) ಹಬ್ಬಗಳ ವೈಶಿಷ್ಟ್ಯ :

ಆಂಗ್ಲ ಜಾನಪದ ವಿಜ್ಞಾನಿ ಬಾಗ್ಸ್ ಅವರ ಪ್ರಕಾರ ಜಾನಪದವು ಸಾಹಿತ್ಯಿಕ, ಭಾಷಿಕ, ವೈಜ್ಞಾನಿಕ ಹಾಗೂ ಕ್ರಿಯಾತ್ಮಕ ವಿಭಾಗಗಳಿಂದ ಕೂಡಿರುವುದರಿಂದ ಜಾನಪದ ಹಬ್ಬಗಳು ಕ್ರಿಯಾತ್ಮಕ ವಿಭಾಗಗಳಲ್ಲಿ ಬರುತ್ತವೆ. ನಂಬಿಕೆ ಮತ್ತು ಸಂಪ್ರದಾಯಗಳ ಕ್ರಿಯೆಯ ರೂಪಗಳೇ ಹಬ್ಬಗಳು. ನಿಸರ್ಗದ ಆರಾಧನೆ ಮತ್ತು ದೇವರನ್ನು ತಮ್ಮೊಡನೆ ಒಲಿಸಿಕೊಳ್ಳುವ ಸತತ ಪ್ರಯತ್ನಗಳ ಫಲವಾಗಿಯೇ ಈ ಹಬ್ಬಗಳು ಹುಟ್ಟಿಕೊಂಡಿರುತ್ತವೆ. ಹೀಗಾಗಿ ಕೆಲವು ಸಂಪ್ರದಾಯಗಳ ಸಮೂಹವೇ ಹಬ್ಬಗಳಾಗಿರುತ್ತವೆ.

ಮಾನವನು ತನ್ನ ಬಿಡುವಿನ ವೇಳೆಯಲ್ಲಿ ಆನಂದವನ್ನು ಹೊಂದಲು ಸಾಮಾನ್ಯವಾಗಿ ಹಬ್ಬವನ್ನು ಆಚರಿಸುತ್ತಾನೆ. ಅವು ಸಾಮಾಜಿಕ, ಘಟನೆಗಳ ಒಂದು ಅಂಗವಾಗಿವೆ; ಹಬ್ಬಗಳಲ್ಲಿ ಮುಖ್ಯವಾಗಿ :

೧) ಪ್ರಕೃತಿಗೆ ಸಂಬಂಧಿಸಿದ ಹಬ್ಬಗಳು : ಉದಾ : ಸಂಕ್ರಾಂತಿ ಹಾಗೂ ಯುಗಾದಿ ಇತ್ಯಾದಿ

೨) ದೇವತೆಗಳಿಗೆ ಸಂಬಂಧಿಸಿದ ಹಬ್ಬಗಳು : ಉದಾ : ಶಿವರಾತ್ರಿ, ಗೌರಿಹಬ್ಬ, ಗಣೇಶಹಬ್ಬ, ಕಾಮ, ಜೋಕುಮಾರ ಇತ್ಯಾದಿ.

೩) ವ್ಯಕ್ತಿಗಳಿಗೆ ಸಂಬಂಧಿಸಿದ ಹಬ್ಬಗಳು : ಉದಾ : ಕ್ರಿಸ್ ಮಸ್ , ಬಲಿಪಾಡ್ಯ (ದೀಪಾವಳಿ) ಶ್ರೀ ರಾಮನವಮಿ, ವಿಜಯದಶಮಿ, ಇತ್ಯಾದಿ.

೪) ಪ್ರಾಣಿಗಳಿಗೆ ಸಂಬಂಧಿಸಿದ ಹಬ್ಬಗಳು : ಉದಾ : ಮಣ್ಣೆತ್ತಿನ ಅಮವಾಸ್ಯೆ ನಾಗರಪಂಚಮಿ ಇತ್ಯಾದಿ.

ಈ ಎಲ್ಲ ಹಬ್ಬಗಳು ಸಾಮಾನ್ಯವಾಗಿ ಧಾರ್ಮಿಕ ಆಚರಣೆಗಳನ್ನು ಒಳಗೊಂಡಿರುತ್ತವೆ.

