ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಚಲಿತವಿರುವ ಈ ಹಬ್ಬಗಳು ಸ್ತ್ರೀ ದೈವಗಳನ್ನು ಕುರಿತಾಗಿವೆ. ಸ್ತ್ರೀಯನ್ನು ಶಕ್ತಿಯಾಗಿ ಭಾವಿಸಿ ಶಕ್ತಿಪೂಜೆ ಮಾಡುವ ಸಂಪ್ರದಾಯ ವೇದಗಳ ಕಾಲದಿಂದಲೂ ಇದೆ. ಆದಿ ಕಾಲದಿಂದ ಮಾತೃಪ್ರಧಾನ ಪರಿಸರವಿದ್ದರೂ ಸಹ ಋಗ್ವೇದದಲ್ಲಿ ಪುರುಷದೇವಕ್ಕೇ ಪ್ರಾಧಾನವಿರುವದು ಕಂಡು ಬರುತ್ತದೆ. ಹೀಗಿದ್ದರೂ ಅಲ್ಲಿ ಉಷಾ, ರಾತ್ರಿ, ಸಿನಿವಾಲಿ, ರಾಕಾ, ಗಂಗು, ಪೃಥ್ವಿ, ಆದಿತಿ, ದಿತಿ, ಪ್ರಶ್ನಿ, ಸ್ವಸ್ತಿ, ರೇವತಿ, ಪುರಂಧಿ, ಅನುಮತಿ, ಅಪದೇವಿ, ಸರಸ್ವತಿ, ಸಿಂಧು, ಇಂದ್ರಾಣಿ, ವರುಣಾಣಿ, ರುದ್ರಾಣಿ, ಅಗ್ನೇಯಿ, ಶರಣ್ಯು, ಸೂರ್ಯಿ, ಶಚಿ, ರೊದಾಸಿ, ಸೀತಾ, ದಕ್ಷಿಣಾ, ಶ್ರದ್ಧಾ, ದಿಶ್ನಾ, ಇಳಾ, ಮಾಹೆ, ಭಾರತಿ, ಗೌರಿ, ಸ್ವಧಾ, ಊರ್ವಸಿ, ಅಲಕ್ಷಿ, ಕೃತ್ವಾ, ನಿರ್ತಿ- ಇವರೇ ಮೊದಲಾದ ಸ್ತ್ರೀ ದೇವತೆಯರ ಹೆಸರುಗಳೂ ಸಿಗುತ್ತವೆ. ಇವರೆಲ್ಲರಲ್ಲಿ ಅದಿತಿಯು ಹೆಚ್ಚು ಮಹತ್ವದ ದೇವತೆಯಾಗಿದ್ದು ಋಗ್ವೇದಕ್ಕಿಂತ ತೀರ ಪ್ರಾಚೀನಳಾದ ದೇವತೆಯಾಗಿದ್ದಾಳೆ. ಆರ್ಯ ದೇವತೆಗಳಲ್ಲಿ ಇವಳಿಗಿಂತ ಪ್ರಾಚೀನದೇವತೆ ಸಿಕ್ಕಿಲ್ಲ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

ಋಗ್ವೇದದ ನಂತರದ ಇತರ ವೇದಗಳಲ್ಲಿ, ಉಪನಿಷತ್ತುಗಳಲ್ಲಿ ಧಾರಾಳವಾಗಿ ಸ್ತ್ರೀದೇವತೆಯ ಉಲ್ಲೇಖಗಳು ದೊರೆಯುತ್ತವೆ. ಇವುಗಳಲ್ಲಿ ಶಾಕ್ತ ಉಪನಿಷತ್ತುಗಳೇ ಪ್ರತ್ಯೇಕವಾಗಿದ್ದು ಶಕ್ತಿಯ ಕುರಿತಾಗಿ ವಿಶೇಷವಾದುದನ್ನು ಹೇಳುತ್ತವೆ. ಸೃಷ್ಟಿಯನ್ನು ಉಂಟು ಮಾಡುವ ಶಿವನನ್ನು ಪೂಜಿಸುವವಳೇ ಶಕ್ತಿ. ಇವಳೇ ಜನನಿ ಪ್ರಕೃತಿ ಪುರುಷರ ಕಾರಣಳು.

ಈ ಹಿನ್ನೆಲೆಯಲ್ಲಿ ಶಕ್ತಿ ಪೂಜೆ ಎಂದು ಗೌರಿಯನ್ನು ಪೂಜಿಸಿದರೆ ಭೂಮಿ ತಾಯಿಯ ಪೂಜೆ ಎಂದು ಸೀಗಿಯನ್ನ ಆರಾಧಿಸುವದು ನಡೆದು ಬಂದಿದೆ. ಎರಡೂ ಹಬ್ಬಗಳ ಸಾಂಪ್ರದಾಯಿಕ ಆಚರಣೆಗಳು ಭಿನ್ನವಾದರೂ ಈ ಎರಡೂ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳ ಹಾಡುವ ಹಾಡುಗಳಲ್ಲಿ ಮಾತ್ರ ವ್ಯತ್ಯಾಸವಿಲ್ಲದುದೊಂದು ವಿಶೇಷ. ಜಾನಪದರು ಈ ಆರಾಧನಾ ಪರಂಪರೆಯನ್ನು ತಮ್ಮ ಹುಣ್ಣಿವೆಗಳಲ್ಲೇ ಹೆಸರಿಟ್ಟುಕೊಂಡು ಉಳಿಸಿಕೊಂಡು ಬಂದಿದ್ದಾರೆ.

ಸೀಗೀಹುಣ್ಣಿವೆ

“ಏ ಗಿರಿಜಾ ಬಾರವಾ ಲಗೂನ್ಯs ಕಡಿ ಓಣಿಯವ್ರು ತಿರಗಿ ಸೀಗಿನ್ನ ತಂದ್ರು. ನಮ್ಮದs ತಡಾ ಆಯ್ತು ಈ ವರ್ಸ” ಎನ್ನುವ ಅವಸರದ ಗೆಳತಿಗೆ ಇನ್ನೊಬ್ಬಳು ದನಿ ಗೂಡಿಸುತ್ತಾಳೆ.

“ಹೌದs ಶಾಂತಾ, ಮ್ಯಾಲಿನ ಓಣಿಯವ್ರೂ ತಂದ ಬಿಟ್ಟಾರ. ಏನು ಅಸೈಂಯವಾ ನಾವೇ ಎಲ್ಲಾರಕಿಂತ ಹಿಂದ ಉಳದಿವಿ. ನಡೀರಿ ಈಗರೆ ಜರಾ ಗಡಿಬಿಡಿ ಮಾಡ್ರಿ,” ಎಲ್ಲರೂ ಸೇರಿಕೊಂಡು ಬೇರೆ ಓಣಿಯವರೊಂದಿಗೆ ಪೈಪೋಟಿ ಮಾಡುತ್ತ, ಹೊಸ ಸೀರೆಗಳ ಸರಬರ ಸಪ್ಪಳದೊಂದಿಗೆ, ಒಂದಿಬ್ಬರು ಹಿರಿಯ ಮುತ್ತೈದೆಯರನ್ನೂ ಕರೆದುಕೊಳ್ಳುತ್ತಾರೆ. ಈ ಯುವತಿಯರ ತಂಡ ತಮ್ಮೂರಿನ ಕುಂಬಾರನಲ್ಲಿಗೆ ಹೋಗಿ ತಾವು ತಂದ ಜೋಳದಿಂದಲೋ, ಅಕ್ಕಿ-ಗೋದಿ-ಸಜ್ಜೆಯಿಂದಲೋ ಕುಂಬಾರನ ಹೆಂಡತಿಯ ಉಡಿ ತುಂಬುತ್ತಾರೆ. ಆಗ ಅವನು ಎರಡು ಸೀಗವ್ವಗಳನ್ನು ಕೊಡುತ್ತಾನೆ. ಇವು ಮಣ್ಣಿನಿಂದ ಮಾಡಿದ್ದು ಗೋಪುರವಾಗಿ ಅಡಕಲು ಗಡಿಗೆ ಏರಿಸಿದಂತೆ ಐದು ಅಥವಾ ಒಂಬತ್ತು ಮಜಲುಗಳಿರುತ್ತವೆ. ಇವುಗಳನ್ನು ಒಂದು ಕಾಲುಮಣೆಯ ಮೇಲಿಟ್ಟುಕೊಂಡೋ ಅಥವಾ ಆರತಿಯ ತಟ್ಟೆ ದೊಡ್ಡದಿದ್ದರೆ ಅದರಲ್ಲೇ ಇಟ್ಟಕೊಂಡೋ ಅಲ್ಲಿಂದಲೇ ಸಂಪ್ರದಾಯದ ಹಾಡುಗಳನ್ನು ಹಾಡುತ್ತಾ ಮನೆಗೆ ತರುತ್ತಾರೆ. ಇದು ಸೀಗಿ ಹುಣ್ಣಿವೆ ಇನ್ನೂ ಐದು ದಿನವಿರುವಾಗ ಸೀಗವ್ವನನ್ನು ಕರೆತರುವ ಸಂಪ್ರದಾಯ.

