬಿಗಿಮುಷ್ಠಿ ಶತಾಯ ಗತಾಯ ಪ್ರಯತ್ನಿಸಿ, ಒಡೆದು ಆಳುವ ನೀತಿ ರೂಪಿಸಿತು. ಜನರಲ್ಲಿ ಮೇಲು-ಕೀಳು ಸ್ತರಗಳು, ವರ್ಗ ಹಾಗೂ ಜಾತಿ ಬೆಳೆದು ಕೆಳ ಜನರಲ್ಲಿ ವಿಧಿಸಿದ ಕಟ್ಟುಪಾಡುಗಳೇ ಮೇಲು ಜನರ ಅನುಕೂಲಗಳಾಗಿ ಪರಿಣಮಿಸಿತು. ಅವರಿಬ್ಬರ ನಡುವಿನ ಅಂತರ ಇನ್ನೂ ಹೆಚ್ಚಾಗಲು ಕಾರಣವಾಯಿತು. ಭಾರತ ದೇಶದ ಜಾತಿ ವ್ಯವಸ್ಥೆಯಲ್ಲಿ ದೇವರು ಧರ್ಮದ ಪಾತ್ರಕ್ಕಿಂತ ಪುರೋಹಿತರ ಕೈವಾಡ ಬಹಳಷ್ಟು ಸಾಮಾಜಿಕ ಅನಿಷ್ಟಗಳು ಬೆಳೆಯಲು ಕಾರಣವಾಯಿತೆನ್ನಬಹುದು. ಧನಿಕ-ದರಿದ್ರರಷ್ಟೇ ಅಲ್ಲದೆ, ಮೇಲು ಕೀಳು, ಸ್ಪೃಶ್ಯ, ಅಸ್ಪೃಶ್ಯ ಎಂಬ ಆಚರಣೆಯಲ್ಲಿರುವ ವಾಡಿಕೆಗಳು ಪ್ರಪಂಚದ ಮತ್ತಾವುದೇ ದೇಶಕ್ಕಿಂತ, ನಮ್ಮ ದೇಶದಲ್ಲಿ ಬೆಳೆದು ಬೇರೂರಿವೆ. ಶತಶತಮಾನಗಳಿಂದ ಈ ಆಚರಣೆಗಳ ಬಗ್ಗೆ ವಿಮರ್ಶೆ, ಟೀಕೆ, ಅಂದೋಲನ ಸತತವಾಗಿ ನಡೆದುಕೊಂಡು ಬಂದಿದೆ. ಆದರೇನಂತೆ ಆ ಪ್ರಯತ್ನಗಳೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ಕಲಸಿದಂತೆ ಆಗಿವೆ. ಹೆಚ್ಚು-ಕಡಿಮೆ, ಮೇಲು-ಕೀಳು ನಡೆವಳಿಕೆ ಮುಂದುವರಿದಿದೆ. ಲೋಕ ರೂಢಿಯಲ್ಲಿ “ಮೇಲೆ ಹರಿಯುವ ನೀರು ಮೇಲೆ ಹರಿಯಬೇಕು” ಎನ್ನುವುದು ಆಚರಣೆಯಲ್ಲಿದೆ. ಕೆಳಗೆ ಹರಿಯುವ ನೀರು ಕೆಳಗೆ ಹರಿಯಬೇಕು” ಎನ್ನುವುದು ಆಚರಣೆಯಲ್ಲಿದೆ. ಕೆಳಗಿನಿಂದ ಮೇಲೆ ಹೋಗುವುದು ದುಃಸಾಧ್ಯ ಎಂದರೂ, ಮೇಲಿನಿಂದ ಕೆಳಗೆ ಬರುವುದು ಸುಲಭ ಸಾಧ್ಯ ಅಂತೆಯೇ ಇಂದಿನ ಕೆಳಸ್ತರದಲ್ಲಿರುವವರು ಒಂದಾನೊಂದು ಕಾಲದಲ್ಲಿ ಮೇಲಿನಿಂದ ಕೆಳಕ್ಕಿಳಿದವರಿರಬಹುದೇ?

ದೇವರು ಧರ್ಮದ ಹೆಸರಿನಲ್ಲಿ ಸ್ತ್ರೀ-ಪುರುಷರ ವಿಭಿನ್ನ ಪಾತ್ರಗಳೂ ಹಾಗೂ ಧಾರ್ಮಿಕವಾಗಿ ಸ್ತ್ರೀ ಏನೇನೂ ಯೋಗ್ಯತೆಯಿಲ್ಲದವಳು, ಏನನ್ನೂ ಸಾಧಿಸಲಾರಳು ಎನ್ನುವ ನಂಬಿಕೆಯೂ ಹೆಚ್ಚು ಕಡಿಮೆ ಪ್ರಪಂಚದ ಎಲ್ಲಾ ಧರ್ಮಗಳಲ್ಲೂ ಹಿಂದೂ, ಕ್ರೈಸ್ತ, ಮುಸಲ್ಮಾನ-ಪುರುಷರೇ ಪುರೋಹಿತರು. ಅವರ ಸ್ಥಾನ ಮಾನ ಅತಿ ಹೆಚ್ಚು ಹಾಗೂ ಸೂಕ್ಷ್ಮ. ಹೆಂಗಸರಿಗೂ ಪೌರೋಹಿತ್ಯಕ್ಕೂ ಸಂಬಂಧವಿಲ್ಲ. ಇವಳು ದೇವರು, ಧರ್ಮದ ಹೆಸರಿನಲ್ಲಿ ಪರಿಚಾರಿಕೆಯಾಗಿ, ಉಪಭೋಗ ವಸ್ತುವಾಗಿ ಇರಬಹುದೇ ಹೊರತು ದೇವರನ್ನು ಸ್ವತಂತ್ರವಾಗಿ ಪೂಜಿಸಲಾರಳು. ನೋಡಲಾರಳು, ಮುಟ್ಟಲೂ ಸಾಧ್ಯವಿಲ್ಲ, ಅಷ್ಟೇ ಏಕೆ ಹತ್ತಿರವೂ ಹೋಗಬಾರದು. ಸ್ತ್ರೀ ಜೀವನಕ್ಕೆ ಅಂಟಿಕೊಂಡಿರುವ ಮಡಿ, ಮೈಲಿಗೆ, ಮುಟ್ಟು ಸಾಮಾನ್ಯ ದೈಹಿಕ ಜೀವಕ್ಕಷ್ಟೇ ಸೀಮಿತವಲ್ಲ. ಅವುಗಳನ್ನೇ ಅಸ್ತ್ರವನ್ನಾಗಿ ಬಳಸಿ ಹೆಂಗಸನ್ನು ಅಬಲೆ, ಪರಾವಲಂಬಿ, ಮಾಡಿರುವುದರ ಜೊತೆಗೆ ಅವಳು ಭೋಗ ವಸ್ತು ವಿದ್ಯೆ, ಬುದ್ಧಿಗೆ ಪ್ರಯೋಜನವಿಲ್ಲ. ಎಂಥಾ ಸ್ಥಿತಿಯಲ್ಲೂ ಸ್ತ್ರೀ ಸ್ವತಂತ್ರಳಾಗಲು ಅರ್ಹಳಲ್ಲ, ಅವಳ ನಡೆ, ನುಡಿ ಕೆಟ್ಟರೆ ಸಮಸ್ತವೂ ಲೋಪ. ಮತಿಹೀನನಾದರೂ ಪತಿಯೇ ಅವಳಿಗೆ ಪರದೈವ. ಇವೇ ಮುಂತಾದ ಮೌಲ್ಯಗಳು ಯಥೇಚ್ಛವಾಗಿ ಬೆಳೆದು ಬಂದಿದೆ. ಇಂತಹ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿರುವ ಸ್ತ್ರೀ ಯುಗ ಯುಗಗಳು ನರಳಿದ್ದಾಳೆ. ಅವಳಿಗೆ ಈ ಹಿಡಿತದಿಂದ ಮುಕ್ತಿಯೇ ಇಲ್ಲವೇನೋ? ಪ್ರಪಂಚದ ಎಲ್ಲಾ ಧರ್ಮಗಳು ಸ್ತ್ರೀಯನ್ನು ನಿಕೃಷ್ಟವಾಗಿ ಕಂಡಿವೆ. ಅವಳೂ ಒಂದು ಜೀವಿ, ಅವಳಿಗೂ ಆತ್ಮ ಎಂಬುದೊಂದು ಇದೆ, ಎಂದು ಎಲ್ಲೂ ಪರಿಗಣನೆಯಾಗಲಿಲ್ಲ. ವಿಭಿನ್ನ ಧರ್ಮಗಳು ಇದೊಂದು ವಿಷಯದಲ್ಲಿ ಮಾತ್ರ ಏಕ ಅಭಿಪ್ರಾಯ ಹೊಂದಿವೆ ಎಂದರೆ ಆಶ್ಚರ್ಯವಿಲ್ಲ.

