ದೈವ ಸಂಬಂಧದ ಹಬ್ಬಗಳು ಜಾನಪದ ಬದುಕಿನ ಬಹುಭಾಗವನ್ನು ಆಕ್ರಮಿಸಿವೆ. ಋತುಮಾನಕ್ಕನುಸಾರವಾಗಿ ಬಂದ ಈ ಹಬ್ಬಗಳ ಅರ್ಥ ಹಿನ್ನೆಲೆ ಇಂದು ಜನತೆಗೆ ತಿಳಿಯದೆ ಹೋದರೂ ಜನಾಂಗದ ಬದುಕಿನಲ್ಲಿ ಹಾಸುಹೊಕ್ಕಾಗಿ ಬೆಳೆದು ಬಂದಿವೆ. ಕಾಲ ಬದಲಾದಂತೆ ಇವುಗಳ ಆಚರಣೆ ನಂಬಿಕೆಗಳು ಬದಲಾಗಿದ್ದರೂ ಪರೋಕ್ಷವಾಗಿ ಕಂಡು ಬರುವ ಎಳೆಗಳನ್ನು ಆಧರಿಸಿ ಇವುಗಳನ್ನು ವಿವೇಚಿಸಬಹುದಾಗಿದೆ. ಅಂಥವುಗಳಲ್ಲಿ ಗುಳ್ಳವ್ವ ಮತ್ತು ನಾಗರಪಂಚಮಿಗಳು ಸೇರುತ್ತವೆ.

ಈ ಹಬ್ಬಗಳ ಆಚರಣೆಯ ಕಾಲ ಆಷಾಢಮಾಸ. ’ಅನ್ನದೇವಿಯ ಆರಾಧನ ಕಾಲ ಆಷಾಢಮಾಸ’ ಎಂಬುದು ದಿ. ಬೆಟಗೇರಿ ಕೃಷ್ಣಶರ್ಮರ ಅಭಿಮತ. ಈ ಮುಂದಿನ ನಾಲ್ಕು ತಿಂಗಳ ಪರಿಸರವನ್ನು ಜಾನಪದ ಮಾತಿನಲ್ಲಿಯೇ ಹೇಳುವುದಾದರೆ ’ಒಟ್ಟಿದ ಬಣಿವೆ, ಹಾಕಿದ ಹಗೆ ಬರಿದಾಗಿಸುವ ಕಾಲ’ ಒಕ್ಕಲು ಮಕ್ಕಳಿಗೆ ತುಂಬು ದುಡಿಮೆಯ ಕಾಲ. ಮಳೆಗಾಲದ ಈ ಸಂದರ್ಭದಲ್ಲಿ ’ಆಷಾಢದ ಗಾಳಿ ಬೀಸಿ ಬೀಸಿ ಹೊಡಿಯುವಾಗ ಹೇಸಿ ನನ ಜೀವ ಹೆಣ್ಣಾಗಬಾರದಿತ್ತ!’ ಎಂಬುದು ರೈತಮಕ್ಕಳ ಜಾನಪದ ಅನಿಸಿಕೆಯಾಗಿದ್ದರೆ ಹೊಲಗೆಲಸದ ಒತ್ತಡ ಕಡಿಮೆ ಇದ್ದ ಹೆಣ್ಣುಮಕ್ಕಳು ಭೂದೇವಿಗೆ ಸಲ್ಲಿಸುವ ಭಕ್ತಿಯ ಪರ್ವಕಾಲ.

ಪುರುಷ ನಿಷ್ಠೆ, ಸ್ತ್ರೀ ನಿಷ್ಠೆ, ಬಾಲಕ ನಿಷ್ಠನಾಗಿ ವ್ಯಕ್ತಪಡುವ ಈ ಜಾನಪದ ಹಬ್ಬದ ಮೂಲ ಎಳೆಗಳು ಇಂದು ದೊರಕುವುದು ಜಾನಪದ ಸಾಹಿತ್ಯದ ಮೂಲಕ. ಅದರಲ್ಲಿ ಸ್ತ್ರೀಜೀವನ ನಿಷ್ಠವಾಗಿ ವ್ಯಕ್ತವಾಗುವ ಉತ್ಸವದ ಹಾಡುಗಳು ಹಬ್ಬ ಹುಣ್ಣಿಮೆಯ ಹಾಡುಗಳನ್ನು ಒಳಗೊಂಡಿವೆ. ಈ ಹಬ್ಬ ಹುಣ್ಣಿಮೆಯ ಹಾಡುಗಳು ಮುಖ್ಯವಾಗಿ ಐದು ಪ್ರಕಾರದ ಮಣ್ಣು ಪೂಜೆಗೆ ಸಂಬಂಧಿಸಿವೆ. ಜಾನಪದರು ಈ ಐದು ಬಗೆಯ ಮಣ್ಣುಪೂಜೆಯನ್ನು ಮೂರ್ತಿಶಿಲ್ಪದ ಮೂಲಕ ಜೀವಂತವಾಗಿರಿಸಿಕೊಂಡು ಬಂದಿದ್ದಾರೆ. ಅವು ಅರಳೆಲೆ ಬಸವ, ಗುಳ್ಳವ್ವ.

ಕೃಷಿ ಸಂಸ್ಕೃತಿಯ ಅಂಗವಾಗಿ ಬಂದ ಈ ದೇವತೆಗಳು ಗ್ರಾಮ ರಕ್ಷಣೆಯ ಜವಾಬ್ದಾರಿ ಹೊತ್ತು ನಿಂತಿವೆ. ಜೇಷ್ಠ ಬಹುಳ ಅಮಾವಾಸ್ಯೆಯಲ್ಲಿ ಅರಳೆಲೆ ಬಸವನನ್ನು, ಆಷಾಢದಲ್ಲಿ ಗುಳ್ಳವ್ವ, ಶ್ರಾವಣಮಾಸದಲ್ಲಿ ಹುತ್ತಪ್ಪ ಅಥವಾ ನಾಗ. ಭಾದ್ರಪದದಲ್ಲಿ ಗಣಪತಿ, ಭಾದ್ರಪದ ಶುದ್ದ ಅಷ್ಟಮಿಯಲ್ಲಿ ಜೋಕುಮಾರ, ಬಾದ್ರಪದ ಅಶ್ವಿಜ ಕಾಲದಲ್ಲಿ ಗುರ್ಜಿಯನ್ನು ಪೂಜಿಸುತ್ತಾರೆ. ಇದನ್ನು ಗಮನಿಸಿದರೆ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ‍್ ಈ ನಾಲ್ಕು ತಿಂಗಳು ಹಬ್ಬದ ಸಂದರ್ಭವೆಂದು ಹೇಳಬೇಕಾಗುತ್ತದೆ.

