ನಾಗರ ಪಂಚಮಿ :

ಮೂರನೆಯ ಮಣ್ಣು ಪೂಜೆಯ ಹೆಸರಿನಲ್ಲಿ ವ್ಯಕ್ತವಾಗುವ ದೇವತೆ ಹುತ್ತಪ್ಪ. ಶ್ರಾವಣ ನಾಗಪ್ಪನ ಪೂಜೆಯ ಕಾಲ ದ್ರಾವಿಡರಿಂದ ಪ್ರಾರಂಭವಾದ ಪದ್ಧತಿ ಇದಾಗಿದ್ದರೂ ಆರ್ಯ ದ್ರಾವಿಡ ಸಂಸ್ಕೃತಿ ಸಂಕರಗೊಂಡ ಮೇಲೆ ಈ ನಾಗಪೂಜೆ ಸಾರ್ವತ್ರಿಕವೆನಿಸಿತು. ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ನಾಗಪೂಜೆಗೆ ವಿಶೇಷ ಮಹತ್ವ ಕೊಡುತ್ತ ಬಂದಿದ್ದಾರೆ. ಕಾರಣ  ಶ್ರೀ ವಿಷ್ಣು ಶೇಷಕಾಯಿ, ಶಿವ ಸರ್ಪಭೂಷಣ, ಭೂಮಿಯನ್ನು ನೆತ್ತಿಯ ಮೇಲೆ ಹೊತ್ತವ ಆದಿಶೇಷ, ಗಣಪತಿಯ ಹೊಟ್ಟೆಯ ನಡುಕಟ್ಟು ನಾಗದೇವ.

ಮಹಾಭಾರತದ ಚಿತ್ರಾಂಗದೆ ಉಲೂಪಿಯರದು ನಾಗಕುಲ. ನಾಗಪೂಜೆಗೆ ಒಂದು ಪೌರಾಣಿಕ ಹಿನ್ನೆಲೆಯನ್ನು ಕೊಡುವುದುಂಟು. ಒಮ್ಮೆ ನಾಗರಾಜನಾದ ತಕ್ಷಕನು ಪರೀಕ್ಷಿತ ರಾಜನನ್ನು ಕಟ್ಟಿಕೊಲ್ಲಲು ಆತನ ಮಗ ಜನಮೇಜಯ ನಾಗವಂಶವನ್ನೇ ನಿರ್ಮೂಲಗೊಳಿಸಲು ಸರ್ಪಯಾಗವನ್ನು ಕೈಕೊಂಡನು. ತಕ್ಷಕನು ದೇವೇಂದ್ರನ ಮೊರೆ ಹೊಕ್ಕಿದ್ದರಿಂದ ಋತ್ವಿಜರ ಮಂತ್ರಾಹ್ವಾನದ ಪರಿಣಾಮವಾಗಲಿಲ್ಲ. ಬಳಿಕ ಇಂದ್ರ ಸಹಿತ ತಕ್ಷಕನನ್ನು ಆಹ್ವಾನಿಸಿದ್ದರಿಂದ ಗಾಬರಿಗೊಂಡ ಇಂದ್ರ ತಕ್ಷಕರಿಬ್ಬರೂ ಆಸ್ತಿಕ ಮುನಿಯನ್ನು ಮೊರಹೊಕ್ಕರು. ತಂದೆ ಆರ್ಯ ಪುರುಷ. ತಾಯಿ ನಾಗಕನ್ಯೆಯಲ್ಲಿ ಜನ್ಮ ತಳೆದ ಆಸ್ತಿಕನ ಮಧ್ಯಸ್ಥಿಕೆಯಿಂದ ತಕ್ಷಕನು ತನ್ನ ವಿಷ ಹೀರಿಕೊಂಡು ಪರೀಕ್ಷಿತ ರಾಜನನ್ನು ಬದುಕಿಸಿದನೆಂದು ಅದರಿಂದ ಜನಮೇಜಯನ ಸಿಟ್ಟು ಇಳಿಯತೆಂದು ಕಥೆಯಿದೆ. ಅಂದಿನಿಂದ ಆರ್ಯರು ನಾಗನನ್ನು ಮನ್ನಿಸಿ ನಾಗಪೂಜೆಗೆ ಮನ್ನಣೆ ಕೊಟ್ಟರು. ಅದರಿಂದ ಇಂದಿಗೂ ಆಸ್ತಿಕಮುನಿಯ ಹೆಸರು ಬರೆದಿರುವಲ್ಲಿ ಹಾವು ಬರಲಾರವೆಂದು ಜನಪದರ ತಿಳುವಳಿಕೆ ಇದೆ.

