’’ಹಬ್ಬ’ ಎನ್ನುವ ಪದ ಮೂಲತಃ ’ಪರ್ವ’ ಶಬ್ದದ ತದ್ಭವವಾಗಿದ್ದು ನಮ್ಮ ಜಾನಾಂಗಿಕ ಜೀವನದ ನಿರ್ದಿಷ್ಟ ಕಾಲದ ಉತ್ಸವಕ್ಕೆ ಸಂಕೇತವಾಗಿದೆ. ಪರ್ವ ಎಂದರೆ ಕಾಲ ವಿಭಜನೆ. ತಿಂಗಳ ಮೊದಲ ಅರ್ಧಾವಧಿಯೊಳಗೆ ಚಂದ್ರನಲ್ಲಿ ಉಂಟಾಗುವ ನಾಲ್ಕು ಬದಲಾವಣೆಗಳ ಕಾಲ: ವಿಶೇಷತಃ ಎಂಟನೆಯ ಮತ್ತು ಹದಿನಾರನೆಯ ದಿನ. ಮಾನವನ ಬಯಕೆ ಅಥವಾ ಇಚ್ಛೆಯ ಸಂಕಲ್ಪ; ವ್ರತ. ಆ ಇಚ್ಛೆಯ ಪೂರ್ಣತೆಗಾಗಿ ಒಂದು ನಿರ್ದಿಷ್ಟ ಅವಧಿಯಲ್ಲಿ ಬಲಿ ಅಥವಾ ಅರ್ಪಣೆ ಕೊಡುವ ಆಚರಣೆ. ಒಂದು ಕಾಲಾವಧಿಯಲ್ಲಿ ಕೈಕೊಳ್ಳುವ ಆಚರಣೆಗಳ ರೂಢಿ ಉತ್ಸವಗಳೇ ಹಬ್ಬ. ಹೀಗಾಗಿ ಆಚರಣೆಗಳಿಗೂ ಹಬ್ಬಗಳಿಗೂ ಬೇರ್ಪಡಿಸಲಾಗದ ಎರಕ. ಆದುದರಿಂದ ಹಬ್ಬಕ್ಕೆ ಸಂಪ್ರದಾಯ ಮತ್ತು ಆಚರಣೆಗಳೇ ಮೂಲ ಪ್ರೇರಕಾಂಶಗಳು. ಶಿಲಾಪೂರ್ವ ಯುಗದ ಪ್ರಾಣಿಮಾನವ. ಅನಂತರದ ಬುದ್ಧಿಮಾನವ, ಬುದ್ಧಿಮಾನವನಿಂದ ನಾಗರಿಕ ಮಾನವ, ನಾಗರಿಕತೆಯ ಬೆಳಗು. ಈ ವಿವಿಧ ಹಂತಗಳಲ್ಲಿ ನಮ್ಮ ಜನಾಂಗ ಜೀವನ ವಿಕಾಸಗೊಳ್ಳುತ್ತ ಬಂದುದೇ ಒಂದು ರೋಚಕ ಸಾಹಸಮಯ ಸಂಗತಿ. ಆದಿ ಮಾನವನಿಂದ ಮೊದಲುಗೊಂಡು ಕಾಲಾನುಕ್ರಮದಲ್ಲಿ ಬೆಳೆದು ಬಂದ ಬೇಟೆ, ಹಣ್ಣು, ಗಡ್ಡೆ ಗೆಣಸು ಸಂಗ್ರಹ, ಕೃಷಿ ಕ್ರಮ, ಕಲಿಕೆಯ ವಿಧಾನ, ಚರ್ಚೆ, ಆರಾಧನೆ, ಭಾವಾಭಿವ್ಯಕ್ತಿಯ ವಿವಿಧ ಮಾಧ್ಯಮಗಳು ಮಾನವನ ಒಟ್ಟು ಸಂಸ್ಕೃತಿ ಸ್ವರೂಪ ರಚನೆಯ ಅಧಾರ ವಸ್ತುಗಳು. ಮನುಷ್ಯನ ಅಸ್ತಿತ್ವದ ವಿವಿಧ ಹಂತಗಳು ಅವನ ಸಾಂಸ್ಕೃತಿಕ ಬೆಳವಣಿಗೆಯ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತ ಪರಿವರ್ತನೆಗೆ ಒಳಗುಮಾಡಿಕೊಳ್ಳುತ್ತ ಬಂದಿರುವ ಕಥೆಯೇ ಇತಿಹಾಸಪೂರ್ವ ಕಾಲದ ವಿಕಾಸದ ಕಥೆಯಾಗಿದೆ.

ಯಾವುದೇ ಜನಾಂಗದ ಈ ಸಾಂಸ್ಕೃತಿಕ ಬೆಳವಣಿಗೆಯನ್ನು ಗುರುತಿಸಲು ಮಹತ್ವದ ಆಕರಗಳೆಂದರೆ ಆಯಾ ಜನಾಂಗದ ನಂಬುಗೆ, ಶ್ರದ್ಧೆ, ಕ್ರಿಯಾಚರಣೆಗಳು, ಶಿಷ್ಟಪದ ಸಮಾಜ ರೂಪುಗೊಂಡು ತನ್ನ ಸಮಕಾಲೀನ ನಂಬುಗೆ ಶ್ರದ್ಧೆಗಳಿಗೆ ಒಂದು ನಿರ್ದಿಷ್ಟತೆಯನ್ನು ಕಲ್ಪಿಸಿದ ಋಗ್ವೇದದ ಋಷಿಗಳ ಮಂತ್ರ ಶ್ಲೋಕಗಳನ್ನು ಅಧ್ಯಯನ ಮಾಡಿದ ವಿದ್ವಾಂಸರು ವೇದ ಕಾಲ ಪೂರ್ವಕಾಲದಲ್ಲಿದ್ದ ಅನೇಕ ಪೌರಾಣಿಕ ಅಂಶಗಳನ್ನು ಗುರುತಿಸಿ ಚರ್ಚಿಸಿದ್ದಾರೆ.

[1]ವೇದ ಪುರಾಣದ ದೇವತೆಗಳೆಂದು ಅರ್ಚಿಸಲ್ಪಟ್ಟ ಉಷಸ್, ಸೂರ್ಯ, ಪೃಥ್ವಿ ಮುಂತಾದವುಗಳ ಹಿನ್ನೆಲೆಯಲ್ಲಿ ಕಾಣುವುದು ಪ್ರಕೃತಿಯ ಅದ್ಭುತ ಘಟನೆ ಅತಿಮಾನುಷ ಮತ್ತು ಕರುಣಾಪೂರ್ಣ ಶಕ್ತಿ ವೇದಕಾಲದ ದೇವತೆಗಳಲ್ಲಿ ಅತಿ ಜನಪ್ರಿಯ ಮತ್ತು ಮಹತ್ವದ ಸ್ಥಾನ ಪಡೆದ ಉಷಾ ದೇವತೆಯನ್ನು ಅರ್ಚಿಸುವಾಗ ಕೆಲವು ಮಂತ್ರಗಳ ಉಚ್ಛಾರಣೆ ಮತ್ತು ಸೋಮರಸದ ಅರ್ಪಣೆ ಈ ಪ್ರಕಾರದ ಅಚರಣೆ ಏರ್ಪಡುತ್ತಿದ್ದುವು.[2]

Ref. R. Zimmermann: Hymns from the Rgveda. Appendix p. xxxix.

