ನಮ್ಮ ನಾಡಿನಲ್ಲಿ ಇಂದಿಗೂ ರೂಢಿಯಲ್ಲಿರುವ ’ಪರ್ವ’ ಅಥವಾ ಪ್ರಸ್ತ ಮಳೆ ಬಾರದಿದ್ದಾಗ ಕೈಕೊಳ್ಳುವ ಒಂದು ಸಾಮೂಹಿಕ ಆಚರಣೆ. ಏಳು ದಿನಗಳ ಭಜನೆ. ನಿತ್ಯ ಗ್ರಾಮದೇವತೆಯ ಆರಾಧನೆ. ಕೊನೆಯ ದಿನ ಅನ್ನಸಂತರ್ಪಣೆ. ಈ ಎಲ್ಲ ವಿಧಿಗಳನ್ನು ಪೂರೈಸುತ್ತಿರುವಷ್ಟರಲ್ಲಿ  – ಅಥವಾ ಪೂರೈಸಿದ ಬಳಿಕ ಧೋಧೋ ಸುರಿವ ಮಳೆ ಬಂದುದು ಆಕಸ್ಮಿಕವೋ, ಅನಿರೀಕ್ಷಿತವೋ ಅಥವಾ ಜನಪದರು ಕೈಕೊಂಡ ಆಚರಣೆಗಳ ಫಲವೋ ನಿರ್ಣಯಿಸುವ ಮಾನದಂಡಗಳೆಲ್ಲಿವೆ? ಅನೇಕ ಕಡೆ ಇಂಥ ಸಂದರ್ಭಗಳಲ್ಲಿ ಮಳೆ ಬಂದುದೇ ಇಂಥ ಒಂದು ನಂಬಿಕೆ ಸ್ಥಿರವಾದ ರೂಪ ಪಡೆದು ಶ್ರದ್ಧೆಯಾಗಿ ಉಳಿದುಬಂದಿರುವುದರಂತೂ ನಿಜ. ಕೆಲವು ಕಡೆ ಭೂಮಿಗೆ ಹಾಲೆರೆಯುವ ಆಚರಣೆಯಿದೆ. ಇದು ಮಳೆರಾಯನ ಕರುಣೆಯ ಜೊತೆಗೆ ಭೂಮಿ ತಾಯಿಯ ಕೃಪೆಯನ್ನು ಕೋರುವ ಒಂದು ಆಚರಣೆ. ಹರಿಯಾನಾ ಪ್ರಾಂತದ ಒಂದು ಪ್ರಾಚೀನ ನಂಬುಗೆಯ ಪ್ರಕಾರ ದನಕರುಗಳು ಕಾಡಿನಿಂದ ತಮ್ಮ ಹಟ್ಟಿಗೆ ಬರುವಾಗ ರಸ್ತೆಯಿಂದ ಮೇಲೇರಿ ಮುಗಿಲು ಮುತ್ತುವ ಸಂಜೆ ಸಮಯದ ’ಗಾಯಹೋರಾ’ ಅದು ’ಆಕಳಹಾದಿ’ ಧೊಳಿ ಮುಸುಕಿದ ಭಾಗ’ ಗೋಧೂಳಿ’, ಸಿಂಗಬೊಂಗಾ, ಎನ್ನುವ ದೇವತೆ ಈ ಹಾದಿಯಲ್ಲಿ ಆಕಳು ಮುನ್ನಡೆಸುತ್ತಾರೆ. ಈ ಹಾದಿಯ ಮೂಲಕ ಮುಗಿಲಿಗೆ ಹೋಗುವ ಆಕಳು ದನಕರುಗಳ ಸಂತೃಪ್ತಿ ’ಗೋಧೂಳಿ, ಅದು ಮುಗಿಲಿಂದ ಮಳೆ ತರುತ್ತದೆ.

ಆಚರಣೆ :

