ಕಲಿಕಾಲ ಕಲ್ಮಷಕ್ಕೆಡೆಗುಡದೆ ಸದ್ಭಕ್ತಿ
ನೆಲೆಗೊಂಡು ಪುತ್ರ ಮಿತ್ರಕುಳತ್ರವೆಂದೆಂಬ
ಬಲೆಯೊಳಗೆ ಸಿಲ ಕದಾಚಾರಲಿಂಗನ ನಿಷ್ಠೆ ನೆಲೆಗೊಂಡು ದಾಸೋಹದ
ಸುಲಲಿತ ಸುಮಾರ್ಗದೊಳಗಾಚರಿಸುತಾನಂದ
ಜಲಧಿಯೊಳಗೋಲಾಡುತಿರ್ಪ ಲೀಲೆಯೊಳೆಸೆವ
ಹುಲಿಗೆಳೆಯೆನಿಪ ಪುಂದ ವೀರಮಾಹೇಶ್ವರರ ಚರಣಾಂಬುಜಕ್ಕೆ ಶರಣು.

– ಶಿವತತ್ವ ಚಿಂತಾಮಣಿ ೩೮-೧೯೭

ಪ್ರಾಚೀನ ಕಾಲದಿಂದಲೂ ತಿರುಳ್ಗನ್ನಡದ ಕೇಂದ್ರಗಳಲ್ಲೊಂದು ಪ್ರಖ್ಯಾತವಾಗಿರುವ ಪುಲಿಗೆರೆಯಲ್ಲಿ ಹತ್ತನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಜರುಗುತ್ತಿರುವುದು ಔಚಿತ್ಯಪೂರ್ಣವೂ ಸಂತೋಷಪ್ರದವೂ ಆಗಿದೆ. ಲಕ್ಷ್ಮೇಶ್ವರ ಪಟ್ಟಣ ಮತ್ತು ಸುತ್ತಲಿನ ಈ ಪ್ರದೇಶಕ್ಕೆ ಇರುವ ಐತಿಹಾಸಿಕ ಮಹತ್ವವೆಂತಹದೆಂಬುದನ್ನು ಶಾಸನ ಹಾಗೂ ಸಾಹಿತ್ಯಿಕ ಆಧಾರಗಳು ವಿಷದಪಡಿಸುತ್ತವೆ. ಭಾಷೆ, ಸಾಹಿತ್ಯ, ಧರ್ಮ, ಜಾನಪದ ಸಂಪತ್ತಿನ ದೃಷ್ಟಿಯಿಂದ ಈ ಪ್ರದೇಶ ಗತೇತಿಹಾಸದಲ್ಲಿ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯ ಮೇಲೆ ತನ್ನ ಹೆಗ್ಗುರುತುಗಳನ್ನು ಮೂಡಿಸಿದೆ. ಕವಿರಾಜಮಾರ್ಗಕಾರ, ಆದಿಕವಿ ಪಂಪ, ರಾಘವಾಂಕ, ಬ್ರಹ್ಮಶಿವ, ಲಕ್ಕಣ್ಣದಂಡೇಶ ಮೊದಲಾದ ಕವಿಗಳು ಈ ಪಟ್ಟಣ ಮತ್ತು ಭಾಗದ ಸಂಸ್ಕೃತಿಯ ವೈಶಿಷ್ಟ್ಯವನ್ನು ಮನಮೆಚ್ಚಿ ಹಾಡಿದ್ದಾರೆ. ಈ ಕೇಂದ್ರ ಪಂಪನಿಗೆ ರಾಜದ್ರಾಜಕವೆನಿಸಿದ ಸಾಜದ ತಿರುಳ್ಕನ್ನಡದ ಎಂದರೆ ದೇಶೀಯ ಅರ್ಥಾತ್ ಜನವಾಡಿಕೆಯ ಅಚ್ಚಗನ್ನಡದ ಭಾಷಾ ಶಕ್ತಿಯನ್ನೂ ಶ್ರೀಮಂತಿಕೆಯನ್ನೂ ನೀಡಿದುದು. ರಾಘವಾಂಕನ ಶ್ರದ್ಧೆಯಲ್ಲಿ, ತೆಂಕನಾಡಿನಲ್ಲಿರುವ ಅಧಿಕ ಪಟ್ಟಣಗಳಲ್ಲಿ ಯಾವುದಕ್ಕೂ ಇದು ಮಿಗಿಲಾದುದು; ಕುಬೇರನ ರಾಜಧಾನಿ ಅಳಕಾಪುರ, ನಗರೇಷು ಕಾಂಚಿಯೆನಿಪ – ಕಾಂಚಿಗಿಂತಲೂ ಚೆಲುವಾದುದು. ಲಕ್ಕಣ್ಣದಂಡೇಶನಂತೂ ಇಲ್ಲಿಯ ಸದಾಚಾರ ಸಂಪನ್ನರಾದ ಮತ್ತು ಉನ್ನತ ಅಧ್ಯಾತ್ಮಿಕ ನಿಲುವಿಗೇರಿದ ವೀರಮಾಹೇಶ್ವರನ ಪಾದಕ್ಕೆ ಮಣಿದಿದ್ದಾನೆ. ಈ ಪಟ್ಟಣದ ಅಧಿದೈವವಾದ ಸೋಮನಾಥನ ಸುತ್ತಲೆ ಈ ಭಾಗದಲ್ಲಿ ಜೈನ- ವೀರಶೈವ ಮತಗಳ ಪರಸ್ಪರ ಸ್ಪರ್ಧಾತ್ಮಕ ಪ್ರಚಾರದ ಚರಿತ್ರೆ ಹರಡಿಕೊಂಡಿದೆ. ಆತನಲ್ಲಿಟ್ಟ ಭಕ್ತಿಯಿಂದ ಪ್ರೇರಿತವಾದ ಕವಿಗಳೂ, ವಚನಕಾರರೂ ಇಲ್ಲಿಯ ಜನಜೀವನ ಮತ್ತು ಪರಂಪರೆಗೆ ಕಾಲಕಾಲಕ್ಕೆ ನವಾವತಾರವನ್ನುಂಟು ಮಾಡಿದ್ದಾರೆ. ಆ ಕವಿಗಳಲ್ಲಿ, ಜಾನಪದ ಸಮ್ಮೇಳನದ ಈ ಸಂದರ್ಭದಲ್ಲಿ ಇಬ್ಬರನ್ನು ವಿಶೇಷವಾಗಿ ನೆನಪಿಸಿಕೊಳ್ಳುವುದು ಸಮುಚಿತವಾಗಿದೆ. ಲಕ್ಷ್ಮೇಶ್ವರಕ್ಕೆ ಸಮೀಪದ ಮುಳುಗುಂದವನಾದ ನಯಸೇನ ಜಾನಪದ ಸಂಪತ್ತನ್ನು ತನ್ನ ’ಧರ್ಮಾಮೃತ’ವೆಂಬ ಕಾವ್ಯದಲ್ಲಿ ಸೂರೆಗೊಂಡಿವೆ. ತಿರುಳ್ಗನ್ನಡದ ಮಣ್ಣಿನ ಮಗನಾದ ಈತ

ಸಕ್ಕದಮಂ ಪೇಳ್ವೊಡೆ ನೆಳೆ
ಸಕ್ಕದಮಂ ಪೇಳ್ಗೆ ಸುದ್ದಗನ್ನಡದೊಳ್ ತಂ
ದಿಕ್ಕುವುದೇ ಸಕ್ಕದಮಂ

ಎಂದು ಪಂಡಿತ ಕವಿಗಳಿಗೆಲ್ಲ ಮುಂಡಿಗೆ ಇಟ್ಟಿ‌ದ್ದಾನೆ. ತನ್ನೆದುರಿಗಿದ್ದ ವೈವಿಧ್ಯಪೂರ್ಣ ಜನಸಾಮಾನ್ಯರ ಜೀವನವನ್ನೇ ಸಾಜದ ಪುಲಿಗೆರೆಯ ಕನ್ನಡದಲ್ಲಿ ಕಂಡರಿಸುತ್ತಾನೆ. ಜಾನಪದ ಸತ್ವ ಚಿಮ್ಮಿ ಧುಮ್ಮಿಕ್ಕುವ ಕಾವ್ಯವಿದಾಗಿದೆ. ಪುಲಿಗೆರೆಯವನೇ ಆದ ಇನ್ನೊಬ್ಬ ಕವಿ ’ಸೋಮೇಶ್ವರ ಶತಕಕಾರ’ ಸೋಮನಾಥನೂ ಜನಸಾಮಾನ್ಯರ ಬೋಧನಾರ್ಥವಾಗಿಯೆ ಕಾವ್ಯ ಬರೆದವನು. ಆತನು ವ್ಯಕ್ತಿಪಡಿಸಿದ ಲೋಕಾನುಭವ ಮತ್ತು ಟಂಕಿಸಿದ ನಾಣ್ನುಡಿಗಳಂತಹ ಸೂಕ್ತಿಗಳು ಇಂದಿಗೂ ಕನ್ನಡ ಜನತೆಯಲ್ಲಿ ಮನೆಮಾತಾಗಿದೆ. ಈ ಇಬ್ಬರು ಕವಿಗಳೇ ಸಾಕು. ಪುಲಿಗೆರೆಯ ಪ್ರದೇಶ ತಿರುಳ್ಗನ್ನಡದ ಮತ್ತು ಜನಸಮ್ಮುಖ ಕಾವ್ಯದ ಧ್ವಜವನ್ನು ಕಾಲ ಕಾಲಕ್ಕೆ ಎತ್ತಿ ಹಿಡಿದಿದೆಯೆಂಬುದಕ್ಕೆ. ಪುಲಿಗೆರೆಯ ಜನತೆಯ ಸಂಸ್ಕೃತಿಯನ್ನು ಕುರಿತು ರಾಘವಾಂಕ ಹಾಗೂ ಲಕ್ಕಣ್ಣದಂಡೇಶರು ನೀಡಿರುವ ಈ ಮೇಲಿನ ಶ್ರೀಮಂತ ಚಿತ್ರಣದಲ್ಲಿ ಕೆಲಮಟ್ಟಿನ ಉತ್ಪ್ರೇಕ್ಷೆಯ ಬಣ್ಣಕಾರಿಕೆಗೆ ಅವಕಾಶವಿದ್ದರೂ ಇದೆಲ್ಲ ಕೇವಲ ಕಲ್ಪನೆಯ ವೈಭವೀಕರಣ, ನಂಬಲಸಾಧ್ಯವಾದ ಬಣ್ಣನೆಯೆನ್ನಲು ಸಾಧ್ಯವಿಲ್ಲ. ಇಲ್ಲಿಯ ನೆಲದಂತೆ ಜನಜೀವನವೂ ಫಲವತ್ತಾಗಿದ್ದಿತೆನ್ನುವುದರಲ್ಲಿ ಸಂದೇಹವಿಲ್ಲ. ಕವಿರಾಜಮಾರ್ಗಕಾರ, ಪಂಪ, ನಯಸೇನ, ಸೋಮನಾಥಾದಿಗಳ ಉಕ್ತಿಗಳೇ ಇದಕ್ಕೆ ಸಾಕ್ಷ್ಯವನ್ನೊದಗಿಸುತ್ತವೆ.