ಪ್ರಸ್ತುತ ಗುಳ್ಳವ್ವ ಮತ್ತು ನಾಗರಪಂಚಮಿಯ ಮಧ್ಯಕ್ಕೆ ಒಂದು ತಿಂಗಳು ಅಂತರ. ಎರಡನೆಯ ಪ್ರಕಾರದ ಮಣ್ಣು ಪೂಜೆ ’ಗುಳ್ಳವ್ವನಿಗೆ ಸಂಬಂಧಿಸಿದ್ದರೆ, ಮೂರನೆಯ ಪ್ರಕಾರದ ಮಣ್ಣು ಪೂಜೆ ಹುತ್ತಪ್ಪನಿಗೆ ಸಂಬಂಧಿಸಿದೆ. ಆಷಾಢಕಾಲದಲ್ಲಿ ಪೂಜೆಗೊಳ್ಳುವ ದೇವತೆ ಗುಳ್ಳವ್ವ ಜಾನಪದ ದೇವತೆಯೇ ಹೊರತು ಇದಕ್ಕೆ ಯಾವ ಪುರಾಣಗಳಲ್ಲಿಯೂ ಸ್ಥಾನವಿಲ್ಲ. ಆದರೂ ’ಗುಳ್ಳವ್ವ ಉಂಡಕಿ ಗಂಡಲ್ಲ’ ಎಂಬ ಗಾದೆ ಇದ್ದರೂ ಉತ್ತರ ಕರ್ನಾಟಕದ ಅಧಿಕ ಭಾಗಗಳಲ್ಲಿ ಪೂಜಿಸಲ್ಪಡುವ ದೇವತೆ ಇವಳು. ಇಲ್ಲಿಯ ಒಂದು ವಿಶೇಷತೆ ಎಂದರೆ ಉತ್ತರ ಕರ್ನಾಟಕಕ್ಕಷ್ಟೇ ಸೀಮಿತವಾದ ಸಂಪ್ರದಾಯವಿದು. ಮಣ್ಣೆತ್ತಿನ ಅಮಾವಾಸೆಯಿಂದ ನಾಗರ ಪಂಚಮಿಯ ಅಮಾವಾಸೆಗೆ ಮಧ್ಯದ ಸೇತುವೆಯಾಗಿ ನಿಂತಿದೆ ಗುಳ್ಳವ್ವನ ಹಬ್ಬ. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆ, ವಿಧಾನಗಳನ್ನು ವೈವಿಧ್ಯತೆ ಪಡೆದ ಹಬ್ಬವಿದು.

ಆಷಾಢದ ಪ್ರತಿ ಮಂಗಳವಾರ ಗುಳ್ಳವ್ವನ ವಾರವೆನಿಸಿದೆ. ಕೆಲವು ಸಲ ಆ ತಿಂಗಳಲ್ಲಿ ನಾಲ್ಕು ಮಂಗಳವಾರ ಬಂದರೆ ಇನ್ನು ಕೆಲವು ಸಲ ಐದು ಮಂಗಳವಾರ ಬರುವುದುಂಟು. ಈ ವಾರಗಳನ್ನು ಒಂದೆತ್ತರ ಗುಳ್ಳವ್ವ, ಎರಡೆತ್ತರ ಗುಳ್ಳವ್ವ …. ಎಂದು ಕರೆದುದುಂಟು. ಇದು ಒಕ್ಕಲು ಮಕ್ಕಳು ಭೂಮಿತಾಯಿಗೆ ಕೃತಜ್ಞತೆ ಅರ್ಪಿಸುವ ಸಮಯವಾದರೆ, ಮೊದಲಗಿತ್ತಿಯಾಗಿ  ಪತಿಗೃಹಕ್ಕೆ ತೆರಳಿದ ತರುಣಿಗೆ ತವರಿಗೆ ಬರಲು ಒಳ್ಳೆಯ ಸುಸಂಧಿ. ಕೊನೆಯ ಗುಳ್ಳವ್ವನ ಆಟಕ್ಕಾದರೂ ಅವಳು ತವರಿಗೆ ಬರಲೇಬೇಕು. ತವರಿನವರು ಮಗಳನ್ನು ಕರೆಯಬರುವಲ್ಲಿ ಸ್ವಲ್ಪ ವಿಳಂಬ ಮಾಡಿದರೆ ಸಾಕು ಅವಳ ದುಃಖಕ್ಕೆ ಕೊನೆ ಮೊದಲಿಲ್ಲ.

ಗುಳ್ಳವ್ವನ ಮಣ್ಣ ತರಲಿಲ್ಲ
ಗುಲಗಂಜಿ ಹಚ್ಚಿ ಆಡಲಿಲ್ಲ
ಸುಳ್ಳಬಂತೇನ ನಾಗರಪಂಚಮಿ | ನಾರಿ | ಸುವ್ವನಾರಿ

ಮಾವಿನ ಗಿಡ ಮರೆಯಾಯ್ತು
ತವರಮನಿ ದೂರಾಯ್ತು
ಯಾವಾಗ ನೋಡಲೆವ್ವ ತಾಯಿ ಮಾರಿ | ನಾರಿ | ಸುವ್ವನಾರಿ.

ಎಂಬಲ್ಲಿ ಹೆಣ್ಣಿಗೆ ಇದ್ದ ತವರಿನ ಹಂಬಲ, ತಾಯಿ ಮುಖ ನೋಡುವ ಬಯಕೆ ವ್ಯಕ್ತವಾಗುತ್ತದೆ.

