ಹೀಗಿರುವಾಗೊಮ್ಮೆ ಗೌರಮ್ಮನನ್ನು ಅವಳಣ್ಣ ಕರೆಯಲು ಬರುತ್ತಾನೆ. ಅವನು ಬರುವ ರಭಸವನ್ನು –

ಗಡಗಡ ಗದ್ದರಸುತ ಮುಗಲ ಚಂಡಾಡುತ್ತ
ವನಪಿನ ಕುದರೀ ತಿರವೂತ ಬಂದಾನ
ತಂಗೀ ಗೌರಮ್ಮನ ಕರಿ ಬಂದ ರನ್ನದ ಕೋಲ

ಗೌರಮ್ಮನಿಗೆ ಹಿಗ್ಗೋ ಹಿಗ್ಗು ಪತಿರಾಯನ ಅಪ್ಪಗೆ ಬೇಡುತ್ತಾಳೆ.

ಹಾಲಿಲೆ ಮುಖವ ತೊಳಿಯಾತ ಕೇಳ್ಯಾಳ
ಹೋಗಿ ಬರತೀನಿ ಶಿವರಾಯ ತವರೀಗೆ

ಆದರೆ ಶಿವರಾಯನಿಗೋ ಅವಳನ್ನು ತವರಿಗೆ ಕಳಿಸುವ ಮನಸ್ಸಿಲ್ಲ ಬಿಟ್ಟಿರಲು ಆಗುತ್ತಿಲ್ಲ. ಬಹುಶಃ ಗಂಗೆ ಬರುವುದಕ್ಕಿಂತ ಮೊದಲಿರಬೇಕು…!

ಹಾಲು ಬಾನುಣ್ಣ ಗೌರಿ ಮೇಲ್ ವೀಳೆ ಮೆಲಿಯ ಗೌರಿ
ಹೋಗಬೇಡ ಶ್ರೀಗೌರಿ ತವರೀಗೆ

ಎಂದು, ’ಸುಖವಾಗಿ ಉಂಡುಣ್ಣಲು ಕೊರತೆ ಇಲ್ಲ. ಆರಾಮವಾಗಿರು’ ಎನ್ನುತ್ತಾನೆ. ಆದರೆ ತವರು ಮನೆ ಬಡತನದ್ದಾದರೆ ಹೆಣ್ಣಿಗೆ ಹಂಬಲ ಕಡಿಮೆಯಾದೀತೇ? ಗಂಡನ ಮನೆಯಲ್ಲಿ ಅವಳು ಹಾಲಿನಲ್ಲೇ ಮುಖ ತೊಳೆಯಲಿ ಆದರೂ ತವರಿನ ರೊಟ್ಟಿಯಷ್ಟು ರುಚಿಯಾದುದು ಅವಳಿಗೆ ಬೇರೆ ಏನಿದು?

ರಾಜಗಿರಿಯ ಪಲ್ಲ್ಯಾ ರಾಗಿ ಜೋಳದ ರೊಟ್ಟಿ
ರಾಜ್ಯಕ ತೌರವರು ಬಡವರ
ರಾಜ್ಯಕ ತೌರವರು ಬಡವರ ಅವರ
ಮನಿಯಾಗ ನಾಕು ದಿನಾ ಇದ್ದ ಬರುವೇನು

ಎಂದು ತವರಿನ ರಾಜಗಿರಿ – ರಾಗಿರೊಟ್ಟಿಯನ್ನು ತಿನ್ನುವ ಆಶೆ ತೋರುತ್ತಾಳೆ. ಆದರೂ ಗಂಡ ಕಳಿಸುತ್ತಲಿಲ್ಲ ತುಪ್ಪ  – ಬಾನುಣ್ಣು – ಮೆತ್ತೀಮ್ಯಾಲೆ ಮಲಗು ಹೋಗಬೇಡ ಎನ್ನುತ್ತಿದ್ದಾನೆ. ಅವಳದೂ ಹಟ. ಗುಂಜಗೋಳಿ ಪಲ್ಲೆ ಕೆಂಜೋಳದ ರೊಟ್ಟಿ ತಿನ್ನುವ ಬಡವರಾದರೂ ನಾಲ್ಕು ದಿನವಿದ್ದು ಬರುವೆ ಎನ್ನುವ ಅವಳ ಹಟಕ್ಕೆ ಸೋಲುತ್ತಾನೆ. ಒಪ್ಪುತ್ತಾನೆ.

ಕುಂತೀದ ಗಣಪಣ್ಣ ಅಳವೂತ ಎದ್ದಾನ
ನಾನೂ ಬರತೀನೆ ನಿನಗೂಡ ಕೋಲ

ಗಣಪ್ಪ ಕೂಡ ತಾಯಿಯೊಂದಿಗೆ ಹೊರಡುವ ಆಶೆ ತೋರುತ್ತಾನೆ. ಸರಿ ಅವನನ್ನೂ ಕರೆದುಕೊಂಡು ಗೌರಿ ತವರಿಗೆ ಹೊರಡುತ್ತಾಳೆ. ಇಲ್ಲಿ ಹೆಣ್ಣಿನ ತವರಿನ ಹಂಬಲವನ್ನು ತೋರಿಸಲೆಂದೇ ಗೌರಿಯನ್ನು ಬಡವರ ಮಗಳನ್ನಾಗಿ ರೂಪಿಸಲಾಗಿದೆ. ಗಂಗೆ- ಗೌರಿಯರ ಜಗಳದಲ್ಲಿ ಉಳ್ಳವರ ಮಗಳಾಗಿ ದರ್ಪ ಮೆರೆದ ಗೌರಿ, ಇಲ್ಲಿ ಇಲ್ಲದವರ ಮಗಳಾಗಿ ದೈನ್ಯತೆಯ ಮೂರ್ತಿಯಾಗುತ್ತಾಳೆ. ಹೀಗೆ ಗಣಪ್ಪನೊಂದಿಗೆ ತೌರಿಗೆ ಬಂದ ಗೌರಿ ಗಣಫ್ಪರೊಳಗೆ ಒಂದಿನ ವಾದ – ವಿವಾದ ಏಳುತ್ತದೆ. ಗಣಪ್ಪ ಬಾಲಕನಾದರೂ ಚುರುಕುಮತಿ ಮಾತಿನಲ್ಲಿ ಅವನನ್ನು ಸೋಲಿಸುವವರಿಲ್ಲ ತವರಿಗೆ ಬಂದ ತಾಯಿ-ಮಗನನ್ನು ಆದರಿಸಲು ತವರವರು –

ದುಂಡಗೋದಿಯ ಬೀಸೆ ಗುಂಡಗಡಬವ ಮಾಡೆ
ಪುಂಡ ಗಣಪನನ ಉಡಿಯಲ್ಲೆ ಕೋಲೆನ್ನ ಕೋಲೆ
ಪುಂಡ ಗಣಪನ್ನ ಉಡಿಯಲ್ಲೆ ಕಟ್ಟಿದರ
ಸಾಲಲಿಲ್ಲಂತ ಅಳುವಾನ ಕೋಲೆನ್ನ ಕೋಲೆ

ಮೊದಲೇ ಗಣಪ್ಪನ ಹೊಟ್ಟೆ. ಸಾಲಲಿಲ್ಲ ಎಂದು ಅಳುವುದಕ್ಕೇ ಪ್ರಾರಂಭಿಸಿದ. ತಾಯಿಗೋ ಸಂಕಟ ತವರವರು ಏನೆಂದುಕೊಳ್ಳುತ್ತಾರೋ ಏನೋ.