ಮನುಷ್ಯ ಮನುಷ್ಯರ ಮಧ್ಯೆ ಇರುವ ತಾರತಮ್ಯದಂತೆ, ದೇವಾನುದೇವತೆಗಳಲ್ಲೂ ವರ್ಗ ಸ್ತರ, ಕರ್ತವ್ಯ ಭೇದಗಳು ಬೆಳೆದು ಬಂದಿವೆ. ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ತ್ರಿಮೂರ್ತಿ, ಬ್ರಹ್ಮ, ವಿಷ್ಣು, ಮಹೇಶ್ವರ ಪ್ರಪಂಚದ ಅಂದರೆ ಸರ್ವಜೀವಿಗಳ ಸೃಷ್ಟಿ, ಸ್ಥಿತಿ, ಲಯ ಕರ್ತವ್ಯಗಳನ್ನು ಹೊಂದಿದ್ದಾರೆ. ಇವರುಗಳ ಪತ್ನಿಯರಾದ ಸರಸ್ವತಿ, ಲಕ್ಷ್ಮೀ. ಪಾರ್ವತಿಯರ, ಸ್ವರೂಪ, ಶಕ್ತಿಗಳು ಅಪಾರ ಹಾಗೂ ವಿಭಿನ್ನ. ಸೃಷ್ಟಿಕರ್ತ ಬ್ರಹ್ಮನೆ ನಮ್ಮ ದೇಶದ ಚತುರ್ವರ್ಣಗಳ ಜನಕ. ಬ್ರಹ್ಮನ ಬಾಯಿಂದ ಬಂದ ಬ್ರಾಹ್ಮಣರು, ಸರಸ್ವತಿಯ ಆರಾಧಕರು, ವಿದ್ಯೆ, ಬುದ್ಧಿ ಅಧಿಪತ್ಯ ಹೊಂದಿದವರಾಗಿ ಮೆರೆದರೆ, ಬ್ರಹ್ಮನ ಭುಜದಿಂದ ಹುಟ್ಟಿದ ಕ್ಷತ್ರಿಯರು, ಧೈರ್ಯ, ಶೌರ್ಯದಿಂದೊಡಗೂಡಿದ ರಾಜಮಹಾರಾಜರಾಗಿ ಧರ್ಮ ಸಂಸ್ಥಾಪನೆ ಹಾಗೂ ರಕ್ಷಣೆಯಲ್ಲಿ ಬ್ರಾಹ್ಮಣರಿಗೆ ನೆರವಾದವರು. ಬ್ರಹ್ಮನ ತೊಡೆಯಿಂದ ಉದ್ಭವಿಸಿದ ವೈಶ್ಯರಾದರೋ ವ್ಯಾಪಾರ, ವ್ಯವಸಾಯ ಉದ್ಯೋಗಗಳಿಂದ ಇತರರನ್ನು ಪೋಷಿಸುವ ಶಕ್ತಿ ಹೊಂದಿದ ಲಕ್ಷ್ಮೀ ಆರಾಧಕರು. ಬ್ರಹ್ಮನ ಪಾದಗಳಿಂದ ಜನಿಸಿದವರೇ ಶೂದ್ರರು, ಮೇಲಿನ ಮೂರು ವರ್ಣಗಳ ಚಾಕರಿ ಮಾಡಿಕೊಂಡು ಜೀವ ಸವೆಸುವವರು. ಇವುಗಳಿಂದ ಬಹುದೂರ ಉಳಿದ ‘ಅತಿ ಶೂದ್ರರು’ ಅಥವಾ ಅಸ್ಪೃಷ್ಯರಿಗೆ ತಾತ್ವಿಕವಾಗಿ ಯಾವ ದೇವರೂ ಇಲ್ಲ, ಹತ್ತಿರ ಸೇರುವುದೂ ಇಲ್ಲ. ವಿಪರ್ಯಾಸವೆಂದರೆ ಇವರೂ ಹಿಂದೂ ಧರ್ಮದ ಒಂದು ಅವಿಭಾಜ್ಯ ಅಂಗ. ಹಾಗೆ ಸಾಮಾಜಿಕ ಇತಿಹಾಸ ಇವರನ್ನು ಅಳವಡಿಸಿಬಿಟ್ಟಿದೆ.

ದೇವರು-ಧರ್ಮ ಸಾಮಾಜಿಕ ಜೀವನದ ಹಾಸುಹೊಕ್ಕಾಗಿ ಜನಜೀವನವನ್ನು ನಿಯಂತ್ರಿಸಿರುವುದು ನಮ್ಮ ಧರ್ಮದಲ್ಲಿ ಒಂದು ಪರಾಕಾಷ್ಠೆಯನ್ನೇ ಮುಟ್ಟಿದೆ ಎಂದರೆ ಅತಿಶಯೋಕ್ತಿಯಲ್ಲ. ಮನುಷ್ಯರಲ್ಲಿರುವಂತೆ ವರ್ಗ, ಜಾತಿ-ಭೇದಗಳು ವಿಭಿನ್ನ ಶಕ್ತಿಗಳು ಬೇಕು-ಬೇಡಗಳು ಈ ದೇವತೆಯರನ್ನು ಸುತ್ತುವರಿದಿವೆ. ದೇವರುಗಳ ನಡತೆ ಮನುಷ್ಯರಿಗೆ ಕೆಲವೊಮ್ಮೆ ಮಾದರಿಯಾದರೂ ಅನೇಕಸಲ ಅದು ತ್ಯಾಜ್ಯ. ಬ್ರಹ್ಮ-ಸರಸ್ವತಿ ಸಂಬಂಧ ತಂದೆ ಮಗಳ ಮಧ್ಯ. ಇದು ಮನುಷ್ಯರಿಗೆ ತ್ಯಾಜ್ಯ. ಸರಸ್ವತಿಯು ವಿದ್ಯಾಧಿದೇವತೆಯಾಗಿ ನಮ್ಮ ಸಂಸ್ಕೃತಿಯಲ್ಲಿ ರಾರಾಜಿಸಿದ್ದಾಳೆ. ಈಗಲೂ ಆಕೆಯ ಸ್ಥಾನ ಹಿರಿದು. ಇವರೆಲ್ಲರ ಶಕ್ತಿಯೂ ಅಪಾರ, ಅವರು ಎತ್ತಿರುವ ಅವತಾರಗಳೆಷ್ಟೋ? ವಿಷ್ಣು ಮತ್ತು ಶಿವ ಸಂಪ್ರದಾಯಗಳು ಹಾಗೂ ಪಾರ್ವತಿ ವಿಭಿನ್ನ ರೂಪಗಳಲ್ಲಿ ಶಕ್ತಿಯಾಗಿ ನಿರ್ವಹಿಸದಿರುವ ಕಾರ್ಯವೇ ಇಲ್ಲವೆನ್ನಬಹುದು; ವೇದ ಉಪನಿಷತ್ತು, ಪುರಾಣಗಳಲ್ಲಿ ನಮಗೆ ಕಾಣಸಿಗುವುದು ದೇವ ದೇವರುಗಳಲ್ಲಿ ನಡೆಯುವ ಪೈಪೋಟಿ, ಶಕ್ತಿ ಸಾಧನೆಗೆ ಹೂಡುವ ಅನೇಕ ಯುಕ್ತಿಗಳು ಕೆಲವೊಮ್ಮೆ ನಿಂದೆ, ಹೋರಾಟಗಳೂ ಹೊರತಲ್ಲ.

ಇಂತಹ ಧಾರ್ಮಿಕ ಪರಂಪರೆ ಆರ್ಯರಿಂದ ಆರಂಭವಾಗಿ ಭಾರತದ ಮೂಲ ನಿವಾಸಿಗಳಿಗೂ ಹಬ್ಬಿ, ಹಾಗೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ನಮ್ಮ ದೇಶದಲ್ಲಿರುವ ಜಾತಿ, ಅಸ್ಪೃಶ್ಯತೆ ಹಾಗೂ ಅಸಮಾನತೆಯ ಸಮಸ್ಯೆಗಳು ನಮ್ಮ ದೇವ ದೇವತೆಗಳಲ್ಲೂ ಹೇರಳವಾಗಿದೆ. ಉಚ್ಚ ಜಾತಿಯವರು ಕೀಳು ಜಾತಿಯವರು ಒಂದೇ ಹೆಸರಿನ ದೇವರನ್ನು ಪೂಜಿಸಿದರೂ ಆ ದೇವರ ಸ್ಥಾನ-ಮಾನ, ವಿಶೇಷ ಗುಣಗಳು ಆರಾಧಿಸುವ ಜನರ ಪ್ರತೀಕವಾಗಿರುತ್ತವೆ. ಮನುಷ್ಯರ ಬದುಕಿಗೂ ತೀರಾ ಹತ್ತಿರದ ಸಂಬಂಧ ಆದರೆ ಒಂದು ಗುಂಪಿನವರ ದೇವರು ಇನ್ನೊಂದು ಗುಂಪಿನವರ ದೇವರಿಗೆ ಏನೂ ಸಂಬಂಧವಿಲ್ಲದಿರಬಹುದು.