ಗುಳ್ಳವ್ವನ ಹಬ್ಬದಾಚರಣೆ ವೈವಿಧ್ಯಪೂರ್ಣವೆನಿಸಿದೆ. ಆಷಾಢದ ಮೊದಲ ಮಂಗಳವಾರ ಹೆಣ್ಣುಮಕ್ಕಳೆಲ್ಲ ಗುಂಪು ಕಟ್ಟಿಕೊಂಡು ತಿಂಡಿ ತಿನಿಸಿನೊಂದಿಗೆ ಅಲ್ಲಿ ಕೇರಿಗೆ ಹೋಗುವುದುಂಟು. ಊರ ಸಮೀಪದ ವಿಶಾಲವಾದ ಹೊಳೆದಂಡೆ, ಕೆರೆದಂಡೆ, ಗುಡ್ಡದ ಪ್ರದೇಶ, ದೇವಸ್ಥಾನದ ಅಕ್ಕಪಕ್ಕದ ಸ್ಥಳಗಳು ಇವರ ಅಲ್ಲಿಕೇರಿಯ ತಾಣಗಳು. ಈ ನೀರು ನೆರಳಿದ್ದ ಸ್ಥಳದಲ್ಲಿ ಸಂತೋಷದಿಂದ ಎಲ್ಲರೂ ಕುಳಿತು ತಂದ ತಿಂಡಿ ತಿಂದು ಇಳಿಹೊತ್ತಿನಲ್ಲಿ ಒಳ್ಳೆಯ ಮಣ್ಣು ಅಗೆದು ಅರಲು ಮಾಡಿಕೊಳ್ಳುವುದು. ಎಲ್ಲರೂ ಸಾಮೂಹಿಕವಾಗಿ ಗುಳ್ಳವ್ವನ ಹಾಡ ಹೇಳುತ್ತ ವರ್ತುಳಾಕಾರವಾಗಿ ಕುಳಿತುಕೊಳ್ಳುವುದು. ತಮ್ಮ ಮಧ್ಯಕ್ಕೆ ಒಂದು ಕಲ್ಲನ್ನಿಟ್ಟು ಅದಕ್ಕೆ ’ತಳವಾರ’ ಎಂದು ನಾಮಕರಣ ಮಾಡುವರು. ಕಟ್ಟಿಕೊಂಡು ಬಂದ ಅರಳನ್ನು ತಳವಾರನ ಮೇಲೆ ಸುರಿದು

ಗುಳ್ಳವ್ವ ಗುಳ್ಳವ್ವ ಗುಳ್ಳಪರಾಯ
ಒಣಕಿಮಿಂಡ ತಳವರ ತಾಟ್ಯಾ
ಹುಚನನ ಹಾಟ್ಯಾ ||

ಎಂಬ ಆಶ್ಲೀಲ ಹಾಡುಗಳನ್ನು ಹಾಡುತ್ತ, ತಳವಾರನನ್ನು ಬೈಯುತ್ತ ಗುಳ್ಳವ್ವನ ಮಣ್ಣನ್ನು ಮನೆಗೆ ತರುವರು.

ಪ್ರಾದೇಶಿಕವಾಗಿ ಈ ಸಂಪ್ರದಾಯದ ಆಚರಣೆಯೂ ವಿಭಿನ್ನವೆನಿಸಿದೆ. ಕೆಲವು ಪ್ರದೇಶಗಳಲ್ಲಿ ಸಾರ್ವಜನಿಕ ಗುಳ್ಳವ್ವನ ಹಬ್ಬದ ಆಚರಣೆ ಇದ್ದರೆ, ಕೆಲವು ಕಡೆಗಳಲ್ಲಿ ವೈಯಕ್ತಿಕವಾಗಿ ಆಚರಿಸುವ ಸಂಪ್ರದಾಯವಿದೆ. ಈ ವೈಯಕ್ತಿಕತೆ ಗೌಡರಮನೆಯೋ, ಊರ ಪ್ರಮುಖರ ಮನೆಯೋ ಅಥವಾ ವೈಯಕ್ತಿಕ ಗೃಹಗಳೂ ಆಗಿರುತ್ತವೆ.