ಪ್ರಾದಿಮ ಮಾನವನಿಗೆ ವ್ರತಾಚರಣೆ ಅಥವಾ ಪೂಜಾ ವಿಧಿ, ಅರ್ಚನಾ ವಿಧಾನಗಳೆಂದರೆ ಎಲ್ಲೋ ಇರುವ ತನಗೆ ಅನ್ಯವಾದ ಶಕ್ತಿಯ ಆರಾಧನೆಯಾಗಿರಲಿಲ್ಲ; ಉತ್ಸವವಾಗಿರಲ್ಲ. ಅದು ತನಗೆ ಅಗೋಚರ ಮಾತ್ರ. ತಾನು ಕೈಕೊಳ್ಳುವ ವ್ರತಾಚರಣೆ, ವಿಧಿ ಕ್ರಿಯೆ ಉತ್ಸವ, ಹಾಡು-ಸ್ತುತಿ ವ್ರತ ಕಥೆ ಇತ್ಯಾದಿಗಳು ಆ ಶಕ್ತಿಯ ಜೊತೆ ಇಲ್ಲಿಯೇ ಈಗಲೇ ಪಡೆಯಬಹುದಾದ ಸಂಪರ್ಕ ಸಾಧನಗಳಾಗಿದ್ದುವು. ಹೀಗಾಗಿ ನಿಸರ್ಗದ ಅನೇಕ ವಸ್ತುಗಳನ್ನು ಪ್ರಾಣಿ, ಮರ, ಬೆಟ್ಟ, ಬಂಡೆ – ಪೂಜಿಸುವ ಕುಲಸಂಕೇತ, ಕುಲದೇವತಾರಾಧನೆ, ಬುಡಕಟ್ಟುಗಳ ಅಗಣಿತ ಕುಲಗುಂಪು, ಬಳಿ ಅದಕ್ಕನುಗುಣವಾದ ಸಾಮಾಜಿಕ ವಿಧಿ ನಿಷೇಧಗಳು ರೂಪುಗೊಂಡುವು. ಪ್ರಾದಿಮ ಕಾಲದಿಂದ ಬಂದ ಸರ್ವ ಚೈತನ್ಯವಾದ ಅನಿಮಿಜಮ್ ತಾತ್ವಿಕ ಹಿನ್ನೆಲೆಯ ಒಂದು ಆಚರಣೆ ಯಜಮಾನ ಪೂಜೆ. ಯಾವುದೇ ಪ್ರಾಣಿ ಅಥವಾ ವ್ಯಕ್ತಿಗೆ ತನ್ನದೇ ಆದ ಆತ್ಮವಿದೆ. ವ್ಯಕ್ತಿ ಸತ್ತ ಮೇಲೂ ಆತ್ಮ ನಾಶವಾಗುವುದಿಲ್ಲ. ಅವಿನಾಶಿ, ಇದು ಶಿಕ್ಷಾ, ರಕ್ಷಾ ಸಾಮರ್ಥ್ಯ ಹೊಂದಿರುತ್ತದೆ. ಟೇಯಲರ್ ಈ ನಂಬಿಕೆಯನ್ನು ಆತ್ಮತತ್ವ ಎಂದು ಕರೆಯುತ್ತಾನೆ. ಇದು ಅಲೌಕಿಕ, ಅನಿಯಂತ್ರಿತ, ಪ್ರಪಂಚದ ಅನೇಕ ಕಡೆಗಳಲ್ಲಿ ಮತ್ತು ನಮ್ಮಲ್ಲಿ ಇಂದಿಗೂ ಇಂಥ ಒಂದು ನಂಬುಗೆಯ ಆಚರಣೆ ಕಾಣುತ್ತದೆ. ವ್ಯಕ್ತಿ ಸತ್ತ ಸ್ಥಳದಲ್ಲಿ ಒಂದು ದಿನವಾದರೂ ದೀಪ ಉರಿಸುವುದು, ಮೂರು, ಒಂಭತ್ತು ಅಥವ ಹನ್ನೊಂದನೆಯ ದಿನ ಆ ವ್ಯಕ್ತಿಯ ಪ್ರಿಯವಾದ ಭಕ್ಷ್ಯಭೋಜ್ಯಗಳನ್ನು ಎಡೆ ಮಾಡುವುದು ’ಒಳಗೆ ಕರೆದುಕೊಳ್ಳುವುದು’ ಎಂದು ಆತ್ಮತತ್ವಕ್ಕೆ ಸಂಬಂಧಿಸಿದ ಆಚರಣೆ, ಇದನ್ನೇ ಅನ್ಸಿಸ್ಟ್ರಲ್ ವರ್ಷಿಪ್’ ’ಹಿರೇರ ಹಬ್ಬ’ ಎಂದು ಕರೆಯುವರು. ಈ ಆತ್ಮಗಳನ್ನು ಸಂತೃಪ್ತಿ ಪಡಿಸದಿದ್ದರೆ ನಮಗೆ ಅವು ಕೇಡು ಮಾಡಬಹುದು. ಆದುದರಿಂದ ಅವುಗಳನ್ನು ಪೂಜಿಸುವ ಆಚರಣೆ ಒಂದು ವಿಧಿ.

ವಿಧಿ – ನಿಷೇಧ ಬಲಿ :

ವಿಧಿಗಳನ್ನು ಮೀರಿದರೆ, ನಿಷಿದ್ಧಗಳನ್ನು ಮುರಿದರೆ ದೇವತೆಗಳು ಕೋಪಗೊಳ್ಳುತ್ತಾರೆ. ರೋಷದಿಂದ ಕಿಡಿಕಾರುತ್ತಾರೆ. ಇಡೀ ಸಮುದಾಯದ ಬದುಕಿಗೆ ಅವರಿಂದ ಕೇಡು, ಬೆಳೆಗಳು ನಾಶವಾದರೆ, ಸಾಂಕ್ರಾಮಿಕ ರೋಗರುಜಿನುಗಳು ಹರಡಿದರೆ, ದೇವತೆಯ ಅಸಂತೃಪ್ತಿಯೇ ಕಾರಣ. ಅದಕ್ಕಾಗಿ ಆ ದೇವತೆಗೆ ಸಂತೃಪ್ತಿಯನ್ನು ಉಂಟು ಮಾಡಲು ಬಲಿ, ಅರ್ಪಣೆ ಕಾಣಿಕೆ ಕೊಡಬೇಕು. ಹೀಗೆ ದೇವತೆಗಾಗಿ ಬಲಿ ಕೊಡುವ ಪದ್ಧತಿ ಆರಾಧನೆಯ ಸಂದರ್ಭದ ಒಂದು ಅಂಗವಾಗಿ ಬೆಳೆದು ಬಂದಿತು. ವಿವಿಧ ಬುಡಕಟ್ಟುಗಳಲ್ಲಿ ಪಶುಬಲಿ, ನರಬಲಿ, ಕೃಷಿ ಉತ್ಪತ್ತಿಗಳ ಕಾಣಿಕೆ ಮುಂತಾದ ಆಚರಣೆ ರೂಢಿಗೊಂಡವು. ದೇವತೆ ಉಗ್ರವಾಗಿದ್ದಾನೆಂದು ಹೇಳುವವರು ಯಾರು? ಪಂಗಡದ ಮುಖ್ಯಸ್ಥ ಅಥವಾ ಮುಖ್ಯಸ್ಥನ ಆಸರೆಯಲ್ಲಿ ಅಥವಾ ಆಸರೆಯಿಲ್ಲದೆ ಇರುವ ಒಬ್ಬ ವ್ರತಸ್ಥ. ಆತ ದೇವತಾ ಪ್ರತಿನಿಧಿ. ಅವ ಪೂಜಾರಿ, ಪುರೋಹಿತ, ಗುರು ಇತ್ಯಾದಿ. ಈತ ವೃಂದ ಪರಂಪರೆಗಳ ಪಾಲಕ; ಪಂಗಡದ ಪೋಷಕ ಎನ್ನುವ ನಂಬುಗೆ.

