) ಕಥೆಗಳು : ೧*

[1]

ಜೋಕ ಎಂಬ ವ್ಯಕ್ತಿಯು ಸಪ್ತರ್ಷಗಳಿಗೆ ಒಬ್ಬ ನಂಬುಗೆಯ ಸೇವಕನು. ಒಂದು ದಿನ ಆ ಪರಮ ಋಷಿಗಳು ಮರ್ತ್ಯಲೋಕದ ನರರ ವೈಭವವನ್ನು ಕುರಿತು ಸುರರು ಅಮೃತವನ್ನು ಮಾತ್ರ ಊಟ ಮಾಡುತ್ತಾರೆ ಹೊರತು ಇನ್ನು ಬೇರಾವುದೇ ಅವರು ಅರಿತವರಲ್ಲ. ಆದರೆ ಮರ್ತ್ಯರೋ ಪರಮಾನ್ನ ಪಂಚಭಕ್ಷಗಳನ್ನು ಸವಿಯುತ್ತಾರೆ. ಅವರು ಜಿಹ್ವಾಲಂಪಟರು ವಿಷಯ ಲೋಲಪರು. ಸಿಂಹವು ತಾನೇ ಹೋಗಿ ಆನೆಯ ನಾಲಿಗೆಗೆ ಬಿದ್ದಂತಿದೆ. ಅವರು ಪಾಪಿಗಳು – ಇತ್ಯಾದಿ ಆಡಿಕೊಳ್ಳುವುದನ್ನು (ಮಾತಾಡಿದ್ದನ್ನು) ಆ ನಂಬುಗೆಯ ಸೇವಕನಾದ ಜೋಕನು ಕೇಳಿಸಿಕೊಂಡನು. ನಂತರ ಅವನ ಮನಸ್ಸಿಗೆ ಏನೋ ಅನಿಸಿ ಮುಂದಿನದನ್ನು ಏನೂ ವಿಚಾರಿಸದೇ ಆ ಸಪ್ತ ಋಷಿಗಳಿಗೆ ವಂದಿಸಿ ತಾನು ಮರ್ತ್ಯಲೋಕಕ್ಕೆ ಹೋಗಿ ನೋಡಿಕೊಂಡು ಬರುವೆನು, ವರವನ್ನು ದಯಪಾಲಿಸಿರೆಂದು ಬೇಡಿಕೊಂಡನು. ಆಗ ಅವರು ಹೋಗಲು ಅನುಮತಿಕೊಟ್ಟು ಅದರ ಕೂಡ ಎರಡು ಷರತ್ತುಗಳನ್ನು ಹಾಕಿದರು. ೧.ಯಾವುದೇ ತರಹದ ಮೃಷ್ಟಾನ್ನ ಭೋಜನವನ್ನು ಮುಂದಿಟ್ಟರೂ ಊಟಮಾಡಬಾರದು. ೨. ಯಾವ ಸುಂದರ ತರುಣಿಯರಿಗೂ ಮನಸೋಲಬಾರದು. ಹಾಗೆಯೇ ಹಿಂದಿರುಗಬೇಕೆಂದು ಬುದ್ಧಿಮಾತು ಹೇಳಿ ಕಳುಹಿಸಿದರು.

ನಂತರ ಜೋಕ ಋಷಿಯು ಭೂಮಿಗೆ ಬಂದು ಇಳಿದನು. ಅಷ್ಟರಲ್ಲಿ ಕತ್ತಲೆ ಆಗಿತ್ತು. ಇಳಿದುಕೊಳ್ಳಲು ಅತ್ತಿತ್ತ ಜಾಗ ನೋಡಲು ಅಲ್ಲಿ ಒಂದು ಮಾರಮ್ಮ (ಮಾರಿಯ) ದೇವಿಯ ಗುಡಿಯು ಕಾಣಿಸಿತು. ಅಲ್ಲಿ ಹೋಗಿ ಇಳಿದುಕೊಂಡನು. ನಂತರ ತಾನು ಅಮೃತವನ್ನು ಸೇವಿಸಿ, ಮನೋಹರವಾಗಿ ಸಪ್ತ ರಾಗಗಳಲ್ಲಿ ಹಾಡ ತೊಡಗಿದನು. ಇದನ್ನೆಲ್ಲಾ ಒಳಗೆ ಇದ್ದ ಮಾರಿಯು ನೋಡಿ ಕೇಳಿ, ಮೃಷ್ಟಾನ್ನ ಭೋಜನವನ್ನು ಒಂದು ಚಿನ್ನದ ಪಾತ್ರೆಯಲ್ಲಿ ತಂದಿಟ್ಟು ಇವನನ್ನೇ ದಿಟ್ಟಿಸಿ ನೋಡಿದಳು. ಆಗ ಇವನು ಅತೀ ಸುಂದರನು ದೇವರಾದ ಶಿವ, ವಿಷ್ಣು, ಬ್ರಹ್ಮನಿಗಿಂತಲೂ ಮಿಗಿಲಾದ ರೂಪವುಳ್ಳವನೆಂದು ತಿಳಿದು ಎಂದೂ ಯಾರಿಗೂ ಸೋಲದವಳು ಅವನ ರೂಪಕ್ಕೆ ಸೋತು ಮಾರು ಹೋದಳು. ಆದರೆ ಆ ಜೋಕ ಋಷಿಗೆ ತನ್ನ ಗುರುಗಳ ಆಜ್ಞೆಯು ನೆನಪಾಯಿತು. ಒಂದು ಕಡೆಗೆ ಮೃಷ್ಟಾನ್ನ ಭೋಜನದ ವಾಸನೆ, ಒಂದು ಕಡೆ ಸುಂದರವಾದ ಹೆಣ್ಣಿನ ಆಕರ್ಷಣೆ, ಮತ್ತೊಂದು ಕಡೆಗೆ ಗುರುಗಳ ಆಜ್ಞೆ – ಈ ಮೂರರಲ್ಲಿ ಅವನು ಯಾವುದಕ್ಕೆ ಮಣಿಯಬೇಕೆಂಬುದು ತೋಚಲಿಲ್ಲ. ನಂತರ ಕೊನೆಗೆ ಧೈರ್ಯಮಾಡಿ ಊಟ ಮಾಡಿದನು. ಚಿನ್ನದ ತಂಬಿಗೆಯಿಂದ ಕೈತೊಳೆದುಕೊಂಡನು. ಆಗ ಅವನು ಆ ಚಲುವಾದ ಮಾರಿಯ ಮುಖವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದನು. ನೀನೇನು ಲಕ್ಷ್ಮಿಯೋ ಗಿರಿಜೆಯೋ ಎಂದು ಪ್ರಶ್ನಿಸಿದನು. ಆಗ ಅವಳು ತಾನು ’ ಮಾರಿ ’ ಎಂದು ಹೇಳಿ ಮೋಹದಿಂದ ಅವನಿಗೆ ತಾಂಬೂಲವನ್ನು ಕೊಟ್ಟಳು. ಇದೇ ಸಮಯವನ್ನು ಕಾದು ಕುಳಿತ ಮನ್ಮಥನು ತನ್ನ ಕಾಮಬಾಣವನ್ನು ಪ್ರಯೋಗಿಸಿದನು. ಅವನು ಅವಳಿಗೆ ಸೋತನು. ಪ್ರೇಮಾಂಕರವಾಯಿತು. ಕೆಲವು ಸಮಯದ ನಂತರ ಅವನಿಗೆ ಎಚ್ಚರವಾದಾಗ ತನ್ನ ತಪ್ಪಿನ ಅರಿವಾಯಿತು. ತನ್ನ ಗುರುಗಳ ಮಾತನ್ನು ಮೀರಿದೆ ಎಂದು ಕೊರಗುತ್ತಾ ಋಷಿಗಳ ಕಡೆಗೆ ಹೋಗಿ ಅವರ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡನು. ಅವರು ಅವನನ್ನು ಕಾಲಿನಿಂದ ಒದೆದರು. ಆಗ ಜೋಕ ಋಷಿಯು ಗುರುಗಳಿಗೆ…. ಮಾನ್ಯರೆ, ನಿಮ್ಮ ಪಾದಗಳು ನನ್ನನ್ನು ಮುಟ್ಟಿದವು. ನನ್ನ ಕುಲಕೋಟಿಗೆಲ್ಲಾ ಮಾಡಿದ ಪಾಪವು ಬಗೆಹರಿಯಿತೆಂದು ನಿಮಗೆ ಧನ್ಯವಾದಗಳು ಎಂದು ವಿನಯದಿಂದ ಬೇಡಿಕೊಂಡನು. ಆಗ ಅವರು ತಮ್ಮ ತಮ್ಮಲ್ಲೆ ನಗುತ್ತ ಏಳು ದಿನ ಸುಮ್ಮನಿರು ನೀನು ನಮ್ಮಲ್ಲಿಗೆ ಬಂದು ಸೇರುತ್ತೀ ಎಂದು ವಚನಕೊಟ್ಟರು.

