ಜೋಕುಮಾರನು ಮಳೆ ತರುವ ದೇವರು :

ಎಲ್ಲಿ ಮಳೆ ಹೋದರೂ ಜೋಕುಮಾರ ಮಳೆ ತರುತ್ತಾನೆ.

ಜೋಕುಮಾರನನ್ನು ಹೊರುವ ಗಂಗಾಮತದ ಹೆಣ್ಣು ಮಕ್ಕಳು ಮೊದಲು ದಿನ ಮಾತ್ರ ಜಳಕ ಮಾಡುವರು, ಮುಂದೆ ೬ ದಿನಗಳವರೆಗೆ ಜಳಕ ಮಾಡುವುದಿಲ್ಲ. ಬಟ್ಟೆ ಸಹ ಬದಲಿಸುವುದಿಲ್ಲ.

ಬುಟ್ಟಿ ಹೊತ್ತುಕೊಂಡು ಹೋದಾಗ ಅದನ್ನು ಇಡುವಾಗ ಹಾಗೂ ಎತ್ತುವಾಗ ಹುಷಾರಾಗಿ ಇಡಬೇಕು. ಎತ್ತಬೇಕು ಆಕಸ್ಮಾತ ಉರುಳಿದರೆ ಅದು ಅಪಶಕುನ.

ಆಶಯಗಳು :

ತಗಣಿ, ಚಿಕ್ಕಾಡು ಆದರೆ ಮೆಣಸಿನಕಾಯಿ ಉಪ್ಪು ಕೊಟ್ಟು ಅವು ನಾಶವಾಗುವಂತೆ ಬೇಡಿಕೊಳ್ಳುವರು. ಅನಂತರ ಅದರಂತೆ ಅವು ಹೋಗುತ್ತವೆ ಎಂಬ ನಂಬಿಕೆ ಇದೆ.

ನುಚ್ಚ ಅಂಬಲಿ ಚರಗಾ ಚಲ್ಲಿದಾಗ ಹೊಲದಲ್ಲಿ ಲಕ್ಷ್ಮಿಯು (ಮಾರಿಯ) ಮಗನನ್ನು ಹುಡುಕಲು ಅಡ್ಡಾಡಲು ಹೋಗುವಳು. ಅದರಿಂದ ಬೆಳೆ ಹುಲುಸಾಗಿ ಬರುವುದೆಂಬ ಜಾನಪದ ನಂಬಿಕೆ ಇರುತ್ತದೆ. ಅಳ್ಳಂಬಲಿ ಆ ಗಡಿಗೆಗೆ ’ಬೆಚ್ಚು’ ಅನ್ನುವರು.

ಗಣಪತಿ – ಜೋಕುಮಾರನ ಬಗ್ಗೆ ಸಾಮ್ಯ, ವೈಷಮ್ಯಗಳ ಬಗ್ಗೆ ವಿಚಾರ ಮಾಡಿದರೆ ಗಣಪತಿಯು ಭಾದ್ರಪದ ಚೌತಿಯ ದಿನ ಬಂದು ನವಮಿಗೆ ಹೋಗುವನು. ಆದರೆ ಭಾದ್ರಪದ ಅಷ್ಟಮಿಗೆ ಜೋಕುಮಾರನು ಬಂದು ಪೌರ್ಣಿಮೆಗೆ ಅಂದರೆ ೬ ದಿನಕ್ಕೆ ಹೋಗುವನು. ಕೇವಲ ಒಂದು ದಿನ ಮಾತ್ರ ಇವರಿಬ್ಬರ ಭೆಟ್ಟಿ ಆಗುವುದು.

