ಹಬ್ಬವೆಂದರೆ ಉತ್ಸವ ಸಂತೋಷದ ಸಮಾರಂಭ. ಸಂಸ್ಕೃತ ಪರ್ವ ಶಬ್ದದ ತದ್ಭವ ಹಬ್ಬ. ಐಹಿಕ ಸುಖಸಾಧನೆಗೆ ನೆರವಾಗುವುದು ಹಬ್ಬದ ಒಂದು ಮುಖವಾದರೆ ಮೋಕ್ಷಸಾಧನೆಗಾಗಿ ಹಬ್ಬಗಳನ್ನು ಆಚರಿಸುವುದು ಇನ್ನೊಂದು ಮುಖ. ವೃತ ನಿಯಮಗಳನ್ನು ಎಲ್ಲ ದಿನಗಳಲ್ಲಿ ಆಚರಿಸಲಸಾಧ್ಯವಾಗಿರುವುದರಿಂದ ನಿಯತ ದಿನಗಳಲ್ಲಿ ಕಡ್ಡಾಯವಾಗಿ ದೇಹದಂಡನೆ ಮೂಲಕ ನಮಗೆ ನಾವೇ ಆತ್ಮಸಂಗಾತಿಗಳಾಗಿ ಕೆಲಸ ಮಾಡುವುದೇ ಹಬ್ಬ. ಸುಖವಾಗಲಿ ದುಃಖವಾಗಲಿ ನೆನಪಿಗಾಗಿ ಆಚರಿಸುತ್ತ ಬಂದ ದಿನವನ್ನು ಸಂಪ್ರದಾಯ ಮತ್ತು ಮೂಢ ನಂಬಿಕೆಯ ಕಟ್ಟಿನಲ್ಲಿಟ್ಟು ಪ್ರತಿವರ್ಷ ಖಚಿತ ದಿನದಂದು ಆಚರಣೆಗೆ ತರುವದು ಹಬ್ಬವಾಗಿದೆ.

ಮತಭೇದವಿಲ್ಲದೆ ಆಚರಿಸುವ ಜಾನಪದ ಹಬ್ಬಗಳನ್ನು ಹಬ್ಬದ ಹಿನ್ನೆಲೆಯನ್ನು ಕೂಲಂಕುಷವಾಗಿ ಮೀಟಿದಾಗ, ದುಃಖದ ನೆನಪಿಗಾಗಿರುವ ರೂಢಿ ವಿಧಿಕ್ರಿಯೆಗಳು ಕೆಲವೊಮ್ಮೆ ವಿಕಾರರೂಪ ಪಡೆದುಕೊಂಡು ಸಂತೋಷದ ಸಮಾರಂಭವೆನ್ನುವಂತೆ  ನಡೆದುಕೊಂಡು ಬಂದಿವೆ. ಅಂಥವುಗಳಲ್ಲಿ ಭಾರತೀಯ ಮುಸಲ್ಮಾನರು ಆಚರಿಸುವ ಮೊಹರಂ ಹಬ್ಬವೂ ಒಂದಾಗಿದೆ.

ಹಿನ್ನೆಲೆ :

ಮುಸ್ಲೀಮರ ಪವಿತ್ರಗ್ರಂಥ ಕುರಾನೇಷರೀಪದಲ್ಲಿ ಉಲ್ಲೇಖವಾಗಿರುವ ಆಚರಣೆಗಳೆಂದರೆ – ರಮಝಾನ್ ಮತ್ತು ಬಕರೀದ್, ಆದರೆ ರೂಢಿಯಲ್ಲಿರುವವು ತಿಂಗಳಿಗೊಂದು ಮುಸ್ಲಿಮರ ಜಿಲ್ ಹಿಜ್ ವರೆಗಿನ ಹನ್ನೆರಡು ತಿಂಗಳುಗಳಲ್ಲಿ ಮೊದಲನೆಯ ತಿಂಗಳು ಮೊಹರಂ ಈ ತಿಂಗಳಲ್ಲಿ ಇಸ್ಲಾಮದ ಬೇರುಗಳನ್ನು ಅಲುಗಾಡಿಸಿದಂಥ ಎಂಥ ಕಟುಕನ ಕರುಳೂ ಮಿಡಿಯುವಂಥ ಭಾರಿ ದುರಂತವೊಂದು ಜರುಗಿತು. ಆ ಘಟನೆಯನ್ನೇ ಕೆಲವು ಮುಸ್ಲಿಂ ಬಾಂಧವರು ಹಬ್ಬವೆಂದು ಪರಿಗಣಿಸಿದ್ದಾರೆ. ಆದರೆ ಅದು ಜನಾಭಿಪ್ರಾಯವನ್ನು ಕಡೆಗಣಿಸಿದ ಕಣ್ಣೀರ ಕಥೆ.

ಐತಿಹಾಸಿಕ ಚರಿತ್ರೆ :

ಸುಮಾರು ಹದಿಮೂರು ನೂರು ವರುಷಗಳ ಹಿಂದೆ ಹಜರತ್ ಇಮಾಮ ಹುಸೇನರು, ಸತ್ಯಕ್ಕಾಗಿ ಧರ್ಮರಕ್ಷಣೆಗಾಗಿ ಅರಬಸ್ತಾನದ ಕರ್ಬಲಾ ಮರುಭೂಮಿಯಲ್ಲಿ ಪ್ರಾಣಕೊಟ್ಟ ಕಥೆಯು; ಕೇವಲ ಮುಸ್ಲಿಮ್ ಬಾಂಧವರಿಗಷ್ಟೇ ಅಲ್ಲ, ಪ್ರತಿಯೊಬ್ಬ ಮಾನವನಿಗೂ ತಿಳಿಯಬೇಕಾಗಿದೆ.

ಹಜರತ್ ಇ | ಹುಸೇನರು ಹಜರತ್ ಪೈಗಂಬರರ ಮೊಮ್ಮಕ್ಕಳು, ಅರ್ಥಾತ್ ಅವರ ಮಗಳಾದ ಬೀಬಿ ಫಾತಿಮಾರವರ ಪುತ್ರರು. ಇವರು ಕ್ರಿ.ಶ. ೬೨೬ರಲ್ಲಿ ಜನಿಸಿ ಕ್ರಿ.ಶ. ೬೮೩ರಲ್ಲಿ ಹುತಾತ್ಮರಾದರು. ಇವರು ಬಾಲ್ಯದ ಏಳು ವರ್ಷಗಳನ್ನು, ತಾತ ಪೈಂಗಂಬರರ ಸನಿಹದಲ್ಲೂ ನಂತರದ ಮೂವತ್ತು ವರ್ಷಗಳನ್ನು ತಂದೆ ಹಜರತ್ ಅಲಿಯವರ ಬಳಿಯಲ್ಲೂ, ತರುವಾಯ ಬನಿಹಾಷೀಮರ ನಾಯಕರಾಗಿಯೂ ಕಳೆದರು. ಹುಸೇನರ ಜೀವನ ದುರಂತಮಯವಾಗಲು ಕಾರಣ ಆ ಕಾಲದ ಖಿಲಾಫತ್ ಚರಿತ್ರೆ.

[1]

ಸಾಮಾಜಿಕ ಧಾರ್ಮಿಕ ಸ್ಥಿತಿ – ಗತಿ :

ಪ್ರವಾದಿ ಹಜರತ್ ಮಹ್ಮದರ ಜನನಕ್ಕಿಂತ ಮೊದಲು ಮಕ್ಕಾ ಪಟ್ಟಣದ ಬುಡಕಟ್ಟಿನ ಪಂಗಡಗಳಲ್ಲಿ ಬನೀ ಹಾಷೀಮ್ ಬನಿ ಮಖ್ ಸೂಮ್ ಬನಿ ಉಮಯ್ಯ ಮನೆತನಗಳು ಮುಂದಾಗಿದ್ದವು. ಬನೀ ಹಾಷೀಮ್ ವಂಶದವರು, ಸಾಹಸ ಪಾಂಡಿತ್ಯ ಪ್ರತಿಭೆ ಮತ್ತು ಔದಾರ್ಯಗಳಿಗೆ ಹೆಸರಾಗಿದ್ದರೂ ಸಂಖ್ಯೆಯಲ್ಲಿ ಕಡಿಮೆ. ಬನಿಮಖ್ ಸೂಮರು ಧನಿಕರು ಸಾಹಸಿಗಳು ಮಹತ್ವಾಕಾಂಕ್ಷಿಗಳು. ಬನಿ ಉಮಯ್ಯರು ರಾಜತಂತ್ರ ನಿಪುಣರು ದಕ್ಷಸೇನಾನಿಗಳು ಧರ್ಮದ ಪಕ್ಷಪಾತಿಗಳು ಆಗಿದ್ದರು. ಈ ಪಂಗಡಗಳು ಮಕ್ಕಾದ ಒಡೆತನಕ್ಕಾಗಿ ಪವಿತ್ರ ಕಾಬಾದ ಮೇಲ್ವಿಚಾರಣೆಯ ಅಧಿಕಾರಕ್ಕಾಗಿ ಹೋರಾಡುತ್ತಿದ್ದವು.

ಹಜರತ್ ಮುಹ್ಮದ ಪೈಗಂಬರರು (ಕ್ರಿ.ಶ. ೫೭೦-೬೩೨) ದೇವರು ಒಬ್ಬನೇ ಮೂರ್ತಿಪೂಜೆ ನಿಷಿದ್ಧವೆಂಬ ತತ್ವ ಉಪದೇಶಿಸಿ ಅದರಂತೆ ನಡೆದರು ನಡೆಸಿದರು. ಮಖ್ ಸೂಮ್ ಉಮಯ್ಯ ಪಂಗಡದವರಿಗೆ ಇದು ಸರಿಬೀಳದೆ ಅವರು ಪೈಗಂಬರರ ಪರಮಶತ್ರುಗಳಾಗಿ ಹಾಷೀಮ್ ಬುಡ ಕಟ್ಟಿನವರ ನಾಯಕತ್ವವನ್ನು ಒಪ್ಪಿಕೊಳ್ಳಲಿಲ್ಲ. ಇದರಿಂದ ಪೈಗಂಬರರು ಬಹು ಕಷ್ಟ ನಷ್ಟ ಅನುಭವಿಸಿ ಮೆಕ್ಕಾ ಬಿಟ್ಟು, ಮದೀನಾದಲ್ಲಿ ನೆಲಸಿ ವರ್ಗ ಸಂಘರ್ಷಣೆಯ ಹತ್ತು ವರ್ಷಗಳಲ್ಲಿ ಕುರಯೀಷರ ಶಕ್ತಿ ಮುರಿದು ಅರೇಬಿಯಾದಲ್ಲಿ ಮುಸ್ಲಿಂ ಪ್ರಜಾಪ್ರಭುತ್ವ ಸ್ಥಾಪನೆ ಮಾಡಿದರು.

