ಹೊಸ ವರ್ಷದ ಬೇಸಾಯದಾರಂಭದ ನೇಮವನ್ನು ಉತ್ತರ ಕರ್ನಾಟಕ ರೈತರು  ವೈಯಕ್ತಿಕವಾಗಿ ಮಾಡಿದರೆ ಮಂಡ್ಯ ಜಿಲ್ಲೆಯವರು  ಸಾಮೂಹಿಕವಾಗಿ ಮಾಡುತ್ತಾರೆ.

’ಊರ ಮುಂದಿನ ರಂಗದಿಂದ ಗೌಡ, ಪಟೇಲ, ಕುಲದ ಗೌಡ, ನಾಡ ಗೌಡರ ಸಮ್ಮುಖದಲ್ಲಿ, ಯಾರದ್ದಾದರೂ ಒಂದು ಜತೆ ದನಗಳನ್ನೂ ತೊಳೆದು ನೊಗಹೂಡಿ, ನೇಗಿಲು ಕಟ್ಟಿ ಊರ ಅಂಚಿನಲ್ಲಿರುವ ಯಾರದ್ದಾದರೂ ಒಂದು ಜಮೀನಿನಲ್ಲಿ ಉಳುಮೆ ಮಾಡುತ್ತಾರೆ. ಈ ದಿನಗಳು  ಆ ಊರಿನ  ಪರವಾಗಿ  ಊಳುತ್ತವೆ.  ಈ ದನಗಳು ಊರಿನ ಪಟೇಲ ಅಥವಾ ಗೌಡನವುಗಳಾಗಬಹುದು. ಒಟ್ಟಿನಲ್ಲಿ ಆ ಊರಿನ ಪರವಾಗಿ ಅಂದು ಹೊಸದಾಗಿ ವ್ಯವಸಾಯವನ್ನು ಆರಂಭಿಸಬೇಕು ಅಷ್ಟೆ. (೧೫)

ಬೇಸಾಯದ ಆರಂಭವನ್ನು ಹಬ್ಬದ ಸಡಗರದಿಂದ ಮಾಡುವುದು ಕೃಷಿ ಪ್ರಧಾನವಾದ ಭಾರತದಲ್ಲಿ ಕರ್ನಾಟಕದಲ್ಲಷ್ಟೇ ಅಲ್ಲ. ಇತರತ್ರವೂ ಇದನ್ನು ಕಾಣಬಹುದಾಗಿದೆ ಅಲ್ಲದೆ ಇದರೊಂದಿಗೆ ಆಚರಿಸುವ ಕೆಲವು ಸಂಪ್ರದಾಯಗಳೂ ಕುತೂಹಲಕಾರಿಯಾಗಿವೆ.

ನಮ್ಮ ’ಮಜಲು’ ಅಥವಾ ’ಹೊನ್ನಾರು’ ಬಂಗಾದಲ್ಲಿ “ಹಲ್ ಚರ್’ ಅಥವಾ ’ಹಲ್ ಪ್ರವರ್’ ಎನಿಸಿಗೊಳ್ಳುತ್ತದೆ. ರೈತನು ಈಶಾನ್ಯ ದಿಕ್ಕಿನ ದೇವತೆಗೆ ಬಾಗಿ ನಮಸ್ಕರಿಸಿ ಉತ್ತರಾಭಿಮುಖವಾಗಿ ಊಳಲು ಆರಂಭಿಸುತ್ತಾನೆ. ಮೂರು ಅಥವಾ ಐದು ಗೆರೆಗಳನ್ನು ವರ್ತುಲಾಕಾರವಾಗಿ ತಡೆಯಿಲ್ಲದೆ ಆ ದಿನ ಊಳುತ್ತಾನೆ (೧೬)

ಭಾರತದ ವಾಯುವ್ಯದಲ್ಲಿ ಹೊನ್ನೂರು ಹೂಡಲು ರೈತರು ಪಂಡಿತನನ್ನು ಕೇಳಿ, ಭೂಮಿಯ ಕೆಳಗೆ ಇರುವ ನಾಗ (ಶೇಷ) ಯಾವ ದಿಕ್ಕಿಗೆ ಮಲಗಿರುತ್ತದೆ ಎಂಬುದನ್ನು ತಿಳಿದುಕೊಂಡು, ನೇಗಿಲಿನಲ್ಲಿ ಉತ್ತರೆ ಅದಕ್ಕೆ ನೋವಾಗದಿರಬೇಕಾದರೆ, ಯಾವ ಕಾಲದಲ್ಲಿ, ಯಾವ ದಿಕ್ಕಿನಲ್ಲಿ ಊಳಬೇಕು ಎನ್ನುವುದನ್ನು ತಿಳಿಯುತ್ತಾರೆ (೧೭)

ಉತ್ತರ ಭಾರತದಲ್ಲಿ ಕೆಲವೆಡೆ ರೈತ ಐದು ಹೆಂಟೆ ಮಣ್ಣು ಅಗಿದು ಅದಕ್ಕೆ ನೀರು ಚಿಮುಕಿಸುತ್ತಾನೆ. ಮನೆಗೆ ಬಂದ ಮೇಲೆ, ಮುತ್ತೈದಿಯ ಕೈಯಿಂದ ಮೊಸರು ಬೆಣ್ಣೆ ತೆಗೆದುಕೊಂಡು ಮನೆಯಲ್ಲೇ ಉಳಿಯುತ್ತಾನೆ. ಆ ದಿನ ಅವನು ಜಗಳ ಮಾಡಕೂಡದು. ಧಾನ್ಯ, ಹಣ, ಬೆಂಕಿ ಯಾರಿಗೂ ಕೊಡಕೂಡದು. (ಇಂಗ್ಲೆಂಡಿನಲ್ಲಿ ಬಿತ್ತುವ ದಿನ ಬೆಂಕಿ ಕೊಡಕೂಡದು) ಮಾರನೆಯ ದಿನ ಅವನು ಉಪ್ಪು ತ್ಯಜಿಸಿ ಬರಿಯ ಸಿಹಿ ಊಟ ಮಾಡಬೇಕು (೧೮)

ರಾಜಸ್ಥಾನದಲ್ಲಿ ಮಳೆಬಂದ ಮೊದಲ ದಿನ ’ಹಲ್ಸೋತಿಯ’ ಹಬ್ಬ ಆ ದಿನ ಎಲ್ಲರೂ ಆರಿಸಿದ ಒಬ್ಬ ರೈತ ಉತ್ತರಾಭಿಮುಖವಾಗಿ ಐದುಗೆರೆ ಊಳುತ್ತಾನೆ (೧೯)

ಮಿರ್ಜಾಪುರ ಪ್ರದೇಶದಲ್ಲಿ ಹೊಲದ ಉತ್ತರ ಭಾಗದಲ್ಲಿ ಮಾತ್ರ ಮಾವಿನ ಕೊಂಬೆಯಿಂದ ಆಗಿಯುತ್ತಾರೆ (೨೦)

