ನಮ್ಮ ಜನಪದರು ಪ್ರಕೃತಿಯ ಆರಾಧಕರು, ಪ್ರಕೃತಿಯಲ್ಲಿ ಕಾಣಬರುವ ನೆಲ, ಮುಗಿಲು, ಮಳೆ, ಬೆಳೆ, ಕಲ್ಲು, ಗಿಡ, ಮರ, ಹುತ್ತ, ಬೆತ್ತ ಎಲ್ಲವೂ ಅವರ ಪಾಲಿಗೆ ದೇವರೇ. ಮಳೆ ಬಂದರೆ ಒಂದು ಹಬ್ಬ, ಮಳೆ ಬರದಿದ್ದರೆ ಒಂದು ಹಬ್ಬ, ಬೇಸಿಗೆಯಲ್ಲೊಂದು ಚಳಿಗಾಲದಲ್ಲೊಂದು, ಹೀಗೆ ಆಯಾ ಋತುಮಾನಕ್ಕಾನುಗುಣವಾಗಿ ಒಂದೊಂದು ಹಬ್ಬವನ್ನು ಆಚರಿಸುತ್ತಾ ತಮ್ಮ ಸುಖ ಸಂತೋಷವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾನೆ. ಇಂತಹ ಹಬ್ಬ ಹರಿದಿನಗಳಿಂದಲೇ ನಮ್ಮ ಜನಪದರ ಸಂಸ್ಕೃತಿ  ಪರಂಪರೆಯ ಮಹೋನ್ನತಿ ನಮಗಿಂದು ಮೂರ್ತಸ್ವರೂಪದಲ್ಲಿ ಕಾಣ ಬರುತ್ತಿರುವುದು.

ಹಬ್ಬಗಳ ಆಚರಣೆ ಒಂದು ದೃಷ್ಟಿಯಲ್ಲಿ ವೈಜ್ಞಾನಿಕವೂ ಮತ್ತು ಶಾಸ್ತ್ರೋಕ್ತವೂ ಆಗಿದೆಯೆಂದು ಹೇಳಬಹುದು. ಜನಪದರು ಕರ್ಮಜೀವಿಗಳು. ಹಗಲಿರಳೂ ದುಡಿದು ದಣಿದ ಜೀವಕ್ಕೆ ತೃಪ್ತಿ ತಂದುಕೊಳ್ಳಲು ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ತಮ್ಮ ಬಾಳಿನಲ್ಲಿ ಸುಖಶಾಂತಿ ನೆಮ್ಮದಿ ತಂದುಕೊಳ್ಳಲು ಮನರಂಜನೆಯನ್ನು ನಡೆಯಲು ಸಹಬಾಳ್ವೆಯನ್ನು ನಡೆಸಲು ಹಬ್ಬಗಳನ್ನು ಸೃಷ್ಟಿಸಿಕೊಂಡಿರಬೇಕು. ಹಬ್ಬಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು.

೧)        ತಮ್ಮ ಮನೆಯವರು ಬಂಧುಬಳಗದವರಷ್ಟೇ ಸೇರಿ ಆಚರಿಸುವ ಹಬ್ಬಗಳು
೨)         ಊರಿಗೆ ಊರೇ ಸಾಮೂಹಿಕವಾಗಿ ಸೇರಿ ಆಚರಿಸುವ ಹಬ್ಬಗಳು.

ದೀಪಾವಳಿ ಹಬ್ಬ ಈ ಎರಡೂ ಕ್ರಮಗಳನ್ನು ಒಳಗೊಳ್ಳುವಂತಹ ಒಂದು ಹಬ್ಬ. ಅಂದರೆ ಮನೆಯಲ್ಲಷ್ಟೇ ಅಲ್ಲದೆ ಊರವರೆಲ್ಲರೂ ಸೇರಿ ಆಚರಿಸುವಂತಹದ್ದು. ಗೋಪೂಜೆ, ಕಿಚ್ಚುಹಾಯಿಸುವುದು, ಹೋರಿಗಳ ಮೆರವಣಿಗೆ ಹಿರಿಯರಪೂಜೆ ಕೆರಕಲ ನೀಡುವುದು ಇತ್ಯಾದಿ ಹತ್ತಾರು ಬಗೆಯ ಸಂಪ್ರದಾಯಗಳು ಆಚರಣೆಗಳನ್ನು ಒಳಗೊಂಡಂತಹ ವಿಶಿಷ್ಟ ಹಬ್ಬವಾಗಿದೆ.

ದೀಪಾವಳಿ ಅಶ್ವಿನಿ ಮತ್ತು ಕಾರ್ತಿಕ ಮಾಸಗಳೆರಡರ ಕಕ್ಷೆಯಲ್ಲಿ ಬರುತ್ತದೆ. ಹೊಲಗದ್ದೆಗಳಲ್ಲಿ ಪೈರು ಪಚ್ಚೆ ಹುಲುಸಾಗಿ ಬೆಳೆದುನಿಂತು ರೈತನ ಮನಸ್ಸಿಗೆ ಹರ್ಷವನ್ನುಂಟು ಮಾಡುವ ಕಾಲವದು, ಸಾಮಾನ್ಯವಾಗಿ ನಮ್ಮ ಹಬ್ಬಗಳು ಒಂದು ದಿವಸ ಹೆಚ್ಚೆಂದರೆ ಎರಡು ದಿವಸದಲ್ಲಿ ಮುಗಿಯುತ್ತವೆ. ಆದರೆ ಇದು ಹಾಗಲ್ಲ. ನೀರು ತುಂಬುವ ಹಬ್ಬ ನರಕ ಚತುರ್ದಶಿ ಲಕ್ಷೀ ಪೂಜೆ, ವರ್ಷದೊಡಕು ಹೀಗೆ ವಿಧಿವತ್ತಾಗಿ ಒಂದೊಂದನ್ನೇ ಒಂದೊಂದು ದಿವಸ ನಡೆಸುವಂತಹ ಹಬ್ಬ. ಭರಮದೇವನು ಹಟ್ಟಿಯ ಪಾಲಕನೆಂದು ಅವನ ಪೂಜೆಯನ್ನೂ ಮಾಡುವುದರಿಂದ ‘ಹಟ್ಟಿ ಹಬ್ಬ’ ವೆಂತಲೂ ಕರೆಯುವರು. ಇದರಲ್ಲಿ ಮುಖ್ಯವಾಗಿ ಗೋಪಾಲಕರ ಪಾತ್ರವೇ ಹೆಚ್ಚು. ‘ಗೋಪೂಜೆ’ ಯಂದು ದನಕರುಗಳನ್ನು ನಾನಾ ರೀತಿಯಲ್ಲಿ ಶೃಂಗರಿಸುವರು. ಒಂದು ಕೋಡಿಗೆ ಸುಣ್ಣ ಮತ್ತೊಂದು ಕೋಡಿಗೆ ಕೆಮ್ಮಣ್ಣು ಬಳಿದು ಚೆಂಡು ಹೂವಿನ ಸರವನ್ನು ಕಟ್ಟಿ ಪೂಜೆ ಸಲ್ಲಿಸಿ ಕೊಟ್ಟಿಗೆಯಿಂದ ಹೊರಗೆ ಬಿಡುವಾಗ ಆ ಊರಿನ  ಬೇರೆ ಮನೆಯವರು ಹಾಲುಕೊಡುವ ಹಸುವಿನ ಕೊರಳಲ್ಲಿ ಕಟ್ಟಿದ್ದ ಹೂವಿನ ಸರವೊಂದನ್ನು ಹರಿದುಕೊಂಡು ಹೋಗಿ ತಮ್ಮ ಮನೆಯ ಮೊಸರು ಕಡೆಯುವ ಕಡೆ ಗೋಲಿಗೆ ಕಟ್ಟುವ ಸಂಪ್ರದಾಯವಿದೆ. ಹೀಗೆ ಕಟ್ಟಿದರೆ ವರ್ಷವಿಡೀ ಹೈನು ತಪ್ಪುವುದಿಲ್ಲವೆಂದು ನಂಬಿದ್ದಾರೆ. ಇದಾದ ನಂತರ ಸಗಣಿಯ ಕೆರೆಕಿನನ್ನ ಮಾಡಲ ಕಾಡಿನಲ್ಲಿ ಹೊಲಗದ್ದೆಗಳಲ್ಲಿ ಆಗ ದೊರೆಯುವ ಎಲ್ಲಾ ಬಗೆಯ ಹೂವು, ಪತ್ರೆ, ಪೈರು, ಫಲ, ಉತ್ರಾಣಿಕಡ್ಡಿ, ಚೆಂಡು ಹೂ, ಹುಚ್ಚೆಳ್ಳುಹೂ, ರಾಗಿತೆನೆ ಇತ್ಯಾದಿಗಳನ್ನೆಲ್ಲಾ ತಂದು ಸಗಣಿಯ ಉಂಡೆಗೆ ಎಲ್ಲವನ್ನು ಸಿಕ್ಕಿಸಿ ಮನೆಯ ಹೊಸ್ತಿಲಿನಿಂದ ಹಿಡಿದು ಒಲೆತೋಳು, ಮರಮುಟ್ಟು ತಿಪ್ಪೆ ಮುಂತಾದ ಜಾಗಗಳಲ್ಲೆಲ್ಲಾ ಇಟ್ಟು ಪೂಜಿಸುವರು. ಆ ದಿನ ಮಾಡಿದ ವಿಶೇಷ ಅಡಿಗೆಯನ್ನು ನೈವೇದ್ಯ ಮಾಡಿ ಮನೆಯ ಮೇಲೆ ತೆಗೆದಿಡುವರು.

