’ಭಾರತ ಹಳ್ಳಿಗಳ ನಾಡು. ಹಳ್ಳಿಯ ಜೀವನವು ಭಾರತದ ನಿಜವಾದ ಜೀವನದ ಪ್ರತಿಬಿಂಬ ’ಭಾರತೀಯ ಸಂಸ್ಕೃತಿಯನ್ನು ಅರಿಯಬೇಕೆನ್ನುವವರು ಹಳ್ಳಿಗೆ ಹೋಗಬೇಕು. ಹಳ್ಳಿಯ ಜನರೊಡನೆ ಬೆರೆತು ಅವರ ದೈನಂದಿನ ಜೀವನದ ಆಗುಹೋಗುಗಳನ್ನು ಅರ್ಥೈಸಿಕೊಳ್ಳಬೇಕು. ಹಳ್ಳಿಗರ ಹಬ್ಬ, ಹರಿದಿನ, ಮದುವೆ, ಮುಂಜಿವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಭಾಗವಹಿಸಬೇಕು. ಜನಪದ ಬದುಕಿನ ಉಸಿರಾದ ಜಾನಪದ ಗೀತೆ, ಸಾಹಿತ್ಯ ಹಾಗೂ ಕಲೆಗಳ ಸವಿಯನ್ನು ಸವಿಯಬೇಕು. ಅರ್ಥವತ್ತಾಗಿ ಅನುಗಾಲದಿಂದ ಸಾಗಿಕೊಂಡು ಬಂದಿರುವ ಅನಂತ ಬಗೆಯ ಸಂಪ್ರದಾಯಗಳನ್ನು ಗಮನಿಸಿ ಅವುಗಳ ಹಿಂದೆ ಮೂಡಿನಂತಿರುವ ಸತ್ಕಾಂಶವನ್ನು ಸೂರೆಗೊಳ್ಳಬೇಕು.

ಕರ್ನಾಟಕ ಜಾನಪದ ಸಂಸ್ಕೃತಿ-ಸಂಪ್ರದಾಯಗಳತ್ತ ಗಮನ ಹರಿಸಿದಾಗ ಸಾವಿರಾರು ವರುಷಗಳಿಂದಲೂ ಸಾಮಾಜಿಕ ಜನಜೀವನದಲ್ಲಿ ಕಾನೂನಿಗಿಂತಲೂ ಕಟ್ಟುನಿಟ್ಟಾಗಿ ಹಾಸುಹೊಕ್ಕಾಗಿ ಬೆಳೆದು ಬಂದಿರುವ ಅನೇಕ ಸಂಪ್ರದಾಯಗಳು, ಧಾರ್ಮಿಕ ವಿಧಿ ವಿಧಾನಗಳು, ಹಬ್ಬ ಹರಿದಿನಗಳು, ಆಚರಣೆಗಳು ಸಮಾಜ ವಿಜ್ಞಾನಿಯ ಸಂಶೋಧನೆಯ ಕಾರ್ಯಕ್ಕೆ ಸಾಕಷ್ಟು ಸಾಮಗ್ರಿಯನ್ನು ಒದಗಿಸುತ್ತವೆ. ಅಲ್ಲವೆ ಸಾಮೂಹಿಕವಾದ ಇನ್ನೂ ಅದೆಷ್ಟೋ ಆಚಾರ ವಿಧಾನಗಳು ಸಂಪ್ರದಾಯಗಳು ನಾಡವರುಗಳ ಬದುಕಿನ ವೈವಿಧ್ಯಪೂರ್ಣವಾದ ದರ್ಶನ ಮಾಡಿಕೊಡುವವಲ್ಲದೆ ಅವರ ಮನಸ್ಸಿನ ಸ್ವ ಸ್ವರೂಪವನ್ನೂ ಸ್ಪಷ್ಟವಾಗಿ ಸೂಚಿಸುತ್ತವೆ ಎಂಬುದು ಅತ್ಯಂತ ಮನನೀಯ ಸಂಗತಿ.