ಈ ಐದು ದಿನಗಳಲ್ಲೂ ಸಾಯಂಕಾಲದಿಂದ ಮಧ್ಯ ರಾತ್ರಿಯವರೆಗೆ ಯುವತಿಯರು ಓಣಿಯಲ್ಲಿ ಸೀಗವ್ವ ಕೂಡಿಸಿದ ಮನೆಗಳಿಗೆ ಹೋಗಿ ಹಾಡುಗಳನ್ನು ಹಾಡುತ್ತಾರೆ. ಪ್ರತಿದಿನವೂ ಮನೆಯವರು ಸೀಗವ್ವನ ಎಡೆಗಾಗಿ ಬೇರೆ-ಬೇರೆ ತರದ ಪಕ್ವಾನ್ನಗಳನ್ನು ಮಾಡಬೇಕಲ್ಲದೆ ಆರತಿಗೆ ಬಂದವರಿಗೆಲ್ಲ ಅದನ್ನು ಹಂಚಬೇಕು. ಅಲ್ಲದೇ ಕುಮಾರಿಯರೂ ಕೂಡ ಸೀಗವ್ವನಿಗೆ ಆರತಿ ಮಾಡುವದೊಂದು ವಿಶೇಷ. ಈ ಸೀಗಿಗಳನ್ನು ಕೇವಲ ಒಕ್ಕಲಿಗರು ಮಾತ್ರ ತರುತ್ತಾರೆ ಅನ್ನುವದೊಂದು ಗಮನಾರ್ಹ ಅಂಶ. ಯಾಕೆಂದರೆ ಸೀಗೆಯ ಹುಣ್ಣಿವೆಯಲ್ಲಿ ಪೂಜಿಸಲ್ಪಡುವ ಈಗುಪ್ಪೆಯ ಆಕೃತಿ ಧಾನ್ಯ ರಾಶಿಯ ಆಕಾರವನ್ನು ಸಂಕೇತಿಸುತ್ತದೆ ಎನ್ನುವವರೂ ಇದ್ದಾರೆ.  ಸೀಗಿ ಅನ್ನುವುದು ಸುಗ್ಗಿಯ ವಿಕಾರರೂಪವೆಂದೂ ಈ ಆಕೃತಿಗಳಿಗೆ ಕೆಲವೆಡೆ ಸೀಗಿಗೌರಿ ಅನ್ನುವ ಹಿನ್ನೆಲೆಯಲ್ಲಿ, ಅದು ಸುಗ್ಗೀ ಗೌರಿ ಇರಬಹುದು ಎಂದು ವಾದಿಸುವವರೂ ಇಲ್ಲದಿಲ್ಲ. ಅನೇಕ ಭಾಗಗಳಲ್ಲಿ ಇದಕ್ಕೆ ಹೆಜ್ಜುಗ್ಗಿ ಹಬ್ಬ ಅನ್ನುತ್ತಾರೆ. ಹೆಜ್ಜುಗ್ಗಿ ಅಂದರೆ ಹಿರಿಯ ಸುಗ್ಗಿ ಎಂದೇ ಅರ್ಥ. ಇದು ಚಂದ್ರ ಸಂಪ್ರದಾಯದ ಮೂಲದಲ್ಲಿ ಬರುವ ಹಬ್ಬವೆಂದೂ ಇದನ್ನು ಕೌಮುದೀ ಮಹೋತ್ಸವವೆಂದು ಕರೆದು ಬೆಳದಿಂಗಳ ಹಬ್ಬ ಮಾಡುವದೂ ಇದೆ.

ಈ ಸೀಗಿ ಸಂಸ್ಕೃತ ‘ಶಿಖಾ’ ದ ತದ್ಭವ ರೂಪವೂ ಆಗಿರಬಹುದು. ಶಿಖರ-ಶೀಗಿ-ಸೀಗಿ ಹೀಗೂ ಆಗಿರುವ ಸಾಧ್ಯತೆ ಇದೆ. ಇವು ಶಿಖರಾ ಕೃತಿಯಲ್ಲಿರುವದೂ ನಿಜ. ಆದರೆ ಈ ಗುಪ್ಪೆಯ ಆಕೃತಿಗಳಿಗೆ ಸಂಸ್ಕೃತಿಯ ಪ್ರಾರಂಭದಿಂದಲೂ ವಿಶೇಷ ಹಿನ್ನೆಲೆ ಇದೆ ಎನ್ನುವುದನ್ನು ಸಂಶೋಧಕರು ಒಪ್ಪಿಕೊಂಡಿದ್ದಾರೆ. ಅಲ್ಲದೆ ಅನೇಕ ಜನಾಂಗಗಳಲ್ಲಿ ಇದು ಸಂಸ್ಕೃತಿಯ ಲಕ್ಷಣವಾಗಿ ಬೆಳೆದುಕೊಂಡು ಬಂದಿದೆ ಎನ್ನುವದೂ ಗಮನಾರ್ಹವಾಗಿದೆ.

ಪ್ರಾಚೀನ ಸಂಸ್ಕೃತಿಯಿಂದ ಇದಕ್ಕೆ ಬೇಕಾದಷ್ಟು ಆಧಾರಗಳು ಸಿಗುತ್ತವೆ. ಮೊಹೆಂಜೊದಾರೊ-ಹರಪ್ಪಾಗಳಲ್ಲಿ ಈ ಬಗೆಯ ಆಕೃತಿಗಳು ಸ್ಪಷ್ಟವಾಗಿ ಕಲ್ಲಿನಲ್ಲಿ, ಮಣ್ಣಿನಲ್ಲಿ ರೂಪುಗೊಂಡಿದ್ದು ವ್ಯಕ್ತವಾಗಿದೆ. ಅಲ್ಲಿ ಇವು ದೇವತೆಗಳಂತೆ ಪೂಜಿಸಲ್ಪಟ್ಟ ಸಾಧ್ಯತೆಯನ್ನು ಸಂಶೋಧಕರು ಗುರುತಿಸಿದ್ದಾರೆ. ಇಲ್ಲಿ ಸಂಶೋಧನೆಯನ್ನು ಕೈಕೊಂಡ ಶ್ರೀ ರಾಯಬಹಾದ್ದೂರ ದಯಾರಾಮ ಸಾಹನಿ ಅವರು ಹೇಳುವಂತೆ, The inhabitants of Harappa appear also to have been in the habit of offering in their temples tera – cotta cranes, with or without figures of animals, of which severed specimens, have been recovered. A large cone of dark stone, 11 inches high, resembling the Siva Linga of modern times must have been used for worship (Hindu Architecture in India and Abroad – P.K. Acharya )

ಏಕ ಶೃಂಗೀಯ ಎತ್ತಿನ ಮೂರ್ತಿಯ ಮುಂದೆ ಇಂಥದೊಂದು ಆಕೃತಿ ಕಂಡು ಬಂದಿರುವದು ವರ್ತುಳದ ಇಲ್ಲವೇ ಚೌಕಾಕಾರದ ವೇದಿಕೆ, ಅದರ ಮೇಲೆ ಕಂಬದಾಕೃತಿ ಕಂಬದಾಕೃತಿಯ ತುದಿಯಲ್ಲಿ ಗುಪ್ಪೆ. (Indian Art V.S. Agrawala)

ಇದು ವಿಶೇಷವಾಗಿ ವಿದ್ವಾಂಸರ ಗಮನ ಸೆಳೆದಿದ್ದು ಕೆಲವು ಗುಪ್ಪೆಯೊಂದಿಗೆ ಇಡಿಯಾಗಿ ಕಂಬವನ್ನು ದೇವತೆಯರ ಸಂಕೇತವಾಗಿ ಗ್ರಹಿಸಿದ. ಕೆಲವರು ಕಂಬದ ತುದಿಯಲ್ಲಿನ ಗುಪ್ಪೆಯಷ್ಟೇ ದೇವತೆಯ ಸ್ಥಾನ ಎಂದು ಗುರ್ತಿಸಿದ್ದಾರೆ. ಇದೂ ಅಲ್ಲದೆ ಆಗಿನ ನಾಣ್ಯಗಳಲ್ಲಿ, ಇತರ ಮುದ್ರೆಗಳಲ್ಲಿ ಇದು ಸ್ವತಂತ್ರವಾಗಿ ಬಳಕೆಯಾಗಿರುವದರಿಂದ ಅಂದಿನ ವಸ್ತುಪೂಜೆಯ ಸಂಕೇತವೇ? ಎಂದೂ ಶಂಕಿಸಲಾಗಿದೆ.