ಹೋಷಲಗಾಬಾದ್ ಪ್ರದೇಶದಲ್ಲಿ ಗೌಡನ ಹೊಲದಲ್ಲಿ ಮೊದಲೂರು ಊರಗೌಡನ ಹೊಲದಲ್ಲಿ ಮುತ್ತುಗುದ ಎಲೆಗೆ ಒಂದು ನೋಟು ಚುಚ್ಚಿ, ಎಲೆಗಳ ರಾಶಿಯಲ್ಲಿ ಹಾಕಿ, ಎತ್ತುಗಳಿಗೆ ನೊಗ ಹೂಡಿ ನುಗ್ಗಿಸುತ್ತಾನೆ. ಜಗ ನುಗ್ಗಿ ನೋಟನ್ನು ಹುಡುಕುತ್ತಾರೆ. ಬಳಿಕ ತಮ್ಮ ಹೊಲದಲ್ಲಿ ಸ್ವಲ್ಪ ಉತ್ತು, ವಾಪಸಾಗುವಾಗ, ಗೌಡನ ತಂಗಿ ಅಥವಾ ಮಗಳು ಪೂರ್ಣ ಕುಂಭದೀಪಗಳನ್ನು ತೆಗೆದುಕೊಂಡು ಅವರಿಗೆ ಎದುರಾಗುತ್ತಾಳೆ (೨೧)

ಜಾನಪದ ಸಂಪ್ರದಾಯವೊಂದರ ಇಂಥ ವ್ಯಾಪಕ ಚಿತ್ರಗಳು, ರಾಷ್ಟ್ರದ ಏಕತೆಯನ್ನು ಮೆರಸುತ್ತವೆಂಬುದು ಅವುಗಳ ಹಿರಿಮೆಗೆ ಸಾಕ್ಷಿ.

ಯುಗಾದಿಯಂದು ಕನಾಟಕದ ರೈತರು ತಮ್ಮ ದಿನಗಳಿಗೆ ಕುಂಟಿಯ ಬಳಿ ಕಾಸಿ ಬರಿ ಹಾಕುತ್ತಾರೆ. (ಕೆಲವರು ದೀಪಾವಳಿ ಕಾಲಕ್ಕೆ ಬರಿ ಹಾಕುತ್ತಾರೆ.) ಹೀಗೆ ಬರಿ ಹಾಕುವುದರಿಂದ ಕೆಲವೊಂದು ರೋಗ ರುಜಿನಗಳು ವರ್ಷವಿಡೀ ಬರುವುದಿಲ್ಲವೆಂಬ ಭಾವನೆ ಅವರದು.

ಶಾವಿಗೆ ಗುಳಿಗೆ ಊಟ : ಮಧ್ಯಾಹ್ನ ಎಲ್ಲರ ಮನೆಯಲ್ಲಿ ಶಾವಿಗೆ ಗುಳಿಗೆ, ಬೇವು-ಬೆಲ್ಲದ ಊಟ, ಯುಗಾದಿ ಪೂರ್ವದಲ್ಲಿಯೇ ಗೃಹಿಣಿಯರು ಶಾವಿಗೆ ಗುಳಿಗೆಗಳನ್ನು ಭರ್ಜರಿಯಾಗಿ ತಯಾರಿಸಿ ಸಂಗ್ರಹಿಸಿಟ್ಟಿರುತ್ತಾರೆ. ಆ ಸಂಗ್ರಹದ ಬಳಕೆಗೆ ಆರಂಭವಾಗುವುದೆ ಯುಗಾದಿಯಿಂದ. ಇಂದಿನ ಊಟ ಜನಪದ ಕವಿಯ ಗಮನವನ್ನೂ ಸೆಳೆದಿದೆ.

ಊರಾಗ ಉಗಾದಿ ಉಂಡ್ಹೋಗ ಅಣ್ಣಯ್ಯ
ಶಾವೀಗಿ ಆಗಿ ಗುಳಿಗ್ಯಾಗಿ | ಮ್ಯಾಲೀನ
ಬಾನ ಬಸಿಯೋದು ತಡವಿಲ್ಲ || (೨೨)

ಮಂಡ್ಯದ ಕಡೆ ಬೇವು-ಬೆಲ್ಲದೊಂದಿಗೆ ವಡೆ-ಒಬ್ಬಟ್ಟು ಮಾಡುತ್ತಾರೆ.

ಜ್ಯೋತಿಷ್ಯ : ಭೋಜನಾ ನಂತರ (ಅಥವಾ ಮೊದಲು) ಯುಗಾದಿಯ ಮತ್ತೊಂದು ಮಹತ್ವದ ಆಚರಣೆ ಕಾದಿರುತ್ತದೆ. ಬರಲಿರುವ ದಿನಗಳು ಹೊತ್ತು ತರಲಿರುವ ಒಳಿತು-ಕೆಡಕುಗಳ ಕುರಿತಂಥ ಜಿಜ್ಞಾಸೆ ಮಾನವನನ್ನು ಜ್ಯೋತಿಷ್ಯದತ್ತ ಕರೆದೊಯ್ಯುತ್ತದೆ. ದೇವರು ಧರ್ಮಗಳನ್ನು ಬಲವಾಗಿ ನಂಬಿರುವ ಜನಪದರಿಗೆ ಜ್ಯೋತಿಷ್ಯದಲ್ಲಿಯೂ ಅಪಾರ ವಿಶ್ವಾಸ, ಹೊಸ ವರ್ಷದ ಆರಂಭದ ದಿನದಲ್ಲಿ ಇದಕ್ಕೆ ನೆಲೆಯೊದಗಿಸಿದ್ದಾನೆ. ಕಾರಣವಾಗಿ ’ಪಂಚಾಂಗ ಓದುವುದು, ಇಲ್ಲವೆ ಪಂಚಾಂಗ ಶ್ರವಣ ಯುಗಾದಿಯರು ಸಂಪ್ರದಾಯವೆ ಆಗಿದೆ. ನಮ್ಮ ಪಂಚಾಂಗಗಳು ಚಾಂದ್ರಮಾನ ಪದ್ಧತಿ ಮೇಲೆ ರಚಿತವಾಗಿರುವುದರಿಂದ ಯುಗಾದಿಯೊಂದಿಗೆ ಹೊಸ ವರ್ಷದ ಪಂಚಾಂಗವೂ ಆರಂಭವಾಗುತ್ತದೆ. ಇದೂ ಒಂದು ಯೋಗಾಯೋಗ.

