ಕ್ರಿಸ್ಮಸ್ ಹಬ್ಬವೆಂದರೆ ಕ್ರಿಸ್ತಪುರಾಣ (christ myth) ದ ಒಂದು ವಿಶಿಷ್ಟ ಸಾಮುದಾಯಿಕ ಆಚರಣೆ (Ritual) ಈ ಹಬ್ಬವನ್ನು ಭಾರತೀಯ ಸಂಪ್ರದಾಯಕ್ಕನುಗುಣವಾಗಿ, ಕೃಷ್ಣ ಜಯಂತಿ, ಬುದ್ಧ ಜಯಂತಿ, ಮಹಾವೀರ ಜಯಂತಿಯೇ ಮೊದಲಾದ ಹಬ್ಬಗಳ ಸಾದೃಶ್ಯದ ಮೇರೆಗೆ, ಕ್ರಿಸ್ತ ಜಯಂತಿಯೆಂದೂ ಕರೆಯುತ್ತಾರೆ.

ಪುರಾಣ (myth)

ಮಾನವ ವಿಶ್ವದ ಅಂಗವಾಗಿ ಹುಟ್ಟಿ ಬೆಳೆಯುತ್ತಾನೆಯಾದರೂ ತನ್ನ ಹಾಗೂ ವಿಶ್ವದ ಹುಟ್ಟುಲಯಗಳೆರಡೂ ಆತನಿಗೆ ರಹಸ್ಯ ಅದ್ಭುತಗಳಾಗಿಯೇ ಉಳಿದಿವೆ. ಈ ರಹಸ್ಯ ಅದ್ಭುತಗಳ (Secret Mysteries)  ಹಿಂದೆ ಸ್ಥೂಲರೂಪಿ (Ground of being ) ಯಾದ ಅಗಮ್ಯ ಶಕ್ತಿ (Energy / power) ಇರಬೇಕೆಂದು ಆತನ ಸಮಷ್ಟಿ ಪ್ರಜ್ಞೆಗೆ ಹೊಳೆದಿದೆ. (Jn 1.3,4,10) ಮಾನವ ತನ್ನ ದೈನಂದಿನ ಬದುಕಿನಲ್ಲಿ ಸುಖದುಃಖ, ಹುಟ್ಟು-ಸಾವು, ವಿವಾಹವಿಚ್ಛೇದನವೇ ಮೊದಲಾದ ಇತಿಮಿತಿಯಾನುಭವಗಳನ್ನು  (Limit Experiences) ಅನುಭವಿಸುತ್ತಿರುವಾಗ ಈ ಬದುಕಿಗೆ ಸಮಗ್ರ ಅರ್ಥವನ್ನು ಕೊಡುತ್ತಿರುವ ಸತ್ಯವೊಂದಿದೆಯೇ ಎಂದು ಪ್ರಶ್ನಿಸಿದ್ದಾನೆ. ಈ ಸತ್ಯಾನ್ವೇಷಣೆಯ ಫಲವಾಗಿ ಮಾನವ ಸಮಷ್ಟಿ ಪ್ರಜ್ಞೆಗೆ ಹೊಳೆವ ಬದುಕಿನ ಮೂಲ ಅರ್ಥ (Meaning of Meanings) ಅರ್ಥಾತ್ ಅನುಭಾವ (Depth experiences)ಗಳನ್ನು Watts, 1963:32) ಅಭಿವ್ಯಕ್ತಪಡಿಸಲು ಕೆಲವು ಭಾಷಾ ಸಂಕೇತಗಳನ್ನು ಆತ ಬಳಸಿದ್ದಾನೆ. ಇವುಗಳನ್ನೇ ೩ ಪಾರಿಭಾಷಿಕವಾಗಿ ಪುರಾಣಗಳು ಎಂದು ಕರೆಯುತ್ತಾರೆ (Mackey, 78)

ಜನಪದರು ಈ ಪುರಾಣಗಳ ಆಚರಣೆ (Celebration) ಗಳ ಮೂಲಕ ತಮ್ಮ ಬದುಕಿನ ಪಾರಮಾರ್ಥ ಅಂತರ್ಪಾತಳಿ (depth-dimension) ದೊಡನೆ ಸಂಬಂಧ ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. (Elliade 1979) ಕ್ರೈಸ್ತ ಜನಪದರು (Christian folk) ತಾವು ಕಂಡನುಭವಿಸಿದ ಅಂತರ್ಪಾತಳಿಯ ಸಮಷ್ಟ್ಯಾನು ಭಾವವನ್ನು ಕ್ರಿಸ್ತಪುರಾಣದ ಮೂಲಕ ಪರಂಪರಾಗತವಾಗಿ ಅಭಿವ್ಯಕ್ತಗೊಳಿಸುತ್ತಾ ಬಂದಿದ್ದಾರೆ.೪ ಕ್ರಿಸ್ತ ಪುರಾಣದ ಆಚರಣೆಯಲ್ಲಿ ಕ್ರಿಸ್ತ ಜಯಂತಿ ಒಂದು ಪ್ರಮುಖವಾದ ಹಾಗೂ ವಿಶಿಷ್ಟವಾದ ಆಚರಣೆ.

ಆವರ್ಣನೀಯವಾದ ಅನುಭಾವಗಳು (Core/Peak-experiences Maslow 1976)  ಮಾನವನ ಸುಪ್ತಪ್ರಜ್ಞೆಗೆ ಸೇರಿದ ಬದುಕಿನ ಮೂಲಾರ್ಥಗಳು (Jung 1964:41-42) ಮಾನವನ ಪ್ರಜ್ಞಾಪಾತಳಿಯಲ್ಲಿ ವ್ಯಕ್ತಿಪ್ರಜ್ಞೆ Conscious ಮತ್ತು ಸುಪ್ತಪ್ರಜ್ಞೆ  Unconscious /sub conscious  ಎಂಬ ಪ್ರಮುಖ ಪದರುಗಳನ್ನು ಸ್ವಿಸ್ ಮನೋವಿಜ್ಞಾನಿಯಾದ ಕಾರ‍್ಲ್ ಗುಸ್ತಾವ್ ಯೂಂಗನು ಗುರುತಿಸಿದ್ದಾನೆ. ಸುಪ್ತ ಪ್ರಜ್ಞೆಯಲ್ಲಿ ವೃಷ್ಟಿ ಸುಪ್ತಪ್ರಜ್ಞೆ Personal Unconscious ಮತ್ತು ಸಮಷ್ಟಿ ಸುಪ್ತಪ್ರಜ್ಞೆ (Collective Unconscious) ಎಂಬ ಎರಡು ಒಳಪದರುಗಳಿವೆ.