ಅದೇನೇ ಇದ್ದರೂ ಈ ಸೀಗಿಹಬ್ಬವನ್ನು ಒಕ್ಕಲಿಗರೇ ಆಚರಿಸುವದರಿಂದ ಭೂಮಿಪೂಜೆಯೇ ಎನ್ನುವುದಕ್ಕೆ ಹಲವಾರು ಆಚರಣೆಗಳೂ ಸಹಾಯಕವಾಗುತ್ತವೆ. ಸೀಗೀ ಹುಣ್ಣಿವೆಯ ಪ್ರಮುಖವಾದ ಸಂಪ್ರದಾಯವೇ ಇದು. ಇದಕ್ಕೆ ‘ಚರಗ ಚಲ್ಲುವದು’ ಅನ್ನುತ್ತಾರೆ. ಭೂಮೀ ತಾಯಿಗಿ ಬಂಕೀ(ಬಯಕೆಯ) ಊಟವೆಂದೂ ಅನ್ನುತ್ತಾರೆ. ಈ ಹುಣ್ಣಿವೆ ಅಶ್ವಯಜ್ಞ ಶುದ್ಧ ಪೂರ್ಣಿಮೆಯಂದು ಇದ್ದು ಈ ಕಾಲದಲ್ಲಿ ಮುಂಗಾರು ಬೆಳೆಗಳಿಂದ ನೆಲದಾಯಿ ಫಲವತಿಯಾಗಿ ನಲಿಯುತ್ತಿರುತ್ತಾಳೆ. ಈ ತಾಯಿಗೆ ಉಣಿಸುವ ಬಯಕೆಯ ಊಟವೇ ಸೀಗಿಹುಣ್ಣಿವೆಯ ಹಬ್ಬ. ಇದನ್ನು ಒಕ್ಕಲಿಗರು ಉತ್ಸಾಹದಿಂದ ಆಚರಿಸುತ್ತಾರೆ.

ಹಿಂದಿನ ಐದೂ ದಿನಗಳಲ್ಲಿ ಸೀಗವ್ವನನ್ನು ಕೂಡಿಸಿ ಹಾಡಿ ಆರತಿ ಮಾಡಿದರೆ ಹುಣ್ಣಿವೆಯ ದಿನ ಬೆಳಿಗ್ಗೆ ರೈತರ ಹೆಣ್ಣುಮಕ್ಕಳು ಹೊಸಧಾನ್ಯಗಳಿಂದ ಅಡಿಗೆ ಮಾಡುತ್ತಾರೆ. ಈ ಅಡಿಗೆಯ ವೈವಿಧ್ಯವೇ ಬೆರಗುಗೊಳಿಸುವಂತದು. ಎಳ್ಳುಹಚ್ಚಿದ ಸಜ್ಜಿರೊಟ್ಟಿ-ಜೋಳದ ಕಡಬು-ಗೋದಿಯ ಹುಗ್ಗಿ-ನವಣಿಯ ಅನ್ನಸೇಂಗಾದ ಹೋಳಿಗೆ-ಕರಚೀಕಾಯಿ-ಕುಂಬಳಕಾಯಿ ಭರತ(ಕಿಚಡಿ) ಎಣ್ಣೆಗಾಯಿ ಡೊಣ್ಣೆಗಾಯಿ-ಎಲ್ಲ ತರದ ಪಲ್ಲ್ಯೆಗಳು-ಸೇಂಗಾ- ಪುಠಾಣಿ-ಎಳ್ಳು-ಕಾರೆಳ್ಳು-ಅಗಸಿಯ ಹಿಂಡಿಗಳು, ಖೊಬ್ರಿ, ಉಳ್ಳಾಗಡ್ಡಿ- ಬಳ್ಳೊಳ್ಳಿ ಚಟ್ನಿಗಳು, ಮಸರನ್ನ ಚಿತ್ರಾನ್ನಗಳು ಹೀಗೆ ಬಗೆ-ಬಗೆಯ ಅಡಿಗೆಯ ಪದಾರ್ಥಗಳನ್ನು ಮಾಡಿ ಕಟ್ಟಿಕೊಂಡು ಓಣಿಯ ಜನರನ್ನು ಕರೆದುಕೊಂಡು ತಮ್ಮ ಹೊಲಗಳಿಗೆ ಹೋಗುತ್ತಾರೆ. ಅಲ್ಲಿ ಹೊಲದ ಒಂದು ಭಾಗದಲ್ಲಿ; ಬನ್ನಿ ಗಿಡವಿದ್ದರೆ, ಅದರ ಕೆಳಗೆ ಐದು ಸಾಧಾರಣ ಗಾತ್ರದ ಕಲ್ಲುಗಳನ್ನು ಇಡುತ್ತಾರೆ. ಅವುಗಳ ಹತ್ತಿರ ಸ್ವಲ್ಪ ದೊಡ್ಡ ಕಲ್ಲೊಂದನ್ನು ಇಡುತ್ತಾರೆ. ಇವರು ಪಾಂಡವರೆಂದೂ ಒಂದೇ ಕಲ್ಲು ಕುಂತಿ ಎಂದೂ ಭಾವಿಸಿ ಪೂಜಿಸಲಾಗುತ್ತದೆ. ಕುಂತಿ ಸಂತಾನದೇವತೆ ಎಂದೂ ಅವಳ ಕೃಪೆಯಿಂದ ಬೆಳೆ ಇಮ್ಮಡಿ-ಮುಮ್ಮಡಿಯಾಗಿ ಬರಲೆಂದು ಆಶಿಸಲಾಗುತ್ತದೆ: ಕೆಲವು ಭಾಗಗಳಲ್ಲಿ ಈ ಐದೂ ಕಲ್ಲುಗಳ ಮೇಲೆ ಸುಣ್ಣದಿಂದ – ಹೀಗೆ ಬರೆಯಲಾಗುತ್ತದೆ. ಮುಂದೆ ಸುಗ್ಗಿಯನ್ನು ಮಾಡುವಾಗ ಕಣದಲ್ಲಿ ಇವುಗಳನ್ನು ಹುಡುಕಾಡಿ ತಂದಿಟ್ಟು ಪೂಜೆ ಮಾಡಲಾಗುತ್ತದೆ. ಸೀಗಿಯ ಹುಣ್ಣಿವೆಯ ದಿನ ಇವುಗಳ ಸುತ್ತ ಐದು ಜೋಳದ ದಂಟುಗಳನ್ನಿಟ್ಟು (ತೆನೆ ಬಿಟ್ಟಿದ್ದವುಗಳು) ತುದಿಯ ತೆನೆಗಳನ್ನು ಕೂಡಿಸಿ ಕಟ್ಟುತ್ತಾರೆ. ಪಾಂಡವರಿಗೆ ವಿಭೂತಿ-ಕುಂಕುಮಗಳಿಂದ ಪೂಜಿಸಿ ಊದಿನಕಡ್ಡಿಯಿಂದ ಬೆಳಗಿ ನಂತರ ತಂದೆ ಎಡೆಯನ್ನು ನೈವೇದ್ಯ ಮಾಡುತ್ತಾರೆ.

ಇದಾದ ಮೇಲೆ ಒಂದು ರೊಟ್ಟಿಯಲ್ಲಿ ತಾವು ತಂದ ಅಡಿಗೆಯ ಪದಾರ್ಥಗಳಿಂದ ಒಂದನ್ನೂ ಬಿಡದೆ ಸ್ವಲ್ಪ ಸ್ವಲ್ಪ ತೆಗೆದುಕೊಳ್ಳುತ್ತಾರೆ. ಎಲ್ಲವನ್ನೂ ಕಲಿಸಿ ಈ ಮಿಶ್ರಣವನ್ನು ಹೊಲದ ತುಂಬ ಚೆಲ್ಲುತ್ತಾರೆ. ಇದೇ ಚರಗ ಚಲ್ಲುವದು. ಭೂದೇವಿಗೆ ಬಯಕೆಯೂಟ ಉಣ್ಣಿಸುವದು. ಹೀಗೆ ಚರಗ ಚಲ್ಲುವಾಗ, ಚಾಂಗೆ ಬೊಲೋ-ಚಾಂಗೆ ಬೊಲೆ’ ಎನ್ನುವ ವಾಡಿಕೆ ಅನೇಕ ಕಡೆಗಳಲ್ಲಿದೆ. ನಂತರ ಎಲ್ಲರೂ ಊಟ ಮಾಡುತ್ತಾರೆ. ಹೆಣ್ಣು ಮಕ್ಕಳು ಮನೆಯಿಂದ ಬರುವಾಗ ತಂದ ಸೀಗವ್ವಗಳನ್ನು ಬನ್ನಿಯ ಕಟ್ಟೆಯ ಮೇಲೋ ಅಥವಾ ಹೊಲ ಒಂದು ಭಾಗದಲ್ಲೋ ಇಟ್ಟು ಪೂಜಿಸಿ ಮನೆಗೆ ಹೋಗುತ್ತಾರೆ.