ಬಲಿ ಪದ್ಧತಿಯಲ್ಲಿ ಅತ್ಯಂತ ಗೂಢವಾದ ಮತ್ತು ಕ್ರೂರವೆನಿಸುವ ಆಚರಣೆ ಪಶುಬಲಿ ಅಥವಾ ನರಬಲಿ. ಯಾವುದೇ ದೇವತೆಗೆ ಕುರಿ, ಕೋಣ ಇತ್ಯಾದಿಗಳ ಬಲಿ ಕೊಡುವಾಗ ಅದು ಕೇವಲ ಕಾಣಿಕೆ ಅರ್ಪಣೆ ಎಂದು ಜನಪದರು ಭಾವಿಸುವುದಿಲ್ಲ. ಬಲಿಯ ಮೂಲಕ ದೇವತೆಯನ್ನು ಸಂತೃಪ್ತಗೊಳಿಸುವುದು ಒಂದು ಹಂತದ ನಂಬುಗೆಯಾದರೆ, ಆ ದೇವರೊಂದಿಗೆ ತಾನು ಒಂದಾದೆ ಎನ್ನುವ ಶ್ರದ್ಧೆ, ಜನಪದ ವ್ಯಕ್ತಿ ಸಮೂಹಗಳ ಮತ್ತೊಂದು ಹಂತದ ಶ್ರದ್ಧೆ. ಬಲಿ ಪದ್ಧತಿಯಿಂದ ರಕ್ತ ಚೆಲ್ಲಿದಾಗ ಆ ದೇವತೆಗೂ ತಮಗೂ ಒಂದು ಅವಿನಾಭಾವ ರಕ್ತ ಸಂಬಂಧ ಏರ್ಪಡುತ್ತದೆ ಎನ್ನುವ ನಿಷ್ಠೆ ಇಲ್ಲಿ ಗಮನಾರ್ಹ.

ಹೆನ್ರೀ ವೈಟ್ ಹೆಡ್ ತನ್ನ ದಕ್ಷಿಣ ಭಾರತದ ಗ್ರಾಮದೇವತೆಗಳು

[1] ಕೃತಿಯಲ್ಲಿ ಆಫ್ರಿಕಾದ ’ಮಾಂಬೆಟ್ಟು’ ಬುಡಕಟ್ಟಿನಲ್ಲಿರುವ ಆಚರಣೆಯನ್ನು ಉಲ್ಲೇಖಿಸುತ್ತಾನೆ. ಈ ಕಪ್ಪು ಜನ ರಕ್ತ ಚಿಮ್ಮುವವರೆಗೆ ಶಸ್ತ್ರಾಸ್ತ್ರಗಳಿಂದ ದ್ವೇಷರಹಿತವಾಗಿ ಹೊಡೆದಾಡುತ್ತಾರೆ. ಅವರ ಹೊಡೆದಾಟದಲ್ಲಿ ಒಬ್ಬನಿಗೆ ಗಾಯವಾಗಿ ನೆತ್ತರು ಚಿಮ್ಮಿದಾಗ, ಹೊಡೆದಾಡಿದ ಇನ್ನೊಬ್ಬ ವ್ಯಕ್ತಿ ಅವನ ರಕ್ತ ನೆಕ್ಕುತ್ತಾನೆ ಅಥವಾ ಕುಡಿಯುತ್ತಾನೆ. ಇದರಿಂದ ಅವರು ತಮ್ಮ ಸೋದರ ಸಂಬಂಧ ಗಟ್ಟಿಗೊಂಡಿತು ಎಂದು ನಂಬುತ್ತಾರೆ. ತಮ್ಮ ದೇವರಿಗೆ ಬಲಿ ಕೊಡುವ ಸಂದರ್ಭದಲ್ಲಿ ತಮ್ಮ ಗುಂಪಿನ ಒಬ್ಬ ಸದಸ್ಯನನ್ನು ನಿಲ್ಲಿಸಿ ಮಚ್ಚು, ಕೊಡ್ಲಿ ಅಥವಾ ಕುಡುಗೋಲಿನಿಂದ ಕಡಿದು, ರಕ್ತವನ್ನು ಚೆಲ್ಲಿ ದೇವರಿಗೆ ಬಲಿ ಕೊಡುತ್ತಾರೆ. ಇದರಿಂದಾಗಿ ಈ ಮಾಂಬೆಟ್ಟು ಬುಡಕಟ್ಟು, ತಮ್ಮ ಗುಂಪು ಮತ್ತು ತಮ್ಮ ದೇವರ ನಡುವೆ ಅತ್ಯಂತ ಗಾಢವಾದ ಸಂಬಂಧ ಉಂಟಾಯಿತು ಎಂದು ನಂಬುತ್ತದೆ.

ಕ್ರಿಸ್ತಪೂರ್ವ ಕಾಲದ ಈಜಿಪ್ತ ಮತ್ತು ಇಸ್ರೇಲಿ ಜನಾಂಗಗಳ ನಡುವಿನ ಒಂದು ಘಟನೆ ಪಶುಬಲಿಯ ಸಂದರ್ಭದ ಪುರಾಣೀಕರಣಕ್ಕೆ ಆಚರಣೆಗೆ ಕಾರಣವಾಗಿದೆ. ಈಜಿಪ್ತದ ಅರಸು ಅನೇಕ ಇಸ್ರೇಲಿಯರನ್ನು ತನ್ನ ಗುಲಾಮರನ್ನಾಗಿ ಮಾಡಿಕೊಂಡ ಯಹೂದ್ಯರನ್ನು ವಿಮುಕ್ತಗೊಳಿಸಬೇಕು ಎಂದು ಈಜಿಪ್ತದ ಅರಸನಿಗೆ ದೇವಮಾನವ ಒಂಬತ್ತು ಶಾಪಗಳನ್ನು ಕೊಟ್ಟ. ಅದರಲ್ಲಿ ಒಂದು ಈಜಿಪ್ತದ ಪ್ರತಿ ಕುಟುಂಬದ ಜೇಷ್ಠ ಪುತ್ರನನ್ನು ಕೊಲ್ಲುವುದು ಆಗ ಯಾಹೂದ್ಯರು ತಮ್ಮ ಹಿರಿಯ ಗಂಡು ಮಕ್ಕಳನ್ನು ರಕ್ಷಿಸಲು ತಮ್ಮ ದೇವರಿಗೆ ಒಂದು ಬಿಳಿ ಕುರಿಯನ್ನು ಬಲಿಕೊಟ್ಟು ಅದರ ರಕ್ತವನ್ನು ತಮ್ಮ ತಮ್ಮ ಮನೆ ಬಾಗಿಲಿಗೆ ಸಿಡಿಸಿದರು. ಶಾಪವಿತ್ತ ದೇವದೂತ ಬಂದು ರಕ್ತದ ಗುರುತಿಲ್ಲದ ಈಜಿಪ್ತದ ಕುಟುಂಬದ ಹಿರಿಯ ಮಗನಿಗೆ ಸಾವು ತಂದ. ಆಗ ಭಯಭೀತನಾದ ಈಜಿಪ್ತದ ಅರಸು ಯಾಹೂದಿ ಗುಲಾಮರನ್ನು ಮುಕ್ತ ಮಾಡಿದನಂತೆ. ಆ ದಿನದ ನೆನಪಿಗಾಗಿ ’ಪಾಸ್ಟ್ ಹಬ್ಬದ ಆಚರಣೆ ಉತ್ಸವಗಳು ನಡೆಯುತ್ತವೆ. ಪಾಸ್ಖಲ್ ಕುರಿಯ ಬಲಿ, ಕಾಲಾನಂತರದಲ್ಲಿ ತನ್ನವರಿಗಾಗಿ ತನ್ನನ್ನು ಬಲಿ ಕೊಟ್ಟ ಕ್ರಿಸ್ತನ ಸಂಕೇತವೆಂದು ನಂಬಲಾಗುತ್ತದೆ. ಹೀಗೆ ಒಂದು ಹಬ್ಬದ ಆಚರಣೆಯಲ್ಲಿ ಒಂದು ಸಾಂಸ್ಕೃತಿಕ ಸಂಕೀರ್ಣ ವಸ್ತುವನ್ನಾಗಿ ರೂಪಿಸಿ ಜಾನಪದ ಅಧ್ಯಯನಕ್ಕೆ ಸವಾಲಾಗಿ ಪರಿಣಮಿಸುತ್ತವೆ.