ಪೈಗಂಬರರ ಮರಣದ ಕೆಲವೇ ವರ್ಷಗಳಲ್ಲಿ ಪ್ರಜಾಪ್ರಭುತ್ವ ಪದ್ಧತಿಯ ಅನುಸಾರವಾಗಿ ಅವರ ಸಂಬಂಧಿಕರಾದ ಹಜರತ್ ಅಬೂಬಕರ (ಕ್ರಿ.ಶ. ೬೩೨-೬೩೪)ರು ನಂತರ ಹಜರತ್ ಉಮರ (೬೩೪-೬೪೪)ರು ಅಧಿಕಾರಕ್ಕೆ ಬಂದು ಖಿಲಾಫತ್ ಗದ್ದುಗೆ ಏರಿದರು. ಪೈಗಂಬರರು ಹಾಕಿದ ಮಾರ್ಗದಲ್ಲಿಯೇ ಚಾಚು ತಪ್ಪದೆ ನಡೆದರು. ಎರಡನೇ ಖಲೀಫ ಹ. ಉಮರರು, ಬನೂ ಉಮ್ಮಿಯವರ ಕುತಂತ್ರ ಪಿತೂರಿಗಳಿಗೆ ಬಲಿಯಾದರು. ಪ್ರಜಾಪ್ರಭುತ್ವದ ಬಹುಮತದಂತೆ ಮೂರನೆಯ ಖಲೀಫರಾಗಿ ಉಮಯ್ಯ ಪಂಗಡದ ಹಜರತ್ ಉಸ್ಮಾನರು (ಕ್ರಿ.ಶ. ೬೪೪-೬೫೬) ಆಯ್ಕೆಯಾದರೂ ಮೋಸದ ಬಲೆಗೆ ಆಹುತಿಯಾದರು. ನಾಲ್ಕನೇ ಖಲೀಫರಾಗಿ ಹಜರತ್ ಮುಹ್ಮದರ ಅಳಿಯಂದಿರಾದ ಹಜರತ್ ಅಲಿ (ಕ್ರಿ.ಶ. ೬೫೬-೬೬೨) ಚುನಾಯಿಸಲ್ಪಟ್ಟರು. ಸರ್ವ ಸಮತಾ ತತ್ವವನ್ನು ಸ್ಥಾಪಿಸುವ ಉದ್ದೇಶ ಹೊಂದಿದ ಇವರು ಉಮಯ್ಯರ ಇತರ ಕುರಯೀಷರ ಕಾಟಗಳನ್ನು ಸಹನೆಯಿಂದ ಸಹಿಸಿ ಐದು ವರ್ಷಕಾಲ ದಕ್ಷ ಅಧಿಕಾರ ನೀಡಿ ಕೊನೆಗೆ ಮೋಸದ ಅಸ್ತ್ರಕ್ಕೆ ಪ್ರಾಣತೆತ್ತರು[2] ನಂತರ ಅಲಿಯವರು ಹಿರಿಯ ಪುತ್ರ ಇಮಾಮ ಹಸನರನ್ನು ಜನತೆ ಖಲೀಫ ಪಟ್ಟಕ್ಕೆ ಆಯ್ಕೆಮಾಡಬಯಸಿತು. ಆದರೆ ಅಮೀರಮೊಆವಿಯಾ ತಾವೇ ಖಲೀಫರೆಂದು ಸಾರಿ ಖಿಲಾಫತ್ತಿನ ರಾಜಧಾನಿಯಾಗಿದ್ದ ಮದೀನಾವನ್ನು ತೊರೆದು ದಮಸ್ಕಸವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅಧಿಕಾರ ನಡೆಸಿದರು. ತಮ್ಮ ತರುವಾಯ ತಮ್ಮ ಮಗ ಯಜೀದನೇ ಖಲೀಫನೆಂದು ಸಾರಿದರು. ದೂರ್ತ ಯಜೀದನ ಕುತಂತ್ರದ ಫಲವಾಗಿ ಇ | ಹಸನ ಪಕ್ಷಪ್ರಾಶನದ ಮೂಲಕ ಮರಣಕ್ಕೀಡಾದರು.

ಧರ್ಮ ರಕ್ಷಕ ಹ |  ಇ | ಹುಸೇನರು :

ವಿಲಾಸಿ ಪುರುಷನಾದ ಯಜೀದ ದುಷ್ಟಸ್ವಭಾವಿಯೂ ಕ್ರೂರಿಯೂ ಆಗಿದ್ದನು. ಖಲೀಫರಾಗಲು ಅನರ್ಹವಾದ ಅವನನ್ನು ಧಿಕ್ಕರಿಸಿ ಯೋಗ್ಯರಾದ ಹಜರತ್ ಇಮಾಮ ಹುಸೇನರಿಗೆ ಜನ ಬೆಂಬಲ ನೀಡಿದರು. ಆದರೆ ಬಲಾಢ್ಯ, ಸೈನ್ಯ ಹೊಂದಿದ ಯಜೀದನು ತಾನೇ ಆರನೆಯ ಖಲೀಫನೆಂದು ಘೋಷಿಸಿಕೊಂಡು ಅತ್ಯಾಚಾರ ಅಕ್ರಮ ರೀತಿಯಿಂದ ಜನ ಬೆಂಬಲ ಪಡೆಯಲು ಯತ್ನಿಸಿದ. ಯಜೀದನಾಡಳಿತಕ್ಕೆ ಬೇಸತ್ತ ಸಿರಿಯಾದ ಜನ ಅಧಿಕಾರದಿಂದಿಳಿಸಲು ಇಮಾಮ ಹುಸೇನರಿಗೆ ಆಮಂತ್ರಣ ಕಳಿಸಿದರು. ಮೊದಮೊದಲು ಆಮಂತ್ರಣ ಸ್ವೀಕರಿಸದ ಇಮಾಮ ಹುಸೇನರು ಧರ್ಮರಕ್ಷಣೆಗಾಗಿ ಮುಸ್ಲಿಂ ಬಾಂಧವರ ಹಿತಕ್ಕಾಗಿ ಯಜೀದನ ಕ್ರೌರ್ಯಕ್ಕೆ ದುರಾಡಳಿತಕ್ಕೆ ಪ್ರತಿಭಟಿಸಿ ನಿಂತರು. ಮದೀನಾದಲ್ಲಿ ಬೆಂಬಲ ದೊರೆಯದೆ ಮೆಕ್ಕಾಕ್ಕೆ ಹೋದರು. ಅಲ್ಲಿಯೂ ಅದೇ ಪಾಡು ಕಾದಿತ್ತು. ಈ ಮಧ್ಯೆ ತಾವು ಇಲ್ಲಿಗೆ ಬಂದು ಬನೀ ಉಮಯ್ಯರ ಕಾಟದಿಂದ ಮುಕ್ತ ಮಾಡಬೇಕೆಂದು ವಿನಂತಿಸಿ ಕೂಫೇದಿಂದ ಹಲವಾರು ಕಾಗದಗಳು ಬರಲು ಹುಸೇನರು, ಕೂಫೇದ ಸ್ಥಿತಿ – ಗತಿ ಅರಿಯಲು ಸಂಬಂಧಿಕರಾದ ’ಮುಸ್ಲಿಂ’ ರನ್ನು ಕಳುಹಿಸಿದರು. ’ಮುಸ್ಲಿಂ’ ರು ಅಲ್ಲಿಗೆ ಹೋಗಿ ಮೂವತ್ತು ಸಾವಿರ ಜನ ಸಶಸ್ತ್ರ ಸೈನಿಕರು ತಮ್ಮ ಬೆಂಬಲಿಗರಾಗಿರುತ್ತಾರೆಂದು ತಿಳಿಸಲು ಇಮಾಮ ಹುಸೇನರು ಕೂಫೇದತ್ತ ಪ್ರಯಾಣ ಬೆಳೆಸಿದರು.

ಇದನ್ನೆಲ್ಲ ಅರಿತ ಯಜೇದನು, ಕುಫೇದ ಪ್ರಾಂತಾಧಿಕಾರಿಯಾಗಿ ಉಬಯಮಲ್ಲನನ್ನು ನೇಮಿಸಿದ. ಇವನು ಏಳುವ ದಂಗೆಯನ್ನು ಸದೆಬಡಿದು ಮೇಸೋಪೊಟೋಮಿಯಾದ ಕಣಿವೆಗಳಲ್ಲಿ ಬಲವಾದ ಸೈನ್ಯವನ್ನಿರಿಸಿ, ಕೂಫೇದ ಜನರ ಸಹಾಯಕ್ಕೆ ಬರುವ ಹುಸೇನರಿಗೆ ಲಗ್ಗೆಯಿಡಲು ಉಮರರಿಗೆ ಆಜ್ಞಾಪಿಸಿದ. ಯಜೀದನ ಕಡೆಯವರಿಂದ ಮುಸ್ಲಿಂರ ಕೊಲೆಯಾದ ವಾರ್ತೆ ತಿಳಿದು, ಹುಸೇನರು (ಕ್ರಿ.ಶ. ೬೮೦ ಮೊಹರಂ ತಿಂಗಳ ಎರಡನೇ ದಿನ) ತಮ್ಮ ಕುಟುಂಬ ಮತ್ತು ಅನುಯಾಯಿಗಳ ಜೊತೆ, ಕರ್ಬಲಾ ಮರುಭೂಮಿಯಲ್ಲಿ ಹರಿಯುತ್ತಿದ್ದ ’ದರಿಯಾ -ಎ-ಪುರಾತ್’ (ಯೂಫ್ರಟಿಸ್) ನದಿಯ ದಂಡೆಗೆ ಬಂದು ವಿರಮಿಸಿದರು. ಇಮಾಮ ಹುಸೇನರ ಸಂಗಡ ಹೆಂಡತಿ ಮಕ್ಕಳು ಅಕ್ಕತಂಗಿಯರು ತೀರ ಹತ್ತಿರದ ಸಂಬಂಧಿಗಳಾದ ವೃದ್ಧ ಗಂಡಸರು ಹೆಂಗಸರು ಹಾಗೂ ಆರು ತಿಂಗಳ ಮಗು, ಅಲಿ ಅಸ್ಗರ ಸಹಿತ ಕೇವಲ ಎಪ್ಪತ್ತೆರಡು ಜನರಿದ್ದರು. ಮರುದಿನ ಯಜೀದನ ಸುಮಾರು ಅರವತ್ತು ಸಾವಿರ ಸೈನಿಕರು ಅವರಿಗೆದುರಾಗಿ ಬಂದಿಳಿದರು.