ಜೋಕುಮಾರನು ಬಂದರೆ ಗಣಪತಿಯನ್ನು ಒಂದು ಅರಿವೆಯಿಂದ ಮುಚ್ಚಿ ಬಿಡುವರು. ಇದರ ಬಗ್ಗೆ ಹೇಳುವುದಾದರೆ ಒಂದು ವೇಳೆ ಗಣಪತಿಯು ಜೋಕುಮಾರನನ್ನು ನೋಡಿದರೆ ಅವನ ಹೊಟ್ಟೆಯು ಒಡೆಯುವುದು.

’ಸೊಂಡ್ಯಾ’ ಅಂದರೆ ಗಣಪತಿ, ಗಂಡ್ಯಾ ಅಂದರೆ ಜೋಕುಮಾರ ಲೊಂಡ್ಯಾ ಅಂದರೆ (ಅಲಾವಿ ದೇವರು) ಇವು ಒಂದೇ ಸಮಯಕ್ಕೆ ಕೂಡುವುದು. ಅಪಶಕುನವಾಗಬಾರದೆಂದು ಒಂದು ಜಾನಪದ ಬಲವಾದ ನಂಬಿಕೆ ಇರುತ್ತದೆ.

ಕಾಮ ಮತ್ತು ಜೋಕುಮಾರನು ಜೀವನದ ಕಾಮುಕ ಮುಖದ ಸಂಕೇತಗಳು. ಇವುಗಳಲ್ಲಿ ಕಾಮಕಲ್ಪನೆ ಹೆಚ್ಚಾಗಿ ಪುರಾಣ ಸಂಬಂಧವನ್ನು ಕಲ್ಪಿಸಿ ನೋಡುತ್ತದೆ. ಆದರೆ ಜೋಕುಮಾರನದು ಹೆಚ್ಚು ಜಾನಪದ ಸಂಬಂಧವಿರುವವೆಂದು ಹೇಳುತ್ತಾರೆ.

ಪಡೆನುಡಿಗಳು :

ಜೋಕುಮಾರಿಗೆ ಹೋಲಿಸಿ ಬಳಸುವ ಜಾನಪದ ಪಡೆನುಡಿಗಳು : ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಹೆಚ್ಚಾಗಿ ಇವೆ.

೧. ಊರಾಗ ಜೋಕುಮಾರ ಆಗ್ಯಾನ ಜೋಕುಮಾರ.

೨. ಗುಳ್ಳವ್ವ – ಜೋಕುಮಾರನಿಗೆ ಸಂಬಂಧ ಕಲ್ಪಿಸಿ ಅಶ್ಲೀಲ ನುಡಿಗಳಿಂದ ಹಾಡುವರು.

೩. ಜೋಕುಮಾರನ ಹಾಂಗ ಬೇವಿನ ಎಲಿಯಾಗ ಹೋಗಿ ನೋಡ.

೪. ಅಷ್ಟಮಿ ದಿನ ಹುಟ್ಯಾನ ನನ್ನ ಕೋಮರಾಜೇಷ್ಟಾದೇವಿ ನಿನ್ನಮಗ ಜೋಕುಮಾರ

೫. ಏ ಜೋಕುಮಾರಂಗನ ಮೆರಿಬ್ಯಾಡ ಊರಾಗ.

೬. ಅಬಬಾ ಇವನ ಏನಡೌಲು – ಜೋಕುಮಾರ ಆಗ್ಯಾನ ಜೋಕುಮಾರ.

೭. ಹೆಡಕು ಮುರಿಸಿಕೊಂಡೀ ಹೆಡಕು ಆ ಜೋಕುಮಾರನ ಹಾಂಗ.

ಈ ತರಹದ ಅನೇಕ ಪಡೆನುಡಿಗಳು ಉತ್ತರ ಕರ್ನಾಟಕದ ಬಹುತೇಕ ಜೋಕುಮಾರನಿದ್ದ ಹಳ್ಳಿಗಳಲ್ಲಿಯ ಜಾನಪದೀಯರ ಬಾಯಿಯಿಂದ ಪ್ರಸಂಗಾನುಸಾರ ಹೊರಗೆ ಹೊಮ್ಮುವುದರಿಂದ ಈ ಪಡೆನುಡಿಗಳು ಜೋಕುಮಾರನೊಬ್ಬ ಒಬ್ಬ ಫಟಿಂಗ್, ಉಡಾಳ ದೇವತೆಯೆಂದು ಅನ್ನುವರು.