ಇತ್ತ ಮಾರಿ ಮತ್ತು ಜೋಕ ಋಷಿಯ ಸಂಬಂಧದಿಂದ ಮಾರಿಯು ಬಸುರಾಗಿ ಒಬ್ಬ ದಷ್ಟ ಪುಷ್ಟವಾದ ಮಗನನ್ನು ಹೆತ್ತಳು. ಆ ಕೂಸು ಹುಟ್ಟಿದ ಕೂಡಲೇ ಮಾತನಾಡ ಹತ್ತಿತು. ಹಾಗೂ ತಾಯಿಗೆ ತನ್ನ ತಂದೆ ಯಾರೆಂದು ಕೇಳಿತು. ಆಗ ಅವಳು ತನಗೇನೂ ತಿಳಿಯದೆಂದೂ ಆದರೆ ಅವನು ಒಬ್ಬ ಸ್ವರ್ಗದ ಪುರುಷನು. ಅವನು ಎತ್ತ ಹೋದನೋ ನನಗೆ ಗೊತ್ತಿಲ್ಲವೆಂದು ತಿಳಿಸಿದಳು. ಅವನು ಹಾಗಾದರೆ ನಾನು ನನ್ನ ತಂದೆಯನ್ನು ಹುಡುಕಿಕೊಂಡು ಬರುತ್ತೇನೆಂದು ಹೋದನು.

ಅವನು ಹುಟ್ಟಿದ ದಿನವು ಭಾದ್ರಪದ ಶುದ್ಧ ಅಷ್ಟಮಿಯ ದಿನ. ಅವನು ತನ್ನ ತಂದೆಯನ್ನು ಹುಡುಕುತ್ತ ಹುಡುಕುತ್ತ ಹೋಗುತ್ತಿರುವಾಗ ಗಂಗಾಮತಸ್ಥರು ಭಾದ್ರಪದ ಹುಣ್ಣಿಮೆಯ ದಿನ ಗಂಗಾದೇವಿಯನ್ನು ಪೂಜಿಸುತ್ತಿದ್ದರು.  ಅಗಸರು ತಾವು ಬೇಡಿತಂದ ಅಹಾರವನ್ನು ಊಟ ಮಾಡುವ ಸಮಯದಲ್ಲಿ ತಮ್ಮ ಕತ್ತೆಯನ್ನು ಕಾಯಲು ಒಬ್ಬ ಸುಂದರ ತರುಣಿ ಸುಕರ್ಣಿಕ ಎಂಬವಳನ್ನು ನೇಮಿಸಿದ್ದರು. ಮಾರಿಯ ಮಗನಾದ ಹಾಗೂ ಜೋಕ ಋಷಿಯ ಮಗನಾದ ಜೋಕುಮಾರನು ತನ್ನ ಕುದುರೆಯ ಮೇಲೆ ಹಾಯ್ದು ಹೋಗುತ್ತಿರಲು ಆ ಸುಂದರ ಹುಡುಗಿಯನ್ನು ನೋಡಿ ಅವಳನ್ನು ಪೀಡಿಸಿ, ಕಾಡಿಸುತ್ತಾನೆ. ಅವಳು ಹೆದರಿ ಕೂಗಿ ಕೊಂಡಾಗ ಅಲ್ಲಿದ್ದ ಮಡಿವಾಳರೆಲ್ಲಾ ಓಡಿ ಬಂದು ಅವನನ್ನು ಹೊಡೆದು ಬಡಿದು ಕೊಲ್ಲುತ್ತಾರೆ. ನಂತರ ಕಲ್ಲಿನ ಕೆಳಗೆ ಅವನ ಹೆಣವನ್ನಿಟ್ಟು ಹೋಗುತ್ತಾರೆ, ಮಾರಿಯ ಸಂಪರ್ಕದಿಂದ ಜೋಕುಮಾರನಿಗೆ ಸಂಭವಿಸಿದ ಶಾಪವು ಅಲ್ಲಿಗೆ ಮುಗಿಯುತ್ತದೆ. ಜೋಕುಮಾರನ ಅಂಶದಿಂದ ಹುಟ್ಟಿದ ಆ ಬಾಲಕನಿಗೆ ’ಜೋಕುಮಾರ’ ನೆಂದು ಹೆಸರು ಆಯಿತು.