ಇದಕ್ಕೆ ಸಗಣಿಯ ಪಾಂಡವರನ್ನು ಬರಮಾಡಿಕೊಳ್ಳುವುದು ಎಂದೂ ಕರೆಯುತ್ತಾರೆ. ನೂರಾರು ಕಷ್ಟಗಳನ್ನು ಅನುಭವಿಸಿ, ಅಜ್ಞಾತವಾಸ ಮುಗಿಸಿ, ಜಯಶೀಲರಾಗಿ ಬಂದ ದಿನವೆಂದೂ ಸತ್ಯಸುಂದರ ನೆನಪನ್ನು ಮಾಡಿಕೊಳ್ಳುವುದರ ಮೂಲಕ ಮುಂದೆ ಜೀವನದಲ್ಲಿ ಒದಗಬಹುದಾದ ಕಷ್ಟಗಳನ್ನು ಎದುರಿಸುವ ಧೈರ್ಯ ನಮ್ಮಲ್ಲೂ ಬರಲಿ ಎಂಬುದೂ ಒಂದಾಗಿರಬಹುದು.

ಈ ದೀಪಾವಳಿಯಲ್ಲಿ ಕೆರಕಲನಿಟ್ಟಾಗ ಅತ್ತೆ ಮಾವ, ಅಳಿಯ, ಭಾವ ಮುಂತಾದವರುಗಳಲ್ಲಿ(ಅಕ್ಕ ತಂಗಿ, ಅಣ್ಣ ತಮ್ಮ, ಅಪ್ಪ ಅಮ್ಮಂದಿರುಗಳನ್ನು ಬಿಟ್ಟು) ಸಂಭಾಷಣೆ ನಡೆಸುವಾಗ ಹೂಂ ಗುಟ್ಟಿದರೆ ‘ಕೆರಕೋ’ ಎನ್ನುತ್ತಾರೆ. ಕೆರಕಲನ್ನು ಹಾಕಿಸಿಕೊಂಡವನು ತಿರುಗಿಸಿ ಹಾಕಲು ಮತ್ತೆ ಪ್ರಯತ್ನಿಸುತ್ತಾನೆ. “ಕೆರಕು” ಎನ್ನುವುದಕ್ಕೆ ಕಿಟೆಲ್ ಕೋಶದಲ್ಲಿ ಈ ರೀತಿ ಇದೆ. Keraku that is scratching or rough as stone  ಎಂತಲೂ ’ಕೆರಕ’ ಎನ್ನುವುದಕ್ಕೆ one who scraps together as miser, a beggar ಎಂಬರ್ಥಗಳಿವೆ. “ಕೆರಕಲು” ಎನ್ನುವುದಕ್ಕೆ scrappings ಎಂತಲೂ ಇದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಬಲಿಪಾಡಮಿಯಂದು ನಮ್ಮ ಜನಪದರು ಹಾಕಾಡುವ ಕೆರಕಲಿನ ಮಹತ್ವವೇನು?

ಈ ಕೆರಕಲನ್ನು ಹಾಕುವಾಗ ‘ಆ’ ಎಂದರೆ ಆರುಸಾರಿ ‘ಓ’ ಎಂದರೆ ಒಂಬತ್ತು ಸಾರಿ ‘ಏ’ ಎಂದರೆ ಎಂಟು ಸಾರಿ ಹಾಗೆಂದವನು ಕೆರೆದುಕೊಳ್ಳಬೇಕು. ಇದನ್ನು ನೋಡಿದಾಗ ಕಿಟಲ್ ಹೇಳುವ One who scraps together ಎಂಬ ಅರ್ಥಕೋಶದ ಮಾತು ಸರಿಯಾಗಬಹುದು. ದೀಪಾವಳಿಗೆ ಆ ವರ್ಷ ಮದುವೆಯಾದ ಮಗಳು ಅಳಿಯ ಬರಲೇಬೇಕು. ಮನೆಗೆ ಬಂದ ಅಳಿಯನಿಗೆ ನಾದಿನಿಯರು ಭಾವಂದಿರುಗಳು ಸತ್ತ ಚೇಳು ಬಿಡುವುದು, ಜೇಬಿಗೆ ಕಲ್ಲುತುಂಬುವುದು, ಬಾಲಕಟ್ಟುವುದು ಇತ್ಯಾದಿ ಹಲವಾರು ಚೇಷ್ಠೆಗಳನ್ನು ಮಾಡುತ್ತಾರೆ. ಇದನ್ನು ಮಾನವ ಶಾಸ್ತ್ರಜ್ಞರ ಪ್ರಕಾರ Joking Relationship ಗುಂಪಿಗೆ ಸೇರಿಸಬಹುದು.