ವ್ಯಕ್ತ ಪ್ರಜ್ಞೆ ಅದುಮಿ ಹಿಡಿದ (Repressed) ಭಾವನೆ, ಚಿಂತನೆ, ಅನುಭವಗಳ ಆಗರವೇ ವೃಷ್ಟಿಸುವ ಪ್ರಜ್ಞೆ. ಜನಪದ ಪರಂಪರಾಗತವಾಗಿ ಕಾಲಾಂತರಗಳಲ್ಲಿ ಪಡೆದುಕೊಂಡು ಬಂದ Acquired ಅನುಭವಗಳ ಸಾರಸಂಗ್ರಹವೇ ಸಮಷ್ಟಿ ಸುಪ್ತಪ್ರಜ್ಞೆ ವಿಭಿನ್ನ ಜನಪದಗಳ ಸಂಸ್ಕೃತಿಗಳನ್ನು ಅವಲಂಬಿಸಿ ಅದು ಭಿನ್ನತೆಯನ್ನು ಪಡೆದುಕೊಳ್ಳುತ್ತದೆಯಾದರೂ ಮಾನವ ಸಂಸ್ಕೃತಿಗೆ ಸೇರಿದ ಸಾರ್ವತ್ರಿಕಾಂಶಗಳು (Universals) ಅದರಲ್ಲಿ ಅಡಕವಾಗಿರುತ್ತವೆ.

ಸಮಷ್ಟಿ ಸುಪ್ತಪ್ರಜ್ಞೆ ವ್ಯಕ್ತಪ್ರಜ್ಞೆಗೆ ಅಡಿಪಾಯವಾಗಿರುತ್ತದೆಯಲ್ಲದೆ ಅದು ಕೆಲವೊಂದು ಮೂಲ ಚಿಂತನ ರೂಪಗಳನ್ನು (Thought-forms) ನಿರ್ಧರಿಸುತ್ತದೆ. ಇವುಗಳನ್ನು ಪ್ರಾಚೀನ ಗ್ರೀಕರು ’ಲೊಗೊಯ್ ಸ್ಪೆರ‍್ಮಾತಿಕೊಯ್ (logoi Spermatikoi) ಎಂದು ಕರೆದರೆ ಭಾರತೀಯ ಸಂಪ್ರದಾಯದಲ್ಲಿ ಅವುಗಳಿಗೆ ಅಂತರ‍್ ಜ್ಞೇಯ ರೂಪಗಳೆಂದು ಹೆಸರು (Campbell 1968:19) ಅವು ವಿಚಾರಧಾರೆಯಾಗಿ ಅಭಿವ್ಯಕ್ತಗೊಂಡಾಗ ಸನಾತನ ಜ್ಞಾನ (Perennial Philosophy) ರೂಪಿತವಾಗುತ್ತದೆ. (Coomaraswamy 1944:18)  ಯೂಂಗನು ಈ ಮೂಲ ಚಿಂತನ ರೂಪಗಳನ್ನು ’ಆದಿಪ್ರತಿಮೆಗಳು’ (Archetypes) ಎಂದು ಕರೆದಿದ್ದಾನೆ. (Jung. 1964:66ff.99ff)  ಈ ಭಾವನಾತ್ಮಕ ಅವ್ಯಕ್ತ ಕ್ರಿಯಾಸಂಕೇತಗಳನ್ನು ಪೌರಾಣಿಕ ಪ್ರತಿಮೆಗಳು ಪ್ರಮುಖವಾಗಿ ಪುರಾಣಕಥನಗಳ (Theogonic tales) ಮೂಲಕ ಜಾನಪದದಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ಮಾನವನ ಆತ್ಮಸಾಕ್ಷಾತ್ಕಾರ (Self realization) ಎಂಬ ಆದಿಪ್ರತಿಮೆ ಬೈಬಲಿನ ಹೊಸ ಒಡಂಬಡಿಕೆ (NT) ಯಲ್ಲಿ ಕ್ರಿಸ್ತ ಜನ್ಮವೃತ್ತಾಂತ  (Infancy narrative : MT 1&2:LK 1 & 2 : seeNC 72-73) ದ ಮೂಲಕ ಅಭಿವ್ಯಕ್ತಿಯನ್ನು ಪಡೆದಿದೆ.

ಬದುಕಿನ ಮೂಲಾರ್ಥವೇ ಮಾನವನ ಅಂತರ್ಪಾತಳಿ. ಆತನ ಅನುಭಾವಗಳು ಅಂತರ್ಪಾತಳಿಗೆ ಸೇರಿದುವುಗಳು. ಅಂತರ್ಪಾತಳಿಯ ವಿಕಾಸ ನಡೆದಂತೆ ಆತನ ಅಹಂಕೇಂದ್ರೀಯ (Ego-centric) ಬಹಿರ್ಪಾತಳಿ (Surface-dimension)  ಅಳಿದು ಹೋಗುವುದರಿಂದ ಅಂತರ್ಪಾತಳಿ ಅರಳುತ್ತದೆ. (Exfoliates)5. ಇದೇ ಮಾನವತೆಯ ದಿವ್ಯದಡೆಯ ವಿಕಾಸ. ಅಂತೆಯೇ ಸೃಷ್ಟಿಯ  ಪರಿಪೂರ್ಣತೆ. ಈ ವಿಕಾಸವೇ ಕ್ರಿಸ್ತ ಜಯಂತಿ ಹಬ್ಬದ ಪ್ರಧಾನ ಆಶಯ (Motif).

ಸೃಷ್ಟಿ ವಿಕಾಸವನ್ನು ಆಧ್ಯಾತ್ಮಿಕ ಸೆಲೆಯಲ್ಲಿ ವೈಜ್ಞಾನಿಕವಾಗಿ ವಿವರಿಸಿದವರಲ್ಲಿ ಯೇಸು ಸಭೆಯ ಪಿಯೇರ‍್ ತೆಯಾರ್ದ್‌ದ ಶಾರ್ದೆಂ (Pierre Teilhard de Chardin, S.J.)  ಸ್ವಾಮಿಯವರು (ಕ್ರಿ.ಶ. ೧೮೮೧-೧೯೫೫) ಅಗ್ರಗಣ್ಯರು. ಇವರು ಫ್ರಾನ್ಸ್ ದೇಶದಲ್ಲಿ ಜನ್ಮತಾಳಿ ಪ್ರಾಚೀನ ನಷ್ಟಜೀವ ಶಾಸ್ತ್ರಜ್ಞ (Palaeontologist) ಮಾನವಶಾಸ್ತ್ರಜ್ಞ (Anthropologist) ಹಾಗೂ ಬ್ರಹ್ಮವಾದಿ (Theologian) ಎಂದು ವಿಶ್ವಮಾನ್ಯತೆಯನ್ನು ಪಡೆದವರು.

