ಆಚರಣೆಯ ವಿಧಾನ :

ಜೇಷ್ಠ ವದ್ಯ (ಬಹುಳ) ಅಮಾವಾಸ್ಯೆಯ ದಿನವು ಮಣ್ಣೆತ್ತಿನ ಪೂಜೆಗೆ ಯೋಗ್ಯ ದಿನವೆಂದು ನಂಬಿಕೆ. ಆ ದಿವಸ ಒಕ್ಕಲಿಗರು ಪ್ರತಿಯೊಂದು ಮನೆಯಲ್ಲಿಯೂ ಮಣ್ಣೆತ್ತುಗಳನ್ನು ತಯಾರಿಸಿ ಪೂಜೆ ನೆರವೇರಿಸುತ್ತಾರೆ.

ಹಬ್ಬದ ದಿನ ಮುಂಜಾನೆ ಊರ ಮುಂದಿನ ಹೊಲ ಇಲ್ಲವೆ ಕೆರೆ ಹಳ್ಳ ಹೊಳೆಯಿಂದ ಜಿಗುಂಟಾದ ಕರಿಯ ಮಣ್ಣು ತಂದು ಎರಡು ಎತ್ತುಗಳನ್ನು ತಯಾರಿಸುತ್ತಾರೆ. ಕಲಾಪೂರ್ಣವಾಗಿ ಸಿದ್ಧಗೊಳಿಸಿದ ಆ ಎತ್ತುಗಳನ್ನು ನಡುಮನೆಯಲ್ಲಿ ಹಸಿಮಣೆಯ ಮೇಲಾಗಲಿ,  ಎಳೆಯ ಮಂಟಪದಲ್ಲಾಗಲಿ ಅಥವಾ ದೇವರ ಜಗುಲಿಯ ಮೇಲಾಗಲಿ ಇರಿಸಿ ವಿಧಿವತ್ತಾಗಿ ಪೂಜೆ ಮಾಡುತ್ತಾರೆ. ಸಡಗರದಿಂದ ಪೂಜೆಗೊಳ್ಳುವ ಈ ಬಸವಣ್ಣಗಳಿಗೆ ಕರಿಗಡಬನಿನ ಎಡೆಯಾಗಬೇಕಾದುದು ಕಡ್ಡಾಯದ ಸಂಗತಿ. ಕಾಯಿಪಲ್ಲೆ ಅನ್ನ ತುಪ್ಪ ಹಪ್ಪಳ ಸಂಡಿಗೆ ಮುಂತಾದ ಭಕ್ಷ್ಯ, ಭೋಜ್ಯಗಳನ್ನು ಸಿದ್ಧಗೊಳಿಸಿ ಅವುಗಳಿಗೆ ಎಡೆತೋರಿಸುವರು, ಪೂಜೆ ಮುಗಿದ ಮೇಲೆ ರೈತರು ತಮ್ಮ ಮಡಿದ ಮಕ್ಕಳು ಸಮೇತವಾಗಿ ಊಟ ಮಾಡುವರು. ಅಂದಿನ ರಾತ್ರಿ ಪ್ರತಿಯೊಬ್ಬರ ಮನೆಯಲ್ಲಿಯೂ ಮಣ್ಣಿನ ಬಸವಣ್ಣಗಳನ್ನು ಎದುರುಗೊಳ್ಳುವ ಕಾರ್ಯಕ್ರಮ ನೆರವೇರುತ್ತದೆ. ಅಕ್ಕಪಕ್ಕದ ಮನೆಯ ಓರಗೆಯ ವಿಶೇಷವಾಗಿ ಅವಿವಾಹಿತ ಗೆಳತಿಯರೆಲ್ಲ  ಕೂಡಿಕೊಂಡು ಆರತಿ ತೆಗೆದುಕೊಂಡು ಬೇರೆ ಬೇರೆ ಮನೆಗಳಿಗೆ ಹೋಗಿ ಬಸವಣ್ಣನನ್ನು ಎದುರುಗೊಳ್ಳುವ ಕಾರ್ಯಕ್ರಮದಲ್ಲಿ ಪಾಲುಗೊಳ್ಳುತ್ತಾರೆ. ಆ ಸಮಯದಲ್ಲಿ ಬಸವಣ್ಣಗಳ ಶಕ್ತಿ ಸಾಮರ್ಥ್ಯ ಹಾಗೂ ಮಹಿಮೆ ಕುರಿತಾದ ಹಾಡುಗಳನ್ನು ಹೇಳಿ ಆರತಿ ಮಾಡಿ ಪನಿವಾರ (ಪ್ರಸಾದ) ತೆಗೆದುಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳುತ್ತಾರೆ.

ಬೆಳವಲದ ಕೆಲವು ಊರುಗಳಲ್ಲಿ ಆಯಾ ಊರಿನ ಹಿರಿಯ ಮಠದಲ್ಲಿ ಮಣ್ಣಿನ ಬಸವನನ್ನು ಇರಿಸುವ ಪದ್ಧತಿಯುಂಟು. ಊರಿನ ಹೆಣ್ಣುಮಕ್ಕಳೆಲ್ಲ ಒಂದೆಡೆ ಸೇರಿ ಬಸವಣ್ಣನಿಗೆ ಆರತಿ ಮಾಡುವುದುಂಟು. ಬಸವಣ್ಣನ ಮೇಲೆ ಹಾಡುಗಳನ್ನು ಹೇಳುತ್ತ ಕೋಲಾಟವಾಡುವುದು ಅನೇಕ ಕಡೆಗಳಲ್ಲಿ ರೂಢಿ. ಈ ಸಂದರ್ಭದಲ್ಲಿ ಹೇಳುವ ಒಂದು ಸಂಪ್ರದಾಯಕ ಹಾಡು ಈ ರೀತಿಯಾಗಿದೆ ನೋಡಿ –

ಹಾದಿ ಮಣ್ಣs ತಂದು ಗೀರಿ ಬಸವಣ್ಣನ ಮಾಡಿ
ಬಹುದೆನ್ನಬಹುದು ಬಸವಯ್ನ ಕೋಲ |
ಬಹುದೆನ್ನಬಹುದು ಬಸವಯ್ನ ಪಾದಕ
ನಾನೇವನಿಟ್ಟs  ಶರಣೆಂದೆ ಕೋಲ || ೧ ||

