ನಮ್ಮಲ್ಲಿ ಹಬ್ಬಗಳನ್ನು ಕುರಿತಂತೆ ಕೆಲವು ಮಾಹಿತಿ ಲೇಖನಗಳನ್ನು ಬಿಟ್ಟರೆ ತಾತ್ವಿಕ ಹಿನ್ನೆಲೆಯ ಬರಹಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಇದು ಒಟ್ಟು ಕನ್ನಡ ಜಾನಪದ ಶಾಸ್ತ್ರದ ದೌರ್ಬಲ್ಯವೇ ಆಗಿರುವುದರಿಂದ ಅದನ್ನು ವಿಶೇಷವಾಗಿ ಎತ್ತಿ ಹೇಳುವ ಅಗತ್ಯ ಕಾಣಿಸುವುದಿಲ್ಲ. ಜೆ.ಎ. ಕವಲಿ, ಡಿ.ಟಿ. ರಂಗಸ್ವಾಮಿಯವರ ’ಭಾರತೀಯರ ಹಬ್ಬಗಳು’ (ಧಾರವಾಡ ೧೯೭೬) ’ಭಾರತದ ಹಬ್ಬ ಹರಿದಿನಗಳು (ಹೊರಕೆರೆ ದೇವನಪುರ, ೧೯೬೧) ಗ್ರಂಥಗಳು ಕೇವಲ ಮಾಹಿತಿರೂಪದವಾಗಿವೆ. ಮತ್ತು ಆಯಾ ಲೇಖಕರಿಗೆ ನೇರವಾಗಿ ತಿಳಿದಿರುವುದು. ಓದಿ ತಿಳಿದಿರುವುದು ಅಷ್ಟು ಬಿಟ್ಟರೆ ಅವುಗಳಲ್ಲಿ ಒಂದೊಂದು ಹಬ್ಬ ಬಗ್ಗೆಯೂ ಹೆಚ್ಚಿನ ಮಾಹಿತಿ ದೊರಕುವುದಿಲ್ಲ. ಇವುಗಳಿಗಿಂತ ಶ್ರೀ ಬೆಟಗೇರಿ ಕೃಷ್ಣಶರ್ಮರ ’ನಮ್ಮ ಸಂಸ್ಕೃತಿ ಪರಂಪರೆ’ (ಧಾರವಾಡ, ೧೯೬೯) ಹೆಚ್ಚು ವಿವರಗಳಿರುವ ಹೆಚ್ಚು ಅಧಿಕೃತ ಸಾಮಗ್ರಿಯಿರುವ ಕೃತಿ. ಅವರ ಅಪಾರ ಅನುಭವ, ವಿಸ್ತಾರವಾದ ಜ್ಞಾನ ಕೋಶದ ಅರಿವು ಇಲ್ಲಿ ಆಗುತ್ತದೆ; ಮತ್ತು ಅಲ್ಲಲ್ಲಿ ಅವರು ಬೀರುವ ಒಳನೋಟಗಳು ಚೇತೋಹಾರಿಯಾಗಿವೆ. ಮೈಸೂರು ಸರ್ಕಾರವು ೧೯೩೨ರಲ್ಲಿ ನಂಜನಗೂಡು, ಬೇಲೂರು, ಚಾಮರಾಜನಗರ, ಮೇಲ್ಕೋಟೆ, ಶ್ರೀರಂಗಪಟ್ಟಣದ ದೇವಾಲಯಗಳ ಕೈಪಿಡಿಯನ್ನೂ ೧೯೩೪ರಲ್ಲಿ ಕಳಸದ ದೇವಾಲಯದ ಕೈಪಿಡಿಯನ್ನೂ ಶ್ರೀ ಬಿ. ರಾಮಯ್ಯ ಎಂಬುವರಿಂದ ಬರೆಯಿಸಿ ಪ್ರಕಟಿಸಿತು. ಅವು ಹಬ್ಬಗಳ ಬಗ್ಗೆ ಕೆಲಸ ಮಾಡುವವರಿಗೆ ಅಮೂಲ್ಯ ಸಾಮಗ್ರಿ ಗಣಿ.

ಹಬ್ಬಗಳನ್ನು ಕುರಿತಂತೆ ಮಾಹಿತಿ ಸಂಗ್ರಹಿಸಿ ಅವು ಹಳ್ಳಿಯ ಜನರ ಒಂದೇ ಬಗೆಯ ಬದುಕಿಗೆ ಮನರಂಜನೆ ಒದಗಿಸುತ್ತದೆ ಇತ್ಯಾದಿ ಮೇಲ್ನೋಟಕ್ಕೆ ತೋರುವ ಸಂಗತಿಗಳನ್ನು ಹೇಳಿ ತೃಪ್ತಿಪಟ್ಟುಕೊಂಡರೆ ಸಾಲದು. ಹಬ್ಬಗಳನ್ನು ಐತಿಹಾಸಿಕವಾಗಿ, ಸಮಕಾಲೀನವಾಗಿ, ತೌಲನಿಕವಾಗಿ, ಸಮಾಜೋ ಧಾರ್ಮಿಕ ಹಿನ್ನೆಲೆಯಲ್ಲಿ ಅಭ್ಯಸಿಸುವ ಅಗತ್ಯ ಬಹಳ ಇದೆ. ಐತಿಹಾಸಿಕ ಎನ್ನುವ ಮಾತು. ಸ್ವಲ್ಪ ಅಮೂರ್ತವಾದುದು. ಒಂದೇ ಕರ್ನಾಟಕದಲ್ಲಿ ಬಾದುಬ್ಬೆ ಪರ್ವ ಎನ್ಜುವ ಹಬ್ಬವು ಬಹಳ ಕಡೆ ಇದ್ದಿತಾದರೂ ಈ ದಿನ ಅದು ಆ ದೇವತೆಯ ಹೆಸರಿನ ಜೊತೆ ಸಂಪೂರ್ಣವಾಗಿ ನಾಮಾವಶೇಷವಾಗಿದೆ. ಆ ಹಬ್ಬವೇ ಈ ಕಾಲದ ಬಾದಮೀ ಅಮಾವಾಸ್ಯೆ ಎಂಬ ಶ್ರೀ ಬೆಟಗೇರಿಯಿಂದ ಊಹೆ ಗಂಭೀರವಾಗಿ ತೆಗೆದುಕೊಳ್ಳಲು ಅರ್ಹವಾಗಿದ್ದರೂ, ದೇವತೆ ಮತ್ತು ಹಬ್ಬಗಳಿಗೆ ಮನುಷ್ಯರಿಗೆ ಇರುವಂತೆ ಹುಟ್ಟು, ಬೆಳವಣಿಗೆ, ಇಳಿಮುಖ ಸಾವುಗಳೂ ಇರಲು ಸಾಧ್ಯ.