ಸಂಪ್ರದಾಯಗಳು ಸಾಮಾನ್ಯವಾಗಿ ಋತುಮಾನಕ್ಕನುಗುಣವಾದವುಗಳು:

ನಮ್ಮ ಜನಪದವು ನೂರಾರು ಸಂಪ್ರದಾಯಗಳನ್ನು ಅಂಧಶ್ರದ್ಧೆಯಿಂದ ನಂಬಿಕೊಂಡು ಬಂದಿರುವುದಾದರೂ ಅವುಗಳನ್ನು ವಿವಿಧ ಋತುಮಾನಕ್ಕನುಗುಣವಾಗಿ, ವಿವಿಧ ಬಗೆಯಾಗಿ ಹಾಗೂ ವೈವಿಧ್ಯಮಯವಾಗಿ ಆಚರಿಸುತ್ತ ಬಂದಿರುವುದು ಒಂದು ಅಪೂರ್ವ ಸಂಗತಿ. ಸಾಮಾನ್ಯವಾಗಿ ಮಳೆಗಾಲದಲ್ಲಿ ಮಣ್ಣಿನ ಪೂಜೆಗೆ ಸಂಬಂಧಿಸಿದಂತೆಯೂ ಚಳಿಗಾಲದಲ್ಲಿ ಒಕ್ಕಲು ಸುಗ್ಗಿಗೆ ಸಂಬಂಧಿಸಿದಂತೆಯೂ ಬೇಸಗೆಯಲ್ಲಿ ಶಿವರಾತ್ರಿ, ಹೋಳಿ, ಯುಗಾದಿ,  ಕಾರಪರ್ವೋತ್ಸವ ಮುಂತಾದ ಮನೋರಂಜನಾತ್ಮಕ ಹಬ್ಬಗಳನ್ನೂ ಆಚರಿಸುವರು.

ಮೇಲೆ ವಿವರಿಸಿದ ಅಂಶಗಳ ದೃಷ್ಟಿಯಿಂದ ಜಾನಪದ ಹಬ್ಬಗಳಲ್ಲಿ ಒಂದಾಗಿ, ಕರ್ನಾಟಕ ಹಾಗೂ ಕರ್ನಾಟಕೇತರ ಪ್ರದೇಶಗಳಲ್ಲಿ ಅತ್ಯಂತ ವೈಭವದಿಂದ  ಆಚರಿಸಲ್ಪಡುತ್ತ ಬಂದಿರುವ ಮಣ್ಣೆತ್ತಿನ ಪೂಜೆ’ಗೆ ಸಂಬಂಧಿಸಿದ ’ಮಣ್ಣೆತ್ತಿನ ಅಮಾವಾಸ್ಯೆ’ಯ ಆಚರಣೆ ವೈಶಿಷ್ಟ್ಯಗಳನ್ನು ಇಲ್ಲಿ ಸ್ಥೂಲವಾಗಿ ಅವಲೋಕಿಸೋಣ.

ಮಣ್ಣು ಹೊನ್ನಿಗಿಂತಲೂ ಮಿಗಿಲು

’ಮಣ್ಣನ್ನು ನಂಬಿ ಮಣ್ಣಿಂದ ಬದುಕೇನ
ಮಣ್ಣೆನಗೆ ಮುಂದೆ ಹೊನ್ನು – ಅಣ್ಣಯ್ಯ
ಮಣ್ಣೆ ಲೋಕದಲಿ ಬೆಲೆಯಾದ್ದು !’

ಎಂಬ ನುಡಿಯಲ್ಲಿ ಮಣ್ಣು ಬದುಕಿನ ಮೂಲವೆಂಬ ಸಂಗತಿಯನ್ನು ಎತ್ತಿ ತೋರಲಾಗಿದೆ. ’ಮಣ್ಣಿನ ಮಗನೆಂದು ಕರೆಯಿಸಿಕೊಳ್ಳುವ ರೈತನ ದೃಷ್ಟಿಯಲ್ಲಿ ಮಣ್ಣು ಎಂದೂ ಕೀಳಾದ ವಸ್ತುವಲ್ಲ’ ಅದು ದೇ.ಜ.ಗೌ. ಹೇಳುವಂತೆ ’ಸಂಪತ್ತನ್ನು ಹೆರುವ ಜೀವಶಕ್ತಿ. ಮಣ್ಣು ಹೊನ್ನುಗಳೆರಡೂ ಆತನ ಪಾಲಿಗೆ ಮಣ್ಣು ರೈತನ ಕಣ್ಣಲ್ಲಿ ಬರೀ ಜಡವಸ್ತುವಲ್ಲ. ಚೇತನಕ್ಕೆ ಚೈತನ್ಯ ನೀಡುವ ಸಚೇತನ ವಸ್ತು. ಅಂತೆಯೇ ಅದನ್ನು ಅವನು ದೇವರೆಂದೇ ತಿಳಿದು ಅನಂತ ಬಗೆಯಾಗಿ ಅರ್ಚಿಸುತ್ತ ಬಂದಿರುವುದು ಒಂದು ವಿಶೇಷ ಸಂಗತಿ.