ಕರ್ಬಲಾ ಮರಭೂಮಿಯಲ್ಲಿ :

ಉದುರರು, ಇಮಾಮ ಹುಸೇನರಿಗೆ ಪ್ರಯಾಣದ ಕಾರಣ ಕೇಳಿ ಅವರು ವಿವರಿಸಿದ ವಿಷಯವನ್ನು ಪ್ರಾಂತಾಧಿಕಾರಿ ಉಬಯದುಲ್ಲನಿಗೆ ಹೇಳಿ ಕಳಿಸಿದರು. ಯಜೀದನ ಅಧಿಕಾರಿಗಳು ಶರಣಾಗತನಾಗಿ ಕೂಫೇಗೆ ಬರಬೇಕೆಂದು ಹಠಹಿಡಿಯಲು ಹುಸೇನರು, ಈ ವಿಷಯ ಪರ್ಯಾಲೋಚಿಸಲು ’ಒಂದು ರಾತ್ರಿ’ ಅವಧಿ ಕೇಳಿದ ಪಡೆದರು.

ರಾತ್ರಿಯಲ್ಲಿ ಇಮಾಮ ಹುಸೇನರು ತಮ್ಮ ಜೊತೆಗಾರರೆಲ್ಲರನ್ನು ಕರೆದು ನಾನು ಇಲ್ಲಿ ಕಾಳಗಮಾಡಿ ರಾಜ್ಯಗಳಿಸಬೇಕೆಂದೇನು ಬಂದಿಲ್ಲ. ನಾಳೆ ಖತ್ತಲ್ (ಸಾವಿನ) ದಿನವಿರುವುದು. ಅದಕ್ಕಾಗಿ ನನ್ನನ್ನು ಬಿಟ್ಟು ಮರುಳಿ ಹೋಗುವವರು ಹೋಗಬಹುದು. ಬೆಳಕಿನಲ್ಲಿ ಎದ್ದು ಹೋಗಲು ಲಜ್ಜೆ ಎನಿಸುತ್ತಿದ್ದರೆ ನಾನು ದೀಪ ವಾರಿಸುತ್ತೇನೆ, ಆಗ ಕತ್ತಲಲ್ಲಿ ಹೋಗಬಹುದು’ ಎಂದು ಹುಸೇನರು ಕೂಡಲೇ ದೀಪವನ್ನು ನಂದಿಸಿದರು. [3] ಆದರೆ ಎಲ್ಲೊ ಕೆಲವರು ಮಾತ್ರ ಹೋಗಿ ಬಹುಮಂದಿ ಅವರೊಡನಿದ್ದು ಹೋರಾಡಿ ಮಡಿಯುವುದಾಗಿ ಪಣ ತೊಟ್ಟು ನುಡಿದರು. ಹುಸೇನರೂ ಒಪ್ಪಿದರು. ಇಳಿದುಕೊಂಡಿದ್ದ ಡೇರೆಗಳನ್ನೆಲ್ಲ ಜೊತೆ ಜೊತೆಗೆ ಬಿಗಿದು ಪಾಳೆಯದ ಹಿಂದೆ ದೊಡ್ಡ ಕಾಲುವೆ ತೋಡಿ ಸೌದೆ ತುಂಬಿ ಬೆಂಕಿ ಹೊತ್ತಿಸಿ ಹಿಮ್ಮೆಟ್ಟಲೂ ಆಸ್ಪದವಿಲ್ಲದಂತೆ ಮಾಡಿದರು.

ಮರುದಿನ ಇಮಾಮ ಹುಸೇನರು ತಮ್ಮ ಸ್ವಲ್ಪ ಮಂದಿ ಸೈನಿಕರೊಡನೆ ಒಂಟಿಯ ಮೇಲೆ, ಹಗೆಯ ಕಡೆ ನಡೆದು ಈ ರೀತಿ ನುಡಿದರು – ’ಓಕೂಪ್ಪೇದವರೆ  ಸಿರಿಯಾದವರೆ! ನಾನು ನಿಮ್ಮ ಪೈಗಂಬರರ ಬದುಕಿರುವ ಒಬ್ಬನೆ ಮೊಮ್ಮಗನಲ್ಲವೇ! ನಿಮ್ಮ ಆಸ್ತಿಯನ್ನು ನಾನಾದರೂ ಕಸಿದುಕೊಂಡನೆ ನಿಮ್ಮಲ್ಲಿ ಯಾರನ್ನಾದರೂ ಕೊಂದನೆ? ಇಸ್ಲಾಂ ಮತಕ್ಕೆ ವಿರುದ್ಧವಾಗಿ ನಾನೇನು ನಡೆದೆನೆ ನೀವೇ ನನ್ನನ್ನು ಆಮಂತ್ರಿಸಲಿಲ್ಲವೇ? ಇದಕ್ಕೆ ಕೆಲವರು ನೀವು ತಪ್ಪೆಸಗದಿದ್ದರೂ ನಿಮ್ಮ ತಂದೆ ನಮ್ಮವರನ್ನು ಕೊಂದ ತಪ್ಪಿಗಾಗಿ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತೇವೆ ಎಂದರು.[4] ಸಂಧಾನದ ಪ್ರಯತ್ನಗಳು ವಿಫಲವಾದವು. ಶತ್ರುಗಳು ಸಾಗರೋಪಾದಿಯಲ್ಲಿ ಹುಸೇನರನ್ನು ಮುತ್ತಲು ಹವಣಿಸಿದರು. ಯುದ್ಧ ಪ್ರಾರಂಭವಾಯಿತು. ಅರಬರ ಹಳೆಯ ರೂಢಿಯಂತೆ ಇಮಾಮ ಹುಸೇನರ ಸಂಗಡಿಗನು ಒಬ್ಬೊಬ್ಬ ರಣಭೂಮಿಗೆ ಬಂದು ಶತ್ರುಗಳೊಡನೆ ಹೋರಾಡಿ ವೀರ ಮರಣ ಹೊಂದಿದರೆ, ಹುಸೇನರು ಅವರ ಹೆಣವನ್ನೆತ್ತಿ ತಮ್ಮ ಡೇರೆಯೆದುರು ಇಡುತ್ತಿದ್ದರು. ಸತ್ತವರಲ್ಲಿ ಅಬ್ಬಾಸ ಅಲಿ, ಇಮಾಮ ಹುಸೇನರ ಮಗ ಹದಿನಾರು  ವರುಷದ ಕಾಶೀಮ ಧೂಲಾ, ಅಲಿ ಅಕ್ಬರ ಇದ್ದರು. ಪ್ರಾಣದ ಪರಿವಿಯಿಲ್ಲದೆ ಹೋರಾಡಿದರು ಹುಸೇನರ ಸಂಗಡಿಗರು.

ಮೂರು ದಿನಗಳಿಂದಲೂ ಹುಸೇನರ ಪರಿವಾರದವರಿಗೆ ನೀರಿಲ್ಲ. ಕಣ್ಣೆದುರಿಗಿದ್ದ ನದಿಗೆ ವೈರಿಗಳ ಸರ್ಪಕಾವಲು ಆರು ತಿಂಗಳ ಮಗು ಅಲಿ ಅಸ್ಗರ ನೀರಿಲ್ಲದೆ ಒದ್ದಾಡುತ್ತಿದ್ದ. ಇಮಾಮ ಹುಸೇನರು ರಣರಂಗದಿಂದ ಮರುಳುತ್ತಿದ್ದಂತೆ ಮಗುವಿನ ಸ್ಥಿತಿ ನೋಡಿ ಎತ್ತಿಕೊಂಡು  ನದಿಗೆ ತಲುಪಿದರು. ಬೊಗಸೆಯ ನೀರನ್ನು ಬಾಯಲ್ಲಿ ಹಾಕುತ್ತಿದ್ದಂತೆ ವೈರಿಗಳ ಬಾಣವೊಂದು ಮಗುವಿನ ಗಂಟಲನ್ನು ಹರಿಯಿತು. ಇಮಾಮ ಹುಸೇನರ ಕೈ ನೀರೆಲ್ಲ ರಕ್ತಮಯವಾಯಿತು. ನೀರಿಗಾಗಿ ಪರಿತಪಿಸಿ ನೀರಡಿಯಲ್ಲೇ ಪ್ರಾಣ ಬಿಟ್ಟಿತು ಮಗು.[5]

ಮೊಹರಂ ತಿಂಗಳ ಹತ್ತನೆಯ ದಿನ ಆದಿತ್ಯ ನೆತ್ತಿಯ ಮೇಲಿದ್ದ. ಭಯಂಕರ ಕಾಳಗ ನಡೆದೇ ಇದ್ದಿತು. ಜೋಹರ ನಮಾಜು ಮುಗಿಸಿಕೊಂಡು ಹುಸೇನರು ತಮ್ಮ ಅಳಿದುಳಿದ ಸಂಗಡಿರೊಡನೆ ನಡೆದರು. ಇಮಾಮ ಹುಸೇನರ ಮೇಲೆ ಅಪಾರ ಶತ್ರು ಸೈನ್ಯ ಮುತ್ತಿತು. ಎಡಬಲಗಳಲ್ಲಿ ಶತ್ರುಗಳನ್ನು ಸಂಹರಿಸುತ್ತ ಮುನ್ನಡೆಯುತ್ತಿದ್ದಂತೆ, ಯಜೀದನ ಸೈನ್ಯದವನಾದ ’ಶಮರ’ ಎಂಬವನು ಹಿಂದಿನಿಂದ ಬಂದು, ಹುಸೇನರ ಬೆನ್ನಲ್ಲಿ ಬಲವಾಗಿ ಬರ್ಚಿಯುನ್ನಿರಿದ ಮತ್ತೊಬ್ಬ ವೈರಿ ಸೈನಿಕ ಅವರ ಕೈ ಮತ್ತು ಕತ್ತು ಕತ್ತರಿಸಿದನು. ಇಮಾಮ ಹುಸೇನರ ಹೆಂಡತಿ ಸೋದರಿಯರು, ಅಸ್ವಸ್ಥರಾಗುಳಿದಿದ್ದ ಒಬ್ಬನೇ ಮಗ ಝೈನುಲ್  ಆಬೇದಿನ್ ಮೊದಲಾದವರನ್ನೆಲ್ಲಾ ಸೆರೆ ಹಿಡಿದು ಯಜೀದನ ಸೈನಿಕರು ದರ್ಬಾರಿಗೆ ತಂದರು.