ಶಾರ್ದೆಂಯವರ ಚಿಂತನೆಯ ಪ್ರಕಾರ ಚರಾಚರ ಸೃಷ್ಟಿ ವಿಶ್ವಾತ್ಮ  (The Alphs) ನ ಬಾಹ್ಯಾಭಿವ್ಯಕ್ತೀಕರಣ (Involution) ಜಡಶಕ್ತಿಗಳೆರಡೂ ಆ ದಿವ್ಯ ಅನಂತತೆಯ ಎರಡು ಸ್ಥಿತಿಗಳು. ಜಡತೆಯಿಂದ ಚೇತನ (Biosphere) ದೆಡೆಗೆ, ಚೇತನದಿಂದ ಪ್ರಜ್ಞೆಯತ್ತ (Noosphere) ಪ್ರಜ್ಞೆಯಿಂದ ಕ್ರಿಸ್ತನಡೆಗೆ (The Omega) ಸೃಷ್ಟಿವಿಕಾಸ, ಸಮಷ್ಟಿನೆಲೆಯಲ್ಲಿ ನಡೆಯುತ್ತದೆ. ಯೇಸು ಕ್ರಿಸ್ತ ಪರಿಪೂರ್ಣ ವಿಕಾಸಕ್ಕೆ / ಪೂರ್ಣಯೋಗಕ್ಕೆ ಒಂದು ನಿದರ್ಶನ ಮಾತ್ರ. ಸಮಸ್ತ ಸೃಷ್ಟಿ ಕ್ರಿಸ್ತಮಯಗೊಳ್ಳವುದೇ (Christification) ಅದರ ಪರಮಾರ್ಥವೆಂದು ಸಾರಿದ.

ಕ್ರಿಸ್ತ ಪುರಾಣ :

ಮಾನವನದಲ್ಲಿ ತನ್ನ ಅಂತರ್ಪಾತಳಿಯ ಅರಿವು – ಬ್ರಹ್ಮಾಸ್ಮಿ ಪ್ರಜ್ಞೆ (myself is brahman consciousness) ಸಾಮಾನ್ಯವಾಗಿ ಸುಪ್ತವಾಗಿರುತ್ತದೆ. ಆದರೆ ಯೇಸುವಿನಲ್ಲಿ ಅಂತರ್ಪಾತಳಿಯೇ ಬಹಿರ್ಪಾತಳಿಯಾಗಿ ಅಹಂ ಪ್ರಜ್ಞೆ ಅಳಿದುಹೋಗಿದೆ. ಅರ್ಥಾತ್ ಮಾನವತೆ ದಿವ್ಯತೆಯನ್ನು ಪಡೆದಿದೆ (The word8 is made flesh) ಎಂಬುದೇ ಕ್ರಿಸ್ತ ಪುರಾಣ(Gilkey 1975 : 100)  ಹಾಗೂ ಕ್ರೈಸ್ತ ಮಹಾವಾಕ್ಯ (Panikkar & Abraham 1981 : 25)

ಆದಿಯಲ್ಲಿ ಶಬ್ದಬ್ರಹ್ಮವಿತ್ತು.
ಶಬ್ದಬ್ರಹ್ಮ ಪರಬ್ರಹ್ಮದಲ್ಲಿತ್ತು,
ಪರಬ್ರಹ್ಮವೇ ಶಬ್ದ ಬ್ರಹ್ಮವಾಗಿತ್ತು,
ಆದಿಯಲ್ಲಿ ಅದು ಪರಬ್ರಹ್ಮದಲ್ಲಿತ್ತು೧೦ – (Jn 1.1-2)

ಯೋಹಾನನ ಸುವಾರ್ತೆ  (Good-news/Gospel) ಯ ಈ ಆದಿವಾಕ್ಯ ಸ್ಥೂಲರೂಪಿಯಾದ ಶಬ್ದಬ್ರಹ್ಮ (Word /ಕ್ರಿಸ್ತ Lord). ಯೇಸುವಿನಲ್ಲಿ ಅವತರಿಸಿದ್ದಾನೆ (Enfleshed / incarnated)  ಎಂಬ ಕ್ರೈಸ್ತ ಸಮಷ್ಟಿ ಪ್ರಜ್ಞೆಯನ್ನು ಅವರೋಹಣಾ ಅವಲೋಕನ (Descending World -view) ದ ಪ್ರಕಾರ ಸಾರುತ್ತದೆ (Kung, 439; Ph 2, 6, 7,; Col 1-15) ಸಮಷ್ಟ್ಯಾನುಭಾವವನ್ನು ಅಭಿವ್ಯಕ್ತಗೊಳಿಸುತ್ತದೆ.

ಅನುಭಾವ (God-experience) ದ ಅಭಿವ್ಯಕ್ತಿಗೆ ನೇರ ವಾಚ್ಯ ಭಾಷೆ ನಿರುಪಯುಕ್ತ : ವಕ್ರೋಕ್ತಿ, ಕೊಂಕುನುಡಿ, ಕಾವ್ಯಭಾಷೆ (Poetic language) ತಕ್ಕಮಟ್ಟಿಗೆ ಅಭಿವ್ಯಕ್ತಿ ಸಾಧನವಾಗಬಲ್ಲುದು (Rahner in Arakkal, 91 : Campbell, 1972 : 12 Newman, 515)  ಈ ಹಿನ್ನೆಲೆಯಲ್ಲಿ ಕ್ರೈಸ್ತಾನುಭಾವಕ್ಕೆ ಸೇರಿದ ಕ್ರಿಸ್ತಪುರಾಣವನ್ನು ಐತಿಹಾಸಿಕ (Factual narration) ವಾಗಿ ವಿವೇಚಿಸುವುದಕ್ಕಿಂತ ಕಾವ್ಯಸತ್ಯ Poetic / Theological truth) ವನ್ನಾಗಿ ಸ್ವೀಕರಿಸುವುದೇ ಸರಿ (Campbell 1970: 178: Kung 450, 452, f. n. 66 & 67).