೧೦) ವಿದ್ವಾಂಸರ ಅಭಿಪ್ರಾಯಗಳು :

೧) ಡಾ || ಬೆಟಗೇರಿ ಕೃಷ್ಣಶರ್ಮರ ಅಭಿಪ್ರಾಯದ ಪ್ರಕಾರ :

ಸೋಮಾರಿ ಎಂಬ ಪದದ ಅರ್ಥವು. ಪುಂಡ, ಪೋಲಿ ಇದು ಸೋಮಾರಿ ಹೋಗಿ ಯೋಗಕುಮಾರ ಎಂಬುದರ ಅಪಭ್ರಂಶ ಲೋಪವೇ ಜೋಕುಮಾರ ಎಂದಾಗಿರಬಹುದೆಂದು ಈ ವಿದ್ವಾಂಸರ ಊಹೆ ಆಗಿದೆಯೆಂದು. ಆದರೆ ಜೋಕುಮಾರನಿಗೆ ಸಂಬಂಧಿಸಿದ ಲೋಕ ವಾರ್ತೆಗಳಲ್ಲಿಯೂ ಜಾನಪದ ಹಾಡುಗಳಲ್ಲಿಯೂ ಯೋಗ ಮತ್ತು ಜೋಕುಮಾರನಿಗೆ ಸಂಬಂಧವಿದ್ದಂತೆ ಎಲ್ಲಿಯೂ ಪ್ರಮಾಣಗಳಿಲ್ಲವೆಂದು ದಿ.ಡಾ. ಬೆಟಗೇರಿ ಕೃಷ್ಣಶರ್ಮರು ಅಭಿಪ್ರಾಯ ಪಡುತ್ತಾರೆ.

೨) ಡಾ. ಶಿವರಾಮ ಕಾರಂತ ಅವರ ಅಭಿಪ್ರಾಯದ ಪ್ರಕಾರ :

ಜೋಕುಮಾರನ ಹಬ್ಬವು ನಮ್ಮಲ್ಲಿಯ ಕೃಷಿಕರ ಕೆಲಸವನ್ನು ಕುರಿತು ಒಂದು ಸಾಂಕೇತಿಕ ರಚನೆ ಇರಬಹುದೆಂದು ಊಹಿಸುತ್ತಾರೆ. ಅವರ ಅಭಿಪ್ರಾಯದ ಪ್ರಕಾರ ಹೀಗೆ ತರ್ಕಿಸಬಹುದಾಗಿದೆ :

ಜೋಕನು ಜನಕುಮಾರನೂ ಅಲ್ಲ. ಶಿವಕುಮಾರನೂ ಅಲ್ಲ. ಈತನು ಯುವ ಕುಮಾರ ಇಲ್ಲವೇ ಯುವಾಂಕುರ ಯುವದಿಂದ ಹುಟ್ಟಿದ ಮೊಳಕೆ ಇವರ ತಂದೆ. ಯುವ (ಸವೆಗೋದಿ) ಗೋದಿ ಸಸಿ ಪೋಷಣೆಗೆ ಮುಂದೆಯೂ ಮಳೆ ಬೇಕಷ್ಟೇ ಜನರು ಅಂತಹ ಭಾರಿ ಮಳೆಗಾಗಿ ಆತುರರಾಗಿದ್ದಾರೆ. ಬಯಸುತ್ತಾರೆ.