ಭಾರತದ ಎಲ್ಲ ಭಾಗಗಳಲ್ಲಿ ನಾಗನಿಗೆ ಪ್ರಾಧಾನ್ಯತೆ ಇದೆ. ಪ್ರಾಚೀನ ಅರಸು ಮನೆತನಗಳು ನಾಗನಿಗೆ ಗೌರವ ನೀಡಿವೆ. ಕ್ರಿ.ಶ. ೩ನೆಯ ಶತಮಾನದಲ್ಲಿ ಚುಟುವಂಶದ ಶಿವಸ್ಕಂದ ನಾಗಶ್ರೀಯಿಂದ ರಚಿತವಾದ ನಾಗಪ್ರತಿಮೆ ಅಂದಿನ ಕಾಲದ ನಾಗದೇವನ ಮಹತ್ವಕ್ಕೆ ಸಾಕ್ಷಿಯೆನಿಸಿದೆ. ನಾಗನಿಕಾ, ನಾಗಮಾಲಿಕಾ, ನಾಗಶ್ರೀ ಎಂಬ ಸ್ತ್ರೀ ನಾಮಗಳು ಅಂದಿನ ನಾಗೋಪಾಸನೆಯನ್ನು ಸೂಚಿಸುವಂತಿವೆ. ಇಂದು ಸಂಪ್ರದಾಯದಲ್ಲಿ ವಿಭಿನ್ನತೆ ಕಂಡು ಬಂದರೂ ನಾಗಪೂಜೆಗೆ ಪ್ರಾಮುಖ್ಯತೆಯಿದೆ. ಶ್ರಾವಣ ಶುದ್ಧ ಪಂಚಮಿಯ ದಿನವೇ ಈ ಹಬ್ಬ ಕೈಕೊಳ್ಳುವುದಕ್ಕೆ ನಿರ್ದಿಷ್ಟವಾದ ಕಾರಣ ತಿಳಿಯದೆ ಹೋದರೂ ಜನಪದ ಕಥೆಯೊಂದು ಈ ಬಗೆಗೆ ಹೀಗೆ ಹೇಳುತ್ತದೆ.