ಸೃಷ್ಟಿಯನ್ನು ಬಿಟ್ಟು ಮಾನವ ಬದುಕಿಲ್ಲ. ಕಾರಣ ಆತನ ಅನುಭಾವಗಳಿಗೂ ಅದೇ ಕಾರಣ. ಕ್ರೈಸ್ತಾವಲೋಕನ (Christian weltanchaung) ದಲ್ಲಿ ಸೃಷ್ಟಿಯೆಂಬುದು ಭ್ರಮೆ (Illusion) ಯಲ್ಲ. ಅದು ಶಬ್ದ ಬ್ರಹ್ಮನ ಸ್ವಯಂ ಪ್ರೇರಿತ ಬಹಿರ್ಮುಖೀ ಸ್ವಾಭಿವ್ಯಕ್ತಿ (Externaliged Self disclosure) (Gnl.1 Jn 1.1.-3) ಈ ಅಭಿವ್ಯಕ್ತಿಯ ವಿಕಾಸದ ಪರಿಪೂರ್ಣತೆಯನ್ನು ಕ್ರೈಸ್ತ ಜನಪದ ಐತಿಹಾಸಿಕ ಯೇಸುವಿನಲ್ಲಿ ಕಂಡು ಕೊಂಡಿದೆಯಾದುದರಿಂದ ಆತ ಕ್ರಿಸ್ತನ ಸಂಕೇತ (Sacrament) ಕಾರಣ, ಆತ ಯೇಸು ಕ್ರಿಸ್ತ೧೧ (Kung, 443).

ಬೈಬಲಿನ ಪ್ರಕಾರ, ಯೇಸು ಇಹದಲ್ಲಿ (Hic at nunc) ಯೇ ಆತ್ಮ ಸಾಕ್ಷಾತ್ಕಾರವನ್ನು ಪಡೆದ (Jn 10, 30:14, 20: 17, 21)  ಹೀಗೆ ಆತನಲ್ಲಿ ಮಾನವತೆ (Humanity) ದಿವ್ಯತೆ (Divinity) ಯನ್ನು ಪಡೆಯಿತು. ದ್ವೈತ ಅದ್ವೈತಗೊಂಡಿತು. ’ನಾನೂ ತಂದೆಯೂ ಒಂದಾಗಿದ್ದೇವೆ’ (Jn. 10,30; 10,39; 14,11)12 ಈ ಅನುಭಾವ ಕೇವಲ ವ್ಯಷ್ಟಿರೂಪದ್ದಲ್ಲ; ಅದು ಸಮಷ್ಟಿ ಸ್ವರೂಪದ್ದು (Jn 14 19-20; 15-1-5): ‘ನಾನು ನನ್ನ ತಂದೆಯಲ್ಲಿ, ನೀವು ನನ್ನಲ್ಲಿ, ನಾನು ನಿಮ್ಮಲ್ಲಿ ಇದ್ದೇವೆ’ಂಬುದು ಯೇಸು ಕ್ರಿಸ್ತನ ಅನುಭಾವ.

ಮಾವನ ಬದುಕಿನಲ್ಲಿ ನಡೆಯಬೇಕಾದ ಮಾನವನ ಪಾತಳಿಗಳ ವ್ಯಷ್ಟಿ ಹಾಗೂ ಸಮಷ್ಟಿ ನೆಲೆಯ ಸಾಮರಸ್ಯ ಈಗಾಗಲೇ ಯೇಸುವಿನಲ್ಲಿ ನಡೆದಿದೆ ಎಂದು ಹೇಳುವುದು ಪುರಾಣದ ರೀತಿ (Watts, 182 ff.) ಮಾನವನ ದೈವೀಕರಣದ ಆಶಯಕ್ಕೆ ಐತಿಹಾಸಿಕ ಯೇಸು ಮಾದರಿ (Type) ಯಾಗಿದ್ದಾನೆಂದು ಜಾನಪದ ವಿಜ್ಞಾನದಮಟ್ಟಿಗೆ ಹೇಳಬಹುದು.

ಆಚರಣೆ (Ritual):

ಪುರಾಣವನ್ನು ಸಜೀವಗೊಳಿಸುವ (Re-live/enact) ಸಾಮುದಾಯಕ ಕ್ರಿಯಾಶೀಲ ಅಭ್ಯಿವಕ್ತಿ (Communitarian Operative Expression) ಆಚರಣೆ, ಅಚರಣೆಗಳ ಮೂಲಕ ಮಾನವನಲ್ಲಿ ಆತನ ಅಂತರ್ಪಾತಳಿ  (Self – Conscious) ಹಾಗೂ ಬಹಿರ್ಪಾತಳಿ (Ego/Self Conscious) ಗಳ ನಡುವೆ ಸಂವಾದ (dialogue) ನಡೆಯುವುದರಿಂದ ಪುರಾಣಗಳು ಸಜೀವಗೊಳ್ಳುತ್ತವೆ. ಅರ್ಥಪೂರ್ಣವಾಗುತ್ತವೆ ಹಾಗೂ ಸ್ಫುಟಗೊಳ್ಳುತ್ತವೆ. ಈ ಕಾರಣದಿಂದಾಗಿ ಆಚರಣೆಗಳು ಸಾಮುದಾಯಿಕ ಸ್ಮರಣೆ (Folk memory) ಯನ್ನು ಜಾಗೃತಗೊಳಿಸುವ ಸಾಂಕೇತಿಕ ಅಭಿವ್ಯಕ್ತಿಗೇ ಆಗಿವೆ. (Gilkey 1974 : 259)