ಜೋಕುಮಾರ ಕುದುರೆಯನ್ನೇರಿ ಸಂಚರಿಸಿ ಆಕಾಶದಿಂದ ಅಂತಹ ಮಳೆಯನ್ನು ತರಿಸುತ್ತಾನೆ. ಅವರ ತಂದೆಯು ಅದಕ್ಕಾಗಿಯೇ ಭೂಮಿಯಲ್ಲಿಯೇ ಉಳಿಯಬೇಕಾಯಿತು. ಕೊನೆಯ ಮಳೆಯೇ ಉತ್ತರೆಯ ಮಳೆ.

೧) ಜೇಷ್ಟ – ಜನನಕ್ಕೆ ಕಾರಣವಾದ ಮಳೆಯಾದರೆ, ಮುಂದೆ ಬೆಳೆಗೆ

೨) ಮೂಲಾ, ೩) ಪೂರ್ವಾಷಾಢಾ, ೪) ಉತ್ತರಾಷಾಢಾ

೫) ಶ್ರಾವಣ ೬) ಪೂರ್ವ ಭಾದ್ರಪದ ೭) ಉತ್ತರ ಭಾದ್ರಪದ

ಹೀಗೆ ಏಳು ನಕ್ಷತ್ರಗಳ ಕಾಲದ ತನಕವೂ ಮಳೆ ಬೀಳಬೇಕಾಗುತ್ತದೆ. ಜೇಷ್ಠ ಮಳೆಯ ಹುಟ್ಟಿದ ಆ ಕೂಸಿಗೆ ಮುಂದೆ ೭ x ೧೪ ದಿನಗಳ ಆಯುಷ್ಯ (ಇಲ್ಲಿ ಒಂದೊಂದು ಮಳೆಯ ಅವಧಿ ೧೪ ದಿನಗಳೆಂಬ ಅರ್ಥ) ಕಥೆಯು ೭ ದಿನಗಳೆಂಬುದು ಮಳೆಯು ೭ ನಕ್ಷತ್ರಗಳ ಅವಧಿ.

ದೀನವೃಷ್ಟಿ ಎಂಬ ಪದಕ್ಕೆ – ನಕ್ಷತ್ರದೃಷ್ಟಿ ಎಂಬ ಪದವಿದೆ. ಹಾಗಿದ್ದರೆ ದಿನ ಎಂಬುದಕ್ಕೆ ನಕ್ಷತ್ರ ಎಂಬ ವಿಚಾರವು ಸ್ಪಷ್ಟವಾಗುತ್ತದೆ.

ಅವರ ಅಭಿಪ್ರಾಯ ಹೀಗೆಯೇ ಮುಂದುವರಿದು :

ಯುವಕುಮಾರ ಬೆಳೆದು ದೊಡ್ಡವನಾಗಿ ಮೆರೆಯುತ್ತಾನೆ. ಪೃಥ್ವಿ ಸಶ್ಯಶಾಲಿನಿ ಆಗುತ್ತದೆ.  ಊರ ಕನ್ಯೆಯರನ್ನು ಮೋಹಿಸುತ್ತಾನೆ. ನಿಜವಾಗಿ ಅವನು ಬಲವಂತದಿಂದ ತಬ್ಬಿಕೊಂಡ ಕನ್ಯೆಯ ಹೆಸರು ’ಸುಕರ್ಣಿಕೆ’ ಎಂದರೆ ಹೂವಿನ ಹೊಡೆ ಸಸ್ಯದಲ್ಲಿ ಕಾಳು ಬೆಳೆಯಬೇಕಾದರೆ ಮುಂದೆ ಪರಾಗ ವಿನಿಮಯವಾಗಬೇಕು. ಜೋಕುಮಾರನ ಭೋಗಲಾಲಸೆ ಪುಷ್ಪದ ಗರ್ಭಪ್ರಧಾನಕ್ಕೆ ಸಂಕೇತ. ಈ ಮೊದಲೇ ಹೇಳಿದಂತೆ ಮತ್ತೊಂದು ಕಥೆಯ ಪ್ರಕಾರ ಜೋಕುಮಾರನು ತನ್ನ ತಾಯಿಯನ್ನೇ ಅಂದರೆ ಗೌರಿಯನ್ನೇ ಮೋಹಿಸುತ್ತಾನೆಂಬ ಅಂಶ ಬರುತ್ತದೆ. ಅಂದರೆ ಸಸ್ಯದಲ್ಲಿ ಕಾಳು ಬಲಿತ ಬಳಿಕ ನೇರವಾಗಿ ನೆಲದ ಮೇಲೆ ಬೀಳುತ್ತದೆ. ಹಾಗೆ ಆಗಬಾರದಲ್ಲ. ಹಾಗೆ ಮಾಡುವುದೆಂದರೆ ಜೋಕುಮಾರನನ್ನು ಕೊಂದಂತೆ. ಆದರೆ ಆ ಕಥೆಯಲ್ಲಿಯೂ ಸಹ ಅವನನ್ನು ಕೊಲ್ಲುತ್ತಾರೆ.