೧೧ನೆಯ ಶತಮಾನದಿಂದಲೂ ಗ್ರಂಥಸ್ಥವಾಗಿರುವ ಈ ಕಥೆಗೂ ಜನಪದ ಕಥೆಗೂ ಅನೇಕ ರೀತಿಯ ಏರು ಪೇರುಗಳು ಇರುವುದರಿಂದ ಜೋಕನ ಕುಮಾರನ ನೆಂಬುದೇ “ಜೋಕುಮಾರ’  ಹೆಸರು ಬಂದಿರಬಹುದಾಗಿದೆ. ಹಾಗೂ ಅವರು ಅಲ್ಪಾಯುಷಿಯೂ ಚಿಕ್ಕವಯಸ್ಸಿನಲ್ಲಿ ದುಷ್ಟ ಸ್ವಭಾವ ಉಳ್ಳವರೂ ಅತೀ ಕಾಮಿಯೂ ಏಕೆ ಆಗಿದ್ದನೆಂದು ಕಾರಣಗಳನ್ನು ಹೇಳುವುದು ಕಠಿಣವಾದರೂ ಜಾನಪದ ಕಥೆಗಳ ಹಿನ್ನೆಲೆಯಲ್ಲಿ ಅದಕ್ಕೆ ಸೂಕ್ತ ಪರಿಹಾರಗಳನ್ನು ಮಾತ್ರ ಕಂಡುಕೊಳ್ಳಬಹುದಾಗಿದೆ.

ಕಥೆ : ೨

ಜೋಕ ಋಷಿ ಮತ್ತು ಎಳೆಯ ಗೌರಿ ಎಂಬ ದಂಪತಿಗಳಿಗೆ ಬಹಳ ದಿನಗಳಿಂದ ಮಕ್ಕಳಾಗಿರುವುದಿಲ್ಲ. ಅವರು ಶಿವನನ್ನು ಪ್ರಾರ್ಥಿಸಿದಾಗ ಅವನ ಕೋರಿಕೆಯಂತೆ ಶಿವನು ೭ ದಿನದ ಆಯುಷ್ಯದ ಒಬ್ಬ ಕುಮಾರನನ್ನು ಅನುಗ್ರಹಿಸಿದರು. ಇವನು ವರ  ಪುತ್ರನಾಗಿರುವುದರಿಂದಲೇ ಇವನು ಹುಟ್ಟಿದ ಕೂಡಲೇ ಎಲ್ಲರಂತೆ ಮಾತನಾಡಲು ಬಾಯಿ, ಎದ್ದು ಅಡ್ಡಾಡಲು ಶಕ್ತಿ ಬಂದಿತು.

ಮಳೆ ಬೆಳೆ ಇಲ್ಲದೆ ರಾಜ್ಯದಲ್ಲಿ ಆವಾಗ್ಗೆ ಜನರು  ಹಾಹಾಕಾರದಿಂದಲೂ ಜೋಕುಮಾರನು ತನ್ನ ನಿಲುಗುದುರೆಯನ್ನೇರಿ ಸುತ್ತಲೂ ಸಂಚರಿಸಿ ತನ್ನ ಶಲ್ಲೆಯನ್ನು ಬೀಸಿ ತನ್ನ ಶಕ್ತಿಯಿಂದ ದೊಡ್ಡ ದೊಡ್ಡ ಮಳೆಯನ್ನು ಬೀಳುಸುವನು. ಕೆರೆ, ಭೂಮಿ, ಹಳ್ಳ ತುಂಬಿ ಹರಿಯುತ್ತವೆ. ಇದರಿಂದ ಸಂತೋಷಗೊಂಡ ಜೋಕುಮಾರನು ಹೊಲದಲ್ಲಿ ಆನಂದದಿಂದ ಚೆಂಡಾಡುತ್ತಾನೆ. ಇವನು ಹುಟ್ಟಿನಿಂದಲೇ ಅತೀ ಕಾಮಿಕ ಇರುವುದರಿಂದೊಂದು ದಿನ ಒಬ್ಬ ಮಡಿವಾಳದ ಹೆಣ್ಣನ್ನು ಮೋಹಿಸಿದಾಗ ಅವನನ್ನು ಅವಳ ತಂದೆ ಕೊಂದು ರುಂಡವನ್ನು ಹೊಳೆಯಲ್ಲಿ ಚೆಲ್ಲುತ್ತಾನೆ. ಅಲ್ಲಿಯೇ ಮೀನುಗಾರರಿದ್ದರು ಅವರು ಅದನ್ನು ನೋಡಿ ಭಯಪೊಟ್ಟು ಅದನ್ನು ಅಗಸರ ಅರಿವೆ ಒಗೆಯುವ ಕಲ್ಲಿನ ಕೆಳಗೆ ತುರುಕಿ ಹೋಗುವರು. ಅದನ್ನು ಅಗಸರು ನೋಡಿ ದೇವರೆಂದು ಪೂಜಿಸುತ್ತಾರೆ. ತಮಗೆ ಬೆಳೆ – ಮಳೆ ಕೊಡಿರೆಂದು ಪ್ರಾರ್ಥಿಸುತ್ತಾರೆ. ಅಂದಿನಿಂದ ಜೋಕುಮಾರನ ಹಬ್ಬ ಜಾರಿಗೆ ಬಂತೆಂದು ಜೋಕುಮಾರನು ಹೇಳುತ್ತಾರೆ. ಭಾದ್ರಪದ ಅಷ್ಟಮಿಯ ದಿನ ಹುಟ್ಟಿ ಹುಣ್ಣಿಮೆ ದಿನ ಸಾಯುತ್ತಾನೆ. ಅದಕ್ಕೆ ಆ ಹುಣ್ಣಿಮೆಗೆ ಜೋಕುಮಾರನ ಹುಣ್ಣಿಮೆ ಎಂದು ಅನ್ನುವರು.