ವೈದಿಕ ಪುರಾಣ ಚರ್ಚಿಸಿದ ಇನ್ನೊಬ್ಬ ವಿದ್ವಾಂಸ ಹಿಲ್ ಬ್ರಾಂಡ್ ಜನಪದ ವೃಂದಗಳ ಅಮೂರ್ತ ಭಾವನೆಗಳು ಹೇಗೆ ಪುರಾಣೀಕರಣಗೊಂಡುವು ಎನ್ನುವುದರ ಸುಳಿವು ಕೊಡುತ್ತಾನೆ. ಘನೀಭೂತ ಹಿಮ ಮತ್ತು ದಟ್ಟ ಚಳಿಯಿಂದ ಪ್ರಕೃತಿಯು ಮುಕ್ತಗೊಂಡದ್ದು – ಅದ್ಭುತ ಗುಡುಗು ಇವು ವೃತ್ರ ಮತ್ತು ಇಂದ್ರದೇವತೆಗಳಾಗಿ ಮೂರ್ತೀಕರಣಗೊಂಡುವು. ಇಂದ್ರ, ದೈತ್ಯ, ಹಿಮ, ಚಳಿಗಳ ವೈರಿ, ಬೇಸಗೆ ವಸಂತ ಕಾಲದ ಶಕ್ತಿ ಸೂರ್ಯದೇವ, ಇತ್ಯಾದಿ’[3].

ವೇದ ಪುರಾಣದಲ್ಲಿ ಬರುವ ಶುಷ್ಣ ಶಂಬರ ಇತ್ಯಾದಿಗಳು ಭಾರತದಲ್ಲಿ ಅಡಿಯಿಟ್ಟ ಆರ್ಯರ ಆಕ್ರಮಣಗಳನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದ ಐತಿಹಾಸಿಕ ವ್ಯಕ್ತಿಗಳೇ ಆಗಿದ್ದಾರೆ. ಅವರನ್ನೇ ’ದಾಸ’ ಎಂದು ಕರೆದಿರಬಹುದು. ’ದಾಸ’ ಎನ್ನುವುದು ಉತ್ತರ ಭಾರತದ ಪಶ್ಚಿಮ ಭಾಗದ ’ದಾಹ’ ಎನ್ನುವ ಬುಡಕಟ್ಟಿಗೆ ಸದೃಶವಾಗಿದೆ. ಝಿಮ್ಮರ್ ಮನ್ ಅವರ ಆಲೋಚನೆಗಳು ಜನಪದ ವೃಂದಗಳ ಕೆಲವು ಮೂಲಭೂತವಾದ ವಿಚಾರಗಳಿಗೆ ತೋರುಬೆರಳುಗಳಾಗಿವೆ. ಜನಪದ ವಿವಿಧ ವೃಂದಗಳು, ಅವರ ಸಂಘರ್ಷ ಅವರ ಸುತ್ತೂ ನಡೆಯುವ ಕೆಲವು ವಾಸ್ತವಿಕ ಸಂಗತಿಗಳು – ಶಕ್ತಿಗಳು – ಪುರಾಣ ಕಥೆ – ದೇವಾನುದೇವತೆಗಳು ನಂಬುಗೆ ಅವರ ಆರಾಧನೆ – ಅದಕ್ಕಾಗಿ ಮಾಡಿದ ಕೆಲವು ಆಚರಣೆಗಳು ಇತ್ಯಾದಿ. ಅಂದರೆ ಜನಪದ ವೃಂದದ ಬದುಕು ಪುರಾಣಗಳ ಸೃಷ್ಟಿ ಮತ್ತು ಆರಾಧನೆ, ಸ್ತುತಿ ಅರ್ಪಣೆ, ಆಚರಣೆ ಇವೆಲ್ಲ ಚಕ್ರಗತಿಯಲ್ಲಿ ರೂಪುಗೊಂಡು, ಕಾಲಾ ನಂತರದಲ್ಲಿ ನಿರ್ದಿಷ್ಟ ಕಾಲದ ಆಚರಣೆಗಳಾಗಿ, ಈ ಆಚರಣೆಗಳೇ  ಹಬ್ಬಗಳ ಸ್ವರೂಪ ಧಾರಣೆ ಮಾಡಿದುವು ಎನ್ನುವುದು ಗಮನಿಸಬೇಕಾದ ಅಂಶ.

ಜನಪದ ವೃಂದ – ಧರ್ಮಪುರಾಣ – ದೇವತೆಗಳು:

ಧರ್ಮ ಎನ್ನುವುದು ಒಂದು ವ್ಯವಸ್ಥಿತ ಸಮಾಜದ ಪರಿಕಲ್ಪನೆಯಾದರೂ ಆದಿಮಾನವ ಕಾಲದಿಂದ ವಿವಿಧ ಜನಪದ ವೃಂದಗಳನ್ನು ಮುನ್ನಡೆಸಿಕೊಂಡು ಬಂದ ಅವುಗಳದೇ ಆದ ನಂಬಿಕೆ, ಆಚರಣೆಗಳ ಸ್ಥೂಲ ರೂಪಗಳು ಕಾಲಾನುಕ್ರಮದಲ್ಲಿ ಶಿಷ್ಟಪದ ಸಮಾಜದ ಪರಿವರ್ತಿತ ಕಲ್ಪನೆಗಳಾಗಿ ಮುಂದುವರೆದಿರುವುದು ಸ್ಪಷ್ಟ ಟೆಯಲರ್ ಜನಪದದ ನಿಸರ್ಗ ಪುರಾಣ’ ಕಥೆಗಳಲ್ಲಿ ಜನಪದ ಗುಂಪುಗಳ ಪ್ರಾಚೀನ ನಂಬುಗೆ, ನಡವಳಿಕೆಗಳನ್ನು ವಿಶ್ಲೇಷಿಸಿದ್ದಾನೆ. ಪುರಾಣಗಳ ಸೃಷ್ಟಿ ಮತ್ತು ದೇವಾನುದೇವತೆಗಳ ಹುಟ್ಟು ಪಡೆದಿರುವ ಗಾಢ ಸಂಬಂಧವನ್ನೇ ಆದಿಮಾನವ ನಂಬುಗೆ ಮತ್ತು ಆಚರಣೆಗಳು ಪಡೆದಿವೆ.