ಒಂದೇ ಸಂಸ್ಕೃತಿಯಲ್ಲಿ ‘ದೊಡ್ಡ’ ಮತ್ತು ‘ಚಿಕ್ಕ’ ಪರಂಪರೆಗಳನ್ನು ವಿಂಗಡಿಸಿ ಅಧ್ಯಯನ ಮಾಡುವುದು ಒಂದು ವಿಧಾನವಾದರೆ, ಪ್ರೊಫೆಸರ್ ಶ್ರೀನಿವಾಸರವರು ಭಾರತೀಯ ಧಾರ್ಮಿಕ ಸಂಸ್ಕೃತಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದೆಂದು ಹೇಳಿದ್ದಾರೆ. ಅವುಗಳಾವುವೆಂದರೆ, ಸಮಗ್ರ ಭರತ ಖಂಡಕ್ಕೆ ಅನ್ವಯಿಸುವ, ಆರ್ಯ-ಸಂಸ್ಕೃತಿಯಿಂದೊಡಗೂಡಿದ ಧರ್ಮ, ದಕ್ಷಿಣ ಭಾರತಕ್ಕೆ ಅನ್ವಯಿಸುವಂತಹ ಎರಡನೇ ಹಂತ, ಒಂದು ಪ್ರಾಂತ್ಯಕ್ಕೆ ಸೀಮಿತವಾಗುವ ಹಾಗೂ ಕೇವಲ ಒಂದು ಊರು, ಹಳ್ಳಿಗೆ ಸಂಬಂಧಿಸಿದಂತಹ ಧರ್ಮ ಪರಂಪರೆಗಳು ನಮ್ಮಲ್ಲಿ ಅವಿಚ್ಛಿನ್ನವಾಗಿ ಬೆಳೆದು ಬಂದಿವೆ. ಈ ನಾಲ್ಕೂ ಒಂದಕ್ಕೊಂದು ಪೂರಕವಾಗಬಹುದು ಅಥವಾ ವಿರೋಧಾಭಾಸಕ್ಕೂ ಎಡೆಮಾಡಿ ಕೊಡಬಹುದು. ಈ ವಿಭಿನ್ನ ಧಾರ್ಮಿಕ ಸಂಸ್ಕೃತಿಗಳ ಪರಂಪರೆಯಲ್ಲಿ ಹೊಂದಾಣಿಕೆ ಏರ್ಪಡಿಸಿಕೊಂಡು ಹೋಗುವ ಶಕ್ತಿ ಹಾಗೂ ವ್ಯಾಪ್ತಿ ಸಮಗ್ರ ದೇಶಕ್ಕೆ ಅನ್ವಯಿಸುವ ಅಂದರೆ ಸಂಸ್ಕೃತೀಕರಣ ಹೊಂದಿದ ಹಿಂದೂ ಧರ್ಮಕ್ಕೆ ಮಾತ್ರ ಸಾಧ್ಯ. ಉಳಿದ ಮೂರು ಧಾರ್ಮಿಕ ಪರಂಪರೆಗಳೂ ಕೊನೆಯಲ್ಲಿ ಇದರಲ್ಲಿ ಐಕ್ಯವಾಗಿ ಒಂದೇ ಸಂಸ್ಕೃತಿಯ ವಿಭಿನ್ನ ರೂಪಗಳೆಂದು ಹೇಳುವ ಘಟ್ಟಕ್ಕೆ ಮುಟ್ಟುತ್ತವೆ, ‘ದೊಡ್ಡ’ ಸಂಸ್ಕೃತಿ ಅನೇಕ ವಿಭಿನ್ನ ‘ಚಿಕ್ಕ’ ಪರಂಪರೆಗಳನ್ನು ಒಳಗೆ ಹಾಕಿಕೊಳ್ಳುವ ಶಕ್ತಿಹೊಂದಿದೆ.

ಪ್ರಸಕ್ತ ಸಂದರ್ಭದಲ್ಲಿ ಏಳುಕೊಳ್ಳದ ಎಲ್ಲಮ್ಮ ದೇವತೆಯನ್ನು ಒಂದು ಊರು ಅಥವಾ ಒಂದು ಸೀಮೆಯ ದೇವತೆಯಾಗಿ ಕಾಲಕ್ರಮೇಣ ದಕ್ಷಿಣ ಭಾರತದ ನಾಲ್ಕಾರು  ಪ್ರಾಂತಗಳಲ್ಲಿ ಪ್ರಚಾರ ಹೊಂದಿ, ಕೊನೆಯಲ್ಲಿ ರೇಣುಕೆಯಾಗಿ ಸಮಗ್ರ ಭಾರತದ ಬ್ರಾಹ್ಮಣ ಸಂಸ್ಕೃತಿಯಲ್ಲಿ ಲೀನವಾಗಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಒಂದು ಊರು ಅಥವಾ ಸೀಮೆಯ ಗಡಿ (ಎಲ್ಲೆ) ಯ ದೇವತೆಯಾಗಿ ಸ್ಥಾಪನೆಗೊಂಡ ಎಲ್ಲಮ್ಮನ ಶಕ್ತಿ, ವ್ಯಾಪ್ತಿ ಹಾಗೂ ಚಮತ್ಕಾರ, ಸಾಮರ್ಥ್ಯಗಳು ಎಲ್ಲೆ ಮೀರಿ ಬೆಳೆದು ಬಂದಿವೆ. ಕರ್ನಾಟಕ, ಗೋವೆ, ಮಹಾರಾಷ್ಟ್ರ ಹಾಗೂ ಇನ್ನಿತರೆ ಕಡೆ ಈ ದೇವಿಯ ಭಕ್ತರು ಹರಡಿದ್ದಾರೆ. ಹುಣ್ಣಿಮೆ, ಜಾತ್ರೆಗಳಲ್ಲಿ ಸವದತ್ತಿಗೆ ಜನಜಂಗುಳಿ ಬರುತ್ತದೆ. ಬರುವ ಯಾತ್ರಿಕರಲ್ಲಿ ಹಿಂದುಗಳಲ್ಲದ ಭಿನ್ನ ಧರ್ಮಾವಲಂಬಿಗಳೂ ಮತ್ತು ಗಿರಿಜನರು, ಗಂಡಸರು, ಹೆಂಗಸರು ಮಕ್ಕಳು ಎಲ್ಲರೂ ಇದ್ದಾರೆ. ಆದರೆ ಮುಖ್ಯವಾಗಿ ಎಲ್ಲಮ್ಮ ಆಕರ್ಷಿಸಿರುವುದು ಕೆಳಜಾತಿ ವರ್ಗದವರನ್ನೇ ಎಂದರೆ ಸಮಂಜಸವಾದೀತು. ಹಿಂದೂ ಧರ್ಮದಲ್ಲಿ ಅತ್ಯಂತ ಕೆಳಕ್ಕೆ ತುಳಿಯಲ್ಪಟ್ಟಿರುವ ಶೂದ್ರರು, ಅದರಲ್ಲೂ ಅಸ್ಪೃಶ್ಯ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಮ್ಮನ ಭಕ್ತರಾಗಿದ್ದಾರೆ, ಆರಾಧಕರಾಗಿದ್ದಾರೆ ಎನ್ನುವುದಂತೂ ನಿಜ.

ಎಲ್ಲಮ್ಮನಿಗೆ ಇವರು ತೋರಿಸುವ ಭಕ್ತಿ ಎಂದರೆ ‘ಆತ್ಮಾರ್ಪಣೆಗೆ’ ಸಮಾನ. ಹೆಚ್ಚಿನ ಸಂಖ್ಯೆಯಲ್ಲಿ ‘ದೀಕ್ಷೆ’ ತೆಗೆದುಕೊಂಡು ‘ಜೋಗತಿ’ ‘ಜೋಗಪ್ಪ’ ಆಗುವವರು ಸಮಾಜದ ಕೆಳಗಿನ ಸ್ತರದಿಂದ ಬಂದವರೇ ಆಗಿದ್ದಾರೆ. ಇಲ್ಲಿ ಹೆಣ್ಣು ಮಕ್ಕಳಿಗೆ ‘ಮುತ್ತು’ ಕಟ್ಟಿ, ಎಲ್ಲಮ್ಮ ದೇವರ ಪತ್ನಿಯನ್ನಾಗಿ ಮಾಡುವುದು ಒಂದು ವಿಪರ್ಯಾಸವಾದರೆ ಹಾಗೆ ‘ಮುತ್ತು’ ಕಟ್ಟಿಸಿಕೊಂಡು ಕೆಳಜಾತಿ ಹೆಣ್ಣು ಮಕ್ಕಳ ಸ್ಥಿತಿ-ಗತಿ ಹಾಗೂ ಮೇಲು ವರ್ಗದವರ ಸ್ಥಾನ-ಮಾನ ಕೂಡ ವಿಭಿನ್ನ. ಉಚ್ಚ ಜಾತಿಯ ಮದುವೆಯಾದ ಹೆಣ್ಣು ಮಕ್ಕಳು ‘ಗರತಿ ಮುತ್ತು’ ಕಟ್ಟಿಸಿಕೊಂಡು ಹಬ್ಬ, ಹುಣ್ಣಿಮೆಗಳಲ್ಲಿ ದೇವತೆ ಸೇವೆಗಷ್ಟೆ ಸೀಮಿತಗೊಳಿಸಿ ಮರ್ಯಾದೆಯುತ‘ಜೀವನ ನಡೆಸುತ್ತಾರೆ. ಆದರೆ ಅದೇ ಕೆಳಜಾತಿ ಹೆಣ್ಣುಗಳು ‘ದೇವದಾಸಿ’ಯರಾಗಿ, ವೇಶ್ಯಾ ಜೀವನಕ್ಕೆ ಇಳಿಯುತ್ತಾರೆ. ದೇವರಿಗೆ ‘ಬಿಟ್ಟ’ ಈ ಹೆಣ್ಣು ಮಕ್ಕಳು ಈ ಜನ್ಮದಲ್ಲಿ ಯಾವ ಗಂಡಸಿನೊಡನೆ ಮದುವೆ ಮಾಡಿಕೊಳ್ಳುವಂತಿಲ್ಲ. ಏಕೆಂದರೆ ಅವರು ಎಲ್ಲಮ್ಮನಿಗೆ ಅರ್ಪಿತರಾದ, ಎಲ್ಲಮ್ಮನ ‘ಸತಿ’ಯರು. ಹೆಣ್ಣು ದೇವತೆ, ತನ್ನ ಸ್ತ್ರೀ ಕುಲದವರನ್ನೇ ಬಲಿ ತೆಗೆದುಕೊಳ್ಳುವುದಕ್ಕೆ ಇದೊಂದು ಉತ್ತಮ ನಿದರ್ಶನ. ಹೀಗೆ ತಾತ್ವಿಕತೆಯಿಂದ ಮೊದಲಾದ ಪರಂಪರೆ, ಮುತ್ತು ಕಟ್ಟಿದ ಹೆಣ್ಣು ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆ ‘ಸಾರ್ವಜನಿಕ ಸ್ವತ್ತು, ಯಾವ ಗಂಡಸಾದರೂ, ಅವರನ್ನು ‘ಹೆಣ್ಣು’ ಮಾಡಬಹುದು. ಅಂದರೆ ಈ ವ್ಯವಸ್ಥೆಯಲ್ಲೂ ಜಾತಿ-ವರ್ಗದ ಪ್ರಾಮುಖ್ಯತೆ ಕಂಡು ಬರುತ್ತದೆ. ‘ಸೂಳೆ’ ಯಾದವಳು, ತನ್ನ ಪ್ರಿಯಕರನನ್ನು ಅವಳ ಜಾತಿ, ತತ್ಸಮಾನವಾದ ಜಾತಿ ಅಥವಾ ಉತ್ತಮ ಜಾತಿಯಿಂದ ಆರಿಸಿಕೊಳ್ಳಬೇಕೇ ವಿನಃ ಅವಳಿಗಿಂತ ಕೆಳಜಾತಿಯವರನ್ನು ಕೂಡಬಾರದು. ಹಾಗೆ ಮಾಡಿದರೆ ಅವಳು ‘ಜಾತಿ’ ಗೆಟ್ಟವಳಾಗುತ್ತಾಳೆ.