ನರಬಲಿಯ ಈ ಆಚರಣೆಯ ಸ್ಥೂಲ ರೂಪಗಳು ಕೆಲವು ಬಗೆಯ ಉತ್ಸವ, ಹಬ್ಬದ ಸಂದರ್ಭಗಳಲ್ಲಿ ಇಂದಿಗೂ ಉಳಿದುಬಂದಿರುವುದನ್ನು ಕಾಣಬಹುದಾಗಿದೆ. ವೀರಭದ್ರನ ಒಕ್ಕಲು ಪುರವಂತರು ಗುಗ್ಗುಳ ಉತ್ಸವದಲ್ಲಿ ಶಸ್ತ್ರ ಹಾಕಿಕೊಳ್ಳುವುದು, ನೆತ್ತರ ಚಿಮ್ಮಿದಾಗ ಅದಕ್ಕೆ ಭಸ್ಮ ಲೇಪಿಸುವುದು. ಮೈಲಾರನ ಭಕ್ತರಾದ ಗೊರವಪ್ಪಗಳು ಶಸ್ತ್ರ ಹಾಕಿಕೊಳ್ಳುವುದು. ಮೀನಗಂಡದಲ್ಲಿ ಸರಪಳಿ ಹಾಕಿ ಜಗ್ಗಿದಾಗ ನೆತ್ತರು ಚಿಮ್ಮಿದ ಭಾಗಕ್ಕೆ ಭಂಡಾರ ಹೆಚ್ಚುವುದು, ಮಾರಿಯಮ್ಮನ ಭಕ್ತರು ಗಾಳ ಹಾಕಿಕೊಂಡು ಸಿಡಿಯಾಡುವುದು[2] ಇತ್ಯಾದಿಗಳಲ್ಲಿ ಪವಾಡದ ಅಂಶಗಳು ಸೇರಿಕೊಂಡಿದ್ದರೂ. ಇವು ಪ್ರಾದಿಮ ಕಾಲದಿಂದ ಬಂದ ಬುದ್ಧಿಮಾನವ ಕಾಲದಿಂದ ಮೊದಲುಗೊಂಡು ನಾಗರಿಕತೆಯ ವಿಕಾಸದ ವಿವಿಧ ಹಂತಗಳಲ್ಲಿ ಪರಿವರ್ತನೆಗೆ ಒಳಗಾಗುತ್ತ ಬಂದ ನರಬಲಿಯ ಪಳೆಯುಳಿಕೆಗಳಾಗಿವೆಯೆಂದು ಊಹಿಸಬಹುದು[3]

ಹಬ್ಬ ಉತ್ಸವಗಳ ಕಾಲಕ್ಕೆ ಹರಕೆ ಹೊತ್ತವರು ದೇವತೆಗಳಿಗೆ ಅರ್ಪಿಸುವ ಅನೇಕ ವಸ್ತುಗಳು, ಆದಿವಾಸಿಗಳ ಹಣ್ಣುಹಂಬಲ ಸಂಗ್ರಹಕಾರ ವೃಂದಗಳ ಪರಂಪರೆಗೆ ಸರಿಸಬಹುದಾದುವಾಗಿವೆ. ಎಳನೀರು ಕಾಯಿ, ತೆಂಗು, ಬಾಳೆ, ಬೆಲ್ಲದ ಮುದ್ದಿ, ರಾಗಿಯ ಮುದ್ದಿ, ಅರಿಸಿನ ಅನ್ನ, ಕುಂಕುಮದ ಅನ್ನ, ಮೊಸರನ್ನ, ಇತ್ಯಾದಿ ಅನ್ನದ ಉಂಡೆಗಳು, ಎಳ್ಳುಂಡೆ ಮತ್ತು ಅಡಕೆ ಭತ್ತದ ಕೂಚ್ಚುಗಳು, ಹೂವಿನ ದಂಡೆ, ಬೇವಿನ ಸೊಪ್ಪು ಇತ್ಯಾದಿ.

ಇನ್ನು ಕೆಲವು ಹಬ್ಬದ ಕಾಲದಲ್ಲಿ ದೇವತೆಯ ಸಮ್ಮುಖದಲ್ಲಿ ಭಕ್ತರು ಕೈಕೊಳ್ಳುವ ಸೇವೆಗಳು ಕೂಡ ವಿಧಿಕ್ರಿಯೆಗಳ ಆಚರಣೆಗಳ ಅನೂಚಾನೂ ಪರಂಪರೆಯ ಕುರುಹಾಗಿವೆ. ಅವುಗಳಲ್ಲಿ ಉರುಳು ಸೇವೆ, ಮಗ್ಗಲು ಸೇವೆ, ಹೆಜ್ಜೆ ನಮಸ್ಕಾರ ಸೇವೆ, ಸರಳು ಸೇವೆ, ಮುಡಿಕೊಡುವ ಸೇವೆ, ತುಲಾಭಾರ ಸೇವೆ, ಬಾಯಿಬೀಗದ ಸೇವೆ, ಫಲವರ್ಜ್ಯ ಸೇವೆ, ಇತ್ಯಾದಿ ಗಮನಾರ್ಹ[4].

