ಜಾನಪದ ಕಲೆ ಸಾಹಿತ್ಯಗಳ ಅಧ್ಯಯನ – ಪ್ರಸಾರಗಳ ಉದ್ದೇಶದಿಂದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ ಪ್ರತಿ ವರುಷವೂ ವಿಚಾರ ಸಂಕಿರಣ, ಸಮ್ಮೇಳನ, ಕಲಾ ಪ್ರದರ್ಶನಗಳನ್ನು ಏರ್ಪಡಿಸುತ್ತ ಬಂದಿದೆ. ಈಗಾಗಲೇ ವಿದ್ಯಾಲಯದ ಆವರಣ ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ಇಂತಹ ಒಂಬತ್ತು ಸಮ್ಮೇಳನಗಳನ್ನು ಯಶಸ್ವಿಯಾಗಿ ನೆರವೇರಿಸಿರುವುದು ಕನ್ನಡಿಗರಿಗೆ ತಿಳಿದ ಸಂಗತಿ. ಜಾನಪದ ತಜ್ಞರ ಮೂಲಕ ಜಾನಪದ ಕಲಾವಿದರ ಮೂಲಕ ಈ ಸಾಹಿತ್ಯ ಹಾಗೂ ಮಾಹಿತಿಯನ್ನು ಜನರ ಮನಸ್ಸಿನ ಮೇಲೆ ಬಿಂಬಿಸುವಂತೆ ಮಾಡುವುದಲ್ಲದೆ ಜಾನಪದ ಕಲೆ, ಹಬ್ಬ, ಹರಿದಿನ, ವೃತ್ತಿ ಮೊದಲಾದವುಗಳನ್ನು ವಿವಿಧ ದೃಷ್ಟಿಕೋನದಿಂದ ವಿಶ್ಲೇಷಿಸುವ ಕಾರ್ಯವನ್ನು ಈ ಸಮ್ಮೇಳನಗಳು ಮಾಡುತ್ತಿವೆ. ಪ್ರತಿವರ್ಷ ಸಮ್ಮೇಳನಗಳಲ್ಲಿ ಓದಿದ ಲೇಖನಗಳನ್ನು ಇಂತಹ ಸಂಪುಟಗಳಲ್ಲಿ ಪ್ರಕಟಿಸುವ ಶ್ರಮವನ್ನೂ ನಾವಿರಿಸಿಕೊಂಡಿದ್ದೇವೆ. ಜಾನಪದ ಸಾಹಿತ್ಯ – ಕಲೆಗಳು ನಶಿಸಿ ಹೋಗದ ಮುನ್ನವೇ ಅವುಗಳನ್ನು ಇಂದಿನ ಹಾಗೂ ಮುಂದಿನ ತಲೆಮಾರುಗಳಿಗೆ ನಿಗ್ರಹಿಸಿಕೊಡುವುದು, ಕಾಪಾಡಿಕೊಂಡು ಬರುವುದು ನಮ್ಮ ಉದ್ದೇಶಗಳಾಗಿವೆ. ಇಂತಹ ಕೃತಿಗಳು ಮುಂದಿನವರಿಗೆ ದಾರಿದೀಪಗಳಾಗಿವೆಯೆಂದು ಬೇರೆ ಹೇಳಬೇಕಿಲ್ಲ. ಸಂಪುಟದಲ್ಲಿ ಚೈತ್ರ ಮಾಸದಿಂದ ಫಾಲ್ಗುಣದವರೆಗಿನ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಪ್ರಮುಖ ಹಬ್ಬಗಳ ಬಗೆಗಿನ ವಿಶ್ಲೇಷಣಾತ್ಮಕ ನಿಬಂಧಗಳನ್ನು ಅಳವಡಿಸಲಾಗಿದೆ. ನಮ್ಮ ಹಬ್ಬಗಳ ಹಿಂದಿರುವ ಜನರ ಮನೋಧರ್ಮವನ್ನು ತಿಳಿಯಲು ಈ ಲೇಖನಗಳು ಅತ್ಯಂತ ಸಹಾಯಕಾರಿಯಾಗಿವೆ. ಸಾಮಾನ್ಯರಿಗೂ ವಿದ್ಯಾರ್ಥಿಗಳಿಗೂ ಅಧ್ಯಾಪಕರುಗಳಿಗೂ ಈ ಸಂಪುಟಗಳು ಅತ್ಯಂತ ಉಪಯುಕ್ತ ಬೇರೆ ಹೇಳಬೇಕಿಲ್ಲ. ಈ ಲೇಖನಗಳನ್ನೊದಗಿಸಿದ ಲೇಖಕರಿಗೆ ಕೃತಜ್ಞತೆಗಳು. ಕಾರ್ಯದರ್ಶಿಯಾಗಿ ಈ ಸಮ್ಮೇಳನದ ಕಾರ್ಯಕಲಾಪಗಳನ್ನು ಶ್ರದ್ದೆಯಿಂದ ನಿರ್ವಹಿಸಿದ ಡಾ. ಬಿ.ಸಿ. ಜವಳಿ ಮತ್ತು ಪ್ರೊ. ಎಸ್.ಎಸ್. ಭದ್ರಾಪೂರರವರಿಗೂ ಧನ್ಯವಾದಗಳು.

ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ
ಪ್ರಧಾನ ಸಂಪಾದಕರು
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು

ಕನ್ನಡ ಅಧ್ಯಯನ ಪೀಠ
ಕ.ವಿ.ವಿ. ಧಾರವಾಡ