ಕೆರೆಯ ಮಣ್ಣs ತಂದು ಕೆತ್ತಿ ಬಸವನ ಮಾಢಿ
ಬಹುದೆನ್ನಬಹುದು ಬಸವಯ್ನ ಕೋಲ |
ಬಹುದೆನ್ನಬಹುದು ಬಸವಯ್ನ ಪಾದಕ
ನಾನೇವನಿಟ್ಟs  ಶರಣೆಂದೆ ಕೋಲ || ೨ ||

ಕಡಲೀಯ ಕಾಳ್ಹಂಗ ಕಟದಾರ ನಮ್ಮ ಬಸವಯ್ನ
ಕಡಲೀ ನಮ್ಮಲಿ ಇಪರೀತ ಕೋಲ |
ಕಡಲೀ ನಮ್ಮಲ್ಲಿ ಇಪರೀತ ನಮ್ಮ ಬಸವಯ್ನ
ಕಟದಾರ ಕಲ್ಯಾಣದs ಮಠದಾಗ ಕೋಲ || ೩ ||

ಉದ್ದೀನ ಕಾಳ್ಹಂಗ ತಿದ್ಯಾರ ನಮ್ಮ ಬಸವಯ್ನ
ಉದ್ದs ನಮ್ಮಲ್ಲಿ ಇಪರೀತ ಕೋಲ |
ಉದ್ದ s ನಮ್ಮಲ್ಲಿ ಇಪರೀತ ನಮ್ಮ ಬಸವಯ್ನ
ತಿದ್ಯಾರ ಕಲ್ಯಾಣದ ಮಠದಾಗ ಕೋಲ || ೪ ||

ಕೆಂಡೊಳ್ಳಿ ದಾ‌ರ‍್ಯಾಗ ಕಂಡೀರಿ ನಮ್ಮ ಬಸವಯ್ನ
ವಂಡೀ ಜಿಗಜಿಗದ ಬರತಾನ ಕೋಲ |
ವಂಡೀಯ ಜಿಗಜಿಗದ ಬರತಾನ ಬಸವಯ್ನ
ಕೊಂಬೀನ್ಯಾಗೈತಿ ಕೈಲಾಸ ಕೋಲ || ೫ ||

ಆಕಾಶ ಮೊದಲಾಗಿ ಧೂಪಾದ ಹೊಗಿ ಬಂದು
ಮತ್ತs ಬಸವಯ್ನs ಶಿವಪೂಜೆ ಕೋಲ |
ಮತ್ತs  ಬಸವಯ್ನs ಶಿವಪೂಜೆ ಯಾಳೇದಾಗ
ಆಕಾಶದ ಗಂಟಿ ಢಣಲೆಂದ ಕೋಲ || ೬ ||

ಹೊಲಮನೆಯ ಕೆಲಸದ ಭಾರವಿಲ್ಲದಿರುವ ಕಾರಣ ಇಂತಹ ಹಾಡು ಹೇಳುತ್ತ ನಿಶ್ಚಿಂತರಾಗಿ ಕಾಲಕಳೆಯುವ ಹೆಂಗೆಳೆಯರ ಸಂತಸ ಹೀಗೆಯೇ ಎಂದು ಹೇಳುವುದು ಯಾರಿಗೂ ಸಾಧ್ಯವಾಗದ ಮಾತು.

ಇದುವರೆಗೆ ವಿವರಿಸಿದುದು ಮಣ್ಣೆತ್ತಿನ ಪೂಜೆಯ ಪೂರ್ವಾರ್ಧ ಮಾತ್ರ. ಉತ್ತರಾರ್ಧ ಇನ್ನೂ ಸೊಗಸಾದುದು. ಮಣ್ಣೆತ್ತಿನ ಅಮಾವಾಸ್ಯೆಯಿಂದ ಮೊದಲುಗೊಂಡು ಮುಂಬರುವ ನಾಗರ ಅಮಾವಾಸ್ಯೆಯವರೆಗಿನ ಅವಧಿಯಲ್ಲಿ ಬರುವ ಎಲ್ಲ ಮಂಗಳವಾರ (೪-೫) ಗಳನ್ನು (ಕೆಲವೆಡೆ ಸೋಮವಾರ) ಮಣ್ಣೆತ್ತಿನ ಪೂಜೆಗಾಗಿಯೇ ಮೀಸಲಾಗಿಡುವ ಪದ್ಧತಿಯುಂಟು. ಈ ರೀತಿಯಾಗಿ ಬರುವ ಪ್ರತಿ ಮಂಗಳವಾರವೂ ಮೇಲೆ ವಿವರಿಸಿದಂತೆ ಮಣ್ಣಿನ ಬಸವಣ್ಣಗಳ ಪೂಜೆ ಮಾಡುವುದು ವಾಡಿಕೆ.

ಪೂಜಿಸಿದ ಮಣ್ಣೆತ್ತುಗಳ ವಿಸರ್ಜನೆ :