ಉಚ್ಚ-ನೀಚ,  ನಡತೆ, ವ್ಯವಹಾರಗಳು ಇಲ್ಲಿ ವ್ಯಕ್ತವಾಗುತ್ತವೆ. ಕೆಳಜಾತಿಯವರನ್ನು ಇನ್ನೂ ಕೆಳಗೆ ತಳ್ಳಲು, ಅವರನ್ನು ಕೇವಲ ಭೋಗವಸ್ತುಗಳನ್ನಾಗಿ ಉಪಯೋಗಿಸಲು, ದೇವರು-ಧರ್ಮದ ಹೆಸರಿನಲ್ಲಿ ಪುರೋಹಿತಶಾಹಿಗಳು ರಚಿಸಿದ ಒಂದು ದೊಡ್ಡ ಜಾಲವೆಂದರೂ ನಡೆದೀತಲ್ಲವೆ? ಅದೇ ಉತ್ತಮ ಜಾತಿ ಹೆಣ್ಣು ಮಕ್ಕಳು, ವಿದ್ಯಾವಂತರಲ್ಲದಿರಬಹುದು, ದಡ್ಡರಿರಬಹುದು, ಕೇವಲ ಹುಟ್ಟಿನ ಹಿನ್ನೆಲೆಯಲ್ಲಿ ಅವರು ಮರ್ಯಾದೆಯಿಂದ ಬದುಕುವ ಮಾರ್ಗ ಹುಡುಕಿಕೊಟ್ಟರೆ, ಕೆಳ ಜಾತಿ ಹೆಣ್ಣುಮಕ್ಕಳನ್ನು ಇಂತಹ ‘ಅಸಹ್ಯ’ ಕೆಲಸಕ್ಕೆ ಹಚ್ಚಿದ ಕಲಂಕ ಮಾನವ ನಿರ್ಮಿತವಲ್ಲದೆ, ದೇವರ ಇಚ್ಛೆಯೆಂತಾಗಲು ಸಾಧ್ಯ? ಇದು ಎಲ್ಲಮ್ಮ-ಗಡಿ ದೇವತೆಗೆ ಹಚ್ಚಿದ ಕಳಂಕವೆಂದೂ ಭಾವಿಸಬಹುದು.

ದೇವದಾಸಿ ಪದ್ಧತಿ ಎಲ್ಲಿ, ಹೇಗೆ, ಯಾತಕ್ಕಾಗಿ ಯಾವ ಕಾಲದಲ್ಲಿ ಹುಟ್ಟಿಕೊಂಡಿತೆಂದು ನಿರ್ದಿಷ್ಟವಾಗಿ ಹೇಳಲು ಕಷ್ಟ ಸಾಧ್ಯ. ಒಟ್ಟಿನಲ್ಲಿ ಇದು ರಾಜ ಮಹಾರಾಜರುಗಳ ಕಾಲದಲ್ಲಿ, ಪಾಳೆಗಾರಿಕೆ, ದೊಡ್ಡ ದೊಡ್ಡ ಜಮೀನುದಾರರ ಅನುಗ್ರಹದಲ್ಲಿ ಪೋಷಿತವಾದ ಸಂಸ್ಥೆ ಎಂದು ಹೇಳಬಹುದು. ಇಂತಹ ಒಂದು ಪದ್ಧತಿಯನ್ನು ದೇವರ ಹೆಸರಿನಲ್ಲಿ ಚಾಲ್ತಿ ಕೊಟ್ಟು, ಮೊದಲೇ ದಿಕ್ಕು ತೋರದ ಕೆಳಜಾತಿ-ವರ್ಗದವರನ್ನು ಇನ್ನೂ ಕಂಗೆಡಿಸಿ, ಅವರನ್ನು ಜನ್ಮ ಜನ್ಮಾಂತರಕ್ಕೂ ಮೇಲೆ ಏಳದಂತೆ ಉಚ್ಚರಾದವರ ಅಡಿಯಾಳಾಗಿ, ಭೋಗ ವಸ್ತುವಾಗಿ, ನಡೆಸಿಕೊಂಡ ಮಾರ್ಗ. ಈ ಸಂಬಂಧದಿಂದ ಉತ್ತಮ ಕುಲದವರಿಗೆ ಬೇರಾವ ಅನುಕೂಲಗಳು ಎಂದೂ ಒದಗಲಿಲ್ಲ. ಅವರು ಐಷಾರಾಮ ಜೀವನವನ್ನು ನಿರಾತಂಕವಾಗಿ ನಡೆಸಿಕೊಂಡು ಹೋಗಲು ಇದೊಂದು ಪೋಷಕ ಪದ್ಧತಿಯಾಗಿ ಬೆಳೆಯಿತು.

ಹೆಣ್ಣು ಮಕ್ಕಳನ್ನು ಗಂಡು. ಹೆಣ್ಣು ದೇವತೆಗಳಿಬ್ಬರಿಗೂ ‘ಬಿಡುವುದು’ ವಾಡಿಕೆಯಾಗಿದೆ. ಇದರ ವ್ಯಾಪ್ತಿ ಹಾಗೂ ಎಷ್ಟರ ಮಟ್ಟಿಗೆ ಇಂದಿಗೂ ಮುಂದುವರಿದಿದೆ ಎಂಬುದನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಹೆಣ್ಣು ಮಕ್ಕಳನ್ನು ದೇವರಿಗೆ ‘ಬಿಡುವ’ ಸಂಪ್ರದಾಯದಲ್ಲಿ ಹಲವಾರು ಕಾರಣಗಳನ್ನು ನಾವು ಕಾಣಬಹುದು. ಕೇವಲ ಆರ್ಥಿಕ ಮುಗ್ಗಟ್ಟಿನಿಂದ ಬಡವರಾದವರು ಈ ಪದ್ಧತಿಗೆ ಶರಣು ಹೋಗುತ್ತಾರೆಂಬುದು ಖಂಡಿತವಾಗಿಯೂ ನಿಜವಲ್ಲ. ಇಲ್ಲಿ ಬಡತನ ಸಿರಿತನದ ಪ್ರಶ್ನೆಗಿಂತ ವಿಭಿನ್ನ ಕಾರಣಗಳು ಎದ್ದು ಕಾಣುತ್ತವೆ. ಪಿತೃಪ್ರಧಾನ ಸಮಾಜದಲ್ಲಿ ಮದುವೆಯಾದ ಹೆಣ್ಣು ಮಗಳು ಗಂಡನ ಮನೆಗೆ ಹೋಗುವುದು, ಮುಂದೆ ಅದೇ ಆಕೆಯ ಮನೆಯಾಗಿ ತೌರುಮನೆಯಿಂದ ದೂರವಾಗುವುದು ಉಂಟು. ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಅಲ್ಲಿಯ ಅತ್ತೆ ಅತ್ತಿಗೆ-ನಾದಿನಿಯರ ಕಾಟ. ಇನ್ನೂ ಅನೇಕ ತರದ ಸಂಕಷ್ಟಗಳಿಂದ ಹೆಣ್ಣು ಮಗಳನ್ನು ಉಳಿಸಲು, ಮಗಳನ್ನು ದೇವರಿಗೆ ಅರ್ಪಿಸಿ ಮನೆಯಲ್ಲೆ ಉಳಿಸಿಕೊಳ್ಳುವ ಅಭಿಲಾಷೆಯೂ ಪ್ರೇರಕವಾಗಬಹುದು. ಒಬ್ಬಳೇ ಮಗಳಾದರೆ ಅಥವಾ ಬೇರೆ ಮಕ್ಕಳಿಲ್ಲದೆ ಏಕೈಕ ಪುತ್ರಿಯಾದರೆ. ಅಂತಹ ತಂದೆ-ತಾಯಿಯರು ಮಗಳು ತಮ್ಮೊಂದಿಗೆ ಮನೆಯಲ್ಲಿರಲಿ, ಮುಪ್ಪಿನಲ್ಲಿ ನಮಗೆ ಆಸರೆ ಆಗಲಿ ಎಂದೂ, ಮಗಳನ್ನು ದೇವರಿಗೆ ಬಿಟ್ಟು ಮನೆಯಲ್ಲಿರಿಸಿಕೊಂಡು ವಂಶ ಉದ್ಧಾರಕ್ಕೆ ಆ ಮೂಲಕ ಪ್ರಯತ್ನ ಪಡಬಹುದು.