ಗ್ರಾಮದ ಹಿರಿಯರೂ ಇತರರೂ ಗುಡಿ ಇಲ್ಲವೆ ಮಠದಲ್ಲಿ ಸೇರುತ್ತಾರೆ. ಹೊಸ ಪಂಚಾಂಗದೊಂದಿಗೆ ಆಚಾರ್ಯರೊ, ಅಯ್ಯನವರೊ ಬರುತ್ತಾರೆ. ಪಂಚಾಂಗದ ಪೂಜೆ ಆಗುತ್ತದೆ. ಅನಂತರದಲ್ಲಿ ಮಳೆ-ಬೆಳೆಗೆ ಸಂಬಂಧಿಸಿದಂತೆ ಲಾಭ-ನಷ್ಟಗಳನ್ನು ಅಂಕಿ-ಅಂಶಗಳಲ್ಲಿ, ಅಳತೆ- ಮಾನಗಳಲ್ಲಿ ಅವರು ತಿಳಿಸಿ ಹೇಳುತ್ತಾರೆ. ಊರಿನ ರಾಜ್ಯದ ಒಳಿತು ಕೆಡಕುಗಳ ಬಗೆಗೂ ಹೇಳುವುದುಂಟು ಮಕರ ಸಂಕ್ರಾಂತಿ ಫಲಗಳನ್ನೂ ಅಂದೇ ತಿಳಿದುಕೊಳ್ಳುವ ವಾಡಿಕೆಯೂ ಇದೆ.  ಪಂಚಾಂಗ ಶ್ರವಣಾ ನಂತರ ಓದಿದವರಿಗೆ ಯಥಾಶಕ್ತಿ ದಕ್ಷಿಗೆ ಸಂದಾಯವಾಗುತ್ತದೆ. ಅನಂತರ ಗ್ರಾಮದ ಎಲ್ಲ ದೇವಾಲಯಗಳಿಗೂ ತೆರಳಿ, ವಂದಿಸಿ ಮನೆಯ ಪರವಾಗಿ ಕಾಯಿ ಒಡೆಸುತ್ತಾರೆ.

ಭಾವೀ ವರ್ಷದ ಮಳೆ-ಬೆಳೆಗಳ ಭವಿಷ್ಯ ತಿಳಿಯಲು ಜನಪದರಿಗೆ ಪಂಚಾಂಗವೊಂದೆ ಗತಿಯಲ್ಲ. ಅವರೂ ತಮ್ಮದೇ ಆದ ಹಲವು ಕ್ರಮಗಳನ್ನು ತಮ್ಮವಾದ ರೀತಿಯಲ್ಲಿ ಶ್ರದ್ಧೆಯಿಂದ ನಿಯೋಜಿಸಿಕೊಂಡಿದ್ದಾರೆ.

ಯುಗಾದಿಗೆ ವಾರ ಮೊದಲಲ್ಲಿ ಗ್ರಾಮದ ಹಿರಿಯರು ಊರಿನ ಸುತ್ತುವರಿದ ಅನೇಕ ಜಮೀನುಗಳಿಂದ ಮುಣ್ಣು ತರಿಸಿ, ಒಂದು ಗೂಡಿಸಿ, ಹಲವಾರು ಹೊಸ ಮಡಕೆಗಳಲ್ಲಿ ತುಂಬಿ, ತಮ್ಮ ಗ್ರಾಮದಲ್ಲಿ ಬೆಳೆಯುವ ಧಾನ್ಯಗಳನ್ನು ಒಂದೊಂದರಲ್ಲಿ ಬಿತ್ತುತ್ತಾರೆ. ಕೆಲವೊಂದು ಕಡೆಗಳಲ್ಲಿ ಪ್ರತಿ ಧ್ಯಾನದ ೧೦೦ ಉತ್ತಮ ಬೀಜಗಳನ್ನು ಮಾತ್ರ ಬಿತ್ತುತ್ತಾರೆ. ನೀರು ಹಾಕಿ ಮಡಿಕೆಗಳಲ್ಲವನ್ನೂ ಒಂದೆಡೆ (ಗುಡಿ ಮಠ) ಇಡುತ್ತಾರೆ. ಯುಗಾದಿಯಂದು ಯಾವ ಮಡಿಕೆಯಲ್ಲಿ ಸಸಿಗಳು ಚೆನ್ನಾಗಿ ಎದುರುತ್ತವೆಯೋ ಆ ಬೆಳೆ ಆ ವರ್ಷಕ್ಕೆ ಹುಲುಸಾಗಿ ಬರುತ್ತದೆಂದು ನಂಬುತ್ತಾರೆ. ಬೀಜಗಳನ್ನು ಎಣಿಸಿ ಬಿತ್ತಿದವರು ಎಷ್ಟು ಸಸಿಗಳು ಚೆನ್ನಾಗಿ ಎದ್ದಿರುತ್ತವೆಯೊ ಪ್ರತಿಶತ ಅಷ್ಟು ಬೆಳೆ ಬರುತ್ತದೆಂದು ತಿಳಿಯುತ್ತಾರೆ. ಹಾನಗಲ್ಲ ತಾಲೂಕ ಹಿರೇಕಂಸಿ ಗ್ರಾಮದಲ್ಲಿ ಇಂದಿಗೂ ಈ ಆಚರಣೆ ಉಳಿದು ಬಂದಿದೆ.

ಹೊಷಲಗಾಬಾದ ಪ್ರದೇಶದಲ್ಲಿ ಹೊನ್ನಾರಿನ ದಿನ ಸಂಜೆ ನಾಲ್ಕು ಮಣ್ಣಿನ ಹೆಂಟೆ ಮೇಲೆ ಸ್ವಲ್ಪ ನೀರು ಜಿನುಗುವ ಮಣ್ಣಿನ ಹೂಜಿ ತುಂಬ ನೀರು ತುಂಬಿ ಇಡುತ್ತಾರೆ. ಬೆಳಿಗ್ಗೆ ಎಷ್ಟು ಹೆಂಟೆಗಳು ನೆನೆದಿರುತ್ತವೆಯೋ ಅಷ್ಟು ತಿಂಗಳು ಮಳೆ ಎಂದು ನಂಬುತ್ತಾರೆ (೨೧)

ಕ್ರೀಡೆಗಳು :

ಯುಗಾದಿ ವಿನೋದಗಳು ಮಧ್ಯಾಹ್ನದ ಬಿಸಿಲು ಇಳಿಮುಖವಾದಂತೆ ಆರಂಭವಾಗುತ್ತವೆ. ಹಬ್ಬದ ವಿನೋದಗಳು ಸಮಾಜದ ಸಾಮೂಹಿಕ ಕ್ರಿಯಾಚರಣೆಗಳಲ್ಲಿಯೇ ಅತ್ಯಂತ ಪ್ರಮುಖವಾದುವು. ಇಲ್ಲಿ ವಿನೋದ ಒಂದು ನೆಪ ಮಾತ್ರ. ವ್ಯಕ್ತಿಯ ಸಾಮಾಜಿಕ ಸಂಬಂಧಗಳು ಸಂಸಾರದ ಆಚೆಗೂ ವಿಸ್ತರಿಸಿ ಊರೆಲ್ಲ ನೆಂಟರು, ಕೇರಿಯೆಲ್ಲವು ಬಳಗವಾಗುವಂತೆ ಮಾಡುವ ಮೂಲಕ ಸಮಾಜ, ಗ್ರಾಮವನ್ನು ಒಗ್ಗೂಡಿಸುವುದೇ ನಿಜವಾದ ಉದ್ದೇಶ. ಉಗಾದಿಯ ವಿನೋದ ಕ್ರೀಡೆಗಳು ಈ ಕಾರ್ಯವನ್ನು ಸಮರ್ಥವಾಗಿ ನೆರವೇರಿಸುವಂಥವು.