ಈ ರೀತಿಯಾಗಿ ಪೂಜೆಗೊಂಡ ಮಣ್ಣಿನ ಎಲ್ಲ ಬಸವಣ್ಣಗಳನ್ನು ಒಟ್ಟುಗೂಡಿಸಿಕೊಂಡು ಶ್ರಾವಣ ಪಂಚಮಿಯ ಮಾರನೆಯ ದಿನ (ಕೆರೆಟ್ಟುವ ಅಂಬಲಿಯ ದಿನ) ಶೇಂಗಾ, ಜೋಳ ಅಥವಾ ಮೆಣಸಿನಗಿಡ ಮುಂತಾದ ಬೆಳೆಯಿರುವ ತಮ್ಮ ತಮ್ಮ ಹೊಲಗಳಿಗೆ ಒಯ್ದು ಅಲ್ಲಿಯ ಬನ್ನಿಯಗಿಡ, ಅರಿಯಗಿಡ, ಅಥವಾ ಇನ್ನಾವುದೋ ಗಿಡವಾದರೂ ಸರಿ ಅದರ ಅಡಿಯಲ್ಲಿ ಪೂರ್ವಾಭಿಮುಖವಾಗಿ ಇರಿಸಿ, ಹಂಗನೂಲು ಕೋಡಬತ್ತಿಗಳನ್ನು ತೊಡಿಸಿ ಪೂಜೆ ಮಾಡುವರು. ಆಮೇಲೆ ಮನೆಯಿಂದ ತಮ್ಮೊಡನೆ ಒಯ್ದ ಪರಡಿ ಪಾಯಸ, ಉಂಡಿ, ವಡೆ, ಉಸುಳಿ ಅಳ್ಳು ಅನ್ನ ಕಾಯಿಪಲ್ಲೆ ಮುಂತಾದ ವಸ್ತುಗಳನ್ನು ಎಡೆಮಾಡಿ ಅದನ್ನು ಬೆಳೆ ತುಂಬಿದ ಹೊಲದ ತುಂಬೆಲ್ಲ ಅಡ್ಡಾಡಿ ಚರಗ ಚೆಲ್ಲುವರು. ಹೊಲದೊಳಗಿನ ಬೆಳೆ ಹುಲುಸಾಗಿ ಬೆಳೆಯಲೆಂಬುದೇ ಈ ಚರಗ ಚೆಲ್ಲುವುದರ ಮೂಲ ಉದ್ದೇಶವೆಂದು ನಂಬಿಕೆ.

ಬೆಚ್ಚು ಇಡುವುದು :

ಹೊಲದಲ್ಲಿ ಬಸವಣ್ಣಗಳ ಪೂಜಾದಿಗಳು ಮುಗಿದ ಮೇಲೆ ಈಗಾಗಲೇ ತಮ್ಮೊಂದಿಗೆ ಒಯ್ದಿದ್ದ ಮಣ್ಣಿನ ಗಡಿಗೆಯ ತಳ ಹಾಗೂ ಸುತ್ತಲಿನ ಭಾಗಕ್ಕೆಲ್ಲ ಸುಣ್ಣ ಕೆಮ್ಮಣ್ಣುಗಳನ್ನು ಸವರಿ ಮೆಣ್ಣೆತ್ತುಗಳ ಎದುರುಗಡೆಯಲ್ಲಿ ಡಬ್ಬು ಹಾಕುವರು. ಕೆಲವು ಸಲ ಒಂದು ಚಿಕ್ಕ ಕೋಲನ್ನು ನಿಲ್ಲಿಸಿ ಅದರ ಮೇಲೆ ಆ ಮಡಿಕೆಯನ್ನು ಡಬ್ಬು ಹಾಕುವರು. ಇದಕ್ಕೆ ’ಬೆಚ್ಚು ಇಡುವುದು’ ಎಂದು ಹೆಸರು. ಇದನ್ನು ಕೆಲವರು ಆ ಮಡಿಕೆಗೆ ಮನುಷ್ಯಾಕೃತಿಯಂತೆ ಕಣ್ಣು, ಮೂಗು, ಬಾಯಿಗಳನ್ನು ಬರೆದೂ ಇಡುವ ಪದ್ಧತಿಯುಂಟು. ಹೊಲದ ಉಳುಮೆಗೆ ಕಾರಣನಾದ ಬಸವಣ್ಣನೇ ಬೆಳೆಕಾಯಲು ಮತ್ತೆ ಹೊಲಕ್ಕೆ ಬಂದಿದ್ದಾನೆ ಎಂಬ ಎಚ್ಚರಿಕೆಯ ಸಂಕೇತವೇ ಈ ಬೆಚ್ಚು ಇರಿಸುವುದರ ಮೂಲ ಉದ್ದೇಶವೆಂದು ತೋರುತ್ತದೆ. ಹೊಲದೊಳಗಿನ ಬೆಚ್ಚನ್ನು ದೂರದಿಂದ ನೋಡಿದ ಯಾರಾದರೂ ಸರಿ ಸಾಮಾನ್ಯವಾಗಿ ಯಾರೋ ಹೊಲದೊಳಗಿದ್ದಾರೆ ಎಂಬ ಭೀತಿಯಿಂದ ಅಲ್ಲಿಂದ ಸುಮ್ಮನೆ ಹೊರಟು ಹೋಗುತ್ತಾರೆ. ಈ ಬೆಚ್ಚು ರೈತನ ಬೆಳೆಯನ್ನು ಸಂರಕ್ಷಣೆ ಮಾಡುವ ವಿಶೇಷ ವಸ್ತುವೆಂಬುದನ್ನು ಎಂದೂ ಮರೆಯುವಂತಿಲ್ಲ.

ಮಣ್ಣೆತ್ತಿನ ವಿಸರ್ಜನೆಯ ಇನ್ನೊಂದು ವಿಧಾನ :