ಪೌರಾಣಿಕ ಹಿನ್ನೆಲೆಯ ಎರಡು ನಿದರ್ಶನಗಳು :

ಹಬ್ಬ ಮತ್ತು ಆರಾಧನೆಗಳು ಒಳಗೊಂಡಿರುವ ಒಂದೆರಡು ಭಾರತೀಯ ನಿದರ್ಶನಗಳನ್ನು ನೋಡಬಹುದು. ಒಂದು ಆರ್ಯಪೂರ್ವದ ದ್ರಾವಿಡ ಮುಖ್ಯಸ್ಥ, ನಂತರದ ಪೌರಾಣಿಕ ದೇವತೆ ಶಿವ, ಇನ್ನೊಂದು ಅನಾದಿಕಾಲದ ಮಾತೃದೇವತಾ ಪರಿಕಲ್ಪನೆಯ ಶಕ್ತಿಪೂಜೆ.

ಶಿವ ಮೂಲ ಭಾರತ ನಿವಾಸಿಗಳ ದ್ರಾವಿಡ ದೇವತೆ. ಇವನಿಗೆ ಗಣಗಳ ಒಡೆಯ, ಭೂತನಾಥ; ಧೂರ್ಜಟಿ, ಚರ್ಮಾಂಬರಧಾರಿ, ನಂದಿವಾಹನ, ಪಶುಪತಿ ಇತ್ಯಾದಿ ಹೆಸರು. ಅಜ್ಞಾತ ಕಾಲದಲ್ಲಿ ಪುರಾಣೀಕರಣಗೊಂಡು ದೇವತೆಯಾಗುವ ಮೊದಲು ಈತ ದ್ರಾವಿಡ ಬುಡಕಟ್ಟು ಗುಡ್ಡಗಾಡು ಪಂಗಡಗಳ ಮುಖ್ಯಸ್ಥನಾಗಿರಬೇಕು. ಆರ್ಯರು ಭಾರತದ ಪ್ರದೇಶಗಳನ್ನು ಆಕ್ರಮಿಸುತ್ತ ಬಂದು ಯುದ್ಧ ಸಾರಿದಾಗ ಶಿವ ತನ್ನ ಜನಾಂಗವನ್ನು ಕೂಡಿಸಿ ಶೌರ್ಯದಿಂದ ಹೋರಾಡಿ ಆರ್ಯರ ಕಗ್ಗೊಲೆಯಿಂದ ಅವರನ್ನು ಕಾಪಾಡಿದ. ವೃಂದಗಳನ್ನು ಕಬಳಿಸ ಬಂದ, ಎಲ್ಲ ವಿಪತ್ತು ಸಂಕಟಗಳನ್ನು ಗುಟುಕರಿಸಿದ. ತಮ್ಮ ಜೀವ ಉಳಿಸಿಕೊಂಡ ಆರ್ಯರು ಅಮರರಾದರು; ಅಥವಾ ಬದುಕಿ ಉಳಿದರು. ಇಂಥ ವಾಸ್ತವಾಂಶಗಳೇ ಕಾಲಾನುಕ್ರಮದಲ್ಲಿ ಪುರಾಣೀಕರಣಗೊಂಡು ಶಿವ ದ್ರಾವಿಡ ಪಂಗಡಗಳ ವಿಪತ್ತು ಗುರುಕರಿಸಿದ ಸಂಗತಿ ’ಕಾಲಕೂಟ’ ’ವಿಷ’ ಸ್ವರೂಪಧಾರಣ ಮಾಡಿತು. ಅದಕ್ಕೆ ಕಾರಣನಾದ ಶಿವ ಗರಳಧರ. ನೀಲಕಂಠ ಇತ್ಯಾದಿ ’ಅಮರ’ರಾದ ಅಂದರೆ ಸಾಯದೆ ಉಳಿದ ಆರ್ಯರು’ ಅಮೃತ’ ಕುಡಿದರು.  ಸಮುದ್ರಮಥನ  – ಸುರಾಸುರರು ಮಂದಾರಪರ್ವತದ ಕಡಗೋಲು, ಹೀಗೆ ಹತ್ತಾರು ಪ್ರತೀಕ ಸಂಕೇತಗಳ ಜಾಲ ಶಿವನ ಆರಾಧನೆ ಉತ್ಸವದ ಶಿವರಾತ್ರಿ ಮುಂತಾದವು ಇಂಥ ಅನಾದಿಕಾಲದ ಪೌರಾಣಿಕ ಹಿನ್ನೆಲೆಯನ್ನು ಒಳಗೊಂಡಿರುವುದನ್ನು ಊಹಿಸಬಹುದು.

ಶಕ್ತಿಪೂಜೆಯ ಆರಾಧನೆಯಲ್ಲಿ ಹುಟ್ಟಿಕೊಂಡ ವ್ರತಕಥೆ, ನೋಂಪಿ, ಆಚರಣೆಗಳು ಅಗಣಿತವಾಗಿವೆ. ದೇವಿ, ದುರ್ಗಾ, ಕಾಲಿ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಶಕ್ತಿಪೂಜೆ ಪ್ರಪಂಚದ ಅನೇಕ ಕಡೆಗಳಲ್ಲಿ ಅನಾದಿಕಾಲದಿಂದ ರೂಢಿಯಲ್ಲಿರುವುದನ್ನು ಗುರುತಿಸಲಾಗಿದೆ. ಮೊಹಂಜೋದಾರೋದ ಉತ್ಖನನಗಳು ಶಕ್ತಿ ’ಮಾತೃದೇವತೆ’ಯಾಗಿದ್ದು, ಈಕೆ ವೇದಪೂರ್ವದಿಂದಲೂ ಆರ್ಚನೆಗೊಳ್ಳುತ್ತ ಬಂದಿರುವುದನ್ನು ಸ್ಪಷ್ಟಗೊಳಿಸಿವೆ[5]. ಪೇಯ್ನ್ ಎನ್ನುವ ವಿದ್ವಾಂಸ ತನ್ನ ’ದಿ ಶಾಕ್ತಾಜ’ ಎನ್ನುವ ಕೃತಿಯಲ್ಲಿ ಶಕ್ತಿ ಪೂಜೆಯ ಪಂಥ ಭಾರತದಲ್ಲಿ ಸುಮಾರು ಕ್ರಿಸ್ತಪೂರ್ವ ಮೂರು ಸಾವಿರ ವರ್ಷದಷ್ಟು ಪ್ರಾಚೀನ ಕಾಲದಿಂದಲೇ ರೂಪಗೊಂಡಿರುವುದನ್ನು ಗುರುತಿಸುತ್ತಾನೆ. ಭಾರತ, ಬಲೂಚಿಸ್ತಾನ್, ಇರಾನ್, ಮೆಸೊಪೊಟೇಮಿಯಾ, ಈಜಿಪ್ತ ಇತ್ಯಾದಿ ದೇಶಗಳಲ್ಲಿ ’ಮಾತೃದೇವತಾ’ ಶ್ರದ್ಧೇ ಅರ್ಚನೆ ಕಂಡು ಬರುತ್ತದೆ[6].