ಮನೆಯಲ್ಲೇ ನಡೆಯುವ ಇದು ಒಂದು ಬಗೆಯಾದರೆ, ಸಂಜೆಯಾಗುತ್ತಲೇ ಊರ ಹೊರಗಡೆಗೆ ವಿಶಾಲವಾದ ಜಾಗದಲ್ಲಿ ದನಕಾಯುವವ ಊರ ದನಕರುಗಳನ್ನೆಲ್ಲಾ ಒಂದೆಡೆ ತುರುಬಿಕೊಂಡಿದ್ದು ಅದರ ಮುಂಭಾಗದಲ್ಲಿ ಸೋಗೆ, ಹುಲ್ಲು, ಜೋಳದ ದಂಟು ಇತ್ಯಾದಿಗಳಿಂದ ಒಂದು ಗುಡಿಸಲನ್ನು ನಿರ್ಮಿಸಿರುತ್ತಾನೆ. ಊರ ಜನರೆಲ್ಲಾ ತಮ್ಮ ದೇವರನ್ನು ಹೊರಡಿಸಿಕೊಂಡು ಕುಂಬಾರನಿಂದ ಮಣ್ಣಿನಿಂದ ಗೊಲ್ಲಕವ್ವನನ್ನು ಮಾಡಿಸಿಕೊಂಡು ಎಡೆ, ಎಣ್ಣೆಬೆಣ್ಣೆ, ಬಾಳೆಹಣ್ಣು ಹಣ್ಣುಕಾಯಿ ಕರ್ಪೂರ, ಹೂ ಪತ್ರೆಗಳೊಂದಿಗೆ ದನಕಾಯುವವನ ಹತ್ತಿರ ಬಂದು ಆ ಹುಲ್ಲಿನ ಗುಡಿಸಲ್ಲಲ್ಲಿ ಕುಳ್ಳಿರಿಸಿ, ತಲೆಗೆ ಎಣ್ಣೆ ಹಚ್ಚಿ ಬಾಯಿಗೆ ಬೆಣ್ಣೆ ಹಾಕಿ ತಂಪು ಮಾಡಿ ಆ ದೇವತೆಯನ್ನು ಪೂಜಿಸಿ ಗುಡಿಸಲಿಗೆ ಬೆಂಕಿ ಇಡುತ್ತಾರೆ. ಚರಗ ಮತ್ತು ಪಂಜು ಹಿಡಿದು ಇಬ್ಬರು ಯುವಕರು ದನಗಳ ಸುತ್ತ ಚರಗ ಚೆಲ್ಲುತ್ತಾ ಹೆಚ್ಚಲಿ, ಹೋಲಿಸ್ಯ, ಎಂದು ಕೂಗುತ್ತಾ ಪ್ರದಕ್ಷಿಣೆ ಹಾಕಿ ಬರುತ್ತಾರೆ. ದನಗಳನ್ನು ಕಿಚ್ಚಿನ ಮೇಲೆ ಹಾಯಿಸುತ್ತಾರೆ. ಮನೆಗೆ ಬರುವ ದನಕರುಗಳಿಗೆ ಒನಕೆ ದಾಟಿಸುವುದು. ಹಿಂದಲಿಚ್ಚೆ ಕಾಯಿನಿಂದ ಹೊಡೆಯುವುದು ಮೊದಲಾದ ಸಂಪ್ರದಾಯಗಳನ್ನು ನಡೆಸುತ್ತಾರೆ. ‘ದೀಪಾವಳಿಯಲ್ಲಿ ದನಕೊಡಬ್ಯಾಡ’ ಎಂಬ ಮಾತು ‘ದನಗಳು’ ಈ ಕಾಲದಲ್ಲಿ ಚೆನ್ನಾಗಿ ಮೇಯ್ದು ಬೆಳೆದಿರುವುದರಿಂದ ಹುಟ್ಟಿಕೊಂಡಿದೆ. ಇದನ್ನು ಕೆಲವು ಕಡೆಗಳಲ್ಲಿ ಸಂಕ್ರಾಂತಿಯಂದು ಆಚರಿಸುವ ಕ್ರಮವೂ ಉಂಟು. ಕೆಲವು ಕಡೆ ‘ಉಣ್ಣೆರೊಟ್ಟಿ’ ಯನ್ನು ಬೇರೆ ಊರಿನ ಗಡಿಗೆ ಹೋಗಿ ಸುಟ್ಟು ಬರುವ ಸಂಪ್ರದಾಯವೂ ಇದೆ. ಹೀಗೆ ಮಾಡುವುದರಿಂದ ತಮ್ಮ ಊರಿನ ದನಗಳಿಗೆ ಬಂದ ರೋಗ ಬೇರೆ ಊರಿಗೆ ಹೋಗಲಿ ಎಂಬ ಆಶಯವೂ ಇದರಲ್ಲಿ ಇದ್ದಂತೆ ತೋರುತ್ತದೆ. ದೀಪಾವಳಿಯಲ್ಲಿ ಹಾಸನ ಜಿಲ್ಲೆಯಲ್ಲಿ ನಡೆಸುವ ಆಚರಣೆಯೊಂದನ್ನೂ ಕೂಡ ಇಲ್ಲೇ ಉಲ್ಲೇಖಿಸಬಹುದು. ದೀಪಾವಳಿಯ ಮುಂಜಾನೆ ಬೇಗನೆ ಎದ್ದು ಕಿತ್ತಾಳೆಯ ಎಳೆಯ ಗಿಡಗಳನ್ನೂ ತಿಪ್ಪೆಯ ಮೇಲೆ, ಮನೆಯ ಮೇಲೆ ಒಂದೊಂದರಂತೆ ಹಾಕುತ್ತಾರೆ. ಆನಂತರ ಕಾಡಿಗೆ ಹೋಗಿ ಒಂದು ನೆಲ್ಲೀಮರದ ಕೊನೆ, ಒಂದು ಲಕ್ಕೀ ಕೊನೆ, ಒಂದು ಗಾಳಿ ಬೀಜದ ಕೊನೆ ಮುಂತಾದವುಗಳನ್ನು ಕಡಿದುಕೊಂಡು ಬಂದು ತಮ್ಮ ಹೊಲ, ಗದ್ದೆ, ತೋಟದಲ್ಲಿ ಮಾರಿಗೊಂದೊಂದು ಸಲ ಲಕ್ಕೇ ಲಕ್ಕೇ ಕುಯಾ ಎಂಬುದಾಗಿ ಅತ್ಯಂತ ಉತ್ಸಾಹದಿಂದ ಕೂಗುತ್ತಾ ಸುತ್ತಿಕೊಂಡು ಬಂದ ನಂತರ ಮನೆಯ ಹೆಗ್ಗಂಬಕ್ಕೆ ಕಟ್ಟಿ ಪೂಜೆ ಸಲ್ಲಿಸುತ್ತಾರೆ. ಇದರಲ್ಲಿ ಗಾಳಿ ಬೀಜವೇ ಮೊದಲಾದ ಸೊಪ್ಪುಗಳನ್ನು ಅಗತ್ಯ ಬಿದ್ದಾಗ ಔಷಧಿಗೆ ಬಳಸುತ್ತಾರೆ. ಪ್ರಾಯಶಃ ಈ ಆಚರಣೆ ಪೈರುಗಳಿಗೆ ಬೀಳುವ ಸಾಂಕ್ರಾಂಮಿಕ ರೋಗವನ್ನು ತಡೆಗಟ್ಟುವುದೇ ಆಗಿರಬಹುದು.