ಪೂಜೆಗೊಂಡ ಮಣ್ಣೆತ್ತುಗಳನ್ನು ವಿಸರ್ಜಿಸುವ ಇನ್ನೂ ಒಂದು ಬಗೆಯ ವಿಧಾನವು ಕೆಲವು ಕಡೆಗಳಲ್ಲಿ ಉಂಟು. ಆಷಾಢ ಬಹುಳ ಅಮಾವಾಸ್ಯೆಯಂದು ಅಂದರೆ ಕೊನೆಯ ಗುಳ್ಳವನ ಪೂಜೆ ಮುಗಿದ ದಿನ ಹಳ್ಳಿಯ ಹೆಂಗಸರೆಲ್ಲ ಕೂಡಿಕೊಂಡು ಅರಳೆಲೆ ಬಸವನನ್ನು ಕಳಿಸಿಕೊಡುವ ವಿಶೇಷ ಸಂಪ್ರದಾಯವುಂಟು. ಅಂದು ಹೆಣ್ಣುಮಕ್ಕಳು ತಮಗೆ ಬೇಕಾದ ಅಡಿಗೆ, ತಿಂಡಿ-ತಿನಿಸುಗಳನ್ನು ಮಾಡಿಕೊಂಡು ಊರ ಮುಂದಿನ ಸಮೀಪದ ಜಲಾಶಯಕ್ಕಾಗಲಿ, ಉಪವನಕ್ಕಾಗಲಿ ಇಲ್ಲವೆ ಮಾವಿನ ತೋಪಿಗಾಗಲಿ ಹೋಗಿ ಬಸವನ ಪೂಜೆ ಮಾಡಿ ಬನದ ಊಟ ಉಂಡು ಹಾಡಿ ಆಡಿ ನಲಿಯುವರು. ಪಂಚಮಿಯ ಹಬ್ಬ ಮುಗಿಸಿಕೊಂಡು ಮತ್ತೆ ಪತಿಗೃಹಕ್ಕೆ ತೆರಳುವ ಮುನ್ನ ಓರೆಗೆಯ ಗೆಳತಿಯರಲ್ಲಿ ಒಂದೆಡೆ ಸೇರಿ ತಮ್ಮ ತಮ್ಮ ಸುಖದುಃಖಗಳನ್ನು ಪರಸ್ಪರವಾಗಿ ಹಂಚಿಕೊಂಡು ಸಂತೋಷಪಡಲು ಎಂದು ಕರೆಯುವುದುಂಟು. ಮಣ್ಣೆತ್ತಿನ ಅಮಾವಾಸ್ಯೆಗೆ ಏಳು ದಿನ ಮೊದಲು ಹಬ್ಬಕ್ಕಾಗಿ ತನ್ನ ತವರಿಗೆ ಬಂದ ಶಿವನ ಅರ್ಧಾಂಗಿ ಗೌರಮ್ಮ ತನ್ನನ್ನು ಕರೆಯಲು ಬಂದ ಮೈದುನ ’ಅಲ್ಲೀಬಸಪ್ಪ’ ನೊಡನೆ ಪಂಚಮಿಯಾದ ಏಳು ದಿನಗಳ ಮೇಲೆ ಮತ್ತೆ ತನ್ನ ಪತಿಗೃಹಕ್ಕೆ ಹೋಗುತ್ತಾಳೆಂದು ನಂಬಿದ ಹೆಣ್ಣುಮಕ್ಕಳು –

’ಅಲ್ಲಿಯ ಬಸಪ್ಪನ
ಅಲ್ಲಿಟ್ಟು ಇಲ್ಲಿಟ್ಟು
ಕಲ್ಲ ಮೇಲಿಟ್ಟು ಕೈ ಬಿಟ್ಟು ಕೋಲು ಕೋಲೆನ್ನ ಕೋಲ;

ಎಂದು ಹಾಡುತ್ತ ಅಲ್ಲಿ ತಾವು ಪೂಜಿಸಿದ ಬಸವಣ್ಣನನ್ನು ವಿಸರ್ಜಿಸಿ ಮನೆಗೆ ಬರುತ್ತಾರೆ.

ಆಷಾಢ ಮಾಸದ ಗುಳಕವ್ವ ಹಾಗೂ ಮಣ್ಣೆತ್ತಿನ ಪೂಜೆಯ ಸಂಬಂಧ

ಆಷಾಢ ಮಾಸದಲ್ಲಿ ನಾಲ್ಕೈದು ವಾರಗಳವರೆಗೆ ಮುಂದುವರೆಯುತ್ತಲೇ ಇರುವ ಮಣ್ಣೆತ್ತಿನ ಪೂಜೆಯ ಜೊತೆಗೆ ಗುಳಕವ್ವನ ಪೂಜೆಯೂ ಒಟ್ಟೊಟ್ಟಿಗೆ ಸಾಗುವುದು. ಅನೇಕ ಕಡೆಗಳಲ್ಲಿ ಕಂಡು ಬರುತ್ತದೆ. ’ಗುಳಕವ್ವ ದೇವರಲ್ ಉಡಿಕೀ ಗಂಡಲ್ಲ’ ಎಂಬ ಗಾದೆ ರೂಢಿಯಲ್ಲಿದ್ದರೂ ಗುಳಕವ್ವ ಮಾತ್ರ ಜನಪದದಲ್ಲಿ ಸಂಪ್ರದಾಯದ ದೇವತೆಯಾಗಿ ಪೂಜೆಗೊಳ್ಳುತ್ತ ಬಂದಿರುವುದು ಒಂದು ವಿಶೇಷ ಸಂಗತಿ, ಆಷಾಢ ಮಾಸದ ಬಸವಣ್ಣಗಳ ಪೂಜೆಯ ಜೊತೆಗೆ ಪ್ರತಿ ಮಂಗಳವಾರ (ಕೆಲವು ಕಡೆ ಸೋಮವಾರ) ವು ಗುಳಕವ್ವನ ಪೂಜೆಯ ವಾರವೂ ಆಗಿದೆ.

ಒಂದು ವಾರಕ್ಕೆ ಒಂದೆತ್ತರದಂತೆ ನಾಲ್ಕು – ಐದು ವಾರಗಳವರೆಗೆ ನಾಲ್ಕು – ಐದು ಎತ್ತರದ ಗುಳಕವ್ವನನ್ನು ಇರಿಸುವುದು ರೂಢಿಯಲ್ಲಿದೆ. ಪ್ರತಿಯೊಂದು ಅಂತಸ್ತಿಗೂ ಒಂದೊಂದರಂತೆ ಮಣ್ಣಿನ ಎತ್ತುಗಳನ್ನು ಇರಿಸಿ ಪೂಜಿಸುವುದು ಗುಳಕವ್ವನ ಪೂಜೆಯ ಒಂದು ವೈಶಿಷ್ಟ್ಯವಾಗಿದೆ. ಈ ಸಂಗತಿಯನ್ನು ಗಮನಿಸಿದರೆ ಗುಳಕವ್ವ (ಗುಳ್ಳವ್ವ) ಬೇರೆ ಯಾರೂ ಆಗಿರದೆ ಕೋಟೆಯ ರೂಪದಲ್ಲಿ ಎದ್ದು ನಿಂತು ಬಸವಣ್ಣಗಳಿಗೆ ರಕ್ಷಣೆ ನೀಡುವ ಭೂಮಿ ತಾಯಿಯೇ ಆಗಿರುವಂತೆ ಕಾಣುತ್ತದೆ. ಈ ಊಹೆ ನಿಜವೆಂಬುದಕ್ಕೆ ಸಾಕ್ಷಿಯಾಗಿರುವ ಜಾನಪದಗೀತೆ ಈ ರೀತಿಯಾಗಿದೆ.