ಸಾಲಲಿಲ್ಲಂತ ಬಾಯಿ ಬಡಿಯಲಿ ಬ್ಯಾಡೋ
ಬಾಲ ನನ್ನ ತವರವರು ಬಡವರು ಕೋಲೆನ್ನ ಕೋಲೆ

ಮಗನೆದುರು ಬೇಡಿಕೊಳ್ಳುತ್ತಾಳೆ. ರಂಬಾಟ ಮಾಡಿ ನೆರೆಯವರ ಮುಂದೆ ತಲೆ ತಗ್ಗಿಸುವಂತಾಗಬಾರದಲ್ಲ ತವರವರ ಬಡತನ ಎತ್ತಿ ಸಮಾಧಾನ ಮಾಡಲು ಹೋದರೆ ಅವನು ಕೇಳಿಯಾನೆ?

ಬಡವರು ಇದ್ದರ ತಮ್ಮಷ್ಟಾಕ ತಾವಿರಬೇಕ
ನನ್ನ ನಿನ್ಯಾಕ ಕರಸ್ಯಾರ ಕೋಲೆನ್ನ ಕೋಲೆ

ಎಂದು ಸವಾಲೆಸೆಯುತ್ತಾನೆ. ತಾಯಿಗೆ ದಿಕ್ಕೇ ತೋಚುವುದಿಲ್ಲ ಸಜ್ಜಿ ಜೋಳ ಅಕ್ಕಿ ಬೀಸಿ ಕಡಬು ಮಾಡಿಕೊಟ್ಟರೂ ಅವನದೊಂದೇ ಹಟ ಸಾಲಲಿಲ್ಲ ಅಂತ. ಇವಳದೊಂದೇ ಮಾತು ಬಡತನದ್ದು ಹಾಗಿದ್ದರೆ ನಮ್ಮನ್ನೇಕೆ ಕರಿಸಿದರು ಕರಿಸಿದ ಮೇಲೆ ಸರಿಯಾದ ಸತ್ಕಾರ ಮಾಡಲಿ ಎಂದು ಗಣಪ್ಪ ಕೊನೆಗೆ.

ಬಡವರ ಇದ್ದರ ತಮ್ಮಷ್ಟಕ ತಾವಿರಬೇಕ
ನನ್ನ ನಿನ್ನ್ಯಾಕ ಕರಸ್ಯಾರ ಹಡದವ್ವ
ಹತ್ತೆಮ್ಮಿ ನಮಗ ಬಳುವಳಿ ಕೋಲೆನ್ನ ಕೋಲೆ
ಹತ್ತೆಮ್ಮಿ ನಮಗ ಬಳುವಳಿ ಹಡದವ್ವ
ಹೊಡೆದಚ್ಚಂತೇಳ ಹೊರಿಯಾಕ ಕೋಲೆನ್ನ ಕೋಲೆ

ಹೇಗಿದೆ? ಗಣಪ್ಪನ ವರಸೆ! ಇವನ ಬಾಯಿ ಮುಚ್ಚಿಸಲು ಅದೊಂದೇ ದಾರಿಯಾಗಿರಬೇಕು ಪಾಪ ಅವರಿಗೆ. ಕರಿಸಿದ್ದಕ್ಕೇ ಹೊಟ್ಟೆ ತುಂಬ ಹಾಕದಿದ್ದರೆ ಬಿಡರಿ ಮನೆಯಲ್ಲಿಯ ಎಮ್ಮೆಗಳಲ್ಲಿ ಹತ್ತೆಮ್ಮಿಗಳನ್ನು ನಮಗೆ ಕಾಣಿಕೆಯಾಗಿ ಕೊಡಲಿ ಎನ್ನುತ್ತಾನೆ. ಜನಪದರು ಈ ಲೌಕಿಕದ ಆಸೆ ಆಕಾಂಕ್ಷೆಗಳನ್ನು ದೇವರಿಗೂ ಆರೋಪಿಸಿದ್ದಾರೆ.

ಹೀಗೆ ತವರಿಗೆ ಬಂದು ತುಂಬ ದಿನಗಳಾದ ಮೇಲೆ ಗೌರಿಯನ್ನು ಕರೆದೊಯ್ಯಲು ಗಂಡ ಬರುತ್ತಾನೆ. ಆದರೆ ತಾಯಿಗೋ ಅವಳನ್ನು ಕಳಿಸಲೇ ಮನಸ್ಸಿಲ್ಲ. ಬಹಳ ದಿನಗಳ ಮೇಲೆ ಕಾಡಿ ಬೇಡಿದ ಮೇಲೆ ಕಳಿಸಿದ್ದಾರೆ. ಮತ್ತೀಗ ಕರೆದೊಯ್ದರೆ ಎಂದು ಕಳಿಸುವರೋ ಏನೋ. ಅದಕ್ಕಾಗೀ ಅವಳು ಅವರ‍್ಯಾರಾದರೂ ಕರೆಯಲು ಬಂದಾಗ ಒಂದೊಂದು. ನೆವ ಹೇಳುತ್ತಾಳೆ.

ಹಿಂಗ ನಮ್ಮ ಗೌರವ್ವಗ
ಗಂಡ ಕರಿಯಲು ಬಂದ
ಗೊಂಡೇದ ಸೆರಗ ಮುಗಿದಿಲ್ಲ ಕೋಲು
ಮತ್ತ ಹೋಗಿ ಬರ‍್ರೆ ಮಗಳೀಗೆ ಕೋಲ

ಅವಳ ಸೆರಗಿನ ಗೊಂಡೆ ಹಾಕುವುದು ಇನ್ನೂ ಮುಗಿದಿಲ್ಲ. ಮತ್ತೊಮ್ಮೆ ಬರಬೇಕು ಎಂದು ಗಂಡನನ್ನು ತಿರುಗಿ ಕಳಿಸುತ್ತಾಳೆ. ಹಳ್ಳಿಯಲ್ಲುಡುವ ಇಲಕಲ್ಲು ಸೀರೆಯ ಸೆರಗಿಗೆ ಕರಿ ಎನ್ನುವ ಉದ್ದುದ್ದ ನೂಲಿನ ಎಳೆಗಳಿರುತ್ತವೆ. ಅದನ್ನು ಹಾಗೇ ಉಡುವಂತಿಲ್ಲ. ಅವನ್ನು ಕೂಡಿಸಿ ಕಲಾತ್ಮಾಕವಾಗಿ ಎರಡು ಮೂರು ಸಾಲಿನ ಗಂಟುಗಳನ್ನು ಹಾಕುತ್ತಾರೆ. ಇದಕ್ಕೆ ಗೊಂಡೆ ಕಟ್ಟುವುದು ಅನ್ನುತ್ತಾರೆ. ಕರಿ ಇದ್ದ ಸೀರೆ ಉಡುವುದು ಅಪಶಕುನ ಎಂಬ ನಂಬಿಕೆ ಹಳ್ಳಿಯಲ್ಲಿದೆ. ಈ ನೆವ ಹೇಳಿದರೆ ಗಂಡ ಹೇಗೆ ಒತ್ತಾಯ ಮಾಡಬಲ್ಲನು? ಹಿಂದಿರುಗಿ ಹೋಗುತ್ತಾನೆ. ಆದರೆ ಕೆಲ ದಿನಗಳ ಮೇಲೆ ಮಾವ ಬರುತ್ತಾನೆ.