ತ್ಸಿಮ್ಪಿಯನ ಪುರಾಣ ಐತಿಹ್ಯ ಕಥೆಗಳನ್ನು ಅಧ್ಯಯನ ಮಾಡಿದ ಬೊಆಸ್ ಅವುಗಳಲ್ಲಿ … ಸಾಮಾಜಿಕ ಸ್ವರೂಪ. ಧಾರ್ಮಿಕ ನಂಬುಗೆಗಳು ವ್ಯಕ್ತಿಯ ಜೀವನ ಚಕ್ರ ವಿವರಣೆ ನೀತಿ ಮತ್ತು ಭಾವನಾತ್ಮಕ ಸ್ಪಂದನೆಗಳ ವಿವರ ಮುಂತಾದುವನ್ನು ಗಮನಿಸಿ ’ಪುರಾಣಗಳು ಬುಡಕಟ್ಟಿನ ಆತ್ಮಚರಿತ್ರೆ’ ಎನ್ನುತ್ತಾನೆ.

ಧಿಮ್ಮೆಂದು ಸಿಡಿವ ಜ್ವಾಲಾಮುಖಿ, ದಕ್ಕಿದ್ದನ್ನು ಕೊಚ್ಚಿ ಸೆಳೆದೊಯ್ವ ಭೀಕರ ಪ್ರವಾಹ, ಇದ್ದಕ್ಕಿದ್ದಂತೆ ಮೂಡುವ ಸೂರ್ಯ, ಮತ್ತೆ ಕವಿಯುವ ಗಾಢ ಕತ್ತಲೆ, ಇತ್ಯಾದಿಗಳು ಯಾವುದೇ ಆದಿಮ ಗುಂಪಿನ ವ್ಯಕ್ತಿಗಳ ಭಯ ವಿಸ್ಮಯಗಳಿಗೆ ಸೀಮಿತವಾಗದೆ, ಇಡೀ ವೃಂದದ ಸಾಮೂಹಿಕ ಅನುಭವಕ್ಕೆ ಕಾರಣವಾಗುತ್ತದೆ. ಇಂಥ ಅನುಭವಗಳು ಕೇವಲ ಅವರ ಭಾವನಾ ಪ್ರಪಂಚಕ್ಕೆ ನಿರ್ದಿಷ್ಟಗೊಳ್ಳದೆ, ಅನಿಯಂತ್ರಿತ ಶಕ್ತಿಗಳ ಅದ್ಭುತ ಅಮಾಯಕ, ಭಯೋತ್ಪಾದಕ ಕಲ್ಪನೆಗಳಿಗೆ ಪ್ರೇರಕವಾಗುತ್ತವೆ. ಒಂದು ರೀತಿಯ ಬೆರಗು, ಭ್ರಮೆ, ಅಸ್ಪಷ್ಟತೆ ಸಂದಿಗ್ಧತೆಗಳು ಆದಿಮ ಗುಂಪುಗಳ ಸಾಮೂಹಿಕ ಅನುಭವಕ್ಕೆ ಒತ್ತು ಕೊಟ್ಟು ಅವರಲ್ಲಿ ಅಪ್ರಜ್ಞಾಪೂರ್ವಕವಾಗಿ ಅಗೋಚರ ಶಕ್ತಿಗಳ ಮೂರ್ತೀಕರಣ ಕ್ರಿಯೆ ನಡೆದುಹೋಗುತ್ತದೆ. ಪೌರಾಣಿಕ ಹಿನ್ನೆಲೆಯ ದೇವಾನುದೇವತೆಗಳಲ್ಲಿ – ನಂಬುಗೆಗಳು ವಸ್ತು ಸಂಗತಿಗಳಲ್ಲಿ ಇಂಥ ಒಂದು ಅಮಾಯಕ, ಭ್ರಾಮಕ ವಸ್ತು ಪ್ರತಿರೂಪಗಳು ಎರಕಗೊಂಡು ಜನಪದ ವೃಂದಗಳಲ್ಲಿ ಮಂಪರು ಕವಿಸಿ ಬೇರು ಬಿಟ್ಟು, ತಾವು ಪ್ರತ್ಯಕ್ಷವಾಗಿ ಕಂಡ ರುದ್ರಭೀಕರ ವಸ್ತುಗಳನ್ನು ವಾಸ್ತವವಲ್ಲದ ಒಂದು ವಿಶಿಷ್ಟ ಮಾನಸಿಕ ಪಾತಳಿಯಲ್ಲಿ ರೂಪಿಸಿ ಅವುಗಳಿಗೆ ಮೂರ್ತ ರೂಪ ಕೊಡುವ ಯತ್ನ ನಡೆಯುತ್ತದೆ. ಬೆಂಕಿಯ ಮೂರ್ತೀಕರಣದಲ್ಲಿ ಅಗ್ನಿದೇವ ಬೆಳಕಿನ ಮೂರ್ತೀಕರಣದಲ್ಲಿ ಸೂರ್ಯದೇವ – ಸಪ್ತಾಶ್ವಗಳ ರಥ, ಕೃಷಿ ಕಾರ್ಯಗಳ ಹಿನ್ನೆಲೆಯಲ್ಲಿ ಭೂಮಿ, ಭೂದೇವಿ, ಭೂಮಿತಾಯಿ, ಗೋಮಾತೆ, ಬಿರುಗಾಳಿ ಧಾರಾಕಾರ ಮಳೆಗಳಲ್ಲಿ ವರುಣ ಇಂದ್ರ ಇತ್ಯಾದಿ ದೇವಾನುದೇವತೆಗಳು, ಹೀಗೆ ಪ್ರಾದಿಮಾನವ ಕಾಲ ಬುದ್ಧಿಮಾನವ ಕಾಲದ ಒಂದು ಆದಿವಾಸಿ, ಬುಡಕಟ್ಟು ತನ್ನ ಸುತ್ತ ಮುತ್ತಣ ಅಗಾಧವಾದ ವಿಸ್ಮಯಕಾರಿ ರುದ್ರರಮ್ಮ ನಿಸರ್ಗಶಕ್ತಿಗಳಿಗೆ ಒಂದು ಮೂರ್ತರೂಪ ಕೊಟ್ಟ ಹಂತದಲ್ಲಿಯೇ ಪುರಾಣ ದೇವತೆಗಳ ಹುಟ್ಟು – ಆ ದೇವತೆಗಳನ್ನು ಕುರಿತ ಸ್ತುತಿ, ಅರ್ಚನೆ, ಅರ್ಪಣೆ ಆಚರಣೆಗಳ ನೆಲೆ ಅಡಕಗೊಂಡಿದೆ. ಅನಾದಿಕಾಲದ ದಿವ್ಯ ಶಕ್ತಿಯನ್ನು ಪುರಾಣೀಕರಣಗೊಳಿಸಿ ಶಿವ ಎಂದು ಹೆಸರಿಸಿ ಅರ್ಚಿಸುವಾಗ ಶಿವನ ಗುಣಲಕ್ಷಣಗಳನ್ನು ಹೇಳಲಾಗುತ್ತದೆ. ಶಿವನ ಅಷ್ಟಮೂರ್ತಿಗಳೆಂದು ಹೇಳಲಾಗುವ ನೆಲ, ನೀರು, ಗಾಳಿ, ಮುಗಿಲು, ಬೆಂಕಿ, ನೇಸರು, ಚಂದಿರ ಮತ್ತು ಆತ್ಮ ಮುಂತಾದ ಎಂಟು ರೂಪಗಳಲ್ಲಿ ಅನಾದಿ ಕಾಲದ ವಾಸ್ತವ ಸಂಗತಿಗಳಿಂದ ಕೂಡಿ ಪ್ರಾದಿಮ ಅಂಶಗಳೇ ಕಾಣುವುದಿಲ್ಲವೇ? ಮಾಲಿನೋವ್ ಸ್ಕಿ ಮಾತು ಈ ದೃಷ್ಟಿಯಿಂದ ಗಮನಾರ್ಹ :