ಬದುಕಿನ ಮೂಲ ಅರ್ಥದ ಈ ಸಾಮುದಾಯಿಕ ಆಚರಣೆಗಳೇ ಹಬ್ಬಗಳು. (Amaladoss, 1976:436), ಇವು ಎಂದೆಂದೂ ವ್ಯಷ್ಟಿಪ್ರಜ್ಞೆಗೆ ಸೀಮಿತವಾಗಿರದೆ ಸಮಷ್ಟಿಪ್ರಜ್ಞೆಯ ಅಭಿವ್ಯಕ್ತಿಗಳಾಗಿವೆ. ಹಬ್ಬದಾಚರಣೆಗೆ ಸಮುದಾಯ (Community) ಬೇಕೇಬೇಕು. ಹಬ್ಬದಾಚರಣೆಯಲ್ಲಿ ಜನಪದರು ತಮ್ಮ ದಿನ ನಿತ್ಯದ ಜಂಜಾಟವನ್ನು ಮರೆತು ತಮ್ಮ ಬದುಕಿನ ಅರ್ಥವನ್ನು ಕುರಿತು ಆಲೋಚಿಸ ತೊಡಗುತ್ತಾರೆ. ತಮ್ಮ ಬದುಕಿಗೂ ಅದರ ಸ್ಥಲ (The Ground) ಕ್ಕೂ ಇರುವ ಸಂಬಂಧವನ್ನು ಜ್ಞಾಪಿಸಿ ಅದರೊಡನೆ ಸಂಬಂಧವನ್ನು ಕಲ್ಪಿಸಿಕೊಳ್ಳಲು, ತಾದಾತ್ಮ್ಯತೆಯನ್ನು ಪಡೆಯಲು ಬಯಸುತ್ತಾರೆ. ಪ್ರಯತ್ನಿಸುತ್ತಾರೆ. ಸರ್ವಾರ್ಪಣಭಾವದಿಂದ, ಪರಮಾತ್ಮನನ್ನು / ಸ್ಥಲವನ್ನು ನಮಸ್ಕರಿಸುತ್ತ ಉಪಾಸನೆ (worship/liturgy) ಯ ಮೂಲಕ ಆತನನ್ನು ನೆನಪಿಸಿಕೊಳ್ಳುತ್ತಾರೆ (Amnesis) ಇದೆಲ್ಲ ಸಾಮುದಾಯಿಕವಾಗಿ ನಡೆಯುವುದೇ ಹಬ್ಬದ ವೈಶಿಷ್ಟ್ಯ. ಹಬ್ಬದ ಸಂದರ್ಭದಲ್ಲಿ ಸಂಗೀತ, ಹಾಡು, ಕುಣಿತ ಮೊದಲಾದ ಕಲೆಗಳ ಮೂಲಕ ಸಾಮೂಹಿಕವಾಗಿ ಆಚರಣೆಯಲ್ಲಿ ಜನರು ಪಾಲುಗೊಳ್ಳುತ್ತಾರೆ. (Participate) ಯಲ್ಲದೆ ತಮ್ಮ ಹಿಗ್ಗನ್ನೂ, ಸಂತಸವನ್ನೂ ವ್ಯಕ್ತಪಡಿಸುತ್ತಾರೆ.

ಕ್ರಿಸ್ತ ಪುರಾಣದ ಆಚರಣೆ :

ಕ್ರಿಸ್ತ ಪುರಾಣದ ಆಚರಣೆ, ಉಪಾಸನೆ (Liturgy) ಯ ಮೂಲಕ ಕ್ರೈಸ್ತ ಜನಪದರಲ್ಲಿ ದಿನನಿತ್ಯ ನಡೆಯುತ್ತದೆ. ಈ ಉಪಾಸನೆಯಲ್ಲಿ ದಿವ್ಯಭೋಜನ (Eucharist) ದ ಆಚರಣೆ ಅತ್ಯಂತ ಪ್ರಮುಖವಾದುದು. ಇದನ್ನು ದಿವ್ಯ ಬಲಿಪಜೆ (Holy Sacrifice of the Mass) ಎಂದೂ ಕರೆಯುವುದುಂಟು. ಈ ಸಾಮೂಹಿಕಾಚಾರಣೆಯಲ್ಲಿ ಯೇಸುವಿನ ಪ್ರತಿನಿಧಿಯಾಗಿ, ಜನಸ್ತೋಮದ ನಾಯಕನಾಗಿ, ಅರ್ಚಕನು ರೊಟ್ಟಿ ಹಾಗೂ ದ್ರಾಕ್ಷಾರಸವನ್ನು ದೇವರಿಗೆ ಅರ್ಪಿಸಿ ಸರ್ವಾರ್ಪಣ ಭಾವವನ್ನು ಸಂಕೇತಿಸುತ್ತಾನೆ. ಆ ಬಳಿಕ ಅಂತಿಮ ಭೋಜನದ (Last Supper) ವೇಳೆಯಲ್ಲಿ ಯೇಸು ಆಡಿದ ಮಂತ್ರವನ್ನುಚ್ಚರಿಸುತ್ತಾನೆ. ಆಗ ಪೀಠದ ಮೇಲಿಟ್ಟ ರೊಟ್ಟಿ ಹಾಗು ದಾಕ್ಷಾರಸ ಯೇಸುಕ್ರಿಸ್ತನಾಗಿ ರೂಪಾಂತರ ಹೊಂದುತ್ತವೆಂಬುದು ಜನಪದರ ನಂಬಿಕೆ (Communitarian faith).

ಈ ಆಚರಣೆಯ ಮೂಲಕ ಅರ್ಚಕನು ಚರಾಚರ ಸೃಷ್ಟಿಯ ಹಾಗೂ ಮಾನವತೆಯ ಕ್ರಿಸ್ತೀಕರಣ / ದೈವೀಕರಣ (Divinization) ವನ್ನು ಸಾಂಕೇತಿಕವಾಗಿ (Sacramentally/Mythically) ಪ್ರಸ್ತುತ (Re-living) ಗೊಳಿಸಿ ಅದನ್ನು ಐತಿಹಾಸಿಕವಾಗಿ (Factually) ದೈನಂದಿನ ಜೀವನದಲ್ಲಿ ಸಾಧಿಸಿಕೊಳ್ಳಲು ಅರಿಕೆ ಮಾಡಿಕೊಳ್ಳುತ್ತಾನೆ. ಕ್ರಿಸ್ತ ಜಯಂತಿಯಂದು ಈ ವಿಧಿಯನ್ನು ವಿಶಿಷ್ಟವಾಗಿ ಕೊಂಡಾಡುತ್ತಾರೆ.

ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಕ್ರಿಸ್ತ ಪುರಾಣದ ಆಚರಣೆ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಹೀಗೆ ಎರಡು ನೆಲೆಗಳಲ್ಲಿ ನಡೆಯುತ್ತದೆ.