ಯುಗಾದಿ ಕ್ರೀಡೆಗಳಲ್ಲಿ ಬಟ್ಟೆ ಚೆಂಡಾಟ, ಚಿಣ್ಣಿ ಕೋಲಾಟ, ಬುಗರಿ ಆಟಗಳು ಸಾರ್ವತ್ರಿಕವಾದುವು. ಕೆಲವು ಗ್ರಾಮಗಳಲ್ಲಿ ಓಕಳಿ ಕೂಡ ಆಡುತ್ತಾರೆ. ಯುಗಾದಿ ದಿನಾ ಜೀವ ಕುಡ್ದ ಚೆಂಡಾಡಬೇಕು’ ಎಂಬ ಸಂಪ್ರದಾಯ ಮಾತಿನಿಂದ ಬಟ್ಟೆ ಚೆಂಡಾಟವೆ ಅತಿಹೆಚ್ಚು ಪ್ರಚಲಿತವಾಗಿದ್ದೆಂದು ಹೇಳಬಹುದಾಗಿದೆ. ಹುಣಸೆಹಣ್ಣನ್ನು ಚೆನ್ನಾಗಿ ಕುಟ್ಟಿ ಗಟ್ಟಿಯಾದ ಮುದ್ದಿಯನ್ನು ಗುಂಡಾಗಿ ಮಾಡಿ ಮೇಲೆ ಬಟ್ಟೆಯನ್ನು ಒಂದು ಹಿಡಿಗಾತ್ರಕ್ಕೆ ಮಿಕ್ಕುವಷ್ಟರವರೆಗೆ ಬಿಗಿಯಾಗಿ ಸುತ್ತಿ ಚೆಂಡು ತಯಾರಿಸುತ್ತಾರೆ. ಈ ಚೆಂಡಾಡಕ್ಕೆ ಊರಿನ ಹಿರಿಯರೆಲ್ಲರೂ ಸೇರಿ ಬಯಲಿಗೆ ಹೋಗುತ್ತಾರೆ. ಅಲ್ಲಿ ಹೊಡೆ ಚೆಂಡಾಟ, ಚಂಡಿನ ಒಂದೇಟು ಬಿದ್ದರೂ ಬಲವಾಗಿ ಪೆಟ್ಟು ಬೀಳುತ್ತದೆ. ಆದರೂ ಉತ್ಸಾಹದಿಂದ ಇದನ್ನು ಆಡುತ್ತಾರೆ. ಈ ಆಟ ಮುಂದುವರಿದಂತೆ ಉತ್ಸಾಹ ಉಕ್ಕುತ್ತದೆ. ಆಡುವವರಲ್ಲಿ ರೋಶ ಏರುತ್ತದೆ. ಇದನ್ನು ನೋಡಲೆಂದು ನಾರಿಯರೂ ಬಯಲಂಚಿನಲ್ಲಿ ಸೇರಿರುತ್ತಾರೆ. ಇದೇ ಚೆಂಡಿನಿಂದ ’ಲಗ್ಗೆ’ ಆಟವನ್ನು ಆಡುತ್ತಾರೆ. ಇವಲ್ಲದೆ ಹಲವು ಪ್ರಕಾರದ ಜೂಜಾಟಗಳನ್ನು ಆಡುತ್ತಾರೆ. ಹೆಂಗಸರು  ಕುಂಟೆಬಿಲ್ಲೆ, ರತ್ತೋರತ್ತೋ ರಾಯನ ಮಗಳೆ, ಹಳ್ಮನೆ, ಖೋ – ಖೋ ಮುಂತಾದ ಆಟಗಳನ್ನು ಆಡುತ್ತಾರೆ.

ಸಾಮೂಹಿಕ ಕ್ರೀಡೆಗಳಲ್ಲದೆ, ವೈಯಕ್ತಿಕವಾಗಿ ಶಕ್ತಿ ಪ್ರದರ್ಶಿಸುವ ಪ್ರದರ್ಶನಗಳೂ ಜರುಗುತ್ತವೆ. ಕಸರತ್ತುಗಳಲ್ಲಿ ಜನಪದರು ತಮ್ಮ ಹೊಸ ಉತ್ಸಾಹವನ್ನು ಹೊಮ್ಮಿಸುವರು. ಬೆಳಗಾವಿ ಜಿಲ್ಲೆಯ ಗ್ರಾಮಗಳಲ್ಲಿ ಕುಸ್ತಿ ಪ್ರದರ್ಶನ ಮತ್ತು ಜೋಡೆತ್ತಿನ ಗಾಡಿ ಶರ್ಯತ್ತುಗಳು ಪ್ರಮುಖವಾಗಿವೆ. ಮಂಡ್ಯ ಜಿಲ್ಲೆಯಲ್ಲಿ ಹೊನ್ನೆತ್ತು ಹಿಡಿಯುವುದು ವಿಶೇಷವೆನಿಸಿದೆ.

’ಹೊನ್ನೆತ್ತು’ ಎಂದರೆ ಚೆನ್ನಾಗಿ ಮೇಯಿಸಿ ಮೈಬಂದ ಒಂದು ಎತ್ತನ್ನು ಹಿಡಿದು ತಂದು, ಊರ ರಂಗದ ಮುಂದೆ ಮೈತೊಳೆದು ನಿಲ್ಲಿಸುತ್ತಾರೆ. ಅದರ ಕತ್ಹುರಿ, ಮುಗ್ದಾರ, ಮುಂತಾದ ಹಗ್ಗಗಳನ್ನು ಬಿಚ್ಚುತ್ತಾರೆ. ಇದರ ಕೊಂಬಿಗೆ ಬಿಳಿ ಬಟ್ಟೆಯ ಸಹಾಯದಿಂದ ’ಐದ್ಹಣ’ ಕಟ್ಟುತ್ತಾರೆ. ಹೀಗೆ ಕಟ್ಟಿದ ಹೊನ್ನೆತ್ತನ್ನು ಅದು ತೋಚಿದ ಕಡೆ ಓಡಲು ಬೆದರಿಸಿ ಬಿಡುತ್ತಾರೆ. ಆ ರೀತಿ ಓಡಲಾರಂಭಿಸಿದ ಯುವಕ ರೈತರಲ್ಲಿ ಯಾರಾದರೂ ಹಿಡಿದು ನಿಲ್ಲಿಸಬಹುದು. ಹಾಗೆ ಹಿಡಿದು   ನಿಲ್ಲಿಸುವ ತಾಕತ್ತು ಯಾರಿಗಿದೆಯೊ ಅಂಥವರಿಗೆ  ಅದರ ಕೊಂಬಿಗೆ  ಕಟ್ಟಿರುವ ಐದ್ಹಣದ ಗಂಟು ದಕ್ಕುತ್ತವೆ.  ಇಲ್ಲಿ ಹಣ ಮುಖ್ಯವಲ್ಲ. ಸಾಹಸ ಪ್ರವೃತ್ತಿ ತಮಿಳು ನಾಡಿನಲ್ಲಿ ’ಪೊಂಗಲ್’ ಹಬ್ಬದಂದು ಗೂಳಿಗಳನ್ನು ಎದುರಿಸಿ ಕಟ್ಟಿ ಹಾಕುವ ’ಜಲ್ಲಿಕಟ್ಟು’ ಕ್ರೀಡೆಯೂ ಇದನ್ನೆ ಹೋಲುತ್ತದೆ.