’ಪುರಾಣ… ಮಾನವ ನಾಗರಿಕತೆಯ ಒಂದು ಸತ್ವಪೂರ್ಣ ಅಂಕ, ತಿರುಳು, ಅದು ಗೊಳ್ಳು ಕತೆ ಅಲ್ಲ. ತೀವ್ರ ಪರಿಶ್ರಮ ಸಾಧಿತ ಕ್ರಿಯಾಶಕ್ತಿ. ಜೀವಂತ ಶಕ್ತಿ ಅದು ಒಂದು ಬೌದ್ಧಿಕ ವಿವರಣೆ ಅಥವಾ ಕಲಾತ್ಮಕ ಶಬ್ದ ಚಿತ್ರವಾಗಿರದೆ, ಪ್ರಾದಿಮ ಶ್ರದ್ಧೆ ಮತ್ತು ನೈತಿಕ ವಿವೇಕದ, ವಸ್ತುತಃ ಸಂಭವನೀಯ – ಸ್ವಾಭಿಪ್ರಾಯ ನಿಷ್ಠಕರಾರು ಪತ್ರವಾಗಿದೆ.[4]

ಜನಾಂಗ – ಪುರಾಣ :

ಕ್ರಿ.ಪೂ. ೫೦೦ ರಿಂದ ಕ್ರಿ.ಶ. ೫೦೦ ರ ಕಾಲಾವಧಿಯಲ್ಲಿ ಹುಟ್ಟಿಕೊಂಡ ಹದಿನೆಂಟು ಭಾರತೀಯ ಪುರಾಣಗಳಲ್ಲಿ ವಿಷ್ಣು ಪುರಾಣ, ಶಿವ ಪುರಾಣ, ವಾಯು ಪುರಾಣ ಮುಂತಾದವು ಇಂಥದೇ ಒಂದು ಆದಿಮಕಾಲದ ವಾಸ್ತವ ದಾಖಲೆಗಳು, ಪ್ರಪಂಚದ ಉಗಮ ವಿಕಾಸಗಳನ್ನು ಹೇಳುವ ಈ ಪುರಾಣ ಕಥೆಗಳ ಪ್ರಕಾರ ಭಾರತದ  ಪ್ರಥಮ ಮಾನವ ಮನು. ಇವನು ಮೊದಲ ದೊರೆ, ಸ್ವಯಂಭು, ಬಳಿಕ ಬಂದ ಅನೇಕ ಮನುಗಳಲ್ಲಿ ಪೃಥು ಒಬ್ಬ. ಅವನಿಂದಾಗಿ ಭೂಮಿಗೆ ಪೃಥ್ವಿ ಎಂದು ಹೆಸರು ಬಂದಿತಂತೆ. ಇವರಲ್ಲಿ ಹತ್ತನೆಯ ಮನು ಪ್ರಖ್ಯಾತ. ಅವನ ಕಾಲದಲ್ಲಿ ಒಂದು ’ಮಹಾಪ್ರಳಯ’ ಉಂಟಾಯಿತು. ದೇವರು ಅವನಿಗೆ ಪ್ರಳಯದ ಮುನ್ಸೂಚನೆ ಕೊಟ್ಟಿದ್ದನಂತೆ. ಆದ್ದರಿಂದ ಮನು ಒಂದು ಅದ್ಭುತ ದೋಣಿಯನ್ನು ನಿರ್ಮಿಸಿ ರಕ್ಷಿಸಿಕೊಂಡ. ಆ ಮನುವಿನ ಮಕ್ಕಳು ಸೂರ್ಯವಂಶ, ಚಂದ್ರವಂಶಗಳ ಹೆಸರಿನಿಂದ ಜನಾಂಗ ಮುಂದುವರೆಸಿದರು. ದಸ್ಯುಗಳೆಂದು ಕರೆಯಲ್ಪಟ್ಟ ಆರ್ಯ ಪೂರ್ವದ ಭಾರತೀಯ ನಿವಾಸಿಗಳು ಆರ್ಯರ ಜೊತೆ ಸಂಘರ್ಷಕ್ಕಿಳಿದರು. ಹೋರಾಟ ಮತ್ತೆ ಒಪ್ಪಂದ. ಹೀಗೆ ಭಾರತದ ಮೂಲ ನಿವಾಸಿಗಳಾಗಿದ್ದ ವಿವಿಧ ಜನಪದ ವೃಂದಗಳ ಆರ್ಯ ಜನಾಂಗದ ಪ್ರಭಾವಕ್ಕೆ ಆರ್ಯರು ದ್ರಾವಿಡ ಜನಾಂಗದ ಪ್ರಭಾವಕ್ಕೆ ಒಳಗಾಗಿ ಜಾನಾಂಗಿಕ ಬದುಕು ಮುಂದುವರೆಯಿತು. ಇಂದಿಗೂ ಜಾನಪದದ ಭಂಡಾರದಂತಿರುವ ಭಾರತದ ಮೂಲನಿವಾಸಿಗಳ, ಬಳಿಕ ಇತರರ ಪ್ರಭಾವಕ್ಕೆ ಒಳಗಾಗಿಯೂ ತಮ್ಮ ಜೀವನದ ಶ್ರದ್ಧೆ ಆಚರಣೆಗಳ ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಬಂದ ಜನಪದ ವೃಂದಗಳ ಆಚರಣೆ ಮತ್ತು ಹಬ್ಬಗಳು ಅಧ್ಯಯನಕ್ಕೆ ರೋಮಾಂಚಕಾರಿ ಆಕರಗಳಾಗಿವೆ. ಸಾಂಸ್ಕೃತಿಕ ಮಾನವಶಾಸ್ತ್ರಜ್ಞ ಹೆರ್ಸ್ಕೋವಿಟ್ಸ್, ಪುರಾಣಗಳನ್ನು ನಂಬುಗೆಗಳ ಸನದು ಎಂದು ಕರೆಯುತ್ತಾರೆ. ಆದಿಮಕಾಲದಿಂದಲೂ ಜನಪದರು ತಮಗೆ ಅತೀತವಾದ ಶಕ್ತಿಗಳಲ್ಲಿ ನಂಬುಗೆಯಿಟ್ಟು ತಮ್ಮ ಸುತ್ತಣ ಪರವಲಯದ ಅದ್ಭುತ ಶಕ್ತಿಗಳನ್ನು ಆರಾಧನಾ ಕ್ರಮದ ವಿಧಿ ನಿಷೇಧಗಳಲ್ಲಿ ತೊಡಗಿಸಿಕೊಂಡರು. ಧಾರ್ಮಿಕ ಕ್ರಿಯಾಚರಣೆಗಳ ಮೂಲಕ ಆಯಾ ದೇವತೆಗಳ ಉತ್ಸವ ಹಬ್ಬಗಳನ್ನು ರೂಪಿಸಿಕೊಂಡರು. ಈ ದೃಷ್ಟಿಯಿಂದ ಜನಪದ ಪುರಾಣ ಕಥೆಗಳು, ಆ ಕಾಲದ ಪ್ರಾಚೀನ ನಡವಳಿಕೆಗಳು ಮಾನವ ಕುಲದ ಚರಿತ್ರೆಗೆ ಮಾತೃಕೆಯಾಗಿರುವಂತೆ ಕೆಲಮಟ್ಟಿಗೆ ಧಾರ್ಮಿಕ ಸ್ವರೂಪದ ವಿಶ್ವಾಸಪತ್ರಗಳೂ ಆಗಿವೆಯೆಂದು ಹೇಳಬಹುದು.