ಕ್ರಿಸ್ ಮಸ್, ರಮ್ ಜಾನ್, ದೀಪಾವಳಿ, ಗೌರಿ, ಕಾಮ, ಗಣೇಶ ಹಾಗೂ ಜೋಕುಮಾರ ಇಂತಹ ಹಬ್ಬಗಳ ಸಂದರ್ಭಗಳಲ್ಲಿ ಹಾಡುವ ಹಾಡುಗಳೇ ಹಬ್ಬದ ಹಾಡಗಳು. ಈ ಹಾಡುಗಳಲ್ಲಿ ಆಯಾ ಉಪಾಸನಾ ದೇವ ದೇವತೆಯರ ಜೀವನ ಚರಿತ್ರೆ ಸ್ತುತಿಯನ್ನು ಕುರಿತು ಇರುತ್ತವೆ. ಅದರಂತೆ ಜೋಕುಮಾರನ ಹಾಡುಗಳೂ ಸಹ ಅವನ ಜೀವನ ಚರಿತ್ರೆ, ನಡತೆ, ಆಚಾರ ವಿಚಾರಗಳನ್ನು ಕುರಿತು ಇರುತ್ತವೆ.

ಉತ್ತರ ಕರ್ನಾಟಕದ ಜನಪದರು ಆರಾಧಿಸುವ ದೇವ – ದೇವತೆಗಳನ್ನು ಈ ಪ್ರಕಾರವಾಗಿ ವಿಭಾಗಗಳನ್ನು ಮಾಡಬಹುದಾಗಿದೆ :

ಅ) ದೇವರು : ಸಂಗಮೇಶ, ಹನುಮಂತ, ವೀರಭದ್ರ, ವಿರೂಪಾಕ್ಷ, ಇತ್ಯಾದಿ

ಬ) ದೇವತೆಯರು : ಎಲ್ಲವ್ವ, ದ್ಯಾಮಪ್ಪ, ದುರಗವ್ವ, ಕರೆವ್ವ, ಬನಶಂಕರಿ, ಕಾಳವ್ವ, ಹುಲಿಗೆಮ್ಮ ಇತ್ಯಾದಿ.

ಕ) ಸಂಪ್ರದಾಯ ದೇವ – ದೇವತೆಯರು : ಮಳೆರಾಜ, ಜೋಕುಮಾರ, ಭೂತಾಯಿ, ಬನಮ್ಮ ಇತ್ಯಾದಿ.

ಡ) ಶಿವಶರಣರು : ೧. ಶರಣರು : ಶ್ರೀ ಬಸವೇಶ್ವರರು, ಸಿದ್ಧರಾಮ ನೀಲಮ್ಮ – ಇತ್ಯಾದಿ.

೨. ಸಾಧುಸತ್ಪುರುಷರು : ಕುಮಾರಸ್ವಾಮಿ, ಶಿಶುನಾಳ ಶರೀಫರು – ಇತ್ಯಾದಿ.

ಇ) ಭೂತಾದಿಗಳ ದೇವರು : ಭರಮಪ್ಪ, ಮಕ್ಕಳ ತಾಯಿ, ಬ್ರಹ್ಮರಾಕ್ಷಸ ಕೊಳ್ಳಿದೆವ್ವ

೨) ಜೋಕುಮಾರನ ಹಬ್ಬವು ಜನಪದರು ಆಚರಿಸುವ ಹಬ್ಬಗಳಲ್ಲಿ ಒಂದು :

ಜೋಕುಮಾರನ ಹಬ್ಬವು ಜನಪದರ ಪ್ರಕಾರ ನಾಲ್ಕನೆಯ ಮಣ್ಣಿನ ದೇವರ ಪೂಜೆ ಎಂಬ ನಂಬಿಕೆಯ ಸಂಪ್ರದಾಯದ ಹಬ್ಬವಾಗಿದೆ. ಅಂದರೆ :

೧. ಮಣ್ಣೆತ್ತಿನ ಅಮವಾಸ್ಯೆಯಲ್ಲಿ ಮಣ್ಣಿನಿಂದ ಮಾಡಿದ ಎತ್ತಿನ ಪೂಜೆ

೨. ಗುಳ್ಳವ್ವನ ಪೂಜೆ (ಮಣ್ಣೆತ್ತಿನ ಅಮವಾಸ್ಯೆಯ ನಂತರ)

೩. ಪಂಚಮಿಯಲ್ಲಿ ಹುತ್ತಪ್ಪನ ಪೂಜೆ

೪. ಅನಂತನ ಹುಣ್ಣಿಮೆಯಲ್ಲಿ ಜೋಕುಮಾರನ ಪೂಜೆ.