ನಮ್ಮ ಪ್ರಾಚೀನ ಪರಂಪರೆಯನ್ನು ನೆನೆಯುವುದು ಕೇವಲ ಕೃತಕ ಭಾವಾವೇಶ ಹೊಂದುವುದಕ್ಕೆ ಅಲ್ಲ; ಆಗಕೂಡದು. ಅಜ್ಜ ನೆಟ್ಟ ಆಲಕ್ಕೆ ನೇಣು ಹಾಕಿಕೊಂಡರೂ ಮೋಕ್ಷವೆಂಬ ಮೌಢ್ಯವನ್ನು ಬೆಳೆಸಿಕೊಳ್ಳುವುದು ವಿವೇಕವಲ್ಲ. ನಿಜ. ಇತಿಹಾಸದ ಸುವರ್ಣಮಯ ಚಿತ್ರದ ಸ್ಮರಣೆ. ನಮಗೆ ವರ್ತಮಾನದ ವಿಸ್ಮೃತಿಯನ್ನುಂಟುಮಾಡುವ, ಮಾದಕದ್ರವ್ಯ – ಓಪಿಯಂ ಸೇವನೆಯಂತಾಗಬಾರದು. ಹಾಗೆಯೇ ಹಳೆಯದನ್ನು ನೆನೆಸಿಕೊಂಡು ಹಿತ್ತಲಲ್ಲಿ ಅತ್ತರು ಎಂಬಂತಹ ಅಸಡ್ಡೆಯೂ ವಿವೇಕವಾಗಲಾರದು. ಗತೇತಿಹಾಸದ ನೆನಹು, ಪರಂಪರೆಯ ಸತ್ವವನ್ನು ಮೇಲಿಂದ ಮೇಲೆ, ನಮ್ಮಲ್ಲಿ ಎಚ್ಚರಗೊಳಿಸುವಂತಾಗಬೇಕು. ಸಂಸ್ಕೃತಿ ತನ್ನ ಸಜೀವತೆಯನ್ನು ಉಳಿಸಿಕೊಳ್ಳುವುದೂ, ಬೆಳೆಯವುದೂ ಈ ಪರಂಪರೆಯ ಜಾಗೃತ ಅರಿವಿನಿಂದ, ಹಳೆಯ ನೀರಿನೊಡನೆ ಹೊಸ ಝರಿ ಹರಿದು ಬಂದು ಸೇರಿಕೊಂಡು ಸಂಸ್ಕೃತಿಯ ತೊರೆ ಹೆದ್ದೊರೆಯಾಗುತ್ತದೆ. ಹೊಸತನವೆಂಬುದು ಹಳೆಯ ರೆಂಬೆಯ ಕೊನರಿದಂತಾಗಬೇಕಲ್ಲವೆ ಬಂದಳಿಕೆಯ ಬೆಳಸಿನಂತಾಗಬಾರದು. ಕವಿರಾಜಮಾರ್ಗದ ಕಾಲದಿಂದ ತೊಟ್ಟು ಇಂದಿನವರೆಗೆ ಸಾವಿರ ವರ್ಷಗಳಲ್ಲಿ ಈ ನೆಲದ ಮೇಲೆ ಎಷ್ಟೆಲ್ಲ ಗಾಳಿ ಬೀಸಿದೆ. ಬೆಳಕು ಹರಿದಿದೆ. ಅದೆಲ್ಲದರ ಪ್ರಭಾವ ಪರಿಣಾಮಗಳನ್ನು ಏಕಪಕ್ಷೀಯವಾಗಿ ಪ್ರವಾಹವನ್ನು ಹಿಮ್ಮುಖಗೊಳಿಸಲಾರೆವು. ಆದರೆ ಹೊಸ ಅಲೆ, ಪ್ರಭಾವ, ತಿರುವು, ಬದಲಾವಣೆಗಳಿಗೆ ಎಡೆಗೊಟ್ಟು ಪರಂಪರೆಯ ಸತ್ವದಲ್ಲಿ ಸದಾವತಾರವನ್ನುಂಟು ಮಾಡುವ ಯತ್ನ ನಮ್ಮದಾಗಬೇಕು. ’ಅರಸನ್ನ ಕಂಡು ಪುರುಷನ್ನ ಮರೆತರು ! ಎಂಬಂತಾಗಬಾರದು. ವರ್ತಮಾನದ ನೆಲದಲ್ಲಿ ಪರಂಪರೆಯ ಬೇರುಗಳು ಕಾಲೋಚಿತ ಮಳೆ, ಗಾಳಿ, ಬಿಸಿಲುಗಳನ್ನುಂಡೂ ಆಳಕ್ಕಿಳಿಯಬೇಕು. ಅಂತಹ ಆತ್ಮ ವಿಮರ್ಶೆ, ಕ್ರಿಯಾ ಪ್ರವೃತ್ತಿ, ಬದುಕುಳಿಯಬೇಕಾದ ಸಮಾಜದಲ್ಲಿ ಸದಾ ಜಾಗ್ರತವಾಗಿರಬೇಕಾದುದು ಅನಿವಾರ್ಯ.

ನಮ್ಮ ಪರಂಪರೆಯ ನೈಜಬೇರುಗಳು ಹುದುಗಿರುವುದು ಜಾನಪದ ನೆಲದಲ್ಲಿ. ಆಧುನಿಕತೆಯ ಬೆಡಗು ಬಿನ್ನಾಣಗಳಿಗೆ ಪಕ್ಕಾದ ನಗರಪದದಲ್ಲಿ ಆ ಪರಂಪರೆಯ ಪರಿಷ್ಕೃತ ಇಲ್ಲವೆ ಕೃತಕ ರೂಪವೇ ನಮಗೆ ಕಂಡೀತು. ಆದುದರಿಂದ ಜನಸಾಮಾನ್ಯರ ಜೀವನ ಹಾಗೂ ಜಾನಪದ ನಮಗಿಂದು, ಮರೆತು ಹೋದ ಮೌಲ್ಯಗಳನ್ನು ಪುನಃ ಸಂಶೋಧಿಸಿಕೊಳ್ಳುವ ಅಮೂಲ್ಯ ಆಕರಗಳಾಗಿವೆ. ಸಂಸ್ಕೃತಿಯ ಮೂಲಭೂತ ಅಂಶಗಳು ಜಾನಪದದಲ್ಲಿ ಎಂದು ನ್ಯಾಸಗೊಂಡಿರುತ್ತವೆಯೆಂಬುದಕ್ಕೆ ಥಿಯೋಡರ್ ಎಚ್. ಗ್ಯಾಸ್ಟರ್ ಹೇಳುವ ಈ ಮಾತುಗಳನ್ನು ಲಕ್ಷಿಸಬೇಕು. ಜಾನಪದವೆಂಬುದು ಜನತೆಯ ಪ್ರಜ್ಞಾಪೂರ್ವಕವಾಗಿಯೋ ಅಥವಾ ತನಗರಿವಿಲ್ಲದೆಯೋ ಕಾಪಾಡಿಕೊಂಡು ಬಂದಿರುವ ಸಾಂಸ್ಕೃತಿಕ ಭಾಗ. ಸಾರ್ವತ್ರಿಕವಾಗಿ ಚಲಾವಣೆಯಲ್ಲಿರುವ ನಂಬುಗೆ. ರೂಢಿ, ಪದ್ಧತಿ ಮತ್ತು ಆಚರಣೆಗಳಲ್ಲೂ ಪುರಾಣ, ಐತಿಹ್ಯ ಮತ್ತು ಆಯಾ ಜನತೆ ಸಾಮುದಾಯಿಕವಾಗಿ ಒಪ್ಪಿಕೊಂಡಿರುವ ಕಥೆಗಳಲ್ಲಿಯೂ ಆ ಜನರ ಸಮಷ್ಟಿಯಾದ ಮನೋಧರ್ಮ ಹಾಗೂ ಪ್ರತಿಭೆಯನ್ನು ಅಭಿವ್ಯಕ್ತ ಪಡಿಸುವ ಕಲೆ ಕಸಬುಗಳಲ್ಲಿಯೂ ಅದು ಜೀವಂತವಾಗಿ ಉಳಿದುಕೊಂಡಿರುತ್ತದೆ. ಜಾನಪದವು ಹೀಗೆ ಜನಸಾಮಾನ್ಯರ ಸಂಪ್ರದಾಯಗಳ ಭಂಡಾರವಾಗಿರುವುದರಿಂದ ಮತ್ತು ಅವರ ಮನೋಧರ್ಮದ ಸಮಗ್ರಗೊಂಡ ಘಟಕವಾಗಿರುವುದರಿಂದ ಮತ್ತು ಅವರ ಮನೋಧರ್ಮದ ಸಮಗ್ರಗೊಂಡ ಘಟಕವಾಗಿರುವುದರಿಂದ, ಲಕ್ಷಣಬದ್ಧ ಸಾಹಿತ್ಯ ಹಾಗೂ ಕಲೆಗಳಿಗೆ  ಅದು ನಿರಂತರ ಆಕರವೂ ಆಧಾರವೂ ಆಗಿ ಕಾರ್ಯ ಮಾಡುತ್ತದೆ. ಆದರೆ ಈ ಲಕ್ಷಣ ಬದ್ಧ ಸಾಹಿತ್ಯ ಹಾಗೂ ಕಲೆಗಳಿಂದದು ಭಿನ್ನವಾದುದು. ಏಕೆಂದರೆ ’ಜಾನಪದವು ಮೂಲತಃ ಜನತೆಯ ಒಡೆತನಕ್ಕೆ ಅಧೀನವಾದ, ಜನತೆಯಿಂದ ಹುಟ್ಟಿದ ಮತ್ತು ಜನತೆಗಾಗಿ ಇರುವ ಸೊತ್ತು ಹೀಗಿದ್ದುದರಿಂದ ನಮ್ಮ ಪರಂಪರೆ ಸಂಸ್ಕೃತಿ ಎಂದು ನಾವು ಈವರೆಗೆ ಕಟ್ಟಿಕೊಂಡು  ಬಂದಿರುವ ಚಿತ್ರವನ್ನು ಪುನರಾವಲೋಕನ ಮಾಡುವ ಸಂದರ್ಭವೀಗ ಇದೆಯನ್ನಬೇಕು. ಇದುವರೆಗೆ ನಾವು ನಮ್ಮ ನಾಡಿನ ಪರಂಪರೆಯನ್ನು ಕುರಿತು ಹೇಳುವಾಗ ಅರಮನೆ, ಗುರುಮನೆ, ಮೇಲುವರ್ಗ  – ವರ್ಣ – ಒಟ್ಟಿನಲ್ಲಿ ಶಿಷ್ಟವೆಂದು ಕರೆಯಲಾಗುವ ಸಮಾಜದ ಕೊಡುಗೆಯನ್ನೇ ಪ್ರಮುಖವಾಗಿ ಪರಿಗಣಿಸುತ್ತ ಬಂದಿದ್ದೇವೆ; ಇದು ನಮ್ಮ ಸಂಸ್ಕೃತಿಯ ಪಾಕ್ಷಿಕ ಚಿತ್ರಮಾತ್ರವಾದೀತೇ ಹೊರತು ಸಮಗ್ರ ಸ್ವರೂಪದ್ದಾಗಲಾರದು. ಶಿಷ್ಟ ಸಮಾಜ ನಿರ್ಮಿಸಿದ ಸಂಸ್ಕೃತಿಯು ಒಪ್ಪವಿಟ್ಟು ನುಣುಪುಗೊಳಿಸಿದ ಅಭಿಜಾತರೂಪ. ಅದರಲ್ಲಿ ವಿಶಾಲ ಜನಜೀವನದಲ್ಲಿ ಅಧಿಷ್ಠಿತವಾಗಿರುವ ಸಂಸ್ಕೃತಿಯ ಎಲ್ಲ ಸುಳುಹು ಹೊಳಹುಗಳು ಸ್ಥಳಾವಕಾಶ ಪಡೆದಿಲ್ಲ. ಸಂಸ್ಕೃತಿಯ ಈ ಅಭಿಜಾತ ರೂಪ ಉತ್ಸವಮೂರ್ತಿಯಿದ್ದಂತೆ. ಮೂಲ ವಿಗ್ರಹದ ವಿರಾಡ್ರೂಪ ದರ್ಶನವಾಗಬೇಕಾದರೆ ಜಾನಪದದ ಗರ್ಭಗುಡಿಯನ್ನೇ ನಾವು ಪ್ರವೇಶಿಸಬೇಕು. ಸುಪುಷ್ಟವಾದ ಇಂದಿನ ನಾಗರಿಕತೆಯಲ್ಲಿ ಬೆಳೆದು ನಿಂತಿರುವ ರಾಜಕೀಯ, ಸಾಮಾಜಿಕ,  ಧಾರ್ಮಿಕಾದಿ ಸಂಸ್ಥೆಗಳೂ ನೀತಿಸಂಹಿತೆಯೂ ದೇವರು, ಅರ್ಚನಾವಿಧಾನ, ಶಾಸ್ತ್ರ, ಪುರಾಣ, ಕಾವ್ಯ, ಕಲೆ ಮುಂತಾದವುಗಳೂ ಮೂಲತಃ ಜಾನಪದ ಬೇರಿನಿಂದಲೇ, ವಿಕಾಸಗೊಂಡಂತಹವು. ಉದಾಃ ಮರಣವನ್ನು ಒಲ್ಲದ, ಸಾವಿಲ್ಲದ, ಕೇಡಿಲ್ಲದ ಬದುಕಿನ ಸಹಜ ಬಯಕೆಯ ಆತ್ಮನ ಅಮರತ್ವ, ಪುನರ್ಜನ್ಮ ಮರಣೋತ್ತರ ಜೀವನ, ಪಿತೃಪೂಜೆಯಂತಹ ಧಾರ್ಮಿಕ ಆಧ್ಯಾತ್ಮಿಕ ಪರಿಕಲ್ಪನೆಗಳನ್ನು ಬೆಳೆಸಿದವು. ಹೀಗೆಯೇ ಪ್ರಾಣಿಲಾಂಛನ (Totemism) ಸರ್ವಚೈತನ್ಯಶ್ರದ್ಧೆ (animism) ಮೃತರ ಭಯ (Fear of the dead) ಮುಂತಾದವುಗಳು ನಮ್ಮ ಧಾರ್ಮಿಕ, ಆಧ್ಯಾತ್ಮಿಕ, ನೈತಿಕ ತತ್ವಗಳನ್ನೂ ಸಂಸ್ಕೃತಿಯನ್ನೂ ನಾನಾ ಬಗೆಯಾಗಿ ಬೆಳೆಸಿದವು. ಹೀಗಿದ್ದುದರಿಂದ ಜಾನಪದ ಅಧ್ಯಯನಕ್ಕೆ ಪ್ರಪಂಚದಲ್ಲೆಲ್ಲ ಇತ್ತೀಚೆ ಹೆಚ್ಚಿನ ಪ್ರಾಶಸ್ತ್ಯವುಂಟಾಗಿದೆ. ಈ ಅಧ್ಯಯನ ಇಂದು ಕೇವಲ ಒಂದು ಹವ್ಯಾಸಿ ವಿಲಾಸವಾಗಿ ಉಳಿದಿಲ್ಲ. ಜನತೆಯ ಸಂಸ್ಕೃತಿಯ ಬೇರುಗಳನ್ನು ಶೋಧಿಸುವ, ಅರಿತುಕೊಳ್ಳುವ ಮತ್ತು ಅಗತ್ಯವಾದುದನ್ನು ಉಳಿಸಿಕೊಳ್ಳುವ, ಅಳವಡಿಸಿಕೊಳ್ಳುವ, ಗಂಭೀರವಾದ ಕ್ರಿಯೆಯಾಗಿ ಪರಿಣಮಿಸಿದೆ.