ನಂಬಿಕೆ – ಶ್ರದ್ಧೆ – ಆಚರಣೆ :

ತನ್ನ ನೇರವಾದ ಅನುಭವಕ್ಕೆ ಬಂದ ಅನೇಕ ವಸ್ತು ಸಂಗತಿಗಳನ್ನು ತಮ್ಮ ನಂಬಿಕೆಗೆ ಮೂಲ ದ್ರವ್ಯವಾಗಿ ಪರಿಭಾವಿಸಿ, ಅದನ್ನೇ ಅಚಲ ನಿಷ್ಠೆಯಲ್ಲಿ ಪರಿವರ್ತಿಸಿಕೊಂಡು ಆ ವಸ್ತುವನ್ನು ದೈವೀಕರಣಗೊಳಿಸಿ ಪೂಜಿಸುವ ಪರಂಪರೆ ಪ್ರಪಂಚದ ಅನೇಕ ಜನಪದ ವೃಂದಗಳಿರುವುದನ್ನು ಕಾಣುತ್ತೇವೆ. ತಮ್ಮ ಜೀವನಕ್ಕೆ ಈ ಅದ್ಭುತ ದೈವೀ ಶಕ್ತಿಗಳು ಹಿತ ಸಮೃದ್ಧಿಗಳನ್ನು ಉಂಟು ಮಾಡಬೇಕು ಎಂದು ಸ್ತುತಿಸುವುದು, ಎಳ್ಳು ಜೀರಿಗೆ ಬೆಳೆಯುವ ಭೂಮಿತಾಯಿಯನ್ನು ’ಎದ್ದೊಂದುಗಳಿಗೆ ನೆನೆದೇನ’ ಎನ್ನುವಲ್ಲಿ ಎದ್ದು ಕಾಣುತ್ತದೆ. ಹಾಗೆ ಮಾಡದಿದ್ದರೆ ಈ ’ದೈವ’ ನಮ್ಮ ಮೇಲೆ ಅನಿಷ್ಟವನ್ನು ತಂದೀತು. ಆದುದರಿಂದ ಅದರ ಪ್ರಾರ್ಥನೆ, ಜನಪದದ ಅಗಣಿತ ಆಚರಣೆಗಳಲ್ಲಿ ಪ್ರಧಾನವಾಗಿ ಕಾಣುವುದು ’ಸ್ತುತಿ’ ಮನುಷ್ಯನ ವಾಸ್ತವ ಜೀವನದಲ್ಲಿ ಉಂಟಾಗುವ ಆತಂಕ ಕಷ್ಟಗಳನ್ನು ನಿವಾರಿಸುವಲ್ಲಿ ಒಂದು ಮೆಚ್ಚುಗೆಯ ಮಧ್ಯಸ್ಥಿಕೆ ವಹಿಸುವ ಹಾಗೆ ಅಥವಾ ಅಂಥ ದೈವೀ ಶಕ್ತಿಗಳ ಕೃಪೆಯನ್ನು ಕೋರುವ ಹಾಗೆ ಈ ಪ್ರಾರ್ಥನೆ. ದೇವರು ಮಕ್ಕಳಂತೆ, ಏನು ಮಾಡಬೇಕು ಎನ್ನುವುದನ್ನು ಅವರಿಗೆ ಹೇಳಬೇಕಾದುದು ಅಗತ್ಯ[5]. ಈ ದೇವಾನುದೇವತೆಗಳ ವಿಷಯ ಚರ್ಚಿಸುತ್ತ ಗೆಝನೊಪೇನ್ಸ್ (ಕ್ರಿ.ಪೂ. ಆರನೆಯ ಶತಮಾನ) ತನ್ನ ಒಂದು ಕವಿತೆಯಲ್ಲಿ ದೇವತೆಗಳು ಹೀನ ಅಪರಾಧಗಳನ್ನು ಮಾಡುತ್ತಿದ್ದರು. ಷಿನ್ಡರ್ ದೇವತೆಗಳು ಮನುಷ್ಯ ಮಾಂಸವನ್ನು ತಿನ್ನುತ್ತಿದ್ದರು[6] ಎಂದು ವಿವರಿಸುತ್ತಾನೆ. ಕ್ರಿ.ಪೂ. ಸುಮಾರು ೩೧೬ರಲ್ಲಿ ಈತಮೆರೆಸ್ ಪುರಾಣ ಮೂಲವನ್ನು ಕುರಿತು ಚರ್ಚಿಸುವಾಗ ದೇವಾನುದೇವತೆಗಳು ತಮ್ಮ ಜೀವಿತ ಕಾಲದಲ್ಲಿ ತಮ್ಮ ಉಗ್ರ ಕೌರ್ಯ, ಶಕ್ತಿಗಳಿಂದಾಗಿ ತಿರಸ್ಕರಿಸಲ್ಪಟ್ಟು, ಮರಣಾ ನಂತರ ಪಾರಂಪರಿಕವಾಗಿ ಆರಾಧಿಸಲ್ಪಟ್ಟ ನಿಜ ವ್ಯಕ್ತಿಗಳೇ ಆಗಿದ್ದಾರೆಂದು ವಿವರಿಸಿ ’ದೇವತೆಗಳಿಗಿರುವುದು ಮಣ್ಣಿನ ಕಾಲು ಮತ್ತು ದೇವತೆಗಳ ಅಪರಾಧಗಳು ವಾಸ್ತವವಾಗಿ ಮನುಷ್ಯರ ಅಪರಾಧಗಳೇ ಆಗಿದ್ದುವು’ ಎಂದು ವಿಶ್ಲೇಷಿಸಿದ್ದಾನೆ[7]. ಆದುದರಿಂದ ದೇವಾನುದೇವತೆಗಳಲ್ಲಿಯೇ ಮೇಲು ಕೀಳು ರೂಪುಗೊಂಡುವೆಂದು ತೋರುತ್ತದೆ. ಇಷ್ಟ ಪೂರೈಸುವ ಸಾತ್ವಿಕ ದೈವ, ಅನಿಷ್ಟ ಉಂಟುಮಾಡುವ, ಕ್ಷುದ್ರ ಅಥವಾ ಕಿರುಗಳ ದೈವಗಳು ಮಾನವ ಚರಿತ್ರೆಯ ಎಲ್ಲ ಕಾಲದ ಸಮಾಜಗಳು ಇಂಥ ಅತಿಮಾನುಷ, ಅಮಾನುಷ ಅಗೋಚರ ಶಕ್ತಿಗಳನ್ನು ನಂಬುತ್ತ ಬಂದುದಕ್ಕೆ ಆಧಾರ, ವಿಸ್ಮಯ, ಭಯಗಳೇ ಸೂರ್ಯೋದಯದ ಭವ್ಯತೆಗೆ ಮೂಕ ವಿಸ್ಮಯ; ಪ್ರಚಂಡ ಮಾರುತದೊಡನೆ ನುಗ್ಗಿ ಬರುವ ಗುಡುಗು ಸಿಡಿಲುಗಳಲ್ಲಿ ಭಯ. ಈ ಅತೀತ ಶಕ್ತಿ ಅಥವಾ ದೇವತೆಗಳನ್ನು ಕುರಿತ ಮಾನವ ಜನಾಂಗದ ಪ್ರತಿಕ್ರಿಯೆಗಳಾದ ಶ್ರದ್ಧೆ ಆಚರಣೆ ಸದಾ ಸಂಕೀರ್ಣ. ಇಂಥ ಒಂದು ಶಕ್ತಿಗೆ ಮಾನವ ಮುಖಾಮುಖಿಯಾದಾಗ, ಪ್ರೇಮ, ಕೃತಜ್ಞತೆ, ಕುಬ್ಜತೆಗಳ ಅರಿವು ಕೃಪಾಯಾಚನೆ, ಉತ್ಸಾಹ ಆಶೆ ಇತ್ಯಾದಿಗಳ ಗಾಢ ಅನುಭವ ಅವನಿಗುಂಟಾಗುವುದು ಸಹಜ.