ಈ ಎಲ್ಲ ನಾಲ್ಕು ಪೂಜೆಗಳ ನಂಬಿಕೆ ಹಾಗೂ ಸಂಪ್ರದಾಯಗಳನ್ನು ಒಕ್ಕಲಿಗರೇ ಹೆಚ್ಚಾಗಿ ಮಾಡುತ್ತಾರೆ. ಅವುಗಳಲ್ಲಿ ಜೋಕುಮಾರನ ಈ ಹಬ್ಬವು ಉತ್ತರ ಕರ್ನಾಟಕದಲ್ಲಿ ಒಂದು ಮುಖ್ಯವಾದ ಸಾಂಪ್ರದಾಯಕ ಹಬ್ಬವಾಗಿದೆ. ಈ ಹಬ್ಬಕ್ಕೆ ಅನಂತನ ಹುಣ್ಣಿಮೆ, ಜೋಕುಮಾರನ ಹುಣ್ಣಿಮೆ ಅಥವಾ ಹೊಲೇರ ಹುಣ್ಣಿಮೆ ಎಂತಲು ಕೆಲವು ಕಡೆಗಳಲ್ಲಿ ಅನ್ನುವ ರೂಢಿ ಇದೆ. ಇದನ್ನು ಭಾದ್ರಪದ ಶುದ್ಧ ನವಮಿಯಿಂದ ಪೌರ್ಣಿಮೆಯವರೆಗೆ ಅಂದರೆ ಏಳು ದಿನಗಳವರೆಗೆ ಆಚರಿಸುವರು ಇದಕ್ಕೆ ಭಾಗವತ ಪುರಾಣ ಸಪ್ತಾಹ (ಅಂದರೆ ಪ್ರೌಷ್ಠಪವೀ ಸಪ್ತಾಹ ಎಂತಲೂ) ಎಂದು ಕರೆಯುವರು. ಉತ್ತರ ಕರ್ನಾಟಕದಲ್ಲಿ ಜೋಕುಮಾರನ ಪೂಜೆಯ ಸ್ಥಳ ಭೂಮಿ. ಇವನ ಆರಾಧಕರು ಗಂಗಾಮತಸ್ಥರು.

ಜೋಕುಮಾರನು ಗಂಗಾಮತದಲ್ಲಿ ಜನಿಸಿದ್ದಾನೆಂದು ಈಗ ಗಂಗಾಮತದ ವಂಶಸ್ತರಾದ ಬಾರಿಕಾರರು, ಕಬ್ಬಲಿಗರು, ಮಡಿವಾಳರು, ತಳವಾರರು, ಸುಣಗಾರರು, ಅಂಬಿಗರು, ಇವರೆಲ್ಲರೂ ಒಂದೇ ಮುಖ್ಯ ಜ್ಯಾತಿ ಆದ ಗಂಗಾಮತದವರಾಗಿದ್ದರಿಂದ ಇವರೇ ಜೋಕುಮಾರನನ್ನು ಪೂಜಿಸುವರು.

 ೩) ಜೋಕುಮಾರನ (ಉತ್ಪತ್ತಿ):

ಇದೊಂದು ನಾಮಪದ. ಒಬ್ಬ ಜಾನಪದ ದೇವರ ಹೆಸರು.

ಜೋಕ ಪದ ವಿಶ್ಲೇಷಣೆ :

ಜೋಕು (ನಾಮಪದ) ಈ ಪದಕ್ಕೆ ಠೀವಿ, ಡಾಲು, ಹಂಚಿಕೆ ತಂತ್ರವಾದ್ಯ ನುಡಿಸುವುದರಲ್ಲಿಯ ಒಂದು ಕ್ರಮ ಎಂಬ ಅನೇಕ ಅರ್ಥಗಳು ಇರುತ್ತವೆ.

ಜೋ ಕುಮಾರ (ನಾಮಪದ) ಮಗ ಪುತ್ರ ಎಳೆಯುವ, ಬಾಲಕ, ಯುವಕ, ತರುಣ, ಎಂಬ ಅರ್ಥ ಕೊಡುವವು.