ಇದು ಸೀಗೀ ಹುಣ್ಣಿವೆಯ ಆಚರಣೆ. ಇಲ್ಲಿ ಮುಖ್ಯವಾಗಿ ರೈತ ಭೂದಾಯಿಗೆ ತೋರಿಸುವ ಗೌರವ-ಕೃತಜ್ಞತೆ-ಭಕ್ತಿಗಳು ವ್ಯಕ್ತವಾಗುತ್ತವೆ. ಒಕ್ಕಲಿಗರು ಮಾನವ ಸಹಜವಾದ ಗರ್ಭಿಣಿಸ್ತ್ರೀಯ ಬಯಕೆಯೂಟವನ್ನು ಭೂಮಿಗೂ ಹೋಲಿಸಿ ಅವಳಿಗೆ ಉಣಬಡಿಸುತ್ತಾರೆ. ಅದಕ್ಕೇ ಅವತ್ತು ಒಂದೂ ಬಿಡದೆ ಎಲ್ಲ ಪದಾರ್ಥಗಳನ್ನು ಮಾಡುತ್ತಾರೆ. ತನಗೆ ಅಷ್ಟೊಂದು ಧಾನ್ಯ ಸಂಪತ್ತನ್ನು ನೀಡುವ ಅವಳಿಗೆ ಈ ಮೂಲಕ ಕೃತಜ್ಞತೆಯನ್ನೂ ತೋರಿಸುತ್ತಾನೆ ರೈತ.

ಆದರೆ ಇತ್ತೀಚೆಗೆ ಸೀಗವ್ವನನ್ನು ಕೂಡಿಸುವದು ಕಡಿಮೆಯಾಗಿದೆ. ಕಾರಣ ವಿಚಾರಿಸಿದರೆ, “ಈಗ್ಯಾರೂ ತರೂದಿಲ್ಲ, ತಂದ್ರೂ ಆರತೀ ಮಾಡಾಕ ಯಾರೂ ಬರೂದಿಲ್ಲ ತಂದೇನ ಮಾಡೂದು?” ಎನ್ನುವದನ್ನು ಕೇಳಿ ನಿಜಕ್ಕೂ ವಿಷಾದವಾಯಿತು. ನಾಗರಿಕತೆ ನಮ್ಮ ಬದುಕಿನ ಆಹ್ಲಾದಕರ ಕ್ಷಣಗಳನ್ನು ಕಿತ್ತುಕೊಂಡು ಹೇಗೆ ನಮ್ಮ ಜನಾಂಗವನ್ನು ಬರಡಾಗಿಸುತ್ತಿದೆ! ನಮ್ಮ ಜೀವಶಕ್ತಿಗೆ ಉದರ ಪೋಷಣೆ ಮಾಡುವ ನೆಲದಾಯಿಗೆ ಕೃತಜ್ಞತೆ ತೋರಿಸಲೂ ಕೂಡ ನಮಗೆ ಸಮಯವಿಲ್ಲ!!’

ಹೀಗೆ ಸೀಗಿ ಹುಣ್ಣಿವೆಯಲ್ಲಿ ಮುಖ್ಯವಾದುದು ನೆಲದಾಯಿಗೆ ಬಯಕೆಯೂಟ ಇಯ್ಯವ ಹಬ್ಬ. ಇದು ಬದುಕಿನಲ್ಲಿ ನಮ್ಮನ್ನು ಪೋಷಿಸುವ ಶಕ್ತಿಗೆ ಕೃತಜ್ಞರಾಗಿರಬೇಕೆನ್ನುವ ಉದಾತ್ತ ಸಂಸ್ಕಾರವನ್ನು ಕಲಿಸುವ ಹಬ್ಬದ ವಿಧಿಯಾಗಿದೆ. ಈ ಹಬ್ಬದ ಹಿನ್ನೆಲೆ ರೈತನನ್ನು ಕುರಿತದ್ದಾದರೂ ಹೆಣ್ಣು ಮಕ್ಕಳ ಹಬ್ಬವೆಂದೇ ಪ್ರಚಲಿತವಿದೆ. ಯಾಕೆಂದರೆ ಸೀಗವ್ವನೆನ್ನುವ ಗುಪ್ಪೆಯಾಕೃತಿಗಳನ್ನು ಕುಂಬಾರ ಮನೆಯಿಂದ ತರುವದರಿಂದ ಹಿಡಿದು ಐದೂ ದಿನ ಹಾಡುವ ಆರತಿ ಮಾಡಿ ಸಂಭ್ರಮ ಪಡುವ ಸಂತೋಷ ಹೆಣ್ಣು ಮಕ್ಕಳದು. ಚರಗ ಚಲ್ಲುವದಕ್ಕೆ ಮಾಡಬೇಕಾದ ಅಡಿಗೆಗಾಗಿ ಬೆಳ್ಳಂಬೆಳಗು ಎಚ್ಚರವಿರುವವರು ಅವರೇ ಈ ರಾತ್ರಿ ಓಣಿಯ ಹೆಣ್ಣುಮಕ್ಕಳೂ ಸಹಾಯಕ್ಕೆ ಬಂದಿರುತ್ತಾರೆ. ನಿದ್ದೆ ಓಡಿಸಲು ಆಯಾಸ ಪರಿಹಾರ ಮಾಡಲು ಕತೆ-ಹಾಡುಗಳನ್ನು ಬಳಸುತ್ತಾರೆ. ಚರಗ ಚಲ್ಲುವವರು ಮಾತ್ರ ಗಂಡಸರು. ಅದೊಂದೇ ಸೀಗೀಹುಣ್ಣಿವೆಯ ಅವರ ಹಬ್ಬ. ಸುಗ್ರಾಸ ಭೋಜನವಂತೂ ಅವರಿಗಾಗಿ ಇದ್ದೇ ಇದೆಯಲ್ಲ. ಇದಾವ ಹಬ್ಬದ ಸಂಭ್ರಮಕ್ಕಿಂತ ಕಡಿಮೆ ಇದೆ?

ಸೀಗೀ ಹುಣ್ಣಿವೆಗಾಗೇ ಪ್ರತ್ಯೇಕವಾದ ಹಾಡುಗಳು ಇಲ್ಲ. ಆದರೂ, ಕೆಲವು ಕಡೆಗಳಲ್ಲಿ. ‘ಭಾಗ್ಯದಾ ಲಕ್ಷ್ಮೀ ಬಾರಮ್ಮಾ’ ಅನ್ನುವ ಹಾಡನ್ನು ಧಾನ್ಯದಾ ಲಕ್ಷ್ಮೀ ಬಾರಮ್ಮಾ’ ಎಂದು ಹಾಡುವ ವಾಡಿಕೆ ಇದೆ. ಸೀಗಿ ಹಬ್ಬ ಭೂದೇವಿಯ ಹಬ್ಬವಾದುದರಿಂದ ಈ ಹಾಡು ಬಂದಿರಬೇಕು. ಆದರೂ ಸೀಗವ್ವನ ಹೆಸರಿದ್ದ ಹಾಡುಗಳು ಕಡಿಮೆ. ಇಲ್ಲವೆಂದೇ ಹೇಳಬೇಕು.

ಸೀಗವ್ವನ ಹಬ್ಬ ಭೂದೇವಿಯ ಹಬ್ಬವಾದುದರಿಂದ ಕೇವಲ ಒಕ್ಕಲಿಗರ ಹಬ್ಬ. ಆದರೆ ಗೌರಿ ಹಾಗಲ್ಲ ಎಲ್ಲ ವೃತ್ತಿಯ ಜನ ಎಲ್ಲ ಜಾತಿಯ ಜನ ಅದನ್ನು ಉತ್ಸಾಹದಿಂದ ಮಾಡುತ್ತಾರೆ. ಸೀಗವ್ವನಿಗೆ ಸೀರೆ ಉಡಿಸುವದೆಂದು ಒಕ್ಕಲಿಗರ ಕುಟುಂಬದಲ್ಲಿ ಹೊಸದಾಗಿ ಮದುವೆಯಾದ ಮಗಳನ್ನು ಗಂಡನ ಮನೆಯಿಂದ ಕರೆತಂದು ಐದನೇ ದಿನ ಸೀಗವ್ವನಿಗೆಂದು ತಂದ ಸೀರೆಯನ್ನು ಮಗಳಿಗೆ ಉಡಿಸಿ ಚರಗ ಚಲ್ಲುವ ಹಬ್ಬ ಮುಗಿದಿಂದ ಕಳಿಸಿಕೊಡುತ್ತಾರೆ. ಹಬ್ಬವೂ ಆಯಿತು. ಈ ನವದಲ್ಲಿ ತುಂಬ ದಿನಗಳಿಂದ ದೂರವಿದ್ದ ಮಗಳನ್ನೂ ನೋಡಿದಂತಾಯಿತು.

ಹೀಗೆ ಜನಪದ ಸಂಸ್ಕೃತಿಯು ಹಬ್ಬದ ಆಚರಣೆಗಳೊಂದಿಗೆ ತಮ್ಮ ಬಯಕೆಗಳನ್ನು ಏಕೀಭವಿಸಿದ್ದರೆನ್ನುವದೊಂದು ವಿಶೇಷ. ದೈನಂದಿನ ಬದುಕಿನ ಏಕತಾನತೆಯಿಂದ ಬೇಸತ್ತ ರೈತ ಈ ಹಬ್ಬ-ಹರಿದಿನಗಳಲ್ಲಿ ಹೊಸ ಬದಲಾವಣೆಯಿಂದ ಸಂತಸಪಡುತ್ತಾನೆ. ಒಕ್ಕಲಿಗನಿಗೆ ಭೂಮಿಯೇ ದೇವರು. ಅದಕ್ಕೆ ಇದು ಸುಗ್ಗಿಯ ಹಬ್ಬ.