ಮಣ್ಣೆತ್ತಿನ ಅಮಾವಾಸ್ಯೆ ಮಣ್ಣಿನ ಪೂಜೆಗೆ ಸಂಬಂಧಿಸಿದುದು :

ವರ್ಷಾವಧಿಯಲ್ಲಿ ಬರುವ ಐದು ಬಗೆಯ ಮಣ್ಣಿನ ಪೂಜೆಯ ಪ್ರಸಂಗಗಳು ಸಾಮಾನ್ಯವಾಗಿ ಭೂದೇವಿಯ ಆರಾಧನೆಯ ದ್ಯೋತಕಗಳಾಗಿದ್ದು ಅವುಗಳಲ್ಲಿ ’ಮಣ್ಣೆತ್ತಿನ ಪೂಜೆ’ಯ ಸರ್ವಪ್ರಥಮವೆನಿಸುವ ಮಣ್ಣಿನ ಪೂಜೆಯ ಹಬ್ಬವು. ಜೇಷ್ಠ ವದ್ಯ (ಬಹುಳ) ಅಮಾವಾಸ್ಯೆಯ ದಿನದಂದು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ವೈಭವಪೂರ್ಣವಾಗಿ ಆಚರಿಸಲ್ಪಡುತ್ತಿರುವ ಈ ಹಬ್ಬವು ’ಜಾನಪದ ಹಬ್ಬವಾಗಿದ್ದು ಮಣ್ಣೆತ್ತಿನ ಹಬ್ಬ’ವೆಂದೇ ಪ್ರಸಿದ್ಧವಾಗಿದೆ. ಪಂಚಾಂಗಗಳಲ್ಲೆಲ್ಲ ಈ ಹಬ್ಬವನ್ನು ’ಮೃತ್ತಿಕಾ ವೃಷಭ ಪೂಜಾ’ ಎಂದು ಕರೆಯಲಾಗಿದೆ. ಸಕಲ ಜೀವರಾಸಿಗೆ ಅನ್ನ ಹಾಕುವ ಭೂಮಿ ತಾಯಿಗೂ ಮಣ್ಣಿನೊಡನೆ ಬೆರೆತು ಮಣ್ಣಾಗಿ ದುಡಿಯುವ ಬಸವಣ್ಣನಿಗೂ ತಮ್ಮ ಕೃತಜ್ಞತೆಯನ್ನು ಸೂಚಿಸಲು ಒಕ್ಕಲು ಮಕ್ಕಳು ಆ ದಿವಸ ಮಣ್ಣಿನಿಂದ ತಯಾರಿಸಿದ ಬಸವಣ್ಣಗಳ ಪೂಜೆಯನ್ನು ನೆರವೇರಿಸುತ್ತಾರೆ.

ಮಣ್ಣೆತ್ತಿನ ಪೂಜೆಯ ಪುರಾತನತೆ:

ಮಣ್ಣೆತ್ತಿನ ಪೂಜೆಯ ಪುರಾತನತೆಯನ್ನು ಎತ್ತಿ ತೋರುವ ಪ್ರಸಂಗಗಳು ಸಾಹಿತ್ಯ ಪ್ರಪಂಚದಲ್ಲಿ ತೀರ ವಿರಳ. ದೊರೆತರೂ ಒಂದೆರಡು ಕಡೆ ಮಾತ್ರ.

’ಮಣ್ಣೆತ್ತು’ ಎಂಬ ಪದ ಪ್ರಯೋಗವು ಕಾಣಿಸಿಕೊಳ್ಳುವುದು ಮೊತ್ತ ಮೊದಲು ಹನ್ನೆರಡನೆಯ ಶತಮಾನದ ಶರಣ ವಚನಗಳಲ್ಲಿ ಎಂದು ತೋರುತ್ತದೆ.