ಹಿಂಗ ನಮ್ಮ ಗೌರವ್ವಗ
ಮಾವ ಕರಿಯಲು ಬಂದ
ಮಲ್ಲೀಗಿ ಶಾಲ ಮುಗಿದಿಲ್ಲ ಕೋಲ

ಎನ್ನುತ್ತಾಳೆ ತಾಯಿ, ಗೆಳತಿಯರಿಂದ ಶಾಲಿನ ಮೇಲೆ ಮಲ್ಲಿಗಿ ಹೂವಿನ ಕಸೂತಿ ಹಾಕುವುದನ್ನು ಕಲಿಯುತ್ತಿದ್ದಾಳೆಂದೂ ಅದಿನ್ನೂ ಅರ್ಧ ಆಗಿದೆ ಎಂದೂ ಮಾವನನ್ನು ತಿರುಗಿ ಕಳಿಸುತ್ತಾಳೆ. ಆಯಿತು ಆಮೇಲೆ ಮಗಳು ಕಲಿಯುತ್ತಿರುವ ಮಲ್ಲಿಗೆ ಹೂವಿನ ದಂಡಿ ಮುಗಿದಿಲ್ಲ ಎನ್ನುತ್ತಾಳೆ. ’ ದಂಡೆ’ ಮುತ್ತೈದಿತನದ ಸಂಕೇತ ಅದನ್ನು ಅರ್ಧ ಮಾಡಬಾರದು. ಹೇಗೆ ಕಳಿಸಲು ಬರುತ್ತದೆ? ಸರಿ ಮೈದುನ ಹೋಗಿ ಕೆಲ ದಿನಗಳಾದ ಮೇಲೆ ಅತ್ತೆಯೇ ಬರುತ್ತಾಳೆ. ಈಗಲಾದರೂ ಅತ್ತೆಯ ದರ್ಪಕ್ಕೆ ಹೆದರಿಯಾಳೇ ಬೀಗತ್ತಿ? ಮಗಳ ಮೂಗಿನಲ್ಲಿಯ ನತ್ತಿನ ಮುತ್ತುಗಳು ಉದುರಿವೆ ಎಂದೂ ಅವನ್ನು ಬಿಗಿಸಿ ಅವಳು ನತ್ತು ಧರಿಸಿಯೇ ಗಂಡನ ಮನೆಗೆ ಬರಬೇಕು. ಮುತ್ತೈದೆ ಮಗಳು ಬರಿಮೂಗಿನಿಂದ ಹೀಗೆ ಹೊಸಿಲು ದಾಟುವುದು? ಪಾಪ ಅತ್ತೆ ತೆಪ್ಪಗೆ ಹೋಗುತ್ತಾಳಾದರೂ ಈ ಸಲ ಮಗನಿಗೇ ಸಾಕಷ್ಟು ತರಬೇತಿ ನೀಡಿ ಮತ್ತೆ ಕಳಿಸುತ್ತಾಳೆ. ಅವನೂ ರೌದ್ರಾವತಾರ ತಾಳಿಯೇ ಬರುತ್ತಾನೆ.

ಬರುತ್ತೇನ ಗೌರಿ ಇರುತ್ತೇನ ಕೋಲ

ಎಂದು ಒಂದೇ ಮಾತು ಕೇಳುತ್ತಾನೆ. ಇಲ್ಲೇ ಇರಬೇಕೆಂದಿದ್ದರೆ ಇರು ಬೇರೆ ಮದುವೆ ಆಗುತ್ತೇನೆಂದೂ ಹೆದರಿಸಿರಬಹುದು. ಈಗ ಮಾತ್ರ ಗೌರಿ ಅವರವ್ವನನ್ನು ಹಿಂದೆ ಸರಿಸಿ ತಾನೇ ಮುಂದಾಗಿ –

ಆಗಿ ಹುಣ್ಣಿವಿ ಮಾಡಿ ಸೀಗಿ ಹುಣ್ಣಿವಿ ಮಾಡಿ
ಗೌರುಣ್ಣೀ ಮಾಡಿ ಬರತೀನೆ ಕೋಲ

ಎಂದು ಅನುನಯದಿಂದ ಒಪ್ಪಿಸಲು, ಇನ್ನಷ್ಟು ದಿನ ತವರಿನ ಸುಖದ ಅಪೇಕ್ಷೆಯನ್ನು ತೋರಿಸಿ ನೋಡುತ್ತಾಳೆ. ಜಗಮೊಂಡ ಗಂಡ ಕೇಳುತ್ತಿಲ್ಲ.

ಗೌರಿ ಹುಣ್ಣಿವಿ ಮಾಡಿದರ ಗೌರೀಗಿ ಬೆಲಿನಿಲ್ಲ
ಹೊಸ ವಸ್ತ ಮಾಡಿ ಕುಡವೇನ ಕೋಲ.

ಎರಡು ಕಾರಣಗಳನ್ನೊಡ್ಡಿ ಅವಳನ್ನು ಒಪ್ಪಿಸುವ ಚಾತುರ್ಯ ತೋರುತ್ತಾನೆ. ನೀನು ಗೌರಿಹುಣ್ಣಿವೆ ಮಾಡಿ ಮನೆಗೆ ಬರುವುದರಲ್ಲಿ ಬೇರೊಬ್ಬಳು ಬಂದು ನಿನ್ನ ಬೆಲೆ ಇಳಿದಿರುತ್ತದೆ ಎಂದೂ ಈಗ ಬಂದರೆ ಹೊಸ ವಡವೆ ಮಾಡಿಸುತ್ತೇನೆಂದೂ ಹೇಳಿದ ಮೇಲೆ ಗೌರಿಗೆ ಹೋಗುವುದು ಅನಿವಾರ್ಯವಾಗಿ ಒಪ್ಪುತ್ತಾಳೆ. ಒಂದೆಡೆಗೆ ತನ್ನ ಸ್ಥಾನ ಭದ್ರತೆ ಇನ್ನೊಂದೆಡೆಗೆ ಹೊಸ ಒಡವೆ ಇವೆರಡೂ ಗ್ರಾಮೀಣ ಸ್ತ್ರೀಯನ್ನು ಹೆಚ್ಚಾಗಿ ಅಲ್ಲಾಡಿಸುವ ಸಾಧನಗಳು. ಅದನ್ನೇ ಜನಪದ ಹಾಡು ನವಿರಾಗಿ ಬಿಚ್ಚಿ ತೋರಿಸುತ್ತದೆ.

ಹೀಗೆ ಗೌರಿಯ ಹುಣ್ಣಿವೆಯಲ್ಲಿ ಗೌರಿಯ ಸಂಸಾರದ ಎಲ್ಲ ಮಾತುಗಳೂ ಹಾಡಾಗಿ ಹರಿಯುತ್ತವೆ. ಈ ಹಾಡುಗಳನ್ನೆಲ್ಲ ಹೆಂಗಳೆಯರು ಗೌರಿಯ ಎದುರು ಕುಳಿತು ರಾತ್ರಿ ಬಹಳ ಹೊತ್ತು ಹಾಡುತ್ತಾರೆ. ಅಲ್ಲದೆ ಅವರಿವರ ಓಣಿಗಳಲ್ಲಿ ತಮ್ಮ ಗೌರಿಯನ್ನೇ ಕೂಡಿಸಿಸುದುದರಿಂದ ಗೌರಿಗೊಂದು ಪ್ರತ್ಯೇಕ ಜಾತಿ ಇಲ್ಲ. ಅವಳಿಗೆ ಎಲ್ಲ ಜಾತಿಗಳೂ ಅಂಟುತ್ತವೆ ಎನ್ನುವುದಕ್ಕೊಂದು ಹಾಡಿದೆ.