ಹುಟ್ಟಿದ ಮಕ್ಕಳೆಲ್ಲಾ ಸತ್ತರೆ, ಅಥವಾ ರೋಗ ರುಜಿನಗಳಿಂದ ಸತತ ಪೀಡಿತರಾದರೆ ಹಿರಿಯರು. ಅಂತಹ ಮಕ್ಕಳ ಹೆಸರಿನಲ್ಲಿ ದೇವರಿಗೆ ‘ಹರಕೆ’ ಹೊತ್ತು. ವಿಪತ್ತಿನಿಂದ ಪಾರಾದ ಆ ಮಕ್ಕಳನ್ನು ದೇವರಿಗೆ ಅರ್ಪಿಸುವುದೂ ವಾಡಿಕೆ, ಇಂತಹ ಇನ್ನೂ ಹಲವಾರು ಕೌಟುಂಬಿಕ ಸಾಮಾಜಿಕ ಕಾರಣಗಳು ಈ ಪದ್ಧತಿಯ ಹಿಂದೆ ಅಡಕವಾಗಿವೆ.

ದೇವರಿಗೆ ಬಿಟ್ಟ ಹೆಣ್ಣು ಮಕ್ಕಳ ಕೌಟುಂಬಿಕ ಹಾಗೂ ಸಾಮಾಜಿಕ ಸ್ಥಾನ-ಮಾನದಲ್ಲಿ ಅನುಮಾನಕ್ಕೆ, ಅವಮಾನಕರ ಎಂದು ಯೋಚಿಸುವುದಕ್ಕೆ ಎಡೆಯಿಲ್ಲ. ‘ಸೂಳೆ ಬಿಟ್ಟ’ ಮಗಳ ಸ್ಥಾನ ತಂದೆ ಮನೆಯಲ್ಲಿ ಮಗನಿಗೆ ಸರಿಸಮಾನವಾದುದು. ಆಕೆ ಹಾಗೂ ಆಕೆಯ ಮಕ್ಕಳು ತಂದೆಯ ವಂಶವನ್ನೇ ಮುಂದುವರಿಸುತ್ತಾರೆ. ಮಕ್ಕಳಿಗೆ ನಿರ್ದಿಷ್ಟ ಸ್ಥಾನ ಕಲ್ಪಿಸಿ ಕೊಟ್ಟಿರುವ ಈ ಪದ್ಧತಿಯಲ್ಲಿ. ‘ಸೂಳೆಯ ಮಕ್ಕಳು’ ಗರತಿ ಮಕ್ಕಳಷ್ಟೆ ಗಣ್ಯರು. ಸೂಳೆಯ ಮಕ್ಕಳು ತಾಯಿ ಹಾಗೂ ತಾಯಿಯ ತಂದೆ ವಂಶದವರಾದರೆ, ಗರತಿಯರ ಮಕ್ಕಳು ಅವರ ಅಪ್ಪನ ಮಕ್ಕಳೆಂದು ಪರಿಗಣಿಸಲ್ಪಡುತ್ತಾರೆ ಅಷ್ಟೆ. ದೇವದಾಸಿಯ ಮಕ್ಕಳು ಹಾಗೂ ಆಕೆಯ ಸಹೋದದರ ಮಕ್ಕಳು ಅಣ್ಣ-ತಮ್ಮ-ಅಕ್ಕ-ತಂಗಿ ಸಂಬಂಧವನ್ನೆ ಮುಂದುವರಿಸುತ್ತಾರೆ. ಅವರ ಮಧ್ಯೆ ವಿವಾಹ ಸಲ್ಲದು. ಆಕೆಗೂ ತಂದೆ ಆಸ್ತಿಯಲ್ಲಿ ಮಗನಂತೆ ಹಕ್ಕು ಉಂಟು. ಇದೆಲ್ಲಕ್ಕಿಂತ ಹೆಚ್ಚು ಜನಪ್ರಿಯ ಹಾಗೂ ಮರ್ಯಾದೆ ಇಂತಹವರಿಗೆ ಸಿಕ್ಕಿರುವುದು ಸಮಾಜದಿಂದ, ಅದರಲ್ಲೂ ಮದುವೆ ಅಂತಹ ಸಮಾರಂಭಗಳಲ್ಲಿ. ಸೂಳೆ ‘ನಿತ್ಯ ಸುಮಂಗಳೆ’. ಈಕೆಗೆ ಎಂದೂ ವೈಧ್ವ್ಯವೇ ಇಲ್ಲದಿರುವುದರಿಂದ ಮದುಮಗಳಿಗೆ ಕಟ್ಟುವ ತಾಳಿಯ ‘ಕರಿಮಣಿಯನ್ನು’ ಈಕೆಯಿಂದ ಪೋಣಿಸಿ ಅದಕ್ಕೆ ಒಂದು ಪ್ರಶ್ಯಸ್ತ ಕೊಟ್ಟು ಆಕೆಯ ಸಾಮಾಜಿಕ ಸ್ಥಾನಕ್ಕೆ ಒಂದು ಮೆರಗು ಬಂದಿದೆ. ಈ ಸೇವೆ ಅತ್ಯಂತ ಶುಭ ಸಂಕೇತ. ಇಷ್ಟೆಲ್ಲಾ ಸದ್‌ಭಾವನೆಗಳು ‘ಸೂಳೆ’ ಸಂಪ್ರದಾಯಕ್ಕೆ ಅನ್ವಯಿಸಿದರೂ, ನಿಜ ಜೀವನದಲ್ಲಿ ಆಕೆ ಎದುರಿಸಬೇಕಾದ ‘ಸಮಾಜ ನಿಂದನೆ’ ಅನೇಕ. ‘ಸೂಳೆ ಮಕ್ಕಳು’ ಎಂದು ಬಳಸುವ ಪದವು ಆವಾಚ್ಯ ಬೈಗುಳವೇ ಹೊರತು ಘನತೆ ಗೌರವದಿಂದ ಕೂಡಿದ್ದಲ್ಲ.

ಏಳುಕೊಳ್ಳದ ಎಲ್ಲಮ್ಮನ ಸುತ್ತ ಹೆಣೆದುಕೊಂಡಿರುವ ಅನೇಕ ವಿಶಿಷ್ಠ ಪದ್ಧತಿ ಪರಂಪರೆಗಳಲ್ಲಿ ಕೆಂಪು ಮುತ್ತು ಕಟ್ಟಿ ಪ್ರತಿ ವರ್ಷವೂ ಸಾವಿರಗಟ್ಟಲೆ ಹೆಣ್ಣು ಮಕ್ಕಳನ್ನು ಉತ್ತರ ಕರ್ನಾಟಕದಿಂದ ಮಹಾರಾಷ್ಟ್ರದ ದೊಡ್ಡ ದೊಡ್ಡ ಪಟ್ಟಣಗಳಿಗೆ ಹಾಗೂ ಮಧ್ಯ ಪ್ರಾಚ್ಯ ದೇಶಕ್ಕೆ ವೇಶ್ಯಾವೃತ್ತಿಗೆ ನೂಕುವ ಪರಿಸ್ಥಿತಿ ಯಾವ ನಾಗರೀಕ ಸಮಾಜದ ಪ್ರಜ್ಞಾವಂತ ಜನರು ತಲೆ ತಗ್ಗಿಸುವಂತಹ ಕೆಲಸ. ಇದು ದೇವರು-ಧರ್ಮದ ಹೆಸರಿನಲ್ಲಿ ಪ್ರಚಲಿತವಿರುವುದರಿಂದ ಇಂತಹ ಇತರೆ ದೇವಾನುದೇವತೆಗಳ ಒಂದೆರಡು ಉದಾಹರಣೆಗಳ ಮೂಲಕ, ಈ ಪದ್ಧತಿ ವ್ಯಾಪಕವಾಗಿದೆ ಹಾಗೂ ಗಡಿ ಸೀಮೆಗೆ ಅಥವಾ ಎಲ್ಲಮ್ಮನ ಉಪಾಸಕರಿಗೆ ಮಾತ್ರ ಸೀಮಿತವಾಗಿಲ್ಲವೆಂಬುದನ್ನು ತಿಳಿಯುವುದು ಒಳ್ಳೆಯದು.

ಮೇಲೆ ಹೇಳಿರುವಂತೆ, ಗ್ರಾಮ ದೇವತೆಯು ಪರಂಪರೆ ದಕ್ಷಿಣ ಭಾರತದ ಎಲ್ಲಾ ಹಳ್ಳಿಗಳಲ್ಲೂ ಬೇರೂರಿರುವ ಸಂಪ್ರದಾಯ. ಈ ಗ್ರಾಮ ದೇವತೆಗಳು, ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀ ಸ್ವರೂಪಿಣಿಯವರು ಮತ್ತು ವಿವಿಧ ಹೆಸರುಗಳಿಂದ ಬೇರೆ ಬೇರೆ ಕೆಲಸಗಳನ್ನು ನಿರ್ವಹಿಸುತ್ತಾರೆ. ಮಾರಿ, ಮಸಣಿ, ಚಂಡಿ, ಚಾಮುಂಡಿ, ದುರ್ಗಿ, ಕರಿಯಮ್ಮ. ಎಲ್ಲಮ್ಮ, ಕಾಳಿ ಹೀಗೆ ಹಲವಾರು ಹೆಸರು ಅವರುಗಳು ತೃಪ್ತರಾಗದಿದ್ದರೆ ಜನರನ್ನು ಅನೇಕ ವಿಧದಲ್ಲಿ ಕಾಡಬಲ್ಲರು. ಪ್ಲೇಗು, ಕಾಲರಾ, ಸಿಡುಬು, ವೈದ್ಯಕೀಯವಾಗಿ ಅಂಟು ಜಾಡ್ಯಗಳಾದರೂ, ಇವುಗಳೊಂದೊಂದಕ್ಕೂ ಒಬ್ಬ ಅಧಿದೇವತೆ ಇದ್ದಾಳೆ. ಊರಿನಲ್ಲಿ ಪ್ಲೇಗು ಅಥವಾ ಕಾಲರಾ ಬಂದರೆ ‘ಅಮ್ಮ’ನಿಗೆ ‘ಎಡೆ’ ಹಾಕಿ, ಸಕಲ ಅಲಂಕಾರ ಮರ್ಯಾದೆಯೊಂದಿಗೆ ಊರ ಗಡಿದಾಟಿಸುವ ವ್ಯವಸ್ಥೆ ಇಂದಿಗೂ ನಮ್ಮ ಹಲವು ಹತ್ತು ಹಳ್ಳಿಗಳಲ್ಲಿ ಆಚರಣೆಯಲ್ಲಿದೆ.