ಧಾರ್ಮಿಕಾಚರಣೆ : ಕ್ರಿಸ್ತ ಜಯಂತಿಯ ಧಾರ್ಮಿಕ ವಿಧಿ (Lexorandi) ಪ್ರಮುಖವಾಗಿ ಡಿಸೆಂಬರ‍್ ೨೪ರ ನಡುರಾತ್ರಿಯಿಂದ ೨೫ರ ಮುಂಜಾವಿನ ಸಂಧ್ಯಾ ಕಾಲವನ್ನು ದಾಟಿ ಬೆಳಗು ತನಕ ನಡೆದು ಸಾಮೂಹಿಕ ಜೀವನಾಭಿವ್ಯಕ್ತಿಯಲ್ಲಿ, ಕತ್ತಲು ಬೆಳಕುಗಳ ಹೋರಾಟದಲ್ಲಿ ಕ್ರಿಸ್ತನ ಕೇಂದ್ರೀಯ ಸ್ಥಾನವನ್ನು ಸಾರಿ ಹೇಳುತ್ತದೆ. ಡಿಸೆಂಬರ‍್ ೨೫, ಅಕ್ರೈಸ್ತ (Pagan) ರೋಮಿನಲ್ಲಿ ಅಜೇಯ ಸೂರ್ಯದೇವತೆ (Sol invictus/ the unconquered sun) ಯ ಹಬ್ಬವಾಗಿತ್ತು, ಕತ್ತಲನ್ನು ಓಡಿಸಿ ದಿವ್ಯ ಬೆಳಕನ್ನು ಚೆಲ್ಲಲು ಬಂದ ಯೇಸು ಕ್ರಿಸ್ತನಿಗೆ ಸೂರ್ಯ ಒಳ್ಳೆಯ ಸಂಕೇತವೆಂದು ಭಾವಿಸಿದ ಕ್ರೈಸ್ತ ಸಮಾಜ, ಕ್ರಿ.ಶ. ೪ನೆಯ ಶತಮಾನದ ಮಧ್ಯಕಾಲದಿಂದ ಈ ಸೂರ್ಯದೇವತೆಯ ಹಬ್ಬವನ್ನು ಕ್ರಿಸ್ತ ಜಯಂತಿಯನ್ನಾಗಿ ಆಚರಿಸಲಾರಂಭಿಸಿತು೧೩. ಅಲ್ಲಿಯವರೆಗೆ ಜನವರಿ ೫ ರಂದು  ಕ್ರೈಸ್ತ ಜನಪದ ಕ್ರಿಸ್ತ ಜಯಂತಿಯನ್ನು ಕ್ರಿಸ್ತ ದರ್ಶನ (Epiphany/Theophnay) ಹಬ್ಬದೊಂದಿಗೆ ಆಚರಿಸುತ್ತಿತ್ತು. (King, 439)

ಡಿಸೆಂಬರ‍್ ತಿಂಗಳಿನಲ್ಲಿ ಜಗತ್ತಿನ ಹೆಚ್ಚಿನ ಪ್ರದೇಶಗಳಲ್ಲಿ ಕಡು ಛಳಿಗಾಲ. ಈ ಛಳಿಗಾಲದ ನಟ್ಟಿರುಳ ಸಮಯದಲ್ಲಿ ಕ್ರಿಸ್ತ ಜಯಂತಿಯ ಧಾರ್ಮಿಕ ವಿಧಿ ಮೂರು ಪೂಜಾ ಸಮಾರಂಭ (Mass) ಗಳ ಮೂಲಕ ಸಾಮುದಾಯಿಕವಾಗಿ (Congregationally) ನಡೆಯುತ್ತದೆ. ಹಿಂದೆ ಕ್ರೈಸ್ತರು ಯೇಸು ಹುಟ್ಟಿದ ಬೆತ್ಲೆ ಹೇಮಿನಲ್ಲಿ ರಾತ್ರಿಯ ಜಾಗರಣೆ (Vigil) ಯನ್ನಾಚರಿಸಿ, ಜೆರೂಸಲೆಮ ನಗರಕ್ಕೆ ಪಾದಯಾತ್ರೆ ಮಾಡಿಕೊಂಡು ಮುಂಜಾವಿನ ಸುಮಾರಿಗೆ ಮುಟ್ಟುತ್ತಿದ್ದರು. ಆ ಬಳಿಕ ಹೊತ್ತು ಮೂಡುತ್ತಿರುವಾಗ ಗುಡಿಯಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಈ ಪದ್ಧತಿಯನ್ನು ಈಗ ಪೂಜಾತ್ರಯ ರೂಪದಲ್ಲಿ ಕ್ರೈಸ್ತ ಜನಪದ ಆಚರಿಸುತ್ತದೆ.

ಆಧ್ಯಾತ್ಮಿಕ ಪಾತಳಿಯ ’ರಾತ್ರಿ’ಯನ್ನು ’ಹಗಲ’ನ್ನಾಗಿ ಮಾಡುವ, ’ಛಳಿ’ಯನ್ನು ’ಸೆಕೆ’ಯನ್ನಾಗಿ ರೂಪಾಂತರಿಸುವ, ಶಕ್ತಿ ಕ್ರಿಸ್ತನಲ್ಲಿದೆಂಬ ಸಂದೇಶ (message) ವನ್ನು ಕ್ರಿಸ್ತ ಜಯಂತಿ ಆಚರಣೆಯ ಛಳಿಗಾಲದ ನಟ್ಟಿರುಳಿನ ಸಂದರ್ಭ (Context) ತೋರಿಸಿ ಕೊಡುತ್ತದೆ :

ನಡುರಾತ್ರಿಯ ಪೂಜೆಯಲ್ಲಿ ದೇವ-ಪುತ್ರ (Son of God) ನ ಜನನ ವೃತ್ತಾಂತವನ್ನು ಕೀರ್ತನೆಯ ಮೂಲಕ ಹಾಡುತ್ತಾರೆ. ’ನಾನು ಕರ್ತನ ಆಜ್ಞೆಯನ್ನು ತಿಳಿಸುತ್ತೇನೆ. ಕೇಳಿರಿ : ನನಗೆ ನೀನು ಮಗನು : ನಾನೇ ಈ ಹೊತ್ತು ’ನಿನ್ನನ್ನು ಪಡೆದಿದ್ದೇನೆ’ (ಕೀರ್ತನೆ ೨.೭). ಆ ಬಳಿಕ ಸಂತ ಚಿನ್ನಪ್ಪ (St. Paul ತೀತ  ITitus)  ನಿಗೆ ಬರೆದ ಪತ್ರದಿಂದ ಆರಿಸಿಕೊಂಡ ವಾಚನ (೩.೧೧-೧೫) ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟು ಮಾಡುವ ದೇವರ ಕೃಪೆ (God’s grace) ಪ್ರತ್ಯಕ್ಷವಾಯಿತು’ ಎಂಬ ವಾಕ್ಯದಿಂದ ಸುರುವಾಗುತ್ತದೆ. ಸಾಮೂಹಿಕ ಕೀರ್ತನೆಯಾದ ಬಳಿಕ ಸುವಾರ್ತೆಯ ವಾಚನ :

ಆ ಕಾಲದಲ್ಲಿ ರಾಜ್ಯವೆಲ್ಲಾ ಖಾನೆಷುಮಾರಿ ಬರೆಯಿಸಿಕೊಳ್ಳಬೇಕೆಂಬ ಆಜ್ಞೆ ಚಕ್ರವರ್ತಿಯಾದ ಔಗುಸ್ತನಿಂದ ಹೊರಟಿತು.೧೪ ಖಾನೆಷುಮಾರಿ ಬರೆಯಿಸಿಕೊಳ್ಳುದಕ್ಕಾಗಿಯೋ ಸೇಫ ಮತ್ತು ಮರಿಯಮ್ಮ ಬೆತ್ಲೆಹೇಮಿಗೆ ಹೋಗಬೇಕಾಯಿತು.