ಒಂದು ಸುತ್ತಿನ ಕ್ವಾಟಿ
ಅದರೊಳು ಹೊಂದಿ ನಿಂತನು ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ           ||೧||

ಎರಡು ಸುತ್ತಿನ ಕ್ವಾಟಿ
ಅದರೊಳು ಸೊಡರು ತೂಗುವ ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ           || ೨ ||

ಮೂರು ಸುತ್ತಿನ ಕ್ವಾಟಿ
ಅದರೊಳು ಮೂರ್ತಗೊಂಡನ ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ           || ೩ ||

ನಾಲ್ಕು ಸುತ್ತಿನ ಕ್ವಾಟಿ
ಅದರೊಳು ನ್ಯಾಯ ಮೂರ್ತಿಯು ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ           || ೪ ||

ಐದು ಸುತ್ತಿನ ಕ್ವಾಟಿ
ಅದರೊಳು ಐಕ್ಯಮೂರ್ತಿಯು ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ           || ೫ ||

ಆರು ಸುತ್ತಿನ ಕ್ವಾಟಿ
ಅದರೊಳು ಅರಳಿನಿಂತಾನ ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ           || ೬ ||

ಏಳು ಸುತ್ತಿನ ಕ್ವಾಟಿ
ಅದರೊಳು ಜಗವನಾಳುವ ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ           || ೭ ||

ಎಂಟು ಸುತ್ತಿನ ಕ್ವಾಟಿ
ಅದರೊಳು ಕಂಟಲೆತ್ತೇನೊ ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ           || ೮ ||

ಒಂಬತ್ತು ಸುತ್ತಿನ ಕ್ವಾಟಿ
ಅದರೊಳು ತುಂಬಿ ಬಂದಾನೊ ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ           || ೯ ||

ಹತ್ತು ಸುತ್ತಿನ ಕ್ವಾಟಿ
ಅದರೊಳು ಸುತ್ತ ನೋಡಲು ಬಸವ
ಬಸವಕ್ಕ ಬಸವನ್ನಿರೆ
ಬಸವನ ಪಾದಕ ಶರಣನ್ನಿರೆ           || ೧೦ ||

ಈ ರೀತಿಯಾಗಿ ಒಂದೊಂದು ಸುತ್ತಿನ ಕೋಟೆಯಲ್ಲಿಯೂ ಒಂದೊಂದು ರೂಪ ಧರಿಸಿದ ಬಸವನ ಮಹಾ ರೂಪವನ್ನು ಕಾಣಿಸುವ ಸಂಪ್ರದಾಯದ ಹಾಡುಗಳು ಜನರ ನಾಲಗೆಯ ಮೇಲೆ ಇನ್ನೂ ಕುಣಿಯುತ್ತಲೇ ಇವೆ. ಮೇಲೆ ವಿವರಿಸಿದ ಮಹಾತ್ಮನ ವಿಚಾರಗಳೇನೇ ಇರಲಿ ಗುಳಕವ್ವನ ಪೂಜೆಯು ಮಣ್ಣೆತ್ತಿನ ಪೂಜೆಯ ಜೊತೆಗೆ ಒಟ್ಟುಗೂಡಿ ಬರುವ ಮಣ್ಣಿನ ಎರಡನೆಯ ಪೂಜೆ ಎಂಬುದು ನಿರ್ವವಾದದ ಸಂಗತಿ.

ಕರ್ನಾಟಕೇತರ ಪ್ರಾಂತಗಳಲ್ಲಿ ಮಣ್ಣೆತ್ತಿನ ಪೂಜೆ :

ಕರ್ನಾಟಕದ ಉತ್ತರ ಭಾಗದಲ್ಲಿ ಪ್ರಚಲಿತವಾಗಿರುವ ಈ ಮಣ್ಣೆತ್ತಿನ ಪೂಜೆಯು ಕರ್ನಾಟಕೇತರ ಪ್ರಾಂತಗಳಾದ ಆಂಧ್ರ ಮಹಾರಾಷ್ಟ್ರಗಳಲ್ಲಿಯೂ ರೂಢಿಯಲ್ಲಿದೆ.

ಆಂಧ್ರ ಪ್ರದೇಶದಲ್ಲಿ :

ಆಂಧ್ರ ಪ್ರದೇಶದ ಗಡಿಜಿಲ್ಲೆಗಳಾದ ಕರ್ನೂಲು ಹಾಗೂ ಅನಂತಪುರ ಜಿಲ್ಲೆಗಳಲ್ಲಿ ಆಷಾಢ ವದ್ಯ (ಬಹುಳ) ಅಮಾವಾಸ್ಯೆಯಂದು ಮಣ್ಣಿನ ಬಸವಣ್ಣಗಳನ್ನು ಪೂಜಿಸುವ ಪದ್ಧತಿ ರೂಢಿಯಲ್ಲಿದೆ.