ಗೌರೀ ಹುಣ್ಣಿವೆ

ಒಂದs ಸೇರೆಣ್ಣಿ ತಂದೇನಿ ಗೌರಿ
ಒಂದs ದೀವಿಗಿ ಹಚ್ಚೇನೆ ಗೌರಿ
ರಾಯರಾಡೂರು ಹಾದಿ ಬೀದ್ಯಾಗ
ಶೆಟ್ಟರಾಡೂದು ಪಟ್ಟಣಸಾಲ್ಯಗs
ನಾವಾಡೂದು ಗೌರೀ ಹುಣ್ಣವ್ಯಾಗs ಕೋಲ ಕೋಲ ||

ಹಳ್ಳಿಯಲ್ಲಿ ಈ ಇಂಪಾದ ಹಾಡು ಕಿವಿಗೆ ಬಿತ್ತೆಂದರೆ ಗೌರೀ ಹುಣ್ಣಿವೆಯ ಹಬ್ಬದ ಪ್ರಾರಂಭೋತ್ಸವ ಆಯಿತೆಂದೇ ಲೆಕ್ಕ. ಈ ಹುಣ್ಣವೆಯಲ್ಲಿ ಅನೇಕ ತರದ ಆಚರಣೆಗಳಿವೆ. ಕೆಲವು ಕಡೆ ಸೀಗವ್ವನನ್ನು ತಂದಂತೆ ಕುಂಬಾರ ಮನೆಯಿಂದ ಗುಪ್ಪೆಯಾಕೃತಿಗಳನ್ನು ತರುತ್ತಾರೆ. ಕೆಲವು ಕಡೆ ಮನೆಯಲ್ಲೋ ಈ ಆಕೃತಿಗಳನ್ನು ಕಟ್ಟಿಗೆಯಲ್ಲಿ ಮಾಡಿಸಿ ಪ್ರತಿವರ್ಷವೂ ಅವನ್ನೇ ಪೂಜಿಸುತ್ತಾರೆ. ಇನ್ನೂ ಕೆಲವೆಡೆ ಓಣಿಯ ಯುವತಿಯರು ಕೆರೆಗೋ ಹೊಳೆಗೋ ಹೋಗಿ ಅಲ್ಲಿಂದಲೇ ಸ್ವಲ್ಪ ದೊಡ್ಡ ಆಕಾರದ ಗೌರಿಯನ್ನು ಮಾಡಿಕೊಂಡು ಹಾಡುತ್ತಾ ತಂದು ಒಂದೊಂದು ಓಣಿಯ ನಿಗದಿ ಪಡಿಸಿದ ಕಟ್ಟೆಗಳ ಮೇಲಿಡುತ್ತಾರೆ. ಇನ್ನು ಕೆಲವೆಡೆ ಆ ಊರಿನ ಪ್ರಸಿದ್ಧ ಈಶ್ವರ ದೇವಸ್ಥಾನದಲ್ಲಿ ಊರವರೆಲ್ಲ ಸೇರಿ ಮಾಡಿಸಿದ ಕಟ್ಟಿಗೆಯ ಆಳೆತ್ತರದ ಬಸವಣ್ಣನ ಮೇಲೆ ಕಟ್ಟಿಗೆಯ ಶಿವ-ಪಾರ್ವತಿಯ ಮೂರ್ತಿಗಳನ್ನು ಕೂಡಿಸುತ್ತಾರೆ.

ಈ ಗೌರಿ ಕೂಡ ಐದು ದಿನ ಒಂಬತ್ತು ದಿನ ಕೂಡುತ್ತಾಳೆ. ಈ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಕಿಶೋರಿಯರಿಗೆ ಬಿಡುವೇ ಇಲ್ಲ. ಈ ಐದೂ ದಿನವೂ ಮಧ್ಯಾಹ್ನ ರಾತ್ರಿ ಊಟಗಳನ್ನು ಇವರು ಮನೆಯಲ್ಲಿ ಮಾಡುವದೇ ಇಲ್ಲ. ಓಣಿಯ ಎಲ್ಲ ಕಿಶೋರಿಯರು ತಮ್ಮಂದಿರೊಂದಿಗೆ ತಂಗಿಯರೊಂದಿಗೆ ಮಧ್ಯಾಹ್ನದ ಬುತ್ತಿಯನ್ನು ಕಟ್ಟಿಕೊಂಡು ಊರ ಮುಂದಿರುವ ತೋಪಿಗೋ-ತೋಟಕ್ಕೋ ಹೋಗುತ್ತಾರೆ. ಅಲ್ಲಿ ಒಂದೊಂದು ಗುಂಪು ಒಂದೊಂದು ಸ್ಥಳ ಆರಿಸಿಕೊಂಡು ಸ್ವಚ್ಛಮಾಡಿ ಸುತ್ತಲೂ ಕಲ್ಲುಗುಂಡುಗಳನ್ನಿಟ್ಟು ತಮ್ಮ ಸರಹದ್ದಿನ ಕೋಟೆಗಳನ್ನು ಕಟ್ಟಿಕೊಳ್ಳುತ್ತಾರೆ. ಅಲ್ಲಿರುವ ಒಂದು ಗಿಡಕ್ಕೋ ಇಲ್ಲ ಕಲ್ಲಿಗೋ ಎಲ್ಲರೂ ಸೇರಿ ಪೂಜಿಸುತ್ತಾರೆ. ನಂತರ ಪರಸ್ಪರ ಬುತ್ತಿಯನ್ನು ವಿನಿಮಯ ಮಾಡಿಕೊಂಡು ನಗು-ಹಾಸ್ಯಗಳನ್ನು ನಂಜಿಕೊಂಡು ಊಟ ಮುಗಿಸುತ್ತಾರೆ. ಹೊಟ್ಟೆ ಭಾರವಾಗಿದ್ದರೂ ತೀರದ ಉತ್ಸಾಹ. ಪಾತ್ರೆಗಳನ್ನು ತೊಳೆದಿಟ್ಟುಕೊಂಡು ತಾವು ಬರುವಾಗ ತಂದ ಹಿತ್ತಾಳೆಯ ಕಳಸ ತಂಬಿಗೆಯನ್ನು (ಆರತಿ ತಟ್ಟಿಯಲ್ಲಿಡುವ ಮಂಗಳ ಸೂಚಕ ಕಳಸ) ಒಂದು ಮಧ್ಯವರ್ತಿ ಜಾಗದಲ್ಲಿ ಎಲ್ಲರೂ ಇಟ್ಟು ಅವುಗಳಿಗೆ ತೋಟದಲ್ಲಿ ಸಿಕ್ಕ ಬಗೆ-ಬಗೆಯ ಹೂಗಳನ್ನೇರಿಸುತ್ತಾರೆ. ನಂತರ ಅದರ ಸುತ್ತ ಎರಡು-ಮೂರಡಿ ಜಾಗ ಬಿಟ್ಟು ವರ್ತುಲಾಕಾರವಾಗಿ ಸುತ್ತಿಕೊಂಡು ಹಾಡುಗಳನ್ನು ಹಾಡುತ್ತಾರೆ. ಹೀಗೆ ಊಟಕ್ಕೆ ಬಂದಾಗ ಹಾಡುವ ಹಾಡುಗಳೇ ಬೇರೆ. ರಾತ್ರಿ ಗೌರಿಯು ಎದುರಲ್ಲಿ ಹಾಡುವದೇ ಬೇರೆ. ಮತ್ತು ಬೆಳದಿಂಗಳಲ್ಲಿ ಹಾಡುವ ಹಾಡುಗಳೇ ಬೇರೆ.