ಕುಂಬಾರ ಗೌರೀಗೆ ಏನೇನ ಸಿಂಗಾರ
ಕುಂಬರದ ದಡಿ ಸೀರಿ ಕುಡಿನತ್ತ ಕೋಲೆ
ಅಗಸರ ಗೌರೀಗೆ ಏನೇನ ಸಿಂಗಾರ
ಅಗಸೀಕಾsಳಟ ಹೂವ ಬುಗಡೆ ಕೋಲ
ಪತ್ತಾರ ಗೌರೀಗೆ ಏನೇನ ಸಿಂಗಾರ
ಪತ್ತಲದಡಿ ಸೀರೆ ಕುಡಿನತ್ತ ಕೋಲ
ಜಾಡರ ಗೌರೀಗೆ ಏನೇನ ಸಿಂಗಾರ
ಬ್ಯಾಡಾದ ಮಾತ ಇಡಕುದರೆ ಕೋಲ
ಬಡಿಗೇರ ಗೌರೀಗೆ ಏನೇನ ಸಿಂಗಾರ
ಬಡಿದೂ ಹಾಕಿದ ಹುಟ್ಟ ಕಡಚೀಗೆ ಕೋಲೆ

ಹೀಗೆ ಆಯಾ ಜನಾಂಗಗಳವರು ಗೌರಿಯನ್ನು ತಮ್ಮವಳನ್ನಾಗಿ ಮಾಡಿಕೊಂಡು ತಮ್ಮ ಸಂಪ್ರದಾಯದ ಸಿಂಗಾರವನ್ನೇ ಅವಳಿಗೂ ಮಾಡುತ್ತಾರೆ. ಗೌರಿ ಜಗಜ್ಜನನಿ, ಅವಳು ಎಲ್ಲರಿಗೂ ತಾಯಿ, ಅವಳನ್ನು ಎಲ್ಲ ಜಾತಿಯವರೂ ಪೂಜಿಸುತ್ತಾರೆ.

ಈ ಗೌರಿಯನ್ನು ಕಟ್ಟೆಯ ಮೇಲಿಟ್ಟು ಪೂಜಿಸುವಾಗ ಅವಳಿಗೆ ದಿನಕ್ಕೊಂದು ಬಗೆಯ ಸಿಂಗಾರ. ಗೌರಿ ಬಸಿರಾದಳೆಂದು ಬಯಕೆಯ ಊಟ ತಂದು ರಾತ್ರಿ ಅವಳೆದುರು ಊಟ ಮಾಡುತ್ತಾರೆ. ಗೌರಿ ಹತ್ತಳೆಂದು ಅವತ್ತು ಗಣಪ್ಪನನ್ನು ತೊಟ್ಟಿಲಲ್ಲಿ ಹಾಕುವ ತೊಟ್ಟಿಲು ಶಾಸ್ತ್ರಮಾಡುತ್ತಾರೆ. ಗುಗ್ಗರಿ ಹಂಚುತ್ತಾರೆ. ಮಧ್ಯಾಹ್ನದ ಊಟ ಹೊರಗಾದರೆ ರಾತ್ರಿಯ ಊಟ ಗೌರಿಯ ಎದುರಿಗೆ.  ಕೆಸರಿನ ಗೌರಿ ಆಗಿದ್ದರೆ ಅವಳಿಗೆ ಕುಸುಬೆ ಮತ್ತು ಗುಲಗಂಜಿಯ ಸಿಂಗಾರ ಬಹಳ, ಸುತ್ತಲೂ ಬಣ್ಣ ಬಣ್ಣದ ಸೀರೆಗಳನ್ನು ಬಿಟ್ಟ ಮಂಟಪ ಮಾಡಿರುತ್ತಾರೆ. ಅವಳೆದುರಿಗೆ ಮತ್ತೆ ಕೆಸರಲ್ಲಿ ಮಾಡಿದ ಅನೇಕ ವಸ್ತುಗಳನ್ನು ಇಡುತ್ತಾರೆ. ಪ್ರತಿ ದಿನ ಬೇರೆ ಸೀರೆ ಬೇರೆ. ತರದ ಅಲಂಕಾರ ಮಾಡುತ್ತಾರೆ. ಕಟ್ಟಿಗೆ ಗೌರಿಗೂ ಈ ಎಲ್ಲಾ ಅಲಂಕಾರಗಳು. ಆದರೆ ಗುಪ್ಪೆಯಾಕೃತಿಯ ಗೌರಿಗಳು ಇದನ್ನೇನೂ ಪಡೆಯುವುದಿಲ್ಲ. ಉಳಿದ ಶಾಸ್ತ್ರಗಳನ್ನು ಎಲ್ಲ ಗೌರಿಗಳಿಗೂ ಮಾಡುತ್ತಾರೆ. ಉಡಿ ತುಂಬಿ ಗಂಡನ ಮನೆಗೆ ಕಳಿಸುವುದು ಬಯಕೀ ಊಟ ಕುಬಸದ ಶಾಸ್ತ್ರ (ಗರ್ಭಿಣಿಯಾಗಿದ್ದಾಗ ಮಾಡುವುದು) ತೊಟ್ಟಿಲು ಹಾಕುವುದು. ನಂತರ ಅವಳನ್ನು ಗಂಡನ ಮನೆಗೆ ಕಳಿಸಿ ಬರುವುದೆಂದು ಹೊಳೆಗೋ ಕೆರೆಗೋ ಹೋಗಿ ಅವಳನ್ನು ದಂಡೆಯಲ್ಲಿಟ್ಟು ಪೂಜಿಸುತ್ತಾರೆ. ಮಣ್ಣಿನದಾದರೆ ನೀರಲ್ಲಿ ಬಿಟ್ಟು ಬರುತ್ತಾರೆ. ಕಟ್ಟಿಗೆಯದಾದರೆ ನೀರಲ್ಲಿ ಅದ್ದಿ ತರುತ್ತಾರೆ. ಆಮೇಲೆ ಅವಳನ್ನು ಮುಂದಿನ ವರ್ಷದ ಗೌರೀ ಹುಣ್ಣಿವೆಗೇ ಮತ್ತೆ ತರುವುದು. ಹೀಗೆ ಅವಳನ್ನು ಹೊಳೆಗೆ ಒಯ್ಯುವಾಗಲೂ ಹಾಡುತ್ತಲೇ ಹೋಗಬೇಕು. ಧಾರವಾಡ – ಬೆಳೆಗಾವಿಯ ಕೆಲವು ಭಾಗಗಳಲ್ಲಿ ’ಸಕ್ಕರೀ ಆರತಿ’ ಯನ್ನು ಮಾಡುತ್ತಾರೆ. ಗೌರಿಗೆ ಸಕ್ಕರೆ ಅಚ್ಚಿನಲ್ಲಿ ತಯಾರಿಸಿದ ದೇವತೆಗಳು. ಗುಡಿ, ತೇರು, ಕಳಸ ಮುಂತಾದವುಗಳನ್ನು ತಟ್ಟೆಯಲ್ಲಿ ತುಂಬಿಕೊಂಡು ದೇವಸ್ಥಾನಗಳಿಗೆ ಹೋಗಿ ಗೌರಿಗೆ ಆರತಿ ಮಾಡಿ ಬರುತ್ತಾರೆ. ಈ ಸಕ್ಕರೆಯ ಅಚ್ಚುಗಳು ನೋಡಲು ತುಂಬ ಕಲಾತ್ಮಾಕವಾಗಿರುತ್ತವೆ. ಇತ್ತೀಚೆಗೆ ಅದರೂ ಕಡಿಮೆಯಾಗಿದೆ. ಗೌರಮ್ಮನ ಭಕ್ತರಿಗೇ ಚಹಾಕ್ಕೆ ಸಕ್ಕರೆ ಸಿಗದಾಗ ಇನ್ನೂ ಅವಳಿಗೆಲ್ಲಿಂದ ಬರಬೇಕು?