’ಸದಾಚಾರದ ಕಂಡು ಲಾಂಛನ ಪಕ್ಷವ ನೋಡದವರಿಗೆ
ಇಹದೊಳು ಪರದೊಳು ಗತಿಯಿಲ್ಲ; ಗತಿಯಿಲ್ಲ ಕಾಣಿರೋ
ಮಣ್ಣೆತ್ತಾದಡೇನು? ತನ್ನೆತ್ತೆ ಗೆಲಬೇಕೆಂಬುದಕ್ಕೊಲಿವನು
ನಮ್ಮ ಕೂಡಲ ಸಂಗಮದೇವಯ್ಯನು’

ಬಸವಣ್ಣನವರ ಈ ವಚನದಲ್ಲಿ ಬರುವ ’ಮಣ್ಣೆತ್ತು’ ಎಂಬ ಪದವು ಮಣ್ಣೆತ್ತಿನ ಪೂಜೆಗೆ ಸಂಬಂಧಿಸಿದುದಲ್ಲವಾದರೂ ಅವರ ಜೀವಿತ ಕಾಲದಲ್ಲಿ ಮಣ್ಣಿನಿಂದ ಎತ್ತಿನ ಮೂರ್ತಿಯನ್ನು ಸಿದ್ಧಗೊಳಿಸುವ ಪದ್ಧತಿ ಇತ್ತೆಂಬುದಕ್ಕೆ ದೊರೆಯುವ ಸರ್ವಪ್ರಥಮ ಪುರಾವೆಯಾಗಿದೆ.

ಸಿಂಗಿರಾಜ ಕವಿಯು (ಕ್ರಿ.ಶ. ೧೫೦೦) ರಚಿಸಿದ ’ಸಿಂಗಿರಾಜ ಪುರಾಣ’ದಲ್ಲಿ (ಅಧ್ಯಾಯ ೩೫) ’ಕಾರಪರ್ವೋತ್ಸವದ ದಿವಸ ಕಲ್ಯಾಣ ನಗರದಲ್ಲಿ ಊರ ಮೂಲಿಗೆ ಸಿದ್ಧಿಶೆಟ್ಟಿಯ ಸಂತ ಬಸವನು ತನ್ನ ಮಣ್ಣಿನ ಎತ್ತು ಓಡಿ ಗೆಲ್ಲಲಿಲ್ಲವೆಂದು ದುಃಖಿತನಾಗಲು ಬಸವಣ್ಣನವರು ಮಗುವಿನ ಅಂತರ್ಗತವನ್ನರಿತು ಆತನ ಮಣ್ಣೆತ್ತು ಓಡಿ ಗೆಲ್ಲುವಂತೆ ಮಾಡಿದರಲ್ಲದೆ ಕುಹಕಿಗಳ ನಿಂದನೆಗುತ್ತರವಾಗಿ ಆ ಮಣ್ಣೆತ್ತು ನಿಜವಾದ ಎತ್ತಿನ ಹಾಗೆ ಮೇವು ನೀರು ಸವಿಯುವಂತೆ ಮಾಡಿದ ಪವಾಡದ ವರ್ಣನೆಯಿದೆ. ಬಸವಣ್ಣನವರು ಮಾಡಿ ತೋರಿದರೆನ್ನಲಾದ ಪವಾಡದ ಈ ಕಥೆಯಲ್ಲಿ ನೇರವಾಗಿ ಮಣ್ಣೆತ್ತಿನ ಪೂಜೆಯ ವಿಚಾರ ಬಾರದಿದ್ದರೂ ಕಾರಿಯ ಹಬ್ಬದ ದಿವಸ ಮಣ್ಣೆತ್ತನ್ನು ತಯಾರಿಸುವ ಪದ್ಧತಿ ರೂಢಿಯಲ್ಲಿದ್ದ ಸಂಗತಿ ಸ್ಪಷ್ಟವಾಗುತ್ತದೆ. ಈ ಎರಡೂ ದೃಷ್ಟಾಂತಗಳಿಂದ ಮಣ್ಣೆತ್ತನ್ನು ಸಿದ್ಧಗೊಳಿಸಿ ವಿಶೇಷ ಸಂದರ್ಭಗಳಲ್ಲಿ ಪೂಜಿಸುವ ಪದ್ಧತಿಯು ಬಸವಣ್ಣನವರ ಕಾಲಕ್ಕಿಂತ ಮೊದಲೂ ಇದ್ದಿರಬೇಕೆಂದು ಊಹಿಸಲು ಅವಕಾಶವಿದೆ.

