’ಯುಗಾದಿ’ ಭಾರತೀಯ ಪರಂಪರೆಯಲ್ಲಿ ವರ್ಷದ ಹೊಸದಿನ. ಋತುಗಳಲ್ಲಿ ವಸಂತದಂತೆ. ದೇವತೆಗಳಲ್ಲಿ ಗಣಪತಿಯಂತೆ, ಹಬ್ಬಗಳಲ್ಲಿ ಯುಗಾದಿ ಹಿಂದೂಗಳಿಗೆ ಇದು ದೊಡ್ಡಹಬ್ಬ. ಅಂತೆಯೆ ಭಾರತದ ಪ್ರಮುಖ ಹಬ್ಬವೂ ಹೌದು.

ಹಿಂದೂ ಹಬ್ಬಗಳಾದ ಗೌರಿ-ಗಣೇಶ, ವಿಜಯದಶಮಿ, ದೀಪಾವಳಿ, ಮುಂತಾದುವು ಪುರಾಣ, ಇತಿಹಾಸ, ಧರ್ಮಶಾಸ್ತ್ರಗಳನ್ನು ಆಧರಿಸಿ ರೂಪಗೊಂಡಿವೆಯಾದರೂ ಪುರಾಣವೇ ಅವುಗಳ ಬೆನ್ನೆಲುವು. ಆದರೆ ಸಂಕ್ರಾಂತಿ ಮತ್ತು ಯುಗಾದಿಗಳ ವೈಶಿಷ್ಟ್ಯವೇ ಬೇರೆ. ಯಾವ ಪೌರಾಣಿಕ ಕಥೆಯೂ ಅಲ್ಲ, ’ಕಾಲಮಾನ ಪದ್ದತಿಯು ಇವುಗಳ ಬೆನ್ನೆಲುವು, ಜ್ಯೋತಿಷ್ಯ, ಧರ್ಮಶಾಸ್ತ್ರ, ಋತು ಧರ್ಮಗಳು ಪಕ್ಕೆಲುವುಗಳು.

ಯುಗಾದಿ ಅರ್ಥ :

’ಯುಗಾದಿ’ ಸಂಸ್ಕೃತ ಪದ ಇದರ ತದ್ಭವ ಉಗಾದಿ ಸಂಸ್ಕೃತದಲ್ಲಿ ’ಯುಗ’ವೆಂದರೆ ವರ್ಷ, ಆದಿಯೆಂದರೆ ಆರಂಭ. ಆದ್ದರಿಂದ ಯುಗಾದಿಯೆಂದರೆ, ’ವರ್ಷದ ಆರಂಭ’. ಇದು ಯಾವ ವರ್ಷದ ಆರಂಭವೂ ಆಗಬಹುದು. ಆ‌ದ್ದರಿಂದ ನಮ್ಮ ಯುಗಾದಿ ಯಾವುದೆಂಬುದನ್ನು ನಿರ್ಣಯಿಸಿಕೊಳ್ಳಬೇಕು.

ನಮ್ಮ ಯುಗಾದಿ:

ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಕಾಲಮಾನ ಪದ್ಧತಿಗಳು – ೧) ಚಾಂದ್ರ   ೨) ಸೌರ ೩) ಸಾವನ ೪) ನಾಕ್ಷತ್ರ ೫) ಬಾರ್ಹಸ್ಪತ್ಸಗಳೆಂದು ಇವುಗಳಲ್ಲಿ ಚಾಂದ್ರವತ್ಸರ ಗಣನಾ ಪದ್ಧತಿ ಅನುಕೂಲಕರವಾದ್ದರಿಂದ ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಹೆಚ್ಚು ಲೋಕಪ್ರಿಯವಾಯಿತು.

ಚಾಂದ್ರ ವತ್ಸರವೆಂದರೆ ಚೈತ್ರಾದಿಯ ವರ್ಷ ಚೈತ್ರಶುದ್ಧ ಪ್ರತಿಪದೆಯಿಂದ ಅಮವಾಸ್ಯೆವರೆಗೆ ಮಾಸಗಣನೆ ಮಾಡಿ, ಮುಂದೆ ವೈಶಾಖಾದಿ ಫಾಲ್ಗುಣ ಅಮವಾಸ್ಯೆವರೆಗೆ ೧೨ ತಿಂಗಳುಗಳ ಒಂದು ವರ್ಷವಾಗುತ್ತದೆ. ಚಂದ್ರನ ಗತಿ ಅವಲಂಬಿಸಿ ಎಣಿಕೆಗೊಳ್ಳುವ ಈ ಚಾಂದ್ರವತ್ಸರ ೩೫೪ ದಿನಗಳದ್ದಾಗುವುದು.

ವಿಂಧ್ಯ ಪರ್ವತದ ದಕ್ಷಿಣಕ್ಕಿರುವ ಜನರಲ್ಲಿ ತಮಿಳರು ಸೌರಮಾನ ಯುಗಾದಿ ಆಚರಿಸುತ್ತಾರೆ. ಕರ್ನಾಟಕ ಮತ್ತು ಆಂಧ್ರದವರು ಮಾತ್ರ ಚಾಂದ್ರಮಾನ ಯುಗಾದಿ ಆಚರಿಸುತ್ತಾರೆ. ಆದ್ದರಿಂದ ನಮ್ಮ ಯುಗಾದಿಯೆಂದರೆ ಚೈತ್ರಮಾಸದ ಶುಕ್ಲಪಕ್ಷ ಪಾಡ್ಯವು.

ವಿಚಾರವೊಂದಕ್ಕೆ ಇಲ್ಲಿ ಆಸ್ಪದವಿದೆ. ದೀಪಾವಳಿಯನ್ನು ನಮ್ಮ ಜನಪದರು ’ಹಟ್ಟೀ ಹಬ್ಬ’ವೆಂದೂ; ವಿಜಯದಶಮಿಯನ್ನೂ ಬನ್ನೀ ಹಬ್ಬವೆಂದೂ ತಮ್ಮ ನುಡಿಯಲ್ಲಿ ಕರೆದಿರುವಂತೆ ’ಯುಗಾದಿ’ಯನ್ನೂ ಹೆಸರಿಸಿರಬಹುದೆ? ಬೇವಿನ ಹೂವು ಸಿಹಿಯಲ್ಲಿ ಬೆರಸಿ ತಿನ್ನುವುದು ಈ ಹಬ್ಬದ ವೈಶಿಷ್ಟವಾಗಿರುವುದರಿಂದ ಇದು ’ಬೇವಿನ ಹಬ್ಬ’ವಾಗಿರಬಹುದೆ?

ಪ್ರಪಂಚದಲ್ಲಿ ಯುಗಾದಿ:

’ಯುಗಾದಿ’ ಅರ್ಥ ’ಹೊಸ ವರ್ಷದ ಆರಂಭದ ದಿನ’ ಎನ್ನುವಷ್ಟಕ್ಕೇ ಸೀಮಿತಗೊಳಿಸಿದರೆ ಪ್ರಪಂಚದ ಎಲ್ಲ ಜನಾಂಗಗಳಲ್ಲಿಯೂ ಇದರ ಆಚರಣೆ ಕಾಣಬಹುದಾಗಿದೆ. ಈ ಅರ್ಥದಲ್ಲಿ ಯುಗಾದಿ ಆಚರಣೆಯ ಪ್ರಪ್ರಥಮ ದಾಖಲೆಯು ಕ್ರಿ. ಪೂ. ೨೦೦೦ಕ್ಕೆ ಹೋಗುತ್ತದೆ. ಆ ಕಾಲದಲ್ಲಿ ಮೊಸೊಪೊಟೇಮಿಯಾದಲ್ಲಿ ಯುಗಾದಿ ಆಚರಿಸುತ್ತಿದ್ದುದಾಗಿ ತಿಳಿದಿದೆ. ಅಸ್ಸೀರಿಯನ್ನರಿಗೆ ಮೇಷ ಸಂಕ್ರಾಂತಿ ಸಮಯದ ಅಮವಾಸ್ಯೆ ದಿನದಂದೂ ಇಜಿಪ್ಶಿಯನ್, ಪೊನಿಶಿಯನ್, ಪರ್ಶಿಯನ್ನರಿಗೆ ತುಲಾ ಸಂಕ್ರಾಂತಿಯಂದೂ ಯುಗಾದಿಯೆಂದೂ ತಳಿದು ಬಂದಿದೆ. ರೋಮನ್ ಗಣರಾಜ್ಯದ ತಾರೀಖು ಪಟ್ಟಿಯ ಪ್ರಕಾರ ವರ್ಷಾರಂಭವು ಮಾರ್ಚ್  ೮ ರಂದು ಕ್ರಿ. ಪೋ. ೧೫೩ರ ಅನಂತರ ಜನವರಿ ೧ ನೆಯ ತಾರೀಖನ್ನು ವರ್ಷಾರಂಭದ ದಿನವೆಂದು ಪರಿಗಣಿಸಲಾಗಿದ್ದು ಜೂಲಿಯನ್ ತಾರೀಖು ಪಟ್ಟಿ ಇದನ್ನು ಸ್ಥಿರಪಡಿಸಿದೆ.