ಇದಾದ ಮರುದಿನ ನರಕ ಚತುರ್ದಶಿ, ಅಂದು ಎಲ್ಲೆಡೆಯಲ್ಲಿಯೂ ಮಣ್ಣಿನ ಅಥವಾ ಹಿಂದಲಿಚ್ಛೆ ಕಾಯಿನ ಹೋಳುಗಳಿಂದ ಮಾಡಿದ ದೀಪಕ್ಕೆ ಎಣ್ಣೆ ಹಾಕಿ ಹಚ್ಚಿಡುತ್ತಾರೆ. ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಆರತಿ ಬೆಳಗುವ ಸಂಪ್ರದಾಯವು ಸಂಭ್ರಮದಿಂದ ನಡೆಯುತ್ತದೆ. ಇದಕ್ಕೆ ಪೂರಕವಾಗಿ ಸೂರ್ಯಪುತ್ರನಾದ ಯಮದೇವನು ತನ್ನ ತಂಗಿಯ ಮನೆಯಲ್ಲಿ ಹೋಗಿ ಉಂಡದ್ದನ್ನು ಉದಾಹರಿಸುತ್ತಾರೆ. ಹೀಗೆ ಆರತಿ ಬೆಳಗಿಸಿಕೊಂಡರೆ ಆಯುಷ್ಯ ಹೆಚ್ಚಾಗುತ್ತದೆಂದೂ ಹೇಳುತ್ತಾರೆ. ಅಮಾವಾಸ್ಯೆಯಂದು ಅಭ್ಯಂಜನ ಸ್ನಾನ ಲಕ್ಷ್ಮೀಪೂಜೆ ನಡೆಸುತ್ತಾರೆ. ಬಲಿಪಾಡ್ಯಮಿಯಂದು ಬಲಿಚಕ್ರವರ್ತಿಯ ಕರುಹಾಗಿ ಆಚರಿಸುತ್ತಾರೆ. ಇದರಲ್ಲಿ ನೀರು ‘ತುಂಬುವ ಹಬ್ಬ’ ಆಚರಿಸುವ ದಿನವಂತೂ, ಮನೆಯ ಎಲ್ಲಾ ಕಡಾಯಗಳನ್ನೂ ಸ್ವಚ್ಛಗೊಳಿಸಿ ಅವುಗಳ ನೀರು ತುಂಬಿ ಮಾಹೇಶ್ವರ ಬಳ್ಳಿಯನ್ನು ಸುತ್ತ ಕಟ್ಟಿ ಅರಿಶಿಣ ಕುಂಕುಮಗಳನ್ನು ಹಚ್ಚಿ ಚಿತ್ತಾಕರ್ಷಕ ರಂಗವಲ್ಲಿಗಳನ್ನು ಬಿಟ್ಟು ಭಕ್ತಿಯಿಂದ ಪೂಜಿಸುವರು. ಮಾಹೇಶ್ವರ ಅಥವಾ ಲಿಂಗದಕಾಯಿ ಬಳ್ಳಿಯನ್ನು ಕಟ್ಟುವುದರ ಉದ್ದೇಶವಾದರೂ ಏನೆಂದರೆ ಶನಿಯು ತನ್ನ ಜನ್ಮಕ್ಕೆ ಕಾಲು ಜಾವವಾದರೂ ಬರುತ್ತೇನೆಂದು ಹೇಳಿದಾಗ ಶಿವ ಹೆದರಿ ಈ ಬಳ್ಳಿಯ ಕಾಯಿಯಲ್ಲಿ ಅಡಗಿ ಕುಳಿತಿದ್ದಾನೆಂದೂ, ಅದನ್ನು ಹಂಡೆಗೆ ಕಟ್ಟುವುದರಿಂದ ತಮಗೂ ಯಾವ ತೊಂದರೆಗಳೂ ಬರುವುದಿಲ್ಲವೆಂದೂ ನಂಬಿದ್ದಾರೆ.

‘ಉಂಡದ್ದೇ ಉಗಾದಿ, ಮಿಂದದ್ದೇ ದೀವಳಿಗೆ, ಉಪವಾಸವಿದ್ದದ್ದೇ ಏಕಾದಶಿ’ ಎಂಬ ಮಾತುಗಳಿಂದ ದೀಪಾವಳಿಯಲ್ಲಿ ಮೈಮನಗಳು ಶುಭ್ರವಾಗುವ ಹಾಗೂ ಅದರ ಆಚರಣೆಯ ವೈಶಿಷ್ಟ್ಯವನ್ನು ಸಾರಿ ಹೇಳುತ್ತವೆ. ದೀಪಾವಳಿ ಅಮವಾಸ್ಯೆಯಲ್ಲಿ ದನಕರುಗಳಿಗೆ ಕಮ್ಮಾರನು ಕಾಯಿಸಿದ ಕಬ್ಬಿಣದ ಬಳೆಯಿಂದ ಬರೆಹಾಕುವ ಸಂಪ್ರದಾಯವೂ ಉಂಟು. ಭೂಮಿ ಹುಣ್ಣಿಮೆಯೆಂದು ಭೂಮಿ ಪೂಜಿಸಿ ಕಡುಬನ್ನು ಭೂದೇವಿಗೆಂದು ಒಂದೆಡೆ ಇಟ್ಟು ಬಂದಿರುತ್ತಾರೆ. ದೀಪಾವಳಿಯಂದು ಜಮೀನಿಗೆ ಹೋಗಿ ದೀಪ ಹಚ್ಚಿಟ್ಟು ಬರುತ್ತಾರೆ. ಆಗ ಆ ಬೆಳಕಿನಲ್ಲಿ ಭೂದೇವಿ ಅದನ್ನು ತಿನ್ನುತ್ತಾಳೆ ಎಂದು ನಮ್ಮ ಜನ ನಂಬಿದ್ದಾರೆ. ಹೀಗೆ ಹಲವಾರು ಸಂಪ್ರದಾಯಗಳು, ನಂಬಿಕೆಗಳು ರೂಢಿಯಲ್ಲಿ ಬಂದು ಆಚರಿಸುತ್ತಿರುವುದನ್ನು ಇಂದೂ ಕಾಣಬಹುದಾಗಿದೆ. ಇದರಂತೆಯೇ ದೀಪಾವಳಿಯ ರಾತ್ರಿಯಲ್ಲಿ ಕಂಡು ಬರುವ ದೀಪಾವಳಿಗೆ ದಂಡುಗಳ ವಿವಿಧ ಬಗೆಯ ಗೀತ ಮೇಳಗಳ ಸಂಪ್ರದಾಯ ಅಪೂರ್ವವಾದುದು. ಹಾಡು ಕುಣಿತ ಈ ಮೇಳಗಳ ಪ್ರಧಾನ ಅಂಗ. ಹೆಣ್ಣುಮಕ್ಕಳ ಮೇಳದಲ್ಲಿ ಲಾಲಿತ್ಯ ಮಾಧ್ಯುರ್ಯ, ನಯವಿನಯ ಹಾಗೂ ಸಾಮ್ಯತೆಯನ್ನು ಗುರುತಿಸುವುದಾದರೆ ಗಂಡುಮಕ್ಕಳ ಹಾಡುಗಳಲ್ಲಿ ಒರಟುತನ, ಕಾಮಪ್ರೇಮಗಳ ಸಲ್ಲಾಪ, ಕುಚೋದ್ಯ ಇವುಗಳನ್ನು  ಕಾಣುತ್ತೇವೆ. ಭಾಗವಂತಿಕೆ ಮೇಳ. ಅಂಟಿಕೆ-ಪಂಟಿಗೆ ಮೇಳ, ಪಂಜಿನ ಮೇಳ, ಪೀಡೆಯ ಹಾಡುಗಳ ಮೇಳ ಅಥವಾ ಅಣಿ ಪೀಣಿ ಹಾಡಿನ ಮೇಳ ಮುಖ್ಯವಾದವು.

ಭಾಗವಂತಿಕೆ ಮೇಳವು ಮಂಡ್ಯ, ತುಮಕೂರು, ಹಾಸನ ಈ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಭಾಗವಂತರು ಪಾನ, ಬಾವುಟಗಳನ್ನು ತೆಗೆದುಕೊಂಡು ಊರಾಡಲು ಹೊರಡುತ್ತಾರೆ. ಇವರನ್ನು ದೀವಳಿಗೆ ದಂಡು ಎಂದೂ ಕರೆಯುವುದುಂಟು. ಇವರು ವಿಷ್ಣುವನ್ನು ಪ್ರತಿನಿಧಿಸುವ ರಂಗಸ್ವಾಮಿ ನರಸಿಂಹಸ್ವಾಮಿ, ವೆಂಕಟರಮಣಸ್ವಾಮಿ, ರಾಮದೇವರು ಮುಂತಾದ ದೈವಗಳಿಗೆ ಸಂಬಂಧಿಸಿದ ಹಾಡುಗಳನ್ನೂ ಹಾಡುತ್ತಾರೆ. ಆಕಸ್ಮಾತ್ ದಾರಿಯಲ್ಲಿ ಹೋಗುವಾಗ ಒಂದು ಮೇಳ ಇನ್ನೊಂದು ಮೇಳಕ್ಕೆ ಎದುರಾದರೆ ಹಾಡಿನ ಪೈಪೋಟಿ ನಡೆಯುತ್ತದೆ. ಸೋತವರು ಕಂಬಳಿ ಗದ್ದುಗೆ ಹಾಸಿ ಕಪ್ಪು ಕಾಣಿಕೆ ಕೊಟ್ಟು ಮುಂದೆ ಹೋಗಬೇಕು.