ಧಾರವಾಡದ ಪಕ್ಕದ ಬಳ್ಳಾರಿ ಜಿಲ್ಲೆಯಲ್ಲಿ ಎರಡು ಸ್ಥಳಗಳಲ್ಲಿ ಹೆಚ್ಚು ಕಡಿಮೆ ಎಲ್ಲಮ್ಮನ ಸಂಪ್ರದಾಯಕ್ಕೆ ಹೋಲುವ ಮತ್ತು ಹೊಂದಿಕೊಳ್ಳುವ ಆಚರಣೆಗಳನ್ನು ಉದಾಹರಿಸಬಹುದು. ಮೊದಲನೆಯದು ಉಚ್ಚಂಗಿ ದುರ್ಗದ ಉಚ್ಚೆಂಗಮ್ಮ, ಉಚ್ಚಂಗಿ ಕೆಂಚಮ್ಮ ಎಂದು ಕರೆಯುವ-ಹೆಣ್ಣು ದೇವತೆ. ಉಚ್ಚಂಗಿ ದುರ್ಗ ದಾವಣಗೆರೆ ಪೂರ್ವದಲ್ಲಿ ಕೇವಲ ೯ ಮೈಲುಗಳ ದೂರದಲ್ಲಿದೆ. ಗುಡ್ಡದ ಮೇಲಿರುವ ಕುಗ್ರಮ. ದೇವಸ್ಥಾನವೂ ಗುಡ್ಡದ ಮೇಲಿದೆ. ಹಾಗೂ ಸುತ್ತ ಕೋಟೆ ಕಟ್ಟಿದ್ದು-ಆದರೆ ಈಗ ಅನೇಕ ಕಡೆ ಅವಶೇಷವಾಗಿರುವುದು ಗೋಚರವಾಗುತ್ತದೆ. ಗುಡ್ಡದ ಮೇಲೆ ನೀರಿನ ಅಭಾವ ಹಾಗೂ ವಾಹನ ಸಂಚಾರಕ್ಕೆ ಮಾರ್ಗವಿಲ್ಲದ್ದರಿಂದ ಯಾತ್ರಾರ್ಥಿಗಳು. ಗುಡ್ಡದ ಕೆಳಗಿನ ವಿಶಾಲ ಬೈಲಿನಲ್ಲಿ ಬೀಡು ಬಿಡುತ್ತಾರೆ. ಉಗಾದಿಯಲ್ಲಿ ಅತಿ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ. ಈ ಬಯಲನ್ನು ‘ಹಾಲವ್ವನ ತೋಪು’ ಎನ್ನುತ್ತಾರೆ. ಬಳ್ಳಾರಿ ಜಿಲ್ಲೆಯ ಉಗಾದಿ ಉರಿಬಿಸಿಲಿನಿಂದ ತಪ್ಪಿಸಿಕೊಳ್ಳಲು ತೋಪಿನಲ್ಲಿ ಅಲ್ಲಲ್ಲಿ ಭಕ್ತರು ಮರಗಿಡ ಬೆಳೆಸಿದ್ದಾರೆ. ೧-೨ ನೀರಿನ ಭಾವಿಗಳೂ ಇವೆ. ಈ ನೀರೇ ಎಲ್ಲರಿಗೂ, ಎಲ್ಲಾ ಕೆಲಸಕ್ಕೂ ಒದಗಬೇಕು. ಹೆಣ್ಣು ಮಕ್ಕಳಿಗೆ ‘ಮುತ್ತು’ ಕಟ್ಟುವುದು ಅಂದರೆ ದೇವರಿಗೆ ಬಿಡುವುದು ಅಥವಾ ಬಸವಿ ಬಿಡುವುದು ಇಲ್ಲಿ ಆಚರಣೆಯಲ್ಲಿತ್ತು. ದೇವದಾಸಿ ಪದ್ಧತಿ ರದ್ದಿನ ಕಾನೂನು ಮದ್ರಾಸ ಪ್ರೆಸಿಡೆನ್ಸಿಯಲ್ಲಿ ಜಾರಿಗೆ ಬಂದು ಬಹಳಷ್ಟು ವರ್ಷಗಳಾದರೂ ಬಳ್ಳಾರಿ ಜಿಲ್ಲೆ ಮೈಸೂರಿಗೆ ೧೯೫೬ ರಲ್ಲಿ ಸೇರುವವರೆಗೂ, ಆ ಮೊದಲೂ, ಕದ್ದು ಕಾಣದೆ ಮಲುತ್ತು ಕಟ್ಟುವ ಅಂದರೆ ಸೂಳೆ ಬಿಡುವ ವ್ಯವಹಾರ ಮುಂದುವರಿದಿದೆ. ಇಲ್ಲಿ ಪಡಲಿಗೆ ಸಂಪ್ರದಾಯವೂ ಇದೆ. ಅರಿಷಣ ಪುಡಿಯನ್ನು ‘ಭಂಡಾರ’ ಎಂದು ಪರಿಗಣಿಸುವುದೂ ಇದೆ. ಉಧೋ ಎಂದು ಹೇಳುವುದೂ ವಾಡಿಕೆಯಲ್ಲಿದೆ. ಇವರು ದೇವರ ದಾಸಿಯರು, ನಿತ್ಯ ಸುಮಂಗಳೆಯರು. ಇಲ್ಲೂ ಮಾತಂಗಿ ಗುಡಿ, ಉಚ್ಚಂಗಮ್ಮನ ಪ್ರಾಕಾರದಲ್ಲೇ ಇದೆ. ಎಲ್ಲಾ ಹೆಣ್ಣು ದೇವತೆಗಳ ಗುಡಿ ಮುಂದೆ ಮಾತಂಗಿಯ ಚಿಕ್ಕ ಗುಡಿ ಇರುತ್ತದೆ. ಕೀಳು ಜಾತಿಯ ಮಾತಂಗಿ ಉಳಿದ ದೇವತೆಗಳಿಗೆ ಸೇವಕಿಯಂತೆ ಎಂದು ಈ ವಾಡಿಕೆಯನ್ನು ಅರ್ಥ ಮಾಡಬಹುದು.

ಹರಕೆ ಮಾಡಿಕೊಂಡವರು ಬೇವಿನ ಸೊಪ್ಪಿನ ಸೀರೆ ಉಡುತ್ತಾರೆ. ಬಾಯಿ ಬೀಗ ಚುಚ್ಚಿಕೊಳ್ಳುತ್ತಾರೆ. ಮೇಕೆ, ಕುರಿ ಬಲಿಯೂ ಹಾಲವ್ವನ ತೋಪಿನಲ್ಲಿ ನಡೆಯುತ್ತದೆ. ಸಾಮೂಹಿಕ ಊಟ, ಹೆಚ್ಚಾಗಿ ನೆಂಟರು ಇಷ್ಟರು. ಸ್ನೇಹಿತರು ಬಹುತೇಕ ಒಂದೇ ಜಾತಿಗೆ ಸೇರಿದವರು-ನಡೆಯುವ ಮುನ್ನ ಮಾಡಿದ ಅಡಿಗೆಯನ್ನು ನೈವೇದ್ಯ ಮಾಡಿ “ಜೋಗವ್ವನ ಪಡಲಿಗೆ”ಗೆ ಅರ್ಪಿಸುವುದು, ಅವರಿಗೆ ಊಟ ಹಾಕುವುದು, ದಕ್ಷಿಣೆ ಕೊಡುವುದು ಅವರು ‘ಉಚ್ಚಂಗವ್ವ ನಿನಗೆ ನಾಲ್ಕು ಬಾರಿ ಉಧೋ’ ಎಂದು ಹರಸುವುದು ಎಲ್ಲಾ ನಡೆದಿದೆ. ಈ ಆರಾಧನೆಯ ವ್ಯಾಪ್ತಿ ಹಾಗೂ ವೈಶಿಷ್ಠ್ಯವನ್ನು ಇನ್ನೂ ಕ್ರಮಬದ್ಧವಾಗಿ ಅಭ್ಯಾಸಿಸಿ, ಎಲ್ಲಮ್ಮನಿಗೂ ಉಚ್ಚಂಗಮ್ಮನಿಗೂ ಇರುವ ಹೋಲಿಕೆ, ವ್ಯತ್ಯಾಸ ಹಾಗೂ ಸಂಬಂಧವನ್ನು ಹೇಳುವುದರ ಜೊತೆಗೆ ಈ ದೇವತೆಗಳ ಸುತ್ತ ಬೆಳೆದಿರುವ ಪುರಾಣ, ಪುಣ್ಯ ಕಥೆ, ಕಟ್ಟು ಹಾಗೂ ದಂತ ಕಥೆಗಳು ಮತ್ತು ಸ್ಥಳ ಪುರಾಣವನ್ನು ವಿವರವಾಗಿ ಹೊರ ತರಬೇಕಾಗಿದೆ.