ಒಕ್ಕಲಿಗನೊಬ್ಬ ರಂಟೆ ಹೊಡೆಯುತ್ತಿದ್ದಾಗ ಅದರ ಕಂಡಕ್ಕೆ ಸಿಕ್ಕು ಹಾವಿನ ಮರಿಗಳೆಲ್ಲ ಸತ್ತು ಹೋದದ್ದರಿಂದ ತಾಯಿ ಹಾವು ರೊಚ್ಚಿಗೆದ್ದು ಅಂದಿನ ರಾತ್ರಿ ಆ ಒಕ್ಕಲಿಗನ ಮನೆಯ ಮಂದಿಯನ್ನೆಲ್ಲ ಕಚ್ಚಿಕೊಂದು ಹಾಕಿದರೂ ಅದರ ರೋಷ ಶಮನವಾಗದೆ ದೂರದಲ್ಲಿ ಅತ್ತೆಯ ಮನೆಯಲ್ಲಿದ್ದ ಆ ಒಕ್ಕಲಿಗನ ಮಗಳನ್ನು ಕೊಲ್ಲಲು ಅತ್ತ ಹೊರಟಿತು. ಅದೇ ಹೊತ್ತಿಗೆ ಅತ್ತೆಯ ಮನೆಯಲ್ಲಿದ್ದ ಆ ಒಕ್ಕಲಿಗನ ಮಗಳು ಮಣ್ಣಿನ ಹಾವನ್ನು ಮಾಡಿ ಹಾಲರೆಯುತ್ತಿದ್ದದನ್ನು ಕಂಡ ನಾಗಿಣಿಯ  ರೊಚ್ಚು ತಕ್ಕಮಟ್ಟಿಗೆ ಶಾಂತವಾಯಿತು. ಅದು ತಾನು ಒಕ್ಕಲಿಗನ ಮನೆಯಲ್ಲಿ ಮಾಡಿದ ಕೇಡನ್ನು ಹೇಳಲು, ಆಕೆ ಬೋರಾಡಿ ಅತ್ತು ತನ್ನ ತವರವರನ್ನೆಲ್ಲ ಬದುಕಿಸೆಂದು ಬೇಡಿಕೊಂಡಳು. ಆ ನಾಗಿಣಿಗೆ ಕರುಣೆ ಹುಟ್ಟಿ ಒಕ್ಕಲಿಗನ ಮನೆಗೆ ಬಂದು ಎಲ್ಲರ ವಿಷವನ್ನು ಮರಳಿ ಹೀರಿ ಬದುಕಿಸಿದ್ದರಿಂದ ಅವರೆಲ್ಲ ನಾಗಿಣಿಯನ್ನು ಪೂಜಿಸುತ್ತ ಬಂದರೆಂಬ ಕಥೆಯಿದೆ. ಅಂದು ಶ್ರಾವಣ ಶುದ್ಧ ಚೌತಿಯಾದ್ದರಿಂದ ಅಂದಿನ ದಿನವನ್ನು ನಾಗಚೌತಿ ಎಂಬ ಹೆಸರಿನಿಂದ ಕರೆಯುತ್ತ ಬಂದುದೇ ನಾಗಪೂಜೆಗೆ ಕಾರಣವೆನಿಸಿತು. ಮಗಳ ಈ ಉಪಕಾರದ ದ್ಯೋತಕವಾಗಿಯೇ ಇಂದಿಗೂ ನಾಗಪಂಚಮಿ ಹಬ್ಬಕ್ಕೆ ಮಗಳನ್ನು ತವರಿನವರು ಕರೆತರುವರೆಂದು ಜಾನಪದರು ಹೇಳುತ್ತಾರೆ.

ಗುಳ್ಳವ್ವನ ಹಬ್ಬಕ್ಕೆ ತವರಿಗೆ ಬರಲಾಗದ ಹೆಣ್ಣು ನಾಗಪಂಚಮಿಗಾದರೂ ಬರಲೇಬೇಕು.

ಆಷಾಢ ಮಾಸ ಬಂದೀತವ್ವ
ಖಾಸ ಅಣ್ಣ ಬರಲಿಲ್ಲ
ಏಷ್ಟು ನೋಡಲೇ ಅಣ್ಣನ ದಾರಿ | ಸುವ್ವ ನಾರಿ |

ಹೊತ್ತು ಮುಳುಗುವ್ಯಾಳೆದೊಳಗೆ
ದೀಪ ಹಚ್ಚು ಕಾಲದೊಳಗೆ
ಅಣ್ಣ ಕರಿಯಾಕ ಬಂದಾನ ನಾರಿ | ಸುವ್ವನಾರಿ |

ರೊಟ್ಟಿ ಬುತ್ತಿ ಮಾಡಿಕೊಂಡು
ಎತ್ತಿನ ಮೇಲೆ ಹೇರಿಕೊಂಡು
ಎಂದು ಹೋದೇನ ತವರಿಗೆ ನಾರಿ | ಸುವ್ವನಾರಿ |