ಯಹೂದ್ಯರ ತಾರೀಖು ಪಟ್ಟಿಯ ಪ್ರಕಾರ ವರ್ಷಾರಂಭ ’ಟಿಷ್ರಿ’ ತಿಂಗಳು (ಸೆಪ್ಟಂಬರ್ ೬, ಅಕ್ಟೋಬರ್‌೫) ಮೊದಲನೆಯ ದಿನದಂದಾಗುತ್ತದೆ. ಮಧ್ಯಯುಗದ ಪ್ರಾರಂಭದಲ್ಲಿ ಕ್ರೈಸ್ತಧರ್ಮ ಪ್ರಬಲವಾಗಿದ್ದ ಯುರೋಪಿನಲ್ಲೆಲ್ಲ ಮಾರ್ಚ್ ೨೫ನೆಯ ದಿನವನ್ನು ವರ್ಷಾರಂಭದ ದಿನವೆಂದು ಪರಿಗಣಿಸಲಾಗಿತ್ತು. ಮುಂದೆ ಅದೇ ರಾಷ್ಟ್ರಗಳು ಡಿಸೆಂಬರ್ ೨೫ನ್ನು ವರ್ಷಾರಂಭದ ದಿನವೆಂದು ಪರಿಗಣಿಸಿದಾಗ ಇಂಗ್ಲೆಂಡೂ ಅದನ್ನು ಅನುಸರಿಸಿತ್ತು.

ಜನವರಿ ೧ ನೆಯ ತಾರೀಖು ವರ್ಷಾರಂಭದ ದಿನವೆಂದು ಗ್ರಿಗೋರಿಯನ್ ತಾರೀಖು ಪಟ್ಟಿಯಿಂದ ಸ್ವೀಕರಿಸಲ್ಪಟ್ಟು ರೋಮನ್ ಕೆಥೋಲಿಕ್ ರಾಷ್ಟ್ರಗಳೆಲ್ಲವೂ ಅದನ್ನೆ ವರ್ಷಾರಂಭದ ದಿನವೆಂದು ಸ್ವೀಕಾರ ಮಾಡಿದುವು ಆದರೆ ಸ್ಕಾಟಲೆಂಡು ೧೬೬೦ರಲ್ಲಿ, ಜರ್ಮನಿ ಮತ್ತು ಡೆನ್ಮಾರ್ಕು ಸು. ೧೭೦೦ರಲ್ಲೂ ರಶ್ಯ ೧೭೦೬ ರಲ್ಲೂ, ಇಂಗ್ಲೆಂಡ್ ೧೭೫೨ರಲ್ಲೂ, ಸ್ವೀಡನ್ನು ೧೭೫೩ರಲ್ಲೂ ಇದನ್ನು ವಿರೋಧಿಸಿದವು.

ಉತ್ತರ ಭಾರತದಲ್ಲಿ ವಿಕ್ರಮಶಕದ ಆರಂಭದ ದಿನ ಎಂದರೆ ಕಾರ್ತಿಕ ಶುದ್ಧ ಪ್ರಥಮೆಯೆಂದು ಯುಗಾದಿ ಆಚರಿಸುವರು.

ನಮ್ಮ ಯುಗಾದಿ ವೈಶಿಷ್ಟ್ಯಗಳು:

ಕಾಲಮಾನ ಪದ್ಧತಿಯೇ ನಮ್ಮ ಯುಗಾದಿಗೆ ಮೂಲಾಧಾರವಾಗಿದ್ದರೂ ಕಾಲಕಳೆದಂತೆ ಅನೇಕಾನೇಕ ಘಟನೆಗಳು ಈ ದಿನಕ್ಕೆ ಹೊಂದಿಕೆಯಾಗುವಂತೆ ಜರುಗಿದುವು ಜೊತೆಗೆ ಪುರಾಣಕಥೆಗಳೂ ಸೇರಿಕೊಂಡುವು ಇವು ಯುಗಾದಿ ಆಚರಣೆಗೆ ಇನ್ನೂ ಮಹತ್ವ ತಂದುಕೊಟ್ಟುವು ಅವುಗಳನ್ನಿಲ್ಲಿ ನೋಡಬಹುದು.

೧) ಬ್ರಹ್ಮನು ಈ ಜಗತ್ತನ್ನು ಸಮಗ್ರವಾಗಿ ಸೃಷ್ಟಿಸಿದ ದಿನವು (ಅಥವಾ ಈ ಜಗತ್ತಿನ ಸೃಷ್ಟಿಗೆ ಆರಂಭಿಸಿದ ದಿನವು ಚೈತ್ರ ಶುದ್ಧ ಪ್ರಥಮ ಸೂರ್ಯ್ಯೋದಯವೆಂದೂ ಅಂದಿನಿಂದ ಕಾಲಗಣನೆಗೆ ಗ್ರಹ, ನಕ್ಷತ್ರ, ಋತು, ಮಾಸ ವರ್ಷಾಧಿಪರನ್ನು ನಿಯೋಜಿಸಿದನೆಂದೂ ವ್ರತಖಂಡ ಪುರಾಣಾದಿಗಳು ಸಾರುತ್ತವೆ (೨)

೨) ಸದ್ಯ ಊರ್ಜಿತದಲ್ಲಿರುವ ಶ್ವೇತ ವಾರಾಹ ಕಲ್ಪವೂ, ಕಲಿಯುಗವೂ ಅಲ್ಲದೆ ಶಾಲಿವಾಹನ, ಯುಧಿಷ್ಠಿರ ಶಕಗಳೂ ಚೈತ್ರ ಶುಕ್ಲ ಪ್ರತಿಪದೆಯಿಂದಲೇ ಪ್ರಾರಂಭವಾಗುತ್ತವೆ. ಆದುದರಿಂದ ಈ ದಿನವನ್ನು ಕಲ್ಪಾದಿ, ಯುಗಾದಿ, ಸಂವತ್ಸರಾದಿ, ವರ್ಷ ಪ್ರತಿಪದೆ ಎಂದು ಬೇರೆ ಬೇರೆ ಹೆಸರಿನಿಂದ ಹೇಳುವ ರೂಢಿಯಿದೆ (೩)

೩) ರಾಮಾಯಣ ಪೂರ್ವಕಾಲದಲ್ಲಿ ಹೊಸ ವರ್ಷ ಗಣನೆಯು ಉತ್ತರಾಯಣದಿಂದ ಪ್ರಾರಂಭವಾಗುತ್ತಿದ್ದಿತು. ರಾಮಾಯಣದಲ್ಲಿ ’ತತಶ್ಚ ದ್ವಾದಶೇ ಮಾಸೇ ಚೈತ್ರೇ ನಾವಮಿಕೇ ತಿಥೌ ಎಂದು ಶ್ರೀ ರಾಮನ ಜನನ ವರ್ಣಿತವಾಗಿದೆ. ಇದರಿಂದ ಚೈತ್ರವು ೧೨ನೆಯ ಮಾಸವಾಗಿದ್ದು, ವೈಶಾಖದಿಂದ ಹೊಸ ವರ್ಷ ಗಣನೆ ನಡೆಯುತ್ತಿದ್ದಿತೆಂದು ತಿಳಿಯುತ್ತದೆ. ಕ್ರಿ.ಶ. ೫ನೆಯ ಶತಮಾನದಲ್ಲಿ ವರಾಹಮಿಹಿರಾಚಾರ್ಯನು ವಸಂತ ವಿಷುವತ್ ಅಶ್ವಿನಿಯಲ್ಲಿ ಸಂಭವಿಸುವುದನ್ನು ಪರಿಗಣಿಸಿ ಚೈತ್ರ ಮಾಸದಿಂದ ಹೊಸವರ್ಷ ಗಣನೆ ಪ್ರಾರಂಭಿಸಿದನೆಂದು ಬಲ್ಲವರು ಅಭಿಪ್ರಾಯ ಪಟ್ಟಿದ್ದಾರೆ (೪)