ಇಂಗ್ಲೆಂಡಿನಲ್ಲಿ ಕ್ರಿಶ್ಚಿಯನ್ ಧರ್ಮವು ಪ್ರಸಾರವಾಗುವ ಮುನ್ನ ಇದ್ದ ಹಬ್ಬಗಳನ್ನು ಚರ್ಚ್ ಅಧಿಕಾರಿಗಳು ನಿರುತ್ತೇಜಿಸಿದರೂ ಜನ ಅವುಗಳಿಗೆ ಬೇರೆ ಹೆಸರು ಬಣ್ಣಗಳನ್ನು ಕೊಟ್ಟು ಉಳಿಸಿಕೊಂಡರು. ಇಂದಿನ ಎಷ್ಟೋ ಹಬ್ಬಗಳಲ್ಲಿ ಕ್ರಿಶ್ಚಿಯನ್ ಮತ್ತು ಪೇಗನ್ ಅಂಶಗಳು ಹೆಣೆದುಕೊಂಡಿರುವುದನ್ನು palmer ಮತ್ತು Lloyd ಎಂಬುವರು ತಮ್ಮ ‘A year of Festivals  ಎಂಬ ಪುಸ್ತಕದಲ್ಲಿ (London, 1972) ಆಕರ್ಷಕ ರೀತಿಯಲ್ಲಿ ಎತ್ತಿ ಹಿಡಿದಿದ್ದಾರೆ. ಅವರು ಹೇಳುತ್ತಾರೆ – ನಾಗರಿಕತೆಯನ್ನು ಕೆರೆದು ನೋಡಿದರೆ ಅಲ್ಲಿ ಒಬ್ಬ ಅನಾಗರಿಕ ಕಾಣುತ್ತಾನೆ ಎನ್ನುವಂತೆ (‘It is said that if you scratch civilization you find a savage’)  ಇಂದಿನ ಎಷ್ಟೋ ಶಿಷ್ಟ ನಾಗರಿಕ ಹಬ್ಬದಾಚರಣೆಗಳ ಹಿಂದೆ ಪ್ರಕೃತಿಯನ್ನು ಅಥವಾ ಪ್ರಾಕೃತಿಕ ದೈವಗಳನ್ನು ಬೇರೆ ಬೇರೆ ಋತುಗಳ ರಿಚುಯಲ್ಲುಗಳ ಮೂಲಕ ಒಲಿಸಿಕೊಂಡು ಅವು ಮನುಷ್ಯನ ಇಚ್ಛೆಗೆ ಬಾಗುವಂತೆ ಮಾಡಿದ ಪ್ರಾಚೀನ ಮಾನವರ ಪ್ರಯತ್ನಗಳನ್ನು ಗುರುತಿಸಲು ಸಾಧ್ಯ. ಈ ದಿನ ಬಹುತೇಕ (ಎಲ್ಲ ಕಡೆಗಳಲ್ಲೂ ಹಬ್ಬ ಎಂದರೆ ಅಲಂಕಾರ, ಭೋಜನ, ಮನರಂಜನೆ, ಕೆಲವೊಮ್ಮೆ ಅತಿ ಶೃಂಗಾರ. ಆದರೆ ಬಹುತೇಕ ಎಲ್ಲ ಹಬ್ಬಗಳೂ ಸಾಮೂಹಿಕ ರಿಚುಯಲ್ಲಿನಿಂದ collective ritual  ಉಗಮಗೊಂಡಿವೆ. ಪ್ರಾಕ್ತನ ಮನುಷ್ಯ ಮಾಟವನ್ನು magic  ಬಹುವಾಗಿ ಅವಲಂಬಿಸಿದ್ದ. ಮಾಟದ ಉದ್ದೇಶ. ದೈವಗಳ ಸಂಪ್ರೀತಿ ಮತ್ತು ಅವು ಆಹಾರ, ಆರೋಗ್ಯ, ರಕ್ಷಣೆಗೆ ಸಹಾಯಕವಾಗಬೇಕು. ಮಳೆ ಬೆಳೆಗಳು ಸಕಾಲಕ್ಕೆ ಆಗಬೇಕು. ಮಕ್ಕಳು ಹೆಚ್ಚಬೇಕು; ರೋಗ ರುಜಿನಾದಿಗಳು ಬರಬಾರದು; ಕಾಡು ಪ್ರಾಣಿಗಳಿಂದ ಸಿಡಿಲು ಬಿರುಗಾಳಿಗಳಿಂದ ರಕ್ಷಣೆ ದೊರೆಯಬೇಕು. ಅದಕ್ಕಾಗಿ ನಡೆಸಿದ ಸಾಮೂಹಿಕ ರಿಚುಯಲ್ಲಿನಲ್ಲಿ ಆರಂಭವಾದ ಸಾಮೂಹಿಕ ಭೋಜನಗಳು, ಮಾಟದ ಅಂಗವಾದ ಹಾಡು ಕುಣಿತಗಳು ಇಂದಿನ ಹಬ್ಬಗಳಿಗೆ ಮತ್ತು ಬಹುಶಃ ಕ್ರೀಡೆಗಳಿಗೂ ಮೂಲ ಅತೀತ ಶಕ್ತಿಗಳ ಕೃಪಾಯಾಚನೆಗಾಗಿ ಅಥವಾ ತೃಪ್ತ್ಯರ್ಥವಾಗಿ ನಡೆದ ಮಾಟ ಸಂಬಂಧಿ ರಿಚುಯಲ್ಲುಗಳಿಗೆ ಸಹಜವಾಗಿಯೇ ಬೇರೆ ಉಪಯೋಗಗಳೂ ಅಂಟಿಕೊಳ್ಳುತ್ತವೆ. ರಿಚುಯಲ್ಲುಗಳು ಒಂದು ಗುಂಪನ್ನು ಒಂದು ಗೂಡಿಸುವುದರಲ್ಲಿ ವ್ಯಕ್ತಿ ಒಂದು ಗುಂಪಿನ ಭಾಗವೆಂಬುದನ್ನು ದೃಢಪಡಿಸುತ್ತ ಹೋಗುತ್ತವೆ. ಪ್ರಾಚೀನ ಮಾನವನಿಗೆ ಬೇಟೆಯಂತಹ ಕಾರ‍್ಯಗಳಲ್ಲಿ ಬೇಕಾಗುತ್ತಿದ್ದ ಸಹಭಾಗಿತ್ವದ ಮನೋಧರ್ಮವು ಸಾಮೂಹಿಕ ರಿಚುಯಲ್ಲುಗಳಿಂದ ದೃಢಗೊಳ್ಳುತ್ತ ಹೋಗುತ್ತದೆ. ವ್ಯವಸಾಯಕ್ಕೆ ಸಂಬಂಧಿಸಿದ ಕ್ರಿಯೆಗಳು ಪ್ರಾಚೀನ ಮಾನವರಿಗೆ ಅತಿಮುಖ್ಯವಾಗಿದ್ದುವು. ಬೇಟೆಗೆ ಹೊರಟಾಗ ಅಥವಾ ಉಳುಮೆ ಆರಂಭಿಸಿದಾಗ ದೈವಗಳನ್ನು ಒಲಿಸಲು ಆಚರಣೆಗಳು ನಡೆಯುತ್ತಿದ್ದಂತೆ ಬೇಟೆ ಸಫಲವಾದಾಗ ಅಥವಾ ಸಮೃದ್ಧ ಫಸಲು ಕೈಗೆ ಬಂದಾಗ ಉತ್ಸಾಹ ಕುಣಿತ ಕೇಕೆಗಳ ಮೂಲಕ ದೈವಗಳಿಗೆ ಕೃತಜ್ಞತೆಗಳು ಸಲ್ಲುತ್ತಿದ್ದವು. ಹಬ್ಬ ಎನ್ನುವ ಶಬ್ದ ಸಂಸ್ಕೃತದ ಪರ್ವನ್ ಪದದ ತದ್ಭವ. ’ಪರ್ವ ’ಎಂದರೆ ಒಂದು ಇನ್ನೊಂದರ ಜೊತೆ ಸಂಧಿಸುವುದು ಎಂದರ್ಥ (ಆ ಕಾರಣವೇ ಅದಕ್ಕೆ ಕಬ್ಬಿನ ಗೆಣ್ಣು ಎಂಬರ್ಥವೂ ಇದೆ.) ಚಂದ್ರ ಸೂರ‍್ಯರ ಗತಿಗಳು ಬದಲಾಗುವುದೇ ಪರ್ವ. ನಮ್ಮ ಹಿಂದಿನವರು ಬಹುತೇಕ ಎಲ್ಲ ರಿಚುಯಲ್ಲುಗಳೂ ಫಲೋತ್ಪತ್ತಿ ಸಂಬಂಧಿಯಾಗಿದ್ದು ಅವು ಋತುಗಳ ಗತಿಯನ್ನೂ ಚಂದ್ರ ಸೂರ‍್ಯರ ಚಲನೆಯನ್ನೂ ಅವಲಂಬಿಸಿದ್ದುವು. ಆ ರಿಚುಯಲ್ಲುಗಳೇ ಮುಂದೆ ಹಬ್ಬಗಳಾದುವು. ’ಪರ್ವ’ ಎಂಬ ಮಾತಿಗೆ ಹಬ್ಬ ಎಂಬ ಅರ್ಥವು ಬರಲು ಕಾರಣ ಸ್ಪಷ್ಟವಾಗಿದೆ. ದ್ರಾವಿಡ ಭಾಷೆಗಳಲ್ಲಿ ಕೋಪ್ಪು, ಪಂಟಿಕೈ ಶಬ್ದಗಳಿಗೆ ಹಬ್ಬ ಎಂಬ ಅರ್ಥವಿದ್ದರೂ ಅವುಗಳ ಮೂಲ ಅಜ್ಞಾತವಾಗಿದೆ. (ಮಲಯಾಳಂ, ಕೋಪ್ಪು, ಕೊಡಗು, ಕೋಪು, ತಮಿಳು, ಪಂಟಿಕೈ,ಮಲಯಾಳಂಪಂಟಿಕ ತೆಲುಗು ಪಂಡುಗ) ತಮಿಳಿನ ವೀಳಿ ಶಬ್ದಕ್ಕೆ ಹಬ್ಬ ಎಂಬರ್ಥವಿದ್ದು ಅದು to fall  ಎಂಬರ್ಥದ ವೀಳಿ ಕನ್ನಡ; ಬೀಳಿ) ನಿಂದ ಬಂದಿರಬಹುದು; ನಿರ್ದಿಷ್ಟ ದಿನಗಳಲ್ಲಿ ಹಬ್ಬಗಳು ಬೀಳುವುದನ್ನು ಅದು ಸೂಚಿಸಬಹುದೆಂದು  ಕೆಲವರು ಸೂಚಿಸಿದರೂ ಅದು ಸಂದೇಹಾಸ್ಪದ. ಕನ್ನಡದಲ್ಲಿ ಹಬ್ಬ ಅರ್ಥದಲ್ಲಿ ಯಾವುದೇ ದೇಶ್ಯ ಪದವೂ ಇರುವಂತಿಲ್ಲ. ಪ್ರಾಚೀನ ಕರ್ನಾಟಕದಲ್ಲಿ, ಅದರಲ್ಲೂ ಪಂಪನಲ್ಲಿ ’ಸಣಪು ಶಬ್ದಕ್ಕೆ ಹಬ್ಬ ಅರ್ಥವಿದ್ದಂತೆ ತೋರುತ್ತದೆ. (ಅದರ ಹಿಂದಿನ ರೂಪವಾದ ’ಚೆರ್ಪು’ ದೇವಾಲಯಗಳಲ್ಲಿ ಪ್ರಸಾರವಾಗಿ ಹಂಚುವ ತಿಂಡಿಯನ್ನು ಸೂಚಿಸುತ್ತದೆ) ಸೆಣಪು ಶಬ್ದಕ್ಕೆ ಮೂಲ ದ್ರಾವಿಡ ’ಚಿಳಿ’ (ಸಮೃದ್ಧಿ, ಸುಖ) ಸೆಣಪು ಶಬ್ದ ಹಿಂದಿನ ಕನ್ನಡದಲ್ಲಿ ಹಬ್ಬವನ್ನು ಸೂಚಿಸಿದರೆ, ನಮ್ಮ ಹಬ್ಬಗಳಿಗೆ ಮೂಲ ಸಮೃದ್ಧ ಬೆಳೆ ಅಥವಾ ಸಮೃದ್ಧ ಬೇಟೆ ಕೈಗೆ ಬಂದಾಗ ಮಾಡುತ್ತಿದ್ದ ಪೂಜಾ ನರ್ತನಗಳು ಅಥವಾ ಆ ಸಂದರ್ಭದ ಕ್ರಿಯೆಗಳು. ಈ ಹಿಂದೆ ಹೇಳಿದ ಬಾದುಬ್ಬೆ ದೇವತೆಯು ನಾನು ಊಹಿಸಿರುವಂತೆ ಬನದಬ್ಬೆಯೇ ಆಗಿದ್ದರೆ, ಆ ದೇವತೆಯ ಹಬ್ಬವು ಫಲೋತ್ಪತ್ತಿ ಸಂಬಂಧಿಯಾಗಿದ್ದಿತೆಂದು ತೋರುತ್ತದೆ.