ಇತ್ತ ಭೂಮಿಯ ಮೇಲೆ ಬಿದ್ದ ಮಳೆನೀರು ಹಳ್ಳ ಸೇರಿ ಅಂಬಿಗರ ಮತ್ತು ಮಡಿವಾಳರ ಕೈಯಿಂದ ತಪ್ಪಿಸಿಕೊಂಡು ತಿರುಗಿ ಆಕಾಶ ಸೇರುತ್ತದೆ. ಆವಿಯಾಗಿ, ಜೋಕ ತನ್ನ ಋಷಿಗಳನ್ನು ಕೂಡಿಕೊಳ್ಳತ್ತಾನೆನ್ನುವ ತಾತ್ಪರ್ಯ ಅದು. ಜೋಕುಮಾರನ ಈ ಕಥೆಯ ಮೂಲ. ಬೀಜೋತ್ಪತ್ತಿಯ ಹಬ್ಬ ಎಂಬುದಾಗಿ ನಾವು ತರ್ಕಿಸಬಹುದೆಂದು ಶಿವರಾಮ ಕಾರಂತರು ಈ ಅಭಿಪ್ರಾಯ ಕೇವಲ ಕಲ್ಪನೆಯಾಗಿದೆ ಹೊರತು ಯಾವುದೇ ನಿರ್ದಿಷ್ಟವಾದ ಆಧಾರಗಳಿಲ್ಲವೆಂದು ಅಭಿಪ್ರಾಯ ಪಟ್ಟಿದ್ದಾರೆ.

೩) ಡಾ. ಎಂ. ಚಿದಾನಂದಮೂರ್ತಿಯವರ ಅಭಿಪ್ರಾಯದ ಪ್ರಕಾರ :

ಶಿವ – ಪಾರ್ವತಿಯವರಿಗೆ ಗಣಪತಿಯ ಹೇಗೆ ಮಗನೋ ಹಾಗೆ ಜೋಕು ಹಾಗೂ ಎಳೆಗೌರಿಯರಿಗೆ ಜೋಕುಮಾರನೂ ಒಬ್ಬ ಮಗನು. ಅವನು ಜನತೆಯ ಆರಾಧ್ಯದೇವತೆಯೆಂತಲೂ ಅವರ ಹೆಸರಿನಿಂದ ಹಬ್ಬ ಹುಣ್ಣಿಮೆಗಳು ಬಳಕೆಯಲ್ಲಿ ಬಂದಿರಬಹುದೆಂದೂ ಊಹಿಸುತ್ತಾರೆ.