ಗೌರಿ ಹುಣ್ಣಿಮೆಯ ಐದು ದಿನಗಳ ಸಂಪ್ರದಾಯದಲ್ಲಿ ಬೆಳದಿಂಗಳಿನಲ್ಲಿ ಆಡುವ ಆಟ ವಿನೋದಗಳೂ ತುಂಬ ಮಹತ್ವದವು. ರಾತ್ರಿ ಬಹು ಹೊತ್ತು ಓಣಿಯ ಹೆಣ್ಣು ಮಕ್ಕಳು ಹುಡಿಗೆಯರು ಒಗಟು ಹಾಡು ಆಟಗಳಲ್ಲಿ ಕಾಲ ಕಳೆಯುತ್ತಾರೆ. ಅದರಲ್ಲಿ ಹೆಣ್ಣು ಕೇಳುವ ಒಂದು ಹಾಡನ್ನು ಗೌರೀ ಹುಣ್ಣಿವೆಯ ಬೆಳದಿಂಗಳಲ್ಲಿ ಮಾತ್ರ ಹಾಡಲಾಗುತ್ತದೆ. ಒಂದು ಕಡೆ ನಾಲ್ಕು ಒಂದು ಕಡೆ ನಾಲ್ಕು ಹೆಣ್ಣುಮಕ್ಕಳ ಎರಡು ಪಾರ್ಟಿಗಳಾಗುತ್ತವೆ. ಇವರಲ್ಲಿ ಒಂದು ಪಾರ್ಟಿ ಹೆಣ್ಣಿನದು. ಇನ್ನೊಂದು ಗಂಡಿನದು ಇವರು ಎದುರುಬದುರಾಗಿ ನಡುವೆ ಎಂಟತ್ತು ಅಡಿಗಳ ಜಾಗ ಬಿಟ್ಟು ನಿಲ್ಲುತ್ತಾರೆ. ನಾಲ್ಕೂ ಜನವೂ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಳ್ಳುತ್ತಾರೆ. ಮೊದಲು ಗಂಡಿನವರು ಕೆಳಗಿನ ಸಾಲುಗಳನ್ನು ಅನ್ನುತ್ತ ಹೆಣ್ಣಿನವರ ಹತ್ತಿರ ಬರುತ್ತಾರೆ.

ಸುರಸುರ ಮಜ್ಜಿಗಿ ರಾಯರ ಗದ್ದಿಗಿ
ಹೆಣ್ಣ ಕೊಡs ಅತ್ತಿಗೇ ಹೆಣ್ಣ ಕೊಡs

ಎಂದು ಹೇಳಿ ಹೋಗುತ್ತಾರೆ. ನಂತರ ಹೆಣ್ಣಿನವರು ಅವರಂತೆಯೇ ಅಭಿನಯಿತ್ತ

ಗುಜಗುಜ ಮಾಪುರ ಹೆಣ್ಣಿಲ್ಲ
ಗುಜಾಲಿ ಮಾಪುರ ಹೆಣ್ಣಿಲ್ಲ
ಸಾಲದಂಡೀಲಿ ಹೆಣ್ಣಿಲ್ಲ
ಶ್ರೀ ಲೋಕಕ್ಕೆಲ್ಲಾ ಹೆಣ್ಣಿಲ್ಲ

ಎಂದೂ ಇದ್ದರೂ – ಹೆಣ್ಣಿಲ್ಲವೆಂದೇ ಹೇಳಿ ಬರುತ್ತಾರೆ. ಆದರೆ ಅತ್ತಣವರು ಬಿಡುತ್ತಿಲ್ಲ ಮತ್ತೆ ಒತ್ತಾಯಿಸುತ್ತಾರೆ. ಈಗ ಹೆಣ್ಣಿನವರು ’ನೀವು ಯಾತರವು? ಅಂದರೆ ಯಾವ ಜಾತಿಯವರು ಎಂದು ಕೇಳುತ್ತಾರೆ. ಹಾಗೆ ಕೇಳುವಾಗಲೂ

ಗುಜಗುಜ ಮಾಪುರ ಯಾತರವ್ರು
ಗುಜಾಲ ಮಾಪುರ ಯಾತರವ್ರು
ಸಾಲದಂಡೀಲಿ ಯಾತರವ್ರು
ಶ್ರೀ ಲೋಕಕ್ಕೆಲ್ಲಾ ಯಾತರವ್ರು

ಹೀಗೆ ಇನ್ನು ಮುಂದೆ ಪರಸ್ಪರದಲ್ಲಿ ಏನೇ ಮಾತಾಡಿದರೂ ಹಿಂದೆ ನಾಲ್ಕು ಸಾಲುಗಳೂ ಇರಲೇಬೇಕು ಇದಕ್ಕುತ್ತರವಾಗಿ ಅವರು ಏಳೆಂಟು ಜಾತಿಗಳನ್ನೂ ಹೇಳುತ್ತಾರೆ. ಇವರು ಒಪ್ಪುವುದಿಲ್ಲ. ಕೊನೆಗೆ ಅದು ಯಾವ ಓಣಿಯೋ ಆ ಜಾತಿಯ ಹೆಸರನ್ನು ಹೇಳಿದಾಗ ಒಪ್ಪಿಕೊಂಡು ’ಏನೇನು ದಾಗೀನು ಹಾಕುತ್ತೀರಿ’ ಎನ್ನುತ್ತಾರೆ (ವಡವೆಗಳು)ಗಂಡಿನ ಕಡೆಯವರು ಎಲ್ಲಾ ಒಡವೆಗಳ ಹೆಸರೂ ಹೇಳುತ್ತಾರೆ. ಗೆಜ್ಜೆಟಿಕ್ಕಿ, ವಜ್ರಟಿಕ್ಕಿ, ಪುತಳೀಸರ, ಸಿಂಗಾರಸರ, ವಂಕಿ, ಬಾಜೂ ಬಂದ, ಡಾಬು,  ತೋಡೆ –  ಪಾಟ್ಲಿ- ಬಿಲ್ವಾರ – ಗಿರಪಟ್ಲಿ, ನತ್ತು, ಋಳಿ, ಪೈಜಣ, ನಾಗ ಮುರಗಿ’ ಹೀಗೆ ಹಲವಾರು ಒಡವೆಗಳನ್ನು ಹೇಳಿದಾಗಲೂ ಹೆಣ್ಣಿನವರು. ಇದೆಲ್ಲಾ ನಮಗೂ ಇದೆ. ಮತ್ತೇನಿದೆ ಎಂದು ಕೇಳುತ್ತಾರೆ. ಅವರು, ’ಹಂಡೆ – ತಪ್ಪೇಲಿ – ಪರಾತು- ಪಲ್ಲಂಗ -ಮನಿ-ಹೊಲ- ಎಲ್ಲ ಹೇಳಿದಾಗಲೂ ಇವರು’ ಅದೆಲ್ಲಾ ನಮ್ಮಲ್ಲೂ ಇದೆ. ಹೆಚ್ಚಿನದೇನಿದೆ ಅದನ್ನು ಹೇಳಿರಿ ಎಂದಾಗ ಕೊನೆಗೆ ಅವರು ’ವರೈತಿ-ಗುಣೈತಿ-ಲಕ್ಷಣೈತಿ’ ಎನ್ನುವುದನ್ನು ಸಾರುತ್ತಾರೆ. ಈಗ ಹೆಣ್ಣಿನವರು ಒಪ್ಪಿಕೊಳ್ಳುತ್ತಾರೆ.