ನಮ್ಮ ಇಂದಿನ ಎಲ್ಲ ಹಬ್ಬಗಳನ್ನೂ ವಿಶ್ಲೇಷಿಸಿ ಒಳಹೊಕ್ಕು ನೋಡಿದರೆ ಅವೆಲ್ಲವೂ ನೇರವಾಗಿ ವ್ಯವಸಾಯಕ್ಕೆ ಸಂಬಂಧಿಸಿದುವಾಗಿವೆ. ಕೆಲವು ಊರುಗಳಲ್ಲಿ ಬಳಲಿಕವು ಅಥವಾ ಮಾಸ್ತ್ಯಮ್ಮನಂತಹ ದೇವತೆಗಳ ಜಾತ್ರೆಗಳ ಬಳಿಕವೋ ಯುಗಾದಿಯ ಮಾರನೆಯ ದಿನವೋ ಹೊಸದಾಗಿ ಉಳುಮೆಯನ್ನು ಆರಂಭಿಸುತ್ತಾರೆ. ಅದನ್ನು ಹೊನ್ನಾರು, ಹೊನ್ನೇರು, ಹೊನ್ನುಕ್ಕೆ ಮೊದಲಾರು, ಮೊದಲುಕ್ಕೆ ಎಂದು ಮುಂತಾಗಿ ಕರೆಯುತ್ತಾರೆ. ಇದು ವಿಧಿವತ್ತಾಗಿ ನಡೆಸಬೇಕಾದ ಪವಿತ್ರ ಕ್ರಿಯೆ. ಕರ್ನಾಟಕದಲ್ಲಿ ಹೊನ್ನಾರನ್ನು ಯಾರು ಹೂಡಬೇಕೆಂಬುದನ್ನು ಯಾವ ಎತ್ತುಗಳ್ನು ಹೂಡಬೇಕೆಂಬುದನ್ನು ನಿರ್ಧರಿಸಿ ಜೋಯಿಸರು ಹೇಳುತ್ತಾರೆ. ಯುಗಾದಿಯ ಮಾರನೆಯ ದಿನ ಆ ರೈತ ತಲೆಯ ಮೇಲೆ ಪೇಟ ಧರಿಸಿ,  ದೇವಾಲಯದಲ್ಲಿ ಪೂಜೆ ಮುಗಿಸಿ, ಉತ್ತರಾಭಿಮುಖವಾಗಿ ನೇಗಿಲು ಹೂಡಿ, ಊರ ಸುತ್ತ ಒಂದು ಬಾರಿ ಉಳುತ್ತಾನೆ, ಅದು ’ಊರುಕ್ಕೆ’ ಅದಾದ ಬಳಿಕ ಬೇರೆ ಬೇರೆ ರೈತರು ತಮ್ಮ ತಮ್ಮ ಹೊಲಗಳಲ್ಲಿ ಉತ್ತರದಿಂದ ಆರಂಭಿಸಿ ಹೊಲದ ಸುತ್ತ ಐದು ಗೆರೆಗಳಷ್ಟು ಉತ್ತು ಬರುತ್ತಾರೆ. ಬಂಗಾಳದಲ್ಲಿ ಇದನ್ನು ಹಲ್ ಚರ್ ಅಥವಾ ಹಲ್ ಪ್ರವಹ್ ಎಂದು ಕರೆಯುತ್ತಾರೆ. ರೈತನು ಈಶಾನ್ಯ ದಿಕ್ಕಿನ ದೇವತೆಗೆ ಬಾಗಿ ನಮಸ್ಕರಿಸಿ, ಉತ್ತರಾಭಿಮುಖವಾಗಿ ಉಳಲು ಆರಂಭಿಸುತ್ತಾನೆ. ಮೂರು ಅಥವಾ ಐದು ಗೆರೆಗಳನ್ನು ವರ್ತುಲಾಕಾರವಾಗಿ ತಡೆಯಿಲ್ಲದೆ ಆ ದಿನ ಉಳುತ್ತಾನೆ. ಭಾರತದ ವಾಯುವ್ಯದಲ್ಲಿ ಹೊನ್ನಾರು ಹೂಡಲು ತರುವ ಪಂಡಿತನನ್ನು ಕೇಳಿ ಭೂಮಿಯ ಕೆಳಗೆ ಇರುವ ನಾಗ (ಶೇಷ) ಯಾವ ದಿಕ್ಕಿಗೆ ಮಲಗಿರುತ್ತದೆ ಎಂಬುದನ್ನು ಕೇಳಿ ತಿಳಿದುಕೊಂಡು ನೇಗಿಲಿನಲ್ಲಿ ಉತ್ತರೆ ಅದಕ್ಕೆ ನೋವಾಗದಿರಬೇಕಾದರೆ ಯಾವ ಕಾಲದಲ್ಲಿ ಯಾವ ದಿಕ್ಕಿನಲ್ಲಿ ಉಳಬೇಕು ಎನ್ನುವುದನ್ನು ತಿಳಿಯುತ್ತಾರೆ. ಉತ್ತರ ಭಾರತದಲ್ಲಿ ಕೆಲವೆಡೆ ರೈತ ಐದು ಹೆಂಟೆ ಮಣ್ಣು ಅಗೆದು ಅದಕ್ಕೆ ನೀರು ಚಿಮುಕಿಸುತ್ತಾನೆ. ಮನೆಗೆ ಬಂದ ಮೇಲೆ ಮುತ್ತೈದೆಯರು ಕೈಯಿಂದ ಮೊಸರು ಬೆಳ್ಳಿ ತೆಗೆದುಕೊಂಡು ಮನೆಯಲ್ಲೇ ಉಳಿಯುತ್ತಾನೆ. ಆ ದಿನ ಅವನು ಜಗಳ ಮಾಡಕೂಡುದು; ಆ ದಿನ ಧಾನ್ಯ ಹಣ ಬೆಂಕಿ ಯಾರಿಗೂ ಕೊಡಕೂಡದು (ಇಂಗ್ಲೆಂಡಿನಲ್ಲಿ ಬಿತ್ತುವ ದಿನ ಬೆಂಕಿ ಕೊಡಕೂಡದು) ಮಾರನೆಯ ದಿನ ಅವನು ಉಪ್ಪು ತ್ಯಜಿಸಿ ಬರಿಯ ಸಿಹಿ ಊಟ ಮಾಡಬೇಕು. ರಾಜಸ್ಥಾನದಲ್ಲಿ ಮಳೆ ಬಂದ ಮೊದಲ ದಿನ ’ಹಲ್ಸೋತಿಯ’ ಹಬ್ಬ; ಆ ದಿನ ಎಲ್ಲರೂ ಆರಿಸಿದ ಒಬ್ಬ ರೈತ ಉತ್ತರಾಭಿಮುಖವಾಗಿ ಐದು ಗೆರೆ ಉಳುತ್ತಾನೆ. ಮಿರ್ಜಾಪುರ ಪ್ರದೇಶದಲ್ಲಿ ಹೊಲದ ಉತ್ತರ ಭಾಗದಲ್ಲಿ ಮಾತ್ರ ಮಾವಿನ ಕೊಂಬೆಯಿಂದ ಅಗೆಯುತ್ತಾರೆ. ಹಲವು ಕಡೆ ಹೋಳಿಹಬ್ಬದ ಮಾರನೆಯ ದಿನ ನೇಗಿಲದಿಂದ ನೆಲವನ್ನು ಕೆರೆದು ಬರುತ್ತಾರೆ. ಹೋಷಂಗಾಬಾದ್ ಪ್ರದೇಶದಲ್ಲಿ ಮೊದಲಾರು ಊರ ಗೌಡನ ಹೊಲದಲ್ಲಿ, ಮುತ್ತುಗದ ಎಲೆಗೆ ಒಂದು ನೋಟು ಚುಚ್ಚಿ ಎಲೆಗಳ ರಾಶಿಯಲ್ಲಿ ಹಾಕಿ, ಎತ್ತುಗಳಿಗೆ ನೊಗ ಹೂಡಿ ನುಗ್ಗಿಸುತ್ತಾನೆ. ಜನ ನುಗ್ಗಿನೋಟನ್ನು ಹುಡುಕುತ್ತಾರೆ. ಬಳಿಕ ತಮ್ಮ ಹೊಲದಲ್ಲಿ ಸ್ವಲ್ಪ ಉತ್ತು ವಾಪಸಾಗುವಾಗ ಗೌಡನ ತಂಗಿ ಅಥವಾ ಮಗಳು ಪೂರ್ಣ ಕುಂಭ ದೀಪಗಳನ್ನು ತೆಗೆದುಕೊಂಡು ಅವರಿಗೆ ಎದುರಾಗುತ್ತಾಳೆ. ಆ ದಿನ ಸಂಜೆ ನಾಲ್ಕು ಮಣ್ಣಿನ ಹೆಂಟೆ ಮೇಲೆ ಸ್ವಲ್ಪನೀರು ಜಿನುಗುವ ಮಣ್ಣಿನ ಹೂಜಿ ತುಂಬ ನೀರು ತುಂಬಿ ಇಡುತ್ತಾರೆ. ಬೆಳಿಗ್ಗೆ ಎಷ್ಟು ಹೆಂಟೆಗಳು ನೆನದಿರುತ್ತವೆಯೋ ಅಷ್ಟು ತಿಂಗಳು ಮಳೆ.