ಹಿಂದಿನೆತ್ತ ಹಿಂದ ಇರಲಿ
ಮುಂದಿನೆತ್ತ ಮುಂದ ಇರಲಿ
ಎಂದ ಕಂಡೇನವ್ವ ತಾಯಿ ಮಾರಿ | ಸುವ್ವನಾರಿ |

ತಾಯಿ ಬಂದು ನೀರ ಕೊಟ್ಲು
ತಾಯಿ ಮಾರಿ ಕಂಡೇನವ್ವ
ಹಸಿದ ಹೊಟ್ಟಿ ಉಂಡಂಗ್ಹಾತ ನಾರಿ | ಸುವ್ವನಾರಿ |

ಮನೆ ಮನೆಗಳಲ್ಲಿ ಹಬ್ಬಕ್ಕೆ ಮೊದಲೇ ನಾಗದೇವನ ನೈವೇದ್ಯಕ್ಕೆ ಅರಳು, ಅರಳಿಟ್ಟು, ತಂಬಿಟ್ಟು, ವಿಧವಿಧ ಉಂಡಿ, ಎಳ್ಳುಚಿಗಳಿಗಳನ್ನು ತಯಾರಿಸುತ್ತಾರೆ. ಈ ನಾಗಪಂಚಮಿ ಮೂರುದಿವಸದ ಹಬ್ಬ. ಮೊದಲನೆಯ ದಿನ ನಾಗರ ಅಮಾವಾಸ್ಯೆ ಅಂದರೆ ರೊಟ್ಟಿ ಪಂಚಮಿ ಎರಡನೆಯ ದಿನ ನಾಗಚೌತಿ, ಮೂರನೆ ದಿನ ನಾಗರಪಂಚಮಿ, ನಾಗರ ಅಮಾವಾಸ್ಯೆಯ ದಿವಸ ಹೆಣ್ಣುಮಕ್ಕಳು  ತಮ್ಮ ಸಮಸ್ತ ಬಳಗದೊಂದಿಗೆ ಹಣತೆ ಪೂಜೆ ಮಾಡುವುದುಂಟು. ದೀಪವಿರುವ ಮನೆಗೆ  ಅಷ್ಟ ವಿವಿಧ ಲಕ್ಷ್ಮೀಯರು ಬಂದು ನೆಲೆಸುವರೆಂಬ ಭಾವನೆಯೇ ಅಂದು ದೀಪದ ಪೂಜೆಗೆ ಕಾರಣ. ಮಾರನೆಯ ದಿನ ನಾಗಚೌತಿ, ನಾಗನನ್ನು ಭಯಭಕ್ತಿಯಿಂದ ಪೂಜಿಸುವ ದಿನ. ಹೆಣ್ಣುಮಕ್ಕಳಿಗೆ ಇದೊಂದು ಮಹತ್ವದ ವ್ರತ. ಮನೆಮಂದಿಯೆಲ್ಲ ತಲೆಗೆ ನೀರು ಹಾಕಿಕೊಂಡು ಹೊಸ ಬಟ್ಟೆ ಉಟ್ಟು ಈ ಹಬ್ಬವನ್ನು ಆಚರಿಸುತ್ತಾರೆ. ಪ್ರತಿಯೊಂದು ಮನೆಯವರು ಸಮೀಪದ ಹುತ್ತವಿದ್ದಲ್ಲಿಗೆ  ಹೋಗಿ ಹುತ್ತ ಪೂಜಿಸಿ ಅದೇ ಮಣ್ಣಿನಿಂದ ನಾಗಪ್ಪನ ವಿಗ್ರಹ ಮಾಡಿ, ಕುಂಬಳ  ಎಲೆಯಿಟ್ಟ ಹೊಸ ಮಡಿಕೆಯೊಂದರಲ್ಲಿ ನಾಗಪ್ಪನನ್ನು ಪ್ರತಿಷ್ಠಿಸುವರು. ಹೂ, ಕೇದಿಗೆ, ಅರಿಷಿಣ ಹಚ್ಚಿದ ಹಂಗನೂಲು, ಕೊಕ್ಕಾ ಬತ್ತಿ, ಕೋಡ ಬತ್ತಿ  ಹಾಕಿ ಶೃಂಗರಿಸುವರು. ಉಂಡಿ ಉಸುಳಿ ಮೊದಲನೆಯ ದಿನ ನಾಗದೇವನಿಗೆಡೆ.  ಮನೆ ಮಂದಿಯರೆಲ್ಲ ಕರಕಿ ಪತ್ರಿಯಿಂದ ನಾಗದೇವನಿಗೆ ಹಾಲನೆರೆಯುತ್ತ ದೇವರ  ಪಾಲು, ದಿಂಡರ ಪಾಲು, ಗುರು ಹಿರಿಯರ ಪಾಲು, ತಂದೆ ತಾಯಿಗಳ ಪಾಲು,  ತಮ್ಮ ಪಾಲು, ಸಮಸ್ತ ಬಳಗದವರ ಪಾಲನ್ನು ಸಮರ್ಪಣೆ ಮಾಡುವರು.  ಕೊನೆಗೆ ಆರತಿ ಬೆಳಗಿ ಕಾಯಿ ಒಡೆದು ಎಡೆ ಹಿಡಿಯುತ್ತಾರೆ.  ಆದರೆ ನಾಗದೇವನಿಗೆ ಹಿಡಿದ ಎಡೆಯನ್ನು ಹೆಣ್ಣುಮಕ್ಕಳು ಉಣ್ಣಬಾರದೆಂಬ ಪ್ರತೀತಿ ಜನಪದರಲ್ಲಿದೆ.