ಸ್ತುತಿ : ಪ್ರಾದಿಮ ಪಠನಗಳು :

ಪ್ರಪಂಚದ ವಿವಿಧ ದೇಶಗಳ ‌ಪ್ರಾದಿಮ (ಮಂತ್ರ) ಪಠಣ’ ಪ್ರಿಟಿಟಿವ್ಹ್ ಚೌಂಟ್ಸ್ ಗಳನ್ನು ಗುರುತಿಸಿದ ವಿದ್ವಾಂಸರ, ಪ್ರಾರ್ಥನಾ ವಿಧಿಯ ಕೆಲವು ಪಠನ ಮಾದರಿಗಳನ್ನು ಗಮನಿಸಬಹುದು.[8]

ಡಾಡ್ ಆ ಡಾಡಾ
ಡಾಡ್ ಆ ಡಾಡಾ
ಡಾಡ್ ಆ ಡಾಡಾ
ಡಾ ಕಟಾ ಕಾಯ್

ಮಳೆಗಾಗಿ ಪ್ರಾರ್ಥಿಸುವ ಈ ಪಠನ ಆಸ್ಟ್ರೇಲಿಯಾದ ’ಸೀ-ಷಾಂಟಿ’, ಧಾರ್ಮಿಕ ಆಚರಣೆಯ ಅಭಿವ್ಯಕ್ತಿಯಾಗಿದ್ದು, ಇದು ಮಳೆ ಬರುವ ಪೂರ್ವದಲ್ಲಿ ಆ ಪ್ರದೇಶದ’ ಪ್ಲೋವರ್’ ಎನ್ನುವ ಒಂದು ಜಾತಿಯ ಪಕ್ಷಿ ಹಾಕುವ ಕೂಗಿನ ಧ್ವನಿ ಮೂಲದ ಶಾಬ್ದಿಕ ಅನುಕರಣೆಯಾಗಿದೆ. ಅದರಂತೆ ಇಂದಿನ ಆಂಧ್ರಪ್ರದೇಶದ – ಹಿಂದಿನ ಹೈದರಾಬಾದ ಪ್ರಾಂತದ ಕಾಡು ಬುಡಕಟ್ಟಿನ ಚಂಚರ ಒಂದು ಪ್ರಾರ್ಥನಾ ಪಠನವನ್ನೂ ನೋಡಬಹುದು. ಬೇಟೆಗಾರಿಕೆಯನ್ನೇ ಹೆಚ್ಚಾಗಿ ಅವಲಂಬಿಸಿದ ಚಂಚರು ಒಂದು ಪ್ರಾಣಿಯನ್ನು ಕೊಂದ ಬಳಿಕ ಎಲ್ಲರೂ ಕೂಡಿ ಆ ಪ್ರಾಣಿಯ ಕಾಲು, ತಲೆ ಅಥವಾ ಯಾವುದಾದರೂ ಒಂದು ಭಾಗವನ್ನು ಕತ್ತರಿಸಿ, ಬೇಯಿಸಿ, ಅದನ್ನು ಕಾಡಿನಲ್ಲಿ ಚೆಲ್ಲುತ್ತಿದ್ದರಂತೆ, ಹಾಗೆ ಚೆಲ್ಲುವಾಗ ಅವರು ಹೀಗೆ ಪಠಿಸುತ್ತಿದ್ದರು :