ಆ ದಿವಸ ಊರ ಮುಂದಿನ ಹೊಲದಿಂದಾಗಲಿ, ಕೆರೆ, ಹೊಳೆ ಅಥವಾ ಹಳ್ಳದಿಂದಾಗಲಿ ಜಿಗುಟಾದ ಮಣ್ಣು ತಂದು ಬಸವಣ್ಣನ ಎರಡು ಮೂರ್ತಿಗಳನ್ನು ತಯಾರಿಸಿ ಹಸೆ ಮಣೆಯ ಮೇಲಿರಿಸಿ ಪೂಜೆ ಮಾಡುವರು. ಮುಂಜಾನೆ ನಡೆಯುವ ಈ ಪೂಜೆಯ ಕಾಲಕ್ಕೆ ಒಂಬತ್ತು ಎಲೆ, ಒಂಬತ್ತು ಅಡಿಕೆಬೆಟ್ಟ, ಒಂಬತ್ತು ಹಣ್ಣು ಹಾಗೂ ಕೊಬ್ಬರಿ ಬಟ್ಟಲುಗಳನ್ನು ಸೇರಿಸಿ ಅಂದು ವಿಶೇಷವಾಗಿ ತಯಾರಿಸಿದ ಒಂಬತ್ತು ಹೂರಣಗಡಲು ಅನ್ನ ಕಾಯಿಪಲ್ಲೆ ಮುಂತಾದ ಖಾದ್ಯಗಳನ್ನು ಎಡೆಹಿಡಿಯುವರು. ಅಲ್ಲದೆ ಆ ದಿವಸ ಓರ್ವ ಮುತ್ತೈದೆಯನ್ನು ಆಮಂತ್ರಿಸಿ ತಾವು ತಯಾರಿಸಿದ ಎಲ್ಲ ಬಗೆಯ ಪಕ್ವಾನ್ನಗಳನ್ನು ಒಂದು ಎಲೆಯಲ್ಲಿ ಬಡಿಸಿ ಅದರ ಮೇಲೊಂದು ಎಲೆಯನ್ನು ಮುಚ್ಚಿ ಅರಿಷಿಣ – ಕುಂಕುಮ ಸಮೇತ ’ಬಾಗಿನ’ ಕೊಟ್ಟು ಕಳಿಸಿಕೊಡುವರು.

ಅಂದು ಸಂಜೆ ತಮ್ಮಲ್ಲಿ ಪೂಜಿಸಿದ ಮಣ್ಣೆತ್ತುಗಳನ್ನು ಮತ್ತೊಮ್ಮೆ ಪೂಜೆ ಮಾಡಿ ಊರ ಮುಂದಿನ ಕೆರೆಯಲ್ಲಿಯೋ, ಹಳ್ಳ, ಹೊಳೆ, ಬಾವಿಯಲ್ಲಿಯೋ ವಿಸರ್ಜಿಸುತ್ತಾರೆ. ಇನ್ನು ಕೆಲವರು ಅವುಗಳನ್ನು ತಮ್ಮ ಮನೆಯ  ಮುಂದಣ ತುಳಸೀಗಿಡ ಅಥವಾ ಬನ್ನೀಗಡದ ಅಡಿಯಲ್ಲಿ ಇರಿಸುತ್ತಾರೆ. ವಿಸರ್ಜನೆಗೆ ಮುನ್ನ ಅಕ್ಕಪಕ್ಕದ ಸುಮಂಗಲೆಯರನ್ನು ಕರೆಯಿಸಿ ಆರತಿ ಮಾಡಿಸುವುದೂ ಕೆಲವೆಡೆಯ ಪದ್ಧತಿ.

ಮಣ್ಣಿನ ಎತ್ತುಗಳನ್ನು ಪೂಜಿಸುವಾಗ ಅವುಗಳೊಡನೆ ಅರಿಷಿಣ ಪುಡಿಯ ಎರಡು ಮುದ್ದೆಗಳನ್ನಿರಿಸಿ ಅವುಗಳನ್ನು ಶಿವ-ಗೌರಿಯರೆಂದು ಭಾವಿಸಿ ಪೂಜಿಸುವುದು ಇವರ ಪೂಜಾವಿಧಾನ ವೈಶಿಷ್ಟ್ಯವು.

ಪೂಜೆಯ ಉದ್ದೇಶ :

ಮುಂಗಾರು ಬೆಳೆಗಳೆಲ್ಲ ಹುಲುಸಾಗಿ ಬರಲೆಂದು ಹಾರೈಸಿ, ಅದುವರೆಗಿನ ಸಮೃದ್ಧಿಗೆಲ್ಲ ಎತ್ತುಗಳೇ ಕಾರಣವೆಂದು ಕೃತಜ್ಞತೆಯಿಂದ ಮಣ್ಣೆತ್ತುಗಳನ್ನು ಪೂಜಿಸುವುದು ಒಂದು ರೀತಿಯಾದರೆ, ಮುಂಬರುವ ಆಷಾಢದಲ್ಲಿ ತನ್ನ ಪತಿಯೊಡನೆ ತವರಿಗೆ ಬರುವ ಮಗಳು ಗೌರಿಯ ಸುಖಾಗಮನವನ್ನು ಕೋರಿ ಅವರನ್ನು ಸುಖರೂಪದಿಂದ ಹೊತ್ತು ತರುವ ಬಸವಣ್ಣನನ್ನು ಈ ಮೂಲಕ ಭಕ್ತಿ – ಗೌರ‍ವ ಪೂರ್ವಕವಾಗಿ ಪೂಜಿಸುವುದುಂಟು.

ಆಂಧ್ರದಲ್ಲಿ ಆಷಾಢ ಮಾಸದಲ್ಲಿ ’ಗೌರಿ’ ಯನ್ನು ತರುವ ಪದ್ಧತಿಯಿರುವುದರಿಂದ ಅದನ್ನು ’ಆಷಾಢಗಿರಿ’ ಎಂದು ಕರೆಯುವುದೇ ವಾಡಿಕೆ. ಕಾರಣ ಮಗಳನ್ನು ಕರೆತರುವ ಬಸವಣ್ಣನನ್ನು ಮುಂಗಡವಾಗಿಯೇ ಕೃತಜ್ಞತಾಪೂರ್ವಕವಾಗಿ ಅರ್ಪಿಸುವ ಸಂಪ್ರದಾಯ ರೂಢಿಗತವಾಗಿ ಬಂದಿರಬೇಕೆಂದು ತೋರುತ್ತದೆ.