ಸಯಾಮಿನಲ್ಲಿ ಏಪ್ರಿಲ್ ಕೊನೆ ಭಾಗದಲ್ಲಿ ತಾತ್ಕಾಲಿಕವಾಗಿ ಒಬ್ಬ ರಾಜನನ್ನು ಆರಿಸಿ ಅವನಿಗೆ ಮೂರು ದಿನ ಎಲ್ಲ ಸವಲತ್ತುಗಳನ್ನು ಕೊಡುತ್ತಾರೆ. (ಆ ಕಾಲದಲ್ಲಿ ನಿಜವಾದ ರಾಜ ಒಳಗೇ ಇದ್ದು ಬಿಡುತ್ತಾನೆ). ಅವನು ನಗರದ ಮಧ್ಯದ ಹೊಕ್ಕೆ ಹೋಗುತ್ತಾನೆ. ಅಲ್ಲಿ ಚಿನ್ನದ ಲೇಪನದ ನೇಗಿಲು (ಗಮನಿಸಿ : ಹೊನ್ನಾರು?) ಅಲಂಕೃತ ಎತ್ತು ಸಿದ್ಧವಾಗಿರುತ್ತವೆ. ತಾತ್ಕಾಲಿಕ ದೊರೆ ಅದಕ್ಕೆ ಪೂಜೆ ಮಾಡಿ ಒಂಬತ್ತು ಗೆರೆ ಉಳುತ್ತಾನೆ: ಹಿಂದುಗಡೆ ಅರಮನೆಯ ವೃದ್ಧ ಸುಂದರಿಯರು ಆ ಕಾಲದ ಮೊದಲ ಬೀಜಗಳನ್ನು ಬಿತ್ತುತ್ತಾರೆ.  ಪ್ರೇಕ್ಷಕರು ನುಗ್ಗಿ ಆ ಬೀಜಗಳನ್ನು ಆರಿಸಿ ತರುತ್ತಾರೆ. ಅವನ್ನು ತಮ್ಮ ಬಿತ್ತನೆ ಬೀಜದ ಜೊತೆ ಬೆರಸಿದರೆ ಒಳ್ಳೆಯ ಬೆಳೆ ಸಿಗುತ್ತದೆಂಬ ನಂಬಿಕೆ. ಎತ್ತುಗಳ ಮುಂದೆ ಅನ್ನ, ಜೋಳ, ಕಬ್ಬು, ಸಾಸಿವೆ, ಕಲ್ಲಂಗಡಿ, ಬಾಳೆ ಇತ್ಯಾದಿ ಇಡುತ್ತಾರೆ. ಅವು ಮೊದಲು ಏನನ್ನು ತಿನ್ನುತ್ತವೆಯೋ ಅವು ಮುಂದಿನ ವರ್ಷ ವಿರಳವಾಗುತ್ತವೆಯೆಂದೂ ಸಮೃದ್ಧವಾಗಿ ಬೆಳೆಯುತ್ತವೆಯೆಂದೂ ಬೇರೆ ಬೇರೆ ರೀತಿ ವ್ಯಾಖ್ಯಾನಿಸಲಾಗುತ್ತದೆ. ತಾತ್ಕಾಲಿಕ ರಾಜ ಆ ಮೂರು ದಿನ ವ್ಯವಸಾಯದ ಮಂತ್ರಿಯಿದ್ದಂತೆ; ಅವನು ಹಲವಾರು ಜಮೀನು ವ್ಯಾಜ್ಯಗಳನ್ನು ಬಿಡಿಸುತ್ತಾನೆ.

ಕರ್ನಾಟಕದಲ್ಲಿ ಯುಗಾದಿ ಹಬ್ಬದ ದಿನ ಕಾಣಿಸುವ ಹೊಸ ಚಂದ್ರ ಯಾವ ಕಡೆ ಬಾಗಿದ್ದಾನೆ ಎಂಬುದರ ಮೇಲೆ ಬೆಳೆಯ ಬೆಲೆಗಳ ಏರಿಳಿತ ನಿರ್ಣವಯವಾಗುತ್ತದೆ. ಕಾರ ಹಬ್ಬದ ದಿನ ಮಡಕೆಯೊಳಗೆ ನೀರು ತುಂಬಿ ಬೇರೆ ಬೇರೆ ಧಾನ್ಯಗಳನ್ನು ಹಾಕಿ ಮಡಕೆಯನ್ನು ನೇಗಿಲಿನಿಂದ ಒಡೆದಾಗ ನೀರು ಹರಿದು ಯಾವ ಧಾನ್ಯ ಮುಂದೆ ಹೋಗುತ್ತದೆ ಎಂಬುದರ ಮೇಲೆ ಯಾರ ಬೆಳೆ ಸಮೃದ್ಧಿ ಎಂಬುದನ್ನು ನಿರ್ಣಯಿಸುತ್ತಾರೆ.

ನಮ್ಮ ಹಬ್ಬಗಳಲ್ಲೆಲ್ಲ ವ್ಯವಸಾಯಕ್ಕೆ ನೇರವಾಗಿ ಸಂಬಂಧಿಸಿದ್ದು ಬಹಳ ಸ್ವಾರಸ್ಯವಾಗಿರುವುದೇ ಕಾರಹಬ್ಬ. ಬಳ್ಳಿಗಳ ಹಗ್ಗದ ಮೇಲೆ ಬಣ್ಣ ಬಳಿದ ದನಗಳನ್ನು ನುಗ್ಗಿಸಿ, ಹರಿಯುವಂತೆ ಮಾಡಿ, ಬಳಿಕ ಜನ ಆ ಬಳ್ಳಿಯನ್ನು ಕಿತ್ತು ತೆಗೆದುಕೊಂಡು ಹೋಗಿ ಬಿತ್ತುವ ದಿವಸದವರೆಗೆ ಬಳ್ಳಿಯನ್ನು ಮನೆಯಲ್ಲಿ ಸಂರಕ್ಷಿಸಿ ಇಡುತ್ತಾರೆ. (ಕೆಲವೆಡೆ ಹಿಂದೆ ದನಗಳ ಚರ್ಮವನ್ನು ಬಳ್ಳಿಯ ಬದಲು ಕಟ್ಟುತ್ತಿದ್ದರಂತೆ). ತಮ್ಮ ಊರಿನ ’ಕರೆ’ ಬೇರೆ ಊರಿಗೆ ಹೋದೀತೆಂದು ಕರೆ ಹರಿಯುವಾಗ ಬೇರೆ ಊರಿನವರು ಅವನ್ನು ಕೊಂಡೊಯ್ಯದಂತೆ ಕಾವಲಿದ್ದು ಎಚ್ಚರ ವಹಿಸುತ್ತಾರೆ. ಆ ಊರಿನ ಕರೆ ಬಳ್ಳಿಯನ್ನು ಇನ್ನೊಂದು ಊರಿನವರು ಕೊಂಡೊಯ್ದರೆ ಕರೆ ಹರಿಯುವ ಹಕ್ಕನ್ನು ಆ ಊರು ಕಳೆದುಕೊಳ್ಳುತ್ತದೆ. ಕಾರಹಬ್ಬದ ಸಾಂಕೇತಿಕತೆಯಲ್ಲಿ ಪ್ರಾಕ್ತನ ಮಾನವನ ಫಲೋತ್ಪತ್ತಿ ಪಂಥವನ್ನು ಗುರುತಿಸಬಹುದಾದರೂ, ಒಟ್ಟು ಆ ಇಡೀ ಹಬ್ಬದ ಸಾಂಕೇತಿಕತೆಯನ್ನು ಸರಿಯಾದ ತಾತ್ವಿಕ ಚೌಕಟ್ಟಿನಲ್ಲಿ ವಿಮರ್ಶಿಸುವ ಅಗತ್ಯವಿದೆ. ಉತ್ತರ ಮತ್ತು ಮಧ್ಯ ಕರ್ನಾಟಕದ ಎಲ್ಲೆಡೆಗಳಿಂದ ಈ ಹಬ್ಬದ ಎಲ್ಲ ವಿವರಗಳನ್ನು ಸಂಗ್ರಹಿಸುವುದಲ್ಲದೆ ಭಾರತದಲ್ಲಿ ಇತರೆಡೆ ಇರುವ ಇಂತಹ ಹಬ್ಬದ ವಿವರಗಳನ್ನು ಸಂಗ್ರಹಿಸಬೇಕು. ಬೀರೂರಿನ’ಪೋಲ’; ಹಬ್ಬದಲ್ಲಿ ಹುಲ್ಲನ್ನು ಸುತ್ತಿ ಮಾವಿನೆಲೆ ಸಿಗಿಸಿದ ಹಗ್ಗದ ಕೆಳಗೆ ದನಗಳು ನುಸಿದು ಮೆರವಣಿಗೆ ಹೋಗುತ್ತವೆ. ಈ ಹಗ್ಗಕ್ಕೆ ದನಗಳನ್ನು ರಕ್ಷಿಸುವ ಮಾಂತ್ರಿಕಶಕ್ತಿ ಉಂಟು ಎಂಬ ನಂಬಿಕೆ ಇದೆ. ಮಿರ್ಜಾಪುರ ಪ್ರದೇಶದಲ್ಲಿ ಊರ ಬಾಗಿಲಿಗೆ ಅಡ್ಡಲಾಗಿ ಎರಡು ಗೂಟ, ಮೇಲೊಂದು ತೊಲೆ ನಿಲ್ಲಿಸಿ, ದನಗಳನ್ನು ಕೆಳಗೆ ನುಗ್ಗಿಸುತ್ತಾರೆ. ಕಾರ ಹಬ್ಬದ ಪ್ರಾದೇಶಿಕ ವೈಲಕ್ಷಣ್ಯಗಳನ್ನು ಸಂಗ್ರಹಿಸುವ ಅಗತ್ಯ ಇದೆ.