’ಮೇಮು ತಿಂತುರಮ್ಮಾ, ನೀವು ತಿನು’
ಅಮ್ಮಾ ನಾವು ತಿಂತೀವಿ; ನೀನು ತಿನ್ನು’[9]

ಅಮೇರಿಕನ್ ಇಂಡಿಯನ್ ಬುಡಕಟ್ಟಿನ ಒಂದು ಪ್ರಾದಿಮ ಪಠನ ಹೀಗಿದೆ :

’ಓದೈವಾ; ನಮಗೆ ಎಮ್ಮೆ ಕೊಡು, ಎಮ್ಮೆ, ಎಮ್ಮೆ,
ಓ ದೈವಾ ನಮಗ ಕೊಬ್ಬಿದ ಎಮ್ಮೆ ಕೊಡು’

ಅಂಥದೇ ಇನ್ನೊಂದು ಮಳೆ ದೇವತೆ ಝಿಯಸ್ (zeus) ನನ್ನು ಮಳೆಗಾಗಿ ಪ್ರಾರ್ಥಿಸುವ ಪಠನ :

’ಓ ಪ್ರಿಯ ಝಿಯಸ್ ಮಳೆ ಸುರಿಯಲಿ’ ಸುರಿಯಲಿ ಮಳೆ,
ಮೆಕ್ಕೆ ಜೋಳದ ಹೊಲಗಳಲ್ಲಿ ಅಥೇನಿಯನ್ ಹೊಲಗಳಲ್ಲಿ
ಮಳೆ ಸುರಿಯಲಿ, ಸುರಿಯಲಿ ಮಳೆ [10]

ಪಶ್ಚಿಮ ಆಪ್ರಿಕಾದ ಅಶಾಂಟಿ ಪ್ರದೇಶದ ಆದಿಮ ವೃಂದ ನಂಬಿದ ನ್ಯಾಕೊಪಾನ್ ಎನ್ನುವ ಆಕಾಶದೇವತೆಯನ್ನು ಪ್ರಾರ್ಥಿಸುವ ಒಂದು ಪಠನ ಹೀಗಿದೆ. ಆ ವೃಂದ ಪಠನ ಕಾಲದಲ್ಲಿ ಡೊಳ್ಳುಗಳನ್ನು ಬಾರಿಸಿ ತಮ್ಮ ವೃಂದದ ಎಲ್ಲರನ್ನೂ ಕೂಡಿಸಿ ಡೊಳ್ಳು ವಾದನದ ಒಂದು ನಿಶ್ಚಿತ ಲಯಕ್ಕೆ ಅನುಗುಣವಾಗಿ ಹೀಗೆ ಪಠಿಸುತ್ತಿದ್ದರು

‘ಮುಗಿಲು ಅಗಲವಾಗಿದೆ, ಅಗಲ, ಅಗಲ,
ನೆಲವು ಅಗಲವಾಗಿದೆ, ಅಗಲ, ಅಗಲ,
ಮೇಲೆ ಒಂದ ಎತ್ತಲಾಯಿತು
ಮತ್ತೊಂದು ಕೆಳಗೆ ಇರಿಸಲಾಯಿತು
ಹಿಂದೆ ಒಂದು ಕಾಲದಲ್ಲಿ, ಹಿಂದೆ ಬಹಳ ಹಿಂದೆ,
ಮಿಗಿಲಾದ ಮುಗಿಲದೇವ, ನಿನ್ನ ನಾವು ತಲುಪೆವು
ನಿನ್ನ ಸೇವೆಗೈವೆವು….’[11]