ಈ ಜಾನಪದ ಹಬ್ಬವನ್ನು ತೆಲುಗಿನಲ್ಲಿ ಸಾಮಾನ್ಯವಾಗಿ ’ಎದ್ದುಲ ಅಮಾವಾಸ್ಯೆ’ ಎಂದು ಕರೆಯುವುದೇ ವಾಡಿಕೆ. ಮತ್ತೆ ಕೆಲವರು ’ಮಣ್ಣೆತ್ತಿ ಅಮಾವಾಸ್ಯೆ’ ಎಂದೂ ಕರೆಯುವುದುಂಟು. ಮಣ್ಣೆತ್ತಿನ ಪೂಜೆಯ ಪದ್ಧತಿಯು ಆಂಧ್ರದ ಗಡಿಭಾಗದ ಜಿಲ್ಲೆಗಳಲ್ಲಿ ಮಾತ್ರ ಆಚರಣೆಯಲ್ಲಿರುವುದನ್ನು ಗಮನಿಸಿದರೆ ಕರ್ನಾಟಕದ ಸಂಪ್ರದಾಯದ ಪ್ರಭಾವವೇ ಈ ಪ್ರದೇಶಗಳ ಮೇಲೆ ಆದಂತೆ ತೋರುತ್ತದೆ. ಒಂದು ದಿನ ಮಾತ್ರ ಆಚರಿಸಲ್ಪಡುವ ಈ ಹಬ್ಬವು ಆಂಧ್ರಪ್ರದೇಶದಲ್ಲಿ ಒಂದು ಸಾಮಾನ್ಯ ಹಬ್ಬವೆನಿಸಿದೆ.

ಮಹಾರಾಷ್ಟ್ರದಲ್ಲಿ :

ಮಹಾರಾಷ್ಟ್ರದ ಗಡಿಭಾಗದ ಕೊಲ್ಲಾಪುರ ಹಾಗೂ ಸೊಲ್ಲಾಪುರ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಾತ್ರ ಮಣ್ಣೆತ್ತಿನ ಪೂಜೆಯ ಪದ್ಧತಿ ಇರುವುದಾಗಿ ಕಂಡು ಬರುತ್ತದೆ.

ಮಹಾರಾಷ್ಟ್ರದಲ್ಲಿ ಈ ಹಬ್ಬಕ್ಕೆ ’ಬೇಂದೂರ’ ’ಬೇಂಡರ’ ಎಂದೂ ’ಪೋಳಾ’ ಎಂದೂ ಹೆಸರು. ಮರಾಠಿಯಲ್ಲಿ ’ಪೋಳ’ ಎಂದರೆ ’ಎತ್ತು’ ’ಪೋಳಾ’ ಅಥವಾ ’ಪೋಳಾಸsಣ’ ಎಂದರೆ ಎತ್ತಿನ ಹಬ್ಬ ಎಂದು ಅರ್ಥ.

ಇದು ವಿಶೇಷವಾಗಿ ಒಕ್ಕಲು ಮಕ್ಕಳ ಹಬ್ಬವಾಗಿದ್ದು  ಅದನ್ನು ಆಯಾ ಪ್ರಾದೇಶಿಕತೆಗನುಗುಣವಾಗಿ ಅಂದರೆ ಆಷಾಢ. ಶ್ರಾವಣ ಹಾಗೂ ಭಾದ್ರಪದ ತಿಂಗಳ ಅಮಾವಾಸ್ಯೆಯ ದಿನ ಆಚರಿಸಲಾಗುತ್ತದೆ.

ಆ ದಿವಸ ಮುಂಜಾನೆ ಜೀವಂತ ಎತ್ತುಗಳಿಗೆ ಸ್ನಾನ ಮಾಡಿಸಿ, ಕೊಂಬುಗಳಿಗೆ ಬಣ್ಣ ಬಳಿದು ಕೊಂಬೆಣಸು ತೊಡಿಸಿ ಜೂಲ ಮುಂತಾದವುಗಳನ್ನು ಹಾಕಿ ಪೂಜಿಸಿ ನೈವೇದ್ಯ ಹಿಡಿಯುವರು, ಅದೇ ದಿನ ಸಾಯಂಕಾಲ ಆಯಾ ಹಳ್ಳಿಯ ಎಲ್ಲ ಎತ್ತುಗಳನ್ನು ಹಾಡುತ್ತ ಬಾರಿಸುತ್ತ ಮೆರವಣಿಗೆಯಲ್ಲಿ ಊರ ತುಂಬೆಲ್ಲ ಮೆರೆಯಿಸುವರು.

’ಪೋಳ’ ಹಬ್ಬವು ನಮ್ಮ ’ಕಾರ ಹುಣ್ಣಿವೆ’ ಯನ್ನು ಹೋಲುವುದಾದರೂ ಅದಕ್ಕಿಂತ ಭಿನ್ನವಾದುದೆಂಬುದನ್ನು ಅಲ್ಲಗಳೆಯಲಾಗದು. ಮನೆಯಲ್ಲಿ ಜೀವಂತ ಎತ್ತುಗಳಿಲ್ಲದವರು ಅಮಾವಾಸ್ಯೆಯ ಹಿಂದಿನ ದಿನ ಅಥವಾ ಅದೇ ದಿವಸ ಹೊಲದಿಂದ ಮಣ್ಣು ತಂದು ಬಸವಣ್ಣಗಳನ್ನು ತಯಾರಿಸುವರು,  ಇಲ್ಲವೆ ಪೇಟೆಯಿಂದ ಕೊಂಡು ಕೊಂಡಾದರೂ ಸರಿ ತಂದು ತಮ್ಮ ಭಕ್ತಾನುಸಾರ ಅವುಗಳ ಪೂಜೆ ನೆರವೇರಿಸುತ್ತಾರೆ. ಈ ರೀತಿಯಾಗಿ ಅರ್ಚಿಸಿದ ಮಣ್ಣೆತ್ತುಗಳನ್ನು ಅದೇ ದಿನ ಸಂಜೆಯ ಮುಂದೆ ಊರಿನ ಕೆರೆ ಬಾವಿ ಹಳ್ಳ ಅಥವಾ ಹೊಳೆಗೆ ಒಯ್ದು ವಿಸರ್ಜಿಸಿ ಬರುತ್ತಾರೆ.

ಮಹಾರಾಷ್ಟ್ರದ ಒಕ್ಕಲಿಗರಿಗೆಲ್ಲ ಬಹು ಪುಣ್ಯದ ಹಬ್ಬವೆನಿಸುವ ಈ ’ಪೋಳ ಹಬ್ಬ’ವು ನಮ್ಮಲ್ಲಿ ಜರಗುವ ಕಾರಹುಣ್ಣಿವೆ ಹಾಗೂ ಮಣ್ಣೆತ್ತಿನ ಅಮಾವಾಸ್ಯೆಯ ಎರಡೂ ಅಂಶಗಳನ್ನು ಒಗ್ಗೂಡಿಸಿಕೊಂಡು ಸಾಗುವ ವೈಶಿಷ್ಟ್ಯ ಪೂರ್ಣ ಜಾನಪದ ಹಬ್ಬವು.