ಈ ಘೋರ ದುರಂತವನ್ನು ಕಂಡ ಮೆಕ್ಕಾ ಮತ್ತು ಮದೀನಾ ಜನರು ರೊಚ್ಚಿನಿಂದ ಉಮಯ್ಯರ ಮೇಲೆ ದಂಗೆಯೆದ್ದರು. ಉಮಯ್ಯರ ಕಡೆಯ ಸಿರಿಯಾದ ಸೈನ್ಯ ಮದೀನಾ ಜನರನ್ನು ಸೋಲಿಸಿ ಊರು ಕೊಳ್ಳಿ ಹೊಡೆದು ಸೇಡು ತೀರಿಸಿಕೊಂಡಿತು. ಮಕ್ಕಾಕ್ಕೆ ಮುತ್ತಿಗೆ ಹಾಕಿ ಕೈವಶ ಮಾಡಿಕೊಳ್ಳುವುದರೊಳಗಾಗಿ ಯಜೀದನ ಮರಣದ ಸುದ್ದಿ ತಲುಪಿತು.

ಬಸಿ ಉಮಯ್ಯರು ಅರವತ್ತು ವರ್ಷಕಾಲ ರಾಜ್ಯವಾಳಿ ಚಕ್ರಾಧಿಪತ್ಯ ವೃದ್ಧಿಸಿದರೂ ಕೊನೆಗೆ ಬಸೀ ಹಾಷೀಮರು ದಂಗೆಯೆದ್ದು ವಿಜಯಿಗಳಾಗಿ ’ಬಸೀ ಅಬ್ಬಾಸ’ ಕಲೀಫರಾದರು. ನಂತರ ಸಿರಿಯಾ ಇಜಿಪ್ತ, ಇರಾನ್ ಗಳಲ್ಲಿ ಬಾಗದಾದಿನ ಕಲೀಫರು ಧರ್ಮಗುರುವಾಗಿ ನಿಂತರು. ಮಧ್ಯ ಇರಾನ್ ಮೆಸೋಪೊಟೇಮಯವನ್ನಾಳಿದ ಬುವಯ್ ಹಿ ವಂಶಜರು ಹಜರತ್ ಅಲಿಯವರ ಸಂತತಿಗೆ ಭಕ್ತಿಯಿಂದ ನಡೆದುಕೊಂಡು ಕರ್ಬಲಾದ ದುರಂತ ಪ್ರಕರಣದ ನೆನಪಿಗಾಗಿ ಕೂಟ ಕೂಡುವುದಕ್ಕೆ ಪ್ರೋತ್ಸಾಹ ಕೊಟ್ಟರು. ಇಂಥ ದುರಂತದ ಕಥೆ, ಇಮಾಮ ಹುಸೇನರ ಆತ್ಮ ಬಲಿದಾನದ ಆದರ್ಶ, ಜನಮನದಲ್ಲಿ ಹಸಿರಾಗಿ ಉಳಿಯುವಂತೆ ಮಾಡಿದ ಒಂದು ಪ್ರಯತ್ನವೇ ಮೊಹರಂ ಆಚರಣೆ.

ಭಾರತದಲ್ಲಿ ಮೊಹರಂ :

ಭಾರತಕ್ಕೆ ಮಸಾಲೆ ವ್ಯಾಪಾರಕ್ಕೆಂದು ಬಂದ ಅರಬ್ಬ ನಿವಾಸಿಗಳು ಮಲಬಾರಿ ಪ್ರದೇಶಗಳಲ್ಲಿ ನೆಲೆ ನಿಂತು ರಾಜ್ಯಭಾರ ಕೈಗೊಂಡರು. ಮಾನವೀಯ ಮೌಲ್ಯ ಸಾರ್ವಕಾಲಿಕ ಸತ್ಯದ ಹೋರಾಟದಿಂದ ಕೂಡಿದ ಕರ್ಬಲಾ ಕಾಳಗದ ಕಥೆಯನ್ನು ಮುಸಲ್ಮಾನರು ಮೊಹರಂ ತಿಂಗಳಿನಲ್ಲಿ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲೆಂದು ಉಪವಾಸ, ಕುರಾನ್ ಪಠಣ ದಾನ ಧರ್ಮ ಮಾಡುತ್ತಿದ್ದರು. ಇಂಥ ಆಚರಣೆ ತೈಮುರಲೇನ (ಕ್ರಿ.ಶ. ೧೩೬೯) ನ ಕಾಲದಲ್ಲಿ ವಿಕಾರ ರೂಪ ತಾಳಿ ಭಾರತದಲ್ಲಿ ಆಚರಿಸಲ್ಪಟ್ಟಿತು. ಸಾಮ್ರಾಟ ಅಕ್ಬರ (ಕ್ರಿ.ಶ. ೧೫೫೬-೧೬೦೫) ದೀನ್ -ಎ – ಇಲಾಹಿ ಸ್ಥಾಪಿಸಿದ ನಂತರ ಮೊಹರಂ ಹಬ್ಬವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಜಾನಪದರು ಆಚರಿಸತೊಡಗಿದರೆಂದು ಹೇಳಿಕೆ, ಆದಿರ‍್ ಶಾಹಿ  ರಾಜವಂಶಜರಿಂದ ಕರ್ಬಲಾವು ಸಂಸ್ಕಾರ ಪಡೆಯಿತೆಂದು ತಿಳಿದು ಬರುತ್ತದೆ.[6]

ಜಾನಪದದಲ್ಲಿ ಮೊಹರಂ ಆಚರಣೆ :

ಮುಸಲ್ಮಾನರ ವರ್ಷ ತಿಂಗಳು ವಾರಗಳಿಗೆ ಚಂದ್ರ ದರ್ಶನವೇ (ಚಾಂದರಾತ) ಕಾರಣ. ಆದುದರಿಂದ ಅವರು ಚಂದ್ರನಿಂದಲೇ ತಮ್ಮ ಹಬ್ಬದ ದಿನಗಳನ್ನು ನಿರ್ಧರಿಸುವರು. ಮೊಹರಂ ತಿಂಗಳು ಪಹಿಲಿ ತಾರೀಖಿನಂದು ಚಂದ್ರನನ್ನು ನೋಡಿ (ಆಲಾವಿ) (ಆವಾಲಾ) ಗೆ ಪಶ್ಚಿಮಾಭಿಮುಖವಾಗಿ ನಿಂತು ಮುಲ್ಲಾಸಾಹೇಬರು ಓದಿಕೆ ಹಾಕಿ ಗುದ್ದಲಿಯಿಂದ ಐದು ಸಾರೆ ಕಚ್ಚು ಹಾಕುವರು. ಬೇಡಿಕೊಂಡ ಶೋಕದಾಚಾರಣೆಯೆಂದು ತಿಳಿದುಕೊಂಡ ಮುಸ್ಲಿಂ ಬಾಂಧವರು, ಅಂದಿನಿಂದ ಹತ್ತು ದಿನಗಳವರೆಗೆ ರೋಜಾ (ಉಪವಾಸ) ಇರಲು ಆರಂಭಿಸಿ; ವಸ್ತ್ರದಾನಬ ಅನ್ನದಾನ ಮಾಡುತ್ತ ಕುರಾನ್ ಪಠಣ ಕೈಕೊಳ್ಳುವರು.

ಮರುದಿನ ಮುಂಜಾನೆ ಓಣಿಯ ಮಕ್ಕಳು ಅಲಾವಿಗೆ ಕಚ್ಚು ಬಿದ್ದುದು ಕಂಡು ಉತ್ಸಾಹದಿಂದ ಆಲಾವಿತೋಡಿ ಗೂಡಿನಲ್ಲಿಯ ಮಣ್ಣಿನ ಕುಡಿಕೆ ಹುಡುಕಿ ಅದರಲ್ಲಿಯ ದುಡ್ಡುಗಳೊಂದಿಗೆ ಮುಲ್ಲಾನವರ ಮನೆ ತಲುಪಿಸುವರು. ಆ ಹಣವನ್ನು ಬೇನೆ (ರೋಗ) ಬಿದ್ದ ಮಕ್ಕಳ ಕೊರಳಲ್ಲಿ ಹಾಕಿದರೆ ರೋಗ ಗುಣವಾಗುವುದೆಂದು ಜಾನಪದರಲ್ಲಿ ನಂಬಿಗೆ.

ಗುದ್ದಲಿ ಹಾಕುವುದಕ್ಕಿಂತ ಮೊದಲು ಮುಸ್ಲಿಂಮರು ಮನೆ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ಉಡುವ – ತೊಡುವ, ಹಾಸುವ – ಹೊದೆಯುವ ಅರಿವೆಗಳನ್ನು ನೀರಿಗೆ ಹಾಕಿ ಸ್ವಚ್ಛಗೊಳಿಸಿದರೆ, ಬಾಬು ಸ್ವೀಕರಿಸುವ ಮುಲ್ಲಾನವರು ದೇವರಿಡುವ ಕೋಣೆ ಶುಭ್ರಗೊಳಿಸಿ, ಉಡುಗೋರೆ ಮಡಿ ಮಾಡಿ ಕೈ ದೇವರು ಬೆಳಗುವರು ಕರ್ಬಿಲಾ ಕಾಳಗದ ಕಥೆ ಹೊತ್ತಿಗೆಗಳನ್ನು ಹೊರತೆಗೆದು ಹಾಡಬಲ್ಲವರು. ಮತ ಭೇದವಿಲ್ಲದೆ ಒಂದೆಡೆ ಕೂಡುವರು. ಹೆಜ್ಜೆಮಜಲುಗಳು ಹಾಡಿ ಕುಣಿಯಲು ಸಾಧನೆ ಪ್ರಾರಂಭಿಸುವವು.