ಕಥೆ : ೩

ಜೋಕುಮಾರನ ಹಬ್ಬವು ಭಾದ್ರಪದ ಮಾಸದಲ್ಲಿ ಗೌರಿ ಹಬ್ಬದ ಬಳಿಕ ಬರುತ್ತದೆ. ಇವನಿಗಿಂತ ಮೊದಲು ಭೂಲೋಕದಲ್ಲಿ ಹುಟ್ಟಿಬಂದ ಗಣಪತಿಯು ತನಗೆ ಜನರಿಂದ ಮೋದಕ ಮೊದಲಾದ ಮೃಷ್ಟಾನ್ನ ಭೋಜನವು ಸಿಕ್ಕಿತು ಸಿಹಿ ತಿಂಡಿಗಳು ಸಿಕ್ಕವು ನಾನು ಆನಂದದಿಂದ ಬಂದೆನು ಎಂದು ತಂದೆಗೆ ಹೇಳುತ್ತಾನೆ. ಆದ್ದರಿಂದ ಭೂಲೋಕದಲ್ಲಿ ಎಲ್ಲರೂ ಆನಂದದಿಂದ ಇದ್ದಾರೆ ಎಂದು ಈಶ್ವರನಿಗೆ (ಶಿವನಿಗೆ) ಹೇಳುತ್ತಾನೆ.

ಆ ನಂತರ ಹುಟ್ಟಿ ಬಂದ ಜೋಕುಮಾರನು ಜನರು ಮಳೆ ಬೆಳೆ ಇಲ್ಲದೆ ಗೋಳಾಡುತ್ತಿದ್ದಾರೆ. ಅಂಬಲಿ, ನುಚ್ಚಂಬಲಿ ಊಟ ಮಾಡುತ್ತಾರೆ. ಅವರನ್ನು ನೋಡಿ ಮನಸ್ಸು ಕರಗಿ ಅವರ ಪರವಾಗಿ ಈಶ್ವರನಲ್ಲಿಗೆ ಬಂದು ಹೇಳಿ ಮಳೆಯನ್ನು ಸುರಿಸುತ್ತಾನೆ.

ಕಥೆ : ೪

ಜೋಕುಮಾರನು ಕಾಮದ ಸ್ವಭಾವದವನಿಂಲೇರುವದರಿಂದ ಅವನು ಹುಟ್ಟಿದ ಕೂಡಲೇ ತನ್ನ ತಾಯಿ ಮಾರಿಯನ್ನೇ ಮೋಹಿಸಲು ಹೋದಾಗ ಆಕೆ ಕೋಪಗೊಂಡು ಮಗನ ತಲೆಯನ್ನು ಕಡಿದಳೆಂದು ಜಾನಪದ ಕಥೆಯು ಉಂಟು. ಕೆಲವು ಜಾನಪದ ಗೀತೆಗಳ ಪ್ರಕಾರ :

ಹುಟ್ಟಿದೇಳು ದಿವಸಕೆ ಪಟ್ನಾನ ತಿರುಗ್ಯಾನ |
ದಿಟ್ಯಾದೇವಿ ನಿನಮಗನ | ಕೋಮರಾಯ
ಕೊಟ್ಟಾ ಏಳು ದಿನಗಳನು ||

ದಿಷ್ಟಾ ದೇವಿಯ ಮಗನೆಂದು ಕರೆಯುವರೆಂದು ಉಕ್ತವಾಗುತ್ತದೆ. ಕೆಲವು ಹಾಡುಗಳ ಪ್ರಕಾರ ಚೇಷ್ಟಾದೇವಿಯ ಮಗನೆಂದು ಹೇಳುವ ಜಾನಪದ ಹಾಡುಗಳಿಂದ ಉಕ್ತವಾಗುತ್ತದೆ.

ಹುಟ್ಟಿದೇಳು ದಿನಕೆ ತಿರಿಗ್ಯಾನೇ ನಿನ್ನ ಮಗ |
ಜೇಷ್ಟಾದೇವಿ ನಿನ್ನ ಮಗ ಕೊಮರಾಗೆ |
ಕೊಟ್ಟಾರೆ ಏಳು ದಿನಗಳ |

ಆರೇಳು ದಿನಕೆ ಅಳಿದಾನೆ ರಾಜ್ಯವ |
ಜೇಷ್ಟದೇವಿ ನಿನ್ನ ಮಗ ಕೊಮರಾಗೆ
ಕೊಟ್ಟಾರೆ ಏಳು ದಿನಗಳ ||

ಇಲ್ಲಿ ಜೇಷ್ಠದೇವಿಯೇ ಉತ್ತರ ಕರ್ನಾಟಕದ ’ಶಟವಿ’ ಶೆಟಗೆವ್ವಾ ’ಶೆಟಗಿ ಎಂಬ ಗ್ರಾಮ ದೇವತೆ ಎಂದು ಇರಬಹುದೆಂದೆನಿಸುತ್ತದೆ.