ಅವರು ಅಲ್ಲಿದ್ದಾಗ ಆಕೆಗೆ ದಿನ ತುಂಬಿತು. ಆಕೆ ತನ್ನ ಚೊಚ್ಚಲು ಮಗನನ್ನು ಹೆತ್ತು ಬಟ್ಟೆಯಲ್ಲಿ ಸುತ್ತಿ ಛತ್ರದಲ್ಲಿ ಅವರಿಗೆ ಸ್ಥಳವಿಲ್ಲದ ಕಾರಣ ಅವನನ್ನು ಗೋದಲಿಯಲ್ಲಿ ಮಲಗಿಸಿದಳು (ಲೂಕ ೨.೬-೭)

ಜಾನುವಾರುಗಳಿಗೆ ಮೇವನ್ನು ಹಾಕುವ ಗೋದಲಿಯಲ್ಲಿ ಯೇಸು ಹುಟ್ಟಬೇಕಾಯಿತು: ಸೃಷ್ಟಿಕರ್ತನು ಮಾನವನಾಗಿ ಹುಟ್ಟಿದಾಗ ಆತನಿಗೆ ಯೋಗ್ಯ ಸ್ಥಳ ಕೊಡದೆ ತನ್ನ ಜನಗಳೇ ಆತನನ್ನು ನಿರ್ಲಕ್ಷಿಸಿದರೂ ಗಗನದಿಂದ ದೇವದೂತರು :

ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ
ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ,
ದೇವರು ಅವರಿಗೆ ಒಲಿದಿದ್ದಾನೆ (ಲೂಕ ೨.೧೪)

ಎಂದು ಕೊಂಡಾಡಿದರಂತೆ.

ಕ್ರಿಸ್ತನ ನರಾವತಾರಕ್ಕೆ ಕಾರಣ ಕೊಟ್ಟು ಯೋಹಾನನು :

ನಾವು ದೇವರನ್ನು ಪ್ರೀತಿಸಿದ್ದರಲ್ಲಿಯಲ್ಲ.  ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪ ನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟಿದ್ದರಲ್ಲಿಯೇ ಪ್ರೀತಿಯ ನಿಜಗುಣ ತೋರಿಬರುತ್ತದೆ (೧ ಯೋಹಾನ ೪.೧೦) ಎಂದು ಹೇಳಿದ್ದಾನೆ.

ಯೇಸುವಿನ ಜನ್ಮ ವೃತ್ತಾಂತದ ಸುವಾರ್ತೆಯನ್ನು ಓದಿದ ಬಳಿಕ ಈ ಅದ್ಭುತ (Mystery) ಅರ್ಥ ವಿವರಣೆ ನೀಡುವ ಪ್ರವಚನ (Sermon), ತದನಂತರ ಪ್ರಸಾದ (Eucharist) ರ ವಿತರಣೆ ನಡೆಯುತ್ತದೆ.

ಸಂಧ್ಯಾಕಾಲದ ಪೂಜೆಯಲ್ಲಿ ಬೆಳಕಿಗೆ ಸಂಬಂಧಿಸಿದ ಹಲವಾರು ಸಂಕೇತಗಳನ್ನು ನಾವು ಗುರುತಿಸಬಹುದಾಗಿದೆ. ತೀತನಿಗೆ ಸಂತ ಚಿನ್ನಪ್ಪ ಬರೆದ ಪತ್ರದಿಂದಲೇ ಪ್ರಥಮ ವಾಚನ. ಅದು ದೇವರ ದಯೆಯನ್ನೂ ಕರುಣೆಯನ್ನೂ ಸೂಚಿಸುತ್ತದೆ :

ನಾವು ಮಾಡಿದ ಪುಣ್ಯಕ್ರಿಯೆಗಳ ನಿಮಿತ್ತದಿಂದಲ್ಲ :
ಆತನ ದಯೆಯಿಂದಲೇ ನಮ್ಮನ್ನಾತ ರಕ್ಷಿಸಿದ, (ನೋಡಿ ತೀತ ೩.೫-೭)

ಅನಂತರ ದ್ವಿತೀಯ ವಾಚನದೊಂದಿಗೆ ದಲಿತರಲ್ಲಿ ದಲಿತರಾದ ಕುರುಬರಿಗೆ ದೊರೆತ ಸುವಾರ್ತೆಯ ವಿವರಣೆ ಓದಲಾಗುತ್ತದೆ :

ಅದೇನೆಂದರೆ, ಈ ಹೊತ್ತು ನಿಮಗೋಸ್ಕರ ದಾವಿದನ ಊರಿನಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತ ಕರ್ತನಾಗಿರುವ ಕ್ರಿಸ್ತನೇ ಆಗಿರುವನು. ಆತನು ನಿಮಗೆ ಗೊತ್ತಾಗಿರುವುದಕ್ಕೆ ಗುರುತೇನೆಂದರೆ ಬಟ್ಟೆಯಿಂದ ಸುತ್ತಿರುವ ಒಂದು ಕೂಸು ಗೋದಲಿಯಲ್ಲಿ ಮಲಗಿರುವುದ ಕಾಣುವಿರಿ (ಲೂಕ ೨.೧೧)