ತವರಿಗೆ ಬಂದ ಹೆಣ್ಣುಮಗಳು :

ಹಂಗನೂಲಾ ನಾಗಪ್ಪಗೆರಿಯ, ರಂಗs ಅರಿಷಣ ಎರಿಯs
ಅಕ್ಕ ಎಲ್ಲಾರ ಕರಿಯ ಅಳ್ಳು ತಂಬಿಟ್ಟು ಸುರಿಯ
ದುರುಳ ನಾಗಪ್ಪಗ ಎಡಿಮಾಡ.

ಅರಳಿಟ್ಟು ತಂಬಿಟ್ಟು ಮಾಡಿದ ಎಳ್ಳುಂಡಿ
ದಳ್ಳೂರಿ ಕಣ್ಣ ಹಣೆಯವನ | ಕೊರಳಾನ
ನಾಗ ನಿನಗೆಡಿಯೋ ಕೈಮುಗಿದು ||

ಅಕ್ಕ ತಂಗೇರ ಪಾಲಾ ಅಣ್ಣ ತಮ್ಮರ ಪಾಲಾ
ವರಸಕ್ಕ ನನಗೊಂದ ಕರಿ ಸೀರಿ | ಉಡಿಸೆಂದ
ನಾಗಪ್ಪಗಾಲ ಎರದೇನ ||

ಎಂದು ಭಕ್ತಿಯಿಂದ ಹಾಲೆರೆದು ನಾಗಪ್ಪನಿಗೆ ನಮಿಸಿ ಆ ವ್ರತದ ಅಂಗವಾಗಿ ಹೆಣ್ಣುಮಗಳು ಹಂಗನೂಲನ್ನು ಧರಿಸಿಕೊಳ್ಳುವುದುಂಟು.