ಜಾನಪದದಲ್ಲಿ ಮಾನವಜೀವನದ ಅತ್ಯಂತ ಪ್ರಾಚೀನತಮ ಅವಸ್ಥೆಯಿಂದ ತೊಟ್ಟು ಇಂದಿನವರೆಗಿನ ಸಮಷ್ಠಿರೂಪದ ಕಾಣ್ಕೆ ಅನುಭವಗಳು ಸಜೀವ ಪಡೆಯುಳಿಕೆಗಳಾಗಿ ಶೇಖರಣೆಗೊಂಡಿರುವುದನ್ನೂ (ಈ ಜಾನಪದೀಯ ಅಂಶಗಳು ಕಾಲ, ದೇಶ, ಜಾತಿ, ಜನಾಂಗ ಭಾಷೆ ಮುಂತಾದ ಪರಿಮಿತಿಗಳನ್ನು ದಾಟಿ ಜನಾಂಗದಿಂದ ಜನಾಂಗಕ್ಕೆ ಪಸರಿಸಿ ಒಂದು ವಿಧವಾದ ಸಾಂಸ್ಕೃತಿಕ ಸಂಬಂಧ, ಸಾಮಿಪ್ಯ ಮತ್ತು ಸಮಾಂತರತೆಗಳನ್ನು ಬೆಳೆಸಿರುವದನ್ನೂ ಗಮನಿಸಿದ ಪಾಶ್ಚಾತ್ಯ ವಿದ್ವಾಂಸರು ಈ ಅಧ್ಯಯನಕ್ಕೆ ಕಳೆದ ಸುಮಾರು ಇನ್ನೂರು ವರುಷಗಳ ಅವಧಿಯಲ್ಲಿ ವ್ಯಾಪಕ ಮತ್ತು ವೈಜ್ಞಾನಿಕ ಸ್ವರೂಪ ಕೊಟ್ಟು ಬೆಳಸಿದರು. ಈ ಎರಡು ಶತಮಾನಗಳಲ್ಲಿ ಇದು ಭಾಷಾ ಶಾಸ್ತ್ರಜ್ಞರು ಮಾನವಿಕಶಾಸ್ತ್ರಜ್ಞರು, ಪುರಾಣಶಾಸ್ತ್ರಜ್ಞರು, ಮನಃಶಾಸ್ತ್ರಜ್ಞರುಗಳ ಅಧ್ಯಯನಕ್ಕೊಳಪಟ್ಟಿತು. ಪ್ರಪಂಚದ ನಾನಾ ದೇಶಗಳಿಂದ ಜಾನಪದ ಸಾಮಗ್ರಿಯನ್ನು ಕಲೆ ಹಾಕಲಾಯಿತಲ್ಲದೆ ಶಾಸ್ತ್ರೀಯ ಅಧ್ಯಯನದ ವಿಧಾನಗಳನ್ನು ರೂಪಿಸಲಾಯಿತು. ಜಾನಪದವನ್ನು ಅಖಂಡ ಮಾನವ ಸಮಾಜದ ಅಧ್ಯಯನವಾಗಿ ಅಂತರ್ ರಾಷ್ಟ್ರೀಯಗೊಳಿಸಲಾಯಿತು.