ಜಾನಪದ ಇನ್ನೊಂದು ೫ನೆಯ ಕಥೆಯನ್ನು ಮಕ್ಕಳಿಗೆ ಹೇಳುವ ಪ್ರಕಾರ :

ಒಬ್ಬ ತಾಯಿಯಾದ (ಪಾವತಿ -ಲಕ್ಷ್ಮಿ -ಗೌರಿ) ವಳಿಗೆ ೫ ಜನ ಮಕ್ಕಳು ಇರುತ್ತಾರೆ. ಅವರು ಗಣಪತಿ ಜೋಕುಮಾರ, ಚಂದ್ರಪ್ಪ (ಚಂದ) ಸೂರ‍್ಯ (ರವಿ) ಹಾಗೂ ಕಾಮ (ಕಾಮಣ್ಣ). ಇವರೆಲ್ಲರೂ ಕೂಡಿ ಒಂದು ದಿನ ಒಬ್ಬ ಶ್ರೀಮಂತನ ಮನೆಗೆ ಊಟದ ಆಮಂತ್ರಣಕ್ಕೆ ಹೋಗಿರುತ್ತಾರೆ. ಊಟವನ್ನು ಎಲ್ಲರೂ ಹಾಯಾಗಿ ಹೊಟ್ಟೆ ತುಂಬಾ ಮಾಡುವರು. ಊಟ ಮಾಡುವಾಗ ತಾಯಿಯ ನೆನಪು ಚಂದ್ರಪ್ಪನ (ಚಂದ್ರ) ಹೊರತು ಯಾರಿಗೂ ಆಗುವುದಿಲ್ಲ. ಆದ್ದರಿಂದ ಚಂದ್ರಪ್ಪನು ತಾಯಿಗೆ ಹೇಗೆ ಊಟ ಒಯ್ಯಬೇಕೆಂದು ವಿಚಾರಿಸಿ ತನ್ನ ಕೈಯಲ್ಲಿಯ ಉಗುರುಗಳ ಕಣ್ಣಿನಲ್ಲಿ ಎಲ್ಲ ಪದಾರ್ಥಗಳನ್ನು ಇಟ್ಟುಕೊಂಡು ಬರುವನು.

ಮನೆಗೆ ಬಂದ ನಂತರ ತಾಯಿಯ ಎಲ್ಲರಿಗೂ ’ಏನೇನು ತಂದಿಗೆ ನನಗೆ’ ಎಂದು ಕೇಳಿದಾಗ ಎಲ್ಲರೂ ಸುಮ್ಮನೆ ಕೆಳಗೆ ಮುಖ ಹಾಕಿಕಕೊಂಡು ನಿಂತಾಗ ಚಂದ್ರಪ್ಪನು ತಾಯಿಗೆ ಒಂದು ತಾಟು ತೆಗೆದುಕೊಂಡು ಬರಲು ಹೇಳುವನು. ಆಗ ಅವಳು ತರುವಳು. ತನ್ನ ಉಗುರಿನ ಕಣ್ಣಲ್ಲಿ ಇಟ್ಟಂತಹ ಆಹಾರ ಪದಾರ್ಥವನ್ನು ಕೈ ಜಾಡಿಸಿ ಬಿಡುವನು. ತಾವು ಊಟ ಮಾಡಿದ ಎಲ್ಲ ಮೃಷ್ಟಾನ್ನ ಭೋಜನವು ತಾಟಿನ ತುಂಬ ಬೀಳುವುದು. ತಾಯಿ ಖುಷಿಯಿಂದ ಊಟ ಮಾಡಿ ತನ್ನ ಎಲ್ಲ ಮಕ್ಕಳಿಗೆ ಈ ಪ್ರಕಾರ ಹರಕೆ ಕೊಡುವಳು :

೧. ಚಂದ್ರಪ್ಪನಿಗೆ – ನೀನು ತಂಪತ್ತಿನಲ್ಲಿ ಹೋಗಿ ತಂಪತ್ತಿನಲ್ಲಿ ಬಾ ಎಂದು.

೨. ಸೂರ್ಯನಿಗೆ : ನೀನು ಉರಿದುಕೊಂಡು ಹೋಗಿ ಉರಿದುಕೊಂಡು ಬಾ ಎಂದು.

೩. ಗಣಪತಿಗೆ : ೫ ದಿನ ಹೊಟ್ಟೆ ತುಂಬಾ ಮೋದಕ ತಿಂದು ೫ ದಿನ ಭಾವಿಯಲ್ಲಿ ಅಥವಾ ನೀರಿನಲ್ಲಿ ಬಿದ್ದು ಸಾಯಿ ಎಂದು.

೪. ಕಾಮಣ್ಣನಿಗೆ : ಹುಣ್ಣಿವೆ ದಿನ ಹುಟ್ಟಿ ಮರುದಿನ (ಹೊಲೆಯರ ಕೈಯಿಂದ) ಸುಟಗೊಂಡು ಸಾಯಿ ಎಂದು.

೫. ಹುಟ್ಟಿದ ಏಳು ದಿನಗಳವರೆಗೆ ಬೇಕಾದ ಹಾಗೆ ಮೆರಿ ೭ ದಿನಗಳ ನಂತರ ಅಗಸರ ಕಲ್ಲಿನ ಕೆಳಗೆ ತಲೆ ಒಡೆಸಿಕೊಂಡು ಸಾಯಿ ಎಂದು ಜೋಕುಮಾರನಿಗೆ ಹರಕೆ ಕೊಟ್ಟಳು.

ಈ ರೀತಿ ಮಕ್ಕಳಿಗೆ ಹೇಳುವ ಮೇಲಿನ ಜಾನಪದ ಕಥೆಯ ತಾತ್ಪರ‍್ಯವೇನೆಂದರೆ ೫ ಜನ ಈ ದೇವತೆಯರ ಹುಟ್ಟು ಸಾವಿನ ಸಂಬಂಧವನ್ನು ತಾಯಿಯಿಂದ ಶಾಪಿಸಲ್ಪಟ್ಟ ಪ್ರಸಂಗವನ್ನು (ಅವರವರ ಈಗಿನ ನಂಬುಗೆ ಹಾಗೂ ಸಾಂಪ್ರದಾಯಕ್ಕೆ ಹೊಂದಿಸಿಕೊಂಡು ಹೇಳಿರಬೇಕೆಂದು ಅನಿಸುತ್ತಿದ್ದರೂ ಅದರಲ್ಲಿ ನಿಜವಾದ ಜಾನಪದ ಕಥೆಯ ಮೂಲಸ್ವರೂಪವು ಎದ್ದು ಕಾಣುವುದು) ಎತ್ತಿ ಹೇಳುವವಲ್ಲದೆ ಆಯಾ ಮಕ್ಕಳ ಗುಣ ಸ್ವಭಾವಗಳನ್ನು ಪರಿಚಯಿಸುತ್ತವೆಂದು ಹೇಳಬಹುದು.