ಜೋ ಇದು ಮುಂದೆ ಜೋಗುಳ ಧ್ವನಿ ಅಂದರೆ ನೇತಾಡುವ ಎಂಬ ಅರ್ಥವನ್ನು ಕೊಡುತ್ತದೆ. ಜೋಕುಮಾರನ ಹಾಡುಗಳಲ್ಲಿ ಮೇಲಿಂದ ಮೇಲೆ ಬರುವ ಕೊಮರಾಗೆ

ಉದಾ :

ಯಾಕೊ ಕೊಮರಾಯ ನಿನ್ನ ಬಾಯಿಗೆ ಬೆಣ್ಣಿಲ್ಲ ||
ಮೇಲೆ ಮಾಣಿಕದ ಹರಳಿಲ್ಲ | ಈ ಊರ
ಓಣ್ಯಾಗ ನಿನ್ನ ಸುಳುವಿಲ್ಲ ||

ಈ ಪದವನ್ನು ವಿಶ್ಲೇಷಿಸಿದಾಗ :

ಕೊಮೆ – ಸುಡು -ಉರಿ ಎಂತಲೂ
ಕೊಮ್ಮೆ – ಕೊಬ್ಬು, ಅಹಂಕಾರ ಎಂತಲೂ
ಕುವರ – ಮಗ, ತರುಣ, ಯುವಕ, ಎಂತಲೂ ಅರ್ಥಮಾಡಿಕೊಳ್ಳಬಹುದು.

ಜೋಕುಮಾರನ ಹೆಸರು ಬಂದ ಬಗೆ :

ಜೋಕ ಮುನಿಯ ಮಗನು – ಪುರಾಣ ಕಥೆಗಳ ಪ್ರಕಾರ, ಜೋಕುಮಾರ ಅಂದರೆ

ಉಡಾಳ, ಘಟಿಂಗ ಎಂಬ ಅರ್ಥವನ್ನು ಕೊಡುತ್ತದೆ.

 ೪) ಉಲ್ಲೇಖಗಳು :

ಜೋಕುಮಾರನ (ಕಥೆ) ಉಲ್ಲೇಖದ ಬಗ್ಗೆ ವಿವೇಚಿಸುವುದಾದರೆ – ಕ್ರಿ.ಶ. ೧೦೪೯ರಲ್ಲಿಯ ಜಾತಕ ತಿಲಕದಲ್ಲಿ (ಶ್ರೀಧರಚಾರ್ಯ ವಿರಚಿತ) ವಿವರಿಸಿದಂತೆ :

ಭವನಾಂತದೊಳ್ ಸುರಾಸಂ |
ಭವನಿಗೆ ಕಾಣಿದಿರೆ ಸೌಮ್ಯದಿರೆ ಪಾಪಗಣಂ ||
ನವ ಪಂಚಮದೊಳ್ ಪುಟ್ಟಿದ ಕುವರಂ ||
ಜೋಕುಮಾರನಂತೆ ಪರಿದಿವಸಮಿರಂ ||

(ಅನುವಾದ : ರಾಶಿಯ ಕೊನೆಯ ನವಾಂಶದಲ್ಲಿ ಚಂದ್ರನಿದ್ದು ಶುಭ ಗ್ರಹಗಳು ಅವನನ್ನು ನೋಡದೆ ಪಾಪಗ್ರಹಗಳು ಒಂಬತ್ತು ಐದನೆಯ ಸ್ಥಾನಗಳಲ್ಲಿರುವಾಗ ಹುಟ್ಟಿದ ಮಗು ಜೋಕುಮಾರನಂತೆ ಬಹಳ ದಿನ ಇರುವುದಿಲ್ಲ.

ಕ್ರಿ.ಶ. ೧೦೪೯ಕ್ಕಿಂತ ಮೊದಲೇ ಜೋಕುಮಾರನ ಸಂಪ್ರದಾಯವಿತ್ತೆಂದು ಹೇಳಬಹುದು.