೪) ಶ್ರೀರಾಮ ನವರಾತ್ರೋತ್ಸವಕ್ಕೂ, ದೇವಿ ನವರಾತ್ರೋತ್ಸವಕ್ಕೂ ಚೈತ್ರ ಶುದ್ಧ ಪಾಡ್ಯವೆ ಆರಂಭದ ದಿನವಾಗಿದೆ. ಅಲ್ಲದೆ ಶ್ರೀರಾಮನು ಅಯೋಧ್ಯೆಯಲ್ಲಿ ಸಿಂಹಾಸನಾಭಿಷಿಕ್ತನಾದ ದಿನವೂ ಅದೇ ಆಗಿದೆ (೫)

೫) ಚೈತ್ರ ಶುದ್ಧ ಪಾಡ್ಯದ ದಿನವೇ ಸೂರ್ಯನು ಭೂಮಧ್ಯ ರೇಖೆಯ ಮೇಲೆ (ಇಲ್ಲವೆ ಅದಕ್ಕೆ ಅತಿ ಸಮೀಪದಲ್ಲಿ) ಇರುವುದರಿಂದ ಆ ದಿನವೇ ’ಯುಗಾದಿ’ ’ಯುಗಾದಿಕಾ’ ನಾಮ ಯುಗ ಪತ್ತ್ರ ವೃತ್ತಿ’ ಎಂದು ಸುಪ್ರಸಿದ್ಧ ಜ್ಯೋತಿಷ್ಕಾರನಾದ ಭಾಸ್ಕರಾಚಾರ್ಯನು ಹೇಳಿದ್ದಾನೆ (೬)

೬) ಮೂರುವರೆ ಮುಹೂರ್ತವು (ಸಾಡೆ ತೀನ ಮುಹೂರ್ತ) ಶುಭ ಮುಹೂರ್ತಗಳಲ್ಲಿಯೆ ಅತ್ಯಂತ ಶ್ರೇಷ್ಠವಾದದ್ದೆಂದು ಜ್ಯೋತಿಷ್ಯಶಾಸ್ತ್ರ ಸಾರುತ್ತದೆ. ಅಂಥ ಮೂರುವರೆ ಮುಹೂರ್ತ ಸಂಭವಿಸುವ ಕೆಲವೆ ದಿನಗಳಲ್ಲಿ ಯುಗಾದಿಯೂ ಒಂದಾಗಿದೆ. ಈ ಮುಹೂರ್ತದ ಇತರ ದಿನಗಳೆಂದರೆ ವಿಜಯದಶಮಿ, ಬಲಿ ಪಾಡ್ಯಮಿ ಮತ್ತು ಅಕ್ಷಯ ತದಿಗೆಗಳು.

೭) ಗುಡಿ ಪಾಡಿವಾ – ಮಹಾಭಾರತದಲ್ಲಿ ಬರುವ ಚೇದಿ ರಾಜ್ಯದ ಅರಸು ವಸು ಉಗ್ರ ತಪಸ್ಸು ಮಾಡಲು, ಇಂದ್ರ ತನ್ನ ಪದವಿಗೆ ಚ್ಯುತಿ ಬಂದಿತೆಂಬ ಭಯದಿಂದ ಆತನ ತಪೋಭಂಗ ಮಾಡಲೆತ್ನಿಸಿ ವೈಜಯಂತಿ ಮಾಲೆಯನ್ನು ವಸುವಿಗೆ ಕೊಟ್ಟ ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಡುತ್ತಾನೆ. ಇದು ನಡೆದದ್ದು ಚೈತ್ರ ಶುದ್ಧ ಪ್ರತಿಪದೆಯ ದಿನ ಇದರ ನೆನಪೆಂಬಂತೆ ಎತ್ತರವಾದ ಒಂದು ಗಳದ ತುದಿಗೆ ರೇಶಿಮೆಯ ಬಟ್ಟೆಯನ್ನು ಹೊದಿಸಿ ಬೆಳ್ಳಿ ಇಲ್ಲವೆ ಹಿತ್ತಾಳಿಯ ಗಿಂಡಿಯನ್ನು ಅದರ ಮೇಲೆ ಡಬ್ಬ ಹಾಕಿ ಬೇವಿನ ಸೊಪ್ಪು ಅದಕ್ಕೆ ಕಟ್ಟಿ ಮನೆಯ ಮುಂದೆ ಧ್ವಜ ನಿಲ್ಲಿಸುತ್ತಾರೆ. ಇದು ಗುಡಿ ಪಾಡ್ಯಮಿ. ಕನ್ನಡ ನಾಡಿನಲ್ಲಿ ಕೊಂಕಣಿ ಬ್ರಾಹ್ಮಣರು, ಮರಾಠಿ ಸಿಂಪಿಗರು ಇದನ್ನು ಆಚರಿಸುತ್ತಾರೆ. ಗುಜರಾತ, ಮಹಾರಾಷ್ಟ್ರಗಳಲ್ಲಿ ಹೆಚ್ಚು ಪ್ರಚಾರವಿದೆ (೭)

’ಗುಡಿ’ (ಧ್ವಜ) ಪೂಜೆಯ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿಯೂ ಪ್ರಚಲಿತವಿದೆ. (ಈಗ ನಶಿಸಿದೆ) ಆದರೆ ಪೂಜೆಯ ಕಾಲ ಮತ್ತು ಕಾರಣಗಳು ಮಾತ್ರ ಭಿನ್ನ ವಿಭಿನ್ನ. ’ಗುಡಿ ಶಬ್ದವೊಂದೆ ಅವುಗಳಿಗೆಲ್ಲ ಸಾಮಾನ್ಯ.

ಮಾಘ ಮಾಸದಲ್ಲಿ ಬರುವ ’ಭಾರತ ಹುಣ್ಣಿವೆ’ಗೆ ಉತ್ತರ ಕರ್ನಾಟಕದ ಜನಸಾಮಾನ್ಯರಲ್ಲಿ ರೂಢವಾಗಿರುವ ಹೆಸರು ’ಗುಡಿಯ ಹುಣ್ಣಿವೆ’ ಇದರಿಂದ ನವ ವರ್ಷದಾದಿಯ ಧ್ವಜಪೂಜೆ ಮಾಘ ಪೂರ್ಣಿಮೆಯಂದೂ ನಡೆಯುತ್ತಿರಬಹುದೆಂದು ಭಾವಿಸಲಾಗಿದೆ. ಇಂದು ಮನೆಗೆ ಕಟ್ಟುವ ತೋರಣವು ಕುಸುಬೆಯ ತೊಂಡಲು, ಗೋದಿಯ ತೆನೆ, ಕಡಲೆಯ ಗಿಡದ ಕೊಂಬೆ, ಎಕ್ಕರೆಯ ಹೂವಿನ ಗೊನೆ ಇವೆಲ್ಲವುಗಳಿಂದ ಕೂಡಿರುವುದು. ಒಕ್ಕಲಿಗನ ಕೃಷಿ ಸಂಪತ್ತಿನ ಪ್ರತೀಕವಾಗಿರುವ ಈ ತೋರಣ, ಹಿಂದೆ ಒಂದು ಕಾಲದಲ್ಲಿ ಗುಡಿಯೇ ಆಗಿರಬಹುದೆಂದು ಊಹಿಸಿದ್ದಾರೆ (೮)

’ಗುಡಿ’ ಪೂಜೆ ವಿಜಯನಗರದ ಅರಸರ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತವಿತ್ತೆಂದು ಧಾರವಾಡ ಜಿಲ್ಲಾ, ನವಲಗುಂದ ತಾಲೂಕ, ಮಣಕವಾಡ ಗ್ರಾಮದ ಶ್ರೀಚನಬಸಪ್ಪ ಅಣ್ಣೀಗೇರಿ ಎಂಬ ಯಜಮಾನರು ತಿಳಿಸಿದರು. ವಿಜಯನಗರದ ಅರಸರು ತಮ್ಮ ವಿಜಯಗಳ ಸಂಕೇತವಾಗಿ ಈ ಧ್ವಜವನ್ನು ಉಗಾದಿ ಪಾಡ್ಯದಂದು ಹಾರಿಸುತ್ತಿದ್ದರೆಂದೂ, ಅದು ಮುಂದೆ ೧೫ ದಿನಗಳವರೆಗೂ, ಹಂಪೆ ವಿರುಪಾಕ್ಷೇಶ್ವರನ ರಥ ಎಳೆವವರೆಗೂ ಹಾರುತ್ತಿದ್ದು, ಆ ಒಂದು ಪಕ್ಷ ರಾಜಧಾನಿಯಲ್ಲಿ ವಿವಿಧ ಕಾರ್ಯಕ್ರಮಗಳು ಜರುಗುತ್ತಿದ್ದುವೆಂದೂ, ಅವರ ಕುರುಹಾಗಿಯೆ ವಿಜಯನಗರದ ಪ್ರಜೆಗಳು ತಮ್ಮ ಮನೆಗಳ ಮುಂದೆಯೂ ಪಾಡ್ಯದಂದು ಗುಡಿ ಹಾರಿಸಿ ಪೂಜಿಸುತ್ತಿದ್ದರೆಂದು, ಹಿರಿಯರಿಂದ ತನಗೆ ತಿಳಿದದ್ದಾಗಿ ಅವರು ಹೇಳಿದರು.