ಅಂಟಿಕೆ-ಪಂಟಿಕೆ ಸಂಪ್ರದಾಯವು ಮಲೆನಾಡಿಲ್ಲೇ ಹೆಚ್ಚು. ಇದನ್ನು ಜ್ಯೋತಿ ನೀಡುವುದೆಂದೂ, ದೀಪ ಕೊಡುವುದೆಂದೂ ಕರೆಯುವರು ರಾತ್ರಿ ವೇಳೆಯಲ್ಲಿ ಹುಡುಗರೆಲ್ಲಾ ಗುಂಪಾಗಿ ದೇವಸ್ಥಾನದಲ್ಲಿ ಮೊದಲು ಪೂಜೆ ನಡೆಸಿ ಜ್ಯೋತಿ ಹತ್ತಿಸಿಕೊಂಡು ಮನೆಮನೆಗೆ ಹೋಗುತ್ತಾರೆ.

ದೀಪೋಳಿಗೆನ್ನಿರೋ ನಮ್ಮೂರ ಗ್ರಾಮಕೆ
ದೀಪೋಳಿಗೆನ್ನಿರೋ ನಮ್ಮೂರ ಭೂತಾಗೆ
ದೀಪೋಳಿಗೆನ್ನಿರೋ ದೀಪೋಳಿಗೆ

ಎಂದು ಒಂದೊಂದು ದೈವದ ಮೇಲೂ ಬಿಡಿ ಹಾಡುಗಳನ್ನು ಹಾಡುತ್ತಾರೆ. ಪ್ರತಿ ಮನೆಗೆ ಹೋದಾಗಲೂ ಆ ಮನೆಯ ಗರತಿ ಈ ಜ್ಯೋತಿಯಿಂದ ತಮ್ಮ ಮನೆಯ ದೀಪ ಹಚ್ಚಿಕೊಂಡು. ಈ ದಂಡಿಗೆ ದವಸ ಧಾನ್ಯಗಳನ್ನು ಕೊಟ್ಟು ಬೀಳ್ಕೊಡುತ್ತಾರೆ. ಹೀಗೆ ಈ ದೀವಳಿಗೆಯ ದೀಪದಾರಿಗಳು ದೊಡ್ಡ ತಂಡದಲ್ಲಿ ನೆರೆಯ ಊರುಗಳಿಗೆ ಹೊರಡುತ್ತಾರೆ. ಕವಿದ ಕತ್ತಲಿನಲ್ಲಿ ಕಾಡಿನ ನಡುವೆ ಕೇಕೆ ಹಾಕುತ್ತಾ ‘ದೀಪ್ ದೀಪೋಳ್ಗೆ’ ಎಂದು ಕೂಗುತ್ತಾ ಸಾಗುತ್ತಾರೆ. ಪಂಜಿನವರು, ಲಾಟೀನಿನವರು ಜೊತೆಯಲ್ಲಿರುತ್ತಾರೆ. ಹೀಗೆ ದೀಪಾವಳಿಯ ಮೂರುದಿವಸ ಹಾಡುವಾಗ ಹಿಡಿದ ಜ್ಯೋತಿ ಮಾರ್ಗ ಮಧ್ಯದಲ್ಲಿ ನಂದಬಾರದೆಂದೂ ನಂದಿದರೆ ಕೇಡಾಗುತ್ತದೆಂದೂ ನಂಬಿದ್ದಾರೆ. ಕೊನೆಯ ದಿವಸ ದೇವಸ್ಥಾನದಲ್ಲಿ ಅಡಿಗೆ ಮಾಡಿ ಎಲ್ಲರಿಗೂ ಊಟ ಹಾಕುತ್ತಾರೆ.

ಇದರಂತೆಯೇ ಉತ್ತರ ಕರ್ನಾಟಕದ ಭಾಗದಲ್ಲಿ ಪೀಡೆಯ ಹಾಡುಗಳು ಅಥವಾ ಅಣಿ ಪೀಣಿ ಹಾಡುಗಳು ಈ ಸಂದರ್ಭದಲ್ಲಿ ಕಂಡು ಬರುತ್ತವೆ. ಜೋಳದ ದಂಟು ಇಲ್ಲವೆ, ಬೇವಿನ ಗರಿಗಳಿಂದ ಗೂಡುಕಟ್ಟಿಕೊಂಡು ಹಾಡುತ್ತಾ ಬರುತ್ತಾರೆ. ಹಾಡುವುದು, ಶುಭಕ್ಕಾಗಿ, ಕೃತಜ್ಞತೆಗಾಗಿ, ಉತ್ಸಾಹಕ್ಕಾಗಿ, ಪೂಜ್ಯಭಾವನೆಗಾಗಿ ಹಾಗಿದ್ದರೂ ಇವುಗಳಿಗೆ ಪೀಡೆಯ ಹಾಡುಗಳೆಂದು ಕರೆದಿದ್ದಾರೆ. ಪ್ರಾಯಶಃ ತಮ್ಮ ದನಕರುಗಳಿಗೆ ತಗಲಬಹುದಾದ ಪೀಡೆಗಳ ನಿವಾರಣೆಗಾಗಿ ಹಾಡುವ ಹಾಡುಗಳಾದ್ದರಿಂದ ಹಾಗೆ ಕರೆದಿರಬಹುದೇನೊ.

ಪೀಡೆಯ ಹಾಡಗಳೆಲ್ಲಾ ಲಘುಚಿತ್ರಣಗಳಿಂದ ಕೂಡಿರುತ್ತವೆ. ಇಲ್ಲಿ ಬರುವ ಚಿತ್ರಣಗಳೆಲ್ಲಾ ಕೇವಲ ಸಾಂದರ್ಭಿಕ ಮಹತ್ವ ಉಳ್ಳವು. ಅಂದ ಮಾತ್ರಕ್ಕೆ ಬದುಕಿನಿಂದ ಹೊರಗೆ ಉಳಿಯಲಾರವು. ಹೋಲಿಕೆಗಳು ವರ್ಣನೆಗಳು, ಪ್ರಶ್ನೋತ್ತರ ಜರಿಯುವಿಕೆಗಳು ಹೆಚ್ಚಾಗಿ ಇರುವುದರಿಂದ ಇವೆಲ್ಲಾ ತುಣುಕುಗಳಾಗಿ ಚುಟುಕುಗಳಾಗಿ ಬರುತ್ತವೆ. ಇಲ್ಲಿ ಕಾಣಬರುವ ಎಲ್ಲಾ ಹಾಡುಗಳು “ಅಣಿ ಪೀಣಿ ಜಾಂದೊ ಸೇರ ಖೊಬರಿ ಬಿರಂಜ್ಯೋ” ಎಂಬ ಸಾಲಿನಿಂದ ಮುಕ್ತಾಯವಾಗುತ್ತವೆ.

ಉದಾಹರಣೆಗಾಗಿ ಈ ಒಂದು ಹಾಡನ್ನು ನೋಡಬಹುದು.