ಅದರಂತೆ ಕನ್ನಡ ಸಾಹಿತ್ಯದಲ್ಲಿ ಜೋಕುಮಾರನನ್ನು ಉಲ್ಲೇಖಿಸುವ ಕೆಲವು ಕೃತಿಗಳ ಪ್ರಕಾರ ಅಂದರೆ :

೧. ಶ್ರೀಧರ ಚಾರ್ಯರ – ಜಾತಕ ತಿಲಕ        ಕ್ರಿ.ಶ. ೧೦೪೯

೨. ಬಂಧುವರ್ಮನ  – ಜೀವಸಂಭೋಧನೆ  – ಕ್ರಿ.ಶ. ೧೧೫೦

೩. ನೇಮಿಚಂದ್ರನ – ನೇಮಿನಾಥ ಪುರಾಣ – ಕ್ರಿ.ಶ. ೧೧೭೦

೪. ಬ್ರಹ್ಮಶಿವನ – ಸಮಯ ಪರೀಕ್ಷೆ – ಕ್ರಿ.ಶ. ೧೧೮೦

೫. ಬಸವಣ್ಣನವರ – ವಚನಗಳು – ಕ್ರಿ.ಶ. ೧೧೬೦

೬. ಪಾರ್ಶ್ವಕವಿಯ – ಪಾರ್ಶ್ವನಾಥ ಪುರಾಣ – ಕ್ರಿ.ಶ. ೧೨೨೨

೭. ವಿಜಯದಾಸರ – ಸುಳಾದಿಗಳು – ೧೭೦೦

೮. ನಾರಸಿಂಹನ – ಅನುಭಾವ ಶಿಖಾಮಣಿ – ೧೭೬೮

ಈ ಮೇಲಿನ ಎಲ್ಲ ಕೃತಿಗಳಲ್ಲಿ ಉಲ್ಲೇಖಗೊಂಡ ಜೋಕುಮಾರನು ಒಬ್ಬ ದೇವತೆಯ ಮಗನು, ಅಂದರೆ ಮಾರಿಯ ಮಗನು, ಅಲ್ಪಾಯುಷಿಯಾಗಿ ಏಳು ದಿನಗಳಲ್ಲಿ ಮೆರೆದು ಪುಂಡಾಟಿಕೆ ಮಾಡಿ ತೀರಿ ಹೋದ ಜಾನಪದ ಸಂಪ್ರದಾಯದ ದೇವತೆಯಾಗಿದ್ದಾನೆ. ಅವನ ತಾಯಿಯು ದೇವತಾ ಸ್ತ್ರೀ ಇದ್ದರೂ ಸಹ ಅವನನ್ನು ಕಾಪಾಡದೇ ಹೋದಳೆಂದ ಬಳಿಕ, ಕ್ಷುದ್ರ ದೇವತೆಗಳಲ್ಲಿ ಇವನೂ ಒಬ್ಬನೆನ್ನಬಹುದು.

) ಜೋಕುಮಾರನ ವಿಗ್ರಹ ತಯಾರಿಕೆ ಆಚರಣೆಗಳು : (ಆಕಾರ, ಪರಿಕರಗಳು, ಸಾಮಾನುಗಳು) ಅವನ ವರ್ಣನೆ – ಇತ್ಯಾದಿ ಪೂಜೆಯ ವಿಧಾನ – ಇತ್ಯಾದಿ ಇತ್ಯಾದಿ.