ಮೇಲಿನ ಹೇಳಿಕೆಗೆ ಉಪಷ್ಟಂಭಕವಾಗಿಯೇ ಎಂಬಂತೆ, ಬಳ್ಳಾರಿ ಭಾಗದಿಂದ ಹಂಪೆ ರಥೋತ್ಸವಕ್ಕೆ ಹೋಗುವವರು ಧ್ವಜಗಳನ್ನು ಹಿಡಿದುಕೊಂಡು ಹೋಗುತ್ತಿದ್ದರೆಂದು ಗುರುಗಳಾದ ಡಾ.ಎಸ್.ಎಂ. ವೃಷಭೇಂದ್ರಸ್ವಾಮಿಗಳವರು ತಿಳಿಸಿದರು.

’ಗುಡಿ ಪಾಡಿವ’’ ಆಚರಣೆಗೆ ಕುರಿತು ಸ್ವಾರಸ್ಯಕರ ಹೇಳೀಕೆಯೊಂದು ತಿಳಿದು ಬಂತು –

ಯುಗಾದಿ ಪಾಡ್ಯದೆಂದು ಮನೆಯಲ್ಲಿ ಒಂದು ಗೊಂಬೆ ನಿಲ್ಲಿಸಿ ಪೂಜಿಸುತ್ತಾರೆ.  ಈ ಗೊಂಬೆ ಕಳೆದ ವರ್ಷದ ಮನುಷ್ಯನ ಪ್ರತೀಕ. ಪಾಡ್ಯದಿಂದ ಹೊಸ ವರ್ಷ ಹೊಸ ಮನುಷ್ಯ. ಆದ್ದರಿಂದ ಹಳಬನಿಗೆ ಪೂಜೆಯ ಗೌರವ ಸಲ್ಲಿಸಿ ಬೀಳ್ಕೊಡುವುದೆ ಆಚರಣೆಯ ಹಿಂದಿನ ಕಾರಣ. ಇತ್ತೀಚಿನ ಕಾಲದಲ್ಲಿ ಗೊಂಬೆ ಬದಲು ಮನೆ ಮುಂದೆ ಗಳ ನಿಲ್ಲಿಸಿ ಪೂಜಿಸುವುದು ರೂಢಿಯಲ್ಲಿ ಬಂದಿತೆಂದು ಶಿರ್ಶಿಯ ತಮ್ಮ ಮನೆಯಲ್ಲಿ ಈ ಆಚರಣೆ ತಾವು ಕಂಡದ್ದಾಗಿ ಹಿರೆಕೆರೂರಿನ ಮಹಿಳೆಯೋರ್ವರು ವಿಶ್ವಾಸನೀಯವಾಗಿ ಹೇಳಿದರು. ’ಗುಡಿ’ ಶಬ್ದಕ್ಕೆ ’ಗೊಂಬೆ’ ಎಂಬರ್ಥವನ್ನು ಅವರೇ ಹೇಳಿದರು. ’ಗೊಂಬೆ’ ಎಂಬರ್ಥದ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ಪರಿಶೀಲಿಸಬೇಕು.

’ಗುಡಿ’ ಶಬ್ದ ಕುರಿತು ಇಲ್ಲಿ ವಿಚಾರಿಸಬೇಕು. ಗುಡಿಪೂಜೆ ಈಗಲೂ ಪ್ರಚಾರವಿರುವುದು ಕರ್ನಾಟಕದ ಹೊರರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತಗಳಲ್ಲಿ ಈಗಲೂ ಅಲ್ಲಿ ಗುಡಿ ಪಾಡವಾ’ ಎಂದೇ ಕರೆಯುತ್ತಾರೆ. ’ಗುಡಿ’ಯೆಂಬುದು ಅಚ್ಚಗನ್ನಡ ಶಬ್ದ ಮಹಾರಾಷ್ಟ್ರ ಮತ್ತು ಗುಜರಾತಗಳಲ್ಲಿ ಕೂಡ ಈ ಕನ್ನಡ ಶಬ್ದವೆ ಬಳಕೆಗೊಳ್ಳುತ್ತಿರುವುದು ವಿಚಾರಾರ್ಹವಾಗಿದೆ. ನೃಪತುಂಗನ ಕಾಲದಲ್ಲಿ ಕನ್ನಡನಾಡು ಕಾವೇರಿಯಿಂದ – ಗೋದಾವರಿವರೆಗೆ ವ್ಯಾಪಿಸಿದ್ದುದನ್ನೂ, ಒಂದು ಕಾಲಕ್ಕೆ ಫಂಡರಾಪುರದ ವಿಠ್ಠಲ ಕನ್ನಡಿಗರ ಅಧಿದೈವವಾಗಿದ್ದನೆಂಬುದನ್ನೂ ಇನ್ನೂ ಇಂತಹ ಅನೇಕ ಸಂಗತಿಗಳನ್ನೂ ಜ್ಞಾಪಿಸಿಕೊಂಡಾಗ, ಈಗಿನ ಮಹಾರಾಷ್ಟ್ರ ಮತ್ತು ಗುಜರಾತದ ಬಹುಭಾಗಗಳು ಕನ್ನಡಿಗರ ಆಳ್ವಿಕೆಗೆ ಒಳಪಟ್ಟಿದ್ದುವೆಂಬ ಇತಿಹಾಸ ದರ್ಶನವಾಗುತ್ತದೆ. ’ಗುಡಿ’ ಶಬ್ದವೂ ಸಹ ಆ ಇತಿಹಾಸ ದರ್ಶನವನ್ನೇ ಮಾಡಿಸುತ್ತದೆ. ಕನ್ನಡಿಗರ ಧ್ವಜ ಆ ಎರಡೂ ರಾಜ್ಯಗಳಲ್ಲಿ ದೀರ್ಘಕಾಲ ಹಾರಿದುದರ ಸ್ಮಾರಕವಾಗಿಯೇ ’ಗುಡಿ’ ಅಲ್ಲಿ ಉಳಿದು ಬಂದಿದೆಯೆಂದು ಊಹಿಸಬಹುದು.

೮) ಯುಗಾದಿಯಂದು ಹೊಸ ವರ್ಷ ಪ್ರಾರಂಭವಾಗುವುದು ಮಾತ್ರವಲ್ಲ ವರ್ಷ, ಋತು, ಮಾಸ, ಪಕ್ಷ, ತಿಥಿ ನಕ್ಷತ್ರ, ಯೋಗ, ಕರುಣಾದಿಗಳಾದಿಯಾಗಿ ಬರುವ ಹೊಸ ದಿನವಿದು.