ಜೋಕುಮಾರನು ಹುಟ್ಟಿದ್ದು ಭಾದ್ರಪದ ಶುದ್ಧ ಅಷ್ಟಮಿಯ ದಿನ ಎಂಬುದಕ್ಕೆ (ಅಂದರೆ ಅಷ್ಟಮಿಯ ಕೊಡದಲ್ಲಿ ಹುಟ್ಟಿದ್ದು) ಆಧಾರವಾದ ಮೈಸೂರು ಪ್ರಾಚ್ಯಕೋಶಾಗಾರದ ಕೆ ೩೨೦ ಸಂಖ್ಯೆಯ ಹಸ್ತಪ್ರತಿ ಪತ್ರ ೫೨ರ ಪ್ರಕಾರ

ಆದಿಮೂರುತಿ ಗುರುವೆ ಆವ ಜನ
ನಾದ ದಿನವನು ಪೇಳು ಯಂದೊಡೆ |
ಭಾದ್ರಪದ ಶುದ್ಧದಲಿ ದೇವಿಯ ಅಷ್ಟಮಿಯ ಧಾರಾ |
ಭೇದವಿಲ್ಲದೆ ಸರ್ವಲೋಕವು |
ಆದಲಿಸಿ ಕಟ್ಟೀರ ಬಳಿಕಲಿ |
ಆ ದಿವಸವೇ ಹುಟ್ಟಿ ನಡೆದನು ಭೂಪ ಕೇಳಂದಾ |

ಈ ಪ್ರಕಾರ ಅವನ ಹುಟ್ಟಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ಆಧಾರದಿಂದ ವ್ಯಕ್ತ ಪಡಿಸಿದ್ದಾರೆ.

೧೧) ಉಪಸಂಹಾರ :

ಮೇಲಿನ ಎಲ್ಲ ಕಥೆಗಳ ಅಭಿಪ್ರಾಯಗಳನ್ನು ಗಮನಿಸಿದಾಗ ಜೋಕುಮಾರನು ವೇದಗಳ ಕಾಲದ ದೇವತೆಯಿಂದ ಹಿಡಿದು ಈಗಿನ ಶಿಷ್ಟದೇವತೆ ಇರಬಹುದೇ ಎಂಬ ಪ್ರಶ್ನೆಗಳು ಉದ್ಭವಿಸಿದೆ. ಅವನು ಅತೀಕಾಮಿ ಎಂಬುದನ್ನು ನಾವು ಕಂಡರೂ ಇದಕ್ಕೆ ಕಾರಣ ಜನಜೀವನದ ಮುಖ್ಯವಾದ ಏಕಮೇವ ಕಾರಣ ಕಾಮ ಕ್ರೀಡೆ ಇರಬಹುದು ಎಂದೆನಿಸುತ್ತದೆ.  ಡಾ. ಚಿದಾನಂದಮೂರ್ತಿಯವರು ಇತ್ತೀಚೆಗೆ ಜೋಕುಮಾರನನ್ನು ’ಅತೀಕಾಮಿ’ ಎಂದು ಸಮರ್ಥಿಸಿದ್ದಾರೆ. ಅವನನ್ನು ಫಲಪ್ರದ ಗ್ರೀಸದೇಶದ ಡಯೋನಿಸನ್ ಎಂಬ ದೇವತೆಗೆ ಹೋಲಿಸಿದ್ದಾರೆ.