ಮಣ್ಣಿನ ಚೌಕಾಕಾರದ ಪೀಠದ ಮೇಲೆ ಮಣ್ಣಿನ ಮುದ್ರೆಯನ್ನಿಟ್ಟು ಮೊದಲನೆಯ ಮಂಗಳವಾರ ಲಿಂಗಾಕಾರದ ಗುಳ್ಳವ್ವ, ಎರಡನೆಯ ಮಂಗಳವಾರ ಗುಡಿಯಾಕಾರದ ಗುಳ್ಳವ್ವ. ಮೂರನೆಯ ಮಂಗಳವಾರ ಕಟ್ಟಿಯಾಕಾರದ ಗುಳ್ಳವ್ವ. ನಾಲ್ಕನೆಯ ಮಂಗಳವಾರ ನವಿಲಾಕಾರದ ಗುಳ್ಳವ್ವ. ಐದನೆಯ ಮಂಗಳವಾರ ಚಂಗಳವ್ವ ಅಂದರೆ ಹೆಣ್ಣಿನಾಕಾರದ ಗುಳ್ಳವ್ವನ ಮೂರ್ತಿಯನ್ನು ಮಾಡಿ ಪೂಜಿಸುವ ಸಂಪ್ರದಾಯವಿದೆ. ಇನ್ನು ಕೆಲವು ಕಡೆಗಳಲ್ಲಿ ಹದ ಮಾಡಿದ ಮಣ್ಣಿನ ನಾಲ್ಕು ಕಂಬಗಳನ್ನು ಮಾಡಿ ಒಂದೇ ಮಣೆಯ ಮೇಲೆ ಚೌಕಾಕಾರವಾಗಿಟ್ಟು ಮುಂದಿನ ಎರಡು ಕಂಬಗಳ ಮಧ್ಯಕ್ಕೆ ಸುಂದರವಾದ ಕುಸುರಿನ ಬಾಗಿಲನ್ನಿಟ್ಟು ಆ ನಾಲ್ಕು ಕಂಬಗಳ ಮೇಲೆ ದೊಡ್ಡ ಮಣೆ ಹಾಕುವುದುಂಟು. ಆ ಕಂಬ, ಬಾಗಿಲದ ಅಕ್ಕಪಕ್ಕಗಳಿಗೆ ಗುಲಗಂಜಿ, ಕುಶಿಬಿ, ಜಾಲಿ ಹೂಗಳನ್ನು ಏರಿಸುವುದುಂಟು. ಈ ಪ್ರಕಾರ ನಾಲ್ಕು ವಾರ ಒಂದರ ಮೇಲೊಂದು ಬಾಗಿಲಿನ ಮಹಡಿ ಏರಿಸುತ್ತ ನಾಲ್ಕನೆಯ ವಾರಕ್ಕೆ ನಾಲ್ಕು ಕಂಬದ ಎತ್ತರದ ಗುಳ್ಳವ್ವನ ಗೋಪುರ ಮಾಡಿ ಶೃಂಗಾರ ಮಾಡುವರು. ಇದಕ್ಕೆ ಜರತಾರಿ ಹೂವಿನ ಖಣವನ್ನಾಗಲಿ, ಬಣ್ಣ ಬಣ್ಣದ ಹಾಳೆಗಳನ್ನಾಗಲಿ, ಛತ್ತರಿಗೆಯಂತೆ ಮಾಡಿ ಚುಚ್ಚುವುದು. ಪ್ರತಿವಾರವೂ ಹೊಸ ಮಣ್ಣನ್ನು ತಂದು ಈ ಗುಳ್ಳವ್ವನನ್ನು ಮಾಡುತ್ತಿದ್ದರೆ ಕೆಲವು ಪ್ರದೇಶಗಳಲ್ಲಿ ಕೊನೆಯ ಮಂಗಳವಾರ ಮಾತ್ರ ಕುಂಬಾರ ತಿಗರಿಯ ಮೇಲೆ ಮಾಡಿದುದನ್ನು ತಂದು ಪೂಜಿಸುವುದುಂಟು, ಇದನ್ನು ಕುಂಬಾರ ಗುಳ್ಳವ್ವ ಎಂದು ಕರೆಯುವ ವಾಡಿಕೆ ಇದೆ.

ನಾಲ್ಕು ವಾರ ಗುಳ್ಳವ್ವನ ಮುಂದೆ ಎಡಭಾಗದಲ್ಲಿ ಒಂದು ಚಿಕ್ಕ ಗಾತ್ರದ ಮಣ್ಣಿನ ಕಂಬ ಮಾಡಿ ಅದಕ್ಕೆ ಮನುಷ್ಯಾಕೃತಿಯ ಕುತ್ತಿಗೆ ಹಚ್ಚಿ ಅದನ್ನು ’ಗೊಗ್ಗವ್ವ’ ಎಂದು ಕರೆವ ಪರಿಪಾಠವಿದೆ. ಇತ್ತೀಚೆಗೆ ಕಂಬದ ಬದಲಾಗಿ ಒಬ್ಬ ಕುರೂಪಿ ಹೆಣ್ಣುಮಗಳ ವಿಗ್ರಹ ಮಾಡಿ ಸೀರೆ ಆಭರಣ ಹಾಕಿ ಅವಳ ಕೈಯಲ್ಲಿ ಆರತಿ ಕೊಟ್ಟು ಕುಳ್ಳಿರಿಸುವುದುಂಟು. ಹಳ್ಳಿಗಳಲ್ಲಿ ಕುರೂಪಿಯಾದ ಹೆಣ್ಣುಮಗಳೊಬ್ಬಳನ್ನು ಕಂಡರೆ ’ ಗುಳ್ಳವ್ವನ ಮುಂದಿನ ಗೊಗ್ಗವ್ವ ಆಗ್ಯಾಳ’ ಎಂಬ ಹೇಳಿಕೆ ಇದೇ ಹಿನ್ನೆಲೆಯಿಂದ ಬಂದಿರಬೇಕು. ದೀವಟಿಗೆಗೆ ಗೊಗ್ಗವ್ವ ಎನ್ನುವುದನ್ನು ಇಲ್ಲಿ ಸ್ಮರಿಸಿದರೆ ಗುಳ್ಳವ್ವನ ಮುಂದೆ ದೀಪ ಹಿಡಿಯುವ ದೇವತೆ ಇದಾಗಿರಬಹುದೆನಿಸುತ್ತದೆ. ಈ ಇಬ್ಬರೂ ದೇವತೆಗಳನ್ನು ಪೂಜಿಸಿ ಸಿಹಿ ಪದಾರ್ಥ ಎಡೆ ಹಿಡಿದು ಅವಳಿಗೆ ಸಂಬಂಧಪಟ್ಟ ಹಾಡು ಹೇಳುತ್ತ ಓರಿಗೆಯ ಗೆಳತಿಯರೆಲ್ಲ ಒಂದು ಗೂಡಿ ಗುಳ್ಳವ್ವನನ್ನಿಟ್ಟ ಎಲ್ಲರ ಮನೆಗಳಿಗೂ ಹೋಗಿ ಆರತಿ ಬೆಳಗಿ ಬರುವ ಸಂಪ್ರದಾಯವಿದೆ. ಇದು ವೈಯಕ್ತಿಕ ಗುಳ್ಳವ್ವನ ಪೂಜೆಯಾಗಿದ್ದು, ಸಾರ್ವಜನಿಕ ಗುಳ್ಳವ್ವನ ಪೂಜೆಯೂ ಕೆಲವು ಪ್ರದೇಶಗಳಲ್ಲಿ  ಪ್ರಚಾರದಲ್ಲಿದೆ.