ಕರ್ನಾಟಕದ ಅನೇಕ ಆಚರಣೆಗಳಿಗೆ ನೋಂಪಿ ಅಥವಾ ವ್ರತಗಳ ಹಿನ್ನೆಲೆಯಿದೆ. ಕೆಲವು ಕೌಟುಂಬಿಕ ಕೃಷಿ, ಸಾಮಾಜಿಕ ಕೆಲವು ರಾಜಭಕ್ತಿ ಮತ್ತೆ ಕೆಲವು ದೈವಭಕ್ತಿಯ ಆಚರಣೆಗಳು, ಪಶುಪೂಜೆ, ವೃಕ್ಷಪೂಜೆ, ಭೂಮಿಪೂಜೆ ಮತ್ತು ಅದಕ್ಕೆ ಸಂಬಂಧಿಸಿದ ಕಾರಹುಣ್ಣಿಮೆ ಹಬ್ಬ, ಬನ್ನಿ ಮಹಾಂಕಾಳಿ ಹಬ್ಬ, ಭೂಮಿಗೆ ಹಾಲೆರೆಯುವ ಹಬ್ಬ, ಇತ್ಯಾದಿಗಳಲ್ಲಿ, ಕೌಟುಂಬಿಕ ಕೃಷಿ ಸ್ವರೂಪದ ಆಚರಣೆಗಳು ಪ್ರಧಾನ. ಕನ್ನಡದ ಕೆಲವು ಕಾವ್ಯಗಳಲ್ಲಿ ಹೇಳಲಾಗಿರುವ ’ಜೀವದಯಾಷ್ಟಮಿನೋಂಪಿ’, ವೃಷಭ ನೋಂಪಿ’ ಮುಂತಾದುವು ಮುಖ್ಯ. ಇವುಗಳ ಮೂಲ ಜನಪದ ಆಚರಣೆಯ ಸ್ವರೂಪ ನಮಗೆ ತಿಳಿಯುವುದಿಲ್ಲ. ದುರ್ಗೇಯನ್ನು ’ನವಪತ್ರಿಕಾ’ ಎಂದು ಕರೆಯಲಾಗುತ್ತವೆ. ಅಂದರೆ ಶಕ್ತಿಪೂಜೆಯ ಹಿನ್ನೆಲೆಯ ಈ ದುರ್ಗಾದೇವತೆ ಬಿಲ್ವ, ಬಾಳೆ, ಮುಂತಾದ ಒಂಭತ್ತು ಮರಗಳ ಮೂರ್ತಿ, ಜನಪದರಿಗೆ ಶಕ್ತಿದೇವತೆಯ ಕಲ್ಪನೆ ಬಂದದ್ದು ಬಹುಶಃ ಭೂಮಿಯನ್ನೇ ತಾಯಿ ಎಂದು ನಂಬಿದ ಕಾಲದಿಂದ ತಮ್ಮ ಎಲ್ಲ ಬಗೆಯ ಕ್ರಿಯೆ ಚಟುವಟಿಕೆಗಳಿಗೆ ಆಶ್ರಯವಾದ ಭೂಮಿಯನ್ನು ಸರ್ವಶಕ್ತಳು ಎಂದು ಭಾವಿಸಿ ಆಚರಿಸುವ ಅನೇಕ ಹಬ್ಬಗಳಲ್ಲಿ ಶಕ್ತಿದೇವತಾರಾಧನೆಯ ಸಂಕೇತ ಅಡಕವಾಗಿದೆ.

ಈ ದೇವತೆಗಳಲ್ಲಿ ಕುಟುಂಬ ದೇವತೆಗಳು, ಗ್ರಾಮದೇವತೆಗಳು ಇತ್ಯಾದಿ ಸ್ತರಗಳಿವೆ. ಜನಪದರಿಗೆ ಒಂದೊಂದು ವೃಂದಕ್ಕೆ ಕುಲದೇವತೆಯಿದ್ದರೆ, ಅವಳೇ ಗ್ರಾಮದೇವತೆಯಾಗಿರಬಹುದು; ಅಥವಾ ಪ್ರಬಲ ವೃಂದದ ದೇವತೆ ಗ್ರಾಮದೇವತೆಯ ಸ್ಥಾನ ಹೊಂದಿರಬಹುದು.