ಧಾರ್ಮಿಕ ಆಚರಣೆಗಳು:

ಸಂಜೆ ಮಬ್ಬು ಯುಗಾದಿ ಆಟಗಳಿಗೆ ತೆರೆ ಎಳೆಯುತ್ತದೆ. ಹಲವಾರು ಧಾರ್ಮಿಕ ಆಚರಣೆಗಳಿಗೆ ಯುಗಾದಿ ರಂಗ ಸ್ಥಳ ಒದಗಿಸುತ್ತದೆ.

ಜನಪದರಿಗೆ ಎತ್ತುಗಳೆ ಪ್ರತ್ಯಕ್ಷ ದೇವರು, ಮಲೆನಾಡಿನಲ್ಲಿ, ಸಂಜೆಯ ಹೊತ್ತು ಸಿಂಗರಿಸಿದ ಎತ್ತುಗಳ ಮೆರವಣಿಗೆಯನ್ನು ಬಲು ಸಡಗರದಿಂದ ಹೊರಡಿಸುತ್ತಾನೆ. ಕೆಲವು ಗ್ರಾಮಗಳಲ್ಲಿ ದೇವರ ತೇರು ಎಳೆಯುತ್ತಾರೆ. ಬೆಳವಲದಲ್ಲಿ ಬಸವಣ್ಣನ ತೇರು ಎಳೆಯುವುದು ಸಂಪ್ರದಾಯವೆ ಆಗಿದೆ.

ವೀರಶೈವರ ಕಂಬಿಗಳು ಬರುವ ದಿನವೂ ಯುಗಾದಿಯೇ. ಕಂಬಿಯ ಅಯ್ಯಗಳು, ಕಂಬಿಯ ಹಾಡುಗಳನ್ನು ಹಾಡುತ್ತ ಕುಣಿದು ಕಂಬಿಗಳನ್ನು ಆಡಿಸುವರು. ಈ ಕುಣಿತಗಳು ಮನೋರಂಜಕವಾಗಿರುತ್ತವೆ. ಅವುಗಳಲ್ಲಿ ಭಕ್ತಿರಸದ ಪ್ರಾಧಾನ್ಯ ಕಂಡು ಬರುವುದು. ಸಂಬಾಳದೊಡನೆ ಕುಣಿಯುವ ’ನಂದಿ’ ಹಾಗೂ ’ಭೈಂಗಿ’ ಕುಣಿತಗಳಿಗೆ ಈ ಕುಣಿತಗಳು ಸಮೀಪವಾಗಿವೆ. ಇಲ್ಲಿಯೂ ಸಂಬಾಳ ಕೈಯ್ಯಾಕಗಳ ಜೋಡಣೆಯು ಕಂಡು ಬರುತ್ತದೆ (೨೫)

ಚೈತ್ರ ಶುದ್ಧ ಪ್ರತಿಪದೆ ಎಂದರೆ ಯುಗಾದಿಯಿಂದ ಪೂರ್ಣಿಮೆಯವರೆಗೂ ಬೇರೆ ಬೇರೆ ದೇವರಿಗೆ ದವನಗಳನ್ನು ಸಲ್ಲಿಸುವ ಪದ್ಧತಿ ನಮ್ಮ ನಾಡಿನಲ್ಲಿರುವುದು. ಹೇಗೆ ದವನ ಅರ್ಪಿಸಿದರೆ ಹೊಸ ವರ್ಷದಲ್ಲಿ ಮಳೆ-ಬೆಳೆಗಳು ಸುಭಿಕ್ಷ ವಾಗುವುದೆಂಬುದು ನಮ್ಮ ಒಕ್ಕಲಿಗರಲ್ಲಿ ನೆಲೆ ನಿಂತ ಶ್ರದ್ಧೆ ವಿಶ್ವಾಸ.

ಬೆಳುವಲದಲ್ಲಿ ಯುಗಾದಿ (೨೬) :

ದೊಡ್ಡ ಬೆಳಸನ್ನೊಕ್ಕುವ ಬೆಳುವಲದವರು ಈ ಹಬ್ಬವನ್ನು ಬಲು ಸಡಗರದಿಂದ ಮಾಡುತ್ತಾರೆ. ಅವರ ಹಾಡುಗಳಲ್ಲಿ ಯುಗಾದಿ ಚಿತ್ರ ಪರಿಪೂರ್ಣವಾಗಿ ಮಾಡಿದೆ.

ಗುಡಿಯ ತೋರಣ ಕಟ್ಟಿ ಸಡಗರವು ಹೊಸದಿನವು
ಉಡುಗರೆಯ ನಾಡು ಬೆಳವಲವು || ಹೊಸತನವ
ಎಡೆಮಾಡಿ ಉಂಡು ಶಿವನೆಂದು ||

ಹೊಸದಿನಕ್ಕೆ ಹೊಸತನವು ಹೊಸಮಳೆಯು ಹೊಸಬೆಳೆಯು
ಹೊಸ ದೀಪ ಹಚ್ಚಿ ಬೆಳವಲವು || ಎಳೆಯುವುದು
ಬಸವಣ್ಣ ನಿಮ್ಮ ಹೊಸತೇರು ||

ಅಂಬಲಿಯ ನೀಡುತಲಿ ಎಂಬಲವ ಹಾಕುತಲಿ
ಕಂಬಿಗಳ ಹೊತ್ತು ಮರೆಸುತಲಿ | ಹೊಸ ದಿನಕೆ
ಶಂಭುಹರನೆಂದು ಬೆಳವಲವು ||