ಭಾರತದಲ್ಲಿಯೂ ಜಾನಪದ ಅಧ್ಯಯನ ಮತ್ತು ಸಂಕಲನದ ಕಾರ್ಯ ಆರಂಭವಾದುದು ಕಳೆದ ಶತಮಾನದಲ್ಲಿಯೇ. ಆದರೂ ಅದು ಮೊದಲು ಸಾಗಿದುದು ಮಂದಗತಿಯಲ್ಲಿ. ಭಾರತದ ಧರ್ಮ, ಚರಿತ್ರೆ, ಭಾಷೆ, ಸಾಹಿತ್ಯದ ರಂಗದಲ್ಲಿ ಸಂಸ್ಮರಣೀಯ ಕಾರ್ಯವೆಸಗಿದ ಪಾಶ್ಚಾತ್ಯ ವಿದ್ವಾಂಸರು ಮತ್ತು ಮಿಶನರಿಗಳು ಈ ಕೆಲಸಕ್ಕೆ ಮೊದಲು ಮಾಡಿದವರು. ಕರ್ನಾಟಕದಲ್ಲಿಯೂ ಕಳೆದ ಶತಮಾನದಲ್ಲಿ ಪಾಶ್ಚಾತ್ಯ ವಿದ್ವಾಂಸರೆ ಈ ಅಧ್ಯಯನಕ್ಕೆ ನಾಂದಿ ಮಾಡಿದರು. ಜಾನ ಲೇಡನ್, ಗೋವರ್, ಫ್ಲೀಟ್, ಕಿಟೆಲ್ ಮುಂತಾದವರು ಜನಪದ ಲಾವಣಿ, ಗಾದೆ, ಆನುಷಂಗಿಕವಾಗಿ ಇತರ ಜನಪದ ರೂಢಿ, ಸಂಪ್ರದಾಯ, ಆಚರಣೆಗಳನ್ನು ಸಂಕಲಿಸಿದರು. ಆದರೆ  ಈ ಪ್ರಾರಂಭದ ಚಟುವಟಿಕೆಗಳು ಕನ್ನಡ ಜನಪದ ಸಾಹಿತ್ಯ ಮತ್ತು ಇತರ ಜಾನಪದ ಪ್ರಕಾರಗಳ ಅಧ್ಯಯನಕ್ಕೆ ನಿರಂತರವಾದ ಸ್ಫೂರ್ತಿ ಹಾಗೂ ಪ್ರೇರಣೆಗಳನ್ನಿತ್ತವೆಂದೂ ಹೇಳಲುಬಾರದು. ಕನ್ನಡ ಸುಶಿಕ್ಷಿತರು ಮತ್ತು ಸಾಹಿತ್ಯೋಪಾಸಕರಲ್ಲಿ ಜನಪದರು ಮತ್ತು ಅವರ ಸಾಹಿತ್ಯದ ಬಗೆಗೆ ವ್ಯಾಪಕವಾದ ಆಕರ್ಷಣೆ, ಆಸಕ್ತಿ, ಗೌರವಾದರಗಳುಂಟಾದುದು ೧೯೩೦ರಿಂದದೀಚೆಗೆ. ಉತ್ತರ ಕರ್ನಾಟಕದ (ವಿಜಾಪುರ ಜಿಲ್ಲೆಯ) ಹಳೆ ಸಂಗತಿಯ ಗೆಳೆಯರ ಗುಂಪಿನವರು ಹೊರತಂದ ಗರತಿಯ ಹಾಡು (೧೯೩೧, ಜೀವನ ಸಂಗೀತ ೧೯೩೩ ಮತ್ತು ಮಲ್ಲಿಗೆ ದಂಡೆ ೧೯೩೫ ಎಂಬ ಹಾಡಿನ ಸಂಕಲನಗಳು ಜನಪದ ಸಾಹಿತ್ಯದ ಸವಿ ಸೊಗಸು ಶಕ್ತಿಗಳೆಡೆಗೆ ವಿದ್ವತ್ ಪ್ರಪಂಚದ ತೀವ್ರ ಆಸಕ್ತಿಯನ್ನು ಸೆಳೆದವು. ಈ ಸಂಕಲನಗಳು ಪಡೆದ ಜನಪ್ರಿಯತೆ ಮತ್ತು ಉಂಟು ಮಾಡಿದ ಪರಿಣಾಮದ ದೃಷ್ಟಿಯಿಂದ ಇವು ಕನ್ನಡ ಜನಪದ ಸಾಹಿತ್ಯಾಧ್ಯಯನದ ಮಾರ್ಗದಲ್ಲಿ ಮಹತ್ವದ ಮೈಲುಗಲ್ಲುಗಳೆನ್ನಬೇಕು. ಜಾನಪದದಲ್ಲಿ ಹೊಸಯುಗ ಕಾಂಡಕ್ಕೆ ಹುಟ್ಟು ಹಾಕಿದ ಶ್ರೇಯಸ್ಸು ಇವುಗಳನ್ನು ಸಂಕಲಿಸಿದ ಶ್ರೀ ಹಲಸಂಗಿ ಚನ್ನಮಲ್ಲಪ್ಪ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣ, ಪಿ. ದೂಲಾ ಅವರಿಗೂ ಮತ್ತು ಈ ಸಾಹಿತ್ಯವನ್ನು ಕುರಿತು ಆ ಸರಿಸುಮಾರಿನಲ್ಲಿ ಪ್ರಚಾರ, ಭಾಷಣ, ಲೇಖನಗಳನ್ನು ನೀಡಿದ ಶ್ರೀಯುತರುಗಳಾದ ಬಿ.ಎಂ. ಶ್ರೀ, ಮಾಸ್ತಿ, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಗೊರೂರು ರಾಮಸ್ವಾಮಿ ಅಯ್ಯಂಗಾರ, ದೇವುಡು, ಅರ್ಚಿಕ್, ಬಿ. ರಂಗಸ್ವಾಮಿ, ಮತ್ತಿಘಟ್ಟಿ ಕೃಷ್ಣಮೂರ್ತಿ ಮುಂತಾದ ಆದ್ಯರಿಗೂ ಸಲ್ಲುತ್ತದೆನ್ನಬೇಕು. ಈ ಹಾಡುಗಳಲ್ಲಿಯ ಕಾವ್ಯ ಸೌಂದರ್ಯ, ಸಂಗೀತದ ವೈವಿಧ್ಯ, ಮಾಧುರ್ಯ, ಜನಪದ ಜೀವನದ ಸರಸ ವಿರಸಗಳ ಆತ್ಮೀಯ ನೋಟ, ಸಂಸ್ಕೃತಿಯ ರೂಪರೇಷೆ ಜನಮನವನ್ನು ಸೆಳೆದವು. ಜನಪದ ಸಾಹಿತ್ಯದಲ್ಲಿಯೂ ಕಣ್ತೆರೆದು ನೋಡುವಂತಹ, ಸವಿಯುವಂತಹ ಸತ್ವವಿದೆಯೆಂಬ ಹೊಸ ಅರಿವನ್ನು ಮೂಡಿಸಿದವು, ಬಲಪಡಿಸಿದವು. ಈ ವಾತಾವರಣದ ಪ್ರಭಾವದಿಂದಾಗಿ ಮುಂದಿನ ದಶಕದಲ್ಲಿ ಕರ್ನಾಟಕದಾದ್ಯಂತ ಅನೇಕ ಜನರು ಜನಪದ ಸಾಹಿತ್ಯ ಸಂಕಲನ ಕಾರ್ಯಕ್ಕೆ ಸ್ವಯಂಸ್ಫೂರ್ತಿಯಿಂದ ಮುಂದೆ ಬಂದರು. ಜನಪದ ಸಾಹಿತ್ಯಕ್ಕೆ ಪ್ರತ್ಯೇಕವಾದ ಗೋಷ್ಠಿಗಳು ಸಾಹಿತ್ಯ ಸಮ್ಮೇಳನದಲ್ಲಿ ನಡೆದುವು. ಇತರೆಡೆ ಕೂಡ ಜನಪದ ಸಾಹಿತ್ಯ ಮತ್ತು ಸಂಸ್ಕೃತಿಗಳು ಸಾಹಿತ್ಯವೇದಿಕೆಗಳಲ್ಲಿ ಉಪನ್ಯಾಸದ ವಿಷಯಗಳಾಗಿ ಜನಪ್ರಿಯಗೊಂಡವು. ಅಂತು ೧೯೩೦ ರಿಂದ ೧೯೫೦ರ ಅವಧಿ ಕನ್ನಡ ಜನಪದ ಸಾಹಿತ್ಯದ ಬಗೆಗೆ ಅದರಲ್ಲೂ ವಿಶೇಷವಾಗಿ ಹಾಡುಗಳ ಬಗೆಗೆ ಭಾವನಾಯುತ ಆವೇಶ, ಪ್ರಚಾರ, ಪ್ರಶಂಸೆಗಳು ವೆಗ್ಗಳವಾಗಿ ಹರಿದ ಕಾಲವಾಗಿದ್ದಿತೆನ್ನಬೇಕು. ಈ ಅವಧಿಯಲ್ಲಿ ಕನ್ನಡ ಜನಪದ ಕಾವ್ಯ ಹಾಗೂ ಜೀವನ ಸಂಸ್ಕೃತಿ, ಶಿಷ್ಟ ಸಾಹಿತ್ಯದ ಮೇಲೂ ತನ್ನ ಪ್ರಭಾವ ಬೀರಿದವು. ಅಭೂತಪೂರ್ವ ಕಾಂತಿ ಚೈತನ್ಯಗಳನ್ನು ತುಂಬಿದವು. ಅಲ್ಲಿ ಹೊಸ ಆಯಾಮವನ್ನುಂಟು ಮಾಡಿದವು.

ಮುಂದಿನ ಒಂದೂವರೆ ದಶಕದಲ್ಲಿ ಸಂಕಲನ ಕಾರ್ಯ – ಆಗಲೂ ಹೆಚ್ಚಾಗಿ ಹಾಡುಗಳ ಸಂಕಲನ ಕಾರ್ಯವೇ – ಇನ್ನೂ ವಿಸ್ತಾರವಾಯಿತಾದರೂ ಜನಪದ ಸಾಹಿತ್ಯವನ್ನು ಹೆಚ್ಚು ಅರ್ಥಪೂರ್ಣವಾಗಿ ವಿಶ್ಲೇಷಿಸುವ, ಬೆಲೆಗಟ್ಟುವ ಕೆಲಸವೂ ಬೆಳೆದು ಬಂದಿತು. ಈ ಅವಧಿಯ ಸಂಕಲನಕಾರರಲ್ಲಿ ದಿ. ಡಾ. ಗದ್ದಗಿಮಠ ಕನ್ನಡ ಜಾನಪದ ಗೀತಗಳು ಎಂಬ ವಿಷಯದ ಮೇಲೆ ಸಂಶೋಧನಾಧ್ಯಯನ ನಡೆಸಿ ಜಾನಪದದಲ್ಲಿ ಪ್ರಥಮ ಪಿ.ಎಚ್.ಡಿ. ಪಡೆದರು. ಕನ್ನಡದಲ್ಲಿ ಜಾನಪದವು ಪಿ.ಎಚ್.ಡಿ. ಯಂತಹ ಉಚ್ಚಪದವಿಗೂ ಅರ್ಹವಾದ ವಿಷಯವೆಂಬ ಗೌರವದ ಸ್ಥಾನವನ್ನು ಪ್ರಥಮ ಬಾರಿಗೆ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುವಂತಹದು. ಅಲ್ಲಿಂದೀಚೆ ಸುಮಾರು ೧೨ ಜನ ಜಾನಪದದಲ್ಲಿ ಆ ಪದವಿಯನ್ನು ಪಡೆದಿದ್ದಾರೆ.