ಮೂರನೆಯ ದಿನ ನಾಗರಪಂಚಮಿ, ಹುತ್ತ ಮುರಿಯುವುದು ಎಂದು ಇದನ್ನು ಕರೆಯುವುದುಂಟು. ಅಂದು ನಾಗಪ್ಪನ ಪೂಜೆಗೆ ಮೀಸಲಡಿಗೆ ಹೂಣ, ಕುಚ್ಚಿದ ಕಡಬಿನ ನೈವೇದ್ಯ, ಈ ಕಡಬನ್ನು ಕುಸಿದಬೇಕೇ ಹೊರತು ಕರಿಯಬಾರದು. ಕರಿದರೆ ನಾಗಪ್ಪನ ಹೆಡೆಯನ್ನೇ ಕರಿದಂತೆ ಎಂಬ ಭಾವನೆ ಜನಪದರಲ್ಲಿದೆ. ನೈವೇದ್ಯಕ್ಕೆ ಮುನ್ನ ಹೂರಣ ತಿಂದ ಹುಡುಗರ ಮೈಗೆ ತದ್ದು ಆಗುವುದೆಂಬ ನಂಬಿಕೆ ಇದೆ. ಅಂದು ಮನೆಯಲ್ಲಿ ನಾಗಪ್ಪನಿಗೆ ಹಾಲೆರೆಯುವುದಲ್ಲದೆ ಹುತ್ತ ಇದ್ದಲ್ಲಿಗೆ ಹೋಗಿ’ ಕೊಕ್ಕಾ ಬತ್ತಿ ಕೋಡಾ ಬತ್ತಿ’ ಹಾಕಿ ಹುತ್ತ ಪೂಜೆ ಮಾಡಿ ಹಾಲೆರೆಯುವುದು ಇದು ಸಾಮೂಹಿಕ ನಾಗಪೂಜೆಯಾಗಿದೆ. ಹೀಗೆ ಮೂರು ದಿನ ಹಬ್ಬದ ನಿಮಿತ್ತವಾಗಿ ಬೀದರ ಜಿಲ್ಲೆಯಲ್ಲಿ ಹಾಡುವ ಹಾಡುಗಳನ್ನು ಬುಲಾಯಿ ಹಾಡುಗಳೆಂದು ಕರೆಯುತ್ತಾರೆ.

ನಾಗರಪಂಚಮಿ ಹಬ್ಬದಂದು ಚಿಕ್ಕ ಮಕ್ಕಳಿಗೆ ಸಿಹಿ, ಹೊಸ ಬಟ್ಟೆ, ಜೋಕಾಲಿಯಾಟದ ಹರ್ಷವಾದರೆ ವಾರಿಗೆಯ ಗೆಳತಿಯರಿಗೆ ಸಂಪೂರ್ಣ ಸ್ವಾತಂತ್ರ‍್ಯ ಒಟ್ಟುಗೂಡಿ ನಾಗಪ್ಪನಿಗೆ ಹಾಲನೆರೆಯುವುದು, ತಮ್ಮ ಸುಖ ದುಃಖಗಳನ್ನು ಗೆಳತಿಯರಲ್ಲಿ ವಿನಿಯೋಗಿಸಿಕೊಳ್ಳುವಲ್ಲಿ ಇದೊಂದು ಉತ್ತಮ ಅವಕಾಶ. ಆ ಸಂತೋಷವೇ ಹಾಡಾಗಿ ಹೊರಹೊಮ್ಮುವುದುಂಟು.

ವಾರಿಗೀ ಗೆಳತೇರ ಕೂಡಿ ನಾವೆಲ್ಲರ
ಊರದೇವಿಯ ಗುಡಿಗ್ಹೋಗೋಣ
ಊರದೇವಿಯ ಗುಡಿ ಎದುರು ನಾಗಪ್ಪಗ
ಸೂರಾಡಿ ಅರಳ್ಹಾಲ ಹೊಯ್ಯೋಣ ನಾವು
ತಂಬಿಟ್ಟಿನಾರತಿ ಬೆಳಗೋಣ.

ಹಸುಗೂಸು ಹುಟ್ಟಲಿ ಹೊಸ ಪ್ಯಾಟಿ ಕಟ್ಟಲಿ
ರಸಬಾಳಿ ಕಬ್ಬ ಬೆಳೆಯಲಿ ರಸಬಾಳಿ ಕಬ್ಬ ಬೆಳೆಯಲಿ
ತವರೂರ, ಬಸವನ ತೇರ ಎಳೆಯಲಿ’

ಹೊತ್ತಾಯಿತು ಬನ್ನಿರೇ, ಒತ್ತರ ಮಾಡಿರೇ
ಹುತ್ತಿನ ಮಣ್ಣ ಪೂಜೆ ಮುಗಿಸೋಣ
ಒಟ್ಟಾಗಿ ನಾವೆಲ್ಲ ಉಂಡಿಯ ಎಡೆ ಮಾಡಿ
ನಾಗಪ್ಪಗ್ಹಾಲ ಎರೆಯೋಣ ||

ಎನ್ನುತ್ತ ಸಂತೋಷದಿಂದ ಗೆಳತಿಯರೊಂದಿಗೆ ಜೋಕಾಲಿ ಜೀಕಿ ಮುಗಿಲು ಮುಟ್ಟುವಲ್ಲಿ ಬದುಕಿನ ಆಸರೆ ಬೇಸರ ಕಳೆದುಕೊಳ್ಳುವ ಸಮಯ, ಗಂಡನಮನೆಯಲ್ಲಿ ಈ ರೀತಿಯ ಸ್ವಾತಂತ್ರವಿರುವುದಿಲ್ಲ.