ಒಂದೆ ಚಂದದ ಕೋಟಿ
ಅದರೊಳು ಒಂದೆ ಚಂದದ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣೆನ್ನಿರೆ”

‘ಹೀಗೆ ಎರಡು ಚಂದದ ಕೋಟಿ ಅದರೊಳು ಎರಡು ಚಂದದ ಬಸವ’ ಎಂದು ಮುಂದುವರಿಸುತ್ತಾ ಒಂಬತ್ತು ಕೋಟಿಗಳಾಗುವವರೆಗೆ ಹಾಡುತ್ತಾರೆ. ಹೀಗೆ ಇಂಥವೇ ಅನೇಕ ಹಾಡುಗಳನ್ನು ಹಾಡುತ್ತಾ ಮನೆಗೆ ಬರುತ್ತಾರೆ. ಹೀಗೆ ಐದು ದಿನವೂ ಇವರ ಮಧ್ಯಾಹ್ನದ ಊಟ ಹೊರಗೇ. ಐದನೇ ದಿನ ಕೂಡ ಹೀಗೇ ಹೋಗಿರುತ್ತಾರಾದರೂ ಅಂದು ಉಂಡ ಮೇಲೆ ಹಾಡುವದಿಲ್ಲ. ಮೊದಲೇ ಉಣಿಸಿ ಕಳಿಸಿದ ಗಂಡು ಹುಡುಗರು ಇವರು ಉಂಡು ಬರುವದರಲ್ಲಿ ಅಲ್ಲೇ ಹತ್ತಿರದಲ್ಲಿ ಒಣ ಮಣ್ಣಿನಲ್ಲೆ ನೆಲಕ್ಕೆ ಮಲಗಿಸಿದಂತೆ ಒಂದು ಪುರುಷಾಕೃತಿಯನ್ನು ಮಾಡಿರುತ್ತಾರೆ. ಇದನ್ನು ‘ಕುಂಯ್ಯಾ’ ಎಂದು ಕರೆಯುತ್ತಾರೆ. ಹುಡಿಗೆಯರು ಇದರ ಸುತ್ತಲೂ ಕುಕ್ಕುರಗಾಲಲ್ಲಿ ಕುಳಿತು ಅದನ್ನು ಬಡಿ-ಬಡಿದು ಸತ್ತಾಗ ಅಳುವಂತೆ ಹಾಡಿಹಾಡಿಕೊಂಡು ಅಳುತ್ತಾರೆ.

ಹೋಳಿಗಿ ಮಾಡಿದ್ಯಾ ಕುಂಯ್ಯಾ
ನೀ ಉಣಲೆ ಇಲ್ಲ ಕುಂಯ್ಯಾ
ಹೊಯ್ಕೋತ ಹೋದೆಲ್ಲ ಕುಂಯ್ಯಾ
ನಾ ಹ್ಯಾಂಗ ಮಾಡ್ಲಿ ಕುಂಯ್ಯಾ

ಹೀಗೇ ಹುಗ್ಗಿ ಮಾಡಿದ್ದೆ, ಸಂಡಿಗಿ ಕರದಿದ್ದೆ, ಶ್ಯಾವಿಗೆ ಬಸದಿದ್ದೆ ಆದರೆ ನೀ ಏನೂ ಕಾಣಲಿಲ್ಲ. ಹೊಯ್ಕೋತ ಹೋದಿ ಎಂದೆಲ್ಲಾ ಅಳುತ್ತಾರೆ. ಹಾಗೆ ಅಳುತ್ತಲೇ ಅದರ ಹೊಟ್ಟೆ ಎದೆ ಬಡಿಯುವಾಗ ಮುಳ್ಳು ಚುಚ್ಚಿದೊಡನೆ ತಮ್ಮ ಶೋಕನಾಟಕ ನೋಡುತ್ತ ನಿಂತ ಹುಡುಗರನ್ನು ಬೆನ್ನಟ್ಟಿ ಹೊಡೆಯಲು ಅಟ್ಟಿಸಿಕೊಂಡು ಹೋಗುತ್ತಾರೆ. ಆ ಮಂಗಗಳು ಗಿಡವೇರಿ ಕುಳಿತು ಹಲ್ಲು ಕಿಸಿದಾಗ ಇವರು ನಗುತ್ತ ಕುಂಯ್ಯಾನನ್ನು ಅಲ್ಲೇ ಬಿಟ್ಟು ಕಳಸ ತಂಬಿಗೆಯಲ್ಲಿ ಹುಲ್ಲಿನಿಂದ ಮಾಡಿದ ಜಡೆ ಸಿಗಿಸಿ ಊರ ಕಡೆಗೆ ಮುಖ ಮಾಡುತ್ತಾರೆ.

ಈ ‘ಕುಂಯ್ಯಾ’ ಅಂದರೆ ಯಾರು? ಅವನೇಕ ಸತ್ತ? ಅವನನ್ನು  ಕುರಿತು ‘ಹೊಯ್ಕೊಂತ ಹೋದೆಲ್ಲ’ ಎಂದು ಇವರೇಕೆ ಇಷ್ಟು ಹೀಯಾಳಿಸಿ ತಿರಸ್ಕಾರದಿಂದ ಹಾಡುತ್ತಾರೋ ಈಗಲೂ ತಿಳಿದಿಲ್ಲ. ಈ ಕುರಿತು ಅನೇಕ ಕಡೆ ವಿಚಾರಿಸಿದೆನಾದರೂ ಖಚಿತವಾದ ವಿಷಯ ತಿಳಿಯಲಿಲ್ಲ. ವಿಜಾಪೂರ ಜಿಲ್ಲೆಯಲ್ಲಿ ಮಾತ್ರವೇ ಕೆಲವು  ಕಡೆಗಳಲ್ಲಿ ಈ ಸಂಪ್ರದಾಯವಿದೆ. ನಾವು ಚಿಕ್ಕವರಾಗಿದ್ದಾಗ ಇದನ್ನೆಲ್ಲ ಆಡಿದ ನೆನಪಿದೆ. ಈಗಿನ ಹುಡಿಗೆಯರಿಗೆ ‘ಕುಂಯ್ಯಾ’ ಅಂದರೇನೆಂದು ತಿಳಿಯದು. ಊಟಕ್ಕೂ ಹೊರಗೆ ಹೋಗುವದನ್ನು ಬಿಟ್ಟು ಬಿಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಕೆಲಭಾಗದಲ್ಲಿ ಮಾತ್ರ ಊಟಕ್ಕೆ ಹೊರಗೆ ಕಟ್ಟಿಕೊಂಡು ಹೋಗುವ ಸಂಪ್ರದಾಯವಿದೆ. ಇದನ್ನು ಅವರು ‘ಅಲ್ಲೀ ಕೆರೆಗೆ ಹೋಗೋದು’ ಅನ್ನುತ್ತಾರೆ. ಹಗಲು ಇದಾದರೆ ರಾತ್ರಿ ಗೌರಿ ಎದುರಿಗೆ ಹಾಡು ಆರತಿಗಳು ನಡೆಯುತ್ತವೆ. ಐದೂ ದಿನಗಳಲ್ಲಿ ಗೌರಿಗೆ ಮಾಡಬೇಕಾದ ಶಾಸ್ತ್ರಗಳೆಲ್ಲಾ ಮುಗಿಯುತ್ತವೆ. ಒಂದು ದಿನ ಎಡಿ ತುಂಬಿ ಗೌರಿಯನ್ನು ಗಂಡನ ಮನೆಗೆ ಕಳಿಸಲಾಗುತ್ತದೆ. ಅವತ್ತೆಲ್ಲ ಉಡಿ ತುಂಬುವ ಹಾಡುಗಳನ್ನೇ ಹಾಡುತ್ತಾರೆ. ಒಂದು ಹೀಗಿದೆ.

ಬಂಗಾರ ಹೆಣೂಲಾ ಬೆನ್ನೀಗೆ ಬಡಿಯೂತ
ಅಲ್ಲಿ ನಮ್ಮ ಗೌರಾ ಪಗಡ್ಯಾಡೆ ಸೋ
ಅಲ್ಲಿ ನಮ್ಮ ಗೌರಾ ಪಗಡ್ಯಾಡಿದರಾಡಲಿ
ಬಲ್ಲಿದ್ದ ಶಿವಾ ಮನಸೋತ ಸೋ
ಬಲ್ಲಿದ್ದರಾಯಾ ಮನಸೋತರ ಸೋಲಾಲಿ
ಹರಳಾಕಿದ ಮಂಚಾ ಲಿಕಿ ಲಿಕಿ ಸೋ
ಬಲ್ಲಿದ್ದ ರಾಯಾ ಮನ ಸೋತಾರ ಸೋಲಾಲಿ
ಮುತ್ತಾಕ್ಹಿದ ಮಂಚಾ ಲಿಕಿ ಲಿಕಿ ಸೋ
ಹುತ್ತೀನ ಮಣ್ಣ ತಂದು ಕೆತ್ತಿ ಲಿಂಗವ ಮಾಡಿ
ಎತ್ತ ಮೋರ‍್ಯಾನ ಬಸವಾ ನಮ್ಮ ಬಸವಾಗ
ಹೊಸ ಮುತ್ತ ನೀಡಿ ಶರಣೆಂಬೆ ಸೋ
ಹೊಸಾ ಸೀರಿ ಉಡಸ್ಯಾರ ಹೊಸಾ ಕುಬಸ ತೊಡಸ್ಯಾರ
ಹೊಸಾ ಮರದಾಗ ಉಡಿಯಕ್ಕಿ ಸೋ
ಹೊಸಾನೆ ಮರದಾಗ ಉಡಿಯಕ್ಕಿ ಹಾಕೊಂಡು
ಕಳಿಬಂದ ಶಿವನ ಅರಮನಿಗೆ ಸೋ
ಕಳಿ ಬಂದೆವು ನಮ್ಮ ಕಳಿಯುಳ್ಳ ಗೌರವ್ವನ
ಕಳಿ ಬಂದೆವು ಶಿವನ ಅರಮನಿಗಿ ಸೋ |