ದೀಪಾವಳಿಯ ನರಕ ಚತುರ್ದಶಿ, ಬಲಿಪಾಡ್ಯಮಿಗಳು ನಿಶ್ಚಿತವಾಗಿ ಉತ್ತರ ಭಾರತದಿಂದ ಆಮದಾದ ಹಬ್ಬಗಳು. ಆದರೆ ದೀಪಾವಳಿಯ ಇನ್ನೊಂದು ಹೆಸರೇ ಆಗಿದ್ದರೂ ಮೂಲತಃ ಬೇರೆಯೇ ಆಗಿದ್ದ ’ಹಟ್ಟಿ ಹಬ್ಬ’ ನಿಶ್ಚಿತವಾಗಿ ಪ್ರಾದೇಶಿಕ ಆಚರಣೆ ಮತ್ತು ಅದು ನೇರವಾಗಿ ವ್ಯವಸಾಯ, ಪಶುಪಾಲನೆಗಳಿಗೆ ಸಂಬಂಧಿಸಿದ ಹಬ್ಬವೆನ್ನುವಲ್ಲಿ ಅನುಮಾನವಿಲ್ಲ. ಆ ದಿನ ದನಗಳ ಹಕ್ಕೆಯನ್ನು ಗುಡಿಸಿ, ಒಣಗಿಸಿ ಅಲ್ಲೆಲ್ಲ ಬಗೆ ಬಗೆಯ ಹೂಗಳನ್ನು ಹರಡುವುದಾಗಲಿ ಬಾಗಿಲಲ್ಲಿ ಸೆಗಣಿಗುಪ್ಪಗಳಿಗೆ ಬಗೆಬಗೆಯ ತೆನೆ, ಹೂಗಳನ್ನು ಸಿಕ್ಕಿಸಿ ಪೂಜಿಸುವುದಾಗಲಿ ಪೂರ್ತಿ ಪಶುಗಳಿಗೆ ಸಂಬಂಧಿಸಿದ ಹಬ್ಬವೆಂಬುದನ್ನು ಹೇಳುತ್ತದೆ. ದನಗಳ ರಕ್ಷಣೆ, ಸಂವರ್ಧನೆಗೆ ಹುಟ್ಟಿಕೊಂಡ ಆರಾಧನೆ ಇದು. ಇಂಗ್ಲೆಂಡಿನಲ್ಲಿ ನಡೆದಂತೆ ಇಲ್ಲಿಯೂ ಆರ‍್ಯ ಸಂಸ್ಕೃತಿಯ ಹಬ್ಬವೊಂದಕ್ಕೆ ಪ್ರಾದೇಶಿಕ ಸಂಸ್ಕೃತಿಯ ಹಬ್ಬ ಜಂಟಿಯಾಗಿ ಹೆಣೆದುಕೊಂಡು ತಾನು ಉಳಿದುಕೊಂಡಿತು.

ಸಂಕ್ರಾಂತಿ ಅಥವಾ ಪೊಂಗಲ್ ಕೂಡ ವ್ಯವಸಾಯದ ಹಬ್ಬವೇ. ಸೂರ‍್ಯ ದಕ್ಷಿಣದ ತುತ್ತ ತುದಿಗೆ ಹೋಗಿ ಉತ್ತರಕ್ಕೆ ತಿರುಗುವ ಸಂದರ್ಭದ ಈ ಹಬ್ಬದಲ್ಲಿ ಹೊಸ ಅಕ್ಕಿ ಕುದಿಯುತ್ತಿದ್ದಂತೆ ಜನ ’ಪೊಂಗಲ್ ಪೊಂಗಲ್’ ಎಂದು ಕೂಗುತ್ತಾರೆ.  ದನಗಳಿಗೆ ಅಲಂಕಾರ ಮಾಡಿ ಕಿಚ್ಚು ಹಾಯಿಸುತ್ತಾರೆ. ಆ ದಿನ ದಕ್ಷಿಣ ಕರ್ನಾಟಕದ ಕೆಲವು ಊರುಗಳಲ್ಲಿ ಕಾಡಿನಿಂದ ಹಿಡಿದು ತಂದ ನರಿ ಅಥವಾ ಮೊಲವನ್ನು ಮೆರವಣಿಗೆ ಮಾಡಿ, ಜನರ ಮುಂದೆ ಆಡಿಸಿ ಬಳಿಕ ಬಿಟ್ಟು ಬಿಡುತ್ತಾರೆ. ಇದು ಹೊಸ ಬೆಳೆಯು ಕೈಗೆ ಬಂದ ಮೇಲೆ, ಬೇಟೆ ಆಡುವ ಜನ ಕಾಡಿನ ದೈವದ ಪ್ರೀತ್ಯರ್ಥವಾಗಿ ಕೊಡುತ್ತಿದ್ದ ಬಲಿ ಇರಬೇಕು; ಬಲಿ ಕೊಡುವುದನ್ನು ತಪ್ಪಿಸಿ ಜೀವಂತ ಪ್ರಾಣಿಯನ್ನೇ ದೈವಕ್ಕೆ ಬಿಡುವ ಪರಿಪಾಠ ಬಂದಿರಬೇಕು. ಅಥವಾ ಬೇಟೆಯ ಪ್ರಾಣಿಗಳಲ್ಲಿ ಜೀವಂತವಾದುದನ್ನೇ ಬಿಡುವ ಪದ್ಧತಿಯೂ ಇದ್ದಿರಬಹುದು. ಅಬ್ಬೆ ದುಬಾಯಿ ಈ ಪದ್ದತಿಯನ್ನು ತನ್ನ Hindu Manners, Customs and Ceremonies ಪುಸ್ತಕದಲ್ಲಿ ಹೇಳಿದ್ದಾನೆ; ಇದನ್ನು ಬಿ.ರಾಮಯ್ಯನವರು ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಮ್ಯೂನ್ಯುಯಲ್ ಯಾ ಕೈಪಿಡಿ (ಬೆಂಗಳೂರು, ೧೯೩೨) ಪುಸ್ತಕದಲ್ಲಿ ಉಲ್ಲೇಖಿಸಿರುವುದಲ್ಲದೆ, ಈಗಲೂ ಜೀವಂತವಿರುವ ಈ ಪದ್ಧತಿಯ ಬಗ್ಗೆ ಲೇಖನಗಳೂ ಬಂದಿವೆ. ಇಂಚರ ಫೆಬ್ರವರಿ, ೧೯೮೨; ಅಧ್ಯಯನ ಪು. ೪೧೯) ವ್ಯವಸಾಯ ಮತ್ತು ಬೇಟೆಯ ಆಚರಣೆಗಳು ಹೊಂದಿಕೊಂಡಿರುವುದು ತೀರ ಸ್ಪಷ್ಟವಾಗಿದೆ.

ಸೀಗೆ ಹುಣ್ಣಿಮೆ (ಭೂಮಿ ಹುಣ್ಣಿಮೆ) ದಿನ ಹಿಂಗಾರಿ ಬೆಳೆಗೆ ’ಚರಗ’ ಚೆಲ್ಲುತ್ತಾರೆ. ಭೂದೇವಿಯ ಶಾಂತ್ಯರ್ಥವಾಗಿ ಕುಂಕುಮದ ಅನ್ನ ಇರುವ ಅಥವಾ ಅನ್ನ ಮಾಂಸ ಇರುವ ’ಚರಗ’ ಚೆಲ್ಲುವುದರ ಹಿಂದೆ ಪ್ರಾಕ್ತನ ಮಾನವನ ಬಲಿಯನ್ನು ಸುಲಭವಾಗಿ ಗುರುತಿಸಬಹುದು. ಕೊಂಡ ಹುಯುವುದು, ಸಿಡಿ, ಬಾಯಿಬೀಗ ಇವು ದೈವಗಳಿಗೆ ವ್ಯಕ್ತಿ ಸ್ವಹಿಂಸೆಯ ಮೂಲಕ ತನ್ನನ್ನು ಒಪ್ಪಿಸಿಕೊಳ್ಳುವ, ಅದರ ಕೋಪದ ಉಪಶಮನದ ಸಾಧನೆಗಳು. (ಸಿಡಿಯನ್ನು ಹೋಲುವ ಪದ್ಧತಿ ಉತ್ತರ ಅಮೆರಿಕದಲ್ಲಿದ್ದಿತು)

ಬಸವನ ಹಬ್ಬವು ಶುದ್ಧಾಂಗವಾಗಿ ರೈತರ ಹಬ್ಬವಾಗಿದ್ದು ಅದು ಲಿಂಗಾಯುತರಲ್ಲಿ ಸುಲಭವಾಗಿ ಬಸವ ಜಯಂತಿಯಾಯಿತು. ಆ ದಿನ ನಡೆಯುವ ಎತ್ತುಗಳ ಮೆರವಣಿಗೆ ವ್ಯವಸಾಯಕ್ಕೆ ಸಂಬಂಧಿಸಿದ್ದು; ಉಪನ್ಯಾಸಗಳು ಇತ್ಯಾದಿ ಸಮಾಜ ಸುಧಾರಕ ಬಸವನಿಗೆ ಸಂಬಂಧಿಸಿದ್ದು. ಹಳೆಯ ಹಬ್ಬ ಆಧುನೀಕರಣಗೊಳ್ಳುವುದಕ್ಕೆ ಇದೂ ಒಂದು ಒಳ್ಳೆಯ ನಿದರ್ಶನ.