ಇಲ್ಲಿ ಹೆಣ್ಣನ್ನು ಶ್ರೀಮಂತಿಕೆ ನೋಡಿ ಕೊಡದೇ ಸಜಾತಿಯ ವರನಿದ್ದು ಗುಣಲಕ್ಷಣಗಳಿದ್ದರೆ ಕೊಡಲಡ್ಡಿಯಿಲ್ಲ ಎಂಬ ಭಾವನೆಯನ್ನು ಕಾಣುತ್ತೇವೆ. ಗಂಡ ಎಂಥ ಶ್ರೀಮಂತನಾಗಿದ್ದರೇನು? ಗುಣಹೀನನಾಗಿದ್ದಾರೆ ಹೆಣ್ಣಿಗೇನು ಸುಖ? ಹಣ ಮುಖ್ಯುವಲ್ಲ ಗುಣ ಎಂಬ ತತ್ವವನ್ನೂ  ಎಷ್ಟು ಸರಳವಾಗಿ ಈ ಹಾಡಿನಲ್ಲಿ ತುಂಬಿದ್ದಾರೆ. ಈ ಹಾಡು ಕೂಡ ಈಗ ಎಲ್ಲೂ ಕೇಳಿ ಬರುತ್ತಿಲ್ಲ.

ಒಗಟು ಒಡೆಯವುದು ಅವಿವಾಹಿತ ಹುಡಿಗೆಯರು ಗಂಡನ ಹೆಸರು ಹೇಳುವದಕ್ಕೆ ಒಡಪುಗಳನ್ನು ಕಲಿಯಲು ಇದೇ ಸಮಯ ಆರಿಸಿಕೊಳ್ಳುತ್ತಾರೆ. ಆಗಲೇ ಆ ಹುಡಿಗೆಯ ನಿಶ್ಚಯವಾಗಿದ್ದರಂತೂ ಹಾಸ್ಯದ ಒಡಪುಗಳನ್ನು ಹೇಳಿ ಅವಳನ್ನು ಗೋಳುಗುಟ್ಟಿಸುತ್ತಾರೆ. ಗೌರಿಗೆ ಆರತಿ ಮಾಡಿಸಿ ಗಂಡನ ಹೆಸರು ಹೇಳೆಂದು ಪೀಡಿಸುತ್ತಾಳೆ.

ಈ ಗೌರಿಯ ಎದುರಿಗೆ ದಾರದಲ್ಲಿ ತೂಗುಬಿಟ್ಟ ಒಂದು ಹಸೀಮಣ್ಣಿನ ಸ್ತ್ರೀಮೂರ್ತಿಯೊಂದಿರುತ್ತದೆ. ಇದಕ್ಕೆ ಎಲ್ಲರೂ ದೀಬಂದಿಂಡಿ’ ಅನ್ನುತ್ತಾರೆ. ಇದು ಹಳ್ಳಿಯ ಬೈಗುಳ ಗಡಸುಗಾರ್ತಿ ಗಂಡುಬೀರಿ – ಹೆಣ್ಣಿಗೆ ಹೀಗೆಂದು ಬೈಯ್ಯುತ್ತಾರೆ. ಈ ದೀಬರದಿಂಡಿಗಾಗೂ ಒಂದೇ ಒಂದು ಹಾಡಿದೆ. ಅದನ್ನು ದಿನವೂ ಕೊನೆಗೆ ಹಾಡಲಾಗುತ್ತದೆ.

’ದೀಬರ ದಿಂಡಿ ದೀಬರದಿಂಡಿ
ದೀಪಾ ಎಲ್ಲಟ್ಟಿ?
ಗಾಳಿ ಗೀಳಿಗಿ ಆರೀತಿಂತ
ಕುಂಬೀ ಮ್ಯಾಲಿಟ್ಟೆ’
ದೀಬರದಿಂಡಿ ದೀಬರದಿಂಡಿ
ಕೂಸಿನ್ನೆಲ್ಲಟ್ಟೆ?’

ಕತ್ತಲ ಖೋಲ್ಯಾಗ ಕರಗೀತಂತ
ಮ್ಯಾಳಗೀ ಮ್ಯಾಲಿಟ್ಟೆ

ಇಂಥಾ ದೀಬರದಂಡಿಯನ್ನು ಹಳ್ಳಿಗಳಲ್ಲಿ ಹಾಸ್ಯ ಮಾಡಿ ಹಾಡುತ್ತಾರೆ. ಎಲ್ಲ ಪ್ರಶ್ನೆಗಳಿಗೂ ಅವಳಿಂದ ಇಂಥವೇ ಉತ್ತರಗಳು ಅದಕ್ಕೆ ಅವಳನ್ನು ತೂಗಾಡಿಸುತ್ತ ಎಡೆಯನ್ನೂ ತೋರಿಸದೇ ಕೊನೆಯದಿನ ಗೌರಿಯೊಂದಿಗೆ ಹೊಳೆಯಲ್ಲಿ ಮುಳುಗಿಸುತ್ತಾರೆ. ಸಂಸಾರ ಸರಿಯಾಗಿ ಮಾಡಲುಬಾರದ ಹೆಣ್ಣನ್ನು ಅವರು ನೋಡುವುದೇ ಹೀಗೆ ಇದನ್ನು ಕಂಡಾದರೂ ಯುವತಿಯರು ತಮ್ಮ ದೀಬರದಿಂಡತನ ಬಿಟ್ಟು ಒಳ್ಳೆಯ ಗೃಹಿಣಿಯರಾಗಲಿ ಅವರಿಗೆ ಮರ್ಯಾದೆ ಸಿಗುತ್ತದೆ ಎಂಬ ಹಿತವಚನವೂ ಇಲ್ಲಿ ಪರೋಕ್ಷವಾಗಿದೆ ಎನ್ನುವುದು ನಿಸ್ಸಂದೇಹ.

ಗೌರಿಯ ಹಬ್ಬವೆಂದು ಅವಳನ್ನೇ ಹಾಡಿ ಹೊಗಳಿ, ಅವಳ ಸವತಿ ಎಂದು ಗಂಗೆಯನ್ನು ಉಪೇಕ್ಷೆ ಮಾಡಿಲ್ಲ. ಜನಪದ ಹಾಡುಗಳಲ್ಲಿ ಗಂಗೆಯ ಮಹಿಮೆಯನ್ನೂ ಕುರಿತು ಗೌರಿಯ ಎದುರಿಗೇ ಹಾಡುತ್ತಾರೆ. ಜೀವನಾವಶ್ಯಕವಾದ ನೀರಿನ ಬಗ್ಗೆ ಇವರು ತೋರಿಸುವ ಉಪಕಾರ ಸ್ಮರಣೆಯೂ ಇದರಲ್ಲಿದೆ.