ಈ ಕೆಲವು ಅಂಶಗಳ ಜೊತೆಗೆ ಕನ್ನಡ ಜನಾಂಗದಲ್ಲಿ ಕಂಡು ಬರುವ ಚರಗ ಚೆಲ್ಲುವಾಗ, ಬೆಳೆ ಹುಲುಸಾಗಲಿ ಎನ್ನುವ ಆಶಯದಿಂದ ಹುಲ್ಲು ಹುಲ್ಲೂ ಚೆಲುವಾಗಲಿ – ಚೆನ್ನಾಗಿ ಬೆಳೆ ಕೊಡಲಿ ಎನ್ನುವ ಅರ್ಥ ಅಡಕಗೊಂಡ ’ಹುಲ್ಲು ಹುಲಿಗ್ಗೇ ಚಲಾಮ್ರಿಗೇ’ ಪಠನ. ಮಳೆರಾಯನನ್ನು ಕುರಿತ ನಮ್ಮ ಶಿಶುಪ್ರಾಸದ ’ಬಾರೆಲೆ ಮಳೆಯೇ ಬಣ್ಣದ ಮಳೆಯೇ. ಸುಣ್ಣವ ಕೊಡುವೆನು ಸುರಿಯಲೆ ಮಳೆಯೇ ಅಥವಾ ’ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ…’ ’ನಮ್ಮಯ ದೇವಾರ್ ಬಂದಾವ ಬನ್ನೀರೇ’ ಎನ್ನುವ ಬೀರದೇವರ ಭಕ್ತರ ಡೊಳ್ಳಿನ ಹಾಡು ಇ‌ತ್ಯಾದಿಗಳನ್ನು ಗಮನಿಸಬಹುದು. ದೇವತೆಗಳೆಂದರೆ ತಮ್ಮ ಚಿರಪರಿಚಿತ, ಆತ್ಮೀಯ ವ್ಯಕ್ತಿಗಳು; ಅವರನ್ನು ಪರಿಪರಿಯಾಗಿ ಕೋರಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು ಎನ್ನುವ ನಂಬಿಕೆಯೇ ಸ್ತುತಿ ಆಚರಣೆಯ ಮೂಲವಾಗಿದೆ. ಏಕೆಂದರೆ, ನಂಬಿಗೆಗಳು ಜನಪದ ಸಮುದಾಯದ ನಡವಳಿಕೆಯ ವಿಶಿಷ್ಟ ರೂಪಗಳು. ಜನಪದ ವೃಂದಗಳ ಮನೋಧರ್ಮದಲ್ಲಿ ಅವು ಆಳವಾಗಿ ಬೇರೂರಿ ಪ್ರಾಕೃತಿಕವೂ ಎನ್ನುವಷ್ಟು ಅವರಲ್ಲಿ ಬೆರೆತು ಬಿಡುತ್ತವೆ. ಅಚ್ಚರಿಯೆಂದರೆ ನಂಬಿಕೆಗಳು ಒಮ್ಮೊಮ್ಮೆ ಕೇವಲ ಮೇಲುನೋಟಕ್ಕೆ ಕಾಣುವ ಅಂಶಗಳಾಗಿ ಉಳಿದು ತಮ್ಮ ಸ್ವರೂಪಗಳನ್ನು ಬದಲಾಯಿಸುತ್ತ ಹೋಗುವುದು. ನಂಬಿಕೆಯ ಹಿನ್ನೆಲೆಯಲ್ಲಿ ಮೂಡಿದ ಆಚರಣೆಗಳು ಕೇವಲ ಮೂಢ ನಂಬಿಕೆಯ ಮಟ್ಟಕ್ಕೆ ಇಳಿದು ಬಿಡುವುದು. ಅಲನ್ ವಾಟ್ಸ್ ಕ್ರಿಸ್ತ ಧರ್ಮದಲ್ಲಿ ಪುರಾಣ ಮತ್ತು ರಿಚ್ಯುಲರ್ ಕುರಿತು ಚರ್ಚಿಸುತ್ತ, ’ನಂಬಿಕೆಯ ಒಂದು ಆಸಕ್ತಿ, ಅದು ಸತ್ಯಕ್ಕೆ ತನ್ನನ್ನು ಸಮರ್ಪಿಸಿಕೊಳ್ಳುವ ಅಧೀನಗೊಳಿಸುವ ಶ್ರದ್ಧೆಗೆ ವಿರೋಧವಾದುದು’[12] ಎನ್ನುತ್ತಾರೆ. ಜನಪದ ವೃಂದಗಳ ಸಾಮೂಹಿಕ ಜೀವನ ಸ್ವರೂಪದಲ್ಲಿ ಯಾವುದೇ ನಂಬಿಕೆ ಜನಪದರ ಜೊತೆಗೆ ಒಂದು ಅರ್ಥಪೂರ್ಣ ಸಂಬಂಧವನ್ನು ಪಡೆದಾಗ, ಅವರು ಕೈಕೊಳ್ಳುವ ದೇವತಾರಾಧನೆಯ ಆಚರಣೆಗಳಲ್ಲಿ ವ್ಯಾಪಕವಾಗಿ ಮತ್ತು ಅಷ್ಟೇ ಆಳವಾಗಿ ಹರಡಿ ಶ್ರದ್ಧೆಯಾಗುತ್ತದೆ. ಜನಾಂಗ ಜೀವನದೊಂದಿಗೆ ಅರ್ಥಪೂರ್ಣ ಜೀವಂತ ಸಂಬಂಧವನ್ನು ಇಟ್ಟುಕೊಳ್ಳುವ ನಂಬಿಕೆ ಶ್ರದ್ಧೆಯಾಗುತ್ತದೆ. ಹಾಗಿಲ್ಲದಿದ್ದುದು ಕೇವಲ ಆಸಕ್ತಿ ರೂಪದ ನಂಬಿಕೆಯಾಗಿ ಮೂಢ ನಂಬಿಕೆಗೆ ತಿರುಗುತ್ತದೆ. ಈ ಕಾರಣದಿಂದಲೇ ಜಾನಪದರು ರೂಪಿಸಿಕೊಂಡ ಪುರಾಣ ಅಥವಾ ಪೌರಾಣಿಕವಲ್ಲದ ದೇವಾನುದೇವತೆಗಳು ಜನಪದದಲ್ಲಿ ನಂಬುಗೆಗಳನ್ನು ಕುದುರಿಸಿ, ಅವರ ದಿನನಿತ್ಯದ ಸಂಪರ್ಕ ಹೊಂದಿ ’ಮೋಗ್ಯಾಗ ಮಲಿಗ್ಯಾನ, ಹೂವಿನ್ಯಾಗ ಹುದುಗ್ಯಾನ’ ಶ್ರದ್ಧೆಯ ಸ್ಥಿರರೂಪ ಪಡೆದು, ಜನಪದದ ಆಚರಣೆಗಳ ಮೂಲಕ ಸಾಮೂಹಿಕ ಸ್ವೀಕೃತಿ ಪಡೆದು ಆಯಾ ಸಮೂಹದ ಅಂತರಾಳದ ಅರ್ಥವನ್ನು ಸಂಕೇತಿಸುತ್ತ, ಸಾಗಿ ಬರುತ್ತವೆ. ಶ್ರದ್ಧೆಯ ಆಚರಣೆಗೆ ವ್ರತಗಳು, ವ್ರತಗಳಿಗೆ ಕಡ್ಡಾಯವಾಗಿ ಪಾಲಿಸಲೇಬೇಕಾದ ಕಟ್ಟುಕಟ್ಟಳೆಗಳು; ಹೀಗೆ ಮಾಡಲೇಬೇಕಾದ ಕ್ರಿಯೆ ವಿಧಿ; ಅಥವಾ ವಿಧಿಕ್ರಿಯೆ ಮಾಡಬಾರದುದು ಮಾಡಲೇ ಕೂಡದುದು ನಿಷೇಧ.

 


[1] Hymns from the Rgveda p. xxi-xxv, Rev. R. Zimmermonn, 1938, ವೇದಗಳ ಕಾಲ ೫೦೦ ರಿಂದ ೧೨೦೦ ಬಿ.ಸಿ. ಎಂದು ಗುರುತಿಸಲಾಗಿದೆ. ವಿವರವಾದ ಚರ್ಚೆಯನ್ನು ಝಿಮ್ಮರ್ ಮನ್ ಅವರ ಹೈಮ್ಸ್ ಫ್ರಾಮ್ ದಿ ಋಗ್ವೇದ ಕೃತಿಯು – x-xix ಪುಟದಲ್ಲಿ ನೋಡಬಹುದು.

[2] .’…………… Usas played in the cult ….. position and the popularity she enjoyed above all the goddesses of the vedic age hymns were addressseedee at the earliest morning hour of the day of the soma sacrifice….’

[3] ಅದೇ  ಪು. XLIX.

[4] 1. B. Malinowski : Myth in Primitive Psychology’ P. 19

[5] ‘The Gods are like Children; they must be told what to do’. M.J. Herskovits : ‘Cultural Anthropology. p. 223

[6] Andrew Lang : Myth ritual and religion’ p.3.

[7] ‘…. thus the gods had feet of clay and crimes of the gods were really crimes of men’ quoted by William Bascom Contributions to Folkloristics’, p.49.

[8] A.C.Bouquet : ‘Sacred Books of the World’, p.28.

[9] A.C. Boquet : ‘Sacred Books of the World’ p. 28

[10] 2. Ibid, ‘Rain, Rain O dear Zeus, rain upon the corn fields, the fields of the Athenians’,

[11] 1. Ibid, The sky is wide, wide, the earth is wide, wide, The one we lifted up, The other was set down, in ancient times long, long ago….

[12] Alan W. Watts : Myth and ritual in Christianity p. 21, The anxiety to believe is the very opposite of faith of self surrender to truth….