ನಾಗರಪಂಚಮಿಯ ದಿನ ಹಳ್ಳಿಗಳಲ್ಲಿ ಮರಗಳಿಗೆ ಉಯ್ಯಾಲೆ ಕಟ್ಟಿ ಆಡುತ್ತಾರೆ. ಇದು ಈಗ ಮನರಂಜನೆಯಾದರೂ, ಹಿಂದೆ ಅದು ಬೆಳಗೆ ಸಂಬಂಧಿಸಿದ ಒಂದು ರಿಚುಯಲ್ ಆಗಿದ್ದಿರಬಹುದು. ರಷಿಯನ್ಸ್ ಲೆಟ್ಸ್ ಜನ ಬೆಳೆಗಳ ಮೇಲೆ ಪ್ರಭಾವ ಬೀರಲು ಉಯ್ಯಾಲೆ ಆಡುತ್ತಾರೆ. ಸಯಾಮಿನಲ್ಲಿ ಪುರೋಹಿತರು ಉಯ್ಯಾಲೆಯಾಡುತ್ತ ಮೇಲೆ ಹೋದಷ್ಟು ಇನ್ನೂ ಎತ್ತರವಾಗಿ  ಬೆಳಗಳಾಗುತ್ತವೆಯೆನ್ನುವ ನಂಬಿಕೆ ಇದೆ. ಇದು homoeopathic  ಅಥವಾ  Imitative  ಮಾಟದ ತಂತ್ರಾನು ಸರಣಿಯೆಂದು  ವ್ಯಾಖ್ಯಾನಿಸುತ್ತಾರೆ.

ಹಬ್ಬಗಳನ್ನು ಸಮಕಾಲೀನವಾಗಿ ನೋಡಿದರೆ ಅವುಗಳಿಗೆ ಸಾಮಾಜಿಕ, ಮತೀಯ ಶೈಕ್ಷಣಿಕ ಆಯಾಮಗಳಿರುವುದು ಕಂಡು ಬರುತ್ತದೆ. ಹಬ್ಬಗಳು ಒಂದು ಜಾತಿಯ ಅಥವಾ ಮತದ ಭಾವನೆಗಳನ್ನು ಗಟ್ಟಿಗೊಳಿಸಿ ಅವು ಒಂದು ಚೌಕಟ್ಟಿನಲ್ಲಿ ಆ ಗುಂಪಿನ ಜನರನ್ನು ಬೆಸೆಯುತ್ತವೆ. ಯುಗಾದಿಯ ದಿನ ಉತ್ತರ ಭಾರತದ ಒಬ್ಬ ವ್ಯಕ್ತಿ ಚಂದ್ರನ ದರ್ಶನ ಮಾಡಿ ಅದೇ ರೀತಿ ನಡೆದುಕೊಂಡ ದಕ್ಷಿಣದ ಇನ್ನೊಬ್ಬ ವ್ಯಕ್ತಿ ಜೊತೆ ತನ್ನ ಹಿಂದುತ್ವವನ್ನು ಅನುಭವಿಸುತ್ತಾನೆ. ರಮಜಾನ್ ತಿಂಗಳಲ್ಲಿ ಉಪವಾಸ ಮಾಡಿದ ಇಂಡೋನೇಷಿಯದ ಮುಸ್ಲಿಂ ಈಜಿಪ್ಟಿನ ಮುಸ್ಲಿಮನೊಡನೆ, ಕ್ರಿಸ್ ಮಸ್ ದಿನಗಳಲ್ಲಿ ಭಾರತದ ಕ್ರಿಶ್ಚಿಯನ್ ಇಂಗ್ಲಿಂಡಿನ ಕ್ರಿಶ್ಚಿಯನ್ನನ್ನೊಡನೆ ಒಂದಾಗುತ್ತಾನೆ (ಒಂದೇ ಊರಿನ ಜನರು ಹಬ್ಬದ ದಿನ  ಒಂದೇ ಬಗೆಯ ನಡಾವಳಿಗಳ ಮೂಲಕ (ಊಟ, ಪೂಜೆ, ಉತ್ಸವಗಳಲ್ಲಿ ಭಾಗವಹಿಸುವಿಕೆ ಇತ್ಯಾದಿಗಳು) ತಾವು ಒಂದು ಎಂಬುದನ್ನು ಗುರುತಿಸಿಕೊಳ್ಳುತ್ತಾರೆ. ಇದರಿಂದ ವ್ಯಕ್ತಿಯ ಸಾಮಾಜಿಕ ಸಂಬಂಧಗಳು (socialties) ಸಂಸಾರದ ಆಚೆಗೂ ವಿಸ್ತರಿಸುತ್ತವೆ. ಹಬ್ಬಗಳು ವ್ಯಕ್ತಿಯನ್ನು ಸಾಂಸ್ಕೃತಿಕ ಪ್ರಾಚೀನಕ್ಕೆ ಸಂಲಗ್ನಗೊಳಿಸುವ ಮೂಲಕ ಅವರು ಸಾಂಸ್ಕೃತಿಕ ನಿರಂತರತೆಯನ್ನು ಅನುಭವಿಸುವಂತೆ ಮಾಡುತ್ತವೆ. ಅಂದಿನ ದಿನ ಉಳಿದ ದಿನಗಳಿಗಿಂತ ಅವನ ಧಾರ್ಮಿಕ ಭಾವನೆಗಳು ತೀವ್ರವಾಗಿ ವ್ಯಕ್ತಗೊಂಡು ಮನಸ್ಸು ಹೆಚ್ಚು ಉದಾರವಾಗುತ್ತದೆ. ಉಲ್ಲಸಿತವಾಗುತ್ತದೆ. ಗ್ರಾಮದೇವತೆಯ ಹಬ್ಬಗಳಲ್ಲಿ ಊರಿನ ಎಲ್ಲ ಜಾತಿಯ ಜನರಿಗೂ ನಿರ್ದಿಷ್ಟ ಕರ್ತವ್ಯಗಳಿದ್ದು ಅವರು ಒಂದಾಗಿ ಕೆಲಸ ಮಾಡಲು ಅವಕಾಶವಿರುತ್ತದೆ. ಸಾಮಾಜಿಕ  ವ್ಯವಸ್ಥೆ (social order) ಸುರಕ್ಷಗೊಳ್ಳಲು ಅವು ಸಹಾಯಕ ಯುಗಾದಿಯ ದಿನ ಎಲ್ಲರೂ ಚಂದ್ರನ ದರ್ಶನ ಮಾಡಿದ ಮೇಲೆ ಕಿರಿಯರು ಹಿರಿಯರಿಗೆ ನಮಸ್ಕರಿಸಿ ’ಚಂದ್ರನನ್ನು ನೋಡಿದಿರಾ’ ಎಂದು ಕೇಳುವಲ್ಲಿ, ದಸರಾ ದಿನ ದೇವರು ’ಬನ್ನಿ ಮುಡಿದ’ ಮೇಲೆ, ಎಲ್ಲರಿಗೂ ಬನ್ನಿ ಹಂಚಿ ’ನಾವೂ ನೀವೂ ಬಂಗಾರದ ಹಾಗೆ ಇರೋಣ’ ಎಂದು ಹೇಳುವಲ್ಲಿ, ಸಂಕ್ರಾಂತಿ ದಿನ ಎಳ್ಳು ಹಂಚಿ ’ನಾವೂ ನೀವು ಎಳ್ಳು ಬೆಲ್ಲದೆ ಹಾಗೆ ಸಿಹಿಯಾಗಿ ಇರೋಣ; ಎಂದು ಹಾರೈಸುವಲ್ಲಿ ಹಬ್ಬಗಳು ಸಾಮಾಜಿಕ ಸಂಬಂಧಗಳನ್ನು ಸ್ಥಿರಗೊಳಿಸುವಲ್ಲಿ ವಹಿಸುವ ಪಾತ್ರ ಸ್ಪಷ್ಟವೇ ಇದೆ. ಊರಿನ ಎಲ್ಲ ಜನ ಮಾಡುವ ದೊಡ್ಡ ಹಬ್ಬಗಳಂದು ಮಾಂಸಾಹಾರಿಗಳು ಸಸ್ಯಹಾರವನ್ನು ಮಾತ್ರ ತೆಗೆದುಕೊಂಡು ಇತರ ಜನರ ಜೊತೆ ಒಂದಾಗುತ್ತಾರೆ. ಅವರಿಗಾಗಿ ಮಾರನೆಯ ದಿನ ’ವರ್ಷದ ತೊಡಕಿ’ನ ದಿನ ಮಾಂಸಾಹಾರದ ಬಳಕೆಗೆ ಸಮಾಜದ ಒಪ್ಪಿಗೆ ಇದ್ದೇ ಇದೆ. ಹಿಂದೂ ಮುಸ್ಲಿಂ ಹಬ್ಬಗಳಲ್ಲಿ ಪರಸ್ಪರರು ಬೆರೆಯುವುದು, ಭಾಗಿಗಳಾಗುವುದು ಇತ್ತೀಚಿನವರೆಗೆ ಸಾಮಾನ್ಯ ಸಂಗತಿಯಾಗಿತ್ತು.