ಗಂಗಾ ಗಂಗಾ ನಿನ್ಹ್ಯಾಂಗ ಬಿಟ್ಟಿರಲೆ
ಮಾಲಿಂಗದ ಜಡಿಯೊಳಗ ಮನಿ ಮಾಡಿರುವೆ || ಗಂಗಾ ||

ಅಡವಿ ಅರ್ಮಾಣ ಗುಡ್ಡ ಗವಿಯಾಣ
ಇಂತಾ ಒಣಗೀದ ಬ್ಯಾಸಗಿ ಬಿಸಲ ಕಾವೇರಿ || ಗಂಗಾ ||

ಮಂಗಲ ಮನೋಹರಿ ಹಿಂಗಿ ಹೋದಾವು ಪಾಪ
ಇಂತಾ ಕಣಗೆಟ್ಟು ಕೆರಿಬಾವಿ ತಿರಗಿ ಬಾ || ಗಂಗಾ ||

ಕಾಶಿಯ ಬಿನ್ನಕೆ ಬಾಸುರಿ ಶ್ರೀಕೃಷ್ಣ
ಇಂತಾ ನರನಾದ ಸರಸ್ವತಿ ಗೋದಾವರಿ ತುಂಬಾ || ಗಂಗಾ ||

ಎಂಜಲ ಮಲಮೂತ್ರ ಎಲವು ನೆತ್ತರು ಚರ್ಮ
ಇಂತಾ ದುರ್ಗಂಧಿ ದೇಹದ ಮೈಲಿಗಿ ತೊಳೆವೆ || ಗಂಗಾ ||

ಹೀಗೆ ಗಂಗೆಯನ್ನು ಪರಿಪರಿಯಾಗಿ ಹೊಗಳಿದ್ದಾರೆ ಜನಪದರು. ಗೌರಿಯ ಸಂಸಾರದಲ್ಲಿ ಯಾರ್ಯಾರು ಬರುತ್ತಾರೋ ಅವರೆಲ್ಲರ ಗುಣ ಸ್ವಭಾವಗಳ ವರ್ಣನೆಯಾಗಿದೆ. ಸ್ವತಃ ಅವಳ ಗಂಡ ಶಿವರಾಯನನ್ನೇ ಇವರು ಚಿತ್ರಿಸಿದ್ದನ್ನು ನೋಡಿದರೆ ನಗುಬಾರದಿರದು.

ಅದೊಂದು ದಿನ ಶಿವನು ಮನೆಗೆ ಬರುವುದರಲ್ಲಿ ರಾತ್ರಿ ಮಲಗುವ ಹೊತ್ತಾಗಿ ಬಿಟ್ಟಿದೆ ಪಾರ್ವತಿ ಬಾಗಿಲು ಹಾಕಿಕೊಂಡು ಮಲಗಿ ಬಿಟ್ಟಿದ್ದಾಳೆ. ಇವನು ತನ್ನೆಲ್ಲಾ ಬಿರುದು ಬಾವಲಿಗಳನ್ನು ಹೇಳಿ ಬಾಗಿಲು ತೆಗೆ ಅಂದರೆ ಅವಳು ಅದಕ್ಕೆ ತಕ್ಕ ಉತ್ತರ ಕೊಡುತ್ತಾಳೆ ಹೊರತು ಬಾಗಿಲು ತೆಗೆಯುತ್ತಿಲ್ಲ ಕೊನೆಗೆ ತೆಗೆಯುತ್ತಾಳೆ ಹೀಗೆ? ಅವನು ಬಂದು ಬಾಗಿಲು ಬಡಿದಾಗ ಅವಳು

ಬಂದವ್ರು ಯಾರಯ್ಯಾ ಮಂದಿರದೊಳಗಾರಿಲ್ಲಾ
ಮಧ್ಯರಾತ್ರಿಯೊಳು ಸಂದೇಯಗೊಳುವೇನು
ನಿಮ್ಮಂದವ ತಿಳಿಯದು ಬಂದು ತೆಗೆಯೆನು

ಎಂದು ನಿರಾಕರಿಸುತ್ತಾಳೆ. ಮಧ್ಯರಾತ್ರಿ ಬಂದವರಾರೊ? ಮನೆಯಲ್ಲಿ ಬೇರೆ ಯಾರೂ  ಇಲ್ಲ ಸಂದೇಹ ಪಡುತ್ತಿದ್ದೇನೆ ಅಂದರೆ ಶಿವನು –

’ನಂದಿವಾಹನ ಬಂದೀನಿ ಬಂದು ಬಾಗಿಲು ತೆಗೆಯೆ’ ಅಂದರೆ ಅವಳು ’ನಂದಿವಾಹನಾದರಿಂದ್ಯಾಕಿಲ್ಲಿಗಿ ಬಂದಿ ಹೊಂದಿಕೊ ಗುಡಿ ಗುಂಡಾರ’ ಎಂದು ಮೂದಲಿಸುತ್ತಾಳೆ.

ನನ್ನ ಕಟ್ಟುವರ್ಯಾರು ಮುನ್ನ ಮೂಲೋಕದೊಳು
ಪನ್ನಗ ಭರನಾ ನಾ ನಿನ್ನ ಬಳಿಗಿ ಬಂದೆ
ಚೆನ್ನೆ ಬಾಗಿಲು ತೆಗೆಯ – ಅಂದರೆ ಅವಳುತ್ತರ ಏನು?

ಪನ್ನಗ ಪಿಡಿಕೊಂಡು ಎನ್ನೊಳ್ಯಾತಕ ಬಂದಿ
ಪುಣ್ಯಾತ್ಮರೋಣಿಯೊಳು ಚೆನ್ನಾಗಿ ಆಡಿಸು
ಮನ್ನಣೆ ಮಾಡುವರು ಎಂದು ಹೀಯಾಳಿಸುತ್ತಾಳೆ.

ಭೂತನಾಥನು ಮನವ ಸೋತು ಬಂದಿರುವೆನು
ಕಾಂತೆ ಬಾಗಿಲು ತೆಗೆಯ – ಎಂದವನು ಹೇಳಿದರೆ

ಭೂತನಾಥನಾದರ್ಯಾತಕಿಲ್ಲಿಗಿ ಬಂದಿ
ಭೀತಿಗೊಳ್ಳುವೆ ಪೋಗಯ್ಯ
ನಾಡ ಬರಲೀ ನಾಳೆ, ಪ್ರೇತ ಭೂಮಿಯೊಳು
ಹೋತ ಬಲಿಯ ನಿಕ್ಕುವೆ – ಎಂದು ಛೇಡಿಸುತ್ತಾಳೆ.

ಕಾಡೊಳು ಮನಿಮಾಡಿ ಓಣಿಯೊಳು ತಿರಿದುಂಬ
ಆರೂಢ ಬಂದೀನಿ ಬಂದು ಬಾಗಿಲು ತೆಗಿಯೆ

ಎಂದವನು  ಅಂಗಲಾಚುತ್ತಾನೆ. ಆಗಲೂ ಇವಳು ಬಾಗಿಲು ತೆಗೆಯುವ ಅವನನ್ನು  ಕಾಡಿಸುತ್ತಾಳೆ.

ಬೇಡಲು ಬಂದರ ಈಡಿಲ್ಲ ಮನಿಯಾಗ
ನೀಡುವ ಹೊತ್ತಿದೇನೋ ಕಾಡಬೇಡ ಪೋಗು
ಮೂಡು ಹರಿದ ಮೇಲೆ ಮಾಡಿ ನೀಡುವೆ ಬಾರಯ್ಯಾ ಎನ್ನುತ್ತಾಳೆ. ಶಿಶುವಾಟ ತರವಲ್ಲ ಪಶುಪತಿ ಎಂಬುವ

ವಿಸಗೊರಳ ನಾನು ಬಂದು ಬಾಗಿಲು ತೆಗಿಯ ಅನ್ನುತ್ತಾನೆ. ಆಗಲೂ ಅವಳು ಇಸಕಂಠರ ಸಂಗ ಹಸನಲ್ಲ ನಮಗಿನ್ನು ದೆಸೆಗೆಟ್ಟವನೆ ಪೋಗಯ್ಯ ಎನ್ನುವಳು ಕೊನೆಗೆ ಸೋತ ಶಿವನು – ’ಗಿರಿಜಾಪತಿಯೇ ಹೌದು ಪಾರ್ವತಿ ಪ್ರಿಯ ಹೌದು ಚನ್ನೆ ಬಾಗಿಲು ತೆಗಿಯೆ’ ಅಂದಾಗ ಬಂದು ಬಾಗಿಲು ತೆಗೆದು  ಭರದಿ ಅವನನ್ನೂ ಅಪ್ಪುತ್ತಾಳಂತೆ ಅವನು ದೇವರೇ ಆಗಿರಲಿ ಮೊದಲು ಹೆಂಡತಿಯ ಗಂಡ ಎನ್ನುವುದನ್ನು ಮರೆಯಬಾರದು ಅನ್ನುತ್ತದೆ ಅವರ ಹಾಸ್ಯ ಪ್ರಜ್ಞೆ.