ಪ್ರಮುಖ ಬೀದಿಯ ಪ್ರತಿಯೊಂದು ಮನೆಯ ಹೆಣ್ಣುಮಕ್ಕಳು ಈ ಸಾರ್ವಜನಿಕ ಗುಳ್ಳವ್ವನ ಪೂಜೆಯಲ್ಲಿ ಭಾಗವಹಿಸುವರು. ಗಂಡಸರು ಪೂಜಾ ಕಾರ್ಯಕ್ಕೆ ಅವಶ್ಯಕ ನೆರವು ನೀಡುವುದುಂಟು. ಬೀದಿಯ ಗುಳ್ಳವ್ವ ಏಳು ಒಂಬತ್ತು ನೆಲೆಯ ಗೋಪುರಾಕೃತಿಯಲ್ಲಿರುತ್ತದೆ. ಪ್ರತಿಯೊಂದು ನೆಲೆಯೂ ಸಾಲು ಬಾಗಿಲುಗಳಿಂದ ಕೂಡಿರುವುದು. ಕೊನೆಯ ಬಾಗಿಲುವುಳ್ಳ ಗೋಪುರವೊಂದು ಶಿಖರದ ರೂಪದಲ್ಲಿರುವುದು. ಈ ಗೋಪುರದ ಒಳಗಡೆ ಮಣ್ಣಿನಿಂದ ಮಾಡಿದ ಬಸವನ ಮೂರ್ತಿಯನ್ನಿಸಿರುವರು. ಗೋಪುರದ ಮುಂಬದಿಯ ಮೇಲೆಲ್ಲ ಗುಲಗಂಜಿ, ಕುಶಿಬಿ, ಬೇಳೆ ಚುಚ್ಚಿದಂತೆ ಒಳ್ಳೆಯ ಹುಳುಹು ಹೊಳಪುಗಳನ್ನು ಈ ಕಂಬ, ಗೋಪುರದ ಮೇಲೆ ಬರೆಯುವುದಂಟು. ತಳಿರು ತೋರಣಗಳಿಂದ ಕೂಡಿದ ಗುಳ್ಳವ್ವನ ಮಂಟಪ ಅಲಂಕೃತವಾಗಿರುವುದು. ಸಾರ್ವಜನಿಕವಾಗಿ ಹಬ್ಬದ ವಾತಾವರಣ ನಿರ್ಮಿಸುವ ಪದ್ಧತಿ ಇದು.

ರಾತ್ರಿ ಹೆಣ್ಣುಮಕ್ಕಳೆಲ್ಲ ಒಂದು ಗೂಡಿ ತಮ್ಮ ಬೀದಿಯ ಗುಳ್ಳವ್ವನನ್ನು ಪೂಜಿಸಿ, ಹಾಡು ಹಾಡುತ್ತ ಮನೆ ಮನೆಗೆ, ಓಣಿ ಓಣಿಗೆ ತಿರುಗಿ ಆರತಿ ಮಾಡಿ ಬರುವರು. ಗುಳ್ಳವ್ವನ್ನನಿಟ್ಟ ಒಂದು ಮನೆಯಲ್ಲಿ ತಾವು ತಂದ ತಿಂಡಿ ತಿನಿಸು ಒಂದು ಬೆಳತನಕ ಗುಳ್ಳವ್ವನ ಗುಣಗಾನದಲ್ಲಿ ಕಾಲ ಕಳೆಯುವರು. ಸಾರ್ವಜನಿಕ ಪೂಜೆಯಾದ ನಂತರ ಗುಳ್ಳವ್ವನ ಮುಂದೆ ಹುಡುಗರು ಕೆಸರಿನ ಕೋಣವೊಂದನ್ನು ಬಲಿಕೊಡುವ ಸಂಪ್ರದಾಯವಿದೆ. ಈ ಪದ್ಧತಿ ಗುಳ್ಳವ್ವ ಶಕ್ತಿ ದೇವತೆಯ ಅವತಾರವೆಂದು ಭಾವನೆಯನ್ನು ವ್ಯಕ್ತಪಡಿಸುವಂತಿದೆ. ಈ ಗುಳ್ಳವ್ವನನ್ನು ಪೂಜಿಸುವ ಜೊತೆ ಜೊತೆಯಲ್ಲಿ ಗುಳ್ಳವ್ವನ ಮನೆಯ ಮೇಲಿಟ್ಟ ಬಸವನ ವಿಗ್ರಹವೂ ಪೂಜೆಗೊಳ್ಳುವುದುಂಟು.

ಬಸವಕ್ಕ ಬಸವನ್ನೀರೆ ಬಸವನ ಪಾದಕ್ಕ ಶರಣೆನ್ನೀರೆ
ಒಂದು ಸುತ್ತಿನ ಕೋಟಿ | ಅದರೊಳಗೆ
ಏರಿ ನಿಂತಾನ ಬಸವ ||

ಎರಡು ಸುತ್ತಿನ ಕೋಟಿ | ಅದರೊಳಗ
ಹರಡಿ ನಿಂತಾನ ಬಸವ ||

ಎಂದು ಒಕ್ಕಲಿಗನಿಗೆ ಭಾಗ್ಯದಾತನಾದ ಬಸವನ್ನ ನಾನಾ ರೀತಿ ಸ್ಮರಿಸಿ ನಾಮಸ್ಮರಣೆ ಮಾಡುವುದುಂಟು ಇದರೊಂದಿಗೆ ಗುಳ್ಳವ್ವನನ್ನು ಕುರಿತ ಕೆಲವು  ಸಂಪ್ರದಾಯದ ಹಾಡುಗಳು ಅಲ್ಲಲ್ಲಿ ದೊರಕುತ್ತವೆ.