ಹೊಸತನವು ಬೆಳುವಲದಲ್ಲಿ ಯಾವಾಗಲೂ ದೇವರಿಗೇ ಮೀಸಲು, ಬೆಳುವಲದ ಭಕ್ತಿ ಬಸವಣ್ಣನ ಮೇಲೆ ವಿಶೇಷವಾಗಿದೆ. ಬೆಳುವಲದಲ್ಲಿಯೇ ಬಸವಣ್ಣನ ಜಾತ್ರೆಗಳು ಬಹಳ. ಎತ್ತುಗಳನ್ನು ಮೆರೆಸಿ ಉತ್ಸವ ಮಾಡಿ, ಹೊಸ ದೀಪ ಬೆಳಗುವರು. ಬೇಸಿಗೆಯಲ್ಲಿ ಅಂಬಲಿ ದಾನವು ಬಹು ದೊಡ್ಡದೆಂದು ಬೆಳುವಲದವರ ಭಾವನೆ. ಅಂಬಲಿಯಾಗ ಬೇಕಾದರೆ (ಎಂಬಲಿ) ಹುಳಿಮಜ್ಜಿಗೆ ಬೇಕು. ಬೇಸಿಗೆ ಬಿಸಿಲಲ್ಲಿ ನಡೆದು ಬಾಯಾರಿ ಬಂದವನು ಅಂಬಲಿ ಹಿತವನ್ನು ಹೇಳಬಲ್ಲ. ಒಕ್ಕಲಿಗರು ಅಂಬಲಿ ಬಂಡಿಯನ್ನು ಯುಗಾದಿಯಿಂದಲೆ ಹೂಡುವರು. ಬಂಡಿಯ ಮುಂದೆ ಮೋಜು, ಮಜಲಿನೊಡನೆ ಹೆಜ್ಜೆಗಳನ್ನು ಹಾಕುವರು.

ಯುಗಾದಿಯ ೨ ದರ್ಶನಗಳು:

ಯುಗಾದಿ’ ಬೆಳಗು ಜಾವ ರತ್ನಪಕ್ಷಿ (ಸಂಬಾರಗಾಗಿ) ಕಂಡರೆ ವರ್ಷವೆಲ್ಲ ಶುಭವೆಂಬ ಭಾವನೆ ಬಲವಾಗಿ ಬೇರೂರಿದೆ. ಆದ್ದರಿಂದ ರತ್ನಪಕ್ಷಿ ದರ್ಶನಕ್ಕಾಗಿ ಗಿಡಮರಗಳ ಗುಂಪುಗಳಿದ್ದಲ್ಲಿ ಅರಸಿ ಹೋಗುವುದುಂಟು.

ಎರಡನೆಯದು ಚಂದ್ರದರ್ಶನ. ಯುಗಾದಿಯ ಪ್ರಮುಖದ ಆಚರಣೆ ಇದು. ಹೊತ್ತು ಮುಳುಗುವುದಕ್ಕೂ ಜನರೆಲ್ಲ ಕುತೂಹಲಿಗಳಾಗಿ ಪಶ್ಚಿಮಾಗಸದತ್ತ ನೋಡತೊಡಗುತ್ತಾರೆ. ಸಣ್ಣಗೆರೆ ಎಳೆದಂತೆ ಚಂದ್ರ ಕಾಣಿಸುತ್ತಾನೆ. ಚಂದ್ರ ದರ್ಶನವಾದವರು ಇತರರನ್ನೂ ಕರೆಕರೆದು ತೋರಿಸುವ ದೃಶ್ಯ ಮೋಜಿನದಾಗಿರುತ್ತದೆ. ಚಂದ್ರದರ್ಶನ ಮಾಡಿಕೊಂಡ ಮಹಿಳೆಯರು ಆತನನ್ನು ನಿಂತಲ್ಲಿಂದಲೇ ಪೂಜಿಸುತ್ತಾರೆ. ಎಲ್ಲರೂ ಗುರುಹಿರಿಯರಿಗೆ, ದೇವರಿಗೆ ನಮಸ್ಕರಿಸುತ್ತಾರೆ.

ಇಂದು ಕಾಣುವ ಚಂದ್ರನ ಮೇಲೂ ಭಾವೀ ವರ್ಷದ ಬೆಲೆಗಳ ಭವಿಷ್ಯ ಊಹಿಸುತ್ತಾರೆ. ಚಂದ್ರನ ಡೊಂಕು ಬಲಗಡೆ ಏರಿದ್ದರೆ ಬೆಲೆಗಳು ಏರುವುವೆಂದೂ ಇಳಿದಿದ್ದರೆ ಇಳಿಯುವುವೆಂದೂ ನಂಬುಗೆ.

ಯುಗಾದಿ ದಿನದ ಹಿಂದೆ ವರ್ಷ, ಋತು, ಮಾಸ, ಪಕ್ಷ, ತಿಥಿ, ನಕ್ಷತ್ರ, ಯೋಗ, ಕರಾಣಾದಿಗಳ ಸಂಧಿದೋಷ ಘಟಿಸುತ್ತದೆ. ಆದ್ದರಿಂದ ಚೈತ್ರ ಶುದ್ಧ ಪ್ರಥಮೆಯಂದು ಈ ದೋಷದ ನಿವಾರಣೆಗೆಂದು ಈಶ್ವರ ಪೂಜೆ ಮತ್ತು ಬಿದಿಗೆ ಚಂದ್ರದರ್ಶನ ಮಾಡಿಕೊಳ್ಳುತ್ತಾರೆ (೨೭)

ಕೊನೆಯ ಆಚರಣೆ:

ಯುಗಾದಿ ರಾತ್ರಿ ಪರರ ಮನೆ ಮೇಲೆ ಕಲ್ಲು ಒಗೆದು, ಅವರಿಂದ ಬೈಸಿಗೊಂಡರೆ ಒಳ್ಳೆಯದೆಂದು ಒಂದು ವಿಚಿತ್ರ ನಂಬುಗೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ಪರರ ಮನೆಯ ಮೇಲೆ ಕಲ್ಲು ಒಗೆಯುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಇದು ರೂಢಿಯಲ್ಲಿದ್ದುದಾಗಿ ತಿಳಿದಿದೆ (೨೮)

ಇಲ್ಲಿಗೆ ಯುಗಾದಿ ಪ್ರತಿಪದೆಯ ಆಚರಣೆಗಳು ಮುಕ್ತಾಯವಾದಂತೆ ಆಗುತ್ತವೆ.

ಯುಗಾದಿ ಕರಿ :

ಹಬ್ಬಗಳ ಮಾರನೆ ದಿನವನ್ನು ಕರಿಯೆಂದು ಆಚರಿಸುವುದು ರೂಢಿ. ಯುಗಾದಿ ಕರಿಯಂದು ಹಿಂದುಗಳು ಹೋಳಿಗೆ ಮಾಡಿ ಉಣ್ಣುತ್ತಾರೆ. ಯುಗಾದಿ ದಿನದಂದು ಮಾಂಸಾಹಾರ ವರ್ಜಸಿರುವ ಬೇಡರು ಮತ್ತು ಊರ ತಳವಾರರು ಅಂದು ಬೇಟೆಗೆ ಹೋಗುತ್ತಾರೆ. ನೇಮಕ್ಕಾಗಿ ಚಿಕ್ಕಪ್ರಾಣಿಯನ್ನಾದರೂ ಬೇಟೆಯಾಡಿ, ಊರಲ್ಲಿ ತಂದು ಮೆರಸುತ್ತಾರೆ. ಅದರ ರಕ್ತವನ್ನು ಪ್ರತಿ ಮನೆಯ ಬಾಗಿಲಿಗೂ ಕೆಲವೊಂದು ಗ್ರಾಮಗಳಲ್ಲಿ ಒರಸುವ ಸಂಪ್ರದಾಯವಿದೆ.