ಗುಡ್ಡ, ಬೆಟ್ಟ, ಕಾಡು, ಮೇಡು, ಗುಹೆ, ವಾಸ್ತವ ಪ್ರಪಂಚದಿಂದ ದೂರ “ಏಕಾಂಗಿತನ”ದ ವಾತಾವರಣದಲ್ಲಿ ಇಂತಹ ದೇವತೆಗಳ ತಾಣ ಇರುವುದು ತರ್ಕಬದ್ಧವಾದ ವಿಷಯವೇ. ಈ ಜಾಗಗಳಿಗೆ ಎಲ್ಲರೂ ಸುಲಭವಾಗಿ ಹೋಗುವಂತಿಲ್ಲ, ಹೋದರೂ ಬೇಕಾದಷ್ಟು ಕಟ್ಟು ಪಾಡುಗಳು, ಮನೆ ದೇವತೆ ಅಥವಾ ಆ ದೇವತೆಯ ‘ಒಕ್ಕಲು’ ಆದವರಿಗೆ ಮಾತ್ರ, ಆ ಸಂಪ್ರದಾಯಕ್ಕೆ ಸಂಬಂಧಿಸಿದ ಕ್ರಿಯೆಗಳು ವಿಧಿವತ್ತಾಗಿ ನಡೆಯಬೇಕು. ಅನೇಕ ಸಲ ಬೇರೆಯವರೂ ಈ ದೇವಿಯ ಉಪಾಸಕರಾಗಬಹುದು ‘ಒಕ್ಕಲೂ’ ಆಗಬಹುದು, ಅದರ ಹಿಂದೆ ಈ ಪರಂಪರೆಯನ್ನು ಪಾಲಿಸಲು ಬದ್ಧರೂ ಆಗಬಹುದು.

ಬಳ್ಳಾರಿ ಜಿಲ್ಲೆಯ ಪಶ್ಚಿಮದ ತುತ್ತ ತುದಿಯಲ್ಲಿರುವುದೇ ಮೈಲಾರ. ಇಲ್ಲಿ ಮೈಲಾರ ಲಿಂಗ ಎಂಬ ಈಶ್ವರ ದೇವಸ್ಥಾನ ಸಾಕಷ್ಟು ಪ್ರಖ್ಯಾತಿ ಪಡೆದಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕದ ಎಲ್ಲಾ ಕಡೆಗಳಿಂದಲೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಫೆಬ್ರುವರಿ ತಿಂಗಳಿನಲ್ಲಿ ನಡೆಯುವ ‘ಭಾರತ ಹುಣ್ಣಿಮೆ’ ಜಾತ್ರೆಗೆ ಬರುತ್ತಾರೆ. ಜಾತ್ರೆ ೧೦-೧೨ ದಿನಗಳು ನಡೆಯುತ್ತದೆ. ಕೊನೆಯ ೩-೪ ದಿನ ಮಾತ್ರ ಎಲ್ಲಾ ತರದ ಚಟುವಟಿಕೆಗಳಿರುತ್ತವೆ.

ಮೈಲಾರಲಿಂಗಪ್ಪ ಗಂಡು ದೇವರು. ಇಲ್ಲಿ ಅನೇಕ ವಿಧವಾದ ‘ಸೇವೆ’ಗಳಿಗೆ ಅವಕಾಶವಿದೆ. ಗಂಡಸರು, ಹೆಂಗಸರು ‘ಗೊರವ’ ದೀಕ್ಷೆ ತೆಗೆದುಕೊಳ್ಳಬಹುದು. ದೇವರ ಹೆಸರಿನಲ್ಲಿ ಭಿಕ್ಷೆ ಮಾಡುವುದು ಪ್ರತೀತಿ. ಹೆಚ್ಚು ಜನ ಗಂಡಸರು ಮಧ್ಯಮ ಹಾಗೂ ಕೆಳಜಾತಿ ವರ್ಗದಿಂದ ಬಂದವರು ದೀಕ್ಷೆ ತೆಗೆದುಕೊಳ್ಳುತ್ತಾರೆ ಹಾಗೂ ಭಿಕ್ಷೆ ಬೇಡಲು ಹಳ್ಳಿ ಹಳ್ಳಿಗೆ ಅಲೆಯುತ್ತಾರೆ. ಅಪರೂಪಕ್ಕೆ ಲಿಂಗಾಯತ ಅಥವಾ ಉತ್ತಮ ಜಾತಿಯವರು ಗೊರವರಾದರೆ, ಹಬ್ಬ, ಹುಣ್ಣಿಮೆಗಳಲ್ಲಿ ದೇವರ ಸೇವೆ ಹಾಗೂ ಕಡ್ಡಾಯವಾಗಿ ಬೇಡಲೇಬೇಕಾದರೆ ಶಾಸ್ತ್ರಕ್ಕೆ ೩-೫ ಮನೆಗಳಿಂದ ಭಿಕ್ಷೆ ಬೇಡುತ್ತಾರೆ. ಹೆಂಗಸರೂ ಕೆಲವರು ಗೊರವ ದೀಕ್ಷೆ ತೆಗೆದುಕೊಳ್ಳುತ್ತಾರೆ. ಇದರಲ್ಲೂ ಸಹ ಕೆಳ ಜಾತಿ-ವರ್ಗದಿಂದ ಬಂದವರೇ ಹೆಚ್ಚು.

ಇದಲ್ಲದೆ ‘ಚಡ್ಡು’ ‘ದೀವಟಿಗ’ ‘ಚೌರಿ’ ‘ಸಂಚಿ’ ಮುಂತಾದ ಸೇವೆ ಮಾಡಲು ಗಂಡಸರು ಹೆಂಗಸರು ಸಮರ್ಪಣೆ ಮಾಡಿಕೊಳ್ಳುತ್ತಾರೆ. ‘ದೀವಟಿಗೆ’ ಹಾಗೂ ‘ಚಡ್ಡು’ ಗಂಡಸರಿಗೆ ಸೀಮಿತವಾಗಿದೆ. ಚೌರಿ, ಸಂಚಿ ಹೆಂಗಸರಷ್ಟೇ ಹಿಡಿಯುತ್ತಾರೆ. ನಿರ್ದಿಷ್ಟ ಸಮಯದಲ್ಲಿ ದೇವರ ಸೇವೆ ಮಾಡಿ ಕೃತಾರ್ಥರಾಗುವುದೇ ಇದರ ಹಿನ್ನೆಲೆ ಮದುವೆಯಾದವರು, ಇನ್ನೂ ಮದುವೆಮಾಡಿಕೊಳ್ಳಬಹುದಾದವರು ಎಲ್ಲರೂ ಎಲ್ಲಾ ಜಾತಿಗಳಿಂದಲೂ ಲಾಂಛನಗಳನ್ನು ವಿಧಿವತ್ತಾಗಿ ಪಡೆದು ದೇವರ ಸೇವೆಯಲ್ಲಿ ತೊಡಗಬಹುದು. ಆದರೆ ಕೆಳಜಾತಿಯ ಹಾಗೂ ಅಸ್ಪೃಶ್ಯರ ಹೆಂಗಸರು ಈ ದೀಕ್ಷೆಯನ್ನು ಮದುವೆಗೆ ಮೊದಲು ತೆಗೆದುಕೊಂಡರೆ ಅಂಥವರು ‘ದೇವದಾಸಿ’ ಅಥವಾ ಬಸವಿಯರಾಗೇ ಜೀವನ ನಡೆಸುತ್ತಾರೆ. ಇಲ್ಲೂ ಅರಿಸಿನಪುಡಿ ‘ಭಂಡಾರ’ ಎಂದೇ ವಿನಿಯೋಗವಾಗುತ್ತದೆ. ಗೊರವರಿಗೆ ಕೆಲವು ವೇಳೆ ಹೆಚ್ಚಿನ ಸ್ಥಾನಮಾನ ಸಿಕ್ಕುತ್ತದೆ. ದೇವರ ಹೆಸರಿನಲ್ಲಿ ‘ಗೊರವ ದೋಣಿ’ಗಳಿಗೆ ಮೀಸಲು ರೊಟ್ಟಿ, ಬುತ್ತಿ ಮೈಲಾರಕ್ಕೆ ಬರುವ ಯಾತ್ರಾರ್ಥಿಗಳು ಹಾಕುತ್ತಾರೆ. ಅಲ್ಲೇ ಅಡಿಗೆ ಊಟದ ಸಮಾರಂಭ ಇಟ್ಟುಕೊಂಡರೂ ಮೊದಲು ‘ಗೊರವ ದೋಣಿಗೆ’ ‘ಎಡೆ’ ನೀಡಿ ಅವರಿಂದ ದೇವರ ಹೆಸರಿನಲ್ಲಿ. ‘ಏಳು ಕೋಟಿ ಚಾಂಗಲೋ ’ (ಶಾಂಗಲೊ?) ಎಂದು ಆಶೀರ್ವಚನ ಮುಗಿದ ಮೇಲೆ ಎಲ್ಲರಿಗೂ ಊಟ ಹಾಕುತ್ತಾರೆ.

ಮೇ ತಿಂಗಳಲ್ಲಿ ಬರುವ ‘ಅಗೆ’ ಹುಣ್ಣಿಮೆ ಹಾಗೂ ಡಿಸೆಂಬರಿನಲ್ಲಿ ನಡೆಯುವ “ಬನದ ಹುಣ್ಣಿಮೆ’ ಹೊರಗಿನಿಂದ ಸಾಕಷ್ಟು ಜನರನ್ನೂ, ಯಾತ್ರಾರ್ಥಿಗಳನ್ನೂ ಆಕರ್ಷಿಸುತ್ತವೆ. ಒಟ್ಟಾರೆಯಾಗಿ ಈ ಎರಡೂ ಹುಣ್ಣಿಮೆಯಲ್ಲಿ ಬರುವ ಆಚರಣೆಗಳು ವ್ಯವಸಾಯದ ಬದುಕಿಗೆ ಸಂಬಂಧಿಸಿದಂತೆ ಇವೆ. ಮಾನವ-ಪ್ರಕೃತಿ ಪರಸ್ಪರಾವಲಂಬನೆ ಬಿಂಬಿತವಾಗುತ್ತದೆ.