ಐದನೆಯ ದಿನ :

ಮೊಹರಂ ತಿಂಗಳ ಐದನೆಯ ತಾರೀಖಿಗೆ ಸಂಜೆಗೆ ಊರ – ಪರ ಊರ ಹೆಜ್ಜೆ ಮೇಳಗಳು ಹಲಿಗೆ ಕಹಳೆಯೊಂದಿಗೆ ದೇವರು ತರುವ ಸ್ಥಳದಲ್ಲಿ ಸೇರುತ್ತವೆ. ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಿದ ಮುಸ್ಲಿಮರು ತಲೆ ಮೇಲೆ ಪೀರಾಂಗಳ ಗಂಟು ಹೊತ್ತು ದೀನ್ ಜಗಾಯಿಸುತ್ತ ದೇವರಿಡುವ ಕೋಣೆಯಲ್ಲಿ (ಮಸೀದಿಯಲ್ಲಿ) ಒಂದೊಂದಾಗಿ ಇಳಿಸಿ ಉಡುಗೊರೆ ಉಡಿಸಿ ಡೋಲಿ (ತಾಝಿಯಾ) ಗಳಲ್ಲಿ ನಿಲ್ಲಿಸುವರು. ಅಲಂಗಳು ಒಂದು ಎರಡು ಮೂರು ನಾಲ್ಕು ಐದು ಬೆರಳಿನ ರಾಗಲ್ ಆಕಾರದ, ಅರ್ಧ ಚಂದ್ರಾಕೃತಿಯ ರೂಪದಲ್ಲಿದ್ದು, ತಾಮ್ರ, ಹಿತ್ತಾಳೆ ತವರು ಬೆಳ್ಳಿಯಿಂದ, ಮಾಡಿದವುಗಳಾಗಿರುತ್ತವೆ. ಇವು ಕರ್ಬಲಾ ಕಾಳಗದಲ್ಲಿ ವೀರಮರಣ ಹೊಂದಿದ ಹಸನ ಹುಸೇನ, ಮದಾರಸಾಬ, ಅಬ್ಬಾಸ ಅಲಿ, ಕಾಶೀಮಸಾಬ, ಅಲಿ ಅಕ್ಬರ ಹಸ್ತಗಳ ನೆನಪು ತರುವ ಸಂಕೇತಗಳಾಗಿರುತ್ತವೆ. ಈ ಸಂಕೇತಗಳನ್ನು ರಂಗುರಂಗಿನ ಬಟ್ಟೆಗಳಿಂದ ಸಿಂಗರಿಸುವರು. ಅಲ್ಲದೆ ಪ್ರತಿದಿನ ಮುಂಜಾನೆ – ಸಂಜೆ ಮಸೀದಿಯಲ್ಲಿ ನಗಾರಿ ನೌಬತ್ತು ತಾಸೆ ಭಜಂತ್ರಿ ನುಡಿಸುವರು.

ಅಂದು ಊರ ಮುಲ್ಲಾನವರ ಮಹಿಳೆಯರು ಮಕ್ಕಳು ಹಸಲಿ ಲಾಡಿ ಊದುಬತ್ತಿಯೊಂದಿಗೆ ಧೀನೆನ್ನುತ್ತ ಪೀರಾಂಗಳನ್ನಿಟ್ಟಲ್ಲಿ ಬಂದು ಓದಿಕೆ (ಘಾತಿಹಾ) ಹಾಕಿಸಿ ನವಿಲು ಗರಿಯಿಂದ ಆಶೀರ್ವಾದ ಪಡೆದು ಭಯಭಕ್ತಿಯಿಂದ ಡೋಲಿಗೆ ಕೈದೇವರಿಗೆ ನಮಸ್ಕರಿಸಿ, ಅಂಗಾರ (ಊದಿ) ಹಚ್ಚಿಕೊಳ್ಳುವರು. ಓದಿಕೆ ಸಕ್ಕರೆಯನ್ನು ನೆರೆದ ಜನರಿಗೆ  ಹಂಚಿ, ಹಸಲಿ ಲಾಡಿ ಗಜರಾ ಧರಿಸಿ ಫಕೀರರಾಗುವರು.

ಯಜೀವನ ಜನ ಕರ್ಬಲಾ ಕಾಳಗದಲ್ಲಿ ಇಮಾಮ ಹುಸೇನರ ಪರಿವಾರದವರಿಗೆ ಅನ್ನ ನೀರು ಸಿಗದಂತೆ ಮಾಡಿದಾಗ ಮಕ್ಕಳ ಭಿಕ್ಷೆ ಬೇಡಿದರೆಂದು ಅವರ ನೆನಪಿಗಾಗಿ ಫಕೀರರಾದ ಬಾಲಕರು ಮನೆ ಮನೆಗೆ ಹೋಗಿ ನೀಡಿಸಿಕೊಂಡ ಗೋಧಿ ಜೋಳ ಕಾಳು ಅಕ್ಕಿ ಬೆಲ್ಲದ ಮೇಲೆ ಹತ್ತು ದಿನ ಕಳೆಯುವರು. ವೈರಿಗಳ ಕರುಳು ಹರಿದು ಕೊರಳಲ್ಲಿ ಧರಿಸಿ ಮೆರೆದಾಡಿದ ಹುಸೇನರ ಅನುಯಾಯಿಗಳ ನೆನಪಿಗಾಗಿ ಹಸಲಿ ಲಾಡಿ ಹಾಕಿಕೊಳ್ಳುವುರೆಂದು ಕೆಲವರು ತರ್ಕಿಸಿದರೆ, ರೋಗ ಪೀಡಿತರಾದವರು ಗುಣವಾದರೆ ಹರಕೆ ತೀರಿಸಲು ಫಕೀರರಾಗಿ ಐದು ಮನೆ ಭಿಕ್ಷೆ ಬೇಡುವರೆಂದು ಕೆಲವರ ನಂಬಿಗೆ. ಅದೇನೆ ಇದ್ದರೂ ದೇವರು ಕುಳಿತ ದಿನ ಮತ್ತು ಮರುದಿನ ಆಸಕ, ಹಿಂದು-ಮುಸಲ್ಮಾನರು ಫಕೀರರಾಗುವುದು ರೂಢಿ. ಊರ ಆಯಾಗಾರರು ಹರಿಜನರು ಹರಕೆ ಹೊತ್ತ ಹುಲಿ ವೇಷಧಾರಿಗಳು ಫಕೀರರಾಗಿ ಊರೂರು ತಿರುಗಿ ಜೋಳ ಕಾಳು ಹಣ ಸಂಗ್ರಹಿಸುವುದು ಇತ್ತೀಚೆಗೆ ಕಂಡು ಬರುತ್ತದೆ. ಸಂಗ್ರಹಿಸಿದ ಧಾನ್ಯಗಳಿಂದ ಕೆಲವರು ಅಡಿಗೆ ಮಾಡಿ ಮಕ್ಕಳಿಗೆ ಊಟ ಮಾಡಿಸುವರು.

ಇವೆಲ್ಲ ರೂಢಿ ವಿಧಿ ಕ್ರಿಯೆಗಳನ್ನು ನೋಡಿದಾಗ ಹಳ್ಳಿವಾಸಿ ಹಿಂದುಗಳು ಮುಸ್ಲಿಮರ ಆಚರಣೆಯ ಪ್ರಭಾವಕ್ಕೆ ಒಳಗಾಗಿರುವುದು ಸತ್ಯ. ಹಾಗೆ ಮುಸ್ಲಿಮರು ಸಹ ಯುಗಾದಿ ಕಾರುಹುಣ್ಣಿಮೆ, ನಾಗರಪಂಚಮಿ, ನವರಾತ್ರಿ ಮೊದಲಾದ ಹಬ್ಬ ಹರಿದಿನಗಳಿಗೆ ಮಾರು ಹೋಗಿರುವರು. ಧಾರವಾಡ ಜಿಲ್ಲೆಯ ರೋಣದ ಶಿವಾನಂದ ಮಠದ ಸೈದುಸಾಬ ಅಜ್ಜನವರು ನವಲಗುಂದ ತಾಲೂಕಿನ ಸೊಟಕನಹಾಳ, ನಾಗನೂರ ಗ್ರಾಮಗಳಿಗೆ ನವರಾತ್ರಿಗೊಮ್ಮೆ ದೇವಿ ಪುರಾಣ ಹೇಳಲು ಇಂದಿಗೂ ಬರುವುದು, ಯಮನೂರ ರಾಜೇಭಕ್ಷಾರ ದರಗಾದಲ್ಲಿ ಓದಿಕೆ ಹಾಕಲು ರಜಪೂತ ವಂಶದವರಿರುವುದು ಹಿಂದು ಮುಸ್ಲಿಂ ಮತೈಕ್ಯಕ್ಕೆ ಸಾಕ್ಷಿಯಾಗಿ ನಿಂತಿವೆ.