ಸಾಹಿತ್ಯಿಕ ದಾಖಲೆಗಳು, ಪೌರಾಣಿಕ ಪ್ರಮಾಣಗಳು ವಿರಳವಾದರೂ ಮಣ್ಣೆತ್ತಿನ ಪೂಜೆಯು ಬಹುಕಾಲದಿಂದ ಉಳಿದುಕೊಂಡು ಬಂದಿರುವ ಜಾನಪದ ಸಂಪ್ರದಾಯವೆಂಬುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ಮಣ್ಣೆತ್ತಿನ ಪೂಜೆಗೆ ಸಂಬಂಧಿಸಿದಂತೆ ಅನೇಕರು ಅನೇಕ ವಿಧವಾದ ಕಥೆಗಳನ್ನು ಕಲ್ಪಿಸಿಕೊಂಡು ಬಂದಿರುತ್ತಾರೆ.  ಕಾಲ್ಪನಿಕ ಕಥೆಗಳ ವಸ್ತು, ವಾಸ್ತವಿಕತೆಗೆ ದೂರವೆನಿಸುವುದು ಸ್ವಾಭಾವಿಕ. ಆದರೂ ಕೆಲವೊಂದು ಸಲ ಅವುಗಳಲ್ಲಿರುವ ಸಮರ್ಪಕ ಅಂಶಗಳನ್ನು ಅಭ್ಯಾಸಾನುಕೂಲತೆಗಾಗಿ ಸ್ವೀಕರಿಸಬೇಕಾದುದು ಅನಿವಾರ್ಯವೆನಿಸುತ್ತದೆ.

ಮಣ್ಣೆತ್ತಿನ ಪೂಜೆಯನ್ನು ಕುರಿತು ಹೇಳುತ್ತಾ ಬಂದಿರುವ ಕೆಲವು ಸಾಂಪ್ರದಾಯಿಕ ಜಾನಪದ ಕಥೆ, ಕಲ್ಪನೆಗಳನ್ನು ಇಲ್ಲಿ ಗಮನಿಸೋಣ – ಮಣ್ಣೆತ್ತಿನ ಪೂಜೆ ಕುರಿತಾದ ಒಂದು ಕಥೆ ಹೀಗಿದೆ.