ಮಾನವ ಶಾಸ್ತ್ರದ ಅಭ್ಯಾಸದಿಂದ ಪ್ರಪಂಚದ ಎಲ್ಲಾ ಭಾಗಗಳಲ್ಲಿ ಜನಜೀವನ ಮಾತ್ರ ಒಂದೇ ಎಂಬ ಅಂತಿಮ ತೀರ್ಮಾನಕ್ಕೆ ಬಂದರೂ ಸಹ ಜೋಕುಮಾರನನ್ನು ನಾವು ಸಹಜ ಸರಳವಾಗಿ ನಂಬಿಗೆ ಇಟ್ಟು ಆಡಿಸುವ ಗಂಗಾಮತಸ್ತರ ಭಕ್ತರ ಮನಸ್ಸಿನ ಭಾವನೆಗಳಲ್ಲಿ ಮಾತ್ರ ಕಾಮ ಕ್ರೋಧಗಳು ಎದ್ದು ಕಾಣುತ್ತಿರಲಿಲ್ಲವೆಂದೆನಿಸಬಹುದು. ಜೋಕುಮಾರನ ವಿಷಯದಲ್ಲಿ ಹಾಗೂ ಅವನ ನಂಬಿಕೆ ಆಚಾರ ವಿಚಾರದಲ್ಲಿ ನಾವು ಜಾನಪದ ದೇವತೆಯನ್ನು ಪ್ರಮಾಣವಾಗಿ ಒಪ್ಪಿಕೊಳ್ಳುವುದಾದರೆ ಅನೇಕ ವಿದ್ವಾಂಸರ ತರ್ಕವು ಕಡಿಮೆ ಆಗಬಹುದೇನೋ ಎಂಬ ಸಂಶಯದಿಂದ ಮತ್ತಷ್ಟು ಒಳಹೊಕ್ಕು ನೋಡುವ ಒಂದು ಸಂಶೋಧನೆ ಜಾನಜಪದ ಕಾರ್ಯವಾಗಬಹುದು.

ಜೋಕುಮಾರನ ಹಾಡುಗಳಲ್ಲಿ ’ಏಳು ದಿನದ ಅವನ ಜೀವನದಲ್ಲಿ ಅವನ ಜನನ, ಬಾಲ್ಯ, ಕಾಮಾರ್ಯಾ, ಯವ್ವನ, ಮದುವೆ, ನಾವು ಎಲ್ಲವನ್ನೂ ಸೇರಿಸಿ, ಆಡಿಸಿ, ಏಳು ದಿನ ಮೆರೆಸುವ, ಇಂದಿಗೂ ಜೀವಂತವಿರುವ ಈ ಜೋಕುಮಾರನ ಈ ಹಬ್ಬವು ಕನ್ನಡ ಸಾಹಿತ್ಯದ ಜಾನಪದ ಸಾಹಿತ್ಯದಲ್ಲಿ ಬೇರೆ ಬೇರೆ ಭಾಗದಲ್ಲಿ ಬೇರೆ ಬೇರೆ ರೀತಿಯ ಕಥೆಗಳಿದ್ದರೂ ಆ ಕಥೆಗಳ ಮೂಲ ಆಶಯ (ಮೋಟೀಫ್) ತತ್ವ ಒಂದೇ ಆಗಿದೆ ಎಂಬ ನಿಲುವಿಗೆ ಬರಬಹುದಾಗಿದೆ.