ವಿಶ್ವಾದ್ಯಂತ ವರ್ಷದ ಆರಂಭದ ಹಬ್ಬಗಳಲ್ಲಿ ಕಾಮದ ಸ್ವೇಚ್ಛಾಚಾರ ಪ್ರದರ್ಶನಗಳಿಗೆ ಅವಕಾಶಗಳಿವೆ. ಹಳೆಯದು ಮುಗಿದು ಹೊಸಕಾಲ ಆರಂಭವಾದುದರ, ಪ್ರಳಯ ಹೋಗಿ ಸೃಷ್ಟಿ ಆರಂಭವಾದುದರ ಸಂಭ್ರಮದ ಪರಿಣಾಮ ಎಂದು ಕೆಲವರು ವ್ಯಾಖ್ಯಾನಿಸಿರುವುದೂ ಉಂಟು. ಸ್ವೇಚ್ಛಾಚಾರಗಳು ಮೂಲತಃ ಮಾಟದ ಉದ್ದೇಶದಿಂದ ಆರಂಭವಾಗಿರಬಹುದು. ಕೆಲವೆಡೆ ಅತಿಯಾದ ಸಂಭೋಗವು ಫಸಲು ಬೆಳೆಯಲು ಸಹಾಯಕವೆಂಬ ನಂಬಿಕೆಗಳಿವೆ. ಜಾವಾದಲ್ಲಿ ಬತ್ತದ ಕಡ್ಡಿಯಲ್ಲಿ ತೆನೆಗೊಡುವ ಕಾಲ ಸಮೀಪಿಸಿದಾಗ ಗಂಡ ಹೆಂಡತಿಯರು ಗದ್ದೆಯಲ್ಲಿ ರತಿಕ್ರೀಡೆಗೆ ತೊಡಗುತ್ತಾರೆ. ಮಧ್ಯ ಅಮೆರಿಕದ ಪೈಪೈಲ್ ಜನ ಕೆಲವು ದಿನ ಬೇಕೆಂದೇ ಹೆಂಡತಿಯರಿಂದ ದೂರವಿದ್ದು, ಹೊಲಗಳಲ್ಲಿ ಬೀಜ ಬಿತ್ತುವ ಮೊದಲು ಉತ್ಸಾಹದಿಂದ ರತಿಕ್ರೀಡೆಗೆ ತೊಡಗುತ್ತಾರೆ. ವಿಶ್ವದ ಇನ್ನು ಕೆಲವು ಭಾಗಗಳಲ್ಲಿ ಚೆನ್ನಾಗಿ ಹಣ್ಣು ಬಿಡದ ಮರಗಳ ಹತ್ತಿರ ಗಂಡಸರು ಬೆತ್ತಲೆ ಹೋಗಿ ಹೆಂಗಸರ ಜೊತೆ ರತಿಕ್ರೀಡೆ ನಡೆಸಿದಂತೆ ಮರಗಳ ಜೊತೆಯೂ ರತಿಕ್ರೀಡೆ ನಡೆಸಿದರೆ ಅವು ಚೆನ್ನಾಗಿ ಹಣ್ಣು ಬಿಡುತ್ತವೆಯೆಂದು ನಂಬುತ್ತಾರೆ. ಉಕ್ರೇನಿನಲ್ಲಿ ಬಿತ್ತನೆ ಮಾಡಿದ ಹೊಲದಲ್ಲಿ ಯುವ ದಂಪತಿಗಳು ಹೊರಳಾಡುತ್ತಾರೆ. ಭಾದ್ರಪದ ಮಾಸದಲ್ಲಿ ಹೊಲಗಳಲ್ಲಿ ತೆನೆಯ ಮೇಲೆ ಕುಳಿತ ಮಂಜಿನ ನೊರೆಯು ಜೋಕುಮಾರನ ವೀರ‍್ಯವೆಂದು ಕರ್ನಾಟಕದಲ್ಲಿ ನಂಬಿಕೆ. ಹೋಳಿ ಹಬ್ಬದ ನರ್ತನಗಳು, ಹಾಡುಗಳ ಶೃಂಗಾರ, ನರ್ತಕಿಯರ ಹಾವಭಾವಗಳು ಮೂಲತಃ ಫಸಲಿನ ಅಥವಾ ಮಕ್ಕಳ ಉದ್ದೇಶದಿಂದ ನಡೆಸಿದ ಮಾಟದ ರಿಚಯಲ್ಲುಗಳಿಂದ ಹುಟ್ಟಿರಬಹುದು. ಸಮಕಾಲೀನವಾಗಿ ನೋಡಿದರೆ, ಹೋಳಿ ಹಬ್ಬದಲ್ಲಿರುವ ಮತ್ತು ಅಂತಹ ಸ್ವೇಚ್ಛಾಚಾರಗಳು ಅತಿನಿರ್ಬಂಧದ ಭಾರತೀಯ ಸಮಾಜದಲ್ಲಿ ಶೃಂಗಾರವು ಅಭಿ‌ವ್ಯಕ್ತವಾಗಲಿಕ್ಕೆ ಅವಕಾಶ ಮಾಡಿಕೊಡುತ್ತವೆ. ನಿರ್ಬಂಧದ ಕೆರೆಗೆ ಅವು ಕೋಡಿಯಂತೆ ಕೆಲಸ ಮಾಡುತ್ತವೆ. ಲೈಂಗಿಕ ನಿರ್ಬಂಧಗಳು ಸಿಡಿಲಗೊಳ್ಳಲು ಸಮಾಜದ ಒಪ್ಪಿಗೆ ದೊರೆಯುವುದರಿಂದ ಜನರು ಕಾಮವನ್ನು ಅಭಿವ್ಯಕ್ತಪಡಿಸಿ ಅದರ ನಿರ್ಬಂಧದಿಂದ ಉಂಟಾಗಬಹುದಾದ ಅನೇಕ ದುಷ್ಪರಿಣಾಮಗಳಿಂದ ಮುಕ್ತರಾಗುತ್ತಾರೆ. ಹಿಂದೆ ಹಬ್ಬಗಳ ಅಂಗವಾಗಿ ನಡೆಯುತ್ತಿದ್ದ ಪಗರಣದ ವೇಷಗಳಲ್ಲಿ ಅತಿ ಶೃಂಗಾರಕ್ಕೆ ಸಾಮಾಜಿಕ ಉಪಯೋಗವು ಇದ್ದಿತು. ಮಾರಮ್ಮ, ಕರಿಯಮ್ಮರಂತಹ ಗ್ರಾಮ ದೇವತೆಗಳ ಹಬ್ಬಗಳ ದಿನ ವಿಶೇಷವಾಗಿ ಆಸಾದಿ ಆ ದೇವಿಯರನ್ನು ಒರಟು ಅಶ್ಲೀಲ ಭಾಷೆಯಲ್ಲಿ  ಬಯ್ಯುತ್ತಾನೆ. ಕೆಳವರ್ಗದ ದೇವತೆಗಳಿಗೆ ಕೆಟ್ಟ ಬೈಗುಳಗಳೇ ಏಕೆ ಪ್ರಿಯವಾಗುತ್ತವೆಯೆಂಬುದಕ್ಕೆ ಉತ್ತರ ಹೇಳುವುದು ಕಷ್ಟವಾಗುವುದಿಲ್ಲ. ಶಿಶ್ನವೇ ಪ್ರಧಾನವಾಗಿ ಉಳ್ಳ ಜೋಕುಮಾರನ ಮೂರ್ತಿ, ಆ ದೈವದ ಮೇಲೆ ಇರುವ ಕತೆ ಹಾಡುಗಳನ್ನು ಸೊಂಟಕ್ಕೆ ಮರದ ಶಿಶ್ಚಿಯನ್ನು ಕಟ್ಟಿಕೊಂಡು ಹೆಬ್ಬೆರಳಿನ ದಾರವನ್ನು  ಅದಕ್ಕೆ ಕಟ್ಟಿ ಹಾಡಿಗೆ ಸರಿಯಾಗಿ ತಾಳ ಹಾಕುತ್ತ ಅದನ್ನು ಕುಣಿಸುವ ದುಮ್ಮಿಸಾಲೆಯನ್ನು ಆ ಶಿಶ್ನಕ್ಕೆ ಬಂಜೆ ಹೆಂಗಸರು ಬೆಣ್ಣೆ ಹಚ್ಚುವುದನ್ನು ದುಮ್ಮಿಸಾಲೆಯ ಅಶ್ಲೀಲ ಹಾಡುಗಳನ್ನು ಮಾನವ ಕುಲಶಾಸ್ತ್ರದ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸುವುದೂ ಅಷ್ಟು ಕಷ್ಟವಾಗುವುದಿಲ್ಲ. ದಕ್ಷಿಣ ಕರ್ನಾಟಕದಲ್ಲಿ ಮಾರಮ್ಮನ ಹಬ್ಬಗಳಲ್ಲಿ ದುಮ್ಮಿಸಾಲೆ ಪ್ರಧಾನಪಾತ್ರ ವಹಿಸುತ್ತಾನೆ. ಅವನ ಹಾಡುಗಳನ್ನು  ಹಳ್ಳಿಯ ಜನ ಬಾಯ್ದೆರೆದು ಕೇಳುತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಹಿರೇಗೌಜದ  ಬಳಲಿಕವ್ವನ ಹಬ್ಬದ ಹಗರಣಗಳಲ್ಲಿ ವೇಷಧಾರಿಗಳು ಹಾಕುವ ತೀರ ಒರಟು ಶೃಂಗಾರದ ವೇಷಗಳನ್ನು ನೋಡಲು ಅವರ ಅಶ್ಲೀಲ ಮಾತುಗಳನ್ನು ಕೇಳಲು ಎಲ್ಲರೂ ತುದಿಗಾಲ ಮೇಲೆ ನಿಂತಿರುತ್ತಾರೆ. ಇಂತಹ ಮಾತುಗಳಿಗೆ ಮತ್ತು ವೇಷಗಳಿಗೆ ಉಪಶಮನದ ಮೌಲ್ಯವಿದೆಯೆಂಬಲ್ಲಿ ಅನುಮಾನವಿಲ್ಲ. ಆಟಗಳು ವ್ಯಕ್ತಿಯ ಅಧಿಕ ಶಕ್ತಿ ಸಮಾಜ ಹಿತ ವಿರೋಧಿ ಕೆಲಸಗಳಿಗೆ ಬಳಕೆಯಾಗದಂತೆ ತಡೆಯುವಂತೆ ಹಬ್ಬಗಳ ಶೃಂಗಾರ ದೃಶ್ಯಗಳು ವ್ಯಕ್ತಿಯ ಕಾಮವು ಕೆಟ್ಟ ಹಾದಿ ಹಿಡಿಯದಂತಿರಲು ಸಹಾಯಕವಾಗುತ್ತವೆ.