ಸಾಮಾನ್ಯವಾಗಿ, ಗಣಪತಿಯನ್ನು ಮಾಡುವ ಚಿತ್ರಕಾರನೇ (ಜಿನಗಾರ) (ಈ ವಿಗ್ರಹವನ್ನು) ೩-೪ ಅಡಿಯ ಎತ್ತರವಾದ ಒಂದು ಮಣ್ಣಿನ ಮೂರ್ತಿಯನ್ನು ಮಾಡುವನು. ರೂಪದಲ್ಲಿ ಅರ್ಜುನನಂತೆ ಸುಂದರನೂ ಹಳದೀ ವರ್ಣದವನೂ ಅಗಲವಾದ ಮುಖದವನೂ ಅದಕ್ಕೆ ತಕ್ಕಂತೆ ಹೊಳೆಯುವ ದೊಡ್ಡ ಕಣ್ಣುಗಳುಳ್ಳವನೂ ಆಗಿರುವನು. ಹಣೆಯಲ್ಲಿ ವಿಭೂತಿಪಟ್ಟಿ, ಕುಂಕುಮ, ತಲೆಯ ಮೇಲೆ ಕಿರೀಟ (ಅಥವಾ ಪಟಗಾ) ದೊಡ್ಡದಾದ ಹುರಿಕಟ್ಟಾದ ಕಲ್ಲಿ ಮೀಸೆ, ದೊಡ್ಡ ಬಾಯಿ, ಕಾಮುಕತೆಯನ್ನು ಎತ್ತಿ ತೋರಿಸುವಂಥ ದೊಡ್ಡ ಗುಪ್ತಾಂಗ, ಕಣ್ಣಿನ ಸ್ಥಾನದಲ್ಲಿ ಕವಡೆಯನ್ನಿಡುವರು. ಬಾಯಿಗೆ ಬೆಣ್ಣೆಯನ್ನು ಹಚ್ಚುವರು; ಒಂದು ಬುಟ್ಟಿಯಲ್ಲಿ ಬೇವಿನ ತೊಪ್ಪಲ ಹಾಕಿ ಅದರ ನಡುವೆ ಕೂಡ್ರಿಸುವರು. ಅದರಲ್ಲಿ ಪತ್ರಿ, ಹೂವು ಇಡುವರು, ಎಣ್ಣೆ ಹಾಕಲು ಒಂದು ಮಣ್ಣಿನ ಮಡಿಕೆ ಇಡುವರು.

ಮೊದಲನೆಯ ಪೂಜೆಯನ್ನು ಊರ ಹಿರಿಯರ ಮನೆಯಲ್ಲಿ ಅಥವಾ ಗೌಡರ ಮನೆಯಲ್ಲಿ ಹೋಗಿ ಮಾಡುವರು. ನಂತರ ಅವರು ಜೋಕುಮಾರನನ್ನು ಹೊತ್ತ  ಹೆಂಗಸರಿಗೆ ರಾಗಿ, ಜೋಳ, ಮೆಣಸಿನಕಾಯಿ, ಹುಣಸೆಹಣ್ಣು, ರೊಟ್ಟಿ, ಉಪ್ಪು ಕೊಬ್ರಿ ಕೊಡುವರು. ನಂತರ ಅವರು ಅವರಿಗೆ ತಿರುಗಿ ಅವರ ಮರಕ್ಕೆ ಬೇವಿನ ತೊಪ್ಪಲು ಸ್ವಲ್ವ ಜೋಳ ಹಾಕಿ ಕೊಡುವರು. ಬೇವಿನತೊಪ್ಪಲು ಹಣೆಯಲ್ಲಿ ಹಾಕುವರು. ಯಾಕೆಂದರೆ ಜೋಳ ಕೆಡುವುದಿಲ್ಲ. ಉಪ್ಪು ಜೋಳದ ನುಚ್ಚನ್ನು (ಅಂಬಲಿಯನ್ನು) ನುಚ್ಚೆಂಬಲಿ ಜನರು ತೆಗೆದುಕೊಂಡು  ಹೋಗಿ ತಮ್ಮ ಹೊಲದಲ್ಲಿ ಚರಗ ಚೆಲ್ಲುವರು.

ಹೀಗೆ ೬ ದಿನಗಳವರೆಗೆ ಬೇರೆ ಬೇರೆ ಓಣಿ ಹಾಗೂ ಬೇರೆ ಬೇರೆ ಮನೆಗಳಿಗೆ ಅಡ್ಡಾಡಿ ಹಾಡುತ್ತ ಪೂಜಿಸಿ ಏಳನೆಯ ದಿನಕ್ಕೆ ಅವನ ದಿನವನ್ನು ಮಾಡಿ ಹಬ್ಬ ಆಚರಿಸುತ್ತಾರೆ. ಏಳನೆಯ ದಿವಸ ರಾತ್ರಿ ಹೊಲೇರ ಓಣಿಯಲ್ಲಿ ಇಟ್ಟು ಬರುತ್ತಾರೆ. ನಂತರ ಹೊಲೆಯರು ಪೂಜೆ ಮಾಡಿ ಆ ದೇವರನ್ನು ಎತ್ತಿ ಮಳೆ ಬೆಳೆಯ  ಭವಿಷ್ಯ ಕೇಳುವರು. ಹಾಗೂ ಒನಕೆಯಿಂದ  ಕುತ್ತಿಗೆಗೆ ಹೊಡೆದು ಕೊಲ್ಲುವರು, ರುಂಡವು ಅಂಗಾತ ಬಿದ್ದರೆ ದೇಶಕ್ಕೆ ಸುಖ, ಬೋರಲು ಬಿದ್ದರೆ ದೇಶಕ್ಕೆ ದುಃಖವೆಂಬ ಜನರ ಭಾವನೆ, ನಂತರ ಅದನ್ನು ಹಳ್ಳಕ್ಕೆ  ಒಯ್ದು ಚೆಲ್ಲುವರು. ಅಲ್ಲಿ ಸತ್ತ  ೩ ದಿನಗಳವರೆಗೆ ಜೋಕುಮಾರನು ನರಳುವುದರಿಂದ ಅಗಸರು ೩ ದಿನ ಅರಿವೆ ಒಗೆಯಲು ಹೋಗುವುದಿಲ್ಲ.