ಉತ್ತರ ಕರ್ನಾಟಕದ ಗ್ರಾಮೀಣ ಜನಗಳಿಗೆ ಅಲ್ಲಾಸಾಬ ಅಲಾಯಪ್ಪನಾದರೆ ದಕ್ಷಿಣ ಕರ್ನಾಟಕದವರಿಗೆ ಅಲ್ಲಿಬಾಬಾ ಬಾಬಯ್ಯನಾಗಿದ್ದಾನೆ. ಮುಸ್ಲಿಮರೇ ಇಲ್ಲದ ದೊಡ್ಡ ಕಡತೂರ, ಗುಡಿಸಾಗರಗಳಲ್ಲಿ ಮೊಹರಮ್ ದ ಆಚರಣೆ ಕಾಣುತ್ತೇವೆ. ಇವು ಭಾರತೀಯ ಜನಜೀವನದಲ್ಲಿ ಬೆಳೆದು ಬಂದಿರುವ ಮತೀಯ ಸೌಹಾರ್ದ ಧರ್ಮ ಸಹಿಷ್ಣುತೆಗಳಿಗೆ ಜೀವಂತ ನಿದರ್ಶನಗಳು.[7]

ಮೊಹರಮ್ ದ ಚಾಂದರಾತ ಕಂಡ ದಿನ ಕುಳಿತ ಕೆಲ ಅಲಮ್ ಗಳು ಏಳನೆಯ ದಿನಕ್ಕೆ ಹೊಳೆಗೆ ಹೋಗುವವು. ಇವು ಹ| ಇ| ಹುಸೇನರ ಅನುಯಾಯಿಗಳು. ಹುತಾತ್ಮರಾದವರ ನೆನಪಿಗಾಗಿಡುವ ಪೀರಾಂಗಳು. ಇವಕ್ಕೆ ’ಏಳು ದಿನದ ದೇವರು’ ಎಂದು ಹೆಸರು, ಎಂಟನೆಯ ದಿನ ಸಂದಲ (ಗಂಧ) ರಾತ್ರಿ, ಇದಕ್ಕೆ ’ಖಾಸೀಂ ಖತಲ್’ ಎಂದೂ ಕರೆವರು. ಈ ದಿನ ಗಂಧ ಊದು, ಊದುಬತ್ತಿ ಜೋಳದ ಕಿಚಡಿಯ ಎಡೆಯನ್ನು ಅಲಾಯಿ ದೇವರಿಗೆ ಅರ್ಪಿಸುವರು. ಮರುದಿನ ಖತಲ್ ರಾತ್ರಿ.

ಖತಲ್ ರಾತ್ರಿ :

ಮೊಹರಂ ತಿಂಗಳ ಒಂಬತ್ತನೆಯ ದಿನ ರಾತ್ರಿಯನ್ನು ವೀರಮರಣ ಹೊಂದಿದ ಇಮಾಮ ಹುಸೇನರ ಅನುಯಾಯಿಗಳ ನೆನಪಿಗಾಗಿ ಆಚರಿಸುವರು. ಇಂದು ಇಡೀ ಹಗಲು ರಾತ್ರಿ ಆಗ್ಗಿ ತುಳಿದು ದೇವರೆದುರು ಶೋಕಗೀತೆ ಹಾಡುವರು. ಇಸ್ಲಾಮ್ ಮತದ ನಿಷ್ಠಾವಂತರು ಯಾವುದೇ ತರದ ಅಡಿಗೆ ಮಾಡುವುದಿಲ್ಲ.

ಈ ಸಂದರ್ಭದಲ್ಲಿ ಪುರುಷರು ಕಪ್ಪು ಸಮವಸ್ತ್ರ ಧರಿಸಿ, ಎದೆ – ಎದೆ ಬಡಿದುಕೊಳ್ಳುತ್ತ, ಮೈಮೇಲಿನ ಬಟ್ಟೆ ಹರಿದುಕೊಳ್ಳುತ್ತ ’ಇಬ್ನೆ ಜ್ಹಹೆರಾ ವಾ ವೈಲಾ. ವಾ ವೈಲಾ ಹಾಯ್ ಹಾಯ್’ ಎಂದು ನುಡಿದರೆ, ಕೆಲವರು ಮುಳ್ಳಿನಾಕಾರವ ಹಿಡಿಕೆಯನ್ನು ಸರಪಳಿಗೆ ಕಟ್ಟಿ ಕೈಯಲ್ಲಿ ಹಿಡಿದು ಬರಿದಾದ ಮೈಮೇಲೆ ರಕ್ತ ಸೋರುವ ಹಾಗೆ ಬಡಿದುಕೊಳ್ಳುತ್ತ ಯಾ ಹಸನ್ ಯಾ ಹುಸೇನ್ ಎನ್ನುವರು. ಈ ರೀತಿ ಶಿಕ್ಷಿಸಿಕೊಳ್ಳುವಾಗ ಅತೀರಕ್ತ ಸೋರಿ ಮೂರ್ಛೆ ಹೋದರೆ, ಮರಣ ಹೊಂದಿದರೆ ಶುಭವೆಂದು ಜಾನಪದರ ನಂಬಿಗೆ. ಮಹಿಳೆಯರು ಸಹ ಕಪ್ಪು ಸಮವಸ್ತ್ರ ಧರಿಸಿ ತಲೆಗೂದಲು ಹರಡಿಕೊಂಡು ದುಃಖ ಮಾಡುವರು. ಈ ಬಗೆ ಶೋಕ ಆಚರಿಸುವುದಕ್ಕೆ ’ಮಾತಂ’ ಎಂದು ಕರೆಯುವರು. ಈ ’ಮಾತಂ’ ಆಚರಿಸುವರು ’ಷಿಯಾ’ ಮುಸ್ಲಿಮರು. ’ಸುನ್ನಿ’ ಮುಸ್ಲಿಮರು ಆಚರಿಸುವುದಿಲ್ಲ.[8] ರಾಯಚೂರ ಹೊಸಪೇಟೆ ಹೈದ್ರಾಬಾದ ಪ್ರದೇಶಗಳಲ್ಲಿ ಇಂಥ ಸಂಪ್ರದಾಯವಿದ್ದರೆ, ಉತ್ತರ ಕನ್ನಡ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ, ಮೊಹರಮ್ ದ ಯಾವುದೇ ವಿಧವಾದ ಆಚರಣೆ ಬಳಕೆಯಲ್ಲಿಲ್ಲ[9].

ಹಬ್ಬದ ರೂಢಿ:

ಹಬ್ಬ ಬರುವ ಮೊದಲು ಬೇಡಿಕೊಂಡು ವರ ಪಡೆದವರು ಖತಲ್ ರಾತ್ರಿಯಂದು, ಮಡಿಯಿಂದ ಮೀಸಲು ನೀರು ತಂದು ಮಾದ್ಲಿ (ಮಲೀದಾ) ಕುದುರಿ (ಗೋಢೆ) ಬಿರಂಜಿ ಅನ್ನಾ, ಕಿಚಡಿ, ಕಂದೂರಿ ಅಡಿಗೆ ಮಾಡಿ, ತೆಂಗಿನಕಾಯಿ, ಕೊಬ್ಬರಿ ಗಿಟಗ, ಲಿಂಬೆಹಣ್ಣು, ಉತ್ಪತ್ತಿ ಎಡಿಗಳನ್ನು ಲಾಡಿಯಿಂದ ಕಟ್ಟಿ ಎಣ್ಣಿಬತ್ತಿ, ಊದುಬತ್ತಿ, ಊದು ಗಂಧ ಶರಬತ್ತಿನ ಎಡೆ ತಯಾರಿಸಿ ಎಡೆಕೊಡಲು ಸಿದ್ಧವಾಗುವರು. ಹಲಗೆಯ ನಾದ ಕಹಳೆಯ ನಿನಾದ ಓಣಿಯಲ್ಲಿ ಕೇಳಿ ಬರುವುದೊಂದೇ ತಡ ಹೊರಡುವರು. ಕೆಂವಸಲ್ ಭೌಂವಸಲ್ ಧೂಲಾ, ದೋಸ್ತರ, ನುಡಿಯುತ್ತಾ ಅಲಾವಿಗೆ ಕಟ್ಟಡದ ಗುಮಜಿನ ಸುತ್ತ ಐದು ಸಾರೆ ಸುತ್ತುವರು. ಹರs ಹೊತ್ತುವರು ಹೀಗೆ ಸುತ್ತುವಾಗ ದೀಡ ನಮಸ್ಕಾರ ಹಾಕುವರು. ಐದು ಸುತ್ತಿನ ನಂತರ ತಂದ ಹಿಡಿ ಕಟ್ಟಿಗೆ ಅಲಾವಿಕುಣಿಯಲ್ಲಿ ಚೆಲ್ಲಿ ಫಾತಿಹಾ ಮಾಡಲು ಡೋಲಿಯ ಎದುರು ಎಡೆಗಳನ್ನು ಅರೆತೆರೆದು ಇಡುವರು.

ರಂಗು ರಂಗಿನ ಸುನೇರಿ ಹಾಳಿ, ಪರಿಪರಿ ಜಾಲರಿಯಿಂದ ಸಿಂಗರಿಸಿದ ಡೋಲಿಯು ಗ್ಯಾಸಿನ ಬೆಳಕಿನಲ್ಲಿ ಭಕ್ತರಿಗೆ ಭಕ್ತಿ ಹುಟ್ಟಿಸುವುದು. ಫಾತಿಹಾದ ನಂತರ ಒಕ್ಕೊರಲಿಂದ ದೀನ್ ಜಗಾಯಿಸುವರು. ಈ ಸಂದರ್ಭದಲ್ಲಿ ಕೆಲವರಿಗೆ ಮೈತುಂಬುವುದುಂಟು. ಮುಲ್ಲಾ ಸಾಹೇಬರು ಬಾಬು ತೆಗೆದುಕೊಂಡು ತುಂಡು ಚೀಟಿಯಲ್ಲಿ ಹಸ್ತ (ಕೈ) ಗಲ್ಲೀಪ. ಉಡಿ, ಉಡುಗೊರೆ, ಹೂವಿನಸರ ಹರಕಿಯ ದೇವರಿಗೆ ಅರ್ಪಿಸಿ ಮನದ ಇಷ್ಟಾರ್ಥಗಳನ್ನು ಗೇನಿಸಿ ಬೇಡಿಕೊಂಡು ಮರಳುವ ಮುನ್ನ ದೇವರಿಟ್ಟ ಕೋಣೆಯಿಂದ ಅನತಿದೂರದಲ್ಲಿ ಕುಳಿತ ಭಿಕ್ಷುಕರಿಗೆ ಶರಬತ್ತ ಹಂಚಿ ಕೃತಾರ್ಥರಾಗುವರು. ಇಮಾಮ ಹುಸೇನರು ಅವರ ಅನುಯಾಯಿಗಳು ಕುಡಿಯಲು ಹನಿ ನೀರಿಲ್ಲದೆ ಹೋದರೂ ಕಾಳಗ ಮಾಡಿ ಹುತಾತ್ಮರಾದ ನೆನಪಿಗಾಗಿ ಶರಬತ್ (ಬೆಲ್ಲದ ನೀರು) ಹಂಚುವರೆಂದು ಹೇಳಿಕೆ. ಖತಲ್ ರಾತ್ರಿ ದಿನವು ಮುಗಿದಾಗ ಮುಸ್ಲಿಮರಿಗೆ ಅರ್ಧ ಹಬ್ಬ ಆಚರಿಸಿದ ಅನುಭವ.