ಈ ಕಾಲದ ಹಬ್ಬಗಳಲ್ಲಿ ಹಿಂದಿನ ಆಚರಣೆಗಳು ಉಳಿದು ಬರಲು ಕಾರಣ ಹಬ್ಬ ತಂದು ಕೊಡುವ ಋಷಿ ಮತ್ತು ಸಾಮಾಜಿಕ ನಿಯಮಗಳಿಂದ ವ್ಯಕ್ತಿಗೆ ದೊರಕುವ ಬಿಡುಗಡೆ, ಹಬ್ಬಗಳ ಜೊತೆ ಕೆಲವು ನಿರ್ದಿಷ್ಟ ಕ್ರೀಡೆಗಳು ಸೇರ್ಪಡೆಯಾಗಿರುತ್ತವೆ. ವರ್ಷದ ಅವಧಿಯನ್ನು ಹಬ್ಬಗಳು ಕೆಲವು ನಿರ್ದಿಷ್ಟ ಕಾಲಘಟಕಗಳಾಗಿ ಬೇರ್ಪಡಿಸಿ ತೋರುತ್ತವೆ. ಹಳ್ಳಿಯ ಮಕ್ಕಳು ಹಬ್ಬ ಹಬ್ಬಗಳ ಮಧ್ಯ ಕಾಲಘಟಕವನ್ನು ತಮ್ಮ ಕ್ರೀಡಾಘಟಕಗಳಾಗಿ ಮಾಡಿಕೊಳ್ಳುತ್ತದೆ. ಹಬ್ಬದ ಘಟಕಗಳು ಅವರಿಗೆ ಆಟದ ಘಟಕಗಳಾಗುತ್ತವೆ. ಉದಾಹರಣೆಗೆ, ದೀಪಾವಳಿ ಯುಗಾದಿ ಹಬ್ಬಗಳ ಮಧ್ಯೆ ಅವರು ಚೆಂಡಾಟ  ಆಡುತ್ತಾರೆ. ಯುಗಾದಿ ಮುಗಿಯುತ್ತಿದ್ದಂತೆ ಚೆಂಡಾಟ ನಿಲ್ಲಿಸಿ ಇನ್ನೊಂದು ಆಟ ಆರಂಭಿಸುತ್ತಾರೆ. ಹಬ್ಬ ಮತ್ತು ಕ್ರೀಡೆಗಳು ಹೊಂದಿಕೊಂಡಿರುವ ಬಗ್ಗೆ ಹೀಗೆ ಹಳ್ಳಿಗಳಲ್ಲಿ ಹಬ್ಬದ ದಿನವೇ ಜಾನಪದ ನಾಟಕಗಳು, ಕಲೆಗಳು ಪ್ರದರ್ಶನಗೊಳ್ಳುತ್ತವೆಯೆಂಬುದನ್ನು ಇಲ್ಲಿ ಸ್ಮರಿಸಬೇಕು. ಹಬ್ಬಗಳು ಹಳ್ಳಿಗನ ಏಕತಾನದ ಬದುಕಿಗೆ ಬಣ್ಣ ವೈವಿಧ್ಯಗಳನ್ನು ಸೇರಿಸುತ್ತದೆ.

ಹಬ್ಬಗಳನ್ನು ತೌಲನಿಕವಾಗಿ ಅಭ್ಯಾಸ ಮಾಡಲು ಸಾಧ್ಯ. ಕರ್ನಾಟಕದಲ್ಲೇ ಹಬ್ಬಗಳಿಗೆ ಪ್ರಾದೇಶಿಕ ವೈವಿಧ್ಯಗಳುಂಟು. ಕರ್ನಾಟಕದ ಹಬ್ಬಗಳನ್ನು ಭಾರತದ ಅಥವಾ ಇತರೆಡೆಯ ಹಬ್ಬಗಳಿಗೆ ಹೋಲಿಸಬಹುದು. ಉದಾಹರಣೆಗೆ, ಕರ್ನಾಟಕದ ಸಿಡಿಯನ್ನು ಹೋಲುವಂತಹುದು ಉತ್ತರ ಅಮೆರಿಕದಲ್ಲಿದ್ದಿತು. ಇಂತಹ ತೌಲನಿಕ ಅಧ್ಯಯನಗಳಿಗೆ ಫ್ರೇಜರ ಅವರ The Golden Bough ಕೃತಿಯ ಬೃಹತ್ ಸಂಪುಟಗಳಲ್ಲಿ ಮತ್ತು ಬೇರೆ ಬೇರೆ ಕಡೆ ಅಪಾರ ಸಾಮಗ್ರಿ ದೊರಕುತ್ತದೆ. ಹೊನ್ನಾರು ಬಗ್ಗೆ ತೌಲನಿಕ ಅಧ್ಯಯನ ಸಾಧ್ಯವೆಂಬುದನ್ನು ಈ ಹಿಂದೆ ನಾನು ತೋರಿಸಿದ್ದೇನೆ. ಮಾನವಶಾಸ್ತ್ರ (Anthropology) ಮಾನವಕುಲ ಶಾಸ್ತ್ರ Ethnology) ಗಳ ಹಿನ್ನೆಲೆಯಲ್ಲಿ ಕರ್ನಾಟಕದ ಹಬ್ಬಗಳ ವಿಶ್ಲೇಷಣೆ ಮಾಡುವ ಕಾರ‍್ಯವಿದೆ. ಒಂದೊಂದು ಹಬ್ಬದ ಬಗ್ಗೆಯೇ (ಉದಾಹರಣೆಗೆ) ವಿವರಣಾತ್ಮಕ ತೌಲನಿಕ ಅಧ್ಯಯನಗಳಿಗೆ ಅವಕಾಶಗಳು ಸಮೃದ್ಧವಾಗಿವೆ.

ಸಹಾಯಕ ಗ್ರಂಥಗಳು :

1. Encyclopaedia of the Social Sciences

2. Encyclopaedia Britannica

3. Encyclopaedia of Religion and Ethics

4. Thomas P : Hindu Religion, Customs and Manners (Bombay, 1960)

5. Abbe Dubois : Hindu Manners, Customs and Ceremonies (London, 1897)

6. John H. Honningmann : Understanding Culture (Oxford and I B H, 1963)

7. William Crooke : The Popular religion and folkore of Northern India (New Delhi, 1968)

8. Swapan Kumar Bhattacharya : Farmers Rituals and Modernisation (Calcutta, 1976)

9. Palmer and Lloyd : A year of Festivals (London, 1972)

10. James George Frazer : The Golden Bough (New York 1978)

11. Burrow and Emeneau : A Dravidian Etymological Dictionary (Oxford)

೧೨. ಬೆಟಗೇರಿ ಕೃಷ್ಣಶರ್ಮ : ನಮ್ಮ ಸಂಸ್ಕೃತಿ ಪರಂಪರೆ (ಧಾರವಾಡ, ೧೯೬೯)

೧೩. ಚೆ.ಎ. ಕವಲಿ : ಭಾರತೀಯರ ಹಬ್ಬಗಳು (ಧಾರವಾಡ, ೧೯೬೧)

೧೪. ಡಿ.ಟಿ. ರಂಗಸ್ವಾಮಿ : ಭಾರತದ ಹಬ್ಬ ಹರಿದಿನಗಳು (ಹೊರಕೆರೆ ದೇವನಪುರ, ೧೯೬೧)

೧೫. (ಸಂ.) ಗೊ.ರು. ಚನ್ನಬಸಪ್ಪ : ಗ್ರಾಮಜ್ಯೋತಿ (ಬೆಂಗಳೂರು, ೧೯೭೯)

೧೬. ಎಂ. ಚಿದಾನಂದಮೂರ್ತಿ : ಗ್ರಾಮೀಣಃ (ಬೆಂಗಳೂರು, ೧೯೭೭)

೧೭. (ಸಂ.) ಎಂ. ಚಿದಾನಂದಮೂರ್ತಿ : ಅಧ್ಯಯನ (ಬೆಂಗಳೂರು, ೧೯೮೦)

�u. t0�� ๿ -size:12.0pt;font-family:Tunga;mso-bidi-language:KN’>ಬೇಸಾಯದ ಆರಂಭದ ನೇಮ ಮಾಡುವುದಕ್ಕೂ ತಮ್ಮ ಮನೆತನದಲ್ಲಿ ಯಾರ ಹೆಸರಿಗೆ ಬಲ ಬಂದಿದೆಯೆಂಬುದನ್ನೂ ಜ್ಯೋತಿಷಿಗಳಲ್ಲಿ ಕೆಲವರು ಕೇಳಿಕೊಂಡರೂ ಬಂದಿರುತ್ತಾರೆ. ಬಲ ಬಂದವರೆ  ಬೇಸಾಯ ನೇಮ ಮಾಡುತ್ತಾರೆ.  ಇನ್ನೂ ಕೆಲವಡೆಗಳಲ್ಲಿ ಯಾವ ಎತ್ತುಗಳನ್ನು  ಹೂಡಬೇಕೆಂಬುದನ್ನೂ ಕೇಳಿರುತ್ತಾರೆ.

 

ನವಲಗುಂದ ಮುಂತಾದ ಕಡೆಗಳಲ್ಲಿ ಸೂರ್ಯೋದಯಕ್ಕೆ ಪೂರ್ವದಲ್ಲಿ ಬೇಸಾಯದ ಈ ನೇಮ ಮಾಡುತ್ತಾರೆ.  ಅನಂತರವೆ ಬೇವು – ಬೆಲ್ಲ ಸವಿಯುತ್ತಾರೆ. ಮೈಸೂರು ಸೀಮೆಯ ರೈತ ತನ್ನ ಜಮೀನಿನಲ್ಲಿ ಊಳುವ ನೇಮ ಮಾಡುವುದಕ್ಕೆ ಮೊದಲು ಉತ್ತರಾಭಿಮುಖವಾಗಿ ನೇಗಿಲು ಹೂಡಿ, ಊರ ಸುತ್ತು  ಒಂದು ಬಾರಿ ಊಳುತ್ತಾನೆ. ಅದು ’ಊರುಕೈ’ ಎನಿಸುತ್ತದೆ (೧೪)