ಧಾರವಾಡ ಜಿಲ್ಲೆ, ಬ್ಯಾಡಗಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಗೂಗೆಯ ಬೇಟೆಯಾಡಿ, ಊರ ಅಗಸಿಯಲ್ಲಿಯ ಮರವೊಂದಕ್ಕೆ ಅದನ್ನು ತೂಗುಹಾಕುತ್ತಾರೆ. ಗೂಗೆ ಹೊಡೆಯುವುದು ಕೆಡಕಿನ ಬೇಟೆಯಾಡುವುದಕ್ಕೆ ಸಂಕೇತ ವಾಗಿರಬಹುದು.

ಬೇಟೆಯ ಕಾಲದಲ್ಲಿ ಯಾರಾದರೂ ಮಡಿದಲ್ಲಿ ಆ ಊರ ಬೇಟೆಗಾರರು ಯುಗಾದಿಯನ್ನು ಮೂರು ದಿನ ತಡೆದು ಆಚರಿಸುತ್ತಾರೆ. ಈ ಬಗೆಗೆ ಡಾ.ಆರ್. ಶೇಷಶಾಸ್ತ್ರಿಯವರ ’ಕರ್ನಾಟಕದ ವೀರಗಲ್ಲುಗಳು’ ಗ್ರಂಥದಲ್ಲಿ ಒಂದು ನಿದರ್ಶನವಿದೆ (೨೯)

ವರ್ಷದ ತೊಡಕು :

ಯುಗಾದಿ ಮಾರನೆ ದಿನವನ್ನು ’ವರ್ಷದ ತೊಡಕು’ ಎಂದೂ ಕರೆಯುತ್ತಾರೆ. ಆ ದಿನ ಏನು ಮಾಡಿದರೂ ವರ್ಷವಿಡೀ ಹಾಗೆಯೆ ತೊಡರಿಕೊಳ್ಳುತ್ತದೆಂಬ ನಂಬಿಗೆ ಇದೆ. ಈ ನಂಬಿಗೆಯಡಿಯಲ್ಲಿ ಹಲವಾರು ಆಚರಣೆಗಳು ರೂಢಿಯಲ್ಲಿ ಬಂದಿವೆ. ಅಂತಹ ಕೆಲವನ್ನು ಇಲ್ಲಿ ನೋಡಬಹುದು.

೧) ವರ್ಷವೆಲ್ಲ ಸಿಹಿಯಾಗಿರಲೆಂದು ಹಿಂದುಗಳು ಹೋಳಿಗೆಯುಂಡರೆ, ಮಾಂಸಾಹಾರಿಗಳು ಅಪರೂಪದ ಮಾಂಸವನ್ನು ಉಣ್ಣುವುದುಂಟು.

೨) ಇಡೀ ದಿನ ಯಾರಿಗೂ ಬಿರುನುಡಿಗಳನ್ನು ಆಡುವುದಿಲ್ಲ. ಅಡಿಸಿಗೊಳ್ಳುವುದೂ ಇಲ್ಲ.

೩) ರೋಗಿಗಳೂ ಆ ದಿನ ಮಾತ್ರ ವೈದ್ಯರಲ್ಲಿಗೆ ಕೂಡ ಹೋಗುವುದಿಲ್ಲ. ಔಷಧಿಯನ್ನೂ ಸೇವಿಸುವುದಿಲ್ಲ.

’ವರ್ಷದ ತೊಡಕು’ ಕುರಿತು ಡಾ. ಎಂ. ಚಿದಾನಂದ ಮೂರ್ತಿಯವರು ಮತ್ತು ಶ್ರೀಕಂಠ ಕೂಡಿಗೆಯವರು ಈಗಾಗಲೇ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ನೋಡುವುದು ವಿಹಿತ (೩೦)

ಡಾ. ಎಂ. ಚಿದಾನಂಮೂರ್ತಿಯವರ ಪ್ರಕಾರ ಯುಗಾದಿಯ ಮಾರನೆ ದಿನ, ಶ್ರೀಕಂಠ ಕೂಡಿಗೆಯವರ ಪ್ರಕಾರ ದೀಪಾವಳಿ ಮಾರನೆ ದಿನ ’ವರ್ಷದ ತೊಡಕು’ ಬರುತ್ತದೆ. ಇವರೀರ್ವರ ಅಭಿಪ್ರಾಯದಲ್ಲಿ ’ತೊಡಕು’ ಇದರ ವಾಸ್ತವ ರೂಪ ’ತೊಡಗು’ ರೈತರು ಮತ್ತಿತರರು ಯುಗಾದಿ ಮರುದಿನದಿಂದ ನಿಜವಾಗಿ ಕೆಲಸಕ್ಕೆ ತೊಡಗುವುದರಿಂದ ಆ ದಿನಕ್ಕೆ ’ವರ್ಷದ ತೊಡಗು’ ಎಂಬುದೇ ಯೋಗ್ಯ ಮತ್ತು ವಾಸ್ತವವೆಂಬುದು ಡಾ. ಚಿದಾನಂದ ಮೂರ್ತಿಯವರ ಅಭಿಪ್ರಾಯದ ಸಾರ. ಶ್ರೀಕಂಠ ಕೂಡಿಗೆಯವರು ’ಪ್ರಾಯಶಃ ವರ್ಷ ತೊಡಕು ಅವರ ಪಾಲಿಗೆ ಹೊಸ ವರ್ಷದ ತೊಡಗು ಇರಬೇಕು’ ಎಂದಿದ್ದಾರೆ.

’ವರ್ಷ ತೊಡಕು’ ಧಾರವಾಡ ಜಿಲ್ಲೆಯ ಗ್ರಾಮಗಳಲ್ಲಿ ಯುಗಾದಿ, ದೀಪಾವಳಿಗಳ ಮಾರನೆಯ ದಿನಗಳಿಗೆ ಮಾತ್ರ ಸೀಮಿತವಾಗಿಲ್ಲ. ಶ್ರಾವಣದ ಪಂಚಮಿ ಹಬ್ಬದ ಮಾರನೆಯ ದಿನವೂ ’ವರ್ಷ ತೊಡಕ’ನ್ನು ಆಚರಿಸುತ್ತಾರೆ. ಇಲ್ಲಿ ಇದೇ ಹೆಚ್ಚು ರೂಢಿಯಲ್ಲಿದೆ. ಇದರಿಂದ ’ವರ್ಷದ ತೊಡಕು’ ಯುಗಾದಿ, ಪಂಚಮಿ, ದೀಪಾವಳಿ ಈ ಮೂರೂ ಹಬ್ಬಗಳ ಮಾರನೆಯ ದಿನ ಆಚರಿಸಲ್ಪಡುತ್ತದೆ ಎಂಬುದು ನಿದರ್ಶನವಾದಂತಾಯಿತು.