ಹೀಗೆ ಇವೆರಡೂ ಹಬ್ಬಗಳು ಕೇವಲ ಹೆಣ್ಣು ಮಕ್ಕಳಿಗೇ ಮೀಸಲಾದರೂ, ಅವು ಜನಾಂಗಕ್ಕೆ ಕಲಿಸುವ ಸಂಸ್ಕಾರ ಸಣ್ಣದಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಮನರಂಜನೆಗೆ ಏನೇನೂ ಮಾಧ್ಯಮಗಳಿಲ್ಲದ ಆ ಕಾಲದಲ್ಲಿ ಜಡಗೊಂಡ ವೈ-ಮನಸ್ಸುಗಳಿಗೆ ಚೇತನ ಕೊಡಲು ಈ ಹಬ್ಬಗಳು ಒಂದು ಕಾರಣವಾದರೆ, ಧಾರ್ಮಿಕ ಸಂಪ್ರದಾಯಗಳನ್ನು ಬದುಕಿನ ಅವಿಭಾಜ್ಯ ಅಂಗವಾಗಿಸುವ, ಆ ಮೂಲಕ ಸಾಮಾಜಿಕ ಶಿಕ್ಷಣ (social education) ವನ್ನು ನೀಡುವ ತತ್ವವೂ ಅದರಲ್ಲಿದೆ. ಹಾಡುಗಳಲ್ಲಿ ಆಚರಣೆಗಳಲ್ಲಿ ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿಯುವ ಆಶಯವನ್ನು ಸ್ಪಷ್ಟವಾಗಿ ಗುರುತಿಸಬಹುದು. ಈ ಹಬ್ಬಗಳಲ್ಲಿ ಕೂಡಿ ಆಡುವಾಗ – ಹಾಡುವಾಗ ಎಷ್ಟೋ ದಿನಗಳಿಂದ ಇದ್ದ ಮನಸ್ತಾಪಗಳು ಕೂಡ ಮರೆತು ಉಲ್ಲಾಸದ ಪರಿಸರದಲ್ಲಿ ಮನಸ್ಸು ಸಂಕುಚಿತ ಭಾವನೆಗಳನ್ನು ಕಳೆದುಕೊಳ್ಳುತ್ತದೆ. ಕುಟುಂಬದ ವಾತಾವರಣದಿಂದ ಹೆಣ್ಣಿನ ಮನಸ್ಸು ಮುದುಡಿದ್ದರೆ ಅರಳಿಸಬಲ್ಲ ಹಬ್ಬಗಳು ಇವು ತಿರುಗಿ ಬತ್ತಿದ ಜೀವನೋತ್ಸಾಹವನ್ನು ಉಕ್ಕಿಸಬಲ್ಲ ಇಂಥ ಹಬ್ಬಗಳಿದ್ದುವೆಂದೇ ಆಗಿನ ಹೆಣ್ಣು ಮಕ್ಕಳು ಬದುಕನ್ನು ಸಹನೀಯ ಮಾಡಿಕೊಂಡಿದ್ದರು. ಸಂಸಾರದಲ್ಲಿ ಸಮಪಾಲು ಪಡೆದ ಹೆಣ್ಣು ಕರಿಯಬೇಕಾದ ತಾಳ್ಮೆ – ಉದಾರ ಸ್ವಭಾವ  – ತ್ಯಾಗ ಮುಂತಾದವುಗಳನ್ನು ಈ ಹಾಡುಗಳು ಸಹಜವಾಗಿ ಕರಿಸುತ್ತ ಸಾಂಸಾರಿಕ ಶಾಂತಿಗೆ ಮಹತ್ತರವಾದ ಕಾಣಿಕೆಗಳನ್ನೇ ಕೊಟ್ಟಿವೆ ಎನ್ನಬಹುದು.

ನಮ್ಮ ಹಬ್ಬಗಳು ಸಂಸ್ಕೃತಿಯ ದ್ಯೋತಕವಾಗಿದ್ದವು ಎನ್ನುವುದು ಬಹುಶಃ ಇಂಥದೇ ಹಿನ್ನೆಲೆಯಲ್ಲಿರಬೇಕು. ಸಾಮಾಜಿಕ ಶಿಸ್ತನ್ನೂ ಅದನ್ನು ಮೈಗೂಡಿಸಿಕೊಂಡು ಹೋದರೇ ಸುಖ ಎಂಬುದನ್ನೂ ಇವುಗಳ ಹಿನ್ನೆಲೆಯಲ್ಲಿ ಕಾಣಬಹುದಾಗಿದೆ. ವ್ಯಕ್ತಿಗಿಂತ ಸಮಷ್ಟಿಯ ಕಾಳಜಿಯೇ ಹೆಚ್ಚಾಗಿರುವ ಜಾನಪದ ಜೀವನವು ಬದುಕನ್ನು ಎಚ್ಚರದಿಂದ ಬಾಳುವುದಕ್ಕೂ, ಬಂದುದನ್ನು ಒಗ್ಗಿಸಿಕೊಳ್ಳುವುದಕ್ಕೂ ಕಲಿಸುತ್ತದೆ. ಇದಕ್ಕಿಂತ ಉದಾತ್ತವಾದ ಶಿಕ್ಷಣ ಯಾವುದಿದೆ?

ಆದರೆ ಆಧುನಿಕ ಜನಾಂಗ, ಗ್ರಾಮೀಣ ಭಾವನೆಗಳನ್ನು ಕಳೆದುಕೊಂಡು ಇಂಥ ಒಂದು ಸಾಮಾಜಿಕ ಶಿಕ್ಷಣಕ್ಕೆ ಎರವಾಗಿರವುದು ವಿಷಾದನೀಯ.

ಸಹಾಯ

. ನಮ್ಮ ಸಂಸ್ಕೃತಿ ಪರಂಪರೆ – ಬೆಟಗೇರಿ ಕೃಷ್ಣಶರ್ಮ

೨. ನನ್ನ ಬಾಲ್ಯದ ನೆನಪುಗಳು ಮತ್ತು ಬಹಳಷ್ಟು ಹಾಡುಗಳನ್ನು ಒದಗಿಸಿದ ತಾಯಂದಿರು ಶ್ರೀಮತಿ ಗುರುಲಿಂಗಮ್ಮ ವಸ್ತ್ರದ, ಸಿಂದಗಿ ಶ್ರೀಮತಿ ಶರಣಮ್ಮ ಅರಳಗುಂಡಗಿ, ಸಿಂದಗಿ ಶ್ರೀ ಸಿದ್ರಾಮಯ್ಯ ಹಿರೇಮಠ, ಮುರಡಿ ಮತ್ತು ಹತಪಾಕಿ ಸೋದರಿಯರು. ಗೋಕಾಕ ಕು. ಲಕ್ಷ್ಮೀಬಾಯಿ ಮಂಗಿ, ಗೋಕಾಕ ಫಾಲ್ಸ್.