’ಬಹುಕಾಲದ ಹಿಂದೆ ಜೀವನೋಪಾಯವೂ ಕಠಿಣವಾಗಿದ್ದ ಓರ್ವ ಬಡವನಿಗೆ ವಿವಾಹ ವಯಸ್ಕರಾದ ಆರು ಜನ ಹೆಣ್ಣುಮಕ್ಕಳು. ಅದೇ ಊರಿನ ಆಗರ್ಭ ಶ್ರೀಮಂತನಿಗೆ ಒಬ್ಬನೇ ಮಗ. ಆದರೆ ’ಹುಲಿಯ ಕಾರಣದಿಂದಾಗಿ ಆತನ ಮರಣ’ಎಂದು ಶಕುನ. ಮಗನ ಮರಣ ತಪ್ಪಿಸಲು ಶ್ರೀಮಂತ ಜಾಗರೂಕತೆಯಿಂದ ವಿಶೇಷ ರಕ್ಷಣಾ ವ್ಯವಸ್ಥೆ ಮಾಡಿಸಿದ್ದ. ಓದಿಗಾರಂಭಿಸಿದ್ದ ಮಗ ಒಂದು ದಿನ ಇದ್ದಕ್ಕಿದ್ದಂತೆ ಒಂದು ಹುಲಿಯ ಚಿತ್ರವನ್ನು ಬರೆದಾಗ ಚಿತ್ರದ ಹುಲಿಗೆ ಜೀವದುಂಬಿ ಶಕುನದಂತೆ ಮಗುವಿನ ಜೀವ ಹೀರಿತು, ಚಿಂತೆಗೊಳಗಾದ ಶ್ರೀಮಂತ ಅಂತ್ಯಕ್ರಿಯೆಗೆ ಮೊದಲು ಮಗನ ವಿವಾಹಕಾರ್ಯ ಮುಗಿಸಬೇಕೆಂದು ಯೋಚಿಸಿ ವಧುವಿನ ಅನ್ವೇಷಣೆ ಮುಂದಾದ. ಬಡತನದ ಬೇಗೆಯಲ್ಲಿ ಬೆಂದು ಹೋಗಿದ್ದ ಬಡವ ಹಣದಾಸೆಯಿಂದ ಶ್ರೀಮಂತನ ಸತ್ತುಹೋದ ಮಗನೊಡನೆ ತನ್ನ ಹಿರಿಯ ಮಗಳನ್ನು ವಿವಾಹ ಮಾಡಿಕೊಡಲು ಸಿದ್ಧನಾದ. ವಿವಾಹಾ ನಂತರದಲ್ಲಿ ಸತ್ತವನ ಅಂತ್ಯ ಸಂಸ್ಕಾರ ನೆರವೇರಿಸಲು ಆತನ ಮಡದಿಯು ಸ್ಮಶಾನಕ್ಕೆ ನಡೆದಳು. ಅಂತ್ಯ ಸಂಸ್ಕಾರಗಳು ಮುಗಿಯುವ ವೇಳೆಗೆ ಸರಿಯಾಗಿ ಕಾರ್ಮೋಡಗಳು ಕವಿದು ಅಕಾಲ ವೃಷ್ಟಿಯಾಗಲು ಹೆದರಿ ಜನರೆಲ್ಲ ಚದುರಿ ಹೋದರು. ಜೀವಿತದಾಸೆಯನ್ನೇ ತೊರೆದ ಶ್ರೀಮಂತನ ಸೊಸೆ ಪತಿಯ ಶವದ ಎದುರಿಗೆ ಅಚಲಳಾಗಿ ಕುಳಿತು ತೊಯದ್ದ ಮಣ್ಣಿನಿಂದ ಒಂದು ಬಸವನ ಮೂರ್ತಿಯನ್ನು ಮಾಡುತ್ತ ತದೇಕಚಿತ್ತದಿಂದ ಶಿವನನ್ನು ಧ್ಯಾನಿಸುತ್ತಲೇ ಇದ್ದಳು. ಅವಳ ಏಕಾಗ್ರ ಭಕ್ತಿಗೆ ಮೆಚ್ಚಿ ಪಾರ್ವತಿ ಪರಶಿವ ಇಬ್ಬರೂ ಅಲ್ಲಿಗೆ ಆಗಮಿಸಿ ಅವಳ ಪತಿಗೆ ಪ್ರಾಣದಾನ ಮಾಡಿ ಚಿರಕಾಲ ಸುಮಂಗಲೆಯಾಗಿ ಉಳಿಯುವಂತೆ ಆಶೀರ್ವದಿಸಿದರು. ’ಪರಶಿವನು ಮಾಡಿದಂತಾಗಲಿ. ತಾನು ಶಿವನ ಭೃತ್ಯಳು’ ಎಂಬ ಭಾವದಿಂದ ನಂದೀಶ್ವರನನ್ನು ಸಿದ್ಧಗೊಳಿಸುತ್ತಿದ್ದ ಅವಳ ಅಂತರಂಗವನ್ನು ಅರಿತ ಶಿವ-ಪಾರ್ವತಿಯರು ’ಮಗಳೇ ನೀನು ಸಿದ್ಧಗೊಳಿಸಿದ ಮಣ್ಣಿನ ಬಸವ, ಭಕ್ತರ ಅಭಿಲಾಷೆಯನ್ನು ಈಡೇರಿಸುವ ಚಿನ್ನದ ಬಸವನಾಗಿ ಪೂಜೆಗೊಳ್ಳುತ್ತಿರಲಿ’ ಎಂದು ಹರಿಸ ಅಂತರ್ಧಾನರಾದರು.

ಜೇಷ್ಠ ವದ್ಯ ಅಮಾವಾಸ್ಯೆಯಂದು ಆ ಘಟನೆ ನಡೆದ ಕಾರಣ ಅಂದಿನಿಂದ ಅದು ’ಮೃತ್ತಿಕಾ ವೃಷಭ ಪೂಜಾ’ ದಿನವಾಗಿ ಮಾರ್ಪಟ್ಟಿರುವುದಾಗಿ ವಾಡಿಕೆ. ಅದುವೇ ಕಾಲಾಂತರದಲ್ಲಿ ’ಮಣ್ಣೆತ್ತಿನ ಅಮಾವಾಸ್ಯೆ’ಯಾಗಿ ಮಾರ್ಪಟ್ಟಂತೆ ಕಾಣುತ್ತದೆ. ಈ ಕಥೆಯು ಮಣ್ಣೆತ್ತಿನ ಪೂಜೆಯನ್ನು ಕುರಿತು ಹೇಳುವ ಕಾಲ್ಪನಿಕ ಕಥೆಯಾದರೂ ಸಂದರ್ಭಕ್ಕೆ ಅನುಗುಣವಾಗಿರುವ, ಸಮಂಜಸವೆನಿಸುವ ಸಾಂಪ್ರದಾಯಿಕ ಕಥೆಯೆಂದು ಹೇಳಬಹುದಾಗಿದೆ.