ಇದೆಲ್ಲಕ್ಕಿಂತ ಕುತೂಹಲಕಾರಿಯಾದ ಆಚರಣೆ ಎಂದರೆ ಕಂಚ ವೀರ (ಪಂಚ ವೀರ) ಅಸ್ಪೃಶ್ಯ ಜಾತಿಗೆ ಸೇರಿದವರಿಂದ ನಡೆಯುವ ‘ಪವಾಡ’ಸೇವೆ. ‘ಸರಪಳಿ’ ಪವಾಡ ಹಾಗೂ ‘ಆರತಿ’ ಬೆಳಗುವುದು. ದಪ್ಪ ಕಬ್ಬಿಣದ ಸರಪಳಿಯನ್ನು ಮರಾಠ ಉಪಾಸಿಯೊಬ್ಬ ಕೈಯಲ್ಲಿ ಹಿಡಿದು ಜಗ್ಗಿ, ತುಂಡುಮಾಡುವುದೇ ಸರಪಳಿ ಪವಾಡ. ಅಂತೆಯೇ ಎಡದ ಮುಂಗೈನಲ್ಲಿ ೫-೭ ಬತ್ತಿ ಸುತ್ತಿದ ಕಬ್ಬಿಣದ ಆರತಿಯನ್ನು ಚುಚ್ಚಿ, ಬತ್ತಿ ಹೊತ್ತಿಸಿ ದೇವರಿಗೆ ಬೆಳಗುವುದು. ಇವೆರಡು ಸೇವೆ ಮಾಡುವವರು ಅನೇಕ ಕಟ್ಟು ಪಾಡುಗಳನ್ನು ಆಚರಿಸುತ್ತಾರೆ. ಚೋದ್ಯ ಎಂದರೆ, ಸರಪಳಿ ಬರೀ ಕೈಯಲ್ಲಿ ಎಳೆದಾಗ ಕೈಗೆ ‘ಆರತಿ’ ಚುಚ್ಚಿದಾಗ, ತೆಗೆದಾಗ, ಅಷ್ಟೊಂದು ರಕ್ತಸ್ರಾವ ಆಗುವುದಿಲ್ಲ. ಸೇವೆ ಮುಗಿದ ಮೇಲೆ ಆ ಜಾಗಕ್ಕೆ ‘ಭಂಡಾರ’ಹಾಕಿ ಬಟ್ಟೆ ಕಟ್ಟಬಹುದು ಅಥವಾ ಕಟ್ಟದಿರಬಹುದು. ಅಷ್ಟಕ್ಕೆ ಅದು ವಾಸಿಯಾಗುತ್ತದೆ. ರಕ್ತ ಒಸರುವುದು, ಗಾಯ ಮಾಯದೆ ಕೀವು ತುಂಬಿದರೆ ವ್ಯಕ್ತಿ ಕ್ರಮ ತಪ್ಪಿದ್ದಾನೆ, ನಿಯಮಗಳ ಪಾಲನೆಯಲ್ಲಿ ಎಲ್ಲೊ ಲೋಪವಾಗಿದೆ ಎಂದು ಹೇಳುತ್ತಾರೆ. ಇದಕ್ಕೂ ಹೆಚ್ಚಿನ ರೋಮಾಂಚನಕಾರಿ ‘ಶಿರಸ ಪವಾಡ’ ತುಂಬಾ ಹಿಂದೆ ನಡೆಯುತ್ತಿದ್ದಿತಂತೆ. ಕಂಚವೀರ ಉಪಾಸಿಯ ಕತ್ತು ಕತ್ತರಿಸಿ ದೇವರಿಗೆ ಆರತಿ ಬೆಳಗುತ್ತಿದ್ದರಂತೆ, ಆ ಮೇಲೆ ಭಂಡಾರ ಹಾಕಿ ದೇಹಕ್ಕೆ ಕತ್ತು ಜೋಡಿಸಿದರೆ ಯಥಾಸ್ಥಿತಿ. ಸಧ್ಯ ಇದು ಈಗ ಆಚರಣೆಯಲ್ಲಿಲ್ಲ.

ಮಲ್ಲಾಸುರ-ಮಣಿಕಾಸುರರೆಂಬ ಕ್ರೂರ ರಾಕ್ಷಸರನ್ನು ಸಂಹರಿಸಿ ವಿಜಯೋತ್ಸಾಹ ಆಚರಿಸುವ ಸಂಭ್ರಮದಲ್ಲಿ ಮಾರ್ತಾಂಡ ಭೈರವ ದೇವರೆದುರು ಪವಾಡಗಳ ಮೂಲಕ ಮನುಷ್ಯ ರಕ್ತ ಅರ್ಪಿಸುವುದು ಈ ಆಚರಣೆಗಳ ಮೂಲಕ ಕಾಣಬರುತ್ತದೆ. ಹಿಂದೆ ‘ನರಬಲಿ’ ನಡೆಯುತ್ತಿರಬಹುದೆಂದು ಈ ಸಂಕೇತದಿಂದ ಅರ್ಥ ಮಾಡಬಹುದು.

ಈ ಮೇಲಿನ ಮೂರು ಸಂಪ್ರದಾಯಗಳಲ್ಲಿ ಅನೇಕ ಹೋಲಿಕೆಗಳಿವೆ. ಕೆಲವು ವ್ಯತ್ಯಾಸಗಳೂ ಇವೆ. ಭಂಡಾರ, ಐಶ್ವರ್ಯ ಎನ್ನುವ ಅರ್ಥದಲ್ಲಿ ಎಲ್ಲಾ ಕಡೆ ಉಪಯೋಗಿಸುತ್ತಾರೆ. ಗಂಡಸರು, ಹೆಂಗಸರು ವಿವಿಧ ರೀತಿಗಳಲ್ಲಿ ದೇವರ ಸೇವೆ ಮಾಡಲು ಸಮರ್ಪಿಸಿ ಕೊಳ್ಳುತ್ತಾರೆ. ಆದರೆ ಕಾಲಕ್ರಮೇಣ ಕೆಲವು ಸೇವೆಗಳು ಕೀಳು ಅಭಿರುಚಿಯ ದ್ಯೋತಕವಾಗಿ ಮಾರ್ಪಟ್ಟಿವೆ. ಪ್ರಾಚೀನ ಗ್ರೀಸ್‌ಮತ್ತು ರೋಮನ್‌ಚಕ್ರಾಧಿಪತ್ಯದಲ್ಲಿ ಹೆಂಗಸರನ್ನು ದೇವರಿಗೆ ಬಿಡುತ್ತಿದ್ದರಂತೆ. ಆದರೆ ಇಂದು ಅದು ಗತಕಾಲದ ಅವಶೇಷ. ದೇವರು-ಧರ್ಮದ ಹೆಸರಿನಲ್ಲಿ ಒಳ್ಳೇ ಕಾರ್ಯಗಳು ಮಾತ್ರ ನಡೆಯುತ್ತವೆಂದು ಕೆಲವು ಪರಂಪರೆಗಳನ್ನು ಅಭ್ಯಾಸಿಸಿದಾಗ ಭಾಸವಾದರೂ. ನಿಜ ಜೀವನದಲ್ಲಿ ತಾರತಮ್ಯ, ಕೆಡುಕು ಉಂಟುಮಾಡುವ ದುಷ್ಟ ಆಚರಣೆಗಳು ಬಗೆ ಹರಿಸಲಾರದಷ್ಟು ದಟ್ಟವಾಗಿ ಬೆಳೆದು ಬಂದಿವೆ. ಸೂಕ್ಷ್ಮ ಮತ್ತು ವಿಲಕ್ಷಣ ಮತಿಯ ಮಾನವ ಎಂತಹ ವಿರೋಧಾಭಾಸಗಳ ನಡುವೆ ಕೆಲವೊಮ್ಮೆ ತೊಳಲಾಡುತ್ತಾನೆಂಬುದಕ್ಕೆ ಅವನು ಆಚರಿಸುವ, ನಂಬುವ ಧರ್ಮ ಪರಂಪರೆಗಳೂ ನೇರ ಸಾಕ್ಷಿ.

ದೇವರು-ಧರ್ಮದ ಹೆಸರಿನಲ್ಲಿ ಜನಸಾಮಾನ್ಯರಲ್ಲಿ ಅಂಧ ಶ್ರದ್ಧೆ ಬಿತ್ತಿ, ಅಧೋ ಗತಿಗಿಳಿಸಿ ಹೀನಾಯ ಜೀವನ ನಡೆಸಲು ಪ್ರೇರೇಪಿಸುವುದು ಯಾವ ದೇವರಿಗೆ ತಾನೆ ಶೋಭೆ ತಂದೀತು? ದೇವರು ಈ ತಾರತಮ್ಯಕ್ಕೆ ಎಂತು ಹೊಣೆ? ಲೋಕದ ಸೂತ್ರವನ್ನು ಹಿಡಿದ ಒಂದು ಅವ್ಯಕ್ತ ಶಕ್ತಿಯಾದರೆ, ನ್ಯಾಯಪರತೆ ಇರಬೇಕಲ್ಲವೇ? ತಮ್ಮ ಆಶೋತ್ತರಗಳಿಗೆ ಹೊಂದಾಣಿಕೆಯಾಗುವಂಥ ದೇವರನ್ನು ಸೃಷ್ಟಿಸಿರುವವರು ಮನುಷ್ಯರೇ ಇರಬೇಕಲ್ಲವೇ? ದೇವರಿಗೆ ಎಂಥಾ ದುರ್ಗತಿ, ದೇವರನ್ನೂ ಮಾನವರನ್ನೂ ಈ ವಿಷವೃತ್ತದಿಂದ ಪಾರು ಮಾಡುವುದು ಎಲ್ಲಾ ಪ್ರಜ್ಞಾವಂತರ ಕೆಲಸವಾಗಬೇಕು. ಅದೇ ಮೋಕ್ಷವೆಂದರೂ ಹೆಚ್ಚು ಸಮಂಜಸ.