ಹೀಗೆ ಪಗಡೆಯಾಡುತ್ತಿದ್ದ ಗೌರಿಯನ್ನು ಕಂಡು ಶಿವ ಮೋಹಿಸುತ್ತಾನೆ. ವಿರಹದಿಂದ ನಿದ್ದೆ ಇಲ್ಲದೆ ಅವನ ಹರಳು- ಮುತ್ತು ಕೆತ್ತಿದ ಮಂಚ ರಾತ್ರಿಯೆಲ್ಲ ನಿದ್ದೆ ಲಿಕಿ ಲಿಕಿ ಎಂದು ಕಿರಗುಡುತ್ತದೆ. ಶಿವ ಕೂಡ ನಮ್ಮ ಗ್ರಾಮೀಣ ಯುವಕನಾಗಿ ಬಿಟ್ಟಿದ್ದಾನೆ. ಅಂತೂ ಮದುವೆ ಮಾಡಿ ಅವಳನ್ನು ಗಂಡನ ಮನೆಗೇನೋ ಕಳಿಸಿದರು. ಆದರೆ ಅವಳೊಬ್ಬಳೊಂದಿಗೇ ಶಿವ ಸಂಸಾರ ಮಾಡಿದನೇ? ಗಂಗೆಯನ್ನು ಬಯಸಿದ. ಮದುವೆಯಾದ ಮನೆಗೂ ತಂದ. ಈಗ ಗೌರಿಯ ಪ್ರತಿಕ್ರಿಯೆ ಏನು? ಜಾನಪದ ರಸಿಕ ಈ ಪ್ರಸಂಗವನ್ನು ತುಂಬ ರಸವತ್ತಾಗಿ ವರ್ಣಿಸುತ್ತಾನೆ. ಇಲ್ಲಿ ನೋಡಿ ಹೀಗಿದೆ?

ಹಳ್ಳದ ದಂಡೀಲೆ ಹೂವ ಕೊಯ್ಯುವ ಜಾಣಿ
ಲಿಂಗಕ್ಕೊಂದ್ಹೂವ ದಯಮಾಡ ಕೋಲ
ಲಿಂಗಕ್ಕೊಂದ್ಹೂವ ದಯಮಾಡಿದರ ಮಾಡೇನ
ನಮ್ಮವ್ವ ನಮಗ ಬಯದಾಳ
ನಮ್ಮಪ್ಪ ನಮಗ ಬಡದಾನ ಕೋಲು
ನಿಮ್ಮವ್ವ ಬಯದಾಂಗ ನಿಮ್ಮಪ್ಪ ಬಡಿದಂಗ
ಬಂದೀಯೇನ ಗಂಗಾ ನನ್ನ ಜಡಿಯೊಳಗ ಕೋಲ
ಜಡಿಯೊಳಗ ಬಂದರ ಜನ ಏನ ಅಂದೀತು
ಮಡದಿದ್ದಾಳ್ಹೋಗೋ ಮನಿಂiಂiಗ ಕೋಲ
ಮಡದೀನ ಕಾಣಲ್ದ ಇಂದೀಗ ಹನ್ನೆರಡೊರುಷ
ಬಂದೀಯೇನ ಗಂಗಾ  ನನ್ನರಮನಿಗಿ ಕೋಲ
ಬಾಳೀಯ ಬನದನ್ನ ಬಾಲುಳ್ಳ ಗಿಣಿಗೋಳ್ಯಾ
ಹೋಗಿ ಗೌರಮ್ಮಗ ಹೇಳಬ್ಯಾಡ್ರೆ ಕೋಲ
ಬಡ ಬಡ ಬಂದಾನ ಬಾಗಲದಾಗ ನಿಂತಾನ
ಏಳಗೌರಮ್ಮ ಮನಗೀದಿ ಕೋಲ
ಏಳೇಳಗೌರಮ್ಮ ಏಟೊತ್ತ ಮಲಗೀದಿ
ಶಿವರಾಯ ನಿನಮ್ಯಾಲ ಸೌಂತೆಂದ ಕೋಲ
ಮಲಗೀದ ಗೌರಮ್ಮ ಎದ್ದಾದರ‍್ಹೋಗ್ಯಾಳ
ಬಂಗಾರದ ಗಿಂಡಿ ಇಂದ್ಯಾಕ ಬಂದಾಳ
ಕುಂದರ ಹಾಕ್ಯಾರ ಮಣಿ ಚೌಕ ಕೋಲ
ಕುಂದರ ಬಂದಿಲ್ಲ ನಿಂದರ ಬಂದಿಲ್ಲ
ಅಣ್ಣ ಒಂದು ಮಾತು ಹೇಳಲು ಬಂದೆ ಕೋಲ
ಅದು ಏನ ಗೌರಮ್ಮ ನನಗೇಳ ಮದಲ
ಶಿವರಾಮ ನನಮ್ಯಾಲ ಸೌಂತೆಂದ ಕೋಲ
ಸೌತೀನ ತಂದರ ಆ ಚಿಂತಿ ನಿನಗ್ಯಾಕ
ಸುಮ್ಮನಿರ ಹೋಗ ಶ್ರೀಗೌರಿ ಕೋಲ
ಅಲ್ಲೀದ ಗೌರಮ್ಮ ಎದ್ದಾದರು ಬಂದಾಳ
ಎದ್ದು ಬಂದಾಳ ತನ್ನ ಅರಮನಿಗಿ ಕೋಲ
ಹಳ್ಳಕೊಳ್ಳವ ತಿರುಗಿ ಬ್ಯಾಸತ್ತು ಬಂದೀನಿ
ಬಾಗೀಲ ತೆರಿಯ ಶ್ರೀ ಗೌರಿ ಕೋಲ
ದೇಶ ದಿಕ್ಕವ ತಿರುಗಿ ಬ್ಯಾಸತ್ತು ಬಂದೀನಿ
ಸಿಟ್ಟೇನ ಶ್ರೀಗೌರಿ ಕದ ತೆರಿಯ ಕೋಲ
ಒಂದ ಗಿಂಡಿ ಕೊಡು ಅಂದ್ರ ಎಡ್ಡನೆ ಕುಡತಿದಿ
ನಿನಗೆರಡೇನ ಮನಸ ಶ್ರೀ ಗೌರಿ ಕೋಲ
ಅಯ್ಯ  ಅಯ್ಯ ಶಿವನೇ ಅಣಕದ ಮಾತ್ಯಾಕ
ಸುರಳೀ ಕೆಂಜೆಡಿಯ ಮೊಗಟವ ಕೋಲ
ಸುರಳೀನೇ ಕೆಂಜೆಡಿಯ ಮೊಗಟದೊಳಗಿರುವ
ಸುಖನಾರಿಗೊಂದು ನಿನಗೊಂದು ಕೋಲ
ಒಂದ ಮಣಿ ಹಾಕಂದ್ರ ಎಡ್ಡೇನ ಹಾಕಲೀದಿ
ನಿನಗೆಡ್ಡೇನ ಮನಸ ಶ್ರೀಗೌರಿ ಕೋಲ
ಅಯ್ಯ ಅಯ್ಯ ಶಿವನ ಅಣಕದ ಮಾತ್ಯಾಕ
ಸುರಳೀ ಕೆಂಜಡಿಯ ಮೊಗಟವ ಕೋಲ
ಸುರಳೀನೇ ಕೆಂಜಡಿಯ ಮೊಗಚಾದ ಒಳಗಿರುವ
ಸುಖನಾರಿಗೊಂದು ನಿನಿಗೊಂದು ಕೋಲ
ಬಾಗಿ ಬಾರಯ್ಯಾ ಶಿವನೇ ಬಾಗೀಲ ಬಡಿದಾದ
ಬಾಯಾಗಿನ ಹಲ್ಲ ಉದರ‍್ಯಾವ
ಬಾಯೊಳಗಿನ ಹಲ್ಲ ಉದರ‍್ಯಾವ
ಜಡಿಯನ ಬಾಲಿ ಬಿದ್ದಾಳು ಜತನವ ಕೋಲ