೧೯೬೫ದಿಂದೀಚೆ ನಮ್ಮ ಜಾನಪದ ಅಧ್ಯಯನಕ್ಕೆ ಸರ್ವಕಾಲವೆನ್ನಬೇಕು. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಅಧ್ಯಯನ, ಸಂಶೋಧನಾಧ್ಯಯನ ವಿಚಾರ ಸಂಕಿರಣ, ಪ್ರಕಟನೆಗಳ ಅವಕಾಶವುಂಟಾಗಿ ಸುಸಂಘಟಿತ ಅಧ್ಯಯನ ಚಾಲನೆ ಸಿಕ್ಕಿದೆ. ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ಕ್ರಮವಾಗಿ ದಕ್ಷಿಣ ಮತ್ತು ಉತ್ತರ ಕರ್ನಾಟಕದಲ್ಲಿ ಜಾನಪದ ಅಧ್ಯಯನದಲ್ಲಿಂದು ಬಹಳ ಮುಖ್ಯವಾದ ಕಾರ್ಯಮಾಡಿಕೊಂಡು ಬಂದಿವೆ. ಡಾ. ಅರ್.ಸಿ. ಹೀರೇಮಠ, ಡಾ.ದೇ. ಜವರೇಗೌಡ ಮತ್ತು ಡಾ.ಹಾ.ಮಾ. ನಾಯಕ ಅವರ ಪ್ರಗತಿಪರವಾದ ಮುನ್ನೋಟದ ಸಂಘಟನಾಶಕ್ತಿಯ ಚಾಲನೆಯಿಂದಾಗಿ ಈ ಎರಡೂ ವಿಶ್ವವಿದ್ಯಾಲಯಗಳಲ್ಲಿ ಜಾನಪದ ಅಧ್ಯಯನ ವಿಭಾಗಗಳು ವಿಶಾಲವಾಗಿ ಬೆಳೆಯುತ್ತಲಿವೆ. ಡಾ. ಸುಂಕಾಪುರ ಮತ್ತು ಡಾ. ಜೀ. ಶಂ. ಪರಮಶಿವಯ್ಯ ಜಾನಪದದಲ್ಲಿ ವೈವಿಧ್ಯಪೂರ್ಣವಾದ, ವಿಪುಲವಾದ ಸಾಹಿತ್ಯವನ್ನು ಸ್ವತಃ ಹೊರತಂದಿರುವವರಲ್ಲದೆ ಬಹು ಸಂಖ್ಯೆಯ ತರುಣರನ್ನು ಜಾನಪದ ದೀಕ್ಷೆಯನ್ನಿತ್ತು ಕಾರ್ಯಪ್ರವೃತ್ತಗೊಳಿಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಡಾ. ಬಿ.ಬಿ. ಹೆಂಡಿ, ಡಾ. ಎಂ.ಜಿ. ಬಿರಾದಾರ ಹಾಗೂ ಡಾ.ಎಂ.ಎಸ್. ಲಠ್ಠೆ ಅವರ ನೇತೃತ್ವದಲ್ಲಿ ವಿಶ್ವ ವಿದ್ಯಾಲಯದ ಧನ ಸಹಾಯ ಆಯೋಗ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ನೆರವಿನಿಂದ ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿಯ ಜನಪದ ಹಾಡು ಮತ್ತು ಕತೆಗಳನ್ನು ಸಂಗ್ರಹಿಸಲಾಗಿದೆ. ಗುಲಬರ್ಗಾ ವಿಶ್ವವಿದ್ಯಾಲಯವು ಆ ಸಾಮಗ್ರಿಯ ಪ್ರಕಟನೆಗಾಗಿ ಅನುವು ಮಾಡಿಕೊಟ್ಟಿದೆ. ಹರದೇಶಿ ನಾಗೇಶಿ ಹಾಡುಗಳ ಬೃಹತ್ ಸಂಪುಟವೊಂದು ಇಷ್ಟರಲ್ಲಿಯೇ ಪ್ರಕಟವಾಗಲಿದೆ. ವೈಯಕ್ತಿಕವಾಗಿ ಜನಪದ ಸಾಹಿತ್ಯ ಹಾಗೂ ಜಾನಪದವನ್ನು ಕುರಿತು ಮಹತ್ವಪೂರ್ಣ ಕಾರ್ಯ ಮಾಡಿದ  ಡಾ. ಶಿವರಾಮ ಕಾರಂತ, ಡಾ. ಶಂ.ಬಾ. ಜೋಶಿ, ಡಾ. ಎಲ್.ಆರ್. ಹೆಗಡೆ ಅವರ ಲೇಖನ, ಭಾಷಣ ಹಾಗೂ ಕೃತಿಗಳೂ ಹೊಸ ಬಿತ್ತೇವ ಹೊಲಕೆಲ್ಲ, ಸುವರ್ಣಸಂಚಯ, ಜಾನಪದ ಸಾಹಿತ್ಯ ದರ್ಶನ ಕರ್ನಾಟಕ ಜಾನಪದವೇ ಮುಂತಾದ ಸಂಪುಟಗಳೂ ಬಹು ಸಂಖ್ಯೆ ಲೇಖಕರನ್ನೂ ಅಮೂಲ್ಯವಾದ ಸಾಮಗ್ರಿಯನ್ನೂ ಹೊರತಂದಿವೆ, ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠ, ೧೯೭೨ರಿಂದ ಪ್ರಾರಂಭಿಸಿ ಸತತ ಈ ಹತ್ತು ವರುಷಗಳವರೆಗೆ ನಡೆಸಿಕೊಂಡು ಬಂದಿರುವ ಅಖಿಲ ಕರ್ನಾಟಕ ಜಾನಪದ ಸಮ್ಮೇಳನಗಳು ಮತ್ತು ಅವುಗಳ ಫಲಶೃತಿಯಾಗಿ ಹೊರತಂದ ’ಜಾನಪದ ಸಾಹಿತ್ಯದರ್ಶನ’ ಸಂಪುಟಗಳೂ ಕರ್ನಾಟಕ ಜಾನಪದ ಅಧ್ಯಯನದ ಚರಿತ್ರೆಯಲ್ಲಿ ಮಹತ್ವಪೂರ್ಣ ದಾಖಲೆಗಳಾಗಿವೆ. ಈ ಸಮ್ಮೇಳನಗಳ ಗೋಷ್ಠಿಗಳಲ್ಲಿ ಮಂಡಿಸಿದ ಲೇಖನಗಳು ಮುಂಬರುವ ಸಂಶೋಧನಾಧ್ಯಯನಕ್ಕೆ ನೆರವಾಗಬಲ್ಲ ಮಹತ್ವಪೂರ್ಣ ಆಧಾರ ಸಾಮಗ್ರಿಯಾಗುವುದರಲ್ಲಿ ಸಂದೇಹವಿಲ್ಲ. ಈ ಜಾನಪದ ಸಮ್ಮೇಳನಗಳಿಂದಾಗಿಯೇ ಉತ್ತರ ಕರ್ನಾಟಕದಲ್ಲಿ ಅನೇಕ ಜನ ತರುಣ ವಿದ್ವಾಂಸರು ಜಾನಪದ ಸಂಶೋಧನಾಧ್ಯಯನದಲ್ಲಿ ಸ್ಫೂರ್ತಿ ಪಡೆದು ಮೌಲಿಕವಾದ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಹೊಸ ತಲೆಮಾರಿನವರಲ್ಲಿ ಶ್ರೀಯುತರುಗಳಾದ ಎಸ್.ಎಂ.ವಿ. ಸ್ವಾಮಿ, ಕಲಬುರ್ಗಿ, ಕೆ.ಜಿ. ಶಾಸ್ತ್ರಿ, ಕೊಟ್ಟ್ರಶೆಟ್ಟಿ, ಇಮ್ರಾಪುರ, ಹಕಾರಿ ಮಾಡ್ತ, ಬಿ.ವ್ಹಿ. ಮಲ್ಲಾಪುರ, ಗೋವಿಂದರಾಜ ಗಿರಡ್ಡಿ, ಎಂ.ಜಿ. ಬಿರಾದಾರ, ಎಂ.ಎಸ್. ಲಠ್ಠೆ, ಜ್ಯೋತಿ ಹೊಸೂರು, ನಿಂಗಣ್ಣ ಸಣ್ಣಕ್ಕಿ, ಚನ್ನಣ್ಣ ವಾಲೀಕಾರ, ಮಲಶೆಟ್ಟಿ, ವ್ಹಿ.ಎಸ್. ದಂಡೆ ಉತ್ತರ ಕರ್ನಾಟಕದಲ್ಲಿ ಬೆರಳಿಟ್ಟು ಗುರುತಿಸಬಹುದಾದಂತಹ ಕಾರ್ಯ ಮಾಡಿದವರಲ್ಲಿ ಗಣ್ಯರು.  ತೀ. ನಂ. ಶ್ರೀಕಂಠಯ್ಯ, ಡಾ. ಜಿ.ಎಸ್. ಶಿವರುದ್ರಪ್ಪ, ಚಂದ್ರಶೇಖರ ಕಂಬಾರ ಮತ್ತು ಸಿ.ಪಿ.ಕೆ. ಅವರು, ಉತ್ತರ ಕರ್ನಾಟಕದಲ್ಲಿ ಡಾ. ಎಂ.ಎಸ್. ಸುಂಕಾಪುರ, ಶ್ರೀ ಸಿ.ಎಸ್. ಕಣವಿ, ಕೆ.ಡಿ. ಕುರ್ತಕೋಟಿಯವರೂ ಹೆಸರಿಸಬೇಕಾದವರು. ಇವರಲ್ಲದೆ ಶ್ರೀಯುತರುಗಳಾದ ಡಾ. ಚಿದಾನಂದ ಮೂರ್ತಿ, ರಾಗೌ, ಅಚ್ಚಪ್ಪ, ಕ್ಯಾತನಹಳ್ಳಿ ರಾಮಣ್ಣ, ಗುಂಡ್ಮಿ ಚಂದ್ರಶೇಖರ ಐತಾಳ, ಕಾಳೇಗೌಡ ನಾಗವಾರ, ತೀ.ನಂ. ಶಂಕರನಾರಾಯಣ, ಬಸವರಾಜ ನೆಲ್ಲಿಸರ, ಲಕ್ಕಪ್ಪಗೌಡ, ವಿವೇಕ ರೈ, ಸಿದ್ಧಲಿಂಗಯ್ಯ ಮುಂತಾದವರು ವಿದ್ವತ್ಪೂರ್ಣ ಲೇಖನ, ಪ್ರಸ್ತಾವನೆಗಳನ್ನು ಬರೆದವರು.

ಜಾನಪದವು ಹೀಗೆ ವಿಶ್ವವಿದ್ಯಾಲಯಗಳನ್ನು ಪ್ರವೇಶಿಸಿದಂತೆ ಇತ್ತೀಚಿನ ವರುಷಗಳಲ್ಲಿ ಸ್ಥಾಪಿತವಾಗಿರುವ ಕರ್ನಾಟಕ ಜಾನಪದ ಪರಿಷತ್ತು, ಎಚ್.ಎಲ್. ನಾಗೇಗೌಡರ ಜಾನಪದ ಟ್ರಸ್ಟು, ರಾಜ್ಯ ಜಾನಪದ ಆಕಾಡೆಮಿಯಂತಹ, ಆ ಕೆಲಸಕ್ಕೆ ಮೀಸಲಾದ ಸಂಸ್ಥೆಗಳ ಮೂಲಕವೂ ಆಕಾಶವಾಣಿ, ಕನ್ನಡ ಸಾಹಿತ್ಯ ಪರಿಷತ್ತುಗಳ ಮೂಲಕವೂ ಜಾನಪದ ಚಟುವಟಿಕೆಗಳಿಗೆ ವಿಫುಲ ಪ್ರೋತ್ಸಾಹ ದೊರೆಯುವಂತೆ ವಿಚಾರ ಸಂಕಿರಣಗಳು, ಕಾಲಮೇಳಗಳು, ಕಮ್ಮಟಗಳು ಜಾನಪದ ಕಲಾವಿದರಿಗೆ ಮಾಸಾಶನ, ಸಂಭಾವನಾದಿ ಪುರಸ್ಕಾರ. ಹೀಗೆ ಹಿಂದೆಂದೂ ಕಾಣದ ವಿಧಾಯಕ ಕಾರ್ಯಗಳು ನಡೆಯತೊಡಗಿವೆ. ಹಿಂದೆ ಹತ್ತೆಂಟು ಜನರು ಮಾತ್ರ ಕೆಲಸ ಮಾಡುತ್ತಿದ್ದ ಪರಿಸ್ಥಿತಿ ಈಗ ಹೋಗಿದೆ. ನೂರಾರು ಜನ ಈ ಕ್ಷೇತ್ರಕ್ಕೆ ಬಂದಿದ್ದಾರೆ. ಜನಪದ ಸಾಹಿತ್ಯ ಕೃತಿಗಳೂ ರಾಶಿರಾಶಿಯಾಗೀ ಹೊರಬಂದಿವೆ. ಅಂತೂ ಈಗ ೫೦ ವರ್ಷಗಳು ಹಿಂದೆ ಹೊತ್ತಿಸಿದ ಜಾನಪದ ಜ್ಯೋತಿಯನ್ನು ನಿರಂತರವಾಗಿ ಸಾಗಿಸಿಕೊಂಡು ಹೋಗಬಲ್ಲ ಢಾಳವಾಗಿ ಬೆಳಗಿಸಬಲ್ಲ ಹೊಸ ತಲೆಮಾರಿನ ತರುಣ ತಂಡ ಸಮರ್ಥವಾಗಿ ಬೆಳೆದು ಬರುತ್ತಿದೆಯೆಂಬುದು ಸಂತೋಷವನ್ನುಂಟು ಮಾಡುವ ವಿಷಯವೆನ್ನಬೇಕು.

ಜಾನಪದ ಕ್ಷೇತ್ರದಲ್ಲಿ ಇದುವರೆಗೆ ನಾವು ಗೈದ ಸಾಧನೆಯ ಸಂಕ್ಷಿಪ್ತ ಹಿನ್ನೋಟವಿದು. ಕಂಡುಗವನ್ನು ಬಳ್ಳದಲ್ಲಿ ಅಳೆದಂತೆ. ಈ ಹಕ್ಕಿ ನೋಟದಲ್ಲಿ ಸಿಕ್ಕದೆ ಇನ್ನೂ ಎಷ್ಟೋ ಮಹನೀಯರ ಹೆಸರುಗಳು, ಗ್ರಂಥಗಳು, ಚಟುವಟಿಕೆ, ಸಾಧನೆಗಳು ಉಳಿದಿರುವುದು ನನಗೂ ಗೊತ್ತು. ಸ್ಥಳಾಭಾವ, ಸಮಯಾಭಾವದಿಂದ ಹಾಗೆ ಉಳಿದಿದೆಯಲ್ಲದೆ ಅವರ ಬಗೆಗೆ ನಮಗಿರುವ ಅಜ್ಞಾನ ಅಥವಾ ಗೌರಾವಾಭಾವದಿಂದಲ್ಲವೆಂದು ನಮ್ರವಾಗಿಲ್ಲಿ ನಿವೇದಿಸಿಕೊಳ್ಳುತ್ತಿದ್ದೇನೆ.

ಈವರೆಗಿನ ನಮ್ಮ ಸಾಧನೆಯ ವೈಶಿಷ್ಟ್ಯಗಳಾವುವೆಂಬುದನ್ನು ಗುರುತಿಸುವುದರ ಜೊತೆಗೆ ಮುಂದೆ ನಾವು ಮಾಡಬೇಕಾದ ಕಾರ್ಯ ಸ್ವರೂಪವನ್ನು ಕುರಿತು ಇಲ್ಲಿ ಒಂದೆರಡು ಮಾತುಗಳನ್ನು ಆಲೋಚಿಸುವುದು ಯುಕ್ತವಾಗಿದೆ.

