ಪ್ರವೇಶ

ಸ್ವಾಗತ ಭಾಷಣ : ಪ್ರಿ. ಸದಾನಂದ ಕನವಳ್ಳಿ
ಅಧ್ಯಕ್ಷೀಯ ಭಾಷಣ : ಡಾ.ಬಿ.ಬಿ. ಹೆಂಡಿ

 

ಸ್ವಾಗತ ಭಾಷಣ

ಐತಿಹಾಸಿಕ, ಸಾಂಸ್ಕೃತಿಕ ಮಹತ್ವ ಹೊಂದಿರುವ ಲಕ್ಷ್ಮೇಶ್ವರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಹತ್ತನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಜರುಗುತ್ತಿರುವುದು ಅತ್ಯಂತ ಸಂತೋಷದ, ಹೆಮ್ಮೆಯ ಸಂಗತಿ.

ಸಂಸ್ಕೃತಿಗೆ ಜಾನಪದ ತಾಯಿ ಬೇಕು. ಈ ತಿಳುವLಳಿಕೆ ಜಗತ್ತಿನಾದ್ಯಂತ ಬಲಪಟ್ಟಿದೆ. ಅಂತೆಯೆ, ಆಧುನಿಕರು ಜಾನಪದ ಅಧ್ಯಯನದತ್ತ ಆಕರ್ಷಿತರಾಗಿದ್ದಾರೆ. ಯುರೋಪಿನ ಹಲವು ವಿಶ್ವವಿದ್ಯಾಲಯಗಳಲ್ಲಿ ಜಾನಪದ ಬಹುಕಾಲದಿಂದಲೂ ಅಧ್ಯಯನದ ವಿಷಯವಾಗಿದೆ. ಭಾರತದ ಅನೇಕ ವಿಶ್ವವಿದ್ಯಾಲಯಗಳಲ್ಲೂ ಈ ನಿಟ್ಟಿನಲ್ಲಿ ಜಾಗೃತಿ ಮೂಡಿದೆ. ಕಾರ್ಯ ನಡೆದಿದೆ. ನಮ್ಮ ರಾಜ್ಯದ ವಿಶ್ವವಿದ್ಯಾನಿಲಯಗಳೂ ಇತ್ತ ಕಾರ್ಯಪ್ರವೃತ್ತವಾಗಿವೆ.

ಇದೆಲ್ಲದರ ಫಲವಾಗಿ ಜಾನಪದ ಸಾಹಿತ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ, ಅಭ್ಯಸಿಸುವ, ಅರ್ಥೈಸುವ ಪರಿಸರ, ವೇದಿಕೆ ನಿರ್ಮಿತವಾಗಿವೆ. ಪರಿಶ್ರಮ ಮುಂದುವರಿದಿದೆ.

ಜಾನಪದ ಸಾಹಿತ್ಯದ ಪ್ರಾಚೀನತೆ, ವ್ಯಾಪ್ತಿ, ಆಳ ಸುಲಭವಾಗಿ ಕೈಗೆಟುಕದಂಥವು. ಅದರ ವೈಜ್ಞಾನಿಕ ಅಧ್ಯಯನಕ್ಕೆ ಸಾಹಿತ್ಯ, ಭಾಷಾವಿಜ್ಞಾನ, ಮಾನವ ಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಕಲೆ ಮತ್ತು ಸಂಗೀತ ಇವೆಲ್ಲವುಗಳ ನೆರವು ಅಗತ್ಯ.

ಜಾನಪದ ನಶಿಸಿ ಹೋಗುತ್ತಿದೆ. ಅದು ಕಾರಣ, ಅದನ್ನು ಗ್ರಂಥಗಳಲ್ಲಿ, ವಸ್ತು ಸಂಗ್ರಹಾಲಯಗಳಲ್ಲಿ ಸಂರಕ್ಷಿಸಿಡುವ ಶ್ರಮ ಸಾಗಿದೆ. ಯಾವುದು ಇಲ್ಲದಂತಾಗುತ್ತದೆಯೋ ಅದನ್ನು ಸಂರಕ್ಷಿಸುವ ಹುಯಿಲು ಎಬ್ಬಿಸುತ್ತೇವೆ. ವನ್ಯಮೃಗಗಳು ಇಲ್ಲದಂತಾಗುತ್ತಿವೆ. ಅರಣ್ಯ ಸಂಪತ್ತು ಕರಗುತ್ತಿವೆ. ಅವುಗಳನ್ನು ಉಳಿಸುವ, ಬೆಳೆಸುವ ಯೋಜನೆ ಹೂಡಲಾಗಿದೆ. ಹಂಪೆಗಳು ಕೊಂಪೆಗಳಾಗುತ್ತಿವೆ. ಅವುಗಳನ್ನು ಜೋಪಾನ ಮಾಡುವ ಯೋಜನೆ ಕಾರ್ಯಗತವಾಗುತ್ತಿವೆ. ಅದೇ ರೀತಿ, ಜಾನಪದ ಕುರಿತು ಕೂಡ.