ಹೊತ್ತ ಹೊಯ್ತು ಲಾಲೂ ಕತ್ತಲಾಯ್ತು ಲಾಲೂ
ಹನ್ನೆಡತ್ತಿನ ಬಾಲಾ
ಬಾಲದ ಮ್ಯಾಲಿ ಭಂಡಿ

ಭಂಡಿ ಮ್ಯಾಲ ನವಲಿ
ನವಲ ಪುಚ್ಚ ಒಯ್ಯೆ
ಚಮಿ ಖೋಡಿಗಿ ಹಚ್ಚೊ

ನಾಚಿಕೆ ಬಂತೋ ಮಾವಾ
ಮಾವನ ಕುಂಡ್ಯಾಗ ಮ್ಯಾಣ
ಮ್ಯಾಣ ತೆಗಿ ಜಾಣಿ

ಜಾಣಿ ಕಾಲ್ಯಾಗ ಫಿಲ್ಯಾ
ಪಿಲ್ಯಾ ಫೀರಗರಿಗಿ ಗ್ವಾಡ್ಯಾಗ ಹಾಯ್ಕೊಂಡ ಡೆಂಗಿ
ಅಣಿ ಪೀಣಿ ಜಾಂದೊ ಸೇರ ಖೊಬ್ಬರಿ ಬಿರಂಜ್ಯೋ

ಆಗ ತಾನೆ ಮದುವೆಯಾದ ದಂಪತಿಗಳಿಬ್ಬರು ಏಕಾಂತವಾಗಿ ಬಂಡಿಯಲ್ಲಿ ಹೋಗುತ್ತಿದ್ದಾರೆ. ಆರು ಜೊತೆ ಎತ್ತುಗಳನ್ನು ಹೂಡಿ ಅಳಿಯನನ್ನು ಬೀಳ್ಕೊಡುವ ಸಂಭ್ರಮವನ್ನು ಮಾವನ ಮನೆಯವರು ಪ್ರದರ್ಶಿಸಿದ್ದಾರೆ. ಅದು ಸ್ವತಂತ್ರ ಬದುಕಿನತ್ತ ಹೊರಟ ಪ್ರಯಾಣವೂ ಆಗಬೇಕು ನವದಂಪತಿಗಳಿಗೆ ಮಧುಚಂದ್ರವೂ ಆಗಬೇಕು ಇದು ಅವರ ಉದ್ದೇಶ. ಪ್ರಯಾಣ ಸಾಗುತ್ತಿದ್ದಂತೆ ಹೊತ್ತು ಮುಳುಗುತ್ತದೆ. ಕತ್ತಲಾಗುತ್ತದೆ. ಕತ್ತಲಾವರಿಸುತ್ತಿದ್ದಂತೆ ನಲ್ಲೆಯ ನಾಚಿಕೆ ಬೆಚ್ಚಗಾಗುತ್ತದೆ. ಹತ್ತಿರ ಹತ್ತಿರ ಸರಿಯುತ್ತಿದ್ದಾಳೆ. ಪಿಲ್ಲಿಯ ಆಸೆ ತೋರಿಸಿ ಆಕರ್ಷಿಸಲು ಯತ್ನಿಸುತ್ತಾನೆ. ಸಫಲನಾಗುತ್ತಾನೆ. ಕತ್ತಲಲ್ಲಿ ಚಲಿಸುತ್ತಿರುವ ಬಂಡಿಯೊಳಗೆ ಅವನು ಕೊಟ್ಟ ಪಿಲ್ಲಿಯಾದರೂ ಎಂಥದು.

ಈ ಹಾಡುಗಳಲ್ಲಿ ದನಗಳಿಗೆ ಸಂಬಂಧಿಸಿದವು ಮಾತ್ರವೇ ಅಲ್ಲದೆ, ನಾನಾ ವಸ್ತು ವಿಷಯದ ಹಾಡುಗಳೂ ಬರುತ್ತವೆ. ಇವು ಬರಿಯ ಕುಚೋದ್ಯ ಮಾತ್ರವೇ ಆಗಿರುವುದಿಲ್ಲ.

ಮೇಲೆ ಕಂಡ ಎರಡು ಸಂಪ್ರದಾಯಗಳಿಗಿಂತಲೂ ಭಿನ್ನವಾದ ವಿಶಿಷ್ಟವಾದ ಮೇಳ ‘ಪಂಜಿನ ಮೇಳ’ ದೀಪಾವಳಿ ಏಳೆಂಟು ದಿವಸಗಳಿವೆ ಎನ್ನುವಾಗಲೇ ಊರಿನ ತಳವಾದ ಮನೆಗೊಂದರಂತೆ ಪಂಜುಗಳನ್ನು ತಂದು ಕೊಡುತ್ತಾನೆ. ದೀಪಾವಳಿ ಮೊದಲ ರಾತ್ರಿಯಿಂದಲೇ ಊರಿನ ಹುಡುಗರೆಲ್ಲಾ ದೇವಸ್ಥಾನದ ಮುಂದೆ ಸೇರಿಕೊಂಡು ಪಂಜು ಹತ್ತಿಸಿಕೊಂಡು ಊರಾಡಲು ಹೊರಡುತ್ತಾರೆ. ಪ್ರತಿ ಮನೆಯ ಮುಂದೆಯೂ ದುಂಡಾಗಿ ನಿಂತು ಪಂಜುಗಳನ್ನೆಲ್ಲಾ ಒಟ್ಟಾಗಿ ಉರಿಸುತ್ತಾ ಅವರ ಮನೆಯಲ್ಲಿನ ಜನರನ್ನು ಕುರಿತಂತೆ, ಅಂದರೆ ಗಂಡ ಹೆಂಡಿರ ಮೇಲೆ ಮಗಳ ಮೇಲೆ ಹಾಡು ಹೇಳಿ ಕೂಗುತ್ತಾರೆ.

ಗೂಗೆಣ್ಣ ಗೊಗೆಣ್ಣನೇಣ್ತಿ ಏನೇನ್ ಮಾಡ್ತಿದ್ರು
ಕಾಲ್ ಮೇಲ್ ಕಾಲ್ ಹಾಕ್ಕಂಡು ಲೋಲ್ ಲೋಲ್ ಮಾಡ್ತಿದ್ರು
ಲೋಲೆ ಹೋಗಿ ಕೀಲೇ ಬಿತ್ತು ಆಹೋಲರೇ

ಈ ಹಾಡುಗಳಲ್ಲಿ ಪಂಜುಧಾರಿಗಳ ದಂಡು ಯಾರನ್ನು ಬೇಕಾದರೂ ಹೇಗೆ ಬೇಕಾದರೂ ತರಾಟೆಗೆ ತೆಗೆದುಕೊಳ್ಳುತ್ತದೆ.

ಆ ಮುಚ್ಚು ಈ ಮುಚ್ಚು ನೆಲ್ಲಕ್ಕಿ ಮಚ್ಚು
ಕೆಂಪಾನ ಹೆಣ್ಣಿಗೆ ದವಲತ್ತು ಹೆಚ್ಚು ಆಹುಡೇ
ಆ ಕಂಕಿ ಈ ಕಂಕಿ ಜೋಳಾದ ಕಮಕಿ