ನಮ್ಮ ಪೂರ್ವದ ತಲೆಮಾರಿನವರು ಜನಪದ ಸಾಹಿತ್ಯದ ಮೂಲಕ ಜಾನಪದದಲ್ಲಿ ಪದಾರ್ಪಣ ಮಾಡಿದರು. ಅದರಲ್ಲಿಯೂ ಹೆಚ್ಚಾಗಿ ಜಾನಪದ ಹಾಡುಗಳಲ್ಲಿಯ ಸಾಹಿತ್ಯ ಹಾಗೂ ಜೀವನ ಸೌಂದರ್ಯ ಅವರನ್ನು ಮಂತ್ರ ಮುಗ್ಧಗೊಳಿಸಿತ್ತು. ಮುಂದಿನ ತಲೆಮಾರಿನವರೂ ಸಹ ಸಾಹಿತ್ಯಿಕ ಹಿನ್ನೆಲೆಯವರೆ ಆಗಿದ್ದುದರಿಂದ ನಮ್ಮ ಇದುವರೆಗಿನ ಜಾನಪದ ಕೃಷಿಯಲ್ಲಿ ವಾಚಕ ಭಾಗದ ಮೇಲೆಯೆ ಹೆಚ್ಚಿನ ಅವಧಾರಣೆ ಬಿದ್ದಿದೆ. ಹಾಡು, ಕಥೆ, ಗಾದೆ, ಒಗಟು, ಒಡಪುಗಳ ಸಂಕಲನಗಳೂ ಸಣ್ಣಾಟ, ದೊಡ್ಡಾಟ, ಯಕ್ಷಗಾನ ಕೃತಿಗಳೂ ಹೊರಬಂದಿವೆ. ಈ ಎಲ್ಲ ಪ್ರಕಾರಗಳಲ್ಲಿ ಹಾಡುಗಳ ಪ್ರಕಟನೆಯು ಹೆಚ್ಚು ಪ್ರಮಾಣದಲ್ಲಿದ್ದು, ಅನಂತರ ಕಥೆಗಳದು. ಮೊದಲಿನಿಂದಲೂ ಹಾಡುಗಳ ಬಗೆಗೆ ನಡೆದಷ್ಟು ವಿಮರ್ಶೆ ಇನ್ನುಳಿದ ಪ್ರಕಾರಗಳ ಬಗೆಗೆ ಬೆಳೆದು ಬಂದಿಲ್ಲ. ಇತ್ತೀಚೆ ಕತೆಗಳನ್ನು ಕುರಿತಾದ ಶಾಸ್ತ್ರೀಯ ಪರಾಮರ್ಶೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಬಹುದೊಡ್ಡ ಪ್ರಮಾಣದಲ್ಲಿ  ಜನಮನವನ್ನು ರಂಜಿಸಿದ ಮತ್ತು ನಾನಾ ಕಲೆಗಳ ಸಂಗಮವಾದ ಬಯಲಾಟಗಳ ವಿಷಯದಲ್ಲಿ ನಾವು ಮಾಡಿದ ಕಾರ್ಯ ತೀರಾ ಕಡಿಮೆ. ಯಕ್ಷಗಾನವನ್ನು ಕುರಿತಾದ ಡಾ. ಕಾರಂತರ ಪರಾಮರ್ಶನವನ್ನುಳಿದರೆ ದೊಡ್ಡಾಟ, ಸಣ್ಣಾಟಗಳ ಬಗೆಗೆ ಆದ ವಿಮರ್ಶನ ಕಾರ್ಯ ಬಹುಮಟ್ಟಿಗೆ ತುಂಡು ತುಣುಕು. ಜಾನಪದದ ಇತರ ಪ್ರಕಾರಗಳ ರೂಢಿ. ಸಂಪ್ರದಾಯ, ನಂಬುಗೆ, ಆಚರಣೆ ಸಂಗೀತ, ನೃತ್ಯ, ಚಿತ್ರ, ಶಿಲ್ಪಿ, ಮುಂತಾದವುಗಳ ಸೀಮೆಯಲ್ಲಿ ನಾವಿನ್ನೂ ಹುದುಗಿಕೊಂಡು ಹೆಜ್ಜೆ ಇಡುತ್ತಿದ್ದೇವೆ. ಜಾನಪದದಲ್ಲಿ ಈಗ ಕೆಲಸ ಮಾಡುತ್ತಿರುವ ನಮ್ಮಲ್ಲಿ ಬಹು ಜನರಿಗೆ ಸಾಹಿತ್ಯೇತರವಾದ ಈ ಕಲೆಗಳಲ್ಲಾಗಲಿ ಮಾನವಿಕಾದಿ ಶಾಸ್ತ್ರಗಳಲ್ಲಾಗಲಿ ತಕ್ಕಷ್ಟು ಪರಿಶ್ರಮವಿಲ್ಲ. ಜಾನಪದವು ಅನೇಕ ಕಲೆ, ಶಾಸ್ತ್ರಗಳ ಆಂತರಿಕ ಸಂಬಂಧವುಳ್ಳ ಕ್ಷೇತ್ರ. ಆದುದರಿಂದ ಈ ಹಿಂದಿನಂತೆ ಮುಂದೆಯೂ ಕೂಡ ನಾವು ಸಾಹಿತ್ಯಕ ಭಾಗಕ್ಕಷ್ಟೆ ಅಂಟಿಕೊಂಡರೆ ಸಾಲದು. ಸಂಬಂಧಿಸಿದ ವಿವಿಧ ಕಲೆ ಶಾಸ್ತ್ರಗಳಲ್ಲಿ ಪರಿಣಿತರಾದ ಕಾರ್ಯಕರ್ತರನ್ನು ಈ ಕ್ಷೇತ್ರಕ್ಕೆ ಬರಮಾಡಿಕೊಳ್ಳಬೇಕು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಂತಹ ದಿಟ್ಟ ಹೆಜ್ಜೆಯನ್ನಿಡುತ್ತಿರುವುದು ಸಂತಸದ ವಿಷಯ. ಗದುಗಿನಲ್ಲಿ ನಡೆದ ಸಮ್ಮೇಳನದಿಂದಾರಂಭಿಸಿ ಈ ಹತ್ತನೆಯ ಸಮ್ಮೇಳನದವರೆಗೆ ಸಾಹಿತ್ಯೇತರ ವಿಷಯಗಳ ಚರ್ಚೆಯನ್ನು ಇಟ್ಟುಕೊಳ್ಳುತ್ತ ಬರಲಾಗಿದೆ. ಈ ಉಪಕ್ರಮ ಸಾಹಿತ್ಯೇತರ ಕ್ಷೇತ್ರದ ವಿದ್ವಾಂಸರು, ಜಾನಪದದಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸಲು ಪ್ರೇರಣೆಯನ್ನುಂಟು ಮಾಡಿದೆ. ಅಲ್ಲದೆ, ಕೇವಲ ಸಾಹಿತ್ಯಕ ಆಸಕ್ತಿಹೊಂದಿದ್ದ ಜಾನಪದ ಅಧ್ಯಯನಕಾರರು ಇತರ ಸಂಬಂಧಿತ ವಿಷಯಗಳಲ್ಲಿಯೂ ಆಸಕ್ತಿ ತಾಳಲು ಅವಕಾಶವುಂಟಾಗಿದೆ. ಈ ಸಲದ ಸಮ್ಮೇಳನದಲ್ಲಿ ಅದು ಕಂಡು ಬರುತ್ತದೆ. ಮುಂದಿನ ಜಾನಪದಜ್ಞರು ಈ ವಿವಿಧ ಕ್ಷೇತ್ರಗಳಲ್ಲಿ ಆಳವಾದ ಪರಿಜ್ಞಾನವನ್ನು ಸಂಪಾದಿಸದೆ ಹೋದಲ್ಲಿ ನಮ್ಮ ಸಂಶೋಧನೆ, ನಿರ್ಣಯಗಳು ಅಲ್ಪಕಾಲದಲ್ಲೆ ಆಳವಿಲ್ಲದಾಗುವ ಭಯ ತಪ್ಪಿದುದಲ್ಲ. ಆದುದರಿಂದ ನಮ್ಮ ಅಧ್ಯಯನವು ವ್ಯಾಪಕವೂ ನಾನಾ ಮುಖವೂ ಆಗಬೇಕಾದುದು ಅತ್ಯಂತ ಅಗತ್ಯ.

ಹೀಗೆ ವಿವಿಧ ಶಾಸ್ತ್ರಗಳಲ್ಲಿ ಪರಿಜ್ಞಾನ ಬೆಳೆಸಿಕೊಳ್ಳುವಲ್ಲಿ ಒಂದು ಎಚ್ಚರಿಕೆಯ ಮಾತನ್ನು ಮರೆಯಲಾಗದು. ಮಂತ್ರಕ್ಕಿಂತ ಉಗುಳೇ ಜಾಸ್ತಿಯಾಗಬಾರದು. ಶಾಸ್ತ್ರಾಧ್ಯಯನ ಆಸಕ್ತಿ ನಮ್ಮ ನೇರ ಜಾನಪದ ಸಂಪರ್ಕವನ್ನು ಕಡೆಗಣಿಸುವಂತಾಗಬಾರದು. ನಮ್ಮ ಜಾನಪದ ಅಧ್ಯಯನದಲ್ಲಿ ಶಾಸ್ತ್ರೀಯ ದೃಷ್ಟಿ ಬೆಳೆದು ಬರಬೇಕೆಂಬ ಮಾತನ್ನು ಯಾರೂ ಅಲ್ಲಗೆಳೆಯಲಾರರು. ಆದರೆ ನಮ್ಮ ಶಾಸ್ತ್ರಾಧ್ಯಯನದ ವಿಧಾನ ಬಹುಮಟ್ಟಿಗೆ ಶಾಸ್ತ್ರಕ್ಕಾಗಿ ಶಾಸ್ತ್ರ ಎಂಬಂತಹ ಯಾಂತ್ರಿಕ ರೂಪದ್ದಾಗಹತ್ತಿದೆ. ಪಾಶ್ಚಾತ್ಯ ವಿದ್ವಾಂಸರ ಸಾಧನೆ, ಸಿದ್ಧಾಂತ, ತತ್ವಗಳನ್ನು ಪಾಠ ಹೇಳಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರಿಸುವಲ್ಲಿ ಹೆಚ್ಚಾಗಿ ಉಪಯೋಗವಾಗುತ್ತಿದೆ. ಹೆಚ್ಚು ಹೆಚ್ಚಾಗಿ ಅನ್ವಯಿಕ ಸ್ವರೂಪವಾಗುತ್ತಿಲ್ಲ. ಆರಂಭದ ದಶೆಯಲ್ಲಿ ಅದು ಅನಿವಾರ್ಯವೆಂದು ಹೇಳಬಹುದಾದರೂ ಈ ಸುಳಿಯಲ್ಲಿಯೆ ಸುತ್ತಾಡಿ ಬಳಲದಂತೆ ಎಚ್ಚರವಹಿಸಬೇಕಾಗಿದೆ. ಘೋಕ್ ಲೋರ್ ಬರಬರುತ್ತ ಬುಕ್ ಲೋಕ್ ಆಗಬಾರದು. ಜಾನಪದ ವಿದ್ಯಾರ್ಥಿಗೆ ಜನಜೀವನ ಭಂಡಾರದಿಂದ ದೊರೆಯುವಷ್ಟು ಪ್ರಾಮಾಣಿಕ ಸಾಮಗ್ರಿ ಮತ್ತು ನೈಜಜ್ಞಾನ ಕೇವಲ ಗ್ರಂಥ ಭಂಡಾರದಿಂದ ದೊರೆಯಲಾರದು. ಬೆಳೆಯುತ್ತಿರುವ ಈ ಜ್ಞಾನ ಶಾಖೆಗೆ ಗ್ರಂಥ ಭಂಡಾರ ಸಹಾಯಕ ಸಾಮಗ್ರಿಯನ್ನು ಒದಗಿಸಬಲ್ಲುವು ಮಾತ್ರ. ನೇರ ಜಾನಪದ ಸಾಮಗ್ರಿಗೆ ಕೈ ಹಚ್ಚದ ಗ್ರಂಥಗಳನ್ನೇ ಅವಲಂಬಿಸುವುದು. ವಿಕೃತವಾದ ವಿದ್ವತ್ತನ್ನು ಬೆಳೆಸುತ್ತದೆಂಬುದರಲ್ಲಿ ಸಂದೇಹವಿಲ್ಲ. ಆದುದರಿಂದ ವಿಶ್ವವಿದ್ಯಾಲಯದ ಜಾನಪದ ಅಧ್ಯಯನದಲ್ಲಿ ಕ್ಷೇತ್ರಕಾರ್ಯಕ್ಕೆ ಹೆಚ್ಚಿನ ಅವಕಾಶವಿರಬೇಕು ಮತ್ತು ಪ್ರಾಯೋಗಿಕ ಸ್ವರೂಪದ್ದನ್ನಾಗಿ ಇದನ್ನು ರೂಪಿಸಬೇಕು. ಈ ಅಧ್ಯಯನವನ್ನು ಆಯ್ಕೆ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಯೂ ಜನಪದ ಹಾಡುಗಾರಿಕೆ, ಮಾತಿನ ರೀತಿ, ಕುಣಿತ, ಅಭಿನಯ, ವಾದ್ಯವಾದನವೇ ಮುಂತಾದ ಕಲೆಗಳಲ್ಲಿ ಯಾವುದೇ ಒಂದನ್ನಾದರೂ ಸ್ವತಃ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವಂತಾಗಬೇಕು. ಇದರಿಂದ ಈ ಜನಪದ ಕಲೆಗಳ ಪುನರುಜ್ಜೀವನವಾಗುವುದು. ಇಂತಹ ತರಬೇತಿಗಾಗಿ ನೆರವು ನೀಡಲು ಆಯಾ ಕಲೆ ವಿದ್ಯೆಗಳಲ್ಲಿ ಪರಿಣತರಾದ ಗ್ರಾಮೀಣ ತಾಂತ್ರಿಕ ಸಹಾಯಕವನ್ನು ವಿಶ್ವವಿದ್ಯಾಲಯಗಳಲ್ಲಿ ನೇಮಿಸಿಕೊಳ್ಳಬೇಕು.