ಉದ್ದೇಶ : ಭೂಮಿ ಸೇವೆಯನ್ನು ಮನಮುಟ್ಟಿ ಮಾಡುವ ಬಸವಣ್ಣಗಳ ವಿಷಯದಲ್ಲಿ ಕೃತಜ್ಞತೆ ತೋರುವುದೇ ಈ ಹಬ್ಬದ ಮುಖ್ಯ ಉದ್ದೇಶ. ಅಲ್ಲದೆ ಅದರಿಂದ ಹೊಲಗಳಲ್ಲಿಯ ಬೆಳೆ ಸಮೃದ್ಧವಾಗಿ ಬೆಳೆಯುವುದೆಂದೂ ಹಕ್ಕಿಯಲ್ಲಿ ಪಶುಸಂಪತ್ತಿ ಹೆಚ್ಚುವುದೆಂದೂ ಒಕ್ಕಲಿಗರ ದೃಢವಾದ ನಂಬಿಕೆ.

ಉಪಸಂಹಾರ :

ಎಳ್ಳು ಜೀರಿಗೆಯಂತಹ ಸಣ್ಣ ಕಾಳುಗಳಿಂದ ಹಿಡಿದು ಗೋಧಿ, ಜೋಳ ಭತ್ತದಂತಹ ದೊಡ್ಡ ಕಾಳಗಳವರೆಗೆ ಅನೇಕ ಬಗೆಯ ದವಸಧಾನ್ಯ ಬೆಳೆದು ಸರ್ವಲೋಕಗಳನ್ನು ಪೋಷಿಸುವ ಭೂಮಿ ತಾಯಿ ಹಾಗೂ ಒಕ್ಕಲಿಗರ ಬದುಕಿನೊಂದಿಗೆ ಹಾಸುಹೊಕ್ಕಾಗಿ ಬೆರೆತು ಹಣ್ಣಾಗಿ ದುಡಿಯುವ ಬಸವಣ್ಣಗಳ ಕೃತಜ್ಞತೆಯ ದ್ಯೋತಕವಾಗಿ ನಡೆಯುವ ಮಣ್ಣು ಹಾಗೂ ಎತ್ತು ಇವುಗಳ ಪೂಜೆಯೇ ಪ್ರಧಾನವಾಗಿರುವ ’ಮಣ್ಣೆತ್ತಿನ ಅಮಾವಾಸ್ಯೆ’ ಯು ಕನ್ನಡಿಗರು ಹಾಗೂ ಕನ್ನಡೇತರರು ಸಾಂಪ್ರದಾಯಿಕವಾಗಿ ನಡೆಯಿಸಿಕೊಂಡು ಬಂದಿರುವ ಒಂದು ಜಾನಪದ ಹಬ್ಬವಾಗಿದೆ. ಆಚರಣೆಯ ದೃಷ್ಟಿಯಿಂದ  ಅಲ್ಪವೆನಿಸಿ ತೋರಿದರೂ ಅದು ಸಂಸ್ಕೃತಿಯ ದೃಷ್ಟಿಯಿಂದ ಬಹು ಅರ್ಥಪೂರ್ಣ ಹಾಗೂ ಔಚಿತ್ಯಪೂರ್ಣವಾಗಿರುವ ಹಬ್ಬವಾಗಿದೆ.

ಗ್ರಂಥ ಋಣ

೧. ಕನ್ನಡ ಜಾನಪದ ಗೀತೆಗಳು : ಡಾ.ಬಿ.ಎಸ್. ಗದ್ದಗಿಮಠ – ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಢ ೧೯೬೩.

೨. ನಮ್ಮ ಸಂಸ್ಕೃತಿ ಪರಂಪರೆ : ಬೆಟಗೇರಿ ಕೃಷ್ಣಶರ್ಮ, ಸಮಾಜ ಪುಸ್ತಕಾಲಯ, ಧಾರವಾಡ, ೧೯೬೯.

೩. ಸಿಂಗಿರಾಜ ಪುರಾಣ : ಎಚ್. ದೇವೀರಪ್ಪ – ಪ್ರಾಚ್ಯ ಸಂಶೋಧನ ಸಂಸ್ಥೆ, ಮೈಸೂರು, ೧೯೫೦.

೪. ಭಾರತೀಯ ಸಂಸ್ಕೃತಿ ಕೋಶ ಭಾಘ – ೫ (ಮರಾಠಿ) – ಮಹಾದೇವ ಶಾಸ್ತ್ರಿ

 

ಜಾನಪದ ಗೀತೆ, ಕಥೆ ಹಾಗೂ ಸಂಪ್ರದಾಯಗಳ ವಿವರಣೆ ನೀಡಿದವರು :

೧. ಶ್ರೀಮತಿ ನೀಲಮ್ಮ ಬಸಪ್ಪ ತೇಗೂರ ಅಳಣಾವರ (ಧಾರವಾಡ)

೨. ಶ್ರೀಮತಿ ಪ್ರಭಾವತಿ ಮಹಾದೇವಪ್ಪ ಹರದಗಟ್ಟಿ, ಶಿಶುವಿನಹಾಳ. (ಧಾರವಾಡ)

೩. ಶ್ರೀಮತಿ ಚೆನ್ನಮ್ಮ ಫಕೀರಪ್ಪ ಮೆಳವಂಕಿ ಬುಡರಕಟ್ಟಿ (ಬೆಳಗಾವಿ)

೪. ಶ್ರೀಮತಿ ಸೀತಮ್ಮ ಕೃಷ್ಣಮೂರ್ತಿ – ಅನಂತಪುರ (ಆಂಧ್ರಪ್ರದೇಶ)

೫. ಶ್ರೀಯುತ ಬಾಬುರಾವ್ ರಾಮಪುರೆ, ಕೊಲ್ಹಾಪುರ (ಮಹಾರಾಷ್ಟ್ರ)