ಗುಳ್ಳವ್ವನ ಮಣ್ಣ ತರಲೇ ಇಲ್ಲ
ಗುಲಗಂಜಿ ಹಚ್ಚಿ ಆಡಲಿಲ್ಲ
ಈ ವರುಷ ನಾಗರಪಂಚಮಿ | ನಾರಿ | ಸುವ್ವನಾರಿ ||

ಕರಿಯ ಸೀರೆಯನುಟ್ಟು ಕರಿಯ ಕುಪ್ಪಸ ತೊಟ್ಟು
ಕರನಾಟಕದವರು ನಮ್ಮವರು | ನಾರಿ ಗುಳ್ಳವ್ಗ
ಕರಕೀಯ ಮುಯ್ಯ ತಂದಾರ | ನಾರಿ | ಸುವ್ವನಾರಿ ||

ಕೆಂಪ ಸೀರೆಯನುಟ್ಟು ಕೆಂಪು ಕುಪ್ಪಸ ತೊಟ್ಟು
ಮಲ್ಲಾಡದವರು ನಮ್ಮವರು | ನಾರಿ | ಗುಳ್ಳವ್ಗ
ಸಂಪಿಗಿ ಮುಯ್ಯ ತಂದಾರ | ನಾರಿ | ಸುವ್ವನಾರಿ ||

ಬಿಳಿಯ ಸೀರೆಯನುಟ್ಟು ಬಿಳಿಯ ಕುಪ್ಪಸ ತೊಟ್ಟು
ಬೆಳವಲದವರು ನಮ್ಮವರು | ನಾರಿ | ಗುಳ್ಳವ್ಗ
ಬೆಳ್ಳನ್ನ ಮುಯ್ಯ ತಂದಾರ | ನಾರಿ | ಸುವ್ವನಾರಿ ||

ಗಂಡನ ಮನೆಯಿಂದ ತವರಿಗೆ ಬರುವ ಹೆಣ್ಣುಮಕ್ಕಳು ಗುಳ್ಳವ್ವನಿಗೆ ಮುಯ್ಯವನ್ನು ತರುವ ಪದ್ಧತಿ ಕೆಲವು ಪ್ರದೇಶಗಳಲ್ಲಿ ಬಳಕೆಯಲ್ಲಿದೆ. ಈ ಪದ್ಧತಿಯನ್ನು ಈಗಲೂ ಬೆಳುವಲದಲ್ಲಿ ಮುನ್ನಡೆಸಿಕೊಂಡು ಬಂದಿರುವುದನ್ನು ಮನಗಾಣಬಬಹುದಾಗಿದೆ.

ಪೂಜೆಯ ನಂತರ ಕೆಲವು ಪ್ರದೇಶಗಳಲ್ಲಿ ಗುಳ್ಳವ್ವನ ಮುಂದಿದ್ದ ಗೊಗ್ಗವ್ವನನ್ನು ಕುಟ್ಟುವ ಕಾರ್ಯಕ್ರಮ ನಡೆಯುವುದು. ಅಲಂಕಾರಿಕ ಗೊಗ್ಗವ್ವನನ್ನು ಎತ್ತಿಕೊಂಡು ಬಂದ ಮಹಿಳೆಯರು ಊರ ಪ್ರಮುಖರ ಮನೆಯ ಮುಂದೆ ಬಣ್ಣದ ಒನಕೆಯಿಂದ ಕುಟ್ಟುವರು. ಹೀಗೆ ಕುಟ್ಟುವ ಕಾರ್ಯ ಸ್ಪರ್ಧಾತ್ಮಕವಾಗಿ ಜರುಗುತ್ತಿದ್ದು ಆಗ ವೈವಿಧ್ಯಪೂರ್ಣವಾದ ಹಾಡಿನ ಮಾದರಿಗಳು ದೊರಕುತ್ತವೆ. ಇದರಲ್ಲಿ ’ಸುವ್ವಿ ಸುವ್ವಿ ಸುವ್ವಾಲೆ’ ಎಂಬ ಪಲ್ಲವಿಯೊಂದಿಗೆ ತಮ್ಮ ಪಕ್ಷದ ಹೆಚ್ಚಳವನ್ನು ಸಾಧಿಸಿ ತೋರಿಸುವುದು ಇದರ ಪ್ರಮುಖ ಉದ್ದೇಶವೆನಿಸಿದೆ.