೯) ವಸಂತಾಗಮನ – ಚಳಿಗಾಲದಲ್ಲಿ ಎಲೆಗಳೆಲ್ಲ ಉದುರಿಹೋಗಿ ಬರಲು ಬರಲಾಗಿದ್ದ ಗಿಡಮರಗಳು, ಚೈತ್ರಮಾಸದಲ್ಲಿ ಹೊಸಚಿಗುರು ತಳಿರುಗಳಿಂದ ಶೋಭಿಸುತ್ತವೆ. ತಳಿತಮಾಮರಗಳು, ಹೂತ ಬೇವು ಹೊಂಗೆಗಳು – ಮಾಧವಿ ಲತೆಗಳು, ಚೋತೋಹಾರಿಯಾಗಿರುತ್ತವೆ. ಕಣ್ಣೆ ಹಬ್ಬವಾದರೆ ಮಾತ್ರ ಸಾಲದೆಂದು ವಸಂತ ದೂತಿಕೆ ಕೊಕಿಲಿಡುವ ಕುಹೂ ರವವು, ಹೂ ಗೊಂಚಲುಗಳನ್ನು ಬಳಸಿ ಹಾರಾಡುವ ದುಂಬಿಗಳ ಗುಂಚಾರವವೂ ವಸಂತದ ಸ್ವಾಗತ ಗೀತೆ ಹಾಡಿ ಕರ್ಣಗಳಿಗೂ ಹಬ್ಬವನ್ನುಂಟು ಮಾಡುತ್ತವೆ. ಚೈತ್ರ ಮಾಸದ ಸೃಷ್ಟಿಯ ಈ ಸುಂದರ ಸ್ವರೂಪವು ಜೀವರಾಶಿಗಳಿಗೆಲ್ಲ ಚೈತನ್ಯದಾಯಕ ವಸಂತ ಋತುವಿನ ಮುಖ್ಯಭಾಗವೆ ಚೈತ್ರಮಾಸವು ’ಋತುನಾಂ ಕುಸುಮಾಕರಃ ಎಂದು ವಸಂತ ಋತು ಶ್ರೀಕೃಷ್ಣನಿಂದ ಪ್ರಶಂಶಿಸಲ್ಪಟ್ಟಿದೆ. (೯) ಇಂಥ ವಸಂತ ಋತುವಿನ ಶುಭ ಕೋರುವ ದಿನವೆ ಯುಗಾದಿಯು.

ಚಳಿಗಾಲದ ಚಳಿಗೆ ಯುಗಾದಿಯಿಂದ ತಡೆ ಬೀಳುತ್ತದೆ. ಬಿಸಿಲು ಪ್ರಖರವಾಗುತ್ತದೆ. ಈ ಎರಡನ್ನೂ ಜನಪದದಿಂದೇ ಕೇಳಬೇಕು ’ಸಂಕ್ಲಾಂತಿ ಹೆಂತ್ಗ ಸಂಕ್ದ್ ಗಾತ್ರ ಕಮ್ಮಿಯಾಗಿ ಶಿವ್ಲಾತಿ ಹೊತ್ಗೆ ಶಿವಶಿವಾಂತ ಹೋಗಿ, ಉಗಾದಿ ಹೊತ್ಗೆ ಉಘೇಂತ, ಹೊಂಟೋಯ್ತದೆ ಚಳಿ’ ಇನ್ನು ಬಿಸಿಲು ’ಎಲ್ಲಮವಾಸಿಗೆ ಎಳ್ಳಕಾಳಷ್ಟು ಅವರಾತ್ರಿ ಅಮವಾಸಿಗೆ ಅವರಿಕಾಳಷ್ಟು, ಶಿವರಾತ್ರಿಗೆ ಶಿವಶಿವಾ ಅನಿಸಿ, ಹೋಳಿ ಹುಣ್ಣೀವೇಗೆ ಹೊಯ್ಯೊಳ್ಳಾಕ ಹಚ್ಚಿ, ಉಗಾದಿಗೆ ಉಗಾಹಾಯ್ತದೆ ಬಿಸಿಲು (೧೦)

ಈ ರೀತಿಯವಾದ ಅನೇಕಾನೇಕ ವೈಶಿಷ್ಟ್ಯಗಳು ನಮ್ಮ ಯುಗಾದಿಯ ಹಿಂದಿವೆ.

ಯುಗಾದಿಗೆ ಸ್ವಾಗತ :

ಪವಿತ್ರ ಯುಗಾದಿ ಹಬ್ಬವನ್ನು ಬಡವ ಶ್ರೀಮಂತರೆಂಬ ಭೇದಭಾವವಿಲ್ಲದೆ ನಾಗರಿಕರೂ, ಜನಪದರೂ ಅಷ್ಟೇ ಹರ್ಷದಿಂದ ಸ್ವಾಗತಿಸುತ್ತಾರೆ. ಆದರೆ ಅವರ ಸ್ವಾಗತಗಳಿಗೆ ಕಾರಣಗಳು ಮಾತ್ರ ಭಿನ್ನವಾಗಿವೆ.

ನಗರ ವಾಸಿಗಳಿಗೆ ಮುಖ್ಯವಾಗಿ ಇದು ನೂತನ ವರ್ಷಾರಂಭದ ದಿನ. ತಮ್ಮ ವ್ಯವಹಾರೋದ್ದಿಮೆಗಳನ್ನು ಪ್ರಾರಂಭಿಸಲು, ಇಲ್ಲವೆ ಈಗಾಗಲೇ ಅಸ್ತಿತ್ವದಲ್ಲಿರುವ ವ್ಯವಹಾರೋದ್ದಿಮೆಗಳ ಲೆಕ್ಕಪತ್ರಗಳನ್ನು ಹಿಂದಿನ ವರ್ಷದ ಮುಕ್ತಾಯದೊಂದಿಗೆ ಮಂಗಲ ಮಾಡಿ, ನೂತನ ಲೆಕ್ಕಪತ್ರಕ್ಕೆ ಶ್ರೀಕಾರ ಹಾಕಲು ಈ ವರ್ಷಾರಂಭದ ದಿನವನ್ನು ಸ್ವಾಗತಿಸುತ್ತಾರೆ. ’ಉಗಾದಿ ಉದ್ರಿ’  ಎಂಬ ಸ್ವಾರಸ್ಯಕರ ಪಡೆನುಡಿಯೊಂದು ಪ್ರಚಲಿತವಿದೆ. ವಸ್ತುಗಳನ್ನು ಉದ್ರಿ ಒಯ್ದು ವರ್ಷದವರೆಗೂ ಬಾಕಿ ತೀರಿಸದವರನ್ನು ಕುರಿತು ಮಾಡುವ ಚೇಷ್ಟೆ ಇದಾಗಿದ್ದರೂ ಯುಗಾದಿಯಿಂದ ಹೊಸ ವರ್ಷ, ಹೊಸ ಲೆಕ್ಕ ಪ್ರಾರಂಭವಾಗುವುದನ್ನು ಇದು ಸೂಚಿಸುತ್ತದೆ. ಯುಗಾದಿ ತಪ್ಪಿದಲ್ಲಿ ವಿಜಯದಶಮಿಯಿಂದ  ವ್ಯವಹಾರಗಳನ್ನು ಪ್ರಾರಂಭಿಸುವುದು ಕರ್ನಾಟಕದಲ್ಲಿ ಸಂಪ್ರದಾಯವಾಗಿತ್ತು. ಇತ್ತೀಚೆಗೆ ಮರಾಠಿಗರ ಪ್ರಭಾವವೋ ಎಂಬಂತೆ ದೀಪಾವಳಿಯಿಂದಲೂ ಲೆಕ್ಕಪತ್ರ ವ್ಯವಹಾರಗಳನ್ನು ಪ್ರಾರಂಭಿಸುವುದು ರೂಢಿಯಲ್ಲಿ ಬಂದಿದೆ.

ವ್ಯವಹಾರೇತರ ನಗರ ವಾಸಿಗಳು ಸಂಪ್ರದಾಯ ಪರಿಪಾಲಕರಾಗಿ ಯುಗಾದಿ ಸ್ವಾಗತಿಸುತ್ತಾರೆ. ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ತೀರ ಇತ್ತೀಚೆಗೆ ಶುಭಾಶಯ ಪತ್ರ ಕಳಿಸುವುದು ಪ್ರತಿಷ್ಠೆ ಕುರುಹಾಗತೊಡಗಿದೆ.

ನಮ್ಮ ಜನಪದರು ಯುಗಾದಿ ಸ್ವಾಗತಿಸುವುದಕ್ಕೆ ಇವುಗಳಿಗಿಂತ ಬೇರೆಯೇ ಕಾರಣಗಳಿವೆ.