ಚಾಂದ್ರಮಾನ ಸಂವತ್ಸರ ಪದ್ದತಿಯಂತೆ ರೂಪುಗೊಂಡ, ಚೈತ್ರದಿಂದ ಫಾಲ್ಗುಣದವರೆಗಿನ ಹನ್ನೆರಡು ತಿಂಗಳು ಕಾಲದ ೨೪- ಶುಕ್ಲ, ಕೃಷ್ಣ ಪಕ್ಷಗಳಲ್ಲಿ, ಹನ್ನೆರಡು ಹುಣ್ಣಿಮೆ, ಹನ್ನೆರಡು ಅಮವಾಸ್ಯೆಗಳು, ಚೈತ್ರದ ’ದವನದ ಹುಣ್ಣಿಮೆ’ ವೈಶಾಖದ ಅಗೀಹುಣ್ಣಿಮೆ, ಜೇಷ್ಠದ ಕಾರಹುಣ್ಣಿಮೆ, ಮಣ್ಣೆತ್ತಿನ ಅಮಾವಾಸ್ಯೆ ಇತ್ಯಾದಿ ಕೃಷಿಪ್ರಧಾನ ಹಬ್ಬಗಳು ಆಚರಣೆಗಳ ಅಬ್ಬರದ ಕಾಲ, ಆಷಾಢ, ಶ್ರಾವಣ, ಭಾದ್ರಪದ ಮಾಸಗಳಲ್ಲಿ ಕರ್ನಾಟಕದ ಸ್ತ್ರೀ ಸಮುದಾಯಕ್ಕೆ ವಿಶಿಷ್ಟವೆನಿಸುವ ನಾಗಪಂಚಮಿ, ಮಂಗಳಗೌರಿ, ಸೋಮವಾರ ಬೆನಕನ ಹಬ್ಬ, ಜೋಕುಮಾರ ಇತ್ಯಾದಿ ಕೌಟುಂಬಿಕ ಸಾಮಾಜಿಕ ನೆಲೆಯ ಆಚರಣೆಗಳಾಗಿವೆ. ಆಶ್ವೀಜದ ಮಹಾನವಮಿ, ಹಟ್ಟಿಹಬ್ಬ, ಕಾರ್ತೀಕದ ದೀಪೋತ್ಸವ, ಮಾರ್ಗಶಿರದ – ಮುಂಗಾರೀ ಸುಗ್ಗಿ, ರಾಸಿ ಪೂಜೆ ಹೊಸ್ತಿಲಹುಣ್ಣಿಮೆ, ಎಳ್ಳ ಅಮಾವಾಸ್ಯೆ – ಚರಗ, ಇವುಗಳ ಜೊತೆಗೆ ಗಮನಿಸಬೇಕಾದ ಮಕರ ಸಂಕ್ರಮಣ, ಭಾರತ ಹುಣ್ಣಿಮೆ – ಸುಣ್ಣದ ತೇರು – ಮಹಾ ಶಿವರಾತ್ರಿ ಕಾಮನ ಹಬ್ಬ, ಯುಗಾದಿ ಇತ್ಯಾದಿ. ಇಲ್ಲಿ ಹೇಳಿರುವ ಹಬ್ಬದ ಸಂಪ್ರದಾಯ. ಆಚರಣೆಗಳಲ್ಲಿ ಅನೇಕ ಜಾನಪದ ಅಂಶಗಳನ್ನು ಇಂದಿಗೂ ಗುರುತಿಸಬಹುದಾಗಿದೆ. ಎಂಥ ಶಿಷ್ಟಪದ ಸಮಾಜದಲ್ಲಿಯೂ, ಅನಾದಿಕಾಲದಿಂದ ಸಾಗಿ ಬಂದ ಅನೇಕ ಜನಪದ ರೂಢಿ, ವಿಧಿಕ್ರಿಯೆಗಳು ಒಂದಲ್ಲ ಒಂದು ಸ್ತರದಲ್ಲಿ ಬೆರೆತು ಉಳಿದು ಬಂದಿರುವುದು ಸಹಜ.

ಅತೀತ ಶಕ್ತಿಯಲ್ಲಿ ನಂಬಿಕೆ ಹುಟ್ಟಿ, ಶ್ರದ್ಧೆಯಲ್ಲಿ ಗಟ್ಟಿಗೊಂಡು, ಮಾನವ ಕ್ಷೇಮಪಾಲನೆಯ ಕಲ್ಯಾಣ ಸಾಧನೆಯ ಪ್ರತೀಕವಾಗಿ ವ್ರತ ಆಚರಣೆಗಳ ಸಂಪ್ರದಾಯದಲ್ಲಿ ಮುಂದುವರೆದು ಒಂದು ಜಾತ್ರೆ, ಪ್ರಕೃತಿಯ ಆರಾಧನೆ, ದೇವತಾ ಪೂಜೆ, ದೇವರ ಕೃಪೆ, ಮಂತ್ರಮಾಟ, ಸ್ತುತಿ ಪಠನ, ನೃತ್ಯ, ಭಜನೆ, ಕಾಣಿಕೆ, ಬಲಿ ಸಮರ್ಪಣೆ ಮುಂತಾದವುಗಳನ್ನೊಳಗೊಂಡು ಒಂದು ಜನಾಂಗದ ವಿವಿಧ ಮುಖದ ಬದುಕಿನ ಸಮಾರಾಧನೆಯಾಗಿರುವ ಹಬ್ಬ, ಒಂದು ಸಂಕೀರ್ಣ ಸಾಂಸ್ಕೃತಿಕ ಘಟಕವಾಗಿದೆ. ಸಾಮಾನ್ಯವಾಗಿ ಪ್ರತಿವರ್ಷ ಸಾಮಾಜಿಕ ಕ್ಷೇಮಕ್ಕಾಗಿ ವಿಶೇಷ ಸಂದರ್ಭದಲ್ಲಿ ಆಚರಿಸುವ ಜಾನಪದ ಸಂಗತಿಗಳ ಮತ್ತು ಸಂಪ್ರದಾಯಗಳ ಸಮ್ಮಿಶ್ರ ಜಟಿಲ ಘಟಕವೇ ಹಬ್ಬ[7]ವಾಗಿರುವುದರಿಂದ ಇಂದಿಗೂ ಧಾರಾಳವಾಗಿ ಆಚರಣೆಯಲ್ಲಿರುವ ಹಬ್ಬಗಳ ಜಾನಪದ ವಿವೇಚನೆ, ವಿಶ್ಲೇಷಣೆಗಳು ಇಂದು ನಡೆಯಬೇಕಾಗಿರುವ  ಅಗತ್ಯತೆಗಳನ್ನು ಪ್ರತ್ಯೇಕವಾಗಿ ಸೂಚಿಸಬೇಕೇ? ಅದರಿಂದ ನಮ್ಮ ಸಂಸ್ಕೃತಿಯ, ಪರಂಪರೆಗಳ ಅನೇಕ ಪಾರ್ಶ್ವಗಳ ಹೊಸ ಅರಿವು ಮೂಡುವುದರಲ್ಲಿ ಸಂದೇಹವಿಲ್ಲ.

 


[1] Henry Whitehead : ‘ Village Gods of South India P. 146.