ಗೊಗ್ಗಿ ಕುಟ್ಟೀನವ್ವ ಗೊಗ್ಗಿ ಕುಟ್ಟೀನವ್ವ
ಬಣ್ಣದ ಒನಕೀಲೆ ಸುವ್ವಿ | ಸುವ್ವಿ | ಸುವ್ವಾಲೆ ||

ಅವರು ಕುಟ್ಟ್ಯಾರವ್ವ ಅವರು ಕುಟ್ಟ್ಯಾರವ್ವ
ಮುರುಕ ಒನಕೀಲೆ ಸುವ್ವಿ | ಸುವ್ವಿ | ಸುವ್ವಾಲೆ ||

ಅಕ್ಕಿ ಕುಟ್ಟೇನವ್ವ ಅಕ್ಕಿ ಕುಟ್ಟೇನವ್ವ
ಬಣ್ಣದ ಒನಕೀಲೆ ಸುವ್ವಿ | ಸುವ್ವಿ | ಸುವ್ವಾಲೆ ||

ಅವರು ಕುಟ್ಟ್ಯಾರವ್ವ ಅವರು ಕುಟ್ಟ್ಯಾರವ್ವ
ಮುರುಕ ಒನಕೀಲೆ | ಸುವ್ವಿ ಸುವ್ವಿ | ಸುವ್ವಾಲೆ ||

ಅಕ್ಕಿ ಕೇರೆನವ್ವ ಅಕ್ಕಿ ಕೇರೆನವ್ವ
ಬಣ್ಣದ ಮುತ್ತಲದಾಗ | ಸುವ್ವಿ | ಸುವ್ವಿ | ಸುವ್ವಾಲೆ ||

ಅವರು ಕೇರ‍್ಯಾರವ್ವ ಅವರು ಕೇರ‍್ಯಾರವ್ವ
ಹರಕ ಮರದಾಗ | ಸುವ್ವಿ | ಸುವ್ವಿ | ಸುವ್ವಾಲೆ  ||

ಅನ್ನ ಮಾಡೇನವ್ವ ಅನ್ನ ಮಾಡೇನವ್ವ
ತಾಂಬರ ತಪ್ಪೇಲ್ಯಾಗ | ಸುವ್ವಿ | ಸುವ್ವಿ | ಸುವ್ವಾಲೆ ||

ಅವರು ಮಾಡ್ಯಾರವ್ವ ಅವರು ಮಾಡ್ಯಾರವ್ವ
ಒಡಕ ಗಡಿಗ್ಯಾಗ | ಸುವ್ವಿ | ಸುವ್ವಿ | ಸುವ್ವಾಲೆ

ಊಟಕ್ಕ ನೀಡೇನವ್ವ ಊಟ ನೀಡೇನವ್ವ
ಬೆಳ್ಳಿಯ ಬಟ್ಟಲದಾಗ | ಸುವ್ವಿ | ಸುವ್ವಿ | ಸುವ್ವಾಲೆ ||

ಅವರು ನೀಡ್ಯಾರವ್ವ ಅವರು ನೀಡ್ಯಾರವ್ವ
ಹರಕೆ ಪತ್ತರೊಳ್ಯಾಗ | ಸುವ್ವಿ ಸುವ್ವಿ ಸುವ್ವಾಲೆ ||

ನೀರ ಕೊಟ್ಟೇನವ್ವ ನೀರ ಕೊಟ್ಟೇನವ್ವ
ಚಿನ್ನದ ಚರಿಗ್ಯಾಗ | ಸುವ್ವಿ ಸುವ್ವಿ | ಸುವ್ವಾಲೆ ||

ಅವರು ಕೊಟ್ಟಾರವ್ವ ಅವರು ಕೊಟ್ಟಾರವ್ವ
ಮಣ್ಣಿನ ಮಗಿಯಾಗ | ಸುವ್ವೀ ಸುವ್ವೀ | ಸುವ್ವಾಲೆ ||

ನಾವು ಮಲಗೇವವ್ವ ನಾವು ಮಲಗೇವವ್ವ
ಮಜಲಿನ ಮನಿಯಾಗ | ರತ್ನದ ಕಂಬಳಿಮಾಗ್ಯ | ಬಣ್ಣದ ಮಂಚದಮ್ಯಾಗ  ||

ಅವರು ಮಲಗ್ಯಾರವ್ವ ಅವರು ಮಲಗ್ಯಾರವ್ವ
ಚಿಪ್ಪಾಡಿ ಚಪ್ಪರದಾಗ | ಹರಕ ದುಬಟ್ಯಾಗ | ಬೀಸುಕಲ್ಲ  ಸಂದ್ಯಾಗ.

ಹೀಗೆ ಹಾಡುತ್ತ ಒನಕೆಯಿಂದ ಗೊಗ್ಗಿಯನ್ನು ಕುಟ್ಟುವಲ್ಲಿ ಸ್ಪರ್ಧಾತ್ಮಕ ವಿನೋದ ವ್ಯಕ್ತವಾಗುವಂತೆ ಎಷ್ಟೋ ಸಲ ತಿಳಿಯದೆ ತಮ್ಮ ಕಾಲವನ್ನು ತಾವೇ ಕುಟ್ಟಿಕೊಂಡು ಅಪಹಾಸ್ಯದ ನಗುವಿನಲ್ಲಿ ಅಳುವನ್ನು ನುಂಗುವುದುಂಟು.

ಮಾರನೆಯ ದಿನ ಬುಧವಾರ ಗುಳ್ಳವ್ವನ ವಿಸರ್ಜನೆಯ ಕಾಲ. ಹಳ್ಳಿಗರಿಗೆ ಪೂಜೆಯಷ್ಟೇ ಮಹತ್ವಪೂರ್ಣವಾದ ಸಂದರ್ಭವಿದು. ವರ್ಗ ವರ್ಣ ವಯೋಮಾನಗಳ ಅಂತರವಿಲ್ಲದೆ ನಿಸರ್ಗದ ಮಡಿಲಲ್ಲಿ ಕೈಕೊಳ್ಳುವ ಅಲ್ಲಿ ಕೇರಿ ಅಥವಾ ಪಂಕ್ತಿಭೋಜನ ಇಲ್ಲಿ ಮುಖ್ಯ. ತಲೆಯ ಮೇಲೆ ಗುಳ್ಳವ್ವನನ್ನು ಹೊತ್ತು ಜೊತೆಗೆ ಬುತ್ತಿಯ ಗಂಟಿನೊಂದಿಗೆ ಬನಕ್ಕೆ ಬಂದು ಗುಳ್ಳವ್ವನನ್ನು ಪೂಜಿಸಿ ಊಟ ಮಾಡುತ್ತಾರೆ. ಆಮೇಲೆ ಅವರಲ್ಲಿಯೇ ವಧು – ವರ  ಪಕ್ಷ ರಚಿಸಿಕೊಂಡು ಆಟವಾಡುವ ಸಂಪ್ರದಾಯದಲ್ಲಿ ಕೆಲವು ಕಡೆಗೆ ’ಚೆನಮೀರಿ ಆಟ’ ಹೆಚ್ಚು ಬಳಕೆಯಲ್ಲಿದೆ.

ಚನಮೀರಿ ಮತ್ತು ಆಕೆಯ ಗಂಡ ಮಲ್ಲೇಶಿಯ ಸಂಕೇತವಾಗಿ ಎರಡು ಕಲ್ಲುಗಳನ್ನು ಮಾಡಿ ಮದುವೆಯಾಟ ಆಡುತ್ತಾರೆ.  ಮದುವೆಯ ನಂತರ ಚನಮೀರಿಯ ಪತಿ ಅವಳನ್ನು ಕರೆಯಬರುವುದು. ಅವಳ ತವರಿನವರು ಅವಳಿಗೆ ಸ್ವಸ್ಥ್ಯವಿಲ್ಲೆಂದು ಹೇಳಿಕಳಿಸುವುದು. ಹೀಗೆ ಎರಡು ಮೂರು ಬಾರಿ ಈ ತಿರುಗಾಟ ನಡೆಯುತ್ತದೆ. ಕೊನೆಗೊಮ್ಮೆ ವೈದ್ಯನಾಗಿ ಬಂದ ಹುಡುಗನೊಬ್ಬನಿಂದ ತೊಪ್ಪಲು ಬೇರಿನ ಔಷಧ ಕೊಡಿಸಿ, ಅವಳ ರೋಗ ಒಮ್ಮೆ ಹಗುರು, ಒಮ್ಮೆ ಜೋರಾಯಿತೆಂದು ನಟಿಸಿ ಕೊನೆಗೆ ಅವಳು ಸತ್ತುಹೋದಳೆಂದು ಸಾರಿದಾಗ ಅಲ್ಲಿ ನೆರೆದ ಜನರೆಲ್ಲ ಅವಳ ಹೆಸರಿನಲ್ಲಿ ಹಾಡಿಕೊಂಡು ಅಳುವುದುಂಟು.