ಜಾನಪದ ಕಣ್ಮರೆಯಾಗುವದಕ್ಕೆ ಕಾರಣ ಅದಕ್ಕೆ ಪ್ರೇರಕವಾಗಿದ್ದ ಜೀವನಕ್ರಮ ಕಣ್ಮರೆಯಾಗಿರುವುದು. ಆಧುನೀಕರಣದ ನಾಗಾಲೋಟ ಕುಟ್ಟುವ, ಬೀಸುವ, ಹಂತಿ ತಿರುಗಿಸುವ ಜೀವನ ವಿಧಾನವನ್ನು ಕೊಚ್ಚಿಹಾಕಿದೆ. ಈಗ ಕುಟ್ಟುವ, ಬೀಸುವ ಕೆಲಸಗಳನ್ನು ಗ್ರೈಂಡರುಗಳು, ಗಿರಣಿಗಳು ಮಾಡಿದರೆ ತೆನೆ ತುಳಿಯುವ ಕೆಲಸವನ್ನು ಟ್ರ‍್ಯಾಕ್ಟರುಗಳು ಮಾಡುತ್ತಿವೆ. ಬಯಲಾಟಗಳು ಬಯಲಾಗಿ ಇಂದು ನಾಟಕ ಸಿನೇಮಾಗಳು ಸಾಮಾಜಿಕ ಜೀವನದ ಹಾಸುಹೊಕ್ಕಾಗಿವೆ.

ಆದರೆ ಈ ಆಧುನೀಕರಣದ ಯಾಂತ್ರಿಕತೆಗೂ ಒಂದು ಮಿತಿಯುಂಟು. ಸಿನೇಮಾ ಸಂಗೀತ ತರಿಸಿದ ಓಕರಿಕೆಯಿಂದಾಗಿ ಸುಶಿಕ್ಷಿತರು ಇತ್ತೀಚೆಗೆ ಜಾನಪದ ಸಂಗೀತದತ್ತ ಒಲವು ತೋರುತ್ತಿದ್ದಾರೆ. ನಾಟಕ, ಸಿನೆಮಾ, ಕ್ಯಾಸೆಟ್ಟುಗಳಲ್ಲಿ ಜಾನಪದ ಮಟ್ಟುಗಳು ಜನಪ್ರಿಯವಾಗುತ್ತಿವೆ. ಇದರಿಂದಾಗಿ, ಸಮೂಹ ಮಾಧ್ಯಮಗಳಿಂದ ಜಾನಪದಕ್ಕೆ ಪ್ರಸಾರ ಪ್ರಯೋಜನ ದೊರಕುತ್ತಿದೆಯಾದರೂ ಹೈಬ್ರಿಡ್ ಜಾನಪದ ಸಂಸ್ಕೃತಿ ಸೃಷ್ಟಿಗೊಳ್ಳುವ ಅಪಾಯ ಇಲ್ಲದಿಲ್ಲ. ಅಲ್ಲಲ್ಲಿ ಏರ್ಪಡುತ್ತಿರುವ ಜಾನಪದ ಸಮ್ಮೇಳನಗಳಿಂದ ಈ ಅಪಾಯಕ್ಕೆ ತಡೆ ಕಟ್ಟಬಹುದು.

ಪ್ರಸ್ತುತ ಜನಪದ ಸಮ್ಮೇಳನದ ಗೋಷ್ಠಿಗಳಿಗೆ ಹಬ್ಬ ವಿಷಯವನ್ನು ಆಯ್ಕೆ ಮಾಡಿರುವುದು ಔಚಿತ್ಯಪೂರ್ಣ. ಹಬ್ಬಗಳೂ ಮಿಕ್ಕ ಜಾನಪದ ವಿಧಾನಗಳ ಹಾದಿಯನ್ನೇ ಹಿಡಿದಿವೆ. ಮನೆಯೊಳಗೆ ಸಿಹಿ ಅಡಿಗೆ ಮಾಡಿದಂದು ’ಓಹೋ ಇವತ್ತು ಏನೋ ಹಬ್ಬವಿದ್ದಂತಿದೆ’ ಎನ್ನುವ ಮಟ್ಟಿಗೆ ಪಳೆಯುಳಿಕೆಗಳಾಗಿವೆ.

ಜಾನಪದ ಅಧ್ಯಯನದಲ್ಲಿ ಒಂದು ಎಚ್ಚರಿಕೆ ಅವಶ್ಯಕ. ಹಳೆಯದೆಲ್ಲವನ್ನೂ ವೈಭವೀಕರಿಸುತ್ತ ಹೋದಂತೆ ಧರ್ಮಕ್ಕೆ ಆಗಿರುವ ಗತಿಯೇ ಜಾನಪದಕ್ಕೂ ಕಟ್ಟಿಟ್ಟಿದ್ದು. ವಾಸ್ತವಿಕ ನೆಲೆಗಟ್ಟನ್ನಾಧರಿಸಿದ್ದಾದರೆ ಮಾತ್ರ ಜಾನಪದ ಅಧ್ಯಯನ ಗಟ್ಟಿಯಾಗಿ ನಿಂತೀತು. ಇಲ್ಲದಿದ್ದರೆ, ಈಗ ಧರ್ಮವಾಗಿರುವಂತೆ ಕೇವಲ ಕಂದಾಚಾರವಾದೀತು.

ಈ ಸಮ್ಮೇಳನ ನಮ್ಮ ವಿದ್ಯಾರ್ಥಿಗಳಲ್ಲಿ ಮತ್ತು ನಾಡವರಲ್ಲಿ ಜಾನಪದದ ಬಗೆಗೆ ಆಸಕ್ತಿ, ತಿಳುವಳಿಕೆ ಮೂಡಿಸಲೆಂದು ಹಾರೈಸುತ್ತೇನೆ.

ಸದಾನಂದ ಕನವಳ್ಳಿ
ಪ್ರಾಚಾರ್ಯರು

ಮುನಸಿಪಲ್ ಆರ್ಟ್ಸ್ ಕಾಲೇಜು,
ಲಕ್ಷ್ಮೇಶ್ವರ