ಕಥೆ : ೬

ಜೋಕುಮಾರನು ಮಳೆಯ ದೇವರು. ಜನಪದರಲ್ಲಿ ಇವನು ಗಣಪತಿಯ ಸಹೋದರನು. ತಾಯಿ ಪಾರ್ವತಿ ಗಣಪತಿಯ ಕಥೆಯಂತೆ ಇವನ ಕಥೆಯನ್ನು ಸಹ ಕಲ್ಪಿಸಿದ್ದಾರೆ. ಅಂದರೆ ಪಾರ್ವತಿ ಇವನನ್ನು ಮಣ್ಣಿನ ಗೊಂಬೆ ಮಾಡಿ ಜೀವ ತುಂಬಿ ಸ್ನಾನ ಮಾಡುವಾಗ ಬಾಗಿಲಿಗೆ ಕಾಯಲು ನಿಲ್ಲಿಸುವಳು. ಶಿವನು ಬಂದಾಗ ಅವನು ಹೆದರಿ ಓಡಿ ಹೋಗಿ ಜಳಕದ ಮನೆಯಲ್ಲಿದ್ದ ತಾಯಿಯನ್ನೇ ಹಿಡಿದುಕೊಂಡನು. ಆಗ ಅವಳು ಅವನ ಅಲ್ಪತ್ವಕ್ಕೆ ಸಿಟ್ಟಾಗಿ ಏಳು ದಿನಗಳ ಅಲ್ಪ ಜೀವನವನ್ನು ನೀಡಿದಳು. ಅವಳ ಕೋಪದ ಉಗ್ರತೆಗೆ ಜೋಕುಮಾರನು ಬೀದಿ ಪಾಲಾಗಿ ಓಡಿ ಹೋಗಿ ಕೊನೆಗೆ ಒಬ್ಬ ಅಗಸರ ಭಟ್ಟಿಯಲ್ಲಿ ಆಶ್ರಯ ಪಡೆದನು. ಪಾರ್ವತಿಯು ಶಾಪದ ತೀಕ್ಷಣೆತೆಗೆ ಹೋಲಿಸಿದಂತೆ ಅಗಸನ ಬಟ್ಟೆಯೇ ಅವಿಗೆ ತಂಪು ಅನಿಸಿರಬೇಕು. ಹೀಗೆ ಎದ್ದು ಬಿದ್ದು ಓಡಿದ ಜೋಕುಮಾರನು ಹೊಳೆ ಬಿದ್ದು ಬೆಸ್ತರಿಗೆ ದೊರಕಿದನು. ಅವರು ಇವನನ್ನು ಕರೆದು ಪ್ರೀತಿಸಿ ಸಲುಹಿ ಸಾಕಿದರು. ಅವನನ್ನೇ ಸೇವಕರೆಂದು ಬಗೆದು ಜೋಕುಮಾರನ ಭಕ್ತರಾದರು. ಸಂಬಂಧಿಗಳಾದರು, ಗಂಗಾಮತದವರು.

ಜೋಕುಮಾರನ ಗೀತೆಗಳು

ಕಾಯಿ ಕತ್ತರಿಸಿ ತೂಗತೂಗಿ ನೋಡುತಾವೆ
ಜೋಗ್ಯಾಗಿ ನಿಂತ ಜತನಿಂಗ | ಇನ್ನು
ತರಿಸಯ್ಯ ಹೊನ್ನ ಮಳೆಯ ||

ಯಾಕೊ ಕೊಮರಯ್ಯ ನಿನ್ನ ಬಾಯಿಗೆ ಬೆಣ್ಣಿಲ್ಲ
ಮೇಲೆ ಮಾಣಿಕದ ಹರಳಿಲ್ಲ | ಈ ಊರ
ಓಣ್ಯಾಗೆ ನಿನ್ನ ಸುಳುವಿಲ್ಲ ||

ರಾಯ ರಾಯರೆಲ್ಲ ಚಾವಡ್ಯಗ ಕುತಗೊಂಡು
ರಾಜ ಕೊಮರನ ಕರಸ್ಯಾರ | ಕೇಳ್ಯಾರಲ್ಲಿ
ಆರಿದ್ರಿ ಮಳೆಯ ಬರಲಿಲ್ಲ ||

ಶೆಟ್ಟಿ ಶೆಟ್ಟ್ಯಾರೆಲ್ಲ ಕಟ್ಟಿಮ್ಯಾಲೆ ಕುತಗೊಂಡು
ಪುತ್ರ ಕೊಮರಾನ ಕರಸ್ಯಾರ
ಪುತ್ರ ಕೊಮರನ ಕರೆಸಿ ಕೇಳ್ಯಾರಲ್ಲಿ
ಉತ್ತರಿ ಮಳೆಯ ಬರಲಿಲ್ಲ ||

ಅತ್ತಲ ಮಳಿ ಬಂದಿತ್ತಲ ಕೆರಿತುಂಬಿ
ಗುತ್ತಿ ಮಲೆನಾಡ ಕೊಳಿಕಟ್ಟಿ ಗೌರವ್ವ | ನಿನ್ನ
ಪುತ್ರ ನಂದ ಲ ತಡದ್ದವೆ ||

ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ
ಗುಡ್ಡಗಳೆಲ್ಲಾ ಹಯನಾಗಿ | ಗೌಡರ
ಸಡ್ಡೆಯ ಮೇಲೆ ಸಿರಿ ಬರಲಿ ||

ಒಂದೆತ್ತು ನಿಮಗೆ ಹಿಂಡೆತ್ತು ಆಗಲೋ
ಸೇರಿದ ಭೂಮಿ ಬೆಳೆಯಲ್ಲಿ | ಜೋಕುಮಾರಣ್ಣನ
ನಾರೆರು ಕೊಟ್ಟ ಹರಕೆಯು ||