[2] ಡಾ. ಎಂ.ಎಂ. ಕಲಬುರ್ಗಿ ತಮ್ಮ ಇತ್ತೀಚಿನ ಒಂದು ಅಪ್ರಕಟಿತ  ಲೇಖನದಲ್ಲಿ ಜನ್ನ ಕವಿಯ ಯಶೋಧರ ಚರಿತ್ರೆಯ ಜಂಡಿ ಜಾತ್ರೆಯ ಸಂದರ್ಭದ ಕೆಲವು ಆಚರಣೆಗಳನ್ನು ’ಸಿರದ ಗಾಳ, ಉರಿಯ ಉಯ್ಯಾಲೆ, ಮೂದಲೆಯ ಉಲಿ’ ಗುರುತಿಸಿ ಧಾರ್ಮಿಕ ಹಿನ್ನೆಲೆಯ ಪಾರಂಪರಿಕವಾದ ಕೆಲವು ವ್ರತಾಚರಣೆಗಳ ಕಡೆಗೆ ಜಾನಪದ ಆಸಕ್ತರ ಗಮನ ಸೆಳೆದಿದ್ದಾರೆ. ಡಾ. ಚಿದಾನಂದಮೂರ್ತಿ ’ಬಾದುಬ್ಬೆ’ ವೃಷಭನೋಂಪಿ’, ಹಂಪ ನಾಗರಾಜಯ್ಯ ’ನೋಂಪಿ ಕಥೆಗಳು’ ಇತ್ಯಾದಿ ವಿವೇಚನೆಗಳ ಮೂಲಕ ಕನ್ನಡ ನಾಡಿನ ವಿಶಿಷ್ಟ ಆಚರಣೆ ಮತ್ತು ಉತ್ಸವಗಳನ್ನು ಗಮನದಲ್ಲಿರಿಸಿ ಕನ್ನಡ ಸಾಹಿತ್ಯ ಕೃತಿಗಳ ಜಾನಪದೀಯ ಅಧ್ಯಯನದ ಅಗತ್ಯತೆಯ ಕಡೆಗೆ ಬೆರಳು ಮಾಡಿದ್ದಾರೆ.

[3] ರಾಜಭಕ್ತಿಯ ಹಿನ್ನೆಲೆಯ ’ವೇಳೆವಾಳಿ’ಯ ಕೆಲವು ಆಚರಣೆ ’ಸಿಡಿದಲೆ’ ಇತ್ಯಾದಿಗಳನ್ನು, ಹಬ್ಬಕ್ಕೆ ತಳುಕುಹಾಕಲು ಬರುವುದಿಲ್ಲವಾದರೂ, ಅವು ನಮ್ಮ ಜನಾಂಗ ನಿಷ್ಠೆಯ ಸಂಕೇತಗಳಾಗಿವೆಯೆನ್ನುವುದು ಗಮನಾರ್ಹ. ಧಾರ್ಮಿಕ ಹಿನ್ನೆಲೆಯ ಶಿವಪಾರಮ್ಯ ಜಿನಪಾರಮ್ಮ -೧೨ನೆಯ ಶತಮಾನದ ಏಕಾಂತದ ರಾಮಯ್ಯನ ಆತ್ಮಬಲಿ ಆಚರಣೆ, ಅದಕ್ಕಾಗಿ ಬಳಕೆಗೊಂಡ ಲಕ್ಷ್ಮೇಶ್ವರದ ನಿಂಬಯ್ಯನ ಮಠದ ’ಗಂಡುಗತ್ತರಿ’ ಧಾರ್ಮಿಕ ನಿಷ್ಠೆಯ ಒಂದು ಜೀವಂತ ಉದಾಹರಣೆ.

[4] ೩. ಕನ್ನಡ ವಿಶ್ವಕೋಶ, ನಂ. ೭, ಪುಟ ೬೮೩.

[5] The Mahenjo Daro discoveries have made it pretty clear that the origin of belief in the Mother Goddess (Shakthi) can be traced to the pre – vedic period. Dr. Pushpendrakumar ‘Shakti Cult in Ancient India’, p. 2.

[6] Ibid., p.3.

[7] ದೇ.ಜ.ಗೌ. ಜಾನಪದ ಅಧ್ಯಯನ ಪು. 338, Festival in a complex unit of customs and other folkore to celebratea special occasion usually annually; and of public interest; SDFML ನಠತ್ಸ – vol. II, p. 1144.

 

[1] Hymns from the Rgveda p. xxi-xxv, Rev. R. Zimmermonn, 1938, ವೇದಗಳ ಕಾಲ ೫೦೦ ರಿಂದ ೧೨೦೦ ಬಿ.ಸಿ. ಎಂದು ಗುರುತಿಸಲಾಗಿದೆ. ವಿವರವಾದ ಚರ್ಚೆಯನ್ನು ಝಿಮ್ಮರ್ ಮನ್ ಅವರ ಹೈಮ್ಸ್ ಫ್ರಾಮ್ ದಿ ಋಗ್ವೇದ ಕೃತಿಯು – x-xix ಪುಟದಲ್ಲಿ ನೋಡಬಹುದು.

[2] .’…………… Usas played in the cult ….. position and the popularity she enjoyed above all the goddesses of the vedic age hymns were addressseedee at the earliest morning hour of the day of the soma sacrifice….’

[3] ಅದೇ  ಪು. XLIX.

[4] 1. B. Malinowski : Myth in Primitive Psychology’ P. 19

[5] ‘The Gods are like Children; they must be told what to do’. M.J. Herskovits : ‘Cultural Anthropology. p. 223

[6] Andrew Lang : Myth ritual and religion’ p.3.

[7] ‘…. thus the gods had feet of clay and crimes of the gods were really crimes of men’ quoted by William Bascom Contributions to Folkloristics’, p.49.

[8] A.C.Bouquet : ‘Sacred Books of the World’, p.28.

[9] A.C. Boquet : ‘Sacred Books of the World’ p. 28

[10] 2. Ibid, ‘Rain, Rain O dear Zeus, rain upon the corn fields, the fields of the Athenians’,

[11] 1. Ibid, The sky is wide, wide, the earth is wide, wide, The one we lifted up, The other was set down, in ancient times long, long ago….

[12] Alan W. Watts : Myth and ritual in Christianity p. 21, The anxiety to believe is the very opposite of faith of self surrender to truth….