ಯೇಸುವಿನ ಹುಟ್ಟಿನಿಂದ ಲೌಕಿಕ ಮೌಲ್ಯಗಳು ಅಪಮೌಲ್ಯಗೊಳ್ಳುತ್ತವೆ. ದೇವದರ್ಶನವಾಗುವುದು ಜಗತ್ತಿನ ಒಣ ಆಡಂಬರದಲ್ಲಿಯಲ್ಲ. ಆತ ಹುಟ್ಟಿದುದು ಜಗತ್ತು ನಿದ್ರೆಯಲ್ಲಿದ್ದಾಗ; ಛಳಿಗಾಲದ ನಟ್ಟಿರುಳಿನ ಏಕಾಂತದಲ್ಲಿ ನಗರ ಪಟ್ಟಣಗಳನ್ನು ತೊಲಗಿ ದೂರದ ಹಳ್ಳಿಯೊಂದರ ಗೋದಲಿಯಲ್ಲಿ. ಆತನ ಜನ್ಮವೃತ್ತಾಂತ ಮೊದಲು ಮುಟ್ಟಿಸಿದ್ದು ಚಕ್ರವರ್ತಿಗಳಿಗಲ್ಲ. ಅಧಿಕಾರಿಗಳಿಗೂ ಅಲ್ಲ. ಉಚ್ಛಕುಲದವರಿಗೂ ಅಲ್ಲ. ಸ್ವಾಮಿ ಪುರೋಹಿತರಿಗಂತೂ ಅಲ್ಲವೇ ಅಲ್ಲ. ದೇವದೂತರು ಗಗನದಿಂದ ಸುವಾರ್ತೆಯನ್ನು ಪ್ರಪ್ರಥಮವಾಗಿ ಸಾರಿ ಹೇಳಿದುದು ದೀನ ದಲಿತರಿಗೆ, ಬಡಬಗ್ಗರಿಗೆ, ಇನ್ನು ಮುಂದೆ ನಿಮ್ಮ ವರ್ಗ ಜನರಿಗೆ ಪ್ರಥಮ ಸ್ಥಾನ. ಪ್ರಥಮರಿಗೆ ಕೊನೆಯ ಸ್ಥಾನ. ಇವು ಕ್ರೈಸ್ತ ಜೀವನ (Christian living) ದ ಮೌಲ್ಯಗಳು.

ಹಗಲಿನ ಪೂಜೆ ನಿಜವಾಗಿಯೂ ಹಬ್ಬದ ಪೂಜೆ. ನಮಗಾಗಿ ಮಗು ಹುಟ್ಟಿದೆ ಎಂಬ ಸುವಾರ್ತೆಯನ್ನು ಹಿಗ್ಗಿನಿಂದ ಹಾರಿದ ಬಳಿಕ ಸಂತ ಚಿನ್ನಪ್ಪ ಹೆಬ್ರೆಯರಿಗೆ ಬರೆದ ಪತ್ರ (1-1-12) ದಿಂದ ಪ್ರಥಮ ವಾಚನ, ಆನಂತರ ಸಂತ ಯೋಹಾನನು ಬರೆದ ಸುವಾರ್ತೆಯಿಂದ ದ್ವಿತೀಯ ವಾಚನ:

ಆದಿಯಲ್ಲಿ ವಾಕ್ಯವಿತ್ತು
ಆ ವಾಕ್ಯ ದೇವರ ಬಳಿಯಲ್ಲಿತ್ತು
ಆ ವಾಕ್ಯ ದೇವರಾಗಿತ್ತು
ಆ ವಾಕ್ಯವೆಂಬುದು ಆದಿಯಲ್ಲಿ ದೇವರ ಬಳಿಯಲ್ಲಿದ್ದನು :
ಆತನ ಮೂಲಕವಾಗಿ ಸಮಸ್ತವು ಉಂಟಾಯಿತು
ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ.

ಆತನಲ್ಲಿ ಜೀವವಿತ್ತು
ಆ ಜೀವ ಮನುಷ್ಯರಿಗೆ ಬೆಳಕಾಗಿತ್ತು
ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ
ಕತ್ತಲು ಅದನ್ನು ಮುಸುಕಲಿಲ್ಲ…

ನಿಜವಾದ ಬೆಳಕು ಲೋಕಕ್ಕೆ ಬರುವುದಾಗಿತ್ತು
ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನೂ ಕೊಡುವಂಥಾದ್ದು,
ಆತನು ಲೋಕದಲ್ಲಿ ಇದ್ದನು,
ಮತ್ತು ಲೋಕ ಆತನ ಮೂಲಕ ಉಂಟಾಯಿತು,
ಆದರೂ ಲೋಕವು ಆತನನ್ನು ಅರಿಯಲಿಲ್ಲ.
ಆತನು ತನ್ನ ಸ್ವಾಸ್ಥ್ಯಕ್ಕೆ ಬಂದನು,
ಆದರೆ ಸ್ವಂತಜನರು ಆತನನ್ನು ಅಂಗೀಕರಿಸಲಿಲ್ಲ.

ಯಾರಾರು ಆತನನ್ನು ಅಂಗೀಕರಿಸಿದರೋ
ಅಂದರೆ ಆತನಲ್ಲಿ ನಂಬಿಕೆಯಿಟ್ಟರೋ
ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು :
ಇವರು ರಕ್ತಸಂಬಂಧದಿಂದಾಗಲಿ ಕಾಮದಿಂದಾಗಲಿ,
ಪುರುಷಸಂಕಲ್ಪದಿಂದಾಗಲಿ ಹುಟ್ಟಿದವರಲ್ಲದೆ, ದೇವರಿಂದಲೇ ಹುಟ್ಟಿದವರು.

ಆ ವಾಕ್ಯವೆಂಬುವನು ನರಾವತಾರ ಎತ್ತಿ ನಮ್ಮ ಮಧ್ಯದಲ್ಲಿ ವಾಸ ಮಾಡಿದನು…
ನಾವು ಆತನ ಮಹಿಮೆಯನ್ನು ನೋಡಿದೆವು :
ಆ ಮಹಿಮೆ ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ, ಆತ ಕೃಪೆಯಿಂದಲೂ ಸತ್ಯದಿಂದಲೂ ತುಂಬಿರುವನಾಗಿದ್ದನು.
(ಯೋಹಾನ ೧. ೧-೫, ೯-೧೪)

ಹೀಗೆ ಕ್ರಿಸ್ತ ಜಯಂತಿಯ ಧಾರ್ಮಿಕಾಚರಣೆಯ ಮೂಲಕ ಕ್ರಿಸ್ತದರ್ಶನ ಭಕ್ತರಿಗಾಗುತ್ತದೆ; ಕ್ರಿಸ್ತ ಪುರಾಣದ ಸಂದೇಶ (Communication) ಅವರ ಹೃದಯವನ್ನು ಮುಟ್ಟುತ್ತದೆ.