ಜೋಕುಮಾರ ಸಮೃದ್ಧಿಯ ದೇವ
ಜ್ವಾಳದ ಹೊಲಕೆ ಆರೇಳು ಮುಂಚಿಗೆ ಹಾಕಿ
ಆರೇಳು ಕರೆದರ ಓ ಎನ್ನು | ಗೌರಮ್ಮ
ಮಾಯದಿಂದ ಮರ್ಗ ಹಡದಳೆ ||

ಹುಟ್ಟಿದೇಳು ದಿವಸಕ ಪಟ್ನಾದ ತಿರುಗ್ಯಾನ
ದಿಟ್ನಾದೇವಿ ನಿನಮಗನ | ಕೊಮರಾಮ
ಕೊಟ್ಟಾರ ಏಳು ದಿನಗಳನು |

ರಾಣೇದ ಹಚ್ಚಡ ಹೊತ್ತಾನ ಕೊಮರ
ರಾಯರ ಓಣ್ಯಾಗ ಸುಳಿದಾನ | ನನ ಕೊಮರಾ
ರಾಯರು ಹೆಂಡರು ತನಗೆಂದೆ ||

ಹಾರೋರ ಗೇರ‍್ಯಾಗ ಹೊಕ್ಕಾಗ ನನ ಕೊಮರ |
ಗಾರೂಡಿಗಣ್ಣ ತಿರವುತ | ತನ್ನಯ್ಯ
ತಾಯಂದಿರಿದ್ದರು ಬಿಡಲಿಲ್ಲ ||

ಪುಂಡನ ಪುಂಡಾಟ್ಕ ಹಿಂಡ ಮಂದಿ ಕೂಡ್ಯಾರ
ಕಂಡಲ್ಲಿ ಕಲ್ಲಿಗಿ ಬಡದಾರ | ರಾತ್ರ‍್ಯಾಗ
ಅಗಸರ ಕಲ್ಲಾಗ ತುರಕ್ಯಾರ ||

ಅಷ್ಟನು ದಿನ ಹುಟ್ಯಾನ ನನ ಕೊಮರ |
ಸೆಟ್ಟೇರ ನೋಡಿ ಬೆಸಗೊಂಡ | ಜೋಕುಮಾರ
ಹುಟ್ಟಿದೇಳು ದಿವಸಕ ಮರಣವ ||

ಒಕ್ಕಲಗೇರ‍್ಯಾಗ ಹೊಕ್ಕಾನ ನನ ಕೊಮರ
ಚಕ್ಕರಗಣ್ಣ ತಿರವೂತ | ಜೋಕುಮಾರ
ಒಕ್ಕಲಿಗೇರ ಹೆಣ್ಣ ನನಗೆಂದ ||

ಹರಗೀದ ಹೊಲದಾಗ ಹರಿದು ಚಂಡಾಡ್ಯಾನ |
ಹರಿದೀಯ ಮಗನ ಕೋಮರಯ್ಯ | ಚಂಡಾಡಿದಲ್ಲಿ
ಹವಳ ಮುತ್ತುಗಳು ಬೆಳೆದಾವ ||

ಬಲವಂದು ನಿಮ್ಮ ಬಾಗಿಲಕ ಕುಂತಾನ
ಬಾಗೀನಗಳ ಕೊಡಿರವ್ವ | ಜೋಕುಮಾರ
ಬಾಗಲಕ ಹರಕಿ ಕೊಡತಾನ ||

ಬಸಲಿಕ್ಕೆ ಸೊಪ್ಪೀಗಿ ಹೋದಾಳ ಹನುಮವ್ವ
ಬಸುರಿಲ್ಲವಂತೆ ಅಳುತಾಳೆ | ನನ ಕೊಮರ
ಬಸುರ ಮಾಡಿ ಮನೆಗೆ ಕಳುವ್ಯಾನ ||

ಹಾಲಬೇಡಿ ಹರಿದತ್ತ ಕೋಲಬೇಡಿ ಕುಣಿದತ್ತ
ಮೊಸರ ಬೇಡಿ ಕಸರ ತುಳಿದತ್ತ | ನನಕೊಮರ
ಕುಸಲಾದ ಗೆಜ್ಜೆ ಕೆಸರಾಗ ||

ಯಾಕೆ ಕೊಮರಾ ನಿನ್ನ ಬಾಯಿಗೆ ಬೆಣ್ಣಿಲ್ಲ
ಮೇಲೆ ಮಾಣಿಕದಾ ಹರಳಿಲ್ಲ ಈ ವೂರ |
ಓಣ್ಯಾಗ ನಿನ್ನ ಸುಳುವಿಲ್ಲ ||

ಕರಿಹಣಮ ಹಾನ ಮುರಡೊಂಕಿ | ಹಾರಿದಾ ಲಂಕಿ
ಹಚ್ಚಿ ಅವ ಬೆಂಕಿ ಸುಟ್ಟ ಎಲ್ಲಾ
ಕೆಂಪು ಮೊಡಿಯಂಥ ಜೊಕ್ಮಾರ |
ಮೆರದ ಬಿಟ್ಟಾರ ಕವಿಯ ಹೊಲ್ಯಾಲಾರ |
ಹೊಡೆದ ಅವನ ಪ್ರಾಣಾ ||

ಹುಟ್ಟಿದೋಳು ದಿವಸಾಕೆ ಪಟ್ಟಣವ ತಿರುಗ್ಯಾನೆ
ದೃಷ್ಟಿದೇವಿ ನಿನ ಮಗ ಕೊಮರಾಗೆ |
ಕೊಟ್ಟಾರೆ ಏಳು ದಿನಗಳ ||

ಆರೇಳು ದಿನಕೇನ ಅಳಿದನೆ ರಾಜ್ಯಾವ
ದಿನೇಲ ದೇವಿ ನಿನ ಮಗ ಕೊಮರಾಮ
ತೋರ‍್ಯಾರೆ ಏಳು ದಿನಗಳ ||

ಬಿತ್ತಿದ ಪೈರು ಒಣಗಿ ಹೋಗುತಿವೆ
ಹೆತ್ತವ್ವ ಹಿಟ್ಟು ಕೊಡಲೊಲ್ಲಳು | ಶಿವರಾಯ
ಉತ್ತರೆಯ ಮಳೆ ಕರುಣಿಸು ||