) ಜಾನಪದ ಕಥೆಗಳಲ್ಲಿ ಜೋಕುಮಾರ :

ಜಾನಪದ ಸಾಹಿತ್ಯದಲ್ಲಿ ಇಂದಿಗೂ ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಜೀವಂತವಾಗಿರುವ ಈ ಜೋಕುಮಾರನ ಹುಟ್ಟು – ಸಾವು, ಕಥೆ, ನಂಬಿಕೆ, ಆಚಾರ – ವಿಚಾರಗಳು ಎಷ್ಟು ಕುತೂಹಲಕಾರಿಯಾಗಿರುತ್ತದೆ ಎಂಬುವುದನ್ನು ನಾವು ಬೇರೆ ಬೇರೆ ರೀತಿಯ ಕಥೆಗಳ ಮುಖಾಂತರ ಗಮನಿಸಬಹುದಾಗಿದೆ.

ಜೋಕುಮಾರನ ವಿಷಯವು ಸಾಮಾನ್ಯ ಜನರಿಂದ ಹಿಡಿದು ವಿದ್ವಾಂಸರವರೆಗೆ ಪ್ರಿಯವಾಗಿದೆ. ಆದರೆ ಅದು ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ವಿಚಾರಗಳಿಂದ ತಿರುವು-ಮುರುವು ಆಗಿದ್ದರೂ ಮೂಲ ತತ್ವವು ಮಾತ್ರ ಒಂದೇ ಆಗಿರುತ್ತದೆ.

ಈ ಎಲ್ಲ ಅಂಶಗಳನ್ನು ಗಮನಿಸಿದ ಮೇಲೆ ಜೋಕುಮಾರನ ಬಗ್ಗೆ  ಇರುವ ಅನೇಕ ಕಥೆ, ಪುರಾಣ ಕಥೆ, ನಂಬಿಕೆ. ಜಾನಪದ ಆಚಾರ – ವಿಚಾರ ಸಂಪ್ರದಾಯಗಳ ಬಗ್ಗೆ ಬೇರೆ ಬೇರೆ ರೀತಿಯಿಂದ ವಿಚಾರ ಮಾಡುವುದಕ್ಕೋಸ್ಕರವಾಗಿ ಅವನ ಬಗ್ಗೆ ಇರುವ ತಾತ್ವಿಕ ಕಲ್ಪನೆ ಹಾಗು ಕಥೆಗಳ ಬಗ್ಗೆ ಮೊದಲು ವಿವೇಚಿಸುವುದು ಒಳಿತು.

ಜಾನಪದ ಸಾಹಿತ್ಯದಲ್ಲಿಯ ಭಾವನೆಯ ಪ್ರಕಾರ ಉತ್ತರ ಕರ್ನಾಟಕದ ಬೇರ ಬೇರೆ ಹಳ್ಳಿಗಳಲ್ಲಿ ಪ್ರಚಲಿತ ಇರುವ ಜೋಕುಮಾರನ ಕಥೆಗಳ ಬಗ್ಗೆ ಕೂಲಂಕಷವಾಗಿ ವಿಚಾರಿಸಿದರೆ ಒಂದು ಸ್ಪಷ್ಟ ಚಿತ್ರಣ ನಮ್ಮ ಮುಂದೆ ನಿಲ್ಲುತ್ತದೆ.