ಜನಪದ ಹಾಡುಗಳನ್ನೇನೋ ಈಗ ವಿಪುಲವಾಗಿ ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸಲಾಗಿದೆ. ಇದರಿಂದ ಈ ಹಾಡುಗಳನ್ನು ರಕ್ಷಿಸಿಕೊಂಡಿದ್ದೇವೆಯೆಂಬುದು ನಮ್ಮ ಭಾವನೆ. ಆದರೆ ಮುದ್ರಣರೂಪ ಪಡೆದಷ್ಟಕ್ಕೆ ಈ ಹಾಡುಗಳಲ್ಲಿ ಹಾಡುವಾಗಿನ ಎಲ್ಲ ಪರಿಣಾಮ ಸೊಗಸುಗಳು ಇಳಿದು ಬರುತ್ತಿವೆಯೆ? ಕಥನಪರ ಹಾಡುಗಳಲ್ಲೇನೋ ಭಾಷಣ ರೂಪ ನಡೆದೀತು. ಆದರೆ ಜನಪದ ಹಾಡುಗಳು ಹೀಗೆ ಮೌನ ಓದುಗರಿಗಾಗಿಯಾಗಲಿ, ಕೇವಲ ಸ್ವಸಂತೋಷಾರ್ಥವಾಗಿಯಾಗಲಿ ಕಟ್ಟಿದವುಗಳಲ್ಲ ಕೇಳುಗರನ್ನು ಎದುರಿಗಿಟ್ಟುಕೊಂಡು ಹಾಡಿದಂತಹವು. ಆದುದರಿಂದ ಅವುಗಳಲ್ಲಿಯ ಮಾತಿನ ವಿನ್ಯಾಸದಲ್ಲಿ ದಾಟಿಯಲ್ಲಿ, ಲಯಗತಿಯಲ್ಲಿ ಲಿಖಿತ ಪದ್ಯಗಳಿಗಿಂತ ಬೇರೆಯಾದ ಪರಿಣಾಮವೊಂದು ಹೊಮ್ಮುತ್ತಿರುತ್ತದೆ. ಬೀಸುವ ಕುಟ್ಟುವ, ಹಂತಿಯ ಹಾಡುಗಳಲ್ಲಿ ಆಯಾ ಕೆಲಸ ಲಯಗತಿಯಿದೆ. ಲಾವಣಿಗಳಲ್ಲಿ ವಾಗ್ಮಿಯ ವಾದಿಯ ಹರಿತವಿದೆ, ಬಯಲಾಟದ ಹಾಡುಗಳಲ್ಲಿ ಕುಣಿತಕ್ಕೊಪ್ಪುವ ಪದವಿನ್ಯಾಸ, ಧಾಟಿಯಿದೆ. ಇವೆಲ್ಲ ಹೊಮ್ಮುಬೇಕಾದಲ್ಲಿ ಜನಪದ ಹಾಡುಗಳನ್ನು ಕೇವಲ ಗ್ರಂಥಸ್ಥಗೊಳಿಸಿದರೆ ಆಗದು. ಅವು ಕಂಠಸ್ಥಗೊಳ್ಳಬೇಕು. ಟೇಪರಿಕಾರ್ಡು ಮಾಡಿದರೆ ಕೆಲಮಟ್ಟಿನ ಪ್ರಯೋಜನವಾದೀತಲ್ಲದೆ ಎಲ್ಲ ವೈವಿಧ್ಯ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾದೀತೆಂದು ಹೇಳಲುಬಾರದು. ನೂರು ಮರ, ನೂರು ಸ್ವರ, ಒಂದೊಂದು ಅತಿ ಮಧುರ ಬಂಧವಿರದ ಬಂಧುರ ಸ್ವಚ್ಛಂದ ಸುಂದರ ಎಂಬಂತಹ ವೈವಿಧ್ಯ ಮಾಧುರ್ಯ ಜನಪದ ಹಾಡುಗಾರಿಕೆಯಲ್ಲಿದೆ. ಅದನ್ನು ಕಂಠಕ್ಕೆ ಅಳವಡಿಸಿಕೊಂಡು ಬೆಳೆಸಿಕೊಳ್ಳುವ ಕಾರ್ಯವೀಗ ನಡೆಯಬೇಕಾಗಿದೆ. ಹಾಗೆಯೇ ಜನಪದ ವಾದ್ಯವಾದನ, ಕುಣಿತಾರಿ ಕಲೆಗಳನ್ನೂ ಪ್ರಾಯೋಗಿಕ ತರಬೇತಿಯಿಂದ ಪುನರುಜ್ಜೀವನಗೊಳಿಸುವುದು ಅಗತ್ಯವಾಗಿದೆ. ಜಾನಪದವು ಕೇವಲ ಅಧ್ಯಯನದ ವಿಷಯವಾಗಿರದೆ ಸಾಂಸ್ಕೃತಿಕವಾಗಿ ಬಳವಡಿಸಿಕೊಳ್ಳುವಂತಹ ವಿಷಯವೂ ಎಂಬುದನ್ನು ಮನಗಾಣಬೇಕಾಗಿದೆ.

ಉತ್ತರ ಕರ್ನಾಟಕಕ್ಕೆ ವಿಶಿಷ್ಟವಾಗಿರುವ ದೊಡ್ಡಾಟ, ಸಣ್ಣಾಟ, ಲಾವಣಿ, ಭಜನೆಯ ಹಾಡುಗಳಂತಹ ಜಾನಪದ ಪ್ರಕಾರಗಳ ಬಗೆಗೆ ವಿಶೇಷ ಅಭ್ಯಾಸ ನಡೆಸುವ ಹೊಣೆಗಾರಿಕೆ ಕರ್ನಾಟಕ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಗಳ ಮೇಲಿದೆ. ಭಜನೆಯ ಹಾಡು ಮತ್ತು ಲಾವಣಿಗಳ ವಿಪುಲಗಣಿಯೆ ಈ ಭಾಗದಲ್ಲಿದೆ ಅವುಗಳನ್ನು ದಾಟಿ ಸಹಿತ ಸಂಗ್ರಹಿಸಿ ಅಭ್ಯಾಸಕ್ಕೊಳಪಡಿಸಬೇಕು. ಒಂದು ಕಾಲಕ್ಕೆ ವೈಭವದ ಶಿಖರಕ್ಕೇರಿದ್ದ ಉತ್ತರ ಕರ್ನಾಟಕದ ದೊಡ್ಡಾಟ ಸಣ್ಣಾಟಗಳತ್ತ ಸುಶಿಕ್ಷೀತರ ಲಕ್ಷ್ಯವೀಗ ಹರಿಯಬೇಕಾಗಿದೆ. ಯಕ್ಷಗಾನಗಳಲ್ಲಿಯಂತೆ ಇಲ್ಲಿಯೂ ಸುಲಶಿಕ್ಷಿತರು ಸಂಕೋಚವಿಲ್ಲದೆ ಸ್ವತಃ ಭಾಗವಹಿಸಿ ಈ ಕಲಾಪ್ರಕಾರಗಳನ್ನು ಪುನರುಜ್ಜೀವನಗೊಳಿಸುವುದು. ಅತ್ಯಂತ ಅಗತ್ಯವಾಗಿದೆ. ಇನ್ನೂ ಅಲಕ್ಷವಹಿಸಿದರೆ ಇವು ನಿಃಶೇಷವಾಗುವ ಭಯವುಂಟು. ಅತ್ಯಂತ ಕ್ಷೀಣ ದಶೆಗಳಿದಿರುವ ಈ ಪ್ರಕಾರಗಳಲ್ಲಿ ಈ ಮೂಲಾಗತ್ರ ಪರಿಷ್ಕರಣ ನಡೆಯಬೇಕು. ವೇಷಭೂಷ, ಹಾಡುಗಾರಿಕೆ, ಕಥಾಪ್ರಸಂಗಗಳ ಪರಿಮಿತಿ, ಕುಣಿತಗಳ ನವೀಕರಣ ಸಂಭಾಷಣೆಯಲ್ಲಿ ಕಲಾತ್ಮಕತೆ ಮತ್ತು ಅರ್ಥಪೂರ್ಣತೆ ಅಭಿನಯ ಮತ್ತು ಪ್ರಯೋಗದಲ್ಲಿ ರಸಾತ್ಮಕತೆ ಇತ್ಯಾದಿ ದೃಷ್ಟಿಯಿಂದ ನಮ್ಮ ಬಯಲಾಟಗಳಲ್ಲಿ ಕಾಯಕಲ್ಪವನ್ನುಂಟು ಮಾಡುವ ನಿಕರದ ಪ್ರಯತ್ನ ನಡೆಯಬೇಕು. ಅವು ತಮ್ಮ ಸ್ವಂತ ಯೋಗ್ಯತೆಯ ಮೇಲೆ ಜನಪ್ರಿಯವಾಗುವಂತಾಗಬೇಕು. ಶ್ರೀ ಕೃಷ್ಣ ಪಾರಿಜಾತ ಮತ್ತು ಸಂಗ್ಯಾಬಾಳ್ಯಾ ಸಣ್ಣಾಟಗಳು ಹೀಗೆ ಪರಿಷ್ಕರಣಕ್ಕೊಳಗಾಗಿದೆ. ಇನ್ನುಳಿದವುಗಳೂ ಇದೇ ರೀತಿ ಪುನರುಜ್ಜೀವನಗೊಳ್ಳುವಂತಾಗಬೇಕು.