ಶಿವ ತಾನು ಗಂಗೆಯನ್ನು ತಂದಿದ್ದು ಅವಳಿಗೆ ಗೊತ್ತಿಲ್ಲವೆಂದು ತಿಳಿದಿರುತ್ತಾನೆ. ಗೌರಿಯಾದರೋ ಘಾಟಿ ಎರಡು ಗಿಂಡಿ ನೀರು ಎರಡು ಮಣೆ ನೀಡಿ ಅವನ ಕಳ್ಳತನ ತನಗೆ ಗೊತ್ತಾಯಿತು ಎಂದು ಸಾರುತ್ತಾಳೆ. ಅಲ್ಲದೆ ಒಳಗೆ ಬರುವಾಗ ಅಷ್ಟೊಂದು ಖುಷಿಯಿಂದ ನಗುತ್ತಿರುವ ಶಿವನಿಗೆ, “ಬಾಗಿ ಬರದಿದ್ದಾರೆ ಹಲ್ಲುದುರಬಹುದೆಂದೂ ಜಡೆ ಬಾಗಿಲಿಗೆ ಬಡಿದು ಗಂಗೆ ಬಿದ್ದಾಳೆಂದೂ” ಹಾಸ್ಯ ಮಾಡಿ ಅವನನ್ನು ಎದುರುಗೊಳ್ಳುವ ರೀತಿ ಬಹಳ ಹಾಸ್ಯಮಯವಾಗಿ ಮಾಡಿದೆ. ಗೌರಿಯ ಸಂತಾಪ ಕೂಡ ಈ ವ್ಯಂಗ್ಯದಲ್ಲಿ ಹರಿತವಾಗಿದೆ. ಅಣ್ಣನಿಗೆ ಹೇಳಿದರೆ ಉದಾಸೀನ ಮಾಡಿದ ಪಾಪ ಇನ್ನೇನು ಮಾಡಿಯಾಳು? ಸವತಿಯನ್ನು ಸ್ವಾಗತಿಸುವದು ಅನಿವಾರ್ಯ ಶಿವನಾದರೋ ಅವಳನ್ನು ತಂದದ್ದು ಹೇಳೊಲ್ಲ. ಕಾಡು-ಮೇಡು ಅಲೆದು ದಣಿದಿದ್ದೇನೆ ಬಾಗಿಲು ತೆಗೆ ಅಂದರೆ ಅವಳು ಹಾಸ್ಯ ಮಾಡುತ್ತಲೇ ಚುಚ್ಚಿ ಸಮಾಧಾನ ಮಾಡಿಕೊಂಡಳು.

ಆಯಿತು ಸವತಿ ಏನೋ ಬಂದಳು ಒಂದಿನವೂ ಅವರಿಬ್ಬರಲ್ಲಿ ಹೊಂದಾಣಿಕೆ ಆಗಲಿಲ್ಲ. ದಿನನಿತ್ಯ ಜಗಳವೇ ಜಗಳ. ಇವರಿಬ್ಬರ ಜಗಳದ  ಹಾಡುಗಳು ಜನಪದ ಸಾಹಿತ್ಯದಲ್ಲಿ ಲೆಕ್ಕವಿಲ್ಲದಷ್ಟಿವೆ.

ಗೌರಿ :
ನಮ್ಮವ್ರು ಬರತಾರ ಕೇಳಲೆ ಗಂಗಿ
ನೀ, ಆನಿ ಅಂಬಾರಿ ಮ್ಯಾಲೆ
ನಿಮ್ಮವ್ರು ಬರತಾರ ಮೀನು
ಮಸಳಿ ಹಂಗ ಕೇಳಲೆ ಗಂಗಿ
ಸುಮ್ಮನೊಳಿಯಾಕ ಹೋಗ

ಗಂಗಾ :
ಆತಗ ಹೇಳಸೇನು
ಗಾತವ ಮಾಡಿಸೇನು
ರೀತಿ ಸಂಗಾಟ ಇರವ ಕೇಳಲೆ ಗೌರಿ

ಗೌರಿ
ನಮ್ಮವ್ರು ಕೊಟ್ಮಾರ ತಾಮರದ ಕೊಡ
ನಿಮ್ಮವ್ರು ಕೊಟ್ಮಾರ ಆರ‍್ಯಾಣಾ ಪರ‍್ಯಾಣಾ
ಸುಮ್ಮನೊಳಿಯಾಕ ಹೋಗ ಕೇಳತಿ ಗಂಗಿ
ಸುಮ್ಮನೊಳಿಯಾಕ ಹೋಗ

ಗಂಗಾ :
ಆತಗ ಹೇಳಸೇನು
ಗಾತನ ಮಾಡಿಸೇನು
ರೀತಿ ಸಂಗಾಟ ಇರುವ
ಕೇಳಲೆ ಗೌರಿ ರೀತಿ
ಸಂಗಾಟ ಇರುವ

ಗೌರಿ :
ಮೀನ ಮಾರಾವ್ರ ಮಗಳ ಕೇಳಲೆ ಗಂಗಿ
ನೀನು ಕಬ್ಪಲಗಿತ್ತೆ ಮೀನು ಮಾರಾದು
ಬಿಡಿಸಿ ಮಾಲಿನಾಗಿಡ ಸೀನಿ
ಸುಮ್ಮನೊಳಿಯಾನ ಹೋಗ ಕೇಳಲೆ ಗಂಗಿ

ಗಂಗಾ :
ಆತಗ ಹೇಳಸೇನು
ಗಾತವ ಮಾಡಿಸೇನು
ರೀತಿ ಸಂಗಾಟ ಇರುವ
ಕೇಳಲೆ ಗೌರಿ ರೀತಿ ಸಂಗಾಟ ಇರುವ

ಗೌರಿ :
ಹುಲ್ಲ ಮಾರಾವ್ರ ಮಗಳ    ಚಲ್ಲಾಟ-ಪಲ್ಲಾಟ ನಿನಗ್ಯಾಕ
ಹುಲ್ಲ ಮಾರಾದು ಬಿಡಿಸಿ
ಹೂವಿನೊಳಗಿಡ ಸೀನಿ ಗಂಗೀ
ಸುಮ್ಮನೊಳಿಯಾಕ ಹೋಗ

ಗಂಗಾ :
ಆತಗ ಹೇಳಸೇನು
ಗಾತವ ಮಾಡಿಸೇನು
ರೀತಿ ಸಂಗಾಟ ಇರುವ
ಕೇಳಲೆ ಗೌರಿ ರೀತಿ ಸಂಗಾಟ ಇರುವ
ತೊಂಬತ್ತೇಳ ಕೋಟಿ
ಸಮರದದೊಳಗಿರುವ
ಲಿಂಗವಂತರು ಕೇಳುತಿದ್ದರ
ಇವರ ಜಗಳ ಹೊಂದಿಸಿ ನೋಡುತಿದ್ದರ

ಇಲ್ಲಿ ಗೌರಿಯದೇ ಜೋರು. ಅವಳಾದರೋ ಶ್ರೀಮಂತರ ಮಗಳು. ಅದಕ್ಕೇ ಗಂಗೆಯ ತೌರಿನ ಬಡತನವನ್ನು ಎತ್ತೆತ್ತಿ ಚುಚ್ಚುತ್ತಿದ್ದಾಳೆ. ಸವತಿಯರಲ್ಲಿ ಈ ಜಗಳ ಸಾಮಾನ್ಯ. ಅದರಲ್ಲಿ ಒಬ್ಬಳು ಶ್ರೀಮಂತ ಪುತ್ರಿಯಾಗಿದ್ದರೆ ಆ ಅಹಂಕಾರವೇ ಜಗಳಕ್ಕೆ ಕಾರಣವಾಗುತ್ತದೆ. ಪಾಪ ಗಂಗಿಯದೊಂದೇ ಮಾತು. ಗಂಡನಿಗೆ ಹೇಳಿ ಮಾಡಿಸುತ್ತೇನೆ ನಿನಗೆ ಘಾತ ಸುಮ್ಮನಿರು. ರೀತಿ ರಿವಾಜಿನಿಂದ ಇಬ್ಬರೂ ಹೊಂದಿಕೊಂಡಿರೋಣ ಎಂದು ಸಮಾಧಾನ ಹೇಳುತ್ತಾಳೆ, ಬಡವರ ಮಗಳಿಗೆಲ್ಲಿ ಬಾಯಿ ಇರುತ್ತದೆ ? ಎಷ್ಟೇ ಹೀಯಾಳಿಸಿ ಮಾತಾಡಿದರೂ ಅವಳಿಗೆ ತಿರುಗಿ ಉತ್ತರ ಕೊಡಲು ಯಾವ ಬಲವಿದೆ? ಗಂಡನ ಪ್ರೀತಿ ಒಂದೇ. ಅದನ್ನೇ ಮುಂದು ಮಾಡುತ್ತಾಳಾದರೂ ಅಲ್ಲಿಯವರೆಗೆ ಹೋಗಿ ಮನೆಯ ಯಜಮಾನನಿಗೆ ಇಂಥ ಸಣ್ಣ ವಿಷಯಗಳಿಂದ ಕಿರಿಕಿರಿಯನ್ನುಂಟು ಮಾಡುವುದು ಬೇಡ ಹೊಂದಿಕೊಂಡು ರೀತಿ ರಿವಾಜಿನಿಂದ ಇರೋಣ ಎಂದೇ ಹೇಳುತ್ತಾಳೆ. ಕಿರಿಯ ಸತಿಯಾದರು ಗಂಡ. ಬಲವು ತನಗಿದ್ದರೂ ಆ ಅಹಂ ಅವಳನ್ನು ಕೆಡಿಸದಂತೆ ಬಡತನದಲ್ಲಿ ಬೆಳೆದ ಸಂಸ್ಕಾರ ಅವಳಿಗೆ ಕಲಿಸಿಕೊಟ್ಟಿದೆ. ಯಾರೊಬ್ಬರಾದರೂ ಸರಿಯದಿದ್ದರೆ ಕಿಚ್ಚು ಮನೆಯನ್ನೇ ಸುಟ್ಟೀತು.