ನಮ್ಮ ಜನಪದವೆಂದರೆ ಹೆಚ್ಚಾಗಿ ಬೇಸಾಯವನ್ನವಲಂಬಿಸಿದ ರೈತರು ಮತ್ತು ಇವರನ್ನವಲಂಬಿಸಿದ ಇತರರು. ರೈತರ ಬೆಳೆ – ಬೆಳಸುಗಳೆಲ್ಲ ಕೊಯ್ಲಾಗಿ, ಒಕ್ಕಿ, ರಾಶಿಯಾಗಿ ಮನೆ ಸೇರಿದರೆ ಅವರ ಒಂದು ವರ್ಷದ ದುಡಿತಕ್ಕೆ ಪರದೆ ಬೀಳುತ್ತದೆ. ಫಾಲ್ಗುಣ ಮಾಸಕ್ಕೆ ಸರಿಯಾಗಿ ರೈತನ ಈ ಕಾರ್ಯಗಳೆಲ್ಲ ಮುಕ್ತಾಯವಾಗುತ್ತವೆ. ಹೊಸ ಬೇಸಾಯ ಪ್ರಾರಂಭಿಸಲು ರೈತ ಹೊಸ ಮಳೆಯ ಪ್ರತೀಕ್ಷೆಯಲ್ಲಿರುತ್ತಾನೆ. ಹೊಸ ಮಳೆಗಳು ಚೈತ್ರದಿಂದಲೆ ಪ್ರಾರಂಭವಾಗುತ್ತವೆ. ಸೂರ್ಯನು ೧೨ ತಿಂಗಳಲ್ಲಿ, ೨೭ ನಕ್ಷತ್ರಗಳನ್ನು ದಾಟಿ, ಹೊಸ ವರ್ಷದ ಚೈತ್ರ ಮಾಸಕ್ಕೆಂದರೆ ಮರಳಿ ಅಶ್ವಿನಿ ನಕ್ಷತ್ರಕ್ಕೆ ಬಂದು ಹೊಸ ಮಳೆಗಾಲವನ್ನು ಪ್ರಾರಂಭಿಸುತ್ತಾನೆ. ಮಳೆಗೆ ’ವರ್ಷ’ ’ಮರ್ಷಾ’ ಎಂದೂ ಹೆಸರು. ಆದ್ದರಿಂದ ರೈತನ ಹೊಸ ವರ್ಷವೆಂದರೆ ’ಹೊಸ ಮಳೆ’ ಎಂದೇ ಅರ್ಥ. ಯುಗಾದಿಯಿಂದ ಹೊಸ ಮಳೆಗಳು ಆರಂಭವಾಗುವುದರಿಂದ ರೈತನಿಗೆ ಭಾವೀ ಸುಗ್ಗಿಯ ಬೇಸಾಯದ ಆರಂಭವೂ ಅಂದಿನಿಂದಲೇ ಆಗುತ್ತದೆ. ’ಯುಗಾದಿಯಂದು ಮಳೆಯಾದರೆ ಶುಭವೆಂಬ ನಂಬಿಗೆಯೂ ಹೊಸ ಮಳೆಯೆ ಆರಂಭವನ್ನೇ ಹೇಳುತ್ತದೆ. ಈ ಕಾರಣಗಳಿಂದ ರೈತ ಯುಗಾದಿಯನ್ನು ಸ್ವಾಗತಿಸುತ್ತಾನೆ ನಮ್ಮ ಜನಪದರು ಸ್ವಾಗತಿಸುತ್ತಾರೆ.

ಯುಗಾದಿ ಆಚರಣೆ:

ಜನಪದರಿಗೆ ಬಿಡುವಿನ ದಿನಗಳೆಂದರೆ ಯುಗಾದಿ ಪೂರ್ವದ ದಿನಗಳು ಬೇಸಾಯದ ಕೆಲಸಗಳೆಲ್ಲ ಪರಿಸಮಾಪ್ತಿಗೊಂಡು ವಿಶ್ರಾಂತಿಗೆ ಅನುವು ಮಾಡಿಕೊಟ್ಟಿರುತ್ತವೆ. ಆದ್ದರಿಂದ ಯುಗಾದಿ ನಿಮಿತ್ಯವಾಗಿ ಹಬ್ಬದ ಪೂರ್ವದಲ್ಲಿಯೇ ಮನೆಗಳು ಧೂಳು ಝಾಡಿಸಿ, ಸುಣ್ಣ – ಬಣ್ಣಗಳನ್ನು ಬಳಿದು, ನೆಲ ಸಾರಿಸಿ ಚೊಕ್ಕಟಗೊಳಿಸುತ್ತಾರೆ. ಗೃಹಿಣಿಯರು ಕೆಲವರು ಇದಕ್ಕೂ ಮುಂದುವರಿದು ಮನೆಯಲ್ಲಿಯ ಹಾಸುವ, ಹೊದೆಯುವ ಜಮಖಾನೆ, ಶಾಲುಗಳನ್ನೆಲ್ಲ ಸ್ವಚ್ಛವಾಗಿ ಒಗೆದು ಮಡಿ ಮಾಡುತ್ತಾರೆ. ಹಬ್ಬದ ಹಿನ್ನಾದಿನವೆ ಮನೆ ಬಾಗಿಲುಗಳಿಗೆ ಮಾವಿನ – ಬೇವಿನ ಕೊಂಗಲುಗಳ ತಳಿರು ತೋರಣಗಳನ್ನೂ ಕಟ್ಟಿ ಅಲಂಕರಿಸುತ್ತಾರೆ. ಯುಗಾದಿ ತರುವ ವಸಂತದ ಪ್ರತೀಕವೆಂದು ತಿಳಿಯಬಹುದು. ಸಂಜೆಯೆ ತಮ್ಮ ಎತ್ತುಗಳ ಮತ್ತು ದನಗಳ ಮೈತಿಕ್ಕಿ ತೊಳೆಯುತ್ತಾರೆ.  ಎತ್ತುಗಳ ಕೋಡುಗಳಿಗೆ ಬಣ್ಣ ಸವರಿ, ಹೊಸ ಬಾಸಿಂಗ, ಹಣೆಕಟ್ಟು, ಮಗಡ ಗೆಜ್ಜೆಸರಗಳನ್ನೂ ಹಾಕಿ ಅಲಂಕರಿಸುತ್ತಾರೆ. ಮನೆಯಲ್ಲಿ ಸಾಕಷ್ಟು ನೀರೂ ಸಂಗ್ರಹಿಸಿಗೊಳ್ಳುತ್ತಾರೆ. ಮನೆತನ ಸೀಮಿತ ಕಾರ್ಯಾಚರಣೆಗಳಿವು.

ನಮ್ಮ ಹಬ್ಬಗಳ ವೈಭವ, ಸಡಗರ- ಸಂಪತ್ತು, ಆನಂದ, ಸುಖವನ್ನು ಕಾಣುವುದು ಸಮಾಜದ ಸರ್ವ ಸದಸ್ಯರ ಮಧುರ ಬಾಂಧವ್ಯ ತೋರುವ ಹಬ್ಬದ ಸಾಮೂಹಿಕ ಕಾರ್ಯಾಚರಣೆಗಳಲ್ಲಿ ಯುಗಾದಿಗೆ ಇನ್ನೂ ಐದು ದಿನಗಳಿರುವಾಗಲೇ ಅಂಥ ಕಾರ್ಯಾಚರಣೆಗಳು ತೊಡಕಿಕೊಳ್ಳುತ್ತವೆ. ದೇವರ ಗುಡಿಗಳನ್ನೂ ಸ್ವಚ್ಛಗೊಳಿಸುವುದು, ಇವುಗಳಲ್ಲಿ ಮೊದಲನೆಯದು ಗುಡಿ ಸಾರಣೆಗೆ ಬೇಕಾಗುವ ಸುಣ್ಣವನ್ನೂ ಭಟ್ಟಿ ಇಳಿಸುವುದು ಪಾಡ್ಯದಂದು (ಕೆಲವೆಡೆ ಅದಕ್ಕೂ ಪೂರ್ವದಲ್ಲಿ) ಗ್ರಾಮದಲ್ಲಿ ಮನೆಗೊಬ್ಬರದಂತೆ ವ್ಯಕ್ತಿಗಳು ಸೇರಿ ಕೊಡ, ತಾಂದೆಗಳಲ್ಲಿ ನೀರು ತುಂಬಿಕೊಂಡು  ಬಂಡೆಗಳಲ್ಲಿಟ್ಟುಕೊಂಡು ಬಂದು ಗುಡಿಗಳನ್ನೂ ಒಳಗೂ ಹೊರಗೂ ತೊಳೆದು ಸಣ್ಣಬಣ್ಣಗಳಿಂದ ಸಾರಿಸಿ ಶೃಂಗರಿಸುತ್ತಾರೆ (೧೧) ಹೊಸ ವರ್ಷ ತರುವ ಆನಂದೋತ್ಸಾಹಗಳನ್ನೂ ಇಲ್ಲಿ ಸಹಜವಾಗಿ ಗುರುತಿಸಬಹುದು.