ಮೊಹರಂ ಕೊನೆಯ ದಿನ :

ಮೊಹರಂ ತಿಂಗಳ ಹತ್ತನೆಯ ದಿನ ಹಬ್ಬದ ಕೊನೆಯ ದಿನವಾಗಿದ್ದು ಪೀರಾಗಳು ಹೊಳೆಗೆ ಹೋಗುವವು. ಇಮಾಮ ಹುಸೇನರು ಶಹೀದರಾದುದು ಇಂದು. ಈ ದಿನಕ್ಕೆ ಶಾದತ್ ಎಂದೂ ದಫನ್ ಎಂದೂ ಕರೆಯುವುದುಂಟು. ಅಂದು ಮುಂಜಾನೆ ದೇವರೇಳುವ ವೇಳೆಗಾಗಲೇ ಊರಿನ ಹಿಂದು ಮುಸ್ಲಿಂ ಮುಖಂಡರು ನೆರೆಯುವರು. ಅವರ ಸಮ್ಮುಖದಲ್ಲಿ ಮುಲ್ಲಾ ಸಾಹೇಬರು ಫಾತಿಹಾ ಮಾಡುವರು. ಇಮಾಮ ಹಸನ, ಇಮಾಮ ಹುಸೇನರನ್ನು ಒಕ್ಕೊರಲಿನಿಂದ ನೆನಪಿಸಿ ಡೋಲಿ ಹೊರುವರು. ಕೈದೇವರು ಹಿಡಿಯುವರು. ನಂತರ ಅಗ್ಗಿ ತುಳಿದು ಅಲಾವಿಗೆ ಐದು ಬಾರಿ ಸುತ್ತು ಹಾಕಿ ಊರಿನಲ್ಲಿ ಬರುವರು. ಬರುವಾಗ ಒಮ್ಮೊಮ್ಮೆ ಡೋಲಿ ಹೊತ್ತವರಿಗೆ ಕೈದೇವರು ಹಿಡಿದವರಿಗೆ ಮೈ ತುಂಬುವುದು. ಮೈ ತುಂಬಿದವರು ಹರಕೆ ಮನೆಗಳಿಗೆ ನುಗ್ಗಲು, ಮನೆಯೊಡೆಯರು ಕಾಲಿಗೆ ನೀರು ಸುರುವಿ, ನಮಸ್ಕರಿಸಿ ಊದುಬತ್ತಿ ಕೊಟ್ಟು ರಕ್ಷಣೆ ಆಶೀರ್ವಾದ ಪಡೆದುಕೊಂಡರೆ ಸಾರ್ವಜನಿಕರು, ಭವಿಷ್ಯ, ಮಳೆ ಬೆಳೆ ಕೇಳುವರು, ಫಾತಿಹಾದ ನಂತರ ಮೈದುಂಬಿದ ದೇವರು, ಡೋಲಿ ನಿರ್ಗಮಿಸುವುದು.

ಊರಿನ ವಿಶಾಲ ಬಯಲಿನಲ್ಲಿ ಡೋಲಿ ಹಾಗು ಕೈ ದೇವರು ಕೂಡ್ರಿಸಿ ಮುಲ್ಲಾನವರು, ಹಿಲಾಲಿನವರು ಕಾವಲಿರುವರು. ರಿವಾಯತ ಹಾಡುಗಾರರು, ಕರ್ಬಲಾ ಕಣ್ಣೀರ ಕಥೆಯನ್ನು ಕಾವ್ಯ ಮಾಡಿ, ಯಜೀದನ ಸೈನಿಕರು ಕೊಟ್ಟ ಕೀಟಲೆಗಳನ್ನು ಬೆರಸಿ ಹಾಡುತ್ತ ಕೇಳುಗರನ್ನಳಿಸುವರು. ಹೀಗೆ ಹಾಡುವಾಗ ಇಮಾಮ ಹುಸೇನರು ಶೋಕದ ಸಂಕೇತವಾಗಿ ನಿಂತಲ್ಲಿಯೇ  ನಿಂತು ಒಂಟಿಕಾಲು ಹಾಕುತ್ತ ಎಂಟ್ಹತ್ತು ಜನ ಕೈ ಕೈ ಹಿಡಿದು ಸುತ್ತ ತಿರುಗುವರು. ಇನ್ನೊಂದು ಕಡೆಗೆ ಕೋಲಾಟ, ಲೇಜಿಮ್ ಹೆಜ್ಜೆ ಕುಣಿಯುವರು. ಬಣ್ಣದ ಹಾಳೆಗಳಿಂದ ತಯಾರಿಸಿದ ಬಾಳೆಗಿಡ. ಚಂಡು ಹೂವಿನ ಗಿಡ, ಅಲಂಕರಿಸಿದ ಛತ್ರಿ, ಕೆಂಪು ಕೈ ವಸ್ತ್ರ ಹಿಡಿದು ಹಲಗೆಯ ಗತ್ತಿಗೊಮ್ಮೆಮ್ಮೆ ನೆಲಕ್ಕೆ ಕುಳಿತು ಮೇಲಕ್ಕೇರುವರು. ಕುಣಿಯುವವರ ಮುಂದೆ ಕರ್ಬಲಾ ಕಥಾನಕ ಪವಾಡ ಕಥಾನಕ, ಇತರ ಕಥಾನಕ ವಸ್ತು ಕುರಿತು ಹಾಡುವ ಮುಮ್ಮೇಳ ಹಿಮ್ಮೇಳಗಳು ಇದ್ದು, ಈ ಮೇಳಗಳಿಗೆ ಭಜಂತ್ರಿ, ಖಣಿ ಸಂಪ್ರದಾಯ, ಗೆಜ್ಜೆ ತಬಲಾಗಳನ್ನು ಅಳವಡಿಸಿರುವರು. ಕೆಲ ಊರುಗಳಲ್ಲಿ ಹೆಜ್ಜೆ ಮೇಳಗಳಿಗೆ ಹಾಡುಗಾರರಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಗೆದ್ದವರಿಗೆ ಬೆಳ್ಳಿ ಖಡೆ, ಹಣ ಹಾರ ತುರಾಯಿ ಬಹುಮಾನ ಕೊಡುವರು. ನಗರಗಳಲ್ಲಿ ಬಣ್ಣಾ, ಕ್ಯಾಮಣ್ಣು ಮೈಮೇಲೆ ಸುರವಿಕೊಂಡು ಮತ್ತೇರಿದವನಂತೆ ಕುಣಿಯುವ ಮೇಳಗಳು ಕಂಡು ಬರದಿರವು. ಮಧ್ಯಾಹ್ನದವರೆಗೂ ಕುಣಿತ ಹಾಡು ಹೇಳಿ, ಹೊಳೆ ದಾರಿ ತೋರಿಸಿ ಫಾತಿಹಾ ಓದಿ ದೇವರುಗಳನ್ನು ಸ್ವಸ್ಥಾನದಲ್ಲಿಡುವರು.

ಪಂಜಾ (ಆಲಾಯಿ ದೇವರು) ಕುಳಿತ ಮೇಲೆ ಓದಿಕೆ ಹಾಕಿದ ಮಂಡಕ್ಕಿಯನ್ನು ನಾಲ್ಕಾರು ಜನ ಕೂಡಿ ಊರಿನ ಹಿಂದುಗಳ ಮನೆ ಮನೆಗೆ ಅಡ್ಡಾಡಿ ನೀಡಿ ಪ್ರತಿಯಾಗಿ ಕೊಟ್ಟ ರೊಟ್ಟಿ ಪಲ್ಲೆ (ಜೋಳ ಗೋಧಿ ಹಣ ಕೂಡಿದರೆ ಮಸೀದಿಗೆ) ಸಂ‌ಗ್ರಹಿಸಿ ಫಾತಿಹಾ ಮಾಡಿ ಮುಸ್ಲಿಂ ಮನೆಗಳಿಗೆ ಹಂಚುವರು. ಈ ರೀತಿ ಹಂಚುವ ಉದ್ದೇಶ ಮತೈಕ್ಯ ಭಾವನೆ ಬೆಳಸುವುದಿರಬಹುದು.