ನಮ್ಮುರಾಗೊಬ್ಬಳು ಕುರುಬಾರ ಪಂಕಿ
ಅವಳತ್ರ ಹೋದಾರೆ ಮೈಯೆಲ್ಲಾ ಬೆಂಕಿ ಆಹುಡೇ

ದೊಡ್ಡವರನ್ನಾಗಲಿ, ಅವರ ಹೆಣ್ಣುಮಕ್ಕಳನ್ನಾಗಲೀ ನೇರವಾಗಿ ಹೆಸರು ಹಿಡಿದೇ ಹಾಡುಟ್ಟಿ ಬಯ್ದುರೂ ದೀಪಾವಳಿಯ ಈ ಮೂರುದಿನ ರಾತ್ರಿ ಮಾತ್ರ ಯಾರೂ ಏನೂ ಬಯ್ಯುವಂತಿಲ್ಲ. ಇಂತಹ ವಿಶಿಷ್ಟ ಸಂಪ್ರದಾಯವೊಂದು ಈಗಲೂ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆಚರಣೆಯಲ್ಲಿದೆ. ಜನಪದರು  ಮಾನ ಮರ್ಯಾದೆಗೆ ಹೆಚ್ಚು ಪ್ರಾಶಸ್ತ್ಯ ನೀಡಿದವರು. ಒಂದು ಸಣ್ಣ ತಪ್ಪು ಅಥವಾ ಬಾಯಿ ತಪ್ಪಿ ಒಂದು ಕೆಟ್ಟ ಶಬ್ದ ಬಂದರೂ ಅದಕ್ಕೆ ದಂಡ ವಿಧಿಸುವಂತಹವರು. ಹೆಂಡತಿ, ಮೆಟ್ಟ, ಕೆರ, ಸೂಳೆಮಗನೆ, ಬೊಳೀ ಮಗನೆ, ಈ ತರಹದ ಪ್ರಯೋಗ ಜಗಳವಾಡುವಾಗಲೂ ಕೂಡ ಆಡಿದರೆ, ಆ ಮಾತಿಗಾಗಿಯೇ ಹೊಡೆದಾಡಿ ರಕ್ತ  ಹೀರುವಂತಹ ವೀರ ಪೌರುಷತ್ವದ ಪ್ರಾಮಾಣಿಕ ಜನ. ಆದರೆ ಇಂತಹದೊಂದು ಸಂಪ್ರದಾಯವನ್ನು ದೀಪಾವಳಿಯಲ್ಲಿ ಏಕೆ ನಡೆಸಿಕೊಂಡು ಬರುತ್ತಿದ್ದಾರೆಂಬುದು ಆಶ್ಚರ್ಯದ ಸಂಗತಿಯಾಗಿದೆ.

ಮೇಲೆ ನೋಡಿದ ಅಂಟಿಕೆ ಪಂಟಿಕೆ, ಭಾಗವಂತಿಕೆ, ಮೇಳದಲ್ಲೂ ದೀಪಗಳನ್ನು ಪಂಜುಗಳನ್ನು ಬಳಸುವುದು ಕಂಡುಬರುತ್ತದೆ. ರಾತ್ರಿ ಹೊತ್ತು ಹಾಡುತ್ತಿದ್ದರಿಂದ ಅದರ ಅವಶ್ಯಕತೆ ಇತ್ತು ನಿಜ. ಆದರೆ ಮನಶ್ಯಾಸ್ತ್ರೀಯ ದೃಷ್ಟಿಯಿಂದ  ಆಲೋಚನೆ ಮಾಡಿದರೆ ದೀಪ, ಪಂಜು ಏನೇ ಅಗಿರಲಿ ಅದೊಂದು ಬೆಳಕು. ಇದು ಜ್ಞಾನದ ಸಂಕೇತವಾಗಿದ್ದು, ಜನರಿಗೆ ತಮ್ಮ ಅಜ್ಞಾನದ ಅಂಧಕಾರದ  ಅರಿವನ್ನು ಎತ್ತಿ ತೋರಿಸುವ ಒಂದು ಸಂಪ್ರದಾಯವಾಗಿ ಬೆಳೆದು ಬಂದಿರಬೇಕು. ಇಲ್ಲಿ ಹೇಳುವ  ಹಾಡುಗಳು ಬರಿಯ ಬಯ್ಗುಳದ, ನಿಂದೆಯ, ಹೊಟ್ಟೆಕಿಚ್ಚಿನ ಮಾತಾಗಿರದೆ ಜೀವನದ ಕಟು ಸತ್ಯವನ್ನು ಸೂಚಿಸುತ್ತಿರಬಹುದು. ‘ಏಕೆಂದರೆ ಊರೆಂದ ಮೇಲೆ ಹೊಲಗೇರಿ ಇದ್ದೇ ಇರುತ್ತದೆಂಬ’ ಮಾತನ್ನು ಒಪ್ಪುವುದಾದರೆ ಊರಿನಲ್ಲಿ ಗೌಡನಾಗಲಿ, ಬುದ್ದಿವಂತನಾಗಲಿ, ಅರಿತೋ ಅರಿಯದೆಯೋ ಕಂಡೋ ಕಾಣದೆಯೋ ಜೀವನದಲ್ಲಿ ತಪ್ಪನ್ನು ಮಾಡೇ ಮಾಡಿರುತ್ತಾನೆ. ಕಾಮುಕರು ಬಲಾಢ್ಯರಾಗಿದ್ದು ಊರಿನ ಹೆಣ್ಣುಮಕ್ಕಳ ಮಾನ ಹರಣ ಮಾಡಿದ್ದರೂ, ಬಡವರು ಅಸಹಾಯಕರಾಗಿದ್ದು ಎದುರು ಬೀಳದೆ ಸುಮ್ಮನಿದ್ದು ವರ್ಷಕೊಮ್ಮೆ ಇಂತಹ ಸಂದರ್ಭ ಬಂದಾಗ ಎಲ್ಲರೂ ಒಗ್ಗೂಡಿ ಅವರ ತಪ್ಪುಗಳನ್ನು ಬಯಲಿಗೆಳೆಯಲಿಕ್ಕೆ ಅವರನ್ನು ತಿದ್ದಲಿಕ್ಕೆ ಇದೊಂದು ಸುಸಂದರ್ಭವನ್ನು ಕಲ್ಪಿಸಿರಬಹುದೇನೊ? ತನ್ನ ಮಾನ ಊರಿಗೆಲ್ಲಾ ಟಾಂ ಟಾಂ ಆಗುವುದೆಂದು ಮುಂದೆ ಇಂತಹ ಕೆಲಸ ಮಾಡಲಿಕ್ಕೆ ಹಿಂಜರಿಯಲೂಬಹುದು. ಹೀಗೆ ಈ ಹಾಡುಗಳು ಸಮಾಜವನ್ನು ತಿದ್ದುವ, ಸೋಸುವ, ತಮ್ಮ ತಪ್ಪಿನ ಅರಿವನ್ನು ತೋರಿಸುವ, ಆ ಮೂಲಕ ಸಮಾಜವನ್ನು ಕೆಲವು ನೀತಿ ನಿಯಮಗಳ ಕಟ್ಟಿನಲ್ಲಿಟ್ಟು ಸನ್ಮಾರ್ಗದತ್ತ ನಡೆಸುವ ಸಂಪ್ರದಾಯವಾಗಿ ಉಳಿದು ಬಂದಿರಬೇಕು.

ಗಂಡು ಮಕ್ಕಳ ಹಾಡುಗಳ ವೈಖರಿ ಈ ತೆರನಾಗಿದ್ದರೆ, ಹೆಣ್ಣು ಮಕ್ಕಳ ಹಾಡುಗಳು ಭಯಭಕ್ತಿ, ಪ್ರೀತಿ ವಾತ್ಸಲ್ಯಗಳನ್ನು ವ್ಯಕ್ತಪಡಿಸುತ್ತವೆ. ಕೋಟೆ ಬಸವಣ್ಣನನ್ನು ಮಣ್ಣಿನಲ್ಲಿ ಅಥವಾ ಕಲ್ಲಿನಲ್ಲಿ ಮಾಡಿ ಹಾಡು ಹೇಳುತ್ತಾರೆ. ಅದೆಂದರೆ ಬೆಳದಿಂಗಳಪ್ಪನ ಪೂಜೆಯ ಮಾದರಿಯಲ್ಲಿಯೇ ಇರುತ್ತದೆ. ಒಂದೊಂದು ಬೀದಿಯ ಹುಡುಗಿಯರೆಲ್ಲಾ ಒಟ್ಟಿಗೆ ಒಂದು ಮನೆಯ ಅಂಗಳದಲ್ಲಿ ಸೇರಿ ಗದ್ದುಗ ಮಾಡಿ ಬಸವಣ್ಣನನ್ನಿಟ್ಟು ಹೂ ಪತ್ರೆಗಳಿಂದ ಪೂಜಿಸಿ, ಹಣ್ಣು, ಕಾಯಿ ಒಡೆದು, ಹಾಲುಬೆಲ್ಲ. ಚಿಗಳಿ ತಂಬಿಟ್ಟು ನೈವೇದ್ಯ ಮಾಡಿ ಕಡಲೆ ಮಂಡಕ್ಕಿ ಫಲಾರ ಮಾಡುವರು. ಇಡೀ ರಾತ್ರಿ ಹಾಡು ಹೇಳುತ್ತಾ ಕೋಲಾಟವಾಡುತ್ತಾ ಬಸವನನ್ನು ಎರಡು ಮೂರು ಸಾರಿ ಕರೆಗೆ ಒಯ್ದು ನೀರು ಕುಡಿಸಿಕೊಂಡು ಬರುವರು. ಹೀಗೆ ಒಂದು ರಾತ್ರಿ ಕಳೆದರೆ, ಮತ್ತೊಂದು ದಿವಸ ಅಂದರೆ ಕೆರಕವನ್ನಿಟ್ಟು ದಿವಸ, ಐದು ದೀಪಗಳನ್ನು ಹಿಡಿದುಕೊಂಡು ಮನೆ ಮನೆಗೆ ಹಾಡು ಹೇಳುತ್ತಾ ಹೋಗುವರು.