ನಮ್ಮ ಜನಪದರು ಯುಗಾದಿಯನ್ನೂ ಬರಮಾಡಿಕೊಳ್ಳುವ ರೀತಿಯಿದು.

ಬೇವಿನ ಸ್ನಾನ : ಯುಗಾದಿಯಂದು ನಸುಕಿನಲ್ಲಿಯೇ ಎದ್ದು ಮೈಗೆ ಸರಿಯಾಗಿ ಎಣ್ಣೆ ಹಚ್ಚಿ (ಸಿ) ಕೊಂಡು, ಮೈಯುಜ್ಜಿ (ಸಿ) ಕೊಂಡು ಬಿಸಿನೀರಿನಿಂದ ಎರೆದುಕೊಳ್ಳುತ್ತಾರೆ. ನೀರು ಕಾಸುವ ಪಾತ್ರೆಯಲ್ಲಿ ಬೇವಿನ ಸೊಪ್ಪು ಹಾಕಿರುವುದರಿಂದ ಬಿಸಿನೀರಿನಲ್ಲಿ ಬೇವಿನ ಒಗರು ಒಂದಾಗಿ ಬೇವಿನ ನೀರಿನಿಂದಲೇ ಎರೆದು ಕೊಂಡಂತೆ ಆಗುತ್ತದೆ. ಬೇವು ಕ್ರಿಮಿನಾಶಕವೆಂಬುದು ಗಮನಿಸಬೇಕಾದ ಅಂಶವಾಗಿದೆ. ’ಉಗಾದಿ ದಿನಾ ಬೇವಿನ ತಪ್ಪಲಾ ನೀರಾಗ ಹಾಕಿ ಜಳಕಾ ಮಾಡ್ತಾರ’ ಎಂಬುದು ಜನಪದ ಸಂಪ್ರದಾಯವಾಗಿದೆ (೧೨)

ಆರತಿ ಸಡಗರ :  ಅಭ್ಯಂಜನ ಸ್ನಾನಾ ನಂತರ ಹೊಸ ಬಟ್ಟೆಬರೆಗಳನ್ನು ತೊಡುತ್ತಾರೆ. ದೇವಪೂಜೆ ವಿಶೇಷವಾಗಿ ಈಶ್ವರಪೂಜೆ ಮಾಡುತ್ತಾರೆ ಅನಂತರ ಮಕ್ಕಳನ್ನೂ ಮತ್ತು ಪುರುಷರನ್ನು ದೇವರ ಮುಂದೆ ಕೂಡ್ರಿಸಿ ಗೃಹಿಣಿಯರು ಸಡಗರದಿಂದ ಆರತಿ ಬೆಳಗುತ್ತಾರೆ ಪುರುಷರು ಉದಾರವಾಗಿ ಕಾಣಿಕೆ (ಬಂಗಾರ) ಕೊಡುತ್ತಾರೆ.

ಎರೆದುಕೊಳ್ಳುವ ಮತ್ತು ಆರತಿಯ ಕಾರ್ಯಕ್ರಮಗಳೆರಡೂ ಮನೆ ಮನೆಗಳಲ್ಲಿ ಅತ್ಯಂತ ಸಡಗರ ಸಂಭ್ರಮೋಲ್ಲಾಸಗಳಿಂದ ನಡೆಯುತ್ತವೆ.

ಬೇವು ಬೆಲ್ಲ ಸವಿ : ಯುಗಾದಿಯ ವಿಶಿಷ್ಟ ಆಚರಣೆಯೊಂದು ಇನ್ನು ಮುಂದೆ ನಡೆಯುತ್ತದೆ. ಅದೇ ಬೇವು-ಬೆಲ್ಲ ಮನೆಯವರೆಲ್ಲ ಅಂದು ಮೊದಲು ಬಾಯಿಗೆ ಹಾಕಿಕೊಳ್ಳುವುದು ಬೇವು – ಬೆಲ್ಲವನ್ನೇ.

ಬೇವು – ಬೆಲ್ಲವನ್ನು ಒಂದೊಂದು ಕಡೆ ಒಂದೊಂದೂ ರೀತಿಯಲ್ಲಿ ತಯಾರಿಸುತ್ತಾರೆ. ಪುಠಾಣಿ ಹಿಟ್ಟಿಗೆ ಬೀಸಿದ ಸಕ್ಕರೆಯನ್ನೊ ಇಲ್ಲವೆ ಹೆರೆದ ಬೆಲ್ಲವನ್ನೊ ಸೇರಿಸಿ ಉದುರು ಉದುರಾಗಿರುವ ಮಿಶ್ರಣಕ್ಕೆ ಬೇವಿನ ಹೂಗಳನ್ನು ಬೆರೆಸುತ್ತಾರೆ. ವಿಜಾಪೂರ ಕಡೆಗೆ ಈ ಮಿಶ್ರಣವನ್ನು ಉದುರಾಗಿ ಮಾಡದೆ ಆಳ್ಳಕವಾಗಿ ಮಾಡುತ್ತಾರೆ. ಮತ್ತು ಹೊಸ ಗಡಿಗೆಯಲ್ಲಿ ಸಂಗ್ರಹಿಸಿ ಇಡುತ್ತಾರೆ. ಆದ್ದರಿಂದ ’ಬೇವು ಕುಡದು’ ಎನ್ನುವುದು ಅವರಲ್ಲಿ ರೂಢಿಯಲ್ಲಿ ಬಂದಿದೆ. ಇದೂ ಅಲ್ಲದೆ ಬೇವಿನ ಜೊತೆಗೆ ಮಾವಿನಕಾಯಿಯ ಚಿಕ್ಕ ಚಿಕ್ಕ ಹೋಳುಗಳನ್ನೂ ಬೆರಸುತ್ತಾರೆ. ಕೆಲವಡೆಗಳಲ್ಲಿ ಮಿಜ್ಜಿ ಬೆಲ್ಲದಲ್ಲಿ ಬೇವಿನ ಹೂಗಳನ್ನು ಸೇರಿಸಿ ತಿನ್ನುವುದೂ ಇದೆ.