ಸತ್ತೇನ ಚನಮೀರಿ
ನಿನಗಂಡ ಮಲ್ಲೇಶಿ
ಹಾವೇರಿ ಪ್ಯಾಟ್ಯಾಗ
ಬಳ್ಳೊಳ್ಳಿ ಮಾರುವಾಗ
ಉಳ್ಳಾಡ್ಸಿ ಹೊಡಿತಿದ್ದ
ಬಿಡಬಿಡಂತ ಬಿಡಿಸ್ಕೋತಿದ್ದಯಲ್ಲೇ ಚನಮೀರಿ |

ಎಂದು ಕೆಲವರು ಅತ್ತರೆ ಇನ್ನು ಕೆಲವರು

ಏನಸತ್ತೇ ಚನಮೀರಿ
ನಿನಗಂಡ ಮಲ್ಲೇಶಿ
ಬಳ್ಳೊಳ್ಳಿ ಬನದಾಗ
ಉಳ್ಳಾಡಿ ಅಳತಾನ

ಎಂದು ತಮ್ಮ ಕಪಟ ದುಃಖವನ್ನು ವ್ಯಕ್ತಪಡಿಸುವರು. ಅವಳ ಮರಣಕ್ಕಾಗಿ ಎಲ್ಲರೂ ಶೋಕವ್ಯಕ್ತಪಡಿಸಿದ ನಂತರ ತಂದ ಗುಳ್ಳವ್ವನನ್ನು ಎತ್ತಿ ಒಗೆದು

ಗುಳ್ಳವ್ವನ ಮಣ್ಣ ತರಲಿಲ್ಲ
ಗುಲಗಂಜಿ ಹಚ್ಚಿ ಆಡಲಿಲ್ಲ
ಸುಳ್ಳ ಬಂತವ್ವ ನಾಗರಪಂಚಮಿ | ನಾರಿ | ಸುವ್ವನಾರಿ ||

ಎನ್ನುತ ಮನೆಗೆ ಮರಳಿ ಬರುವುದುಂಟು.

ಗುಳ್ಳವ್ವನ ಹಬ್ಬ ಮುಕ್ತಾಯಗೊಂಡ ಕೆಲವೇ ದಿನಗಳಲ್ಲಿ ಮುಂದೆ ನಾಗರ ಪಂಚಮಿ ಕೊನೆಯ ಗುಳ್ಳವ್ವನ ಹಬ್ಬಕ್ಕಾದರೂ ಹೆಣ್ಣು ತವರಿಗೆ ಬರಬೇಕೆಂಬ ತವಕ ತವರಿನರದು. ಮೊದಲಗಿತ್ತಿಯಾಗಿ ಪ್ರಥಮ ಬಾರಿಗೆ ಗಂಡನ ಮನೆಗೆ ಹೋದ ಹೆಣ್ಣುಮಗಳು ಪಂಚಮಿ ಹಬ್ಬದ ನೆವ ಮಾಡಿ ತವರು ಮನೆಗೆ ಬರುವ ಕಾಲ ಇದನ್ನು ಆಷಾಢ ಮಾಸದ ’ಸಣ್ಣ ಮಣ್ಣ’ ಎಂದು ಕರೆಯುತ್ತಾರೆ. ಈ ಒಂದು ತಿಂಗಳು ನವದಂಪತಿಗಳು ಕೂಡಿ ಇದ್ದರೆ ಕೆಡುಕೆಂದು ತಿಳಿದು ಆಷಾಢ ಮಾಸ ಪ್ರಾರಂಭವಾಗುವುದರೊಳಗೆ ಅವಳನ್ನು ತವರಿಗೆ ಕಳಿಸುವ ಪರಿಪಾಠವಿದೆ.

ಉತ್ತರ ಕರ್ನಾಟಕದಲ್ಲಿ ಗುಳ್ಳವ್ವನ ಸಂಪ್ರದಾಯ ಸಾರ್ವತ್ರಿಕವಾಗಿದ್ದು ಈಕೆ ಕ್ಷುದ್ರ ದೇವತೆಗಳ ವರ್ಗಕ್ಕೆ ಸೇರಿದ್ದಾಳೆ. ಈ ಮಾತಿಗೆ ’ಗುಳ್ಳವ್ವ ದೇವರಲ್ಲ ಉಡಕಿ ಗಂಡಲ್ಲ’ ’ಒಳ್ಳೊಳ್ಳೆಯವರು ಉಳ್ಳಾಡುವಾಗ ಗುಳ್ಳವ್ವ ಪಲ್ಲಕ್ಕಿ ಬೇಡಿದಳು’ ಎಂಬ ಗಾದೆಗಳು ಸಾಕ್ಷಿಯೆನಿಸಿದೆ. ಅಲ್ಲದೆ ಮುಂದೆ ಭಾದ್ರಪದ ಶುದ್ಧ ಅಷ್ಟಮಿಯ ದಿವಸ ಹುಟ್ಟಿದ ಜೋಕುಮಾರನಿಗೂ ಈ ಗುಳ್ಳವ್ವನಿಗೂ ಸಂಬಂಧ ಕಲ್ಪಿಸಿ ನುಡಿವ ಅಶ್ಲೀಲ ನುಡಿಗೆ ಯಾವ ಕಾರಣವೆಂಬುದು ತಿಳಿಯದು.