ಇದೇ ರೀತಿಯಾಗಿ ಚೆನ್ನಮ್ಮನೆಂಬ ಸಾಧ್ವಿ ಮಣ್ಣಿನ ಬಸವಣ್ಣನನ್ನು ಪೂಜಿಸಿ ತನ್ನ ಪತಿಯ ಪ್ರಾಣವನ್ನು ಮರಳಿ ಪಡೆದಳೆಂದು ಹೇಳುವ ಇನ್ನೂ ಒಂದು ಸಾಂಪ್ರದಾಯಿಕ ಕಥೆ ಪ್ರಚಾರದಲ್ಲಿದೆ. ಅವಳ ಪತಿಭಕ್ತಿಗೆ ಮೆಚ್ಚಿ ಪರಮಾತ್ಮನು ತನ್ನ ತ್ರಿಶೂಲದಿಂದ ಅವಳ ದಂಡೆಯನ್ನು ಆಕಾಶಕ್ಕೆ ಚಿಮ್ಮಿ ಅವಳನ್ನು ಚಿರ ಸುಮಂಗಲೆಯನ್ನಾಗಿಸಿದನಂತೆ. ಈ ಕಥೆಗೆ ಸಾಕ್ಷಿಯಾಗಿ ಆಕಾಶದಲ್ಲಿ ಕಾಣುವ ವೃಶ್ಚಿಕಾ ನಕ್ಷತ್ರವನ್ನು ’ಚೆನ್ನಮ್ಮನ ದಂಡೆ’ ಎಂದು ಜನ ಇಂದಿಗೂ ಕೈಮಾಡಿ ತೋರಿಸುತ್ತಾರೆ. ಕಥೆಯ ಸತ್ಯಾಸತ್ಯತೆಗಿಂತ ಸಾಂಪ್ರದಾಯಿಕ ತಾತ್ಪರ್ಯಾರ್ಥವೇ ಇಲ್ಲಿ ಮುಖ್ಯ.