ಯುಗಾದಿ ಹಬ್ಬದಲ್ಲಿ ಬೇವಿಗೆ ಅತ್ಯಂತ ಪ್ರಾಶಸ್ತ್ಯ. ಮನೆ ಬಾಗಿಲಿಗೆ ಬೇವು, ಬಿಸಿನೀರಿನಲ್ಲಿ ಬೇವು, ತಿನ್ನುವುದು ಬೇವು, ಗುಡಿ ಕಂಬಕ್ಕೆ ಕಟ್ಟುವುದು ಬೇವು ಹೀಗೆ ಬೇವುಮಯವಾದ ಇದು ಬೇವಿನ ಹಬ್ಬವೆ ಆಗಿದೆ. ಇದು ಹೀಗೇಕೆಂದು ಪ್ರಶ್ನಿಸಿದರೆ ಉತ್ತರಗಳೆಲ್ಲ ಊಹಾಪೋಹಗಳೆ. ಬೇವು ಕ್ರಿಮಿನಾಶಕ, ಔಷಧ ಗುಣಗಳಿವೆ, ಬೇವು ತಂಪು ಜಾಗೃತ ಮನಸ್ಸು ಸಮಾಧಾನಪಟ್ಟುಕೊಳ್ಳುತ್ತವೆ, ಬೇವು ಜೀವನದಲ್ಲಿಯ ಕಹಿಗೆ, ಬೆಲ್ಲ ಸಿಹಿಗೆ ಸಂಕೇತ, ಬೇವು ಬೆಲ್ಲಗಳ ಮಿಶ್ರಣ ಜೀವನದಲ್ಲಿಯ ಸುಖ ದುಃಖಗಳ ಪ್ರತೀಕ, ಕವಿ ಮನಸ್ಸು ಕಲ್ಪಿಸುತ್ತದೆ. ಬೇವಿಗೆ ತನ್ನ ಸಂಪರ್ಕದಲ್ಲಿರುವ ವಸ್ತುಗಳನ್ನು ಸಂರಕ್ಷಿಸುವ ವಿಶೇಷ ಶಕ್ತಿಯಿದೆ.  (ಧವಸ ಧಾನ್ಯಗಳಲ್ಲಿ ಬೇವಿನ ಸೊಪ್ಪು ಬೆರಸಿ ಚೀಲ ತುಂಬುತ್ತಾರೆ. ಇಲ್ಲ ಹಗೆಗಳಿಗೆ ಹಾಕುತ್ತಾರೆ – ಹುಳುಗಳು ಹತ್ತುವುದಿಲ್ಲ) ಆದಿಮಾನವ ತಿಳಿವಳಿಕೆ ಮೂಡಿದಾಗ ತನ್ನ ಮರ್ಯಾದೆ ಮುಚ್ಚಿಕೊಳ್ಳಲು ಸೊಂಟದ ಸುತ್ತ ಕಟ್ಟಿಕೊಂಡದ್ದು ಬೇವಿನ ತೊಂಗಲೇ ಎಂದು ತೋರುತ್ತದೆ. (ಮರಗಳಲ್ಲಿ) ಬೇವು ಸಾರ್ವತ್ರಿಕ) ದೇವರಿಗೆ ಬೆತ್ತಲೆ ಸೇವೆ ಸಲ್ಲಿಸುವವರು ಸೊಂಟದ ಸುತ್ತ ಬೇವಿನ ತೊಂಗಬಲನ್ನೇ ಕಟ್ಟಿಕೊಂಡಿರುತ್ತಾರೆ. ಅನೇಕ ಜಾನಪದ ಧಾರ್ಮಿಕ ವಿಧಿಗಳಲ್ಲಿ ಬೇವಿನ ತೊಂಗಲು, ಸೊಪ್ಪುಬಳಕೆಯಾಗುವುದುಂಟು. ಈ ಹಿನ್ನೆಲೆಯಲ್ಲಿ ಬೇವಿನ ಹೊಸ ದಿನದಂದು ಸಲ್ಲಿಸುವ ಕೃತಜ್ಞತೆಯ ಕುರುಹೇ ಬೇವಿಗಿತ್ತಿರುವ ಪ್ರಾಶಸ್ಸುವಾಗಿರಬಹುದೆ? ಸಂಶೋಧಕ ಮನಸ್ಸು ತಾಳೆ ಹಾಕುತ್ತದೆ. ಇವುಗಳಲ್ಲಿ ಯಾವುದೊಂದು ನಿಜವೆಂದು ಹೇಳುವುದು ಸಧ್ಯ ಅಸಾಧ್ಯ. ಎಲ್ಲವೂ ಪಾಲ್ಗೊಂಡು ಬೇವಿಗೆ ಪ್ರಾಶಸ್ತ್ಯ ತಂದುಕೊಳ್ಳುವೆಯೆಂದು ಮುಂದೆ ಸಾಗಬಹುದಾಗಿದೆ.

ಬೇವು-ಬೆಲ್ಲ ರುಚಿ ನೋಡುವುದರೊಂದಿಗೆ ಹಬ್ಬದ ಮನೆಯೊಳಗಿನ ಬೆಳಗಿನ ಕಾರ್ಯಕ್ರಮಗಳು ಮುಕ್ತಾಯವಾಗುತ್ತವೆ. ಇವು ನಾಗರಿಕರಿಗೂ ಜನಪದರಿಗೂ ಸಮಾನವಾಗಿವೆ. ಜನಪದದಲ್ಲಿ ನಾಗರಿಕರಿಗಿಂತ ಹೆಚ್ಚಿನ ಉತ್ಸಾಹ, ಲವಲವಿಕೆ ಕಂಡು ಬರುತ್ತವೆಂಬುದು ಜನಪದರ ಹೆಚ್ಚಳವಾಗಿದೆ.

ಮಜುಲು ಹೊನ್ನಾರು:

ಯುಗಾದಿ ಹಬ್ಬದ ಜನಪದರ ವಿಶೇಷ ಕಾರ್ಯಕ್ರಮಗಳು ಇನ್ನೂ ಆರಂಭವಾಗುತ್ತವೆ. ಅವೆಲ್ಲವೂ ಮನೆಯ ಹೊರಗೆ ಜರುಗುವಂಥವು. ಬೇಸಾಯದ ನೇಮ ಮಾಡುವುದು. ಇವುಗಳಲ್ಲಿ ಪ್ರಥಮವೂ ಪ್ರಾಮುಖ್ಯವೂ ಆಗಿದೆ.

ರೈತರು ಸಿಂಗರಿಸಿದ ಎತ್ತುಗಳಿಗೆ ಬಣ್ಣ ಬಳಿದ ನೊಗ ಹೂಡಿ ರಂಟಿಯನ್ನೊ ಕುಂಟಿಯನ್ನೊ ಹಾಕಿಕೊಂಡು ತಮ್ಮ ತಮ್ಮ ಹೊಲಗದ್ದೆಗಳಿಗೆ ’ನಾ ಮುಂದೆ, ತಾ ಮುಂದೆಯೆಂದು ಸ್ಪರ್ಧೆ ಉತ್ಸಾಹಗಳಿಂದ ಹೋಗುತ್ತಾರೆ. ಊಳುವ ಸಾಧನವನ್ನೂ, ಭೂತಾಯಿಯನ್ನೂ ನಿಷ್ಠೆಯಿಂದ ಪೂಜಿಸಿ ಕಾಯಿ ಒಡೆಯುತ್ತಾರೆ. ಅನಂತರ ಪೂರ್ವ ಇಲ್ಲವೆ ಉತ್ತರಾಭಿಮುಖವಾಗಿ ಐದು ಸುತ್ತು ಊಳುವ ಮೂಲಕ ಬೇಸಾಯದಾರಂಭದ ನೇಮ ಮಾಡುತ್ತಾರೆ. ಉತ್ತರ ಕರ್ನಾಟಕದ ಕೆಲವೆಡೆಗಳಲ್ಲಿ  ಇದಕ್ಕೆ ’ಮಜಲು ಮಾಡುವುದೆಂದು (೧೩) ಕರೆದರೆ ಮೈಸೂರು ಸೀಮೆಯಲ್ಲಿ ಹೊನ್ನಾರು, ಹೊನ್ನೇರು, ಹೊನ್ನುಕೈ, ಮೊದಲೂರು, ಮೊದಲುಕ್ಕೆ ಎಂದು ಕರೆಯುತ್ತಾರೆ.

ಬೇಸಾಯದ ಆರಂಭದ ನೇಮ ಮಾಡುವುದಕ್ಕೂ ತಮ್ಮ ಮನೆತನದಲ್ಲಿ ಯಾರ ಹೆಸರಿಗೆ ಬಲ ಬಂದಿದೆಯೆಂಬುದನ್ನೂ ಜ್ಯೋತಿಷಿಗಳಲ್ಲಿ ಕೆಲವರು ಕೇಳಿಕೊಂಡರೂ ಬಂದಿರುತ್ತಾರೆ. ಬಲ ಬಂದವರೆ  ಬೇಸಾಯ ನೇಮ ಮಾಡುತ್ತಾರೆ.  ಇನ್ನೂ ಕೆಲವಡೆಗಳಲ್ಲಿ ಯಾವ ಎತ್ತುಗಳನ್ನು  ಹೂಡಬೇಕೆಂಬುದನ್ನೂ ಕೇಳಿರುತ್ತಾರೆ.

ನವಲಗುಂದ ಮುಂತಾದ ಕಡೆಗಳಲ್ಲಿ ಸೂರ್ಯೋದಯಕ್ಕೆ ಪೂರ್ವದಲ್ಲಿ ಬೇಸಾಯದ ಈ ನೇಮ ಮಾಡುತ್ತಾರೆ.  ಅನಂತರವೆ ಬೇವು – ಬೆಲ್ಲ ಸವಿಯುತ್ತಾರೆ. ಮೈಸೂರು ಸೀಮೆಯ ರೈತ ತನ್ನ ಜಮೀನಿನಲ್ಲಿ ಊಳುವ ನೇಮ ಮಾಡುವುದಕ್ಕೆ ಮೊದಲು ಉತ್ತರಾಭಿಮುಖವಾಗಿ ನೇಗಿಲು ಹೂಡಿ, ಊರ ಸುತ್ತು  ಒಂದು ಬಾರಿ ಊಳುತ್ತಾನೆ. ಅದು ’ಊರುಕೈ’ ಎನಿಸುತ್ತದೆ (೧೪)