ಸಾಯಂಕಾಲ ಸು. ೫-೬ ಗಂಟೆಗೆ ದೇವರಿಗೆ ಓದಿಕೆ ಹಾಕಿ ಡೋಲಿ, ಕೈ ದೇವರುಗಳನ್ನು ಹೊತ್ತು ಅಲಾವಿ ಸುತ್ತ ಐದು ಸಾರೆ ಸುತ್ತಿ ಪಶ್ಚಿಮಾಭಿಮುಖವಾಗಿ ನಿಲ್ಲಿಸುವರು. ಅಲಾವಿ ಕುಣಿಯಲ್ಲಿಯ ಚಿಕ್ಕ ಮಾಡಿನಲ್ಲಿ ಹೊಸ ಸಣ್ಣ ಮಣ್ಣಿನ ಕುಡಿಕೆಯಲ್ಲಿ ಐದಾಣೆ ರೊಕ್ಕ ಹಾಕಿ ಬೆಲ್ಲ ನೀರು ತುಂಬಿ ಮುಚ್ಚಳ ಮುಚ್ಚಿಡುವರು. ಮಡಿದವರಲ್ಲಿ ಎಲ್ಲರೂ ಇಮಾಮ ಹುಸೇನರಲ್ಲದ ಕಾರಣ ಲೌಕಿಕಾಸೆ ಇಟ್ಟುಕೊಂಡಿದ್ದವರ ಆತ್ಮಗಳು ಈ ದುಡ್ಡು ಬೆಲ್ಲದ ನೀರಿನಿಂದ ಬಿಡುಗಡೆ ಹೊಂದಿ ಸ್ವರ್ಗ ಸೇರಬೇಕೆಂಬ ಭಾವನೆಗೆ ಈ ರೀತಿ ವಿಧಿ ಮಾಡುವರೆಂದು ಹೇಳುವರು. ಅಲಾವಿ ಕುಣಿಯಲ್ಲಿಯ ಚಿಕ್ಕ ಮಾಡಿನಲ್ಲಿ ಹೊಸ ಸಣ್ಣ ಮಣ್ಣಿನ ಕುಡಿಕೆಯಲ್ಲಿ ಐದಾಣೆ ರೊಕ್ಕ ಹಾಕಿ ಬೆಲ್ಲದ ನೀರು ತುಂಬಿ ಮುಚ್ಚಳ ಮುಚ್ಚಿಡುವರು. ಮಡಿದವರಲ್ಲಿ ಎಲ್ಲರೂ ಇಮಾಮ ಹುಸೇನರಲ್ಲದ ಕಾರಣ ಲೌಕಿಕಾಸೆ ಇಟ್ಟುಕೊಂಡಿದ್ದವರ ಆತ್ಮಗಳು ಈ ದುಡ್ಡು ಬೆಲ್ಲದ ನೀರಿನಿಂದ ಬಿಡುಗಡೆಹೊಂದಿ ಸ್ವರ್ಗ ಸೇರಬೇಕೆಂಬ ಭಾವನೆಗೆ ಈ ರೀತಿ ವಿಧಿ ಮಾಡುವರೆಂದು ಹೇಳುವರು ’ ಫಕೀರರಾಗಲು ಮಕ್ಕಳು ಧರಿಸಿದ ಹಸಲಿ, ಲಾಡಿ, ಜಗರಾ ಬಿಚ್ಚಿ ಆವಾಲಾದಲ್ಲಿ ಹಾಕುವುದು ರೂಢಿ. ಅಗ್ಗಿ ಹಾಕಿದ ತಗ್ಗನ್ನು ಮುಚ್ಚು ಗುಮಜು ಮಾಡಿ ಗುರುತಿಗೆ ಬಾರಿಕಂಟಿ ಟೊಂಗೆ ಚುಚ್ಚಿ ಓದಿಕೆ ಹಾಕುವರು. ದೀನ ಜಗಾಯಿಸುತ್ತ ಡೋಲಿ, ಕೈದೇವರುಗಳನ್ನು ಊರ ಬಯಲು,ಜಾಗದಲ್ಲಿ ಕೂಡ್ರಿಸಿ ಮುಂಜಾನೆಯಂತೆ ರಿವಾಯಿತು ಕುಣಿತ ನಡೆಸುವರು. (ಕೆಲವು ಕಡೆ ಸೋಗು ಹಾಕಿ ನರ್ತನ ಮಾಡಿ ಸಂತೋಷಪಡುವರು) ರಾತ್ರಿ ಗ್ಯಾಸಿನ ಬೆಳಕಿನಲ್ಲಿ (ಗ್ಯಾಸಿಲ್ಲದಿದ್ದರೆ ಹಿಲಾಲು) ಹೊಳೆಗೆ ಒಯ್ದು ದೇವರುಗಳ ಮುಖ ತೊಳೆದು ಚೊಂಗ್ಯಾ, ಮಂಡಕ್ಕಿ ಓದಿಕೆ ಹಾಕಿ ಹಿಂದು ಮುಸ್ಲಿಮರಿಗೆ ಕೊಡುವರು. ಕೈದೇವರು ಬಿಚ್ಚಿ ಡೋಲಿಯಲ್ಲಿಟ್ಟು, ಶುಭ್ರ ಧೋತರ ಅಥವಾ ಅರಿವೆಯನ್ನು ಡೋಲಿಯ ಸುತ್ತ ಕಟ್ಟುವರು. ಇಮಾಮ ಹಸನ್, ಇಮಾಮ ಹುಸೇನ ಅವರ ಅನುಯಾಯಿಗಳು ಇಲ್ಲಿಗೆ ಶಹೀದ್ ರಾದರೆಂದು ನಂಬಿಗೆ. ಅಲ್ ವಿದಾಯೋ ಅಲ್ ವಿದಾಯೋ ಎಂದು ಬೀಳ್ಕೊಡುತ್ತ ಮಸೀದಿಗೆ ತೆರಳುವರು. ಕೆಲವು ಕಡೆ ದೇವರಿಗೆ ಮುಖ ತೊಳೆಸುವ ಮುನ್ನವೇ ಬೀಳ್ಕೊಟ್ಟು ಯಾವ ಹಾಡು ಬರುವರಂತೆ[10] ಬಹುಶಃ ಇದು ಹಿಂದುಗಳೇ ಇದ್ದ ಗ್ರಾಮಗಳು ಆಚರಿಸುವ ಮೊಹರಂ ಹಬ್ಬದಲ್ಲಿರಬೇಕು.

ಪೀರಾಂಗಳು ಹೊಳೆಗೆ ಹೋದ ಮೂರು ದಿನಕ್ಕೆ ಚಿಕ್ಕಮಕ್ಕಳು, ತಗಡಿನ, ಹಿತ್ತಾಳೆಯ ಕೈ ದೇವರು ಮಾಡಿ ಉಡುಗೊರೆ ಉಡಿಸಿ ಓಣಿ ಓಣಿಗೂ ದೀನ್ ಜಗಾಯಿಸುತ್ತ ವಂತಿಗೆ ಸಂಗ್ರಹಿಸಿ ಹೊಲೆಗೂ ಕಳಿಸುವರು. ಇವುಗಳಿಗೆ ಕವಡಿ ಪೀರಾ ಎಂದು ಕರೆವರು. ಈ ರೂಢಿ ಹೆಚ್ಚಾಗಿ ನಗರಗಳಲ್ಲಿ ಇದೆ. ಇತ್ತೀಚೆ ಕವಡಿ ಪೀರಾಂಗಳನ್ನು ದೊಡ್ಡವರು ಇಡುವುದು ಅಲ್ಲಲ್ಲಿ ಕಾಣುತ್ತೇವೆ. ಮೊಹರಂ ಹಬ್ಬದ ನಂತರ ಮೂರು ದಿನದ ಜೌರತಾ ಹತ್ತು ದಿನದ ಜೌರತಾ ಹಾಗು ನಲವತ್ತು ದಿನದ ಚೌರತಾ ಮಾಡುವ ರೂಢಿ ಇದೆ.

ಒಂದು ಮಾತು :

ಹದಿಮೂರು ನೂರು ವರುಷಗಳ ಹಿಂದೆ ಪರದೇಶದಲ್ಲಿ ನಡೆದ ಕಣ್ಣೀರ ಕಥೆಯನ್ನು ತಮ್ಮದೇ ಎನ್ನುವಂತೆ ಆಚರಿಸುವ ಮೊಹರಂ ಆಚರಣೆ ನಿಜಕ್ಕೂ ಒಂದು ಮಹಾಶೋಕಕಾವ್ಯ ’ವ್ರತ’ ನಿಯಮಕ್ಕಿಂತಲೂ ರೂಢಿಯ ಪ್ರಭಾವ ದೊಡ್ಡದು. ಜಾನಪದರು ರೂಢಿಗೆ ಅಂಟಿಕೊಂಡು ಹಬ್ಬವೆಂದು ಆಚರಿಸುತ್ತಿರುವುದು ಮೊಹರಂದ ವೈಶಿಷ್ಟ್ಯ. ಇಮಾಮ ಹಸನ್, ಇಮಾಮ ಹುಸೇನರ ಪುಣ್ಯ ತಿಥಿಯಾದ ಈ ದಿನ ಭಾರತೀಯ ಕೆಲ ಮುಸ್ಲಿಮರಿಗೆ ಸಂಭ್ರಮದ ದಿನವಾಗಿದ್ದುದು ಆಶ್ಚರ್ಯವೇ ಸರಿ.

ಗ್ರಂಥ ಋಣ

ಇಸ್ಲಾಂ ಸಂಸ್ಕೃತಿ – ಪ್ರೊ. ಮಹ್ಮದ ಅಬ್ಬಾಸ ಪೂಸ್ತ್ರಿ
ಹೇಳುವೆ ಮಜಕೂರ – ನಿಂಗಣ್ಣ ಸಣ್ಣಕ್ಕಿ
ಮೊಹರಂ ಪದಗಳು – ಚೆನ್ನಣ್ಣ ವಾಲಿಕಾರ
ಜಾನಪದ ಸಾಹಿತ್ಯ ದರ್ಶನ ಭಾಗ – ೧ ಕ.ವಿ.ವಿ. ಧಾರವಾಡ
ಜಾನಪದ ಸಾಹಿತ್ಯ ದರ್ಶನ ಭಾಗ – ೫ ಕ.ವಿ.ವಿ. ಧಾರವಾಡ
Islam at a Glance – Abdul Hameed
ಭಾರತೀಯ ಹಬ್ಬಗಳು – ಪ್ರೊ. ಸಿ.ವಿ. ಕೆರಿಮನಿ.[1] ಇಸ್ಲಾಂ ಸಂಸ್ಕೃತಿ – ಪ್ರೊ. ಮಹ್ಮದ ಅಬ್ಬಾಸ ಪೂಸ್ತ್ರಿ, ಪು : ೩೬೩-೩೬೪

[2] ಇಸ್ಲಾಂ ಸಂಸ್ಕೃತಿ ಪೊಸ್ತ್ರಿ ಪು: ೩೫೬

[3] ಇಂದು ಮೊಹರಂ – ಜಿನಪ್ರಕಾಶ ದಿನಪತ್ರಿಕೆ (೮-೧೧-೧೯೮೧) ಪು: ೪

[4] ಇಸ್ಲಾಂ ಸಂಸ್ಕೃತಿ – ಪ್ರೊ : ಘೋಸ್ತ್ರಿ ಪು : ೩೬೮

[5] ಇಂದು ಮೊಹರಂ – ಜನಪ್ರಕಾಶ ದಿನಪತ್ರಿಕೆ ನ – ೮-೧೧-೯೮೧) ಪು : ೪.

[6] ಮೊಹರಂ ಪದಗಳು – ಚೆನ್ನಣ್ಣ ವಾಲಿಕಾರ ಪು : ೭

[7] ಹೇಳುವೆ ಮಜಕೂರ. ನಿಂಗಣ್ಣ ಸಣ್ಣಕ್ಕಿ ಪು. xi

[8] ಈ ವಿಚಾರ ತಿಳಿಸಿದವರು ಪ್ರೊ. ಎಂ.ಎಫ್. ಅನ್ಹಾರಿ (ಹೈದ್ರಾಬಾದ್)

[9] ಈ ಮಾಹಿತಿ ತಿಳಿಸಿದವರು  ಪ್ರೊ. ಪಿ. ಇಸೂಬು (ಭಟಕಳ)

[10] ಮೊಹರಂ ಪದಗಳು – ಚೆನ್ನಣ್ಣ ವಾಲಿಕಾರ ಪು. ೧೪