ಪಂಚಮಿ ಬರಲೆವ್ವ ಮಂಚಕಟ್ಟಲಿ ಮನೆಗೆ
ಕೆಂಚ ಗೆಳತೇರು ಕೂಡಲಿ, ನಮ ಜೀಕ
ಮಿಂಚೆ ಮುಗಿಲನೇರಲಿ

ಎಂಬ ಪದ್ಯದಲ್ಲಿ ಅವರ ಸಂತೋಷ ವ್ಯಕ್ತವಾಘಿದೆ. ಅಂದು ಹೆಣ್ಣಿಗೆ ಎಲ್ಲೆಡೆಯಿಂದ ಬಂದ ಗೆಳತಿಯರ ಭೆಟ್ಟಿ, ಸಿಹಿ ತಿಂಡಿ, ಸಿಹಿ ಮಾತುಗಳ ವಿತರಣೆಯ ಸಡಗರ. ಹಬ್ಬದ ದಿನಗಳು ಗೆಳತಿಯರ ಒಡನಾಟದಲ್ಲಿ ಹೇಗೆ ಕಳೆದು ಹೋಗುವವೋ ತಿಳಿಯದು. ಆದರೆ ಮತ್ತೆ ತನ್ನ ಕರ್ತವ್ಯಗಳ ಕಡೆಗೆ ಅವಳು ಗಮನ ಕೊಡಬೇಕಷ್ಟೇ. ಗಂಡನ ಮನೆಗೆ ತೆರಳಬೇಕೆಂದರೆ ಮನಸ್ಸಿಲ್ಲ. ಗೆಳತಿಯರು ಅವಳನ್ನು ’ಸಣ್ಣ  ಸೋಮವಾರ ತನಕ ಅಣ್ಣ ಹೇಳಿದಂಗ ಕೇಳು’ ಎಂದು ಬುದ್ಧಿವಾದ ಹೇಳಿದರೆ, ಗಂಡನ ಮನೆಯ ಕಟ್ಟುಕರಾರಿನ ಮೂಲಕ ಹಬ್ಬಕ್ಕಾಗಿ ತಂಗಿಯನ್ನು ಕರೆತಂದ ಅಣ್ಣ ಅವಳನ್ನು ಸಕಾಲಕ್ಕೆ ಮರಳಿ ಕಳಿಸಬೇಕಲ್ಲವೆ. ತವರಿಗೆ ಬಂದ ಹೆಣ್ಣುಮಕ್ಕಳಿಗೆ ಕೊಡುಗೆಯಾಗಿ ಸೀರೆ ಮುಂತಾದವುಗಳನ್ನು ಉಡುಗೊರೆಯಾಗಿ ಕೊಟ್ಟು ಅಣ್ಣ ಅವಳನ್ನು ಮರಳಿ ಕಳಿಸಿ ಬರುವ ಸಂಪ್ರದಾಯವಿದೆ.

ನಾಗಪೂಜೆ ಮಾಡಿದರೆ ಮಕ್ಕಳಾಗುತ್ತವೆ ಎಂಬ ಭಾವನೆ ಇಂದಿಗೂ ಜನ ಮನದಲ್ಲಿ ಜೀವಂತವಾಗಿದೆ. ಹೀಗೆ ಜಾನಪದ ಹಬ್ಬಗಳು ಹಳ್ಳಿಗರ ಬದುಕಿಗೆ ಹೊಸ ಪ್ರೇರಣೆಯನ್ನೊದಗಿಸುವ ಶಕ್ತಿಗಳಾಗಿವೆ.