ಮಣ್ಣೆತ್ತಿನ ಪೂಜೆಯ ವಿಷಯಕವಾಗಿ ಇನ್ನೂ ಹೆಚ್ಚು ಸಮಂಜಸವೆನಿಸುವ ಊಹೆ ಈ ರೀತಿಯಾಗಿದೆ –

ಕೆಲವು ಶಿಲಾಶಾಸನಗಳಲ್ಲಿ ಹಾಗೂ ಬ್ರಹ್ಮಶಿವನ ’ಸಮಯ ಪರೀಕ್ಷೆ’ಯಲ್ಲಿ ಬಾದುಮೆ, ಬಾದುಂಬೆ ಎಂಬ ಹೆಸರಿನ ಸೀಮಾಸೂಚಕ ಜಾನಪದ ದೇವತೆಗಳ ವಿವರಣೆಯಿದೆ, ಒಕ್ಕಲಿಗರು ತಮ್ಮ ಬೆಳೆಗಳ ರಕ್ಷಣೆಗಾಗಿ ಈ ದೇವತೆಯನ್ನು ಪೂಜಿಸುತ್ತಿದ್ದರೆಂಬ ಅಂಶವನ್ನು ಗಮನಿಸಿದರೆ ಅವರು ತಮ್ಮ ವ್ಯವಸಾಯದ ಏಳಿಗೆಗಾಗಿ ಪ್ರಕೃತಿ ದೇವತೆಗಳನ್ನು ಬಹುಕಾಲದಿಂದಲೂ ಆರಾಧಿಸುತ್ತಲೇ ಬಂದಿರುವುದಾಗಿ ತಿಳಿಯುತ್ತದೆ. ಅದೇ ರೀತಿಯಾಗಿ ಮಣ್ಣೆತ್ತಿನ ಪೂಜೆಯ ರೂಪದಲ್ಲಿ ಕಾಣಿಸಿಕೊಳ್ಳುವ ಈ ಪೂಜೆಯು ಭೂದೇವಿಯ ಪೂಜೆಯ ಪ್ರತೀಕವೇ ಆಗಿರುವಲ್ಲಿ ಸಂದೇಹವಿಲ್ಲ. ಅದಕ್ಕೆ ಸಮಂಜಸವಾದ ಕಾರಣವೂ ಇಲ್ಲದಿಲ್ಲ – ಸಾಮಾನ್ಯವಾಗಿ ರೈತನು ಬೇಸಗೆಯಲ್ಲೆಲ್ಲ ತನ್ನ ಸಂಗಾತಿಗಳಾದ ಎತ್ತುಗಳೊಡನೆ ಬೆವರು ಸುರಿಸಿ ದುಡಿದು ಹಣ್ಣಾಗಿದ್ದರೂ ಮೃಗ ಪಂಚಕಗಳಾದ ಜಡಿಮಳೆಗಳನ್ನು  ನಂಬಿ ಬಿತ್ತಿಗೆಯ ಕೆಲಸ ಮುಗಿಸಿ ಸಂತಸದಲ್ಲಿರುತ್ತಾನೆ. ಅವನ ಸದಿಚ್ಛೆಯಂತೆ ಬಿತ್ತಿದ ಬೀಜಗಳೆಲ್ಲ ಮೊಳಕೆಯೂರಿ ಸಸಿಗಳಾಗಿ ತಲೆಯೆತ್ತಿ ನಿಂತಿರುತ್ತವೆ. ನೋಡಿದಲ್ಲೆಲ್ಲ ಹಸುರು ಮುರಿಯುವ ಭೂಮಿತಾಯಿಯ ನೋಟ ಆತನ ಕಣ್ಮನಗಳಿಗೆ ಹಬ್ಬವನ್ನುಂಟು ಮಾಡಿರುತ್ತದೆ. ಆ ಸಮಯದಲ್ಲಿ  ನಿಜವಾಗಿಯೂ ಒಕ್ಕಲು ಮಕ್ಕಳಿಗೆ ಕಳೆ ತೆಗೆಯುವ ಅಥವಾ ಯಾವುದೇ ಬಗೆಯ ಬೇಸಾಯದ ಕೆಲಸವಾಗಲಿ ಇರದೆ ದುಡಿದ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ಪಡೆಯುವ ಸದವಕಾಶ ದೊರೆತಿರುತ್ತದೆ. ಇಂತಹ ವಿಶ್ರಾಂತಿ ಸಮಯದಲ್ಲಿ ತನ್ನ ಹೊಲದ ಮೇರೆಯಲ್ಲಿ ಸಂತೃಪ್ತಿಯಿಂದ ಬೆಳೆ ನೋಡುತ್ತ ಕುಳಿತ ರೈತ  – ’ದೇವರೆ ಬೆಳೆ ಇನ್ನೂ ಸಮೃದ್ಧವಾಗಿ ಬರಲಿ ಎಂದು ಹಾರೈಸುತ್ತಲೇ ಇರುತ್ತಾನೆ. ಅಲ್ಲದೆ ತನ್ನೊಡನೆ ದುಡಿದು ವಿಶ್ರಾಂತಿ ಪಡುತ್ತಿರುವ ಬಸವಣ್ಣಗಳ ದುಡಿಮೆಯೇ ಇದಕ್ಕೆಲ್ಲ ಕಾರಣವೆಂದು ಭಾವಿಸಿ ಮಣ್ಣಿಗೂ – ಬಸವಣ್ಣಗಳಿಗೂ ಇರುವ ಸಂಬಂಧವನ್ನು ನೆನೆದು ಹಿಗ್ಗುತ್ತಾನೆ. ಅದು ಸಾಕಾಗದೆ ತನ್ನ ಹೊಲದ ಮಣ್ಣನ್ನೇ ಎತ್ತಿಕೊಂಡು ಬಸವಣ್ಣಗಳನ್ನು ಸಿದ್ಧಗೊಳಿಸಿ ಪೂಜೆಗೈದು ಮಣ್ಣಿನ ಮೂಲಕ ತನ್ನ ಎತ್ತುಗಳಿಗೂ, ಎತ್ತುಗಳ ಮೂಲಕ ಮಣ್ಣಿಗೂ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾನೆ.

ಈ ದೃಷ್ಟಿಯಿಂದ ಮಣ್ಣೆತ್ತಿನ ಪೂಜೆಯು ವಿಶೇಷವಾಗಿ ಮಣ್ಣು – ಹಾಗೂ ಎತ್ತುಗಳ ಕೃತಜ್ಞತೆಯ ಸೂಚಕವಾಗಿ ನಡೆಯುವ ಪೂಜೆಯಾದರೂ ಒಕ್ಕಲಿಗರು ತಮ್ಮ ಹೊಲದ ಬೆಳೆಯ ಸಿರಿ ಹೆಚ್ಚು ಹೆಚ್ಚಾಗಿ ವರ್ಧಿಸುತ್ತಿರಲೆಂದು ಗೈಯುವ ಸಾಂಪ್ರದಾಯಿಕ ಪೂಜೆಯೂ ಆಹುದು.