ಯುಗಾದಿ ಮರುದಿನದಿಂದ ರೈತನಾಗಲಿ ಇತರರಾಗಲಿ ನಿಜವಾಗಿ ಕಾರ್ಯತತ್ಪರರಾಗುವಂತೆ, ಪಂಚಮಿ ಮರುದಿನದಿಂದ ನಿಜವಾಗಿ ತೊಡಗುವುದು ಯಾವುದೂ ಇರುವುದಿಲ್ಲ. ಅಲ್ಲದೆ ದೀಪಾವಳಿ ಮರುದಿನದಿಂದ ಹೊಸವರ್ಷದಲ್ಲಿ ತೊಡಗುವಂತೆ ಪಂಚಮಿ ಮರುದಿನ ಯಾವ ಹೊಸವರ್ಷವೂ ಇರುವುದಿಲ್ಲ. ಇದನ್ನು ಗಮನಿಸಿದಾಗ ’ತೊಡಕು’ ವಾಸ್ತವವಾಗಿ ’ತೊಡಗು’ ಎನ್ನುವ ಹೇಳಿಕೆ ಅಷ್ಟು ಸಮಂಜಸವೆನಿಸುವುದಿಲ್ಲ. ’ತೊಡಕು’ ಶಬ್ದಕ್ಕೆ ’ತೊಡಂಕು’ ಎಂದು ನಿಷ್ಪತ್ತಿ ಹೇಳುವುದೆ ಸರಿಯೆನಿಸುತ್ತದೆ. ಹೀಗೆ ಹೇಳುವುದರಿಂದ ಜಾನಪದ ನಂಬಿಗೆಗಳೂ ಆಸ್ಪದ ದೊರೆಯುತ್ತದೆಂದು ಇಲ್ಲಿ ನಮ್ರವಾಗಿ ಸೂಚಿಸಬಯಸುತ್ತೇನೆ.

ಉಪ ಸಂಹಾರ:

ಕನ್ನಡ ಜಾನಪದ ಸಾಹಿತ್ಯದಲ್ಲಿ ಯುಗಾದಿಯನ್ನು ಕುರಿತು ಅನೇಕ ಲಾವಣಿಗಳು, ಸುಗ್ಗಿಯ ಹಾಡುಗಳು ಗರತಿಯರ ಹಾಡುಗಳು, ದಂತಕಥೆಗಳು ಹೇರಳವಾಗಿರುವುದನ್ನು ಗುರುತಿಸಿದರೆ, ಯುಗಾದಿಯ ಪ್ರಭಾವವನ್ನೆ ಗುರುತಿಸಿದಂತಾಗುತ್ತದೆ.

ಕನ್ನಡ ಜನಪದ ಸಂಸ್ಕೃತಿ, ಸಂಪ್ರದಾಯಗಳನ್ನು ಹೊತ್ತ ಯುಗಾದಿ ಕನ್ನಡ ನಾಡಿನಲ್ಲಿ ವೈವಿಧ್ಯಪೂರ್ಣವಾಗಿ ಉತ್ಸಾಹ ಸಡಗರಗಳಿಂದೊಡಗೂಡಿ ಆಚರಿಸುವ ಬಹುದೊಡ್ಡ ಹಬ್ಬವಾಗಿದೆ.

 

ಅಡಿ ಟಿಪ್ಪಣಿಗಳು :

೧. ’ಕನ್ನಡ ವಿಶ್ವಕೋಶ’ ಸಂ. ೨

೨. ೪, ೨೭, ’ಭಾರತದ ಹಬ್ಬ ಹರಿದಿನಗಳು – ಪ್ರೊ. ಡಿ.ಟಿ. ರಂಗಸ್ವಾಮಿ ಪು. – ೧೫, ೧೫, ೧೬.

೩. ,೫, ೮, ೯ ’ನಮ್ಮ ಸಂಸ್ಕೃತಿ ಪರಂಪರೆ’ – ಶ್ರೀ ಬೆಟಗೇರಿ ಕೃಷ್ಣಶರ್ಮ – ಪು – ೩, ೬, ೧೦೩, ೪

೬. ೭, ಭಾರತೀಯ ಹಬ್ಬಗಳು – ಪ್ರೊ.ಸಿ. ವ್ಹಿ.ಕೆರಿಮನಿ. ಪು-೧೦, ೧೧,

೧೦. ಡಾ. ಎಂ.ಎಂ. ಕಲಬುರ್ಗಿಯವರು ಹೇಳಿದ್ದು.

೧೧. ಜಾನಪದ ಜಯಂತಿ’ – ಶ್ರೀ ನಿಂಗಣ್ಣ ಸಣ್ಣಕ್ಕಿ. ಪು ೧೩೫.

೧೨. ೨೩. ಉತ್ತರ ಕರ್ನಾಟಕದ ಜನಪದ ನಂಬಿಕೆಗಳು – ಡಾ. ಎಂ.ಎಸ್. ಲಠ್ಠೆ ಪು ೩೭, ೩೮.

೧೩. ೨೫, ೨೬, ’ಕನ್ನಡ ಜಾನಪದ ಗೀತೆಗಳು – ಡಾ. ಬಿ.ಎಸ್. ಗದ್ದಗಿಮಠ, ಪು. ೧೭೯, ೩೧, ೧೭೮

೧೪. ೧೬ ರಿಂದ ೨೧ ೧೦ನೆಯ ಅ.ಕ. ಜಾನಪದ ಸಮ್ಮೇಳನದ ಗೋಷ್ಠಿಯ ಅಧ್ಯಕ್ಷ ಭಾಷಣದಿಂದ. ಪು. ೬, ೧೯೮೩

೧೫. ೨೪, ೨೮ ’ಕೆಲವು ಜನಪದ ಸಂಪ್ರದಾಯಗಳು – ತ.ಚಿ. ಚಲುವೇಗೌಡ ಪು – ೧೮೦- ೧೮೧, ೧೮೨

೨೨. ಬೆರಸಿ ಇಟ್ಟೀನ ಬೆಲ್ಲ ನೆನಗಡಲಿ – ಸಂ. ಜ್ಯೋತಿ ಹೊಸೂರ

೨೯. ’ಕರ್ನಾಟಕ ವೀರಗಲ್ಲುಗಳು – ಡಾ. ಆರ್. ಶೇಷಶಾಸ್ತ್ರಿ, ಪು. ೫೨೫.

೩೦. ’ಗ್ರಾಮೀಣ’ – ಡಾ. ಎಂ. ಚಿದಾನಂದ ಮೂರ್ತಿ, ಪು – ೧೭೪