ಜನಪದ ಭಾಷೆಯ ವಿಷಯಕವಾಗಿಯೂ ನಮ್ಮ ಕಾರ್ಯ ಗಮನಾರ್ಹವಾಗಿ ಆಗಿಲ್ಲ. ಕರ್ನಾಟಕದಂತಹ ವಿಶಾಲವಾದ ರಾಜ್ಯದಲ್ಲಿ ನಾನಾ ರೀತಿಯ ವೈಶಿಷ್ಟ್ಯ ಹೊಂದಿದ ಪ್ರಾದೇಶಿಕ ಭಾಷಾ ಪ್ರಭೇದಗಳು ಇರುವುದು ಸ್ವಾಭಾವಿಕ. ಈ ಪ್ರಾದೇಶಿಕ ಭಾಷಾ ವೈಶಿಷ್ಟ್ಯಗಳು ಜನಪದದಲ್ಲಿ ಸಜೀವವಾಗಿ ಪ್ರಚಲಿತದಲ್ಲಿದೆ. ಇವುಗಳನ್ನೆಲ್ಲ ಹಿಂದೆ ತಳ್ಳಿ ಒಂದೇ ರೂಪದ ಸ್ಟಾಂಡರ‍್ಡ ಭಾಷೆ ಸುಶಿಕ್ಷಿತರ ಮಾತುಕತೆ ಭಾಷಣಗಳಲ್ಲಿ ಬಳಕೆಯಲ್ಲಿ ಬಂದಿದೆ. ಇಷ್ಟೇ ಅಲ್ಲ ಕೆಲ ಪ್ರದೇಶದ ಭಾಷೆ ಮಾತ್ರ ಶ್ರೇಷ್ಠವಾದುದು, ಮಾದರಿಯದು ಎಂಬ ಭ್ರಾಮಕ ಕಲ್ಪನೆ ಬೆಳೆದುಬಂದಿದೆ. ಪ್ರತಿಯೊಂದು ಪ್ರಾದೇಶಿಕ ಭಾಷೆಯಲ್ಲಿಯೂ ಉಚ್ಚರಣೆಯ ಧ್ವನಿಯಲ್ಲಿ ಪದರೂಪಗಳಲ್ಲಿ ರಚನಾ ವಿನ್ಯಾಸದಲ್ಲಿ ಅದರದೇ ಆದ ಸೌಂದರ್ಯವಿದೆ. ಈ ವೈವಿಧ್ಯವು ಕನ್ನಡ ಜನಪದ ಭಾಷೆಯ ಶ್ರೀಮಂತಿಕೆಯೆಂದು ಭಾವಿಸಿ ಪ್ರಾದೇಶಿಕ ಭಾಷಾಸ್ವರೂಪವನ್ನು ಮೆಚ್ಚುವ ಕಾಯ್ದುಕೊಳ್ಳುವ ಪ್ರಯತ್ನ ನಡೆಯಬೇಕು. ಪ್ರತ್ಯೇಕ ಪ್ರದೇಶ ಸಮಾಜಗಳಲ್ಲಿ ಪ್ರಚಲಿತವಿರುವ ಆಡುಭಾಷೆಯನ್ನು ಧ್ವನಿಮುದ್ರಿಸಿಕೊಂಡು ಅಭ್ಯಾಸ ನಡೆಯುವಂತಾಗಬೇಕು.

ಎರಡನೆಯದಾಗಿ ಜನಪದ ಭಾಷೆಯ ನುಡಿಗಟ್ಟಿನ ಕೋಶವೊಂದು ಸಿದ್ಧವಾಗಬೇಕು. ಲಿಖಿತ ಭಾಷೆಯಲ್ಲಿ ಕಾಣದ ತೀಕ್ಷ್ಣ ಜೀವಂತಿಕೆ ಜನಪದ ಭಾಷೆಯಲ್ಲಿದೆ. ಇಷ್ಟೇ ಅಲ್ಲ ಅವರ ಮಾತಿನಲ್ಲಿ ಲಕ್ಷಣಾವಿಧಾನ, ರೂಪಕ ವಿಧಾನ ಬೆರಗುಗೊಳಿಸುವಂತಹ ಪ್ರಮಾಣದಲ್ಲಿ ವೆಗ್ಗಳವಾಗಿದೆ. ಬಾಯಿಕಟ್ಟು ಮೂಕಗೊಳಿಸಲು ಕೈಕಟ್ಟು – ನಿಷ್ಕ್ರಿಯಗೊಳಿಸು. ಕಾಲುಕಟ್ಟು – ನಿಶ್ಚಲಗೊಳಿಸು – ಹೊಟ್ಟೆಕಟ್ಟು ಉಪವಾಸ ಸಹಿಸಿಕೊಳ್ಳು ಬೆನ್ನುಕಟ್ಟು – ಸಮರ್ಥಿಸು ಮುಂತಾದ ಸಮಸ್ತ ಪದಗಳು ಲಕ್ಷಣಾವಿಧಾನದಲ್ಲಿದ್ದರೆ ಕರಿಕೀಬೇರು, ವಂತಿನೀರು ಹತ್ತರಗೂಡ ಹನ್ನೊಂದು. ತೀನ್ ತೇರಾನೌ ಅಟ್ರಾ, ಕತ್ತರಿಸಿದ ತಲೆಗೆ, ಬೋಳಿಸಿದ ತಲಿಗೆ ಗಂಟು ಹಾಕು ತಲೆಬೋಳುಸು, ಹಲ್ಲಾಗ ನಾಲಗಿ ಇಟಗೋ, ತಲೀ ಬೆಳ್ಳಗಾಗು, ಇಂತಹ ನುಡಿಗಟ್ಟುಗಳಲ್ಲಿ ರೂಪಕವಿಧಾನವಿದೆ. ಇಂತಹ ನುಡಿಗಟ್ಟು ಜನಪದ ಭಾಷೆಯನ್ನು ಶಕ್ತಿವಂತಗೊಳಿಸಿದೆ. ಈ ನುಡಿಗಟ್ಟುಗಳನ್ನು ಕೋಶರೂಪದಲ್ಲಿ ಹಿಡಿದಿಡುವ ಮತ್ತು ಅವು ಬಳಕೆಯಾಗುವ ಸಂದರ್ಭ ಸನ್ನಿವೇಶಗಳನ್ನು ವಿವರಿಸುವ ಯತ್ನ ನಡೆಯಬೇಕು. ಬರಹದ ಭಾಷೆಯಲ್ಲಿ ಈ ಆಡುನುಡಿಯ ನುಡಿಗಟ್ಟು ಬಳಕೆಯಾಗುವಷ್ಟು ನಮ್ಮ ಭಾಷೆ ಹೆಚ್ಚು ಸಜೀವವಾಗುವುದರಲ್ಲಿ ಸಂದೇಹವಿಲ್ಲ.

ಕೊನೆಯದಾಗಿ ನಮ್ಮ ಜಾನಪದ ಅಧ್ಯಯನದಲ್ಲಿ ವಿಸ್ತೃತವಾದ ತೌಲನಿಕ ದೃಷ್ಟಿ ಬೆಳೆದು ಬರಬೇಕು. ನೆರೆಯ ಪ್ರಾಂತಗಳಲ್ಲಿರುವ ರೂಢಿ ಸಂಪ್ರದಾಯ ಆಚರಣೆ ಕಲೆ ಸಾಹಿತ್ಯದ ಪ್ರಕಾರಗಳಿಗೂ ನಮ್ಮದಕ್ಕೂ ಇರುವ ಸಂಬಂಧ ಸಮಾನತೆ ಅಂತರಗಳಾವುವು ಎಂಬುದರ ನಿಚ್ಚಳವಾದ ತಿಳಿವು ನಮಗಾಗಬೇಕು. ಉದಾ: ಬಹುರೂಪಿಗಳು ಭಾರತಾದ್ಯಂತ ಇದ್ದಾರೆ. ಹಾಗೆಯೆ ಕುರುಬರೂ ಕೂಡ. ಅವರ ದೇವರು ಅರ್ಚನೆ, ನಂಬುಗೆ, ಪದ್ಧತಿ ಇತ್ಯಾದಿಗಳನ್ನು ತೌಲನಿಕವಾಗಿ ಅಧ್ಯಯನ ನಡೆಸಬೇಕು. ನಮ್ಮ ಬಯಲಾಟ ಲಾವಣಿ ಭಜನೆಯ ಹಾಡುಗಳಿಗೂ ನೆರೆಯ ಪ್ರಾಂತಗಳಲ್ಲಿಯವುಗಳಿಗೂ ಇರುವ ಸಂಬಂಧದ ಸ್ಪಷ್ಟ ಕಲ್ಪನೆ ನಮಗಾಗುವಂತೆ ಅಧ್ಯಯನ ರೂಪುಗೊಳ್ಳಬೇಕು. ಜಿಲ್ಲೆಗೊಂದರಂತೆ ಜಾನಪದ ವಸ್ತು ಸಂಗ್ರಹಾಲಯ ಮತ್ತು ಕಲಾಭವನ ಕವಿ ಕಲಾವಿದರ ಚರಿತ್ರೆ ಜಾನಪದ ಲೇಖನಗಳ ಸೂಚಿ, ಅನ್ಯಭಾಷೆಗಳವರೆಗೆ ನಮ್ಮ ಜನಪದ ಹಾಡು ಕಥೆ ಮತ್ತು ಇದರ ಪ್ರಕಾರಗಳ ಪರಿಚಯ ಇತ್ಯಾದಿ ಎಷ್ಟೋ ಕಾರ್ಯ ಒಟ್ಟಿ ನಿಂತಿವೆ.

ಜಾನಪದ ಒಂದು ವಿಸ್ತಾರವಾದ ಸಾಗರ. ಈವರೆಗಿನ ನಮ್ಮ ಸಾಧನೆ ಮೆಚ್ಚುವಂತಹದಾದರೂ ನಾವು ಅದರ ತಡಿಯಲ್ಲಿ ಈಗ ಚಿಪ್ಪುಗಳನ್ನು ಆಯ್ಕೆ ಮಾಡಿದಷ್ಟರಮಟ್ಟಿಗೆ ಶ್ರೀಮಂತವಾಗಿದ್ದೇವೆ ಎನ್ನಬೇಕು. ಅದರ ಆಳ ವಿಸ್ತಾರ ಇನ್ನೂ ಅಪಾರವಾಗಿದೆ. ಕ್ಷಯಮಣಮಿಲ್ಲ ಕೇಳ್ದು ಕಡೆಗಂಡವನಾವನುಮಿಲ್ಲ ತದಕ್ಷಯನಿಧಿ ತಾನೆ ಎಂಬ ವಿನಮ್ರಭಾವದಿಂದ ನಾವು ಶ್ರಮಿಸಬೇಕು. ಈ ಮುಂದಿನ ಹತ್ತೆಂಟು ವರುಷಗಳಲ್ಲಿಯೆ ಅಂತಹ ನಿಷ್ಠಾವಂತರೂ ಶಕ್ತಿವಂತರೂ ಬೆಳೆದು ಬರಲಿ. ಜಾನಪದ ಅಧ್ಯಯನದ ನಕಾಶೆಯಲ್ಲಿ ಕನ್ನಡ ನಾಡಿನ ಗುರುತನ್ನು ಮೂಡಿಸಲಿ ಎಂದು ಹಾರೈಸಿ ನನ್ನ ಮಾತನ್ನು ಮುಗಿಸುವೆ.

ಜೈ ಹಿಂದ್

 

– ಬಿ.ಬಿ. ಹೆಂಡಿ