ಕಟ್ಟೀಯ ಹತ್ಯಾನೆ ಹೊತ್ತುಗಳ ನೋಡ್ಯಾನ
ಹತ್ಯಾನೆ ನೀಲಗುದುರೆಯ ನಮ | ಕೊಮರ
ಕೈ ಬೀಸಿ ಮಳೆಯ ಕರೆದಾನೆ ||

ಏರಿಯ ಹತ್ಯಾನ ಯೇಳ್ಯೆವ ನೋಡ್ಯಾನ
ಎರ‍್ಯಾನ ನೀಲಗುದುರೆಯ ನಮ | ಕೊಮರ
ಶಲ್ಯೇವ ಬೀಸಿ ಕರೆದಾನೆ ||

ಅಡ್ಡಡ್ಡ ಮಳಿ ಬಂದು ದೊಡ್ಡ ದೊಡ್ಡ ಕೆರಿ ತುಂಬಿ
ಗೊಡ್ಡುಗಳೆಲ್ಲಾ ಹಯನಾಗಿ | ಗೌಡರ
ಶೆಟ್ಟಿಯ ಮೇಲೆ ಶಿರಿ ಬರಲಿ ||

೯) ಜೋಕುಮಾರನ ಕೆಲವು ಜಾನಪದ  ರೂಢಿ, ಸಂಪ್ರದಾಯ ಹಾಗೂ ನಂಬಿಕೆಗಳು – ಸಂಕೇತಗಳು ಇತ್ಯಾದಿ,

ಬಿತ್ತಿದ ಹೊಲದಲ್ಲಿ ಹೊಕ್ಕು ಚೆಂಡಾಡುತ್ತಾನೆ.
ಜನರು ಕೇಳಿದ್ದನ್ನು ದಯಪಾಲಿಸುತ್ತಾನೆ.
ಸಂತಾನ ಇಲ್ಲದವರಿಗೆ ಸಂತಾನ ಅನುಗ್ರಹಿಸುತ್ತಾನೆ.
ಅನೇಕ ಸ್ತ್ರೀಯರ ಮಾನಭಂಗ ಮಾಡುತ್ತಾನೆ.
ಮಹಾ ಪುಂಡನಿರುತ್ತಾನೆ. ಬರಿಬತ್ತಲೆ ಆಗಿರುವನು.
ಜೋಕುಮಾರನಿಗೆ ಬೆಣ್ಣೆ ಬಲು ಪ್ರೀತಿ ಅಂತೆ.
ಅವನ ಆಯುಷ್ಯ ಏಳು ದಿನ ಮಾತ್ರ.
ಜೋಕುಮಾರನು ಬಹಳ ಕಾಮಿ. ಅವನ ಶಿಶ್ನವು ದೊಡ್ಡದಿರುತ್ತದೆ.
ಗರ್ಭಿಣಿಯರ ಬಯಕೆಯಂದು ಬಳ್ಳೊಳ್ಳಿ ಹೆಚ್ಚಾಗಿ ತಿಂದದ್ದರಿಂದ ಅತೀಕಾಮಿಯಾದನು ಎಂಬ ನಂಬಿಕೆ.
ಹುಟ್ಟಿದ ಏಳು ದಿನಗಳಲ್ಲಿ ರಾಜ್ಯ ಆಳಿದ. ಎಲ್ಲ ಪಟ್ಟಣ ತಿರುಗಿದ.
ಜೋಕುಮಾರನು ಇನ್ನೂ ಜೀವಂತವಾಗಿದ್ದಾನೆ. ಯಾಕೆಂದರೆ
ವರ್ಷದಲ್ಲಿ ಒಂದು ವಾರ ಜನರಿಂದ ಪೂಜಿಸಲ್ಪಡುತ್ತಾನೆ.
ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಅವನ ಆರಾಧನೆ ಇದೆ.
ಗಂಗಾಮತದ ಹೆಂಗಸರಷ್ಟೇ ಜೋಕುಮಾರನ ವಿಗ್ರಹ ಹೊರುವರು.
ಬಾಯಿಯ ಬೆಣ್ಣೆ, ಬೇವಿನ ಎಲೆಯನ್ನು ಕೂಡಿಸಿ ನೋವಾದಲ್ಲಿ ಹಚ್ಚಿದರೆ ಕಡಿಮೆಯಾಗುತ್ತದೆ.
ಬಂಜೆಯರು ಬುಟ್ಟಿ ಎತ್ತಿ ಭವಿಷ್ಯ ಕೇಳುವರು.
ಹೊಲೆಯರು ಒನಕೆಯಿಂದ ಹೊಡೆದು ಕೊಲ್ಲುವರು.
ಅಗಸರ ಕಲ್ಲಿನ ಸಂದಿನಲ್ಲಿ ಹಾಕಿ ಕೊಲ್ಲುವರು
ಹಗೆಯಲ್ಲಿ ಬೇವಿನ ಎಲೆ ಹಾಕಿದರೆ ಜೋಳ ಕೆಡುವುದಿಲ್ಲ.[1] *ನಾರಸಿಂಹನ ಅನುಭವಶಿಖಾಮಣಿಯ ೧೬ನೆಯ ಸಂಧಿಯಲ್ಲಿ ಬರುವ ಕಥೆಯು ಮೇಲಿನಂತಿದೆ. (ಸಂಗ್ರಹಕಾರರು, ಶ್ರೀ ಎಸ್. ಎನ್. ಜೋಶಿಯತವರು, ಜಾತಕತಿಲಕ ಪುಟ ೩೯೮) ಎಂಬುದನ್ನು ಡಾ. ಎಂ. ಚಿದಾನಂದಮೂರ್ತಿಯವರು ತಮ್ಮ ಒಂದು ಪ್ರಬಂಧದಲ್ಲಿ ಮೇಲಿನಂತೆ ಕಥೆಯ ವಿವರಣೆಯನ್ನು ಹೇಳಿದ್ದಾರೆ.