ಹರಕ ನೆಲ್ಲ ಮೇಲೆ
ಒಡಕ ಸೋರೆ ಇಟ್ಟುಕೊಂಡು
ಕೆರಕೆರದೆಣ್ಣೆ ಬಿಡೆ ದ್ಯಾಮವ್ವೋ ದ್ಯಾಮವ್ವೋ

ಆ ಮನೆಯ ಗರತಿಯ ಜಿಪುಣತನವನ್ನೊ ಧಾರಾಳತನವನ್ನೂ ಹಾಡಿನಲ್ಲಿ ಹೇಳುತ್ತಿದ್ದಾರಲ್ಲದೆ, ನೀತಿಯುಕ್ತವನ್ನೂ, ಪ್ರೇಮಗೀತೆಗಳನ್ನು ಹಾಡುತ್ತಾರೆ.

ಕೆಲವೆಡೆ ದೀಪಾವಳಿ ಮೂರನೆ ದಿನ ಕೊಂತಿ ಪೂಜೆ ಮಾಡುವ ಸಂಪ್ರದಾಯವೂ ಇದೆ. ತ್ರಿಕೋನಾಕಾರದ ಕಲ್ಲಿಗೆ ಹರಳೆಣ್ಣೆ ಸವರಿ ಅದಕ್ಕೆ ಅವರಿಕೆ ಹೂವಿನಿಂದ ಕಣ್ಣು, ಮೂಗು, ಬಾಯಿ, ಹೊಕ್ಕಳ ತಿದ್ದಿ, ಅವರಿಕೆ ಹೂವು, ಹುಚ್ಚೆಳ್ಳು ಹೂಗಳನ್ನು ಮತ್ತು ಇತರೆ ಹೂಗಳನ್ನು ಮುಡಿಸಿ ಎರಡೂ ಪಕ್ಕಕ್ಕೆ ದೀಪ ಹಚ್ಚಿಟ್ಟು ಹಾಡುತ್ತಾರೆ. ಕೋರು ಹುಡುಗರು ಇಲ್ಲವೆ ಪಡ್ಡೆ ಹುಡುಗರು, ಹೆಣ್ಣಿನಂತೆ ದೇವರು ತರುತ್ತಾರೆ. ಒಂದು ಮಾತಿನಲ್ಲಿ ಹೇಳುವುದಾದರೇ ಅಣುಕು ಮದುವೆಯನ್ನು ಮಾಡುತ್ತಾರೆ. ಪಾಂಡವರ ತಾಯಿ ಕುಂತಿಯ ನೆನಪನ್ನು ಮಾಡಿಕೊಂಡು ಆ ಮೂಲಕ ಜೀವನದಲ್ಲಿ ಒದಗಬಹುದಾದ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ಪಡೆಯುವ ಆಶಯ ಇದರಲ್ಲಡಗಿದೆ ಎನ್ನಬಹುದು.

ದೀಪಾವಳಿಹಬ್ಬ ಸಂಪೂರ್ಣವಾಗಿ ರೈತನ ಬೆನ್ನೆಲುಬುವಾದ ದನ ಕರುಗಳಿಗೆ ಮತ್ತು ತಾನು ಬೆಳೆಯುವ ಪೈರಿಗೆ ಸಂಬಂಧಿಸಿದ ಆಚರಣೆಯೇ ಹೌದು. ಸಗಣಿ ಪೈರನ್ನು ಸಿಕ್ಕಿಸುವುದು; ಪೂಜಿಸುವುದು ಅದನ್ನು ಪಾಂಡವರೆಂದು ಕರೆಯುವುದು, ಹಟ್ಟಿಯ ಬಾಗಿಲಿನಿಂದ ನಡುಮನೆಯವರೆಗೆ ಸುಣ್ಣದ ಬೊಟ್ಟಿಡುತ್ತಾ ಪಾಂಡವರ ಹೆಜ್ಜೆ ಎನ್ನುವುದು, ಇದೆಲ್ಲಾ ಕಲಿತವರಿಗೆ ಕಾಲ್ಪನಿಕವೆನಿಸಿದರೂ ನಮ್ಮ ಜಾನಪದರಿಗೆ ಪಾಂಡವರಂತಹ ಪುಣ್ಯಾತ್ಮರನ್ನು ನೆನೆಯುವುದು, ಅವರ ಹಾದಿಯಲ್ಲೇ ನಡೆಯಬೇಕೆನ್ನುವುದಕ್ಕಾಗಿ ರಾಮಾಯಣ ಮಹಾಭಾರತಕ್ಕೆ ಸಂಬಂಧಿಸಿದ ಐತಿಹ್ಯಗಳು ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಕಂಡು ಬರುವುದು ಸಾಮಾನ್ಯವಾದ ಸಂಗತಿ.

ನನ್ನ ಲೇಖನದಲ್ಲಿ ದಕ್ಷಿಣ ಕರ್ನಾಟಕದ ಆಚರಣೆ ನಂಬಿಕೆ ಸಂಪ್ರದಾಯಗಳನ್ನಷ್ಟೇ ಹೇಳಲು ಪ್ರಯತ್ನಿಸಿರುವೆನಾದರೂ ಉತ್ತರ ಕರ್ನಾಟಕದ ಕೆಲವು ಆಚರಣೆಗಳನ್ನು ಮಾತ್ರ ನಾನು ಹೇಳಿದ್ದೇನಷ್ಟೆ. ಏಕೆಂದರೆ ‘ಆಣಿಪೀಣಿ’ ಹಾಡುಗಳು ಈ ಭಾಗದಲ್ಲಿ ಸಾಕಷ್ಟು ದೊರೆಯುತ್ತವೆ. ಜನಪದ ಸಾಹಿತ್ಯದ ಇತರ ಪ್ರಕಾರಗಳಂತೆ ಇವೂ ಒಂದು ಭಾಗವಾಗುತ್ತವೆ. ಈ ಬಗ್ಗೆ ವಿದ್ವಾಂಸರು ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆ ಇದೆ. ಇಷ್ಟಲ್ಲದೆ ಆಚರಣೆಗಳು ನಂಬಿಕೆಗಳು ಕೂಡ ಪ್ರದೇಶದಿಂದ ಪ್ರದೇಶಕ್ಕೆ ಅಲ್ಪ ಸ್ವಲ್ಪ ವ್ಯತ್ಯಾಸವಾಗಿರಬಹುದು. ಆದರೂ ದೀಪಾವಳಿಯ ಮೂಲ ಆಶಯ ಮಾತ್ರ ಒಂದೇ. ಅದೆಂದರೆ, ಅಜ್ಞಾನವನ್ನು ಹೋಗಲಾಡಿಸಿಕೊಳ್ಳುವುದು, ಮತ್ತು ದನಕರುಗಳಲ್ಲಿ ಪೈರು ಪಚ್ಚೆಗಳಲ್ಲಿ ಸುಖ ಸಮೃದ್ಧಿಯನ್ನು ಪಡೆಯುವುದು.