ಜನಪದ ಸಾಹಿತ್ಯದಲ್ಲಿ ಅನೇಕ ಕಾರ್ಯಗಳನ್ನು ಕೈಕೊಂಡ ಶ್ರೀ ಚಂದ್ರಶೇಖರ ಕಂಬಾರರು ತಮ್ಮ ಒಂದು ’ಜೋಕುಮಾರಸ್ವಾಮಿ’ ಎಂಬ ಜನಪದ ನಾಟಕವನ್ನು ಜಾನಪದ  ಗತ್ತು ಶೈಲಿಗಳಿಂದ ಬರೆದು ಪ್ರಸ್ತುತಪಡಿಸಿದ್ದಾರೆ. ನಾಟಕದಲ್ಲಿ ಜಾನಪದರು, ಆಚರಿಸುವ ಜೋಕುಮಾರನ ಹಬ್ಬದ ಹಿನ್ನೆಲೆಯಲ್ಲಿ ಅವನು ಮಳೆ – ಬೆಳೆಯ ಅಭಿವೃದ್ಧಿಯ ಸಂಕೇತವಾದ ದೇವರೆಂದೂ, ಆ ದೇವರ ಹಬ್ಬ ಆಚರಿಸಿದರೆ ಮಳೆ – ಬೆಳೆ ಸರಿಯಾಗಿ ಆಗಿ ನಾಡು ಸಮೃದ್ಧಿ ಆಗುವುದೆಂದು ಉತ್ತರ ಕರ್ನಾಟಕದ ಜನರ ನಂಬುಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇಂತಹ ನಂಬುಗೆಯ ಆಚರಣೆಗೆ ಪಾತ್ರವಾದ ’ಜೋಕುಮಾರಸ್ವಾಮಿ’ ನಾಟಕವನ್ನು ಬಳಸಿಕೊಂಡು ಉತ್ತರ ಕರ್ನಾಟಕದ ರಂಗಕಲಾವಿದರನ್ನು ಅಳವಡಿಸಿಕೊಂಡು ಕಂಬಾರರು ಸಮಕಾಲೀನ ಬದುಕಿನವರ ಸ್ಥಿತಿಯ ಹಾಗೂ ಸಮಸ್ಯೆಗಳನ್ನು  ಚರ್ಚಿಸುವ ಒಂದು ಚರ್ಚಾತ್ಮಕವಾದ ನಾಟಕವನ್ನು ಅಳವಡಿಸಿಕೊಂಡಿದ್ದಾರೆ.

ಜೋಕುಮಾರನ ಬಗ್ಗೆ ಅನೇಕ ವಿದ್ವಾಂಸರು ಮಾಡಿದ ಪ್ರಯತ್ನಗಳು ಇನ್ನೂ ಹೆಚ್ಚು ಸಫಲವಾಗಬೇಕಾಗಿವೆ. ಈ ಕಥೆಯ ಪರಂಪರೆಯ ಹಿನ್ನೆಲೆಯಲ್ಲಿರುವ ಮೂಲ ಆಶಯಗಳನ್ನು ಗುರುತಿಸುತ್ತ, ವಿಶ್ಲೇಷಿಸುವುದು ಒಂದು ಕಾರ್ಯವಾದರೆ, ಅವನಿಗೆ ಸಂಬಂಧಿಸಿದ ಹಾಡುಗಳನ್ನು ಸಂಗ್ರಹಿಸಿ ಅದರಲ್ಲಿ ಅಡಕವಾಗಿರುವ ತತ್ವಗಳನ್ನು ಗಮನಿಸಿ ಜನಪದ ಸಾಹಿತ್ಯ ಪ್ರಿಯರಿಗೆ ಇನ್ನಷ್ಟು ಹೆಚ್ಚಿನ ವಿಷಯಗಳನ್ನು ತಿಳಿಸಲು ಯೋಗ್ಯವಾಗುವಂಥ ಪ್ರಯತ್ನಗಳು ನಡೆಯಬೇಕೆಂಬುದೇ ನಮ್ಮೆಲ್ಲರ ಹೆಬ್ಬೆಯಕೆ ಆಗಲೆಂದು ಆಶಿಸುತ್ತೇನೆ. ಈ ದಿಶೆಯಲ್ಲಿ ಪ್ರಾದೇಶಿಕವಾಗಿ ಕಾರ್ಯ ಕೈಕೊಂಡರೆ ಜೋಕುಮಾರನ ಬಗೆಗಿದ್ದ ಭಿನ್ನ ಭಿನ್ನ ಪ್ರಾದೇಶಿಕ ಆಚಾರ – ವಿಚಾರಗಳು ನಂಬಿಗೆಗಳು ಹಾಡುಗಳ ಸಂಗ್ರಹಣೆ ಕ್ಷೇತ್ರ ಕಾರ್ಯ (ಫೀಲ್ಡ್ ವರ್ಕ್) ದಿಂದ ಹೊರ ಹಾಕುವುದು ಅತ್ಯವಶ್ಯ ಎಂದು ನನ್ನ ಅನಿಸಿಕೆ ಆಗಿವೆ.